Shanti Parva: Chapter 304

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೦೪

ಯೋಗದ ವರ್ಣನೆ (೧-೧೭); ಯೋಗಯುಕ್ತರ ಲಕ್ಷಣಗಳು (೧೮-೨೭).

12304001 ಯಾಜ್ಞವಲ್ಕ್ಯ ಉವಾಚ|

12304001a ಸಾಂಖ್ಯಜ್ಞಾನಂ ಮಯಾ ಪ್ರೋಕ್ತಂ ಯೋಗಜ್ಞಾನಂ ನಿಬೋಧ ಮೇ|

12304001c ಯಥಾಶ್ರುತಂ ಯಥಾದೃಷ್ಟಂ ತತ್ತ್ವೇನ ನೃಪಸತ್ತಮ||

ಯಾಜ್ಞವಲ್ಕ್ಯನು ಹೇಳಿದನು: “ನೃಪಸತ್ತಮ! ನಾನು ನಿನಗೆ ಸಾಂಖ್ಯಜ್ಞಾನದ ಕುರಿತು ಹೇಳಿದೆನು. ಈಗ ಯೋಗಜ್ಞಾನದ ಕುರಿತು ನಾನು ಹೇಗೆ ಕೇಳಿರುವೆನೋ ಮತ್ತು ಹೇಗೆ ಅನುಭವದಲ್ಲಿ ಕಂಡುಕೊಂಡಿರುವೆನೋ ಅದನ್ನು ಯಥಾವತ್ತಾಗಿ ಕೇಳು.

12304002a ನಾಸ್ತಿ ಸಾಂಖ್ಯಸಮಂ ಜ್ಞಾನಂ ನಾಸ್ತಿ ಯೋಗಸಮಂ ಬಲಮ್|

12304002c ತಾವುಭಾವೇಕಚರ್ಯೌ ತು ಉಭಾವನಿಧನೌ ಸ್ಮೃತೌ||

ಸಾಂಖ್ಯಸಮನಾದ ಜ್ಞಾನವಿಲ್ಲ ಮತ್ತು ಯೋಗಸಮನಾದ ಬಲವಿಲ್ಲ. ಇವೆರಡರ ಲಕ್ಷ್ಯವೂ ಒಂದೇ ಮತ್ತು ಇವೆರಡೂ ಮೃತ್ಯುನಿವಾರಣ ಕಾರಕವೆಂದು ಹೇಳಿದ್ದಾರೆ.

12304003a ಪೃಥಕ್ ಪೃಥಕ್ತು ಪಶ್ಯಂತಿ ಯೇಽಲ್ಪಬುದ್ಧಿರತಾ ನರಾಃ|

12304003c ವಯಂ ತು ರಾಜನ್ಪಶ್ಯಾಮ ಏಕಮೇವ ತು ನಿಶ್ಚಯಾತ್||

ಅಲ್ಪಬುದ್ಧಿರತ ನರರು ಸಾಂಖ್ಯ ಮತ್ತು ಯೋಗಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡುತ್ತಾರೆ. ರಾಜನ್! ನಾನಾದರೋ ಇವೆರಡೂ ಒಂದೇ ಎಂದು ನಿಶ್ಚಯಿಸಿದ್ದೇನೆ.

12304004a ಯದೇವ ಯೋಗಾಃ ಪಶ್ಯಂತಿ ತತ್ಸಾಂಖ್ಯೈರಪಿ ದೃಶ್ಯತೇ|

12304004c ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ತತ್ತ್ವವಿತ್||

ಯೋಗಿಗಳು ಯಾವ ತತ್ತ್ವದ ಸಾಕ್ಷಾತ್ಕಾರವನ್ನು ಕಾಣುತ್ತಾರೋ ಅದನ್ನೇ ಸಾಂಖ್ಯದಲ್ಲಿಯೂ ನೋಡಬಹುದು. ಆದುದರಿಂದ ಸಾಂಖ್ಯ ಮತ್ತು ಯೋಗಗಳನ್ನು ಒಂದೇ ಎಂದು ಕಾಣುವವನೇ ತತ್ತ್ವವಿದುವು.

12304005a ರುದ್ರಪ್ರಧಾನಾನಪರಾನ್ವಿದ್ಧಿ ಯೋಗಾನ್ಪರಂತಪ|

12304005c ತೇನೈವ ಚಾಥ ದೇಹೇನ ವಿಚರಂತಿ ದಿಶೋ ದಶ||

ಪರಂತಪ! ಯೋಗಸಾಧನೆಯಲ್ಲಿ ರುದ್ರ ಅಥವಾ ಪ್ರಾಣವು ಪ್ರಧಾನವು. ಇದನ್ನು ಚೆನ್ನಾಗಿ ತಿಳಿದುಕೋ. ಪ್ರಾಣವನ್ನು ತನ್ನ ವಶದಲ್ಲಿ ಇರಿಸಿಕೊಂಡ ಯೋಗಿಯು ತನ್ನದೇ ಶರೀರದಿಂದ ಹತ್ತೂ ದಿಕ್ಕುಗಳಲ್ಲಿ ಸ್ವಚ್ಛಂದವಾಗಿ ಸಂಚರಿಸಬಲ್ಲನು.

12304006a ಯಾವದ್ಧಿ ಪ್ರಲಯಸ್ತಾತ ಸೂಕ್ಷ್ಮೇಣಾಷ್ಟಗುಣೇನ ವೈ|

12304006c ಯೋಗೇನ ಲೋಕಾನ್ವಿಚರನ್ಸುಖಂ ಸಂನ್ಯಸ್ಯ ಚಾನಘ||

ಅನಘ! ಎಲ್ಲಿಯವರಿಗೆ ಮೃತ್ಯುವುಂಟಾಗುವುದಿಲ್ಲವೋ ಅಲ್ಲಿಯವರೆಗೆ ಯೋಗಿಯು ಯೋಗಬಲದಿಂದ ಸ್ಥೂಲ ಶರೀರವನ್ನು ಇಲ್ಲಿಯೇ ಬಿಟ್ಟು ಅಷ್ಟವಿಧ ಐಶ್ವರ್ಯಯುಕ್ತನಾಗಿ ಸೂಕ್ಷ್ಮಶರೀರದ ಮೂಲಕ ಲೋಕ-ಲೋಕಾಂತರಗಳಲ್ಲಿ ಸುಖವಾಗಿ ವಿಹರಿಸಬಹುದು.

12304007a ವೇದೇಷು ಚಾಷ್ಟಗುಣಿತಂ ಯೋಗಮಾಹುರ್ಮನೀಷಿಣಃ|

12304007c ಸೂಕ್ಷ್ಮಮಷ್ಟಗುಣಂ ಪ್ರಾಹುರ್ನೇತರಂ ನೃಪಸತ್ತಮ||

ನೃಪಸತ್ತಮ! ಮನೀಷಿಣರು ವೇದಗಳಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಎರಡೂ ಪ್ರಕಾರದ ಯೋಗಗಳ ವರ್ಣನೆಯಿದೆ ಎಂದು ಹೇಳುತ್ತಾರೆ. ಇದರಲ್ಲಿ ಸ್ಥೂಲಯೋಗವು ಅಣಿಮಾ ಮೊದಲಾದ ಆರು ಪ್ರಕಾರದ ಸಿದ್ಧಿಯನ್ನು ಕೊಡುತ್ತದೆ. ಸೂಕ್ಷ್ಮಯೋಗವು ಎಂಟು ಗುಣಗಳಿಂದ[1] ಯುಕ್ತವಾಗಿದೆ. ಬೇರೆ ಏನಿಲ್ಲ.

12304008a ದ್ವಿಗುಣಂ ಯೋಗಕೃತ್ಯಂ ತು ಯೋಗಾನಾಂ ಪ್ರಾಹುರುತ್ತಮಮ್|

12304008c ಸಗುಣಂ ನಿರ್ಗುಣಂ ಚೈವ ಯಥಾಶಾಸ್ತ್ರನಿದರ್ಶನಮ್||

ಯೋಗದ ಮುಖ್ಯ ಸಾಧನವು ಎರಡು ಪ್ರಕಾರಗಳೆಂದು ಹೇಳಿದ್ದಾರೆ: ಸಗುಣ ಮತ್ತು ನಿರ್ಗುಣ[2]. ಇದೇ ಶಾಸ್ತ್ರನಿದರ್ಶನವು.

12304009a ಧಾರಣಾ ಚೈವ ಮನಸಃ ಪ್ರಾಣಾಯಾಮಶ್ಚ ಪಾರ್ಥಿವ|

[3]12304009c ಪ್ರಾಣಾಯಾಮೋ ಹಿ ಸಗುಣೋ ನಿರ್ಗುಣಂ ಧಾರಣಂ ಮನಃ||

ಪಾರ್ಥಿವ! ಮನಸ್ಸನ್ನು ಯಾವುದರಲ್ಲಿಯಾದರೂ ಸ್ಥಾಪಿಸುವುದಕ್ಕೆ ಧಾರಣ ಎನ್ನುತ್ತಾರೆ. ಮನಸ್ಸಿನ ಧಾರಣೆಯ ಜೊತೆ ಮಾಡುವ ಪ್ರಾಣಾಯಾಮವು ಸಗುಣ ಮತ್ತು ದೇಶ-ವಿಶೇಷವನ್ನು ಆಶ್ರಯಿಸಿ ಮನಸ್ಸನ್ನು ನಿರ್ಬೀಜ ಸಮಾಧಿಯಲ್ಲಿ ಏಕಾಗ್ರಗೊಳಿಸುವ ಧಾರಣೆಯನ್ನು ನಿರ್ಗುಣ ಎಂದು ಹೇಳುತ್ತಾರೆ.

12304010a ಯತ್ರ ದೃಶ್ಯೇತ ಮುಂಚನ್ವೈ ಪ್ರಾಣಾನ್ಮೈಥಿಲಸತ್ತಮ|

12304010c ವಾತಾಧಿಕ್ಯಂ ಭವತ್ಯೇವ ತಸ್ಮಾದ್ಧಿ ನ ಸಮಾಚರೇತ್||

ಮೈಥಿಲಸತ್ತಮ! ಪೂರಕ ಮೊದಲಾದ ಸಮಯ ನಿಯತ ದೇವತಾದಿಗಳನ್ನು ಧ್ಯಾನದ ಮೂಲಕ ಸಾಕ್ಷಾತ್ಕಾರ ಮಾಡಿಕೊಳ್ಳದೇ ಪ್ರಾಣವಾಯುವಿನ ರೇಚನ ಮಾಡುವುದರಿಂದ ಶರೀರದಲ್ಲಿ ವಾಯುವಿನ ಪ್ರಕೋಪವು ಅಧಿಕವಾಗುತ್ತದೆ. ಆದುದರಿಂದ ಧ್ಯಾನರಹಿತ ಪ್ರಾಣಾಯಾಮವನ್ನು ಮಾಡಬಾರದು.

12304011a ನಿಶಾಯಾಃ ಪ್ರಥಮೇ ಯಾಮೇ ಚೋದನಾ ದ್ವಾದಶ ಸ್ಮೃತಾಃ|

12304011c ಮಧ್ಯೇ ಸುಪ್ತ್ವಾ ಪರೇ ಯಾಮೇ ದ್ವಾದಶೈವ ತು ಚೋದನಾಃ||

ರಾತ್ರಿಯ ಮೊದಲ ಪ್ರಹರದಲ್ಲಿ ವಾಯುವನ್ನು ಧಾರಣೆ ಮಾಡುವ ಹನ್ನೆರಡು ಪ್ರೇರಣೆಗಳನ್ನು ಹೇಳಿದ್ದಾರೆ. ಮಧ್ಯರಾತ್ರಿಯಲ್ಲಿ ರಾತ್ರಿಯ ಹಿಂದಿನ ಎರಡು ಪ್ರಹರಗಳಲ್ಲಿ ನಿದ್ರಿಸಬೇಕು ಮತ್ತು ಪುನಃ ಅಂತಿಮ ಪ್ರಹರದಲ್ಲಿ ಹನ್ನೆರಡು ಪ್ರೇರಣೆಗಳ ಅಭ್ಯಾಸಮಾಡಬೇಕು[4].

12304012a ತದೇವಮುಪಶಾಂತೇನ ದಾಂತೇನೈಕಾಂತಶೀಲಿನಾ|

12304012c ಆತ್ಮಾರಾಮೇಣ ಬುದ್ಧೇನ ಯೋಕ್ತವ್ಯೋಽಽತ್ಮಾ ನ ಸಂಶಯಃ||

ಹೀಗೆ ಪ್ರಾಣಾಯಾಮದ ಮೂಲಕ ಮನಸ್ಸನ್ನು ವಶಮಾಡಿಕೊಂಡು ಶಾಂತ ಮತ್ತು ಜಿತೇಂದ್ರಿಯನಾಗಿ, ಏಕಾಂತವಾಸದಲ್ಲಿದ್ದುಕೊಂಡು ಆತ್ಮಾರಾಮ ಜ್ಞಾನಿಯು ಮನಸ್ಸನ್ನು ಪರಮಾತ್ಮನಲ್ಲಿ ನೆಲೆಸಬೇಕು. ಇದರಲ್ಲಿ ಸಂಶಯವಿಲ್ಲ.

12304013a ಪಂಚಾನಾಮಿಂದ್ರಿಯಾಣಾಂ ತು ದೋಷಾನಾಕ್ಷಿಪ್ಯ ಪಂಚಧಾ|

12304013c ಶಬ್ದಂ ಸ್ಪರ್ಶಂ ತಥಾ ರೂಪಂ ರಸಂ ಗಂಧಂ ತಥೈವ ಚ||

12304014a ಪ್ರತಿಭಾಮಪವರ್ಗಂ ಚ ಪ್ರತಿಸಂಹೃತ್ಯ ಮೈಥಿಲ|

12304014c ಇಂದ್ರಿಯಗ್ರಾಮಮಖಿಲಂ ಮನಸ್ಯಭಿನಿವೇಶ್ಯ ಹ||

12304015a ಮನಸ್ತಥೈವಾಹಂಕಾರೇ ಪ್ರತಿಷ್ಠಾಪ್ಯ ನರಾಧಿಪ|

12304015c ಅಹಂಕಾರಂ ತಥಾ ಬುದ್ಧೌ ಬುದ್ಧಿಂ ಚ ಪ್ರಕೃತಾವಪಿ||

12304016a ಏವಂ ಹಿ ಪರಿಸಂಖ್ಯಾಯ ತತೋ ಧ್ಯಾಯೇತ ಕೇವಲಮ್|

12304016c ವಿರಜಸ್ಕಮಲಂ ನಿತ್ಯಮನಂತಂ ಶುದ್ಧಮವ್ರಣಮ್||

12304017a ತಸ್ಥುಷಂ ಪುರುಷಂ ಸತ್ತ್ವಮಭೇದ್ಯಮಜರಾಮರಮ್|

12304017c ಶಾಶ್ವತಂ ಚಾವ್ಯಯಂ ಚೈವ ಈಶಾನಂ ಬ್ರಹ್ಮ ಚಾವ್ಯಯಮ್||

ಮೈಥಿಲ! ಶಬ್ಧ, ಸ್ಪರ್ಶ, ರೂಪ, ರಸ, ಮತ್ತು ಗಂಧ ಇವು ಪಂಚೇಂದ್ರಿಯಗಳ ಐದು ದೋಷಗಳು. ಈ ದೋಷಗಳನ್ನು ದೂರೀಕರಿಸಿಕೊಳ್ಳಬೇಕು. ಅನಂತರ ಲಯ ಮತ್ತು ವಿಕ್ಷೇಪಗಳನ್ನು ಶಾಂತಗೊಳಿಸಿ ಸಂಪೂರ್ಣ ಇಂದ್ರಿಯಗಳನ್ನು ಮನಸ್ಸಿನಲ್ಲಿ ಸ್ಥಿರೀಕರಿಸಬೇಕು. ನರಾಧಿಪ! ಅನಂತರ ಮನಸ್ಸನ್ನು ಅಹಂಕಾರದಲ್ಲಿ, ಅಹಂಕಾರವನ್ನು ಬುದ್ಧಿಯಲ್ಲಿ ಮತ್ತು ಬುದ್ಧಿಯನ್ನು ಪ್ರಕೃತಿಯಲ್ಲಿ ಸ್ಥಾಪಿಸಬೇಕು. ಈ ರೀತಿ ಎಲ್ಲವನ್ನೂ ಲಯಗೊಳಿಸಿ ಕೇವಲ ರಜೋಗುಣ ರಹಿತ, ನಿರ್ಮಲ, ನಿತ್ಯ, ಅನಂತ, ಶುದ್ಧ, ಛಿದ್ರರಹಿತ, ಕೂಟಸ್ಥ, ಅಂತರ್ಯಾಮೀ, ಅಭೇದ್ಯ, ಅಜರ, ಅಮರ, ಅವಿಕಾರೀ, ಎಲ್ಲರ ಶಾಸಕ, ಮತ್ತು ಸನಾತನ ಬ್ರಹ್ಮಾ, ಆ ಪರಮಾತ್ಮನ ಧ್ಯಾನಮಾಡಬೇಕು.

12304018a ಯುಕ್ತಸ್ಯ ತು ಮಹಾರಾಜ ಲಕ್ಷಣಾನ್ಯುಪಧಾರಯೇತ್|

12304018c ಲಕ್ಷಣಂ ತು ಪ್ರಸಾದಸ್ಯ ಯಥಾ ತೃಪ್ತಃ ಸುಖಂ ಸ್ವಪೇತ್||

ಮಹಾರಾಜ! ಈಗ ಸಾಮಾಧಿಸ್ಥಿತ ಯೋಗಿಯ ಲಕ್ಷಣಗಳ ಕುರಿತು ಕೇಳು. ತೃಪ್ತನಾದವನು ಸುಖವಾಗಿ ನಿದ್ರಿಸುವಂತೆ ಯೋಗ ಯುಕ್ತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ ಮತ್ತು ಅವನು ಸಮಾಧಿಯಿಂದ ವಿರತನಾಗಲು ಬಯಸುವುದಿಲ್ಲ. ಇದೇ ಅವನ ಪ್ರಸನ್ನತೆಯ ಗುರುತು.

12304019a ನಿವಾತೇ ತು ಯಥಾ ದೀಪೋ ಜ್ವಲೇತ್ ಸ್ನೇಹಸಮನ್ವಿತಃ|

12304019c ನಿಶ್ಚಲೋರ್ಧ್ವಶಿಖಸ್ತದ್ವದ್ಯುಕ್ತಮಾಹುರ್ಮನೀಷಿಣಃ||

ಎಣ್ಣೆ ತುಂಬಿದ ದೀಪವು ಗಾಳಿಯಿಲ್ಲದ ಸ್ಥಳದಲ್ಲಿ ಹೇಗೆ ಒಂದೇ ಸಮನೆ ಅಲುಗಾಡದೇ ಉರಿಯುತ್ತಿರುತ್ತದೆಯೋ ಮತ್ತು ಹೇಗೆ ಅದರ ಜ್ವಾಲೆಯು ಸ್ಥಿರಭಾವದಿಂದ ಮೇಲ್ಮುಖನಾಗಿಯೇ ಇರುತ್ತದೆಯೋ ಹಾಗೆ ಸಮಾಧಿನಿಷ್ಠ ಯೋಗಿಯೂ ಕೂಡ ಸ್ಥಿರನಾಗಿರುತ್ತಾನೆ ಎಂದು ಮನೀಷಿಣರು ಹೇಳುತ್ತಾರೆ.

12304020a ಪಾಷಾಣ ಇವ ಮೇಘೋತ್ಥೈರ್ಯಥಾ ಬಿಂದುಭಿರಾಹತಃ|

12304020c ನಾಲಂ ಚಾಲಯಿತುಂ ಶಕ್ಯಸ್ತಥಾ ಯುಕ್ತಸ್ಯ ಲಕ್ಷಣಮ್||

ಮೋಡಗಳು ಸುರಿಸಿದ ಮಳೆಯ ಆಘಾತದಿಂದ ಪರ್ವತವು ಹೇಗೆ ಚಂಚಲಗೊಳ್ಳುವುದಿಲ್ಲವೋ ಅದೇ ರೀತಿಯಲ್ಲಿ ಅನೇಕ ಪ್ರಕಾರದ ವಿಕ್ಷೇಪಗಳೂ ಯೋಗಿಯನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ. ಇದೇ ಯೋಗಯುಕ್ತನ ಲಕ್ಷಣವು.

12304021a ಶಂಖದುಂದುಭಿನಿರ್ಘೋಷೈರ್ವಿವಿಧೈರ್ಗೀತವಾದಿತೈಃ|

12304021c ಕ್ರಿಯಮಾಣೈರ್ನ ಕಂಪೇತ ಯುಕ್ತಸ್ಯೈತನ್ನಿದರ್ಶನಮ್||

ಅವನ ಎದಿರು ನಡೆಯುವ ಶಂಖ-ದುಂದುಭಿಗಳ ನಿರ್ಘೋಷಗಳಿಂದಲೂ, ವಿವಿಧ ಗೀತ-ವಾದ್ಯಗಳಿಂದಲೂ ಯೋಗ ಯುಕ್ತನು ಹಂದಾಡುವುದಿಲ್ಲ. ಇದೇ ಯೋಗ ಯುಕ್ತನ ನಿದರ್ಶನವು.

12304022a ತೈಲಪಾತ್ರಂ ಯಥಾ ಪೂರ್ಣಂ ಕರಾಭ್ಯಾಂ ಗೃಹ್ಯ ಪೂರುಷಃ|

12304022c ಸೋಪಾನಮಾರುಹೇದ್ಭೀತಸ್ತರ್ಜ್ಯಮಾನೋಽಸಿಪಾಣಿಭಿಃ||

12304023a ಸಂಯತಾತ್ಮಾ ಭಯಾತ್ತೇಷಾಂ ನ ಪಾತ್ರಾದ್ಬಿಂದುಮುತ್ಸೃಜೇತ್|

12304023c ತಥೈವೋತ್ತರಮಾಣಸ್ಯ ಏಕಾಗ್ರಮನಸಸ್ತಥಾ||

12304024a ಸ್ಥಿರತ್ವಾದಿಂದ್ರಿಯಾಣಾಂ ತು ನಿಶ್ಚಲತ್ವಾತ್ತಥೈವ ಚ|

12304024c ಏವಂ ಯುಕ್ತಸ್ಯ ತು ಮುನೇರ್ಲಕ್ಷಣಾನ್ಯುಪಧಾರಯೇತ್||

ಮನಸ್ಸನ್ನು ಸಂಯಮದಲ್ಲಿರಿಸಿಕೊಂಡು ಸಾವಧಾನ ಚಿತ್ತನಾದ ಮನುಷ್ಯನು ಹೇಗೆ ಕೈಯಲ್ಲಿ ಎಣ್ಣೆತುಂಬಿದ ಪಾತ್ರೆಯನ್ನು ಹಿಡಿದು ಮೆಟ್ಟಿಲುಗಳನ್ನು ಏರುವಾಗ ಎದುರಿನಿಂದ ಖಡ್ಗಗಳನ್ನು ಹಿಡಿದು ಅವನನ್ನು ಕಡಿಯಲು ಬಂದರೂ ಹೆದರದೇ ಎಣ್ಣೆಯ ಒಂದು ಹನಿಯನ್ನೂ ಕೆಳಗೆ ಬೀಳಿಸುವುದಿಲ್ಲವೋ ಹಾಗೆ ಯೋಗದ ಉಚ್ಛಸ್ಥಿತಿಯನ್ನು ತಲುಪಿದ ಏಕಾಗ್ರಚಿತ್ತ ಯೋಗಿಯು ಇಂದ್ರಿಯಗಳ ಸ್ಥಿರತೆ ಮತ್ತು ಮನಸ್ಸಿನ ಅವಿಚಲ ಸ್ಥಿತಿಯ ಕಾರಣದಿಂದ ಸಮಾಧಿಯಿಂದ ವಿಚಲಿತನಾಗುವುದಿಲ್ಲ. ಇದೇ ಯೋಗಸಿದ್ಧ ಮುನಿಯ ಲಕ್ಷಣವೆಂದು ತಿಳಿಯಬೇಕು.

12304025a ಸ ಯುಕ್ತಃ ಪಶ್ಯತಿ ಬ್ರಹ್ಮ ಯತ್ತತ್ಪರಮಮವ್ಯಯಮ್|

12304025c ಮಹತಸ್ತಮಸೋ ಮಧ್ಯೇ ಸ್ಥಿತಂ ಜ್ವಲನಸಂನಿಭಮ್||

ಹೀಗೆ ಯೋಗಯುಕ್ತನಾದವನು ಮಹಾ ಅಂಧಕಾರದ ಮಧ್ಯೆ ಪ್ರಕಾಶಿಸುವ ಪ್ರಜ್ವಲಿತ ಅಗ್ನಿಯಂತೆ ಹೃದಯದಲ್ಲಿ ನೆಲೆಸಿರುವ ಅವಿನಾಶೀ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

12304026a ಏತೇನ ಕೇವಲಂ ಯಾತಿ ತ್ಯಕ್ತ್ವಾ ದೇಹಮಸಾಕ್ಷಿಕಮ್|

12304026c ಕಾಲೇನ ಮಹತಾ ರಾಜನ್ ಶ್ರುತಿರೇಷಾ ಸನಾತನೀ||

ರಾಜನ್! ಈ ಸಾಧನೆಯಿಂದ ಮನುಷ್ಯನು ದೀರ್ಘಕಾಲದ ನಂತರ ಈ ಆಚೇತನ ದೇಹವನ್ನು ಪರಿತ್ಯಜಿಸಿ ಕೇವಲ ಅಂದರೆ ಪ್ರಕೃತಿ ಸಂಸರ್ಗ ರಹಿತ ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾನೆ. ಹೀಗೆ ಸನಾತನ ಶೃತಿಯಿದೆ.

12304027a ಏತದ್ಧಿ ಯೋಗಂ ಯೋಗಾನಾಂ ಕಿಮನ್ಯದ್ಯೋಗಲಕ್ಷಣಮ್|

12304027c ವಿಜ್ಞಾಯ ತದ್ಧಿ ಮನ್ಯಂತೇ ಕೃತಕೃತ್ಯಾ ಮನೀಷಿಣಃ||

ಇದೇ ಯೋಗಿಗಳ ಯೋಗವು. ಇದಲ್ಲದೇ ಯೋಗದ ಬೇರೆ ಯಾವ ಲಕ್ಷಣಗಳು ಇರಬಲ್ಲವು? ಇದನ್ನು ತಿಳಿದ ಮನಿಷಿಣರು ತಮ್ಮನ್ನು ತಾವು ಕೃತಕೃತ್ಯರೆಂದು ತಿಳಿಯುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ಚತುರಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರಾನಾಲ್ಕನೇ ಅಧ್ಯಾಯವು.

[1] ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ – ಅಷ್ಟಾಂಗ ಯೋಗ (ಗೀತಾ ಪ್ರೆಸ್).

[2] ಸಬೀಜ ಮತ್ತು ನಿರ್ಬೀಜ (ಗೀತಾ ಪ್ರೆಸ್).

[3] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಏಕಾಗ್ರತಾ ಚ ಮನಸಃ ಪ್ರಾಣಾಯಾಮಸ್ತಥೈವ ಚ| (ಗೀತಾ ಪ್ರೆಸ್).

[4] ಒಂದು ಪ್ರಾಣಾಯಾಮದಲ್ಲಿ ಪೂರಕ, ಕುಂಭಕ ಮತ್ತು ರೇಚಕಗಳೆಂಬ ಮೂರು ಪ್ರೇರಣೆಗಳಿವೆ. ಇಲ್ಲಿ ಹನ್ನೆರಡು ಪ್ರೇರಣೆಗಳು ಅಂದರೆ ನಾಲ್ಕು ಪ್ರಾಣಾಯಾಮಗಳೆಂದು ತಿಳಿದುಕೊಳ್ಳಬೇಕು. ರಾತ್ರಿಯ ಮೊದಲನೆಯ ಮತ್ತು ಹಿಂದಿನ ಪ್ರಹರಗಳಲ್ಲಿ ಧ್ಯಾನಪೂರ್ವಕ ಕ್ರಮವಾಗಿ ನಾಲ್ಕು-ನಾಲ್ಕು ಪ್ರಾಣಾಯಮಗಳನ್ನು ನಿತ್ಯವೂ ಮಾಡುವುದು ಯೋಗಿಗೆ ಅತ್ಯಂತ ಅವಶ್ಯಕವಾದುದು (ಗೀತಾ ಪ್ರೆಸ್).

Comments are closed.