Bhishma Parva: Chapter 9

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ಸಂಜಯನು ಧೃತರಾಷ್ಟ್ರನಿಗೆ ಪರ್ವತಗಳ ಮತ್ತು ಪರ್ವತವಾಸಿಗಳನ್ನು ವರ್ಣಿಸುವುದು (೧-೨೧).

06009001 ಧೃತರಾಷ್ಟ್ರ ಉವಾಚ|

06009001a ವರ್ಷಾಣಾಂ ಚೈವ ನಾಮಾನಿ ಪರ್ವತಾನಾಂ ಚ ಸಂಜಯ|

06009001c ಆಚಕ್ಷ್ವ ಮೇ ಯಥಾತತ್ತ್ವಂ ಯೇ ಚ ಪರ್ವತವಾಸಿನಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ನನಗೆ ವರ್ಷಗಳ, ಪರ್ವತಗಳ ಮತ್ತು ಪರ್ವತವಾಸಿಗಳ ಹೆಸರುಗಳನ್ನು ಯಥಾತತ್ವವಾಗಿ ಹೇಳು.”

06009002 ಸಂಜಯ ಉವಾಚ|

06009002a ದಕ್ಷಿಣೇನ ತು ಶ್ವೇತಸ್ಯ ನೀಲಸ್ಯೈವೋತ್ತರೇಣ ತು|

06009002c ವರ್ಷಂ ರಮಣಕಂ ನಾಮ ಜಾಯಂತೇ ತತ್ರ ಮಾನವಾಃ||

ಸಂಜಯನು ಹೇಳಿದನು: “ಶ್ವೇತದ ದಕ್ಷಿಣಕ್ಕೆ ಮತ್ತು ನೀಲದ ಉತ್ತರದಲ್ಲಿರುವ ವರ್ಷದಲ್ಲಿ ರಮಣಕ ಎಂಬ ಹೆಸರಿನ ಮಾನವರು ಜನಿಸುತ್ತಾರೆ.

06009003a ಶುಕ್ಲಾಭಿಜನಸಂಪನ್ನಾಃ ಸರ್ವೇ ಸುಪ್ರಿಯದರ್ಶನಾಃ|

06009003c ರತಿಪ್ರಧಾನಾಶ್ಚ ತಥಾ ಜಾಯಂತೇ ತತ್ರ ಮಾನವಾಃ||

ಅಲ್ಲಿಯ ಜನರು ಬಿಳಿಯ ಬಣ್ಣದವರಾಗಿದ್ದು, ಉತ್ತಮ ಕುಲದವರಾಗಿದ್ದು ಎಲ್ಲರೂ ನೋಡಲು ತುಂಬಾ ಸುಂದರರಾಗಿರುತ್ತಾರೆ. ಅಲ್ಲಿ ಜನಿಸಿದ ಮಾನವರಿಗೆ ದ್ವೇಷಿಗಳೆಂಬುವವರೇ ಇರುವುದಿಲ್ಲ.

06009004a ದಶ ವರ್ಷಸಹಸ್ರಾಣಿ ಶತಾನಿ ದಶ ಪಂಚ ಚ|

06009004c ಜೀವಂತಿ ತೇ ಮಹಾರಾಜ ನಿತ್ಯಂ ಮುದಿತಮಾನಸಾಃ||

ಮಹಾರಾಜ! ನಿತ್ಯವೂ ಮುದಿತಮನಸ್ಕರಾದ ಅವರು ಹನ್ನೊಂದು ಸಾವಿರದ ಐದು ನೂರು ವರ್ಷಗಳು ಜೀವಿಸುತ್ತಾರೆ.

06009005a ದಕ್ಷಿಣೇ ಶೃಂಗಿಣಶ್ಚೈವ ಶ್ವೇತಸ್ಯಾಥೋತ್ತರೇಣ ಚ|

06009005c ವರ್ಷಂ ಹೈರಣ್ವತಂ ನಾಮ ಯತ್ರ ಹೈರಣ್ವತೀ ನದೀ||

ಶೃಂಗಿಣದ ದಕ್ಷಿಣದಲ್ಲಿ ಮತ್ತು ಶ್ವೇತದ ಉತ್ತರದಲ್ಲಿ ಹೈರಣ್ವತೀ ನದಿಯು ಹರಿಯುವ ಹೈರಣ್ವತವೆಂಬ ಹೆಸರಿನ ವರ್ಷವಿದೆ.

06009006a ಯಕ್ಷಾನುಗಾ ಮಹಾರಾಜ ಧನಿನಃ ಪ್ರಿಯದರ್ಶನಾಃ|

06009006c ಮಹಾಬಲಾಸ್ತತ್ರ ಸದಾ ರಾಜನ್ಮುದಿತಮಾನಸಾಃ||

ರಾಜನ್! ಮಹಾರಾಜ! ಅಲ್ಲಿರುವ ಸದಾ ಮುದಿತಮಾನಸರು ಯಕ್ಷನ ಅನುಯಾಯಿಗಳು, ಧನಿಗಳು, ಮಹಾಬಲರು ಮತ್ತು ನೋಡಲು ಸುಂದರರು.

06009007a ಏಕಾದಶ ಸಹಸ್ರಾಣಿ ವರ್ಷಾಣಾಂ ತೇ ಜನಾಧಿಪ|

06009007c ಆಯುಷ್ಪ್ರಮಾಣಂ ಜೀವಂತಿ ಶತಾನಿ ದಶ ಪಂಚ ಚ||

ಜನಾಧಿಪ! ಅಲ್ಲಿ ಜೀವಿಸುವವರ ಆಯುಸ್ಸಿನ ಪ್ರಮಾಣವು ಹನ್ನೊಂದು ಸಾವಿರದ ಐವತ್ತು ನೂರು ವರ್ಷಗಳು[1].

06009008a ಶೃಂಗಾಣಿ ವೈ ಶೃಂಗವತಸ್ತ್ರೀಣ್ಯೇವ ಮನುಜಾಧಿಪ|

06009008c ಏಕಂ ಮಣಿಮಯಂ ತತ್ರ ತಥೈಕಂ ರೌಕ್ಮಮದ್ಭುತಂ||

ಮನುಜಾಧಿಪ! ಶೃಂಗವತದಲ್ಲಿ ಮೂರು ಶಿಖರಗಳಿವೆ - ಒಂದು ಮಣಿಮಯವಾದುದು ಮತ್ತು ಇನ್ನೊಂದು ಅದ್ಭುತ ಬಂಗಾರದ್ದು.

06009009a ಸರ್ವರತ್ನಮಯಂ ಚೈಕಂ ಭವನೈರುಪಶೋಭಿತಂ|

06009009c ತತ್ರ ಸ್ವಯಂಪ್ರಭಾ ದೇವೀ ನಿತ್ಯಂ ವಸತಿ ಶಾಂಡಿಲೀ||

ಇನ್ನೊಂದು ಸರ್ವ ರತ್ನಮಯವಾಗಿದ್ದು ಭವನಗಳಿಂದ ಶೋಭಿಸುತ್ತದೆ. ಅಲ್ಲಿ ಸ್ವಯಂಪ್ರಭೆ ದೇವೀ ಶಾಂಡಿಲಿಯು ನಿತ್ಯವೂ ವಾಸಿಸುತ್ತಾಳೆ.

06009010a ಉತ್ತರೇಣ ತು ಶೃಂಗಸ್ಯ ಸಮುದ್ರಾಂತೇ ಜನಾಧಿಪ|

06009010c ವರ್ಷಮೈರಾವತಂ ನಾಮ ತಸ್ಮಾಚ್ಚೃಂಗವತಃ ಪರಂ||

ಜನಾಧಿಪ! ಶೃಂಗದ ಉತ್ತರಕ್ಕೆ, ಸಮುದ್ರದ ಅಂಚಿನಲ್ಲಿ, ಐರಾವತವೆಂಬ ಹೆಸರಿನ ವರ್ಷವಿದೆ. ಇಲ್ಲಿ ಶೃಂಗವತವಿರುವುದರಿಂದ ಇದು ಅತಿ ಶ್ರೇಷ್ಠವಾದುದು.

06009011a ನ ತತ್ರ ಸೂರ್ಯಸ್ತಪತಿ ನ ತೇ ಜೀರ್ಯಂತಿ ಮಾನವಾಃ|

06009011c ಚಂದ್ರಮಾಶ್ಚ ಸನಕ್ಷತ್ರೋ ಜ್ಯೋತಿರ್ಭೂತ ಇವಾವೃತಃ||

ಅಲ್ಲಿ ಸೂರ್ಯ ಸುಡುವುದಿಲ್ಲ. ಮಾನವರು ಜೀರ್ಣರಾಗುವುದಿಲ್ಲ. ನಕ್ಷತ್ರಗಳೊಡನೆ ಚಂದ್ರಮನು ಮಾತ್ರ ಬೆಳಕಾಗಿ ಆವರಿಸಿರುತ್ತಾನೆ.

06009012a ಪದ್ಮಪ್ರಭಾಃ ಪದ್ಮವರ್ಣಾಃ ಪದ್ಮಪತ್ರನಿಭೇಕ್ಷಣಾಃ|

06009012c ಪದ್ಮಪತ್ರಸುಗಂಧಾಶ್ಚ ಜಾಯಂತೇ ತತ್ರ ಮಾನವಾಃ||

ಅಲ್ಲಿ ಮನುಷ್ಯರು ಪದ್ಮಪ್ರಭೆಯುಳ್ಳವರಾಗಿ, ಪದ್ಮವರ್ಣದವರಾಗಿ, ಪದ್ಮಪತ್ರದಂತಹ ಕಣ್ಣುಗಳುಳ್ಳವರಾಗಿ, ಪದ್ಮಪತ್ರದ ಸುಗಂಧಗಳುಳ್ಳವರಾಗಿ ಹುಟ್ಟುತ್ತಾರೆ.

06009013a ಅನಿಷ್ಪಂದಾಃ ಸುಗಂಧಾಶ್ಚ ನಿರಾಹಾರಾ ಜಿತೇಂದ್ರಿಯಾಃ|

06009013c ದೇವಲೋಕಚ್ಯುತಾಃ ಸರ್ವೇ ತಥಾ ವಿರಜಸೋ ನೃಪ||

ನೃಪ! ಕಣ್ಣು ಮುಚ್ಚದಿರುವ, ಸುಗಂಧಗಳುಳ್ಳ ಅವರು ನಿರಾಹಾರರಾಗಿ ಜಿತೇಂದ್ರಿಯರಾಗಿರುತ್ತಾರೆ. ದೇವಲೋಕದಿಂದ ಕೆಳಗೆ ಬಿದ್ದ ಅವರು ಎಲ್ಲರೂ ಪಾಪಗಳಿಲ್ಲದವರು.

06009014a ತ್ರಯೋದಶ ಸಹಸ್ರಾಣಿ ವರ್ಷಾಣಾಂ ತೇ ಜನಾಧಿಪ|

06009014c ಆಯುಷ್ಪ್ರಮಾಣಂ ಜೀವಂತಿ ನರಾ ಭರತಸತ್ತಮ||

ಜನಾಧಿಪ! ಭರತಸತ್ತಮ! ಅವರ ಆಯುಷ್ಪ್ರಮಾಣವು ಹದಿಮೂರು ಸಾವಿರ ವರ್ಷಗಳಿದ್ದು ಅಲ್ಲಿಯ ನರರು ಅಷ್ಟು ವರ್ಷಗಳು ಜೀವಿಸುತ್ತಾರೆ.

06009015a ಕ್ಷೀರೋದಸ್ಯ ಸಮುದ್ರಸ್ಯ ತಥೈವೋತ್ತರತಃ ಪ್ರಭುಃ|

06009015c ಹರಿರ್ವಸತಿ ವೈಕುಂಠಃ ಶಕಟೇ ಕನಕಾತ್ಮಕೇ||

ಕ್ಷೀರಸಾಗರದ ಉತ್ತರದಲ್ಲಿ ಪ್ರಭು ಹರಿ ವೈಕುಂಠನು ಕನಕಾತ್ಮಕ ರಥದ ಮೇಲೆ ವಾಸಿಸುತ್ತಾನೆ.

06009016a ಅಷ್ಟಚಕ್ರಂ ಹಿ ತದ್ಯಾನಂ ಭೂತಯುಕ್ತಂ ಮನೋಜವಂ|

06009016c ಅಗ್ನಿವರ್ಣಂ ಮಹಾವೇಗಂ ಜಾಂಬೂನದಪರಿಷ್ಕೃತಂ||

ಆ ರಥಕ್ಕೆ ಎಂಟು ಚಕ್ರಗಳಿವೆ, ಭೂತಯುಕ್ತವಾಗಿದೆ, ಮನೋವೇಗವನ್ನು ಹೊಂದಿದೆ, ಅಗ್ನಿಯ ಬಣ್ಣವಿದೆ, ಅತಿಯಾದ ವೇಗವಿದೆ, ಪರಿಷ್ಕೃತ ಬಂಗಾರದಿಂದ ಮಾಡಲ್ಪಟ್ಟಿದೆ[2].

06009017a ಸ ಪ್ರಭುಃ ಸರ್ವಭೂತಾನಾಂ ವಿಭುಶ್ಚ ಭರತರ್ಷಭ|

06009017c ಸಂಕ್ಷೇಪೋ ವಿಸ್ತರಶ್ಚೈವ ಕರ್ತಾ ಕಾರಯಿತಾ ಚ ಸಃ||

ಭರತರ್ಷಭ! ಆ ಪ್ರಭುವು ಸರ್ವಭೂತಗಳ ವಿಭುವೂ ಹೌದು. ಅವನಲ್ಲಿ ಎಲ್ಲವೂ ಸಂಕ್ಷಿಪ್ತವಾಗುತ್ತವೆ. ಅವನಿಂದ ಎಲ್ಲವೂ ವಿಸ್ತರವಾಗುತ್ತವೆ[3]. ಅವನೇ ಮಾಡುವವನು ಮತ್ತು ಮಾಡಿಸುವವನು ಕೂಡ.

06009018a ಪೃಥಿವ್ಯಾಪಸ್ತಥಾಕಾಶಂ ವಾಯುಸ್ತೇಜಶ್ಚ ಪಾರ್ಥಿವ|

06009018c ಸ ಯಜ್ಞಃ ಸರ್ವಭೂತಾನಾಮಾಸ್ಯಂ ತಸ್ಯ ಹುತಾಶನಃ||

ಪಾರ್ಥಿವ! ಅವನೇ ಪೃಥ್ವಿ, ಆಪ, ಆಕಾಶ, ವಾಯು, ಮತ್ತು ತೇಜ. ಅವನು ಸರ್ವಭೂತಗಳ ಯಜ್ಞ ಮತ್ತು ಅವನ ಮುಖವು ಹುತಾಶನ.””

06009019 ವೈಶಂಪಾಯನ ಉವಾಚ|

06009019a ಏವಮುಕ್ತಃ ಸಂಜಯೇನ ಧೃತರಾಷ್ಟ್ರೋ ಮಹಾಮನಾಃ|

06009019c ಧ್ಯಾನಮನ್ವಗಮದ್ರಾಜಾ ಪುತ್ರಾನ್ಪ್ರತಿ ಜನಾಧಿಪ||

ವೈಶಂಪಾಯನನು ಹೇಳಿದನು: “ಜನಾಧಿಪ! ಸಂಜಯನು ಹೀಗೆ ಹೇಳಲು ಮಹಾಮನಸ್ವಿ ರಾಜಾ ಧೃತರಾಷ್ಟ್ರನು ತನ್ನ ಪುತ್ರರ ಕುರಿತು ಧ್ಯಾನಮಗ್ನನಾದನು[4].

06009020a ಸ ವಿಚಿಂತ್ಯ ಮಹಾರಾಜ ಪುನರೇವಾಬ್ರವೀದ್ವಚಃ|

06009020c ಅಸಂಶಯಂ ಸೂತಪುತ್ರ ಕಾಲಃ ಸಂಕ್ಷಿಪತೇ ಜಗತ್||

06009020e ಸೃಜತೇ ಚ ಪುನಃ ಸರ್ವಂ ನೇಹ ವಿದ್ಯತಿ ಶಾಶ್ವತಂ||

ಮಹಾರಾಜ! ಸ್ವಲ್ಪ ಯೋಚಿಸಿ ಅವನು ಪುನಃ ಈ ಮಾತನ್ನಾಡಿದನು: “ಸೂತಪುತ್ರ! ಕಾಲವು ಜಗತ್ತನ್ನು ಸಂಕ್ಷಿಪ್ತಗೊಳಿಸುತ್ತದೆ ಮತ್ತು ಪುನಃ ಸೃಷ್ಟಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇವೆಲ್ಲವೂ ಶಾಶ್ವತವಲ್ಲವೆಂದು ತಿಳಿದಿದೆ.

06009021a ನರೋ ನಾರಾಯಣಶ್ಚೈವ ಸರ್ವಜ್ಞಃ ಸರ್ವಭೂತಭೃತ್|

06009021c ದೇವಾ ವೈಕುಂಠ ಇತ್ಯಾಹುರ್ವೇದಾ ವಿಷ್ಣುರಿತಿ ಪ್ರಭುಂ||

ನರ-ನಾರಾಯಣರು ಸರ್ವಜ್ಞರು, ಸರ್ವಭೂತಭೃತರು. ದೇವತೆಗಳು ಅವನನ್ನು ವೈಕುಂಠ ಎಂದು ಕರೆಯುತ್ತಾರೆ. ಅವನು ವಿಷ್ಣುವೆಂದೂ ಪ್ರಭುವೆಂದೂ ತಿಳಿಯಲ್ಪಡುತ್ತಾನೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಧೃತರಾಷ್ಟ್ರವಾಕ್ಯೇ ನವಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಒಂಭತ್ತನೇ ಅಧ್ಯಾಯವು.

Image result for indian motifs earth"

[1] ಹನ್ನೆರಡು ಸಾವಿರದ ಐದು ನೂರು? [ಭಾರತ ದರ್ಶನ, ಸಂ.೧೨, ಪು. ೭೩]

[2] ಈ ಶ್ಲೋಕವನ್ನು ಯಜುರಾರಣ್ಯಕದಲ್ಲಿರುವ “ಅಷ್ಟಚಕ್ರಾ ನವದ್ವಾರಾ| ದೇವಾನಾಂ ಪೂರಯೋಧ್ಯಾ| ತಸ್ಯಾಗ್ಂ ಹಿರಣ್ಮಯಃ ಕೋಶಃ| ಸ್ವರ್ಗೋ ಲೋಕೋ ಜ್ಯೋತಿಷಾವೃತಃ|” ಎಂಬ ಮಂತ್ರಕ್ಕೆ ಹೋಲಿಸಬಹುದು. ನಮ್ಮ ಶರೀರವು ಎಂಟು ಚಕ್ರಗಳುಳ್ಳದ್ದಾಗಿದೆ. ಈ ಅಷ್ಟಚಕ್ರದ ರಥದಲ್ಲಿ ಹಿರಣ್ಮಯ ಕೋಶವಿದೆ. ಅದು ಜ್ಯೋತಿಯಿಂದ ವ್ಯಾಪ್ತವಾಗಿದೆ. ಇದರಲ್ಲಿ ಹರಿಯಿದ್ದಾನೆ.”

[3] ಸಂಕ್ಷೇಪವೆಂದರೆ ಸಂಹಾರಕನೆಂದೂ ವಿಸ್ತರವೆಂದರೆ ಪುನಃ ರಚನೆಯೆಂದೂ ಅರ್ಥೈಸುತ್ತಾರೆ.

[4] ಹಿಂದಿನ ಶ್ಲೋಕಗಳಲ್ಲಿ ಸಂಜಯನು ಭಗವಂತನ ಮಹಿಮೆಯನ್ನು ಹೇಳಿದರೂ ಧೃತರಾಷ್ಟ್ರನ ಮನಸ್ಸು ಭಗವಂತನ ಧ್ಯಾನದಲ್ಲಿರದೇ ತನ್ನ ಪುತ್ರರ ಕುರಿತು ಯೋಚಿಸುತ್ತಿತ್ತು!

Comments are closed.