Udyoga Parva: Chapter 131

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೧

ವಿದುಲೋಪಾಖ್ಯಾನ

ಕುಂತಿಯು ವಿದುಲೋಪಾಖ್ಯಾನದ ಮೂಲಕ ಯುಧಿಷ್ಠಿರನಿಗೆ ಸಂದೇಶವನ್ನು ಕಳುಹಿಸುದುದು - ಶತ್ರುವಿನಿಂದ ಸೋಲಿಸಲ್ಪಟ್ಟ ಮಗನು ದುಃಖಿತನಾಗಿ ನಿರಾಶನಾಗಿ ಮಲಗಿಕೊಂಡಿರಲು ತಾಯಿ ವಿದುಲೆಯು ಅವನನ್ನು ಕಠೋರ ಮಾತುಗಳಿಂದ ಎಬ್ಬಿಸಿ ಯುದ್ಧಕ್ಕೆ ಕಳುಹಿಸಲು ಪ್ರಯತ್ನಿಸಿದುದು (೧-೪೨).

05131001 ಕುಂತ್ಯುವಾಚ|

05131001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ|

05131001c ವಿದುರಾಯಾಶ್ಚ ಸಂವಾದಂ ಪುತ್ರಸ್ಯ ಚ ಪರಂತಪ||

05131002a ಅತ್ರ ಶ್ರೇಯಶ್ಚ ಭೂಯಶ್ಚ ಯಥಾ ಸಾ ವಕ್ತುಮರ್ಹತಿ|

ಕುಂತಿಯು ಹೇಳಿದಳು: “ಪರಂತಪ! ಇದರ ಕುರಿತಾಗಿ ವಿದುರೆಯು[1] ತನ್ನ ಪುತ್ರನೊಡನೆ ನಡೆಸಿದ ಪುರಾತನ ಐತಿಹಾಸಿಕ ಸಂವಾದವನ್ನು ಉದಾಹರಿಸುತ್ತಾರೆ. ಇದರಲ್ಲಿ ಬಹಳಷ್ಟು ಶ್ರೇಯಸ್ಕರ ವಿಷಯಗಳಿವೆ. ಇದನ್ನು ಯಥಾವತ್ತಾಗಿ ಅವನಿಗೆ ಹೇಳಬೇಕು.

05131002c ಯಶಸ್ವಿನೀ ಮನ್ಯುಮತೀ ಕುಲೇ ಜಾತಾ ವಿಭಾವರೀ||

05131003a ಕ್ಷತ್ರಧರ್ಮರತಾ ಧನ್ಯಾ ವಿದುರಾ ದೀರ್ಘದರ್ಶಿನೀ|

05131003c ವಿಶ್ರುತಾ ರಾಜಸಂಸತ್ಸು ಶ್ರುತವಾಕ್ಯಾ ಬಹುಶ್ರುತಾ||

05131004a ವಿದುರಾ ನಾಮ ವೈ ಸತ್ಯಾ ಜಗರ್ಹೇ ಪುತ್ರಮೌರಸಂ|

05131004c ನಿರ್ಜಿತಂ ಸಿಂಧುರಾಜೇನ ಶಯಾನಂ ದೀನಚೇತಸಂ||

05131004e ಅನಂದನಮಧರ್ಮಜ್ಞಾಂ ದ್ವಿಷತಾಂ ಹರ್ಷವರ್ಧನಂ||

ಯಶಸ್ವಿನೀ, ಕೋಪಿಷ್ಟ, ಸತ್ಕುಲದಲ್ಲಿ ಜನಿಸಿದ್ದ, ಮಾನಿಷ್ಠೆ, ಕ್ಷತ್ರಧರ್ಮನಿರತೆ, ಧನ್ಯೆ, ದೀರ್ಘದರ್ಶಿನಿ, ರಾಜಸಂಸದಿಗಳಲ್ಲಿ ವಿಶ್ರುತಳಾದ, ಉಪದೇಶಿತಳಾಗಿದ್ದ, ವಿಖ್ಯಾತಳಾಗಿದ್ದ ವಿದುರಾ ಎಂಬ ಹೆಸರಿನ ಸತಿಯು ಸಿಂಧುರಾಜನಿಂದ ಸೋತು ದೀನಚೇತಸನಾಗಿ ಮಲಗಿಕೊಂಡಿದ್ದ ಸಂತೋಷ ನೀಡದ, ಧರ್ಮವನ್ನು ತಿಳಿಯದಿದ್ದ, ವೈರಿಗಳ ಹರ್ಷವನ್ನು ವರ್ಧಿಸುವ ಹಿರಿಯ ಮಗನನ್ನು ನಿಂದಿಸಿದಳು.

05131005a ನ ಮಯಾ ತ್ವಂ ನ ಪಿತ್ರಾಸಿ ಜಾತಃ ಕ್ವಾಭ್ಯಾಗತೋ ಹ್ಯಸಿ||

05131005c ನಿರ್ಮನ್ಯುರುಪಶಾಖೀಯಃ ಪುರುಷಃ ಕ್ಲೀಬಸಾಧನಃ|

“ನೀನು ನನ್ನಲ್ಲಿ ಮತ್ತು ನಿನ್ನ ತಂದೆಯಲ್ಲಿ ಹುಟ್ಟಿದವನಲ್ಲ! ಎಲ್ಲಿಂದಲೋ ಬಂದಿರುವೆ! ನಿನಗೆ ಕೋಪವೆಂಬುವುದೇ ಇಲ್ಲವಾಗಿದೆ! ಹೆಸರಿಗೆ ಮಾತ್ರ ಪುರುಷನಾಗಿರುವೆ. ಸಾಧನೆಯಲ್ಲಿ ನಪುಂಸಕನಾಗಿರುವೆ.

05131006a ಯಾವಜ್ಜೀವಂ ನಿರಾಶೋಽಸಿ ಕಲ್ಯಾಣಾಯ ಧುರಂ ವಹ||

05131006c ಮಾತ್ಮಾನಮವಮನ್ಯಸ್ವ ಮೈನಮಲ್ಪೇನ ಬೀಭರಃ|

05131006e ಮನಃ ಕೃತ್ವಾ ಸುಕಲ್ಯಾಣಂ ಮಾ ಭೈಸ್ತ್ವಂ ಪ್ರತಿಸಂಸ್ತಭ||

ಜೀವನದಲ್ಲಿ ನಿರಾಶೆಹೊಂದಿದವಂತಿದ್ದೀಯೆ. ಕಲ್ಯಾಣಕ್ಕಾಗಿ ಯುದ್ಧಕ್ಕೆ ಹೊರಡು! ನಿನ್ನಲ್ಲಿರುವ ಆತ್ಮನನ್ನು ಅಪಮಾನಿಸಬೇಡ! ನೀನು ಸಾಮಾನ್ಯನೆಂದು ಭಾವಿಸಬೇಡ! ಕಲ್ಯಾಣವನ್ನು ಮಾಡುವ ಮನಸ್ಸು ಮಾಡು. ಭಯಪಡಬೇಡ! ಭಯವನ್ನು ತೆಗೆದುಹಾಕು.

05131007a ಉತ್ತಿಷ್ಠ ಹೇ ಕಾಪುರುಷ ಮಾ ಶೇಷ್ವೈವಂ ಪರಾಜಿತಃ|

05131007c ಅಮಿತ್ರಾನ್ನಂದಯನ್ಸರ್ವಾನ್ನಿರ್ಮಾನೋ ಬಂಧುಶೋಕದಃ||

ಹೇಡಿ! ಮೇಲೇಳು! ಸೋತುಬಂದು ಹೀಗೆ ಬಿದ್ದುಕೊಳ್ಳಬೇಡ! ಮಾನಗೆಟ್ಟು ಸರ್ವ ಶತ್ರುಗಳಿಗೆ ಆನಂದವನ್ನುಂಟುಮಾಡಿ ಬಂಧುಗಳಿಗೆ ಶೋಕವನ್ನು ತರಬೇಡ!

05131008a ಸುಪೂರಾ ವೈ ಕುನದಿಕಾ ಸುಪೂರೋ ಮೂಷಿಕಾಂಜಲಿಃ|

05131008c ಸುಸಂತೋಷಃ ಕಾಪುರುಷಃ ಸ್ವಲ್ಪಕೇನಾಪಿ ತುಷ್ಯತಿ||

ಸಣ್ಣ ನದಿಯು ಸ್ವಲ್ಪವೇ ಮಳೆಬಂದರೂ ತುಂಬಿ ಹರಿಯುತ್ತದೆ. ಇಲಿಯ ಬೊಗಸೆಯು ಸ್ವಲ್ಪವೇ ಅನ್ನದಿಂದ ತುಂಬಿಹೋಗುತ್ತದೆ. ಹೇಡಿಯಾದವನನ್ನು ಸಂತೋಷಗೊಳಿಸುವುದೂ ತುಂಬಾ ಸುಲಭ. ಸ್ವಲ್ಪದಿಂದಲೇ ತೃಪ್ತಿಗೊಳ್ಳುತ್ತಾನೆ.

05131009a ಅಪ್ಯರೇರಾರುಜನ್ದಂಷ್ಟ್ರಾಮಾಶ್ವೇವ ನಿಧನಂ ವ್ರಜ|

05131009c ಅಪಿ ವಾ ಸಂಶಯಂ ಪ್ರಾಪ್ಯ ಜೀವಿತೇಽಪಿ ಪರಾಕ್ರಮ||

ಹಾವಿನ ಹಲ್ಲನ್ನಾದರೂ ಕೀಳಲು ಹೋಗಿ ಸಾವನ್ನಪ್ಪು, ಹಾಗೆಯೂ ಜೀವವುಳಿಯುತ್ತದೆಯೆಂದು ಸಂಶಯವಾದರೆ ಪರಾಕ್ರಮದಿಂದ ಹೋರಾಡು.

05131010a ಅಪ್ಯರೇಃ ಶ್ಯೇನವಚ್ಚಿದ್ರಂ ಪಶ್ಯೇಸ್ತ್ವಂ ವಿಪರಿಕ್ರಮನ್|

05131010c ವಿನದನ್ವಾಥ ವಾ ತೂಷ್ಣೀಂ ವ್ಯೋಮ್ನಿ ವಾಪರಿಶಂಕಿತಃ||

ಗಿಡುಗವು ಮೇಲೆ ಹಾರಿ ತಿಳಿದುಕೊಳ್ಳುವಂತೆ ನೀನೂ ಕೂಡ ಶತ್ರುವಿಗೆ ಶಂಕೆಬಾರದಂತೆ ತಿಳಿದುಕೊಳ್ಳಬೇಕು. ಅನಂತರ ಗರ್ಜಿಸುತ್ತಾ ರಣರಂಗದಲ್ಲಿ ಯುದ್ಧಮಾಡಬೇಕು.

05131011a ತ್ವಮೇವಂ ಪ್ರೇತವಚ್ಚೇಷೇ ಕಸ್ಮಾದ್ವಜ್ರಹತೋ ಯಥಾ|

05131011c ಉತ್ತಿಷ್ಠ ಹೇ ಕಾಪುರುಷ ಮಾ ಶೇಷ್ವೈವಂ ಪರಾಜಿತಃ||

ರಣಹೇಡಿ! ಸಿಡಿಲು ಬಡಿದು ಸತ್ತವನಂತೆ ಏಕೆ ಮಲಗಿರುವೆ? ಏಳು! ಸೋತು ಹೀಗೆ ಮಲಗಿಕೊಳ್ಳಬೇಡ!

05131012a ಮಾಸ್ತಂ ಗಮಸ್ತ್ವಂ ಕೃಪಣೋ ವಿಶ್ರೂಯಸ್ವ ಸ್ವಕರ್ಮಣಾ|

05131012c ಮಾ ಮಧ್ಯೇ ಮಾ ಜಘನ್ಯೇ ತ್ವಂ ಮಾಧೋ ಭೂಸ್ತಿಷ್ಠ ಚೋರ್ಜಿತಃ||

ಅಸ್ತನಾಗಿ ಹೋಗಬೇಡ! ಕೃಪಣನಾಗಿ ಸ್ವಕರ್ಮದಿಂದ ಪ್ರಸಿದ್ಧನಾಗು! ಮಧ್ಯಮನೆಂದೂ, ಜಘನ್ಯನೆಂದೂ, ಅಧಮನೆಂದೂ ತಿಳಿದುಕೊಳ್ಳಬೇಡ!  ಎದ್ದು ಗೆಲ್ಲು!

05131013a ಅಲಾತಂ ತಿಂದುಕಸ್ಯೇವ ಮುಹೂರ್ತಮಪಿ ವಿಜ್ವಲ|

05131013c ಮಾ ತುಷಾಗ್ನಿರಿವಾನರ್ಚಿಃ ಕಾಕರಂಖಾ ಜಿಜೀವಿಷುಃ|

05131013e ಮುಹೂರ್ತಂ ಜ್ವಲಿತಂ ಶ್ರೇಯೋ ನ ತು ಧೂಮಾಯಿತಂ ಚಿರಂ||

ಒಣಗಿದ ತುಂಬೇಗಿಡದಂತೆ ಒಂದು ಕ್ಷಣವಾದರೂ ಪ್ರಜ್ವಲಿಸು. ಜೀವಿಸಿರಬೇಕೆಂಬ ಒಂದೇ ಒಂದು ಆಸೆಯಿಂದ ಹೊಟ್ಟಿನ ಬೆಂಕಿಯಂತೆ ಉರಿಯಿಲ್ಲದೇ ಹೊಗೆ ಕರಿಗಳಿಂದ ಆವೃತನಾಗಿರಬೇಡ. ಬಹಳ ಕಾಲದವರೆಗೆ ಹೊಗೆಯಾಡುತ್ತಾ ಇರುವುದಕ್ಕಿಂತ ಕ್ಷಣಮಾತ್ರ ಹತ್ತಿ ಉರಿಯುವುದು ಒಳ್ಳೆಯದು.

05131014a ಮಾ ಹ ಸ್ಮ ಕಸ್ಯ ಚಿದ್ಗೇಹೇ ಜನೀ ರಾಜ್ಞಾಃ ಖರೀಮೃದುಃ|

05131014c ಕೃತ್ವಾ ಮಾನುಷ್ಯಕಂ ಕರ್ಮ ಸೃತ್ವಾಜಿಂ ಯಾವದುತ್ತಮಂ|

05131014e ಧರ್ಮಸ್ಯಾನೃಣ್ಯಮಾಪ್ನೋತಿ ನ ಚಾತ್ಮಾನಂ ವಿಗರ್ಹತೇ||

ಯಾವೊಬ್ಬ ರಾಜನ ಮನೆಯಲ್ಲಿಯೂ ನಿನ್ನಂತೆ ಮೃದುಸ್ವಭಾವದ ಹೇಡಿ ಕತ್ತೆಯು ಹುಟ್ಟದಿರಲಿ. ಮನುಷ್ಯ ಕರ್ಮವನ್ನು ಮಾಡಿ ಪೌರುಷವಿದ್ದಷ್ಟೂ ಉತ್ತಮವಾಗಿ ಕಾದಾಡಿದರೆ ಕ್ಷತ್ರಿಯ ಧರ್ಮದ ಋಣದಿಂದ ಮುಕ್ತನಾಗುತ್ತಾನೆ. ಅವನು ಆತ್ಮನಿಂದನೆಯನ್ನು ಮಾಡಿಕೊಳ್ಳುವುದಿಲ್ಲ.

05131015a ಅಲಬ್ಧ್ವಾ ಯದಿ ವಾ ಲಬ್ಧ್ವಾ ನಾನುಶೋಚಂತಿ ಪಂಡಿತಾಃ|

05131015c ಆನಂತರ್ಯಂ ಚಾರಭತೇ ನ ಪ್ರಾಣಾನಾಂ ಧನಾಯತೇ||

ಸಿಕ್ಕಿದರೂ ಸಿಕ್ಕದೇ ಇದ್ದರೂ ಪಂಡಿತರು ಶೋಕಿಸುವುದಿಲ್ಲ. ಕೊನೆಯವರೆಗೂ ಕಾರ್ಯಮಾಡುತ್ತಲೇ ಇರುತ್ತಾರೆ. ಪ್ರಾಣವನ್ನು ಧನವೆಂದು ತಿಳಿದು ಹೆದರಿ ಸುಮ್ಮನಿರುವುದಿಲ್ಲ.

05131016a ಉದ್ಭಾವಯಸ್ವ ವೀರ್ಯಂ ವಾ ತಾಂ ವಾ ಗಚ್ಚ ಧ್ರುವಾಂ ಗತಿಂ|

05131016c ಧರ್ಮಂ ಪುತ್ರಾಗ್ರತಃ ಕೃತ್ವಾ ಕಿಂನಿಮಿತ್ತಂ ಹಿ ಜೀವಸಿ||

ಮಗನೇ! ಧರ್ಮವನ್ನು ಮುಂದಿರಿಸಿಕೊಂಡು ವೀರ್ಯವನ್ನು ಪ್ರದರ್ಶಿಸು ಅಥವಾ ನಿಶ್ಚಯವಾದ ಮೃತ್ಯುಗತಿಯಲ್ಲಿ ಹೋಗು! ಯಾವ ಕಾರಣಕ್ಕೆ ಜೀವಿಸಿರುವೆ?

05131017a ಇಷ್ಟಾಪೂರ್ತಂ ಹಿ ತೇ ಕ್ಲೀಬ ಕೀರ್ತಿಶ್ಚ ಸಕಲಾ ಹತಾ|

05131017c ವಿಚ್ಚಿನ್ನಂ ಭೋಗಮೂಲಂ ತೇ ಕಿಮ್ನಿಮಿತ್ತಂ ಹಿ ಜೀವಸಿ||

ನಪುಂಸಕ! ನಿನ್ನ ಧರ್ಮಕಾರ್ಯಗಳು ನಿಂತು ಹೋಗಿವೆ. ಕೀರ್ತಿಯೂ ಸಕಲವಾಗಿ ನಾಶವಾಗಿದೆ. ಭೋಗಮೂಲವಾದ ರಾಜ್ಯವೂ ಒಡೆದು ಹೋಗಿದೆ. ಇನ್ನು ಏಕೆ ಜೀವಿಸಿರುವೆ?

05131018a ಶತ್ರುರ್ನಿಮಜ್ಜತಾ ಗ್ರಾಹ್ಯೋ ಜಂಘಾಯಾಂ ಪ್ರಪತಿಷ್ಯತಾ|

05131018c ವಿಪರಿಚ್ಚಿನ್ನಮೂಲೋಽಪಿ ನ ವಿಷೀದೇತ್ಕಥಂ ಚನ|

05131018e ಉದ್ಯಮ್ಯ ಧುರಮುತ್ಕರ್ಷೇದಾಜಾನೇಯಕೃತಂ ಸ್ಮರನ್||

ಶತ್ರುವಿನಿಂದ ಕೆಡವಲ್ಪಟ್ಟವನು ಅವನ ಮೊಣಕಾಲುಗಳನ್ನೂ ಎಳೆದು ಮೇಲೇಳಲು ಪ್ರಯತ್ನಿಸಬೇಕು. ಆಗ ಸಂಪೂರ್ಣವಾಗಿ ನಾಶಹೊಂದಿದರೂ ವಿಷಾದಿಸಬಾರದು. ಆಜಾನೇಯವೆಂಬ ಕುದುರೆಯನ್ನು ಸ್ಮರಿಸಿ ಧುರದಲ್ಲಿ ಮೇಲೇಳಲು ಸತತ ಪ್ರಯತ್ನವನ್ನು ಮಾಡುತ್ತಲೇ ಇರಬೇಕು.

05131019a ಕುರು ಸತ್ತ್ವಂ ಚ ಮಾನಂ ಚ ವಿದ್ಧಿ ಪೌರುಷಮಾತ್ಮನಃ|

05131019c ಉದ್ಭಾವಯ ಕುಲಂ ಮಗ್ನಂ ತ್ವತ್ಕೃತೇ ಸ್ವಯಮೇವ ಹಿ||

ನಿನ್ನಲ್ಲಿರುವ ಪೌರುಷವನ್ನು ತಿಳಿದುಕೊಂಡು ನಿನ್ನಲ್ಲಿ ವೀರ್ಯವನ್ನೂ ಅಭಿಮಾನವನ್ನೂ ಹುಟ್ಟಿಸಿಕೋ! ನಿನ್ನಿಂದಾಗಿ ಮುಳುಗಿಹೋಗುತ್ತಿರುವ ವಂಶವನ್ನು ನೀನೇ ಮೇಲೆತ್ತು.

05131020a ಯಸ್ಯ ವೃತ್ತಂ ನ ಜಲ್ಪಂತಿ ಮಾನವಾ ಮಹದದ್ಭುತಂ|

05131020c ರಾಶಿವರ್ಧನಮಾತ್ರಂ ಸ ನೈವ ಸ್ತ್ರೀ ನ ಪುನಃ ಪುಮಾನ್||

ಯಾರ ಮಹಾ ಅದ್ಭುತ ಸಾಧನೆಗಳನ್ನು ಮನುಷ್ಯರು ಮಾತನಾಡಿಕೊಳ್ಳುವುದಿಲ್ಲವೋ ಅವನು ಜನಸಂಖ್ಯೆಯನ್ನು ಹೆಚ್ಚಿಸಲು ಮಾತ್ರ ಅರ್ಹನಾಗಿರುತ್ತಾನೆ. ಅವನು ಸ್ತ್ರೀಯೂ ಆಗಿರುವುದಿಲ್ಲ. ಪುರುಷನೂ ಆಗಿರುವುದಿಲ್ಲ.

05131021a ದಾನೇ ತಪಸಿ ಶೌರ್ಯೇ ಚ ಯಸ್ಯ ನ ಪ್ರಥಿತಂ ಯಶಃ|

05131021c ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರ ಏವ ಸಃ||

ಯಾರು ದಾನದಲ್ಲಿ, ತಪಸ್ಸಿನಲ್ಲಿ, ಶೌರ್ಯದಲ್ಲಿ, ವಿದ್ಯೆಯಲ್ಲಿ ಅಥವಾ ಅರ್ಥಲಾಭದಲ್ಲಿ ಪ್ರಸಿದ್ಧನಾಗುವುದಿಲ್ಲವೋ ಅವನು ತಾಯಿಯ ಮಲ-ಮೂತ್ರಗಳಿದ್ದಂತೆ.

05131022a ಶ್ರುತೇನ ತಪಸಾ ವಾಪಿ ಶ್ರಿಯಾ ವಾ ವಿಕ್ರಮೇಣ ವಾ|

05131022c ಜನಾನ್ಯೋಽಭಿಭವತ್ಯನ್ಯಾನ್ಕರ್ಮಣಾ ಹಿ ಸ ವೈ ಪುಮಾನ್||

ಯಾರು ಪಾಂಡಿತ್ಯದಿಂದ ಅಥವಾ ತಪಸ್ಸಿನಿಂದ ಅಥವಾ ಸಂಪತ್ತಿನಿಂದ ಅಥವಾ ವಿಕ್ರಮದಿಂದ ಅಥವಾ ಬೇರೆ ಕರ್ಮಗಳಿಂದ ಅನ್ಯ ಜನರನ್ನು ಮೀರುತ್ತಾನೋ ಅವನೇ ಪುರುಷ.

05131023a ನ ತ್ವೇವ ಜಾಲ್ಮೀಂ ಕಾಪಾಲೀಂ ವೃತ್ತಿಮೇಷಿತುಮರ್ಹಸಿ|

05131023c ನೃಶಂಸ್ಯಾಮಯಶಸ್ಯಾಂ ಚ ದುಃಖಾಂ ಕಾಪುರುಷೋಚಿತಾಂ||

ಕಾಪುರುಷರಿಗೆ ಉಚಿತವಾದ ಕ್ರೂರ, ಅಯಶಸ್ಕರವಾದ, ದುಃಖಕರವಾದ, ನೀಚರ ಮತ್ತು ಭಿಕ್ಷಾವೃತ್ತಿಯಿಂದ ಜೀವಿಸುವವರ ವೃತ್ತಿಯನ್ನು ಮಾತ್ರ ನೀನು ಆಚರಿಸಬೇಡ.

05131024a ಯಮೇನಮಭಿನಂದೇಯುರಮಿತ್ರಾಃ ಪುರುಷಂ ಕೃಶಂ|

05131024c ಲೋಕಸ್ಯ ಸಮವಜ್ಞ‌ಆತಂ ನಿಹೀನಾಶನವಾಸಸಂ||

05131025a ಅಹೋಲಾಭಕರಂ ದೀನಮಲ್ಪಜೀವನಮಲ್ಪಕಂ|

05131025c ನೇದೃಶಂ ಬಂಧುಮಾಸಾದ್ಯ ಬಾಂಧವಃ ಸುಖಮೇಧತೇ||

ಯಾರನ್ನು ನೋಡಿ ಶತ್ರುಗಳು ಆನಂದಿಸುತ್ತಾರೋ, ಯಾರ ಇರುವಿಕೆಯೇ ಲೋಕಕ್ಕೆ ತಿಳಿದಿರುವುದಿಲ್ಲವೋ, ಯಾರನ್ನು ನೋಡಿ ಲೋಕವು ಹಳಿಯುವುದೋ, ಯಾರ ಆಸನ-ವಸನಗಳು ಹೀನವಾಗಿರುವವೋ, ಅಲ್ಪ ಲಾಭಕ್ಕೆ ಯಾರು ಸಂತುಷ್ಟನಾಗಿ ಅಚ್ಚರಿಯನ್ನು ಪ್ರಕಟಿಸುತ್ತಾನೋ ಆ ದೀನ, ಅಲ್ಪಜೀವಿಕ, ಅಲ್ಪಕ ಬಂಧುವನ್ನು ಸೇರಿ ಬಾಂಧವರು ಸುಖವನ್ನು ಪಡೆಯುವುದಿಲ್ಲ.

05131026a ಅವೃತ್ತ್ಯೈವ ವಿಪತ್ಸ್ಯಾಮೋ ವಯಂ ರಾಷ್ಟ್ರಾತ್ಪ್ರವಾಸಿತಾಃ|

05131026c ಸರ್ವಕಾಮರಸೈರ್ಹೀನಾಃ ಸ್ಥಾನಭ್ರಷ್ಟಾ ಅಕಿಂಚನಾಃ||

ನಮ್ಮ ರಾಷ್ಟ್ರದಿಂದ ಹೊರಗಟ್ಟಲ್ಪಟ್ಟು ಶತ್ರುಗಳ ವಶವಾಗಿದ್ದೇವೆ. ನಾವು ಸರ್ವಕಾಮರಸಹೀನರಾಗಿ ಸ್ಥಾನಭ್ರಷ್ಟರಾಗಿ ಏನೂ ಇಲ್ಲದವರಾಗಿದ್ದೇವೆ.

05131027a ಅವರ್ಣಕಾರಿಣಂ ಸತ್ಸು ಕುಲವಂಶಸ್ಯ ನಾಶನಂ|

05131027c ಕಲಿಂ ಪುತ್ರಪ್ರವಾದೇನ ಸಂಜಯ ತ್ವಾಮಜೀಜನಂ||

ಪುತ್ರ! ಸಂಜಯ! ಸತ್ಪುರುಷರ ಕುಲದಲ್ಲಿ ಪುತ್ರನೆಂದು ಕರೆದುಕೊಳ್ಳವ ಈ ಅಮಂಗಳಕಾರಿ, ವಂಶ ನಾಶಿನಿ, ಕಲಿಯಾದ ನಿನಗೆ ಜನ್ಮವಿತ್ತಿದ್ದೇನಲ್ಲ!

05131028a ನಿರಮರ್ಷಂ ನಿರುತ್ಸಾಹಂ ನಿರ್ವೀರ್ಯಮರಿನಂದನಂ|

05131028c ಮಾ ಸ್ಮ ಸೀಮಂತಿನೀ ಕಾ ಚಿಜ್ಜನಯೇತ್ಪುತ್ರಮೀದೃಶಂ||

ಕೋಪರಹಿತನಾದ, ನಿರುತ್ಸಾಹಿಯಾದ, ನಿರ್ವೀರ್ಯನಾದ, ಶತ್ರುಗಳನ್ನು ಸಂತೋಷಗೊಳಿಸುವ ಇಂತಹ ಪುತ್ರನನ್ನು ಯಾವ ಸೀಮಂತಿನಿಯೂ ಪ್ರಸವಿಸದಿರಲಿ.

05131029a ಮಾ ಧೂಮಾಯ ಜ್ವಲಾತ್ಯಂತಮಾಕ್ರಮ್ಯ ಜಹಿ ಶಾತ್ರವಾನ್|

05131029c ಜ್ವಲ ಮೂರ್ಧನ್ಯಮಿತ್ರಾಣಾಂ ಮುಹೂರ್ತಮಪಿ ವಾ ಕ್ಷಣಂ||

ಧೂಮಪ್ರಾಯನಾಗಬೇಡ! ಅಗ್ನಿಯಂತೆ ಪ್ರಜ್ಚಲಿಸು! ಶತ್ರುಗಳನ್ನು ಆಕ್ರಮಿಸಿ ನಾಶಪಡಿಸು. ಮುಹೂರ್ತವಾಗಲೀ ಕ್ಷಣವಾಗಲೀ ಅಮಿತ್ರರ ನೆತ್ತಿಯನ್ನು ಸುಡು.

05131030a ಏತಾವಾನೇವ ಪುರುಷೋ ಯದಮರ್ಷೀ ಯದಕ್ಷಮೀ|

05131030c ಕ್ಷಮಾವಾನ್ನಿರಮರ್ಷಶ್ಚ ನೈವ ಸ್ತ್ರೀ ನ ಪುನಃ ಪುಮಾನ್||

ಯಾರಲ್ಲಿ ಕೋಪವಿದೆಯೋ ಯಾರು ಅಕ್ಷಮಿಯೋ ಅವನೇ ಪುರುಷ. ಕ್ಷಮೆಯಿರುವವನು, ಸಿಟ್ಟಿಲ್ಲದಿರುವವನು ಸ್ತ್ರೀಯೂ ಅಲ್ಲ ಪುರುಷನೂ ಅಲ್ಲ.

05131031a ಸಂತೋಷೋ ವೈ ಶ್ರಿಯಂ ಹಂತಿ ತಥಾನುಕ್ರೋಶ ಏವ ಚ|

05131031c ಅನುತ್ಥಾನಭಯೇ ಚೋಭೇ ನಿರೀಹೋ ನಾಶ್ನುತೇ ಮಹತ್||

ಅಲ್ಪ ಸಂತುಷ್ಟಿ, ದಯೆ, ಉದ್ಯೋಗಶೂನ್ಯತೆ, ಮತ್ತು ಭಯ ಇವು ಸಂಪತ್ತನ್ನು ನಾಶಗೊಳಿಸುತ್ತವೆ. ನಿರಪೇಕ್ಷನು ಇಲ್ಲಿ ಮತ್ತು ನಂತರ ಎರಡರಲ್ಲೂ ಮಹಾ ಉಚ್ಛಸ್ಥಾನಗಳನ್ನು ಪಡೆಯಲಾರನು.

05131032a ಏಭ್ಯೋ ನಿಕೃತಿಪಾಪೇಭ್ಯಃ ಪ್ರಮುಂಚಾತ್ಮಾನಮಾತ್ಮನಾ|

05131032c ಆಯಸಂ ಹೃದಯಂ ಕೃತ್ವಾ ಮೃಗಯಸ್ವ ಪುನಃ ಸ್ವಕಂ||

ಈ ಪರಾಭವಗೊಳಿಸುವ ಪಾಪಗಳನ್ನು ನಿನ್ನಿಂದ ನೀನೇ ತೆಗೆದುಹಾಕು. ಹೃದಯವನ್ನು ಕಬ್ಬಿಣವನ್ನಾಗಿಸಿಕೊಂಡು ನಿನ್ನದನ್ನು ಪುನಃ ಸಂಪಾದಿಸು.

05131033a ಪುರಂ[2] ವಿಷಹತೇ ಯಸ್ಮಾತ್ತಸ್ಮಾತ್ಪುರುಷ ಉಚ್ಯತೇ|

05131033c ತಮಾಹುರ್ವ್ಯರ್ಥನಾಮಾನಂ ಸ್ತ್ರೀವದ್ಯ ಇಹ ಜೀವತಿ||

ಪುರವನ್ನು ಎದುರಿಸಿ ನಿಲ್ಲುತ್ತಾನೆ ಎನ್ನುವುದರಿಂದಲೇ ಪುರುಷ ಎಂದು ಕರೆಯಲ್ಪಡುತ್ತಾನೆ. ಸ್ತ್ರೀಯಂತೆ ಜೀವಿಸುವವರಿಗೆ ಈ ಹೆಸರು ವ್ಯರ್ಥವೆಂದು ಹೇಳುತ್ತಾರೆ.

05131034a ಶೂರಸ್ಯೋರ್ಜಿತಸತ್ತ್ವಸ್ಯ ಸಿಂಹವಿಕ್ರಾಂತಗಾಮಿನಃ|

05131034c ದಿಷ್ಟಭಾವಂ ಗತಸ್ಯಾಪಿ ವಿಘಸೇ ಮೋದತೇ ಪ್ರಜಾ||

ಸುಸ್ಥಿರ ವೀರಪರಾಕ್ರಮವುಳ್ಳ ಸಿಂಹವಿಕ್ರಾಂತಗಾಮಿ ಶೂರನು ಒಂದು ವೇಳೆ ಯುದ್ಧಮಾಡುತ್ತಾ ಪ್ರಾಣತೊರೆದರೂ ಅವನ ಪ್ರಜೆಗಳು ಸುಖವಾಗಿರುತ್ತಾರೆ.

05131035a ಯ ಆತ್ಮನಃ ಪ್ರಿಯಸುಖೇ ಹಿತ್ವಾ ಮೃಗಯತೇ ಶ್ರಿಯಂ|

05131035c ಅಮಾತ್ಯಾನಾಮಥೋ ಹರ್ಷಮಾದಧಾತ್ಯಚಿರೇಣ ಸಃ||

ಯಾರು ತನಗೆ ಪ್ರಿಯವಾದುದನ್ನು ಮತ್ತು ಸುಖವಾದುದನ್ನು ತೊರೆದು ಸಂಪತ್ತನ್ನು ಅರಸಿ ಪ್ರಯತ್ನಿಸುತ್ತಾನೋ ಅವನು ಶೀಘ್ರದಲ್ಲಿಯೇ ತನ್ನ ಅಮಾತ್ಯರಿಗೆ ಹರ್ಷವನ್ನುಂಟುಮಾಡುತ್ತಾನೆ.”

05131036 ಪುತ್ರ ಉವಾಚ|

05131036a ಕಿಂ ನು ತೇ ಮಾಮಪಶ್ಯಂತ್ಯಾಃ ಪೃಥಿವ್ಯಾ ಅಪಿ ಸರ್ವಯಾ|

05131036c ಕಿಮಾಭರಣಕೃತ್ಯಂ ತೇ ಕಿಂ ಭೋಗೈರ್ಜೀವಿತೇನ ವಾ||

ಪುತ್ರನು ಹೇಳಿದನು: “ನಾನು ಸತ್ತು ಹೋದರೆ ಈ ಪೃಥ್ವಿ, ಎಲ್ಲವೂ ಏನಕ್ಕೆ ಬೇಕು? ಆಭರಣ, ಭೋಗ, ಜೀವಿತ, ಕೃತ್ಯಗಳೇಕೆ?”

05131037 ಮಾತೋವಾಚ|

05131037a ಕಿಮದ್ಯಕಾನಾಂ ಯೇ ಲೋಕಾ ದ್ವಿಷಂತಸ್ತಾನವಾಪ್ನುಯುಃ|

05131037c ಯೇ ತ್ವಾದೃತಾತ್ಮನಾಂ ಲೋಕಾಃ ಸುಹೃದಸ್ತಾನ್ವ್ರಜಂತು ನಃ||

ಮಾತೆಯು ಹೇಳಿದಳು: “ಇಂದೇ ಏಕೆ ಮಾಡುವುದು ಎನ್ನುವವರ ಲೋಕವನ್ನು ನಮ್ಮ ವೈರಿಗಳು ಪಡೆಯಲಿ. ಧೃತಾತ್ಮರ ಲೋಕಗಳನ್ನು ನಮ್ಮ ಸುಹೃದಯರು ಪಡೆಯಲಿ.

05131038a ಭೃತ್ಯೈರ್ವಿಹೀಯಮಾನಾನಾಂ ಪರಪಿಂಡೋಪಜೀವಿನಾಂ|

05131038c ಕೃಪಣಾನಾಮಸತ್ತ್ವಾನಾಂ ಮಾ ವೃತ್ತಿಮನುವರ್ತಿಥಾಃ||

ಸೇವಕರಿಲ್ಲದೇ ಜೀವಿಸುವವರ, ಪರಾನ್ನದಿಂದಲೇ ಉಪಜೀವಿಸುವವರ, ಕೃಪಣರ, ಅಸತ್ತ್ವರ ವೃತ್ತಿಯನ್ನು ಅನುಸರಿಸಬೇಡ.

05131039a ಅನು ತ್ವಾಂ ತಾತ ಜೀವಂತು ಬ್ರಾಹ್ಮಣಾಃ ಸುಹೃದಸ್ತಥಾ|

05131039c ಪರ್ಜನ್ಯಮಿವ ಭೂತಾನಿ ದೇವಾ ಇವ ಶತಕ್ರತುಂ||

ಮಗೂ! ದೇವತೆಗಳು ಶತಕ್ರತುವನ್ನು ಮತ್ತು ಭೂತಗಳು ಮಳೆಯನ್ನು ಹೇಗೋ ಹಾಗೆ ಬ್ರಾಹ್ಮಣರು ಮತ್ತು ಸುಹೃದಯರು ನಿನ್ನನ್ನು ಅವಲಂಬಿಸಿ ಜೀವಿಸಲಿ.

05131040a ಯಮಾಜೀವಂತಿ ಪುರುಷಂ ಸರ್ವಭೂತಾನಿ ಸಂಜಯ|

05131040c ಪಕ್ವಂ ದ್ರುಮಮಿವಾಸಾದ್ಯ ತಸ್ಯ ಜೀವಿತಮರ್ಥವತ್||

ಸಂಜಯ! ಪಕ್ವ ಹಣ್ಣುಗಳಿಂದ ಕೂಡಿದ ವೃಕ್ಷದಬಳಿ ಹೋಗುವಂತೆ ಯಾವ ಪುರುಷನ ಆಶ್ರಯದಲ್ಲಿ ಸರ್ವಭೂತಗಳೂ ಇರುವವೋ ಅಂತಹವನ ರಾಜ್ಯವು ಅರ್ಥವತ್ತಾಗಿರುತ್ತದೆ.

05131041a ಯಸ್ಯ ಶೂರಸ್ಯ ವಿಕ್ರಾಂತೈರೇಧಂತೇ ಬಾಂಧವಾಃ ಸುಖಂ|

05131041c ತ್ರಿದಶಾ ಇವ ಶಕ್ರಸ್ಯ ಸಾಧು ತಸ್ಯೇಹ ಜೀವಿತಂ||

ಶಕ್ರನ ವಿಕ್ರಾಂತವನ್ನು ಆಶ್ರಯಿಸಿ ತ್ರಿದಶರು ಹೇಗೋ ಹಾಗೆ ಯಾವ ಶೂರನ ವಿಕ್ರಾಂತವನ್ನಾಶ್ರಯಿಸಿ ಬಾಂಧವರು ಸುಖಿಗಳಾಗಿರುತ್ತಾರೋ ಅವನ ಜೀವನವೇ ಅರ್ಥವತ್ತಾಗಿರುತ್ತದೆ.

05131042a ಸ್ವಬಾಹುಬಲಮಾಶ್ರಿತ್ಯ ಯೋಽಭ್ಯುಜ್ಜೀವತಿ ಮಾನವಃ|

05131042c ಸ ಲೋಕೇ ಲಭತೇ ಕೀರ್ತಿಂ ಪರತ್ರ ಚ ಶುಭಾಂ ಗತಿಂ||

ಸ್ವಬಲವನ್ನಾಶ್ರಯಿಸಿ ಯಾವ ಮಾನವನು ಇನ್ನೊಬ್ಬರಿಗೂ ಆಶ್ರಯವನ್ನು ನೀಡುತ್ತಾನೋ ಅವನು ಲೋಕದಲ್ಲಿ ಕೀರ್ತಿಯನ್ನೂ ಪರದಲ್ಲಿ ಶುಭಗತಿಯನ್ನೂ ಪಡೆಯುತ್ತಾನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುಲಾಪುತ್ರಾನುಶಾಸನೇ ಏಕತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುಲಾಪುತ್ರಾನುಶಾಸನದಲ್ಲಿ ನೂರಾಮೂವತ್ತೊಂದನೆಯ ಅಧ್ಯಾಯವು.

Image result for flowers against white background

[1] ಪುಣೆಯ ಸಂಪುಟದಲ್ಲಿ “ವಿದುರಾ” ಎಂದು ಕುಂಭ್ಕೋಣ-ನೀಲಕಂಠಿಯಗಳಲ್ಲಿ “ವಿದುಲಾ” ಎಂದೂ ಹೆಸರಿದೆ.

[2] ಭಾರತದರ್ಶನದಲ್ಲಿ “ಪುರ” ಶಬ್ಧದ ಬದಲಾಗಿ “ಪರ” ಅಂದರೆ ಶತ್ರು ಎಂಬ ಅರ್ಥವನ್ನು ಕೊಡುವ ಶಬ್ಧದ ಬಳಕೆಯಿದೆ.

Comments are closed.