Ashramavasika Parva: Chapter 4

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

ಭೀಮಾಪನಯ

ಭೀಮಸೇನನು ಧೃತರಾಷ್ಟ್ರ-ಗಾಂಧಾರಿಯರಿಗೆ ಕೇಳಿಸುವಂತೆ ಕಠೋರಮಾತುಗಳನ್ನಾಡಿದುದು (೧-೯). ಹದಿನೈದು ವರ್ಷಗಳು ಭೀಮಸೇನನ ಅಪಮಾನಕಾರಕ ಮಾತುಗಳನ್ನು ಕೇಳುತ್ತಿದ್ದ ಧೃತರಾಷ್ಟ್ರನು ದುಃಖಿತನಾದುದು (೧೦-೧೫).

15004001 ವೈಶಂಪಾಯನ ಉವಾಚ|

15004001a ಯುಧಿಷ್ಠಿರಸ್ಯ ನೃಪತೇರ್ದುರ್ಯೋಧನಪಿತುಸ್ತಥಾ|

15004001c ನಾಂತರಂ ದದೃಶೂ ರಾಜನ್ಪುರುಷಾಃ ಪ್ರಣಯಂ ಪ್ರತಿ||

ವೈಶಂಪಾಯನನು ಹೇಳಿದನು: “ರಾಜನ್! ದುರ್ಯೋಧನನ ತಂದೆ ನೃಪತಿಯ ಮೇಲೆ ಇದ್ದ ಯುಧಿಷ್ಠಿರನ ಪ್ರೀತಿಯಲ್ಲಿ ಪುರುಷರು ಯಾವ ಒಡಕನ್ನೂ ಕಾಣಲಿಲ್ಲ.

15004002a ಯದಾ ತು ಕೌರವೋ ರಾಜಾ ಪುತ್ರಂ ಸಸ್ಮಾರ ಬಾಲಿಶಮ್|

15004002c ತದಾ ಭೀಮಂ ಹೃದಾ ರಾಜನ್ನಪಧ್ಯಾತಿ ಸ ಪಾರ್ಥಿವಃ||

ರಾಜನ್! ಯಾವಾಗಲೆಲ್ಲ ರಾಜಾ ಕೌರವನು ತನ್ನ ಪುತ್ರನ ಬಾಲಿಶಬುದ್ಧಿಯನ್ನು ಸ್ಮರಿಸಿಕೊಳ್ಳುತ್ತಿದ್ದನೋ ಆವಾಗಲೆಲ್ಲ ತನ್ನ ಹೃದಯದಲ್ಲಿ ಭೀಮನ ಕುರಿತು ಅನಿಷ್ಟವನ್ನೇ ಚಿಂತಿಸುತ್ತಿದ್ದನು.

15004003a ತಥೈವ ಭೀಮಸೇನೋಽಪಿ ಧೃತರಾಷ್ಟ್ರಂ ಜನಾಧಿಪಮ್|

15004003c ನಾಮರ್ಷಯತ ರಾಜೇಂದ್ರ ಸದೈವಾತುಷ್ಟವದ್ಧೃದಾ||

ರಾಜೇಂದ್ರ! ಹಾಗೆಯೇ ಭೀಮಸೇನನಿಗೂ ಕೂಡ ಜನಾಧಿಪ ಧೃತರಾಷ್ಟ್ರನ ಕುರಿತು ಸಹನೆಯಿರಲಿಲ್ಲ. ಸದಾ ಅವನಿಗೆ ಅಪ್ರಿಯವಾದುದನ್ನೇ ಮಾಡುತ್ತಿದ್ದನು.

15004004a ಅಪ್ರಕಾಶಾನ್ಯಪ್ರಿಯಾಣಿ ಚಕಾರಾಸ್ಯ ವೃಕೋದರಃ|

15004004c ಆಜ್ಞಾಂ ಪ್ರತ್ಯಹರಚ್ಚಾಪಿ ಕೃತಕೈಃ ಪುರುಷೈಃ ಸದಾ||

ವೃಕೋದರನು ಯಾರಿಗೂ ಕಾಣದಂತೆ ಧೃತರಾಷ್ಟ್ರನಿಗೆ ಅಪ್ರಿಯವಾದುದನ್ನೇ ಮಾಡುತ್ತಿದ್ದನು. ಸದಾ ಕೃತಕ ಪುರುಷರಿಂದ ಧೃತರಾಷ್ಟ್ರನ ಆಜ್ಞೆಗಳನ್ನು ಭಗ್ನಗೊಳಿಸುತ್ತಿದ್ದನು.

15004005a ಅಥ ಭೀಮಃ ಸುಹೃನ್ಮಧ್ಯೇ ಬಾಹುಶಬ್ಧಂ ತಥಾಕರೋತ್|

15004005c ಸಂಶ್ರವೇ ಧೃತರಾಷ್ಟ್ರಸ್ಯ ಗಾಂಧಾರ್ಯಾಶ್ಚಾಪ್ಯಮರ್ಷಣಃ||

ಒಮ್ಮೆ ಕಠೋರ ಭೀಮನು ತನ್ನ ಸಹೃದಯರ ಮಧ್ಯದಲ್ಲಿ ಧೃತರಾಷ್ಟ್ರ-ಗಾಂಧಾರಿಯರಿಗೆ ಕೇಳುವಂತೆ ತನ್ನ ಭುಜಗಳನ್ನು ತಟ್ಟಿಕೊಂಡನು.

15004006a ಸ್ಮೃತ್ವಾ ದುರ್ಯೋಧನಂ ಶತ್ರುಂ ಕರ್ಣದುಃಶಾಸನಾವಪಿ|

15004006c ಪ್ರೋವಾಚಾಥ ಸುಸಂರಬ್ಧೋ ಭೀಮಃ ಸ ಪರುಷಂ ವಚಃ||

ಶತ್ರು ದುರ್ಯೋಧನ, ಕರ್ಣ ಮತ್ತು ದುಃಶಾಸನರನ್ನು ಸ್ಮರಿಸಿಕೊಂಡು ಕೋಪಿಷ್ಟನಾದ ಭೀಮನು ಈ ಕಠೋರ ಮಾತುಗಳನ್ನಾಡಿದನು:

15004007a ಅಂಧಸ್ಯ ನೃಪತೇಃ ಪುತ್ರಾ ಮಯಾ ಪರಿಘಬಾಹುನಾ|

15004007c ನೀತಾ ಲೋಕಮಮುಂ ಸರ್ವೇ ನಾನಾಶಸ್ತ್ರಾತ್ತಜೀವಿತಾಃ||

“ಪರಿಘದಂತಿರುವ ನನ್ನ ಈ ಬಾಹುಗಳಿಂದ ನಾನಾ ಶಸ್ತ್ರಗಳೊಡನೆ ಹೋರಾಡುತ್ತಿದ್ದ ಈ ಅಂಧ ನೃಪತಿಯ ಮಕ್ಕಳೆಲ್ಲರನ್ನೂ ಯಮನ ಲೋಕಕ್ಕೆ ಕಳುಹಿಸಿಬಿಟ್ಟೆನು!

15004008a ಇಮೌ ತೌ ಪರಿಘಪ್ರಖ್ಯೌ ಭುಜೌ ಮಮ ದುರಾಸದೌ|

15004008c ಯಯೋರಂತರಮಾಸಾದ್ಯ ಧಾರ್ತರಾಷ್ಟ್ರಾಃ ಕ್ಷಯಂ ಗತಾಃ||

ಪರಿಘದಂತೆ ದುರಾಸದವಾಗಿರುವ ಈ ನನ್ನ ಎರಡು ಭುಜಗಳ ಮಧ್ಯೆ ಯಾರೆಲ್ಲ ಸಿಲುಕಿದರೋ ಆ ಎಲ್ಲ ಧಾರ್ತರಾಷ್ಟ್ರರೂ ನಾಶಹೊಂದಿದರು!

15004009a ತಾವಿಮೌ ಚಂದನೇನಾಕ್ತೌ ವಂದನೀಯೌ ಚ ಮೇ ಭುಜೌ|

15004009c ಯಾಭ್ಯಾಂ ದುರ್ಯೋಧನೋ ನೀತಃ ಕ್ಷಯಂ ಸಸುತಬಾಂಧವಃ||

ಸುತ-ಬಾಂಧವರೊಂದಿಗೆ ದುರ್ಯೋಧನನನ್ನು ನಾಶಗೊಳಿಸಿದ ಈ ನನ್ನ ಎರಡು ಭುಜಗಳು ಚಂದನಲೇಪನದ ಗೌರವಕ್ಕೆ ಅರ್ಹವಾಗಿವೆ!”

15004010a ಏತಾಶ್ಚಾನ್ಯಾಶ್ಚ ವಿವಿಧಾಃ ಶಲ್ಯಭೂತಾ ಜನಾಧಿಪಃ|

15004010c ವೃಕೋದರಸ್ಯ ತಾ ವಾಚಃ ಶ್ರುತ್ವಾ ನಿರ್ವೇದಮಾಗಮತ್||

ವೃಕೋದರನ ಈ ಮತ್ತು ಅನ್ಯ ಮುಳ್ಳಿನಂತಹ ವಿವಿಧ ಮಾತುಗಳನ್ನು ಕೇಳಿ ಜನಾಧಿಪನಿಗೆ ಅತ್ಯಂತ ಖೇದವುಂಟಾಯಿತು.

15004011a ಸಾ ಚ ಬುದ್ಧಿಮತೀ ದೇವೀ ಕಾಲಪರ್ಯಾಯವೇದಿನೀ|

15004011c ಗಾಂಧಾರೀ ಸರ್ವಧರ್ಮಜ್ಞಾ ತಾನ್ಯಲೀಕಾನಿ ಶುಶ್ರುವೇ||

ಕಾಲದ ವೈವರೀತ್ಯಗಳನ್ನು ತಿಳಿದಿದ್ದ ಸರ್ವಧರ್ಮಜ್ಞೆ ಬುದ್ಧಿಮತೀ ದೇವೀ ಗಾಂಧಾರಿಯೂ ಕೂಡ ಮನಸ್ಸಿಗೆ ಯಾತನೆಯನ್ನುಂಟುಮಾಡುವ ಆ ಮಾತುಗಳನ್ನು ಕೇಳಿದಳು.

15004012a ತತಃ ಪಂಚದಶೇ ವರ್ಷೇ ಸಮತೀತೇ ನರಾಧಿಪಃ|

15004012c ರಾಜಾ ನಿರ್ವೇದಮಾಪೇದೇ ಭೀಮವಾಗ್ಬಾಣಪೀಡಿತಃ||

ಹಾಗೆ ಹದಿನೈದು ವರ್ಷಗಳು ಕಳೆದುಹೋದವು. ರಾಜಾ ನರಾಧಿಪ ಧೃತರಾಷ್ಟ್ರನು ಭೀಮನ ವಾಗ್ಬಾಣಗಳಿಂದ ಅತ್ಯಂತ ಪೀಡಿತನಾಗಿದ್ದನು.

15004013a ನಾನ್ವಬುಧ್ಯತ ತದ್ರಾಜಾ ಕುಂತೀಪುತ್ರೋ ಯುಧಿಷ್ಠಿರಃ|

15004013c ಶ್ವೇತಾಶ್ವೋ ವಾಥ ಕುಂತೀ ವಾ ದ್ರೌಪದೀ ವಾ ಯಶಸ್ವಿನೀ||

ರಾಜಾ ಕುಂತೀಪುತ್ರ ಯುಧಿಷ್ಠಿರನಿಗಾಗಲೀ, ಶ್ವೇತಾಶ್ವ ಅರ್ಜುನನಿಗಾಗಲೀ, ಕುಂತಿಗಾಗಲೀ, ಅಥವಾ ಯಶಸ್ವಿನೀ ದ್ರೌಪದಿಗಾಗಲೀ ಈ ವಿಷಯದ ಅರಿವೇ ಇರಲಿಲ್ಲ.

15004014a ಮಾದ್ರೀಪುತ್ರೌ ಚ ಭೀಮಸ್ಯ ಚಿತ್ತಜ್ಞಾವನ್ವಮೋದತಾಮ್|

15004014c ರಾಜ್ಞಸ್ತು ಚಿತ್ತಂ ರಕ್ಷಂತೌ ನೋಚತುಃ ಕಿಂ ಚಿದಪ್ರಿಯಮ್||

ಮಾದ್ರೀಪುತ್ರರಿಬ್ಬರೂ ಕೂಡ ಭೀಮನ ಮನಸ್ಸನ್ನು ತಿಳಿಯದೇ ರಾಜ ಧೃತರಾಷ್ಟ್ರನ ಮನಸ್ಸಿಗೆ ಅನುಕೂಲರಾಗಿಯೇ ಇದ್ದರು. ಅವನ ಮನಸ್ಸು ಖೇದಗೊಳ್ಳದಂತೆ ರಕ್ಷಿಸುತ್ತಾ ಅವನಿಗೆ ಅಪ್ರಿಯವಾದ ಏನನ್ನೂ ಮಾಡುತ್ತಿರಲಿಲ್ಲ.

15004015a ತತಃ ಸಮಾನಯಾಮಾಸ ಧೃತರಾಷ್ಟ್ರಃ ಸುಹೃಜ್ಜನಮ್|

15004015c ಬಾಷ್ಪಸಂದಿಗ್ಧಮತ್ಯರ್ಥಮಿದಮಾಹ ವಚೋ ಭೃಶಮ್||

ಆಗ ಧೃತರಾಷ್ಟ್ರನು ತನ್ನ ಮಿತ್ರರನ್ನು ಕರೆಯಿಸಿ ಕಂಬನಿದುಂಬಿದ ಕಣ್ಣುಗಳಿಂದ ಕೂಡಿ ಗದ್ಗದ ಧ್ವನಿಯಲ್ಲಿ ಅವರೊಡನೆ ಹೀಗೆ ಹೇಳಿದನು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಭೀಮಾಪನಯೇ ಚತುರ್ಥೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಭೀಮಾಪನಯ ಎನ್ನುವ ನಾಲ್ಕನೇ ಅಧ್ಯಾಯವು.

Comments are closed.