Shanti Parva: Chapter 305

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೦೫

ವಿಭಿನ್ನ ಅಂಗಗಳಿಂದ ಪ್ರಾಣವು ಹೋಗುವುದರ ಫಲಗಳು (1-7); ಮೃತ್ಯುಸೂಚಕ ಲಕ್ಷಣಗಳು (8-18); ಮೃತ್ಯುವನ್ನು ಜಯಿಸುವ ಉಪಾಯ (19-21).

12305001 ಯಾಜ್ಞವಲ್ಕ್ಯ ಉವಾಚ|

12305001a ತಥೈವೋತ್ಕ್ರಮಮಾಣಂ ತು ಶೃಣುಷ್ವಾವಹಿತೋ ನೃಪ|

12305001c ಪದ್ಭ್ಯಾಮುತ್ಕ್ರಮಮಾಣಸ್ಯ ವೈಷ್ಣವಂ ಸ್ಥಾನಮುಚ್ಯತೇ||

ಯಾಜ್ಞವಲ್ಕ್ಯನು ಹೇಳಿದನು: “ನೃಪ! ಪ್ರಾಣೋತ್ಕ್ರಮಣಸಮಯದಲ್ಲಿ ಶರೀರದ ಯಾವ ಯಾವ ಭಾಗಗಳಿಂದ ಪ್ರಾಣವು ಹೊರಟರೆ ಎಂತೆಂತಹ ಗತಿಯು ದೊರೆಯುವುನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಪಾದಗಳ ಮೂಲಕ ಪ್ರಾಣೋತ್ಕ್ರಮಣವಾದರೆ ವಿಷ್ಣುಸ್ಥಾನವು ದೊರೆಯುತ್ತದೆ ಎನ್ನುತ್ತಾರೆ.

12305002a ಜಂಘಾಭ್ಯಾಂ ತು ವಸೂನ್ದೇವಾನಾಪ್ನುಯಾದಿತಿ ನಃ ಶ್ರುತಮ್|

12305002c ಜಾನುಭ್ಯಾಂ ಚ ಮಹಾಭಾಗಾನ್ದೇವಾನ್ ಸಾಧ್ಯಾನವಾಪ್ನುಯಾತ್||

ಮೊಣಕಾಲುಗಳ ಮೂಲಕ ಪ್ರಾಣೋತ್ಕ್ರಮಣವಾದರೆ ವಸುಗಳ ಲೋಕವನ್ನು ಸೇರುತ್ತಾರೆಂದು ನಾವು ಕೇಳಿದ್ದೇವೆ. ಮಂಡಿಗಳ ಮೂಲಕ ಪ್ರಾಣೋತ್ಕ್ರಮಣವಾದ ಮಹಾಭಾಗರು ಸಾಧ್ಯರ ಲೋಕಗಳನ್ನು ಪಡೆಯುತ್ತಾರೆ.

12305003a ಪಾಯುನೋತ್ಕ್ರಮಮಾಣಸ್ತು ಮೈತ್ರಂ ಸ್ಥಾನಮವಾಪ್ನುಯಾತ್|

12305003c ಪೃಥಿವೀಂ ಜಘನೇನಾಥ ಊರುಭ್ಯಾಂ ತು ಪ್ರಜಾಪತಿಮ್||

ಗುದದ್ವಾರದ ಮೂಲಕ ಪ್ರಾಣೋತ್ಕ್ರಮಣವಾದರೆ ಮಿತ್ರನ ಸ್ಥಾನವನ್ನು ಪಡೆಯುತ್ತಾರೆ. ಸೊಂಟದಿಂದ ಪ್ರಾಣವು ಹೊರಟರೆ ಪೃಥ್ವೀಲೋಕವನ್ನೂ ಮತ್ತು ಎರಡೂ ತೊಡೆಗಳಿಂದ ಪ್ರಾಣೋತ್ಕ್ರಮಣವಾದರೆ ಪ್ರಜಾಪತಿ ಲೋಕವನ್ನೂ ಪಡೆಯುತ್ತಾರೆ.

12305004a ಪಾರ್ಶ್ವಾಭ್ಯಾಂ ಮರುತೋ ದೇವಾನ್ನಾಸಾಭ್ಯಾಮಿಂದುಮೇವ ಚ[1]|

12305004c ಬಾಹುಭ್ಯಾಮಿಂದ್ರಮಿತ್ಯಾಹುರುರಸಾ ರುದ್ರಮೇವ ಚ||

ಪಾರ್ಶ್ವಗಳಿಂದ ಪ್ರಾಣಹೋದರೆ ಮರುತ್ತರ ಲೋಕವನ್ನೂ, ಮೂಗಿನಿಂದ ಹೋದರೆ ಚಂದ್ರಲೋಕವನ್ನೂ, ಬಾಹುಗಳಿಂದ ಹೋದರೆ ಇಂದ್ರತ್ವವನ್ನೂ ಮತ್ತು ಎದೆಯಿಂದ ಪ್ರಾಣೋತ್ಕ್ರಮಣವಾದರೆ ರುದ್ರಲೋಕವನ್ನೂ ಪಡೆಯುತ್ತಾರೆ.

12305005a ಗ್ರೀವಾಯಾಸ್ತಮೃಷಿಶ್ರೇಷ್ಠಂ ನರಮಾಪ್ನೋತ್ಯನುತ್ತಮಮ್|

12305005c ವಿಶ್ವೇದೇವಾನ್ಮುಖೇನಾಥ ದಿಶಃ ಶ್ರೋತ್ರೇಣ ಚಾಪ್ನುಯಾತ್||

ಕುತ್ತಿಗೆಯಿಂದ ಪ್ರಾಣವು ಹೋದರೆ ಆ ಋಷಿಶ್ರೇಷ್ಠ ನರನ ಅನುತ್ತಮ ಲೋಕವನ್ನು ಪಡೆದುಕೊಳ್ಳುತ್ತಾನೆ. ಮುಖದಿಂದ ಪ್ರಾಣವು ಹೋದರೆ ವಿಶ್ವೇದೇವರ ಲೋಕ ಮತ್ತು ಕಿವಿಗಳಿಂದ ಪ್ರಾಣವು ಹೋದರೆ ದಿಕ್ಕುಗಳ ಅಧಿದೇವತೆಗಳ ಸ್ಥಾನವನ್ನು ಸೇರುತ್ತಾನೆ.

12305006a ಘ್ರಾಣೇನ ಗಂಧವಹನಂ ನೇತ್ರಾಭ್ಯಾಂ ಸೂರ್ಯಮೇವ ಚ|

12305006c ಭ್ರೂಭ್ಯಾಂ ಚೈವಾಶ್ವಿನೌ ದೇವೌ ಲಲಾಟೇನ ಪಿತೃನಥ||

ಮೂಗಿನಿಂದ ಪ್ರಾಣಗಳ ಉತ್ಕ್ರಮಣವಾದರೆ ವಾಯುದೇವತೆಯ, ಎರಡೂ ಕಣ್ಣುಗಳಿಂದ ಆದರೆ ಸೂರ್ಯ, ಹುಬ್ಬುಗಳ ಮಧ್ಯೆ ಆದರೆ ಅಶ್ವಿನೀ ದೇವತೆಗಳು ಮತ್ತು ಹಣೆಯಲ್ಲಿ ಆದರೆ ಪಿತೃಗಳ ಲೋಕಗಳನ್ನು ಸೇರುತ್ತಾರೆ.

12305007a ಬ್ರಹ್ಮಾಣಮಾಪ್ನೋತಿ ವಿಭುಂ ಮೂರ್ಧ್ನಾ ದೇವಾಗ್ರಜಂ ತಥಾ|

12305007c ಏತಾನ್ಯುತ್ಕ್ರಮಣಸ್ಥಾನಾನ್ಯುಕ್ತಾನಿ ಮಿಥಿಲೇಶ್ವರ||

ಮಿಥಿಲೇಶ್ವರ! ನೆತ್ತಿಯಿಂದ ಪ್ರಾಣಪರಿತ್ಯಾಗವಾದರೆ ಅಂಥವನು ದೇವಾಗ್ರಜ ವಿಭು ಬ್ರಹ್ಮ ಲೋಕಕ್ಕೆ ಹೋಗುತ್ತಾನೆ. ಇದೋ ನಾನು ಪ್ರಾಣಗಳ ಉತ್ಕ್ರಮಣಸ್ಥಾನಗಳ ಕುರಿತು ಹೇಳಿದ್ದೇನೆ.

12305008a ಅರಿಷ್ಟಾನಿ ತು ವಕ್ಷ್ಯಾಮಿ ವಿಹಿತಾನಿ ಮನೀಷಿಭಿಃ|

12305008c ಸಂವತ್ಸರವಿಯೋಗಸ್ಯ ಸಂಭವೇಯುಃ ಶರೀರಿಣಃ||

ಈಗ ನಾನು ಮನೀಷಿಗಳು ಹೇಳಿರುವ ಅಮಂಗಲ ಅಥವಾ ಮೃತ್ಯುಸೂಚಕ ಚಿಹ್ನೆಗಳನ್ನು ವರ್ಣಿಸುತ್ತೇನೆ. ಇದು ದೇಹಧಾರಿಯು ಶರೀರವನ್ನು ತ್ಯಜಿಸಲು ಕೇವಲ ಒಂದು ವರ್ಷಇರುವಾಗ ಅವನ ಎದಿರು ಪ್ರಕಟಗೊಳ್ಳುತ್ತವೆ.

12305009a ಯೋಽರುಂಧತೀಂ ನ ಪಶ್ಯೇತ ದೃಷ್ಟಪೂರ್ವಾಂ ಕದಾ ಚನ|

12305009c ತಥೈವ ಧ್ರುವಮಿತ್ಯಾಹುಃ ಪೂರ್ಣೇಂದುಂ ದೀಪಮೇವ ಚ|

12305009e ಖಂಡಾಭಾಸಂ ದಕ್ಷಿಣತಸ್ತೇಽಪಿ ಸಂವತ್ಸರಾಯುಷಃ||

ಮೊದಲು ನೋಡಿದ್ದ ಅರುಂಧತಿ ಮತ್ತು ಧೃವ ನಕ್ಷತ್ರಗಳನ್ನು ನೋಡಲಿಕ್ಕಾಗದ; ಮತ್ತು ಪೂರ್ಣಚಂದ್ರ ಮಂಡಲ ಮತ್ತು ದೀಪದ ಶಿಖೆಯು ಯಾರ ಎಡಭಾಗಕ್ಕೆ ಖಂಡಿಸಿ ಬೀಳುತ್ತದೆಯೋ ಅಂಥವರು ಕೇವಲ ಒಂದು ವರ್ಷದವರೆಗೇ ಜೀವಿತರಾಗಿರುತ್ತಾರೆ.

12305010a ಪರಚಕ್ಷುಷಿ ಚಾತ್ಮಾನಂ ಯೇ ನ ಪಶ್ಯಂತಿ ಪಾರ್ಥಿವ|

12305010c ಆತ್ಮಚ್ಚಾಯಾಕೃತೀಭೂತಂ ತೇಽಪಿ ಸಂವತ್ಸರಾಯುಷಃ||

ಪಾರ್ಥಿವ! ಯಾರ ನೆರಳು ಇನ್ನೊಬ್ಬರಿಗೆ ಕಾಣುವುದಿಲ್ಲವೋ ಅವರ ಆಯಸ್ಸು ಒಂದೇ ವರ್ಷ ಉಳಿದಿದೆ ಎಂದು ತಿಳಿಯಬೇಕು.

12305011a ಅತಿದ್ಯುತಿರತಿಪ್ರಜ್ಞಾ ಅಪ್ರಜ್ಞಾ ಚಾದ್ಯುತಿಸ್ತಥಾ|

12305011c ಪ್ರಕೃತೇರ್ವಿಕ್ರಿಯಾಪತ್ತಿಃ ಷಣ್ಮಾಸಾನ್ಮೃತ್ಯುಲಕ್ಷಣಮ್||

ಒಮ್ಮೆ ಅತಿಯಾದ ಕಾಂತಿಯುಕ್ತನಾಗಿ ಮತ್ತು ಇನ್ನೊಮ್ಮೆ ಕಾಂತಿರಹಿತನಾಗಿ ಕಾಣುವುದು, ಒಮ್ಮೆ ಅತಿಯಾದ ಪ್ರಜ್ಞೆ ಮತ್ತು ಇನ್ನೊಮ್ಮೆ ಪ್ರಜ್ಞೆಯಿಲ್ಲದವನಂತೆ ತೋರುವುದು, ಹಾಗೂ ಪ್ರಕೃತಿಯಲ್ಲಿ ಏರು-ಪೇರುಗಳು ಕಂಡುಬಂದರೆ ಆ ವ್ಯಕ್ತಿಯು ಆರು ತಿಂಗಳ ಒಳಗೆ ಮೃತ್ಯುವನ್ನಪ್ಪುವುದನ್ನು ಸೂಚಿಸುತ್ತದೆ.

12305012a ದೈವತಾನ್ಯವಜಾನಾತಿ ಬ್ರಾಹ್ಮಣೈಶ್ಚ ವಿರುಧ್ಯತೇ|

12305012c ಕೃಷ್ಣಶ್ಯಾವಚ್ಚವಿಚ್ಚಾಯಃ ಷಣ್ಮಾಸಾನ್ಮೃತ್ಯುಲಕ್ಷಣಮ್||

ಕಪ್ಪುವರ್ಣದವರಾಗಿದ್ದರೂ ಬಿಳಿಚಿಕೊಂಡಿರುವ, ದೇವತೆಗಳನ್ನು ಅನಾದರಿಸುವ ಮತ್ತು ಬ್ರಾಹ್ಮಣರನ್ನು ವಿರೋಧಿಸುವವರೂ ಕೂಡ ಅರು ತಿಂಗಳಿಗಿಂತ ಹೆಚ್ಚು ಸಮಯ ಜೀವಿತರಾಗಿರಲಾರರು. ಇದು ಈ ಲಕ್ಷಣಗಳಿಂದ ಸೂಚಿತಗೊಳ್ಳುತ್ತದೆ.

12305013a ಶೀರ್ಣನಾಭಿ ಯಥಾ ಚಕ್ರಂ[2] ಚಿದ್ರಂ ಸೋಮಂ ಪ್ರಪಶ್ಯತಿ|

12305013c ತಥೈವ ಚ ಸಹಸ್ರಾಂಶುಂ ಸಪ್ತರಾತ್ರೇಣ ಮೃತ್ಯುಭಾಕ್||

ಸೂರ್ಯ ಮತ್ತು ಚಂದ್ರಮಂಡಲಗಳು ತುಂಡಾದ ಕುಂಬಾರನ ಚಕ್ರಗಳಂತೆ ಕಾಣುವವನಿಗೆ ಏಳು ರಾತ್ರಿಗಳಲ್ಲಿ ಮೃತ್ಯುವೊದಗುತ್ತದೆ.

12305014a ಶವಗಂಧಮುಪಾಘ್ರಾತಿ ಸುರಭಿಂ ಪ್ರಾಪ್ಯ ಯೋ ನರಃ|

12305014c ದೇವತಾಯತನಸ್ಥಸ್ತು ಷಡ್ರಾತ್ರೇಣ ಸ ಮೃತ್ಯುಭಾಕ್||

ಯಾರಿಗೆ ದೇವಾಲಯದ ಸುಗಂಧಿತ ವಸ್ತುಗಳಿಂದ ಶವದ ದುರ್ಗಂಧದ ಅನುಭವವವಾಗುತ್ತದೆಯೋ ಅವನು ಏಳು ರಾತ್ರಿಗಳಲ್ಲಿ ವೃತ್ಯುವಶನಾಗುತ್ತಾನೆ.

12305015a ಕರ್ಣನಾಸಾವನಮನಂ ದಂತದೃಷ್ಟಿವಿರಾಗಿತಾ|

12305015c ಸಂಜ್ಞಾಲೋಪೋ ನಿರೂಷ್ಮತ್ವಂ ಸದ್ಯೋಮೃತ್ಯುನಿದರ್ಶನಮ್||

12305016a ಅಕಸ್ಮಾಚ್ಚ ಸ್ರವೇದ್ಯಸ್ಯ ವಾಮಮಕ್ಷಿ ನರಾಧಿಪ|

12305016c ಮೂರ್ಧತಶ್ಚೋತ್ಪತೇದ್ಧೂಮಃ ಸದ್ಯೋಮೃತ್ಯುನಿದರ್ಶನಮ್||

ನರಾಧಿಪ! ಮೂಗು ಮತ್ತು ಕಿವಿಗಳು ಓರಯಾದರೆ, ಹಲ್ಲು ಮತ್ತು ಕಣ್ಣುಗಳ ಬಣ್ಣವು ಬದಲಾದರೆ, ಮೂರ್ಛೆತಪ್ಪಿದರೆ, ಶರೀರವು ತಣ್ಣಗಾದರೆ, ಎಡಗಣ್ಣಿನಲ್ಲಿ ಅಕಸ್ಮಾತ್ ಕಣ್ಣೀರು ಸುರಿಯತೊಡಗಿದರೆ, ಮತ್ತು ನೆತ್ತಿಯಿಂದ ಹೊಗೆಯು ಹೊರಟರೆ ಅವನಿಗೆ ತತ್ಕಾಲದಲ್ಲಿಯೇ ಮೃತ್ಯುವೊದಗುತ್ತದೆ. ಇವು ತತ್ಕಾಲದಲ್ಲಿಯೇ ಆಗುವ ಮೃತ್ಯುವಿನ ಸೂಚನೆಗಳು.

12305017a ಏತಾವಂತಿ ತ್ವರಿಷ್ಟಾನಿ ವಿದಿತ್ವಾ ಮಾನವೋಽತ್ಮವಾನ್|

12305017c ನಿಶಿ ಚಾಹನಿ ಚಾತ್ಮಾನಂ ಯೋಜಯೇತ್ಪರಮಾತ್ಮನಿ||

12305018a ಪ್ರತೀಕ್ಷಮಾಣಸ್ತತ್ಕಾಲಂ ಯತ್ಕಾಲಂ ಪ್ರತಿ ತದ್ಭವೇತ್[3]|

ಈ ಮೃತ್ಯುಸೂಚಕ ಲಕ್ಷಣಗಳನ್ನು ತಿಳಿದು ಮನಸ್ಸನ್ನು ವಶದಲ್ಲಿಟ್ಟುಕೊಳ್ಳುವ ಸಾಧಕನು ದಿನ-ರಾತ್ರಿ ಪರಮಾತ್ಮನ ಧ್ಯಾನವನ್ನು ಮಾಡಬೇಕು ಮತ್ತು ಮೃತ್ಯುವಿನ ಕಾಲವನ್ನು ಪ್ರತೀಕ್ಷಿಸುತ್ತಿರಬೇಕು.

12305018c ಅಥಾಸ್ಯ ನೇಷ್ಟಂ ಮರಣಂ ಸ್ಥಾತುಮಿಚ್ಚೇದಿಮಾಂ ಕ್ರಿಯಾಮ್||

12305019a ಸರ್ವಗಂಧಾನ್ರಸಾಂಶ್ಚೈವ ಧಾರಯೇತ ಸಮಾಹಿತಃ[4]|

12305019c ತಥಾ ಹಿ ಮೃತ್ಯುಂ ಜಯತಿ ತತ್ಪರೇಣಾಂತರಾತ್ಮನಾ||

ಮೃತ್ಯುವು ಇಷ್ಟವಾಗದಿದ್ದರೆ ಮತ್ತು ಇನ್ನೂ ಈ ಜಗತ್ತಿನಲ್ಲಿ ಇರಬೇಕೆಂದಾದರೆ ಅಂಥವನು ಪೂರ್ವೋಕ್ತ ರೀತಿಯಲ್ಲಿ ಪಂಚಭೂತವಿಷಯಗಳನ್ನು ಧಾರಣೆಮಾಡಿ ಪೃಥ್ವೀ ಮೊದಲಾದವುಗಳ ಮೇಲೆ ವಿಜಯವನ್ನು ಸಾಧಿಸಿ ಸಂಪೂರ್ಣ ಗಂಧ, ರಸ ಮತ್ತು ರೂಪಗಳೇ ಮೊದಲಾದ ವಿಷಯಗಳನ್ನು ಸ್ವಾಧೀನಗೊಳಿಸಿಕೊಳ್ಳಬೇಕು[5]. ಹಾಗೆ ತನ್ನ ಪರಮ ಅಂತರಾತ್ಮನಿಂದಲೇ ಮೃತ್ಯುವನ್ನು ಜಯಿಸಿಕೊಳ್ಳಬಹುದು.

12305020a ಸಸಾಂಖ್ಯಧಾರಣಂ ಚೈವ ವಿದಿತ್ವಾ ಮನುಜರ್ಷಭ|

12305020c ಜಯೇಚ್ಚ ಮೃತ್ಯುಂ ಯೋಗೇನ ತತ್ಪರೇಣಾಂತರಾತ್ಮನಾ||

ಮನುಜರ್ಷಭ! ಸಾಂಖ್ಯ ಮತ್ತು ಯೋಗದ ಅನುಸಾರ ಧಾರಣಪೂರ್ವಕವಾಗಿ ಆತ್ಮತತ್ತ್ವದ ಜ್ಞಾನವನ್ನು ಪಡೆದುಕೊಂಡು ಧ್ಯಾನ ಯೋಗದ ಮೂಲಕ ಅಂತರಾತ್ಮನನ್ನು ಪರಮಾತ್ಮನಲ್ಲಿರಿಸುವುದರಿಂದ ಯೋಗಿಯು ಮೃತ್ಯುವನ್ನು ಗೆಲ್ಲುತ್ತಾನೆ.

12305021a ಗಚ್ಚೇತ್ಪ್ರಾಪ್ಯಾಕ್ಷಯಂ ಕೃತ್ಸ್ನಮಜನ್ಮ ಶಿವಮವ್ಯಯಮ್|

12305021c ಶಾಶ್ವತಂ ಸ್ಥಾನಮಚಲಂ ದುಷ್ಪ್ರಾಪಮಕೃತಾತ್ಮಭಿಃ||

ಇದರಿಂದ ಅವನು ಅಶುದ್ಧಚಿತ್ತದವರಿಗೆ ದುರ್ಲಭವಾದ ಆ ಅಕ್ಷಯ, ಅಜನ್ಮಾ, ಅಚಲ, ಅವಿಕಾರೀ, ಪೂರ್ಣ, ಮತ್ತು ಕಲ್ಯಾಣಮಯ ಸನಾತನ ಪದವನ್ನು ಪಡೆಯುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ಪಂಚಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರಾಐದನೇ ಅಧ್ಯಾಯವು.

 [1] ನಾಭ್ಯಾಮಿಂದ್ರತ್ವಮೇವ ಚ| (ಗೀತಾ ಪ್ರೆಸ್).

[2] ಊರ್ಣನಾಭೇರ್ಯಥಾ ಚಕ್ರಂ (ಗೀತಾ ಪ್ರೆಸ್).

[3] ಪ್ರೇತತಾ ಭವೇತ್| (ಗೀತಾ ಪ್ರೆಸ್).

[4] ಧಾರಯೀತ ನರಾಧಿಪ| (ಗೀತಾ ಪ್ರೆಸ್).

[5] ಧಾರಣೆಯಿಂದ ಪಂಚಭೂತಗಳ ಮೇಲೆ ವಿಜಯ ಅಥವಾ ಅಧಿಕಾರವನ್ನು ಪಡೆದುಕೊಂಡು ಯೋಗಿಯು ಜನ್ಮ-ಮುಪ್ಪು ಮತ್ತು ಮೃತ್ಯು ಮೊದಲಾದವುಗಳನ್ನು ಗೆಲ್ಲಬಹುದು ಎಂಬ ವಿಷಯದಲ್ಲಿ ಈ ಸೂತ್ರವೂ ಪ್ರಮಾಣವನ್ನು ನೀಡುತ್ತದೆ: ಪೃಥ್ವ್ಯಪ್ತೇಜೋಽನಿಲಖೇ ಸಮುತ್ಥಿತೇ ಪಂಚಾತ್ಮಕೇ ಯೋಗಗುಣೇ ಪ್ರವೃತ್ತೇ| ನ ತಸ್ಯ ರೋಗೋ ನ ಚರಾ ನ ಮೃತ್ಯುಃ ಪ್ರಾಪ್ತಸ್ಯ ಯೋಗಾಗ್ನಿಮಯಂ ಶರೀರಮ್|| ಧ್ಯಾನಯೋಗದ ಸಾಧನೆಯನ್ನು ಮಾಡುತ್ತಾ ಯಾವಾಗ ಪೃಥ್ವೀ, ಜಲ, ತೇಜ, ವಾಯು ಮತ್ತು ಆಕಾಶ – ಈ ಐದು ಮಹಾಭೂತಗಳ ಮೇಲೆ ಸಾಧಕನ ಅಧಿಕಾರವುಂಟಾದಾಗ ಮತ್ತು ಈ ಐದು ಮಹಾಭೂತಗಳೊಂದಿಗೆ ಸಂಬಂಧವನ್ನಿಟ್ಟುಕೊಂಡಿರುವ ಯೋಗವಿಷಯಕ ಐದು ಸಿದ್ಧಿಗಳು ಪ್ರಕಟವಾದಾಗ ಆ ಸಮಯದಲ್ಲಿ ಯೋಗಾಗ್ನಿಮಯ ಶರೀರವು ಪ್ರಾಪ್ತವಾಗುತ್ತದೆ. ಅಂಥಹ ಶರೀರದಲ್ಲಿ ರೋಗವುಂಟಾಗುವುದಿಲ್ಲ. ವೃದ್ಧಾಪ್ಯವುಂಟಾಗುವುದಿಲ್ಲ ಮತ್ತು ಅವನಿಗೆ ಮೃತ್ಯುವೂ ಆಗುವುದಿಲ್ಲ. ಅವನ ಇಷ್ಟವಿಲ್ಲದೇ ಅವನ ಶರೀರವು ನಷ್ಟವಾಗುವುದಿಲ್ಲ (ಯೋಗದರ್ಪಣ, ೩:೪೬,೪೭) (ಗೀತಾ ಪ್ರೆಸ್).

Comments are closed.