Drona Parva: Chapter 20

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೦

ದ್ರೋಣನು ಪಾಂಚಾಲ ವೃಕ-ಸತ್ಯಜಿತುಗಳನ್ನು ವಧಿಸಿದುದು; ಯುಧಿಷ್ಠಿರನ ಪಲಾಯನ (೧-೧೭). ವಿರಾಟನ ತಮ್ಮ ಶತಾನೀಕನನ್ನು ದ್ರೋಣನು ವಧಿಸಿದುದು (೧೮-೨೨). ದೃಢಸೇನ, ಕ್ಷೇಮ ಮತ್ತು ವಸುದಾನರನ್ನು ದ್ರೋಣನು ಸಂಹರಿಸಿ, ಯುಧಿಷ್ಠಿರನನ್ನು ಪುನಃ ಆಕ್ರಮಿಸಲು ಅವನು ಮತ್ತೆ ಪಲಾಯನಗೈದುದು (೨೩-೫೩).

07020001 ಸಂಜಯ ಉವಾಚ|

07020001a ತತೋ ಯುಧಿಷ್ಠಿರೋ ದ್ರೋಣಂ ದೃಷ್ಟ್ವಾಂತಿಕಮುಪಾಗತಂ|

07020001c ಮಹತಾ ಶರವರ್ಷೇಣ ಪ್ರತ್ಯಗೃಹ್ಣಾದಭೀತವತ್||

ಸಂಜಯನು ಹೇಳಿದನು: “ಆಗ ಯುಧಿಷ್ಠಿರನು ಹತ್ತಿರ ಬರುತ್ತಿದ್ದ ದ್ರೋಣನನ್ನು ನೋಡಿ ಭಯಪಡದೇ ಮಹಾ ಶರವರ್ಷದಿಂದ ಬರಮಾಡಿಕೊಂಡನು.

07020002a ತತೋ ಹಲಹಲಾಶಬ್ದ ಆಸೀದ್ಯೌಧಿಷ್ಠಿರೇ ಬಲೇ|

07020002c ಜಿಘೃಕ್ಷತಿ ಮಹಾಸಿಂಹೇ ಗಜಾನಾಮಿವ ಯೂಥಪಂ||

ಆಗ ಮಹಾಸಿಂಹವನ್ನು ಕೊಲ್ಲಲು ಬಯಸಿದ ಆನೆಗಳ ಹಿಂಡಿನಲ್ಲಿ ಹೇಗೋ ಹಾಗೆ ಯುಧಿಷ್ಠಿರನ ಸೇನೆಯಲ್ಲಿ ಹಾಲಾಹಲ ಶಬ್ಧವುಂಟಾಯಿತು.

07020003a ದೃಷ್ಟ್ವಾ ದ್ರೋಣಂ ತತಃ ಶೂರಃ ಸತ್ಯಜಿತ್ಸತ್ಯವಿಕ್ರಮಃ|

07020003c ಯುಧಿಷ್ಠಿರಂ ಪರಿಪ್ರೇಪ್ಸುಮಾಚಾರ್ಯಂ ಸಮುಪಾದ್ರವತ್||

ಆಗ ದ್ರೋಣನನ್ನು ನೋಡಿ ಸತ್ಯವಿಕ್ರಮ ಸತ್ಯಜಿತುವು ಯುಧಿಷ್ಠಿರನನ್ನು ರಕ್ಷಿಸಲು ಆಚಾರ್ಯನ ಮೇಲೆ ಎರಗಿದನು.

07020004a ತತ ಆಚಾರ್ಯಪಾಂಚಾಲ್ಯೌ ಯುಯುಧಾತೇ ಪರಸ್ಪರಂ|

07020004c ವಿಕ್ಷೋಭಯಂತೌ ತತ್ಸೈನ್ಯಮಿಂದ್ರವೈರೋಚನಾವಿವ||

ಆಗ ಆಚಾರ್ಯ-ಪಾಂಚಾಲ್ಯರಿಬ್ಬರೂ ಪರಸ್ಪರರೊಡನೆ ಇಂದ್ರ-ವೈರೋಚನರಂತೆ ಸೈನ್ಯವನ್ನು ಕ್ಷೋಭೆಗೊಳಿಸುತ್ತಾ ಯುದ್ಧ ಮಾಡಿದರು.

07020005a ತತಃ ಸತ್ಯಜಿತಂ ತೀಕ್ಷ್ಣೈರ್ದಶಭಿರ್ಮರ್ಮಭೇದಿಭಿಃ|

07020005c ಅವಿಧ್ಯಚ್ಚೀಘ್ರಮಾಚಾರ್ಯಶ್ಚಿತ್ತ್ವಾಸ್ಯ ಸಶರಂ ಧನುಃ||

ಆಗ ಆಚಾರ್ಯನು ಶೀಘ್ರವಾಗಿ ಹತ್ತು ತೀಕ್ಷ್ಣ ಮರ್ಮಭೇದಿಗಳಿಂದ ಸತ್ಯಜಿತುವಿನ ಬಾಣವನ್ನು ಹೂಡಿದ್ದ ಧನುಸ್ಸನ್ನು ತುಂಡರಿಸಿ ಹೊಡೆದನು.

07020006a ಸ ಶೀಘ್ರತರಮಾದಾಯ ಧನುರನ್ಯತ್ಪ್ರತಾಪವಾನ್|

07020006c ದ್ರೋಣಂ ಸೋಽಭಿಜಘಾನಾಶು ವಿಂಶದ್ಭಿಃ ಕಂಕಪತ್ರಿಭಿಃ||

ಆ ಪ್ರತಾಪವಾನನು ಅತಿಶೀಘ್ರದಲ್ಲಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಇಪ್ಪತ್ತು ಕಂಕಪತ್ರಗಳಿಂದ ದ್ರೋಣನನ್ನು ಹೊಡೆದನು.

07020007a ಜ್ಞಾತ್ವಾ ಸತ್ಯಜಿತಾ ದ್ರೋಣಂ ಗ್ರಸ್ಯಮಾನಮಿವಾಹವೇ|

07020007c ವೃಕಃ ಶರಶತೈಸ್ತೀಕ್ಷ್ಣೈಃ ಪಾಂಚಾಲ್ಯೋ ದ್ರೋಣಮರ್ದಯತ್||

ಆಹವದಲ್ಲಿ ಸತ್ಯಜಿತನು ದ್ರೋಣನೊಡನೆ ಯುದ್ಧದಲ್ಲಿ ತೊಡಗಿರುವುದನ್ನು ತಿಳಿದು ಪಾಂಚಾಲ್ಯ ವೃಕನು ನೂರು ತೀಕ್ಷ್ಣ ಶರಗಳಿಂದ ದ್ರೋಣನನ್ನು ಹೊಡೆದನು.

07020008a ಸಂಚಾದ್ಯಮಾನಂ ಸಮರೇ ದ್ರೋಣಂ ದೃಷ್ಟ್ವಾ ಮಹಾರಥಂ|

07020008c ಚುಕ್ರುಶುಃ ಪಾಂಡವಾ ರಾಜನ್ವಸ್ತ್ರಾಣಿ ದುಧುವುಶ್ಚ ಹ||

ರಾಜನ್! ಸಮರದಲ್ಲಿ ಮಹಾರಥ ದ್ರೋಣನನ್ನು ಹಾಗೆ ಎದುರಿಸಿದುದನ್ನು ನೋಡಿ ಪಾಂಡವರು ಹರ್ಷದಿಂದ ಉತ್ತರೀಯಗಳನ್ನು ಮೇಲೆ ಹಾರಿಸಿ ಕೂಗಿದರು.

07020009a ವೃಕಸ್ತು ಪರಮಕ್ರುದ್ಧೋ ದ್ರೋಣಂ ಷಷ್ಟ್ಯಾ ಸ್ತನಾಂತರೇ|

07020009c ವಿವ್ಯಾಧ ಬಲವಾನ್ರಾಜಂಸ್ತದದ್ಭುತಮಿವಾಭವತ್||

ರಾಜನ್! ಬಲವಾನ್ ವೃಕನಾದರೋ ಪರಮಕ್ರುದ್ಧನಾಗಿ ದ್ರೋಣನ ಎದೆಗೆ ಅರವತ್ತು ಬಾಣಗಳಿಂದ ಹೊಡೆದನು. ಅದು ಅದ್ಭುತವಾಗಿತ್ತು.

07020010a ದ್ರೋಣಸ್ತು ಶರವರ್ಷೇಣ ಚಾದ್ಯಮಾನೋ ಮಹಾರಥಃ|

07020010c ವೇಗಂ ಚಕ್ರೇ ಮಹಾವೇಗಃ ಕ್ರೋಧಾದುದ್ವೃತ್ಯ ಚಕ್ಷುಷೀ||

ಆಗ ಶರವರ್ಷಗಳಿಂದ ಮುಚ್ಚಿಹೋಗಿದ್ದ ಮಹಾರಥ ಮಹಾವೇಗ ದ್ರೋಣನು ಕ್ರೋಧದಿಂದ ಎಚ್ಚೆತ್ತು ವೇಗವಾಗಿ ಕಣ್ಣುಗಳನ್ನು ತೆರೆದನು.

07020011a ತತಃ ಸತ್ಯಜಿತಶ್ಚಾಪಂ ಚಿತ್ತ್ವಾ ದ್ರೋಣೋ ವೃಕಸ್ಯ ಚ|

07020011c ಷಡ್ಭಿಃ ಸಸೂತಂ ಸಹಯಂ ಶರೈರ್ದ್ರೋಣೋಽವಧೀದ್ವೃಕಂ||

ಆಗ ದ್ರೋಣನು ಸತ್ಯಜಿತು ಮತ್ತು ವೃಕರ ಧನುಸ್ಸುಗಳನ್ನು ತುಂಡರಿಸಿ ಆರು ಬಾಣಗಳಿಂದ ದ್ರೋಣನು ಸೂತ, ಕುದುರೆಗಳೊಂದಿಗೆ ವೃಕನನ್ನು ವಧಿಸಿದನು.

07020012a ಅಥಾನ್ಯದ್ಧನುರಾದಾಯ ಸತ್ಯಜಿದ್ವೇಗವತ್ತರಂ|

07020012c ಸಾಶ್ವಂ ಸಸೂತಂ ವಿಶಿಖೈರ್ದ್ರೋಣಂ ವಿವ್ಯಾಧ ಸಧ್ವಜಂ||

ಆಗ ಸತ್ಯಜಿತುವು ಅತಿವೇಗದಲ್ಲಿ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ವಿಶಿಖಗಳಿಂದ ಕುದುರೆ, ಸೂತ, ಧ್ವಜಗಳೊಂದಿಗೆ ದ್ರೋಣನನ್ನು ಹೊಡೆದನು.

07020013a ಸ ತನ್ನ ಮಮೃಷೇ ದ್ರೋಣಃ ಪಾಂಚಾಲ್ಯೇನಾರ್ದನಂ ಮೃಧೇ|

07020013c ತತಸ್ತಸ್ಯ ವಿನಾಶಾಯ ಸತ್ವರಂ ವ್ಯಸೃಜಚ್ಚರಾನ್||

ಯುದ್ಧದಲ್ಲಿ ಪಾಂಚಾಲ್ಯನ ಆ ಪೆಟ್ಟನ್ನು ದ್ರೋಣನು ಸಹಿಸಿಕೊಳ್ಳದಾದನು. ಅವನ ವಿನಾಶಕ್ಕಾಗಿ ಒಂದೇಸಮನೆ ಬಾಣಗಳನ್ನು ಪ್ರಯೋಗಿಸತೊಡಗಿದನು.

07020014a ಹಯಾನ್ಧ್ವಜಂ ಧನುರ್ಮುಷ್ಟಿಮುಭೌ ಚ ಪಾರ್ಷ್ಣಿಸಾರಥೀ|

07020014c ಅವಾಕಿರತ್ತತೋ ದ್ರೋಣಃ ಶರವರ್ಷೈಃ ಸಹಸ್ರಶಃ||

ದ್ರೋಣನು ಸಹಸ್ರಾರು ಶರಗಳನ್ನು ಸುರಿಸಿ ಅವನ ಕುದುರೆಗಳನ್ನೂ, ಧ್ವಜವನ್ನೂ, ಎರಡೂ ಧನುರ್ಮುಷ್ಟಿಗಳನ್ನೂ, ಪಾರ್ಷ್ಣಿಸಾರಥಿಗಳನ್ನೂ ಮುಚ್ಚಿದನು.

07020015a ತಥಾ ಸಂಚಿದ್ಯಮಾನೇಷು ಕಾರ್ಮುಕೇಷು ಪುನಃ ಪುನಃ|

07020015c ಪಾಂಚಾಲ್ಯಃ ಪರಮಾಸ್ತ್ರಜ್ಞಃ ಶೋಣಾಶ್ವಂ ಸಮಯೋಧಯತ್||

ಹೀಗೆ ಪುನಃ ಪುನಃ ತನ್ನ ಬಿಲ್ಲುಗಳನ್ನು ಕತ್ತರಿಸುತ್ತಿದ್ದರೂ ಪರಮಾಸ್ತ್ರಜ್ಞನಾಗಿದ್ದ ಪಾಂಚಾಲ್ಯನು ಶೋಣಾಶ್ವನನ್ನು ಎದುರಿಸಿ ಯುದ್ಧಮಾಡಿದನು.

07020016a ಸ ಸತ್ಯಜಿತಮಾಲಕ್ಷ್ಯ ತಥೋದೀರ್ಣಂ ಮಹಾಹವೇ|

07020016c ಅರ್ಧಚಂದ್ರೇಣ ಚಿಚ್ಚೇದ ಶಿರಸ್ತಸ್ಯ ಮಹಾತ್ಮನಃ||

ಆ ಮಹಾಹವದಲ್ಲಿ ಉತ್ತೇಜಿತನಾಗಿ ಹೋರಾಡುತ್ತಿರುವ ಸತ್ಯಜಿತುವನ್ನು ನೋಡಿದ ಮಹಾತ್ಮ ದ್ರೋಣನು ಅರ್ಧಚಂದ್ರದಿಂದ ಅವನ ಶಿರವನ್ನು ತುಂಡರಿಸಿದನು.

07020017a ತಸ್ಮಿನ್ ಹತೇ ಮಹಾಮಾತ್ರೇ ಪಾಂಚಾಲಾನಾಂ ರಥರ್ಷಭೇ|

07020017c ಅಪಾಯಾಜ್ಜವನೈರಶ್ವೈರ್ದ್ರೋಣಾತ್ತ್ರಸ್ತೋ ಯುಧಿಷ್ಠಿರಃ||

ಆ ಇಬ್ಬರು ಪಾಂಚಾಲರ ಮಹಾಕಾಯರು ರಥರ್ಷಭನಿಂದ ಹತರಾಗಲು ಭೀತನಾದ ಯುಧಿಷ್ಠಿರನು ವೇಗವುಳ್ಳ ಕುದುರೆಗಳನ್ನೇರಿ ಪಲಾಯನಗೈದನು.

07020018a ಪಾಂಚಾಲಾಃ ಕೇಕಯಾ ಮತ್ಸ್ಯಾಶ್ಚೇದಿಕಾರೂಷಕೋಸಲಾಃ|

07020018c ಯುಧಿಷ್ಠಿರಮುದೀಕ್ಷಂತೋ ಹೃಷ್ಟಾ ದ್ರೋಣಮುಪಾದ್ರವನ್||

ಆಗ ಪಾಂಚಾಲರು, ಕೇಕಯರು, ಮತ್ಸ್ಯರು, ಚೇದಿ-ಕರೂಷರು, ಕೋಸಲರು ಯುಧಿಷ್ಠಿರನನ್ನು ರಕ್ಷಿಸಲು ಬಯಸಿ ಸಂತೋಷದಿಂದ ದ್ರೋಣನ ಮೇಲೆ ಎರಗಿದರು.

07020019a ತತೋ ಯುಧಿಷ್ಠಿರಪ್ರೇಪ್ಸುರಾಚಾರ್ಯಃ ಶತ್ರುಪೂಗಹಾ|

07020019c ವ್ಯಧಮತ್ತಾನ್ಯನೀಕಾನಿ ತೂಲರಾಶಿಮಿವಾನಿಲಃ||

ಆಗ ಶತ್ರುಸೇನೆಗಳನ್ನು ಮರ್ದಿಸುವ ಆಚಾರ್ಯನು ಯುಧಿಷ್ಠಿರನನ್ನು ಹಿಡಿಯಲು ಬಯಸಿ ಆ ಸೇನೆಗಳನ್ನು ಬೆಂಕಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಸುಟ್ಟುಬಿಟ್ಟನು.

07020020a ನಿರ್ದಹಂತಮನೀಕಾನಿ ತಾನಿ ತಾನಿ ಪುನಃ ಪುನಃ|

07020020c ದ್ರೋಣಂ ಮತ್ಸ್ಯಾದವರಜಃ ಶತಾನೀಕೋಽಭ್ಯವರ್ತತ||

ಅನೇಕ ಬಾರಿ ಆ ಸೇನೆಗಳನ್ನು ದಹಿಸುತ್ತಿದ್ದ ದ್ರೋಣನನ್ನು ಮತ್ಸ್ಯರಾಜನ ತಮ್ಮ ಶತಾನೀಕನು ಎದುರಿಸಿದನು.

07020021a ಸೂರ್ಯರಶ್ಮಿಪ್ರತೀಕಾಶೈಃ ಕರ್ಮಾರಪರಿಮಾರ್ಜಿತೈಃ|

07020021c ಷಡ್ಭಿಃ ಸಸೂತಂ ಸಹಯಂ ದ್ರೋಣಂ ವಿದ್ಧ್ವಾನದದ್ಭೃಶಂ||

ಸೂರ್ಯನ ರಶ್ಮಿಗಳಂತಿರುವ ಕಮ್ಮಾರನಿಂದ ಪರಿಷ್ಕೃತಗೊಂಡ ಅರು ಬಾಣಗಳಿಂದ ದ್ರೋಣನನ್ನು, ಅವನ ಸಾರಥಿ ಮತ್ತು ಕುದುರೆಗಳೊಂದಿಗೆ ಚೆನ್ನಾಗಿ ಹೊಡೆದನು.

07020022a ತಸ್ಯ ನಾನದತೋ ದ್ರೋಣಃ ಶಿರಃ ಕಾಯಾತ್ಸಕುಂಡಲಂ|

07020022c ಕ್ಷುರೇಣಾಪಾಹರತ್ತೂರ್ಣಂ ತತೋ ಮತ್ಸ್ಯಾಃ ಪ್ರದುದ್ರುವುಃ||

ದ್ರೋಣನು ಕ್ಷುರದಿಂದ ಬೇಗನೇ ಅವನ ಶಿರವನ್ನು ಕುಂಡಲಗಳೊಂದಿಗೆ ಕಾಯದಿಂದ ಬೇರ್ಪಡಿಸಿ ಜೋರಾಗಿ ಗರ್ಜಿಸಲು ಮತ್ಸ್ಯರು ಪಲಾಯನಗೈದರು.

07020023a ಮತ್ಸ್ಯಾಂ ಜಿತ್ವಾಜಯಚ್ಚೇದೀನ್ಕಾರೂಷಾನ್ಕೇಕಯಾನಪಿ|

07020023c ಪಾಂಚಾಲಾನ್ಸೃಂಜಯಾನ್ಪಾಂಡೂನ್ಭಾರದ್ವಾಜಃ ಪುನಃ ಪುನಃ||

ಭಾರದ್ವಾಜನು ಪುನಃ ಪುನಃ ಮತ್ಸ್ಯರನ್ನು ಚೇದಿಗಳನ್ನು, ಕಾರೂಷರನ್ನು, ಕೇಕಯರನ್ನೂ, ಸೃಂಜಯರನ್ನೂ ಮತ್ತು ಪಾಂಡವರನ್ನೂ ಸೋಲಿಸಿದನು.

07020024a ತಂ ದಹಂತಮನೀಕಾನಿ ಕ್ರುದ್ಧಮಗ್ನಿಂ ಯಥಾ ವನಂ|

07020024c ದೃಷ್ಟ್ವಾ ರುಕ್ಮರಥಂ ಕ್ರುದ್ಧಂ ಸಮಕಂಪಂತ ಸೃಂಜಯಾಃ||

ಕ್ರೋಧಿತಗೊಂಡ ಅಗ್ನಿಯು ವನವನ್ನು ಹೇಗೋ ಹಾಗೆ ಸೇನೆಗಳನ್ನು ಸುಡುತ್ತಿದ್ದ ಆ ಕ್ರುದ್ಧ ರುಕ್ಮರಥನನ್ನು ನೋಡಿ ಸೃಂಜಯರು ನಡುಗಿದರು.

07020025a ಉತ್ತಮಂ ಹ್ಯಾದಧಾನಸ್ಯ ಧನುರಸ್ಯಾಶುಕಾರಿಣಃ|

07020025c ಜ್ಯಾಘೋಷೋ ನಿಘ್ನತೋಽಮಿತ್ರಾನ್ದಿಕ್ಷು ಸರ್ವಾಸು ಶುಶ್ರುವೇ||

ಧನುಸ್ಸನ್ನು ಎಳೆದು ಶತ್ರುಗಳನ್ನು ಸಂಹರಿಸುತ್ತಿದ್ದ ಮತ್ತು ಉತ್ತಮವಾಗಿ ಹೋರಾಡುತ್ತಿದ್ದ ಅವನ ಟೇಂಕಾರವು ಎಲ್ಲ ದಿಕ್ಕುಗಳಲ್ಲಿಯೂ ಕೇಳಿಬರುತ್ತಿತ್ತು.

07020026a ನಾಗಾನಶ್ವಾನ್ಪದಾತೀಂಶ್ಚ ರಥಿನೋ ಗಜಸಾದಿನಃ|

07020026c ರೌದ್ರಾ ಹಸ್ತವತಾ ಮುಕ್ತಾಃ ಪ್ರಮಥ್ನಂತಿ ಸ್ಮ ಸಾಯಕಾಃ||

ಕೈಚಳಕವಿದ್ದ ಅವನಿಂದ ಪ್ರಯೋಗಿಸಲ್ಪಟ್ಟ ರೌದ್ರವಾದ ಸಾಯಕಗಳು ಆನೆಗಳನ್ನೂ, ಕುದುರೆಗಳನ್ನೂ, ಪದತಿಗಳನ್ನೂ, ರಥಿಗಳನ್ನೂ, ಗಜಸಾದಿನರನ್ನೂ ಸಂಹರಿಸಿದವು.

07020027a ನಾನದ್ಯಮಾನಃ ಪರ್ಜನ್ಯೋ ಮಿಶ್ರವಾತೋ ಹಿಮಾತ್ಯಯೇ|

07020027c ಅಶ್ಮವರ್ಷಮಿವಾವರ್ಷತ್ಪರೇಷಾಂ ಭಯಮಾದಧತ್||

ಬೇಸಗೆಯಲ್ಲಿ ಗಾಳಿ-ಗುಡುಗಿನೊಂದಿಗೆ ಮೋಡಗಳು ಆನೆಗಲ್ಲಿನ ಮಳೆಗರೆಯುವಂತೆ ಬಾಣಗಳ ಮಳೆಸುರಿಸಿ ಶತ್ರುಗಳಲ್ಲಿ ಭಯವನ್ನುಂಟುಮಾಡಿದನು.

07020028a ಸರ್ವಾ ದಿಶಃ ಸಮಚರತ್ಸೈನ್ಯಂ ವಿಕ್ಷೋಭಯನ್ನಿವ|

07020028c ಬಲೀ ಶೂರೋ ಮಹೇಷ್ವಾಸೋ ಮಿತ್ರಾಣಾಮಭಯಂಕರಃ||

ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ಸೇನೆಗಳನ್ನು ಕ್ಷೋಭೆಗೊಳಿಸುತ್ತಾ ಆ ಬಲಶಾಲೀ ಶೂರ ಮಹೇಷ್ವಾಸನು ಶತ್ರುಗಳಲ್ಲಿ ಭಯವನ್ನುಂಟುಮಾಡಿದನು.

07020029a ತಸ್ಯ ವಿದ್ಯುದಿವಾಭ್ರೇಷು ಚಾಪಂ ಹೇಮಪರಿಷ್ಕೃತಂ|

07020029c ದಿಕ್ಷು ಸರ್ವಾಸ್ವಪಶ್ಯಾಮ ದ್ರೋಣಸ್ಯಾಮಿತತೇಜಸಃ||

ಆ ಅಮಿತತೇಜಸ್ವಿ ದ್ರೋಣನ ಬಂಗಾರದಿಂದ ಪರಿಷ್ಕೃತವಾದ ಚಾಪದಿಂದ ಮೋಡಗಳಿಂದ ಮಿಂಚು ಮೂಡುವಂತೆ ಎಲ್ಲ ದಿಕ್ಕುಗಳಲ್ಲಿಯೂ ಮಿಂಚುಗಳನ್ನು ನಾವು ನೋಡಿದೆವು.

07020030a ದ್ರೋಣಸ್ತು ಪಾಂಡವಾನೀಕೇ ಚಕಾರ ಕದನಂ ಮಹತ್|

07020030c ಯಥಾ ದೈತ್ಯಗಣೇ ವಿಷ್ಣುಃ ಸುರಾಸುರನಮಸ್ಕೃತಃ||

ಸುರಾಸುರನಮಸ್ಕೃತ ವಿಷ್ಣುವು ದೈತ್ಯಗಣದೊಂದಿಗೆ ಹೇಗೋ ಹಾಗೆ ದ್ರೋಣನು ಪಾಂಡವರ ಸೇನೆಯೊಂದಿಗೆ ಮಹಾ ಕದನವನ್ನಾಡಿದನು.

07020031a ಸ ಶೂರಃ ಸತ್ಯವಾಕ್ಪ್ರಾಜ್ಞೋ ಬಲವಾನ್ಸತ್ಯವಿಕ್ರಮಃ|

07020031c ಮಹಾನುಭಾವಃ ಕಾಲಾಂತೇ ರೌದ್ರೀಂ ಭೀರುವಿಭೀಷಣಾಂ||

07020032a ಕವಚೋರ್ಮಿಧ್ವಜಾವರ್ತಾಂ ಮರ್ತ್ಯಕೂಲಾಪಹಾರಿಣೀಂ|

07020032c ಗಜವಾಜಿಮಹಾಗ್ರಾಹಾಮಸಿಮೀನಾಂ ದುರಾಸದಾಂ||

07020033a ವೀರಾಸ್ಥಿಶರ್ಕರಾಂ ರೌದ್ರಾಂ ಭೇರೀಮುರಜಕಚ್ಚಪಾಂ|

07020033c ಚರ್ಮವರ್ಮಪ್ಲವಾಂ ಘೋರಾಂ ಕೇಶಶೈವಲಶಾಡ್ವಲಾಂ||

07020034a ಶರೌಘಿಣೀಂ ಧನುಹ್ಸ್ರೋತಾಂ ಬಾಹುಪನ್ನಗಸಂಕುಲಾಂ|

07020034c ರಣಭೂಮಿವಹಾಂ ಘೋರಾಂ ಕುರುಸೃಂಜಯವಾಹಿನೀಂ||

07020034e ಮನುಷ್ಯಶೀರ್ಷಪಾಷಾಣಾಂ ಶಕ್ತಿಮೀನಾಂ ಗದೋಡುಪಾಂ|

07020035a ಉಷ್ಣೀಷಫೇನವಸನಾಂ ನಿಷ್ಕೀರ್ಣಾಂತ್ರಸರೀಸೃಪಾಂ||

07020035c ವೀರಾಪಹಾರಿಣೀಮುಗ್ರಾಂ ಮಾಂಸಶೋಣಿತಕರ್ದಮಾಂ|

07020036a ಹಸ್ತಿಗ್ರಾಹಾಂ ಕೇತುವೃಕ್ಷಾಂ ಕ್ಷತ್ರಿಯಾಣಾಂ ನಿಮಜ್ಜನೀಂ||

07020036c ಕ್ರೂರಾಂ ಶರೀರಸಂಘಾಟಾಂ ಸಾದಿನಕ್ರಾಂ ದುರತ್ಯಯಾಂ|

07020036e ದ್ರೋಣಃ ಪ್ರಾವರ್ತಯತ್ತತ್ರ ನದೀಮಂತಕಗಾಮಿನೀಂ||

07020037a ಕ್ರವ್ಯಾದಗಣಸಂಘುಷ್ಟಾಂ ಶ್ವಶೃಗಾಲಗಣಾಯುತಾಂ|

07020037c ನಿಷೇವಿತಾಂ ಮಹಾರೌದ್ರೈಃ ಪಿಶಿತಾಶೈಃ ಸಮಂತತಃ||

ಆ ಶೂರ, ಸತ್ಯವಾದಿ, ಪ್ರಾಜ್ಞ, ಬಲವಾನ್, ಸತ್ಯವಿಕ್ರಮ, ಮಹಾನುಭಾವ ದ್ರೋಣನು ಕಾಲಾಂತದಂತೆ ರೌದ್ರವಾದ, ಹೇಡಿಗಳಿಗೆ ಭಯವನ್ನುಂಟುಮಾಡುವ, ಕವಚಗಳೇ ಅಲೆಗಳಾಗಿರುವ, ಧ್ವಜಗಳೇ ಮಡುವುಗಳಾಗಿರುವ, ಮನುಷ್ಯರ ಶರೀರಗಳ ರಾಶಿಗಳನ್ನೇ ಕೊಂಡೊಯ್ಯುತ್ತಿದ್ದ, ಆನೆ-ಕುದುರೆಗಳೇ ಮೊಸಳೆಗಳಾಗಿದ್ದ, ಖಡ್ಗಗಳೇ ಮೀನುಗಳಂತಿದ್ದ, ವೀರಯೋಧರ ಎಲುಬುಗಳೇ ಕಲ್ಲಿನ ಹರಳುಗಳಂತಿರುವ, ಭೇರೀ-ಮೃದಂಗಗಳೇ ಆಮೆಗಳಾಗಿರುವ, ಕವಚಗಳೇ ಮಹಾಪ್ರವಾಹದಂತಿರುವ, ತಲೆಕೂದಲುಗಳೇ ಪಾಚಿಹುಲ್ಲುಗಳಾಗಿರುವ, ಬಾಣಗಳೇ ಅಲೆಗಳಾಗಿರುವ, ಬಿಲ್ಲುಗಳೇ ಪ್ರವಾಹವಾಗಿರುವ, ಬಾಹುಗಳೇ ಸರ್ಪಸಂಕುಲಗಳಂತಿರುವ, ರಣಭೂಮಿಯಲ್ಲಿ ಹರಿಯುವ ಕುರು-ಸೃಂಜಯರ ದುರಾಸದ ರೌದ್ರ ಘೋರ ವಾಹಿನಿಯನ್ನು, ಮನುಷ್ಯರ ತಲೆಬುರುಡೆಗಳೇ ಕಲ್ಲುಬಂಡೆಗಳಾಗಿದ್ದ, ಶಕ್ತಿಗಳೇ ಮೀನಾಗಿದ್ದ, ಗದೆಗಳೇ ತೆಪ್ಪಗಳಾಗಿದ್ದ, ತಲೆಯ ಮುಂಡಾಸುಗಳು ಮತ್ತು ಉಟ್ಟ ವಸ್ತ್ರಗಳೇ ನೊರೆಗಳಾಗಿರುವ, ಹೊರಬಿದ್ದ ಕರುಳುಗಳೇ ಸರೀಸೃಪಗಳಾಗಿದ್ದ, ವೀರರನ್ನು ಅಪಹರಿಸಿಕೊಂಡು ಹೋಗುತ್ತಿರುವ, ಉಗ್ರವಾದ, ಮಾಂಸ-ರಕ್ತಗಳೇ ಕೆಸರಾಗಿದ್ದ, ಆನೆಗಳೇ ಮೊಸಳೆಗಳಾಗಿದ್ದ, ಧ್ವಜಗಳೇ ವೃಕ್ಷಗಳಾಗಿದ್ದ, ಕ್ಷತ್ರಿಯನ್ನು ಮುಳುಗಿಸುತ್ತಿದ್ದ, ಕ್ರೂರವಾದ, ಶರೀರಗಳೇ ಒಡ್ಡಾಗಿದ್ದ, ಅಶ್ವಾರೋಹಿ ಮತ್ತು ಮಾವುತರು ತಿಮಿಂಗಿಲಗಳಾಗಿದ್ದ, ಮಾಂಸಾಹಾರೀ ಪ್ರಾಣಿಗಳ ಗುಂಪುಗಳಿಂದ ಕೂಡಿದ್ದ, ಮಹಾರೌದ್ರರಾದ ರಾಕ್ಷಸರು ಮತ್ತು ಪಿಶಾಚಿಗಳನ್ನು ಎಲ್ಲಕಡೆ ಹೊಂದಿದ್ದ, ಯಮನಲ್ಲಿಗೆ ಹರಿಯುತ್ತಿದ್ದ ನದಿಯನ್ನು ಅಲ್ಲಿ ಹರಿಸಿದನು.

07020038a ತಂ ದಹಂತಮನೀಕಾನಿ ರಥೋದಾರಂ ಕೃತಾಂತವತ್|

07020038c ಸರ್ವತೋಽಭ್ಯದ್ರವನ್ದ್ರೋಣಂ ಕುಂತೀಪುತ್ರಪುರೋಗಮಾಃ||

ಯಮನಂತೆ ಸೇನೆಗಳನ್ನು ದಹಿಸುತ್ತಿರುವ ಆ ರಥೋದಾರ ದ್ರೋಣನನ್ನು ಕುಂತೀಪುತ್ರನ ನಾಯಕತ್ವದಲ್ಲಿ ಎಲ್ಲಕಡೆಗಳಿಂದ ಆಕ್ರಮಣಿಸಿದರು.

07020039a ತಾಂಸ್ತು ಶೂರಾನ್ಮಹೇಷ್ವಾಸಾಂಸ್ತಾವಕಾಭ್ಯುದ್ಯತಾಯುಧಾಃ|

07020039c ರಾಜಾನೋ ರಾಜಪುತ್ರಾಶ್ಚ ಸಮಂತಾತ್ಪರ್ಯವಾರಯನ್||

ಆ ಶೂರ ಮಹೇಷ್ವಾಸನನ್ನು ನಿನ್ನವರ ಕಡೆಯ ರಾಜರು ರಾಜಪುತ್ರರು ಆಯುಧಗಳನ್ನು ಎತ್ತಿ ಹಿಡಿದು ಎಲ್ಲ ಕಡೆಗಳಿಂದ ಸುತ್ತುವರೆದರು.

07020040a ತತೋ ದ್ರೋಣಃ ಸತ್ಯಸಂಧಃ ಪ್ರಭಿನ್ನ ಇವ ಕುಂಜರಃ|

07020040c ಅಭ್ಯತೀತ್ಯ ರಥಾನೀಕಂ ದೃಢಸೇನಮಪಾತಯತ್||

ಆಗ ಸತ್ಯಸಂಧ ದ್ರೋಣನು ಕುಂಭಸ್ಥಳವು ಒಡೆದುಹೋಗಿರುವ ಆನೆಯಂತೆ ರಥಸೇನೆಯನ್ನು ದಾಟಿ ದೃಢಸೇನನನ್ನು ಕೆಡವಿದನು.

07020041a ತತೋ ರಾಜಾನಮಾಸಾದ್ಯ ಪ್ರಹರಂತಮಭೀತವತ್|

07020041c ಅವಿಧ್ಯನ್ನವಭಿಃ ಕ್ಷೇಮಂ ಸ ಹತಃ ಪ್ರಾಪತದ್ರಥಾತ್||

ಆಗ ಭಯವಿಲ್ಲದವನಂತೆ ಪ್ರಹರಿಸುತ್ತಿದ್ದ ರಾಜಾ ಕ್ಷೇಮನನ್ನು ತಲುಪಿ, ಅವನನ್ನು ಒಂಭತ್ತು ಬಾಣಗಳಿಂದ ಹೊಡೆದು ರಥದಿಂದ ಕೆಡವಿದನು.

07020042a ಸ ಮಧ್ಯಂ ಪ್ರಾಪ್ಯ ಸೈನ್ಯಾನಾಂ ಸರ್ವಾಃ ಪ್ರವಿಚರನ್ದಿಶಃ|

07020042c ತ್ರಾತಾ ಹ್ಯಭವದನ್ಯೇಷಾಂ ನ ತ್ರಾತವ್ಯಃ ಕಥಂ ಚನ||

ಅವನು ಸೈನ್ಯಗಳ ಮಧ್ಯೆ ಸೇರಿ, ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ಇತರ ಎಲ್ಲರನ್ನೂ ರಕ್ಷಿಸುತ್ತಿದ್ದನು. ಅವನಿಗೆ ಯಾರೂ ರಕ್ಷಣೆಯಿರಲಿಲ್ಲ.

07020043a ಶಿಖಂಡಿನಂ ದ್ವಾದಶಭಿರ್ವಿಂಶತ್ಯಾ ಚೋತ್ತಮೌಜಸಂ|

07020043c ವಸುದಾನಂ ಚ ಭಲ್ಲೇನ ಪ್ರೇಷಯದ್ಯಮಸಾದನಂ||

ಶಿಖಂಡಿಯನ್ನು ಹನ್ನೆರಡು ಬಾಣಗಳಿಂದ, ಉತ್ತಮೌಜಸನನ್ನು ಇಪ್ಪತ್ತರಿಂದ ಹೊಡೆದು, ಭಲ್ಲದಿಂದ ವಸುದಾನನನ್ನು ಯಮಸಾದನಕ್ಕೆ ಕಳುಹಿಸಿದನು.

07020044a ಅಶೀತ್ಯಾ ಕ್ಷತ್ರವರ್ಮಾಣಂ ಷಡ್ವಿಂಶತ್ಯಾ ಸುದಕ್ಷಿಣಂ|

07020044c ಕ್ಷತ್ರದೇವಂ ತು ಭಲ್ಲೇನ ರಥನೀಡಾದಪಾಹರತ್||

ಎಂಭತ್ತರಿಂದ ಕ್ಷತ್ರವರ್ಮನನ್ನು ಮತ್ತು ಅರವತ್ತು-ಇಪ್ಪತ್ತರಿಂದ ಸುದಕ್ಷಿಣನನ್ನು ಹೊಡೆದು ಭಲ್ಲದಿಂದ ಕ್ಷತ್ರದೇವನನ್ನು ರಥನೀಡದಿಂದ ಉರುಳಿಸಿದನು.

07020045a ಯುಧಾಮನ್ಯುಂ ಚತುಃಷಷ್ಟ್ಯಾ ತ್ರಿಂಶತಾ ಚೈವ ಸಾತ್ಯಕಿಂ|

07020045c ವಿದ್ಧ್ವಾ ರುಕ್ಮರಥಸ್ತೂರ್ಣಂ ಯುಧಿಷ್ಠಿರಮುಪಾದ್ರವತ್||

ಯುಧಾಮನ್ಯುವನ್ನು ಅರವತ್ನಾಲ್ಕು ಮತ್ತು ಸಾತ್ಯಕಿಯನ್ನು ಮೂವತ್ತು ಬಾಣಗಳಿಂದ ಹೊಡೆದು ರುಕ್ಮರಥನು ಕೂಡಲೇ ಯುಧಿಷ್ಠಿರನ ಮೇಲೆ ಎರಗಿದನು.

07020046a ತತೋ ಯುಧಿಷ್ಠಿರಃ ಕ್ಷಿಪ್ರಂ ಕಿತವೋ ರಾಜಸತ್ತಮಃ|

07020046c ಅಪಾಯಾಜ್ಜವನೈರಶ್ವೈಃ ಪಾಂಚಾಲ್ಯೋ ದ್ರೋಣಮಭ್ಯಯಾತ್||

ಆಗ ಜೂಜುಗಾರ, ರಾಜಸತ್ತಮ ಯುಧಿಷ್ಠಿರನು ಕ್ಷಿಪ್ರವಾಗಿ ವೇಗವುಳ್ಳ ಕುದುರೆಗಳ ಮೇಲೆ ಹೊರಟುಹೋದನು. ಆಗ ಪಾಂಚಾಲ್ಯನು ದ್ರೋಣನನ್ನು ಆಕ್ರಮಣಿಸಿದನು.

07020047a ತಂ ದ್ರೋಣಃ ಸಧನುಷ್ಕಂ ತು ಸಾಶ್ವಯಂತಾರಮಕ್ಷಿಣೋತ್|

07020047c ಸ ಹತಃ ಪ್ರಾಪತದ್ಭೂಮೌ ರಥಾಜ್ಜ್ಯೋತಿರಿವಾಂಬರಾತ್||

ದ್ರೋಣನು ಧನುಸ್ಸು-ಕುದುರೆಗಳೊಂದಿಗೆ ಅವನನ್ನು ಸಂಹರಿಸಿದನು. ಹತನಾಗಿ ಅವನು ಆಕಾಶದಿಂದ ಭೂಮಿಯ ಮೇಲೆ ಜ್ಯೋತಿಯೊಂದು ಬೀಳುವಂತೆ ರಥದಿಂದ ಕೆಳಗೆ ಬಿದ್ದನು.

07020048a ತಸ್ಮಿನ್ ಹತೇ ರಾಜಪುತ್ರೇ ಪಾಂಚಾಲಾನಾಂ ಯಶಸ್ಕರೇ|

07020048c ಹತ ದ್ರೋಣಂ ಹತ ದ್ರೋಣಮಿತ್ಯಾಸೀತ್ತುಮುಲಂ ಮಹತ್||

ಪಾಂಚಾಲರ ಯಶಸ್ಕರ ಆ ರಾಜಪುತ್ರನು ಹತನಾಗಲು “ದ್ರೋಣನನ್ನು ಕೊಲ್ಲಿ! ದ್ರೋಣನನ್ನು ಕೊಲ್ಲಿ!” ಎಂದು ಮಹಾ ತುಮುಲ ಶಬ್ಧವುಂಟಾಯಿತು.

07020049a ತಾಂಸ್ತಥಾ ಭೃಶಸಂಕ್ರುದ್ಧಾನ್ಪಾಂಚಾಲಾನ್ಮತ್ಸ್ಯಕೇಕಯಾನ್|

07020049c ಸೃಂಜಯಾನ್ಪಾಂಡವಾಂಶ್ಚೈವ ದ್ರೋಣೋ ವ್ಯಕ್ಷೋಭಯದ್ಬಲೀ||

ಆಗ ಬಲಶಾಲೀ ದ್ರೋಣನು ತುಂಬಾ ಸಂಕ್ರುದ್ಧರಾದ ಪಾಂಚಾಲರನ್ನು, ಮತ್ಸ್ಯರನ್ನು, ಕೇಕಯರನ್ನು, ಸೃಂಜಯರನ್ನು ಮತ್ತು ಪಾಂಡವರನ್ನು ಸದೆಬಡಿದನು.

07020050a ಸಾತ್ಯಕಿಂ ಚೇಕಿತಾನಂ ಚ ಧೃಷ್ಟದ್ಯುಮ್ನಶಿಖಂಡಿನೌ|

07020050c ವಾರ್ಧಕ್ಷೇಮಿಂ ಚಿತ್ರಸೇನಂ ಸೇನಾಬಿಂದುಂ ಸುವರ್ಚಸಂ||

07020051a ಏತಾಂಶ್ಚಾನ್ಯಾಂಶ್ಚ ಸುಬಹೂನ್ನಾನಾಜನಪದೇಶ್ವರಾನ್|

07020051c ಸರ್ವಾನ್ದ್ರೋಣೋಽಜಯದ್ಯುದ್ಧೇ ಕುರುಭಿಃ ಪರಿವಾರಿತಃ||

ಕುರುಗಳಿಂದ ಪರಿವಾರಿತನಾಗಿದ್ದ ದ್ರೋಣನು ಸಾತ್ಯಕಿ, ಚೇಕಿತಾನ, ಧೃಷ್ಟದ್ಯುಮ್ನ, ವಾರ್ಧಕ್ಷೇಮಿ, ಚಿತ್ರಸೇನ, ಸೇನಾಬಿಂದು, ಸುವರ್ಚಸ ಇವರುಗಳನ್ನು ಮತ್ತು ಇನ್ನೂ ಇತರ ಅನೇಕ ನಾನಾ ಜನಪದೇಶ್ವರರೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿದನು.

07020052a ತಾವಕಾಸ್ತು ಮಹಾರಾಜ ಜಯಂ ಲಬ್ಧ್ವಾ ಮಹಾಹವೇ|

07020052c ಪಾಂಡವೇಯಾನ್ರಣೇ ಜಘ್ನುರ್ದ್ರವಮಾಣಾನ್ಸಮಂತತಃ||

ಮಹಾರಾಜ! ಆ ಮುಹಾಯುದ್ಧದಲ್ಲಿ ಜಯವನ್ನು ಪಡೆದ ನಿನ್ನವರು ಎಲ್ಲಕಡೆ ಓಡಿ ಹೋಗುತ್ತಿರುವ ಪಾಂಡವೇಯರನ್ನು ರಣದಲ್ಲಿ ಸಂಹರಿಸಿದರು.

07020053a ತೇ ದಾನವಾ ಇವೇಂದ್ರೇಣ ವಧ್ಯಮಾನಾ ಮಹಾತ್ಮನಾ|

07020053c ಪಾಂಚಾಲಾಃ ಕೇಕಯಾ ಮತ್ಸ್ಯಾಃ ಸಮಕಂಪಂತ ಭಾರತ||

ಭಾರತ! ಇಂದ್ರನಿಂದ ದಾನವರಂತೆ ವಧಿಸಲ್ಪಡಿತ್ತಿರುವ ಮಹಾತ್ಮ ಪಾಂಚಲರು, ಕೇಕಯರು ಮತ್ತು ಮತ್ಸ್ಯರು ನಡುಗಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ದ್ರೋಣಯುದ್ಧೇ ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ದ್ರೋಣಯುದ್ಧ ಎನ್ನುವ ಇಪ್ಪತ್ತನೇ ಅಧ್ಯಾಯವು.

Image result for indian motifs against white background

Comments are closed.