Udyoga Parva: Chapter 56

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೬

ಪಾಂಡವರ ಸೇನೆಯಲ್ಲಿ ಯಾರ್ಯಾರನ್ನು ನೀನು ನೋಡಿದೆ ಎಂದು ಧೃತರಾಷ್ಟ್ರನು ಕೇಳಲು ಸಂಜಯನು ಪಾಂಡವರ ಸೇನೆಯಲ್ಲಿರುವ ಪ್ರಮುಖರ ಕುರಿತು ಹೇಳಿ (೧-೧೧) ಅವರಿಲ್ಲಿರುವ ಯಾರು ಕುರುಸೇನೆಯ ಯಾರನ್ನು ಗುರಿಯನ್ನಾಗಿಟ್ಟುಕೊಂಡಿದ್ದಾರೆಂದು (೧೨-೨೫) ಹೇಳಿದುದು. ಅದನ್ನು ಕೇಳಿ ಧೃತರಾಷ್ಟ್ರನು ಯುದ್ಧಕ್ಕೆ ಹೆದರಿ ತನ್ನ ಮಾತುಗಳನ್ನು ಕೇಳದೇ ಮಕ್ಕಳು ಯುದ್ಧಮಾಡಬಯಸುತ್ತಾರೆಂದು ವಿಷಾದಿಸುವುದು (೨೬-೩೫). ದುರ್ಯೋಧನನು ಧೃತರಾಷ್ಟ್ರನಿಗೆ ಭರವಸೆಯನ್ನಿತ್ತರೂ (೩೬-೪೨), ಧೃತರಾಷ್ಟ್ರನು ಪುನಃ ಸಂಜಯನನ್ನು ಪಾಂಡವರ ಕುರಿತು ಪ್ರಶ್ನಿಸುವುದು (೪೩-೪೬). ಆಗ ಸಂಜಯನು ಧೃಷ್ಟದ್ಯುಮ್ನನ ಸಂದೇಶವನ್ನು ಸಭೆಯಲ್ಲಿ ಹೇಳುವುದು (೪೭-೬೦).

05056001 ಧೃತರಾಷ್ಟ್ರ ಉವಾಚ|

05056001a ಕಾಂಸ್ತತ್ರ ಸಂಜಯಾಪಶ್ಯಃ ಪ್ರತ್ಯರ್ಥೇನ ಸಮಾಗತಾನ್|

05056001c ಯೇ ಯೋತ್ಸ್ಯಂತೇ ಪಾಂಡವಾರ್ಥೇ ಪುತ್ರಸ್ಯ ಮಮ ವಾಹಿನೀಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಅಲ್ಲಿ. ಬೇರೆ ಬೇರೆ ಕಾರಣಗಳಿಂದ ಪಾಂಡವರಿಗಾಗಿ ನನ್ನ ಸೇನೆಯೊಡನೆ ಯುದ್ಧಮಾಡಲು ಸೇರಿರುವ ಯಾರ್ಯಾರನ್ನು ನೀನು ನೋಡಿದೆ?”

05056002 ಸಂಜಯ ಉವಾಚ|

05056002a ಮುಖ್ಯಮಂಧಕವೃಷ್ಣೀನಾಮಪಶ್ಯಂ ಕೃಷ್ಣಮಾಗತಂ|

05056002c ಚೇಕಿತಾನಂ ಚ ತತ್ರೈವ ಯುಯುಧಾನಂ ಚ ಸಾತ್ಯಕಿಂ||

ಸಂಜಯನು ಹೇಳಿದನು: “ಅಂಧಕ-ವೃಷ್ಣಿಯರ ಮುಖ್ಯ ಕೃಷ್ಣನು ಬಂದಿರುವುದನ್ನು ನೋಡಿದೆ. ಚೇಕಿತಾನ ಮತ್ತು ಯುಯುಧಾನ ಸಾತ್ಯಕಿಯೂ ಅಲ್ಲಿದ್ದರು.

05056003a ಪೃಥಗಕ್ಷೌಹಿಣೀಭ್ಯಾಂ ತೌ ಪಾಂಡವಾನಭಿಸಂಶ್ರಿತೌ|

05056003c ಮಹಾರಥೌ ಸಮಾಖ್ಯಾತಾವುಭೌ ಪುರುಷಮಾನಿನೌ||

ಪುರುಷಮಾನಿಗಳಾದ ಅವರಿಬ್ಬರು ಮಹಾರಥಿಗಳೂ ಒಂದೊಂದು ಅಕ್ಷೌಹಿಣೀಗಳೊಂದಿಗೆ ಪಾಂಡವನನ್ನು ಸೇರಿರುವರು.

05056004a ಅಕ್ಷೌಹಿಣ್ಯಾಥ ಪಾಂಚಾಲ್ಯೋ ದಶಭಿಸ್ತನಯೈರ್ವೃತಃ|

05056004c ಸತ್ಯಜಿತ್ಪ್ರಮುಖೈರ್ವೀರೈರ್ಧೃಷ್ಟದ್ಯುಮ್ನಪುರೋಗಮೈಃ||

05056005a ದ್ರುಪದೋ ವರ್ಧಯನ್ಮಾನಂ ಶಿಖಂಡಿಪರಿಪಾಲಿತಃ|

05056005c ಉಪಾಯಾತ್ಸರ್ವಸೈನ್ಯಾನಾಂ ಪ್ರತಿಚ್ಚಾದ್ಯ ತದಾ ವಪುಃ||

ಪಾಂಚಾಲ್ಯ ದ್ರುಪದನು ಅವರ ಮಾನವನ್ನು ಹೆಚ್ಚಿಸಲು ತನ್ನ ಹತ್ತು ಮಕ್ಕಳಿಂದ ಆವೃತವಾಗಿರುವ, ಸತ್ಯಜಿತನೇ ಮೊದಲಾದ ಪ್ರಮುಖ ವೀರರಿಂದ ಕೂಡಿದ, ವೀರ ಧೃಷ್ಟದ್ಯುಮ್ನನ ನಾಯಕತ್ವದಲ್ಲಿರುವ, ಶಿಖಂಡಿಯಿಂದ ರಕ್ಷಿತವಾಗಿರುವ, ಅಕ್ಷೌಹಿಣಿಯನ್ನು ತಂದಿದ್ದಾನೆ. ಅವನ ಸೇನೆಯೆಲ್ಲವಕ್ಕೂ ಉಡುಪಿನ ವ್ಯವಸ್ಥೆಯಿದೆ.

05056006a ವಿರಾಟಃ ಸಹ ಪುತ್ರಾಭ್ಯಾಂ ಶಂಖೇನೈವೋತ್ತರೇಣ ಚ|

05056006c ಸೂರ್ಯದತ್ತಾದಿಭಿರ್ವೀರೈರ್ಮದಿರಾಶ್ವಪುರೋಗಮೈಃ||

05056007a ಸಹಿತಃ ಪೃಥಿವೀಪಾಲೋ ಭ್ರಾತೃಭಿಸ್ತನಯೈಸ್ತಥಾ|

05056007c ಅಕ್ಷೌಹಿಣ್ಯೈವ ಸೈನ್ಯಸ್ಯ ವೃತಃ ಪಾರ್ಥಂ ಸಮಾಶ್ರಿತಃ||

ಪೃಥಿವೀಪಾಲ ವಿರಾಟನು ಶಂಖ ಮತ್ತು ಉತ್ತರ ಈ ಇಬ್ಬರು ಪುತ್ರರೊಂದಿಗೆ, ಸೂರ್ಯದತ್ತನೇ ಮೊದಲಾದ ವೀರರೊಂದಿಗೆ, ಮದಿರಾಶ್ವನ ನಾಯಕತ್ವದಲ್ಲಿ, ಸಹೋದರರು ಮಕ್ಕಳೊಂದಿಗೆ ಅಕ್ಷೌಹಿಣೀ ಸೇನೆಯೊಂದಿಗೆ ಪಾರ್ಥನನ್ನು ಸೇರಿದ್ದಾನೆ.

05056008a ಜಾರಾಸಂಧಿರ್ಮಾಗಧಶ್ಚ ಧೃಷ್ಟಕೇತುಶ್ಚ ಚೇದಿರಾಟ್|

05056008c ಪೃಥಕ್ ಪೃಥಗನುಪ್ರಾಪ್ತೌ ಪೃಥಗಕ್ಷೌಹಿಣೀವೃತೌ||

ಮಾಗಧಿ ಜರಾಸಂಧನ ಮಗ ಮತ್ತು ಚೇದಿರಾಜ ಧೃಷ್ಟಕೇತು ಇಬ್ಬರೂ ಒಂದೊಂದು ಅಕ್ಷೌಹಿಣೀ ಸೇನೆಯೊಂದಿಗೆ ಬಂದಿದ್ದಾರೆ.

05056009a ಕೇಕಯಾ ಭ್ರಾತರಃ ಪಂಚ ಸರ್ವೇ ಲೋಹಿತಕಧ್ವಜಾಃ|

05056009c ಅಕ್ಷೌಹಿಣೀಪರಿವೃತಾಃ ಪಾಂಡವಾನಭಿಸಂಶ್ರಿತಾಃ||

ಐವರು ಕೇಕಯ ಸಹೋದರರೆಲ್ಲರೂ ಅವರ ಕೆಂಪುಧ್ವಜಗಳನ್ನು ಹಾರಿಸಿ, ಒಂದು ಅಕ್ಷೌಹಿಣಿಯಿಂದ ಪರಿವೃತರಾಗಿ ಪಾಂಡವರನ್ನು ಸೇರಿದ್ದಾರೆ.

05056010a ಏತಾನೇತಾವತಸ್ತತ್ರ ಯಾನಪಶ್ಯಂ ಸಮಾಗತಾನ್|

05056010c ಯೇ ಪಾಂಡವಾರ್ಥೇ ಯೋತ್ಸ್ಯಂತಿ ಧಾರ್ತರಾಷ್ಟ್ರಸ್ಯ ವಾಹಿನೀಂ||

ಇವರೆಲ್ಲ ಅಲ್ಲಿ ಪಾಂಡವರಿಗಾಗಿ ಧಾರ್ತರಾಷ್ಟ್ರನ ಸೇನೆಯನ್ನು ಎದುರಿಸಲು ಬಂದು ಸೇರಿರುವುದನ್ನು ನಾನು ನೋಡಿದ್ದೇನೆ.

05056011a ಯೋ ವೇದ ಮಾನುಷಂ ವ್ಯೂಹಂ ದೈವಂ ಗಾಂಧರ್ವಮಾಸುರಂ|

05056011c ಸ ತಸ್ಯ ಸೇನಾಪ್ರಮುಖೇ ಧೃಷ್ಟದ್ಯುಮ್ನೋ ಮಹಾಮನಾಃ||

ಮಾನುಷ, ದೇವ, ಗಂಧರ್ವ, ಅಸುರ ವ್ಯೂಹಗಳನ್ನು ತಿಳಿದಿರುವ ಮಹಾಮನಸ್ವಿ ಧೃಷ್ಟದ್ಯುಮ್ನನು ಅವನ ಆ ಸೇನೆಯ ಪ್ರಮುಖನು.

05056012a ಭೀಷ್ಮಃ ಶಾಂತನವೋ ರಾಜನ್ಭಾಗಃ ಕ್ಲುಪ್ತಃ ಶಿಖಂಡಿನಃ|

05056012c ತಂ ವಿರಾಟೋಽನು ಸಮ್ಯಾತಾ ಸಹ ಮತ್ಸ್ಯೈಃ ಪ್ರಹಾರಿಭಿಃ||

ರಾಜನ್! ಭೀಷ್ಮ ಶಾಂತನವನನ್ನು ಶಿಖಂಡಿಯ ಪಾಲಿಗೆ ಬಿಟ್ಟುಕೊಟ್ಟಿದ್ದಾರೆ. ಸೈನಿಕ ಅಮಾತ್ಯರೊಂದಿಗೆ ಮತ್ಸ್ಯ ವಿರಾಟನು ಅವನಿಗೆ ಸಹಾಯ ಮಾಡುತ್ತಾನೆ.

05056013a ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ಭಾಗೋ ಮದ್ರಾಧಿಪೋ ಬಲೀ|

05056013c ತೌ ತು ತತ್ರಾಬ್ರುವನ್ಕೇ ಚಿದ್ವಿಷಮೌ ನೋ ಮತಾವಿತಿ||

ಬಲಶಾಲೀ ಮದ್ರಾಧಿಪನು ಹಿರಿಯ ಪಾಂಡುಪುತ್ರನ ಪಾಲಿಗೆ ಹೋಗಿದ್ದಾನೆ. ಅಲ್ಲಿದ್ದ ಕೆಲವರು ಅವರಿಬ್ಬರೂ ವಿಷಮರು ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

05056014a ದುರ್ಯೋಧನಃ ಸಹಸುತಃ ಸಾರ್ಧಂ ಭ್ರಾತೃಶತೇನ ಚ|

05056014c ಪ್ರಾಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಭೀಮಸೇನಸ್ಯ ಭಾಗತಃ||

ಮಗನೊಂದಿಗೆ ದುರ್ಯೋಧನ ಮತ್ತು ಜೊತೆಯಲ್ಲಿ ಅವನ ನೂರು ತಮ್ಮಂದಿರು, ಹಾಗೆಯೇ ಪೂರ್ವ ಮತ್ತು ದಕ್ಷಿಣದ ರಾಜರು ಭೀಮಸೇನನ ಪಾಲಿಗೆ ಹೋಗಿದ್ದಾರೆ.

05056015a ಅರ್ಜುನಸ್ಯ ತು ಭಾಗೇನ ಕರ್ಣೋ ವೈಕರ್ತನೋ ಮತಃ|

05056015c ಅಶ್ವತ್ಥಾಮಾ ವಿಕರ್ಣಶ್ಚ ಸೈಂಧವಶ್ಚ ಜಯದ್ರಥಃ||

ಅರ್ಜುನನ ಪಾಲಿಗೆ ಕರ್ಣ ವೈಕರ್ತನ, ಅಶ್ವತ್ಥಾಮ, ವಿಕರ್ಣ ಮತ್ತು ಸೈಂಧವ ಜಯದ್ರಥರು ಬರುತ್ತಾರೆ.

05056016a ಅಶಕ್ಯಾಶ್ಚೈವ ಯೇ ಕೇ ಚಿತ್ಪೃಥಿವ್ಯಾಂ ಶೂರಮಾನಿನಃ|

05056016c ಸರ್ವಾಂಸ್ತಾನರ್ಜುನಃ ಪಾರ್ಥಃ ಕಲ್ಪಯಾಮಾಸ ಭಾಗತಃ||

ಭೂಮಿಯಲ್ಲಿಯೇ ಶೂರರೆಂದು ತಿಳಿದಿರುವ ಇತರ ಗೆಲ್ಲಲಸಾಧ್ಯರೆಲ್ಲರೂ ಪಾರ್ಥ ಅರ್ಜುನನ ಪಾಲಿಗೆಂದೂ ಯೋಚಿಸಲಾಗಿದೆ.

05056017a ಮಹೇಷ್ವಾಸಾ ರಾಜಪುತ್ರಾ ಭ್ರಾತರಃ ಪಂಚ ಕೇಕಯಾಃ|

05056017c ಕೇಕಯಾನೇವ ಭಾಗೇನ ಕೃತ್ವಾ ಯೋತ್ಸ್ಯಂತಿ ಸಂಯುಗೇ||

ಐವರು ಮಹೇಷ್ವಾಸ ರಾಜಪುತ್ರ ಕೇಕಯ ಸಹೋದರರು ಯುದ್ಧದಲ್ಲಿ ಕೇಕಯರನ್ನು ತಮ್ಮ ಪಾಲಿಗಿರಿಸಿಕೊಂಡು ಯುದ್ಧಮಾಡುವರು.

05056018a ತೇಷಾಮೇವ ಕೃತೋ ಭಾಗೋ ಮಾಲವಾಃ ಶಾಲ್ವಕೇಕಯಾಃ|

05056018c ತ್ರಿಗರ್ತಾನಾಂ ಚ ದ್ವೌ ಮುಖ್ಯೌ ಯೌ ತೌ ಸಂಶಪ್ತಕಾವಿತಿ||

ಅವರು ತಮ್ಮ ಪಾಲಿಗೆ ಮಾಲವರು, ಶಾಲ್ವರು, ಕೇಕಯರು, ಮತ್ತು ತ್ರಿಗರ್ಥರ ಇಬ್ಬರು ಪ್ರಮುಖರಾದ ಸಂಶಪ್ತಕರನ್ನು ಮಾಡಿಕೊಂಡಿದ್ದಾರೆ.

05056019a ದುರ್ಯೋಧನಸುತಾಃ ಸರ್ವೇ ತಥಾ ದುಃಶಾಸನಸ್ಯ ಚ|

05056019c ಸೌಭದ್ರೇಣ ಕೃತೋ ಭಾಗೋ ರಾಜಾ ಚೈವ ಬೃಹದ್ಬಲಃ||

ದುರ್ಯೋಧನ ಮತ್ತು ದುಃಶಾಸನನ ಮಕ್ಕಳು ಹಾಗೂ ರಾಜಾ ಬೃಹದ್ಬಲನನ್ನು ಸೌಭದ್ರಿಯು ತನ್ನ ಪಾಲಿಗೆ ಮಾಡಿಕೊಂಡಿದ್ದಾನೆ.

05056020a ದ್ರೌಪದೇಯಾ ಮಹೇಷ್ವಾಸಾಃ ಸುವರ್ಣವಿಕೃತಧ್ವಜಾಃ|

05056020c ಧೃಷ್ಟದ್ಯುಮ್ನಮುಖಾ ದ್ರೋಣಮಭಿಯಾಸ್ಯಂತಿ ಭಾರತ||

ಭಾರತ! ಸುವರ್ಣದಿಂದ ಮಾಡಲ್ಪಟ್ಟ ಧ್ವಜಗಳನ್ನು ಹೊಂದಿದ ಮಹೇಷ್ವಾಸ ದ್ರೌಪದೇಯರು ಧೃಷ್ಟದ್ಯುಮ್ನನ ನೇತೃತ್ವದಲ್ಲಿ ದ್ರೋಣನನ್ನು ಎದುರಿಸುತ್ತಾರೆ.

05056021a ಚೇಕಿತಾನಃ ಸೋಮದತ್ತಂ ದ್ವೈರಥೇ ಯೋದ್ಧುಮಿಚ್ಚತಿ|

05056021c ಭೋಜಂ ತು ಕೃತವರ್ಮಾಣಂ ಯುಯುಧಾನೋ ಯುಯುತ್ಸತಿ||

ಚೇಕಿತಾನನು ಸೋಮದತ್ತನೊಡನೆ ದ್ವಂದ್ವರಥ ಯುದ್ಧಮಾಡಲು ಬಯಸುತ್ತಾನೆ. ಯುಯುಧಾನನು ಭೋಜ ಕೃತವರ್ಮನೊಡನೆ ಯುದ್ಧ ಮಾಡುತ್ತಾನೆ.

05056022a ಸಹದೇವಸ್ತು ಮಾದ್ರೇಯಃ ಶೂರಃ ಸಂಕ್ರಂದನೋ ಯುಧಿ|

05056022c ಸ್ವಮಂಶಂ ಕಲ್ಪಯಾಮಾಸ ಶ್ಯಾಲಂ ತೇ ಸುಬಲಾತ್ಮಜಂ||

ಯುದ್ಧದಲ್ಲಿ ಆಕ್ರಂದನಗೈಯುವ ಶೂರ ಮಾದ್ರೇಯ ಸಹದೇವನು ನಿನ್ನ ಬಾವ ಸುಬಲಾತ್ಮಜನು ತನಗೆಂದು ಯೋಚಿಸಿದ್ದಾನೆ.

05056023a ಉಲೂಕಂ ಚಾಪಿ ಕೈತವ್ಯಂ ಯೇ ಚ ಸಾರಸ್ವತಾ ಗಣಾಃ|

05056023c ನಕುಲಃ ಕಲ್ಪಯಾಮಾಸ ಭಾಗಂ ಮಾದ್ರವತೀಸುತಃ||

ಉಲೂಕ ಕೈತವ್ಯ ಮತ್ತು ಸಾರಸ್ವತ ಗಣಗಳು ಮಾದ್ರವತೀಸುತ ನಕುಲನ ಪಾಲಿಗೆಂದು ಯೋಚಿಸಿದ್ದಾರೆ.

05056024a ಯೇ ಚಾನ್ಯೇ ಪಾರ್ಥಿವಾ ರಾಜನ್ಪ್ರತ್ಯುದ್ಯಾಸ್ಯಂತಿ ಸಂಯುಗೇ|

05056024c ಸಮಾಹ್ವಾನೇನ ತಾಂಶ್ಚಾಪಿ ಪಾಂಡುಪುತ್ರಾ ಅಕಲ್ಪಯನ್||

ರಾಜನ್! ಇತರ ಪಾರ್ಥಿವರನ್ನು ಪಾಂಡುಪುತ್ರರು ಯುದ್ಧದಲ್ಲಿ ಯಾರು ಯಾರನ್ನು ಎದುರಿಸುವರೋ ಅದರಂತೆ ಪಾಲುಹಂಚುತ್ತಾರೆ.

05056025a ಏವಮೇಷಾಮನೀಕಾನಿ ಪ್ರವಿಭಕ್ತಾನಿ ಭಾಗಶಃ|

05056025c ಯತ್ತೇ ಕಾರ್ಯಂ ಸಪುತ್ರಸ್ಯ ಕ್ರಿಯತಾಂ ತದಕಾಲಿಕಂ||

ಈ ರೀತಿಯಲ್ಲಿ ಸೇನೆಗಳು ಭಾಗ ಭಾಗಗಳಾಗಿ ಹಂಚಲ್ಪಟ್ಟಿವೆ. ಈಗ ನೀನು ಮತ್ತು ನಿನ್ನ ಮಗನು ಕಾರ್ಯವೆಸಗುವುದರಲ್ಲಿ ವಿಳಂಬ ಮಾಡಬಾರದು.”

05056026 ಧೃತರಾಷ್ಟ್ರ ಉವಾಚ|

05056026a ನ ಸಂತಿ ಸರ್ವೇ ಪುತ್ರಾ ಮೇ ಮೂಢಾ ದುರ್ದ್ಯೂತದೇವಿನಃ|

05056026c ಯೇಷಾಂ ಯುದ್ಧಂ ಬಲವತಾ ಭೀಮೇನ ರಣಮೂರ್ಧನಿ||

ಧೃತರಾಷ್ಟ್ರನು ಹೇಳಿದನು: “ಕೆಟ್ಟ ದ್ಯೂತವನ್ನಾಡಿದ ಜೂಜುಗಾರ ಮೂಢ ನನ್ನ ಮಕ್ಕಳು ಜೋರಾಗಿ ನಡೆಯುವ ರಣದಲ್ಲಿ ಬಲವಂತ ಭೀಮನೊಡನೆ ಯುದ್ಧಮಾಡಿ ಇಲ್ಲವಾಗುತ್ತಾರೆ.

05056027a ರಾಜಾನಃ ಪಾರ್ಥಿವಾಃ ಸರ್ವೇ ಪ್ರೋಕ್ಷಿತಾಃ ಕಾಲಧರ್ಮಣಾ|

05056027c ಗಾಂಡೀವಾಗ್ನಿಂ ಪ್ರವೇಕ್ಷ್ಯಂತಿ ಪತಂಗಾ ಇವ ಪಾವಕಂ||

ಕಾಲಧರ್ಮದಿಂದ ಪ್ರೋಕ್ಷಿತರಾದ ಪಾರ್ಥಿವ ರಾಜರೆಲ್ಲರೂ ಬೆಂಕಿಗೆ ಬೀಳುವ ಪತಂಗಗಳಂತೆ ಗಾಂಡೀವಾಗ್ನಿಯನ್ನು ಪ್ರವೇಶಿಸುತ್ತಾರೆ.

05056028a ವಿದ್ರುತಾಂ ವಾಹಿನೀಂ ಮನ್ಯೇ ಕೃತವೈರೈರ್ಮಹಾತ್ಮಭಿಃ|

05056028c ತಾಂ ರಣೇ ಕೇಽನುಯಾಸ್ಯಂತಿ ಪ್ರಭಗ್ನಾಂ ಪಾಂಡವೈರ್ಯುಧಿ||

ಆ ಮಹಾತ್ಮರ ವೈರಸಾಧನೆಯಿಂದ ನನ್ನ ಸೇನೆಯು ನಾಶವಾದುದನ್ನು ಈಗಲೇ ಕಾಣುತ್ತಿದ್ದೇನೆ. ರಣದಲ್ಲಿ ಪಾಂಡವರೊಂದಿಗೆ ಯುದ್ಧಮಾಡಿ ಪುಡಿಯಾಗಿರುವ ಸೇನೆಯನ್ನು ಯಾರುತಾನೇ ಅನುಸರಿಸುತ್ತಾರೆ?

05056029a ಸರ್ವೇ ಹ್ಯತಿರಥಾಃ ಶೂರಾಃ ಕೀರ್ತಿಮಂತಃ ಪ್ರತಾಪಿನಃ|

05056029c ಸೂರ್ಯಪಾವಕಯೋಸ್ತುಲ್ಯಾಸ್ತೇಜಸಾ ಸಮಿತಿಂಜಯಾಃ||

05056030a ಯೇಷಾಂ ಯುಧಿಷ್ಠಿರೋ ನೇತಾ ಗೋಪ್ತಾ ಚ ಮಧುಸೂದನಃ|

05056030c ಯೋಧೌ ಚ ಪಾಂಡವೌ ವೀರೌ ಸವ್ಯಸಾಚಿವೃಕೋದರೌ||

05056031a ನಕುಲಃ ಸಹದೇವಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

05056031c ಸಾತ್ಯಕಿರ್ದ್ರುಪದಶ್ಚೈವ ಧೃಷ್ಟದ್ಯುಮ್ನಸ್ಯ ಚಾತ್ಮಜಃ||

05056032a ಉತ್ತಮೌಜಾಶ್ಚ ಪಾಂಚಾಲ್ಯೋ ಯುಧಾಮನ್ಯುಶ್ಚ ದುರ್ಜಯಃ|

05056032c ಶಿಖಂಡೀ ಕ್ಷತ್ರದೇವಶ್ಚ ತಥಾ ವೈರಾಟಿರುತ್ತರಃ||

05056033a ಕಾಶಯಶ್ಚೇದಯಶ್ಚೈವ ಮತ್ಸ್ಯಾಃ ಸರ್ವೇ ಚ ಸೃಂಜಯಾಃ|

05056033c ವಿರಾಟಪುತ್ರೋ ಬಭ್ರೂಶ್ಚ ಪಾಂಚಾಲಾಶ್ಚ ಪ್ರಭದ್ರಕಾಃ||

ಯುಧಿಷ್ಠಿರನ ನೇತೃತ್ವದಲ್ಲಿರುವ ಮತ್ತು ಮಧುಸೂದನನ ರಕ್ಷಣೆಯಲ್ಲಿರುವ ಇವರೆಲ್ಲರೂ - ಇಬ್ಬರು ಪಾಂಡವ ವೀರ ಯೋಧರಾದ ಸವ್ಯಸಾಚಿ-ವೃಕೋದರರು. ನಕುಲ-ಸಹದೇವರು, ಪಾರ್ಷತ ಧೃಷ್ಟದ್ಯುಮ್ನ, ಸಾತ್ಯಕಿ, ದ್ರುಪದ, ಧೃಷ್ಟದ್ಯುಮ್ನನ ಮಗ, ಉತ್ತಮೌಜ ಪಾಂಚಾಲ್ಯ, ಯುಧಾಮನ್ಯು ದುರ್ಜಯ, ಶಿಖಂಡಿ, ಕ್ಷತ್ರದೇವ, ವೈರಾಟೀ ಉತ್ತರ, ಕಾಶಿರಾಜ, ಚೇದಿರಾಜ, ಮತ್ಸ್ಯರು, ಸರ್ವ ಸೃಂಜಯರು, ವಿರಾಟಪುತ್ರ ಬಭ್ರು, ಪಾಂಚಾಲ ಪ್ರಭದ್ರಕ - ಎಲ್ಲರೂ ಅತಿರಥರು, ಶೂರರು, ಕೀರ್ತಿಮಂತರು, ಪ್ರತಾಪಿಗಳು, ತೇಜಸ್ಸಿನಲ್ಲಿ ಸೂರ್ಯ-ಪಾವಕರ ಸಮಾನರು ಮತ್ತು ಯುದ್ಧಗಳಲ್ಲಿ ಜಯಗಳಿಸಿದವರು.

05056034a ಯೇಷಾಮಿಂದ್ರೋಽಪ್ಯಕಾಮಾನಾಂ ನ ಹರೇತ್ಪೃಥಿವೀಮಿಮಾಂ|

05056034c ವೀರಾಣಾಂ ರಣಧೀರಾಣಾಂ ಯೇ ಭಿಂದ್ಯುಃ ಪರ್ವತಾನಪಿ||

ಇವರು ಬಯಸದಿದ್ದರೆ ಇಂದ್ರನೂ ಕೂಡ ಇವರಿಂದ ಈ ಭೂಮಿಯನ್ನು ಕಸಿದುಕೊಳ್ಳಲಾರ. ಈ ವೀರರು, ರಣಧೀರರು ಪರ್ವತವನ್ನೂ ಪುಡಿಮಾಡಿಯಾರು!

05056035a ತಾನ್ಸರ್ವಾನ್ಗುಣಸಂಪನ್ನಾನಮನುಷ್ಯಪ್ರತಾಪಿನಃ|

05056035c ಕ್ರೋಶತೋ ಮಮ ದುಷ್ಪುತ್ರೋ ಯೋದ್ಧುಮಿಚ್ಚತಿ ಸಂಜಯ||

ಆ ಎಲ್ಲ ಗುಣಸಂಪನ್ನರನ್ನೂ, ಅಮನುಷ್ಯರನ್ನೂ, ಪ್ರತಾಪಿಗಳನ್ನೂ, ನಾನು ಕೂಗಿ ಅಳುತ್ತಿದ್ದರೂ, ನನ್ನ ದುಷ್ಪುತ್ರರು ಯುದ್ಧಮಾಡಬಯಸುತ್ತಾರೆ ಸಂಜಯ!”

05056036 ದುರ್ಯೋಧನ ಉವಾಚ|

05056036a ಉಭೌ ಸ್ವ ಏಕಜಾತೀಯೌ ತಥೋಭೌ ಭೂಮಿಗೋಚರೌ|

05056036c ಅಥ ಕಸ್ಮಾತ್ಪಾಂಡವಾನಾಮೇಕತೋ ಮನ್ಯಸೇ ಜಯಂ||

ದುರ್ಯೋಧನನು ಹೇಳಿದನು: “ನಾವಿಬ್ಬರೂ ಒಂದೇ ಜಾತಿಯವರು. ಹಾಗೆಯೇ ಇಬ್ಬರೂ ಭೂಮಿಯ ಮೇಲೇ ನಡೆಯುವವರು. ಹಾಗಿರುವಾಗ ಪಾಂಡವರಿಗೆ ಮಾತ್ರ ಜಯವೆಂದು ನೀನು ಹೇಗೆ ಹೇಳುತ್ತೀಯೆ?

05056037a ಪಿತಾಮಹಂ ಚ ದ್ರೋಣಂ ಚ ಕೃಪಂ ಕರ್ಣಂ ಚ ದುರ್ಜಯಂ|

05056037c ಜಯದ್ರಥಂ ಸೋಮದತ್ತಮಶ್ವತ್ಥಾಮಾನಮೇವ ಚ||

05056038a ಸುಚೇತಸೋ ಮಹೇಷ್ವಾಸಾನಿಂದ್ರೋಽಪಿ ಸಹಿತೋಽಮರೈಃ|

05056038c ಅಶಕ್ತಃ ಸಮರೇ ಜೇತುಂ ಕಿಂ ಪುನಸ್ತಾತ ಪಾಂಡವಾಃ||

ಪಿತಾಮಹ, ದ್ರೋಣ, ಕೃಪ, ದುರ್ಜಯ ಕರ್ಣ, ಜಯದ್ರಥ, ಸೋಮದತ್ತ, ಅಶ್ವತ್ಥಾಮ ಇವರೂ ಕೂಡ ಸುಚೇತಸರು, ಮಹೇಷ್ವಾಸರು, ಮತ್ತು ಸಮರದಲ್ಲಿ ಅವರನ್ನು ದೇವತೆಗಳ ಸಹಿತ ಇಂದ್ರನೂ ಗೆಲ್ಲಲು ಅಶಕ್ತನಾಗಿರುವಾಗ ಇನ್ನು ಪಾಂಡವರು ಯಾವ ಲೆಖ್ಕಕ್ಕೆ?

05056039a ಸರ್ವಾ ಚ ಪೃಥಿವೀ ಸೃಷ್ಟಾ ಮದರ್ಥೇ ತಾತ ಪಾಂಡವಾನ್|

05056039c ಆರ್ಯಾನ್ಧೃತಿಮತಃ ಶೂರಾನಗ್ನಿಕಲ್ಪಾನ್ಪ್ರಬಾಧಿತುಂ||

ಅಪ್ಪಾ! ಈ ಭೂಮಿಯೆಲ್ಲವೂ ನನಗಾಗಿಯೇ ಸೃಷ್ಟಿಯಾಗಿದೆ - ಆರ್ಯರಾದ, ಧೃತಿಮತರಾದ, ಅಗ್ನಿಯಂತೆ ಶೂರರಾದ ಪಾಂಡವರನ್ನು ಕಾಡಿಸಲು.

05056040a ನ ಮಾಮಕಾನ್ಪಾಂಡವಾಸ್ತೇ ಸಮರ್ಥಾಃ ಪ್ರತಿವೀಕ್ಷಿತುಂ|

05056040c ಪರಾಕ್ರಾಂತೋ ಹ್ಯಹಂ ಪಾಂಡೂನ್ಸಪುತ್ರಾನ್ಯೋದ್ಧುಮಾಹವೇ||

ನನ್ನವರನ್ನು ನಿನ್ನ ಪಾಂಡವರು ತಿರುಗಿ ನೋಡಲೂ ಅಸಮರ್ಥರು. ಪಾರಾಕ್ರಾಂತರಾದ ಇವರು ಪಾಂಡವರನ್ನು ಅವರ ಮಕ್ಕಳೊಂದಿಗೆ ಯುದ್ಧದಲ್ಲಿ ಹೋರಾಡುತ್ತಾರೆ.

05056041a ಮತ್ಪ್ರಿಯಂ ಪಾರ್ಥಿವಾಃ ಸರ್ವೇ ಯೇ ಚಿಕೀರ್ಷಂತಿ ಭಾರತ|

05056041c ತೇ ತಾನಾವಾರಯಿಷ್ಯಂತಿ ಐಣೇಯಾನಿವ ತಂತುನಾ||

ಭಾರತ! ನನ್ನ ಈ ಪ್ರಿಯ ಪಾರ್ಥಿವರೆಲ್ಲರೂ ಬಲೆಯನ್ನು ಬೀಸಿ ಜಿಂಕೆಗಳನ್ನು ತಡೆಯುವಂತೆ ಅವರನ್ನು ತಡೆಯಲು ಬಯಸುತ್ತಾರೆ.

05056042a ಮಹತಾ ರಥವಂಶೇನ ಶರಜಾಲೈಶ್ಚ ಮಾಮಕೈಃ|

05056042c ಅಭಿದ್ರುತಾ ಭವಿಷ್ಯಂತಿ ಪಾಂಚಾಲಾಃ ಪಾಂಡವೈಃ ಸಹ||

ನನ್ನವರ ಮಹಾ ರಥಸಮೂಹಗಳಿಂದ ಮತ್ತು ಶರಜಾಲಗಳಿಂದ ಪಾಂಚಾಲರೊಂದಿಗೆ ಪಾಂಡವರು ಇಲ್ಲವಾಗುತ್ತಾರೆ.”

05056043 ಧೃತರಾಷ್ಟ್ರ ಉವಾಚ|

05056043a ಉನ್ಮತ್ತ ಇವ ಮೇ ಪುತ್ರೋ ವಿಲಪತ್ಯೇಷ ಸಂಜಯ|

05056043c ನ ಹಿ ಶಕ್ತೋ ಯುಧಾ ಜೇತುಂ ಧರ್ಮರಾಜಂ ಯುಧಿಷ್ಠಿರಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಹುಚ್ಚುಹಿಡಿದವನಂತೆ ನನ್ನ ಮಗನು ವಿಲಪಿಸುತ್ತಿದ್ದಾನೆ. ಧರ್ಮರಾಜ ಯುಧಿಷ್ಠಿರನನ್ನು ಯುದ್ಧದಲ್ಲಿ ಗೆಲ್ಲುವುದಕ್ಕೆ ಇವನು ಶಕ್ತನಿಲ್ಲ.

05056044a ಜಾನಾತಿ ಹಿ ಸದಾ ಭೀಷ್ಮಃ ಪಾಂಡವಾನಾಂ ಯಶಸ್ವಿನಾಂ|

05056044c ಬಲವತ್ತಾಂ ಸಪುತ್ರಾಣಾಂ ಧರ್ಮಜ್ಞಾನಾಂ ಮಹಾತ್ಮನಾಂ||

ಸುಪುತ್ರರಾದ, ಬಲವತ್ತರಾಗಿರುವ, ಧರ್ಮಜ್ಞರಾದ, ಮಹಾತ್ಮ, ಯಶಸ್ವಿ ಪಾಂಡವರ ಕುರಿತು ಭೀಷ್ಮನಿಗೆ ಸದಾ ತಿಳಿದಿದೆ.

05056045a ಯತೋ ನಾರೋಚಯಮಹಂ ವಿಗ್ರಹಂ ತೈರ್ಮಹಾತ್ಮಭಿಃ|

05056045c ಕಿಂ ತು ಸಂಜಯ ಮೇ ಬ್ರೂಹಿ ಪುನಸ್ತೇಷಾಂ ವಿಚೇಷ್ಟಿತಂ||

ಅವನು ಆ ಮಹಾತ್ಮರೊಡನೆ ಯುದ್ಧಮಾಡಲು ಇಷ್ಟಪಡುವುದಿಲ್ಲ. ಸಂಜಯ! ನನಗೆ ಇನ್ನೂ ಪುನಃ ಅವರು ಏನುಮಾಡುತ್ತಿದ್ದಾರೆ ಎನ್ನುವುದನ್ನು ಹೇಳು.

05056046a ಕಸ್ತಾಂಸ್ತರಸ್ವಿನೋ ಭೂಯಃ ಸಂದೀಪಯತಿ ಪಾಂಡವಾನ್|

05056046c ಅರ್ಚಿಷ್ಮತೋ ಮಹೇಷ್ವಾಸಾನ್ ಹವಿಷಾ ಪಾವಕಾನಿವ||

ಯಾವ ತರಸ್ವಿಯು ಮಹೇಷ್ವಾಸ ಪಾಂಡವರನ್ನು ಪುನಃ ಪುನಃ, ಯಾಜ್ಞಿಕರು ತುಪ್ಪದ ಆಹುತಿಯನ್ನು ಅಗ್ನಿಯಲ್ಲಿ ಹಾಗಿ ಉರಿಸುವಂತೆ ಉರಿಸುತ್ತಿದ್ದಾನೆ?”

05056047 ಸಂಜಯ ಉವಾಚ|

05056047a ಧೃಷ್ಟದ್ಯುಮ್ನಃ ಸದೈವೈತಾನ್ಸಂದೀಪಯತಿ ಭಾರತ|

05056047c ಯುಧ್ಯಧ್ವಮಿತಿ ಮಾ ಭೈಷ್ಟ ಯುದ್ಧಾದ್ಭರತಸತ್ತಮಾಃ||

ಸಂಜಯನು ಹೇಳಿದನು: “ಭಾರತ! “ಯುದ್ಧಮಾಡಿ! ಯುದ್ಧಕ್ಕೆ ಹೆದರಬೇಡಿ!” ಎಂದು ಧೃಷ್ಟದ್ಯುಮ್ನನು ಸದಾ ಆ ಭರತಸತ್ತಮರನ್ನು ಉರಿಸುತ್ತಿದ್ದಾನೆ.

05056048a ಯೇ ಕೇ ಚಿತ್ಪಾರ್ಥಿವಾಸ್ತತ್ರ ಧಾರ್ತರಾಷ್ಟ್ರೇಣ ಸಂವೃತಾಃ|

05056048c ಯುದ್ಧೇ ಸಮಾಗಮಿಷ್ಯಂತಿ ತುಮುಲೇ ಕವಚಹ್ರದೇ||

“ಧಾರ್ತರಾಷ್ಟ್ರನನ್ನು ಸುತ್ತುವರೆದಿರುವ ಆ ಕೆಲವು ಪಾರ್ಥಿವರು ಯುದ್ಧದ ಹೋರಾಟದಲ್ಲಿ ಆಯುಧಗಳ ಹೊಡೆತವನ್ನು ಎದುರಿಸುವವರಿದ್ದಾರೆ.

05056049a ತಾನ್ಸರ್ವಾನಾಹವೇ ಕ್ರುದ್ಧಾನ್ಸಾನುಬಂಧಾನ್ಸಮಾಗತಾನ್|

05056049c ಅಹಮೇಕಃ ಸಮಾದಾಸ್ಯೇ ತಿಮಿರ್ಮತ್ಸ್ಯಾನಿವೌದಕಾನ್||

ತಿಮಿಂಗಿಲವು ನೀರಿನಲ್ಲಿರುವ ಮೀನುಗಳನ್ನು ಹೇಗೋ ಹಾಗೆ ನಾನೊಬ್ಬನೇ ಕೃದ್ಧರಾಗಿ ಬಂಧುಗಳೊಂದಿಗೆ ಸೇರಿರುವ ಎಲ್ಲರನ್ನೂ ಯುದ್ಧದಲ್ಲಿ ನಾಶಗೊಳಿಸುತ್ತೇನೆ.

05056050a ಭೀಷ್ಮಂ ದ್ರೋಣಂ ಕೃಪಂ ಕರ್ಣಂ ದ್ರೌಣಿಂ ಶಲ್ಯಂ ಸುಯೋಧನಂ|

05056050c ಏತಾಂಶ್ಚಾಪಿ ನಿರೋತ್ಸ್ಯಾಮಿ ವೇಲೇವ ಮಕರಾಲಯಂ||

ಭೀಷ್ಮ, ದ್ರೋಣ, ಕೃಪ, ಕರ್ಣ, ದ್ರೌಣಿ, ಶಲ್ಯ, ಸುಯೋಧನ ಇವರನ್ನೂ ಕೂಡ ಸಮುದ್ರದ ದಡವು ಅಲೆಗಳನ್ನು ತಡೆಯುವಂತೆ ತಡೆಯುತ್ತೇನೆ.”

05056051a ತಥಾ ಬ್ರುವಾಣಂ ಧರ್ಮಾತ್ಮಾ ಪ್ರಾಹ ರಾಜಾ ಯುಧಿಷ್ಠಿರಃ|

05056051c ತವ ಧೈರ್ಯಂ ಚ ವೀರ್ಯಂ ಚ ಪಾಂಚಾಲಾಃ ಪಾಂಡವೈಃ ಸಹ|

05056051e ಸರ್ವೇ ಸಮಧಿರೂಢಾಃ ಸ್ಮ ಸಂಗ್ರಾಮಾನ್ನಃ ಸಮುದ್ಧರ||

ಹಾಗೆ ಹೇಳುತ್ತಿದ್ದ ಅವನಿಗೆ ಧರ್ಮಾತ್ಮ ರಾಜಾ ಯುಧಿಷ್ಠಿರನು ಹೇಳಿದನು: “ಪಾಂಚಾಲರೊಂದಿಗೆ ಪಾಂಡವರು ಎಲ್ಲರೂ ನಿನ್ನ ಧೈರ್ಯ, ವೀರ್ಯಗಳನ್ನು ಅವಲಂಬಿಸಿದ್ದಾರೆ. ಈ ಸಂಗ್ರಾಮದಿಂದ ನಮ್ಮನ್ನು ರಕ್ಷಿಸಿ ಉದ್ಧರಿಸು.

05056052a ಜಾನಾಮಿ ತ್ವಾಂ ಮಹಾಬಾಹೋ ಕ್ಷತ್ರಧರ್ಮೇ ವ್ಯವಸ್ಥಿತಂ|

05056052c ಸಮರ್ಥಮೇಕಂ ಪರ್ಯಾಪ್ತಂ ಕೌರವಾಣಾಂ ಯುಯುತ್ಸತಾಂ||

ಮಹಾಬಾಹೋ! ನೀನು ಕ್ಷತ್ರಧರ್ಮದಲ್ಲಿ ವ್ಯವಸ್ಥಿತನಾಗಿದ್ದೀಯೆ ಎಂದು ತಿಳಿದಿದ್ದೇನೆ. ಕೌರವರೊಂದಿಗೆ ಯುದ್ಧಮಾಡಲು ನೀನೊಬ್ಬನೇ ಸಮರ್ಥನಾಗಿದ್ದೀಯೆ.

05056052e ಭವತಾ ಯದ್ವಿಧಾತವ್ಯಂ ತನ್ನಃ ಶ್ರೇಯಃ ಪರಂತಪ||

05056053a ಸಂಗ್ರಾಮಾದಪಯಾತಾನಾಂ ಭಗ್ನಾನಾಂ ಶರಣೈಷಿಣಾಂ|

ಪರಂತಪ! ಸಂಗ್ರಾಮಕ್ಕೆ ಸಿದ್ಧರಾಗಿ ಅವರು ನಮ್ಮ ಎದಿರು ಬಂದಾಗ ನೀನು ರಚಿಸುವ ವ್ಯೂಹವು ನಮಗೆ ಶ್ರೇಯಸ್ಕರವಾಗಿರುತ್ತದೆ.

05056053c ಪೌರುಷಂ ದರ್ಶಯಂ ಶೂರೋ ಯಸ್ತಿಷ್ಠೇದಗ್ರತಃ ಪುಮಾನ್||

05056053e ಕ್ರೀಣೀಯಾತ್ತಂ ಸಹಸ್ರೇಣ ನೀತಿಮನ್ನಾಮ ತತ್ಪದಂ||

ಪೌರುಷವನ್ನು ತೋರಿಸಿದ ಶೂರನು ಸೈನಿಕರನ್ನು ಮುಂದೆ ನಿಲ್ಲಿಸಿಕೊಂಡು ಹೋರಾಡುವವನನ್ನು ಸಹಸ್ರವನ್ನು ಕೊಟ್ಟಾದರೂ ಪಡೆಯಬೇಕೆಂದು ನೀತಿಯನ್ನು ತಿಳಿದವರು ಹೇಳುತ್ತಾರೆ.

05056054a ಸ ತ್ವಂ ಶೂರಶ್ಚ ವೀರಶ್ಚ ವಿಕ್ರಾಂತಶ್ಚ ನರರ್ಷಭ|

05056054c ಭಯಾರ್ತಾನಾಂ ಪರಿತ್ರಾತಾ ಸಮ್ಯುಗೇಷು ನ ಸಂಶಯಃ||

ನರರ್ಷಭ! ನೀನು ಶೂರ, ವೀರ ಮತ್ತು ವಿಕ್ರಾಂತ. ಯುದ್ಧದಲ್ಲಿ ಭಯಾರ್ತರ ಪರಿತ್ರಾತಾ ಎನ್ನುವುದರಲ್ಲಿ ಸಂಶಯವಿಲ್ಲ.”

05056055a ಏವಂ ಬ್ರುವತಿ ಕೌಂತೇಯೇ ಧರ್ಮಾತ್ಮನಿ ಯುಧಿಷ್ಠಿರೇ|

05056055c ಧೃಷ್ಟದ್ಯುಮ್ನ ಉವಾಚೇದಂ ಮಾಂ ವಚೋ ಗತಸಾಧ್ವಸಃ||

ಧರ್ಮಾತ್ಮ ಕೌಂತೇಯ ಯುಧಿಷ್ಠಿರನು ಈ ರೀತಿ ಹೇಳಲು ಧೃಷ್ಟದ್ಯುಮ್ನನು, ಭಯವಿಲ್ಲದೇ, ನನಗೆ ಈ ಮಾತುಗಳನ್ನು ಹೇಳಿದನು:

05056056a ಸರ್ವಾಂ ಜನಪದಾನ್ನ್ಸೂ ಯೋಧಾ ದುರ್ಯೋಧನಸ್ಯ ಯೇ|

05056056c ಸಬಾಹ್ಲೀಕಾನ್ಕುರೂನ್ಬ್ರೂಯಾಃ ಪ್ರಾತಿಪೇಯಾಂ ಶರದ್ವತಃ||

05056057a ಸೂತಪುತ್ರಂ ತಥಾ ದ್ರೋಣಂ ಸಹಪುತ್ರಂ ಜಯದ್ರಥಂ|

05056057c ದುಃಶಾಸನಂ ವಿಕರ್ಣಂ ಚ ತಥಾ ದುರ್ಯೋಧನಂ ನೃಪಂ||

“ಸೂತ! ದುರ್ಯೋಧನನಲ್ಲಿರುವ ಎಲ್ಲ ಜನಪದ ಯೋಧರಿಗೆ, ಬಾಹ್ಲೀಕನೇ ಮೊದಲಾದ ಪ್ರಾತಿಪೇಯ ಕುರುಗಳಿಗೆ, ಶರದ್ವತ, ಸೂತಪುತ್ರ, ದ್ರೋಣ, ಅವನ ಮಗ, ಜಯದ್ರಥ, ದುಃಶಾಸನ, ವಿಕರ್ಣ ಮತ್ತು ನೃಪ ದುರ್ಯೋಧನನಿಗೆ ಹೇಳು.

05056058a ಭೀಷ್ಮಂ ಚೈವ ಬ್ರೂಹಿ ಗತ್ವಾ ತ್ವಮಾಶು

         ಯುಧಿಷ್ಠಿರಂ ಸಾಧುನೈವಾಭ್ಯುಪೇತ|

05056058c ಮಾ ವೋ ವಧೀದರ್ಜುನೋ ದೇವಗುಪ್ತಃ

         ಕ್ಷಿಪ್ರಂ ಯಾಚಧ್ವಂ ಪಾಂಡವಂ ಲೋಕವೀರಂ||

ಭೀಷ್ಮನಿಗೆ ಕೂಡ ಹೋಗಿ ಹೇಳು. “ಯುಧಿಷ್ಠಿರನೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳಿ. ದೇವತೆಗಳಿಂದ ರಕ್ಷಿಸಲ್ಪಟ್ಟಿರುವ ಅರ್ಜುನನಿಂದ ವಧೆಗೊಳ್ಳಬೇಡಿ. ಬೇಗನೇ ಲೋಕವೀರ ಪಾಂಡವನನ್ನು ಬೇಡಿಕೊಳ್ಳಿ.

05056059a ನೈತಾದೃಶೋ ಹಿ ಯೋಧೋಽಸ್ತಿ ಪೃಥಿವ್ಯಾಮಿಹ ಕಶ್ಚನ|

05056059c ಯಥಾವಿಧಃ ಸವ್ಯಸಾಚೀ ಪಾಂಡವಃ ಶಸ್ತ್ರವಿತ್ತಮಃ||

ಶಸ್ತ್ರವಿತ್ತಮ ಪಾಂಡವ ಸವ್ಯಸಾಚಿಯಿರುವ ಹಾಗೆ ಬೇರೆ ಯಾವ ಯೋಧನೂ ಈ ಭೂಮಿಯ ಮೇಲೆ ಇಲ್ಲ.

05056060a ದೇವೈರ್ಹಿ ಸಂಭೃತೋ ದಿವ್ಯೋ ರಥೋ ಗಾಂಡೀವಧನ್ವನಃ|

05056060c ನ ಸ ಜೇಯೋ ಮನುಷ್ಯೇಣ ಮಾ ಸ್ಮ ಕೃಧ್ವಂ ಮನೋ ಯುಧಿ||

ಗಾಂಡೀವಧನ್ವಿಯ ದಿವ್ಯ ರಥವು ದೇವತೆಗಳಿಂದಲೇ ರಕ್ಷಿತವಾಗಿದೆ. ಮನುಷ್ಯರಿಂದ ಅವನನ್ನು ಗೆಲ್ಲಲಿಕ್ಕಾಗುವುದಿಲ್ಲ. ಆದುದರರಿಂದ ಯುದ್ಧಕ್ಕೆ ಮನಸ್ಸು ಮಾಡಬೇಡಿ!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಷಟ್‌ಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಐವತ್ತಾರನೆಯ ಅಧ್ಯಾಯವು.

Related image

Comments are closed.