Ashramavasika Parva: Chapter 33

ಆಶ್ರಮವಾಸಿಕ ಪರ್ವ: ಆಶ್ರಮವಾಸ ಪರ್ವ

೩೩

ವಿದುರಸಾಯುಜ್ಯ

ಧೃತರಾಷ್ಟ್ರನು ಯುಧಿಷ್ಠಿರನಲ್ಲಿ ಕುಶಲಪ್ರಶ್ನೆಗಳನ್ನು ಕೇಳಿದುದು (೧-೯). ವಿದುರನ ಕುರಿತು ಯುಧಿಷ್ಠಿರ-ಧೃತರಾಷ್ಟ್ರರ ಸಂವಾದ (೧೦-೧೬). ವಿದುರನನ್ನು ಹಿಂಬಾಲಿಸಿ ಹೋದ ಯುಧಿಷ್ಠಿರನ ಶರೀರವನ್ನು ವಿದುರನ ಪ್ರಾಣವು ಪ್ರವೇಶಿಸಿದುದು; ವಿದುರನ ಸಾಯುಜ್ಯ (೧೭-೩೨). ಯುಧಿಷ್ಠಿರಾದಿಗಳು ಧೃತರಾಷ್ಟ್ರನ ಆತಿಥ್ಯವನ್ನು ಸ್ವೀಕರಿಸಿ ರಾತ್ರಿ ಅಲ್ಲಿಯೇ ತಂಗಿದುದು (೩೩-೩೭).

15033001 ಧೃತರಾಷ್ಟ್ರ ಉವಾಚ|

15033001a ಯುಧಿಷ್ಠಿರ ಮಹಾಬಾಹೋ ಕಚ್ಚಿತ್ತಾತ ಕುಶಲ್ಯಸಿ|

15033001c ಸಹಿತೋ ಭ್ರಾತೃಭಿಃ ಸರ್ವೈಃ ಪೌರಜಾನಪದೈಸ್ತಥಾ||

ಧೃತರಾಷ್ಟ್ರನು ಹೇಳಿದನು: “ಮಹಾಬಾಹೋ! ಯುಧಿಷ್ಠಿರ! ಮಗೂ! ಪುರಜನಪದರೊಡನೆಯೂ, ಎಲ್ಲ ತಮ್ಮಂದಿರೊಡನೆಯೂ ನೀನು ಕುಶಲನಾಗಿದ್ದೀಯೆ ತಾನೇ?

15033002a ಯೇ ಚ ತ್ವಾಮುಪಜೀವಂತಿ ಕಚ್ಚಿತ್ತೇಽಪಿ ನಿರಾಮಯಾಃ|

15033002c ಸಚಿವಾ ಭೃತ್ಯವರ್ಗಾಶ್ಚ ಗುರವಶ್ಚೈವ ತೇ ವಿಭೋ||

ವಿಭೋ! ನಿನ್ನನ್ನೇ ಆಶ್ರಯಿಸಿರುವ ಸಚಿವರೂ, ಸೇವಕ ವರ್ಗದವರೂ, ಗುರುಗಳೂ ನಿರಾಮಯರಾಗಿರುವರು ತಾನೇ?

15033003a ಕಚ್ಚಿದ್ವರ್ತಸಿ ಪೌರಾಣೀಂ ವೃತ್ತಿಂ ರಾಜರ್ಷಿಸೇವಿತಾಮ್|

15033003c ಕಚ್ಚಿದ್ದಾಯಾನನುಚ್ಚಿದ್ಯ ಕೋಶಸ್ತೇಽಭಿಪ್ರಪೂರ್ಯತೇ||

ರಾಜರ್ಷಿಗಳು ನಡೆದುಕೊಂಡು ಬಂದಿರುವ ಪುರಾತನ ವೃತ್ತಿಯಂತೆಯೇ ನಡೆದುಕೊಳ್ಳುತ್ತಿದ್ದೀಯೆ ತಾನೆ? ನ್ಯಾಯಮಾರ್ಗವನ್ನು ಉಲ್ಲಂಘಿಸದೇ ನಿನ್ನ ಕೋಶವು ತುಂಬುತ್ತಿದೆ ತಾನೇ?

15033004a ಅರಿಮಧ್ಯಸ್ಥಮಿತ್ರೇಷು ವರ್ತಸೇ ಚಾನುರೂಪತಃ|

15033004c ಬ್ರಾಹ್ಮಣಾನಗ್ರಹಾರೈರ್ವಾ ಯಥಾವದನುಪಶ್ಯಸಿ||

ಶತ್ರುಗಳು, ಮಿತ್ರರು ಮತ್ತು ಮಧ್ಯಸ್ಥರೊಡನೆ ಯಥಾಯೋಗ್ಯವಾಗಿ ವ್ಯವಹರಿಸುತ್ತಿರುವೆ ತಾನೇ? ಅಗ್ರಹಾರಾದಿಗಳಿಂದ ಬ್ರಾಹ್ಮಣರನ್ನು ಯಥೋಚಿತವಾಗಿ ನೋಡಿಕೊಳ್ಳುತ್ತಿರುವೆ ತಾನೇ?

15033005a ಕಚ್ಚಿತ್ತೇ ಪರಿತುಷ್ಯಂತಿ ಶೀಲೇನ ಭರತರ್ಷಭ|

15033005c ಶತ್ರವೋ ಗುರವಃ ಪೌರಾ ಭೃತ್ಯಾ ವಾ ಸ್ವಜನೋಽಪಿ ವಾ||

ಭರತರ್ಷಭ! ನಿನ್ನ ಶೀಲದಿಂದ ಶತ್ರುಗಳು, ಗುರುಗಳು, ಪೌರರು, ಸೇವಕರು ಮತ್ತು ಸ್ವಜನರೂ ತೃಪ್ತಿಯಿಂದಿರುವರು ತಾನೇ?

15033006a ಕಚ್ಚಿದ್ಯಜಸಿ ರಾಜೇಂದ್ರ ಶ್ರದ್ಧಾವಾನ್ಪಿತೃದೇವತಾಃ|

15033006c ಅತಿಥೀಂಶ್ಚಾನ್ನಪಾನೇನ ಕಚ್ಚಿದರ್ಚಸಿ ಭಾರತ||

ರಾಜೇಂದ್ರ! ಭಾರತ! ಶ್ರದ್ಧಾವಂತನಾಗಿ ಪಿತೃದೇವತೆಗಳನ್ನು ಯಾಜಿಸುತ್ತಿದ್ದೀಯೆ ತಾನೇ? ಅತಿಥಿಗಳನ್ನು ಅನ್ನ-ಪಾನಗಳಿಂದ ಅರ್ಚಿಸುತ್ತಿದ್ದೀಯೆ ತಾನೇ?

15033007a ಕಚ್ಚಿಚ್ಚ ವಿಷಯೇ ವಿಪ್ರಾಃ ಸ್ವಕರ್ಮನಿರತಾಸ್ತವ|

15033007c ಕ್ಷತ್ರಿಯಾ ವೈಶ್ಯವರ್ಗಾ ವಾ ಶೂದ್ರಾ ವಾಪಿ ಕುಟುಂಬಿನಃ||

ನಿನ್ನ ರಾಜ್ಯದಲ್ಲಿ ವಿಪ್ರರೂ, ಕ್ಷತ್ರಿಯರೂ, ವೈಶ್ಯವರ್ಗದವರೂ, ಶೂದ್ರರೂ ಮತ್ತು ಕುಟುಂಬಿಗಳೂ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದಾರೆ ತಾನೇ?

15033008a ಕಚ್ಚಿತ್ ಸ್ತ್ರೀಬಾಲವೃದ್ಧಂ ತೇ ನ ಶೋಚತಿ ನ ಯಾಚತೇ|

15033008c ಜಾಮಯಃ ಪೂಜಿತಾಃ ಕಚ್ಚಿತ್ತವ ಗೇಹೇ ನರರ್ಷಭ||

ನರರ್ಷಭ! ನಿನ್ನ ರಾಜ್ಯದಲ್ಲಿ ಸ್ತ್ರೀಯರು, ಬಾಲಕರು, ಮತ್ತು ವೃದ್ಧರು ಶೋಕಿಸುತ್ತಿಲ್ಲ ಮತ್ತು ಬೇಡಿ ಜೀವಿಸುತ್ತಿಲ್ಲ ತಾನೇ? ನಿನ್ನ ಮನೆಯಲ್ಲಿ ಸೊಸೆ, ಪತ್ನೀ, ತಂಗಿ, ಮಗಳು – ಇವರೆಲ್ಲರೂ ಪೂಜಿಸಲ್ಪಡುತ್ತಿದ್ದಾರೆ ತಾನೇ[1]?

15033009a ಕಚ್ಚಿದ್ರಾಜರ್ಷಿವಂಶೋಽಯಂ ತ್ವಾಮಾಸಾದ್ಯ ಮಹೀಪತಿಮ್|

15033009c ಯಥೋಚಿತಂ ಮಹಾರಾಜ ಯಶಸಾ ನಾವಸೀದತಿ||

ಮಹಾರಾಜ! ನಮ್ಮ ಈ ರಾಜರ್ಷಿವಂಶವು ನಿನ್ನನ್ನು ಮಹೀಪತಿಯನ್ನಾಗಿ ಪಡೆದು ಯಥೋಚಿತವಾಗಿ ಯಶಸ್ಸನ್ನು ಕಳೆದುಕೊಳ್ಳುತ್ತಿಲ್ಲ ತಾನೇ?””

15033010 ವೈಶಂಪಾಯನ ಉವಾಚ|

15033010a ಇತ್ಯೇವಂವಾದಿನಂ ತಂ ಸ ನ್ಯಾಯವಿತ್ಪ್ರತ್ಯಭಾಷತ|

15033010c ಕುಶಲಪ್ರಶ್ನಸಂಯುಕ್ತಂ ಕುಶಲೋ ವಾಕ್ಯಕರ್ಮಣಿ||

ವೈಶಂಪಾಯನನು ಹೇಳಿದನು: “ಈ ಕುಶಲಪ್ರಶ್ನೆಸಂಯುಕ್ತವಾದ ಕುಶಲ ವಾಕ್ಯಗಳಿಗೆ ನ್ಯಾಯವಿದು ಯುಧಿಷ್ಠಿರನು ಉತ್ತರಿಸಿದನು:

15033011a ಕಚ್ಚಿತ್ತೇ ವರ್ಧತೇ ರಾಜಂಸ್ತಪೋ ಮಂದಶ್ರಮಸ್ಯ ತೇ|

15033011c ಅಪಿ ಮೇ ಜನನೀ ಚೇಯಂ ಶುಶ್ರೂಷುರ್ವಿಗತಕ್ಲಮಾ|

15033011e ಅಪ್ಯಸ್ಯಾಃ ಸಫಲೋ ರಾಜನ್ವನವಾಸೋ ಭವಿಷ್ಯತಿ||

“ರಾಜನ್! ನಿನ್ನ ತಪಸ್ಸು ವೃದ್ಧಿಯಾಗುತ್ತಿದೆಯೇ? ನಿನಗೆ ಬೇಗನೇ ಆಯಾಸವಾಗುತ್ತಿಲ್ಲ ತಾನೇ? ನಮ್ಮ ಜನನಿಯು ಆಯಾಸವಿಲ್ಲದೇ ಶುಶ್ರೂಷೆಮಾಡುತ್ತಿದ್ದಾಳೆ ತಾನೇ? ರಾಜನ್! ಹಾಗಿದ್ದರೆ ಅವಳ ವನವಾಸವು ಸಫಲವಾದಂತೆ.

15033012a ಇಯಂ ಚ ಮಾತಾ ಜ್ಯೇಷ್ಠಾ ಮೇ ವೀತವಾತಾಧ್ವಕರ್ಶಿತಾ|

15033012c ಘೋರೇಣ ತಪಸಾ ಯುಕ್ತಾ ದೇವೀ ಕಚ್ಚಿನ್ನ ಶೋಚತಿ||

ಘೋರತಪಸ್ಸಿನಲ್ಲಿ ನಿರತಳಾಗಿರುವ ಈ ನನ್ನ ದೊಡ್ಡಮ್ಮ ದೇವೀ ಗಾಂಧಾರಿಯು ಛಳಿಗಾಳಿಯಿಂದಲೂ, ನಡೆದ ಆಯಾಸದಿಂದಲೂ ಪೀಡಿತಳಾಗಿ ದುಃಖಿಸುತ್ತಿಲ್ಲ ತಾನೇ?

15033013a ಹತಾನ್ಪುತ್ರಾನ್ಮಹಾವೀರ್ಯಾನ್ ಕ್ಷತ್ರಧರ್ಮಪರಾಯಣಾನ್|

15033013c ನಾಪಧ್ಯಾಯತಿ ವಾ ಕಚ್ಚಿದಸ್ಮಾನ್ಪಾಪಕೃತಃ ಸದಾ||

ಕ್ಷತ್ರಧರ್ಮಪರಾಯಣರಾಗಿ ಹತರಾದ ಮಹಾವೀರ್ಯ ಪುತ್ರರನ್ನು ಸ್ಮರಿಸಿಕೊಂಡು ಅಪರಾಧಿಗಳಾದ ನಮ್ಮ ವಿಷಯದಲ್ಲಿ ಸದಾ ಅನಿಷ್ಟವನ್ನು ಚಿಂತಿಸುತ್ತಿಲ್ಲ ತಾನೇ?

15033014a ಕ್ವ ಚಾಸೌ ವಿದುರೋ ರಾಜನ್ನೈನಂ ಪಶ್ಯಾಮಹೇ ವಯಮ್|

15033014c ಸಂಜಯಃ ಕುಶಲೀ ಚಾಯಂ ಕಚ್ಚಿನ್ನು ತಪಸಿ ಸ್ಥಿತಃ||

ರಾಜನ್! ವಿದುರನು ಎಲ್ಲಿದ್ದಾನೆ? ಅವನನ್ನು ನಾವು ಇಲ್ಲಿ ಕಾಣುತ್ತಿಲ್ಲವಲ್ಲ! ಈ ಸಂಜಯನು ಕುಶಲಿಯಾಗಿ ತಪೋನಿರತನಾಗಿದ್ದಾನೆ ತಾನೇ?”

15033015a ಇತ್ಯುಕ್ತಃ ಪ್ರತ್ಯುವಾಚೇದಂ ಧೃತರಾಷ್ಟ್ರೋ ಜನಾಧಿಪಮ್|

15033015c ಕುಶಲೀ ವಿದುರಃ ಪುತ್ರ ತಪೋ ಘೋರಂ ಸಮಾಸ್ಥಿತಃ||

ಹೀಗೆ ಹೇಳಲು ಧೃತರಾಷ್ಟ್ರನು ಜನಾಧಿಪ ಯುಧಿಷ್ಠಿರನಿಗೆ ಉತ್ತರಿಸಿದನು: “ಪುತ್ರ! ಘೋರ ತಪಸ್ಸಿನಲ್ಲಿ ನಿರತನಾಗಿರುವ ವಿದುರನು ಕುಶಲಿಯಾಗಿದ್ದಾನೆ.

15033016a ವಾಯುಭಕ್ಷೋ ನಿರಾಹಾರಃ ಕೃಶೋ ಧಮನಿಸಂತತಃ|

15033016c ಕದಾ ಚಿದ್ದೃಶ್ಯತೇ ವಿಪ್ರೈಃ ಶೂನ್ಯೇಽಸ್ಮಿನ್ ಕಾನನೇ ಕ್ವ ಚಿತ್||

ನಿರಾಹಾರನಾಗಿ, ಕೇವಲ ಗಾಳಿಯನ್ನೇ ಸೇವಿಸುತ್ತಾ ಅವನು ಕೃಶನಾಗಿದ್ದಾನೆ. ಅವನ ನರ-ನಾಡಿಗಳು ಕಾಣುತ್ತಿವೆ. ಈ ಶೂನ್ಯ ಕಾನನದಲ್ಲಿ ಅವನು ಯಾವಾಗಲಾದರೊಮ್ಮೆ ಕೆಲವು ವಿಪ್ರರಿಗೆ ಕಾಣಿಸಿಕೊಳ್ಳುತ್ತಾನೆ.”

15033017a ಇತ್ಯೇವಂ ವದತಸ್ತಸ್ಯ ಜಟೀ ವೀಟಾಮುಖಃ ಕೃಶಃ|

15033017c ದಿಗ್ವಾಸಾ ಮಲದಿಗ್ಧಾಂಗೋ ವನರೇಣುಸಮುಕ್ಷಿತಃ||

15033018a ದೂರಾದಾಲಕ್ಷಿತಃ ಕ್ಷತ್ತಾ ತತ್ರಾಖ್ಯಾತೋ ಮಹೀಪತೇಃ|

15033018c ನಿವರ್ತಮಾನಃ ಸಹಸಾ ಜನಂ ದೃಷ್ಟ್ವಾಶ್ರಮಂ ಪ್ರತಿ||

ಅವನು ಹೀಗೆ ಹೇಳುತ್ತಿರುವಾಗಲೇ ಜಟಾಧಾರಿಯಾಗಿದ್ದ, ಮುಖವು ಸುಕ್ಕಿಹೋಗಿದ್ದ, ಕೃಶನಾಗಿದ್ದ, ದಿಗಂಬರನಾಗಿದ್ದ, ಕೊಳಕಾದ ಅಂಗಾಂಗಗಳಿಂದ ಕೂಡಿದ್ದ ಕ್ಷತ್ತ ವಿದುರನು ದೂರದಲ್ಲಿ ನಿಂತಿರುವುದನ್ನು ಮಹೀಪತಿ ಯುಧಿಷ್ಠಿರನಿಗೆ ತಿಳಿಸಲಾಯಿತು. ಆದರೆ ವಿದುರನು ಆಶ್ರಮದ ಕಡೆ ಒಮ್ಮೆ ತಿರುಗಿ ನೋಡಿ ಒಡನೆಯೇ ಹಿಂದಕ್ಕೆ ಹೊರಟುಬಿಟ್ಟನು.

15033019a ತಮನ್ವಧಾವನ್ನೃಪತಿರೇಕ ಏವ ಯುಧಿಷ್ಠಿರಃ|

15033019c ಪ್ರವಿಶಂತಂ ವನಂ ಘೋರಂ ಲಕ್ಷ್ಯಾಲಕ್ಷ್ಯಂ ಕ್ವ ಚಿತ್ಕ್ವ ಚಿತ್||

ಕೂಡಲೇ ನೃಪತಿ ಯುಧಿಷ್ಠಿರನು ಏಕಾಕಿಯಾಗಿ ಅವನನ್ನು ಹಿಂಬಾಲಿಸಿ ಹೋದನು. ಘೋರ ವನವನ್ನು ಹೊಕ್ಕಿದ್ದ ವಿದುರನು ಅವನಿಗೆ ಒಮ್ಮೆ ಕಾಣುತ್ತಿದ್ದರೆ ಇನ್ನೊಮ್ಮೆ ಕಾಣುತ್ತಿರಲಿಲ್ಲ.

15033020a ಭೋ ಭೋ ವಿದುರ ರಾಜಾಹಂ ದಯಿತಸ್ತೇ ಯುಧಿಷ್ಠಿರಃ|

15033020c ಇತಿ ಬ್ರುವನ್ನರಪತಿಸ್ತಂ ಯತ್ನಾದಭ್ಯಧಾವತ||

“ಭೋ ಭೋ ವಿದುರ! ನಾನು ನಿನ್ನ ಪ್ರಿಯ ರಾಜ ಯುಧಿಷ್ಠಿರ!” ಎಂದು

ಕೂಗಿಕೊಳ್ಳುತ್ತಾ ಪ್ರಯತ್ನಪಟ್ಟು ಆ ನರಪತಿಯು ವಿದುರನ ಹಿಂದೆ ಓಡಿದನು.

15033021a ತತೋ ವಿವಿಕ್ತ ಏಕಾಂತೇ ತಸ್ಥೌ ಬುದ್ಧಿಮತಾಂ ವರಃ|

15033021c ವಿದುರೋ ವೃಕ್ಷಮಾಶ್ರಿತ್ಯ ಕಂ ಚಿತ್ತತ್ರ ವನಾಂತರೇ||

ಹೀಗೆ ಹಿಂಬಾಲಿಸಲ್ಪಟ್ಟ ಬುದ್ಧಿವಂತರಲ್ಲಿ ಶ್ರೇಷ್ಠ ವಿದುರನು ಕಾಡಿನ ಏಕಾಂತ ಸ್ಥಳವೊಂದರಲ್ಲಿ ಒಂದು ಮರಕ್ಕೆ ಒರಗಿ ನಿಂತುಕೊಂಡನು.

15033022a ತಂ ರಾಜಾ ಕ್ಷೀಣಭೂಯಿಷ್ಠಮಾಕೃತೀಮಾತ್ರಸೂಚಿತಮ್|

15033022c ಅಭಿಜಜ್ಞೇ ಮಹಾಬುದ್ಧಿಂ ಮಹಾಬುದ್ಧಿರ್ಯುಧಿಷ್ಠಿರಃ||

ಅತ್ಯಂತ ಕ್ಷೀಣನಾಗಿ ಹೋಗಿದ್ದ, ಆಕೃತಿಯಲ್ಲಿ ಮಾತ್ರ ವಿದುರನಂತಿದ್ದ ಆ ಮಹಾಬುದ್ಧಿಯನ್ನು ಮಹಾಬುದ್ಧಿ ರಾಜಾ ಯುಧಿಷ್ಠಿರನು ಗುರುತಿಸಿದನು.

15033023a ಯುಧಿಷ್ಠಿರೋಽಹಮಸ್ಮೀತಿ ವಾಕ್ಯಮುಕ್ತ್ವಾಗ್ರತಃ ಸ್ಥಿತಃ|

15033023c ವಿದುರಸ್ಯಾಶ್ರವೇ ರಾಜಾ ಸ ಚ ಪ್ರತ್ಯಾಹ ಸಂಜ್ಞಯಾ||

ವಿದುರನಿಗೆ ಕೇಳುವಷ್ಟು ದೂರದಲ್ಲಿ ಅವನ ಎದುರಿಗೇ ನಿಂತು ರಾಜನು ಸಂಜ್ಞೆಮಾಡುತ್ತಾ “ನಾನು ಯುಧಿಷ್ಠಿರ!” ಎಂದು ಹೇಳಿದನು.

15033024a ತತಃ ಸೋಽನಿಮಿಷೋ ಭೂತ್ವಾ ರಾಜಾನಂ ಸಮುದೈಕ್ಷತ|

15033024c ಸಂಯೋಜ್ಯ ವಿದುರಸ್ತಸ್ಮಿನ್ದೃಷ್ಟಿಂ ದೃಷ್ಟ್ಯಾ ಸಮಾಹಿತಃ||

ಅನಂತರ ವಿದುರನು ಎವೆಯಿಕ್ಕದೇ ರಾಜನನ್ನೇ ನೋಡುತ್ತಾ ಅವನ ದೃಷ್ಟಿಯಲ್ಲಿ ತನ್ನ ದೃಷ್ಟಿಯನ್ನು ಸೇರಿಸಿದನು.

15033025a ವಿವೇಶ ವಿದುರೋ ಧೀಮಾನ್ಗಾತ್ರೈರ್ಗಾತ್ರಾಣಿ ಚೈವ ಹ|

15033025c ಪ್ರಾಣಾನ್ಪ್ರಾಣೇಷು ಚ ದಧದಿಂದ್ರಿಯಾಣೀಂದ್ರಿಯೇಷು ಚ||

ಧೀಮಾನ್ ವಿದುರನು ಯುಧಿಷ್ಠಿರನ ಶರೀರದಲ್ಲಿ ತನ್ನ ಶರೀರವನ್ನು, ಪ್ರಾಣದಲ್ಲಿ ತನ್ನ ಪ್ರಾಣಗಳನ್ನು ಮತ್ತು ಇಂದ್ರಿಯಗಳಲ್ಲಿ ಇಂದ್ರಿಯಗಳನ್ನು ಇರಿಸಿ ಪ್ರವೇಶಿಸಿದನು.

15033026a ಸ ಯೋಗಬಲಮಾಸ್ಥಾಯ ವಿವೇಶ ನೃಪತೇಸ್ತನುಮ್|

15033026c ವಿದುರೋ ಧರ್ಮರಾಜಸ್ಯ ತೇಜಸಾ ಪ್ರಜ್ವಲನ್ನಿವ||

ವಿದುರನು ಯೋಗಬಲವನ್ನಾಶ್ರಯಿಸಿ ಧರ್ಮರಾಜನ ತೇಜಸ್ಸಿನಂತೆ ಪ್ರಜ್ವಲಿಸುತ್ತಿರುವನೋ ಎನ್ನುವಂತೆ ನೃಪತಿಯ ದೇಹವನ್ನು ಪ್ರವೇಶಿಸಿದನು.

15033027a ವಿದುರಸ್ಯ ಶರೀರಂ ತತ್ತಥೈವ ಸ್ತಬ್ಧಲೋಚನಮ್|

15033027c ವೃಕ್ಷಾಶ್ರಿತಂ ತದಾ ರಾಜಾ ದದರ್ಶ ಗತಚೇತನಮ್||

ವಿದುರನ ಶರೀರವು ಮಾತ್ರ ಅಲ್ಲಿಯೇ ಮರವನ್ನು ಎರಗಿ ನಿಂತಿರುವುದನ್ನು, ಕಣ್ಣುಗಳು ಸ್ತಬ್ಧವಾಗಿರುವುದನ್ನು ಆದರೆ ಚೇತನವು ಹೊರಟುಹೋಗಿರುವುದನ್ನು ರಾಜನು ನೋಡಿದನು.

15033028a ಬಲವಂತಂ ತಥಾತ್ಮಾನಂ ಮೇನೇ ಬಹುಗುಣಂ ತದಾ|

15033028c ಧರ್ಮರಾಜೋ ಮಹಾತೇಜಾಸ್ತಚ್ಚ ಸಸ್ಮಾರ ಪಾಂಡವಃ||

15033029a ಪೌರಾಣಮಾತ್ಮನಃ ಸರ್ವಂ ವಿದ್ಯಾವಾನ್ ಸ ವಿಶಾಂ ಪತೇ|

15033029c ಯೋಗಧರ್ಮಂ ಮಹಾತೇಜಾ ವ್ಯಾಸೇನ ಕಥಿತಂ ಯಥಾ||

ವಿಶಾಂಪತೇ! ಆಗ ತನ್ನನ್ನು ತಾನೇ ಅಧಿಕ ಬಲವಂತನಾದಂತೆಯೂ ಬಹುಗುಣವಂತನಾದಂತೆಯೂ ಭಾವಿಸಿಕೊಂಡನು. ವಿದ್ಯಾವಾನ್ ಪಾಂಡವ ಧರ್ಮರಾಜನು ತನ್ನ ಪುರಾತನ ಆತ್ಮವನ್ನೂ, ಮಹಾತೇಜಸ್ಸನ್ನೂ, ಯೋಗಧರ್ಮವನ್ನೂ ಮತ್ತು ಮಹಾತೇಜಸ್ವಿ ವ್ಯಾಸನು ಹೇಳಿದುದನ್ನೂ ಸ್ಮರಿಸಿಕೊಂಡನು.

15033030a ಧರ್ಮರಾಜಸ್ತು ತತ್ರೈನಂ ಸಂಚಸ್ಕಾರಯಿಷುಸ್ತದಾ|

15033030c ದಗ್ಧುಕಾಮೋಽಭವದ್ವಿದ್ವಾನಥ ವೈ ವಾಗಭಾಷತ||

ಆಗ ಧರ್ಮರಾಜನಾದರೋ ಅಲ್ಲಿಯೇ ಅವನ ದಹನ ಸಂಸ್ಕಾರವನ್ನು ಮಾಡಲು ವಿಚಾರಿಸುತ್ತಿರುವಾಗ ಅಶರೀರ ವಾಣಿಯೊಂದು ನುಡಿಯಿತು:

15033031a ಭೋ ಭೋ ರಾಜನ್ನ ದಗ್ಧವ್ಯಮೇತದ್ವಿದುರಸಂಜ್ಞಕಮ್|

15033031c ಕಲೇವರಮಿಹೈತತ್ತೇ ಧರ್ಮ ಏಷ ಸನಾತನಃ||

15033032a ಲೋಕಾಃ ಸಂತಾನಕಾ ನಾಮ ಭವಿಷ್ಯಂತ್ಯಸ್ಯ ಪಾರ್ಥಿವ|

15033032c ಯತಿಧರ್ಮಮವಾಪ್ತೋಽಸೌ ನೈವ ಶೋಚ್ಯಃ ಪರಂತಪ||

“ಭೋ ಭೋ ರಾಜನ್! ವಿದುರನ ಶರೀರವನ್ನು ಸುಡಬೇಡ! ಪಾರ್ಥಿವ! ಯತಿಧರ್ಮವನ್ನು ಪಾಲಿಸುತ್ತಿದ್ದವನ ಕಲೇವರವನ್ನು ಸುಡದಿರುವುದು ಸನಾತನ ಧರ್ಮವಾಗಿದೆ. ಭವಿಷ್ಯದಲ್ಲಿ ಇವನು ಸಂತಾನಕ ಎಂಬ ಹೆಸರಿನ ಲೋಕಗಳನ್ನು ಪಡೆಯುತ್ತಾನೆ. ಪರಂತಪ! ಇವನಿಗಾಗಿ ಶೋಕಿಸಲೂ ಕೂಡದು!”

15033033a ಇತ್ಯುಕ್ತೋ ಧರ್ಮರಾಜಃ ಸ ವಿನಿವೃತ್ಯ ತತಃ ಪುನಃ|

15033033c ರಾಜ್ಞೋ ವೈಚಿತ್ರವೀರ್ಯಸ್ಯ ತತ್ಸರ್ವಂ ಪ್ರತ್ಯವೇದಯತ್||

ಇದನ್ನು ಕೇಳಿದ ಧರ್ಮರಾಜನು ಪುನಃ ಹಿಂದಿರುಗಿ ಬಂದು ರಾಜ ವೈಚಿತ್ರವೀರ್ಯನಿಗೆ ನಡೆದುದೆಲ್ಲವನ್ನೂ ನಿವೇದಿಸಿದನು.

15033034a ತತಃ ಸ ರಾಜಾ ದ್ಯುತಿಮಾನ್ಸ ಚ ಸರ್ವೋ ಜನಸ್ತದಾ||

15033034c ಭೀಮಸೇನಾದಯಶ್ಚೈವ ಪರಂ ವಿಸ್ಮಯಮಾಗತಾಃ|

ಆಗ ರಾಜ ದ್ಯುತಿಮಾನ್ ಧೃತರಾಷ್ಟ್ರ, ಸರ್ವ ಜನರೂ, ಭೀಮಸೇನಾದಿಗಳೂ ಪರಮ ವಿಸ್ಮಿತರಾದರು.

15033035a ತಚ್ಛೃತ್ವಾ ಪ್ರೀತಿಮಾನ್ರಾಜಾ ಭೂತ್ವಾ ಧರ್ಮಜಮಬ್ರವೀತ್|

15033035c ಆಪೋ ಮೂಲಂ ಫಲಂ ಚೈವ ಮಮೇದಂ ಪ್ರತಿಗೃಹ್ಯತಾಮ್||

15033036a ಯದನ್ನೋ ಹಿ ನರೋ ರಾಜಂಸ್ತದನ್ನೋಽಸ್ಯಾತಿಥಿಃ ಸ್ಮೃತಃ|

ಅದನ್ನು ಕೇಳಿ ಪ್ರೀತನಾದ ರಾಜನು ಧರ್ಮಜನಿಗೆ “ಜಲ-ಮೂಲ-ಫಲಗಳನ್ನು ನನ್ನಿಂದ ನೀನು ಸ್ವೀಕರಿಸಬೇಕು! ರಾಜನ್! ತಾನು ಏನನ್ನು ತಿನ್ನುತ್ತಾನೋ ಅದರಿಂದಲೇ ಮನುಷ್ಯನು ಅತಿಥಿಯನ್ನು ಸತ್ಕರಿಸಬೇಕು ಎಂದು ಹೇಳುತ್ತಾರೆ” ಎಂದು ಹೇಳಿದನು.

15033036c ಇತ್ಯುಕ್ತಃ ಸ ತಥೇತ್ಯೇವ ಪ್ರಾಹ ಧರ್ಮಾತ್ಮಜೋ ನೃಪಮ್|

15033036e ಫಲಂ ಮೂಲಂ ಚ ಬುಭುಜೇ ರಾಜ್ಞಾ ದತ್ತಂ ಸಹಾನುಜಃ||

ಇದಕ್ಕೆ ಹಾಗೆಯೇ ಆಗಲೆಂದು ನೃಪನಿಗೆ ಹೇಳಿ ಧರ್ಮಾತ್ಮಜನು ರಾಜನು ಕೊಟ್ಟ ಫಲಮೂಲಗಳನ್ನು ಅನುಜರೊಂದಿಗೆ ಭುಂಜಿಸಿದನು.

15033037a ತತಸ್ತೇ ವೃಕ್ಷಮೂಲೇಷು ಕೃತವಾಸಪರಿಗ್ರಹಾಃ|

15033037c ತಾಂ ರಾತ್ರಿಂ ನ್ಯವಸನ್ಸರ್ವೇ ಫಲಮೂಲಜಲಾಶನಾಃ||

ಫಲ-ಮೂಲ-ಜಲಗಳನ್ನು ಸೇವಿಸಿ ಅವರು ಎಲ್ಲರೂ ಮರದ ಬುಡದಲ್ಲಿಯೇ ಆ ರಾತ್ರಿಯನ್ನು ಕಳೆದರು.”

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವಿದುರನಿರ್ಯಾಣೇ ತ್ರಿಸ್ತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವಿದುರನಿರ್ಯಾಣ ಎನ್ನುವ ಮೂವತ್ಮೂರನೇ ಅಧ್ಯಾಯವು.

Related image

[1] ಜಾಮಯಃ ಭಗಿನೀ ಪತ್ನೀ ದುಹಿತ್ಯಸ್ನುಷಾದ್ಯಾಃ ಅರ್ಥಾತ್ ಅಕ್ಕ, ತಂಗಿ, ಮಗಳು, ಸೊಸೆ, ಪತ್ನಿ ಇವರುಗಳನ್ನು ಜಾಮಯಃ ಎನ್ನಬಹುದು. ಜಾಮಯೋ ಯತ್ರ ಶೋಚಂತಿ ವಿನಶ್ಯಂತಾಶು ತತ್ಕುಲಮ್| ನ ಶೋಚಂತಿ ತು ಯತ್ರೈತಾ ವರ್ಧತೇ ತದ್ಧಿ ಸರ್ವದಾ|| ಅರ್ಥಾತ್ – ಈ ಜಾಮಯರು ಯಾರ ಮನೆಯಲ್ಲಿ ದುಃಖಪಡುತ್ತಾರೋ ಆ ಮನೆಯವರ ಕುಲವೇ ನಾಶಹೊಂದುತ್ತದೆ. ಇವರುಗಳು ಎಲ್ಲಿ ದುಃಖಪಡುವುದಿಲ್ಲವೋ ಆ ಮನೆಯು ಅಭಿವೃದ್ಧಿಯನ್ನು ಹೊಂದುತ್ತದೆ (ಮನುಸ್ಮೃತಿ).

Comments are closed.