Shanti Parva: Chapter 69

ಶಾಂತಿ ಪರ್ವ: ರಾಜಧರ್ಮ ಪರ್ವ

೬೯

ರಾಜನ ಪ್ರಧಾನ ಕರ್ತವ್ಯಗಳು (೧-೭೧).

12069001 ಯುಧಿಷ್ಠಿರ ಉವಾಚ

12069001a ಪಾರ್ಥಿವೇನ ವಿಶೇಷೇಣ ಕಿಂ ಕಾರ್ಯಮವಶಿಷ್ಯತೇ|

12069001c ಕಥಂ ರಕ್ಷ್ಯೋ ಜನಪದಃ ಕಥಂ ರಕ್ಷ್ಯಾಶ್ಚ ಶತ್ರವಃ||

ಯುಧಿಷ್ಠಿರನು ಹೇಳಿದನು: “ರಾಜನ ಇನ್ನು ಉಳಿದ ಕಾರ್ಯಗಳ್ಯಾವುವು? ವಿಶೇಷವಾಗಿ ಅವನು ಜನಪದವನ್ನು ಹೇಗೆ ರಕ್ಷಿಸಬೇಕು? ಶತ್ರುಗಳಿಂದ ಹೇಗೆ ರಕ್ಷಣೆಯನ್ನು ಪಡೆಯಬೇಕು?

12069002a ಕಥಂ ಚಾರಂ ಪ್ರಯುಂಜೀತ ವರ್ಣಾನ್ವಿಶ್ವಾಸಯೇತ್ಕಥಮ್|

12069002c ಕಥಂ ಭೃತ್ಯಾನ್ಕಥಂ ದಾರಾನ್ಕಥಂ ಪುತ್ರಾಂಶ್ಚ ಭಾರತ||

ಭಾರತ! ಚಾರರನ್ನು ಹೇಗೆ ನಿಯೋಜಿಸಬೇಕು? ಎಲ್ಲ ವರ್ಣದವರಲ್ಲಿಯೂ ರಾಜನ ಮೇಲಿನ ವಿಶ್ವಾಸವನ್ನು ಹೇಗೆ ಹುಟ್ಟಿಸಬೇಕು? ಸೇವಕರಲ್ಲಿ, ಪತ್ನಿಯರಲ್ಲಿ ಮತ್ತು ಪುತ್ರರಲ್ಲಿ ರಾಜನ ಮೇಲಿರುವ ವಿಶ್ವಾಸವನ್ನು ಹೇಗೆ ಉಳಿಸಿಕೊಳ್ಳಬೇಕು?”

12069003 ಭೀಷ್ಮ ಉವಾಚ

12069003a ರಾಜವೃತ್ತಂ ಮಹಾರಾಜ ಶೃಣುಷ್ವಾವಹಿತೋಽಖಿಲಮ್|

12069003c ಯತ್ಕಾರ್ಯಂ ಪಾರ್ಥಿವೇನಾದೌ ಪಾರ್ಥಿವಪ್ರಕೃತೇನ ವಾ||

ಭೀಷ್ಮನು ಹೇಳಿದನು: “ಮಹಾರಾಜ! ರಾಜನ ಆಚಾರ-ವ್ಯವಹಾರಗಳ ಕುರಿತು, ಮತ್ತು ಪಾರ್ಥಿವನ ಅಥವಾ ಪಾರ್ಥಿವನ ಪರವಾಗಿ ಕಾರ್ಯನಿರ್ವಹಿಸುವವರ ಮೊದಲ ಕಾರ್ಯವೇನೆನ್ನುವುದನ್ನು ಸಾವಧಾನ ಚಿತ್ತನಾಗಿ ಕೇಳು!

12069004a ಆತ್ಮಾ ಜೇಯಃ ಸದಾ ರಾಜ್ಞಾ ತತೋ ಜೇಯಾಶ್ಚ ಶತ್ರವಃ|

12069004c ಅಜಿತಾತ್ಮಾ ನರಪತಿರ್ವಿಜಯೇತ ಕಥಂ ರಿಪೂನ್||

ರಾಜನು ಸದಾ ಆತ್ಮನನ್ನು ಗೆಲ್ಲಬೇಕು. ಅನಂತರ ಶತ್ರುಗಳನ್ನು ಗೆಲ್ಲಬೇಕು. ಅಜಿತಾತ್ಮಾ ನರಪತಿಯು ರಿಪುಗಳನ್ನು ಹೇಗೆ ತಾನೇ ಜಯಿಸಿಯಾನು?

12069005a ಏತಾವಾನಾತ್ಮವಿಜಯಃ ಪಂಚವರ್ಗವಿನಿಗ್ರಹಃ|

12069005c ಜಿತೇಂದ್ರಿಯೋ ನರಪತಿರ್ಬಾಧಿತುಂ ಶಕ್ನುಯಾದರೀನ್||

ಐದು ಇಂದ್ರಿಯಗಳನ್ನು ನಿಗ್ರಹಿಸುವುದೇ ಆತ್ಮವಿಜಯವೆನಿಸಿಕೊಳ್ಳುತ್ತದೆ. ಜಿತೇಂದ್ರಿಯ ನರಪತಿಯು ಅರಿಗಳನ್ನು ಬಾಧಿಸಲು ಶಕ್ಯನಾಗುತ್ತಾನೆ.

12069006a ನ್ಯಸೇತ ಗುಲ್ಮಾನ್ದುರ್ಗೇಷು ಸಂಧೌ ಚ ಕುರುನಂದನ|

12069006c ನಗರೋಪವನೇ ಚೈವ ಪುರೋದ್ಯಾನೇಷು ಚೈವ ಹ||

ಕುರುನಂದನ! ಕೋಟೆ, ಸಂಧಿಗಳಲ್ಲಿ, ನಗರದ ಉಪವನಗಳಲ್ಲಿ ಮತ್ತು ಪುರಗಳ ಉದ್ಯಾನಗಳಲ್ಲಿ ಸೈನ್ಯದ ಗುಲ್ಮಗಳನ್ನು ಇರಿಸಬೇಕು.

12069007a ಸಂಸ್ಥಾನೇಷು ಚ ಸರ್ವೇಷು ಪುರೇಷು ನಗರಸ್ಯ ಚ|

12069007c ಮಧ್ಯೇ ಚ ನರಶಾರ್ದೂಲ ತಥಾ ರಾಜನಿವೇಶನೇ||

ನರಶಾರ್ದೂಲ! ಹಾಗೆಯೇ ಪುರ-ನಗರಗಳ ಎಲ್ಲ ಸಂಸ್ಥಾನಗಳ ಮಧ್ಯೆಯೂ ಮತ್ತು ರಾಜನಿವೇಶನದಲ್ಲಿಯೂ ಸೇನೆಗಳನ್ನಿಟ್ಟಿರಬೇಕು.

12069008a ಪ್ರಣಿಧೀಂಶ್ಚ ತತಃ ಕುರ್ಯಾಜ್ಜಡಾಂಧಬಧಿರಾಕೃತೀನ್|

12069008c ಪುಂಸಃ ಪರೀಕ್ಷಿತಾನ್ಪ್ರಾಜ್ಞಾನ್ ಕ್ಷುತ್ಪಿಪಾಸಾತಪಕ್ಷಮಾನ್||

ಅನಂತರ ಜಡರು, ಅಂಧರು ಮತ್ತು ಕಿವುಡರಂತೆ ನಡೆದುಕೊಳ್ಳುವ ಪುರುಷರನ್ನು, ಅವರ ಪ್ರಜ್ಞೆಗಳನ್ನೂ, ಅವರು ಹಸಿವು-ಬಾಯಾರಿಕೆಗಳನ್ನು ಸಹಿಸಿಕೊಳ್ಳುವವರೋ ಎನ್ನುವುದನ್ನು ಪರೀಕ್ಷಿಸಿ, ಗೂಢಚರರನ್ನಾಗಿ ನಿಯೋಜಿಸಿಕೊಳ್ಳಬೇಕು.

12069009a ಅಮಾತ್ಯೇಷು ಚ ಸರ್ವೇಷು ಮಿತ್ರೇಷು ತ್ರಿವಿಧೇಷು ಚ|

12069009c ಪುತ್ರೇಷು ಚ ಮಹಾರಾಜ ಪ್ರಣಿದಧ್ಯಾತ್ಸಮಾಹಿತಃ||

ಮಹಾರಾಜ! ಸಮಾಹಿತ ರಾಜನು ಅಮಾತ್ಯರು, ಮಿತ್ರರು ಮತ್ತು ಪುತ್ರರು ಈ ಮೂರು ಕಡೆಗಳಲ್ಲಿಯೂ ಗೂಢಚಾರರನ್ನು ಇಟ್ಟಿರಬೇಕು.

12069010a ಪುರೇ ಜನಪದೇ ಚೈವ ತಥಾ ಸಾಮಂತರಾಜಸು|

12069010c ಯಥಾ ನ ವಿದ್ಯುರನ್ಯೋನ್ಯಂ ಪ್ರಣಿಧೇಯಾಸ್ತಥಾ ಹಿ ತೇ||

ಪುರ-ಗ್ರಾಮಗಳಲ್ಲಿ, ಮತ್ತು ಹಾಗೆಯೇ ಸಾಮಂತರಾಜರುಗಳಲ್ಲಿ, ಪರಸ್ಪರರಿಗೆ ತಿಳಿಯದಂತೆ ಗೂಢಚಾರರನ್ನು ಇಟ್ಟಿರಬೇಕು.

12069011a ಚಾರಾಂಶ್ಚ ವಿದ್ಯಾತ್ಪ್ರಹಿತಾನ್ಪರೇಣ ಭರತರ್ಷಭ|

12069011c ಆಪಣೇಷು ವಿಹಾರೇಷು ಸಮವಾಯೇಷು ಭಿಕ್ಷುಷು||

12069012a ಆರಾಮೇಷು ತಥೋದ್ಯಾನೇ ಪಂಡಿತಾನಾಂ ಸಮಾಗಮೇ|

12069012c ವೇಶೇಷು[1] ಚತ್ವರೇ ಚೈವ ಸಭಾಸ್ವಾವಸಥೇಷು ಚ||

12069013a ಏವಂ ವಿಹನ್ಯಾಚ್ಚಾರೇಣ ಪರಚಾರಂ ವಿಚಕ್ಷಣಃ|

12069013c ಚಾರೇಣ ವಿಹತಂ ಸರ್ವಂ ಹತಂ ಭವತಿ ಪಾಂಡವ||

ಭರತರ್ಷಭ! ಶತ್ರುಗಳು ಕಳುಹಿಸಿದ ಗೂಢಚಾರರನ್ನು ರಾಜನು ತನ್ನ ಗೂಢಚಾರರ ಮೂಲಕ ಅಂಗಡಿಗಳಲ್ಲಿ, ವಿಹಾರಸ್ಥಳಗಳಲ್ಲಿ, ಸಮಾಜೋತ್ಸವಗಳಲ್ಲಿ, ಭಿಕ್ಷುಗಳಲ್ಲಿ, ತೋಟಗಳಲ್ಲಿ, ಉದ್ಯಾನವನಗಳಲ್ಲಿ, ಪಂಡಿತರ ಸಮಾಗಮಗಳಲ್ಲಿ, ವಾಸಸ್ಥಳಗಳಲ್ಲಿ, ಚೌಕಗಳಲ್ಲಿ, ಸಭೆಗಳಲ್ಲಿ, ಮತ್ತು ಧರ್ಮಶಾಲೆಗಳಲ್ಲಿ ಕಣ್ಣಿಟ್ಟು ಹುಡುಕಿಸಬೇಕು. ಪಾಂಡವ! ರಾಜನು ಶತ್ರುಗಳ ಗೂಢಚಾರರ ಮೇಲೆ ಕಣ್ಣಿಟ್ಟು ಅವರ ಕುರಿತು ಮೊದಲೇ ತಿಳಿದುಕೊಳ್ಳುವುದರಿಂದ ರಾಷ್ಟ್ರಕ್ಕೆ ಮತ್ತು ರಾಜನಿಗೆ ಹಿತವುಂಟಾಗುತ್ತದೆ. 

12069014a ಯದಾ ತು ಹೀನಂ ನೃಪತಿರ್ವಿದ್ಯಾದಾತ್ಮಾನಮಾತ್ಮನಾ|

12069014c ಅಮಾತ್ಯೈಃ ಸಹ ಸಂಮಂತ್ರ್ಯ ಕುರ್ಯಾತ್ಸಂಧಿಂ ಬಲೀಯಸಾ||

ತಾನು ಶತ್ರುವಿಗಿಂತ ದುರ್ಬಲನೆನ್ನುವುದನ್ನು ಸ್ವತಃ ತಿಳಿದುಕೊಂಡ ಕೂಡಲೇ ನೃಪತಿಯು ತನ್ನ ಅಮಾತ್ಯರೊಂದಿಗೆ ಸಮಾಲೋಚನೆಗೈದು ಬಲಶಾಲಿಯೊಂದಿಗೆ ಸಂಧಿಯನ್ನು ಮಾಡಿಕೊಳ್ಳಬೇಕು.

12069015a ಅಜ್ಞಾಯಮಾನೋ ಹೀನತ್ವೇ ಕುರ್ಯಾತ್ಸಂಧಿಂ ಪರೇಣ ವೈ|

12069015c ಲಿಪ್ಸುರ್ವಾ ಕಂ ಚಿದೇವಾರ್ಥಂ ತ್ವರಮಾಣೋ ವಿಚಕ್ಷಣಃ||

ತನ್ನ ದುರ್ಬಲತ್ವದಿಂದ ಇವನು ಸಂಧಿಯನ್ನು ಮಾಡಿಕೊಳ್ಳುತ್ತಿದ್ದಾನೆ ಎಂದು ಶತ್ರುವಿಗೆ ತಿಳಿಯುವ ಮೊದಲೇ ಜಾಗರೂಕ ರಾಜನು ತ್ವರೆಮಾಡಿ ಬೇರೆಯಾವುದಾದರೂ ಉದ್ದೇಶವನ್ನು ಹೇಳಿ ಸಂಧಿಮಾಡಿಕೊಳ್ಳಬೇಕು.

12069016a ಗುಣವಂತೋ ಮಹೋತ್ಸಾಹಾ ಧರ್ಮಜ್ಞಾಃ ಸಾಧವಶ್ಚ ಯೇ|

12069016c ಸಂದಧೀತ ನೃಪಸ್ತೈಶ್ಚ ರಾಷ್ಟ್ರಂ ಧರ್ಮೇಣ ಪಾಲಯನ್||

ರಾಷ್ಟ್ರವನ್ನು ಧರ್ಮದಿಂದ ಪಾಲಿಸುತ್ತ ನೃಪನು ಗುಣವಂತನೂ, ಮಹೋತ್ಸಾಹಿಯೂ, ಧರ್ಮಜ್ಞನೂ, ಸಾಧುವೂ ಆದ ರಾಜರೊಂದಿಗೆ ಸಂಧಿಯನ್ನು ಮಾಡಿಕೊಳ್ಳಬೇಕು.

12069017a ಉಚ್ಚಿದ್ಯಮಾನಮಾತ್ಮಾನಂ ಜ್ಞಾತ್ವಾ ರಾಜಾ ಮಹಾಮತಿಃ|

12069017c ಪೂರ್ವಾಪಕಾರಿಣೋ ಹನ್ಯಾಲ್ಲೋಕದ್ವಿಷ್ಟಾಂಶ್ಚ ಸರ್ವಶಃ||

ಮಹಾಮತಿ ರಾಜನು ತನಗೆ ಪ್ರಾಣಾಪಾಯವಿರುವುದೆಂಬುದನ್ನು ತಿಳಿದುಕೊಂಡು ತನಗೆ ಹಿಂದೆ ಅಪಕಾರಮಾಡಿದವರನ್ನೂ ಮತ್ತು ಪ್ರಜಾದ್ವೇಷಿಗಳನ್ನೂ ಸಂಪೂರ್ಣವಾಗಿ ನಾಶಪಡಿಸಬೇಕು.

12069018a ಯೋ ನೋಪಕರ್ತುಂ ಶಕ್ನೋತಿ ನಾಪಕರ್ತುಂ ಮಹೀಪತಿಃ|

12069018c ಅಶಕ್ಯರೂಪಶ್ಚೋದ್ಧರ್ತುಮುಪೇಕ್ಷ್ಯಸ್ತಾದೃಶೋ ಭವೇತ್||

ಯಾವ ಮಹೀಪತಿಯು ಮಿತ್ರರಿಗೆ ಉಪಕಾರಮಾಡಲೂ, ಶತ್ರುಗಳಿಗೆ ಅಪಕಾರಮಾಡಲೂ ಅಸಮರ್ಥನೋ ಮತ್ತು ಯಾವ ರಾಜನನ್ನು ಉದ್ಧಾರಮಾಡಲು ಯಾರಿಂದಲೂ ಸಾಧ್ಯವಿಲ್ಲವೋ ಅಂತಹ ರಾಜನು ಎಲ್ಲರಿಂದಲೂ ಉಪೇಕ್ಷಿತನಾಗುತ್ತಾನೆ.

12069019a ಯಾತ್ರಾಂ ಯಾಯಾದವಿಜ್ಞಾತಮನಾಕ್ರಂದಮನಂತರಮ್|

12069019c ವ್ಯಾಸಕ್ತಂ ಚ ಪ್ರಮತ್ತಂ ಚ ದುರ್ಬಲಂ ಚ ವಿಚಕ್ಷಣಃ||

12069020a ಯಾತ್ರಾಮಾಜ್ಞಾಪಯೇದ್ವೀರಃ ಕಲ್ಯಪುಷ್ಟಬಲಃ ಸುಖೀ|

12069020c ಪೂರ್ವಂ ಕೃತ್ವಾ ವಿಧಾನಂ ಚ ಯಾತ್ರಾಯಾಂ ನಗರೇ ತಥಾ||

ಶತ್ರುರಾಜನ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ಈ ಅಂಶಗಳನ್ನು ಗಮನೆಗೆ ತೆಗೆದುಕೊಳ್ಳಬೇಕು: ಶತ್ರುರಾಜನು ಮಿತ್ರಹೀನನೇ? ಸಹಾಯಕರಿಂದಲೂ ಬಂಧುಗಳಿಂದಲೂ ವಿಹೀನನಾಗಿರುವನೇ? ಮತ್ತೊಬ್ಬ ಶತ್ರುವಿನೊಡನೆ ಯುದ್ಧಕ್ಕೆ ತೊಡಗಿರುವನೇ? ಪ್ರಮತ್ತನಾಗಿರುವನೇ? ದುರ್ಬಲನಾಗಿರುವನೇ? ಇವುಗಳನ್ನು ತಿಳಿದುಕೊಂಡು ಪುಷ್ಟವಾದ ಚತುರಂಗಸೈನ್ಯವನ್ನು ಹೊಂದಿರುವ ವಿಚಕ್ಷಣ, ವೀರ, ಸಮರ್ಥ ಮತ್ತು ಸುಖಸಾಧನಸಂಪನ್ನ ರಾಜನು ಮೊದಲು ತನ್ನ ನಗರದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಬಳಿಕ ಸೈನಿಕರಿಗೆ ಯುದ್ಧಕ್ಕೆ ಸಿದ್ಧರಾಗಲು ಆಜ್ಞಾಪಿಸಬೇಕು.

12069021a ನ ಚ ವಶ್ಯೋ ಭವೇದಸ್ಯ ನೃಪೋ ಯದ್ಯಪಿ ವೀರ್ಯವಾನ್|

12069021c ಹೀನಶ್ಚ ಬಲವೀರ್ಯಾಭ್ಯಾಂ ಕರ್ಶಯಂಸ್ತಂ ಪರಾವಸೇತ್||

ಬಲ ಮತ್ತು ವೀರ್ಯಗಳಲ್ಲಿ ತಾನು ಹೀನನಾಗಿದ್ದರೂ ಮತ್ತು ಶತ್ರುವು ವೀರ್ಯವಂತನಾಗಿದ್ದರೂ ನೃಪನು ಶತ್ರುವಿನ ವಶದಲ್ಲಿ ಬರಬಾರದು. ಶತ್ರುವನ್ನು ಕ್ಷೀಣಗೊಳಿಸಲು ಸದಾ ಪ್ರಯತ್ನಿಸುತ್ತಿರಬೇಕು.

12069022a ರಾಷ್ಟ್ರಂ ಚ ಪೀಡಯೇತ್ತಸ್ಯ ಶಸ್ತ್ರಾಗ್ನಿವಿಷಮೂರ್ಚನೈಃ|

12069022c ಅಮಾತ್ಯವಲ್ಲಭಾನಾಂ ಚ ವಿವಾದಾಂಸ್ತಸ್ಯ ಕಾರಯೇತ್||

ಆ ರಾಷ್ಟ್ರವನ್ನು ಶಸ್ತ್ರ, ಅಗ್ನಿ, ವಿಷ ಮತ್ತು ಮೂರ್ಚನಗಳಿಂದ ಪೀಡಿಸಬೇಕು. ಅಮಾತ್ಯರು ಮತ್ತು ರಾಜರ ನಡುವೆ ವಿವಾದವಾಗುವಂತೆ ಮಾಡಬೇಕು.

12069022e ವರ್ಜನೀಯಂ ಸದಾ ಯುದ್ಧಂ ರಾಜ್ಯಕಾಮೇನ ಧೀಮತಾ||

12069023a ಉಪಾಯೈಸ್ತ್ರಿಭಿರಾದಾನಮರ್ಥಸ್ಯಾಹ ಬೃಹಸ್ಪತಿಃ|

12069023c ಸಾಂತ್ವೇನಾನುಪ್ರದಾನೇನ ಭೇದೇನ ಚ ನರಾಧಿಪ|

12069023e ಯಮರ್ಥಂ ಶಕ್ನುಯಾತ್ಪ್ರಾಪ್ತುಂ ತೇನ ತುಷ್ಯೇದ್ಧಿ ಪಂಡಿತಃ||

ಧೀಮಂತನಾದವನು ರಾಜ್ಯವನ್ನು ವಿಸ್ತರಿಸುವ ಕಾರಣದಿಂದ ಯುದ್ಧವನ್ನು ಸದಾ ವರ್ಜಿಸಬೇಕು. ನರಾಧಿಪ! ಸಾಮ, ದಾನ ಮತ್ತು ಭೇದ ಈ ಮೂರು ಉಪಾಯಗಳಿಂದ ರಾಜ್ಯವನ್ನು ಪಡೆದುಕೊಳ್ಳಬಹುದು ಎಂದು ಬೃಹಸ್ಪತಿಯು ಹೇಳಿದ್ದಾನೆ. ಇವುಗಳಿಂದ ಎಷ್ಟನ್ನು ಪಡೆದುಕೊಳ್ಳಬಹುದೋ ಅದರಿಂದಲೇ ಪಂಡಿತನಾದವನು ತೃಪ್ತಿಹೊಂದಬೇಕು.

12069024a ಆದದೀತ ಬಲಿಂ ಚೈವ ಪ್ರಜಾಭ್ಯಃ ಕುರುನಂದನ|

12069024c ಷಡ್ಭಾಗಮಮಿತಪ್ರಜ್ಞಸ್ತಾಸಾಮೇವಾಭಿಗುಪ್ತಯೇ||

ಕುರುನಂದನ! ಪ್ರಾಜ್ಞ ರಾಜನು ಪ್ರಜೆಗಳ ರಕ್ಷಣೆಯ ಸಲುವಾಗಿ ಅವರ ಆದಾಯದ ಆರನೆಯ ಒಂದು ಭಾಗವನ್ನು ಪಡೆದುಕೊಳ್ಳಬೇಕು.

12069025a ದಶಧರ್ಮಗತೇಭ್ಯೋ ಯದ್ವಸು ಬಹ್ವಲ್ಪಮೇವ ಚ|

12069025c ತನ್ನಾದದೀತ ಸಹಸಾ ಪೌರಾಣಾಂ ರಕ್ಷಣಾಯ ವೈ||

ಆದರೆ ದಶಧರ್ಮ[2]ಗತರಾದವರಲ್ಲಿರುವ ಅಲ್ಪ ಅಥವಾ ಬಹು ಐಶ್ವರ್ಯವನ್ನು ಸಂಪೂರ್ಣವಾಗಿ ಪೌರರ ರಕ್ಷಣೆಗೆ ಕೂಡಲೇ ವಶಮಾಡಿಕೊಳ್ಳಬೇಕು.

12069026a ಯಥಾ ಪುತ್ರಾಸ್ತಥಾ ಪೌರಾ ದ್ರಷ್ಟವ್ಯಾಸ್ತೇ ನ ಸಂಶಯಃ|

12069026c ಭಕ್ತಿಶ್ಚೈಷಾಂ ಪ್ರಕರ್ತವ್ಯಾ ವ್ಯವಹಾರೇ ಪ್ರದರ್ಶಿತೇ||

ರಾಜನು ಪ್ರಜೆಗಳನ್ನು ಪುತ್ರರಂತೆ ಕಾಣಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ವ್ಯವಹಾರಗಳಲ್ಲಿ[3] ಸ್ನೇಹವಶ ಪಕ್ಷಪಾತವನ್ನು ತೋರಿಸಬಾರದು.

12069027a ಸುತಂ ಚ ಸ್ಥಾಪಯೇದ್ರಾಜಾ ಪ್ರಾಜ್ಞಂ ಸರ್ವಾರ್ಥದರ್ಶಿನಮ್[4]|

12069027c ವ್ಯವಹಾರೇಷು ಸತತಂ ತತ್ರ ರಾಜ್ಯಂ ವ್ಯವಸ್ಥಿತಮ್||

ರಾಜನು ವ್ಯವಹಾರಗಳಲ್ಲಿ ಪ್ರಾಜ್ಞನೂ ಸರ್ವಾರ್ಥದರ್ಶಿಯೂ ಆದ ಮಗನನ್ನು ಸ್ಥಾಪಿಸಬೇಕು. ಏಕೆಂದರೆ ಸತತ ವ್ಯವಹಾರಗಳ ಮೇಲೆಯೇ ರಾಜ್ಯವು ವ್ಯವಸ್ಥಿತವಾಗಿರುತ್ತದೆ.

12069028a ಆಕರೇ ಲವಣೇ ಶುಲ್ಕೇ ತರೇ ನಾಗವನೇ ತಥಾ|

12069028c ನ್ಯಸೇದಮಾತ್ಯಾನ್ನೃಪತಿಃ ಸ್ವಾಪ್ತಾನ್ವಾ ಪುರುಷಾನ್ ಹಿತಾನ್||

ಚಿನ್ನ-ಬೆಳ್ಳಿಗಳ ಭಂಡಾರ, ಉಪ್ಪು-ಧಾನ್ಯಗಳ ಖಣಿಜ, ದೋಣಿ-ಹಡಗುಗಳ ಘಾಟಿ ಮತ್ತು ಆನೆಗಳ ಸೇನೆ – ಇವುಗಳ ಸ್ಥಾನಗಳಲ್ಲಿ ನೃಪತಿಯು ತನ್ನ ಆಪ್ತ ಮತ್ತು ಹಿತೈಷಿ ಪುರುಷರನ್ನು ಇಡಬೇಕು.

12069029a ಸಮ್ಯಗ್ದಂಡಧರೋ ನಿತ್ಯಂ ರಾಜಾ ಧರ್ಮಮವಾಪ್ನುಯಾತ್|

12069029c ನೃಪಸ್ಯ ಸತತಂ ದಂಡಃ ಸಮ್ಯಗ್ಧರ್ಮೇ ಪ್ರಶಸ್ಯತೇ||

ನಿತ್ಯವೂ ಸರಿಯಾಗಿ ದಂಡವನ್ನು ಧರಿಸಿರುವ ರಾಜನು ಧರ್ಮದ ಭಾಗಿಯಾಗುತ್ತಾನೆ. ನಿರಂತರ ಧಂಡಧಾರಣ ಮಾಡುವುದು ನೃಪನ ಉತ್ತಮ ಧರ್ಮವೆಂದು ಪ್ರಶಂಸಿಸುತ್ತಾರೆ.

12069030a ವೇದವೇದಾಂಗವಿತ್ಪ್ರಾಜ್ಞಃ ಸುತಪಸ್ವೀ ನೃಪೋ ಭವೇತ್|

12069030c ದಾನಶೀಲಶ್ಚ ಸತತಂ ಯಜ್ಞಶೀಲಶ್ಚ ಭಾರತ||

ಭಾರತ! ನೃಪನು ವೇದ-ವೇದಾಂಗಗಳ ವಿದ್ವಾಂಸನೂ, ಬುದ್ಧಿವಂತನೂ, ಉತ್ತಮ ತಪಸ್ವಿಯೂ, ಸದಾ ದಾನಶೀಲನೂ ಮತ್ತು ಯಜ್ಞಪರಾಯಣನೂ ಆಗಿರಬೇಕು.

12069031a ಏತೇ ಗುಣಾಃ ಸಮಸ್ತಾಃ ಸ್ಯುರ್ನೃಪಸ್ಯ ಸತತಂ ಸ್ಥಿರಾಃ|

12069031c ಕ್ರಿಯಾಲೋಪೇ ತು ನೃಪತೇಃ ಕುತಃ ಸ್ವರ್ಗಃ ಕುತೋ ಯಶಃ||

ಈ ಸಮಸ್ತ ಗುಣಗಳೂ ರಾಜನಲ್ಲಿ ಸತತವೂ ಸ್ಥಿರವಾಗಿರಬೇಕು. ಅವನ ನ್ಯಾಯೋಚಿತ ವ್ಯವಹಾರಗಳಲ್ಲಿಯೇ ಲೋಪವಾಗಿಬಿಟ್ಟರೆ ರಾಜನಿಗೆ ಎಲ್ಲಿಯ ಸ್ವರ್ಗ ಮತ್ತು ಎಲ್ಲಿಯ ಯಶಸ್ಸು?

12069032a ಯದಾ ತು ಪೀಡಿತೋ ರಾಜಾ ಭವೇದ್ರಾಜ್ಞಾ ಬಲೀಯಸಾ|

[5]12069032c ತ್ರಿಧಾ ತ್ವಾಕ್ರಂದ್ಯ ಮಿತ್ರಾಣಿ ವಿಧಾನಮುಪಕಲ್ಪಯೇತ್||

ರಾಜನಾದವನು ಇನ್ನೊಬ್ಬ ಬಲಶಾಲೀ ರಾಜನಿಂದ ಪೀಡಿತನಾದರೆ ಮೂರುವಿಧದ ಮಿತ್ರರನ್ನು ಕೂಗಿ ಕರೆದು ವಿಧಾನಗಳ ಕುರಿತು ಯೋಜನೆಹಾಕಿಕೊಳ್ಳಬೇಕು.

12069033a ಘೋಷಾನ್ನ್ಯಸೇತ ಮಾರ್ಗೇಷು ಗ್ರಾಮಾನುತ್ಥಾಪಯೇದಪಿ|

12069033c ಪ್ರವೇಶಯೇಚ್ಚ ತಾನ್ಸರ್ವಾನ್ಶಾಖಾನಗರಕೇಷ್ವಪಿ||

ಘೋಷಣೆ ಮಾಡುವವರನ್ನು ರಾಜಮಾರ್ಗದಲ್ಲಿ ನಿಲ್ಲಿಸಬೇಕು. ತಳವಾರರಿಂದ ಘೋಷಣೆಯನ್ನು ಸಾರಿಸಿ ಗ್ರಾಮದಲ್ಲಿರುವ ಜನರನ್ನು ಎಚ್ಚರಿಸಬೇಕು. ಬಳಿಕ ಗ್ರಾಮದವರೆಲ್ಲರೂ ಉಪನಗರಗಳಿಗೆ ಪ್ರವೇಶಿಸುವಂತೆ ಮಾಡಬೇಕು.

12069034a ಯೇ ಗುಪ್ತಾಶ್ಚೈವ ದುರ್ಗಾಶ್ಚ ದೇಶಾಸ್ತೇಷು ಪ್ರವೇಶಯೇತ್|

12069034c ಧನಿನೋ ಬಲಮುಖ್ಯಾಂಶ್ಚ ಸಾಂತ್ವಯಿತ್ವಾ ಪುನಃ ಪುನಃ||

ಬಳಿಕ ಐಶ್ವರ್ಯವಂತರನ್ನೂ, ಸೇನಾಪತಿಗಳನ್ನೂ ಬಾರಿ-ಬಾರಿಗೂ ಸಂತೈಸುತ್ತಾ ಅವರೆಲ್ಲರನ್ನೂ ಗೂಢ ದುರ್ಗಮ ಪ್ರದೇಶಗಳಿಗೆ ಕಳುಹಿಸಬೇಕು.

12069035a ಸಸ್ಯಾಭಿಹಾರಂ ಕುರ್ಯಾಚ್ಚ ಸ್ವಯಮೇವ ನರಾಧಿಪಃ|

12069035c ಅಸಂಭವೇ ಪ್ರವೇಶಸ್ಯ ದಾಹಯೇದಗ್ನಿನಾ ಭೃಶಮ್||

ಸ್ವಯಂ ನರಾಧಿಪನು ಪೈರಿನ ಕಟಾವುಮಾಡಿಸಿ ಧಾನ್ಯವನ್ನು ವಿಂಗಡಿಸಿ ಕೋಟೆಯೊಳಗೆ ಇಡುವಂತೆ ನೋಡಿಕೊಳ್ಳಬೇಕು. ಅದು ಸಾಧ್ಯವಾಗದೇ ಇದ್ದರೆ ಶತ್ರುರಾಜನಿಗೆ ದೊರಕದಂತೆ ಪೈರು-ಪಚ್ಚೆಗಳು ತುಂಬಿದ್ದ ಹೊಲ-ಗದ್ದೆಗಳನ್ನೇ ಸುಟ್ಟುಹಾಕಬೇಕು.

12069036a ಕ್ಷೇತ್ರಸ್ಥೇಷು ಚ ಸಸ್ಯೇಷು ಶತ್ರೋರುಪಜಪೇನ್ನರಾನ್|

12069036c ವಿನಾಶಯೇದ್ವಾ ಸರ್ವಸ್ವಂ ಬಲೇನಾಥ ಸ್ವಕೇನ ವೈ||

ಹೊಲಗದ್ದೆಗಳಲ್ಲಿ ಪೈರು ಇರುವಾಗ ಶತ್ರುವಿನ ಕಡೆಯ ಜನರನ್ನೇ ಹತ್ತಿಕ್ಕ ದ್ವಂಸಮಾಡುವಂತೆ ಮಾಡಬೇಕು. ಅಥವಾ ತನ್ನ ಕಡೆಯ ಜನರನ್ನೇ ಕಳುಹಿಸಿ ನಾಶಪಡಿಸಬೇಕು. ಆಹಾರ-ಧಾನ್ಯಗಳು ಶತ್ರುವಿನ ಕೈಗಂತೂ ಸಿಕ್ಕಲೇಬಾರದು.

12069037a ನದೀಷು ಮಾರ್ಗೇಷು ಸದಾ ಸಂಕ್ರಮಾನವಸಾದಯೇತ್|

12069037c ಜಲಂ ನಿಸ್ರಾವಯೇತ್ಸರ್ವಮನಿಸ್ರಾವ್ಯಂ ಚ ದೂಷಯೇತ್||

ನದಿಗಳನ್ನು ದಾಟುವಲ್ಲಿರುವ ಸೇತುವೆಗಳನ್ನು ಧ್ವಂಸಮಾಡಬೇಕು. ನೀರಿನ ಒಡ್ಡುಗಳನ್ನೊಡೆದು ಶತ್ರುಗಳಿಗ ನೀರು ದೊರೆಯದಂತೆ ಮಾಡಬೇಕು. ಬಾವಿಯೇ ಮೊದಲಾದ ಜಲಾಶಯಗಳ ನೀರು ಕುಡಿಯಲಿಕ್ಕೆ ಬಾರದಂತೆ ದೂಷಿತಗೊಳಿಸಬೇಕು.

12069038a ತದಾತ್ವೇನಾಯತೀಭಿಶ್ಚ ವಿವದನ್ಭೂಮ್ಯನಂತರಮ್|

12069038c ಪ್ರತೀಘಾತಃ ಪರಸ್ಯಾಜೌ ಮಿತ್ರಕಾಲೇಽಪ್ಯುಪಸ್ಥಿತೇ||

ಮಿತ್ರನಿಗಾಗಿ ಮಾಡಬೇಕಾದ ಕಾಲವು ಸನ್ನಿಹಿತವಾಗಿದ್ದರೂ ಅದನ್ನು ಬದಿಗೊತ್ತಿ ತನ್ನ ಶತ್ರುವಿಗೆ ಶತ್ರುವಾದವನ ಆಶ್ರಯವನ್ನು ಪಡೆಯಬೇಕು.

12069039a ದುರ್ಗಾಣಾಂ ಚಾಭಿತೋ ರಾಜಾ ಮೂಲಚ್ಚೇದಂ ಪ್ರಕಾರಯೇತ್|

12069039c ಸರ್ವೇಷಾಂ ಕ್ಷುದ್ರವೃಕ್ಷಾಣಾಂ ಚೈತ್ಯವೃಕ್ಷಾನ್ವಿವರ್ಜಯೇತ್||

ರಾಜನಾದವನು ದುರ್ಗದ ಸುತ್ತಲೂ ಇರುವ ಮರಗಿಡಗಳನ್ನು ಬುಡಸಹಿತ ಕಡಿದುಹಾಕಬೇಕು. ಆದರೆ ಅಶ್ವತ್ಥಾದಿ ಪೂಜಾವೃಕ್ಷಗಳನ್ನು ನಾಶಗೊಳಿಸಬಾರದು.

12069040a ಪ್ರವೃದ್ಧಾನಾಂ ಚ ವೃಕ್ಷಾಣಾಂ ಶಾಖಾಃ ಪ್ರಚ್ಚೇದಯೇತ್ತಥಾ|

12069040c ಚೈತ್ಯಾನಾಂ ಸರ್ವಥಾ ವರ್ಜ್ಯಮಪಿ ಪತ್ರಸ್ಯ ಪಾತನಮ್||

ಅತಿ ದೊಡ್ಡದಾಗಿ ಬೆಳೆದ ಮರಗಳ ಶಾಖೆಗಳನ್ನು ಕಡಿಯಬೇಕು. ಆದರೆ ಅಶ್ವತ್ಥಾದಿ ವೃಕ್ಷಗಳ ಎಲೆಗಳನ್ನೂ ಕೀಳಬಾರದು.

12069041a ಪ್ರಕಂಠೀಃ[6] ಕಾರಯೇತ್ಸಮ್ಯಗಾಕಾಶಜನನೀಸ್ತಥಾ|

12069041c ಆಪೂರಯೇಚ್ಚ ಪರಿಖಾಃ ಸ್ಥಾಣುನಕ್ರಝಷಾಕುಲಾಃ||

ಕೋಟೆಯ ನಾಲ್ಕೂ ಕಡೆಗಳಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಪ್ರಕಂಠಿ[7]ಗಳನ್ನು ನಿರ್ಮಿಸಬೇಕು. ಅಲ್ಲಿ ಆಕಾಶಜನನಿಗಳನ್ನೂ ಅಂದರೆ ಸಣ್ಣ ರಂಧ್ರಗಳನ್ನು ಮಾಡಿರಬೇಕು. ಕೋಟೆಯ ಸುತ್ತಲೂ ಕಂದಕವನ್ನು ತೋದಿಸಿ ಅವುಗಳನ್ನು ಮೇಲ್ಮುಖ ತ್ರಿಶೂಲಗಳು, ಮೀನು, ನಕ್ರ ಮತ್ತು ಮೊಸಳೆಗಳಿಂದ ತುಂಬಿಸಬೇಕು.

12069042a ಕಡಂಗದ್ವಾರಕಾಣಿ[8] ಸ್ಯುರುಚ್ಚ್ವಾಸಾರ್ಥೇ ಪುರಸ್ಯ ಹ|

12069042c ತೇಷಾಂ ಚ ದ್ವಾರವದ್ಗುಪ್ತಿಃ ಕಾರ್ಯಾ ಸರ್ವಾತ್ಮನಾ ಭವೇತ್||

ಪುರದ ಒಳ ಮತ್ತು ಹೊರಹೋಗಲು ಸಣ್ಣ ದ್ವಾರಗಳನ್ನು ನಿರ್ಮಿಸಿರಬೇಕು. ಆ ದ್ವಾರಗಳನ್ನೂ , ಮುಖ್ಯದ್ವಾರದಂತೆ, ಎಲ್ಲ ಕಾರಣಗಳಲ್ಲಿಯೂ ರಕ್ಷಿಸಬೇಕು.

12069043a ದ್ವಾರೇಷು ಚ ಗುರೂಣ್ಯೇವ ಯಂತ್ರಾಣಿ ಸ್ಥಾಪಯೇತ್ಸದಾ|

12069043c ಆರೋಪಯೇಚ್ಚತಘ್ನೀಶ್ಚ ಸ್ವಾಧೀನಾನಿ ಚ ಕಾರಯೇತ್||

ದ್ವಾರಗಳಲ್ಲಿ ದೊಡ್ಡ ಯಂತ್ರಗಳನ್ನು ಸ್ಥಾಪಿಸಬೇಕು. ಆ ಯಂತ್ರಗಳ ಮೇಲೆ ಶತಘ್ನಿಗಳನ್ನು ಇಟ್ಟಿರಬೇಕು. ಇವೆಲ್ಲವೂ ರಾಜನ ಸ್ವಾಧೀನದಲ್ಲಿರಬೇಕು.

12069044a ಕಾಷ್ಠಾನಿ ಚಾಭಿಹಾರ್ಯಾಣಿ ತಥಾ ಕೂಪಾಂಶ್ಚ ಖಾನಯೇತ್|

12069044c ಸಂಶೋಧಯೇತ್ತಥಾ ಕೂಪಾನ್ಕೃತಾನ್ಪೂರ್ವಂ ಪಯೋರ್ಥಿಭಿಃ||

ಕೋಟೆಯ ಒಳಗೆ ಕಟ್ಟಿಗೆಯನ್ನು ಸಂಗ್ರಹಿಸಿಟ್ಟಿರಬೇಕು. ಬಾವಿಗಳನ್ನು ತೋಡಿಸಬೇಕು. ಹಳೆಯ ಬಾವಿಗಳನ್ನು ಕೆಸರು ತೆಗೆದು ಶೋಧಿಸಬೇಕು ಮತ್ತು ಕುಡಿಯುವ ನೀರು ಹೇರಳವಾಗಿರುವಂತೆ ನೋಡಿಕೊಳ್ಳಬೇಕು.

12069045a ತೃಣಚ್ಚನ್ನಾನಿ ವೇಶ್ಮಾನಿ ಪಂಕೇನಾಪಿ ಪ್ರಲೇಪಯೇತ್|

12069045c ನಿರ್ಹರೇಚ್ಚ ತೃಣಂ ಮಾಸೇ ಚೈತ್ರೇ ವಹ್ನಿಭಯಾತ್ಪುರಃ||

ಹುಲ್ಲುಹೊಚ್ಚಿದ ಗುಡಿಸಲುಗಳ ಸೂರುಗಳನ್ನು ಮಣ್ಣಿನಿಂದ ಬಳಿಯಬೇಕು. ಚೈತ್ರಮಾಸದಲ್ಲಿ ಪುರವು ಅಗ್ನಿಯ ಭಯದಿಂದ ದೂರವಾಗಿರುವಂತೆ ಒಣಹುಲ್ಲನ್ನು ಪುರದ ಹೊರಹಾಕಬೇಕು.

12069046a ನಕ್ತಮೇವ ಚ ಭಕ್ತಾನಿ ಪಾಚಯೇತ ನರಾಧಿಪಃ|

12069046c ನ ದಿವಾಗ್ನಿರ್ಜ್ವಲೇದ್ಗೇಹೇ ವರ್ಜಯಿತ್ವಾಗ್ನಿಹೋತ್ರಿಕಮ್||

ನರಾಧಿಪನು ರಾತ್ರಿಮಾತ್ರವೇ ಅಡುಗೆಮಾಡಬೇಕೆಂದು ಆಜ್ಞಾಪಿಸಬೇಕು. ಅಗ್ನಿಹೋತ್ರವನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ಹಗಲಿನಲ್ಲಿ ಬೆಂಕಿಯನ್ನು ಹೊತ್ತಿಸಬಾರದು.

12069047a ಕರ್ಮಾರಾರಿಷ್ಟಶಾಲಾಸು ಜ್ವಲೇದಗ್ನಿಃ ಸಮಾಹಿತಃ|

12069047c ಗೃಹಾಣಿ ಚ ಪ್ರವಿಶ್ಯಾಥ ವಿಧೇಯಃ ಸ್ಯಾದ್ಧುತಾಶನಃ||

ಕಮ್ಮಾರನ ಕುಲುಮೆ ಮತ್ತು ಸೂತಿಕಾಗೃಹಗಳಲ್ಲಿ ಬೆಂಕಿಯನ್ನು ಬಹಳ ಎಚ್ಚರಿಕೆಯಿಂದ ಉರಿಸಬೇಕು. ಮನೆಯ ಒಳಗೆ ತೆಗೆದುಕೊಂಡು ಹೋಗಿ ಅಗ್ನಿಯನ್ನು ಅಡಗಿಸಿಡಬೇಕು.

12069048a ಮಹಾದಂಡಶ್ಚ ತಸ್ಯ ಸ್ಯಾದ್ಯಸ್ಯಾಗ್ನಿರ್ವೈ ದಿವಾ ಭವೇತ್|

12069048c ಪ್ರಘೋಷಯೇದಥೈವಂ ಚ ರಕ್ಷಣಾರ್ಥಂ ಪುರಸ್ಯ ವೈ||

ಪುರದ ರಕ್ಷಣೆಗಾಗಿ ಹಗಲಿನಲ್ಲಿ ಬೆಂಕಿಉರಿಸಿರುವವರಿಗೆ ಮಹಾದಂಡ ಶಿಕ್ಷೆಯಾಗುತ್ತದೆ ಎಂದು ಘೋಷಣೆ ಹಾಕಿಸಬೇಕು.

12069049a ಭಿಕ್ಷುಕಾಂಶ್ಚಾಕ್ರಿಕಾಂಶ್ಚೈವ ಕ್ಷೀಬೋನ್ಮತ್ತಾನ್ಕುಶೀಲವಾನ್|

12069049c ಬಾಹ್ಯಾನ್ಕುರ್ಯಾನ್ನರಶ್ರೇಷ್ಠ ದೋಷಾಯ ಸ್ಯುರ್ಹಿ ತೇಽನ್ಯಥಾ||

ನರಶ್ರೇಷ್ಠ! ಯುದ್ಧದ ಸಮಯದಲ್ಲಿ ಭಿಕ್ಷುಕರು, ಹೊಗಳುಭಟರು, ನಪುಂಸಕರು, ಹುಚ್ಚರು, ನಟ-ನರ್ತಕರನ್ನು ನಗರದ ಹೊರಹಾಕಬೇಕು. ಇಲ್ಲದಿದ್ದರೆ ಅವರಿಂದಲೇ ಆಪತ್ತುಂಟಾಗಬಹುದು. ಶತ್ರುಗೂಢಚರರು ಆ ವೇಷಗಳಲ್ಲಿದ್ದು ರಾಷ್ಟ್ರಕ್ಕೇ ತೊಂದರೆಯನ್ನುಂಟುಮಾಡಬಹುದು.

12069050a ಚತ್ವರೇಷು ಚ ತೀರ್ಥೇಷು ಸಭಾಸ್ವಾವಸಥೇಷು ಚ|

12069050c ಯಥಾರ್ಹವರ್ಣಂ ಪ್ರಣಿಧಿಂ ಕುರ್ಯಾತ್ಸರ್ವತ್ರ ಪಾರ್ಥಿವಃ||

ನಗರದ ಎಲ್ಲ ಚೌಕಗಳಲ್ಲಿ, ತೀರ್ಥಗಳಲ್ಲಿ, ಸಭೆಗಳಲ್ಲಿ ಮತ್ತು ಧರ್ಮಶಾಲೆಗಳಲ್ಲಿ ರಾಜನು ಅರ್ಹವರ್ಣ ದೂತರನ್ನು ನೇಮಿಸಿರಬೇಕು.

12069051a ವಿಶಾಲಾನ್ರಾಜಮಾರ್ಗಾಂಶ್ಚ ಕಾರಯೇತ ನರಾಧಿಪಃ|

12069051c ಪ್ರಪಾಶ್ಚ ವಿಪಣೀಶ್ಚೈವ ಯಥೋದ್ದೇಶಂ ಸಮಾದಿಶೇತ್||

ನರಾಧಿಪನು ರಾಜಮಾರ್ಗಗಳನ್ನೂ ವಿಶಾಲಗೊಳಿಸಬೇಕು. ಅವಶ್ಯಕತೆಗಳಿಗನುಗುಣವಾಗಿ ಅರವಟ್ಟಿಗೆ-ಅಂಗಡಿಗಳನ್ನು ಇಡಿಸಿರಬೇಕು.

12069052a ಭಾಂಡಾಗಾರಾಯುಧಾಗಾರಾನ್ಧಾನ್ಯಾಗಾರಾಂಶ್ಚ ಸರ್ವಶಃ|

12069052c ಅಶ್ವಾಗಾರಾನ್ಗಜಾಗಾರಾನ್ಬಲಾಧಿಕರಣಾನಿ ಚ||

12069053a ಪರಿಖಾಶ್ಚೈವ ಕೌರವ್ಯ ಪ್ರತೋಲೀಃ ಸಂಕಟಾನಿ ಚ|

12069053c ನ ಜಾತು ಕಶ್ಚಿತ್ಪಶ್ಯೇತ್ತು ಗುಹ್ಯಮೇತದ್ಯುಧಿಷ್ಠಿರ||

ಕೌರವ್ಯ! ಯುಧಿಷ್ಠಿರ! ಧಾನ್ಯದ ಕಣಜಗಳು, ಆಯುಧಾಗಾರಗಳು, ಮತ್ತು ಯೋಧರ ವಸತಿಗಳು, ಅಶ್ವಾಗಾರಗಳು, ಗಜಾಗಾರಗಳು, ಸೇನೆಗಳು, ಕಂದಕಗಳು, ಮತ್ತು ರಾಜನ ಉದ್ಯಾನವನಗಳನ್ನು ಶತ್ರುಗಳಿಗೆ ಕಾಣದಂತಿರಬೇಕು. ಇವಿಷ್ಟೂ ಶತ್ರುವಿನಿಂದ ಗೌಪ್ಯವಾಗಿಡತಕ್ಕ ವಿಷಯಗಳು.

12069054a ಅಥ ಸಂನಿಚಯಂ ಕುರ್ಯಾದ್ರಾಜಾ ಪರಬಲಾರ್ದಿತಃ|

12069054c ತೈಲಂ ಮಧು ಘೃತಂ ಸಸ್ಯಮೌಷಧಾನಿ ಚ ಸರ್ವಶಃ||

12069055a ಅಂಗಾರಕುಶಮುಂಜಾನಾಂ ಪಲಾಶಶರಪರ್ಣಿನಾಮ್|

ಶತ್ರುಬಲಕ್ಕಿಂತ ಕಡಿಮೆ ಬಲ್ಲವುಳ್ಳವನು ಎಣ್ಣೆ, ಮಧು, ಘೃತ, ಔಷಧೀ ಸಸ್ಯಗಳು-ಮೂಲಿಕೆಗಳು, ಇದ್ದಿಲು, ದರ್ಬೆ, ಮುಂಜೆಹುಲ್ಲು, ಮುತ್ತುಗ, ಬಾಣ, ಮತ್ತು ಎಲೆಗಳನ್ನು ಕೂಡಿಸಿಕೊಂಡಿರಬೇಕು.

12069055c ಯವಸೇಂಧನದಿಗ್ಧಾನಾಂ ಕಾರಯೇತ ಚ ಸಂಚಯಾನ್||

12069056a ಆಯುಧಾನಾಂ ಚ ಸರ್ವೇಷಾಂ ಶಕ್ತ್ಯೃಷ್ಟಿಪ್ರಾಸವರ್ಮಣಾಮ್|

12069056c ಸಂಚಯಾನೇವಮಾದೀನಾಂ ಕಾರಯೇತ ನರಾಧಿಪಃ||

ಅಂಥಹ ನರಾಧಿಪನು ಕಟ್ಟಿಗೆ, ವಿಷಯುಕ್ತ ಬಾಣಗಳು ಮೊದಲಾದವುಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಎಲ್ಲ ತರಹದ ಆಯುಧಗಳೂ, ಶಕ್ಗಿಗಳೂ, ಋಷ್ಠಿಗಳೂ, ಪ್ರಾಸಗಳೂ, ಕವಚಗಳೂ ಮೊದಲಾದವುಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು.

12069057a ಔಷಧಾನಿ ಚ ಸರ್ವಾಣಿ ಮೂಲಾನಿ ಚ ಫಲಾನಿ ಚ|

12069057c ಚತುರ್ವಿಧಾಂಶ್ಚ ವೈದ್ಯಾನ್ವೈ ಸಂಗೃಹ್ಣೀಯಾದ್ವಿಶೇಷತಃ||

ವಿಶೇಷವಾಗಿ ಎಲ್ಲ ಔಷಧಿಗಳು, ಗೆಡ್ಡೆಗಳು, ಫಲಗಳು, ನಾಲ್ಕು ಬಗೆಯ ವೈದ್ಯರನ್ನೂ[9] ಸಂಗ್ರಹಿಸಿಟ್ಟುಕೊಂಡಿರಬೇಕು.

12069058a ನಟಾಶ್ಚ ನರ್ತಕಾಶ್ಚೈವ ಮಲ್ಲಾ ಮಾಯಾವಿನಸ್ತಥಾ|

12069058c ಶೋಭಯೇಯುಃ ಪುರವರಂ ಮೋದಯೇಯುಶ್ಚ ಸರ್ವಶಃ||

ಪುರಜನರ ಮನೋರಂಜನೆಗೆಂದು ಎಲ್ಲಕಡೆ ನಟರು, ನರ್ತಕರು, ಮಲ್ಲರು, ಪವಾಡಗಾರರು ಶೋಭಿಸುತ್ತಿರಬೇಕು.

12069059a ಯತಃ ಶಂಕಾ ಭವೇಚ್ಚಾಪಿ ಭೃತ್ಯತೋ ವಾಪಿ ಮಂತ್ರಿತಃ|

12069059c ಪೌರೇಭ್ಯೋ ನೃಪತೇರ್ವಾಪಿ ಸ್ವಾಧೀನಾನ್ಕಾರಯೇತ ತಾನ್||

ಸೇವಕರಲ್ಲಿಯಾಗಲೀ, ಮಂತ್ರಿಗಳಲ್ಲಿಯಾಗಲೀ, ಪೌರರಲ್ಲಿಯಾಗಲೀ ಯಾರೊಬ್ಬರ ಮೇಲೂ ನೃಪತಿಗೆ ಶಂಕೆಯುಂಟಾದರೆ ಅವರನ್ನು ರಾಜನು ಕೂಡಲೇ ಬಂಧಿಸಿ ತನ್ನ ಸ್ವಾಧೀನಕ್ಕೆ ತಂದುಕೊಳ್ಳಬೇಕು.

12069060a ಕೃತೇ ಕರ್ಮಣಿ ರಾಜೇಂದ್ರ ಪೂಜಯೇದ್ಧನಸಂಚಯೈಃ|

12069060c ಮಾನೇನ ಚ ಯಥಾರ್ಹೇಣ ಸಾಂತ್ವೇನ ವಿವಿಧೇನ ಚ||

ರಾಜೇಂದ್ರ! ತನಗೆ ಅಭೀಷ್ಟ ಕಾರ್ಯವನ್ನು ಮಾಡಿಕೊಟ್ಟವನನ್ನು ಧನಸಂಚಯಗಳಿಂದಲೂ, ಪುರಸ್ಕಾರದಿಂದಲೂ, ಸುಮಧುರ ಮಾತುಗಳಿಂದಲೂ ಸತ್ಕರಿಸಬೇಕು.

12069061a ನಿರ್ವೇದಯಿತ್ವಾ ತು ಪರಂ ಹತ್ವಾ ವಾ ಕುರುನಂದನ|

12069061c ಗತಾನೃಣ್ಯೋ ಭವೇದ್ರಾಜಾ ಯಥಾ ಶಾಸ್ತ್ರೇಷು ದರ್ಶಿತಮ್||

ಕುರುನಂದನ! ಶತ್ರುವನ್ನು ನೋಯಿಸಿ ಅಥವಾ ಕೊಂದು ಶಾಸ್ತ್ರದಲ್ಲಿ ತೋರಿಸಿದ ವಿಧಿ[10]ಗಳಿಂದ ರಾಜನು ಋಣಮುಕ್ತನಾಗಬೇಕು.

12069062a ರಾಜ್ಞಾ ಸಪ್ತೈವ ರಕ್ಷ್ಯಾಣಿ ತಾನಿ ಚಾಪಿ ನಿಬೋಧ ಮೇ|

12069062c ಆತ್ಮಾಮಾತ್ಯಶ್ಚ ಕೋಶಶ್ಚ ದಂಡೋ ಮಿತ್ರಾಣಿ ಚೈವ ಹಿ||

12069063a ತಥಾ ಜನಪದಶ್ಚೈವ ಪುರಂ ಚ ಕುರುನಂದನ|

12069063c ಏತತ್ಸಪ್ತಾತ್ಮಕಂ ರಾಜ್ಯಂ ಪರಿಪಾಲ್ಯಂ ಪ್ರಯತ್ನತಃ||

ರಾಜನಾದವನು ಈ ಏಳನ್ನು ರಕ್ಷಿಸಲೇ ಬೇಕು. ಅವು ಯಾವುದೆಂದು ನನ್ನನ್ನು ಕೇಳು: ತಾನು, ಅಮಾತ್ಯ, ಕೋಶ, ಸೇನೆ, ಮಿತ್ರರು, ರಾಷ್ಟ್ರ ಮತ್ತು ರಾಜಧಾನಿ. ಈ ಏಳನ್ನು ಆತ್ಮರೂಪದಲ್ಲಿ ಪಡೆದ ರಾಜ್ಯವನ್ನು ಪ್ರಯತ್ನಪಟ್ಟು ಪರಿಪಾಲಿಸಬೇಕು.

12069064a ಷಾಡ್ಗುಣ್ಯಂ ಚ ತ್ರಿವರ್ಗಂ ಚ ತ್ರಿವರ್ಗಮಪರಂ ತಥಾ|

12069064c ಯೋ ವೇತ್ತಿ ಪುರುಷವ್ಯಾಘ್ರ ಸ ಭುನಕ್ತಿ ಮಹೀಮಿಮಾಮ್||

ಪುರುಷವ್ಯಾಘ್ರ! ಆರು ಗುಣಗಳನ್ನು, ಮೂರು ವರ್ಗಗಳನ್ನು ಮತ್ತು ನಂತರ ಮೂರು ಅಪರವರ್ಗಗಳನ್ನು ತಿಳಿದವನು ಈ ಮಹಿಯನ್ನು ಭೋಗಿಸುತ್ತಾನೆ.

12069065a ಷಾಡ್ಗುಣ್ಯಮಿತಿ ಯತ್ಪ್ರೋಕ್ತಂ ತನ್ನಿಬೋಧ ಯುಧಿಷ್ಠಿರ|

12069065c ಸಂಧಾಯಾಸನಮಿತ್ಯೇವ ಯಾತ್ರಾಸಂಧಾನಮೇವ ಚ||

12069066a ವಿಗೃಹ್ಯಾಸನಮಿತ್ಯೇವ ಯಾತ್ರಾಂ ಸಂಪರಿಗೃಹ್ಯ ಚ|

12069066c ದ್ವೈಧೀಭಾವಸ್ತಥಾನ್ಯೇಷಾಂ ಸಂಶ್ರಯೋಽಥ ಪರಸ್ಯ ಚ||

ಯುಧಿಷ್ಠಿರ! ಆರುಗುಣಗಳು ಯಾವುವೆನ್ನುವುದನ್ನು ಕೇಳು: ಸಂಧಾನಾಸನ – ಸಮಾನಬಲವುಳ್ಳ ರಾಜರು ಶಕ್ತಿಗುಂದಿ ಸಂಧಿಮಾಡಿಕೊಂಡು ಕುಳಿತುಕೊಳ್ಳುವುದು, ಸಂಧಾಯಾಸನ – ಪ್ರಬಲ ಶತ್ರುವಿನೊಡನೆ ಹೋರಾಡಿ ಪರಾಜಿತನಾಗಿ ಶತ್ರು ಅಥವಾ ಮಿತ್ರನೊಡನೆ ಸೇರಿಕೊಂಡು ಕುಳಿತುಕೊಳ್ಳುವುದು, ವಿಗೃಹ್ಯಾಸನ – ಶತ್ರುವು ಆಕ್ರಮಣಿಸಿದ ನಂತರ ಅಶಕ್ತ ರಾಜನು ಕೋಟೆಯನ್ನು ಪ್ರವೇಶಿಸಿ ಆತ್ಮರಕ್ಷಣೆಯನ್ನು ಮಾಡಿಕೊಂಡು ಕುಳಿತುಕೊಳ್ಳುವುದು, ಯಾತ್ರಾಸಂಪರಿಗ್ರಹಾಸನ ಅಥವಾ ಪ್ರಸಂಗಾಸನ – ಶತ್ರುವಿನೊಡನೆ ಯುದ್ಧವನ್ನು ಪ್ರಾರಂಭಿಸಿ ನಂತರ ಅಶಕ್ತನಾಗಿ ಮಿತ್ರನಿಗಾಗಿ ಕಾದು ಕುಳಿತುಕೊಳ್ಳುವುದು, ದ್ವೈಧೀಭಾವ – ಇಬ್ಬರು ಪ್ರಬಲ ಶತ್ರುಗಳು ಇಬ್ಬರಿಗೂ ತಿಳಿಯದಂತೆ ಇಬ್ಬರಿಗೂ ಸಮನಾಗಿರುವರಂತೆ ನಟಿಸುತ್ತಾ ಕಪಟದಿಂದ ವ್ಯವಹರಿಸುತ್ತಿರುವುದು ಅಥವಾ ಶತ್ರುವಿನ ಸೇನೆಯನ್ನು ಬೇರ್ಪಡಿಸಿ ಮೂಲಬಲದೊಂದಿಗೆ ಸ್ನೇಹಮಾಡಿಕೊಂಡು ಶತ್ರುವಿನೊಡನೆ ಯುದ್ಧಮಾಡುವುದು, ಪರಸಂಶ್ರಯ – ಪ್ರಬಲ ಶತ್ರುವಿನೊಡನೆ ಸಂಧಿಮಾಡಿಕೊಂಡು ದುರ್ಬಲನೊಡನೆ ಯುದ್ಧಮಾಡುವುದು.

12069067a ತ್ರಿವರ್ಗಶ್ಚಾಪಿ ಯಃ ಪ್ರೋಕ್ತಸ್ತಮಿಹೈಕಮನಾಃ ಶೃಣು|

12069067c ಕ್ಷಯಃ ಸ್ಥಾನಂ ಚ ವೃದ್ಧಿಶ್ಚ ತ್ರಿವರ್ಗಮಪರಂ ತಥಾ||

12069068a ಧರ್ಮಶ್ಚಾರ್ಥಶ್ಚ ಕಾಮಶ್ಚ ಸೇವಿತವ್ಯೋಽಥ ಕಾಲತಃ|

12069068c ಧರ್ಮೇಣ ಹಿ ಮಹೀಪಾಲಶ್ಚಿರಂ ಪಾಲಯತೇ ಮಹೀಮ್||

ಯಾವುದಕ್ಕೆ ತ್ರಿವರ್ಗಗಳೆಂದು ಹೇಳುತ್ತಾರೆ ಎನ್ನುವುದನ್ನೂ ಏಕಾಗ್ರಚಿತ್ತನಾಗಿ ಕೇಳು. ಕ್ಷಯ, ಸ್ಥಾನ, ವೃದ್ಧಿ – ಇವು ತ್ರಿವರ್ಗಗಳು. ಧರ್ಮ, ಅರ್ಥ ಮತ್ತು ಕಾಮಗಳು ಪರಮತ್ರಿವರ್ಗಗಳು. ರಾಜನಾದವನು ಕಾಲಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಏಕೆಂದರೆ ಧರ್ಮದಿಂದ ಪಾಲಿಸಿದರೆ ಮಹೀಪಾಲನು ಹೆಚ್ಚುಕಾಲ ಮಹಿಯನ್ನು ಪಾಲಿಸಿಕೊಂಡಿರಬಹುದು.

12069069a ಅಸ್ಮಿನ್ನರ್ಥೇ ಚ ಯೌ ಶ್ಲೋಕೌ ಗೀತಾವಂಗಿರಸಾ ಸ್ವಯಮ್|

12069069c ಯಾದವೀಪುತ್ರ ಭದ್ರಂ ತೇ ಶ್ರೋತುಮರ್ಹಸಿ ತಾವಪಿ||

ಇದೇ ಅರ್ಥಕೊಡುವ ಈ ಎರಡು ಶ್ಲೋಕಗಳನ್ನು ಸ್ವಯಂ ಬೃಹಸ್ಪತಿಯೇ ಹಾಡಿದ್ದನು. ಯಾದವೀಪುತ್ರ! ನಿನಗೆ ಮಂಗಳವಾಗಲಿ. ಅದನ್ನು ನೀನೂ ಕೇಳಬೇಕು.

12069070a ಕೃತ್ವಾ ಸರ್ವಾಣಿ ಕಾರ್ಯಾಣಿ ಸಮ್ಯಕ್ಸಂಪಾಲ್ಯ ಮೇದಿನೀಮ್|

12069070c ಪಾಲಯಿತ್ವಾ ತಥಾ ಪೌರಾನ್ಪರತ್ರ ಸುಖಮೇಧತೇ||

“ಎಲ್ಲ ಕಾರ್ಯಗಳನ್ನೂ ಸರಿಯಾಗಿ ಪೂರೈಸಿ, ಮೇದಿನಿಯನ್ನು ಸರಿಯಾಗಿ ಆಳಿಕೊಂಡು ಪ್ರಜೆಗಳನ್ನು ಮಕ್ಕಳಂತೆ ಪರಿಪಾಲಿಸಿದ ರಾಜನಿಗೆ ಮರಣಾನಂತರ ಸುಖವು ದೊರೆಯುತ್ತದೆ.

12069071a ಕಿಂ ತಸ್ಯ ತಪಸಾ ರಾಜ್ಞಃ ಕಿಂ ಚ ತಸ್ಯಾಧ್ವರೈರಪಿ|

12069071c ಅಪಾಲಿತಾಃ ಪ್ರಜಾ ಯಸ್ಯ ಸರ್ವಾ ಧರ್ಮವಿನಾಕೃತಾಃ||

ಎಲ್ಲ ಧರ್ಮವನ್ನು ಅಲ್ಲಗಳೆದು ಪ್ರಜೆಗಳನ್ನು ಯಾರು ಪರಿಪಾಲಿಸುವುದಿಲ್ಲವೋ ಆ ರಾಜನಿಗೆ ತಪಸ್ಸೆಂದರೇನು? ಅಥವಾ ಯಜ್ಞಗಳೆಂದರೇನು?””

 

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಏಕೋನಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಅರವತ್ತೊಂಭತ್ತನೇ ಅಧ್ಯಾಯವು.

Image result for flowers against white background

[1] ದೇಶೇಷು ಎಂಬ ಪಾಠಾಂತರವಿದೆ (ಭಾರತದರ್ಶನ).

[2] ಮತ್ತ, ಉನ್ಮತ್ತ, ದಸ್ಯು, ತಸ್ಕರ, ವಂಚಕ, ಶಠ, ಲಂಪಟ, ಜೂಜುಕೋರ, ಸುಳ್ಳುಪತ್ರ ತಯಾರಿಸುವವನು ಮತ್ತು ಲಂಚಕೋರ- ಈ ಹತ್ತು ದಂಡನೀಯ ವ್ಯವಹಾರಗಳಲ್ಲಿರುವವರು.

[3] ನ್ಯಾಯ ನೀಡುವ ಅವಕಾಶವು ಬಂದೊದಗಿದಾಗ

[4] ಶ್ರೋತುಂ ಚೈವ ನ್ಯಸೇದ್ರಾಜಾ ಪ್ರಾಜ್ಞಾನ್ ಸರ್ವಾರ್ಥದರ್ಶಿನಃ| ಎಂಬ ಪಾಠಾಂತರವಿದೆ.

[5] ಇದಕ್ಕೆ ಮೊದಲು ಗೋರಖಪುರ ಸಂಪುಟದಲ್ಲಿ ತದಾಭಿಸಂಶ್ರಯೇದ್ದುರ್ಗಂ ಬುದ್ಧಿಮಾನ್ ಪೃಥಿವೀಪತಿಃ| ಎಂಬ ಶ್ಲೋಕಾರ್ಧವಿದೆ.

[6] ಪ್ರಗಂಡೀಃ ಎಂಬ ಪಾಠಾಂತರವಿದೆ.

[7] ಪ್ರಕಂಡಿಯ ಲಕ್ಷಣವನ್ನು ಹೀಗೆ ಹೇಳಿದ್ದಾರೆ: ಸಂಚಾರೋ ಯತ್ರಲೋಕಾನಾಂ ದೂರಾದೇವಾವಬುಧ್ಯತೇ| ಪ್ರಕಂಠೀ ಸಾ ಚ ವಿಜ್ಞೇಯಾ ಬಹಿಃಪ್ರಾಕಾರಸಂಜ್ಞಿತಾ|| ಜನರ ಸಂಚಾರವು ಬಹಳ ದೂರದಿಂದಲೇ ತಿಳಿಯಲ್ಪಡುವ ಸ್ಥಾನಕ್ಕೆ ಪ್ರಕಂಡೀ ಎಂದು ಹೆಸರು.ಅದಕ್ಕೆ ಬಹಿಃಪ್ರಾಕಾರವೆಂದೂ ಹೆಸರು.

[8] ಸಂಕಟದ್ವಾರಕಾಣಿ ಎಂಬ ಪಾಠಾಂತರವಿದೆ.

[9] ವಿಷವನ್ನು ಹೋಗಲಾಡಿಸುವವನು, ಗಾಯದ ಮೇಲೆ ಪಟ್ಟಿಯನ್ನು ಕಟ್ಟುವವನು, ರೋಗವನ್ನು ಹೋಗಲಾಡಿಸುವವನು ಮತ್ತು ಅಭಿಚಾರಿ ಕೃತ್ಯಗಳನ್ನು ನಿವಾರಿಸುವವನು.

[10] ಶತ್ರುರಾಜನ ವಂಶೀಯರಿಗೇ ರಾಜ್ಯದಲ್ಲಿ ಪಟ್ಟಗಟ್ಟಿ.

Comments are closed.