Adi Parva: Chapter 96

ಆದಿ ಪರ್ವ: ಸಂಭವ ಪರ್ವ

೯೬

ವಿಚಿತ್ರವೀರ್ಯ

ಬಾಲಕ ತಮ್ಮನಿಗೆಂದು ಭೀಷ್ಮನು ಕಾಶೀರಾಜಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಸ್ವಯಂವರಕ್ಕೆ ಹೋಗಿ ಬಲವಂತವಾಗಿ ಎತ್ತಿ ರಥದಲ್ಲಿ ಕುಳ್ಳಿರಿಸಿಕೊಂಡಿದುದು (೧-೧೩). ಸ್ವಯುಂವರಕ್ಕೆ ಬಂದಿದ್ದ ರಾಜರನ್ನು ಭೀಷ್ಮನು ಯುದ್ಧದಲ್ಲಿ ಪರಾಭವಗೊಳಿಸಿದುದು (೧೪-೨೬). ಭೀಷ್ಮ-ಶಾಲ್ವರ ಯುದ್ಧ (೨೭-೪೦). ಅಂಬೆಯು ಶಾಲ್ವನನ್ನು ಪ್ರೀತಿಸಿರುವುದಾಗಿ ಹೇಳಲು ಅವಳಿಗೆ ಹೋಗಲು ಭೀಷ್ಮನು ಅನುಮತಿಯಿತ್ತುದು (೪೧-೫೦). ಮಕ್ಕಳಿಲ್ಲದೇ ವಿಚಿತ್ರವೀರ್ಯನ ಅಕಾಲ ಮರಣ (೫೧-೫೯).

01096001 ವೈಶಂಪಾಯನ ಉವಾಚ|

01096001a ಹತೇ ಚಿತ್ರಾಂಗದೇ ಭೀಷ್ಮೋ ಬಾಲೇ ಭ್ರಾತರಿ ಚಾನಘ|

01096001c ಪಾಲಯಾಮಾಸ ತದ್ರಾಜ್ಯಂ ಸತ್ಯವತ್ಯಾ ಮತೇ ಸ್ಥಿತಃ||

ವೈಶಂಪಾಯನನು ಹೇಳಿದನು: “ಚಿತ್ರಾಂಗದನು ಹತನಾದ ನಂತರ ಅನಘ ಭೀಷ್ಮನು, ಸತ್ಯವತಿಯ ಮತದಂತೆ, ತನ್ನ ಬಾಲಕ ತಮ್ಮನ ಮೂಲಕ ಆ ರಾಜ್ಯವನ್ನು ಪಾಲಿಸಿದನು.

01096002a ಸಂಪ್ರಾಪ್ತಯೌವನಂ ಪಶ್ಯನ್ಭ್ರಾತರಂ ಧೀಮತಾಂ ವರಂ|

01096002c ಭೀಷ್ಮೋ ವಿಚಿತ್ರವೀರ್ಯಸ್ಯ ವಿವಾಹಾಯಾಕರೋನ್ಮತಿಂ||

ತನ್ನ ತಮ್ಮನಿಗೆ ಯೌವನಪ್ರಾಪ್ತಿಯಾದುದನ್ನು ಕಂಡ ಧೀಮಂತರಲ್ಲಿ ಶ್ರೇಷ್ಠ ಭೀಷ್ಮನು ವಿಚಿತ್ರವೀರ್ಯನ ವಿವಾಹಮಾಡಬೇಕೆಂದು ನಿರ್ಧರಿಸಿದನು.

01096003a ಅಥ ಕಾಶಿಪತೇರ್ಭೀಷ್ಮಃ ಕನ್ಯಾಸ್ತಿಸ್ರೋಽಪ್ಸರಃಸಮಾಃ|

01096003c ಶುಶ್ರಾವ ಸಹಿತಾ ರಾಜನ್ವೃಣ್ವತೀರ್ವೈ ಸ್ವಯಂ ವರಂ||

ರಾಜನ್! ಆಗ ಭೀಷ್ಮನು ಕಾಶಿಪತಿಗೆ ಮೂವರು ಅಪ್ಸರಸಮ ಕನ್ಯೆಯರಿದ್ದಾರೆ ಮತ್ತು ಅವರು ಒಟ್ಟಿಗೇ ಸ್ವಯಂವರದಲ್ಲಿ ವರರನ್ನು ಆರಿಸುವವರಿದ್ದಾರೆ ಎಂದು ಕೇಳಿದನು.

01096004a ತತಃ ಸ ರಥಿನಾಂ ಶ್ರೇಷ್ಠೋ ರಥೇನೈಕೇನ ವರ್ಮಭೃತ್|

01096004c ಜಗಾಮಾನುಮತೇ ಮಾತುಃ ಪುರೀಂ ವಾರಾಣಸೀಂ ಪ್ರತಿ||

ತಾಯಿಯ ಅನುಮತಿಯನ್ನು ಪಡೆದು, ಆ ರಥಿಗಳಲ್ಲಿ ಶ್ರೇಷ್ಠನು, ಆಯುಧ-ಕವಚಗಳನ್ನು ಧರಿಸಿ, ರಥವನ್ನೇರಿ ಒಬ್ಬನೇ ವಾರಣಾಸೀ ಪುರಕ್ಕೆ ಹೋದನು.

01096005a ತತ್ರ ರಾಜ್ಞಃ ಸಮುದಿತಾನ್ಸರ್ವತಃ ಸಮುಪಾಗತಾನ್|

01096005c ದದರ್ಶ ಕನ್ಯಾಸ್ತಾಶ್ಚೈವ ಭೀಷ್ಮಃ ಶಂತನುನಂದನಃ||

ಅಲ್ಲಿ ಶಂತನುನಂದನ ಭೀಷ್ಮನು ಎಲ್ಲಕಡೆಯಿಂದಲೂ ಬಂದು ಸೇರಿದ್ದ ಶ್ರೀಮಂತ ರಾಜಕುಮಾರರ ಮಧ್ಯೆ ಮೂವರು ಕನ್ಯೆಯರನ್ನು ನೋಡಿದನು.

01096006a ಕೀರ್ತ್ಯಮಾನೇಷು ರಾಜ್ಞಾಂ ತು ನಾಮಸ್ವಥ ಸಹಸ್ರಶಃ|

01096006c ಭೀಷ್ಮಃ ಸ್ವಯಂ ತದಾ ರಾಜನ್ವರಯಾಮಾಸ ತಾಃ ಪ್ರಭುಃ||

ರಾಜನ್! ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ರಾಜರುಗಳ ಹೆಸರುಗಳನ್ನು ಹೇಳುತ್ತಿದ್ದ ಹಾಗೆಯೇ ಆ ಪ್ರಭು ಭೀಷ್ಮನು ಅವರನ್ನು ವರಿಸಿದನು.

01096007a ಉವಾಚ ಚ ಮಹೀಪಾಲಾನ್ರಾಜಂಜಲದನಿಃಸ್ವನಃ|

01096007c ರಥಮಾರೋಪ್ಯ ತಾಃ ಕನ್ಯಾ ಭೀಷ್ಮಃ ಪ್ರಹರತಾಂ ವರಃ||

ರಾಜನ್! ಖಡ್ಗಧಾರಿಗಳಲ್ಲಿ ಶ್ರೇಷ್ಠ ಭೀಷ್ಮನು ಆ ಕನ್ಯೆಯರನ್ನು ರಥದ ಮೇಲೇರಿಸುತ್ತಾ ಮಹೀಪಾಲರನ್ನುದ್ದೇಶಿಸಿ ಗುಡುಗಿನ ಸ್ವರದಲ್ಲಿ ಕೂಗಿ ಹೇಳಿದನು:

01096008a ಆಹೂಯ ದಾನಂ ಕನ್ಯಾನಾಂ ಗುಣವದ್ಭ್ಯಃ ಸ್ಮೃತಂ ಬುಧೈಃ|

01096008c ಅಲಂಕೃತ್ಯ ಯಥಾಶಕ್ತಿ ಪ್ರದಾಯ ಚ ಧನಾನ್ಯಪಿ||

“ಗುಣವಂತರನ್ನು ಆಮಂತ್ರಿಸಿ ಕನ್ಯೆಯನ್ನು ದಾನವಾಗಿ ಕೊಡಬೇಕು ಎಂದು ತಿಳಿದವರು ಹೇಳುತ್ತಾರೆ. ಅಥವಾ ಅವರನ್ನು ಯಥಾಶಕ್ತಿ ಅಲಂಕರಿಸಿ ಧನವನ್ನಿತ್ತು ಕೊಡಬೇಕು ಎನ್ನುತ್ತಾರೆ.

01096009a ಪ್ರಯಚ್ಛಂತ್ಯಪರೇ ಕನ್ಯಾಂ ಮಿಥುನೇನ ಗವಾಮಪಿ|

01096009c ವಿತ್ತೇನ ಕಥಿತೇನಾನ್ಯೇ ಬಲೇನಾನ್ಯೇಽನುಮಾನ್ಯ ಚ||

ಕೆಲವರು ತಮ್ಮ ಕನ್ಯೆಯರನ್ನು ಗೋವಿನ ಜೋಡಿಗೂ ಮದುವೆ ಮಾಡಿ ಕೊಡುತ್ತಾರೆ. ಅನ್ಯರು ವಿತ್ತದ ಕುರಿತು ಮಾತನಾಡಿ ಒಯ್ಯುತ್ತಾರಾದರೆ ಇನ್ನು ಕೆಲವರು ಬಲವಂತದಿಂದ ಕರೆದೊಯ್ಯುತ್ತಾರೆ.

01096010a ಪ್ರಮತ್ತಾಮುಪಯಾಂತ್ಯನ್ಯೇ ಸ್ವಯಮನ್ಯೇ ಚ ವಿಂದತೇ|

01096010c ಅಷ್ಟಮಂ ತಮಥೋ ವಿತ್ತ ವಿವಾಹಂ ಕವಿಭಿಃ ಸ್ಮೃತಂ||

01096011a ಸ್ವಯಂವರಂ ತು ರಾಜನ್ಯಾಃ ಪ್ರಶಂಸಂತ್ಯುಪಯಾಂತಿ ಚ|

01096011c ಪ್ರಮಥ್ಯ ತು ಹೃತಾಮಾಹುರ್ಜ್ಯಾಯಸೀಂ ಧರ್ಮವಾದಿನಃ||

ಕೆಲವರು ಪ್ರಮತ್ತರಾದಾಗ ಮದುವೆಯಾಗುತ್ತಾರೆ. ಇನ್ನು ಕೆಲವರು ಸ್ವಯಂ ಹುಡುಕಿ ಮದುವೆಯಾಗುತ್ತಾರೆ. ಕವಿಗಳು ಹೇಳಿದ, ರಾಜರಲ್ಲಿ ಪ್ರಶಂಸನೀಯ ರೂಢಿಯಲ್ಲಿರುವ ಸ್ವಯಂವರವು ಎಂಟನೆಯ ವಿವಾಹ ವಿಧಿಯೆಂದು ತಿಳಿಯಿರಿ. ಆದರೆ ಧರ್ಮವಾದಿಗಳು ಅಪಹರಿಸಿ ಮದುವೆಯಾಗುವುದೇ ಶ್ರೇಷ್ಠವೆಂದು ಹೇಳುತ್ತಾರೆ.

01096012a ತಾ ಇಮಾಃ ಪೃಥಿವೀಪಾಲಾ ಜಿಹೀರ್ಷಾಮಿ ಬಲಾದಿತಃ|

01096012c ತೇ ಯತಧ್ವಂ ಪರಂ ಶಕ್ತ್ಯಾ ವಿಜಯಾಯೇತರಾಯ ವಾ|

01096012e ಸ್ಥಿತೋಽಹಂ ಪೃಥಿವೀಪಾಲಾ ಯುದ್ಧಾಯ ಕೃತನಿಶ್ಚಯಃ||

ಇಲ್ಲಿರುವ ಪೃಥಿವೀಪಾಲರೇ! ನಾನು ಇವರನ್ನು ಬಲತ್ಕಾರವಾಗಿ ಕೊಂಡೊಯ್ಯುತ್ತಿದ್ದೇನೆ. ಯಾರಿಗಾದರೂ ಪರಮ ಶಕ್ತಿಯಿದ್ದರೆ ಬನ್ನಿ. ನನ್ನನ್ನು ಸೋಲಿಸಿ ಅಥವಾ ನನ್ನಿಂದ ಸೋಲನ್ನು ಹೊಂದಿ. ಪೃಥಿವೀಪಾಲರೇ! ಯುದ್ಧದ ನಿಶ್ಚಯಮಾಡಿಯೇ ನಾನಿಲ್ಲಿ ಬಂದಿದ್ದೇನೆ.”

01096013a ಏವಮುಕ್ತ್ವಾ ಮಹೀಪಾಲಾನ್ಕಾಶಿರಾಜಂ ಚ ವೀರ್ಯವಾನ್|

01096013c ಸರ್ವಾಃ ಕನ್ಯಾಃ ಸ ಕೌರವ್ಯೋ ರಥಮಾರೋಪಯತ್ಸ್ವಕಂ|

01096013e ಆಮಂತ್ರ್ಯ ಚ ಸ ತಾನ್ಪ್ರಾಯಾತ್ ಶೀಘ್ರಂ ಕನ್ಯಾಃ ಪ್ರಗೃಹ್ಯ ತಾಃ||

ಈ ರೀತಿ ಕಾಶಿರಾಜ ಮತ್ತು ಮಹೀಪಾಲರಿಗೆ ಹೇಳಿ ಎಲ್ಲ ಕನ್ಯೆಯರನ್ನೂ ಸ್ವತಃ ತಾನೇ ರಥದಲ್ಲೇರಿಸಿ, ಅವರೆಲ್ಲರನ್ನೂ ಆಮಂತ್ರಿಸುತ್ತಾ ಆ ಕೌರವ್ಯನು ಕನ್ಯೆಯರನ್ನು ಎತ್ತಿಕೊಂಡು ಶೀಘ್ರವಾಗಿ ರಥವನ್ನೋಡಿಸಿದನು.

01096014a ತತಸ್ತೇ ಪಾರ್ಥಿವಾಃ ಸರ್ವೇ ಸಮುತ್ಪೇತುರಮರ್ಷಿತಾಃ|

01096014c ಸಂಸ್ಪೃಶಂತಃ ಸ್ವಕಾನ್ಬಾಹೂನ್ದಶಂತೋ ದಶನಚ್ಛದಾನ್||

ಆಗ ಸರ್ವ ಪಾರ್ಥಿವರೂ ರೋಷಗೊಂಡು, ತಮ್ಮ ಬಾಹುಗಳನ್ನು ಉಬ್ಬಿಸಿ ಹಲ್ಲು ಕಡಿಯುತ್ತಾ ಮೇಲೆದ್ದರು.

01096015a ತೇಷಾಮಾಭರಣಾನ್ಯಾಶು ತ್ವರಿತಾನಾಂ ವಿಮುಂಚತಾಂ|

01096015c ಆಮುಂಚತಾಂ ಚ ವರ್ಮಾಣಿ ಸಂಭ್ರಮಃ ಸುಮಹಾನಭೂತ್||

ಅವರವರ ಆಭರಣಗಳನ್ನು ಎಸೆದು ಅಸ್ತ್ರ ಕವಚಗಳನ್ನು ಧರಿಸುವಾಗ ಎಲ್ಲೆಡೆಯೂ ಅತಿ ಸಂಭ್ರಮದ ಗದ್ದಲವಾಯಿತು.

01096016a ತಾರಾಣಾಮಿವ ಸಂಪಾತೋ ಬಭೂವ ಜನಮೇಜಯ|

01096016c ಭೂಷಣಾನಾಂ ಚ ಶುಭ್ರಾಣಾಂ ಕವಚಾನಾಂ ಚ ಸರ್ವಶಃ||

ಜನಮೇಜಯ! ಶುಭ್ರ ಭೂಷಣ-ಕವಚಗಳು ಎಲ್ಲೆಡೆಯಿಂದ ತಾರೆಗಳಂತೆ ಬಿದ್ದವು.

01096017a ಸವರ್ಮಭಿರ್ಭೂಷಣೈಸ್ತೇ ದ್ರಾಗ್ಭ್ರಾಜದ್ಭಿರಿತಸ್ತತಃ|

01096017c ಸಕ್ರೋಧಾಮರ್ಷಜಿಹ್ಮಭ್ರೂಸಕಷಾಯದೃಶಸ್ತಥಾ||

01096018a ಸೂತೋಪಕ್ಷ್ತಾನ್ರುಚಿರಾನ್ಸದಶ್ವೋದ್ಯತಧೂರ್ಗತಾನ್|

01096018c ರಥಾನಾಸ್ಥಾಯ ತೇ ವೀರಾಃ ಸರ್ವಪ್ರಹರಣಾನ್ವಿತಾಃ|

01096018e ಪ್ರಯಾಂತಮೇಕಂ ಕೌರವ್ಯಮನುಸಸ್ರುರುದಾಯುಧಾಃ||

01096019a ತತಃ ಸಮಭವದ್ಯುದ್ಧಂ ತೇಷಾಂ ತಸ್ಯ ಚ ಭಾರತ|

01096019c ಏಕಸ್ಯ ಚ ಬಹೂನಾಂ ಚ ತುಮುಲಂ ಲೋಮಹರ್ಷಣ||

ಆ ವೀರರೆಲ್ಲರೂ ಆಭರಣ ಭೂಷಣ ಮತ್ತು ಮುತ್ತು-ರತ್ನಗಳನ್ನು ಉದುರಿಸುತ್ತಾ, ರೋಷದಿಂದ ಹುಬ್ಬು ಕಟ್ಟಿ, ಮುಖ ಕೆಂಪುಮಾಡಿಕೊಂಡು, ಸಾರಥಿಗಳು ಸರ್ವ ಅಸ್ತ್ರಗಳನ್ನೂ ಹೇರಿಸಿ ತಯಾರುಮಾಡಿ ನಿಲ್ಲಿಸಿದ್ದ ರಥಗಳನ್ನು ಏರಿದರು. ಆಯುಧಗಳನ್ನು ಮೇಲೆತ್ತಿ ಅವರೆಲ್ಲರೂ ಏಕಾಂಗಿ ಕೌರವ್ಯನನ್ನು ಬೆನ್ನುಹತ್ತಿದರು. ಭಾರತ! ಆಗ ಆ ಏಕಾಂಗಿ ಮತ್ತು ಬಹುಸಂಖ್ಯೆಯಲ್ಲಿದ್ದ ಅವರ ನಡುವೆ ಘೋರ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

01096020a ತೇ ತ್ವಿಷೂನ್ದಶಸಾಹಸ್ರಾಂಸ್ತಸ್ಮೈ ಯುಗಪದಾಕ್ಷಿಪನ್|

01096020c ಅಪ್ರಾಪ್ತಾಂಶ್ಚೈವ ತಾನಾಶು ಭೀಷ್ಮಃ ಸರ್ವಾಂಸ್ತದಾಚ್ಛಿನತ್||

ಅವರು ದಶಸಹಸ್ರ ಬಾಣಗಳನ್ನು ಒಂದೇ ಕ್ಷಣದಲ್ಲಿ ಬಿಟ್ಟರೆ ಅವು ತನ್ನನ್ನು ಹೊಡೆಯುವುದರೊಳಗೇ ಭೀಷ್ಮನು ತುಂಡುಮಾಡಿದನು. 

01096021a ತತಸ್ತೇ ಪಾರ್ಥಿವಾಃ ಸರ್ವೇ ಸರ್ವತಃ ಪರಿವಾರಯನ್|

01096021c ವವರ್ಷುಃ ಶರವರ್ಷೇಣ ವರ್ಷೇಣೇವಾದ್ರಿಮಂಬುದಾಃ||

ಆಗ ಸರ್ವ ಪಾರ್ಥಿವರೂ ಅವನನ್ನು ಎಲ್ಲಾ ಕಡೆಯಿಂದಲೂ ಸುತ್ತುವರೆದು ಮೋಡಗಳು ಪರ್ವತದ ಮೇಲೆ ಮಳೆಸುರಿಸುವಂತೆ ಬಾಣಗಳ ಮಳೆಯನ್ನೇ ಸುರಿಸಿದರು.

01096022a ಸ ತದ್ಬಾಣಮಯಂ ವರ್ಷಂ ಶರೈರಾವಾರ್ಯ ಸರ್ವತಃ|

01096022c ತತಃ ಸರ್ವಾನ್ಮಹೀಪಾಲಾನ್ಪ್ರತ್ಯವಿಧ್ಯತ್ತ್ರಿಭಿಸ್ತ್ರಿಭಿಃ||

ಅವನಾದರೂ ಆ ಬಾಣಗಳ ಮಳೆಯನ್ನು ತನ್ನದೇ ಬಾಣದಿಂದ ನಿವಾರಿಸಿದನು ಮತ್ತು ಎಲ್ಲಕಡೆಗೂ ಎಲ್ಲ ಮಹೀಪಾಲರಿಗೂ ಅವರವರ ಒಂದೊಂದು ಬಾಣಕ್ಕೂ ಮೂರುಬಾಣಗಳನ್ನು ಬಿಟ್ಟನು.

01096023a ತಸ್ಯಾತಿ ಪುರುಷಾನನ್ಯಾಽಲ್ಲಾಘವಂ ರಥಚಾರಿಣಃ|

01096023c ರಕ್ಷಣಂ ಚಾತ್ಮನಃ ಸಂಖ್ಯೇ ಶತ್ರವೋಽಪ್ಯಭ್ಯಪೂಜಯನ್||

ಅನ್ಯ ರಥಚಾರಿಗಳಿಗೆ ಹೋಲಿಸಿದರೆ ಆ ಪುರುಷನಲ್ಲಿ ಲಘುತ್ವವಿತ್ತು. ಅವನು ತನ್ನನ್ನು ತಾನು ರಕ್ಷಣೆಮಾಡಿ ಕೊಳ್ಳುತ್ತಿರುವ ರೀತಿಯನ್ನು ನೋಡಿದ ಬಹಳಷ್ಟು ಶತ್ರುಗಳೂ ಅವನನ್ನು ಹೊಗಳತೊಡಗಿದರು.

01096024a ತಾನ್ವಿನಿರ್ಜಿತ್ಯ ತು ರಣೇ ಸರ್ವಶಸ್ತ್ರವಿಶಾರದಃ|

01096024c ಕನ್ಯಾಭಿಃ ಸಹಿತಃ ಪ್ರಾಯಾದ್ಭಾರತೋ ಭಾರತಾನ್ಪ್ರತಿ||

ಅವರೆಲ್ಲರನ್ನೂ ರಣದಲ್ಲಿ ಸೋಲಿಸಿದ ಆ ಸರ್ವಶಸ್ತ್ರವಿಶಾರದ ಭರತನು ಕನ್ಯೆಗಳ ಸಹಿತ ಭಾರತನಗರದ ಕಡೆ ಹೊರಟನು.

01096025a ತತಸ್ತಂ ಪೃಷ್ಠತೋ ರಾಜಂಶಾಲ್ವರಾಜೋ ಮಹಾರಥಃ|

01096025c ಅಭ್ಯಾಹನದಮೇಯಾತ್ಮಾ ಭೀಷ್ಮಂ ಶಾಂತನವಂ ರಣೇ||

01096026a ವಾರಣಂ ಜಘನೇ ನಿಘ್ನನ್ದಂತಾಭ್ಯಾಮಪರೋ ಯಥಾ|

01096026c ವಾಶಿತಾಮನುಸಂಪ್ರಾಪ್ತೋ ಯೂಥಪೋ ಬಲಿನಾಂ ವರಃ||

ಅದೇ ಸಮಯದಲ್ಲಿ ಮಹಾರಥಿ ರಾಜ ಶಾಲ್ವರಾಜನು ಕಾವಿನಲ್ಲಿರುವ ಗಂಡು ಆನೆಯು ತನ್ನ ಪ್ರೇಯಸಿಯ ಮೇಲೆ ಹತ್ತುತ್ತಿದ್ದ ಪ್ರತಿಸ್ಪರ್ಧಿಯನ್ನು ಹಿಂದಿನಿಂದ ತನ್ನ ದಾಡೆಗಳಿಂದ ಆಕ್ರಮಿಸುವಂತೆ ಭೀಷ್ಮ ಶಾಂತನವನನ್ನು ಆಕ್ರಮಣಿಸಿದನು.

01096027a ಸ್ತ್ರೀಕಾಮ ತಿಷ್ಠ ತಿಷ್ಠೇತಿ ಭೀಷ್ಮಮಾಹ ಸ ಪಾರ್ಥಿವಃ|

01096027c ಶಾಲ್ವರಾಜೋ ಮಹಾಬಾಹುರಮರ್ಷೇಣಾಭಿಚೋದಿತಃ||

“ಸ್ತ್ರೀ ಕಾಮಿ ಭೀಷ್ಮ! ನಿಲ್ಲು! ನಿಲ್ಲು!” ಎಂದು ಮಹಾಬಾಹು ಪಾರ್ಥಿವ ಶಾಲ್ವರಾಜನು ಸಿಟ್ಟಿನಿಂದ ಜೋರಾಗಿ ಕೂಗಿದನು.

01096028a ತತಃ ಸ ಪುರುಷವ್ಯಾಘ್ರೋ ಭೀಷ್ಮಃ ಪರಬಲಾರ್ದನಃ|

01096028c ತದ್ವಾಕ್ಯಾಕುಲಿತಃ ಕ್ರೋಧಾದ್ವಿಧೂಮೋಽಗ್ನಿರಿವ ಜ್ವಲನ್||

01096029a ಕ್ಷತ್ರಧರ್ಮಂ ಸಮಾಸ್ಥಾಯ ವ್ಯಪೇತಭಯಸಂಭ್ರಮಃ|

01096029c ನಿವರ್ತಯಾಮಾಸ ರಥಂ ಶಾಲ್ವಂ ಪ್ರತಿ ಮಹಾರಥಃ||

ಆ ಪುರುಷವ್ಯಾಘ್ರ ಪರಬಲಾರ್ದನ ಭೀಷ್ಮನು ಈ ಮಾತುಗಳನ್ನು ಕೇಳಿ ಕ್ರೋಧದಿಂದ ಹೊಗೆಯಿಲ್ಲದ ಅಗ್ನಿಯಂತೆ ಉರಿಯುತ್ತಾ, ಕ್ಷತ್ರಧರ್ಮವನ್ನು ಅನುಸರಿಸಿ, ಸ್ವಲ್ಪವೂ ಭಯ ಉದ್ವೇಗಳಿಲ್ಲದೇ ತನ್ನ ರಥವನ್ನು ಮಹಾರಥಿ ಶಾಲ್ವನ ಕಡೆ ತಿರುಗಿಸಿದನು.

01096030a ನಿವರ್ತಮಾನಂ ತಂ ದೃಷ್ಟ್ವಾ ರಾಜಾನಃ ಸರ್ವ ಏವ ತೇ|

01096030c ಪ್ರೇಕ್ಷಕಾಃ ಸಮಪದ್ಯಂತ ಭೀಷ್ಮಶಾಲ್ವಸಮಾಗಮೇ||

ಹಿಂದಿರುಗಿ ಬರುತ್ತಿದ್ದ ಅವನನ್ನು ನೋಡಿದ ಸರ್ವ ರಾಜರೂ ಭೀಷ್ಮ-ಶಾಲ್ವರ ಎದುರಾಟವನ್ನು ನೋಡಲು ಪ್ರೇಕ್ಷಕರಾಗಿ ನಿಂತರು.

01096031a ತೌ ವೃಷಾವಿವ ನರ್ದಂತೌ ಬಲಿನೌ ವಾಶಿತಾಂತರೇ|

01096031c ಅನ್ಯೋನ್ಯಮಭಿವರ್ತೇತಾಂ ಬಲವಿಕ್ರಮಶಾಲಿನೌ||

ಕಾವಿನಲ್ಲಿದ್ದ ಹಸುವಿನ ಮುಂದೆ ಬಡಿದಾಡುವ ಎರಡು ಬಲಶಾಲಿ ಹೋರಿಗಳಂತೆ ಅವರಿಬ್ಬರೂ ಬಲವಿಕ್ರಮಶಾಲಿಗಳು ಪರಸ್ಪರರ ಮೇಲೆ ಎರಗಿದರು.

01096032a ತತೋ ಭೀಷ್ಮಂ ಶಾಂತನವಂ ಶರೈಃ ಶತಸಹಸ್ರಶಃ|

01096032c ಶಾಲ್ವರಾಜೋ ನರಶ್ರೇಷ್ಠಃ ಸಮವಾಕಿರದಾಶುಗೈಃ||

ನರಶ್ರೇಷ್ಠ ಶಾಲ್ವರಾಜನು ಭೀಷ್ಮ ಶಾಂತನವನ ಮೇಲೆ ಅತಿವೇಗದ ನೂರಾರು ಸಹಸ್ರಾರು ಬಾಣಗಳನ್ನು ಸುರಿಸಿದನು.

01096033a ಪೂರ್ವಮಭ್ಯರ್ದಿತಂ ದೃಷ್ಟ್ವಾ ಭೀಷ್ಮಂ ಶಾಲ್ವೇನ ತೇ ನೃಪಾಃ|

01096033c ವಿಸ್ಮಿತಾಃ ಸಮಪದ್ಯಂತ ಸಾಧು ಸಾಧ್ವಿತಿ ಚಾಬ್ರುವನ್||

ಮೊದಲೇ ಭೀಷ್ಮನನ್ನು ಸುತ್ತುವರೆದ ಶಾಲ್ವನನ್ನು ನೋಡಿ ಆ ನೃಪರೆಲ್ಲರು ವಿಸ್ಮಿತರಾಗಿ “ಸಾಧು! ಸಾಧು!” ಎಂದು ಉದ್ಗರಿಸಿ, ಪ್ರಶಂಸಿದರು.

01096034a ಲಾಘವಂ ತಸ್ಯ ತೇ ದೃಷ್ಟ್ವಾ ಸಂಯುಗೇ ಸರ್ವಪಾರ್ಥಿವಾಃ|

01096034c ಅಪೂಜಯಂತ ಸಂಹೃಷ್ಟಾ ವಾಗ್ಭಿಃ ಶಾಲ್ವಂ ನರಾಧಿಪಾಃ||

ಅವನ ಲಘುತ್ವವನ್ನು ನೋಡಿ, ಅಲ್ಲಿ ಸೇರಿದ್ದ ಸರ್ವ ಪಾರ್ಥಿವರೂ ಹರ್ಷಗೊಂಡು ನರಾಧಿಪ ಶಾಲ್ವನನ್ನು ಹೊಗಳಿ ಪ್ರೋತ್ಸಾಹಿಸಿದರು.

01096035a ಕ್ಷತ್ರಿಯಾಣಾಂ ತದಾ ವಾಚಃ ಶ್ರುತ್ವಾ ಪರಪುರಂಜಯಃ|

01096035c ಕ್ರುದ್ಧಃ ಶಾಂತನವೋ ಭೀಷ್ಮಸ್ತಿಷ್ಠ ತಿಷ್ಠೇತ್ಯಭಾಷತ||

ಕ್ಷತ್ರಿಯರ ಆ ಕೂಗುಗಗಳನ್ನು ಕೇಳಿ ಕೃದ್ಧನಾದ ಪರಪುರಂಜಯ ಶಾಂತನವ ಭೀಷ್ಮನು “ನಿಲ್ಲು! ನಿಲ್ಲು!” ಎಂದು ಕೂಗಿದನು.

01096036a ಸಾರಥಿಂ ಚಾಬ್ರವೀತ್ಕ್ರುದ್ಧೋ ಯಾಹಿ ಯತ್ರೈಷ ಪಾರ್ಥಿವಃ|

01096036c ಯಾವದೇನಂ ನಿಹನ್ಮ್ಯದ್ಯ ಭುಜಂಗಮಿವ ಪಕ್ಷಿರಾಟ್||

ಕೃದ್ಧನಾಗಿ ತನ್ನ ಸಾರಥಿಗೆ ಹೇಳಿದನು: “ಪಕ್ಷಿರಾಜನು ಭುಜಂಗಗಳನ್ನು  ಕೊಲ್ಲುವಂತೆ ಅವನನ್ನು ಕೊಲ್ಲುತ್ತೇನೆ. ಆ ಪಾರ್ಥಿವನಿದ್ದಲ್ಲಿಗೆ ರಥವನ್ನು ಕೊಂಡೊಯ್ಯಿ!”

01096037a ತತೋಽಸ್ತ್ರಂ ವಾರುಣಂ ಸಮ್ಯಗ್ಯೋಜಯಾಮಾಸ ಕೌರವಃ|

01096037c ತೇನಾಶ್ವಾಂಶ್ಚತುರೋಽಮೃದ್ನಾಚ್ಶಾಲ್ವರಾಜ್ಞೋ ನರಾಧಿಪ||

ನರಾಧಿಪ! ಆಗ ಆ ಕೌರವನು ವಾರುಣಾಸ್ತ್ರವನ್ನು ಹೂಡಿ ಶಾಲ್ವರಾಜನ ನಾಲ್ಕೂ ಕುದುರೆಗಳನ್ನೂ ಸಂಹರಿಸಿದನು.

01096038a ಅಸ್ತ್ರೈರಸ್ತ್ರಾಣಿ ಸಂವಾರ್ಯ ಶಾಲ್ವರಾಜ್ಞಃ ಸ ಕೌರವಃ|

01096038c ಭೀಷ್ಮೋ ನೃಪತಿಶಾರ್ದೂಲ ನ್ಯವಧೀತ್ತಸ್ಯ ಸಾರಥಿಂ|

01096038e ಅಸ್ತ್ರೇಣ ಚಾಪ್ಯಥೈಕೇನ ನ್ಯವಧೀತ್ತುರಗೋತ್ತಮಾನ್||

ನಂತರ ಆ ಕೌರವ ನೃಪತಿಶಾರ್ದೂಲ ಭೀಷ್ಮನು ಅಸ್ತ್ರದ ಮೇಲೆ ಅಸ್ತ್ರಗಳನ್ನು ಬಿಟ್ಟು ಶಾಲ್ವರಾಜನ ಸಾರಥಿಯನ್ನು ಕೆಳಗುರುಳಿಸಿದನು. ಮತ್ತು ಒಂದೇ ಒಂದು ಅಸ್ತ್ರದಿಂದ ಅವನ ಉತ್ತಮ ತುರಗಗಳನ್ನೂ ಕೆಳಗುರುಳಿಸಿದನು.

01096039a ಕನ್ಯಾಹೇತೋರ್ನರಶ್ರೇಷ್ಠ ಭೀಷ್ಮಃ ಶಾಂತನವಸ್ತದಾ|

01096039c ಜಿತ್ವಾ ವಿಸರ್ಜಯಾಮಾಸ ಜೀವಂತಂ ನೃಪಸತ್ತಮಂ|

01096039e ತತಃ ಶಾಲ್ವಃ ಸ್ವನಗರಂ ಪ್ರಯಯೌ ಭರತರ್ಷಭ||

01096040a ರಾಜಾನೋ ಯೇ ಚ ತತ್ರಾಸನ್ಸ್ವಯಂವರದಿದೃಕ್ಷವಃ|

01096040c ಸ್ವಾನ್ಯೇವ ತೇಽಪಿ ರಾಷ್ಟ್ರಾಣಿ ಜಗ್ಮುಃ ಪರಪುರಂಜಯ||

ನರಶ್ರೇಷ್ಠ ಶಾಂತನವ ಭೀಷ್ಮನು ಕನ್ಯೆಯರಿಗಾಗಿ ಆ ನೃಪಸತ್ತಮನನ್ನು ಗೆದ್ದು ಜೀವಂತ ಉಳಿಸಿ ಕಳುಹಿಸಿದನು. ಭರತರ್ಷಭ! ನಂತರ ಶಾಲ್ವನು ತನ್ನ ನಗರಕ್ಕೆ ಹಿಂದಿರುಗಿದನು. ಪರಪುರಂಜಯ! ಸ್ವಯಂವರವನ್ನು ನೋಡಲು ಬಂದಿದ್ದ ರಾಜರೂ ಕೂಡ ತಮ್ಮ ತಮ್ಮ ನಗರಗಳಿಗೆ ತೆರಳಿದರು.

01096041a ಏವಂ ವಿಜಿತ್ಯ ತಾಃ ಕನ್ಯಾ ಭೀಷ್ಮಃ ಪ್ರಹರತಾಂ ವರಃ|

01096041c ಪ್ರಯಯೌ ಹಾಸ್ತಿನಪುರಂ ಯತ್ರ ರಾಜಾ ಸ ಕೌರವಃ||

ಖಡ್ಗಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಕನ್ಯೆಯರನ್ನು ಗೆದ್ದು ರಾಜ ಕೌರವನಿರುವ ಹಸ್ತಿನಾಪುರದ ಕಡೆ ತಿರುಗಿದನು.

01096042a ಸೋಽಚಿರೇಣೈವ ಕಾಲೇನ ಅತ್ಯಕ್ರಾಮನ್ನರಾಧಿಪ|

01096042c ವನಾನಿ ಸರಿತಶ್ಚೈವ ಶೈಲಾಂಶ್ಚ ವಿವಿಧದ್ರುಮಾನ್||

01096043a ಅಕ್ಷತಃ ಕ್ಷಪಯಿತ್ವಾರೀನ್ಸಂಖ್ಯೇಽಸಂಖ್ಯೇಯವಿಕ್ರಮಃ|

01096043c ಆನಯಾಮಾಸ ಕಾಶ್ಯಸ್ಯ ಸುತಾಃ ಸಾಗರಗಾಸುತಃ||

01096044a ಸ್ನುಷಾ ಇವ ಸ ಧರ್ಮಾತ್ಮಾ ಭಗಿನ್ಯ ಇವ ಚಾನುಜಾಃ|

01096044c ಯಥಾ ದುಹಿತರಶ್ಚೈವ ಪ್ರತಿಗೃಹ್ಯ ಯಯೌ ಕುರೂನ್||

ನರಾಧಿಪ! ತನ್ನ ಅಕ್ಷಯ್ಯ ಬಲದಿಂದ ಸಂಖ್ಯೆಯಿಲ್ಲದಷ್ಟು ವೈರಿಗಳನ್ನು ಸೋಲಿಸಿ, ಸ್ವಲ್ಪವೇ ಸಮಯದಲ್ಲಿ ವನ, ನದಿ, ಗಿರಿ ಮತ್ತು ವಿವಿಧ ದ್ರುಮಗಳನ್ನು ಅತಿಕ್ರಮಿಸಿ ಆ ಸಾಗರಗೆಯ ಸುತ ಧರ್ಮಾತ್ಮನು ಕಾಶಿಯ ಕನ್ಯೆಯರೊಡನೆ ತನ್ನ ಸೊಸೆಗಳಂತೆ ಅಥವಾ ತಂಗಿಯರಂತೆ ಅಥವಾ ಮಕ್ಕಳಂತೆ ವ್ಯವಹರಿಸುತ್ತಾ ಅವರನ್ನು ಕರೆದುಕೊಂಡು ಕುರುವಂಶದ ಮನೆಗೆ ಕರೆತಂದನು.

01096045a ತಾಃ ಸರ್ವಾ ಗುಣಸಂಸಪನ್ನಾ ಭ್ರಾತಾ ಭ್ರಾತ್ರೇ ಯವೀಯಸೇ|

01096045c ಭೀಷ್ಮೋ ವಿಚಿತ್ರವೀರ್ಯಾಯ ಪ್ರದದೌ ವಿಕ್ರಮಾಹೃತಾಃ||

ಬಲವಂತವಾಗಿ ಕರೆತಂದ ಆ ಸರ್ವ ಗುಣಸಂಪನ್ನರನ್ನೂ ಅಣ್ಣ ಭೀಷ್ಮನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಕೊಡಲು ನಿರ್ಧರಿಸಿದನು.

01096046a ಸತಾಂ ಧರ್ಮೇಣ ಧರ್ಮಜ್ಞಃ ಕೃತ್ವಾ ಕರ್ಮಾತಿಮಾನುಷಂ|

01096046c ಭ್ರಾತುರ್ವಿಚಿತ್ರವೀರ್ಯಸ್ಯ ವಿವಾಹಾಯೋಪಚಕ್ರಮೇ|

01096046e ಸತ್ಯವತ್ಯಾ ಸಹ ಮಿಥಃ ಕೃತ್ವಾ ನಿಶ್ಚಯಮಾತ್ಮವಾನ್||

ಅಮಾನುಷ ಕೃತ್ಯವನ್ನೆಸಿಗಿದ ಆ ಧರ್ಮಜ್ಞ, ದೃಢನಿಶ್ಚಯಿ ಧರ್ಮನಿರತನು ಸತ್ಯವತಿಯೊಡನೆ ಸಮಾಲೋಚಿಸಿ ತಮ್ಮ ವಿಚಿತ್ರವೀರ್ಯನ ವಿವಾಹ ಸಿದ್ಧತೆಯನ್ನು ನಡೆಸಿದನು.

01096047a ವಿವಾಹಂ ಕಾರಯಿಷ್ಯಂತಂ ಭೀಷ್ಮಂ ಕಾಶಿಪತೇಃ ಸುತಾ|

01096047c ಜ್ಯೇಷ್ಠಾ ತಾಸಾಮಿದಂ ವಾಕ್ಯಮಬ್ರವೀದ್ಧ ಸತೀ ತದಾ||

ವಿವಾಹದ ತಯಾರಿ ನಡೆಯುತ್ತಿರುವಾಗ ಕಾಶೀಪತಿಯ ಮಕ್ಕಳಲ್ಲಿ ಜ್ಯೇಷ್ಠ ಸತಿಯು ಭೀಷ್ಮನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದಳು:

01096048a ಮಯಾ ಸೌಭಪತಿಃ ಪೂರ್ವಂ ಮನಸಾಭಿವೃತಃ ಪತಿಃ|

01096048c ತೇನ ಚಾಸ್ಮಿ ವೃತಾ ಪೂರ್ವಮೇಷ ಕಾಮಶ್ಚ ಮೇ ಪಿತುಃ||

“ಈ ಹಿಂದೆಯೇ ನಾನು ಸೌಭಪತಿಯನ್ನು ಮನಸಾ ಪತಿಯನ್ನಾಗಿ ವರಿಸಿದ್ದೇನೆ. ಅವನೂ ನನ್ನನ್ನು ವರಿಸಿದ್ದಾನೆ. ಮತ್ತು ಇದು ನನ್ನ ತಂದೆಯ ಬಯಕೆಯೂ ಆಗಿತ್ತು.

01096049a ಮಯಾ ವರಯಿತವ್ಯೋಽಭೂತ್ ಶಾಲ್ವಸ್ತಸ್ಮಿನ್ಸ್ವಯಂವರೇ|

01096049c ಏತದ್ವಿಜ್ಞಾಯ ಧರ್ಮಜ್ಞ ತತಸ್ತ್ವಂ ಧರ್ಮಮಾಚರ||

ಆ ಸ್ವಯಂವರದಲ್ಲಿ ನಾನು ಶಾಲ್ವನನ್ನು ವರಿಸುವವಳಿದ್ದೆ. ಧರ್ಮಜ್ಞ! ಇದನ್ನು ತಿಳಿದು ಧರ್ಮದ ಪ್ರಕಾರ ಏನು ಮಾಡಬೇಕೋ ಮಾಡು.”

01096050a ಏವಮುಕ್ತಸ್ತಯಾ ಭೀಷ್ಮಃ ಕನ್ಯಯಾ ವಿಪ್ರಸಂಸದಿ|

01096050c ಚಿಂತಾಮಭ್ಯಗಮದ್ವೀರೋ ಯುಕ್ತಾಂ ತಸ್ಯೈವ ಕರ್ಮಣಃ||

ವಿಪ್ರಸಂಸದಿಯಲ್ಲಿ ಹೇಳಿದ ಕನ್ಯೆಯ ಈ ಮಾತುಗಳನ್ನು ಕೇಳಿ ವೀರ ಭೀಷ್ಮನು ಇದಕ್ಕೆ ತಕ್ಕುದಾಗಿ ಏನು ಮಾಡಬೇಕೆಂದು ಯೋಚಿಸಿದನು.

01096051a ಸ ವಿನಿಶ್ಚಿತ್ಯ ಧರ್ಮಜ್ಞೋ ಬ್ರಾಹ್ಮಣೈರ್ವೇದಪಾರಗೈಃ|

01096051c ಅನುಜಜ್ಞೇ ತದಾ ಜ್ಯೇಷ್ಠಾಮಂಬಾಂ ಕಾಶಿಪತೇಃ ಸುತಾಂ||

ಬ್ರಾಹ್ಮಣ ವೇದಪಾರಂಗತರೊಡಗೂಡಿ ನಿಶ್ಚಯಿಸಿದ ಆ ಧರ್ಮಜ್ಞನು ಕಾಶಿಪತಿಯ ಜ್ಯೇಷ್ಠ ಪುತ್ರಿ ಅಂಬೆಗೆ ಹೋಗಲು ಅನುಮತಿಯನ್ನಿತ್ತನು.

01096052a ಅಂಬಿಕಾಂಬಾಲಿಕೇ ಭಾರ್ಯೇ ಪ್ರಾದಾದ್ಭ್ರಾತ್ರೇ ಯವೀಯಸೇ|

01096052c ಭೀಷ್ಮೋ ವಿಚಿತ್ರವೀರ್ಯಾಯ ವಿಧಿದೃಷ್ಟೇನ ಕರ್ಮಣಾ||

ನಂತರ ಭೀಷ್ಮನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಅಂಬಿಕೆ ಮತ್ತು ಅಂಬಾಲಿಕೆಯರನ್ನು ಪತ್ನಿಯರನ್ನಾಗಿತ್ತು ವಿಧಿಪೂರ್ವಕ ವಿವಾಹ ಕಾರ್ಯವನ್ನು ನೆರವೇರಿಸಿದನು.

01096053a ತಯೋಃ ಪಾಣಿಂ ಗೃಹೀತ್ವಾ ಸ ರೂಪಯೌವನದರ್ಪಿತಃ|

01096053c ವಿಚಿತ್ರವೀರ್ಯೋ ಧರ್ಮಾತ್ಮಾ ಕಾಮಾತ್ಮಾ ಸಮಪದ್ಯತ||

ಅವರ ಪಾಣಿಗ್ರಹಣ ಮಾಡಿಕೊಂಡ ರೂಪಯೌವನ ದರ್ಪಿತ ಧರ್ಮಾತ್ಮ ವಿಚಿತ್ರವೀರ್ಯನು ಕಾಮಸುಖದಲ್ಲಿಯೇ ತೊಡಗಿದನು.

01096054a ತೇ ಚಾಪಿ ಬೃಹತೀ ಶ್ಯಾಮೇ ನೀಲಕುಂಚಿತಮೂರ್ಧಜೇ|

01096054c ರಕ್ತತುಂಗನಖೋಪೇತೇ ಪೀನಶ್ರೋಣಿಪಯೋಧರೇ||

01096055a ಆತ್ಮನಃ ಪ್ರತಿರೂಪೋಽಸೌ ಲಬ್ಧಃ ಪತಿರಿತಿ ಸ್ಥಿತೇ|

01096055c ವಿಚಿತ್ರವೀರ್ಯಂ ಕಲ್ಯಾಣಂ ಪೂಜಯಾಮಾಸತುಸ್ತು ತೇ||

ಎತ್ತರವಾಗಿದ್ದ, ಶ್ಯಾಮವರ್ಣದ, ನೀಲಿ ಗುಂಗುರು ಕೂದಲುಗಳನ್ನು ಹೊಂದಿದ್ದ, ಮೊನಚಾದ ಕೆಂಪು ಉಗುರುಗಳನ್ನು ಹೊಂದಿದ್ದ, ಪೀನಶ್ರೋಣಿ ಪಯೋಧರೆಯರಾದರೂ ತಮಗೆ ಪ್ರತಿರೂಪ ಪತಿಯು ದೊರಕಿದನೆಂದು ತಿಳಿದು ಕಲ್ಯಾಣ ವಿಚಿತ್ರವೀರ್ಯನನ್ನು ಪೂಜಿಸತೊಡಗಿದರು.

01096056a ಸ ಚಾಶ್ವಿರೂಪಸದೃಶೋ ದೇವಸತ್ತ್ವಪರಾಕ್ರಮಃ|

01096056c ಸರ್ವಾಸಾಮೇವ ನಾರೀಣಾಂ ಚಿತ್ತಪ್ರಮಥನೋಽಭವತ್||

ರೂಪದಲ್ಲಿ ಅಶ್ವಿನಿಯರನ್ನು ಹೋಲುತ್ತಿದ್ದ ಆ ದೇವಸತ್ವಪರಾಕ್ರಮಿಯು ಸರ್ವ ನಾರಿಯರ ಚಿತ್ತಗಳನ್ನು ಕಡೆಯುವಂತಿದ್ದನು.

01096057a ತಾಭ್ಯಾಂ ಸಹ ಸಮಾಃ ಸಪ್ತ ವಿಹರನ್ ಪೃಥಿವೀಪತಿಃ|

01096057c ವಿಚಿತ್ರವೀರ್ಯಸ್ತರುಣೋ ಯಕ್ಷ್ಮಾಣಂ ಸಮಪದ್ಯತ||

ಆ ತರುಣ ಪೃಥಿವೀಪತಿ ವಿಚಿತ್ರವೀರ್ಯನು ಏಳು ವರ್ಷಗಳ ಪರ್ಯಂತ ಅವರೊಡನೆ ವಿಹರಿಸುತ್ತಿದ್ದು, ರೋಗಕ್ಕೆ ಬಲಿಯಾದನು.

01096058a ಸುಹೃದಾಂ ಯತಮಾನಾನಾಮಾಪ್ತೈಃ ಸಹ ಚಿಕಿತ್ಸಕೈಃ|

01096058c ಜಗಾಮಾಸ್ತಮಿವಾದಿತ್ಯಃ ಕೌರವ್ಯೋ ಯಮಸಾದನಂ||

ಸುಹೃದಯರು ಮತ್ತು ಆಪ್ತ ಚಿಕಿತ್ಸಕರು ಎಷ್ಟು ಪ್ರಯತ್ನಿಸಿದರೂ ಮುಳುಗುತ್ತಿರುವ ಸೂರ್ಯನಂತೆ ಕೌರವ್ಯನು ಯಮಸಾದನವನ್ನು ಸೇರಿದನು.

01096059a ಪ್ರೇತಕಾರ್ಯಾಣಿ ಸರ್ವಾಣಿ ತಸ್ಯ ಸಂಯಗಕಾರಯತ್|

01096059c ರಾಜ್ಞೋ ವಿಚಿತ್ರವೀರ್ಯಸ್ಯ ಸತ್ಯವತ್ಯಾ ಮತೇ ಸ್ಥಿತಃ|

01096059e ಋತ್ವಿಗ್ಭಿಃ ಸಹಿತೋ ಭೀಷ್ಮಃ ಸರ್ವೈಶ್ಚ ಕುರುಪುಂಗವೈಃ||

ಸತ್ಯವತಿಯ ಸೂಚನೆಗಳಂತೆ, ಕುರುಪುಂಗವ ಬೀಷ್ಮನು ಸರ್ವ ಋತ್ವಿಗರೊಡಗೂಡಿ ರಾಜ ವಿಚಿತ್ರವೀರ್ಯನ ಪ್ರೇತಕಾರ್ಯಗಳೆಲ್ಲವನ್ನೂ ನೆರವೇರಿಸಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವಿಚಿತ್ರವೀರ್ಯೋಪರಮೇ ಷಣ್ಣವತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವಿಚಿತ್ರವೀರ್ಯನ ನಿಧನ ವಿಷಯಕ ತೊಂಭತ್ತಾರನೆಯ ಅಧ್ಯಾಯವು.

Comments are closed.