Drona Parva: Chapter 162

ದ್ರೋಣ ಪರ್ವ: ದ್ರೋಣವಧ ಪರ್ವ

೧೬೨

ಹದಿನೈದನೆಯ ದಿನದ ಯುದ್ಧ

ಯುದ್ಧ ವರ್ಣನೆ (೧-೪೬). ನಕುಲನಿಂದ ದುರ್ಯೋಧನನ ಪರಾಭವ (೪೭-೫೨).

07162001 ಸಂಜಯ ಉವಾಚ|

07162001a ತೇ ತಥೈವ ಮಹಾರಾಜ ದಂಶಿತಾ ರಣಮೂರ್ಧನಿ|

07162001c ಸಂಧ್ಯಾಗತಂ ಸಹಸ್ರಾಂಶುಮಾದಿತ್ಯಮುಪತಸ್ಥಿರೇ||

ಸಂಜಯನು ಹೇಳಿದನು: “ಮಹಾರಾಜ! ಹಾಗೆ ರಣಾಂಗಣದಲ್ಲಿ ಕವಚಗಳನ್ನು ಧರಿಸಿ ಬಂದಿದ್ದ ಸೈನಿಕರು ಸಂಧ್ಯಾಸಮಯದಲ್ಲಿ ಉದಯಿಸುತ್ತಿರುವ ಸಹಸ್ರಾಂಶು ಆದಿತ್ಯನನ್ನು ನಮಸ್ಕರಿಸಿ ಪೂಜಿಸಿದರು.

07162002a ಉದಿತೇ ತು ಸಹಸ್ರಾಂಶೌ ತಪ್ತಕಾಂಚನಸಪ್ರಭೇ|

07162002c ಪ್ರಕಾಶಿತೇಷು ಲೋಕೇಷು ಪುನರ್ಯುದ್ಧಮವರ್ತತ||

ಕುದಿಸಿದ ಕಾಂಚನ ಪ್ರಭೆಯುಳ್ಳ ಸಹಸ್ರಾಂಶನು ಉದಯಿಸಿ ಲೋಕವು ಪ್ರಾಕಾಶಿತವಾಗಲು ಪುನಃ ಯುದ್ಧವು ಪ್ರಾರಂಭವಾಯಿತು.

07162003a ದ್ವಂದ್ವಾನಿ ಯಾನಿ ತತ್ರಾಸನ್ಸಂಸಕ್ತಾನಿ ಪುರೋದಯಾತ್|

07162003c ತಾನ್ಯೇವಾಭ್ಯುದಿತೇ ಸೂರ್ಯೇ ಸಮಸಜ್ಜಂತ ಭಾರತ||

ಭಾರತ! ಸೂರ್ಯೋದಯಕ್ಕೆ ಮೊದಲು ಅಲ್ಲಿ ಯಾರ್ಯಾರು ದ್ವಂದ್ವಯುದ್ಧದಲ್ಲಿ ತೊಡಗಿದ್ದರೋ ಅವರೇ ಸೂರ್ಯೋದಯದ ನಂತರವೂ ದ್ವಂದ್ವಯುದ್ಧವನ್ನು ಮುಂದುವರೆಸಿದರು.

07162004a ರಥೈರ್ಹಯಾ ಹಯೈರ್ನಾಗಾಃ ಪಾದಾತಾಶ್ಚಾಪಿ ಕುಂಜರೈಃ|

07162004c ಹಯಾ ಹಯೈಃ ಸಮಾಜಗ್ಮುಃ ಪಾದಾತಾಶ್ಚ ಪದಾತಿಭಿಃ|

07162004e ಸಂಸಕ್ತಾಶ್ಚ ವಿಯುಕ್ತಾಶ್ಚ ಯೋಧಾಃ ಸಮ್ನ್ಯಪತನ್ರಣೇ||

ರಥಗಳು ಕುದುರೆಗಳೊಂದಿಗೆ, ಕುದುರೆಗಳು ಆನೆಗಳೊಂದಿಗೆ, ಪಾದಾತಿಗಳು ಆನೆಗಳೊಂದಿಗೆ, ಕುದುರೆಗಳು ಕುದುರೆಗಳೊಂದಿಗೆ ಮತ್ತು ಪದಾತಿಗಳು ಪದಾತಿಗಳೊಂದಿಗೆ ಎದುರಾಗಿ ಯುದ್ಧಮಾಡಿದರು. ಒಬ್ಬರಿಗೊಬ್ಬರು ಅಂಟಿಕೊಂಡು ಮತ್ತು ಬೇರೆ ಬೇರಾಗಿ ಯೋಧರು ರಣದಲ್ಲಿ ಬೀಳುತ್ತಿದ್ದರು.

07162005a ತೇ ರಾತ್ರೌ ಕೃತಕರ್ಮಾಣಃ ಶ್ರಾಂತಾಃ ಸೂರ್ಯಸ್ಯ ತೇಜಸಾ|

07162005c ಕ್ಷುತ್ಪಿಪಾಸಾಪರೀತಾಂಗಾ ವಿಸಂಜ್ಞಾ ಬಹವೋಽಭವನ್||

ರಾತ್ರಿಯೆಲ್ಲಾ ಯುದ್ಧಮಾಡುತ್ತಿದ್ದು ಈಗ ಸೂರ್ಯನ ತೇಜಸ್ಸಿನಿಂದ ಬಳಲಿ, ಹಸಿವು-ಬಾಯಾರಿಕೆಗಳಿಂದ ಆಯಾಸಗೊಂಡವರಾಗಿ ಅನೇಕರು ಮೂರ್ಛಿತರಾದರು.

07162006a ಶಂಖಭೇರೀಮೃದಂಗಾನಾಂ ಕುಂಜರಾಣಾಂ ಚ ಗರ್ಜತಾಂ|

07162006c ವಿಸ್ಫಾರಿತವಿಕೃಷ್ಟಾನಾಂ ಕಾರ್ಮುಕಾಣಾಂ ಚ ಕೂಜತಾಂ||

07162007a ಶಬ್ದಃ ಸಮಭವದ್ರಾಜನ್ದಿವಿಸ್ಪೃಗ್ಭರತರ್ಷಭ|

ರಾಜನ್! ಭರತರ್ಷಭ! ಶಂಖ-ಭೇರಿ-ಮೃದಂಗಗಳ ಮತ್ತು ಆನೆಗಳ ಗರ್ಜನೆ, ಸೆಳೆಯಲ್ಪಡುತ್ತಿದ್ದ ಧನುಸ್ಸುಗಳ ಟೇಂಕಾರಗಳು ಇವೆಲ್ಲವುಗಳ ಶಬ್ಧಗಳು ಮುಗಿಲನ್ನು ಮುಟ್ಟಿದವು.

07162007c ದ್ರವತಾಂ ಚ ಪದಾತೀನಾಂ ಶಸ್ತ್ರಾಣಾಂ ವಿನಿಪಾತ್ಯತಾಂ||

07162008a ಹಯಾನಾಂ ಹೇಷತಾಂ ಚೈವ ರಥಾನಾಂ ಚ ನಿವರ್ತತಾಂ|

07162008c ಕ್ರೋಶತಾಂ ಗರ್ಜತಾಂ ಚೈವ ತದಾಸೀತ್ತುಮುಲಂ ಮಹತ್||

ಓಡಿಹೋಗುತ್ತಿರವರ ಹೆಜ್ಜೆಗಳ ಶಬ್ಧಗಳೂ, ಶಸ್ತ್ರಗಳು ಬೀಳುತ್ತಿರುವ ಶಬ್ಧಗಳೂ, ಕುದುರೆಗಳ ಹೇಂಕಾರಗಳೂ, ರಥಗಳು ನಡೆಯುತ್ತಿರುವ ಶಬ್ಧಗಳೂ, ಮತ್ತು ಕೂಗು-ಗರ್ಜನೆಗಳ ಶಬ್ಧಗಳೂ ಸೇರಿ ಮಹಾ ತುಮುಲವೆದ್ದಿತು.

07162009a ವಿವೃದ್ಧಸ್ತುಮುಲಃ ಶಬ್ದೋ ದ್ಯಾಮಗಚ್ಚನ್ಮಹಾಸ್ವನಃ|

07162009c ನಾನಾಯುಧನಿಕೃತ್ತಾನಾಂ ಚೇಷ್ಟತಾಮಾತುರಃ ಸ್ವನಃ||

ನಾನಾ ಆಯುಧಗಳಿಂದ ಕತ್ತರಿಸುತ್ತಿರುವವರ, ಆತುರ ಕೂಗುಗಳ ತುಮುಲ ಶಬ್ಧದ ಮಹಾಸ್ವನಗಳು ಆಕಾಶವನ್ನು ಸೇರಿದವು.

07162010a ಭೂಮಾವಶ್ರೂಯತ ಮಹಾಂಸ್ತದಾಸೀತ್ಕೃಪಣಂ ಮಹತ್|

07162010c ಪತತಾಂ ಪತಿತಾನಾಂ ಚ ಪತ್ತ್ಯಶ್ವರಥಹಸ್ತಿನಾಂ||

ಕೆಳಗುರುಳಿಸುತ್ತಿದ್ದ ಮತ್ತು ಕೆಳಗುರುಳುತ್ತಿದ್ದ ಪದಾತಿ-ಅಶ್ವ-ಗಜಗಳ ದೀನತರ ಕೂಗುಗಳು ಇನ್ನೂ ಜೋರಾಗಿ ಕೇಳಿಬರುತ್ತಿತ್ತು.

07162011a ತೇಷು ಸರ್ವೇಷ್ವನೀಕೇಷು ವ್ಯತಿಷಕ್ತೇಷ್ವನೇಕಶಃ|

07162011c ಸ್ವೇ ಸ್ವಾಂ ಜಘ್ನುಃ ಪರೇ ಸ್ವಾಂಶ್ಚ ಸ್ವೇ ಪರಾಂಶ್ಚ ಪರಾನ್ಪರೇ||

ಆ ಸರ್ವಸೇನೆಗಳಲ್ಲಿ ಅನೇಕಶಃ ನಮ್ಮವರು ನಮ್ಮವರನ್ನೇ ಕೊಲ್ಲುತ್ತಿದ್ದರು; ಶತ್ರುಗಳು ಶತ್ರುಗಳನ್ನೇ ಕೊಲ್ಲುತ್ತಿದ್ದರು.

07162012a ವೀರಬಾಹುವಿಸೃಷ್ಟಾಶ್ಚ ಯೋಧೇಷು ಚ ಗಜೇಷು ಚ|

07162012c ಅಸಯಃ ಪ್ರತ್ಯದೃಶ್ಯಂತ ವಾಸಸಾಂ ನೇಜನೇಷ್ವಿವ||

ತೊಳೆಯಲು ಅಗಸನ ಮನೆಯಲ್ಲಿ ಬಟ್ಟೆಗಳು ರಾಶಿ ರಾಶಿಯಾಗಿ ಬಂದು ಬೀಳುವಂತೆ ಯೋಧರ ಮತ್ತು ಆನೆಗಳ ವೀರಬಾಹುಗಳು ತುಂಡಾಗಿ ತೊಪತೊಪನೆ ಬೀಳುತ್ತಿದ್ದವು.

07162013a ಉದ್ಯತಪ್ರತಿಪಿಷ್ಟಾನಾಂ ಖಡ್ಗಾನಾಂ ವೀರಬಾಹುಭಿಃ|

07162013c ಸ ಏವ ಶಬ್ದಸ್ತದ್ರೂಪೋ ವಾಸಸಾಂ ನಿಜ್ಯತಾಮಿವ||

ಖಡ್ಗಗಳನ್ನು ಹಿಡಿದ ವೀರಬಾಹುಗಳ ಮೇಲೆ ಬೀಳುವ ಖಡ್ಗಗಳ ಶಬ್ಧವು ಅಗಸನು ಬಂಡೆಯಮೇಲೆ ಬಟ್ಟೆಯನ್ನು ಒಗೆಯುವ ಶಬ್ಧದಂತಿತ್ತು.

07162014a ಅರ್ಧಾಸಿಭಿಸ್ತಥಾ ಖಡ್ಗೈಸ್ತೋಮರೈಃ ಸಪರಶ್ವಧೈಃ|

07162014c ನಿಕೃಷ್ಟಯುದ್ಧಂ ಸಂಸಕ್ತಂ ಮಹದಾಸೀತ್ಸುದಾರುಣಂ||

ಅರ್ಧ ತುಂಡಾದ ಚೂರಿಗಳಿಂದಲೂ, ಖಡ್ಗಗಳಿಂದಲೂ, ತೋಮರಗಳಿಂದಲೂ, ಪರಶಾಯುಧಗಳಿಂದಲೂ ಆ ಮಹಾ ಸುದಾರುಣ ಯುದ್ಧವು ನಡೆಯಿತು.

07162015a ಗಜಾಶ್ವಕಾಯಪ್ರಭವಾಂ ನರದೇಹಪ್ರವಾಹಿನೀಂ|

07162015c ಶಸ್ತ್ರಮತ್ಸ್ಯಸುಸಂಪೂರ್ಣಾಂ ಮಾಂಸಶೋಣಿತಕರ್ದಮಾಂ||

07162016a ಆರ್ತನಾದಸ್ವನವತೀಂ ಪತಾಕಾವಸ್ತ್ರಫೇನಿಲಾಂ|

07162016c ನದೀಂ ಪ್ರಾವರ್ತಯನ್ವೀರಾಃ ಪರಲೋಕಪ್ರವಾಹಿನೀಂ||

ಆನೆ-ಕುದುರೆಗಳ ಕಾಯದಿಂದ ಹುಟ್ಟಿದ, ನರದೇಹಗಳನ್ನು ಕೊಚ್ಚಿಕೊಂಡು ಹೋಗುತ್ತಿದ್ದ, ಶಸ್ತ್ರಗಳೇ ಮೀನುಗಳಂತೆ ತುಂಬಿಹೋಗಿದ್ದ, ಮಾಂಸ-ಶೋಣಿತಗಳೇ ಕೆಸರಾಗುಳ್ಳ, ಆರ್ತನಾದವೇ ಅಲೆಗಳ ಶಬ್ಧವಾಗಿದ್ದ, ಪತಾಕೆಗಳ ವಸ್ತ್ರಗಳೇ ನೊರೆಗಳಂತೆ ತೇಲುತ್ತಿದ್ದ ಪರಲೋಕಕ್ಕೆ ಹರಿದು ಹೋಗುತ್ತಿದ್ದ ನದಿಯನ್ನೇ ಆ ವೀರರು ಸೃಷ್ಟಿಸಿದರು.

07162017a ಶರಶಕ್ತ್ಯರ್ದಿತಾಃ ಕ್ಲಾಂತಾ ರಾತ್ರಿಮೂಢಾಲ್ಪಚೇತಸಃ||

07162017c ವಿಷ್ಟಭ್ಯ ಸರ್ವಗಾತ್ರಾಣಿ ವ್ಯತಿಷ್ಠನ್ಗಜವಾಜಿನಃ|

ಶರ-ಶಕ್ತಿಗಳಿಂದ ಗಾಯಗೊಂಡ, ಆಯಾಸಗೊಂಡ, ರಾತ್ರಿ ಬುದ್ಧಿಗೆಟ್ಟ ಎಲ್ಲ ಗಜಾಶ್ವಗಳೂ ಸ್ಥಬ್ದಗೊಂಡು ನಿಂತುಬಿಟ್ಟಿದ್ದವು.

07162017e ಸಂಶುಷ್ಕವದನಾ ವೀರಾಃ ಶಿರೋಭಿಶ್ಚಾರುಕುಂಡಲೈಃ||

07162018a ಯುದ್ಧೋಪಕರಣೈಶ್ಚಾನ್ಯೈಸ್ತತ್ರ ತತ್ರ ಪ್ರಕಾಶಿತೈಃ|

ಸುಂದರ ಕುಂಡಲಗಳಿಂದ ಅಲಂಕೃತ ಶಿರಗಳ ವೀರರ ಮುಖಗಳು ಬಾಡಿಹೋಗಿದ್ದವು. ಅನೇಕ ಯುದ್ಧೋಪಕರಣಗಳು ಅಲ್ಲಲ್ಲಿ ಬಿದ್ದು ಪ್ರಕಾಶಿಸುತ್ತಿದ್ದವು.

07162018c ಕ್ರವ್ಯಾದಸಂಘೈರಕೀರ್ಣಂ ಮೃತೈರರ್ಧಮೃತೈರಪಿ||

07162018e ನಾಸೀದ್ರಥಪಥಸ್ತತ್ರ ಸರ್ವಮಾಯೋಧನಂ ಪ್ರತಿ|

ಕ್ರವ್ಯಾದಸಂಘಗಳಿಂದ, ಮೃತರಾದ ಮತ್ತು ಅರ್ಧಮೃತರಾದವರ ದೇಹಗಳಿಂದ ತುಂಬಿಹೋಗಿದ್ದ ಆ ರಣಭೂಮಿಯಲ್ಲಿ ಯುದ್ಧಕ್ಕೆ ರಥಗಳು ಹೋಗಲಿಕ್ಕೆ ದಾರಿಯೂ ಇಲ್ಲದಂತಾಗಿತ್ತು.

07162019a ಮಜ್ಜತ್ಸು ಚಕ್ರೇಷು ರಥಾನ್ಸತ್ತ್ವಮಾಸ್ಥಾಯ ವಾಜಿನಃ|

07162019c ಕಥಂ ಚಿದವಹಂ ಶ್ರಾಂತಾ ವೇಪಮಾನಾಃ ಶರಾರ್ದಿತಾಃ|

07162019e ಕುಲಸತ್ತ್ವಬಲೋಪೇತಾ ವಾಜಿನೋ ವಾರಣೋಪಮಾಃ||

ರಕ್ತಮಾಂಸಗಳ ಕೆಸರಿನಲ್ಲಿ ರಥಚಕ್ರಗಳು ಹೂತುಹೋಗುತ್ತಿದ್ದವು. ಕುದುರೆಗಳು ಬಹಳವಾಗಿ ಬಳಲಿದ್ದವು. ಬಾಣಗಳಿಂದ ಬಹಳವಾಗಿ ಗಾಯಗೊಂಡು ನಡುಗುತ್ತಿದ್ದವು. ಆದರೂ ಉತ್ತಮ ಕುಲ-ಸತ್ತ್ವ-ಬಲಗಳುಳ್ಳ ಆ ಕುದುರೆಗಳು ಆನೆಗಳಂತೆ ಕಷ್ಟದಿಂದ ರಥಗಳನ್ನು ಒಯ್ಯುತ್ತಿದ್ದವು.

07162020a ವಿಹ್ವಲಂ ತತ್ಸಮುದ್ಭ್ರಾಂತಂ ಸಭಯಂ ಭಾರತಾತುರಂ|

07162020c ಬಲಮಾಸೀತ್ತದಾ ಸರ್ವಂ ಋತೇ ದ್ರೋಣಾರ್ಜುನಾವುಭೌ||

ದ್ರೋಣ ಮತ್ತು ಅರ್ಜುನರಿಬ್ಬರನ್ನು ಬಿಟ್ಟು ಉಳಿದ ಎಲ್ಲ ಸೇನೆಗಳೂ ವಿಹ್ವಲ, ಭ್ರಾಂತ, ಭಯಾರ್ದಿತವಾಗಿ ಆತುರಗೊಂಡಿದ್ದವು.

07162021a ತಾವೇವಾಸ್ತಾಂ ನಿಲಯನಂ ತಾವಾರ್ತಾಯನಮೇವ ಚ|

07162021c ತಾವೇವಾನ್ಯೇ ಸಮಾಸಾದ್ಯ ಜಗ್ಮುರ್ವೈವಸ್ವತಕ್ಷಯಂ||

ಅವರಿಬ್ಬರೂ ಅವರ ಆಶ್ರಯದಾತರಾಗಿದ್ದರು. ಆರ್ತರಕ್ಷಕರಾಗಿದ್ದರು. ಅನ್ಯೋನ್ಯರನ್ನು ಎದುರಿಸಿ ಅವರು ವೈವಸ್ವತಕ್ಷಯಕ್ಕೆ ಹೋಗುತ್ತಿದ್ದರು.

07162022a ಆವಿಗ್ನಮಭವತ್ಸರ್ವಂ ಕೌರವಾಣಾಂ ಮಹದ್ಬಲಂ|

07162022c ಪಾಂಚಾಲಾನಾಂ ಚ ಸಂಸಕ್ತಂ ನ ಪ್ರಾಜ್ಞಾಯತ ಕಿಂ ಚನ||

ಕೌರವರ ಮತ್ತು ಪಾಂಚಾಲರ ಮಹಾಬಲಗಳು ಬೆರೆದು ಮಹಾಕಷ್ಟಕ್ಕೊಳಗಾದವು. ಅವರಿಗೆ ಯಾವುದೂ ತಿಳಿಯುತ್ತಿರಲಿಲ್ಲ.

07162023a ಅಂತಕಾಕ್ರೀಡಸದೃಶೇ ಭೀರೂಣಾಂ ಭಯವರ್ಧನೇ|

07162023c ಪೃಥಿವ್ಯಾಂ ರಾಜವಂಶಾನಾಮುತ್ಥಿತೇ ಮಹತಿ ಕ್ಷಯೇ||

ಅಂತಕನ ಆಟದಂತಿದ್ದ, ಹೇಡಿಗಳ ಭಯವನ್ನು ಹೆಚ್ಚಿಸುತ್ತಿದ್ದ ಆ ಯುದ್ಧದಲ್ಲಿ ಪೃಥ್ವಿಯ ರಾಜವಂಶಗಳ ಮಹಾ ಕ್ಷಯವುಂಟಾಗುತ್ತಿತ್ತು.

07162024a ನ ತತ್ರ ಕರ್ಣಂ ನ ದ್ರೋಣಂ ನಾರ್ಜುನಂ ನ ಯುಧಿಷ್ಠಿರಂ|

07162024c ನ ಭೀಮಸೇನಂ ನ ಯಮೌ ನ ಪಾಂಚಾಲ್ಯಂ ನ ಸಾತ್ಯಕಿಂ||

07162025a ನ ಚ ದುಹ್ಶಾಸನಂ ದ್ರೌಣಿಂ ನ ದುರ್ಯೋಧನಸೌಬಲೌ|

07162025c ನ ಕೃಪಂ ಮದ್ರರಾಜಂ ವಾ ಕೃತವರ್ಮಾಣಂ ಏವ ಚ||

07162026a ನ ಚಾನ್ಯಾನ್ನೈವ ಚಾತ್ಮಾನಂ ನ ಕ್ಷಿತಿಂ ನ ದಿಶಸ್ತಥಾ|

07162026c ಪಶ್ಯಾಮ ರಾಜನ್ಸಂಸಕ್ತಾನ್ಸೈನ್ಯೇನ ರಜಸಾವೃತಾನ್||

ರಾಜನ್! ಯುದ್ಧದಲ್ಲಿ ತೊಡಗಿ ಧೂಳಿನಿಂದ ತುಂಬಿಹೋಗಿದ್ದ ಆ ಸೇನೆಗಳಲ್ಲಿ ಕರ್ಣನನ್ನಾಗಲೀ, ದ್ರೋಣನನ್ನಾಗಲೀ, ಅರ್ಜುನನನ್ನಾಗಲೀ, ಯುಧಿಷ್ಠಿರನನ್ನಾಗಲೀ, ಭೀಮಸೇನನನ್ನಾಗಲೀ, ಯಮಳರನ್ನಾಗಲೀ, ಪಾಂಚಾಲ್ಯನನ್ನಾಗಲೀ, ಸಾತ್ಯಕಿಯನ್ನಾಗಲೀ, ದುಃಶಾಸನನನ್ನಾಗಲೀ, ದ್ರೌಣಿಯನ್ನಾಗಲೀ, ದುರ್ಯೋಧನ-ಸೌಬಲರನ್ನಾಗಲೀ, ಕೃಪನನ್ನಾಗಲೀ, ಕೃತವರ್ಮನನ್ನಾಗಲೀ, ಇನ್ನು ಇತರರನ್ನಾಗಲೀ, ಆಕಾಶವನ್ನಾಗಲೀ, ದಿಕ್ಕುಗಳನ್ನಾಗಲೀ, ಮತ್ತು ನಾವೇ ಕಾಣದಂತಾಗಿದ್ದೆವು.

07162027a ಸಂಭ್ರಾಂತೇ ತುಮುಲೇ ಘೋರೇ ರಜೋಮೇಘೇ ಸಮುತ್ಥಿತೇ|

07162027c ದ್ವಿತೀಯಾಮಿವ ಸಂಪ್ರಾಪ್ತಾಮಮನ್ಯಂತ ನಿಶಾಂ ತದಾ||

ಆ ತುಮುಲಯುದ್ಧವು ನಡೆಯುತ್ತಿರಲು ಧೂಳಿನ ಘೋರ ಮೋಡವೇ ಮೇಲೆದ್ದಿತು. ಅದನ್ನು ನೋಡಿ ಎರಡನೆಯೇ ರಾತ್ರಿಯೇ ಬಂದುಬಿಟ್ಟಿತೋ ಎಂದು ಜನರು ಸಂಭ್ರಾಂತರಾದರು.

07162028a ನ ಜ್ಞಾಯಂತೇ ಕೌರವೇಯಾ ನ ಪಾಂಚಾಲಾ ನ ಪಾಂಡವಾಃ|

07162028c ನ ದಿಶೋ ನ ದಿವಂ ನೋರ್ವೀಂ ನ ಸಮಂ ವಿಷಮಂ ತಥಾ||

ಆ ಧೂಳಿನಲ್ಲಿ ಕೌರವೇಯರು, ಪಾಂಚಾಲರು ಮತ್ತು ಪಾಂಡವರು ಯಾರೆಂದೇ ತಿಳಿಯುತ್ತಿರಲಿಲ್ಲ. ದಿಕ್ಕುಗಳಾಗಲೀ, ಆಕಾಶವಾಗಲೀ, ಹಳ್ಳ-ದಿಣ್ಣೆಗಳಾಗಲೀ ಕಾಣುತ್ತಿರಲಿಲ್ಲ.

07162029a ಹಸ್ತಸಂಸ್ಪರ್ಶಮಾಪನ್ನಾನ್ಪರಾನ್ವಾಪ್ಯಥ ವಾ ಸ್ವಕಾನ್|

07162029c ನ್ಯಪಾತಯಂಸ್ತದಾ ಯುದ್ಧೇ ನರಾಃ ಸ್ಮ ವಿಜಯೈಷಿಣಃ||

ಯುದ್ಧದಲ್ಲಿ ವಿಜಯೈಷಿ ನರರು ಕೈಗೆಸಿಕ್ಕಿದವರನ್ನು, ಶತ್ರುಗಳೋ ತಮ್ಮವರೋ ಎನ್ನುವುದನ್ನು ವಿಚಾರಿಸದೇ ಕೆಳಗುರುಳಿಸುತ್ತಿದ್ದರು.

07162030a ಉದ್ಧೂತತ್ವಾತ್ತು ರಜಸಃ ಪ್ರಸೇಕಾಚ್ಚೋಣಿತಸ್ಯ ಚ|

07162030c ಪ್ರಶಶಾಮ ರಜೋ ಭೌಮಂ ಶೀಘ್ರತ್ವಾದನಿಲಸ್ಯ ಚ||

ಗಾಳಿಯು ಜೋರಾಗಿ ಬೀಸುತ್ತಿದ್ದುದರಿಂದ ಧೂಳು ಮೇಲೆ ಹಾರಿತು. ರಕ್ತವು ಸುರಿಯುತ್ತಿದ್ದುದರಿಂದ ಧೂಳು ಭೂಮಿಯಲ್ಲಿಯೇ ನಿಂತು ಕಡಿಮೆಯಾಯಿತು.

07162031a ತತ್ರ ನಾಗಾ ಹಯಾ ಯೋಧಾ ರಥಿನೋಽಥ ಪದಾತಯಃ|

07162031c ಪಾರಿಜಾತವನಾನೀವ ವ್ಯರೋಚನ್ರುಧಿರೋಕ್ಷಿತಾಃ||

ಅಲ್ಲಿ ರಕ್ತದಿಂದ ತೋಯ್ದುಹೋಗಿದ್ದ ಆನೆಗಳು, ಕುದುರೆಗಳೂ, ರಥವೇರಿದ್ದ ಯೋಧರು ಮತ್ತು ಪದಾತಿಗಳು ಪಾರಿಜಾತವೃಕ್ಷಗಳ ವನಗಳೋಪಾದಿಯಲ್ಲಿ ಗೋಚರಿಸುತ್ತಿದ್ದವು.

07162032a ತತೋ ದುರ್ಯೋಧನಃ ಕರ್ಣೋ ದ್ರೋಣೋ ದುಃಶಾಸನಸ್ತಥಾ|

07162032c ಪಾಂಡವೈಃ ಸಮಸಜ್ಜಂತ ಚತುರ್ಭಿಶ್ಚತುರೋ ರಥಾಃ||

ಆಗ ದುರ್ಯೋಧನ, ಕರ್ಣ, ದ್ರೋಣ, ಮತ್ತು ದುಃಶಾಸನ ಈ ನಾಲ್ವರು ನಾಲ್ವರು ಪಾಂಡವ ಮಹಾರಥರೊಡನೆ ಯುದ್ಧದಲ್ಲಿ ತೊಡಗಿದರು.

07162033a ದುರ್ಯೋಧನಃ ಸಹ ಭ್ರಾತ್ರಾ ಯಮಾಭ್ಯಾಂ ಸಮಸಜ್ಜತ|

07162033c ವೃಕೋದರೇಣ ರಾಧೇಯೋ ಭಾರದ್ವಾಜೇನ ಚಾರ್ಜುನಃ||

ಸಹೋದರನೊಂದಿಗೆ ದುರ್ಯೋಧನನು ಯಮಳರೊಡನೆಯೂ, ರಾಧೇಯನು ವೃಕೋದರನೊಡನೆಯೂ, ಅರ್ಜುನನು ಭಾರದ್ವಾಜನೊಂದಿಗೂ ಯುದ್ಧಮಾಡಿದರು.

07162034a ತದ್ಘೋರಂ ಮಹದಾಶ್ಚರ್ಯಂ ಸರ್ವೇ ಪ್ರೈಕ್ಷನ್ಸಮಂತತಃ|

07162034c ರಥರ್ಷಭಾಣಾಮುಗ್ರಾಣಾಂ ಸಮ್ನಿಪಾತಮಮಾನುಷಂ||

ಪರಸ್ಪರರ ಮೇಲೆ ಎರಗುತ್ತಿದ್ದ ಆ ರಥರ್ಷಭರ ಉಗ್ರ ಅಮಾನುಷ ಮಹದಾಶ್ಚರ್ಯಕರ ಘೋರ ಯುದ್ಧವನ್ನು ಎಲ್ಲರೂ ಸುತ್ತುವರೆದು ನೋಡಿದರು.

07162035a ರಥಮಾರ್ಗೈರ್ವಿಚಿತ್ರೈಶ್ಚ ವಿಚಿತ್ರರಥಸಂಕುಲಂ|

07162035c ಅಪಶ್ಯನ್ರಥಿನೋ ಯುದ್ಧಂ ವಿಚಿತ್ರಂ ಚಿತ್ರಯೋಧಿನಾಂ||

ವಿಚಿತ್ರ ರಥಮಾರ್ಗಗಳನ್ನೂ, ವಿಚಿತ್ರ ರಥಸಂಕುಲಗಳನ್ನೂ, ಚಿತ್ರಯೋಧಿಗಳ ಆ ವಿಚಿತ್ರ ಯುದ್ಧವನ್ನು ರಥಿಗಳು ನೋಡಿದರು.

07162036a ಯತಮಾನಾಃ ಪರಾಕ್ರಾಂತಾಃ ಪರಸ್ಪರಜಿಗೀಷವಃ|

07162036c ಜೀಮೂತಾ ಇವ ಘರ್ಮಾಂತೇ ಶರವರ್ಷೈರವಾಕಿರನ್||

ಪರಸ್ಪರರನ್ನು ಗೆಲ್ಲಲು ಬಯಸಿದ್ದ ಆ ಪರಾಕ್ರಾಂತರು ಬೇಸಗೆಯ ಅಂತ್ಯದಲ್ಲಿನ ಮೋಡಗಳಂತೆ ಶರವರ್ಷಗಳನ್ನು ಸುರಿಸಿ ಪ್ರಯತ್ನಿಸುತ್ತಿದ್ದರು.

07162037a ತೇ ರಥಾನ್ಸೂರ್ಯಸಂಕಾಶಾನಸ್ಥಿತಾಃ ಪುರುಷರ್ಷಭಾಃ|

07162037c ಅಶೋಭಂತ ಯಥಾ ಮೇಘಾಃ ಶಾರದಾಃ ಸಮುಪಸ್ಥಿತಾಃ||

ಸೂರ್ಯಸಂಕಾಶ ರಥಗಳಲ್ಲಿ ಕುಳಿತಿದ್ದ ಆ ಪುರುಷರ್ಷಭರು ಮಿಂಚಿನಿಂದ ಕೂಡಿದ ಶರತ್ಕಾಲದ ಮೋಡಗಳಂತೆ ಶೋಭಿಸುತ್ತಿದ್ದರು.

07162038a ಸ್ಪರ್ಧಿನಸ್ತೇ ಮಹೇಷ್ವಾಸಾಃ ಕೃತಯತ್ನಾ ಧನುರ್ಧರಾಃ|

07162038c ಅಭ್ಯಗಚ್ಚಂಸ್ತಥಾನ್ಯೋನ್ಯಂ ಮತ್ತಾ ಗಜವೃಷಾ ಇವ||

ಆ ಮಹೇಷ್ವಾಸ ಧನುರ್ಧರರು ಪ್ರಯತ್ನಪಟ್ಟು ಸ್ಪರ್ಧಿಸುತ್ತಿದ್ದರು. ಮದಿಸಿದ ಸಲಗಗಳಂತೆ ಅನ್ಯೋನ್ಯರನ್ನು ಆಕ್ರಮಣಿಸುತ್ತಿದ್ದರು.

07162039a ನ ನೂನಂ ದೇಹಭೇದೋಽಸ್ತಿ ಕಾಲೇ ತಸ್ಮಿನ್ಸಮಾಗತೇ|

07162039c ಯತ್ರ ಸರ್ವೇ ನ ಯುಗಪದ್ವ್ಯಶೀರ್ಯಂತ ಮಹಾರಥಾಃ||

ಕಾಲವು ಸಮೀಪವಾಗುವ ಮೊದಲು ದೇಹವು ನಾಶವಾಗುವುದಿಲ್ಲ. ಅಲ್ಲಿ ಎಲ್ಲ ಮಹಾರಥರೂ ಗಾಯಗೊಂಡಿದ್ದರೇ ಹೊರತು ಎಲ್ಲರೂ ಒಟ್ಟಿಗೇ ಸಾಯಲಿಲ್ಲ.

07162040a ಬಾಹುಭಿಶ್ಚರಣೈಶ್ಚಿನ್ನೈಃ ಶಿರೋಭಿಶ್ಚಾರುಕುಂಡಲೈಃ|

07162040c ಕಾರ್ಮುಕೈರ್ವಿಶಿಖೈಃ ಪ್ರಾಸೈಃ ಖಡ್ಗೈಃ ಪರಶುಪಟ್ಟಿಶೈಃ||

07162041a ನಾಲೀಕಕ್ಷುರನಾರಾಚೈರ್ನಖರೈಃ ಶಕ್ತಿತೋಮರೈಃ|

07162041c ಅನ್ಯೈಶ್ಚ ವಿವಿಧಾಕಾರೈರ್ಧೌತೈಃ ಪ್ರಹರಣೋತ್ತಮೈಃ||

07162042a ಚಿತ್ರೈಶ್ಚ ವಿವಿಧಾಕಾರೈಃ ಶರೀರಾವರಣೈರಪಿ|

07162042c ವಿಚಿತ್ರೈಶ್ಚ ರಥೈರ್ಭಗ್ನೈರ್ಹತೈಶ್ಚ ಗಜವಾಜಿಭಿಃ||

07162043a ಶೂನ್ಯೈಶ್ಚ ನಗರಾಕಾರೈರ್ಹತಯೋಧಧ್ವಜೈ ರಥೈಃ|

07162043c ಅಮನುಷ್ಯೈರ್ಹಯೈಸ್ತ್ರಸ್ತೈಃ ಕೃಷ್ಯಮಾಣೈಸ್ತತಸ್ತತಃ||

07162044a ವಾತಾಯಮಾನೈರಸಕೃದ್ಧತವೀರೈರಲಂಕೃತೈಃ|

07162044c ವ್ಯಜನೈಃ ಕಂಕಟೈಶ್ಚೈವ ಧ್ವಜೈಶ್ಚ ವಿನಿಪಾತಿತೈಃ||

07162045a ಚತ್ರೈರಾಭರಣೈರ್ವಸ್ತ್ರೈರ್ಮಾಲ್ಯೈಶ್ಚ ಸುಸುಗಂಧಿಭಿಃ|

07162045c ಹಾರೈಃ ಕಿರೀಟೈರ್ಮುಕುಟೈರುಷ್ಣೀಷೈಃ ಕಿಂಕಿಣೀಗಣೈಃ||

07162046a ಉರಸ್ಯೈರ್ಮಣಿಭಿರ್ನಿಷ್ಕೈಶ್ಚೂಡಾಮಣಿಭಿರೇವ ಚ|

07162046c ಆಸೀದಾಯೋಧನಂ ತತ್ರ ನಭಸ್ತಾರಾಗಣೈರಿವ||

 

07162047a ತತೋ ದುರ್ಯೋಧನಸ್ಯಾಸೀನ್ನಕುಲೇನ ಸಮಾಗಮಃ|

07162047c ಅಮರ್ಷಿತೇನ ಕ್ರುದ್ಧಸ್ಯ ಕ್ರುದ್ಧೇನಾಮರ್ಷಿತಸ್ಯ ಚ||

ಆಗ ಅಸಹನೆಯಿಂದ ಕ್ರುದ್ಧನಾಗಿದ್ದ ದುರ್ಯೋಧನನಿಗೂ ಕ್ರುದ್ಧನಾಗಿ ಅಸಹನೆಗೊಂಡಿದ್ದ ನಕುಲನಿಗೂ ಯುದ್ಧವು ನಡೆಯಿತು.

07162048a ಅಪಸವ್ಯಂ ಚಕಾರಾಥ ಮಾದ್ರೀಪುತ್ರಸ್ತವಾತ್ಮಜಂ|

07162048c ಕಿರಂ ಶರಶತೈರ್ಹೃಷ್ಟಸ್ತತ್ರ ನಾದೋ ಮಹಾನಭೂತ್||

ಮಾದ್ರೀಪುತ್ರನು ನಿನ್ನ ಪುತ್ರನನ್ನು ಬಲಭಾಗಕ್ಕೆ ಮಾಡಿಕೊಂಡು ಹೃಷ್ಟನಾಗಿ ನೂರಾರು ಶರಗಳನ್ನು ಅವನ ಮೇಲೆ ಚೆಲ್ಲಿ ಮಹಾನಾದಗೈದನು.

07162049a ಅಪಸವ್ಯಂ ಕೃತಃ ಸಂಖ್ಯೇ ಭ್ರಾತೃವ್ಯೇನಾತ್ಯಮರ್ಷಿಣಾ|

07162049c ಸೋಽಮರ್ಷಿತಸ್ತಮಪ್ಯಾಜೌ ಪ್ರತಿಚಕ್ರೇಽಪಸವ್ಯತಃ||

ಭ್ರಾತೃತ್ವದಿಂದಾಗಿ ತನ್ನನ್ನು ಬಲಭಾಗಕ್ಕೆ ಮಾಡಿಕೊಂಡು ಯುದ್ಧಮಾಡುತ್ತಿದುದನ್ನು ದುರ್ಯೋಧನನಿಗೆ ಸಹಿಸಿಕೊಳ್ಳಲಾಗಲಿಲ್ಲ. ಬಹಳಬೇಗ ಅವನು ನಕುಲನನ್ನು ತನ್ನ ಬಲಭಾಗಕ್ಕೆ ಮಾಡಿಕೊಂಡನು.

07162050a ತತಃ ಪ್ರತಿಚಿಕೀರ್ಷಂತಮಪಸವ್ಯಂ ತು ತೇ ಸುತಂ|

07162050c ನ್ಯವಾರಯತ ತೇಜಸ್ವೀ ನಕುಲಶ್ಚಿತ್ರಮಾರ್ಗವಿತ್||

ವಿಚಿತ್ರಮಾರ್ಗಗಳನ್ನು ತಿಳಿದಿದ್ದ ತೇಜಸ್ವೀ ನಕುಲನು ನಿನ್ನ ಮಗನನ್ನು ಪುನಃ ಬಲಭಾಗಕ್ಕೆ ಮಾಡಿಕೊಂಡು ತಡೆದನು.

07162051a ಸರ್ವತೋ ವಿನಿವಾರ್ಯೈನಂ ಶರಜಾಲೇನ ಪೀಡಯನ್|

07162051c ವಿಮುಖಂ ನಕುಲಶ್ಚಕ್ರೇ ತತ್ಸೈನ್ಯಾಃ ಸಮಪೂಜಯನ್||

ನಕುಲನು ಎಲ್ಲ ಕಡೆಗಳಿಂದಲೂ ಅವನನ್ನು ತಡೆಹಿಡಿದು, ಶರಜಾಲಗಳಿಂದ ಪೀಡಿಸಿ ವಿಮುಖನನ್ನಾಗಿ ಮಾಡಿದನು. ಅದನ್ನು ಸೇನೆಗಳು ಶ್ಲಾಘಿಸಿದವು.

07162052a ತಿಷ್ಠ ತಿಷ್ಠೇತಿ ನಕುಲೋ ಬಭಾಷೇ ತನಯಂ ತವ|

07162052c ಸಂಸ್ಮೃತ್ಯ ಸರ್ವದುಃಖಾನಿ ತವ ದುರ್ಮಂತ್ರಿತೇನ ಚ||

ನಿನ್ನ ದುರ್ಮಂತ್ರದಿಂದ ನಡೆಯಲ್ಪಟ್ಟ ಎಲ್ಲ ದುಃಖಗಳನ್ನು ಸ್ಮರಿಸಿಕೊಳ್ಳುತ್ತಾ ನಕುಲನು ನಿನ್ನ ಮಗನಿಗೆ “ನಿಲ್ಲು! ನಿಲ್ಲು!” ಎಂದು ಕೂಗಿ ಹೇಳಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ನಕುಲಯುದ್ಧೇ ದ್ವಿಷಷ್ಟ್ಯಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ನಕುಲಯುದ್ಧ ಎನ್ನುವ ನೂರಾಅರವತ್ತೆರಡನೇ ಅಧ್ಯಾಯವು.

Related image

Comments are closed.