Drona Parva: Chapter 163

ದ್ರೋಣ ಪರ್ವ: ದ್ರೋಣವಧ ಪರ್ವ

೧೬೩

ದುಃಶಾಸನ-ಸಹದೇವರ ಯುದ್ಧ (೧-೧೦). ಕರ್ಣ-ಭೀಮಸೇನರ ಯುದ್ಧ (೧೧-೨೦). ದ್ರೋಣಾರ್ಜುನರ ಯುದ್ಧ (೨೧-೪೬). ಸಂಕುಲಯುದ್ಧ (೪೭-೪೯-).

07163001 ಸಂಜಯ ಉವಾಚ|

07163001a ತತೋ ದುಃಶಾಸನಃ ಕ್ರುದ್ಧಃ ಸಹದೇವಮುಪಾದ್ರವತ್|

07163001c ರಥವೇಗೇನ ತೀವ್ರೇಣ ಕಂಪಯನ್ನಿವ ಮೇದಿನೀಂ||

ಸಂಜಯನು ಹೇಳಿದನು: ಆಗ ದುಃಶಾಸನನು ಕ್ರುದ್ಧನಾಗಿ ಮೇದಿನಿಯನ್ನು ನಡುಗಿಸುವಂಥಹ ತೀವ್ರ ರಥವೇಗದಿಂದ ಸಹದೇವನನ್ನು ಆಕ್ರಮಣಿಸಿದನು.

07163002a ತಸ್ಯಾಪತತ ಏವಾಶು ಭಲ್ಲೇನಾಮಿತ್ರಕರ್ಶನಃ|

07163002c ಮಾದ್ರೀಸುತಃ ಶಿರೋ ಯಂತುಃ ಸಶಿರಸ್ತ್ರಾಣಮಚ್ಚಿನತ್||

ಅವನು ಬಂದೆರಗುವುದರೊಳಗೆ ಅಮಿತ್ರಕರ್ಶನ ಮಾದ್ರೀಸುತನು ಭಲ್ಲದಿಂದ ಅವನ ಸಾರಥಿಯ ಶಿರವನ್ನು, ಶಿರಸ್ತ್ರಾಣದೊಂದಿಗೆ, ಕತ್ತರಿಸಿದನು.

07163003a ನೈನಂ ದುಃಶಾಸನಃ ಸೂತಂ ನಾಪಿ ಕಶ್ಚನ ಸೈನಿಕಃ|

07163003c ಹೃತೋತ್ತಮಾಂಗಮಾಶುತ್ವಾತ್ಸಹದೇವೇನ ಬುದ್ಧವಾನ್||

ಸಹದೇವನು ಆಶುಗಗಳಿಂದ ವೇಗವಾಗಿ ಸಾರಥಿಯ ಶಿರವನ್ನು ಕತ್ತರಿಸಿದುದು ದುಃಶಾಸನನಿಗಾಗಲೀ ಅಥವಾ ಬೇರೆ ಯಾವ ಸೈನಿಕರಿಗಾಗಲೀ ತಿಳಿಯಲೇ ಇಲ್ಲ.

07163004a ಯದಾ ತ್ವಸಂಗೃಹೀತತ್ವಾತ್ಪ್ರಯಾಂತ್ಯಶ್ವಾ ಯಥಾಸುಖಂ|

07163004c ತತೋ ದುಃಶಾಸನಃ ಸೂತಂ ಬುದ್ಧವಾನ್ಗತಚೇತಸಂ||

ಹಿಡಿಯದೇ ಇದ್ದುದರಿಂದ ಯಥಾಸುಖವಾಗಿ ಕುದುರೆಗಳು ಹೋಗುತ್ತಿದ್ದಾಗಲೇ ಸಾರಥಿಯು ಹತನಾದುದುದನ್ನು ದುಃಶಾಸನನು ತಿಳಿದುಕೊಂಡನು.

07163005a ಸ ಹಯಾನ್ಸಮ್ನಿಗೃಹ್ಯಾಜೌ ಸ್ವಯಂ ಹಯವಿಶಾರದಃ|

07163005c ಯುಯುಧೇ ರಥಿನಾಂ ಶ್ರೇಷ್ಠಶ್ಚಿತ್ರಂ ಲಘು ಚ ಸುಷ್ಠು ಚ||

ರಥಿಗಳಲ್ಲಿ ಶ್ರೇಷ್ಠ ಹಯವಿಶಾರದ ದುಃಶಾಸನನು ಸ್ವಯಂ ತಾನೇ ಕುದುರೆಗಳ ಕಡಿವಾಣಗಳನ್ನು ಹಿಡಿದು ನಡೆಸಿ ವಿಚಿತ್ರ, ಲಘು ಮತ್ತು ಖಡಾ-ಖಡಿ ಭಂಗಿಗಳಲ್ಲಿ ಯುದ್ಧಮಾಡಿದನು.

07163006a ತದಸ್ಯಾಪೂಜಯನ್ಕರ್ಮ ಸ್ವೇ ಪರೇ ಚೈವ ಸಮ್ಯುಗೇ|

07163006c ಹತಸೂತರಥೇನಾಜೌ ವ್ಯಚರದ್ಯದಭೀತವತ್||

ಸೂತನು ಹತನಾಗಿದ್ದ ರಥವನ್ನು ನಡೆಸುತ್ತಾ ಭಯವಿಲ್ಲದೇ ರಣದಲ್ಲಿ ಸಂಚರಿಸುತ್ತಿದ್ದ ಅವನ ಆ ಕರ್ಮವನ್ನು ನಮ್ಮವರೂ ಶತ್ರುಗಳೂ ಪ್ರಶಂಸಿಸಿದರು.

07163007a ಸಹದೇವಸ್ತು ತಾನಶ್ವಾಂಸ್ತೀಕ್ಷ್ಣೈರ್ಬಾಣೈರವಾಕಿರತ್|

07163007c ಪೀಡ್ಯಮಾನಾಃ ಶರೈಶ್ಚಾಶು ಪ್ರಾದ್ರವಂಸ್ತೇ ತತಸ್ತತಃ||

ಸಹದೇವನಾದರೋ ಆ ಕುದುರೆಗಳನ್ನು ತೀಕ್ಷ್ಣ ಬಾಣಗಳಿಂದ ಮುಚ್ಚಿದನು. ಬಾಣಗಳಿಂದ ಪೀಡಿತರಾದ ಅವು ಅಲ್ಲಲ್ಲಿ ಓಡತೊಡಗಿದವು.

07163008a ಸ ರಶ್ಮಿಷು ವಿಷಕ್ತತ್ವಾದುತ್ಸಸರ್ಜ ಶರಾಸನಂ|

07163008c ಧನುಷಾ ಕರ್ಮ ಕುರ್ವಂಸ್ತು ರಶ್ಮೀನ್ಸ ಪುನರುತ್ಸೃಜತ್||

ಆಗ ದುಃಶಾಸನನು ಧನುಸ್ಸನ್ನು ಬಿಟ್ಟು ಕಡಿವಾಣಗಳನ್ನು ಹಿಡಿದು ರಥವನ್ನು ನಿಯಂತ್ರಿಸಿ, ಅದಾದನಂತರ ಕಡಿವಾಣಗಳನ್ನು ಬಿಟ್ಟು ಧನುಸ್ಸಿನಿಂದ ಕೆಲಸಮಾಡುತ್ತಿದ್ದನು.

07163009a ಚಿದ್ರೇಷು ತೇಷು ತಂ ಬಾಣೈರ್ಮಾದ್ರೀಪುತ್ರೋಽಭ್ಯವಾಕಿರತ್|

07163009c ಪರೀಪ್ಸಂಸ್ತ್ವತ್ಸುತಂ ಕರ್ಣಸ್ತದಂತರಮವಾಪತತ್||

ಅವನ ಆ ದುರ್ಬಲ ಕ್ಷಣಗಳಲ್ಲಿ ಮಾದ್ರೀಪುತ್ರನು ದುಃಶಾಸನನನ್ನ್ನು ಬಾಣಗಳಿಂದ ಮುಚ್ಚಿಬಿಡುತ್ತಿದ್ದನು. ಆ ಮಧ್ಯದಲ್ಲಿ ನಿನ್ನ ಮಗನನ್ನು ರಕ್ಷಿಸಲು ಕರ್ಣನು ಮುಂದೆಬಂದನು.

07163010a ವೃಕೋದರಸ್ತತಃ ಕರ್ಣಂ ತ್ರಿಭಿರ್ಭಲ್ಲೈಃ ಸಮಾಹಿತೈಃ|

07163010c ಆಕರ್ಣಪೂರ್ಣೈರಭ್ಯಘ್ನನ್ಬಾಹ್ವೋರುರಸಿ ಚಾನದತ್||

ಆಗ ವೃಕೋದರನು ಸಮಾಹಿತನಾಗಿ ಮೂರು ಭಲ್ಲಗಳನ್ನು ಆಕರ್ಣಪೂರ್ಣವಾಗಿ ಸೆಳೆದು ಕರ್ಣನ ಬಾಹುಗಳೆರಡಕ್ಕೂ ಮತ್ತು ಎದೆಗೂ ಹೊಡೆದು ಗರ್ಜಿಸಿದನು.

07163011a ಸಮ್ನ್ಯವರ್ತತ ತಂ ಕರ್ಣಃ ಸಂಘಟ್ಟಿತ ಇವೋರಗಃ|

07163011c ತದಭೂತ್ತುಮುಲಂ ಯುದ್ಧಂ ಭೀಮರಾಧೇಯಯೋಸ್ತದಾ||

ತುಳಿಯಲ್ಪಟ್ಟ ಸರ್ಪದಂತೆ ಕರ್ಣನು ಅವನನ್ನು ತಡೆಗಟ್ಟಿದನು. ಆಗ ಭೀಮ-ರಾಧೇಯರ ನಡುವೆ ತುಮುಲ ಯುದ್ಧವು ಪ್ರಾರಂಭವಾಯಿತು.

07163012a ತೌ ವೃಷಾವಿವ ಸಂಕ್ರುದ್ಧೌ ವಿವೃತ್ತನಯನಾವುಭೌ|

07163012c ವೇಗೇನ ಮಹತಾನ್ಯೋನ್ಯಂ ಸಂರಬ್ಧಾವಭಿಪೇತತುಃ||

ಎರಡು ಹೋರಿಗಳಂತೆ ಸಂಕ್ರುದ್ಧರಾಗಿದ್ದ, ತೆರಳಿದ ಕಣ್ಣಿದ್ದ ಅವರಿಬ್ಬರೂ ಮಹಾ ವೇಗದಿಂದ ಸಂರಬ್ಧರಾಗಿ ಅನ್ಯೋನ್ಯರ ಮೇಲೆ ಎರಗಿದರು.

07163013a ಅಭಿಸಂಶ್ಲಿಷ್ಟಯೋಸ್ತತ್ರ ತಯೋರಾಹವಶೌಂಡಯೋಃ|

07163013c ಅಭಿನ್ನಶರಪಾತತ್ವಾದ್ಗದಾಯುದ್ಧಮವರ್ತತ||

ಯುದ್ಧಕೌಶಲರಾದ ಇಬ್ಬರೂ ಅಂಟಿಕೊಂಡು ಯುದ್ಧಮಾಡುತ್ತಿರುವುದರಿಂದ ಬಾಣಗಳ ಸುರಿಮಳೆಗಳನ್ನು ನಿಲ್ಲಿಸಿ ಗದಾಯುದ್ಧವನ್ನು ಪ್ರಾರಂಭಿಸಿದರು.

07163014a ಗದಯಾ ಭೀಮಸೇನಸ್ತು ಕರ್ಣಸ್ಯ ರಥಕೂಬರಂ|

07163014c ಬಿಭೇದಾಶು ತದಾ ರಾಜಂಸ್ತದದ್ಭುತಮಿವಾಭವತ್||

ರಾಜನ್! ಭೀಮಸೇನನಾದರೋ ಕರ್ಣನ ರಥದ ಮೂಕಿಯನ್ನು ಗದೆಯಿಂದ ಚೂರುಮಾಡಿದನು. ಅದೊಂದು ಅದ್ಭುತವಾಯಿತು.

07163015a ತತೋ ಭೀಮಸ್ಯ ರಾಧೇಯೋ ಗದಾಮಾದಾಯ ವೀರ್ಯವಾನ್|

07163015c ಅವಾಸೃಜದ್ ರಥೇ ತಾಂ ತು ಬಿಭೇದ ಗದಯಾ ಗದಾಂ||

ಆಗ ವೀರ್ಯವಾನ್ ರಾಧೇಯನು ಗದೆಯನ್ನು ಎತ್ತಿಕೊಂಡು ಭೀಮನ ರಥದ ಮೇಲೆ ಎಸೆಯಲು ಅವನು ಆ ಗದೆಯನ್ನು ಇನ್ನೊಂದು ಗದೆಯಿಂದ ಹೊಡೆದು ಪುಡಿಮಾಡಿದನು.

07163016a ತತೋ ಭೀಮಃ ಪುನರ್ಗುರ್ವೀಂ ಚಿಕ್ಷೇಪಾಧಿರಥೇರ್ಗದಾಂ|

07163016c ತಾಂ ಶರೈರ್ದಶಭಿಃ ಕರ್ಣಃ ಸುಪುಂಖೈಃ ಸುಸಮಾಹಿತೈಃ|

07163016e ಪ್ರತ್ಯವಿಧ್ಯತ್ಪುನಶ್ಚಾನ್ಯೈಃ ಸಾ ಭೀಮಂ ಪುನರಾವ್ರಜತ್||

ಆಗ ಭೀಮನು ಪುನಃ ಭಾರವಾದ ಗದೆಯೊಂದನ್ನು ಆಧಿರಥನ ಮೇಲೆ ಎಸೆದನು. ಅದನ್ನು ಕರ್ಣನು ಗುರಿಯಿಟ್ಟು ಪುಂಖಗಳುಳ್ಳ ಹತ್ತು ಶರಗಳಿಂದ ಹೊಡೆದನು. ಬಾಣಗಳಿಂದ ಪ್ರಹರಿಸಲ್ಪಟ್ಟ ಆ ಗದೆಯು ಪುನಃ ಭೀಮನ ಬಳಿ ಹಿಂದಿರುಗಿತು.

07163017a ತಸ್ಯಾಃ ಪ್ರತಿನಿಪಾತೇನ ಭೀಮಸ್ಯ ವಿಪುಲೋ ಧ್ವಜಃ|

07163017c ಪಪಾತ ಸಾರಥಿಶ್ಚಾಸ್ಯ ಮುಮೋಹ ಗದಯಾ ಹತಃ||

ಅದರ ಬೀಳುವಿಕೆಯಿಂದ ಭೀಮನ ವಿಶಾಲ ಧ್ವಜವು ಕೆಳಗೆ ಬಿದ್ದಿತು ಮತ್ತು ಗದೆಯಿಂದ ಹೊಡೆಯಲ್ಪಟ್ಟು ಸಾರಥಿಯೂ ಮೂರ್ಛಿತನಾದನು.

07163018a ಸ ಕರ್ಣೇ ಸಾಯಕಾನಷ್ಟೌ ವ್ಯಸೃಜತ್ಕ್ರೋಧಮೂರ್ಚಿತಃ|

07163018c ಧ್ವಜೇ ಶರಾಸನೇ ಚೈವ ಶರಾವಾಪೇ ಚ ಭಾರತ||

ಭಾರತ! ಅವನು ಕ್ರೋಧಮೂರ್ಚಿತನಾಗಿ ಕರ್ಣನ ಮೇಲೆ ಅವನ ಧ್ವಜ, ಧನುಸ್ಸು ಮತ್ತು ಬತ್ತಳಿಕೆಗಳಿಗೆ ಗುರಿಯಿಟ್ಟು ಎಂಟು ಸಾಯಕಗಳನ್ನು ಪ್ರಯೋಗಿಸಿದನು.

07163019a ತತಃ ಪುನಸ್ತು ರಾಧೇಯೋ ಹಯಾನಸ್ಯ ರಥೇಷುಭಿಃ|

07163019c ಋಷ್ಯವರ್ಣಾಂ ಜಘಾನಾಶು ತಥೋಭೌ ಪಾರ್ಷ್ಣಿಸಾರಥೀ||

ಆಗ ರಾಧೇಯನು ಪುನಃ ಭೀಮನ ಕರಡೀ ಬಣ್ಣದ ಕುದುರೆಗಳನ್ನೂ, ರಥದ ನೊಗವನ್ನೂ ಮತ್ತು ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ನಾಶಗೊಳಿಸಿದನು.

07163020a ಸ ವಿಪನ್ನರಥೋ ಭೀಮೋ ನಕುಲಸ್ಯಾಪ್ಲುತೋ ರಥಂ|

07163020c ಹರಿರ್ಯಥಾ ಗಿರೇಃ ಶೃಂಗಂ ಸಮಾಕ್ರಾಮದರಿಂದಮಃ||

ರಥಹೀನನಾದ ಅರಿಂದಮ ಭೀಮನು ಸಿಂಹವು ಪರ್ವತ ಶಿಖರಕ್ಕೆ ನೆಗಯುವಂತೆ ನಕುಲನ ರಥಕ್ಕೆ ಹಾರಿ ಕುಳಿತನು.

07163021a ತಥಾ ದ್ರೋಣಾರ್ಜುನೌ ಚಿತ್ರಮಯುಧ್ಯೇತಾಂ ಮಹಾರಥೌ|

07163021c ಆಚಾರ್ಯಶಿಷ್ಯೌ ರಾಜೇಂದ್ರ ಕೃತಪ್ರಹರಣೌ ಯುಧಿ||

ರಾಜೇಂದ್ರ! ಹಾಗೆಯೇ ಮಹಾರಥ, ಆಚಾರ್ಯ-ಶಿಷ್ಯ, ಯುದ್ಧಪ್ರಹರಣಗಳಲ್ಲಿ ಕುಶಲ ದ್ರೋಣ-ಅರ್ಜುನರು ವಿಚಿತ್ರ ಯುದ್ಧದಲ್ಲಿ ತೊಡಗಿದ್ದರು.

07163022a ಲಘುಸಂಧಾನಯೋಗಾಭ್ಯಾಂ ರಥಯೋಶ್ಚ ರಣೇನ ಚ|

07163022c ಮೋಹಯಂತೌ ಮನುಷ್ಯಾಣಾಂ ಚಕ್ಷೂಂಷಿ ಚ ಮನಾಂಸಿ ಚ||

07163023a ಉಪಾರಮಂತ ತೇ ಸರ್ವೇ ಯೋಧಾಸ್ಮಾಕಂ ಪರೇ ತಥಾ|

07163023c ಅದೃಷ್ಟಪೂರ್ವಂ ಪಶ್ಯಂತಸ್ತದ್ಯುದ್ಧಂ ಗುರುಶಿಷ್ಯಯೋಃ||

ಬಾಣಗಳ ಸಂಧಾನ-ಪ್ರಯೋಗಗಳ ಲುಘುತ್ವದಿಂದಲೂ, ದ್ವೈರಥ ಯುದ್ಧದಿಂದಲೂ, ರಣದಲ್ಲಿ ಮನುಷ್ಯರ ಕಣ್ಣು-ಮನಸ್ಸುಗಳನ್ನು ಭ್ರಮೆಗೊಳಿಸುತ್ತಿದ್ದ, ಹಿಂದೆಂದೂ ನೋಡದಿದ್ದ ಆ ಗುರುಶಿಷ್ಯರ ಯುದ್ಧವನ್ನು ನೋಡುತ್ತಾ ನಮ್ಮವರ ಮತ್ತು ಶತ್ರುಗಳ ಎಲ್ಲ ಯೋಧರೂ ಯುದ್ಧದಿಂದ ಸ್ವಲ್ಪ ವಿರಮಿಸಿದರು.

07163024a ವಿಚಿತ್ರಾನ್ಪೃತನಾಮಧ್ಯೇ ರಥಮಾರ್ಗಾನುದೀರ್ಯತಃ|

07163024c ಅನ್ಯೋನ್ಯಮಪಸವ್ಯಂ ಚ ಕರ್ತುಂ ವೀರೌ ತದೈಷತುಃ|

07163024e ಪರಾಕ್ರಮಂ ತಯೋರ್ಯೋಧಾ ದದೃಶುಸ್ತಂ ಸುವಿಸ್ಮಿತಾಃ||

ಸೇನೆಗಳ ಮಧ್ಯದಿಂದ ರಥಮಾರ್ಗದಲ್ಲಿ ನುಸುಳಿಕೊಳ್ಳುತ್ತಾ ಅನ್ಯೋನ್ಯರನ್ನು ಬಲಬಾಗದಲ್ಲಿಟ್ಟುಕೊಂಡು ಯುದ್ಧಮಾಡಲು ಆ ವೀರರಿಬ್ಬರೂ ಪ್ರಯತ್ನಿಸುತ್ತಿದ್ದರು. ಅವರ ಆ ಪರಾಕ್ರಮವನ್ನು ಯೋಧರು ವಿಸ್ಮಿತರಾಗಿ ನೋಡುತ್ತಿದ್ದರು.

07163025a ತಯೋಃ ಸಮಭವದ್ಯುದ್ಧಂ ದ್ರೋಣಪಾಂಡವಯೋರ್ಮಹತ್|

07163025c ಆಮಿಷಾರ್ಥಂ ಮಹಾರಾಜ ಗಗನೇ ಶ್ಯೇನಯೋರಿವ||

ಮಾಂಸದ ತುಂಡಿಗಾಗಿ ಗಗನದಲ್ಲಿ ಎರಡು ಗಿಡುಗಗಳ ನಡುವೆ ನಡೆಯುವಂತೆ ದ್ರೋಣ-ಪಾಂಡವರೊಡನೆ ಮಹಾ ಯುದ್ಧವು ನಡೆಯಿತು.

07163026a ಯದ್ಯಚ್ಚಕಾರ ದ್ರೋಣಸ್ತು ಕುಂತೀಪುತ್ರಜಿಗೀಷಯಾ|

07163026c ತತ್ತತ್ಪ್ರತಿಜಘಾನಾಶು ಪ್ರಹಸಂಸ್ತಸ್ಯ ಪಾಂಡವಃ||

ಕುಂತೀಪುತ್ರನನ್ನು ಗೆಲ್ಲಲು ದ್ರೋಣನು ಏನನ್ನು ಮಾಡುತ್ತಿದ್ದನೋ ಅದನ್ನು ನಗುತ್ತಾ ಪಾಂಡವನು ಪ್ರತಿಯಾಗಿ ನಾಶಗೊಳಿಸುತ್ತಿದ್ದನು.

07163027a ಯದಾ ದ್ರೋಣೋ ನ ಶಕ್ನೋತಿ ಪಾಂಡವಸ್ಯ ವಿಶೇಷಣೇ|

07163027c ತತಃ ಪ್ರಾದುಶ್ಚಕಾರಾಸ್ತ್ರಮಸ್ತ್ರಮಾರ್ಗವಿಶಾರದಃ||

ದ್ರೋಣನು ಪಾಂಡವನನ್ನು ಮೀರಿಸಲು ಶಕ್ಯನಾಗದಿರಲು ಆ ಅಸ್ತ್ರಮಾರ್ಗವಿಶಾರದನು ಅಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದನು.

07163028a ಐಂದ್ರಂ ಪಾಶುಪತಂ ತ್ವಾಷ್ಟ್ರಂ ವಾಯವ್ಯಮಥ ವಾರುಣಂ|

07163028c ಮುಕ್ತಂ ಮುಕ್ತಂ ದ್ರೋಣಚಾಪಾತ್ತಜ್ಜಘಾನ ಧನಂಜಯಃ||

ದ್ರೋಣನ ಧನುಸ್ಸಿನಿಂದ ಹೊರಬೀಳುತ್ತಿದ್ದ ಐಂದ್ರ, ಪಾಶುಪತ, ತ್ವಾಷ್ಟ, ವಾಯವ್ಯ, ಮತ್ತು ವಾರುಣ ಅಸ್ತ್ರಗಳನ್ನು ಧನಂಜಯನು ಅವುಗಳನ್ನೇ ಪ್ರಯೋಗಿಸಿ ನಾಶಗೊಳಿಸಿದನು.

07163029a ಅಸ್ತ್ರಾಣ್ಯಸ್ತ್ರೈರ್ಯದಾ ತಸ್ಯ ವಿಧಿವದ್ಧಂತಿ ಪಾಂಡವಃ|

07163029c ತತೋಽಸ್ತ್ರೈಃ ಪರಮೈರ್ದಿವ್ಯೈರ್ದ್ರೋಣಃ ಪಾರ್ಥಮವಾಕಿರತ್||

ಅವನ ಅಸ್ತ್ರಗಳನ್ನು ಪಾಂಡವನು ಅಸ್ತ್ರಗಳಿಂದ ಪ್ರಶಮನಗೊಳಿಸುತ್ತಿರಲು ದ್ರೋಣನು ಪರಮ ದಿವ್ಯ ಅಸ್ತ್ರಗಳಿಂದ ಪಾರ್ಥನನ್ನು ಮುಚ್ಚಿದನು.

07163030a ಯದ್ಯದಸ್ತ್ರಂ ಸ ಪಾರ್ಥಾಯ ಪ್ರಯುಂಕ್ತೇ ವಿಜಿಗೀಷಯಾ|

07163030c ತಸ್ಯಾಸ್ತ್ರಸ್ಯ ವಿಘಾತಾರ್ಥಂ ತತ್ತತ್ಸ ಕುರುತೇಽರ್ಜುನಃ||

ಪಾರ್ಥನನ್ನು ಗೆಲ್ಲಲು ಯಾವ ಅಸ್ತ್ರವನ್ನು ಅವನು ಪ್ರಯೋಗಿಸುತ್ತಿದ್ದನೋ ಅವುಗಳನ್ನು ಅದೇ ಅಸ್ತ್ರಗಳಿಂದ ಅರ್ಜುನನು ಪ್ರಶಮನಗೊಳಿಸುತ್ತಿದ್ದನು.

07163031a ಸ ವಧ್ಯಮಾನೇಷ್ವಸ್ತ್ರೇಷು ದಿವ್ಯೇಷ್ವಪಿ ಯಥಾವಿಧಿ|

07163031c ಅರ್ಜುನೇನಾರ್ಜುನಂ ದ್ರೋಣೋ ಮನಸೈವಾಭ್ಯಪೂಜಯತ್||

ದಿವ್ಯ‌ಅಸ್ತ್ರಗಳನ್ನು ಅಸ್ತ್ರಗಳಿಂದ ಯಥಾವಿಧಿಯಾಗಿ ಅರ್ಜುನನು ನಾಶಗೊಳಿಸುತ್ತಿರಲು ಅರ್ಜುನನನ್ನು ದ್ರೋಣನು ಮನಸ್ಸಿನಲ್ಲಿಯೇ ಪ್ರಶಂಸಿಸಿದನು.

07163032a ಮೇನೇ ಚಾತ್ಮಾನಮಧಿಕಂ ಪೃಥಿವ್ಯಾಮಪಿ ಭಾರತ|

07163032c ತೇನ ಶಿಷ್ಯೇಣ ಸರ್ವೇಭ್ಯಃ ಶಸ್ತ್ರವಿದ್ಭ್ಯಃ ಸಮಂತತಃ||

ಭಾರತ! ತನ್ನ ಶಿಷ್ಯನಿಂದಾಗಿ ಅವನು ತನ್ನನ್ನು ತಾನೇ ಇಡೀ ಪೃಥ್ವಿಯಲ್ಲಿ ಎಲ್ಲಕಡೆ ಇದ್ದ ಶಸ್ತ್ರವಿದುಗಳಲ್ಲಿ ಶ್ರೇಷ್ಠನೆಂದು ತಿಳಿದುಕೊಂಡನು.

07163033a ವಾರ್ಯಮಾಣಸ್ತು ಪಾರ್ಥೇನ ತಥಾ ಮಧ್ಯೇ ಮಹಾತ್ಮನಾಂ|

07163033c ಯತಮಾನೋಽರ್ಜುನಂ ಪ್ರೀತ್ಯಾ ಪ್ರತ್ಯವಾರಯದುತ್ಸ್ಮಯನ್||

ಆ ಮಹಾತ್ಮರ ಮಧ್ಯೆ ಪಾರ್ಥನಿಂದ ಹಾಗೆ ತಡೆಯಲ್ಪಟ್ಟ ದ್ರೋಣನು ಪ್ರೀತಿಯಿಂದ ಅರ್ಜುನನನ್ನು ತಡೆಯಲು ಪ್ರಯತ್ನಿಸಿ ಯುದ್ಧಮಾಡುತ್ತಿದ್ದನು.

07163034a ತತೋಽಂತರಿಕ್ಷೇ ದೇವಾಶ್ಚ ಗಂಧರ್ವಾಶ್ಚ ಸಹಸ್ರಶಃ|

07163034c ಋಷಯಃ ಸಿದ್ಧಸಂಘಾಶ್ಚ ವ್ಯತಿಷ್ಠಂತ ದಿದೃಕ್ಷಯಾ||

ಆಗ ಅಂತರಿಕ್ಷದಲ್ಲಿ ಸಹಸ್ರಾರು ದೇವತೆಗಳೂ, ಗಂಧರ್ವರೂ, ಋಷಿಗಳೂ ಸಿದ್ಧಸಂಘಗಳೂ ಯುದ್ಧವನ್ನು ನೋಡುವ ಇಚ್ಛೆಯಿಂದ ನೆರೆದಿದ್ದರು.

07163035a ತದಪ್ಸರೋಭಿರಾಕೀರ್ಣಂ ಯಕ್ಷರಾಕ್ಷಸಸಂಕುಲಂ|

07163035c ಶ್ರೀಮದಾಕಾಶಮಭವದ್ಭೂಯೋ ಮೇಘಾಕುಲಂ ಯಥಾ||

ಅಪ್ಸರೆಯರ ಸಂಕೀರ್ಣದಿಂದ ಮತ್ತು ಯಕ್ಷ-ರಾಕ್ಷಸ ಸಂಕುಲಗಳಿಂದ ಕೂಡಿದ್ದ ಶೀಮದಾಕಾಶವು ಮೇಘಸಂಕುಲಗಳಿಂದ ಕೂಡಿರುವಂತೆ ಶೋಭಿಸುತ್ತಿತ್ತು.

07163036a ತತ್ರ ಸ್ಮಾಂತರ್ಹಿತಾ ವಾಚೋ ವ್ಯಚರಂತ ಪುನಃ ಪುನಃ|

07163036c ದ್ರೋಣಸ್ಯ ಸ್ತವಸಮ್ಯುಕ್ತಾಃ ಪಾರ್ಥಸ್ಯ ಚ ಮಹಾತ್ಮನಃ|

07163036e ವಿಸೃಜ್ಯಮಾನೇಷ್ವಸ್ತ್ರೇಷು ಜ್ವಾಲಯತ್ಸು ದಿಶೋ ದಶ||

ಧನುಸ್ಸುಗಳ ಟೇಂಕಾರ ಮತ್ತು ಮಹಾಸ್ತ್ರಗಳ ಪ್ರಯೋಗದ ಧ್ವನಿ ಹತ್ತು ದಿಕ್ಕುಗಳಲ್ಲಿಯೂ ಮೊಳಗಿ ಕೇಳಿಬರುತ್ತಿತ್ತು. ಅಲ್ಲಿ ಅಂತರ್ಧಾನರು ಮಹಾತ್ಮ ದ್ರೋಣ ಮತ್ತು ಪಾರ್ಥರನ್ನು ಪುನಃ ಪುನಃ ಸ್ತುತಿಸಿ ಹೀಗೆ ಮಾತನಾಡಿಕೊಳ್ಳುತ್ತಾ ಸಂಚರಿಸುತ್ತಿದ್ದರು:

07163037a ನೈವೇದಂ ಮಾನುಷಂ ಯುದ್ಧಂ ನಾಸುರಂ ನ ಚ ರಾಕ್ಷಸಂ|

07163037c ನ ದೈವಂ ನ ಚ ಗಾಂಧರ್ವಂ ಬ್ರಾಹ್ಮಂ ಧ್ರುವಮಿದಂ ಪರಂ|

07163037e ವಿಚಿತ್ರಮಿದಮಾಶ್ಚರ್ಯಂ ನ ನೋ ದೃಷ್ಟಂ ನ ಚ ಶ್ರುತಂ||

“ಇದು ಮನುಷ್ಯಯುದ್ಧವೂ ಅಲ್ಲ. ಅಸುರ ಅಥವಾ ರಾಕ್ಷಸ ಯುದ್ಧವೂ ಅಲ್ಲ. ಇದು ದೇವತೆಗಳ ಅಥವಾ ಗಂಧರ್ವರ ಅಥವಾ ನಿಶ್ಚಯವಾಗಿಯೂ ಪರಮ ಬ್ರಾಹ್ಮೀ ಯುದ್ಧವೂ ಅಲ್ಲ. ಇಂತಹ ವಿಚಿತ್ರ ಆಶ್ಚರ್ಯವನ್ನು ನಾವು ನೋಡಿರಲಿಲ್ಲ ಮತ್ತು ಕೇಳಿರಲಿಲ್ಲ.

07163038a ಅತಿ ಪಾಂಡವಮಾಚಾರ್ಯೋ ದ್ರೋಣಂ ಚಾಪ್ಯತಿ ಪಾಂಡವಃ|

07163038c ನಾನಯೋರಂತರಂ ದ್ರಷ್ಟುಂ ಶಕ್ಯಮಸ್ತ್ರೇಣ ಕೇನ ಚಿತ್||

ಆಚಾರ್ಯನು ಪಾಂಡವನನ್ನು ಮೀರಿಸಲು ನೋಡುತ್ತಿದ್ದರೆ ಪಾಂಡವನು ದ್ರೋಣನನ್ನು ಅತಿಶಯಿಸಲು ನೋಡುತ್ತಿದ್ದಾನೆ. ಇವರಿಬ್ಬರ ಅಸ್ತ್ರಯುದ್ಧದಲ್ಲಿ ಯಾವುದೇ ರೀತಿಯ ವ್ಯತ್ಯಾಸವನ್ನು ಕಾಣಲು ಶಕ್ಯವಿಲ್ಲ.

07163039a ಯದಿ ರುದ್ರೋ ದ್ವಿಧಾಕೃತ್ಯ ಯುಧ್ಯೇತಾತ್ಮಾನಮಾತ್ಮನಾ|

07163039c ತತ್ರ ಶಕ್ಯೋಪಮಾ ಕರ್ತುಮನ್ಯತ್ರ ತು ನ ವಿದ್ಯತೇ||

ಒಂದುವೇಳೆ ರುದ್ರನೇ ಎರಡಾಗಿ ತನ್ನೊಡನೆ ತಾನೇ ಯುದ್ಧಮಾಡುತ್ತಿದ್ದಾನೆಂದರೆ ಅದಕ್ಕೆ ಈ ಯುದ್ಧವನ್ನು ತುಲನೆ ಮಾಡಬಹುದಾಗಿದೆ. ಹೊರತಾಗಿ ಇವರ ಯುದ್ಧಕ್ಕೆ ಬೇರೆ ಯಾವ ಉಪಮೆಯೂ ಇಲ್ಲ.

07163040a ಜ್ಞಾನಮೇಕಸ್ಥಮಾಚಾರ್ಯೇ ಜ್ಞಾನಂ ಯೋಗಶ್ಚ ಪಾಂಡವೇ|

07163040c ಶೌರ್ಯಮೇಕಸ್ಥಮಾಚಾರ್ಯೇ ಬಲಂ ಶೌರ್ಯಂ ಚ ಪಾಂಡವೇ||

ಜ್ಞಾನವು ಆಚಾರ್ಯನಲ್ಲಿ ಏಕತ್ರವಾಗಿದೆಯೆಂದರೆ ಪಾಂಡವನಲ್ಲಿ ಜ್ಞಾನ ಮತ್ತು ಉಪಾಯಗಳೆರಡು ಇವೆ. ಆಚಾರ್ಯನಲ್ಲಿ ಶೌರ್ಯವೊಂದಿದ್ದರೆ ಪಾಂಡವನಲ್ಲಿ ಬಲ ಮತ್ತು ಶೌರ್ಯಗಳೆರಡೂ ಇವೆ.

07163041a ನೇಮೌ ಶಕ್ಯೌ ಮಹೇಷ್ವಾಸೌ ರಣೇ ಕ್ಷೇಪಯಿತುಂ ಪರೈಃ|

07163041c ಇಚ್ಚಮಾನೌ ಪುನರಿಮೌ ಹನ್ಯೇತಾಂ ಸಾಮರಂ ಜಗತ್||

ಈ ಇಬ್ಬರು ಮಹೇಷ್ವಾಸರನ್ನು ರಣದಲ್ಲಿ ಯಾವ ಶತ್ರುವೂ ಕೆಳಗುರುಳಿಸಲಾರನು! ಆದರೆ ಇಚ್ಛಿಸಿದರೆ ಇವರಿಬ್ಬರೂ ಇಡೀ ಜಗತ್ತನ್ನೇ ನಾಶಗೊಳಿಸಬಲ್ಲರು.”

07163042a ಇತ್ಯಬ್ರುವನ್ಮಹಾರಾಜ ದೃಷ್ಟ್ವಾ ತೌ ಪುರುಷರ್ಷಭೌ|

07163042c ಅಂತರ್ಹಿತಾನಿ ಭೂತಾನಿ ಪ್ರಕಾಶಾನಿ ಚ ಸಂಘಶಃ||

ಮಹಾರಾಜ! ಅವರಿಬ್ಬರು ಪುರುಷರ್ಷಭರನ್ನೂ ನೋಡಿ ಕಾಣದಿರುವ ಮತ್ತು ಕಾಣುವ ಭೂತಗಳು ಹೀಗೆ ಹೇಳಿಕೊಳ್ಳುತ್ತಿದ್ದವು.

07163043a ತತೋ ದ್ರೋಣೋ ಬ್ರಾಹ್ಮಮಸ್ತ್ರಂ ಪ್ರಾದುಶ್ಚಕ್ರೇ ಮಹಾಮತಿಃ|

07163043c ಸಂತಾಪಯನ್ರಣೇ ಪಾರ್ಥಂ ಭೂತಾನ್ಯಂತರ್ಹಿತಾನಿ ಚ||

ಆಗ ಮಹಾಮತಿ ದ್ರೋಣನು ಅದೃಶ್ಯ ಭೂತಗಳನ್ನೂ ರಣದಲ್ಲಿರುವ ಪಾರ್ಥನನ್ನು ಸಂತಾಪಗೊಳಿಸುತ್ತಾ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾದನು.

07163044a ತತಶ್ಚಚಾಲ ಪೃಥಿವೀ ಸಪರ್ವತವನದ್ರುಮಾ|

07163044c ವವೌ ಚ ವಿಷಮೋ ವಾಯುಃ ಸಾಗರಾಶ್ಚಾಪಿ ಚುಕ್ಷುಭುಃ||

ಆಗ ಪರ್ವತ-ವನ-ದ್ರುಮಗಳೊಂದಿಗೆ ಪೃಥ್ವಿಯು ನಡುಗಿತು. ಚಂಡಮಾರುತವು ಬೀಸತೊಡಗಿತು. ಸಾಗರವು ಅಲ್ಲೋಲಕಲ್ಲೋಲಗೊಂಡಿತು.

07163045a ತತಸ್ತ್ರಾಸೋ ಮಹಾನಾಸೀತ್ಕುರುಪಾಂಡವಸೇನಯೋಃ|

07163045c ಸರ್ವೇಷಾಂ ಚೈವ ಭೂತಾನಾಮುದ್ಯತೇಽಸ್ತ್ರೇ ಮಹಾತ್ಮನಾ||

ಮಹಾತ್ಮನು ಬ್ರಹ್ಮಾಸ್ತ್ರವನ್ನು ಎತ್ತಿಕೊಳ್ಳಲು ಕುರುಪಾಂಡವ ಸೇನೆಗಳಲ್ಲಿ ಮತ್ತು ಎಲ್ಲ ಭೂತಗಳಲ್ಲಿ ಮಹಾ ಭಯವುಂಟಾಯಿತು.

07163046a ತತಃ ಪಾರ್ಥೋಽಪ್ಯಸಂಭ್ರಾಂತಸ್ತದಸ್ತ್ರಂ ಪ್ರತಿಜಘ್ನಿವಾನ್|

07163046c ಬ್ರಹ್ಮಾಸ್ತ್ರೇಣೈವ ರಾಜೇಂದ್ರ ತತಃ ಸರ್ವಮಶೀಶಮತ್||

ರಾಜೇಂದ್ರ! ಆಗ ಪಾರ್ಥನು ಗಾಬರಿಗೊಳ್ಳದೇ ಆ ಅಸ್ತ್ರವನ್ನು ಬ್ರಹ್ಮಾಸ್ತ್ರದಿಂದಲೇ ನಾಶಗೊಳಿಸಿದನು. ಆಗ ಎಲ್ಲರ ಮನಸ್ಸಿನಲ್ಲಿದ್ದ ಉದ್ವೇಗಗಳು ಪ್ರಶಮನಗೊಂಡವು.

07163047a ಯದಾ ನ ಗಮ್ಯತೇ ಪಾರಂ ತಯೋರನ್ಯತರಸ್ಯ ವಾ|

07163047c ತತಃ ಸಂಕುಲಯುದ್ಧೇನ ತದ್ಯುದ್ಧಂ ವ್ಯಕುಲೀಕೃತಂ||

ಯಾವಾಗ ಅವರಿಬ್ಬರ ನಡುವಿನ ಯುದ್ಧವು ಕೊನೆಯನ್ನು ಕಾಣಲಿಲ್ಲವೋ, ಯಾವಾಗ ಅನ್ಯೋನ್ಯರನ್ನು ಅವರು ಸೋಲಿಸಲಿಲ್ಲವೋ ಆಗ ಆ ಯುದ್ಧವು ಸಂಕುಲಯುದ್ಧವಾಗಿ ಪರಿಣಮಿಸಿತು.

07163048a ನಾಜ್ಞಾಯತ ತತಃ ಕಿಂ ಚಿತ್ಪುನರೇವ ವಿಶಾಂ ಪತೇ|

07163048c ಪ್ರವೃತ್ತೇ ತುಮುಲೇ ಯುದ್ಧೇ ದ್ರೋಣಪಾಂಡವಯೋರ್ಮೃಧೇ||

ವಿಶಾಂಪತೇ! ರಣದಲ್ಲಿ ದ್ರೋಣ-ಪಾಂಡವರ ಮಧ್ಯೆ ತುಮುಲ ಯುದ್ಧವು ನಡೆಯಲು ಪುನಃ ಅಲ್ಲಿ ಏನು ನಡೆಯುತ್ತಿದೆಯೆನ್ನುವುದೇ ತಿಳಿಯುತ್ತಿರಲಿಲ್ಲ.

07163049a ಶರಜಾಲೈಃ ಸಮಾಕೀರ್ಣೇ ಮೇಘಜಾಲೈರಿವಾಂಬರೇ|

07163049c ನ ಸ್ಮ ಸಂಪತತೇ ಕಶ್ಚಿದಂತರಿಕ್ಷಚರಸ್ತದಾ||

ಆಕಾಶವು ಮೇಘಗಳ ಸಮೂಹಗಳಿಂದ ವ್ಯಾಪ್ತವಾಗುವಂತೆ ಬಾಣಗಳ ಸಮೂಹದಿಂದ ಆಕಾಶವೇ ವ್ಯಾಪ್ತವಾಗಲು, ಅಂತರಿಕ್ಷದಲ್ಲಿ ಚಲಿಸುತ್ತಿದ್ದ ಯಾವ ಪಕ್ಷಿಯೂ ಮುಂದುವರೆಯಲು ಸಾಧ್ಯವಾಗುತ್ತಿರಲಿಲ್ಲ.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ಸಂಕುಲಯುದ್ಧೇ ತ್ರಿಷಷ್ಟ್ಯಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಅರವತ್ಮೂರನೇ ಅಧ್ಯಾಯವು.

Related image

Comments are closed.