ಶಾಂತಿ ಪರ್ವ: ರಾಜಧರ್ಮ ಪರ್ವ

೬೮

12068001 ಯುಧಿಷ್ಠಿರ ಉವಾಚ

12068001a ಕಿಮಾಹುರ್ದೈವತಂ ವಿಪ್ರಾ ರಾಜಾನಂ ಭರತರ್ಷಭ|

12068001c ಮನುಷ್ಯಾಣಾಮಧಿಪತಿಂ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ಮನುಷ್ಯರಿಗೆ ಅಧಿಪತಿಯಾದ ರಾಜನನ್ನು ವಿಪ್ರರು ದೇವನೆಂದು ಏಕೆ ಹೇಳುತ್ತಾರೆ? ಅದನ್ನು ನನಗೆ ಹೇಳು.”

12068002 ಭೀಷ್ಮ ಉವಾಚ

12068002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12068002c ಬೃಹಸ್ಪತಿಂ ವಸುಮನಾ ಯಥಾ ಪಪ್ರಚ್ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ನೀನು ಕೇಳಿದುದಕ್ಕೆ ಸಂಬಂಧಿಸಿದಂತೆ ಬೃಹಸ್ಪತಿ-ವಸುಮನರ ಈ ಪುರಾತನ ಐತಿಹಾಸಿಕ ಸಂವಾದವನ್ನು ಉದಾಹರಿಸುತ್ತಾರೆ.

12068003a ರಾಜಾ ವಸುಮನಾ ನಾಮ ಕೌಸಲ್ಯೋ ಧೀಮತಾಂ ವರಃ|

12068003c ಮಹರ್ಷಿಂ ಪರಿಪಪ್ರಚ್ಚ ಕೃತಪ್ರಜ್ಞೋ ಬೃಹಸ್ಪತಿಮ್||

ಧೀಮತರಲ್ಲಿ ಶ್ರೇಷ್ಠ ವಸುಮನಾ ಎಂಬ ಹೆಸರಿನ ಕೋಸಲದ ರಾಜನು ಕೃತಪ್ರಜ್ಞನಾದ ಮಹರ್ಷಿ ಬೃಹಸ್ಪತಿಯಲ್ಲಿ ಪ್ರಶ್ನಿಸಿದನು.

12068004a ಸರ್ವಂ ವೈನಯಿಕಂ ಕೃತ್ವಾ ವಿನಯಜ್ಞೋ ಬೃಹಸ್ಪತೇಃ|

12068004c ದಕ್ಷಿಣಾನಂತರೋ ಭೂತ್ವಾ ಪ್ರಣಮ್ಯ ವಿಧಿಪೂರ್ವಕಮ್||

12068005a ವಿಧಿಂ ಪಪ್ರಚ್ಚ ರಾಜ್ಯಸ್ಯ ಸರ್ವಭೂತಹಿತೇ ರತಃ|

12068005c ಪ್ರಜಾನಾಂ ಹಿತಮನ್ವಿಚ್ಚನ್ಧರ್ಮಮೂಲಂ ವಿಶಾಂ ಪತೇ||

ವಿಶಾಂಪತೇ! ಯಾರಲ್ಲಿ ಹೇಗೆ ವಿನಯದಿಂದ ನಡೆದುಕೊಳ್ಳಬೇಕೆಂದು ತಿಳಿದುಕೊಂಡಿದ್ದ ಮತ್ತು ಸರ್ವಭೂತಗಳ ಹಿತದಲ್ಲಿಯೇ ನಿರತನಾಗಿದ್ದ ಅವನು ಬೃಹಸ್ಪತಿಯನ್ನು ಸರ್ವ ವಿನಯದಿಂದ ಸ್ವಾಗತಿಸಿ, ಸತ್ಕರಿಸಿ, ವಿಧಿಪೂರ್ವಕವಾಗಿ ನಮಸ್ಕರಿಸಿ, ಪ್ರಜೆಗಳ ಹಿತವನ್ನು ಬಯಸಿ ಧರ್ಮಮೂಲದ ವಿಧಿಯನ್ನು ಕೇಳಿದನು.

12068006a ಕೇನ ಭೂತಾನಿ ವರ್ಧಂತೇ ಕ್ಷಯಂ ಗಚ್ಚಂತಿ ಕೇನ ಚ|

12068006c ಕಮರ್ಚಂತೋ ಮಹಾಪ್ರಾಜ್ಞ ಸುಖಮತ್ಯಂತಮಾಪ್ನುಯುಃ||

“ಮಹಾಪ್ರಾಜ್ಞ! ಯಾವುದರಿಂದ ಪ್ರಜೆಗಳು ವರ್ಧಿಸುತ್ತಾರೆ? ಯಾವುದರಿಂದ ಪ್ರಜೆಗಳು ಕ್ಷಯವನ್ನು ಹೊಂದುತ್ತಾರೆ? ಯಾರನ್ನು ಅರ್ಚಿಸಿ ಅವರು ಅತ್ಯಂತ ಸುಖವನ್ನು ಪಡೆಯುತ್ತಾರೆ?”

12068007a ಇತಿ ಪೃಷ್ಟೋ ಮಹಾರಾಜ್ಞಾ ಕೌಸಲ್ಯೇನಾಮಿತೌಜಸಾ|

12068007c ರಾಜಸತ್ಕಾರಮವ್ಯಗ್ರಃ ಶಶಂಸಾಸ್ಮೈ ಬೃಹಸ್ಪತಿಃ||

ಮಹಾರಾಜ ಅಮಿತೌಜಸ ಕೌಸಲ್ಯನು ಹೀಗೆ ಕೇಳಲು ಅವ್ಯಗ್ರ ಬೃಹಸ್ಪತಿಯು ರಾಜಸತ್ಕಾರವನ್ನು ಪ್ರಶಂಸಿಸುತ್ತಾ ಹೇಳಿದನು:

12068008a ರಾಜಮೂಲೋ ಮಹಾರಾಜ ಧರ್ಮೋ ಲೋಕಸ್ಯ ಲಕ್ಷ್ಯತೇ|

12068008c ಪ್ರಜಾ ರಾಜಭಯಾದೇವ ನ ಖಾದಂತಿ ಪರಸ್ಪರಮ್||

“ಮಹಾರಾಜ! ಲೋಕದ ಧರ್ಮಕ್ಕೆ ರಾಜನೇ ಮೂಲವೆಂದು ಕಂಡುಬರುತ್ತದೆ. ರಾಜನ ಭಯದಿಂದಲೇ ಪ್ರಜೆಗಳು ಪರಸ್ಪರರನ್ನು ತಿಂದುಹಾಕುವುದಿಲ್ಲ.

12068009a ರಾಜಾ ಹ್ಯೇವಾಖಿಲಂ ಲೋಕಂ ಸಮುದೀರ್ಣಂ ಸಮುತ್ಸುಕಮ್|

12068009c ಪ್ರಸಾದಯತಿ ಧರ್ಮೇಣ ಪ್ರಸಾದ್ಯ ಚ ವಿರಾಜತೇ||

ಮರ್ಯಾದೆಯನ್ನು ಮೀರಿ ನಡೆಯುವ ಮತ್ತು ಅನುಚಿತ ಭೋಗಗಳಲ್ಲಿಯೇ ಆಸಕ್ತರಾಗಿರುವ ಅಖಿಲ ಲೋಕವನ್ನು ರಾಜನು ಧರ್ಮದಿಂದ ಪ್ರಸನ್ನಗೊಳಿಸುತ್ತಾನೆ. ಅದರ ಪ್ರಸಾದವಾಗಿ ತಾನೂ ವಿರಾಜಿಸುತ್ತಾನೆ.

12068010a ಯಥಾ ಹ್ಯನುದಯೇ ರಾಜನ್ಭೂತಾನಿ ಶಶಿಸೂರ್ಯಯೋಃ|

12068010c ಅಂಧೇ ತಮಸಿ ಮಜ್ಜೇಯುರಪಶ್ಯಂತಃ ಪರಸ್ಪರಮ್||

12068011a ಯಥಾ ಹ್ಯನುದಕೇ ಮತ್ಸ್ಯಾ ನಿರಾಕ್ರಂದೇ ವಿಹಂಗಮಾಃ|

12068011c ವಿಹರೇಯುರ್ಯಥಾಕಾಮಮಭಿಸೃತ್ಯ ಪುನಃ ಪುನಃ||

12068012a ವಿಮಥ್ಯಾತಿಕ್ರಮೇರಂಶ್ಚ ವಿಷಹ್ಯಾಪಿ ಪರಸ್ಪರಮ್|

12068012c ಅಭಾವಮಚಿರೇಣೈವ ಗಚ್ಚೇಯುರ್ನಾತ್ರ ಸಂಶಯಃ||

12068013a ಏವಮೇವ ವಿನಾ ರಾಜ್ಞಾ ವಿನಶ್ಯೇಯುರಿಮಾಃ ಪ್ರಜಾಃ|

12068013c ಅಂಧೇ ತಮಸಿ ಮಜ್ಜೇಯುರಗೋಪಾಃ ಪಶವೋ ಯಥಾ||

ರಾಜನ್! ಶಶಿ-ಸೂರ್ಯರು ಉದಯಿಸದೇ ಗಾಢಾಂಧಕಾರದಲ್ಲಿ ಮುಳುಗಿದ ಭೂತಗಳು ಪರಸ್ಪರರನ್ನು ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ, ನೀರಿಲ್ಲದ ಕೊಳದಲ್ಲಿ ಮೀನುಗಳು ಹೇಗೋ ಹಾಗೆ, ಹಿಂಸಮೃಗಗಳ ಗರ್ಜನೆಯಿಲ್ಲದ ವನದಲ್ಲಿ ಪಕ್ಷಿಗಳು ಯಥೇಚ್ಛರಾಗಿ ವಿಹರಿಸುತ್ತಾ ಪುನಃ ಪುನಃ ಹಿಂಸಿಸುತ್ತಾ ಪರಸ್ಪರರ ಪ್ರದೇಶಗಳನ್ನು ಅತಿಕ್ರಮಿಸುತ್ತಾ ಕ್ಷಣಮಾತ್ರದಲ್ಲಿ ಹೇಗೆ ನಿಸ್ಸಂಶಯವಾಗಿ ನಾಶಹೊಂದುವವೋ ಹಾಗೆ, ರಾಜನಿಲ್ಲದೆಯೇ ಈ ಪ್ರಜೆಗಳು ರಕ್ಷಕರಿಲ್ಲದ ಪಶುಗಳಂತೆ ಗಾಢಾಂಧಕಾರದಲ್ಲಿ ಮುಳುಗಿ ವಿನಾಶಹೊಂದುತ್ತಾರೆ.

12068014a ಹರೇಯುರ್ಬಲವಂತೋ ಹಿ ದುರ್ಬಲಾನಾಂ ಪರಿಗ್ರಹಾನ್|

12068014c ಹನ್ಯುರ್ವ್ಯಾಯಚ್ಚಮಾನಾಂಶ್ಚ ಯದಿ ರಾಜಾ ನ ಪಾಲಯೇತ್||

ರಾಜನು ಒಂದುವೇಳೆ ಪಾಲಿಸದೇ ಇದ್ದರೆ ಬಲವಂತರು ದುರ್ಬಲರ ಸ್ವತ್ತುಗಳನ್ನು ಅಪಹರಿಸುವರು. ಬಯಸಿದರೆ ಸಂಹರಿಸಲೂ ಬಹುದು.

12068015a ಯಾನಂ ವಸ್ತ್ರಮಲಂಕಾರಾನ್ರತ್ನಾನಿ ವಿವಿಧಾನಿ ಚ|

12068015c ಹರೇಯುಃ ಸಹಸಾ ಪಾಪಾ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದರೆ ಪಾಪಿಗಳು ತಕ್ಷಣವೇ ವಾಹನ, ವಸ್ತ್ರ, ಅಲಂಕಾರಗಳು, ಮತ್ತು ವಿವಿಧ ರತ್ನಗಳನ್ನು ಅಪಹರಿಸುತ್ತಾರೆ.

12068016a ಮಮೇದಮಿತಿ ಲೋಕೇಽಸ್ಮಿನ್ನ ಭವೇತ್ಸಂಪರಿಗ್ರಹಃ|

[1]12068016c ವಿಶ್ವಲೋಪಃ ಪ್ರವರ್ತೇತ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಈ ಲೋಕದಲ್ಲಿ ನನ್ನದು ಎನ್ನುವುದರ ಸಂಗ್ರಹವೇ ಸಾಧ್ಯವಾಗುತ್ತಿರಲಿಲ್ಲ. ವಿಶ್ವದ ಎಲ್ಲವುಗಳ ಲೋಪವಾಗುತ್ತಿತ್ತು.

12068017a ಮಾತರಂ ಪಿತರಂ ವೃದ್ಧಮಾಚಾರ್ಯಮತಿಥಿಂ ಗುರುಮ್|

12068017c ಕ್ಲಿಶ್ನೀಯುರಪಿ ಹಿಂಸ್ಯುರ್ವಾ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವೃದ್ಧ ತಂದೆ-ತಾಯಿಗಳನ್ನು, ಆಚಾರ್ಯನನ್ನು, ಅತಿಥಿಯನ್ನು, ಮತ್ತು ಹಿರಿಯರನ್ನು ಹಿಂಸಿಸುತ್ತಿದ್ದರು ಅಥವಾ ಕಷ್ಟಕ್ಕೊಳಪಡಿಸುತ್ತಿದ್ದರು.

12068018a ಪತೇದ್ಬಹುವಿಧಂ ಶಸ್ತ್ರಂ ಬಹುಧಾ ಧರ್ಮಚಾರಿಷು|

12068018c ಅಧರ್ಮಃ ಪ್ರಗೃಹೀತಃ ಸ್ಯಾದ್ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಧರ್ಮಚಾರಿಗಳ ಮೇಲೆ ಬಹುವಿಧದ ಅನೇಕ ಶಸ್ತ್ರಗಳು ಬೀಳುತ್ತಿದ್ದವು. ಅಧರ್ಮವೇ ವಿಶ್ವವನ್ನು ಆವರಿಸಿಬಿಡುತ್ತಿತ್ತು.

12068019a ವಧಬಂಧಪರಿಕ್ಲೇಶೋ ನಿತ್ಯಮರ್ಥವತಾಂ ಭವೇತ್|

12068019c ಮಮತ್ವಂ ಚ ನ ವಿಂದೇಯುರ್ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಧನವಂತರ ವಧೆ, ಬಂಧನ ಮತ್ತು ಹಿಂಸೆಗಳು ನಿತ್ಯವೂ ನಡೆಯುತ್ತಿದ್ದವು. ಯಾರೇ ಆಗಲೀ ಯಾವುದನ್ನೂ ತನ್ನದು ಎಂದು ಹೇಳಿಕೊಳ್ಳಲಾಗುತ್ತಿರಲಿಲ್ಲ.

12068020a ಅಂತಶ್ಚಾಕಾಶಮೇವ ಸ್ಯಾಲ್ಲೋಕೋಽಯಂ ದಸ್ಯುಸಾದ್ಭವೇತ್|

12068020c ಪತೇಚ್ಚ ನರಕಂ ಘೋರಂ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಪ್ರಜೆಗಳು ಅಕಾಲದಲ್ಲಿಯೇ ಮೃತ್ಯುವಶರಾಗುತ್ತಿದ್ದರು. ಲೋಕವೆಲ್ಲವೂ ಕಳ್ಳಕಾಕರ ವಶವಾಗಿಬಿಡುತ್ತಿತ್ತು. ಎಲ್ಲರೂ ಘೋರ ನರಕದಲ್ಲಿ ಬೀಳುತ್ತಿದ್ದರು.

12068021a ನ ಯೋನಿಪೋಷೋ[2] ವರ್ತೇತ ನ ಕೃಷಿರ್ನ ವಣಿಕ್ಪಥಃ|

12068021c ಮಜ್ಜೇದ್ಧರ್ಮಸ್ತ್ರಯೀ ನ ಸ್ಯಾದ್ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವಿವಾಹವೆನ್ನುವುದು ಇರುತ್ತಿರಲಿಲ್ಲ. ಕೃಷಿಯಾಗಲೀ ವ್ಯಾಪಾರಗಳಾಗಲೀ ಇರುತ್ತಿರಲಿಲ್ಲ. ಧರ್ಮವು ಮುಳುಗಿಹೋಗಿ ಮೂರು ವೇದಗಳೂ ಇರುತ್ತಿರಲಿಲ್ಲ.

12068022a ನ ಯಜ್ಞಾಃ ಸಂಪ್ರವರ್ತೇರನ್ವಿಧಿವತ್ಸ್ವಾಪ್ತದಕ್ಷಿಣಾಃ|

12068022c ನ ವಿವಾಹಾಃ ಸಮಾಜಾ ವಾ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಆಪ್ತದಕ್ಷಿಣಾಯುಕ್ತ ಯಜ್ಞಗಳು ವಿಧಿವತ್ತಾಗಿ ನಡೆಯುತ್ತಿರಲಿಲ್ಲ. ವಿವಾಹಗಳಾಗುತ್ತಿರಲಿಲ್ಲ. ಸಾಮಾಜಿಕ ಕಾರ್ಯಕ್ರಮಗಳೂ ನಡೆಯುತ್ತಿರಲಿಲ್ಲ.

12068023a ನ ವೃಷಾಃ ಸಂಪ್ರವರ್ತೇರನ್ನ ಮಥ್ಯೇರಂಶ್ಚ ಗರ್ಗರಾಃ|

12068023c ಘೋಷಾಃ ಪ್ರಣಾಶಂ ಗಚ್ಚೇಯುರ್ಯದಿ ರಾಜಾ ನ ಪಾಲಯೇತ್||

ಒಂದು ವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಹೋರಿಗಳು ಹಸುಗಳಲ್ಲಿ ಗರ್ಭದಾನ ಮಾಡುತ್ತಿರಲಿಲ್ಲ. ಮೊಸರು ತುಂಬಿದ ಪಾತ್ರೆಗಳನ್ನು ಕಡೆಯುತ್ತಿರಲಿಲ್ಲ. ಗೋಶಾಲೆಗಳೆಲ್ಲವೂ ನಾಶಹೊಂದುತ್ತಿದ್ದವು.

12068024a ತ್ರಸ್ತಮುದ್ವಿಗ್ನಹೃದಯಂ ಹಾಹಾಭೂತಮಚೇತನಮ್|

12068024c ಕ್ಷಣೇನ ವಿನಶೇತ್ಸರ್ವಂ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಜಗತ್ತು ಭಯಭೀತವಾಗುತ್ತಿತ್ತು. ಉದ್ವಿಗ್ನಮನಸ್ಸಿನಿಂದ ಕೂಡಿರುತ್ತಿತ್ತು. ಹಾಹಾಕಾರಗಳೇ ಕೇಳಿಬರುತ್ತಿದ್ದವು. ಕ್ಷಣಮಾತ್ರದಲ್ಲಿ ಸರ್ವವಿನಾಶವಾಗುತ್ತಿತ್ತು.

12068025a ನ ಸಂವತ್ಸರಸತ್ರಾಣಿ ತಿಷ್ಠೇಯುರಕುತೋಭಯಾಃ|

12068025c ವಿಧಿವದ್ದಕ್ಷಿಣಾವಂತಿ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ಭಯದಿಂದಾಗಿ ವಿವಿಧ ದಕ್ಷಿಣಾಯುಕ್ತ ಸಂವತ್ಸರ ಸತ್ರಗಳು ನಿಂತುಹೋಗುತ್ತಿದ್ದವು.

12068026a ಬ್ರಾಹ್ಮಣಾಶ್ಚತುರೋ ವೇದಾನ್ನಾಧೀಯೇರಂಸ್ತಪಸ್ವಿನಃ|

12068026c ವಿದ್ಯಾಸ್ನಾತಾಸ್ತಪಃಸ್ನಾತಾ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವಿದ್ಯಾಭ್ಯಾಸಮಾಡಿ ಸ್ನಾತಕರಾಗಿ ಬ್ರಹ್ಮಚರ್ಯವನ್ನು ಪಾಲಿಸುವ ತಪಸ್ವಿ ಬ್ರಾಹ್ಮಣರು ನಾಲ್ಕು ವೇದಗಳ ಅಧ್ಯಯನ ಮಾಡುತ್ತಿರಲಿಲ್ಲ.

12068027a ಹಸ್ತೋ ಹಸ್ತಂ ಸ ಮುಷ್ಣೀಯಾದ್ಭಿದ್ಯೇರನ್ಸರ್ವಸೇತವಃ|

12068027c ಭಯಾರ್ತಂ ವಿದ್ರವೇತ್ಸರ್ವಂ ಯದಿ ರಾಜಾ ನ ಪಾಲಯೇತ್||

ಒಂದುವೇಳೆ ರಾಜನು ಪಾಲನೇ ಮಾಡದೇ ಇದ್ದಿದ್ದರೆ ಕೈಯಲ್ಲಿರುವುದೇ ಕಳ್ಳತನವಾಗುತ್ತಿತ್ತು. ಸರ್ವಸೇತುವೆಗಳೂ ತುಂಡಾಗುತ್ತಿದ್ದವು. ಎಲ್ಲರೂ ಭಯಾರ್ತರಾಗಿ ಓಡುತ್ತಿದ್ದರು.

12068028a ನ ಲಭೇದ್ಧರ್ಮಸಂಶ್ಲೇಷಂ ಹತವಿಪ್ರಹತೋ ಜನಃ|

12068028c ಕರ್ತಾ ಸ್ವೇಚ್ಚೇಂದ್ರಿಯೋ[3] ಗಚ್ಚೇದ್ಯದಿ ರಾಜಾ ನ ಪಾಲಯೇತ್||

ಒಂದು ವೇಳೆ ರಾಜನು ಪಾಲಿಸದೇ ಇದ್ದಿದ್ದರೆ ವಿಪ್ರರು ಹತರಾಗಿ ಮತ್ತು ಜನರು ಹತರಾಗಿ ಲೋಕವು ಧರ್ಮದ ಸಂಬಂಧವನ್ನೇ ಕಳೆದುಕೊಳ್ಳುತ್ತಿತ್ತು. ಜನರು ಸ್ವ-ಇಚ್ಛೆಯಿಂದ ಕೆಲಸ ಮಾಡುತ್ತಿದ್ದರು.

12068029a ಅನಯಾಃ ಸಂಪ್ರವರ್ತೇರನ್ಭವೇದ್ವೈ ವರ್ಣಸಂಕರಃ|

12068029c ದುರ್ಭಿಕ್ಷಮಾವಿಶೇದ್ರಾಷ್ಟ್ರಂ ಯದಿ ರಾಜಾ ನ ಪಾಲಯೇತ್||

ರಾಜನೇನಾದರೂ ಧರ್ಮದಿಂದ ರಾಜ್ಯವನ್ನು ಪರಿಪಾಲಿಸದಿದ್ದರೆ ಅನ್ಯಾಯ-ಅತ್ಯಾಚಾರಗಳು ಸರ್ವತ್ರ ವ್ಯಾಪ್ತವಾಗುತ್ತಿದ್ದವು. ವರ್ಣಸಂಕರವುಂಟಾಗಿ ಅದರಿಂದ ರಾಷ್ಟ್ರದಲ್ಲಿ ದುರ್ಭಿಕ್ಷವಾಗುತ್ತಿತ್ತು.

12068030a ವಿವೃತ್ಯ ಹಿ ಯಥಾಕಾಮಂ ಗೃಹದ್ವಾರಾಣಿ ಶೇರತೇ|

12068030c ಮನುಷ್ಯಾ ರಕ್ಷಿತಾ ರಾಜ್ಞಾ ಸಮಂತಾದಕುತೋಭಯಾಃ||

ರಾಜನಿಂದ ರಕ್ಷಿತರಾದ ಮನುಷ್ಯರು ಸುತ್ತಲೂ ಯಾವುದೇ ರೀತಿಯ ಭಯವೂ ಇಲ್ಲದೇ ಮನೆಯ ಬಾಗಿಲುಗಳನ್ನು ತೆರೆದುಕೊಂಡೇ ನಿರಾತಂಕರಾಗಿ ಮಲಗುತ್ತಾರೆ.

12068031a ನಾಕ್ರುಷ್ಟಂ ಸಹತೇ ಕಶ್ಚಿತ್ಕುತೋ ಹಸ್ತಸ್ಯ ಲಂಘನಮ್|

12068031c ಯದಿ ರಾಜಾ ಮನುಷ್ಯೇಷು ತ್ರಾತಾ ಭವತಿ ಧಾರ್ಮಿಕಃ||

ಒಂದು ವೇಳೆ ಧಾರ್ಮಿಕ ರಾಜನು ಮನುಷ್ಯರ ಪರಿಪಾಲನೆ ಮಾಡದೇ ಇದ್ದರೆ ಒಬ್ಬರು ನಿಂದಿಸುವುದನ್ನು ಮತ್ತೊಬ್ಬರು ಸಹಿಸಿಕೊಳ್ಳುತ್ತಿರಲಿಲ್ಲ. ಇನ್ನು ಪರಸ್ಪರರ ಪ್ರಹಾರಗಳನ್ನು ಹೇಗೆ ಸಹಿಸಿಕೊಳ್ಳುತ್ತಿದ್ದರು?

12068032a ಸ್ತ್ರಿಯಶ್ಚಾಪುರುಷಾ ಮಾರ್ಗಂ ಸರ್ವಾಲಂಕಾರಭೂಷಿತಾಃ|

12068032c ನಿರ್ಭಯಾಃ ಪ್ರತಿಪದ್ಯಂತೇ ಯದಾ ರಕ್ಷತಿ ಭೂಮಿಪಃ||

ರಾಜನ ರಕ್ಷಣೆಯಿದ್ದರೆ ಸ್ತ್ರೀಯರು ಸರ್ವಾಲಂಕರ ಭೂಷಿತೆಯರಾಗಿ, ಜೊತೆಗೆ ಪುರುಷರಿಲ್ಲದಿದ್ದರೂ, ನಿರ್ಭಯರಾಗಿ ರಸ್ತೆಗಳಲ್ಲಿ ನಡೆಯುತ್ತಾರೆ.

12068033a ಧರ್ಮಮೇವ ಪ್ರಪದ್ಯಂತೇ ನ ಹಿಂಸಂತಿ ಪರಸ್ಪರಮ್|

12068033c ಅನುಗೃಹ್ಣಂತಿ ಚಾನ್ಯೋನ್ಯಂ ಯದಾ ರಕ್ಷತಿ ಭೂಮಿಪಃ||

ರಾಜನ ರಕ್ಷಣೆಯಿದ್ದರೆ ಜನರು ಧರ್ಮವನ್ನೇ ಅನುಸರಿಸುತ್ತಾರೆ. ಪರಸ್ಪರರನ್ನು ಹಿಂಸಿಸುವುದಿಲ್ಲ. ಅನ್ಯೋನ್ಯರನ್ನು ಅನುಗ್ರಹಿಸುತ್ತಾರೆ.

12068034a ಯಜಂತೇ ಚ ತ್ರಯೋ ವರ್ಣಾ ಮಹಾಯಜ್ಞೈಃ ಪೃಥಗ್ವಿಧೈಃ|

12068034c ಯುಕ್ತಾಶ್ಚಾಧೀಯತೇ ಶಾಸ್ತ್ರಂ ಯದಾ ರಕ್ಷತಿ ಭೂಮಿಪಃ||

ರಾಜನ ರಕ್ಷಣೆಯಿದ್ದರೆ ಮೂರೂ ವರ್ಣದವರೂ ಪ್ರತ್ಯೇಕ ವಿಧಗಳ ಮಹಾಯಜ್ಞಗಳನ್ನು ಯಾಜಿಸುತ್ತಾರೆ. ಏಕಾಗ್ರರಾಗಿ ಶಾಸ್ತ್ರಗಳ ಅಧ್ಯಯನಗಳನ್ನೂ ಮಾಡುತ್ತಾರೆ.

12068035a ವಾರ್ತಾಮೂಲೋ ಹ್ಯಯಂ ಲೋಕಸ್ತ್ರಯ್ಯಾ ವೈ ಧಾರ್ಯತೇ ಸದಾ|

12068035c ತತ್ಸರ್ವಂ ವರ್ತತೇ ಸಮ್ಯಗ್ಯದಾ ರಕ್ಷತಿ ಭೂಮಿಪಃ||

ರಾಜನ ರಕ್ಷಣೆಯಿದ್ದರೆ ಈ ಮೂರೂ ಲೋಕಗಳ ಮೂಲಸ್ಥಂಭಗಳೆನಿಸಿರುವ ಕೃಷಿ-ವಾಣಿಜ್ಯ-ಗೋರಕ್ಷಣೆಗಳೇ ಮೊದಲಾದ ಉದ್ಯೋಗಗಳೂ, ವೇದ ಧರ್ಮಗಳೂ ಸರಿಯಾಗಿ ನಡೆಯುತ್ತವೆ.

12068036a ಯದಾ ರಾಜಾ ಧುರಂ ಶ್ರೇಷ್ಠಾಮಾದಾಯ ವಹತಿ ಪ್ರಜಾಃ|

12068036c ಮಹತಾ ಬಲಯೋಗೇನ ತದಾ ಲೋಕಃ ಪ್ರಸೀದತಿ||

ಯಾವಾಗ ರಾಜನು ಮಹಾಸೇನೆಯಿಂದ ಕೂಡಿದವನಾಗಿ ಪ್ರಜೆಗಳ ಶ್ರೇಷ್ಠ ಭಾರವನ್ನು ವಹಿಸಿಕೊಳ್ಳುತ್ತಾನೋ ಆಗ ಲೋಕವು ಪ್ರಸನ್ನವಾಗುತ್ತದೆ.

12068037a ಯಸ್ಯಾಭಾವೇ ಚ ಭೂತಾನಾಮಭಾವಃ ಸ್ಯಾತ್ಸಮಂತತಃ|

12068037c ಭಾವೇ ಚ ಭಾವೋ ನಿತ್ಯಃ ಸ್ಯಾತ್ಕಸ್ತಂ ನ ಪ್ರತಿಪೂಜಯೇತ್||

ಯಾರ ಇಲ್ಲದಿರುವಿಕೆಯಿಂದ ಎಲ್ಲೆಲ್ಲಿಯೂ ಭೂತಗಳ ವಿನಾಶವಾಗುತ್ತದೆಯೋ ಮತ್ತು ಯಾರ ಇರುವಿಕೆಯಿಂದ ಎಲ್ಲವೂ ಉಳಿದುಕೊಳ್ಳುತ್ತವೆಯೋ ಅಂಥಹ ರಾಜನನ್ನು ಯಾರುತಾನೇ ಪೂಜಿಸುವುದಿಲ್ಲ?

12068038a ತಸ್ಯ ಯೋ ವಹತೇ ಭಾರಂ ಸರ್ವಲೋಕಸುಖಾವಹಮ್|

12068038c ತಿಷ್ಠೇತ್ಪ್ರಿಯಹಿತೇ ರಾಜ್ಞ ಉಭೌ ಲೋಕೌ ಹಿ ಯೋ ಜಯೇತ್||

ಸರ್ವಲೋಕಗಳಿಗೂ ಹಿತವನ್ನುಂಟುಮಾಡುವ ಈ ಭಾರವನ್ನು ಯಾರು ಹೊರುತ್ತಾನೋ ಮತ್ತು ಪ್ರಜೆಗಳ ಪ್ರೀತಿ-ಹಿತಗಳಲ್ಲಿಯೇ ನಿರತನಾಗಿರುತ್ತಾನೋ ಅವನು ಇಹ-ಪರಗಳ ಎರಡೂ ಲೋಕಗಳನ್ನೂ ಜಯಿಸುತ್ತಾನೆ.

12068039a ಯಸ್ತಸ್ಯ ಪುರುಷಃ ಪಾಪಂ ಮನಸಾಪ್ಯನುಚಿಂತಯೇತ್|

12068039c ಅಸಂಶಯಮಿಹ ಕ್ಲಿಷ್ಟಃ ಪ್ರೇತ್ಯಾಪಿ ನರಕಂ ಪತೇತ್||

ಅಂಥಹ ಪುರುಷನ ಕುರಿತು ಮನಸ್ಸಿನಲ್ಲಿ ಕೆಟ್ಟದ್ದನ್ನು ಯೋಚಿಸಿದವನೂ ಕೂಡ ಈ ಲೋಕದಲ್ಲಿ ಕಷ್ಟವನ್ನು ಹೊಂದುತ್ತಾನೆ ಮತ್ತು ಪರದಲ್ಲಿ ನರಕಕ್ಕೆ ಬೀಳುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12068040a ನ ಹಿ ಜಾತ್ವವಮಂತವ್ಯೋ ಮನುಷ್ಯ ಇತಿ ಭೂಮಿಪಃ|

12068040c ಮಹತೀ ದೇವತಾ ಹ್ಯೇಷಾ ನರರೂಪೇಣ ತಿಷ್ಠತಿ||

ಅವನೂ ಮನುಷ್ಯನೇ ಎಂದು ತಿಳಿದು ರಾಜನನ್ನು ಅವಹೇಳನ ಮಾಡಬಾರದು. ಏಕೆಂದರೆ ಅವನು ನರರೂಪದ ಮಹದೇವತೆಯೇ ಆಗಿರುತ್ತಾನೆ.

12068041a ಕುರುತೇ ಪಂಚ ರೂಪಾಣಿ ಕಾಲಯುಕ್ತಾನಿ ಯಃ ಸದಾ|

12068041c ಭವತ್ಯಗ್ನಿಸ್ತಥಾದಿತ್ಯೋ ಮೃತ್ಯುರ್ವೈಶ್ರವಣೋ ಯಮಃ||

ರಾಜನು ಸದಾ ಕಾಲಕ್ಕೆ ತಕ್ಕಂತೆ ಐದು ರೂಪಗಳನ್ನು ಧರಿಸುತ್ತಾನೆ. ಅವನು ಅಗ್ನಿಯಾಗುತ್ತಾನೆ, ಆದಿತ್ಯನಾಗುತ್ತಾನೆ, ಮೃತ್ಯುವಾಗುತ್ತಾನೆ, ವೈಶ್ರವಣ ಕುಬೇರನಾಗುತ್ತಾನೆ ಮತ್ತು ಯಮಧರ್ಮನೂ ಆಗುತ್ತಾನೆ.

12068042a ಯದಾ ಹ್ಯಾಸೀದತಃ ಪಾಪಾನ್ದಹತ್ಯುಗ್ರೇಣ ತೇಜಸಾ|

12068042c ಮಿಥ್ಯೋಪಚರಿತೋ ರಾಜಾ ತದಾ ಭವತಿ ಪಾವಕಃ||

ಮಿಥ್ಯಾವ್ಯವಹಾರಗಳಿಂದ ವಂಚಿತನಾದ ರಾಜನು ತನ್ನ ಬಳಿಸಾರುವ ಪಾಪಿಗಳನ್ನು ಉಗ್ರ ತೇಜಸ್ಸಿನಿಂದ ದಹಿಸುತ್ತಾನೆ. ಆಗ ಅವನು ಅಗ್ನಿಯಾಗುತ್ತಾನೆ.

12068043a ಯದಾ ಪಶ್ಯತಿ ಚಾರೇಣ ಸರ್ವಭೂತಾನಿ ಭೂಮಿಪಃ|

12068043c ಕ್ಷೇಮಂ ಚ ಕೃತ್ವಾ ವ್ರಜತಿ ತದಾ ಭವತಿ ಭಾಸ್ಕರಃ||

ಚಾರರಿಂದ ಎಲ್ಲವುಗಳ ಕುರಿತು ತಿಳಿದುಕೊಂಡು ಅವುಗಳ ಕ್ಷೇಮವನ್ನು ನೋಡಿಕೊಳ್ಳುವಾಗ ರಾಜನು ಭಾಸ್ಕರನಾಗುತ್ತಾನೆ.

12068044a ಅಶುಚೀಂಶ್ಚ ಯದಾ ಕ್ರುದ್ಧಃ ಕ್ಷಿಣೋತಿ ಶತಶೋ ನರಾನ್|

12068044c ಸಪುತ್ರಪೌತ್ರಾನ್ ಸಾಮಾತ್ಯಾಂಸ್ತದಾ ಭವತಿ ಸೋಽಂತಕಃ||

ಪುತ್ರ-ಪೌತ್ರ-ಅಮಾತ್ಯರೊಂದಿಗೆ ಅವನು ನೂರಾರು ಕ್ಷುದ್ರ ಅಶುಚಿ ಜನರನ್ನು ನಾಶಗೊಳಿಸುವಾಗ ಅವನು ಅಂತಕನಾಗುತ್ತಾನೆ.

12068045a ಯದಾ ತ್ವಧಾರ್ಮಿಕಾನ್ಸರ್ವಾಂಸ್ತೀಕ್ಷ್ಣೈರ್ದಂಡೈರ್ನಿಯಚ್ಚತಿ|

12068045c ಧಾರ್ಮಿಕಾಂಶ್ಚಾನುಗೃಹ್ಣಾತಿ ಭವತ್ಯಥ ಯಮಸ್ತದಾ||

ಯಾವಾಗ ಅವನು ಅಧಾರ್ಮಿಕರೆಲ್ಲರನ್ನೂ ತೀಕ್ಷ್ಣ ಶಿಕ್ಷೆಗಳಿಂದ ನಿಯಂತ್ರಿಸುತ್ತಾನೋ ಮತ್ತು ಧಾರ್ಮಿಕರಿಗೆ ಅನುಗ್ರಹಿಸುತ್ತಾನೋ ಆಗ ರಾಜನು ಯಮನಾಗುತ್ತಾನೆ.

12068046a ಯದಾ ತು ಧನಧಾರಾಭಿಸ್ತರ್ಪಯತ್ಯುಪಕಾರಿಣಃ|

12068046c ಆಚ್ಚಿನತ್ತಿ ಚ ರತ್ನಾನಿ ವಿವಿಧಾನ್ಯಪಕಾರಿಣಾಮ್||

12068047a ಶ್ರಿಯಂ ದದಾತಿ ಕಸ್ಮೈ ಚಿತ್ಕಸ್ಮಾಚ್ಚಿದಪಕರ್ಷತಿ|

12068047c ತದಾ ವೈಶ್ರವಣೋ ರಾಜಽಲ್ಲೋಕೇ ಭವತಿ ಭೂಮಿಪಃ||

ಯಾವಾಗ ಅವನು ಉಪಕಾರಿಗಳಿಗೆ ಧನದ ಮಳೆಯನ್ನೇ ಸುರಿಸುವನೋ, ಅಪಕಾರಿಗಳ ರತ್ನಗಳನ್ನು ಯಾವಾಗ ಅವನು ಅಪಹರಿಸುವನೋ, ರಾಜ್ಯದ ಹಿತಚಿಂತಕರಿಗೆ ಅವನು ಯಾವಾಗ ಐಶ್ವರ್ಯವನ್ನು ಕೊಡುವನೋ ಆಗ ರಾಜನು ಲೋಕದಲ್ಲಿ ವೈಶ್ರವಣ ಕುಬೇರನಂತಾಗುತ್ತಾನೆ.

12068048a ನಾಸ್ಯಾಪವಾದೇ ಸ್ಥಾತವ್ಯಂ ದಕ್ಷೇಣಾಕ್ಲಿಷ್ಟಕರ್ಮಣಾ|

12068048c ಧರ್ಮ್ಯಮಾಕಾಂಕ್ಷತಾ ಲಾಭಮೀಶ್ವರಸ್ಯಾನಸೂಯತಾ||

ದಕ್ಷನೂ, ಶ್ರಮಿಯೂ, ಧರ್ಮ-ಲಾಭಗಳನ್ನು ಬಯಸುವವನೂ ಮತ್ತು ಅಸೂಯೆಯಿಲ್ಲದವನೂ ಆದವನೂ ರಾಜನ ನಿಂದನೆಯನ್ನು ಮಾಡಬಾರದು.

12068049a ನ ಹಿ ರಾಜ್ಞಃ ಪ್ರತೀಪಾನಿ ಕುರ್ವನ್ಸುಖಮವಾಪ್ನುಯಾತ್|

12068049c ಪುತ್ರೋ ಭ್ರಾತಾ ವಯಸ್ಯೋ ವಾ ಯದ್ಯಪ್ಯಾತ್ಮಸಮೋ ಭವೇತ್||

ರಾಜನಿಗೆ ವಿರುದ್ಧವಾಗಿ ನಡೆದುಕೊಳ್ಳುವವನು ಅವನ ಮಗನೇ ಆಗಿರಲಿ, ಸಹೋದರನಾಗಿರಲಿ ಅಥವಾ ಸಮವಯಸ್ಕನಾಗಿರಲಿ, ಅವನು ಸುಖವನ್ನು ಹೊಂದುವುದಿಲ್ಲ. ಅವರು ಪಾಪಾತ್ಮರ ಸಮನಾಗುತ್ತಾರೆ.

12068050a ಕುರ್ಯಾತ್ಕೃಷ್ಣಗತಿಃ ಶೇಷಂ ಜ್ವಲಿತೋಽನಿಲಸಾರಥಿಃ|

12068050c ನ ತು ರಾಜ್ಞಾಭಿಪನ್ನಸ್ಯ ಶೇಷಂ ಕ್ವ ಚನ ವಿದ್ಯತೇ||

ಗಾಳಿಯ ಸಹಾಯದಿಂದ ಜ್ವಲಿಸುವ ಧೂಮಕೇತು ಅಗ್ನಿಯು ಸ್ವಲ್ಪವಾದರೂ ಸ್ಥಳವನ್ನು ದಹಿಸದೇ ಬಿಡಬಹುದು. ಆದರೆ ರಾಜನಿಗೆ ಅಪರಾಧವನ್ನೆಸಗಿದವನ ಏನೂ ಉಳಿಯುವುದಿಲ್ಲ.

12068051a ತಸ್ಯ ಸರ್ವಾಣಿ ರಕ್ಷ್ಯಾಣಿ ದೂರತಃ ಪರಿವರ್ಜಯೇತ್|

12068051c ಮೃತ್ಯೋರಿವ ಜುಗುಪ್ಸೇತ ರಾಜಸ್ವಹರಣಾನ್ನರಃ||

ರಾಜನ ರಕ್ಷಣೆಯಲ್ಲಿರುವ ಎಲ್ಲವುಗಳನ್ನೂ ದೂರದಿಂದಲೇ ವರ್ಜಿಸಬೇಕು. ಮೃತ್ಯುವಿನಂತೆಯೇ ರಾಜನ ಸ್ವತ್ತನ್ನು ಅಪಹರಿಸುವುದನ್ನು ಜುಗುಪ್ಸೆಯಿಂದ ಕಾಣಬೇಕು.

12068052a ನಶ್ಯೇದಭಿಮೃಶನ್ಸದ್ಯೋ ಮೃಗಃ ಕೂಟಮಿವ ಸ್ಪೃಶನ್|

12068052c ಆತ್ಮಸ್ವಮಿವ ಸಂರಕ್ಷೇದ್ರಾಜಸ್ವಮಿಹ ಬುದ್ಧಿಮಾನ್||

ಮೃಗವು ತನ್ನನ್ನು ಹಿಡಿಯಲು ಹಾಕಿದ ಸಂಚನ್ನು ಮುಟ್ಟಿದ ತಕ್ಷಣವೇ ನಾಶಹೊಂದುತ್ತದೆ. ಬುದ್ಧಿವಂತನಾದವನು ರಾಜನ ಸ್ವತ್ತನ್ನು ತನ್ನದೇ ಸ್ವತ್ತಿನಂತೆ ರಕ್ಷಿಸಬೇಕು.

12068053a ಮಹಾಂತಂ ನರಕಂ ಘೋರಮಪ್ರತಿಷ್ಠಮಚೇತಸಃ|

12068053c ಪತಂತಿ ಚಿರರಾತ್ರಾಯ ರಾಜವಿತ್ತಾಪಹಾರಿಣಃ||

ರಾಜವಿತ್ತವನ್ನು ಅಪಹರಿಸುವವರು ಇಹದಲ್ಲಿ ನಾಶಹೊಂದುವುದು ಮಾತ್ರವಲ್ಲದೇ ಚೇತನವನ್ನೇ ವಿಹೀನಗೊಳಿಸುವ, ಚಿರರಾತ್ರಿಯ ಘೋರ ಮಹಾ ನರಕದಲ್ಲಿ ಬೀಳುತ್ತಾರೆ.

12068054a ರಾಜಾ ಭೋಜೋ ವಿರಾಟ್ಸಮ್ರಾಟ್ಕ್ಷತ್ರಿಯೋ ಭೂಪತಿರ್ನೃಪಃ|

12068054c ಯ ಏವಂ ಸ್ತೂಯತೇ ಶಬ್ದೈಃ ಕಸ್ತಂ ನಾರ್ಚಿತುಮಿಚ್ಚತಿ||

ಭೋಜ, ವಿರಾಟ್, ಸಾಮ್ರಾಟ್, ಕ್ಷತ್ರಿಯ, ಭೂಪತಿ, ನೃಪ ಮೊದಲಾದ ಶಬ್ಧಗಳಿಂದ ಸ್ತುತಿಸಲ್ಪಡುವ ರಾಜನನ್ನು ಯಾರುತಾನೇ ಪೂಜಿಸಲು ಬಯಸುವುದಿಲ್ಲ?

12068055a ತಸ್ಮಾದ್ಬುಭೂಷುರ್ನಿಯತೋ ಜಿತಾತ್ಮಾ ಸಂಯತೇಂದ್ರಿಯಃ|

12068055c ಮೇಧಾವೀ ಸ್ಮೃತಿಮಾನ್ದಕ್ಷಃ ಸಂಶ್ರಯೇತ ಮಹೀಪತಿಮ್||

ಆದುದರಿಂದ ತನ್ನ ಉನ್ನತಿಯನ್ನು ಬಯಸುವ ಮೇಧಾವಿ ಸ್ಮೃತಿವಂತನು ನಿಯತಾತ್ಮನಾಗಿ, ಜಿತಾತ್ಮನಾಗಿ, ಇಂದ್ರಿಯಸಂಯಮನಾಗಿ ದಕ್ಷ ರಾಜನನ್ನು ಆಶ್ರಯಿಸಬೇಕು.

12068056a ಕೃತಜ್ಞಂ ಪ್ರಾಜ್ಞಮಕ್ಷುದ್ರಂ ದೃಢಭಕ್ತಿಂ ಜಿತೇಂದ್ರಿಯಮ್|

12068056c ಧರ್ಮನಿತ್ಯಂ ಸ್ಥಿತಂ ಸ್ಥಿತ್ಯಾಂ ಮಂತ್ರಿಣಂ ಪೂಜಯೇನ್ನೃಪಃ||

ರಾಜನು ಕೃತಜ್ಞನೂ, ಪ್ರಾಜ್ಞನೂ, ಕ್ಷುದ್ರನಲ್ಲದವನೂ, ದೃಢಭಕ್ತಿಯುಳ್ಳವನೂ, ಜಿತೇಂದ್ರಿಯನೂ, ನಿತ್ಯಧರ್ಮನಿಷ್ಠನೂ, ನೀತಿಜ್ಞನೂ ಆದ ಮಂತ್ರಿಯನ್ನು ಗೌರವಿಸಬೇಕು.

12068057a ದೃಢಭಕ್ತಿಂ ಕೃತಪ್ರಜ್ಞಂ ಧರ್ಮಜ್ಞಂ ಸಂಯತೇಂದ್ರಿಯಮ್|

12068057c ಶೂರಮಕ್ಷುದ್ರಕರ್ಮಾಣಂ ನಿಷಿದ್ಧಜನಮಾಶ್ರಯೇತ್||

ದೃಢಭಕ್ತಿಯುಳ್ಳವನೂ, ಕೃತಪ್ರಜ್ಞನೂ, ಧರ್ಮಜ್ಞನೂ, ಇಂದ್ರಿಯಸಂಯಮನೂ, ಕ್ಷುದ್ರಕರ್ಮಗಳನ್ನು ಮಾಡದವನೂ, ಬೇರೆಯಾರ ಸಹಾಯವೂ ಬೇಕಾಗಿಲ್ಲ ಎನ್ನುವ ಶೂರನನ್ನು ಸೇನಾಪತಿಯನ್ನಾಗಿ ಮಾಡಿಕೊಳ್ಳಬೇಕು.

12068058a ರಾಜಾ ಪ್ರಗಲ್ಭಂ ಪುರುಷಂ ಕರೋತಿ| ರಾಜಾ ಕೃಶಂ ಬೃಂಹಯತೇ ಮನುಷ್ಯಮ್|

12068058c ರಾಜಾಭಿಪನ್ನಸ್ಯ ಕುತಃ ಸುಖಾನಿ| ರಾಜಾಭ್ಯುಪೇತಂ ಸುಖಿನಂ ಕರೋತಿ||

ರಾಜನು ಪುರುಷನನ್ನು ಬಲಿಷ್ಠನನ್ನಾಗಿ ಮಾಡುತ್ತಾನೆ. ರಾಜನು ಮನುಷ್ಯನನ್ನು ಕೃಶನನ್ನಾಗಿಯೂ ದಷ್ಟಪುಷ್ಟನನ್ನಾಗಿಯೂ ಮಾಡುತ್ತಾನೆ. ರಾಜನ ಎದುರಾಳಿಗಳಿಗೆ ಸುಖವೆಂಬುದೆಲ್ಲಿ? ಶರಣುಬಂದವರನ್ನು ರಾಜನು ಸುಖಿಗಳನ್ನಾಗಿ ಮಾಡುತ್ತಾನೆ.

12068059a ರಾಜಾ ಪ್ರಜಾನಾಂ ಹೃದಯಂ ಗರೀಯೋ| ಗತಿಃ ಪ್ರತಿಷ್ಠಾ ಸುಖಮುತ್ತಮಂ ಚ|

12068059c ಯಮಾಶ್ರಿತಾ ಲೋಕಮಿಮಂ ಪರಂ ಚ| ಜಯಂತಿ ಸಮ್ಯಕ್ಪುರುಷಾ ನರೇಂದ್ರಮ್||

ರಾಜನು ಪ್ರಜೆಗಳ ದೊಡ್ಡ ಹೃದಯವಿದ್ದಂತೆ. ಪ್ರಜೆಗಳ ಗತಿ, ಪ್ರತಿಷ್ಠೆ ಮತ್ತು ಉತ್ತಮ ಸುಖಗಳು ಅವನಿಂದಲೇ ದೊರೆಯುತ್ತವೆ. ರಾಜನನ್ನು ಆಶ್ರಯಿಸಿದ ಪ್ರಜೆಗಳು ಈ ಲೋಕವನ್ನೂ ಪರಲೋಕವನ್ನೂ ಸಂಪೂರ್ಣವಾಗಿ ಜಯಿಸುತ್ತಾರೆ.

12068060a ನರಾಧಿಪಶ್ಚಾಪ್ಯನುಶಿಷ್ಯ ಮೇದಿನೀಂ| ದಮೇನ ಸತ್ಯೇನ ಚ ಸೌಹೃದೇನ|

12068060c ಮಹದ್ಭಿರಿಷ್ಟ್ವಾ ಕ್ರತುಭಿರ್ಮಹಾಯಶಾಸ್ತ್ರಿವಿಷ್ಟಪೇ ಸ್ಥಾನಮುಪೈತಿ ಸತ್ಕೃತಮ್||

ನರಾಧಿಪನೂ ಕೂಡ ಇಂದ್ರಿಯನಿಗ್ರಹ, ಸತ್ಯ, ಸೌಹಾರ್ದತೆಗಳಿಂದ ಮೇದಿನಿಯಲ್ಲಿ ಶಾಸನಮಾಡಿ ಮಹಾ ಇಷ್ಟಿ-ಕ್ರತುಗಳನ್ನು ನೆರವೇರಿಸಿ ಮಹಾಯಶಸ್ಸನ್ನು ಪಡೆದು ತ್ರಿವಿಷ್ಟಪದಲ್ಲಿ ಸತ್ಕೃತರಿಗೆ ಇರುವ ಸ್ಥಾನವನ್ನು ಪಡೆದುಕೊಳ್ಳುತ್ತಾನೆ.”

12068061a ಸ ಏವಮುಕ್ತೋ ಗುರುಣಾ ಕೌಸಲ್ಯೋ ರಾಜಸತ್ತಮಃ|

12068061c ಪ್ರಯತ್ನಾತ್ಕೃತವಾನ್ವೀರಃ ಪ್ರಜಾನಾಂ ಪರಿಪಾಲನಮ್||

ಗುರು ಬೃಹಸ್ಪತಿಯು ಹೀಗೆ ಹೇಳಲು ರಾಜಸತ್ತಮ ವೀರ ಕೌಸಲ್ಯನು ಪ್ರಯತ್ನಪೂರ್ವಕವಾಗಿ ಪ್ರಜೆಗಳ ಪರಿಪಾಲನೆಯನ್ನು ಮಾಡಿದನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಆಂಗಿರಸವಾಕ್ಯೇ ಅಷ್ಠಾಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಆಂಗಿರಸವಾಕ್ಯ ಎನ್ನುವ ಅರವತ್ತೆಂಟನೇ ಅಧ್ಯಾಯವು.

[1] ಭಾರತದರ್ಶನದಲ್ಲಿ ಇದರ ಮೊದಲು ಈ ಶ್ಲೋಕಾರ್ಧವಿದೆ: ನ ದಾರಾ ನ ಚ ಪುತ್ರಃ ಸ್ಯಾನ್ನ ಧನಂ ನ ಪರಿಗ್ರಹಃ|

[2] ನ ಯೋನಿದೋಷೋ ವರ್ತೇತ ಎಂಬ ಪಾಠಾಂತರವಿದೆ.

[3] ಹರ್ತಾ ಸ್ವಸ್ಥೇಂದ್ರಿಯೋ ಅರ್ಥಾತ್ ಕಳ್ಳತನ ಮಾಡುವ್ರು ತಮ್ಮ ಶರೀರ-ಮನಸ್ಸುಗಳಿಗೆ ಯಾವುದೇ ಆತಂಕವಿಲ್ಲದೇ ಕಳ್ಳತನ ಮಾಡುತ್ತಿದ್ದರು ಎಂಬ ಪಾಠಾಂತರವಿದೆ.

Comments are closed.