Shanti Parva: Chapter 296

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೬

ಕ್ಷರ-ಅಕ್ಷರ ಮತ್ತು ಪರಮಾತ್ಮ ತತ್ತ್ವದ ವರ್ಣನೆ, ಜೀವದ ನಾನಾತ್ವ ಮತ್ತು ಏಕತ್ವದ ದೃಷ್ಟಾಂತ. ಉಪದೇಶದ ಅಧಿಕಾರೀ ಮತ್ತು ಅನಧಿಕಾರಿಗಳ ವರ್ಣನೆ ಮತ್ತು ಈ ಜ್ಞಾನದ ಪರಂಪರೆಯೊಂದಿಗೆ ವಸಿಷ್ಠ-ಕರಾಲಜನಕರ ಸಂವಾದದ ಉಪಸಂಹಾರ (೧-೫೦).

12296001 ವಸಿಷ್ಠ ಉವಾಚ|

12296001a ಅಪ್ರಬುದ್ಧಮಥಾವ್ಯಕ್ತಮಿಮಂ ಗುಣವಿಧಿಂ ಶೃಣು|

12296001c ಗುಣಾನ್ಧಾರಯತೇ ಹ್ಯೇಷಾ ಸೃಜತ್ಯಾಕ್ಷಿಪತೇ ತಥಾ||

12296002a ಅಜಸ್ರಂ ತ್ವಿಹ ಕ್ರೀಡಾರ್ಥಂ ವಿಕುರ್ವಂತೀ ನರಾಧಿಪ|

12296002c ಆತ್ಮಾನಂ ಬಹುಧಾ ಕೃತ್ವಾ ತಾನ್ಯೇವ ಚ ವಿಚಕ್ಷತೇ||

ವಸಿಷ್ಠನು ಹೇಳಿದನು: “ಈಗ ಬುದ್ಧ (ಪರಮಾತ್ಮ), ಅಬುದ್ಧ (ಜೀವಾತ್ಮ) ಮತ್ತು ಈ ಗುಣಮಯೀ ಸೃಷ್ಟಿ (ಪ್ರಾಕೃತ ಪ್ರಪಂಚ) ಇವುಗಳ ವರ್ಣನೆಯನ್ನು ಕೇಳು. ಜೀವಾತ್ಮನು ಪ್ರಕೃತಿಯ ಗುಣಗಳನ್ನು ಧರಿಸಿ ಪುನಃ ಪುನಃ ಹುಟ್ಟಿ-ಸಾಯುತ್ತಿರುತ್ತಾನೆ. ನರಾಧಿಪ! ಆಟಕ್ಕಾಗಿ ವಿಕಾರವನ್ನು ಹೊಂದಿ ತನ್ನನ್ನು ತಾನು ಅನೇಕ ರೂಪಗಳಲ್ಲಿ ಪ್ರಕಟಪಡಿಸಿಕೊಂಡು ಆ ರೂಪಗಳೇ ಸತ್ಯ ಎಂದು ತಿಳಿದು ನೋಡುತ್ತಿರುತ್ತಾನೆ.

12296003a ಏತದೇವಂ ವಿಕುರ್ವಾಣಾಂ ಬುಧ್ಯಮಾನೋ ನ ಬುಧ್ಯತೇ|

12296003c ಅವ್ಯಕ್ತಬೋಧನಾಚ್ಚೈವ ಬುಧ್ಯಮಾನಂ ವದಂತ್ಯಪಿ||

ವಾಸ್ತವವಾಗಿ ಜ್ಞಾನಸಂಪನ್ನನಾಗಿದ್ದರೂ ಹೀಗೆ ಪ್ರಕೃತಿಯ ಸಂಸರ್ಗದಿಂದ ವಿಕಾರಗೊಂಡ ಜೀವಾತ್ಮನು ಬ್ರಹ್ಮನನ್ನು ತಿಳಿಯಲಾರನು. ಆದರೆ ಅವನು ಅವ್ಯಕ್ತ ಪ್ರಕೃತಿಯನ್ನು ತಿಳಿದಿರುತ್ತಾನಾದುದರಿಂದ ಅವನನ್ನು “ಬುಧ್ಯಮಾನ” ಎಂದು ಹೇಳುತ್ತಾರೆ.

12296004a ನ ತ್ವೇವ ಬುಧ್ಯತೇಽವ್ಯಕ್ತಂ ಸಗುಣಂ ವಾಥ ನಿರ್ಗುಣಮ್|

12296004c ಕದಾ ಚಿತ್ತ್ವೇವ ಖಲ್ವೇತದಾಹುರಪ್ರತಿಬುದ್ಧಕಮ್||

ಪರಬ್ರಹ್ಮ ಪರಮಾತ್ಮನು ಸಗುಣನಾಗಿರಲಿ ಅಥವಾ ನಿರ್ಗುಣನಾಗಿರಲಿ, ಪ್ರಕೃತಿಯು ಅವನನ್ನು ಎಂದೂ ತಿಳಿಯಲಾರಳು. ಏಕೆಂದರೆ ಅವಳು ಜಡಸ್ವರೂಪಳು. ಆದುದರಿಂದ ಸಾಂಖ್ಯವಿದ್ವಾಂಸರು ಪ್ರಕೃತಿಯನ್ನು “ಅಪ್ರತಿಬುದ್ಧ” (ಜ್ಞಾನಶೂನ್ಯ) ಎಂದು ಹೇಳುತ್ತಾರೆ.

12296005a ಬುಧ್ಯತೇ ಯದಿ ವಾವ್ಯಕ್ತಮೇತದ್ವೈ ಪಂಚವಿಂಶಕಮ್|

12296005c ಬುಧ್ಯಮಾನೋ ಭವತ್ಯೇಷ ಸಂಗಾತ್ಮಕ ಇತಿ ಶ್ರುತಿಃ||

12296006a ಅನೇನಾಪ್ರತಿಬುದ್ಧೇತಿ ವದಂತ್ಯವ್ಯಕ್ತಮಚ್ಯುತಮ್|

ಒಂದುವೇಳೆ ಪ್ರಕೃತಿಯೂ ತಿಳಿದುಕೊಳ್ಳುತ್ತದೆ ಎಂದಾದರೂ ಅದು ಕೇವಲ ಇಪ್ಪತ್ತೈದನೆಯ ತತ್ತ್ವ ಪುರುಷನನ್ನು ಅವನೊಂದಿಗೆ ಸೇರಿ ತಿಳಿದುಕೊಳ್ಳಬಹುದು. ಪ್ರಕೃತಿಯೊಂದಿಗೆ ಸಂಯುಕ್ತನಾಗುವ ಕಾರಣದಿಂದಲೇ ಜೀವವು ಸಂಗಾತ್ಮಕವಾಗುತ್ತದೆ ಎಂಬ ಶ್ರುತಿವಾಕ್ಯವಿದೆ. ಈ ಸಂಗದೋಷದ ಕಾರಣದಿಂದಲೇ ಅವ್ಯಕ್ತ ಮತ್ತು ಅವಿಕಾರೀ ಜೀವಾತ್ಮಗಳನ್ನು ಜನರು “ಮೂಢ”ರು ಎಂದು ಕರೆಯುತ್ತಾರೆ.

12296006c ಅವ್ಯಕ್ತಬೋಧನಾಚ್ಚೈವ ಬುಧ್ಯಮಾನಂ ವದಂತ್ಯುತ||

12296007a ಪಂಚವಿಂಶಂ ಮಹಾತ್ಮಾನಂ ನ ಚಾಸಾವಪಿ ಬುಧ್ಯತೇ|

12296007c ಷಡ್ವಿಂಶಂ ವಿಮಲಂ ಬುದ್ಧಮಪ್ರಮೇಯಂ ಸನಾತನಮ್||

12296008a ಸತತಂ[1] ಪಂಚವಿಂಶಂ ಚ ಚತುರ್ವಿಂಶಂ ಚ ಬುಧ್ಯತೇ|

ಇಪ್ಪತ್ತೈದನೆಯ ತತ್ತ್ವರೂಪ ಮಹಾ ಆತ್ಮವು ಅವ್ಯಕ್ತ ಪ್ರಕೃತಿಯನ್ನು ತಿಳಿದಿರುತ್ತಾನಾದುದರಿಂದ ಅವನನ್ನು “ಬುಧ್ಯಮಾನ” ಎಂದು ಕರೆಯುತ್ತಾರೆ. ಆದರೆ ಅವನೂ ಕೂಡ ಇಪ್ಪತ್ತಾರನೆಯ ತತ್ತ್ವರೂಪ ನಿರ್ಮಲ ನಿತ್ಯ ಶುದ್ಧ ಬುದ್ಧ ಅಪ್ರಮೇಯ ಸನಾತನ ಪರಮಾತ್ಮನನ್ನು ತಿಳಿದಿರುವುದಿಲ್ಲ. ಆದರೆ ಆ ಸನಾತನ ಪರಮಾತ್ಮನು ಆ ಇಪ್ಪತ್ತೈದನೆಯ ತತ್ತ್ವರೂಪ ಜೀವಾತ್ಮನನ್ನು ಮತ್ತು ಇಪ್ಪತ್ನಾಲ್ಕನೆಯ ಪ್ರಕೃತಿಯನ್ನೂ ಚೆನ್ನಾಗಿ ತಿಳಿದಿರುತ್ತಾನೆ.

12296008c ದೃಶ್ಯಾದೃಶ್ಯೇ ಹ್ಯನುಗತಮುಭಾವೇವ ಮಹಾದ್ಯುತೀ||

12296009a ಅವ್ಯಕ್ತಂ ನ ತು ತದ್ಬ್ರಹ್ಮ ಬುಧ್ಯತೇ ತಾತ ಕೇವಲಮ್|

ಮಹಾದ್ಯುತೇ! ತಾತ! ಆ ಅವ್ಯಕ್ತ ಅದ್ವಿತೀಯ ಬ್ರಹ್ಮನು ಇಲ್ಲಿರುವ ದೃಶ್ಯ ಮತ್ತು ಅದೃಶ್ಯ ಎಲ್ಲ ವಸ್ತುಗಳಲ್ಲಿಯೂ ಸ್ವಭಾವತಃ ವ್ಯಾಪ್ತಗೊಂಡಿರುವುದರಿಂದ ಅವನು ಎಲ್ಲವನ್ನೂ ತಿಳಿದಿರುತ್ತಾನೆ.

12296009c ಕೇವಲಂ ಪಂಚವಿಂಶಂ ಚ ಚತುರ್ವಿಂಶಂ ನ ಪಶ್ಯತಿ||

12296010a ಬುಧ್ಯಮಾನೋ ಯದಾತ್ಮಾನಮನ್ಯೋಽಹಮಿತಿ ಮನ್ಯತೇ|

12296010c ತದಾ ಪ್ರಕೃತಿಮಾನೇಷ ಭವತ್ಯವ್ಯಕ್ತಲೋಚನಃ||

ಇಪ್ಪತ್ನಾಲ್ಕನೆಯ ಅವ್ಯಕ್ತ ಪ್ರಕೃತಿಯು ಅದ್ವಿತೀಯ ಬ್ರಹ್ಮನನ್ನೂ ನೋಡುವುದಿಲ್ಲ ಮತ್ತು ಇಪ್ಪತ್ತೈದನೆಯ ತತ್ತ್ವರೂಪ ಜೀವಾತ್ಮನನ್ನೂ ನೋಡುವುದಿಲ್ಲ. ಯಾವಾಗ ಜೀವಾತ್ಮನು ಅವ್ಯಕ್ತ ಬ್ರಹ್ಮನ ಮೇಲೆ ದೃಷ್ಟಿಯನ್ನಿಟ್ಟು ತನ್ನನ್ನು ಪ್ರಕೃತಿಯಿಂದ ಭಿನ್ನನೆಂದು ತಿಳಿಯುತ್ತಾನೋ ಆಗ ಅವನು ಪ್ರಕೃತಿಯ ಅಧಿಪತಿಯಾಗುತ್ತಾನೆ.

12296011a ಬುಧ್ಯತೇ ಚ ಪರಾಂ ಬುದ್ಧಿಂ ವಿಶುದ್ಧಾಮಮಲಾಂ ಯದಾ|

12296011c ಷಡ್ವಿಂಶೋ ರಾಜಶಾರ್ದೂಲ ತದಾ ಬುದ್ಧತ್ವಮಾವ್ರಜೇತ್||

12296012a ತತಸ್ತ್ಯಜತಿ ಸೋಽವ್ಯಕ್ತಂ ಸರ್ಗಪ್ರಲಯಧರ್ಮಿಣಮ್|

ರಾಜಶಾರ್ದೂಲ! ಯಾವಾಗ ಜೀವಾತ್ಮನು ಶುದ್ಧ ಬ್ರಹ್ಮವಿಷಯಕ ನಿರ್ಮಲ ಸರ್ವೋತ್ಕೃಷ್ಟ ಬುದ್ಧಿಯನ್ನು ಹೊಂದುತ್ತಾನೋ ಆಗ ಅವನು ಇಪ್ಪತ್ತಾರನೇ ತತ್ತ್ವರೂಪ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿ ಅವನ ತದ್ರೂಪನಾಗುತ್ತಾನೆ. ಆ ಸ್ಥಿತಿಯಲ್ಲಿ ಅವನು ನಿತ್ಯ ಶುದ್ಧ-ಬುದ್ಧ ಬ್ರಹ್ಮಭಾವದಲ್ಲಿ ನೆಲೆಸುತ್ತಾನೆ. ಆಗಲಂತೂ ಅವನು ಸೃಷ್ಟಿ-ಪ್ರಲಯಧರ್ಮೀ ಅವ್ಯಕ್ತ ಪ್ರಕೃತಿಯನ್ನು ಸರ್ವಥಾ ತ್ಯಜಿಸಿಬಿಡುತ್ತಾನೆ.

12296012c ನಿರ್ಗುಣಃ ಪ್ರಕೃತಿಂ ವೇದ ಗುಣಯುಕ್ತಾಮಚೇತನಾಮ್||

12296013a ತತಃ ಕೇವಲಧರ್ಮಾಸೌ ಭವತ್ಯವ್ಯಕ್ತದರ್ಶನಾತ್|

ನಿರ್ಗುಣನಾದ ಅವನು ಗುಣಯುಕ್ತ ಜಡ ಪ್ರಕೃತಿಯನ್ನು ಆಗ ಅರ್ಥಮಾಡಿಕೊಳ್ಳುತ್ತಾನೆ. ಹೀಗೆ ತನ್ನನ್ನು ಪ್ರಕೃತಿಗಿಂತ ಭಿನ್ನನೆಂದು ತಿಳಿಯುವುದರಿಂದ ಕೈವಲ್ಯಧರ್ಮವನ್ನು ಪಡೆದುಕೊಳ್ಳುತ್ತಾನೆ.

12296013c ಕೇವಲೇನ ಸಮಾಗಮ್ಯ ವಿಮುಕ್ತೋಽಽತ್ಮಾನಮಾಪ್ನುಯಾತ್||

12296014a ಏತತ್ತತ್ತತ್ತ್ವಮಿತ್ಯಾಹುರ್ನಿಸ್ತತ್ತ್ವಮಜರಾಮರಮ್|

ಕೇವಲ (ಅದ್ವಿತೀಯ) ಬ್ರಹ್ಮನನ್ನು ಸೇರಿ ಎಲ್ಲ ಪ್ರಕಾರದ ಬಂಧನಗಳಿಂದ ಮುಕ್ತನಾಗಿ ತನ್ನ ಪರಮಾರ್ಥಸ್ವರೂಪ ಪರಮಾತ್ಮನನ್ನು ಪಡೆದುಕೊಳ್ಳುತ್ತಾನೆ. ಇದನ್ನೇ ಪರಮಾರ್ಥ ತತ್ತ್ವ ಎಂದು ಹೇಳುತ್ತಾರೆ. ಇದು ಎಲ್ಲ ತತ್ತ್ವಗಳಿಗಿಂತ ಅತೀತವಾಗಿದ್ದು ಜರಾ-ಮರಣ ರಹಿತವಾಗಿದೆ.

12296014c ತತ್ತ್ವಸಂಶ್ರಯಣಾದೇತತ್ತತ್ತ್ವವನ್ನ ಚ ಮಾನದ|

12296014e ಪಂಚವಿಂಶತಿತತ್ತ್ವಾನಿ ಪ್ರವದಂತಿ ಮನೀಷಿಣಃ||

ಮಾನದ! ಜೀವಾತ್ಮವು ತತ್ತ್ವಗಳನ್ನು ಆಶ್ರಯಿಸಿರುವುದರಿಂದಲೇ ತತ್ತ್ವ-ಸದೃಶವಾಗಿ ಕಾಣುತ್ತದೆ. ವಾಸ್ತವದಲ್ಲಿ ತತ್ತ್ವಗಳ ದ್ರಷ್ಟಮಾತ್ರನಾಗಿರುವುದರ ಕಾರಣದಿಂದ ಅದು ತತ್ತ್ವವಲ್ಲ – ತತ್ತ್ವಗಳಿಗಿಂತ ಸರ್ವಥಾ ಭಿನ್ನವಾಗಿದೆ. ಹೀಗೆ ಜೀವಾತ್ಮನನ್ನೂ ಒಂದು ತತ್ತ್ವವೆಂದು ತಿಳಿದು ಒಟ್ಟು ಇಪ್ಪತ್ತೈದು ತತ್ತ್ವಗಳನ್ನು ಪ್ರತಿಪಾದಿಸುತ್ತಾರೆ.

12296015a ನ ಚೈಷ ತತ್ತ್ವವಾಂಸ್ತಾತ ನಿಸ್ತತ್ತ್ವಸ್ತ್ವೇಷ ಬುದ್ಧಿಮಾನ್|

12296015c ಏಷ ಮುಂಚತಿ ತತ್ತ್ವಂ ಹಿ ಕ್ಷಿಪ್ರಂ ಬುದ್ಧಸ್ಯ ಲಕ್ಷಣಮ್||

ಅಯ್ಯಾ! ಈ ಜೀವಾತ್ಮವು ವಾಸ್ತವದಲ್ಲಿ ತತ್ತ್ವಗಳಿಗೆ ಅತೀತವಾಗಿದೆ. ಆದುದರಿಂದ ಅದು ತದ್ರೂಪವಾಗಿರುವುದಿಲ್ಲ. ಆದರೂ ಜ್ಞಾನವಂತನಾಗಿರುವುದರಿಂದ ಬ್ರಹ್ಮಜ್ಞಾನವು ಉದಯವಾದಾಗ ಅವನು ಶೀಘ್ರದಲ್ಲಿಯೇ ಪ್ರಾಕೃತ ತತ್ತ್ವಗಳನ್ನು ತ್ಯಜಿಸಿಬಿಡುತ್ತಾನೆ ಮತ್ತು ಅವನಲ್ಲಿ ನಿತ್ಯ ಶುದ್ಧ-ಬುದ್ಧ ಬ್ರಹ್ಮನ ಲಕ್ಷಣಗಳು ಪ್ರಕಟಗೊಳ್ಳುತ್ತವೆ.

12296016a ಷಡ್ವಿಂಶೋಽಹಮಿತಿ ಪ್ರಾಜ್ಞೋ ಗೃಹ್ಯಮಾಣೋಽಜರಾಮರಃ|

12296016c ಕೇವಲೇನ ಬಲೇನೈವ ಸಮತಾಂ ಯಾತ್ಯಸಂಶಯಮ್||

“ನಾನು ಇಪ್ಪತ್ತೈದು ತತ್ತ್ವಗಳಿಗಿಂತ ಭಿನ್ನ ಇಪ್ಪತ್ತಾರನೇ ಪರಮಾತ್ಮನು. ನಿತ್ಯ ಜ್ಞಾನಸಂಪನ್ನ ಮತ್ತು ತಿಳಿಯಲು ಯೋಗ್ಯ ಅಜರ-ಅಮರ ಸ್ವರೂಪನು.” ಹೀಗೆ ವಿಚಾರಿಸುತ್ತಾ ಜೀವಾತ್ಮನು ಕೇವಲ ವಿವೇಕ ಬಲದಿಂದಲೇ ಬ್ರಹ್ಮಭಾವವನ್ನು ಪಡೆದುಕೊಳ್ಳುತ್ತಾನೆ. ಇದರಲ್ಲಿ ಸಂಶಯವೇ ಇಲ್ಲ.

12296017a ಷಡ್ವಿಂಶೇನ ಪ್ರಬುದ್ಧೇನ ಬುಧ್ಯಮಾನೋಽಪ್ಯಬುದ್ಧಿಮಾನ್|

12296017c ಏತನ್ನಾನಾತ್ವಮಿತ್ಯುಕ್ತಂ ಸಾಂಖ್ಯಶ್ರುತಿನಿದರ್ಶನಾತ್||

ಇಪ್ಪತ್ತಾರನೇ ತತ್ತ್ವ ಜ್ಞಾನಸ್ವರೂಪ ಪರಮಾತ್ಮನ ಪ್ರಕಾಶದಿಂದಲೇ ಜೀವನು ಜಡವರ್ಗವನ್ನು ತಿಳಿದುಕೊಳ್ಳುತ್ತಾನೆ. ಆದರೆ ಅದನ್ನು ತಿಳಿದುಕೊಂಡೂ ಪರಮಾತ್ಮನನ್ನು ತಿಳಿಯದೇ ಇರುವ ಕಾರಣದಿಂದ ಅವನು ಅಜ್ಞಾನಿಯಾಗಿಯೇ ಉಳಿದುಕೊಳ್ಳುತ್ತಾನೆ. ಈ ಅಜ್ಞಾನವೇ ಜೀವಿಯ ನಾನಾತ್ವರೂಪ ಬಂಧನಕ್ಕೆ ಕಾರಣವೆಂದು ಹೇಳಿದ್ದಾರೆ. ಇದೇ ಸಾಂಖ್ಯಶ್ರುತಿನಿದರ್ಶನವು.

12296018a ಚೇತನೇನ ಸಮೇತಸ್ಯ ಪಂಚವಿಂಶತಿಕಸ್ಯ ಚ|

12296018c ಏಕತ್ವಂ ವೈ ಭವತ್ಯಸ್ಯ ಯದಾ ಬುದ್ಧ್ಯಾ ನ ಬುಧ್ಯತೇ||

ಯಾವಾಗ ಜೀವಾತ್ಮನು ಬುದ್ಧಿಯ ಮೂಲಕ ಜಡವರ್ಗವು ತನಗೆ ಸೇರಿದ್ದಲ್ಲವೆಂದು ತಿಳಿದುಕೊಳ್ಳುತ್ತಾನೋ ಅರ್ಥಾತ್ ಅದರೊಂದಿಗೆ ಸಂಬಂಧವನ್ನಿಟ್ಟುಕೊಳ್ಳುವುದಿಲ್ಲವೋ ಆಗ ನಿತ್ಯ ಚೇತನ ಪರಮಾತ್ಮನೊಡನೆ ಸಂಯುಕ್ತನಾದ ಆ ಜೀವಾತ್ಮನು ಪರಮಾತ್ಮನೊಡನೆ ಏಕತೆಯನ್ನು ಪಡೆದುಕೊಳ್ಳುತ್ತಾನೆ.

12296019a ಬುಧ್ಯಮಾನೋಽಪ್ರಬುದ್ಧೇನ ಸಮತಾಂ ಯಾತಿ ಮೈಥಿಲ|

12296019c ಸಂಗಧರ್ಮಾ ಭವತ್ಯೇಷ ನಿಃಸಂಗಾತ್ಮಾ ನರಾಧಿಪ||

ಮೈಥಿಲ! ಎಲ್ಲಿಯವರೆಗೆ ಜೀವಾತ್ಮವು ಜಡವರ್ಗವು ತನಗೆ ಸೇರಿದ್ದು ಎಂದು ತಿಳಿದುಕೊಳ್ಳುತ್ತದೆಯೋ ಅಲ್ಲಿಯವರೆಗೆ ಅದು ಜಡವರ್ಗದ ಸಾಮ್ಯತೆಯನ್ನೇ ಪಡೆದುಕೊಂಡಿರುತ್ತದೆ. ಸ್ವರೂಪದಲ್ಲಿ ಅದು ಅಸಂಗಿಯಾಗಿದ್ದರೂ ಪ್ರಕೃತಿಯ ಸಂಪರ್ಕದಿಂದ ಆಸಕ್ತಿರೂಪೀ ಧರ್ಮವನ್ನು ಪಡೆದುಕೊಳ್ಳುತ್ತದೆ.

12296020a ನಿಃಸಂಗಾತ್ಮಾನಮಾಸಾದ್ಯ ಷಡ್ವಿಂಶಕಮಜಂ ವಿದುಃ|

12296020c ವಿಭುಸ್ತ್ಯಜತಿ ಚಾವ್ಯಕ್ತಂ ಯದಾ ತ್ವೇತದ್ವಿಬುಧ್ಯತೇ|

12296020e ಚತುರ್ವಿಂಶಮಗಾಧಂ ಚ ಷಡ್ವಿಂಶಸ್ಯ ಪ್ರಬೋಧನಾತ್||

ಇಪ್ಪತ್ತಾರನೇ ತತ್ತ್ವ ಪರಮಾತ್ಮನು ಅಜನ್ಮಿ, ಸರ್ವವ್ಯಾಪೀ ಮತ್ತು ಸಂಗದೋಷರಹಿತನು. ಅವನಿಗೆ ಶರಣು ಹೋಗಾದ ಜೀವಾತ್ಮನು ಅವನದೇ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ ಮತ್ತು ಪರಮಾತ್ಮಜ್ಞಾನದ ಪ್ರಭಾವದಿಂದ ಸ್ವಯಂ ತಾನೇ ಸರ್ವವ್ಯಾಪಿಯಾಗಿಬಿಡುತ್ತಾನೆ. ಮತ್ತು ಇಪ್ಪತ್ನಾಲ್ಕು ತತ್ತ್ವಗಳಿಂದ ಕೂಡಿದ ಪ್ರಕೃತಿಯನ್ನು ಅಸಾರವೆಂದು ತಿಳಿದು ತ್ಯಜಿಸಿಬಿಡುತ್ತಾನೆ.

12296021a ಏಷ ಹ್ಯಪ್ರತಿಬುದ್ಧಶ್ಚ ಬುಧ್ಯಮಾನಶ್ಚ ತೇಽನಘ|

12296021c ಪ್ರೋಕ್ತೋ ಬುದ್ಧಶ್ಚ ತತ್ತ್ವೇನ ಯಥಾಶ್ರುತಿನಿದರ್ಶನಾತ್|

12296021e ನಾನಾತ್ವೈಕತ್ವಮೇತಾವದ್ದ್ರಷ್ಟವ್ಯಂ ಶಾಸ್ತ್ರದೃಷ್ಟಿಭಿಃ||

ಅನಘ! ಹೀಗೆ ನಾನು ನಿನಗೆ ಅಪ್ರತಿಬುದ್ಧ (ಕ್ಷರ), ಬುಧ್ಯಮಾನ (ಅಕ್ಷರ ಜೀವಾತ್ಮಾ) ಮತ್ತು ಬುದ್ಧ (ಜ್ಞಾನಸ್ವರೂಪೀ ಪರಮಾತ್ಮ) ಈ ಮೂವರ ಕುರಿತು ಶ್ರುತಿನಿರ್ದೇಶನಗಳೊಂದಿಗೆ ಯಥಾರ್ಥರೂಪದಲ್ಲಿ ವರ್ಣಿಸಿದ್ದೇನೆ. ಶಾಸ್ತ್ರೀಯ ದೃಷ್ಟಿಯಲ್ಲಿ ಜೀವಾತ್ಮನ ನಾನಾತ್ವ ಮತ್ತು ಏಕತ್ವವನ್ನು ಹೀಗೆಯೇ ತಿಳಿದುಕೊಳ್ಳಬೇಕು.

12296022a ಮಶಕೋದುಂಬರೇ ಯದ್ವದನ್ಯತ್ವಂ ತದ್ವದೇತಯೋಃ|

12296022c ಮತ್ಸ್ಯೋಽಂಭಸಿ ಯಥಾ ತದ್ವದನ್ಯತ್ವಮುಪಲಭ್ಯತೇ||

ಅತ್ತಿಹಣ್ಣು ಮತ್ತು ಅದರಲ್ಲಿರುವ ಕೀಟಗಳು ಹೇಗೆ ಜೊತೆಯಲ್ಲಿದ್ದರೂ ಪರಸ್ಪರ ಭಿನ್ನರೋ ಅದೇ ರೀತಿ ಪ್ರಕೃತಿ ಮತ್ತು ಪುರುಷರು ಒಟ್ಟಿಗಿದ್ದರೂ ಭಿನ್ನರು. ಮೀನು ಮತ್ತು ನೀರು ಹೇಗೆ ಪರಸ್ಪರರಿಂದ ಭಿನ್ನರೋ ಹಾಗೆ ಪ್ರಕೃತಿ ಮತ್ತು ಪುರುಷರೂ ಬೇರೆ ಬೇರೆ.

12296023a ಏವಮೇವಾವಗಂತವ್ಯಂ ನಾನಾತ್ವೈಕತ್ವಮೇತಯೋಃ|

12296023c ಏತದ್ವಿಮೋಕ್ಷ ಇತ್ಯುಕ್ತಮವ್ಯಕ್ತಜ್ಞಾನಸಂಹಿತಮ್||

ಹೀಗೆ ಪ್ರಕೃತಿ ಮತ್ತು ಪುರುಷರ ಏಕತೆ ಮತ್ತು ಅನೇಕತೆಯನ್ನು ತಿಳಿದುಕೊಳ್ಳಬೇಕು. ಅವ್ಯಕ್ತ ಪ್ರಕೃತಿಯು ನಿತ್ಯವೂ ಪುರುಷನಿಗಿಂತ ಭಿನ್ನವು. ಅದರ ಯಥಾರ್ಥ ಜ್ಞಾನದಿಂದ ಪುರುಷನು ಪ್ರಕೃತಿಯ ಬಂಧನದಿಂದ ಮುಕ್ತನಾಗುತ್ತಾನೆ. ಇದನ್ನೇ ಮೋಕ್ಷ ಎಂದು ಕರೆಯುತ್ತಾರೆ.

12296024a ಪಂಚವಿಂಶತಿಕಸ್ಯಾಸ್ಯ ಯೋಽಯಂ ದೇಹೇಷು ವರ್ತತೇ|

12296024c ಏಷ ಮೋಕ್ಷಯಿತವ್ಯೇತಿ ಪ್ರಾಹುರವ್ಯಕ್ತಗೋಚರಾತ್||

ಈ ಶರೀರದಲ್ಲಿ ಇಪ್ಪತ್ತೈದನೆಯ ತತ್ತ್ವ ಅಂತರ್ಯಾಮೀ ಪುರುಷನು ವಿದ್ಯಮಾನನಾಗಿದ್ದಾನೆ. ಅವನನ್ನು ಅವ್ಯಕ್ತದ ಕಾರ್ಯಭೂತಗಳಾದ ಮಹತ್ತತ್ತ್ವಾದಿಗಳ ಬಂಧನದಿಂದ ಮುಕ್ತಗೊಳಿಸಬೇಕು. ಹೀಗೆ ವಿದ್ವಾನರು ಹೇಳುತ್ತಾರೆ.

12296025a ಸೋಽಯಮೇವಂ ವಿಮುಚ್ಯೇತ ನಾನ್ಯಥೇತಿ ವಿನಿಶ್ಚಯಃ|

12296025c ಪರೇಣ ಪರಧರ್ಮಾ ಚ ಭವತ್ಯೇಷ ಸಮೇತ್ಯ ವೈ||

ಆ ಜೀವಾತ್ಮನು ನಾನು ಹಿಂದೆ ಹೇಳಿದ ರೀತಿಯಿಂದಲೇ ಮುಕ್ತನಾಗಲು ಸಾಧ್ಯ. ಅನ್ಯಥಾ ಇಲ್ಲ. ಇದೇ ವಿದ್ವಾಂಸರ ನಿಶ್ಚಯವು. ಇದು ಇನ್ನೊಂದರೊಂದಿಗೆ ಸೇರಿ ಅದರದ್ದೇ ಸಮಾನಧರ್ಮಿಯಾಗುತ್ತದೆ.

12296026a ವಿಶುದ್ಧಧರ್ಮಾ ಶುದ್ಧೇನ ಬುದ್ಧೇನ ಚ ಸ ಬುದ್ಧಿಮಾನ್|

12296026c ವಿಮುಕ್ತಧರ್ಮಾ ಮುಕ್ತೇನ ಸಮೇತ್ಯ ಪುರುಷರ್ಷಭ||

ಪುರುಷರ್ಷಭ! ಜೀವಾತ್ಮನು ಶುದ್ಧ ಪುರುಷನ ಸಂಗದಿಂದ ವಿಶುದ್ಧಧರ್ಮಿಯಾಗುತ್ತಾನೆ. ಬುದ್ಧಿವಂತನ ಸಂಗದಿಂದ ಬುದ್ಧಿವಂತನಾಗುತ್ತಾನೆ. ಮುಕ್ತನ ಸಂಗದಿಂದ ವಿಮುಕ್ತಧರ್ಮಿಯಾಗುತ್ತಾನೆ.

12296027a ನಿಯೋಗಧರ್ಮಿಣಾ ಚೈವ ನಿಯೋಗಾತ್ಮಾ ಭವತ್ಯಪಿ[2]|

12296027c ವಿಮೋಕ್ಷಿಣಾ ವಿಮೋಕ್ಷಶ್ಚ ಸಮೇತ್ಯೇಹ ತಥಾ ಭವೇತ್||

ನಿಯೋಗಧರ್ಮಿಯ ಸಂಗದಿಂದ ನಿಯೋಗಾತ್ಮನಾಗುತ್ತಾನೆ. ಮೋಕ್ಷಧರ್ಮಿಗಳ ಸಹವಾಸದಿಂದ ಮೋಕ್ಷಪ್ರಾಪ್ತಿಯಾಗುತ್ತದೆ.

12296028a ಶುಚಿಕರ್ಮಾ ಶುಚಿಶ್ಚೈವ ಭವತ್ಯಮಿತದೀಪ್ತಿಮಾನ್|

12296028c ವಿಮಲಾತ್ಮಾ ಚ ಭವತಿ ಸಮೇತ್ಯ ವಿಮಲಾತ್ಮನಾ||

ಶುದ್ಧ ಕರ್ಮಿಯ ಸಂಗದಿಂದ ಶುಚಿಯಾಗುತ್ತಾನೆ. ವಿಮಲಾತ್ಮನನ್ನು ಸೇರಿ ನಿರ್ಮಲಾತ್ಮಾ ಮತ್ತು ಅಮಿತ ತೇಜೋವಂತನಾಗುತ್ತಾನೆ.

12296029a ಕೇವಲಾತ್ಮಾ ತಥಾ ಚೈವ ಕೇವಲೇನ ಸಮೇತ್ಯ ವೈ|

12296029c ಸ್ವತಂತ್ರಶ್ಚ ಸ್ವತಂತ್ರೇಣ ಸ್ವತಂತ್ರತ್ವಮವಾಪ್ನುತೇ||

ಅದ್ವಿತೀಯ ಪರಮಾತ್ಮನೊಂದಿಗೆ ಸಂಬಂಧವನ್ನು ಸ್ಥಾಪಿಸಿಕೊಂಡಾಗ ಅವನು ತದ್ರೂಪವನ್ನು ಪಡೆದುಕೊಳ್ಳುತ್ತಾನೆ. ಸ್ವತಂತ್ರ ಪರಮೇಶ್ವರನೊಡನೆ ಸಂಪರ್ಕವನ್ನಿಟ್ಟುಕೊಂಡಿರುವುದರಿಂದ ಸ್ವತಂತ್ರನಾಗಿ ವಾಸ್ತವದಲ್ಲಿ ಸ್ವತಂತ್ರವನ್ನು ಪಡೆದುಕೊಳ್ಳುತ್ತಾನೆ.

12296030a ಏತಾವದೇತತ್ಕಥಿತಂ ಮಯಾ ತೇ

ತಥ್ಯಂ ಮಹಾರಾಜ ಯಥಾರ್ಥತತ್ತ್ವಮ್|

12296030c ಅಮತ್ಸರತ್ವಂ ಪ್ರತಿಗೃಹ್ಯ ಚಾರ್ಥಂ

ಸನಾತನಂ ಬ್ರಹ್ಮ ವಿಶುದ್ಧಮಾದ್ಯಮ್||

ಮಹಾರಾಜ! ನಾನು ಅಮತ್ಸರತ್ವವನ್ನು ಸ್ವೀಕರಿಸಿ ಮತ್ತು ನಿನ್ನ ಪ್ರಯೋಜನವನ್ನು ತಿಳಿದು ನಿನಗೆ ಪ್ರೇಮಪೂರ್ವಕವಾಗಿ ಈ ಶುದ್ಧ ಸನಾತನ ಮತ್ತು ಎಲ್ಲದರ ಆದಿಭೂತ ಸತ್ಯಸ್ವರೂಪ ಬ್ರಹ್ಮನ ಯಥಾರ್ಥ ತತ್ತ್ವದ ರೂಪವನ್ನು ವರ್ಣಿಸಿದ್ದೇನೆ.

12296031a ನ ವೇದನಿಷ್ಠಸ್ಯ ಜನಸ್ಯ ರಾಜನ್

ಪ್ರದೇಯಮೇತತ್ಪರಮಂ ತ್ವಯಾ ಭವೇತ್|

12296031c ವಿವಿತ್ಸಮಾನಾಯ ವಿಬೋಧಕಾರಕಂ

ಪ್ರಬೋಧಹೇತೋಃ ಪ್ರಣತಸ್ಯ ಶಾಸನಮ್||

ರಾಜನ್! ವೇದನಿಷ್ಠನಲ್ಲದವರಿಗೆ ನೀನು ಈ ಉತ್ತಮ ಜ್ಞಾನವನ್ನು ಉಪದೇಶಿಸಕೂಡದು. ಯಾರಲ್ಲಿ ಜ್ಞಾನದ ಅಧಿಕ ಬಾಯಾರಿಕೆಯಿದೆಯೋ ಮತ್ತು ಯಾರು ಜಿಜ್ಞಾಸಾಭಾವದಿಂದ ಶರಣು ಬರುತ್ತಾರೋ ಅವರು ಮಾತ್ರ ಈ ಉಪದೇಶವನ್ನು ಪಡೆಯುವ ಅಧಿಕಾರಿಗಳು.

12296032a ನ ದೇಯಮೇತಚ್ಚ ತಥಾನೃತಾತ್ಮನೇ

ಶಠಾಯ ಕ್ಲೀಬಾಯ ನ ಜಿಹ್ಮಬುದ್ಧಯೇ|

12296032c ನ ಪಂಡಿತಜ್ಞಾನಪರೋಪತಾಪಿನೇ

ದೇಯಂ ತ್ವಯೇದಂ ವಿನಿಬೋಧ ಯಾದೃಶೇ||

ಅಸತ್ಯವಾದೀ, ಶಠ, ನೀಚ, ಕಪಟಿ, ತನ್ನನ್ನು ಪಂಡಿತನೆಂದು ತಿಳಿದುಕೊಂಡಿರುವ, ಮತ್ತು ಇತರರಿಗೆ ಕಷ್ಟವನ್ನೀಡುವ ಮನುಷ್ಯನಿಗೂ ಇದರ ಉಪದೇಶವನ್ನು ನೀಡಬಾರದು. ಎಂಥವರಿಗೆ ಈ ಜ್ಞಾನದ ಉಪದೇಶವನ್ನು ಅವಶ್ಯವಾಗಿ ನೀಡಬೇಕು ಅದರ ಕುರಿತೂ ಹೇಳುತ್ತೇನೆ. ಕೇಳು.

12296033a ಶ್ರದ್ಧಾನ್ವಿತಾಯಾಥ ಗುಣಾನ್ವಿತಾಯ

ಪರಾಪವಾದಾದ್ವಿರತಾಯ ನಿತ್ಯಮ್|

12296033c ವಿಶುದ್ಧಯೋಗಾಯ ಬುಧಾಯ ಚೈವ

ಕ್ರಿಯಾವತೇಽಥ ಕ್ಷಮಿಣೇ ಹಿತಾಯ||

12296034a ವಿವಿಕ್ತಶೀಲಾಯ ವಿಧಿಪ್ರಿಯಾಯ

ವಿವಾದಹೀನಾಯ ಬಹುಶ್ರುತಾಯ|

12296034c ವಿಜಾನತೇ ಚೈವ ನ ಚಾಹಿತಕ್ಷಮೇ

ದಮೇ ಚ ಶಕ್ತಾಯ ಶಮೇ ಚ ದೇಹಿನಾಮ್[3]||

ಶ್ರದ್ಧಾನ್ವಿತ, ಗುಣವಂತ, ಪರನಿಂದನೆಯಿಂದ ಸದಾ ದೂರವಿರುವ, ವಿಶುದ್ಧ ಯೋಗೀ, ವಿದ್ವಾನ್, ಸದಾ ಶಾಸ್ತ್ರೋಕ್ತಕರ್ಮಗಳನ್ನು ಮಾಡುವ, ಕ್ಷಮಾಶೀಲ, ಎಲ್ಲರ ಹಿತೈಷಿ, ಏಕಾಂತವಾಸೀ, ಶಾಸ್ತ್ರವಿಧಿಗಳನ್ನು ಆದರಿಸುವ, ವಿವಾದಹೀನ, ಬಹುಜ್ಞ, ವಿಜ್ಞ, ಯಾರಿಗೂ ಅಹಿತವನ್ನುಂಟುಮಾಡದ, ಮತ್ತು ಇಂದ್ರಿಯಸಂಯಮ-ಮನೋನಿಗ್ರಹಗಳ ಸಮರ್ಥ ಪುರುಷನಿಗೆ ಈ ಜ್ಞಾನದ ಉಪದೇಶವನ್ನು ನೀಡಬೇಕು.

12296035a ಏತೈರ್ಗುಣೈರ್ಹೀನತಮೇ ನ ದೇಯಮ್

ಏತತ್ಪರಂ ಬ್ರಹ್ಮ ವಿಶುದ್ಧಮಾಹುಃ|

12296035c ನ ಶ್ರೇಯಸಾ ಯೋಕ್ಷ್ಯತಿ ತಾದೃಶೇ ಕೃತಂ

ಧರ್ಮಪ್ರವಕ್ತಾರಮಪಾತ್ರದಾನಾತ್||

ಯಾರು ಈ ಸದ್ಗುಣಗಳಿಂದ ಅತ್ಯಂತ ಹೀನರೋ ಅವರಿಗೆ ಇದನ್ನು ಉಪದೇಶಿಸಬಾರದು. ಇದು ವಿಶುದ್ಧ ಬ್ರಹ್ಮನ ಜ್ಞಾನವೆಂದು ಹೇಳಿದ್ದಾರೆ. ಗುಣಹೀನರಿಗೆ ನೀಡಿದ ಈ ಜ್ಞಾನವು ಕಲ್ಯಾಣಕಾರಿಯಾಗುವುದಿಲ್ಲ ಮತ್ತು ಕುಪಾತ್ರರಿಗೆ ಉಪದೇಶನೀಡುವುದರಿಂದ ಉಪದೇಶಿಸಿದವನಿಗೂ ಕಲ್ಯಾಣವಾಗುವುದಿಲ್ಲ.

12296036a ಪೃಥ್ವೀಮಿಮಾಂ ಯದ್ಯಪಿ ರತ್ನಪೂರ್ಣಾಂ

ದದ್ಯಾನ್ನದೇಯಂ ತ್ವಿದಮವ್ರತಾಯ|

12296036c ಜಿತೇಂದ್ರಿಯಾಯೈತದಸಂಶಯಂ ತೇ

ಭವೇತ್ಪ್ರದೇಯಂ ಪರಮಂ ನರೇಂದ್ರ||

ನರೇಂದ್ರ! ವ್ರತ-ನಿಯಮಗಳನ್ನು ಪಾಲಿಸದೇ ಇರುವವನು ರತ್ನಗಳಿಂದ ತುಂಬಿದ ಈ ಭೂಮಿಯನ್ನೇ ಕೊಡುತ್ತೇನೆ ಎಂದರೂ ಅವನಿಗೆ ಈ ಜ್ಞಾನೋಪದೇಶವನ್ನು ನೀಡಬಾರದು. ಆದರೆ ಜಿತೇಂದ್ರಿಯ ಪುರುಷನಿಗೆ ನಿಸ್ಸಂದೇಹವಾಗಿ ಈ ಪರಮ ಉತ್ತಮ ಜ್ಞಾನದ ಉಪದೇಶವನ್ನು ನೀಡುವುದು ನಿನಗೆ ಉಚಿತವೇ ಆಗಿರುತ್ತದೆ.

12296037a ಕರಾಲ ಮಾ ತೇ ಭಯಮಸ್ತು ಕಿಂ ಚಿದ್

ಏತಚ್ಚ್ರುತಂ ಬ್ರಹ್ಮ ಪರಂ ತ್ವಯಾದ್ಯ|

12296037c ಯಥಾವದುಕ್ತಂ ಪರಮಂ ಪವಿತ್ರಂ

ನಿಃಶೋಕಮತ್ಯಂತಮನಾದಿಮಧ್ಯಮ್||

12296038a ಅಗಾಧಜನ್ಮಾಮರಣಂ ಚ ರಾಜನ್

ನಿರಾಮಯಂ ವೀತಭಯಂ ಶಿವಂ ಚ|

12296038a ಅಗಾಧಜನ್ಮಾಮರಣಂ ಚ ರಾಜನ್

ನಿರಾಮಯಂ ವೀತಭಯಂ ಶಿವಂ ಚ|

12296038c ಸಮೀಕ್ಷ್ಯ ಮೋಹಂ ತ್ಯಜ ಚಾದ್ಯ ಸರ್ವಂ

ಜ್ಞಾನಸ್ಯ ತತ್ತ್ವಾರ್ಥಮಿದಂ ವಿದಿತ್ವಾ||

ಕರಾಲ! ಇಂದು ನೀನು ನನ್ನಿಂದ ಪರಬ್ರಹ್ಮನ ಜ್ಞಾನದ ಕುರಿತು ಕೇಳಿದ್ದೀಯೆ. ಈಗ ನಿನ್ನ ಮನಸ್ಸಿನಲ್ಲಿ ಸ್ವಲ್ಪವೂ ಭಯವುಂಟಾಗಬಾರದು. ಆ ಪರಬ್ರಹ್ಮನು ಪರಮ ಪವಿತ್ರ, ಶೋಕರಹಿತ, ಆದಿ-ಮಧ್ಯ-ಅಂತ್ಯಶೂನ್ಯನು, ಜನ್ಮ-ಮೃತ್ಯುಗಳಿಂದ ಉಳಿಸುವವನು, ನಿರಾಮಯ, ನಿರ್ಭಯ ಮತ್ತು ಕಲ್ಯಾಣಮಯನು. ರಾಜನ್! ನಾನು ಅವನನ್ನು ಯಥಾವತ್ತಾಗಿ ಪ್ರತಿಪಾದಿಸಿದ್ದೇನೆ. ಅವನೇ ಸಂಪೂರ್ಣ ಜ್ಞಾನಗಳ ತಾತ್ತ್ವಿಕ ಅರ್ಥವು. ಹೀಗೆ ತಿಳಿದು ಅವನ ಜ್ಞಾನವನ್ನು ಪಡೆದುಕೊಂಡು ಇಂದು ನೀನು ಮೋಹವನ್ನು ಪರಿತ್ಯಜಿಸು.

12296039a ಅವಾಪ್ತಮೇತದ್ಧಿ ಪುರಾ ಸನಾತನಾದ್

ಧಿರಣ್ಯಗರ್ಭಾದ್ಗದತೋ ನರಾಧಿಪ|

12296039c ಪ್ರಸಾದ್ಯ ಯತ್ನೇನ ತಮುಗ್ರತೇಜಸಂ

ಸನಾತನಂ ಬ್ರಹ್ಮ ಯಥಾದ್ಯ ವೈ ತ್ವಯಾ||

ನರಾಧಿಪ! ಯಾವ ಪ್ರಕಾರವಾಗಿ ಇಂದು ನೀನು ನನ್ನಿಂದ ಸನಾತನ ಬ್ರಹ್ಮಜ್ಞಾನವನ್ನು ಪಡೆದುಕೊಂಡಿದ್ದೀಯೋ ಅದೇ ಪ್ರಕಾರವಾಗಿ ನಾನೂ ಕೂಡ ಇದನ್ನು ಹಿರಣ್ಯಗರ್ಭ ಎಂಬ ಹೆಸರಿನಿಂದ ಪ್ರಸಿದ್ಧನಾದ ಸನಾತನ ಉಗ್ರಚೇತಸ ಬ್ರಹ್ಮನ ಮುಖದಿಂದ, ಅವನನ್ನು ಅತಿದೊಡ್ಡ ಯಜ್ಞದ ಮೂಲಕ ಪ್ರಸನ್ನಗೊಳಿಸಿ ಪಡೆದುಕೊಂಡಿದ್ದೆ.

12296040a ಪೃಷ್ಟಸ್ತ್ವಯಾ ಚಾಸ್ಮಿ ಯಥಾ ನರೇಂದ್ರ

ತಥಾ ಮಯೇದಂ ತ್ವಯಿ ಚೋಕ್ತಮದ್ಯ|

12296040c ತಥಾವಾಪ್ತಂ ಬ್ರಹ್ಮಣೋ ಮೇ ನರೇಂದ್ರ

ಮಹಜ್ಜ್ಞಾನಂ ಮೋಕ್ಷವಿದಾಂ ಪುರಾಣಮ್||

ನರೇಂದ್ರ! ನೀನು ನನ್ನನ್ನು ಕೇಳಿದಂತೆ ಮತ್ತು ನಾನು ಇಂದು ನಿನಗೆ ಈ ಜ್ಞಾನೋಪದೇಶವನ್ನು ನೀಡಿದಂತೆ ನಾನೂ ಕೂಡ ಬ್ರಹ್ಮನನ್ನು ಪ್ರಶ್ನಿಸಿ ಅವನ ಮುಖದಿಂದ ಈ ಮಹಾ ಜ್ಞಾನವನ್ನು ಪಡೆದುಕೊಂಡಿದ್ದೇನೆ. ಇದು ಮೋಕ್ಷವಿದುಗಳ ಪರಮ ಆಶ್ರಯವು.””

12296041 ಭೀಷ್ಮ ಉವಾಚ|

12296041a ಏತದುಕ್ತಂ ಪರಂ ಬ್ರಹ್ಮ ಯಸ್ಮಾನ್ನಾವರ್ತತೇ ಪುನಃ|

12296041c ಪಂಚವಿಂಶೋ ಮಹಾರಾಜ ಪರಮರ್ಷಿನಿದರ್ಶನಾತ್||

ಮಹಾರಾಜ! ಪರಮ ಋಷಿ ವಸಿಷ್ಠನು ಹೇಳಿದ ಈ ಪರಬ್ರಹ್ಮನ ಸ್ವರೂಪವನ್ನು ನಾನು ನಿನಗೆ ಹೇಳಿದೆ. ಇದನ್ನು ಪಡೆದು ಜೀವಾತ್ಮನು ಮತ್ತೆ ಈ ಸಂಸಾರಕ್ಕೆ ಮರಳುವುದಿಲ್ಲ.

12296042a ಪುನರಾವೃತ್ತಿಮಾಪ್ನೋತಿ ಪರಂ ಜ್ಞಾನಮವಾಪ್ಯ ಚ|

12296042c ನಾವಬುಧ್ಯತಿ ತತ್ತ್ವೇನ ಬುಧ್ಯಮಾನೋಽಜರಾಮರಃ||

ಈ ಉತ್ತಮ ಜ್ಞಾನವನ್ನು ಗುರುವಿನ ಮುಖದಿಂದ ಪಡೆದೂ ಚೆನ್ನಾಗಿ ಅರ್ಥಮಾಡಿಕೊಳ್ಳದೇ ಇದ್ದರೆ ಅವನು ಪುನರಾವೃತ್ತಿಯನ್ನು ಹೊಂದುತ್ತಾನೆ ಮತ್ತು ಯಾರಿಗೆ ಇದು ತತ್ತ್ವತಃ ಅರ್ಥವಾಗುತ್ತದೆಯೋ ಅವನು ಜರಾಮೃತ್ಯುರಹಿತ ಪರಬ್ರಹ್ಮ ಪರಮಾತ್ಮನನ್ನು ಪಡೆದುಕೊಳ್ಳುತ್ತಾನೆ.

12296043a ಏತನ್ನಿಃಶ್ರೇಯಸಕರಂ ಜ್ಞಾನಾನಾಂ ತೇ ಪರಂ ಮಯಾ|

12296043c ಕಥಿತಂ ತತ್ತ್ವತಸ್ತಾತ ಶ್ರುತ್ವಾ ದೇವರ್ಷಿತೋ ನೃಪ||

ಅಯ್ಯಾ ನೃಪ! ಈ ಪರಮ ಕಲ್ಯಾಣಕಾರೀ ಉತ್ತಮ ಜ್ಞಾನವನ್ನು ನಾನು ದೇವರ್ಷಿ ನಾರದನ ಬಾಯಿಯಿಂದ ಕೇಳಿದೆ. ಅದನ್ನೇ ಯಥಾರ್ಥರೂಪದಲ್ಲಿ ನಿನಗೆ ಹೇಳಿದ್ದೇನೆ.

12296044a ಹಿರಣ್ಯಗರ್ಭಾದೃಷಿಣಾ ವಸಿಷ್ಠೇನ ಮಹಾತ್ಮನಾ|

12296044c ವಸಿಷ್ಠಾದೃಷಿಶಾರ್ದೂಲಾನ್ನಾರದೋಽವಾಪ್ತವಾನಿದಮ್||

12296045a ನಾರದಾದ್ವಿದಿತಂ ಮಹ್ಯಮೇತದ್ಬ್ರಹ್ಮ ಸನಾತನಮ್|

12296045c ಮಾ ಶುಚಃ ಕೌರವೇಂದ್ರ ತ್ವಂ ಶ್ರುತ್ವೈತತ್ಪರಮಂ ಪದಮ್||

ಹಿರಣ್ಯಗರ್ಭನಿಂದ ಮಹಾತ್ಮಾ ವಸಿಷ್ಠನು ಈ ಜ್ಞಾನವನ್ನು ಪಡೆದುಕೊಂಡನು. ಋಷಿಶಾರ್ದೂಲ ವಸಿಷ್ಠನಿಂದ ಇದನ್ನು ನಾರದನು ಪಡೆದುಕೊಂಡನು. ನಾರದನಿಂದ ಈ ಸನಾತನ ಬ್ರಹ್ಮಜ್ಞಾನದ ಉಪದೇಶವನ್ನು ನಾನು ಪಡೆದುಕೊಂಡೆನು. ಕೌರವೇಂದ್ರ! ಈ ಪರಮ ಪದವನ್ನು ಕೇಳಿದ್ದೀಯೆ. ಶೋಕಿಸಬೇಡ.

12296046a ಯೇನ ಕ್ಷರಾಕ್ಷರೇ ವಿತ್ತೇ ನ ಭಯಂ ತಸ್ಯ ವಿದ್ಯತೇ|

12296046c ವಿದ್ಯತೇ ತು ಭಯಂ ತಸ್ಯ ಯೋ ನೈತದ್ವೇತ್ತಿ ಪಾರ್ಥಿವ||

ಪಾರ್ಥಿವ! ಯಾರು ಕ್ಷರ ಮತ್ತು ಅಕ್ಷರ ತತ್ತ್ವಗಳನ್ನು ಅರಿತುಕೊಂಡಿದ್ದಾನೋ ಅವನಲ್ಲಿ ಯಾವುದೇ ಪ್ರಕಾರದ ಭಯವುಂಟಾಗುವುದಿಲ್ಲ. ಇದನ್ನು ಯಾರು ತಿಳಿದುಕೊಂಡಿಲ್ಲವೋ ಅವನಲ್ಲಿ ಮಾತ್ರ ಭಯವು ಇರುತ್ತದೆ.

12296047a ಅವಿಜ್ಞಾನಾಚ್ಚ ಮೂಢಾತ್ಮಾ ಪುನಃ ಪುನರುಪದ್ರವನ್|

12296047c ಪ್ರೇತ್ಯ ಜಾತಿಸಹಸ್ರಾಣಿ ಮರಣಾಂತಾನ್ಯುಪಾಶ್ನುತೇ||

ಮೂಢನು ಈ ತತ್ತ್ವವನ್ನು ತಿಳಿಯದೇ ಇರುವ ಕಾರಣದಿಂದ ಅವನು ಮತ್ತೆ ಮತ್ತೆ ಸಂಸಾರಕ್ಕೆ ಬರುತ್ತಾನೆ ಮತ್ತು ಸಾವಿರಾರು ಯೋನಿಗಳಲ್ಲಿ ಜನ್ಮ-ಮರಣಗಳ ಕಷ್ಟವನ್ನು ಅನುಭವಿಸುತ್ತಾನೆ.

12296048a ದೇವಲೋಕಂ ತಥಾ ತಿರ್ಯಘ್ಮಾನುಷ್ಯಮಪಿ ಚಾಶ್ನುತೇ|

12296048c ಯದಿ ಶುಧ್ಯತಿ ಕಾಲೇನ ತಸ್ಮಾದಜ್ಞಾನಸಾಗರಾತ್[4]||

ಅವನು ದೇವ, ಮನುಷ್ಯ ಮತ್ತು ಪಶು-ಪಕ್ಷೀ ಮೊದಲಾದ ಯೋನಿಗಳಲ್ಲಿ ಅಲೆಯುತ್ತಿರುತ್ತಾನೆ. ಒಂದು ವೇಳೆ ಎಂದಾದರೂ ಸಮಯಾನುಸಾರವಾಗಿ ಶುದ್ಧನಾದರೆ ಆ ಅಗಾಧ ಅಜ್ಞಾನಸಮುದ್ರದಿಂದ ಪಾರಾಗಿ ಪರಮ ಕಲ್ಯಾಣದ ಭಾಗಿಯಾಗುತ್ತಾನೆ.

12296049a ಅಜ್ಞಾನಸಾಗರೋ ಘೋರೋ ಹ್ಯವ್ಯಕ್ತೋಽಗಾಧ ಉಚ್ಯತೇ|

12296049c ಅಹನ್ಯಹನಿ ಮಜ್ಜಂತಿ ಯತ್ರ ಭೂತಾನಿ ಭಾರತ||

ಭಾರತ! ಅಜ್ಞಾನಸಾಗರವನ್ನು ಘೋರ, ಅವ್ಯಕ್ತ ಮತ್ತು ಅಗಾಧ ಎಂದು ಹೇಳಿದ್ದಾರೆ. ಇದರಲ್ಲಿ ಪ್ರತಿದಿನ ಅಸಂಖ್ಯ ಭೂತಗಳು ಮುಳುಗುತ್ತಿರುತ್ತವೆ.

12296050a ಯಸ್ಮಾದಗಾಧಾದವ್ಯಕ್ತಾದುತ್ತೀರ್ಣಸ್ತ್ವಂ ಸನಾತನಾತ್|

12296050c ತಸ್ಮಾತ್ತ್ವಂ ವಿರಜಾಶ್ಚೈವ ವಿತಮಸ್ಕಶ್ಚ ಪಾರ್ಥಿವ||

ಪಾರ್ಥಿವ! ನನ್ನ ಉಪದೇಶವನ್ನು ಪಡೆದು ಈ ಅವ್ಯಕ್ತ, ಅಗಾಧ ಮತ್ತು ಪ್ರವಾಹರೂಪದಲ್ಲಿರುವ ಭವಸಾಗರದಿಂದ ಪಾರಾಗಿದ್ದೀಯೆ. ಆದುದರಿಂದ ಈಗ ನೀನು ರಜೋಗುಣ-ತಮೋಗುಣಗಳಿಂದಲೂ ರಹಿತನಾಗಿದ್ದೀಯೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಸಿಷ್ಠಕರಾಲಜನಕಸಂವಾದಸಮಾಪ್ತೌ ಷಡಾನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷ ಧರ್ಮಪರ್ವದಲ್ಲಿ ವಸಿಷ್ಠಕರಾಲಜನಕಸಂವಾದಸಮಾಪ್ತಿ ಎನ್ನುವ ಇನ್ನೂರಾತೊಂಭತ್ತಾರನೇ ಅಧ್ಯಾಯವು.

[1] ಸ ತು ತಂ (ಗೀತಾ ಪ್ರೆಸ್).

[2] ವಿಯೋಗಧರ್ಮಿಣಾ ಚೈವ ವಿಮುಕ್ತಾತ್ಮಾ ಭವತ್ಯಥ| (ಗೀತಾ ಪ್ರೆಸ್).

[3] ದೇಯಮ್| (ಗೀತಾ ಪ್ರೆಸ್).

[4] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಉತ್ತೀರ್ಣೋಽಸ್ಮಾದಗಾಧಾತ್ ಸ ಪರಮಾಪ್ನೋತಿ ಶೋಭನಮ್| (ಗೀತಾ ಪ್ರೆಸ್).

Comments are closed.