Drona Parva: Chapter 19

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೧೯

ಅರ್ಜುನನು ಸಂಶಪ್ತಕರೊಡನೆ ಯುದ್ಧಕ್ಕೆ ಹೋಗಲು, ದ್ರೋಣನು ವ್ಯೂಹವನ್ನು ರಚಿಸಿಕೊಂಡು ಯುಧಿಷ್ಠಿರನನ್ನು ಆಕ್ರಮಣಿಸಿದ್ದುದು (೧-೨೦). ಸಂಕುಲ ಯುದ್ಧ (೨೧-೬೪).

07019001 ಸಂಜಯ ಉವಾಚ|

07019001a ಪರಿಣಾಮ್ಯ ನಿಶಾಂ ತಾಂ ತು ಭಾರದ್ವಾಜೋ ಮಹಾರಥಃ|

07019001c ಬಹೂಕ್ತ್ವಾ ಚ ತತೋ ರಾಜನ್ರಾಜಾನಂ ಚ ಸುಯೋಧನಂ||

ಸಂಜಯನು ಹೇಳಿದನು: “ರಾಜನ್! ಮಹಾರಥ ಭಾರದ್ವಾಜನು ರಾಜಾ ಸುಯೋಧನನೊಡನೆ ಅನೇಕ ಮಾತುಗಳನ್ನಾಡಿ ರಾತ್ರಿಯನ್ನು ಕಳೆದನು.

07019002a ವಿಧಾಯ ಯೋಗಂ ಪಾರ್ಥೇನ ಸಂಶಪ್ತಕಗಣೈಃ ಸಹ|

07019002c ನಿಷ್ಕ್ರಾಂತೇ ಚ ರಣಾತ್ಪಾರ್ಥೇ ಸಂಶಪ್ತಕವಧಂ ಪ್ರತಿ||

ಸಂಶಪ್ತಕಗಣಗಳೊಂದಿಗೆ ಪಾರ್ಥನು ಯುದ್ಧಮಾಡಬೇಕೆಂದು ತಂತ್ರಹೂಡಿ, ಪಾರ್ಥನನ್ನು ರಣದಿಂದ ಸಂಶಪ್ತಕರ ವಧೆಗೆ ಕಳುಹಿಸಲಾಯಿತು.

07019003a ವ್ಯೂಢಾನೀಕಸ್ತತೋ ದ್ರೋಣಃ ಪಾಂಡವಾನಾಂ ಮಹಾಚಮೂಂ|

07019003c ಅಭ್ಯಯಾದ್ಭರತಶ್ರೇಷ್ಠ ಧರ್ಮರಾಜಜಿಘೃಕ್ಷಯಾ||

ಭರತಶ್ರೇಷ್ಠ! ಆಗ ದ್ರೋಣನು ಧರ್ಮರಾಜನನ್ನು ಸೆರೆಹಿಡಿಯುವ ಆಸೆಯಿಂದ ವ್ಯೂಹವನ್ನು ರಚಿಸಿಕೊಂಡು ಪಾಂಡವರ ಮಹಾಸೇನೆಯ ಮೇಲೆ ಆಕ್ರಮಣ ಮಾಡಿದನು.

07019004a ವ್ಯೂಹಂ ದೃಷ್ಟ್ವಾ ಸುಪರ್ಣಂ ತು ಭಾರದ್ವಾಜಕೃತಂ ತದಾ|

07019004c ವ್ಯೂಹೇನ ಮಂಡಲಾರ್ಧೇನ ಪ್ರತ್ಯವ್ಯೂಹದ್ಯುಧಿಷ್ಠಿರಃ||

ಭಾರದ್ವಾಜನು ರಚಿಸಿದ ಗರುಡವ್ಯೂಹವನ್ನು ನೋಡಿ ಯುಧಿಷ್ಠಿರನು ಅದಕ್ಕೆ ಪ್ರತಿಯಾಗಿ ಮಂಡಲಾರ್ಧವ್ಯೂಹವನ್ನು ರಚಿಸಿದನು.

07019005a ಮುಖಮಾಸೀತ್ಸುಪರ್ಣಸ್ಯ ಭಾರದ್ವಾಜೋ ಮಹಾರಥಃ|

07019005c ಶಿರೋ ದುರ್ಯೋಧನೋ ರಾಜಾ ಸೋದರ್ಯೈಃ ಸಾನುಗೈಃ ಸಹ||

ಗರುಡ ವ್ಯೂಹದಲ್ಲಿ ಮುಖದಲ್ಲಿ ಮಹಾರಥ ಭಾರದ್ವಾಜನಿದ್ದನು. ಶಿರೋಭಾಗದಲ್ಲಿ ಸೋದರರು ಮತ್ತು ಅನುಯಾಯಿಗಳೊಂದಿಗೆ ರಾಜಾ ದುರ್ಯೋಧನನಿದ್ದನು.

07019006a ಚಕ್ಷುಷೀ ಕೃತವರ್ಮಾ ಚ ಗೌತಮಶ್ಚಾಸ್ಯತಾಂ ವರಃ|

07019006c ಭೂತವರ್ಮಾ ಕ್ಷೇಮಶರ್ಮಾ ಕರಕರ್ಷಶ್ಚ ವೀರ್ಯವಾನ್||

07019007a ಕಲಿಂಗಾಃ ಸಿಂಹಲಾಃ ಪ್ರಾಚ್ಯಾಃ ಶೂರಾಭೀರಾ ದಶೇರಕಾಃ|

07019007c ಶಕಾ ಯವನಕಾಂಬೋಜಾಸ್ತಥಾ ಹಂಸಪದಾಶ್ಚ ಯೇ||

07019008a ಗ್ರೀವಾಯಾಂ ಶೂರಸೇನಾಶ್ಚ ದರದಾ ಮದ್ರಕೇಕಯಾಃ|

07019008c ಗಜಾಶ್ವರಥಪತ್ತ್ಯೌಘಾಸ್ತಸ್ಥುಃ ಶತಸಹಸ್ರಶಃ||

ಕೃತವರ್ಮ ಮತ್ತು ಬಿಲ್ಲುಗಾರರಲ್ಲಿ ಶ್ರೇಷ್ಠ ಗೌತಮರು ಕಣ್ಣುಗಳಾಗಿದ್ದರು. ಭೂತವರ್ಮ, ಕ್ಷೇಮಶರ್ಮ, ವೀರ್ಯವಾನ್ ಕರಕರ್ಷ, ಕಲಿಂಗರು, ಸಿಂಹಲರು, ಪೂರ್ವದೇಶದವರು, ಶೂರ ಅಭೀರರು, ದಶೇರಕರು, ಶಕ, ಯವನ, ಕಾಂಬೋಜರು, ಹಂಸಪದದವರು, ಶೂರಸೇನರು, ದರದರು, ಮದ್ರರು ಮತ್ತು ಕೇಕಯರು ನೂರಾರು ಸಹಸ್ರಾರು ಆನೆ-ಕುದುರೆ-ರಥ-ಪದಾತಿ ಸಂಕುಲಗಳೊಡನೆ ಕುತ್ತಿಗೆಯ ಭಾಗದಲ್ಲಿದ್ದರು.

07019009a ಭೂರಿಶ್ರವಾಃ ಶಲಃ ಶಲ್ಯಃ ಸೋಮದತ್ತಶ್ಚ ಬಾಹ್ಲಿಕಃ|

07019009c ಅಕ್ಷೌಹಿಣ್ಯಾ ವೃತಾ ವೀರಾ ದಕ್ಷಿಣಂ ಪಕ್ಷಮಾಶ್ರಿತಾಃ||

ಭೂರಿಶ್ರವ, ಶಲ, ಶಲ್ಯ, ಸೋಮದತ್ತ ಮತ್ತು ಬಾಹ್ಲಿಕರು ವೀರ ಅಕ್ಷೌಹಿಣಿಗಳಿಂದ ಆವೃತರಾಗಿ ಬಲಭಾಗವನ್ನು ಆಶ್ರಯಿಸಿದ್ದರು.

07019010a ವಿಂದಾನುವಿಂದಾವಾವಂತ್ಯೌ ಕಾಂಬೋಜಶ್ಚ ಸುದಕ್ಷಿಣಃ|

07019010c ವಾಮಂ ಪಕ್ಷಂ ಸಮಾಶ್ರಿತ್ಯ ದ್ರೋಣಪುತ್ರಾಗ್ರಗಾಃ ಸ್ಥಿತಾಃ||

ಅವಂತಿಯ ವಿಂದಾನುವಿಂದರು ಮತ್ತು ಕಾಂಬೋಜದ ಸುದಕ್ಷಿಣರು ದ್ರೋಣಪುತ್ರನ ನೇತೃತ್ವದಲ್ಲಿ ಎಡಭಾಗವನ್ನು ಆಶ್ರಯಿಸಿ ನಿಂತಿದ್ದರು.

07019011a ಪೃಷ್ಠೇ ಕಲಿಂಗಾಃ ಸಾಂಬಷ್ಠಾ ಮಾಗಧಾಃ ಪೌಂಡ್ರಮದ್ರಕಾಃ|

07019011c ಗಾಂಧಾರಾಃ ಶಕುನಿಪ್ರಾಗ್ಯಾಃ ಪಾರ್ವತೀಯಾ ವಸಾತಯಃ||

ಹಿಂಬಾಗದಲ್ಲಿ ಕಲಿಂಗರು, ಅಂಬಷ್ಠರು, ಮಾಗಧರು, ಪೌಂಡ್ರರು, ಮದ್ರಕರು, ಶಕುನಿಯೊಡನೆ ಗಾಂಧಾರರು, ಪೂರ್ವದೇಶದವರು, ಮತ್ತು ಪರ್ವತದವರು ನೆಲೆಸಿದ್ದರು.

07019012a ಪುಚ್ಚೇ ವೈಕರ್ತನಃ ಕರ್ಣಃ ಸಪುತ್ರಜ್ಞಾತಿಬಾಂಧವಃ|

07019012c ಮಹತ್ಯಾ ಸೇನಯಾ ತಸ್ಥೌ ನಾನಾಧ್ವಜಸಮುತ್ಥಯಾ||

ಪುಚ್ಛದ ಭಾಗದಲ್ಲಿ ವೈಕರ್ತನ ಕರ್ಣನು ನಾನಾ ಧ್ವಜಸಮೂಹಗಳಿಂದ ಕೂಡಿದ ಮಹಾಸೇನೆಯೊಂದಿಗೆ ಮಕ್ಕಳು ಮತ್ತು ಜ್ಞಾತಿಬಾಂಧವರೊಂದಿಗೆ ನಿಂತಿದ್ದನು.

07019013a ಜಯದ್ರಥೋ ಭೀಮರಥಃ ಸಾಮ್ಯಾತ್ರಿಕಸಭೋ ಜಯಃ|

07019013c ಭೂಮಿಂಜಯೋ ವೃಷಕ್ರಾಥೋ ನೈಷಧಶ್ಚ ಮಹಾಬಲಃ||

07019014a ವೃತಾ ಬಲೇನ ಮಹತಾ ಬ್ರಹ್ಮಲೋಕಪುರಸ್ಕೃತಾಃ|

07019014c ವ್ಯೂಹಸ್ಯೋಪರಿ ತೇ ರಾಜನ್ ಸ್ಥಿತಾ ಯುದ್ಧವಿಶಾರದಾಃ||

ರಾಜನ್! ಬ್ರಹ್ಮಲೋಕಪುರಸ್ಕೃತ ಯುದ್ಧವಿಶಾರದ ಜಯದ್ರಥ, ಭೀಮರಥ, ಸಂಯಾತಿ, ಋಷಭ, ಜಯ, ಭೂಮಿಂಜಯ, ವೃಷಕ್ರಾಥ, ಮಹಾಬಲ ನೈಷಧರು ಮಹಾ ಬಲದಿಂದೊಡಗೂಡಿ ವ್ಯೂಹದ ವಕ್ಷಸ್ಥಳದ ಪ್ರದೇಶದಲ್ಲಿದ್ದರು.

07019015a ದ್ರೋಣೇನ ವಿಹಿತೋ ವ್ಯೂಹಃ ಪದಾತ್ಯಶ್ವರಥದ್ವಿಪೈಃ|

07019015c ವಾತೋದ್ಧೂತಾರ್ಣವಾಕಾರಃ ಪ್ರವೃತ್ತ ಇವ ಲಕ್ಷ್ಯತೇ||

ದ್ರೋಣನಿಂದ ರಚಿತವಾಗಿದ್ದ ಆ ಗಜಾಶ್ವರಥಪದಾತಿಗಳ ವ್ಯೂಹವು ಭಿರುಗಾಳಿಗೆ ಸಿಲುಕಿ ಅಲ್ಲೋಲಕಲ್ಲೋಲವಾಗುತ್ತಿರುವ ಸಮುದ್ರದಂತೆ ಕಾಣುತ್ತಿತ್ತು.

07019016a ತಸ್ಯ ಪಕ್ಷಪ್ರಪಕ್ಷೇಭ್ಯೋ ನಿಷ್ಪತಂತಿ ಯುಯುತ್ಸವಃ|

07019016c ಸವಿದ್ಯುತ್ಸ್ತನಿತಾ ಮೇಘಾಃ ಸರ್ವದಿಗ್ಭ್ಯ ಇವೋಷ್ಣಗೇ||

ವರ್ಷಾಕಾಲದಲ್ಲಿ ಮಿಂಚಿನಿಂದ ಕೂಡಿ ಗರ್ಜಿಸುವ ಮೋಡಗಳು ಎಲ್ಲ ದಿಕ್ಕುಗಳಿಂದಲೂ ಬಂದು ಸೇರುವಂತೆ ಆ ವ್ಯೂಹದ ಪಕ್ಷಪಕ್ಷಗಳಿಂದ ಯುದ್ಧೋತ್ಸಾಹೀ ಯೋಧರು ರಣರಂಗಕ್ಕೆ ಧುಮುಕುತಿದ್ದರು.

07019017a ತಸ್ಯ ಪ್ರಾಗ್ಜ್ಯೋತಿಷೋ ಮಧ್ಯೇ ವಿಧಿವತ್ಕಲ್ಪಿತಂ ಗಜಂ|

07019017c ಆಸ್ಥಿತಃ ಶುಶುಭೇ ರಾಜನ್ನಂಶುಮಾನುದಯೇ ಯಥಾ||

ರಾಜನ್! ಅದರ ಮಧ್ಯದಲ್ಲಿ ವಿಧಿವತ್ತಾಗಿ ಸಜ್ಜುಗೊಳಿಸಿದ ಆನೆಯ ಮೇಲೆ ಪ್ರಗ್ಜ್ಯೋತಿಷಾಧಿಪತಿ ಭಗದತ್ತನು ಉದಯಿಸುತ್ತಿರುವ ಸೂರ್ಯನಂತೆ ಶೋಭಿಸಿದನು.

07019018a ಮಾಲ್ಯದಾಮವತಾ ರಾಜಾ ಶ್ವೇತಚ್ಚತ್ರೇಣ ಧಾರ್ಯತಾ|

07019018c ಕೃತ್ತಿಕಾಯೋಗಯುಕ್ತೇನ ಪೌರ್ಣಮಾಸ್ಯಾಮಿವೇಂದುನಾ||

ರಾಜಾ ಭಗದತ್ತನ ತಲೆಯ ಮೇಲೆ ಸುವರ್ಣದ ದಾರದಿಂದ ಕಟ್ಟಲ್ಪಟ್ಟ ಮಾಲೆಗಳಿಂದ ಸಮಲಂಕೃತವಾಗಿದ್ದ ಶ್ವೇತಛತ್ರವಿದ್ದಿತು. ಅದರಿಂದ ಕೃತ್ತಿಕಾನಕ್ಷತ್ರಯುಕ್ತವಾದ ಹುಣ್ಣಿಮೆಯ ಚಂದ್ರನಂತೆ ಅವನು ಪ್ರಕಾಶಿಸುತ್ತಿದ್ದನು.

07019019a ನೀಲಾಂಜನಚಯಪ್ರಖ್ಯೋ ಮದಾಂಧೋ ದ್ವಿರದೋ ಬಭೌ|

07019019c ಅಭಿವೃಷ್ಟೋ ಮಹಾಮೇಘೈರ್ಯಥಾ ಸ್ಯಾತ್ಪರ್ವತೋ ಮಹಾನ್||

ಮದದಿಂದ ಕೊಬ್ಬಿಹೋಗಿದ್ದ ಕಾಡಿಗೆಯ ರಾಶಿಯಂತೆ ಕಾಣುತ್ತಿದ್ದ ಅವನ ಆನೆಯು ಮಹಾಮೇಘಗಳು ಸುರಿಸಿದ ಮಳೆಯಿಂದ ತೋಯ್ದ ಮಹಾ ಪರ್ವತದಂತೆ ಹೊಳೆಯುತ್ತಿತ್ತು.

07019020a ನಾನಾನೃಪತಿಭಿರ್ವೀರೈರ್ವಿವಿಧಾಯುಧಭೂಷಣೈಃ|

07019020c ಸಮನ್ವಿತಃ ಪಾರ್ವತೀಯೈಃ ಶಕ್ರೋ ದೇವಗಣೈರಿವ||

ದೇವಗಣಗಳಿಂದ ಶಕ್ರನು ಹೇಗೋ ಹಾಗೆ ಅವನು ನಾನಾ ನೃಪತಿ ವೀರರಿಂದ ಮತ್ತು ವಿವಿಧ ಆಯುಧ ಭೂಷಣಗಳಿಂದ ಕೂಡಿದ ಪರ್ವತೇಯರೊಂದಿಗೆ ಆವೃತನಾಗಿದ್ದನು.

07019021a ತತೋ ಯುಧಿಷ್ಠಿರಃ ಪ್ರೇಕ್ಷ್ಯ ವ್ಯೂಹಂ ತಮತಿಮಾನುಷಂ|

07019021c ಅಜಯ್ಯಮರಿಭಿಃ ಸಂಖ್ಯೇ ಪಾರ್ಷತಂ ವಾಕ್ಯಮಬ್ರವೀತ್||

ಶತ್ರುಗಳಿಗೆ ಅಜೇಯವಾದ ಆ ಅತಿಮಾನುಷ ವ್ಯೂಹವನ್ನು ನೋಡಿ ಯುಧಿಷ್ಠಿರನು ರಣದಲ್ಲಿ ಪಾರ್ಷತನಿಗೆ ಹೇಳಿದನು:

07019022a ಬ್ರಾಹ್ಮಣಸ್ಯ ವಶಂ ನಾಹಮಿಯಾಮದ್ಯ ಯಥಾ ಪ್ರಭೋ|

07019022c ಪಾರಾವತಸವರ್ಣಾಶ್ವ ತಥಾ ನೀತಿರ್ವಿಧೀಯತಾಂ||

“ಪಾರಿವಾಳದ ಬಣ್ಣದ ಕುದುರೆಗಳ ಒಡೆಯನೇ! ಇಂದು ನಾನು ಬ್ರಾಹ್ಮಣನ ವಶದಲ್ಲಿ ಬಾರದಹಾಗೆ ಯುದ್ಧನೀತಿಯನ್ನು ರೂಪಿಸು!”

07019023 ಧೃಷ್ಟದ್ಯುಮ್ನ ಉವಾಚ|

07019023a ದ್ರೋಣಸ್ಯ ಯತಮಾನಸ್ಯ ವಶಂ ನೈಷ್ಯಸಿ ಸುವ್ರತ|

07019023c ಅಹಮಾವಾರಯಿಷ್ಯಾಮಿ ದ್ರೋಣಮದ್ಯ ಸಹಾನುಗಂ||

ಧೃಷ್ಟದ್ಯುಮ್ನನು ಹೇಳಿದನು: “ಸುವ್ರತ! ದ್ರೋಣನು ಪ್ರಯತ್ನಿಸಿದರೂ ನೀನು ಅವನ ವಶನಾಗುವುದಿಲ್ಲ. ಇಂದು ನಾನು ದ್ರೋಣನನ್ನು, ಅವನ ಅನುಯಾಯಿಗಳೊಂದಿಗೆ ತಡೆಯುತ್ತೇನೆ.

07019024a ಮಯಿ ಜೀವತಿ ಕೌರವ್ಯ ನೋದ್ವೇಗಂ ಕರ್ತುಮರ್ಹಸಿ|

07019024c ನ ಹಿ ಶಕ್ತೋ ರಣೇ ದ್ರೋಣೋ ವಿಜೇತುಂ ಮಾಂ ಕಥಂ ಚನ||

ಕೌರವ್ಯ! ನಾನು ಜೀವಿಸಿರುವಾಗ ನೀನು ಉದ್ವೇಗಗೊಳ್ಳಬಾರದು. ರಣದಲ್ಲಿ ಎಂದೂ ದ್ರೋಣನು ನನ್ನನ್ನು ಜಯಿಸಲು ಶಕ್ಯನಾಗುವುದಿಲ್ಲ.””

07019025 ಸಂಜಯ ಉವಾಚ|

07019025a ಏವಮುಕ್ತ್ವಾ ಕಿರನ್ಬಾಣಾನ್ದ್ರುಪದಸ್ಯ ಸುತೋ ಬಲೀ|

07019025c ಪಾರಾವತಸವರ್ಣಾಶ್ವಃ ಸ್ವಯಂ ದ್ರೋಣಮುಪಾದ್ರವತ್||

ಸಂಜಯನು ಹೇಳಿದನು: “ಹೀಗೆ ಹೇಳಿ ಪಾರಿವಾಳದಬಣ್ಣದ ಕುದುರೆಗಳನ್ನುಳ್ಳ ಬಲಶಾಲೀ ದ್ರುಪದನ ಮಗನು ಸ್ವಯಂ ತಾನೇ ಬಾಣಗಳನ್ನು ಎರಚಿ ದ್ರೋಣನನ್ನು ಆಕ್ರಮಣಿಸಿದನು.

07019026a ಅನಿಷ್ಟದರ್ಶನಂ ದೃಷ್ಟ್ವಾ ಧೃಷ್ಟದ್ಯುಮ್ನಮವಸ್ಥಿತಂ|

07019026c ಕ್ಷಣೇನೈವಾಭವದ್ದ್ರೋಣೋ ನಾತಿಹೃಷ್ಟಮನಾ ಇವ||

ಅನಿಷ್ಟದರ್ಶನ ಧೃಷ್ಟದ್ಯುಮ್ನನು ಎದುರಾದುದನ್ನು ನೋಡಿ ಒಂದು ಕ್ಷಣ ದ್ರೋಣನು ಅಸಂತುಷ್ಟನಾದನು.

07019027a ತಂ ತು ಸಂಪ್ರೇಕ್ಷ್ಯ ಪುತ್ರಸ್ತೇ ದುರ್ಮುಖಃ ಶತ್ರುಕರ್ಶನಃ|

07019027c ಪ್ರಿಯಂ ಚಿಕೀರ್ಷನ್ದ್ರೋಣಸ್ಯ ಧೃಷ್ಟದ್ಯುಮ್ನಮವಾರಯತ್||

ಅದನ್ನು ನೋಡಿ ನಿನ್ನ ಮಗ ಶತ್ರುಕರ್ಶನ ದುರ್ಮುಖನು ದ್ರೋಣನಿಗೆ ಪ್ರಿಯವಾದುದನ್ನು ಮಾಡಬಯಸಿ ಧೃಷ್ಟದ್ಯುಮ್ನನನ್ನು ತಡೆದನು.

07019028a ಸ ಸಂಪ್ರಹಾರಸ್ತುಮುಲಃ ಸಮರೂಪ ಇವಾಭವತ್|

07019028c ಪಾರ್ಷತಸ್ಯ ಚ ಶೂರಸ್ಯ ದುರ್ಮುಖಸ್ಯ ಚ ಭಾರತ||

ಭಾರತ! ಅವನು ಪ್ರಹರಿಸಲು ಪಾರ್ಷತ ಮತ್ತು ಶೂರ ದುರ್ಮುಖರ ನಡುವೆ ತುಮುಲ ಯುದ್ಧವು ನಡೆಯಿತು.

07019029a ಪಾರ್ಷತಃ ಶರಜಾಲೇನ ಕ್ಷಿಪ್ರಂ ಪ್ರಚ್ಚಾದ್ಯ ದುರ್ಮುಖಂ|

07019029c ಭಾರದ್ವಾಜಂ ಶರೌಘೇಣ ಮಹತಾ ಸಮವಾರಯತ್||

ಪಾರ್ಷತನು ಕ್ಷಿಪ್ರವಾಗಿ ಶರಜಾಲದಿಂದ ದುರ್ಮುಖನನ್ನು ಮುಚ್ಚಿ ಭಾರದ್ವಾಜನನ್ನು ಮಹಾ ಶರಗಳ ಮಹಾಜಾಲದಿಂದ ತಡೆದನು.

07019030a ದ್ರೋಣಮಾವಾರಿತಂ ದೃಷ್ಟ್ವಾ ಭೃಶಾಯಸ್ತಸ್ತವಾತ್ಮಜಃ|

07019030c ನಾನಾಲಿಂಗೈಃ ಶರವ್ರಾತೈಃ ಪಾರ್ಷತಂ ಸಮಮೋಹಯತ್||

ದ್ರೋಣನನ್ನು ತಡೆದುದನ್ನು ನೋಡಿ ನಿನ್ನ ಮಗನು ನಾನಾ ತರಹದ ಶರಸಮೂಹಗಳಿಂದ ಪಾರ್ಷತನನ್ನು ಸಂಮೋಹಗೊಳಿಸಿದನು.

07019031a ತಯೋರ್ವಿಷಕ್ತಯೋಃ ಸಂಖ್ಯೇ ಪಾಂಚಾಲ್ಯಕುರುಮುಖ್ಯಯೋಃ|

07019031c ದ್ರೋಣೋ ಯೌಧಿಷ್ಠಿರಂ ಸೈನ್ಯಂ ಬಹುಧಾ ವ್ಯಧಮಚ್ಚರೈಃ||

ಆ ಪಾಂಚಾಲ್ಯ-ಕುರುಮುಖ್ಯರಿಬ್ಬರೂ ಪರಸ್ಪರರಲ್ಲಿ ಯುದ್ಧಮಾಡುತ್ತಿರಲು ದ್ರೋಣನು ಯುಧಿಷ್ಠಿರನ ಸೇನೆಯನ್ನು ಅನೇಕ ಶರಗಳಿಂದ ಮರ್ದಿಸಿದನು.

07019032a ಅನಿಲೇನ ಯಥಾಭ್ರಾಣಿ ವಿಚ್ಚಿನ್ನಾನಿ ಸಮಂತತಃ|

07019032c ತಥಾ ಪಾರ್ಥಸ್ಯ ಸೈನ್ಯಾನಿ ವಿಚ್ಚಿನ್ನಾನಿ ಕ್ವ ಚಿತ್ಕ್ವ ಚಿತ್||

ಗಾಳಿಯಿಂದ ಹೇಗೆ ಮೋಡಗಳು ಎಲ್ಲಕಡೆ ಚದುರಿ ಹೋಗುವವೋ ಹಾಗೆ ಪಾರ್ಥನ ಸೇನೆಗಳು ಛಿನ್ನ-ಭಿನ್ನವಾಗಿ ಎಲ್ಲೆಲ್ಲಿಯೋ ಓಡಿಹೋಯಿತು.

07019033a ಮುಹೂರ್ತಮಿವ ತದ್ಯುದ್ಧಮಾಸೀನ್ಮಧುರದರ್ಶನಂ|

07019033c ತತ ಉನ್ಮತ್ತವದ್ರಾಜನ್ನಿರ್ಮರ್ಯಾದಮವರ್ತತ||

ರಾಜನ್! ಮುಹೂರ್ತಕಾಲ ಆ ಯುದ್ಧವು ನೋಡಲು ಮಧುರವಾಗಿತ್ತು. ಅನಂತರ ಅವರು ಉನ್ಮತ್ತರಾದವರಂತೆ ನಿರ್ಮಾರ್ಯಾದೆಯಿಂದ ವರ್ತಿಸಲು ಪ್ರಾರಂಭಿಸಿದರು.

07019034a ನೈವ ಸ್ವೇ ನ ಪರೇ ರಾಜನ್ನಜ್ಞಾಯಂತ ಪರಸ್ಪರಂ|

07019034c ಅನುಮಾನೇನ ಸಂಜ್ಞಾಭಿರ್ಯುದ್ಧಂ ತತ್ಸಮವರ್ತತ||

ರಾಜನ್! ತಮ್ಮವರನ್ನು ಮತ್ತು ಶತ್ರುಗಳನ್ನು ಪರಸ್ಪರ ಗುರಿತಿಸಲಾರದಾದರು. ಅನುಮಾನದಿಂದ ಸಂಜ್ಞೆಗಳನ್ನು ನೋಡಿ ಯುದ್ಧ ಮಾಡುತ್ತಿದ್ದರು.

07019035a ಚೂಡಾಮಣಿಷು ನಿಷ್ಕೇಷು ಭೂಷಣೇಷ್ವಸಿಚರ್ಮಸು|

07019035c ತೇಷಾಮಾದಿತ್ಯವರ್ಣಾಭಾ ಮರೀಚ್ಯಃ ಪ್ರಚಕಾಶಿರೇ||

ಅವರ ಚೂಡಾಮಣಿಗಳ ಮೇಲೆ, ಸರಗಳ ಮೇಲೆ ಇತರ ಭೂಷಣಗಳ ಮೇಲೆ ಮತ್ತು ಕವಚಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು ಪ್ರಕಾಶಿಸುತ್ತಿದ್ದವು.

07019036a ತತ್ಪ್ರಕೀರ್ಣಪತಾಕಾನಾಂ ರಥವಾರಣವಾಜಿನಾಂ|

07019036c ಬಲಾಕಾಶಬಲಾಭ್ರಾಭಂ ದದೃಶೇ ರೂಪಮಾಹವೇ||

ಹಾರಾಡುತ್ತಿದ್ದ ಪತಾಕೆಗಳು, ರಥ, ಆನೆ, ಕುದುರೆಗಳು ಆಕಾಶದಲ್ಲಿ ತೇಲುವ ಮೋಡಗಳಂತೆ ಮತ್ತು ಬೆಳ್ಳಕ್ಕಿಗಳಂತೆ ಕಂಡವು.

07019037a ನರಾನೇವ ನರಾ ಜಘ್ನುರುದಗ್ರಾಶ್ಚ ಹಯಾ ಹಯಾನ್|

07019037c ರಥಾಂಶ್ಚ ರಥಿನೋ ಜಘ್ನುರ್ವಾರಣಾ ವರವಾರಣಾನ್||

ನರರನ್ನು ನರರು ಸಂಹರಿಸಿದರು. ಕುದುರೆಗಳು ಕುದುರೆಗಳನ್ನು ಕೊಂದವು. ರಥಿಗಳನ್ನು ರಥಿಗಳು ಮತ್ತು ಶ್ರೇಷ್ಠ ಆನೆಗಳನ್ನು ಆನೆಗಳು ಕೊಂದವು.

07019038a ಸಮುಚ್ಚ್ರಿತಪತಾಕಾನಾಂ ಗಜಾನಾಂ ಪರಮದ್ವಿಪೈಃ|

07019038c ಕ್ಷಣೇನ ತುಮುಲೋ ಘೋರಃ ಸಂಗ್ರಾಮಃ ಸಮವರ್ತತ||

ಕ್ಷಣದಲ್ಲಿಯೇ ಹಾರಾಡುತ್ತಿರುವ ಪತಾಕೆಗಳ, ಆನೆಗಳೊಂದಿಗೆ ಆನೆಗಳ ಘೋರ ತುಮುಲ ಸಂಗ್ರಾಮವು ನಡೆಯಿತು.

07019039a ತೇಷಾಂ ಸಂಸಕ್ತಗಾತ್ರಾಣಾಂ ಕರ್ಷತಾಮಿತರೇತರಂ|

07019039c ದಂತಸಂಘಾತಸಂಘರ್ಷಾತ್ಸಧೂಮೋಽಗ್ನಿರಜಾಯತ||

ಆನೆಗಳ ಗಾಯಗೊಂಡ ದೇಹಗಳ, ಒಬ್ಬರು ಇನ್ನೊಬ್ಬರನ್ನು ಕೂಗಿ ಕರೆಯುವ ಯುದ್ಧದಲ್ಲಿ ದಂತ ಸಂಘಾತ ಸಂಘರ್ಷಗಳಿಂದ ಹೊಗೆಯೊಂದಿಗೆ ಅಗ್ನಿಯು ಹುಟ್ಟಿಕೊಂಡಿತು.

07019040a ವಿಪ್ರಕೀರ್ಣಪತಾಕಾಸ್ತೇ ವಿಷಾಣಜನಿತಾಗ್ನಯಃ|

07019040c ಬಭೂವುಃ ಖಂ ಸಮಾಸಾದ್ಯ ಸವಿದ್ಯುತ ಇವಾಂಬುದಾಃ||

ತುಂಡಾದ ಪತಾಕೆಗಳಿಂದ ಕೂಡಿದ, ದಂತಗಳಲ್ಲಿ ಅಗ್ನಿಯು ಉರಿಯುತ್ತಿರಲು ಆ ಆನೆಗಳು ಆಕಾಶದಲ್ಲಿ ಮಿಂಚಿನಿಂದ ಕೂಡಿದ ಮೋಡಗಳಂತೆ ಕಂಡವು.

07019041a ವಿಕ್ಷರದ್ಭಿರ್ನದದ್ಭಿಶ್ಚ ನಿಪತದ್ಭಿಶ್ಚ ವಾರಣೈಃ|

07019041c ಸಂಬಭೂವ ಮಹೀ ಕೀರ್ಣಾ ಮೇಘೈರ್ದ್ಯೌರಿವ ಶಾರದೀ||

ಹರಡಿಕೊಂಡು ಬಿದ್ದಿದ್ದ ಮತ್ತು ಕೂಗುತ್ತಿದ್ದ ಆನೆಗಳಿಂದ ರಣಭೂಮಿಯು ಶರದೃತುವಿನಲ್ಲಿ ಚದುರಿದ ಮೋಡಗಳಿಂದ ಕೂಡಿದ ಆಕಾಶದಂತೆ ತೋರಿತು

07019042a ತೇಷಾಮಾಹನ್ಯಮಾನಾನಾಂ ಬಾಣತೋಮರವೃಷ್ಟಿಭಿಃ|

07019042c ವಾರಣಾನಾಂ ರವೋ ಜಜ್ಞೇ ಮೇಘಾನಾಮಿವ ಸಂಪ್ಲವೇ||

ಬಾಣ-ತೋಮರ-ಋಷ್ಟಿಗಳಿಂದ ವಧಿಸಲ್ಪಡುತ್ತಿದ್ದ ಆ ಆನೆಗಳ ಕೂಗು ಮಳೆಗಾಲದಲ್ಲಿ ಮೋಡಗಳ ಗುಡುಗಿನಂತೆ ಕೇಳುತ್ತಿತ್ತು.

07019043a ತೋಮರಾಭಿಹತಾಃ ಕೇ ಚಿದ್ಬಾಣೈಶ್ಚ ಪರಮದ್ವಿಪಾಃ|

07019043c ವಿತ್ರೇಸುಃ ಸರ್ವಭೂತಾನಾಂ ಶಬ್ದಮೇವಾಪರೇಽವ್ರಜನ್||

ಕೆಲವು ಆನೆಗಳು ತೋಮರಗಳಿಂದ ಇನ್ನು ಕೆಲವು ಬಾಣಗಳಿಂದ ಪೆಟ್ಟು ತಿಂದು ಸರ್ವಭೂತಗಳಿಗೂ ಭಯವನ್ನುಂಟುಮಾಡುವಂತೆ ಕೂಗುತ್ತಾ ರಣದಿಂದ ಬೇರೆಕಡೆ ಓಡಿಹೋಗುತ್ತಿದ್ದವು.

07019044a ವಿಷಾಣಾಭಿಹತಾಶ್ಚಾಪಿ ಕೇ ಚಿತ್ತತ್ರ ಗಜಾ ಗಜೈಃ|

07019044c ಚಕ್ರುರಾರ್ತಸ್ವರಂ ಘೋರಮುತ್ಪಾತಜಲದಾ ಇವ||

ಕೆಲವು ಆನೆಗಳು ಅಲ್ಲಿ ಇತರ ಆನೆಗಳ ದಂತಗಳಿಂದ ಪೆಟ್ಟುತಿಂದು ಆರ್ತಸ್ವರದಲ್ಲಿ ಪ್ರಳಯಕಾಲದ ಉರುಳುವ ಘೋರ ಮೋಡಗಳಂತೆ ಕೂಗಿಕೊಳ್ಳುತ್ತಿದ್ದವು.

07019045a ಪ್ರತೀಪಂ ಹ್ರಿಯಮಾಣಾಶ್ಚ ವಾರಣಾ ವರವಾರಣೈಃ|

07019045c ಉನ್ಮಥ್ಯ ಪುನರಾಜಹ್ರುಃ ಪ್ರೇರಿತಾಃ ಪರಮಾಂಕುಶೈಃ||

ಇತರ ಶ್ರೇಷ್ಠ ಆನೆಗಳಿಂದ ಹೊಡೆತತಿಂದು ನಾಚಿ ಕೆಲವು ಆನೆಗಳು ಓಡಿಹೋಗುತ್ತಿದ್ದವು ಅಂಕುಶಗಳಿಂದ ತಿವಿಯಲ್ಪಟ್ಟು ಪ್ರೇರಿತರಾಗಿ ಉನ್ಮತ್ಥರಾಗಿ ಪುನಃ ಓಡಿ ಬರುತ್ತಿದ್ದವು.

07019046a ಮಹಾಮಾತ್ರಾ ಮಹಾಮಾತ್ರೈಸ್ತಾಡಿತಾಃ ಶರತೋಮರೈಃ|

07019046c ಗಜೇಭ್ಯಃ ಪೃಥಿವೀಂ ಜಗ್ಮುರ್ಮುಕ್ತಪ್ರಹರಣಾಂಕುಶಾಃ||

ಮಹಾಕಾಯದ ಆನೆಗಳು ಮಹಾಕಾಯಗಳಿಂದ ಮತ್ತು ಬಾಣ-ತೋಮರಗಳಿಂದ ಹೊಡೆಯಲ್ಪಟ್ಟು ಅಂಕುಶಗಳ ಪ್ರಹರಣದಿಂದ ಮುಕ್ತಗೊಂಡು ಭೂಮಿಯ ಮೇಲೆ ಬಿದ್ದವು.

07019047a ನಿರ್ಮನುಷ್ಯಾಶ್ಚ ಮಾತಂಗಾ ವಿನದಂತಸ್ತತಸ್ತತಃ|

07019047c ಚಿನ್ನಾಭ್ರಾಣೀವ ಸಂಪೇತುಃ ಸಂಪ್ರವಿಶ್ಯ ಪರಸ್ಪರಂ||

ಮಾವುತರನ್ನು ಕಳೆದುಕೊಂಡ ಆನೆಗಳು ಕಿರಚುತ್ತಾ ಅಲ್ಲಲ್ಲಿ ಚದುರಿದ ಮೋಡಗಳಂತೆ ಓಡುತ್ತಿರಲು ಪರಸ್ಪರರನ್ನು ಡಿಕ್ಕಿ ಹೊಡೆದು ಉರುಳಿಬಿದ್ದವು.

07019048a ಹತಾನ್ಪರಿವಹಂತಶ್ಚ ಯಂತ್ರಿತಾಃ ಪರಮಾಯುಧೈಃ|

07019048c ದಿಶೋ ಜಗ್ಮುರ್ಮಹಾನಾಗಾಃ ಕೇ ಚಿದೇಕಚರಾ ಇವ||

ಕೆಲವು ಮಹಾ ಆನೆಗಳು ಸತ್ತವರನ್ನು ಹೊತ್ತು, ಪರಮಾಯುಧಗಳನ್ನು ಎಳೆಯುತ್ತಾ ಒಂಟಿಯಾಗಿ ದಿಕ್ಕಾಪಾಲಾಗಿ ಓಡಾಡುತ್ತಿದ್ದವು.

07019049a ತಾಡಿತಾಸ್ತಾಡ್ಯಮಾನಾಶ್ಚ ತೋಮರರ್ಷ್ಟಿಪರಶ್ವಧೈಃ|

07019049c ಪೇತುರಾರ್ತಸ್ವರಂ ಕೃತ್ವಾ ತದಾ ವಿಶಸನೇ ಗಜಾಃ||

ಕೆಲವು ಆನೆಗಳು ತೋಮರ-ಋಷ್ಟಿ-ಪರಶಾಯುಧಗಳಿಂದ ಹೊಡೆಯುತ್ತಾ ಅಥವಾ ಹೊಡೆಯಲ್ಪಟ್ಟು ಆರ್ತಸ್ವರದಲ್ಲಿ ಕೂಗುತ್ತಾ ನೆಲಕ್ಕುರುಳಿದವು.

07019050a ತೇಷಾಂ ಶೈಲೋಪಮೈಃ ಕಾಯೈರ್ನಿಪತದ್ಭಿಃ ಸಮಂತತಃ|

07019050c ಆಹತಾ ಸಹಸಾ ಭೂಮಿಶ್ಚಕಂಪೇ ಚ ನನಾದ ಚ||

ಆ ಪರ್ವತಗಳಂತಹ ದೇಹಗಳನ್ನುಳ್ಳ ಆನೆಗಳು ಎಲ್ಲ ಕಡೆ ಹೊಡೆದು ದೊಪ್ಪೆಂದು ಬೀಳುತ್ತಿರಲು ಭೂಮಿಯು ಕಂಪಿಸಿತು ಮತ್ತು ಕೂಗಿತು.

07019051a ಸಾದಿತೈಃ ಸಗಜಾರೋಹೈಃ ಸಪತಾಕೈಃ ಸಮಂತತಃ|

07019051c ಮಾತಂಗೈಃ ಶುಶುಭೇ ಭೂಮಿರ್ವಿಕೀರ್ಣೈರಿವ ಪರ್ವತೈಃ||

ಎಲ್ಲೆಡೆಯೂ ಸಜ್ಜಾಗಿದ್ದ, ಮಾವುತರಿಂದ ಕೂಡಿದ್ದ, ಪತಾಕೆಗಳನ್ನುಳ್ಳ ಆನೆಗಳಿಂದ ಕೂಡಿದ ಭೂಮಿಯು ಚೆಲ್ಲಿಹೋದ ಪರ್ವತಗಳಂತೆ ಶೋಭಿಸಿತು.

07019052a ಗಜಸ್ಥಾಶ್ಚ ಮಹಾಮಾತ್ರಾ ನಿರ್ಭಿನ್ನಹೃದಯಾ ರಣೇ|

07019052c ರಥಿಭಿಃ ಪಾತಿತಾ ಭಲ್ಲೈರ್ವಿಕೀರ್ಣಾಂಕುಶತೋಮರಾಃ||

ಮಹಾಕಾಯದ ಆನೆಗಳ ಆರೋಹಿಗಳು ರಣದಲ್ಲಿ ರಥಿಗಳ ಭಲ್ಲ-ಅಂಕುಶ-ತೋಮರಗಳಿಂದ ಗಾಯಗೊಂಡು ಮತ್ತು ಹೃದಯಗಳು ಒಡೆದು ಬಿದ್ದಿದ್ದರು.

07019053a ಕ್ರೌಂಚವದ್ವಿನದಂತೋಽನ್ಯೇ ನಾರಾಚಾಭಿಹತಾ ಗಜಾಃ|

07019053c ಪರಾನ್ಸ್ವಾಂಶ್ಚಾಪಿ ಮೃದ್ನಂತಃ ಪರಿಪೇತುರ್ದಿಶೋ ದಶ||

ಅನ್ಯ ಗಜಗಳು ನಾರಾಚಗಳಿಂದ ಹೊಡೆಯಲ್ಪಟ್ಟು ಕ್ರೌಂಚಗಳಂತೆ ಕಿರಚುತ್ತಾ ಶತ್ರುಗಳನ್ನೂ ತಮ್ಮವರನ್ನೂ ತುಳಿಯುತ್ತಾ ದಿಕ್ಕುದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದವು.

07019054a ಗಜಾಶ್ವರಥಸಂಘಾನಾಂ ಶರೀರೌಘಸಮಾವೃತಾ|

07019054c ಬಭೂವ ಪೃಥಿವೀ ರಾಜನ್ಮಾಂಸಶೋಣಿತಕರ್ದಮಾ||

ರಾಜನ್! ಗಜ-ಅಶ್ವ-ರಥಗಳ ಗುಂಪುಗಳಿಂದ ಮತ್ತು ಶರೀರಗಳ ರಾಶಿಗಳಿಂದ ಹಾಗೂ ಮಾಂಸ-ರಕ್ತ-ಕರ್ದಮಗಳಿಂದ ರಣಭೂಮಿಯು ತುಂಬಿಹೋಯಿತು.

07019055a ಪ್ರಮಥ್ಯ ಚ ವಿಷಾಣಾಗ್ರೈಃ ಸಮುತ್ಕ್ಷಿಪ್ಯ ಚ ವಾರಣೈಃ|

07019055c ಸಚಕ್ರಾಶ್ಚ ವಿಚಕ್ರಾಶ್ಚ ರಥೈರೇವ ಮಹಾರಥಾಃ||

07019056a ರಥಾಶ್ಚ ರಥಿಭಿರ್ಹೀನಾ ನಿರ್ಮನುಷ್ಯಾಶ್ಚ ವಾಜಿನಃ|

07019056c ಹತಾರೋಹಾಶ್ಚ ಮಾತಂಗಾ ದಿಶೋ ಜಗ್ಮುಃ ಶರಾತುರಾಃ||

ಆನೆಗಳ ದಂತಗಳ ಅಗ್ರಭಾಗದಿಂದ ಸೀಳಿಹೋದ, ಎತ್ತಿ ಹಾಕಲ್ಪಟ್ಟ ಚಕ್ರವಿದ್ದ ಮತ್ತು ಚಕ್ರವಿಲ್ಲದ ರಥಗಳಲ್ಲಿಯೇ ಇದ್ದ ಮಹಾರಥರು, ರಥಿಗಳಿಲ್ಲದ ರಥಗಳೂ, ಮನುಷ್ಯರು ಏರಿರದ ಕುದುರೆಗಳು, ಆರೋಹಿಗಳನ್ನು ಕಳೆದುಕೊಂಡ ಆನೆಗಳು ಶರಗಳಿಂದ ಪೀಡಿತವಾಗಿ ದಿಕ್ಕಾಪಾಲಾಗಿ ಹೋದವು.

07019057a ಜಘಾನಾತ್ರ ಪಿತಾ ಪುತ್ರಂ ಪುತ್ರಶ್ಚ ಪಿತರಂ ತಥಾ|

07019057c ಇತ್ಯಾಸೀತ್ತುಮುಲಂ ಯುದ್ಧಂ ನ ಪ್ರಜ್ಞಾಯತ ಕಿಂ ಚನ||

ಅಲ್ಲಿ ಮಕ್ಕಳು ತಂದೆಯನ್ನೂ, ತಂದೆಯು ಮಗನನ್ನೂ ಕೊಂದರು. ಹೀಗೆ ಆ ತುಮುಲ ಯುದ್ಧದಲ್ಲಿ ಏನೂ ತಿಳಿಯುತ್ತಿರಲಿಲ್ಲ.

07019058a ಆ ಗುಲ್ಫೇಭ್ಯೋಽವಸೀದಂತ ನರಾಃ ಶೋಣಿತಕರ್ದಮೇ|

07019058c ದೀಪ್ಯಮಾನೈಃ ಪರಿಕ್ಷಿಪ್ತಾ ದಾವೈರಿವ ಮಹಾದ್ರುಮಾಃ||

ರಕ್ತಮಾಂಸಗಳ ಕೆಸರಿನಲ್ಲಿ ಹುಗಿದು ಹೋಗಿದ್ದ ನರರು ಕಾಡ್ಗಿಚ್ಚಿಗೆ ಸಿಲುಕಿ ಉರಿಯುತ್ತಿದ್ದ ಮಹಾವೃಕ್ಷಗಳಂತೆ ತೋರುತ್ತಿದ್ದರು.

07019059a ಶೋಣಿತೈಃ ಸಿಚ್ಯಮಾನಾನಿ ವಸ್ತ್ರಾಣಿ ಕವಚಾನಿ ಚ|

07019059c ಚತ್ರಾಣಿ ಚ ಪತಾಕಾಶ್ಚ ಸರ್ವಂ ರಕ್ತಮದೃಶ್ಯತ||

ವಸ್ತ್ರಗಳು, ಕವಚಗಳು, ಚತ್ರ-ಪತಾಕಗಳು ರಕ್ತದಿಂದ ತೋಯ್ದುಹೋಗಿರಲು ಎಲ್ಲವೂ ಕೆಂಪಾಗಿ ಕಾಣುತ್ತಿತ್ತು.

07019060a ಹಯೌಘಾಶ್ಚ ರಥೌಘಾಶ್ಚ ನರೌಘಾಶ್ಚ ನಿಪಾತಿತಾಃ|

07019060c ಸಂವೃತ್ತಾಃ ಪುನರಾವೃತ್ತಾ ಬಹುಧಾ ರಥನೇಮಿಭಿಃ||

ಎಲ್ಲಕಡೆ ಬಿದ್ದಿರುವ ಕುದುರೆಗಳ ರಾಶಿ, ರಥಗಳ ರಾಶಿ, ಮತ್ತು ಪದಾತಿಗಳ ರಾಶಿಗಳು ಒಡುತ್ತಿದ್ದ ರಥಚಕ್ರಗಳಿಂದ ಪುನಃ ಪುನಃ ತುಂಡಾಗುತ್ತಿದ್ದವು.

07019061a ಸ ಗಜೌಘಮಹಾವೇಗಃ ಪರಾಸುನರಶೈವಲಃ|

07019061c ರಥೌಘತುಮುಲಾವರ್ತಃ ಪ್ರಬಭೌ ಸೈನ್ಯಸಾಗರಃ||

ಆನೆಗಳೇ ಪ್ರವಾಹವಾಗಿದ್ದ, ಪದಾತಿಗಳ ಶರೀರಗಳೇ ತೇಲಿಹೋಗುತ್ತಿರುವ ಹುಲ್ಲುಕಡ್ಡಿಗಳಂತಿರುವ, ಮತ್ತು ರಥಗಳ ರಾಶಿಗಳೇ ಮಡುವನ್ನಾಗುಳ್ಳ ಆ ಸೈನ್ಯಸಾಗರವು ಘೋರರೂಪವನ್ನು ತಾಳಿತು.

07019062a ತಂ ವಾಹನಮಹಾನೌಭಿರ್ಯೋಧಾ ಜಯಧನೈಷಿಣಃ|

07019062c ಅವಗಾಹ್ಯಾವಮಜ್ಜಂತೋ ನೈವ ಮೋಹಂ ಪ್ರಚಕ್ರಿರೇ||

ವಾಹನಗಳೆಂಬ ಮಹಾನೌಕೆಗಳನ್ನು ಹೊಂದಿದ್ದ ಜಯಧನವನ್ನು ಬಯಸಿದ್ದ ಯೋಧರು ಮುಳುಗಿಹೋಗದೇ ದಾಟಿ ಶತ್ರುಗಳನ್ನು ಮೋಡಿಮಾಡುತ್ತಿದ್ದರು.

07019063a ಶರವರ್ಷಾಭಿವೃಷ್ಟೇಷು ಯೋಧೇಷ್ವಜಿತಲಕ್ಷ್ಮಸು|

07019063c ನ ಹಿ ಸ್ವಚಿತ್ತತಾಂ ಲೇಭೇ ಕಶ್ಚಿದಾಹತಲಕ್ಷಣಃ||

ಶರವರ್ಷಗಳಿಂದ ತಮ್ಮ ಗೆಲುವಿನ ಲಕ್ಷಣಗಳು ಮುಚ್ಚಿಹೋಗಲು ಯೋಧರು ತಮ್ಮ ಲಾಂಛನಗಳನ್ನು ಕಳೆದುಕೊಂಡರೂ ದುಃಖಿತರಾಗಲಿಲ್ಲ.

07019064a ವರ್ತಮಾನೇ ತಥಾ ಯುದ್ಧೇ ಘೋರರೂಪೇ ಭಯಂಕರೇ|

07019064c ಮೋಹಯಿತ್ವಾ ಪರಾನ್ದ್ರೋಣೋ ಯುಧಿಷ್ಠಿರಮುಪಾದ್ರವತ್||

ಹಾಗೆ ಭಯಂಕರವೂ ಘೋರರೂಪವೂ ಆದ ಯುದ್ಧವು ನಡೆಯುತ್ತಿರಲು ದ್ರೋಣನು ಶತ್ರುಗಳನ್ನು ಮೋಡಿಗೊಳಿಸಿ ಯುಧಿಷ್ಠಿರನನ್ನು ಎದುರಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಸಂಕುಲಯುದ್ಧೇ ಏಕೋನವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.

Image result for indian motifs against white background

Comments are closed.