Drona Parva: Chapter 89

ದ್ರೋಣ ಪರ್ವ: ಜಯದ್ರಥವಧ ಪರ್ವ

೮೯

ಶ್ರೇಷ್ಠವಾಗಿದ್ದ ತನ್ನ ಸೇನೆಯನ್ನು ಒಂದೇ ರಥದಲ್ಲಿ ಅರ್ಜುನ-ಸಾತ್ಯಕಿಯರು ಭೇದಿಸಿ ಹೋದರೆಂದು ಕೇಳಿದ ಧೃತರಾಷ್ಟ್ರನ ವಿಷಾದ; ಸಂಜಯನನ್ನು ಮುಂದೇನಾಯಿತೆಂದು ಪ್ರಶ್ನಿಸಿದುದು (೧-೪೩).

07089001 ಧೃತರಾಷ್ಟ್ರ ಉವಾಚ|

07089001a ಏವಂ ಬಹುವಿಧಂ ಸೈನ್ಯಮೇವಂ ಪ್ರವಿಚಿತಂ ವರಂ|

07089001c ವ್ಯೂಢಮೇವಂ ಯಥಾನ್ಯಾಯಮೇವಂ ಬಹು ಚ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ನಮ್ಮ ಸೇನೆಯು ಬಹುವಿಧದ ಶ್ರೇಷ್ಠತೆಗಳನ್ನು ಪಡೆದಿದೆ; ಯಥಾನ್ಯಾಹವಾಗಿ ವ್ಯೂಹರಚನೆಯಾಗಿದೆ. ದೊಡ್ಡದಾಗಿಯೂ ಇದೆ.

07089002a ನಿತ್ಯಂ ಪೂಜಿತಮಸ್ಮಾಭಿರಭಿಕಾಮಂ ಚ ನಃ ಸದಾ|

07089002c ಪ್ರೌಢಮತ್ಯದ್ಭುತಾಕಾರಂ ಪುರಸ್ತಾದ್ದೃಢವಿಕ್ರಮಂ||

ನಮ್ಮಿಂದ ನಿತ್ಯವೂ ಅದು ಗೌರವಿಸಲ್ಪಟ್ಟಿದೆ. ಅದೂ ಕೂಡ ಸದಾ ನಮ್ಮನ್ನು ಇಷ್ಟಪಡುತ್ತದೆ. ಅದು ಪ್ರೌಢವಾಗಿದೆ. ಅದ್ಭುತ ಆಕಾರದಲ್ಲಿದೆ. ಮೊದಲಿನಿಂದಲೂ ದೃಢವಿಕ್ರಮವಾಗಿದೆ.

07089003a ನಾತಿವೃದ್ಧಮಬಾಲಂ ಚ ನ ಕೃಶಂ ನಾತಿಪೀವರಂ|

07089003c ಲಘುವೃತ್ತಾಯತಪ್ರಾಣಂ ಸಾರಗಾತ್ರಮನಾಮಯಂ||

ಸೈನಿಕರು ಅತಿ ವೃದ್ಧರೂ ಅಲ್ಲ. ಅತಿ ಬಾಲಕರೂ ಅಲ್ಲ. ಅತಿ ಕೃಶರೂ ಅಲ್ಲ. ಅತಿಯಾಗಿ ದಪ್ಪನಾಗಿರುವವರೂ ಅಲ್ಲ. ಹಗುರಾಗಿದ್ದಾರೆ. ಗಟ್ಟಿ ಮುಟ್ಟಾಗಿದ್ದಾರೆ. ಆರೋಗ್ಯವಂತರಾಗಿದ್ದಾರೆ.

07089004a ಆತ್ತಸನ್ನಾಹಸಂಪನ್ನಂ ಬಹುಶಸ್ತ್ರಪರಿಚ್ಚದಂ|

07089004c ಶಸ್ತ್ರಗ್ರಹಣವಿದ್ಯಾಸು ಬಹ್ವೀಷು ಪರಿನಿಷ್ಠಿತಂ||

ಅವರು ಉತ್ತಮ ಕವಚ ಶಿರಸ್ತ್ರಾಣಗಳನ್ನು ಧರಿಸಿದ್ದಾರೆ. ಅನೇಕ ಶಸ್ತ್ರಗಳಿಂದ ಸುಸಜ್ಜಿತರಾಗಿದ್ದಾರೆ. ಅವರು ಶಸ್ತ್ರಗಳನ್ನು ಹಿಡಿಯುವುದರಲ್ಲಿ ಮತ್ತು ಪ್ರಯೋಗಿಸುವುದರಲ್ಲಿ ಪರಿಣಿತರು.

07089005a ಆರೋಹೇ ಪರ್ಯವಸ್ಕಂದೇ ಸರಣೇ ಸಾಂತರಪ್ಲುತೇ|

07089005c ಸಂಯಕ್ಪ್ರಹರಣೇ ಯಾನೇ ವ್ಯಪಯಾನೇ ಚ ಕೋವಿದಂ||

ಅವರು ಆನೆಗಳ ಬೆನ್ನಮೇಲೆ ಏರುವುದರಲ್ಲಿ, ಕೆಳಗೆ ಹಾರುವುದರಲ್ಲಿ, ಹಿಂದೆ ಹೋಗುವುದರಲ್ಲಿ, ಮತ್ತು ಮುಂದೆ ಹೋಗುವುದರಲ್ಲಿ ಕೋವಿದರು.

07089006a ನಾಗೇಷ್ವಶ್ವೇಷು ಬಹುಶೋ ರಥೇಷು ಚ ಪರೀಕ್ಷಿತ|

07089006c ಪರೀಕ್ಷ್ಯ ಚ ಯಥಾನ್ಯಾಯಂ ವೇತನೇನೋಪಪಾದಿತಂ||

ಅನೇಕ ಬಾರಿ ಅವರನ್ನು ಆನೆಗಳೊಂದಿಗೆ, ಕುದುರೆಗಳೊಂದಿಗೆ ಮುತ್ತು ರಥಗಳೊಂದಿಗೆ ಪರೀಕ್ಷಿಸಲಾಗಿದೆ. ಪರೀಕ್ಷಿಸಿಯೇ ಅವರಿಗೆ ಯಥಾನ್ಯಾಯವಾದ ವೇತನವನ್ನು ನೀಡಲಾಗುತ್ತಿದೆ.

07089007a ನ ಗೋಷ್ಠ್ಯಾ ನೋಪಚಾರೇಣ ನ ಸಂಬಂಧನಿಮಿತ್ತತಃ|

07089007c ನಾನಾಹೂತೋ ನ ಹ್ಯಭೃತೋ ಮಮ ಸೈನ್ಯೇ ಬಭೂವ ಹ||

ನನ್ನ ಸೇನೆಯಲ್ಲಿರುವವರು ಕುಲದಿಂದ ಆಯ್ಕೆಗೊಂಡಿಲ್ಲ; ಯಾರ ಹೇಳಿಕೆಯಿಂದಲೂ ಬಂದಿಲ್ಲ; ಅಥವಾ ಸಂಬಂಧಿಕರೆಂದು ಬಂದಿಲ್ಲ. ಅವರನ್ನು ಬಲಾತ್ಕಾರಾಗಿ ವೇತನವಿಲ್ಲದೇ ಸೇನೆಗೆ ಸೇರಿಸಿಲ್ಲ.

07089008a ಕುಲೀನಾರ್ಯಜನೋಪೇತಂ ತುಷ್ಟಪುಷ್ಟಮನುದ್ಧತಂ|

07089008c ಕೃತಮಾನೋಪಕಾರಂ ಚ ಯಶಸ್ವಿ ಚ ಮನಸ್ವಿ ಚ||

ನನ್ನ ಸೇನೆಯಲ್ಲಿರುವವರು ಕುಲೀನರು. ಆರ್ಯಜನರು. ತುಷ್ಟಪುಷ್ಟರು. ಉಪಕಾರವನ್ನು ಮಾಡುವವರು. ಯಶಸ್ವಿಗಳು. ಮನಸ್ವಿಗಳು ಕೂಡ.

07089009a ಸಚಿವೈಶ್ಚಾಪರೈರ್ಮುಖ್ಯೈರ್ಬಹುಭಿರ್ಮುಖ್ಯಕರ್ಮಭಿಃ|

07089009c ಲೋಕಪಾಲೋಪಮೈಸ್ತಾತ ಪಾಲಿತಂ ನರಸತ್ತಮೈಃ||

ಅಯ್ಯಾ! ಅವರು ಸಚಿವರು ಮತ್ತು ಅನೇಕ ಇತರ ಮುಖ್ಯರಿಂದ, ಮತ್ತು ಲೋಕಪಾಲಕರಂತಿರುವ ಮುಖ್ಯ ಕರ್ಮಚಾರಿಗಳಿಂದ ಪಾಲಿತರಾಗಿದ್ದಾರೆ.

07089010a ಬಹುಭಿಃ ಪಾರ್ಥಿವೈರ್ಗುಪ್ತಮಸ್ಮತ್ಪ್ರಿಯಚಿಕೀರ್ಷುಭಿಃ|

07089010c ಅಸ್ಮಾನಭಿಸೃತೈಃ ಕಾಮಾತ್ಸಬಲೈಃ ಸಪದಾನುಗೈಃ||

ನಮಗೆ ಪ್ರಿಯವಾದುದನ್ನು ಮಾಡಲು ಬಯಸಿ ಮತ್ತು ಅವರ ಲಾಭಕ್ಕಾಗಿ ನಮ್ಮ ಪಕ್ಷದಲ್ಲಿರುವ ಅನೇಕ ಪಾರ್ಥಿವರು ಅವರ ಸೇನೆಗಳು ಮತ್ತು ಅನುಯಾಯಿಗಳೊಂದಿಗೆ ನಮ್ಮ ಸೈನಿಕರನ್ನೂ ರಕ್ಷಿಸುತ್ತಿದ್ದಾರೆ.

07089011a ಮಹೋದಧಿಮಿವಾಪೂರ್ಣಮಾಪಗಾಭಿಃ ಸಮಂತತಃ|

07089011c ಅಪಕ್ಷೈಃ ಪಕ್ಷಿಸಂಕಾಶೈ ರಥೈರಶ್ವೈಶ್ಚ ಸಂವೃತಂ||

ನಮ್ಮ ಈ ಸೇನೆಯು ಎಲ್ಲ ಕಡೆಗಳಿಂದ ನದಿಗಳು ಹರಿದುಬಂದು ಸೇರುವ ಸಾಗರದಂತಿದೆ. ರೆಕ್ಕೆಗಳಿಲ್ಲದಿದ್ದರೂ ನಮ್ಮಲ್ಲಿರುವ ರಥ-ಕುದುರೆಗಳು ಪಕ್ಷಿಗಳಂತೆ ಆಕಾಶಗಾಮಿಗಳಾಗಿವೆ.

07089012a ಯೋಧಾಕ್ಷಯ್ಯಜಲಂ ಭೀಮಂ ವಾಹನೋರ್ಮಿತರಂಗಿಣಂ|

07089012c ಕ್ಷೇಪಣ್ಯಸಿಗದಾಶಕ್ತಿಶರಪ್ರಾಸಝಷಾಕುಲಂ||

ಯೋಧರೇ ಈ ಸಾಗರದ ಅಕ್ಷಯವಾದ ಭಯಂಕರ ನೀರಿನಂತಿದ್ದಾರೆ. ಆನೆ-ಕುದುರೆ-ರಥವಾಹನಗಳು ಅಲೆಗಳ ತರಂಗಿಣಿಗಳಂತಿವೆ. ಭಿಂದಿಪಾಲ, ಖಡ್ಗ, ಗದೆ, ಶಕ್ತಿ, ಶರ, ಪ್ರಾಸಗಳು ಅದರ ಮೀನುಗಳಂತಿವೆ.

07089013a ಧ್ವಜಭೂಷಣಸಂಬಾಧಂ ರತ್ನಪಟ್ಟೇನ ಸಂಚಿತಂ|

07089013c ವಾಹನೈರಪಿ ಧಾವದ್ಭಿರ್ವಾಯುವೇಗವಿಕಂಪಿತಂ||

ಧ್ವಜಗಳೂ ಭೂಷಣಗಳೇ ಸಾಗರದ ಆಳದಲ್ಲಿರುವ ರತ್ನಸಂಚಯಗಳಂತಿವೆ. ವಾಹನಗಳ ಓಡಾಡುವಿಕೆಯಿಂದ ಉಂಟಾದ ಭೀರುಗಾಳಿಯಿಂದ ಈ ಸಮುದ್ರವು ಅಲ್ಲೋಲಕಲ್ಲೋಲಗೊಂಡಂತಿದೆ.

07089014a ದ್ರೋಣಗಂಭೀರಪಾತಾಲಂ ಕೃತವರ್ಮಮಹಾಹ್ರದಂ|

07089014c ಜಲಸಂಧಮಹಾಗ್ರಾಹಂ ಕರ್ಣಚಂದ್ರೋದಯೋದ್ಧತಂ||

ಈ ಸೇನಾಸಾಗರಕ್ಕೆ ದ್ರೋಣನು ಆಳವಾದ ಪಾತಾಲದಂತಿದ್ದಾನೆ. ಕೃತವರ್ಮನೇ ಮಹಾ ಮಡುವು. ಜಲಸಂಧನೇ ಮಹಾ ಮೊಸಳೆ. ಕರ್ಣನೆಂಬ ಚಂದ್ರನಿಂದಾಗಿ ಈ ಸೇನಾಸಮುದ್ರವು ಉಕ್ಕಿ ಬರುತ್ತಿದೆ.

07089015a ಗತೇ ಸೈನ್ಯಾರ್ಣವಂ ಭಿತ್ತ್ವಾ ತರಸಾ ಪಾಂಡವರ್ಷಭೇ|

07089015c ಸಂಜಯೈಕರಥೇನೈವ ಯುಯುಧಾನೇ ಚ ಮಾಮಕಂ||

07089016a ತತ್ರ ಶೇಷಂ ನ ಪಶ್ಯಾಮಿ ಪ್ರವಿಷ್ಟೇ ಸವ್ಯಸಾಚಿನಿ|

07089016c ಸಾತ್ವತೇ ಚ ರಥೋದಾರೇ ಮಮ ಸೈನ್ಯಸ್ಯ ಸಂಜಯ||

ಸಂಜಯ! ರಥೋದಾರ ಸಾತ್ವತ ಯುಯುಧಾನನು ಈ ಸೇನಾಸಮುದ್ರವನ್ನು ಒಂದೇ ರಥದಿಂದ ಭೇದಿಸಿ ಶೀಘ್ರಗತಿಯಲ್ಲಿ ಪಾಂಡವರ್ಷಭ ಸವ್ಯಸಾಚಿಯನ್ನು ಸೇರಿದನು ಎಂದರೆ ಅಲ್ಲಿ ನನ್ನ ಸೇನೆಯಲ್ಲಿ ಇನ್ನೇನೂ ಉಳಿದಿರಲಿಕ್ಕಿಲ್ಲವೆಂದು ನನಗನ್ನಿಸುತ್ತದೆ.

07089017a ತೌ ತತ್ರ ಸಮತಿಕ್ರಾಂತೌ ದೃಷ್ಟ್ವಾಭೀತೌ ತರಸ್ವಿನೌ|

07089017c ಸಿಂಧುರಾಜಂ ಚ ಸಂಪ್ರೇಕ್ಷ್ಯ ಗಾಂಡೀವಸ್ಯೇಷುಗೋಚರೇ||

07089018a ಕಿಂ ತದಾ ಕುರವಃ ಕೃತ್ಯಂ ವಿದಧುಃ ಕಾಲಚೋದಿತಾಃ|

07089018c ದಾರುಣೈಕಾಯನೇ ಕಾಲೇ ಕಥಂ ವಾ ಪ್ರತಿಪೇದಿರೇ||

ಅತ್ಯಂತ ವೇಗಶಾಲಿಗಳಾದ ಎಲ್ಲರನ್ನು ಅತಿಕ್ರಮಿಸಿ ಮುಂದೆ ಅಭೀತರಾಗಿ ಹೋದ ಅರ್ಜುನ-ಸಾತ್ಯಕಿಯರನ್ನು ನೋಡಿ ಮತ್ತು ಸಿಂಧುರಾಜನು ಗಾಂಡೀವದ ಗುರಿಯಾಗುವಷ್ಟು ಹತ್ತಿರದಲ್ಲಿದ್ದುದನ್ನು ನೋಡಿ ಕಾಲಚೋದಿತರಾದ ಕುರುಗಳು ಯಾವ ಕಾರ್ಯವನ್ನು ಕೈಗೊಂಡರು? ಅಥವಾ ಆ ದಾರುಣ ಸಮಯವನ್ನು ಹೇಗೆ ದಾಟಿದರು?

07089019a ಗ್ರಸ್ತಾನ್ ಹಿ ಕೌರವಾನ್ಮನ್ಯೇ ಮೃತ್ಯುನಾ ತಾತ ಸಂಗತಾನ್|

07089019c ವಿಕ್ರಮೋ ಹಿ ರಣೇ ತೇಷಾಂ ನ ತಥಾ ದೃಶ್ಯತೇಽದ್ಯ ವೈ||

ಅಯ್ಯಾ! ಅಲ್ಲಿ ಸೇರಿದ್ದ ಕೌರವರು ಮೃತ್ಯುವಶರಾಗಿದ್ದರೆಂದು ನನಗನ್ನಿಸುತ್ತದೆ. ರಣದಲ್ಲಿ ಅವರ ವಿಕ್ರಮವೂ ಮೊದಲಿನಷ್ಟು ಇದ್ದಂತೆ ಕಾಣುವುದಿಲ್ಲ.

07089020a ಅಕ್ಷತೌ ಸಂಯುಗೇ ತತ್ರ ಪ್ರವಿಷ್ಟೌ ಕೃಷ್ಣಪಾಂಡವೌ|

07089020c ನ ಚ ವಾರಯಿತಾ ಕಶ್ಚಿತ್ತಯೋರಸ್ತೀಹ ಸಂಜಯ||

ಸಂಜಯ! ಕೃಷ್ಣಾರ್ಜುನರು ರಣದಲ್ಲಿ ನಮ್ಮ ಸೇನೆಯನ್ನು ಸ್ವಲ್ಪವೂ ಗಾಯಗೊಳ್ಳದೆಯೇ ಪ್ರವೇಶಿಸಿದರು. ಅವರನ್ನು ತಡೆಯುವವರು ಅಲ್ಲಿ ಯಾರೂ ಇರಲಿಲ್ಲ.

07089021a ಭೃತಾಶ್ಚ ಬಹವೋ ಯೋಧಾಃ ಪರೀಕ್ಷ್ಯೈವ ಮಹಾರಥಾಃ|

07089021c ವೇತನೇನ ಯಥಾಯೋಗ್ಯಂ ಪ್ರಿಯವಾದೇನ ಚಾಪರೇ||

ಅನೇಕ ಯೋಧರೂ ಮಹಾರಥರೂ ಪರೀಕ್ಷೆಗೊಳಗಾಗಿಯೇ ಆಯ್ಕೆಗೊಂಡಿದ್ದಾರೆ. ಯಥಾಯೋಗ್ಯವಾದ ವೇತನವನ್ನೂ ಇತರರಿಗೆ ಪ್ರಿಯವಾದ ಮಾತುಗಳಿಂದಲೂ ತೃಪ್ತಿಪಡಿಸಲಾಗುತ್ತಿದೆ.

07089022a ಅಕಾರಣಭೃತಸ್ತಾತ ಮಮ ಸೈನ್ಯೇ ನ ವಿದ್ಯತೇ|

07089022c ಕರ್ಮಣಾ ಹ್ಯನುರೂಪೇಣ ಲಭ್ಯತೇ ಭಕ್ತವೇತನಂ||

ಅಯ್ಯಾ! ಅಕಾರಣವಾಗಿ ನನ್ನ ಸೈನ್ಯದಲ್ಲಿ ಯಾರೂ ಇಲ್ಲ. ಎಲ್ಲರಿಗೂ ಅವರವರ ಕೆಲಸಗಳಿಗೆ ಅನುರೂಪವಾದ ವೇತನ ಭತ್ಯಗಳನ್ನು ಪಡೆಯುತ್ತಿದ್ದಾರೆ.

07089023a ನ ಚ ಯೋಧೋಽಭವತ್ಕಶ್ಚಿನ್ಮಮ ಸೈನ್ಯೇ ತು ಸಂಜಯ|

07089023c ಅಲ್ಪದಾನಭೃತಸ್ತಾತ ನ ಕುಪ್ಯಭೃತಕೋ ನರಃ||

ಅಯ್ಯಾ! ಸಂಜಯ! ನನ್ನ ಸೈನ್ಯದಲ್ಲಿ ಕಡಿಮೆ ವೇತನವನ್ನು ಪಡೆಯುವ ಅಥವಾ ವೇತನವನ್ನೇ ಪಡೆಯದ ಯಾವ ಯೋಧ-ನರನೂ ಇಲ್ಲ.

07089024a ಪೂಜಿತಾ ಹಿ ಯಥಾಶಕ್ತ್ಯಾ ದಾನಮಾನಾಸನೈರ್ಮಯಾ|

07089024c ತಥಾ ಪುತ್ರೈಶ್ಚ ಮೇ ತಾತ ಜ್ಞಾತಿಭಿಶ್ಚ ಸಬಾಂಧವೈಃ||

ಅಯ್ಯಾ! ನಾನು, ನನ್ನ ಮಕ್ಕಳು, ಮತ್ತು ಜ್ಞಾತಿಬಾಂಧವರೂ ಕೂಡ ಅವರನ್ನು ದಾನ, ಸಮ್ಮಾನ, ಆಸನಗಳನ್ನಿತ್ತು ಗೌರವಿಸಿದ್ದೇವೆ.

07089025a ತೇ ಚ ಪ್ರಾಪ್ಯೈವ ಸಂಗ್ರಾಮೇ ನಿರ್ಜಿತಾಃ ಸವ್ಯಸಾಚಿನಾ|

07089025c ಶೈನೇಯೇನ ಪರಾಮೃಷ್ಟಾಃ ಕಿಮನ್ಯದ್ಭಾಗಧೇಯತಃ||

ಹಾಗಿದ್ದರೂ ಸಹ ಸಂಗ್ರಾಮದಲ್ಲಿ ಅವರು ಸವ್ಯಸಾಚಿಯಿಂದ ಗೆಲ್ಲಲ್ಪಟ್ಟರು. ಶೈನೇಯನ ಅವ್ಯಾಹತ ದಾಳಿಗೆ ಒಳಗಾದರು. ಅದಕ್ಕೆ ಅದೃಷ್ಟವೇ ಕಾರಣವಲ್ಲದೇ ಮತ್ತಾವ ಕಾರಣವಿದೆ?

07089026a ರಕ್ಷ್ಯತೇ ಯಶ್ಚ ಸಂಗ್ರಾಮೇ ಯೇ ಚ ಸಂಜಯ ರಕ್ಷಿಣಃ|

07089026c ಏಕಃ ಸಾಧಾರಣಃ ಪಂಥಾ ರಕ್ಷ್ಯಸ್ಯ ಸಹ ರಕ್ಷಿಭಿಃ||

ಸಂಜಯ! ಸಂಗ್ರಾಮದಲ್ಲಿ ಯಾರು ರಕ್ಷಿಸಲ್ಪಡುತ್ತಿದ್ದಾರೋ ಆ ರಕ್ಷಣೀಯರು ಮತ್ತು ಯಾರು ರಕ್ಷಿಸುತ್ತಿದ್ದಾರೋ ಆ ರಕ್ಷಕರು ಇಬ್ಬರೂ ಸಾಧಾರಣ ಒಂದೇ ಮಾರ್ಗದಲ್ಲಿ ಹೋಗುತ್ತಿದ್ದಾರೆ.

07089027a ಅರ್ಜುನಂ ಸಮರೇ ದೃಷ್ಟ್ವಾ ಸೈಂಧವಸ್ಯಾಗ್ರತಃ ಸ್ಥಿತಂ|

07089027c ಪುತ್ರೋ ಮಮ ಭೃಶಂ ಮೂಢಃ ಕಿಂ ಕಾರ್ಯಂ ಪ್ರತ್ಯಪದ್ಯತ||

ಸಮರದಲ್ಲಿ ಸೈಂಧವನ ಎದುರೇ ನಿಂತಿರುವ ಅರ್ಜುನನನ್ನು ನೋಡಿ ತುಂಬಾ ಮೂಢರಾಗಿರುವ ನನ್ನ ಮಗ(ದುರ್ಯೋಧನ)ನು (ಸೈಂಧವನ ರಕ್ಷಣೆಗಾಗಿ) ಯಾವ ಕಾರ್ಯವನ್ನು ಕೈಗೊಂಡನು?

07089028a ಸಾತ್ಯಕಿಂ ಚ ರಣೇ ದೃಷ್ಟ್ವಾ ಪ್ರವಿಶಂತಮಭೀತವತ್|

07089028c ಕಿಂ ನು ದುರ್ಯೋಧನಃ ಕೃತ್ಯಂ ಪ್ರಾಪ್ತಕಾಲಮಮನ್ಯತ||

ಭಯವಿಲ್ಲದೇ ರಣವನ್ನು ಪ್ರವೇಶಿಸಿದ ಸಾತ್ಯಕಿಯನ್ನು ನೋಡಿ ದುರ್ಯೋಧನನು ಆ ಸಮಯದಲ್ಲಿ ಏನನ್ನು ಮಾಡುವುದು ಉಚಿತವೆಂದು ಅಂದುಕೊಂಡನು?

07089029a ಸರ್ವಶಸ್ತ್ರಾತಿಗೌ ಸೇನಾಂ ಪ್ರವಿಷ್ಟೌ ರಥಸತ್ತಮೌ|

07089029c ದೃಷ್ಟ್ವಾ ಕಾಂ ವೈ ಧೃತಿಂ ಯುದ್ಧೇ ಪ್ರತ್ಯಪದ್ಯಂತ ಮಾಮಕಾಃ||

ಎಲ್ಲ ಶಸ್ತ್ರಗಳನ್ನೂ ಅತಿಕ್ರಮಿಸಿ ಸೇನೆಯನ್ನು ಪ್ರವೇಶಿಸಿದ ಆ ರಥಸತ್ತಮ (ಅರ್ಜುನ-ಸಾತ್ಯಕಿಯ)ರನ್ನು ನೋಡಿ ನನ್ನವರು ಯುದ್ಧದಲ್ಲಿ ಏನೆಂದು ನಿರ್ಧರಿಸಿದರು?

07089030a ದೃಷ್ಟ್ವಾ ಕೃಷ್ಣಂ ತು ದಾಶಾರ್ಹಮರ್ಜುನಾರ್ಥೇ ವ್ಯವಸ್ಥಿತಂ|

07089030c ಶಿನೀನಾಂ ಋಷಭಂ ಚೈವ ಮನ್ಯೇ ಶೋಚಂತಿ ಪುತ್ರಕಾಃ||

ಅರ್ಜುನನಿಗೋಸ್ಕರವಾಗಿ ನಿಂತಿರುವ ದಾಶಾರ್ಹ ಕೃಷ್ಣ ಮತ್ತು ಶಿನಿಗಳ ವೃಷಭ ಸಾತ್ಯಕಿಯನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089031a ದೃಷ್ಟ್ವಾ ಸೇನಾಂ ವ್ಯತಿಕ್ರಾಂತಾಂ ಸಾತ್ವತೇನಾರ್ಜುನೇನ ಚ|

07089031c ಪಲಾಯಮಾನಾಂಶ್ಚ ಕುರೂನ್ಮನ್ಯೇ ಶೋಚಂತಿ ಪುತ್ರಕಾಃ||

ಸೇನೆಗಳನ್ನು ಅತಿಕ್ರಮಿಸಿದ ಸಾತ್ವತ-ಅರ್ಜುನರನ್ನೂ ಮತ್ತು ಪಲಾಯನಮಾಡುತ್ತಿರುವ ಕುರುಗಳನ್ನೂ ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089032a ವಿದ್ರುತಾನ್ರಥಿನೋ ದೃಷ್ಟ್ವಾ ನಿರುತ್ಸಾಹಾನ್ದ್ವಿಷಜ್ಜಯೇ|

07089032c ಪಲಾಯನೇ ಕೃತೋತ್ಸಾಹಾನ್ಮನ್ಯೇ ಶೋಚಂತಿ ಪುತ್ರಕಾಃ||

ಶತ್ರುಗಳನ್ನು ಜಯಿಸುವುದರಲ್ಲಿ ನಿರುತ್ಸಾಹರಾಗಿ, ಪಲಾಯನದಲ್ಲಿ ಉತ್ಸಾಹಿತರಾಗಿ ಓಡಿಹೋಗುತ್ತಿರುವ ರಥಿಗಳನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089033a ಶೂನ್ಯಾನ್ಕೃತಾನ್ರಥೋಪಸ್ಥಾನ್ಸಾತ್ವತೇನಾರ್ಜುನೇನ ಚ|

07089033c ಹತಾಂಶ್ಚ ಯೋಧಾನ್ಸಂದೃಶ್ಯ ಮನ್ಯೇ ಶೋಚಂತಿ ಪುತ್ರಕಾಃ||

ಸಾತ್ವತ-ಅರ್ಜುನರು ರಥಗಳ ಆಸನಗಳನ್ನು ಶೂನ್ಯವನ್ನಾಗಿ ಮಾಡುತ್ತಿರುವುದನ್ನು ನೋಡಿ ಮತ್ತು ಯೋಧರನ್ನು ಸಂಹರಿಸುತ್ತಿರುವುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089034a ವ್ಯಶ್ವನಾಗರಥಾನ್ದೃಷ್ಟ್ವಾ ತತ್ರ ವೀರಾನ್ಸಹಸ್ರಶಃ|

07089034c ಧಾವಮಾನಾನ್ರಣೇ ವ್ಯಗ್ರಾನ್ಮನ್ಯೇ ಶೋಚಂತಿ ಪುತ್ರಕಾಃ||

ಗಜಾಶ್ವ-ರಥಗಳಿಂದ ವಿಹೀನರಾಗಿ ಉದ್ವಿಗ್ನರಾಗಿ ಓಡಿಹೋಗುತ್ತಿರುವ ಸಹಸ್ರಾರು ವೀರಯೋಧರನ್ನು ಕಂಡು ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089035a ವಿವೀರಾಂಶ್ಚ ಕೃತಾನಶ್ವಾನ್ವಿರಥಾಂಶ್ಚ ಕೃತಾನ್ನರಾನ್|

07089035c ತತ್ರ ಸಾತ್ಯಕಿಪಾರ್ಥಾಭ್ಯಾಂ ಮನ್ಯೇ ಶೋಚಂತಿ ಪುತ್ರಕಾಃ||

ಅಲ್ಲಿ ಸಾತ್ಯಕಿ-ಪಾರ್ಥರು ಕುದುರೆಗಳನ್ನು ವೀರರಹಿತರನ್ನಾಗಿಯೂ, ರಥಗಳನ್ನು ಮನುಷ್ಯ ರಹಿತವನ್ನಾಗಿ ಮಾಡಿದುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089036a ಪತ್ತಿಸಂಘಾನ್ರಣೇ ದೃಷ್ಟ್ವಾ ಧಾವಮಾನಾಂಶ್ಚ ಸರ್ವಶಃ|

07089036c ನಿರಾಶಾ ವಿಜಯೇ ಸರ್ವೇ ಮನ್ಯೇ ಶೋಚಂತಿ ಪುತ್ರಕಾಃ||

ರಣದ ಎಲ್ಲಕಡೆ ಎಲ್ಲ ಪದಾತಿಗಣಗಳೂ ವಿಜಯದಲ್ಲಿ ನಿರಾಶರಾಗಿ ಓಡಿಹೋಗುತ್ತಿರುವುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089037a ದ್ರೋಣಸ್ಯ ಸಮತಿಕ್ರಾಂತಾವನೀಕಮಪರಾಜಿತೌ|

07089037c ಕ್ಷಣೇನ ದೃಷ್ಟ್ವಾ ತೌ ವೀರೌ ಮನ್ಯೇ ಶೋಚಂತಿ ಪುತ್ರಕಾಃ||

ಆ ಇಬ್ಬರು ಅಪರಾಜಿತ ವೀರರು ಕ್ಷಣಮಾತ್ರದಲ್ಲಿ ದ್ರೋಣನ ಸೇನೆಯನ್ನು ಅತಿಕ್ರಮಿಸಿ ಬಂದುದನ್ನು ನೋಡಿ ನನ್ನ ಮಕ್ಕಳು ಶೋಕಿಸುತ್ತಿದ್ದಿರಬಹುದು ಎಂದು ನನಗನ್ನಿಸುತ್ತದೆ.

07089038a ಸಮ್ಮೂಢೋಽಸ್ಮಿ ಭೃಶಂ ತಾತ ಶ್ರುತ್ವಾ ಕೃಷ್ಣಧನಂಜಯೌ|

07089038c ಪ್ರವಿಷ್ಟೌ ಮಾಮಕಂ ಸೈನ್ಯಂ ಸಾತ್ವತೇನ ಸಹಾಚ್ಯುತೌ||

ಅಯ್ಯಾ! ಅಚ್ಯುತರಾದ ಕೃಷ್ಣ-ಧನಂಜಯರು ಮತ್ತು ಜೊತೆಗೆ ಸಾತ್ವತನೂ ಕೂಡ ನನ್ನ ಸೇನೆಯನ್ನು ಪ್ರವೇಶಿಸಿದರು ಎನ್ನುವುದನ್ನು ಕೇಳಿ ನಾನು ತುಂಬಾ ಸಮ್ಮೂಢನಾಗಿಬಿಟ್ಟಿದ್ದೇನೆ.

07089039a ತಸ್ಮಿನ್ಪ್ರವಿಷ್ಟೇ ಪೃತನಾಂ ಶಿನೀನಾಂ ಪ್ರವರೇ ರಥೇ|

07089039c ಭೋಜಾನೀಕಂ ವ್ಯತಿಕ್ರಾಂತೇ ಕಥಮಾಸನ್ ಹಿ ಕೌರವಾಃ||

ಶಿನಿಗಳಲ್ಲಿ ಶ್ರೇಷ್ಠನಾದ ಸಾತ್ಯಕಿಯು ರಥದಲ್ಲಿ ಕುಳಿತು ಸೇನೆಗಳನ್ನು ಪ್ರವೇಶಿಸಿ ಭೋಜ ಕೃತವರ್ಮನ ಸೇನೆಯನ್ನು ಅತಿಕ್ರಮಿಸಲು ಕೌರವರು ಏನು ಮಾಡಿದರು?

07089040a ತಥಾ ದ್ರೋಣೇನ ಸಮರೇ ನಿಗೃಹೀತೇಷು ಪಾಂಡುಷು|

07089040c ಕಥಂ ಯುದ್ಧಮಭೂತ್ತತ್ರ ತನ್ಮಮಾಚಕ್ಷ್ವ ಸಂಜಯ||

ಸಂಜಯ! ದ್ರೋಣನು ಪಾಂಡವರನ್ನು ಸಮರದಲ್ಲಿ ನಿಗ್ರಹಿಸಿದ ನಂತರ ಅಲ್ಲಿ ಯುದ್ಧವು ಹೇಗೆ ಮುಂದುವರೆಯಿತು ಎನ್ನುವುದನ್ನು ನನಗೆ ಹೇಳು.

07089041a ದ್ರೋಣೋ ಹಿ ಬಲವಾನ್ಶೂರಃ ಕೃತಾಸ್ತ್ರೋ ದೃಢವಿಕ್ರಮಃ|

07089041c ಪಾಂಚಾಲಾಸ್ತಂ ಮಹೇಷ್ವಾಸಂ ಪ್ರತ್ಯಯುಧ್ಯನ್ಕಥಂ ರಣೇ||

07089042a ಬದ್ಧವೈರಾಸ್ತಥಾ ದ್ರೋಣೇ ಧರ್ಮರಾಜಜಯೈಷಿಣಃ|

07089042c ಭಾರದ್ವಾಜಸ್ತಥಾ ತೇಷು ಕೃತವೈರೋ ಮಹಾರಥಃ||

ದ್ರೋಣನು ಬಲವಂತ, ಶೂರ, ಕೃತಾಸ್ತ್ರ ಮತ್ತು ದೃಢವಿಕ್ರಮಿ. ಅವನ ಬದ್ಧವೈರಿಗಳಾದ ಧರ್ಮರಾಜನ ವಿಜಯಾಕಾಂಕ್ಷಿಗಳಾದ ಪಾಂಚಾಲರು ಆ ಮಹೇಷ್ವಾಸ ದ್ರೋಣನನ್ನು ರಣದಲ್ಲಿ ಎದುರಿಸಿ ಹೇಗೆ ಯುದ್ಧಮಾಡಿದರು? ಅವರೊಂದಿಗೆ ವೈರವನ್ನು ಸಾಧಿಸುತ್ತಿದ್ದ ಭಾರದ್ವಾಜನು ಹೇಗೆ ಯುದ್ಧಮಾಡಿದನು?

07089043a ಅರ್ಜುನಶ್ಚಾಪಿ ಯಚ್ಚಕ್ರೇ ಸಿಂಧುರಾಜವಧಂ ಪ್ರತಿ|

07089043c ತನ್ಮೇ ಸರ್ವಂ ಸಮಾಚಕ್ಷ್ವ ಕುಶಲೋ ಹ್ಯಸಿ ಸಂಜಯ||

ಸಿಂಧುರಾಜನ ವಧೆಗಾಗಿ ಅರ್ಜುನನು ಏನು ಮಾಡಿದನು? ಇವೆಲ್ಲವನ್ನೂ ನನಗೆ ಹೇಳು ಸಂಜಯ! ವಿಷಯನಿರೂಪಣೆಯಲ್ಲಿ ನೀನು ಕುಶಲನಾಗಿರುವೆ!”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಧೃತರಾಷ್ಟ್ರಪ್ರಶ್ನೇ ಏಕೋನನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಧೃತರಾಷ್ಟ್ರಪ್ರಶ್ನೆ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.

Related image

Comments are closed.