Ashramavasika Parva: Chapter 5

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

ಧೃತರಾಷ್ಟ್ರನ ವನಗಮನ ಸಂಕಲ್ಪ

ಧೃತರಾಷ್ಟ್ರನು ತಾನು ಮಾಡಿದ ಅಪರಾಧಗಳಿಗೆ ಪರಿತಾಪಗೊಂಡು ಅಲ್ಪಾಹಾರ ಮತ್ತು ನೆಲದ ಮೇಲೆ ಮಲಗುವುದು ಮುಂತಾದ  ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದುದನ್ನು ಯುಧಿಷ್ಠಿರಾದಿಗಳಿಗೆ ತಿಳಿಸಿದುದು (೧-೧೩). ವನವನ್ನು ಸೇರಲು ತನಗೆ ಮತ್ತು ಗಾಂಧಾರಿಗೆ ಅನುಮತಿಯನ್ನು ನೀಡಬೇಕೆಂದು ಧೃತರಾಷ್ಟ್ರನು ಯುಧಿಷ್ಠಿರನಲ್ಲಿ ಕೇಳಿಕೊಂಡಿದುದು (೧೪-೨೩).

15005001 ಧೃತರಾಷ್ಟ್ರ ಉವಾಚ|

15005001a ವಿದಿತಂ ಭವತಾಮೇತದ್ಯಥಾ ವೃತ್ತಃ ಕುರುಕ್ಷಯಃ|

15005001c ಮಮಾಪರಾಧಾತ್ತತ್ಸರ್ವಮಿತಿ ಜ್ಞೇಯಂ ತು ಕೌರವಾಃ||

ಧೃತರಾಷ್ಟ್ರನು ಹೇಳಿದನು: “ಕುರುಗಳ ವಿನಾಶವು ಹೇಗಾಯಿತೆಂದು ನಿಮಗೆಲ್ಲ ತಿಳಿದೇ ಇದೆ. ನನ್ನ ಅಪರಾಧದಿಂದಲೇ ಎಲ್ಲವೂ ನಡೆಯಿತು ಎನ್ನುವುದನ್ನು ಕೌರವರೆಲ್ಲರೂ ಬಲ್ಲರು!

15005002a ಯೋಽಹಂ ದುಷ್ಟಮತಿಂ ಮೂಢಂ ಜ್ಞಾತೀನಾಂ ಭಯವರ್ಧನಮ್|

15005002c ದುರ್ಯೋಧನಂ ಕೌರವಾಣಾಮಾಧಿಪತ್ಯೇಽಭ್ಯಷೇಚಯಮ್||

ನಾನೇ ದುಷ್ಟಮತಿಯಾದ ಮೂಢ ಬಾಂಧವರ ಭಯವನ್ನು ವರ್ಧಿಸುತ್ತಿದ್ದ ದುರ್ಯೋಧನನನ್ನು ಕೌರವರ ಅಧಿಪತಿಯನ್ನಾಗಿ ಅಭಿಷೇಕಿಸಿದೆನು!

15005003a ಯಚ್ಚಾಹಂ ವಾಸುದೇವಸ್ಯ ವಾಕ್ಯಂ ನಾಶ್ರೌಷಮರ್ಥವತ್|

15005003c ವಧ್ಯತಾಂ ಸಾಧ್ವಯಂ ಪಾಪಃ ಸಾಮಾತ್ಯ ಇತಿ ದುರ್ಮತಿಃ||

“ಈ ಪಾಪಿ ದುರ್ಮತಿಯನ್ನು ಅಮಾತ್ಯರೊಡನೆ ವಧಿಸು!” ಎಂಬ ವಾಸುದೇವನ ಅರ್ಥವತ್ತಾದ ಮಾತನ್ನು ನಾನೇ ಕೇಳಲಿಲ್ಲ!

15005004a ಪುತ್ರಸ್ನೇಹಾಭಿಭೂತಶ್ಚ ಹಿತಮುಕ್ತೋ ಮನೀಷಿಭಿಃ|

15005004c ವಿದುರೇಣಾಥ ಭೀಷ್ಮೇಣ ದ್ರೋಣೇನ ಚ ಕೃಪೇಣ ಚ||

15005005a ಪದೇ ಪದೇ ಭಗವತಾ ವ್ಯಾಸೇನ ಚ ಮಹಾತ್ಮನಾ|

15005005c ಸಂಜಯೇನಾಥ ಗಾಂಧಾರ್ಯಾ ತದಿದಂ ತಪ್ಯತೇಽದ್ಯ ಮಾಮ್||

ಪುತ್ರಸ್ನೇಹದಿಂದಾಗಿ ನಾನು ಹಿತವನ್ನಾಡಿದ ಮನೀಷ ವಿದುರ, ಭೀಷ್ಮ, ದ್ರೋಣ, ಕೃಪ, ಮತ್ತು ಪದೇ ಪದೇ ಹೇಳುತ್ತಿದ್ದ ಮಹಾತ್ಮ ವ್ಯಾಸ, ಸಂಜಯ ಮತ್ತು ಗಾಂಧಾರಿಯರನ್ನು ಕೇಳಲಿಲ್ಲ. ಅದಕ್ಕಾಗಿ ಇಂದು ನಾನು ಪರಿತಪಿಸುತ್ತಿದ್ದೇನೆ!

15005006a ಯಚ್ಚಾಹಂ ಪಾಂಡುಪುತ್ರೇಣ ಗುಣವತ್ಸು ಮಹಾತ್ಮಸು|

15005006c ನ ದತ್ತವಾನ್ಶ್ರಿಯಂ ದೀಪ್ತಾಂ ಪಿತೃಪೈತಾಮಹೀಮಿಮಾಮ್||

ಗುಣವಂತರೂ ಮಹಾತ್ಮರೂ ಆಗಿರುವ ಪಾಂಡುಪುತ್ರರಿಗೆ ನಾನು ಪಿತೃ-ಪಿತಾಮಹರಿಂದ ಉಜ್ವಲಿಸುತ್ತಿದ್ದ ಈ ಭೂಮಿ-ಸಂಪತ್ತನ್ನು ಕೊಡಲಿಲ್ಲ!

15005007a ವಿನಾಶಂ ಪಶ್ಯಮಾನೋ ಹಿ ಸರ್ವರಾಜ್ಞಾಂ ಗದಾಗ್ರಜಃ|

15005007c ಏತಚ್ಚ್ರೇಯಃ ಸ ಪರಮಮಮನ್ಯತ ಜನಾರ್ದನಃ||

ಸರ್ವರಾಜರ ವಿನಾಶವನ್ನು ಕಂಡಿದ್ದ ಗದಾಗ್ರಜ ಜನಾರ್ದನನು ಇದೇ ಪರಮ ಶ್ರೇಯಸ್ಕರವೆಂದು ಭಾವಿಸಿದ್ದನು.

15005008a ಸೋಽಹಮೇತಾನ್ಯಲೀಕಾನಿ ನಿವೃತ್ತಾನ್ಯಾತ್ಮನಃ ಸದಾ|

15005008c ಹೃದಯೇ ಶಲ್ಯಭೂತಾನಿ ಧಾರಯಾಮಿ ಸಹಸ್ರಶಃ||

ಹೀಗೆ ಆಗ ನಾನು ಮಾಡಿದ ಸಾವಿರಾರು ಅಪರಾಧಗಳು ಮುಳ್ಳುಗಳಂತೆ ಸದಾ ನನ್ನ ಹೃದಯವನ್ನು ಚುಚ್ಚುತ್ತಿವೆ.

15005009a ವಿಶೇಷತಸ್ತು ದಹ್ಯಾಮಿ ವರ್ಷಂ ಪಂಚದಶಂ ಹಿ ವೈ|

15005009c ಅಸ್ಯ ಪಾಪಸ್ಯ ಶುದ್ಧ್ಯರ್ಥಂ ನಿಯತೋಽಸ್ಮಿ ಸುದುರ್ಮತಿಃ||

ವಿಶೇಷವಾಗಿ ನಾನು ಈ ಹದಿನೈದು ವರ್ಷಗಳು ಸುಡುತ್ತಿದ್ದೇನೆ. ದುರ್ಮತಿಯ ಈ ಪಾಪಗಳ ಶುದ್ಧಿಗಾಗಿ ಕೆಲವು ನಿಯಮಗಳನ್ನು ಪಾಲಿಸುತ್ತಿದ್ದೇನೆ.

15005010a ಚತುರ್ಥೇ ನಿಯತೇ ಕಾಲೇ ಕದಾ ಚಿದಪಿ ಚಾಷ್ಟಮೇ|

15005010c ತೃಷ್ಣಾವಿನಯನಂ ಭುಂಜೇ ಗಾಂಧಾರೀ ವೇದ ತನ್ಮಮ||

ನಾಲ್ಕನೆಯ ಹೊತ್ತು (ಎರಡು ದಿವಸಗಳಿಗೊಮ್ಮೆ), ಒಮ್ಮೆಮ್ಮೆ ಎಂಟನೆಯ ಹೊತ್ತು (ನಾಲ್ಕು ದಿವಸಗಳಿಗೊಮ್ಮೆ) ಹಸಿವಿನ ಸಂಕಟದಿಂದ ತಪ್ಪಿಸಿಕೊಳ್ಳಲು ಅಲ್ಪಾಹಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದನ್ನು ಗಾಂಧಾರಿಯೋರ್ವಳೇ ಬಲ್ಲಳು.

15005011a ಕರೋತ್ಯಾಹಾರಮಿತಿ ಮಾಂ ಸರ್ವಃ ಪರಿಜನಃ ಸದಾ|

15005011c ಯುಧಿಷ್ಠಿರಭಯಾದ್ವೇತ್ತಿ ಭೃಶಂ ತಪ್ಯತಿ ಪಾಂಡವಃ||

ನಾನು ಪ್ರತಿನಿತ್ಯವೂ ಆಹಾರವನ್ನು ತೆಗೆದುಕೊಳ್ಳುತ್ತಿರುವೆನೆಂದೇ ಎಲ್ಲ ಪರಿಜನರೂ ತಿಳಿದುಕೊಂಡಿದ್ದಾರೆ. ಪಾಂಡವನು ತುಂಬಾ ಪರಿತಪಿಸುತ್ತಾನೆಂದು ಯುಧಿಷ್ಠಿರನ ಭಯದಿಂದ ಯಾರಿಗೂ ಇದು ತಿಳಿಯದಂತೆ ಗೌಪ್ಯವಾಗಿ ಇರಿಸಿಕೊಂಡಿದ್ದೇನೆ.

15005012a ಭೂಮೌ ಶಯೇ ಜಪ್ಯಪರೋ ದರ್ಭೇಷ್ವಜಿನಸಂವೃತಃ|

15005012c ನಿಯಮವ್ಯಪದೇಶೇನ ಗಾಂಧಾರೀ ಚ ಯಶಸ್ವಿನೀ||

ದರ್ಭೆ ಮತ್ತು ಮೃಗಚರ್ಮವನ್ನು ಹೊದೆದುಕೊಂಡು ನಾನು ಮತ್ತು ಯಶಸ್ವಿನೀ ಗಾಂಧಾರೀ ಜಪಮಾಡುತ್ತಿರುತ್ತೇವೆ. ನೆಲದ ಮೇಲೆಯೇ ಮಲಗುತ್ತೇವೆ.

15005013a ಹತಂ ಪುತ್ರಶತಂ ಶೂರಂ ಸಂಗ್ರಾಮೇಷ್ವಪಲಾಯಿನಮ್|

15005013c ನಾನುತಪ್ಯಾಮಿ ತಚ್ಚಾಹಂ ಕ್ಷತ್ರಧರ್ಮಂ ಹಿ ತಂ ವಿದುಃ||

15005013e ಇತ್ಯುಕ್ತ್ವಾ ಧರ್ಮರಾಜಾನಮಭ್ಯಭಾಷತ ಕೌರವಃ|

ಸಂಗ್ರಾಮದಲ್ಲಿ ಹಿಮ್ಮೆಟ್ಟದ ನೂರು ಶೂರ ಮಕ್ಕಳೂ ಹತರಾದರು. ಅವರು ಕ್ಷತ್ರಧರ್ಮವನ್ನು ತಿಳಿದಿದ್ದರೆಂದು ನಾನು ಅದಕ್ಕಾಗಿ ಪರಿತಪಿಸುತ್ತಿಲ್ಲ.” ಹೀಗೆ ಹೇಳಿ ಕೌರವ ಧೃತರಾಷ್ಟ್ರನು ಧರ್ಮರಾಜನಿಗೆ ಹೇಳಿದನು:

15005014a ಭದ್ರಂ ತೇ ಯಾದವೀಮಾತರ್ವಾಕ್ಯಂ ಚೇದಂ ನಿಬೋಧ ಮೇ||

15005014c ಸುಖಮಸ್ಮ್ಯುಷಿತಃ ಪುತ್ರ ತ್ವಯಾ ಸುಪರಿಪಾಲಿತಃ|

“ಪುತ್ರ! ಯಾದವೀ ಕುಂತಿಯ ಮಗನೇ! ನಿನಗೆ ಮಂಗಳವಾಗಲಿ! ನಾನೀಗ ಹೇಳುವ ಮಾತುಗಳನ್ನು ಕೇಳು! ನಿನ್ನಿಂದ ಪರಿಪಾಲಿತನಾಗಿರುವ ನಾನು ಅತ್ಯಂತ ಸುಖದಿಂದಲೇ ಇದ್ದೇನೆ.

15005015a ಮಹಾದಾನಾನಿ ದತ್ತಾನಿ ಶ್ರಾದ್ಧಾನಿ ಚ ಪುನಃ ಪುನಃ||

15005015c ಪ್ರಕೃಷ್ಟಂ ಮೇ ವಯಃ ಪುತ್ರ ಪುಣ್ಯಂ ಚೀರ್ಣಂ ಯಥಾಬಲಮ್|

15005015e ಗಾಂಧಾರೀ ಹತಪುತ್ರೇಯಂ ಧೈರ್ಯೇಣೋದೀಕ್ಷತೇ ಚ ಮಾಮ್||

ಪುತ್ರ! ಮಹಾದಾನಗಳನ್ನು ನೀಡಿದ್ದೇನೆ. ಪುನಃ ಪುನಃ ಶ್ರಾದ್ಧಗಳನ್ನು ಮಾಡಿದ್ದೇನೆ. ಬಲವಿದ್ದಷ್ಟು ಕಷ್ಟದ ಪುಣ್ಯ ಕರ್ಮಗಳನ್ನು ಮಾಡಿದ ಮತ್ತು ಪುತ್ರರನ್ನು ಕಳೆದುಕೊಂಡ ಈ ಗಾಂಧಾರಿಯು ಧೈರ್ಯದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ!

15005016a ದ್ರೌಪದ್ಯಾ ಹ್ಯಪಕರ್ತಾರಸ್ತವ ಚೈಶ್ವರ್ಯಹಾರಿಣಃ|

15005016c ಸಮತೀತಾ ನೃಶಂಸಾಸ್ತೇ ಧರ್ಮೇಣ ನಿಹತಾ ಯುಧಿ||

ದ್ರೌಪದಿಗೆ ಅಪಕಾರವನ್ನೆಸಗಿದ ಮತ್ತು ನಿನ್ನ ಐಶ್ವರ್ಯವನ್ನು ಅಪಹರಿಸಿದ ಕ್ರೂರಿಗಳು ಧರ್ಮದಿಂದ ಯುದ್ಧಮಾಡಿ ಹತರಾಗಿದ್ದಾರೆ.

15005017a ನ ತೇಷು ಪ್ರತಿಕರ್ತವ್ಯಂ ಪಶ್ಯಾಮಿ ಕುರುನಂದನ|

15005017c ಸರ್ವೇ ಶಸ್ತ್ರಜಿತಾಽಲ್ಲೋಕಾನ್ಗತಾಸ್ತೇಽಭಿಮುಖಂ ಹತಾಃ||

ಕುರುನಂದನ! ಅವರ ಪಾಪಕ್ಕೆ ಮಾಡಬೇಕಾದ ಪರಿಹಾರಗಳನ್ನೇನೂ ನಾನು ಕಾಣುತ್ತಿಲ್ಲ. ಎಲ್ಲರೂ ಶಸ್ತ್ರಗಳನ್ನು ಹಿಡಿದೇ ನಿನ್ನನ್ನು ಎದುರಿಸಿ ಹತರಾಗಿ ಉತ್ತಮ ಲೋಕಗಳನ್ನು ಗಳಿಸಿಕೊಂಡಿದ್ದಾರೆ.

15005018a ಆತ್ಮನಸ್ತು ಹಿತಂ ಮುಖ್ಯಂ ಪ್ರತಿಕರ್ತವ್ಯಮದ್ಯ ಮೇ|

15005018c ಗಾಂಧಾರ್ಯಾಶ್ಚೈವ ರಾಜೇಂದ್ರ ತದನುಜ್ಞಾತುಮರ್ಹಸಿ||

ರಾಜೇಂದ್ರ! ಈಗ ನನಗಾಗಿ ಮತ್ತು ಗಾಂಧಾರಿಗಾಗಿ ಹಿತವಾದ ಮುಖ್ಯ ಪರಿಹಾರಗಳನ್ನು ಮಾಡಿಕೊಳ್ಳಬೇಕಾಗಿದೆ. ಅದಕ್ಕೆ ನಿನ್ನ ಅನುಮತಿ ಬೇಕು!

15005019a ತ್ವಂ ಹಿ ಧರ್ಮಭೃತಾಂ ಶ್ರೇಷ್ಠಃ ಸತತಂ ಧರ್ಮವತ್ಸಲಃ|

15005019c ರಾಜಾ ಗುರುಃ ಪ್ರಾಣಭೃತಾಂ ತಸ್ಮಾದೇತದ್ಬ್ರವೀಮ್ಯಹಮ್||

ನೀನು ಧರ್ಮಭೃತರಲ್ಲಿ ಶ್ರೇಷ್ಠ. ಸತತವೂ ಧರ್ಮವನ್ನು ಪಾಲಿಸಿಕೊಂಡಿರುವವನು. ಪ್ರಾಣವಿರುವವರಲ್ಲಿ ಹಿರಿಯವನು. ರಾಜಾ! ಆದುದರಿಂದ ನಿನ್ನಲ್ಲಿ ಹೇಳುತ್ತಿದ್ದೇನೆ.

15005020a ಅನುಜ್ಞಾತಸ್ತ್ವಯಾ ವೀರ ಸಂಶ್ರಯೇಯಂ ವನಾನ್ಯಹಮ್|

15005020c ಚೀರವಲ್ಕಲಭೃದ್ರಾಜನ್ಗಾಂಧಾರ್ಯಾ ಸಹಿತೋಽನಯಾ||

15005020e ತವಾಶಿಷಃ ಪ್ರಯುಂಜಾನೋ ಭವಿಷ್ಯಾಮಿ ವನೇಚರಃ||

ವೀರ! ರಾಜನ್! ನಿನ್ನ ಅನುಜ್ಞೆಯನ್ನು ಪಡೆದು ಗಾಂಧಾರಿಯ ಸಹಿತ ನಾನು ಚೀರ-ವಲ್ಕಲಗಳನ್ನು ಧರಿಸಿ ವನದಲ್ಲಿ ವಾಸಿಸುತ್ತೇನೆ. ವನದಲ್ಲಿ ಸಂಚರಿಸುತ್ತಾ ಸದಾ ನಿನಗೆ ಆಶೀರ್ವದಿಸುತ್ತಿರುತ್ತೇನೆ.

15005021a ಉಚಿತಂ ನಃ ಕುಲೇ ತಾತ ಸರ್ವೇಷಾಂ ಭರತರ್ಷಭ|

15005021c ಪುತ್ರೇಷ್ವೈಶ್ವರ್ಯಮಾಧಾಯ ವಯಸೋಽಂತೇ ವನಂ ನೃಪ||

ಅಯ್ಯಾ ಭರತರ್ಷಭ! ನಮ್ಮ ಕುಲದಲ್ಲಿ ಎಲ್ಲರಿಗೂ ಐಶ್ವರ್ಯವನ್ನು ಪುತ್ರರಿಗೊಪ್ಪಿಸಿ ವನವಾಸಮಾಡುವುದು ಉಚಿತವೇ ಆಗಿದೆ.

15005022a ತತ್ರಾಹಂ ವಾಯುಭಕ್ಷೋ ವಾ ನಿರಾಹಾರೋಽಪಿ ವಾ ವಸನ್|

15005022c ಪತ್ನ್ಯಾ ಸಹಾನಯಾ ವೀರ ಚರಿಷ್ಯಾಮಿ ತಪಃ ಪರಮ್||

ವೀರ! ಅಲ್ಲಿ ನಾನು ಪತ್ನಿಯೊಡನೆ ವಾಯುಭಕ್ಷನಾಗಿಯೋ ನಿರಾಹಾರಿಯಾಗಿಯೋ ಇದ್ದುಕೊಂಡು ಪರಮ ತಪಸ್ಸನ್ನು ನಡೆಸುತ್ತೇನೆ.

15005023a ತ್ವಂ ಚಾಪಿ ಫಲಭಾಕ್ತಾತ ತಪಸಃ ಪಾರ್ಥಿವೋ ಹ್ಯಸಿ|

15005023c ಫಲಭಾಜೋ ಹಿ ರಾಜಾನಃ ಕಲ್ಯಾಣಸ್ಯೇತರಸ್ಯ ವಾ||

ಮಗೂ! ರಾಜನಾಗಿರುವುದರಿಂದ ನೀನೂ ಕೂಡ ಆ ತಪಸ್ಸಿನ ಫಲಭಾಗಿಯಾಗುವೆ. ಏಕೆಂದರೆ, ದೇಶದಲ್ಲಿ ಕಲ್ಯಾಣಕರವಾದ ಮತ್ತು ಕೆಟ್ಟದಾದ ಎಲ್ಲ ಕರ್ಮಗಳಿಗೆ ರಾಜನು ಫಲಭಾಗಿಯಾಗುತ್ತಾನೆ!”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ವೇದೇ ಪಂಚಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ವೇದ ಎನ್ನುವ ಐದನೇ ಅಧ್ಯಾಯವು.

Comments are closed.