Shanti Parva: Chapter 303

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೦೩

ಪ್ರಕೃತಿ-ಪುರುಷರ ವಿವೇಕ ಮತ್ತು ಅದರ ಫಲ (1-21).

12303001 ಯಾಜ್ಞವಲ್ಕ್ಯ ಉವಾಚ|

12303001a ನ ಶಕ್ಯೋ ನಿರ್ಗುಣಸ್ತಾತ ಗುಣೀಕರ್ತುಂ ವಿಶಾಂ ಪತೇ|

12303001c ಗುಣವಾಂಶ್ಚಾಪ್ಯಗುಣವಾನ್ಯಥಾತತ್ತ್ವಂ ನಿಬೋಧ ಮೇ||

ಯಾಜ್ಞವಲ್ಕ್ಯನು ಹೇಳಿದನು: “ವಿಶಾಂಪತೇ! ಅಯ್ಯಾ! ನಿರ್ಗುಣನನ್ನು ಸಗುಣನನ್ನಾಗಿ ಮಾಡಲು ಶಕ್ಯವಿಲ್ಲ. ಹಾಗೆಯೇ ಸಗುಣನನ್ನು ನಿರ್ಗುಣನನ್ನಾಗಿ ಮಾಡಲು ಸಾಧ್ಯವಿಲ್ಲ. ಅದರ ಕುರಿತು ಯಥಾತತ್ತ್ವವನ್ನು ಕೇಳು.

12303002a ಗುಣೈರ್ಹಿ ಗುಣವಾನೇವ ನಿರ್ಗುಣಶ್ಚಾಗುಣಸ್ತಥಾ|

12303002c ಪ್ರಾಹುರೇವಂ ಮಹಾತ್ಮಾನೋ ಮುನಯಸ್ತತ್ತ್ವದರ್ಶಿನಃ||

ಗುಣಗಳೊಡನೆ ಸಂಪರ್ಕವಿರುವವನನ್ನು ಗುಣವಂತನೆಂದೂ ಗುಣಗಳೊಡನೆ ಸಂಪರ್ಕವಿಲ್ಲದವನನ್ನು ನಿರ್ಗುಣನೆಂದೂ ತತ್ತ್ವದರ್ಶಿ ಮಹಾತ್ಮರು ಹೇಳುತ್ತಾರೆ.

12303003a ಗುಣಸ್ವಭಾವಸ್ತ್ವವ್ಯಕ್ತೋ ಗುಣಾನೇವಾಭಿವರ್ತತೇ|

12303003c ಉಪಯುಂಕ್ತೇ ಚ ತಾನೇವ ಸ ಚೈವಾಜ್ಞಃ ಸ್ವಭಾವತಃ||

ಅವ್ಯಕ್ತಪ್ರಕೃತಿಯು ಸ್ವಾಭಾವಿಕವಾಗಿಯೇ ಗುಣಯುಕ್ತವಾದುದು. ಅದು ಎಂದೂ ಗುಣಗಳನ್ನು ಅತಿಕ್ರಮಿಸುವುದಿಲ್ಲ. ಆ ಗುಣಗಳನ್ನೇ ತನ್ನ ಅಸ್ತಿತ್ವಕ್ಕಾಗಿ ಸರ್ವದಾ ಉಪಯೋಗಿಸಿಕೊಳ್ಳುತ್ತದೆ. ಮತ್ತು ಅವ್ಯಕ್ತವು ಸ್ವಭಾವತಃ ಅಜ್ಞಾನಿಯೂ ಆಗಿದೆ.

12303004a ಅವ್ಯಕ್ತಸ್ತು ನ ಜಾನೀತೇ ಪುರುಷೋ ಜ್ಞಃ ಸ್ವಭಾವತಃ|

12303004c ನ ಮತ್ತಃ ಪರಮಸ್ತೀತಿ ನಿತ್ಯಮೇವಾಭಿಮನ್ಯತೇ||

ಅವ್ಯಕ್ತ ಪ್ರಕೃತಿಗೆ ತನ್ನ ಜೊತೆಯಿರುವ ಪುರುಷನು ಸ್ವಭಾವತಃ ಜ್ಞಾನಿ ಎನ್ನುವುದನ್ನು ತಿಳಿದಿರುವುದಿಲ್ಲ. ಆದುದರಿಂದ ಅದು ತನಗಿಂತಲೂ ಶೇಷ್ಠವಾದುದು ಬೇರೆ ಯಾವುದೂ ಇಲ್ಲವೆಂದು ನಿತ್ಯವೂ ಭಾವಿಸಿಕೊಳ್ಳುತ್ತದೆ.

12303005a ಅನೇನ ಕಾರಣೇನೈತದವ್ಯಕ್ತಂ ಸ್ಯಾದಚೇತನಮ್|

12303005c ನಿತ್ಯತ್ವಾದಕ್ಷರತ್ವಾಚ್ಚ ಕ್ಷರಾಣಾಂ ತತ್ತ್ವತೋಽನ್ಯಥಾ[1]||

ಈ ಕಾರಣದಿಂದಲೇ ಅವ್ಯಕ್ತಪ್ರಕೃತಿಯು ಜಡವಾಗಿದೆ. ಅದು ನಿತ್ಯವೂ ಕ್ಷರವೂ, ವಿಕಾರಶೀಲವೂ ಮತ್ತು ವಿನಾಶಶೀಲವು ಆಗಿರುವುದರಿಂದ ಪ್ರಕೃತಿಯು ಜಡವಲ್ಲದೇ ಬೇರೆ ಯಾವುದೂ ಆಗಲು ಸಾಧ್ಯವೇ ಇಲ್ಲ.

12303006a ಯದಾಜ್ಞಾನೇನ ಕುರ್ವೀತ ಗುಣಸರ್ಗಂ ಪುನಃ ಪುನಃ|

12303006c ಯದಾತ್ಮಾನಂ ನ ಜಾನೀತೇ ತದಾವ್ಯಕ್ತಮಿಹೋಚ್ಯತೇ[2]||

ಎಲ್ಲಿಯವರೆಗೆ ಚೇತನನು ಅಜ್ಞಾನದಿಂದ ಗುಣಗಳ ಸಂಸರ್ಗವನ್ನು ಪುನಃ ಪುನಃ ಮಾಡುತ್ತಿರುತ್ತಾನೋ ಮತ್ತು ತನ್ನ ಅಸಂಗ ಸ್ವರೂಪವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವನು ಅವ್ಯಕ್ತನೆಂದೇ ಕರೆಯಲ್ಪಡುತ್ತಾನೆ.

12303007a ಕರ್ತೃತ್ವಾಚ್ಚಾಪಿ ತತ್ತ್ವಾನಾಂ ತತ್ತ್ವಧರ್ಮೀ ತಥೋಚ್ಯತೇ|

12303007c ಕರ್ತೃತ್ವಾಚ್ಚೈವ ಯೋನೀನಾಂ ಯೋನಿಧರ್ಮಾ ತಥೋಚ್ಯತೇ||

ತತ್ತ್ವಗಳ ಕರ್ತೃತ್ವದಿಂದಾಗಿ ಅವನನ್ನು ತತ್ತ್ವಧರ್ಮಿ ಎಂದು ಕರೆಯುತ್ತಾರೆ. ಯೋನಿಗಳ ಕರ್ತೃತ್ವದಿಂದ ಅವನನ್ನು ಯೋನಿಧರ್ಮಾ ಎಂದು ಕರೆಯುತ್ತಾರೆ.

12303008a ಕರ್ತೃತ್ವಾತ್ ಪ್ರಕೃತೀನಾಂ ತು ತಥಾ ಪ್ರಕೃತಿಧರ್ಮಿತಾ|

12303008c ಕರ್ತೃತ್ವಾಚ್ಚಾಪಿ ಬೀಜಾನಾಂ ಬೀಜಧರ್ಮೀ ತಥೋಚ್ಯತೇ||

ಪ್ರಕೃತಿಗಳ ಕರ್ತೃತ್ವದಿಂದ ಅವನನ್ನು ಪಕೃತಿಧರ್ಮೀ ಎಂದೂ ಬೀಜಗಳ ಕರ್ತೃತ್ವದಿಂದಾಗಿ ಅವನನ್ನು ಬೀಜಧರ್ಮೀ ಎಂದೂ ಕರೆಯುತ್ತಾರೆ.

12303009a ಗುಣಾನಾಂ ಪ್ರಸವತ್ವಾಚ್ಚ ತಥಾ ಪ್ರಸವಧರ್ಮವಾನ್[3]|

12303009c ಕರ್ತೃತ್ವಾತ್ ಪ್ರಲಯಾನಾಂ ಚ ತಥಾ ಪ್ರಲಯಧರ್ಮಿತಾ||

ಗುಣಗಳ ಸೃಷ್ಟಿಯನ್ನು ಮಾಡುವುದರಿಂದ ಅವನನ್ನು ಪ್ರಸವಧರ್ಮನೆಂದೂ ಮತ್ತು ಪ್ರಲಯಗಳ ಕರ್ತೃತ್ವದಿಂದ ಪ್ರಲಯಧರ್ಮನೆಂದೂ ಕರೆಯುತ್ತಾರೆ.

12303010a ಬೀಜತ್ವಾತ್ ಪ್ರಕೃತಿತ್ವಾಚ್ಚ ಪ್ರಲಯತ್ವಾತ್ತಥೈವ ಚ|

12303010c ಉಪೇಕ್ಷಕತ್ವಾದನ್ಯತ್ವಾದಭಿಮಾನಾಚ್ಚ ಕೇವಲಮ್||

ಪೃಕೃತಿಗೆ ಮತ್ತು ಪ್ರಲಯಕ್ಕೆ ಬೀಜರೂಪವಾಗಿರುವುದರಿಂದ, ಪ್ರಕೃತಿಗೆ ಸಾಕ್ಷಿಯಾಗಿರುವುದರಿಂದ, ಪ್ರಕೃತಿಯಿಂದ ಅನ್ಯವಾಗಿರುವುದರಿಂದ ಮತ್ತು ಅದ್ವಿತೀಯವಾಗಿರುವುದರಿಂದ ಅದನ್ನು ಕೇವಲ ಎಂದು ಕರೆಯುತ್ತಾರೆ.

12303011a ಮನ್ಯಂತೇ ಯತಯಃ ಶುದ್ಧಾ ಅಧ್ಯಾತ್ಮವಿಗತಜ್ವರಾಃ|

12303011c ಅನಿತ್ಯಂ ನಿತ್ಯಮವ್ಯಕ್ತಮೇವಮೇತದ್ಧಿ ಶುಶ್ರುಮ||

ಆಧ್ಯಾತ್ಮಜ್ಞ ಚಿಂತಾರಹಿತ ಸಿದ್ಧ ಯತಿಗಳಿಂದ ಇದನ್ನು ಕೇಳಿದ್ದೇವೆ: ಪುರುಷನು ನಿತ್ಯವೂ ಅವ್ಯಕ್ತನೂ ಆಗಿದ್ದರೂ ಪ್ರಕೃತಿಯ ಸಂಸರ್ಗದಿಂದ ಅನಿತ್ಯನೂ ವ್ಯಕ್ತನೂ ಆಗಿ ಕಾಣಿಸುತ್ತಾನೆ.

12303012a ಅವ್ಯಕ್ತೈಕತ್ವಮಿತ್ಯಾಹುರ್ನಾನಾತ್ವಂ ಪುರುಷಸ್ತಥಾ|

12303012c ಸರ್ವಭೂತದಯಾವಂತಃ ಕೇವಲಂ ಜ್ಞಾನಮಾಸ್ಥಿತಾಃ||

ಸರ್ವಭೂತದಯಾವಂತರು ಮತ್ತು ಕೇವಲ ಜ್ಞಾನವನ್ನಾಶ್ರಯಿಸಿರುವವರು ಪ್ರಕೃತಿಯು ಒಂದು ಮತ್ತು ಪುರುಷನು ಅನೇಕ ಎಂದು ಅಭಿಪ್ರಾಯಪಡುತ್ತಾರೆ.

12303013a ಅನ್ಯಃ ಸ ಪುರುಷೋಽವ್ಯಕ್ತಸ್ತ್ವಧ್ರುವೋ ಧ್ರುವಸಂಜ್ಞಕಃ|

12303013c ಯಥಾ ಮುಂಜ ಇಷೀಕಾಯಾಸ್ತಥೈವೈತದ್ಧಿ ಜಾಯತೇ||

ಪುರುಷನು ಪ್ರಕೃತಿಗಿಂತ ಭಿನ್ನನು ಹಾಗೂ ಅವ್ಯಕ್ತ ಪ್ರಕೃತಿಯು ಪುರುಷನಿಗಿಂತ ಭಿನ್ನ ಹಾಗೂ ಅನಿತ್ಯವಾದುದು. ಜಂಡು ಹುಲ್ಲಿನಿಂದ ಮುಂಜವನ್ನು ಹೇಗೆ ಬೇರ್ಪಡಿಸಬಹುದೋ ಹಾಗೆ ಪ್ರಕೃತಿಯೂ ಪುರುಷನಿಂದ ಬೇರೆಯಾಗಿದೆ.

12303014a ಅನ್ಯಂ ಚ ಮಶಕಂ ವಿದ್ಯಾದನ್ಯಚ್ಚೋದುಂಬರಂ ತಥಾ|

12303014c ನ ಚೋದುಂಬರಸಂಯೋಗೈರ್ಮಶಕಸ್ತತ್ರ ಲಿಪ್ಯತೇ||

12303015a ಅನ್ಯ ಏವ ತಥಾ ಮತ್ಸ್ಯಸ್ತಥಾನ್ಯದುದಕಂ ಸ್ಮೃತಮ್|

12303015c ನ ಚೋದಕಸ್ಯ ಸ್ಪರ್ಶೇನ ಮತ್ಸ್ಯೋ ಲಿಪ್ಯತಿ ಸರ್ವಶಃ||

ಅತ್ತಿ ಹಣ್ಣು ಮತ್ತು ಅದರಲ್ಲಿರುವ ಕೀಟಗಳು ಜೊತೆಯಲ್ಲಿಯೇ ಒಂದಾಗಿದ್ದರೂ ಹೇಗೆ ಬೇರೆ ಬೇರೆ ತೋರುತ್ತವೆಯೋ, ಅತ್ತೀಹಣ್ಣಿನ ಸಂಸರ್ಗದಿಂದ ಕೀಟವು ಹೇಗೆ ಅದರಲ್ಲಿ ಲಿಪ್ತವಾಗಿರುವುದಿಲ್ಲವೋ ಮತ್ತು ಮೀನು ಮತ್ತು ನೀರು ಹೇಗೆ ಪ್ರತ್ಯೇಕ ವಸ್ತುಗಳೋ ಮತ್ತು ಹೇಗೆ ನೀರಿನ ಸ್ಪರ್ಶದಿಂದ ಯಾವ ಮೀನೂ ಎಂದೂ ನೀರಿನಲ್ಲಿ ಲಿಪ್ತವಾಗುವುದಿಲ್ಲವೋ ಹಾಗೆಯೇ ಪ್ರಕೃತಿ ಮತ್ತು ಪುರುಷರು ಬೇರೆ ಬೇರೆ.

12303016a ಅನ್ಯೋ ಹ್ಯಗ್ನಿರುಖಾಪ್ಯನ್ಯಾ ನಿತ್ಯಮೇವಮವೈಹಿ ಭೋಃ|

12303016c ನ ಚೋಪಲಿಪ್ಯತೇ ಸೋಽಗ್ನಿರುಖಾಸಂಸ್ಪರ್ಶನೇನ ವೈ||

ಹೇಗೆ ಅಗ್ನಿ ಮತ್ತು ಮಣ್ಣಿನ ಇಟ್ಟಿಗೆಗಳು ಪ್ರತ್ಯೇಕ ವಸ್ತುಗಳೋ ಹಾಗೆ ಪ್ರಕೃತಿ ಮತ್ತು ಪುರುಷರ ಭೇದವನ್ನು ನಿತ್ಯ ತಿಳಿದುಕೋ. ಗಡಿಗೆಯಲ್ಲಿರುವ ಅಗ್ನಿಯು ಗಡಿಗೆಯ ಸಂಸ್ಪರ್ಷದಿಂದ ದೂಷಿತಗೊಳ್ಳುವುದಿಲ್ಲ.

12303017a ಪುಷ್ಕರಂ ತ್ವನ್ಯದೇವಾತ್ರ ತಥಾನ್ಯದುದಕಂ ಸ್ಮೃತಮ್|

12303017c ನ ಚೋದಕಸ್ಯ ಸ್ಪರ್ಶೇನ ಲಿಪ್ಯತೇ ತತ್ರ ಪುಷ್ಕರಮ್||

ಕಮಲ ಮತ್ತು ನೀರು ಹೇಗೆ ಬೇರೆ ಬೇರೆಯಾಗಿರುವವೋ ಮತ್ತು ನೀರಿನ ಸ್ಪರ್ಷದಂತೆ ಕಮಲವು ಹೇಗೆ ನೀರಿನಲ್ಲಿ ಲಿಪ್ತವಾಗುವುದಿಲ್ಲವೋ ಹಾಗೆ ಪ್ರಕೃತಿ-ಪುರುಷರು ಭಿನ್ನರು ಮತ್ತು ಅಸಂಗರು.

12303018a ಏತೇಷಾಂ ಸಹ ಸಂವಾಸಂ ವಿವಾಸಂ ಚೈವ ನಿತ್ಯಶಃ|

12303018c ಯಥಾ ತಥೈನಂ ಪಶ್ಯಂತಿ ನ ನಿತ್ಯಂ ಪ್ರಾಕೃತಾ ಜನಾಃ||

12303019a ಯೇ ತ್ವನ್ಯಥೈವ ಪಶ್ಯಂತಿ ನ ಸಮ್ಯಕ್ತೇಷು ದರ್ಶನಮ್|

12303019c ತೇ ವ್ಯಕ್ತಂ ನಿರಯಂ ಘೋರಂ ಪ್ರವಿಶಂತಿ ಪುನಃ ಪುನಃ||

ಪ್ರಾಕೃತ ಜನರು ಇವರ ಸಹವಾಸ ಮತ್ತು ನಿವಾಸಗಳನ್ನು ಎಂದೂ ಸರಿಯಾಗಿ ತಿಳಿಯಲಾರರು. ಇವೆರಡರ ಸ್ವರೂಪಗಳನ್ನು ಯಾರು ಅನ್ಯಥಾ ತಿಳಿದಿರುತ್ತಾರೋ ಅಂದರೆ ಪ್ರಕೃತಿ ಮತ್ತು ಪುರುಷರು ಪರಸ್ಪರ ಭಿನ್ನರಲ್ಲ ಎಂದು ತಿಳಿದಿರುತ್ತಾರೋ ಅವರ ದೃಷ್ಟಿಯು ಸರಿಯಲ್ಲ. ಅವರು ಅವಶ್ಯವಾಗಿ ಪುನಃ ಪುನಃ ಘೋರ ನರಕಗಳಲ್ಲಿ ಬೀಳುತ್ತಾರೆ.

12303020a ಸಾಂಖ್ಯದರ್ಶನಮೇತತ್ತೇ ಪರಿಸಂಖ್ಯಾತಮುತ್ತಮಮ್|

12303020c ಏವಂ ಹಿ ಪರಿಸಂಖ್ಯಾಯ ಸಾಂಖ್ಯಾಃ ಕೇವಲತಾಂ ಗತಾಃ||

ಹೀಗೆ ನಾನು ನಿನಗೆ ಈ ಉತ್ತಮ ಸಾಂಖ್ಯದರ್ಶನವನ್ನು ವರ್ಣಿಸಿದ್ದೇನೆ. ಸಾಂಖ್ಯರು ಇದನ್ನು ತಿಳಿದು ಕೈವಲ್ಯವನ್ನು ಹೊಂದುತ್ತಾರೆ.

12303021a ಯೇ ತ್ವನ್ಯೇ ತತ್ತ್ವಕುಶಲಾಸ್ತೇಷಾಮೇತನ್ನಿದರ್ಶನಮ್|

12303021c ಅತಃ ಪರಂ ಪ್ರವಕ್ಷ್ಯಾಮಿ ಯೋಗಾನಾಮಪಿ ದರ್ಶನಮ್||

ಅನ್ಯ ತತ್ತ್ವಕುಶಲರದ್ದೂ ಇದೇ ನಿದರ್ಶನವಾಗಿದೆ. ಇನ್ನು ಮುಂದೆ ನಾನು ನಿನಗೆ ಯೋಗಿಗಳ ದರ್ಶನದ ಕುರಿತು ಹೇಳುತ್ತೇನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ತ್ರ್ಯಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರಾಮೂರನೇ ಅಧ್ಯಾಯವು.

[1] ನಿತ್ಯತ್ವಾಚ್ಚಾಕ್ಷರತ್ವಾಚ್ಚ ಕ್ಷರತ್ವಾನ್ನ ತದನ್ಯಥಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ತದಾತ್ಮಾಪಿ ನ ಮುಚ್ಯತೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಪ್ರಲಯತ್ವಾತ್ತಥೈವ ಚ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.