Drona Parva: Chapter 161

ದ್ರೋಣ ಪರ್ವ: ದ್ರೋಣವಧ ಪರ್ವ

೧೬೧

ದ್ರುಪದ-ವಿರಾಟರ ವಧೆ; ಧೃಷ್ಟದ್ಯುಮ್ನನ ಪ್ರತಿಜ್ಞೆ

ಕೃಷ್ಣ-ಭೀಮಸೇನರಿಂದ ಪ್ರಚೋದಿತನಾದ ಅರ್ಜುನನು ದ್ರೋಣನನ್ನು ಆಕ್ರಮಣಿಸಿದುದು (೧-೧೪). ಯುದ್ಧವರ್ಣನೆ (೧೫-೨೮). ದ್ರೋಣನು ದ್ರುಪದ-ವಿರಾಟರನ್ನೂ ದ್ರುಪದನ ಮೊಮ್ಮಕ್ಕಳನ್ನೂ ವಧಿಸಿದುದು (೨೯-೩೪). ಧೃಷ್ಟದ್ಯುಮ್ನನ ಪ್ರತಿಜ್ಞೆ (೩೫-೪೦). ಭೀಮಸೇನನಿಂದ ಪ್ರಚೋದಿತನಾದ ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದುದು (೪೧-೫೧).

Image result for drona and parashurama07161001 ಸಂಜಯ ಉವಾಚ|

07161001a ತ್ರಿಭಾಗಮಾತ್ರಶೇಷಾಯಾಂ ರಾತ್ರ್ಯಾಂ ಯುದ್ಧಮವರ್ತತ|

07161001c ಕುರೂಣಾಂ ಪಾಂಡವಾನಾಂ ಚ ಸಂಹೃಷ್ಟಾನಾಂ ವಿಶಾಂ ಪತೇ||

ಸಂಜಯನು ಹೇಳಿದನು: “ವಿಶಾಂಪತೇ! ರಾತ್ರಿಯ ಮೂರುಭಾಗಗಳೇ ಉಳಿದಿರಲು ಸಂಹೃಷ್ಟ ಕುರುಗಳು ಮತ್ತು ಪಾಂಡವರು ಯುದ್ಧವನ್ನು ಪ್ರಾರಂಭಿಸಿದರು.

07161002a ಅಥ ಚಂದ್ರಪ್ರಭಾಂ ಮುಷ್ಣನ್ನಾದಿತ್ಯಸ್ಯ ಪುರಃಸರಃ|

07161002c ಅರುಣೋಽಭ್ಯುದಯಾಂ ಚಕ್ರೇ ತಾಮ್ರೀಕುರ್ವನ್ನಿವಾಂಬರಂ||

ಸ್ವಲ್ಪವೇ ಸಮಯದಲ್ಲಿ ಆದಿತ್ಯನ ಮುಂಭಾಗದಲ್ಲಿರುವ ಅರುಣನು ಚಂದ್ರನ ಪ್ರಭೆಯನ್ನು ಅಪಹರಿಸುತ್ತಾ ಅಂತರಿಕ್ಷವನ್ನೇ ಕೆಂಪಾಗಿ ಮಾಡುತ್ತಾ ಉದಯಿಸಿದನು.

07161003a ತತೋ ದ್ವೈಧೀಕೃತೇ ಸೈನ್ಯೇ ದ್ರೋಣಃ ಸೋಮಕಪಾಂಡವಾನ್|

07161003c ಅಭ್ಯದ್ರವತ್ಸಪಾಂಚಾಲಾನ್ದುರ್ಯೋಧನಪುರೋಗಮಃ||

ಅನಂತರ ಸೈನ್ಯವನ್ನು ಎರಡುಭಾಗಗಳನ್ನಾಗಿ ಮಾಡಿಕೊಂಡು ದ್ರೋಣ ಮತ್ತು ದುರ್ಯೋಧನರ ನೇತ್ರತ್ವದಲ್ಲಿ ಸೋಮಕ-ಪಾಂಡವರನ್ನು ಮತ್ತು ಪಾಂಚಾಲರನ್ನು ಆಕ್ರಮಣಿಸಿದರು.

07161004a ದ್ವೈಧೀಭೂತಾನ್ಕುರೂನ್ದೃಷ್ಟ್ವಾ ಮಾಧವೋಽರ್ಜುನಮಬ್ರವೀತ್|

07161004c ಸಪತ್ನಾನ್ಸವ್ಯತಃ ಕುರ್ಮಿ ಸವ್ಯಸಾಚಿನ್ನಿಮಾನ್ಕುರೂನ್||

ಎರಡು ಭಾಗಗಳಾಗಿದ್ದ ಕುರುಗಳನ್ನು ನೋಡಿ ಮಾಧವನು ಅರ್ಜುನನಿಗೆ ಹೇಳಿದನು: “ಸವ್ಯಸಾಚೀ! ಬಾಂಧವರಾದ ಈ ಕುರುಗಳನ್ನು ನಿನ್ನ ಎಡಭಾಗದಲ್ಲಿರಿಸಿಕೊಂಡು ಹೋಗೋಣ!”

07161005a ಸ ಮಾಧವಮನುಜ್ಞಾಯ ಕುರುಷ್ವೇತಿ ಧನಂಜಯಃ|

07161005c ದ್ರೋಣಕರ್ಣೌ ಮಹೇಷ್ವಾಸೌ ಸವ್ಯತಃ ಪರ್ಯವರ್ತತ||

ಹಾಗೆಯೇ ಆಗಲೆಂದು ಮಾಧವನಿಗೆ ಅನುಮತಿಯನ್ನಿತ್ತ ನಂತರ ಧನಂಜಯನು ಮಹೇಷ್ವಾಸ ದ್ರೋಣ-ಕರ್ಣರನ್ನು ಅವರ ಎಡಭಾಗದಿಂದ ಪ್ರದಕ್ಷಿಣೆ ಮಾಡಿದನು.

07161006a ಅಭಿಪ್ರಾಯಂ ತು ಕೃಷ್ಣಸ್ಯ ಜ್ಞಾತ್ವಾ ಪರಪುರಂಜಯಃ|

07161006c ಆಜಿಶೀರ್ಷಗತಂ ದೃಷ್ಟ್ವಾ ಭೀಮಸೇನಂ ಸಮಾಸದತ್||

ಕೃಷ್ಣನ ಅಭಿಪ್ರಾಯವೇನೆಂದು ತಿಳಿದ ಪರಪುರಂಜಯ ಅರ್ಜುನನು ಸೇನೆಯ ಅಗ್ರಭಾಗದಲ್ಲಿದ್ದ ಭೀಮಸೇನನನ್ನು ನೋಡಿ ಅವನನ್ನು ಸೇರಿಕೊಂಡನು.

07161007 ಭೀಮ ಉವಾಚ|

07161007a ಅರ್ಜುನಾರ್ಜುನ ಬೀಭತ್ಸೋ ಶೃಣು ಮೇ ತತ್ತ್ವತೋ ವಚಃ|

07161007c ಯದರ್ಥಂ ಕ್ಷತ್ರಿಯಾ ಸೂತೇ ತಸ್ಯ ಕಾಲೋಽಯಮಾಗತಃ||

ಭೀಮನು ಹೇಳಿದನು: “ಅರ್ಜುನ! ಅರ್ಜುನ! ಬೀಭತ್ಸು! ನಾನು ಹೇಳುವುದನ್ನು ಕೇಳು! ಯಾವುದಕ್ಕಾಗಿ ಕ್ಷತ್ರಿಯರಾಗಿ ಹುಟ್ಟಿದೆವೋ ಅದರ ಕಾಲವು ಬಂದೊದಗಿದೆ!

07161008a ಅಸ್ಮಿಂಶ್ಚೇದಾಗತೇ ಕಾಲೇ ಶ್ರೇಯೋ ನ ಪ್ರತಿಪತ್ಸ್ಯಸೇ|

07161008c ಅಸಂಭಾವಿತರೂಪಃ ಸನ್ನನೃಶಂಸ್ಯಂ ಕರಿಷ್ಯಸಿ||

ಈ ಸಮಯದಲ್ಲಿ ಕೂಡ ಶ್ರೇಯಸ್ಸನ್ನು ಪಡೆಯದೇ ಇದ್ದರೆ ಅಸಂಭಾವಿತನಂತಾಗುವೆ. ನಮಗೆ ಅತಿ ಕಠೋರವಾದುದನ್ನು ಮಾಡುವೆ!

07161009a ಸತ್ಯಶ್ರೀಧರ್ಮಯಶಸಾಂ ವೀರ್ಯೇಣಾನೃಣ್ಯಮಾಪ್ನುಹಿ|

07161009c ಭಿಂಧ್ಯನೀಕಂ ಯುಧಾಂ ಶ್ರೇಷ್ಠ ಸವ್ಯಸಾಚಿನ್ನಿಮಾನ್ಕುರು||

ಸವ್ಯಸಾಚೀ! ಯೋಧರಲ್ಲಿ ಶ್ರೇಷ್ಠ! ನಿನ್ನ ವೀರ್ಯದಿಂದ ಸತ್ಯ, ಸಂಪತ್ತು, ಧರ್ಮ ಮತ್ತು ಯಶಸ್ಸುಗಳ ಋಣವನ್ನು ತೀರಿಸು! ಈ ಸೇನೆಗಳನ್ನು ಭೇದಿಸು!””

07161010 ಸಂಜಯ ಉವಾಚ|

07161010a ಸ ಸವ್ಯಸಾಚೀ ಭೀಮೇನ ಚೋದಿತಃ ಕೇಶವೇನ ಚ|

07161010c ಕರ್ಣದ್ರೋಣಾವತಿಕ್ರಮ್ಯ ಸಮಂತಾತ್ಪರ್ಯವಾರಯತ್||

ಸಂಜಯನು ಹೇಳಿದನು: “ಭೀಮನಿಂದ ಮತ್ತು ಕೇಶವನಿಂದ ಪ್ರಚೋದಿತನಾದ ಸವ್ಯಸಾಚಿಯು ಕರ್ಣ-ದ್ರೋಣರನ್ನು ನಾಲ್ಕೂ ಕಡೆಗಳಿಂದ ಮುತ್ತಿಗೆಹಾಕಿ ಆಕ್ರಮಣಿಸಿದನು.

07161011a ತಮಾಜಿಶೀರ್ಷಮಾಯಾಂತಂ ದಹಂತಂ ಕ್ಷತ್ರಿಯರ್ಷಭಾನ್|

07161011c ಪರಾಕ್ರಾಂತಂ ಪರಾಕ್ರಮ್ಯ ಯತಂತಃ ಕ್ಷತ್ರಿಯರ್ಷಭಾಃ|

07161011e ನಾಶಕ್ನುವನ್ವಾರಯಿತುಂ ವರ್ಧಮಾನಮಿವಾನಲಂ||

ರಣಾಂಗಣದ ಅಗ್ರಭಾಗದಿಂದ ಬಂದು ಕ್ಷತ್ರಿಯರ್ಷಭರನ್ನು ಉರಿಯುವ ಅಗ್ನಿಯಂತೆ ದಹಿಸುತ್ತಿದ್ದ ಆ ಪರಾಕ್ರಮಿ ಪರಾಕ್ರಾಂತನನ್ನು ಕ್ಷತ್ರಿಯರ್ಷಭರು ಪ್ರಯತ್ನಪಟ್ಟರೂ ತಡೆಯಲು ಶಕ್ಯರಾಗಲಿಲ್ಲ.

07161012a ಅಥ ದುರ್ಯೋಧನಃ ಕರ್ಣಃ ಶಕುನಿಶ್ಚಾಪಿ ಸೌಬಲಃ|

07161012c ಅಭ್ಯವರ್ಷಂ ಶರವ್ರಾತೈಃ ಕುಂತೀಪುತ್ರಂ ಧನಂಜಯಂ||

ಆಗ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯರು ಕುಂತೀಪುತ್ರ ಧನಂಜಯನ ಮೇಲೆ ಶರವ್ರಾತಗಳನ್ನು ಸುರಿಸಿದರು.

07161013a ತೇಷಾಮಸ್ತ್ರಾಣಿ ಸರ್ವೇಷಾಮುತ್ತಮಾಸ್ತ್ರವಿದಾಂ ವರಃ|

07161013c ಕದರ್ಥೀಕೃತ್ಯ ರಾಜೇಂದ್ರ ಶರವರ್ಷೈರವಾಕಿರತ್||

ರಾಜೇಂದ್ರ! ಅವರ ಎಲ್ಲ ಅಸ್ತ್ರಗಳನ್ನೂ ಲೆಕ್ಕಿಸದೇ ಉತ್ತಮ ಅಸ್ತ್ರವಿದ ಅರ್ಜುನನು ಅವರನ್ನು ಶರಗಳಿಂದ ಮುಚ್ಚಿಬಿಟ್ಟನು.

07161014a ಅಸ್ತ್ರೈರಸ್ತ್ರಾಣಿ ಸಂವಾರ್ಯ ಲಘುಹಸ್ತೋ ಧನಂಜಯಃ|

07161014c ಸರ್ವಾನವಿಧ್ಯನ್ನಿಶಿತೈರ್ದಶಭಿರ್ದಶಭಿಃ ಶರೈಃ||

ಲಘುಹಸ್ತ ಧನಂಜಯನು ಅಸ್ತ್ರಗಳಿಂದ ಅಸ್ತ್ರಗಳನ್ನು ನಿರಸನಗೊಳಿಸಿ ಅವರೆಲ್ಲರನ್ನೂ ಹತ್ತು ಹತ್ತು ನಿಶಿತ ಶರಗಳಿಂದ ಹೊಡೆದು ಗಾಯಗೊಳಿಸಿದನು.

07161015a ಉದ್ಧೂತಾ ರಜಸೋ ವೃಷ್ಟಿಃ ಶರವೃಷ್ಟಿಸ್ತಥೈವ ಚ|

07161015c ತಮಶ್ಚ ಘೋರಂ ಶಬ್ದಶ್ಚ ತದಾ ಸಮಭವನ್ಮಹಾನ್||

ಆಗ ಧೂಳಿನ ರಾಶಿಯು ಮೇಲೆದ್ದು ಶರವೃಷ್ಟಿಯೊಂದಿಗೆ ಸುರಿಯತೊಡಗಲು ಘೋರ ಕತ್ತಲೆಯೂ ಮಹಾ ಶಬ್ಧವೂ ಆವರಿಸಿತು.

07161016a ನ ದ್ಯೌರ್ನ ಭೂಮಿರ್ನ ದಿಶಃ ಪ್ರಾಜ್ಞಾಯಂತ ತಥಾ ಗತೇ|

07161016c ಸೈನ್ಯೇನ ರಜಸಾ ಮೂಢಂ ಸರ್ವಮಂಧಮಿವಾಭವತ್||

ಆಕಾಶ-ಭೂಮಿ-ದಿಕ್ಕುಗಳು ಎಲ್ಲಿವೆಯೆನ್ನುವುದೇ ತಿಳಿಯುತ್ತಿರಲಿಲ್ಲ. ಸೈನ್ಯಗಳಿಂದ ಮೇಲೆದ್ದ ಧೂಳಿನಿಂದ ಅಚ್ಛಾದಿತವಾಗಿ ಎಲ್ಲವೂ ಅಂಧಕಾರಮಯವಾಗಿಯೇ ಕಾಣಿಸುತ್ತಿತ್ತು.

07161017a ನೈವ ತೇ ನ ವಯಂ ರಾಜನ್ಪ್ರಜ್ಞಾಸಿಷ್ಮ ಪರಸ್ಪರಂ|

07161017c ಉದ್ದೇಶೇನ ಹಿ ತೇನ ಸ್ಮ ಸಮಯುಧ್ಯಂತ ಪಾರ್ಥಿವಾಃ||

ರಾಜನ್! ನಾವಾಗಲೀ ಅವರಾಗಲೀ ಯಾರು ಯಾರೆಂದು ಪರಸ್ಪರರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಅವರ್ಯಾರು ನಾವ್ಯಾರು ಎಂದು ಹೇಳಿಕೊಂಡೇ ಪಾರ್ಥಿವರು ಯುದ್ಧಮಾಡುತ್ತಿದ್ದರು.

07161018a ವಿರಥಾ ರಥಿನೋ ರಾಜನ್ಸಮಾಸಾದ್ಯ ಪರಸ್ಪರಂ|

07161018c ಕೇಷೇಶು ಸಮಸಜ್ಜಂತ ಕವಚೇಷು ಭುಜೇಷು ಚ||

ರಾಜನ್! ವಿರಥ ರಥಿಗಳು ಪರಸ್ಪರರ ಬಳಿಸಾರಿ ಜುಟ್ಟನ್ನೂ, ಕವಚಗಳನ್ನೂ, ಭುಜಗಳನ್ನೂ ಹಿಡಿದು ಯುದ್ಧಮಾಡುತ್ತಿದ್ದರು.

07161019a ಹತಾಶ್ವಾ ಹತಸೂತಾಶ್ಚ ನಿಶ್ಚೇಷ್ಟಾ ರಥಿನಸ್ತದಾ|

07161019c ಜೀವಂತ ಇವ ತತ್ರ ಸ್ಮ ವ್ಯದೃಶ್ಯಂತ ಭಯಾರ್ದಿತಾಃ||

ಹತಾಶ್ವ ಹತಸಾರಥಿ ರಥಿಗಳು ಹತರಾಗಿದ್ದರೂ ಭಯಾರ್ದಿತರಾಗಿ ಜೀವಂತವಿರುವಂತೆಯೇ ಕಾಣುತ್ತಿದ್ದರು.

07161020a ಹತಾನ್ಗಜಾನ್ಸಮಾಶ್ಲಿಷ್ಯ ಪರ್ವತಾನಿವ ವಾಜಿನಃ|

07161020c ಗತಸತ್ತ್ವಾ ವ್ಯದೃಶ್ಯಂತ ತಥೈವ ಸಹ ಸಾದಿಭಿಃ||

ತೀರಿಕೊಂಡ ಕುದುರೆಗಳು ಕುದುರೆಸವಾರರೊಂದಿಗೆ ಸತ್ತುಹೋಗಿರುವ ಪರ್ವತಗಳಂತಿದ್ದ ಆನೆಗಳನ್ನು ಅಪ್ಪಿಕೊಂಡಿರುವವೋ ಎನ್ನುವಂತೆ ತೋರುತ್ತಿದ್ದವು.

07161021a ತತಸ್ತ್ವಭ್ಯವಸೃತ್ಯೈವ ಸಂಗ್ರಾಮಾದುತ್ತರಾಂ ದಿಶಂ|

07161021c ಅತಿಷ್ಠದಾಹವೇ ದ್ರೋಣೋ ವಿಧೂಮ ಇವ ಪಾವಕಃ||

ಅನಂತರ ದ್ರೋಣನು ಸಂಗ್ರಾಮದ ಉತ್ತರ ದಿಕ್ಕಿಗೆ ಹೋಗಿ ಅಲ್ಲಿ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಯುದ್ಧಕ್ಕೆ ಅಣಿಯಾಗಿ ನಿಂತನು.

07161022a ತಮಾಜಿಶೀರ್ಷಾದೇಕಾಂತಮಪಕ್ರಾಂತಂ ನಿಶಾಮ್ಯ ತು||

07161022c ಸಮಕಂಪಂತ ಸೈನ್ಯಾನಿ ಪಾಂಡವಾನಾಂ ವಿಶಾಂ ಪತೇ|

ವಿಶಾಂಪತೇ! ದ್ರೋಣನು ರಣಾಂಗಣದ ಒಂದುಕಡೆ ಬಂದು ನಿಂತಿರುವುದನ್ನು ನೋಡಿ ಪಾಂಡವರ ಸೇನೆಯು ಭಯದಿಂದ ತತ್ತರಿಸಿತು.

07161023a ಭ್ರಾಜಮಾನಂ ಶ್ರಿಯಾ ಯುಕ್ತಂ ಜ್ವಲಂತಮಿವ ತೇಜಸಾ||

07161023c ದ್ರೋಣಂ ದೃಷ್ಟ್ವಾರಯಸ್ತ್ರೇಸುಶ್ಚೇಲುರ್ಮಂಲುಶ್ಚ ಮಾರಿಷ|

ಮಾರಿಷ! ತೇಜಸ್ಸಿನಿಂದ ಬೆಳಗುತ್ತಿದ್ದ, ಕಳೆಯಿಂದ ತುಂಬಿಕೊಂಡು ಹೊಳೆಯುತ್ತಿದ್ದ ದ್ರೋಣನನ್ನು ನೋಡಿ ಅವರು ಭಯದಿಂದ ನಡುಗಿದರು, ಪಲಾಯನಗೈದರು ಮತ್ತು ಕಳೆಗುಂದಿದರು.

07161024a ಆಹ್ವಯಂತಂ ಪರಾನೀಕಂ ಪ್ರಭಿನ್ನಮಿವ ವಾರಣಂ||

07161024c ನೈನಂ ಶಶಂಸಿರೇ ಜೇತುಂ ದಾನವಾ ವಾಸವಂ ಯಥಾ|

ಮದೋದಕವನ್ನು ಸುರಿಸುವ ಸಲಗದಂತೆ ಶತ್ರುಸೇನೆಯನ್ನು ಅಹ್ವಾನಿಸುತ್ತಿದ್ದ ಅವನನ್ನು ದಾನವರು ವಾಸವನನ್ನು ಹೇಗೋ ಹಾಗೆ ಜಯಿಸಲು ಇಚ್ಛಿಸಲಿಲ್ಲ.

07161025a ಕೇ ಚಿದಾಸನ್ನಿರುತ್ಸಾಹಾಃ ಕೇ ಚಿತ್ಕ್ರುದ್ಧಾ ಮನಸ್ವಿನಃ||

07161025c ವಿಸ್ಮಿತಾಶ್ಚಾಭವನ್ಕೇ ಚಿತ್ಕೇ ಚಿದಾಸನ್ನಮರ್ಷಿತಾಃ|

ಕೆಲವರು ನಿರುತ್ಸಾಹಿಗಳಾದರು. ಕೆಲವು ಅಭಿಮಾನಿಗಳು ಕ್ರುದ್ಧರಾದರು. ಕೆಲವರು ವಿಸ್ಮಿತರಾದರು. ಇನ್ನು ಕೆಲವರು ಸಹನೆಯನ್ನು ಕಳೆದುಕೊಂಡರು.

07161026a ಹಸ್ತೈರ್ಹಸ್ತಾಗ್ರಮಪರೇ ಪ್ರತ್ಯಪಿಂಷನ್ನರಾಧಿಪಾಃ||

07161026c ಅಪರೇ ದಶನೈರೋಷ್ಠಾನದಶನ್ಕ್ರೋಧಮೂರ್ಚಿತಾಃ|

ಕೆಲವು ನರಾಧಿಪರು ಕೈಗಳನ್ನು ಕೈತುದಿಗಳಿಂದ ಉಜ್ಜಿಕೊಂಡರು. ಇನ್ನು ಕೆಲವರು ಕ್ರೋಧಮೂರ್ಚಿತರಾಗಿ ಹಲ್ಲುಗಳಿಂದ ತುಟಿಗಳನ್ನು ಕಚ್ಚಿಕೊಂಡರು.

07161027a ವ್ಯಾಕ್ಷಿಪನ್ನಾಯುಧಾನನ್ಯೇ ಮಮೃದುಶ್ಚಾಪರೇ ಭುಜಾನ್||

07161027c ಅನ್ಯೇ ಚಾನ್ವಪತನ್ದ್ರೋಣಂ ತ್ಯಕ್ತಾತ್ಮಾನೋ ಮಹೌಜಸಃ|

ಕೆಲವರು ತಮ್ಮ ಆಯುಧಗಳನ್ನು ಗರಗರನೆ ತಿರುಗಿಸಿ ದ್ರೋಣನ ಮೇಲೆ ಎಸೆಯುತ್ತಿದ್ದರು. ಮತ್ತೆ ಕೆಲವರು ತಮ್ಮ ಭುಜಗಳನ್ನು ತಟ್ಟಿಕೊಳ್ಳುತ್ತಿದ್ದರು. ಇನ್ನು ಕೆಲವು ಮಹೌಜಸರು ತಮ್ಮ ಜೀವವನ್ನೇ ತೊರೆದು ದ್ರೋಣನನ್ನು ಆಕ್ರಮಣಿಸಿದರು.

07161028a ಪಾಂಚಾಲಾಸ್ತು ವಿಶೇಷೇಣ ದ್ರೋಣಸಾಯಕಪೀಡಿತಾಃ||

07161028c ಸಮಸಜ್ಜಂತ ರಾಜೇಂದ್ರ ಸಮರೇ ಭೃಶವೇದನಾಃ|

ರಾಜೇಂದ್ರ! ವಿಶೇಷವಾಗಿ ಪಾಂಚಾಲರು ದ್ರೋಣನ ಸಾಯಕಗಳಿಂದ ಪೀಡಿತರಾಗಿದ್ದರೂ ತುಂಬಾ ವೇದನೆಯಿಂದಲೂ ಸಮರದಲ್ಲಿ ಯುದ್ಧಮಾಡುತ್ತಿದ್ದರು.

07161029a ತತೋ ವಿರಾಟದ್ರುಪದೌ ದ್ರೋಣಂ ಪ್ರತಿಯಯೂ ರಣೇ||

07161029c ತಥಾ ಚರಂತಂ ಸಂಗ್ರಾಮೇ ಭೃಶಂ ಸಮರದುರ್ಜಯಂ|

ಆಗ ರಣದಲ್ಲಿ ಹಾಗೆ ಸುತ್ತುತ್ತಿದ್ದ ಸಮರದುರ್ಜಯ ದ್ರೋಣನನ್ನು ವಿರಾಟ-ದ್ರುಪದರು ಸಂಗ್ರಾಮದಲ್ಲಿ ಎದುರಿಸಿದರು.

07161030a ದ್ರುಪದಸ್ಯ ತತಃ ಪೌತ್ರಾಸ್ತ್ರಯ ಏವ ವಿಶಾಂ ಪತೇ||

07161030c ಚೇದಯಶ್ಚ ಮಹೇಷ್ವಾಸಾ ದ್ರೋಣಮೇವಾಭ್ಯಯುರ್ಯುಧಿ|

ವಿಶಾಂಪತೇ! ಆಗ ದ್ರುಪದನ ಮೂರು ಮೊಮ್ಮಕ್ಕಳೂ ಮಹೇಷ್ವಾಸ ಚೇದಿಗಳೂ ದ್ರೋಣನನ್ನು ಯುದ್ಧದಲ್ಲಿ ಎದುರಿಸಿದರು.

07161031a ತೇಷಾಂ ದ್ರುಪದಪೌತ್ರಾಣಾಂ ತ್ರಯಾಣಾಂ ನಿಶಿತೈಃ ಶರೈಃ||

07161031c ತ್ರಿಭಿರ್ದ್ರೋಣೋಽಹರತ್ಪ್ರಾಣಾಂಸ್ತೇ ಹತಾ ನ್ಯಪತನ್ಭುವಿ|

ಮೂರು ನಿಶಿತ ಶರಗಳಿಂದ ದ್ರೋಣನು ದ್ರುಪದನ ಆ ಮೂವರು ಮೊಮ್ಮಕ್ಕಳ ಪ್ರಾಣಗಳನ್ನು ಅಪಹರಿಸಿ ಭೂಮಿಯ ಮೇಲೆ ಕೆಡವಿದನು.

07161032a ತತೋ ದ್ರೋಣೋಽಜಯದ್ಯುದ್ಧೇ ಚೇದಿಕೇಕಯಸೃಂಜಯಾನ್||

07161032c ಮತ್ಸ್ಯಾಂಶ್ಚೈವಾಜಯತ್ಸರ್ವಾನ್ಭಾರದ್ವಾಜೋ ಮಹಾರಥಃ|

ಆಗ ಮಹಾರಥ ಭಾರದ್ವಾಜ ದ್ರೋಣನು ಚೇದಿ-ಕೇಕಯ-ಸೃಂಜಯರನ್ನು ಗೆದ್ದು ಎಲ್ಲ ಮತ್ಸ್ಯರನ್ನೂ ಜಯಿಸಿದನು.

07161033a ತತಸ್ತು ದ್ರುಪದಃ ಕ್ರೋಧಾಚ್ಚರವರ್ಷಮವಾಕಿರತ್||

07161033c ದ್ರೋಣಂ ಪ್ರತಿ ಮಹಾರಾಜ ವಿರಾಟಶ್ಚೈವ ಸಮ್ಯುಗೇ|

ಮಹಾರಾಜ! ಆಗ ಕ್ರೋಧದಿಂದ ಯುದ್ಧದಲ್ಲಿ ದ್ರುಪದ ಮತ್ತು ವಿರಾಟರೂ ಕೂಡ ದ್ರೋಣನ ಮೇಲೆ ಶರವರ್ಷವನ್ನು ಸುರಿಸಿದರು.

07161034a ತತೋ ದ್ರೋಣಃ ಸುಪೀತಾಭ್ಯಾಂ ಭಲ್ಲಾಭ್ಯಾಮರಿಮರ್ದನಃ||

07161034c ದ್ರುಪದಂ ಚ ವಿರಾಟಂ ಚ ಪ್ರೈಷೀದ್ವೈವಸ್ವತಕ್ಷಯಂ|

ಆಗ ಅರಿಮರ್ದನ ದ್ರೋಣನು ಚೂಪಾಗಿದ್ದ ಭಲ್ಲಗಳೆರಡರಿಂದ ದ್ರುಪದ-ವಿರಾಟ ಇಬ್ಬರನ್ನೂ ವೈವಸ್ವತಕ್ಷಯಕ್ಕೆ ಕಳುಹಿಸಿದನು.

07161035a ಹತೇ ವಿರಾಟೇ ದ್ರುಪದೇ ಕೇಕಯೇಷು ತಥೈವ ಚ||

07161035c ತಥೈವ ಚೇದಿಮತ್ಸ್ಯೇಷು ಪಾಂಚಾಲೇಷು ತಥೈವ ಚ|

07161035e ಹತೇಷು ತ್ರಿಷು ವೀರೇಷು ದ್ರುಪದಸ್ಯ ಚ ನಪ್ತೃಷು||

07161036a ದ್ರೋಣಸ್ಯ ಕರ್ಮ ತದ್ದೃಷ್ಟ್ವಾ ಕೋಪದುಃಖಸಮನ್ವಿತಃ|

07161036c ಶಶಾಪ ರಥಿನಾಂ ಮಧ್ಯೇ ಧೃಷ್ಟದ್ಯುಮ್ನೋ ಮಹಾಮನಾಃ||

ವಿರಾಟ-ದ್ರುಪದರೂ ಹಾಗೆಯೇ ಕೇಕಯರೂ, ಹಾಗೆಯೇ ಚೇದಿ-ಮತ್ಸ್ಯರು ಮತ್ತು ಪಾಂಚಾಲರು ಹತರಾಗಲು, ದ್ರುಪದನ ಮೂವರು ವೀರ ಮೊಮ್ಮಕ್ಕಳು ಹತರಾಗಲು, ದ್ರೋಣನ ಆ ಕರ್ಮವನ್ನು ನೋಡಿ ಕೋಪ-ದುಃಖಸಮನ್ವಿತ ಮಹಾಮನಸ್ವಿ ಧೃಷ್ಟದ್ಯುಮ್ನನು ರಥಿಗಳ ಮಧ್ಯದಲ್ಲಿ ಶಪಥಮಾಡಿದನು:

07161037a ಇಷ್ಟಾಪೂರ್ತಾತ್ತಥಾ ಕ್ಷಾತ್ರಾದ್ಬ್ರಾಹ್ಮಣ್ಯಾಚ್ಚ ಸ ನಶ್ಯತು|

07161037c ದ್ರೋಣೋ ಯಸ್ಯಾದ್ಯ ಮುಚ್ಯೇತ ಯೋ ವಾ ದ್ರೋಣಾತ್ಪರಾಙ್ಮುಖಃ||

“ಇಂದಿನ ಯುದ್ಧದಲ್ಲಿ ಯಾರಕೈಯಿಂದ ದ್ರೋಣನು ತಪ್ಪಿಸಿಕೊಂಡು ಹೋಗುವನೋ ಅಥವಾ ಯಾರು ದ್ರೋಣನಿಂದ ಪರಾಙ್ಮುಖನಾಗಿ ಹೋಗುವನೋ ಅವನ ಇಷ್ಟಾಪೂರ್ತಗಳು ನಾಶವಾಗಿ ಕ್ಷಾತ್ರಧರ್ಮದಿಂದಲೂ ಬ್ರಾಹ್ಮಣಧರ್ಮದಿಂದಲೂ ಭ್ರಷ್ಟನಾಗಿಹೋಗಲಿ!”

07161038a ಇತಿ ತೇಷಾಂ ಪ್ರತಿಶ್ರುತ್ಯ ಮಧ್ಯೇ ಸರ್ವಧನುಷ್ಮತಾಂ|

07161038c ಆಯಾದ್ದ್ರೋಣಂ ಸಹಾನೀಕಃ ಪಾಂಚಾಲ್ಯಃ ಪರವೀರಹಾ|

07161038e ಪಾಂಚಾಲಾಸ್ತ್ವೇಕತೋ ದ್ರೋಣಮಭ್ಯಘ್ನನ್ಪಾಂಡವಾನ್ಯತಃ||

ಹೀಗೆ ಸರ್ವಧನುಷ್ಮತರ ಮಧ್ಯೆ ಪ್ರತಿಜ್ಞೆಮಾಡಿ ಪರವೀರಹ ಪಾಂಚಾಲ್ಯನು ಸೇನಾಸಮೇತನಾಗಿ ದ್ರೋಣನನ್ನು ಆಕ್ರಮಣಿಸಿದನು. ಇನ್ನೊಂದು ಕಡೆ ಪಾಂಚಾಲರು ಪಾಂಡವರೊಂದಿಗೆ ಸೇರಿಕೊಂಡು ದ್ರೋಣನನ್ನು ಪ್ರಹರಿಸುತ್ತಿದ್ದರು.

07161039a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ|

07161039c ಸೋದರ್ಯಾಶ್ಚ ಯಥಾ ಮುಖ್ಯಾಸ್ತೇಽರಕ್ಷನ್ದ್ರೋಣಮಾಹವೇ||

ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ಇತರ ಮುಖ್ಯ ಸಹೋದರರು ಯುದ್ಧದಲ್ಲಿ ದ್ರೋಣನನ್ನು ರಕ್ಷಿಸುತ್ತಿದ್ದರು.

07161040a ರಕ್ಷ್ಯಮಾಣಂ ತಥಾ ದ್ರೋಣಂ ಸಮರೇ ತೈರ್ಮಹಾತ್ಮಭಿಃ|

07161040c ಯತಮಾನಾಪಿ ಪಾಂಚಾಲಾ ನ ಶೇಕುಃ ಪ್ರತಿವೀಕ್ಷಿತುಂ||

ಹಾಗೆ ಸಮರದಲ್ಲಿ ನಿನ್ನವರಾದ ಮಹಾತ್ಮರಿಂದ ದ್ರೋಣನು ರಕ್ಷಿಸಲ್ಪಡುತ್ತಿರಲು ಪ್ರಯತ್ನಪಡುತ್ತಿದ್ದರೂ ಪಾಂಚಾಲರು ಅವನನ್ನು ನೋಡಲೂ ಕೂಡ ಶಕ್ಯರಾಗುತ್ತಿರಲಿಲ್ಲ.

07161041a ತತ್ರಾಕ್ರುಧ್ಯದ್ಭೀಮಸೇನೋ ಧೃಷ್ಟದ್ಯುಮ್ನಸ್ಯ ಮಾರಿಷ|

07161041c ಸ ಏನಂ ವಾಗ್ಭಿರುಗ್ರಾಭಿಸ್ತತಕ್ಷ ಪುರುಷರ್ಷಭ||

ಆಗ ಮಾರಿಷ! ಧೃಷ್ಟದ್ಯುಮ್ನನ ಮೇಲೆ ಕ್ರುದ್ಧನಾಗಿ ಪುರುಷರ್ಷಭ ಭೀಮಸೇನನು ಈ ಉಗ್ರವಾದ ಮಾತುಗಳಿಂದ ಅವನನ್ನು ಚುಚ್ಚಿದನು:

07161042a ದ್ರುಪದಸ್ಯ ಕುಲೇ ಜಾತಃ ಸರ್ವಾಸ್ತ್ರೇಷ್ವಸ್ತ್ರವಿತ್ತಮಃ|

07161042c ಕಃ ಕ್ಷತ್ರಿಯೋ ಮನ್ಯಮಾನಃ ಪ್ರೇಕ್ಷೇತಾರಿಮವಸ್ಥಿತಂ||

“ದ್ರುಪದನ ಕುಲದಲ್ಲಿ ಹುಟ್ಟಿರುವ ನೀನು ಸರ್ವ ಅಸ್ತ್ರಶಸ್ತ್ರಗಳಲ್ಲಿ ವಿತ್ತಮನಾಗಿರುವೆ. ಆದರೆ ಸ್ವಾಭಿಮಾನಿಯಾದ ಯಾವ ಕ್ಷತ್ರಿಯನು ನಿನ್ನಂತೆ ಶತ್ರುವು ಕಣ್ಣೆದುರಿರುವಾಗಲೇ ನೋಡುತ್ತಾ ನಿಂತಿರುತ್ತಾನೆ?

07161043a ಪಿತೃಪುತ್ರವಧಂ ಪ್ರಾಪ್ಯ ಪುಮಾನ್ಕಃ ಪರಿಹಾಪಯೇತ್|

07161043c ವಿಶೇಷತಸ್ತು ಶಪಥಂ ಶಪಿತ್ವಾ ರಾಜಸಂಸದಿ||

ಅದರಲ್ಲೂ ವಿಶೇಷವಾಗಿ ಕಣ್ಣೆದುರಿನಲ್ಲಿಯೇ ಪಿತ-ಪುತ್ರರವಧೆಯನ್ನು ಕಂಡ ಯಾವ ಮನುಷ್ಯನು, ರಾಜಸಂಸದಿಯಲ್ಲಿ ಶಪಥಮಾಡಿದವನು, ಸುಮ್ಮನಿದ್ದಾನು?

07161044a ಏಷ ವೈಶ್ವಾನರ ಇವ ಸಮಿದ್ಧಃ ಸ್ವೇನ ತೇಜಸಾ|

07161044c ಶರಚಾಪೇಂಧನೋ ದ್ರೋಣಃ ಕ್ಷತ್ರಂ ದಹತಿ ತೇಜಸಾ||

ಶರಚಾಪಗಳನ್ನೇ ಇಂಧನವನ್ನಾಗಿಸಿಕೊಂಡು ತನ್ನದೇ ತೇಜಸ್ಸಿನಿಂದ ವೈಶ್ವಾನರನಂತೆ ಪ್ರಜ್ವಲಿಸುತ್ತಿರುವ ದ್ರೋಣನು ತೇಜಸ್ಸಿನಿಂದ ಕ್ಷತ್ರಿಯರನ್ನು ದಹಿಸುತ್ತಿದ್ದಾನೆ.

07161045a ಪುರಾ ಕರೋತಿ ನಿಃಶೇಷಾಂ ಪಾಂಡವಾನಾಮನೀಕಿನೀಂ|

07161045c ಸ್ಥಿತಾಃ ಪಶ್ಯತ ಮೇ ಕರ್ಮ ದ್ರೋಣಮೇವ ವ್ರಜಾಮ್ಯಹಂ||

ಪಾಂಡವರ ಸೇನೆಯನ್ನು ಇವನು ನಿಃಶೇಷವನ್ನಾಗಿ ಮಾಡುವ ಮೊದಲೇ ಈ ದ್ರೋಣನನ್ನು ಆಕ್ರಮಿಸುತ್ತೇನೆ. ನಿಂತು ನನ್ನ ಈ ಕರ್ಮವನ್ನು ನೋಡು!”

07161046a ಇತ್ಯುಕ್ತ್ವಾ ಪ್ರಾವಿಶತ್ಕೃದ್ಧೋ ದ್ರೋಣಾನೀಕಂ ವೃಕೋದರಃ|

07161046c ದೃಢೈಃ ಪೂರ್ಣಾಯತೋತ್ಸೃಷ್ಟೈರ್ದ್ರಾವಯಂಸ್ತವ ವಾಹಿನೀಂ||

ಹೀಗೆ ಹೇಳಿ ಕ್ರುದ್ಧ ವೃಕೋದರನು ಪೂರ್ಣವಾಗಿ ಸೆಳೆದು ಬಿಡುತ್ತಿದ್ದ ಬಾಣಗಳಿಂದ ನಿನ್ನ ಸೇನೆಯನ್ನು ಓಡಿಸುತ್ತಾ ದ್ರೋಣನ ಸೇನೆಯನ್ನು ಪ್ರವೇಶಿಸಿದನು.

07161047a ಧೃಷ್ಟದ್ಯುಮ್ನೋಽಪಿ ಪಾಂಚಾಲ್ಯಃ ಪ್ರವಿಶ್ಯ ಮಹತೀಂ ಚಮೂಂ|

07161047c ಆಸಸಾದ ರಣೇ ದ್ರೋಣಂ ತದಾಸೀತ್ತುಮುಲಂ ಮಹತ್||

ಪಾಂಚಾಲ್ಯ ಧೃಷ್ಟದ್ಯುಮ್ನನೂ ಕೂಡ ಆ ಮಹಾಸೇನೆಯನ್ನು ಪ್ರವೇಶಿಸಿ ರಣದಲ್ಲಿ ದ್ರೋಣನ ಬಳಿಹೋದನು. ಆಗ ಮಹಾ ತುಮುಲ ಯುದ್ಧವು ನಡೆಯಿತು.

07161048a ನೈವ ನಸ್ತಾದೃಶಂ ಯುದ್ಧಂ ದೃಷ್ಟಪೂರ್ವಂ ನ ಚ ಶ್ರುತಂ|

07161048c ಯಥಾ ಸೂರ್ಯೋದಯೇ ರಾಜನ್ಸಮುತ್ಪಿಂಜೋಽಭವನ್ಮಹಾನ್||

ರಾಜನ್! ಆ ದಿನದ ಸೂರ್ಯೋದಯದಲ್ಲಿ ಅಂತಹ ದೊಡ್ಡದಾದ, ಹತ್ತಿಕೊಂಡು ನಡೆಯುತ್ತಿದ್ದ ಯುದ್ಧವನ್ನು ನಾವು ಹಿಂದೆ ನೋಡಿರಲಿಲ್ಲ, ಅದರ ಕುರಿತು ಕೇಳಿರಲಿಲ್ಲ.

07161049a ಸಂಸಕ್ತಾನಿ ವ್ಯದೃಶ್ಯಂತ ರಥವೃಂದಾನಿ ಮಾರಿಷ|

07161049c ಹತಾನಿ ಚ ವಿಕೀರ್ಣಾನಿ ಶರೀರಾಣಿ ಶರೀರಿಣಾಂ||

ಮಾರಿಷ! ರಥದ ಗುಂಪುಗಳು ಒಂದಕ್ಕೊಂದು ತಾಗಿಕೊಂಡಿರುವಂತೆ ಕಾಣುತ್ತಿದ್ದವು. ಸತ್ತುಹೋಗಿದ್ದ ಸೈನಿಕರ ಶರೀರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

07161050a ಕೇ ಚಿದನ್ಯತ್ರ ಗಚ್ಚಂತಃ ಪಥಿ ಚಾನ್ಯೈರುಪದ್ರುತಾಃ|

07161050c ವಿಮುಖಾಃ ಪೃಷ್ಠತಶ್ಚಾನ್ಯೇ ತಾಡ್ಯಂತೇ ಪಾರ್ಶ್ವತೋಽಪರೇ||

ಬೇರೆಯೇ ಕಡೆ ಹೋಗುತ್ತಿದ್ದವರನ್ನು ದಾರಿಯಲ್ಲಿಯೇ ತಡೆದು ಕೊಳ್ಳುತ್ತಿದ್ದರು. ವಿಮುಖರಾಗಿ ಓಡಿ ಹೋಗುತ್ತಿದ್ದವರನ್ನೂ ಶತ್ರುಪಕ್ಷದವರು ಹಿಂದಿನಿಂದ ಹೊಡೆದು ಕೊಲ್ಲುತ್ತಿದ್ದರು.

07161051a ತಥಾ ಸಂಸಕ್ತಯುದ್ಧಂ ತದಭವದ್ಭೃಶದಾರುಣಂ|

07161051c ಅಥ ಸಂಧ್ಯಾಗತಃ ಸೂರ್ಯಃ ಕ್ಷಣೇನ ಸಮಪದ್ಯತ||

ಹೀಗೆ ತುಂಬಾ ಪರಸ್ಪರ ತಾಗಿಕೊಂಡು ದಾರುಣ ಯುದ್ಧವು ನಡೆಯುತ್ತಿರಲು ಸ್ವಲ್ಪವೇ ಸಮಯದಲ್ಲಿ ಸೂರ್ಯನ ಪೂರ್ಣೋದಯವಾಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ಸಂಕುಲಯುದ್ಧೇ ಏಕಷಷ್ಟ್ಯಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಅರವತ್ತೊಂದನೇ ಅಧ್ಯಾಯವು.

Related image

Comments are closed.