Udyoga Parva: Chapter 132

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೨

ವಿದುರೆಯು ಮಗನಿಗೆ ವರ್ಣಧರ್ಮವನ್ನು ತಿಳಿಸಿದುದು (೧-೪೦).

05132001 ವಿದುರೋವಾಚ|

05132001a ಅಥೈತಸ್ಯಾಮವಸ್ಥಾಯಾಂ ಪೌರುಷಂ ಹಾತುಮಿಚ್ಚಸಿ|

05132001c ನಿಹೀನಸೇವಿತಂ ಮಾರ್ಗಂ ಗಮಿಷ್ಯಸ್ಯಚಿರಾದಿವ||

ವಿದುರೆಯು ಹೇಳಿದಳು: “ಈಗ ಈ ಅವಸ್ಥೆಯಲ್ಲಿ ಪೌರುಷವನ್ನು ತ್ಯಜಿಸಲು ಇಚ್ಛಿಸಿದರೆ ಬೇಗನೇ ನೀನು ಹೀನಪುರುಷರ ಮಾರ್ಗದಲ್ಲಿ ಹೋಗುತ್ತೀಯೆ.

05132002a ಯೋ ಹಿ ತೇಜೋ ಯಥಾಶಕ್ತಿ ನ ದರ್ಶಯತಿ ವಿಕ್ರಮಾತ್|

05132002c ಕ್ಷತ್ರಿಯೋ ಜೀವಿತಾಕಾಂಕ್ಷೀ ಸ್ತೇನ ಇತ್ಯೇವ ತಂ ವಿದುಃ||

ಯಾವ ಕ್ಷತ್ರಿಯನು ಜೀವಿಸಿರಬೇಕೆಂಬ ಒಂದೇ ಆಶಯದಿಂದ ಶಕ್ತಿ ಮೀರಿ ತನ್ನ ಪರಾಕ್ರಮವನ್ನು ಪ್ರದರ್ಶಿಸಿ ಹೋರಾಡುವುದಿಲ್ಲವೋ ಅವನನ್ನು ಹೀಗೆಯೇ ತಿಳಿಯುತ್ತಾರೆ.

05132003a ಅರ್ಥವಂತ್ಯುಪಪನ್ನಾನಿ ವಾಕ್ಯಾನಿ ಗುಣವಂತಿ ಚ|

05132003c ನೈವ ಸಂಪ್ರಾಪ್ನುವಂತಿ ತ್ವಾಂ ಮುಮೂರ್ಷುಮಿವ ಭೇಷಜಂ||

ಸಾಯಲು ಸಿದ್ಧನಾಗಿರುವವನಿಗೆ ಔಷಧಗಳು ಹೇಗೆ ಪರಿಣಾಮವನ್ನುಂಟುಮಾಡುವುದಿಲ್ಲವೋ ಹಾಗೆ ನಾನು ಹೇಳುತ್ತಿರುವ ಈ ಯತಾರ್ಥ ಗುಣವಂತ ಮಾತುಗಳು ನಿನಗೆ ತಾಗುತ್ತಿಲ್ಲ.

05132004a ಸಂತಿ ವೈ ಸಿಂಧುರಾಜಸ್ಯ ಸಂತುಷ್ಟಾ ಬಹವೋ ಜನಾಃ|

05132004c ದೌರ್ಬಲ್ಯಾದಾಸತೇ ಮೂಢಾ ವ್ಯಸನೌಘಪ್ರತೀಕ್ಷಿಣಃ||

ಸಿಂಧುರಾಜನಲ್ಲಿ ಸಂತುಷ್ಟರಾಗಿರದ ಬಹಳ ಜನರಿದ್ದಾರೆ. ಆದರೆ ನಿನ್ನ ದೌರ್ಬಲ್ಯದಿಂದಾಗಿ ಏನೂ ಮಾಡಲು ತಿಳಿಯದೇ ನಿರೀಕ್ಷಿಸುತ್ತಿದ್ದಾರೆ.

05132005a ಸಹಾಯೋಪಚಯಂ ಕೃತ್ವಾ ವ್ಯವಸಾಯ್ಯ ತತಸ್ತತಃ|

05132005c ಅನುದುಷ್ಯೇಯುರಪರೇ ಪಶ್ಯಂತಸ್ತವ ಪೌರುಷಂ||

ನಿನ್ನ ಪೌರುಷವನ್ನು ನೋಡಿ ನಂತರ ಹಲವು ಕಡೆಗಳಿಂದ ನಿನಗೆ ಸಹಾಯವನ್ನು ನೀಡಿ ಅವನೊಂದಿಗೆ ಶತ್ರುತ್ವವನ್ನು ಕಟ್ಟಿಕೊಳ್ಳಬಹುದು.

05132006a ತೈಃ ಕೃತ್ವಾ ಸಹ ಸಂಘಾತಂ ಗಿರಿದುರ್ಗಾಲಯಾಂಶ್ಚರ|

05132006c ಕಾಲೇ ವ್ಯಸನಮಾಕಾಂಕ್ಷನ್ನೈವಾಯಮಜರಾಮರಃ||

ಅವರೊಡನೆ ನೀನು ಸಂಧಿಯನ್ನು ಮಾಡಿಕೊಂಡು ಅವನಿಗೆ ವಿಪತ್ತು ಒದಗುವ ಕಾಲವನ್ನು ಕಾಯುತ್ತಾ ರಹಸ್ಯವಾಗಿ ಗಿರಿದುರ್ಗಾಲಯಗಳಲ್ಲಿ ಸಂಚರಿಸುತ್ತಿರಬೇಕು.

05132007a ಸಂಜಯೋ ನಾಮತಶ್ಚ ತ್ವಂ ನ ಚ ಪಶ್ಯಾಮಿ ತತ್ತ್ವಯಿ|

05132007c ಅನ್ವರ್ಥನಾಮಾ ಭವ ಮೇ ಪುತ್ರ ಮಾ ವ್ಯರ್ಥನಾಮಕಃ||

“ಸಂಜಯ” ಎಂಬ ಹೆಸರನ್ನು ನಿನಗಿಟ್ಟಿದ್ದೀವೆ. ಆದರೆ ಅದನ್ನೇ ನಾನು ನಿನ್ನಲ್ಲಿ ಕಾಣದವಳಾಗಿದ್ದೇನೆ. ಮಗೂ! ನಿನ್ನ ಅನ್ವರ್ಥನಾಮನಾಗು. ವ್ಯರ್ಥನಾಮಕನಾಗಬೇಡ.

05132008a ಸಮ್ಯಗ್ದೃಷ್ಟಿರ್ಮಹಾಪ್ರಾಜ್ಞೋ ಬಾಲಂ ತ್ವಾಂ ಬ್ರಾಹ್ಮಣೋಽಬ್ರವೀತ್|

05132008c ಅಯಂ ಪ್ರಾಪ್ಯ ಮಹತ್ಕೃಚ್ಚ್ರಂ ಪುನರ್ವೃದ್ಧಿಂ ಗಮಿಷ್ಯತಿ||

ಹಿಂದೆ ನೀನಿನ್ನೂ ಬಾಲಕನಾಗಿದ್ದಾಗ ಶುಭಲೋಚನ ಮಹಾಪ್ರಾಜ್ಞ ಬ್ರಾಹ್ಮಣನೋರ್ವನು ನಿನ್ನನ್ನು ನೋಡಿ ಇವನು ಮುಂದೆ ಮಹಾ ಕಷ್ಟವನ್ನು ಅನುಭವಿಸಿ ನಂತರ ವೃದ್ಧಿಯನ್ನು ಪಡೆಯುತ್ತಾನೆ ಎಂದು ಹೇಳಿದ್ದನು.

05132009a ತಸ್ಯ ಸ್ಮರಂತೀ ವಚನಮಾಶಂಸೇ ವಿಜಯಂ ತವ|

05132009c ತಸ್ಮಾತ್ತಾತ ಬ್ರವೀಮಿ ತ್ವಾಂ ವಕ್ಷ್ಯಾಮಿ ಚ ಪುನಃ ಪುನಃ||

ಅವನ ಮಾತನ್ನು ಸ್ಮರಿಸಿಕೊಂಡು ನಿನ್ನ ವಿಜಯವನ್ನು ಆಶಿಸುತ್ತಿದ್ದೇನೆ. ಆದುದರಿಂದ ಮಗೂ! ನಿನಗೆ ಪುನಃ ಪುನಃ ಹೇಳುತ್ತಿದ್ದೇನೆ.

05132010a ಯಸ್ಯ ಹ್ಯರ್ಥಾಭಿನಿರ್ವೃತ್ತೌ ಭವಂತ್ಯಾಪ್ಯಾಯಿತಾಃ ಪರೇ|

05132010c ತಸ್ಯಾರ್ಥಸಿದ್ಧಿರ್ನಿಯತಾ ನಯೇಷ್ವರ್ಥಾನುಸಾರಿಣಃ||

ಯಾರ ಅರ್ಥಸಿದ್ಧಿಯಲ್ಲಿ ಇತರರು ಸಂತುಷ್ಟರಾಗುತ್ತಾರೋ ಮತ್ತು ತಾನೂ ಔನ್ನತ್ಯವನ್ನು ಹೊಂದುತ್ತಾನೋ ಅಂತಹ ನೀತಿಶಾಸ್ತ್ರಾನುಸಾರವಾದ ಅರ್ಥಸಿದ್ಧಿಗೆ ಪ್ರಯತ್ನಿಸುವವನ ಅಭೀಷ್ಟಗಳು ಸಿದ್ಧಿಯಾಗುತ್ತವೆ.

05132011a ಸಮೃದ್ಧಿರಸಮೃದ್ಧಿರ್ವಾ ಪೂರ್ವೇಷಾಂ ಮಮ ಸಂಜಯ|

05132011c ಏವಂ ವಿದ್ವಾನ್ಯುದ್ಧಮನಾ ಭವ ಮಾ ಪ್ರತ್ಯುಪಾಹರ||

ಸಂಜಯ! ನನಗೆ ಮತ್ತು ಪೂರ್ವಜರಿಗೆ ಸಮೃದ್ಧಿಯಾಗಲಿ ಅಥವಾ ಸಮೃದ್ಧಿಯಾಗದಿರಲೀ ಯುದ್ಧಮಾಡುವುದೇ ಧರ್ಮವೆಂದು ತಿಳಿದು ಯುದ್ಧಮಾಡು. ನಿಲ್ಲಿಸಬೇಡ!

05132012a ನಾತಃ ಪಾಪೀಯಸೀಂ ಕಾಂ ಚಿದವಸ್ಥಾಂ ಶಂಬರೋಽಬ್ರವೀತ್|

05132012c ಯತ್ರ ನೈವಾದ್ಯ ನ ಪ್ರಾತರ್ಭೋಜನಂ ಪ್ರತಿದೃಶ್ಯತೇ||

ಇಂದಿನ ಮತ್ತು ಬೆಳಗಿನ ಊಟವು ಕಾಣುವುದಿಲ್ಲವೆಂದರೆ ಅದಕ್ಕಿಂತಲೂ ಪಾಪಿ ಅವಸ್ಥೆಯು ಬೇರೊಂದಿಲ್ಲ ಎಂದು ಶಂಬರನು ಹೇಳಿದ್ದಾನೆ.

05132013a ಪತಿಪುತ್ರವಧಾದೇತತ್ಪರಮಂ ದುಃಖಮಬ್ರವೀತ್|

05132013c ದಾರಿದ್ರ್ಯಮಿತಿ ಯತ್ಪ್ರೋಕ್ತಂ ಪರ್ಯಾಯಮರಣಂ ಹಿ ತತ್||

ಪತಿ ಮತ್ತು ಪುತ್ರರ ವಧೆಗಿಂತಲೂ ಹೆಚ್ಚಿನ ದುಃಖವಿದೆಂದು ಹೇಳಲಾಗಿದೆ. ದಾರಿದ್ರ್ಯವೆಂದು ಯಾವುದಕ್ಕೆ ಹೇಳುತ್ತೇವೋ ಅದರ ಪರ್ಯಾಯವಾದುದೇ ಮರಣ.

05132014a ಅಹಂ ಮಹಾಕುಲೇ ಜಾತಾ ಹ್ರದಾದ್ಧ್ರದಮಿವಾಗತಾ|

05132014c ಈಶ್ವರೀ ಸರ್ವಕಲ್ಯಾಣೈರ್ಭರ್ತ್ರಾ ಪರಮಪೂಜಿತಾ||

ನಾನು ಮಹಾಕುಲದಲ್ಲಿ ಹುಟ್ಟಿದವಳು - ಒಂದು ಸರೋವರದಿಂದ ಇನ್ನೊಂದಕ್ಕೆ ಹೋಗುವ ಕಮಲದಂತೆ ಸರ್ವಕಲ್ಯಾಣಯುಕ್ತವಾದ ಪರಮ ಪೂಜಿತ ಪತಿಯಲ್ಲಿಗೆ ಬಂದಿರುವವಳು.

05132015a ಮಹಾರ್ಹಮಾಲ್ಯಾಭರಣಾಂ ಸುಮೃಷ್ಟಾಂಬರವಾಸಸಂ|

05132015c ಪುರಾ ದೃಷ್ಟ್ವಾ ಸುಹೃದ್ವರ್ಗೋ ಮಾಮಪಶ್ಯತ್ಸುದುರ್ಗತಾಂ||

ಹಿಂದೆ ಮಹಾರ್ಹವಾದ ಮಾಲ್ಯಾಂಬರ ಆಭರಣಗಳನ್ನೂ, ಸುಮೃಷ್ಟ ಸುಂದರ ವಸ್ತ್ರಗಳನ್ನೂ ನೋಡಿ ನಾನು ಸುಹೃದ್ವರ್ಗಗಳಲ್ಲಿ ಕಷ್ಟಗಳನ್ನೇ ನೋಡಿರಲಿಲ್ಲ.

05132016a ಯದಾ ಮಾಂ ಚೈವ ಭಾರ್ಯಾಂ ಚ ದ್ರಷ್ಟಾಸಿ ಭೃಶದುರ್ಬಲೇ|

05132016c ನ ತದಾ ಜೀವಿತೇನಾರ್ಥೋ ಭವಿತಾ ತವ ಸಂಜಯ||

ಸಂಜಯ! ಯಾವಾಗ ತುಂಬಾ ದುರ್ಬಲರಾಗಿರುವ ನನ್ನನ್ನು ಮತ್ತು ನಿನ್ನ ಭಾರ್ಯೆಯನ್ನು ನೋಡುವೆಯೋ ಆಗ ನಿನಗೆ ನನ್ನ ಬದುಕಿಗೆ ಅರ್ಥವಿಲ್ಲ ಎಂದಾಗುತ್ತದೆ.

05132017a ದಾಸಕರ್ಮಕರಾನ್ಭೃತ್ಯಾನಾಚಾರ್ಯರ್ತ್ವಿಕ್ಪುರೋಹಿತಾನ್|

05132017c ಅವೃತ್ತ್ಯಾಸ್ಮಾನ್ಪ್ರಜಹತೋ ದೃಷ್ಟ್ವಾ ಕಿಂ ಜೀವಿತೇನ ತೇ||

ದಾಸರು, ಕೆಲಸಗಾರರು, ಸೇವಕರು, ಆಚಾರ್ಯರು, ಋತ್ವಿಕರು, ಪುರೋಹಿತರು ನಮ್ಮನ್ನು ಬಿಟ್ಟು ಹೋಗುತ್ತಾರೆ. ಅದನ್ನು ನೋಡಿಯೂ ನೀನು ಜೀವಿಸಿದ್ದೇನು ಫಲ?

05132018a ಯದಿ ಕೃತ್ಯಂ ನ ಪಶ್ಯಾಮಿ ತವಾದ್ಯೇಹ ಯಥಾ ಪುರಾ|

05132018c ಶ್ಲಾಘನೀಯಂ ಯಶಸ್ಯಂ ಚ ಕಾ ಶಾಂತಿರ್ಹೃದಯಸ್ಯ ಮೇ||

ಹಿಂದಿನಂತೆಯೇ ಇಂದು ನೀನು ಶ್ಲಾಘನೀಯ ಯಶಸ್ಕರವಾದುದನ್ನು ಮಾಡುವುದನ್ನು ನಾನು ನೋಡದಿದ್ದರೆ ನನ್ನ ಹೃದಯಕ್ಕೆ ಶಾಂತಿಯೆಲ್ಲಿಂದ?

05132019a ನೇತಿ ಚೇದ್ಬ್ರಾಹ್ಮಣಾನ್ಬ್ರೂಯಾಂ ದೀರ್ಯತೇ ಹೃದಯಂ ಮಮ|

05132019c ನ ಹ್ಯಹಂ ನ ಚ ಮೇ ಭರ್ತಾ ನೇತಿ ಬ್ರಾಹ್ಮಣಮುಕ್ತವಾನ್||

ಇಲ್ಲ ಎಂದು ಬ್ರಾಹ್ಮಣನಿಗೆ ಹೇಳಲು ನನ್ನ ಹೃದಯವು ಸೀಳಿಹೋಗುತ್ತದೆ. ಬ್ರಾಹ್ಮಣರಿಗೆ ಇಲ್ಲವೆಂದು ನನ್ನ ಪತಿಯು ಎಂದೂ ಹೇಳಿರಲಿಲ್ಲ.

05132020a ವಯಮಾಶ್ರಯಣೀಯಾಃ ಸ್ಮ ನಾಶ್ರಿತಾರಃ ಪರಸ್ಯ ಚ|

05132020c ಸಾನ್ಯಾನಾಶ್ರಿತ್ಯ ಜೀವಂತೀ ಪರಿತ್ಯಕ್ಷ್ಯಾಮಿ ಜೀವಿತಂ||

ಆಶ್ರಯವನ್ನಿತ್ತಿದ್ದ ನಾವು ಈಗ ಪರರ ಆಶ್ರಯದಲ್ಲಿ ಇರುವವರಲ್ಲ. ಇನ್ನೊಬ್ಬರನ್ನು ಆಶ್ರಯಿಸಿ ಜೀವಿಸಬೇಕಾಗಿ ಬಂದರೆ ಜೀವವನ್ನು ಬಿಡುತ್ತೇನೆ.

05132021a ಅಪಾರೇ ಭವ ನಃ ಪಾರಮಪ್ಲವೇ ಭವ ನಃ ಪ್ಲವಃ|

05132021c ಕುರುಷ್ವ ಸ್ಥಾನಮಸ್ಥಾನೇ ಮೃತಾನ್ಸಂಜೀವಯಸ್ವ ನಃ||

ಪಾರವೇ ಇಲ್ಲದವಳಿಗೆ ಪಾರವಾಗು. ನೌಕೆಯೇ ಇಲ್ಲದವಳಿಗೆ ನೌಕೆಯಾಗು. ಅಸ್ಥಾನಗೊಂಡಿರುವವರಿಗೆ ಸ್ಥಾನಮಾಡಿಕೊಡು. ಮೃತರಾಗುವವರಿಗೆ ಸಂಜೀವನಿಯಾಗು.

05132022a ಸರ್ವೇ ತೇ ಶತ್ರವಃ ಸಹ್ಯಾ ನ ಚೇಜ್ಜೀವಿತುಮಿಚ್ಚಸಿ|

05132022c ಅಥ ಚೇದೀದೃಶೀಂ ವೃತ್ತಿಂ ಕ್ಲೀಬಾಮಭ್ಯುಪಪದ್ಯಸೇ||

ಜೀವಿಸಿರಲು ಇಚ್ಛಿಸದೇ ಹೋರಾಡಿದರೆ ನೀನು ಸರ್ವ ಶತ್ರುಗಳನ್ನೂ ಜಯಿಸಬಲ್ಲೆ. ಈ ರೀತಿಯಲ್ಲಿ ಹೇಡಿಯಂತೆ ನಡೆದುಕೊಳ್ಳುತ್ತೀಯಾದರೆ ಈಗಲೇ ಜೀವವನ್ನು ಬಿಟ್ಟುಬಿಡು.

05132023a ನಿರ್ವಿಣ್ಣಾತ್ಮಾ ಹತಮನಾ ಮುಂಚೈತಾಂ ಪಾಪಜೀವಿಕಾಂ|

05132023c ಏಕಶತ್ರುವಧೇನೈವ ಶೂರೋ ಗಚ್ಚತಿ ವಿಶ್ರುತಿಂ||

ನಿರ್ವಿಣ್ಣನಾಗಿ ಹತಮನಸ್ಕನಾಗಿದ್ದರೆ ಈ ಪಾಪಜೀವಕವನ್ನು ಬಿಟ್ಟುಬಿಡು. ಒಬ್ಬನೇ ಶತ್ರುವನ್ನು ಕೊಲ್ಲುವುದರಿಂದಲೂ ಶೂರನೆಂದು ಖ್ಯಾತಿ ಹೊಂದುತ್ತಾರೆ.

05132024a ಇಂದ್ರೋ ವೃತ್ರವಧೇನೈವ ಮಹೇಂದ್ರಃ ಸಮಪದ್ಯತ|

05132024c ಮಾಹೇಂದ್ರಂ ಚ ಗ್ರಹಂ ಲೇಭೇ ಲೋಕಾನಾಂ ಚೇಶ್ವರೋಽಭವತ್||

ಇಂದ್ರನು ವೃತ್ರನೊಬ್ಬನ ವಧೆಯಿಂದಾಗಿ ಮಹೇಂದ್ರನೆಂದೆನಿಸಿಕೊಂಡನು. ಮಾಹೇಂದ್ರ ಗೃಹವನ್ನೂ ಪಡೆದನು ಮತ್ತು ಲೋಕಗಳ ಈಶ್ವರನೂ ಆದನು.

05132025a ನಾಮ ವಿಶ್ರಾವ್ಯ ವಾ ಸಂಖ್ಯೇ ಶತ್ರೂನಾಹೂಯ ದಂಶಿತಾನ್|

05132025c ಸೇನಾಗ್ರಂ ವಾಪಿ ವಿದ್ರಾವ್ಯ ಹತ್ವಾ ವಾ ಪುರುಷಂ ವರಂ||

ಶ್ರೇಷ್ಠ ಪುರುಷನು ಹೆಸರನ್ನು ಹೇಳಿ ಯುದ್ಧದಲ್ಲಿ ಶತ್ರುವನ್ನು ಕರೆದು ಕವಚ ಧರಿಸಿ ಸೇನಾಗ್ರದಲ್ಲಿರುವವರನ್ನು ಓಡಿಸಬೇಕು ಅಥವಾ ಕೊಲ್ಲಬೇಕು.

05132026a ಯದೈವ ಲಭತೇ ವೀರಃ ಸುಯುದ್ಧೇನ ಮಹದ್ಯಶಃ|

05132026c ತದೈವ ಪ್ರವ್ಯಥಂತೇಽಸ್ಯ ಶತ್ರವೋ ವಿನಮಂತಿ ಚ||

ಉತ್ತಮ ಯುದ್ಧದಿಂದ ವೀರನು ಯಾವ ಮಹಾಯಶಸ್ಸನ್ನು ಪಡೆಯುತ್ತಾನೋ ಅದರಿಂದಲೇ ಶತ್ರುಗಳು ದುಃಖಿತರಾಗುತ್ತಾರೆ ಮತ್ತು ತಲೆತಗ್ಗಿಸುತ್ತಾರೆ.

05132027a ತ್ಯಕ್ತ್ವಾತ್ಮಾನಂ ರಣೇ ದಕ್ಷಂ ಶೂರಂ ಕಾಪುರುಷಾ ಜನಾಃ|

05132027c ಅವಶಾಃ ಪೂರಯಂತಿ ಸ್ಮ ಸರ್ವಕಾಮಸಮೃದ್ಧಿಭಿಃ||

ಪ್ರಾಣದ ಹಂಗನ್ನು ತೊರೆದು ರಣದಲ್ಲಿ ದಕ್ಷನಾದ ಶೂರನನ್ನು ಕಾಪುರುಷ ಮುತ್ತು ಅವಶ ಜನರು ಸರ್ವಕಾಮ ಸಮೃದ್ಧಿಗಳಿಂದ ತೃಪ್ತಿಪಡಿಸುತ್ತಾರೆ.

05132028a ರಾಜ್ಯಂ ವಾಪ್ಯುಗ್ರವಿಭ್ರಂಶಂ ಸಂಶಯೋ ಜೀವಿತಸ್ಯ ವಾ|

05132028c ಪ್ರಲಬ್ಧಸ್ಯ ಹಿ ಶತ್ರೋರ್ವೈ ಶೇಷಂ ಕುರ್ವಂತಿ ಸಾಧವಃ||

ರಾಜ್ಯವನ್ನು ಹಿಂದೆ ತೆಗೆದುಕೊಳ್ಳುವುದು ತುಂಬಾ ಕಷ್ಟವೆಂದೆನಿಸಬಹುದು. ಜೀವವುಳಿಯುವ ಸಂಶಯವೂ ಇರಬಹುದು. ಆದರೆ ತಿಳಿದವರು ಸಿಕ್ಕಿದ ಶತ್ರುವನ್ನು ನಿಃಶೇಷ ಮಾಡುತ್ತಾರೆ.

05132029a ಸ್ವರ್ಗದ್ವಾರೋಪಮಂ ರಾಜ್ಯಮಥ ವಾಪ್ಯಮೃತೋಪಮಂ|

05132029c ರುದ್ಧಮೇಕಾಯನೇ ಮತ್ವಾ ಪತೋಲ್ಮುಕ ಇವಾರಿಷು||

ಯುದ್ಧವು ಸ್ವರ್ಗದ ದ್ವಾರದಂತೆ. ರಾಜ್ಯವನ್ನೂ ಕೊಡುವಂಥಹುದು. ಇದನ್ನು ತಿಳಿದುಕೊಂಡು ಉರಿಯುವ ಕೊಳ್ಳಿಯಂತೆ ಶತ್ರುಗಳ ಮೇಲೆ ಬೀಳು.

05132030a ಜಹಿ ಶತ್ರೂನ್ರಣೇ ರಾಜನ್ಸ್ವಧರ್ಮಮನುಪಾಲಯ|

05132030c ಮಾ ತ್ವಾ ಪಶ್ಯೇತ್ಸುಕೃಪಣಂ ಶತ್ರುಃ ಶ್ರೀಮಾನ್ಕದಾ ಚನ||

ರಾಜನ್! ರಣದಲ್ಲಿ ಶತ್ರುಗಳನ್ನು ಕೊಂದು ಸ್ವಧರ್ಮವನ್ನು ಪಾಲಿಸು. ನೀನು ಕೃಪಣನಾಗಿ ಮಲಗಿರುವುದನ್ನು ಮತ್ತು ಶತ್ರುಗಳು ಶ್ರೀಮಂತರಾಗಿರುವುದನ್ನು ನಾನು ಎಂದೂ ನೋಡಲಾರೆನು.

05132031a ಅಸ್ಮದೀಯೈಶ್ಚ ಶೋಚದ್ಭಿರ್ನದದ್ಭಿಶ್ಚ ಪರೈರ್ವೃತಂ|

05132031c ಅಪಿ ತ್ವಾಂ ನಾನುಪಶ್ಯೇಯಂ ದೀನಾ ದೀನಮವಸ್ಥಿತಂ||

ನಾವು ಇಲ್ಲಿ ಶೋಕಿಸುತ್ತಿದ್ದರೆ ಅಲ್ಲಿ ವೈರಿಗಳು ಆವೃತರಾಗಿ ಆನಂದಿಸುತ್ತಿದ್ದಾರೆ. ದೀನನಾಗಿ ದೀನಾವಸ್ಥೆಯಲ್ಲಿರುವ ನಿನ್ನನ್ನು ನಾವು ನೋಡಲಾರೆವು.

05132032a ಉಷ್ಯ ಸೌವೀರಕನ್ಯಾಭಿಃ ಶ್ಲಾಘಸ್ವಾರ್ಥೈರ್ಯಥಾ ಪುರಾ|

05132032c ಮಾ ಚ ಸೈಂಧವಕನ್ಯಾನಾಮವಸನ್ನೋ ವಶಂ ಗಮಃ||

ಹಿಂದಿನಂತೆ ಸೌವೀರಕನ್ಯೆಯರ ಶ್ಲಾಘನೆಗೆ ಏಳು. ಸೈಂಧವಕನ್ಯೆಯರ ವಶನಾಗಬೇಡ.

05132033a ಯುವಾ ರೂಪೇಣ ಸಂಪನ್ನೋ ವಿದ್ಯಯಾಭಿಜನೇನ ಚ|

05132033c ಯಸ್ತ್ವಾದೃಶೋ ವಿಕುರ್ವೀತ ಯಶಸ್ವೀ ಲೋಕವಿಶ್ರುತಃ|

05132033e ವೋಢವ್ಯೇ ಧುರ್ಯನಡುವನ್ಮನ್ಯೇ ಮರಣಮೇವ ತತ್||

ಯೌವನ, ರೂಪ, ವಿದ್ಯೆ, ಮಿತ್ರರಿಂದ ಸಂಪನ್ನನಾಗಿದ್ದೀಯೆ. ಯಶಸ್ವಿ ಮತ್ತು ಲೋಕವಿಶ್ರುತನಾಗಿರುವ ನೀನು ಭಾರವನ್ನು ಹೊರಬೇಕಾದ ಸಮಯದಲ್ಲಿ ಎತ್ತು ನೊಗದಿಂದ ನುಣಚಿಕೊಳ್ಳುವಂತೆ ಏನೂ ಮಾಡದೇ ಕುಳಿತಿರುವೆಯಲ್ಲ! ಇದು ನಿನ್ನ ಮರಣವೆಂದೇ ತಿಳಿದುಕೊಳ್ಳುತ್ತೇನೆ.

05132034a ಯದಿ ತ್ವಾಮನುಪಶ್ಯಾಮಿ ಪರಸ್ಯ ಪ್ರಿಯವಾದಿನಂ|

05132034c ಪೃಷ್ಠತೋಽನುವ್ರಜಂತಂ ವಾ ಕಾ ಶಾಂತಿರ್ಹೃದಯಸ್ಯ ಮೇ||

ನೀನು ಶತ್ರುಗಳ ಹೊಗಳುಭಟ್ಟನಾಗಿ, ಅವರ ಶುಶ್ರೂಷೆ ಮಾಡುವುದನ್ನೂ, ಹಿಂದೆ ಹೋಗುವುದನ್ನೂ ನೋಡಿದರೆ ನನ್ನ ಹೃದಯಕ್ಕೆ ಶಾಂತಿ ಎಲ್ಲಿಂದ?

05132035a ನಾಸ್ಮಿಂ ಜಾತು ಕುಲೇ ಜಾತೋ ಗಚ್ಚೇದ್ಯೋಽನ್ಯಸ್ಯ ಪೃಷ್ಠತಃ|

05132035c ನ ತ್ವಂ ಪರಸ್ಯಾನುಧುರಂ ತಾತ ಜೀವಿತುಮರ್ಹಸಿ||

ಮಗೂ! ಇನ್ನೊಬ್ಬರ ಅನುಚರನಾಗಿ ಅವರ ಸೇವೆ ಮಾಡಿಕೊಂಡಿರುವವನು ನಮ್ಮ ಕುಲದಲ್ಲಿ ಎಂದೂ ಹುಟ್ಟಿಲ್ಲ. ಹೀಗಿರುವಾಗ ನೀನು ಪರರನ್ನು ಆಧರಿಸಿ ಜೀವಿಸಬಾರದು.

05132036a ಅಹಂ ಹಿ ಕ್ಷತ್ರಹೃದಯಂ ವೇದ ಯತ್ಪರಿಶಾಶ್ವತಂ|

05132036c ಪೂರ್ವೈಃ ಪೂರ್ವತರೈಃ ಪ್ರೋಕ್ತಂ ಪರೈಃ ಪರತರೈರಪಿ||

ಪರಿಶಾಶ್ವತವಾಗಿರುವ, ಪೂರ್ವಜರು, ಅದಕ್ಕೂ ಪೂರ್ವಜರು, ಇತರರು, ಬೇರೆಯವರು ಹೇಳಿದ ಕ್ಷತ್ರಹೃದಯವನ್ನು ನಾನು ತಿಳಿದುಕೊಂಡಿದ್ದೇನೆ.

05132037a ಯೋ ವೈ ಕಶ್ಚಿದಿಹಾಜಾತಃ ಕ್ಷತ್ರಿಯಃ ಕ್ಷತ್ರಧರ್ಮವಿತ್|

05132037c ಭಯಾದ್ವೃತ್ತಿಸಮೀಕ್ಷೋ ವಾ ನ ನಮೇದಿಹ ಕಸ್ಯ ಚಿತ್||

ಇಲ್ಲಿ ಕ್ಷತ್ರಿಯನಾಗಿ ಜನಿಸಿದ, ಕ್ಷತ್ರಧರ್ಮವನ್ನು ತಿಳಿದುಕೊಂಡಿರುವ ಯಾರೂ ಎಂದೂ ಭಯದಿಂದ ಅಥವಾ ಜೀವವುಳಿಸಿಕೊಳ್ಳಲು ಬೇರೊಬ್ಬನ ಮುಂದೆ ತಲೆತಗ್ಗಿಸಬಾರದು.

05132038a ಉದ್ಯಚ್ಚೇದೇವ ನ ನಮೇದುದ್ಯಮೋ ಹ್ಯೇವ ಪೌರುಷಂ|

05132038c ಅಪ್ಯಪರ್ವಣಿ ಭಜ್ಯೇತ ನ ನಮೇದಿಹ ಕಸ್ಯ ಚಿತ್||

ವಿಜಯಕ್ಕೆ ಪ್ರಯತ್ನಿಸುತ್ತಲೇ ಇರಬೇಕು. ಎಂದೂ ಶರಣಾಗತನಾಗಬಾರದು. ಉದ್ಯಮವೇ ಪೌರುಷ. ಮಧ್ಯದಲ್ಲಿ ತುಂಡಾದರೂ ಸರಿ. ಎಂದೂ ಬಗ್ಗಬಾರದು.

05132039a ಮಾತಂಗೋ ಮತ್ತ ಇವ ಚ ಪರೀಯಾತ್ಸುಮಹಾಮನಾಃ|

05132039c ಬ್ರಾಹ್ಮಣೇಭ್ಯೋ ನಮೇನ್ನಿತ್ಯಂ ಧರ್ಮಾಯೈವ ಚ ಸಂಜಯ||

ಸಂಜಯ! ಮದಿಸಿದ ಆನೆಯಂತೆ ಸರ್ವತ್ರ ಭಯರಹಿತನಾಗಿ ಸುತ್ತಾಡುತ್ತಿರಬೇಕು. ಬ್ರಾಹ್ಮಣರಿಗೆ ಮತ್ತು ಧರ್ಮಕ್ಕೆ ಮಾತ್ರ ಸದಾ ಸಮಸ್ಕರಿಸಬೇಕು.

05132040a ನಿಯಚ್ಚನ್ನಿತರಾನ್ವರ್ಣಾನ್ವಿನಿಘ್ನನ್ಸರ್ವದುಷ್ಕೃತಃ|

05132040c ಸಸಹಾಯೋಽಸಹಾಯೋ ವಾ ಯಾವಜ್ಜೀವಂ ತಥಾ ಭವೇತ್||

ಇನ್ನೊಬ್ಬರ ಸಹಾಯವಿರಲಿ ಅಥವಾ ಇಲ್ಲದಿರಲಿ, ಎಲ್ಲಿಯವರೆಗೆ ಜೀವವಿದೆಯೋ ಅಲ್ಲಿಯವರೆಗೆ ವರ್ಣಧರ್ಮದಲ್ಲಿ ನಿರತರಾಗಿರುವಂತೆ ಸರ್ವ ದುಷ್ಕೃತರನ್ನೂ ನಿಗ್ರಹಿಸುತ್ತಾ ಇರಬೇಕು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುಲಾಪುತ್ರಾನುಶಾಸನೇ ದ್ವಿತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುಲಾಪುತ್ರಾನುಶಾಸನದಲ್ಲಿ ನೂರಾಮೂವತ್ತೆರಡನೆಯ ಅಧ್ಯಾಯವು.

Image result for indian motifs

Comments are closed.