Shanti Parva: Chapter 297

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೭

ಭೃಗು-ಜನಕ ಸಂವಾದ

ಜನಕವಂಶೀ ವಸುಮಾನನಿಗೆ ಭೃಗುವಂಶೀ ಋಷಿಯ ಧರ್ಮೋಪದೇಶ (೧-೨೫).

12297001 ಭೀಷ್ಮ ಉವಾಚ|

12297001a ಮೃಗಯಾಂ ವಿಚರನ್ಕಶ್ಚಿದ್ವಿಜನೇ ಜನಕಾತ್ಮಜಃ|

12297001c ವನೇ ದದರ್ಶ ವಿಪ್ರೇಂದ್ರಮೃಷಿಂ ವಂಶಧರಂ ಭೃಗೋಃ||

ಭೀಷ್ಮನು ಹೇಳಿದನು: “ಒಮ್ಮೆ ಜನಕಾತ್ಮಜನು ಬೇಟೆಯಾಡಲು ನಿರ್ಜನ ವನದಲ್ಲಿ ಸಂಚರಿಸುತ್ತಿದ್ದನು. ವನದಲ್ಲಿ ಅವನು ಭೃಗುವಿನ ವಂಶಧರ ಓರ್ವ ವಿಪ್ರೇಂದ್ರ ಋಷಿಯನ್ನು ಕಂಡನು.

12297002a ತಮಾಸೀನಮುಪಾಸೀನಃ ಪ್ರಣಮ್ಯ ಶಿರಸಾ ಮುನಿಮ್|

12297002c ಪಶ್ಚಾದನುಮತಸ್ತೇನ ಪಪ್ರಚ್ಚ ವಸುಮಾನಿದಮ್||

ಕುಳಿತಿದ್ದ ಮುನಿಯ ಬಳಿ ಹೋಗಿ ಶಿರಸಾ ನಮಸ್ಕರಿಸಿದ ನಂತರ ಜನಕಾತ್ಮಜ ವಸುಮಾನನು ಅವನ ಅನುಮತಿಯನ್ನು ಕೇಳಿಕೊಂಡು ಹೀಗೆ ಕೇಳಿದನು:

12297003a ಭಗವನ್ಕಿಮಿದಂ ಶ್ರೇಯಃ ಪ್ರೇತ್ಯ ವಾಪೀಹ ವಾ ಭವೇತ್|

12297003c ಪುರುಷಸ್ಯಾಧ್ರುವೇ ದೇಹೇ ಕಾಮಸ್ಯ ವಶವರ್ತಿನಃ||

“ಭಗವನ್! ಕಾಮದ ವಶವರ್ತಿಯಾಗಿ ಈ ಅಶಾಶ್ವತ ಶರೀರದಲ್ಲಿರುವ ಪುರುಷನಿಗೆ ಈ ಲೋಕ ಮತ್ತು ಪರಲೋಕದಲ್ಲಿ ಯಾವುದರಿಂದ ಶ್ರೇಯಸ್ಸುಂಟಾಗುತ್ತದೆ?”

12297004a ಸತ್ಕೃತ್ಯ ಪರಿಪೃಷ್ಟಃ ಸನ್ಸುಮಹಾತ್ಮಾ ಮಹಾತಪಾಃ|

12297004c ನಿಜಗಾದ ತತಸ್ತಸ್ಮೈ ಶ್ರೇಯಸ್ಕರಮಿದಂ ವಚಃ||

ಸತ್ಕಾರಪೂರ್ವಕ ಪ್ರಶ್ನಿಸಲು ಆ ಮಹಾತಪಸ್ವೀ ಮಹಾತ್ಮಾ ಮುನಿಯು ಅವನಿಗೆ ಶ್ರೇಯಸ್ಕರವಾದ ಈ ಮಾತನ್ನಾಡಿದನು:

12297005a ಮನಸೋಽಪ್ರತಿಕೂಲಾನಿ ಪ್ರೇತ್ಯ ಚೇಹ ಚ ವಾಂಚಸಿ|

12297005c ಭೂತಾನಾಂ ಪ್ರತಿಕೂಲೇಭ್ಯೋ ನಿವರ್ತಸ್ವ ಯತೇಂದ್ರಿಯಃ||

“ಇಲ್ಲಿ ಮತ್ತು ಪರಲೋಕಗಳಲ್ಲಿ ನಿನ್ನ ಮನಸ್ಸಿಗೆ ಪ್ರತಿಕೂಲವಲ್ಲದವುಗಳನ್ನು ಬಯಸುತ್ತಿರುವೆಯಾದರೆ ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಭೂತಗಳಿಗೆ ಪ್ರತಿಕೂಲವಾಗಿ[1] ನಡೆದುಕೊಳ್ಳುವುದನ್ನು ನಿಲ್ಲಿಸು.

12297006a ಧರ್ಮಃ ಸತಾಂ ಹಿತಃ ಪುಂಸಾಂ ಧರ್ಮಶ್ಚೈವಾಶ್ರಯಃ ಸತಾಮ್|

12297006c ಧರ್ಮಾಲ್ಲೋಕಾಸ್ತ್ರಯಸ್ತಾತ ಪ್ರವೃತ್ತಾಃ ಸಚರಾಚರಾಃ||

ಧರ್ಮವೇ ಸತ್ಪುರುಷರಿಗೆ ಹಿತವಾದುದು ಮತ್ತು ಧರ್ಮವೇ ಅವರಿಗೆ ಆಶ್ರಯವು. ಅಯ್ಯಾ! ಮೂರು ಲೋಕಗಳ ಸಚರಾಚರಗಳೂ ಧರ್ಮದಿಂದಲೇ ಉತ್ಪನ್ನವಾಗಿವೆ.

12297007a ಸ್ವಾದುಕಾಮುಕ ಕಾಮಾನಾಂ ವೈತೃಷ್ಣ್ಯಂ ಕಿಂ ನ ಗಚ್ಚಸಿ|

12297007c ಮಧು ಪಶ್ಯಸಿ ದುರ್ಬುದ್ಧೇ ಪ್ರಪಾತಂ ನಾನುಪಶ್ಯಸಿ||

ಭೋಗಗಳ ರಸವನ್ನು ಸ್ವಾದಿಸಲು ಇಚ್ಛಿಸುವವನೇ! ನಿನ್ನ ಕಾಮತೃಷ್ಣೆಯು ಏಕೆ ತಣಿಯುವುದಿಲ್ಲ? ದುರ್ಬುದ್ಧೇ! ನೀನು ಕೇವಲ ಜೇನುತುಪ್ಪವನ್ನು ನೋಡುತ್ತಿದ್ದೀಯೆ. ಕೆಳಗಿರುವ ಪ್ರಪಾತವು ನಿನಗೆ ಕಾಣುತ್ತಿಲ್ಲ.

12297008a ಯಥಾ ಜ್ಞಾನೇ ಪರಿಚಯಃ ಕರ್ತವ್ಯಸ್ತತ್ಫಲಾರ್ಥಿನಾ|

12297008c ತಥಾ ಧರ್ಮೇ ಪರಿಚಯಃ ಕರ್ತವ್ಯಸ್ತತ್ಫಲಾರ್ಥಿನಾ||

ಜ್ಞಾನದ ಫಲಾರ್ಥಿಗಳು ಹೇಗೆ ಮೊದಲು ಜ್ಞಾನದ ಪರಿಚಯವನ್ನು ಮಾಡಿಕೊಳ್ಳಬೇಕೋ ಹಾಗೆ ಧರ್ಮದ ಫಲಾರ್ಥಿಗಳು ಮೊದಲು ಧರ್ಮದ ಪರಿಚಯ ಮಾಡಿಕೊಳ್ಳಬೇಕು.

12297009a ಅಸತಾ ಧರ್ಮಕಾಮೇನ ವಿಶುದ್ಧಂ ಕರ್ಮ ದುಷ್ಕರಮ್|

12297009c ಸತಾ ತು ಧರ್ಮಕಾಮೇನ ಸುಕರಂ ಕರ್ಮ ದುಷ್ಕರಮ್||

ದುಷ್ಟಪುರುಷನು ಧರ್ಮವನ್ನಾಚರಿಸಬೇಕೆಂದು ಇಚ್ಛಿಸಿದರೂ ವಿಶುದ್ಧ ಕರ್ಮವು ಅವನಿಗೆ ದುಷ್ಕರವೆನಿಸುತ್ತದೆ. ಆದರೆ ಸತ್ಪುರುಷನು ಧರ್ಮವನ್ನಾಚರಿಸಬೇಕೆಂದು ಇಚ್ಛಿಸಿದರೆ ಅವನಿಗೆ ದುಷ್ಕರ ಕರ್ಮವೂ ಸುಲಭವಾಗುತ್ತದೆ.

12297010a ವನೇ ಗ್ರಾಮ್ಯಸುಖಾಚಾರೋ ಯಥಾ ಗ್ರಾಮ್ಯಸ್ತಥೈವ ಸಃ|

12297010c ಗ್ರಾಮೇ ವನಸುಖಾಚಾರೋ ಯಥಾ ವನಚರಸ್ತಥಾ||

ವನದಲ್ಲಿದ್ದುಕೊಂಡು ಗ್ರಾಮ್ಯ ಸುಖಗಳನ್ನು ಅನುಭವಿಸುತ್ತಿರುವವನನ್ನು ಗ್ರಾಮ್ಯ ಎಂದೇ ತಿಳಿದುಕೊಳ್ಳಬೇಕು. ಮತ್ತು ಗ್ರಾಮದಲ್ಲಿದ್ದುಕೊಂಡು ವನವಾಸಿಯಂತೆ ಇರುವುದರಲ್ಲಿ ಸುಖ ಕಾಣುವವನನ್ನು ವನವಾಸಿ ಎಂದೇ ಪರಿಗಣಿಸಬೇಕು.

12297011a ಮನೋವಾಕ್ಕರ್ಮಕೇ ಧರ್ಮೇ ಕುರು ಶ್ರದ್ಧಾಂ ಸಮಾಹಿತಃ|

12297011c ನಿವೃತ್ತೌ ವಾ ಪ್ರವೃತ್ತೌ ವಾ ಸಂಪ್ರಧಾರ್ಯ ಗುಣಾಗುಣಾನ್||

ಮೊದಲು ನಿವೃತ್ತಿ ಮತ್ತು ಪ್ರವೃತ್ತಿ ಮಾರ್ಗಗಳಲ್ಲಿರುವ ಗುಣ-ಅವಗುಣಗಳನ್ನು ಅರ್ಥಮಾಡಿಕೋ. ಅನಂತರ ಏಕಾಗ್ರಚಿತ್ತನಾಗಿ ಮನಸ್ಸು, ಮಾತು ಮತ್ತು ಶರೀರಗಳ ಮೂಲಕ ಧರ್ಮದಲ್ಲಿ ಶ್ರದ್ಧೆಯನ್ನಿಡು.

12297012a ನಿತ್ಯಂ ಚ ಬಹು ದಾತವ್ಯಂ ಸಾಧುಭ್ಯಶ್ಚಾನಸೂಯತಾ|

12297012c ಪ್ರಾರ್ಥಿತಂ ವ್ರತಶೌಚಾಭ್ಯಾಂ ಸತ್ಕೃತಂ ದೇಶಕಾಲಯೋಃ||

ನಿತ್ಯವೂ ವ್ರತ ಮತ್ತು ಶೌಚವನ್ನಾಚರಿಸುತ್ತಾ ಉತ್ತಮ ದೇಶ-ಕಾಲಗಳಲ್ಲಿ ಸಾದುಜನರನ್ನು ಪ್ರಾರ್ಥಿಸಿ ಸತ್ಕರಿಸಿ , ಅಸೂಯೆಯಿಲ್ಲದೇ, ಅಧಿಕ ದಾನವನ್ನು ನೀಡಬೇಕು.

12297013a ಶುಭೇನ ವಿಧಿನಾ ಲಬ್ಧಮರ್ಹಾಯ ಪ್ರತಿಪಾದಯೇತ್|

12297013c ಕ್ರೋಧಮುತ್ಸೃಜ್ಯ ದತ್ತ್ವಾ ಚ ನಾನುತಪ್ಯೇನ್ನ ಕೀರ್ತಯೇತ್||

ಶುಭಕರ್ಮಗಳಿಂದ ಗಳಿಸಿದುದನ್ನು ಸತ್ಪಾತ್ರನಿಗೆ ಅರ್ಪಿಸಬೇಕು. ಕ್ರೋಧವನ್ನು ತ್ಯಜಿಸಿ ದಾನಮಾಡಬೇಕು. ದಾನಮಾಡಿದ ನಂತರ ಪಶ್ಚಾತ್ತಾಪ ಪಡಬಾರದು ಮತ್ತು ಮಾಡಿದ ದಾನವನ್ನು ಹೇಳಿಕೊಳ್ಳಬಾರದು.

12297014a ಅನೃಶಂಸಃ ಶುಚಿರ್ದಾಂತಃ ಸತ್ಯವಾಗಾರ್ಜವೇ ಸ್ಥಿತಃ|

12297014c ಯೋನಿಕರ್ಮವಿಶುದ್ಧಶ್ಚ ಪಾತ್ರಂ ಸ್ಯಾದ್ವೇದವಿದ್ದ್ವಿಜಃ||

ದಯಾಲು, ಶುಚಿ, ದಾಂತ, ಸತ್ಯವಾಗ್ಮಿ, ಸರಳನಾಗಿರುವ, ಹುಟ್ಟು ಮತ್ತು ಕರ್ಮಗಳಲ್ಲಿ ವಿಶುದ್ಧನಾಗಿರುವ ದ್ವಿಜನೇ ದಾನಗಳಿಗೆ ಪಾತ್ರನು.

12297015a ಸತ್ಕೃತಾ ಚೈಕಪತ್ನೀ ಚ ಜಾತ್ಯಾ ಯೋನಿರಿಹೇಷ್ಯತೇ|

12297015c ಋಗ್ಯಜುಃಸಾಮಗೋ ವಿದ್ವಾನ್ಷಟ್ಕರ್ಮಾ ಪಾತ್ರಮುಚ್ಯತೇ||

ತನ್ನದೇ ಜಾತಿಯ ಸತ್ಕೃತ ಏಕಪತ್ನಿಯಲ್ಲಿ ಹುಟ್ಟಿದವರ ಜನ್ಮವು ಶುದ್ಧವಾದುದೆಂದು ಹೇಳುತ್ತಾರೆ. ಋಕ್-ಯಜುಷ್ ಮತ್ತು ಸಾಮವೇದಗಳ ವಿದ್ವಾಂಸನಾಗಿ ಸದಾ ಷಟ್ಕರ್ಮ[2]ಗಳನ್ನು ಅನುಷ್ಠಾನ ಮಾಡುವ ಬ್ರಾಹ್ಮಣನನ್ನು ಕರ್ಮದಲ್ಲಿ ಶುದ್ಧನಾದವನೆಂದೂ ದಾನಕ್ಕೆ ಪಾತ್ರನೆಂದೂ ಹೇಳಿದ್ದಾರೆ.

12297016a ಸ ಏವ ಧರ್ಮಃ ಸೋಽಧರ್ಮಸ್ತಂ ತಂ ಪ್ರತಿನರಂ ಭವೇತ್|

12297016c ಪಾತ್ರಕರ್ಮವಿಶೇಷೇಣ ದೇಶಕಾಲಾವವೇಕ್ಷ್ಯ ಚ||

ದೇಶ, ಕಾಲ, ಪಾತ್ರ ಮತ್ತು ಕರ್ಮವಿಶೇಷಗಳಿಂದಾಗಿ ಒಂದೇ ಕರ್ಮವು ಭಿನ್ನ ಭಿನ್ನ ಮನುಷ್ಯರಿಗೆ ಧರ್ಮ ಮತ್ತು ಅಧರ್ಮರೂಪವಾಗುತ್ತದೆ.

12297017a ಲೀಲಯಾಲ್ಪಂ ಯಥಾ ಗಾತ್ರಾತ್ಪ್ರಮೃಜ್ಯಾದ್ರಜಸಃ ಪುಮಾನ್|

12297017c ಬಹುಯತ್ನೇನ ಮಹತಾ ಪಾಪನಿರ್ಹರಣಂ ತಥಾ||

ಶರೀರಕ್ಕೆ ಸ್ವಲ್ಪವೇ ಧೂಳು ತಾಗಿದರೆ ಅದನ್ನು ಅನಾಯಾಸವಾಗಿ ಒರೆಸಿಕೊಳ್ಳಬಹುದು. ಆದರೆ ಶರೀರಕ್ಕೆ ಅಧಿಕ ಕೊಳೆಗಳು ಅಂಟಿಕೊಂಡರೆ ಸ್ವಲ್ಪ ಹೆಚ್ಚಿನ ಪ್ರಯತ್ನದಿಂದ ಅದನ್ನು ತೊಳೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಅಲ್ಪ ಪಾಪಗಳನ್ನು ಅಲ್ಪ ಪ್ರಯತ್ನದಿಂದಲೂ ಮತ್ತು ಮಹಾ ಪಾಪಗಳನ್ನು ಮಹಾಪ್ರಾಯಶ್ಚಿತ್ತಗಳಿಂದಲೂ ದೂರೀಕರಿಸಬಹುದು.

12297018a ವಿರಿಕ್ತಸ್ಯ ಯಥಾ ಸಮ್ಯಗ್ ಘೃತಂ ಭವತಿ ಭೇಷಜಮ್|

12297018c ತಥಾ ನಿರ್ಹೃತದೋಷಸ್ಯ ಪ್ರೇತ್ಯಧರ್ಮಃ ಸುಖಾವಹಃ||

ವಿರೇಚನೆಮಾಡಿ ಹೊಟ್ಟೆಯನ್ನು ಬರಿದು ಮಾಡಿಕೊಂಡವನಿಗೆ ತುಪ್ಪವು ಹೇಗೆ ಉತ್ತಮ ಔಷಧವಾಗಬಲ್ಲದೋ ಹಾಗೆ ಅದೇ ರೀತಿ ದೋಷಗಳನ್ನು ಕಳೆದುಕೊಂಡವನಿಗೆ ಧರ್ಮವು ಪರಲೋಕದಲ್ಲಿ ಸುಖವನ್ನು ತರುತ್ತದೆ.

12297019a ಮಾನಸಂ ಸರ್ವಭೂತೇಷು ವರ್ತತೇ ವೈ ಶುಭಾಶುಭೇ|

12297019c ಅಶುಭೇಭ್ಯಃ ಸಮಾಕ್ಷಿಪ್ಯ ಶುಭೇಷ್ವೇವಾವತಾರಯೇತ್||

ಸರ್ವಭೂತಗಳ ಮನಸ್ಸಿನಲ್ಲಿ ಶುಭಾಶುಭ ವಿಚಾರಗಳು ಬರುತ್ತಿರುತ್ತವೆ. ಅಶುಭ ವಿಚಾರಗಳನ್ನು ತೆಗೆದುಹಾಕಿ ಶುಭವಿಚಾರಗಳಲ್ಲಿಯೇ ಮನಸ್ಸನ್ನು ತೊಡಗಿಸಿಕೊಳ್ಳಬೇಕು.

12297020a ಸರ್ವಂ ಸರ್ವೇಣ ಸರ್ವತ್ರ ಕ್ರಿಯಮಾಣಂ ಚ ಪೂಜಯ|

12297020c ಸ್ವಧರ್ಮೇ ಯತ್ರ ರಾಗಸ್ತೇ ಕಾಮಂ ಧರ್ಮೋ ವಿಧೀಯತಾಮ್||

ಸರ್ವಧರ್ಮದವರು ಎಲ್ಲರೂ ಎಲ್ಲಕಡೆಗಳಲ್ಲೂ ಮಾಡುವ ಎಲ್ಲ ಕರ್ಮಗಳನ್ನೂ ಗೌರವಿಸು. ನೀನೂ ಕೂಡ ನಿನ್ನ ಧರ್ಮದ ಅನುಸಾರ ಯಾವ ಕರ್ಮಗಳಲ್ಲಿ ನಿನಗೆ ಅನುರಾಗವಿದೆಯೋ ಅದನ್ನು ಇಚ್ಛಾನುಸಾರ ಪಾಲಿಸು.

12297021a ಅಧೃತಾತ್ಮನ್ ಧೃತೌ ತಿಷ್ಠ ದುರ್ಬುದ್ಧೇ ಬುದ್ಧಿಮಾನ್ ಭವ|

12297021c ಅಪ್ರಶಾಂತ ಪ್ರಶಾಮ್ಯ ತ್ವಮಪ್ರಾಜ್ಞ ಪ್ರಾಜ್ಞವಚ್ಚರ||

ಅಧೀರ ಚಿತ್ತದವನೇ! ಧೀರತೆಯನ್ನು ತಾಳು. ದುರ್ಬುದ್ಧೇ! ಬುದ್ಧಿವಂತನಾಗು. ಅಪ್ರಶಾಂತನೇ! ಶಾಂತನಾಗು. ಅಪ್ರಾಜ್ಞನೇ! ಪ್ರಾಜ್ಞನಾಗು.

12297022a ತೇಜಸಾ ಶಕ್ಯತೇ ಪ್ರಾಪ್ತುಮುಪಾಯಸಹಚಾರಿಣಾ|

12297022c ಇಹ ಚ ಪ್ರೇತ್ಯ ಚ ಶ್ರೇಯಸ್ತಸ್ಯ ಮೂಲಂ ಧೃತಿಃ ಪರಾ||

ಸತ್ಪುರುಷರ ಸಂಗದಿಂದ ಮತ್ತು ಅವರ ತೇಜಸ್ಸಿನ ಪ್ರತಾಪದಿಂದ ಇಹ ಮತ್ತು ಪರಲೋಕಗಳಲ್ಲಿ ಶ್ರೇಯಸ್ಸನ್ನುಂಟುಮಾಡುವ ಯಾವುದಾದರೂ ಒಂದು ಉಪಾಯವು ಬಂದೊದಗುತ್ತದೆ. ಧೃತಿಯೇ ಶ್ರೇಯಸ್ಸಿನ ಮೂಲ.

12297023a ರಾಜರ್ಷಿರಧೃತಿಃ ಸ್ವರ್ಗಾತ್ಪತಿತೋ ಹಿ ಮಹಾಭಿಷಃ|

12297023c ಯಯಾತಿಃ ಕ್ಷೀಣಪುಣ್ಯಶ್ಚ ಧೃತ್ಯಾ ಲೋಕಾನವಾಪ್ತವಾನ್||

ರಾಜರ್ಷಿ ಮಹಾಭಿಷನು ಧೃತನಾಗಿರದೇ ಇದ್ದ ಕಾರಣದಿಂದ ಸ್ವರ್ಗದಿಂದ ಕೆಳಗೆ ಬಿದ್ದನು. ಮತ್ತು ಕ್ಷೀಣಪುಣ್ಯ ಯಯಾತಿಯು ತನ್ನ ಧೃತಿಯ ಬಲದಿಂದಲೇ ಉತ್ತಮ ಲೋಕಗಳನ್ನು ಪಡೆದುಕೊಂಡನು.

12297024a ತಪಸ್ವಿನಾಂ ಧರ್ಮವತಾಂ ವಿದುಷಾಂ ಚೋಪಸೇವನಾತ್|

12297024c ಪ್ರಾಪ್ಸ್ಯಸೇ ವಿಪುಲಾಂ ಬುದ್ಧಿಂ ತಥಾ ಶ್ರೇಯೋಽಭಿಪತ್ಸ್ಯಸೇ||

ಧರ್ಮಾತ್ಮಾ ವಿದ್ವಾಂಸ ತಪಸ್ವಿಗಳ ಸೇವೆಮಾಡುವುದರಿಂದ ನಿನಗೆ ವಿಪುಲ ಬುದ್ಧಿಯು ಪ್ರಾಪ್ತವಾಗುತ್ತದೆ ಮತ್ತು ಶ್ರೇಯಸ್ಸನ್ನೂ ಪಡೆದುಕೊಳ್ಳುತ್ತೀಯೆ.”

12297025a ಸ ತು ಸ್ವಭಾವಸಂಪನ್ನಸ್ತಚ್ಚ್ರುತ್ವಾ ಮುನಿಭಾಷಿತಮ್|

12297025c ವಿನಿವರ್ತ್ಯ ಮನಃ ಕಾಮಾದ್ಧರ್ಮೇ ಬುದ್ಧಿಂ ಚಕಾರ ಹ||

ಸ್ವಭಾವತಃ ಸಂಪನ್ನನಾಗಿದ್ದ ವಸುಮಾನನು ಮುನಿಯಾಡಿದ ಮಾತುಗಳನ್ನು ಕೇಳಿ ಕಾಮಗಳ ಮೇಲಿನ ತನ್ನ ಮನಸ್ಸನ್ನು ಹಿಂತೆಗೆದುಕೊಂಡು ಧರ್ಮಬುದ್ಧಿಯನ್ನು ಪಡೆದುಕೊಂಡನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಜನಕಾನುಶಾಸನೇ ಸಪ್ತನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಜನಕಾನುಶಾಸನ ಎನ್ನುವ ಇನ್ನೂರಾತೊಂಭತ್ತೇಳನೇ ಅಧ್ಯಾಯವು.

[1] ವಿರುದ್ಧವಾಗಿ ಅಥವಾ ಹಾನಿಕಾರಕವಾಗಿ ಅಥವಾ ಅಹಿತವಾಗಿ.

[2] ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ ಮತ್ತು ಪ್ರತಿಗ್ರಹ – ಇವು ಷಟ್ಕರ್ಮಗಳು (ಗೀತಾ ಪ್ರೆಸ್).

Comments are closed.