Shanti Parva: Chapter 295

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೫

ವಿದ್ಯಾ-ಅವಿದ್ಯಾ, ಅಕ್ಷರ-ಕ್ಷರ ಮತ್ತು ಪ್ರಕೃತಿ-ಪುರುಷರ ಸ್ವರೂಪ ಮತ್ತು ವಿವೇಕದ ಉದ್ಗಾರದ ವರ್ಣನೆ (೧-೪೬).

12295001 ವಸಿಷ್ಠ ಉವಾಚ|

12295001a ಸಾಂಖ್ಯದರ್ಶನಮೇತಾವದುಕ್ತಂ ತೇ ನೃಪಸತ್ತಮ|

12295001c ವಿದ್ಯಾವಿದ್ಯೇ ತ್ವಿದಾನೀಂ ಮೇ ತ್ವಂ ನಿಬೋಧಾನುಪೂರ್ವಶಃ||

ವಸಿಷ್ಠನು ಹೇಳಿದನು: “ನೃಪಸತ್ತಮ! ಇದೂವರೆಗೆ ನಾನು ನಿನಗೆ ಸಾಂಖ್ಯದರ್ಶನದ ಕುರಿತು ಹೇಳಿದೆ. ಈಗ ನನ್ನಿಂದ ವಿದ್ಯೆ ಮತ್ತು ಅವಿದ್ಯೆಗಳ ಕುರಿತು ಕೇಳು.

12295002a ಅವಿದ್ಯಾಮಾಹುರವ್ಯಕ್ತಂ ಸರ್ಗಪ್ರಲಯಧರ್ಮಿ ವೈ|

12295002c ಸರ್ಗಪ್ರಲಯನಿರ್ಮುಕ್ತಂ ವಿದ್ಯಾಂ ವೈ ಪಂಚವಿಂಶಕಮ್||

ಸೃಷ್ಟಿ ಮತ್ತು ಪ್ರಲಯಧರ್ಮಿಯಾದ ಅವ್ಯಕ್ತವನ್ನೇ ಅವಿದ್ಯಾ ಎಂದು ಹೇಳುತ್ತಾರೆ ಮತ್ತು ಸೃಷ್ಟಿ-ಪ್ರಲಯ ನಿರ್ಮುಕ್ತನಾದ ಇಪ್ಪತ್ತೈದನೆಯದನ್ನು ವಿದ್ಯಾ ಎಂದು ಕರೆಯುತ್ತಾರೆ.

12295003a ಪರಸ್ಪರಮವಿದ್ಯಾಂ ವೈ ತನ್ನಿಬೋಧಾನುಪೂರ್ವಶಃ|

12295003c ಯಥೋಕ್ತಮೃಷಿಭಿಸ್ತಾತ ಸಾಂಖ್ಯಸ್ಯಾಸ್ಯ ನಿದರ್ಶನಮ್||

ಅಯ್ಯಾ! ಸಾಂಖ್ಯದರ್ಶನದ ನಿದರ್ಶನಗಳನ್ನೀಯುವ ಋಷಿಗಳು ಹೇಳಿದಂತೆ ತತ್ತ್ವಗಳಲ್ಲಿ ಕ್ರಮಶಃ ಪರಸ್ಪರರಿಗೆ ಯಾವುದು ಅವಿದ್ಯೆ ಎನ್ನುವುದನ್ನು ಕೇಳು.

12295004a ಕರ್ಮೇಂದ್ರಿಯಾಣಾಂ ಸರ್ವೇಷಾಂ ವಿದ್ಯಾ ಬುದ್ಧೀಂದ್ರಿಯಂ ಸ್ಮೃತಮ್|

12295004c ಬುದ್ಧೀಂದ್ರಿಯಾಣಾಂ ಚ ತಥಾ ವಿಶೇಷಾ ಇತಿ ನಃ ಶ್ರುತಮ್||

ಸರ್ವ ಕರ್ಮೇಂದ್ರಿಯಗಳ ವಿದ್ಯೆಯು ಜ್ಞಾನೇಂದ್ರಿಯಗಳಿವೆ ಎಂದು ನಾವು ಕೇಳಿದ್ದೇವೆ. ಅರ್ಥಾತ್ ಕರ್ಮೇಂದ್ರಿಯಗಳಿಗಿಂತ ಜ್ಞಾನೇಂದ್ರಿಯಗಳು ಶ್ರೇಷ್ಠ. ಹಾಗೆಯೇ ಜ್ಞಾನೇಂದ್ರಿಯಗಳ ವಿದ್ಯೆಯು ಪಂಚಮಹಾಭೂತಗಳಿವೆ.

12295005a ವಿಶೇಷಾಣಾಂ ಮನಸ್ತೇಷಾಂ ವಿದ್ಯಾಮಾಹುರ್ಮನೀಷಿಣಃ|

12295005c ಮನಸಃ ಪಂಚಭೂತಾನಿ ವಿದ್ಯಾ ಇತ್ಯಭಿಚಕ್ಷತೇ||

ಸ್ಥೂಲ ಪಂಚಮಹಾಭೂತಗಳ ವಿದ್ಯೆಯು ಮನಸ್ಸಿಗಿದೆ ಎಂದು ಮನೀಷಿಣರು ಹೇಳುತ್ತಾರೆ. ಮತ್ತು ಮನಸ್ಸಿನ ವಿದ್ಯೆಯು ಸೂಕ್ಷ್ಮ ಪಂಚಭೂತಗಳಿವೆ.

12295006a ಅಹಂಕಾರಸ್ತು ಭೂತಾನಾಂ ಪಂಚಾನಾಂ ನಾತ್ರ ಸಂಶಯಃ|

12295006c ಅಹಂಕಾರಸ್ಯ ಚ ತಥಾ ಬುದ್ಧಿರ್ವಿದ್ಯಾ ನರೇಶ್ವರ||

ಸೂಕ್ಷ್ಮ ಪಂಚಭೂತಗಳ ವಿದ್ಯೆಯು ಅಹಂಕಾರದಲ್ಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ನರೇಶ್ವರ! ಅಹಂಕಾರದ ವಿದ್ಯೆಯು ಬುದ್ಧಿ.

12295007a ಬುದ್ಧೇಃ ಪ್ರಕೃತಿರವ್ಯಕ್ತಂ ತತ್ತ್ವಾನಾಂ ಪರಮೇಶ್ವರಮ್[1]|

12295007c ವಿದ್ಯಾ ಜ್ಞೇಯಾ ನರಶ್ರೇಷ್ಠ ವಿಧಿಶ್ಚ ಪರಮಃ ಸ್ಮೃತಃ||

ಬುದ್ಧಿಯ ವಿದ್ಯೆಯು ಅವ್ಯಕ್ತ ಪ್ರಕೃತಿ ಮತ್ತು ಎಲ್ಲ ತತ್ತ್ವಗಳ ವಿದ್ಯೆಯು ಪರಮೇಶ್ವರನು. ನರಶ್ರೇಷ್ಠ! ಈ ವಿದ್ಯೆಯೇ ಜ್ಞೇಯ ಯೋಗ್ಯವು. ಇದನ್ನೇ ಪರಮ ವಿಧಿ ಎಂದು ಹೇಳುತ್ತಾರೆ.

12295008a ಅವ್ಯಕ್ತಸ್ಯ ಪರಂ ಪ್ರಾಹುರ್ವಿದ್ಯಾಂ ವೈ ಪಂಚವಿಂಶಕಮ್|

12295008c ಸರ್ವಸ್ಯ ಸರ್ವಮಿತ್ಯುಕ್ತಂ ಜ್ಞೇಯಂ ಜ್ಞಾನಸ್ಯ ಪಾರ್ಥಿವ||

ಪಾರ್ಥಿವ! ಅವ್ಯಕ್ತದ ಪರಮ ವಿದ್ಯೆಯು ಆ ಇಪ್ಪತ್ತೈದನೆಯದು ಎಂದು ಹೇಳಿದ್ದಾರೆ. ಅದೇ ಸರ್ವ ಜ್ಞಾನದ ಸರ್ವರೂಪ ಜ್ಞೇಯ ಎಂದು ಹೇಳಿದ್ದಾರೆ.

12295009a ಜ್ಞಾನಮವ್ಯಕ್ತಮಿತ್ಯುಕ್ತಂ ಜ್ಞೇಯಂ ವೈ ಪಂಚವಿಂಶಕಮ್|

12295009c ತಥೈವ ಜ್ಞಾನಮವ್ಯಕ್ತಂ ವಿಜ್ಞಾತಾ ಪಂಚವಿಂಶಕಃ||

ಜ್ಞಾನವನ್ನು ಅವ್ಯಕ್ತವೆಂದೂ ಇಪ್ಪತ್ತೈದನೆಯದನ್ನು ಜ್ಞೇಯವೆಂದೂ ಹೇಳಿದ್ದಾರೆ. ಹಾಗೆಯೇ ಜ್ಞಾನವು ಅವ್ಯಕ್ತ ಮತ್ತು ಇಪ್ಪತ್ತೈದನೆಯದು ವಿಜ್ಞಾತಾ.

12295010a ವಿದ್ಯಾವಿದ್ಯಾರ್ಥತತ್ತ್ವೇನ ಮಯೋಕ್ತಂ ತೇ ವಿಶೇಷತಃ|

12295010c ಅಕ್ಷರಂ ಚ ಕ್ಷರಂ ಚೈವ ಯದುಕ್ತಂ ತನ್ನಿಬೋಧ ಮೇ||

ವಿದ್ಯೆ ಮತ್ತು ಅವಿದ್ಯೆಗಳ ಕುರಿತು ವಿಶೇಷ ಅರ್ಥಗಳೊಂದಿಗೆ ಹೇಳಿದ್ದೇನೆ. ಇನ್ನು ಅಕ್ಷರ ಮತ್ತು ಕ್ಷರಗಳ ಕುರಿತು ಹೇಳುತ್ತೇನೆ. ಕೇಳು.

12295011a ಉಭಾವೇತೌ ಕ್ಷರಾವುಕ್ತಾವುಭಾವೇತೌ ಚ ನಕ್ಷರೌ|

12295011c ಕಾರಣಂ ತು ಪ್ರವಕ್ಷ್ಯಾಮಿ ಯಥಾ ಖ್ಯಾತೌ ತು ತತ್ತ್ವತಃ||

ಸಾಂಖ್ಯಶಾಸ್ತ್ರದಲ್ಲಿ ಪ್ರಕೃತಿ ಮತ್ತು ಪುರುಷ ಎರಡನ್ನೂ ಅಕ್ಷರ ಎಂದು ಹೇಳಿದ್ದಾರೆ ಮತ್ತು ಇವೆರಡನ್ನೂ ಕ್ಷರ ಎಂದೂ ಕರೆದಿದ್ದಾರೆ. ನಾನು ಕೇಳಿದಂತೆ ಇದರ ಕಾರಣವನ್ನು ತತ್ತ್ವತಃ ಹೇಳುತ್ತೇನೆ.

12295012a ಅನಾದಿನಿಧನಾವೇತಾವುಭಾವೇವೇಶ್ವರೌ ಮತೌ|

12295012c ತತ್ತ್ವಸಂಜ್ಞಾವುಭಾವೇತೌ ಪ್ರೋಚ್ಯೇತೇ ಜ್ಞಾನಚಿಂತಕೈಃ||

ಇವೆರಡೂ ಅನಾದಿ ಮತ್ತು ಅನಂತವಾದವುಗಳು. ಆದುದರಿಂದ ಪರಸ್ಪರ ಸಂಯೋಗದಿಂದ ಇಬ್ಬರೂ ಈಶ್ವರ ಎನ್ನುವ ಮಾನ್ಯತೆಯಿತೆ. ಜ್ಞಾನಚಿಂತಕರು ಇವೆರಡನ್ನೂ ತತ್ತ್ವ ಎಂದೇ ಕರೆಯುತ್ತಾರೆ.

12295013a ಸರ್ಗಪ್ರಲಯಧರ್ಮಿತ್ವಾದವ್ಯಕ್ತಂ ಪ್ರಾಹುರಕ್ಷರಮ್|

12295013c ತದೇತದ್ಗುಣಸರ್ಗಾಯ ವಿಕುರ್ವಾಣಂ ಪುನಃ ಪುನಃ||

ಸೃಷ್ಟಿ-ಪ್ರಲಯಗಳು ಪ್ರಕೃತಿಯ ಧರ್ಮವು. ಆದುದರಿಂದ ಅವ್ಯಕ್ತ ಪ್ರಕೃತಿಯನ್ನು ಅಕ್ಷರ ಎಂದು ಹೇಳುತ್ತಾರೆ. ಅದೇ ಪ್ರಕೃತಿಯು ಮಹತ್ತತ್ತ್ವ ಮೊದಲಾದ ಗುಣಗಳನ್ನು ಸೃಷ್ಟಿಸಲು ಪುನಃ ಪುನಃ ವಿಕಾರಕ್ಕೊಳಗಾಗುತ್ತದೆ. ಆದುದರಿಂದ ಅದನ್ನು ಕ್ಷರ ಎಂದೂ ಕರೆಯುತ್ತಾರೆ.

12295014a ಗುಣಾನಾಂ ಮಹದಾದೀನಾಮುತ್ಪದ್ಯತಿ ಪರಸ್ಪರಮ್|

12295014c ಅಧಿಷ್ಠಾನಾತ್ ಕ್ಷೇತ್ರಮಾಹುರೇತತ್ತತ್ಪಂಚವಿಂಶಕಮ್||

ಮಹತ್ತತ್ತ್ವಾದಿ ಗುಣಗಳ ಉತ್ಪತ್ತಿಯು ಪ್ರಕೃತಿ ಮತ್ತು ಪುರುಷರ ಪರಸ್ಪರ ಸಂಯೋಗದಿಂದ ಆಗುತ್ತದೆ. ಆದುದರಿಂದ ಒಂದು ಮತ್ತೊಂದರ ಅಧಿಷ್ಠಾನರಾಗಿರುವ ಕಾರಣ ಪುರುಷನಿಗೂ ಕೂಡ ಕ್ಷೇತ್ರ ಎಂದು ಹೇಳುತ್ತಾರೆ.

12295015a ಯದಾ ತು ಗುಣಜಾಲಂ ತದವ್ಯಕ್ತಾತ್ಮನಿ ಸಂಕ್ಷಿಪೇತ್|

12295015c ತದಾ ಸಹ ಗುಣೈಸ್ತೈಸ್ತು ಪಂಚವಿಂಶೋ ವಿಲೀಯತೇ||

ಯೋಗಿಯು ಪ್ರಕೃತಿಯ ಗುಣಸಮೂಹಗಳನ್ನು ಅವ್ಯಕ್ತ ಮೂಲ ಪ್ರಕೃತಿಯಲ್ಲಿ ವಿಲೀನಗೊಳಿಸಿದಾಗ ಆ ಗುಣಗಳ ಲಯದೊಂದಿಗೆ ಇಪ್ಪತ್ತೈದನೆಯದಾದ ಪುರುಷನೂ ಕೂಡ ವಿಲೀನಗೊಳ್ಳುತ್ತಾನೆ. ಈ ದೃಷ್ಟಿಯಲ್ಲಿ ಅವನನ್ನೂ ಕ್ಷರ ಎಂದೇ ಕರೆಯುತ್ತಾರೆ.

12295016a ಗುಣಾ ಗುಣೇಷು ಲೀಯಂತೇ ತದೈಕಾ ಪ್ರಕೃತಿರ್ಭವೇತ್|

12295016c ಕ್ಷೇತ್ರಜ್ಞೋಽಪಿ ಯದಾ ತಾತ ತತ್ಕ್ಷೇತ್ರೇ ಸಂಪ್ರಲೀಯತೇ||

ಅಯ್ಯಾ! ಗುಣಗಳು ಗುಣಗಳಲ್ಲಿ ಲೀನವಾದಾಗ ಪ್ರಕೃತಿಯೊಂದೇ ಇರುತ್ತದೆ. ಮತ್ತು ಕ್ಷೇತ್ರಜ್ಞನೂ ಯಾವಾಗ ಕ್ಷೇತ್ರದಲ್ಲಿ ಲೀನನಾಗುತ್ತಾನೋ ಆಗ ಅವನ ಪ್ರತ್ಯೇಕ ಅಸ್ತಿತ್ವವು ಇರುವುದಿಲ್ಲ.

12295017a ತದಾಕ್ಷರತ್ವಂ ಪ್ರಕೃತಿರ್ಗಚ್ಚತೇ ಗುಣಸಂಜ್ಞಿತಾ|

12295017c ನಿರ್ಗುಣತ್ವಂ ಚ ವೈದೇಹ ಗುಣೇಷು ಪ್ರತಿವರ್ತನಾತ್||

ವೈದೇಹ! ಆಗ ತ್ರಿಗುಣಮಯೀ ಪ್ರಕೃತಿಯು ಕ್ಷರತ್ವವನ್ನು ಹೊಂದಿ ನಾಶಗೊಳ್ಳುತ್ತದೆ ಮತ್ತು ಪುರುಷನೂ ಕೂಡ ಗುಣಗಳಲ್ಲಿ ಪ್ರವೃತ್ತನಾಗಿರದೇ ಇರುವುದರಿಂದ ನಿರ್ಗುಣನಾಗುತ್ತಾನೆ.

12295018a ಏವಮೇವ ಚ ಕ್ಷೇತ್ರಜ್ಞಃ ಕ್ಷೇತ್ರಜ್ಞಾನಪರಿಕ್ಷಯೇ|

12295018c ಪ್ರಕೃತ್ಯಾ ನಿರ್ಗುಣಸ್ತ್ವೇಷ ಇತ್ಯೇವಮನುಶುಶ್ರುಮ||

ಹೀಗೆ ಯಾವಾಗ ಕ್ಷೇತ್ರದ ಜ್ಞಾನವಿರುವುದಿಲ್ಲವೋ ಅರ್ಥಾತ್ ಪುರುಷನಿಗೆ ಪ್ರಕೃತಿಯ ಜ್ಞಾನವಿರುವುದಿಲ್ಲವೋ ಆಗ ಅವನು ಸ್ವಭಾವತಃ ನಿರ್ಗುಣನೇ ಆಗುತ್ತಾನೆ ಎಂದು ನಾವು ಕೇಳಿದ್ದೇವೆ.

12295019a ಕ್ಷರೋ ಭವತ್ಯೇಷ ಯದಾ ತದಾ ಗುಣವತೀಮಥ|

12295019c ಪ್ರಕೃತಿಂ ತ್ವಭಿಜಾನಾತಿ ನಿರ್ಗುಣತ್ವಂ ತಥಾತ್ಮನಃ||

ಹೀಗೆ ಅವನು ಕ್ಷರವಾದಾಗ ಅವನು ಪ್ರಕ್ಕೃತಿಯ ಸಗುಣತ್ವವನ್ನೂ ಮತ್ತು ನನ್ನ ನಿರ್ಗುಣತ್ವವನ್ನೂ ಯಾರ್ಥಾರ್ಥ ತಿಳಿದುಕೊಳ್ಳುತ್ತಾನೆ.

12295020a ತದಾ ವಿಶುದ್ಧೋ ಭವತಿ ಪ್ರಕೃತೇಃ ಪರಿವರ್ಜನಾತ್|

12295020c ಅನ್ಯೋಽಹಮನ್ಯೇಯಮಿತಿ ಯದಾ ಬುಧ್ಯತಿ ಬುದ್ಧಿಮಾನ್||

ಪ್ರಕೃತಿಯನ್ನು ಪರಿತ್ಯಜಿಸಿದುದರಿಂದ ಆಗ ಅವನು ವಿಶುದ್ಧನಾಗುತ್ತಾನೆ. ತಾನು ಬೇರೆ ಮತ್ತು ಪ್ರಕೃತಿಯು ಬೇರೆ ಎನ್ನುವ ಅರಿವು ಆ ಬುದ್ಧಿವಂತನಿಗಾಗುತ್ತದೆ.

12295021a ತದೈಷೋಽನ್ಯತ್ವತಾಮೇತಿ ನ ಚ ಮಿಶ್ರತ್ವಮಾವ್ರಜೇತ್|

12295021c ಪ್ರಕೃತ್ಯಾ ಚೈವ ರಾಜೇಂದ್ರ ನಮಿಶ್ರೋಽನ್ಯಶ್ಚ ದೃಶ್ಯತೇ||

ರಾಜೇಂದ್ರ! ಪ್ರಕೃತಿಯ ಸಂಯೋಗದಲ್ಲಿರುವಾಗ ಅವನಿಗೆ ತಾನು ಭಿನ್ನನಲ್ಲ ಎಂದು ತೋರುವುದಕ್ಕೆ ಅವನು ತದ್ರೂಪವನ್ನು ಹೊಂದುವುದೇ ಕಾರಣ ಎಂದು ಅನಿಸುತ್ತದೆ. ಆದರೆ ಆ ಅವಸ್ಥೆಯಲ್ಲಿಯೂ ಕೂಡ ಅವನು ಪ್ರಕೃತಿಯೊಡನೆ ಸೇರಿ ಒಂದಾಗಿರುವುದಿಲ್ಲ, ಪ್ರತ್ಯೇಕನಾಗಿಯೇ ಇರುತ್ತಾನೆ. ಹೀಗೆ ಪುರುಷನು ಪ್ರಕೃತಿಯೊಡನೆ ಸಂಯುಕ್ತನಾಗಿಯೂ ಮತ್ತು ಪ್ರತ್ಯೇಕನಾಗಿಯೂ ಕಂಡುಬರುತ್ತಾನೆ.

12295022a ಯದಾ ತು ಗುಣಜಾಲಂ ತತ್ ಪ್ರಾಕೃತಂ ವಿಜುಗುಪ್ಸತೇ|

12295022c ಪಶ್ಯತೇ ಚಾಪರಂ ಪಶ್ಯಂ ತದಾ ಪಶ್ಯನ್ನ ಸಂಜ್ವರೇತ್||

ಪ್ರಾಕೃತ ಗುಣಜಾಲಗಳು ಕುತ್ಸಿತವೆಂದು ತಿಳಿದು ಅವುಗಳಿಂದ ವಿರತನಾದಾಗ ಅವನಿಗೆ ಪರಮಾತ್ಮನ ದರ್ಶನವಾಗುತ್ತದೆಯಾದರೂ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದಿಲ್ಲ ಅಥವಾ ಅವುಗಳಿಂದ ಬೇರೆಯಾಗುವುದಿಲ್ಲ.

12295023a ಕಿಂ ಮಯಾ ಕೃತಮೇತಾವದ್ಯೋಽಹಂ ಕಾಲಮಿಮಂ ಜನಮ್|

12295023c ಮತ್ಸ್ಯೋ ಜಾಲಂ ಹ್ಯವಿಜ್ಞಾನಾದನುವರ್ತಿತವಾಂಸ್ತಥಾ||

ಆದರೆ ಯಾವಾಗ ಅವನಿಗೆ ಬೋಧೆಯುಂಟಾಗುತ್ತದೆಯೋ ಆಗ ಅನಿಸುತ್ತದೆ: “ಅಯ್ಯೋ! ನಾನೇನು ಮಾಡಿಬಿಟ್ಟೆ! ಮೀನು ಅಜ್ಞಾನವಶ ಸ್ವಯಂ ತಾನೇ ಹೋಗಿ ಜಾಲದಲ್ಲಿ ಸಿಲುಕಿಹಾಕಿಕೊಳ್ಳುವಂತೆ ನಾನೂ ಕೂಡ ತಿಳಿಯದೇ ಇಲ್ಲಿ ಪ್ರಾಕೃತ ಶರೀರದ ಅನುಸರಣೆಯನ್ನು ಮಾಡುತ್ತಿದ್ದೇನೆ!

12295024a ಅಹಮೇವ ಹಿ ಸಂಮೋಹಾದನ್ಯಮನ್ಯಂ ಜನಾಜ್ ಜನಮ್|

12295024c ಮತ್ಸ್ಯೋ ಯಥೋದಕಜ್ಞಾನಾದನುವರ್ತಿತವಾನಿಹ||

ಮೀನು ಹೇಗೆ ನೀರೇ ತನ್ನ ಜೀವನದ ಮೂಲವೆಂಬ ಸಮ್ಮೋಹದಿಂದ ಒಂದು ಜಲಾಶಯದಿಂದ ಇನ್ನೊಂದು ಜಲಾಶಯಕ್ಕೆ ಹೋಗುತ್ತದೆಯೋ ಹಾಗೆ ನಾನೂ ಕೂಡ ಮೋಹವಶನಾಗಿ ಒಂದು ಶರೀರದಿಂದ ಇನ್ನೊಂದು ಶರೀರವೆಂದು ಅಲೆದಾಡುತ್ತಿದ್ದೇನೆ.

12295025a ಮತ್ಸ್ಯೋಽನ್ಯತ್ವಂ ಯಥಾಜ್ಞಾನಾದುದಕಾನ್ನಾಭಿಮನ್ಯತೇ|

12295025c ಆತ್ಮಾನಂ ತದ್ವದಜ್ಞಾನಾದನ್ಯತ್ವಂ ಚೈವ ವೇದ್ಮ್ಯಹಮ್||

ಮೀನು ಹೇಗೆ ನೀರು ತನಗಿಂತ ಭಿನ್ನ ಎಂದು ತಿಳಿದಿರುವುದಿಲ್ಲವೋ ಹಾಗೆ ನಾನೂ ಕೂಡ ನನ್ನ ಅಜ್ಞಾನದ ಕಾರಣದಿಂದ ನನ್ನನ್ನು ಈ ಪ್ರಾಕೃತ ಶರೀರಕ್ಕಿಂತ ಭಿನ್ನನಾಗಿ ಕಾಣುತ್ತಿಲ್ಲ.

12295026a ಮಮಾಸ್ತು ಧಿಗಬುದ್ಧಸ್ಯ ಯೋಽಹಂ ಮಗ್ನಮಿಮಂ ಪುನಃ|

12295026c ಅನುವರ್ತಿತವಾನ್ಮೋಹಾದನ್ಯಮನ್ಯಂ ಜನಾಜ್ಜನಮ್||

ಸಂಸಾರಸಾಗರದಲ್ಲಿ ಮುಳುಗಿರುವ ಈ ಶರೀರವನ್ನು ಆಶ್ರಯಿಸಿ ಮೋಹವಶ ಒಂದು ಶರೀರದಿಂದ ಇನ್ನೊಂದು ಶರೀರದ ಅನುಸರಣೆಮಾಡುತ್ತಿರುವ ಈ ಮೂಢ ನನಗೆ ಧಿಕ್ಕಾರವು!

12295027a ಅಯಮತ್ರ ಭವೇದ್ಬಂಧುರನೇನ ಸಹ ಮೋಕ್ಷಣಮ್|

12295027c ಸಾಮ್ಯಮೇಕತ್ವಮಾಯಾತೋ ಯಾದೃಶಸ್ತಾದೃಶಸ್ತ್ವಹಮ್||

ವಾಸ್ತವವಾಗಿ ಈ ಜಗತ್ತಿನಲ್ಲಿ ಈ ಪರಮಾತ್ಮನೇ ನನ್ನ ಬಂಧುವು. ಇವನೊಂದಿಗೇ ನನ್ನ ಮೈತ್ರಿಯಾಗಬಹುದು. ಮೊದಲು ನಾನು ಹೇಗಿದ್ದರೂ ಈಗ ಮಾತ್ರ ನಾನು ಅವನ ಸಮಾನತ್ವ ಮತ್ತು ಏಕತ್ವವನ್ನು ಹೊಂದಿದ್ದೇನೆ. ಅವನು ಹೇಗಿದ್ದಾನೆಯೋ ಹಾಗೆ ನಾನೂ ಇದ್ದೇನೆ.

12295028a ತುಲ್ಯತಾಮಿಹ ಪಶ್ಯಾಮಿ ಸದೃಶೋಽಹಮನೇನ ವೈ|

12295028c ಅಯಂ ಹಿ ವಿಮಲೋ ವ್ಯಕ್ತಮಹಮೀದೃಶಕಸ್ತಥಾ||

ಅವನಲ್ಲಿಯೇ ನನ್ನ ಸಮಾನತೆಯನ್ನು ಕಾಣುತ್ತಿದ್ದೇನೆ. ಅವಶ್ಯವಾಗಿಯೂ ನಾನು ಅವನಂತೆಯೇ ಇದ್ದೇನೆ. ಈ ಪರಮಾತ್ಮನು ಪ್ರತ್ಯಕ್ಷವಾಗಿಯೇ ಅತ್ಯಂತ ನಿರ್ಮಲನಾಗಿದ್ದಾನೆ ಮತ್ತು ನಾನೂ ಹಾಗೆಯೇ ಇದ್ದೇನೆ.

12295029a ಯೋಽಹಮಜ್ಞಾನಸಂಮೋಹಾದಜ್ಞಯಾ ಸಂಪ್ರವೃತ್ತವಾನ್|

12295029c ಸಸಂಗಯಾಹಂ ನಿಃಸಂಗಃ ಸ್ಥಿತಃ ಕಾಲಮಿಮಂ ತ್ವಹಮ್||

ಆಸಕ್ತರಹಿತನಾಗಿದ್ದರೂ ನಾನು ಅಜ್ಞಾನ-ಮೋಹಗಳಿಂದಾಗಿ ಇಷ್ಟು ಸಮಯದವರೆಗೆ ಈ ಆಸಕ್ತಿಮಯೀ ಜಡ ಪ್ರಕೃತಿಯೊಂದಿಗೆ ರಮಿಸುತ್ತಿದ್ದೇನೆ.

12295030a ಅನಯಾಹಂ ವಶೀಭೂತಃ ಕಾಲಮೇತಂ ನ ಬುದ್ಧವಾನ್|

12295030c ಉಚ್ಚಮಧ್ಯಮನೀಚಾನಾಂ ತಾಮಹಂ ಕಥಮಾವಸೇ||

ಇವಳು ನನ್ನನ್ನು ಎಷ್ಟು ವಶಮಾಡಿಕೊಂಡಿದ್ದಳು ಎಂದರೆ ನನಗೆ ಇಷ್ಟು ಸಮಯ ಕಳೆದುಹೋಯಿತು ಎನ್ನುವುದೇ ಗೊತ್ತಾಗಲಿಲ್ಲ. ಇವಳಾದರೋ ಉಚ್ಛ, ಮಧ್ಯಮ ಮತ್ತು ನೀಚ ಎಲ್ಲ ಶ್ರೇಣಿಯವರೊಡನೆ ಇರುತ್ತಾಳೆ. ಇವಳೊಡನೆ ನಾನು ಹೇಗೆ ತಾನೆ ಇರಬಲ್ಲೆ?

12295031a ಸಮಾನಯಾನಯಾ ಚೇಹ ಸಹವಾಸಮಹಂ ಕಥಮ್|

12295031c ಗಚ್ಚಾಮ್ಯಬುದ್ಧಭಾವತ್ವಾದೇಷೇದಾನೀಂ ಸ್ಥಿರೋ ಭವೇ||

ನನ್ನೊಡನೆ ಸೇರಿಕೊಂಡು ನನ್ನ ಸಮಾನಳಾಗುತ್ತಿದ್ದಾಳೆ. ಮೂರ್ಖತನದಿಂದ ಇವಳೊಂದಿಗೆ ಹೇಗೆ ತಾನೆ ಸಹವಾಸಮಾಡಬಲ್ಲೆ? ಇನ್ನು ನಾನು ಸ್ಥಿರನಾಗಿಬಿಡುತ್ತೇನೆ.

12295032a ಸಹವಾಸಂ ನ ಯಾಸ್ಯಾಮಿ ಕಾಲಮೇತದ್ಧಿ ವಂಚನಾತ್|

12295032c ವಂಚಿತೋಽಸ್ಮ್ಯನಯಾ ಯದ್ಧಿ ನಿರ್ವಿಕಾರೋ ವಿಕಾರಯಾ||

ಇಷ್ಟು ಸಮಯದವರೆಗೆ ಈ ವಿಕಾರಮಯೀ ಪ್ರಕೃತಿಯ ವಂಚನೆಗೊಳಗಾಗಿದ್ದೇನೆ. ಅವಳೂ ಕೂಡ ನನ್ನನ್ನು ವಂಚಿಸುತ್ತಿದ್ದಾಳೆ. ಆದುದರಿಂದ ಇನ್ನು ನಾನು ಇವಳೊಂದಿಗೆ ಇರುವುದಿಲ್ಲ.

12295033a ನ ಚಾಯಮಪರಾಧೋಽಸ್ಯಾ ಅಪರಾಧೋ ಹ್ಯಯಂ ಮಮ|

12295033c ಯೋಽಹಮತ್ರಾಭವಂ ಸಕ್ತಃ ಪರಾಙ್ಮುಖಮುಪಸ್ಥಿತಃ||

ಆದರೆ ಇದು ಅವಳ ಅಪರಾಧವಲ್ಲ. ಪರಮಾತ್ಮನಿಂದ ವಿಮುಖನಾಗಿ ಇವಳಲ್ಲಿ ಆಸಕ್ತನಾಗಿರುವ ಅಪರಾಧವನ್ನು ನಾನೇ ಮಾಡಿದ್ದೇನೆ.

12295034a ತತೋಽಸ್ಮಿ ಬಹುರೂಪಾಸು ಸ್ಥಿತೋ ಮೂರ್ತಿಷ್ವಮೂರ್ತಿಮಾನ್|

12295034c ಅಮೂರ್ತಶ್ಚಾಪಿ ಮೂರ್ತಾತ್ಮಾ ಮಮತ್ವೇನ ಪ್ರಧರ್ಷಿತಃ||

ಅಮೂರ್ತನಾಗಿದ್ದರೂ ನಾನು ಪ್ರಕೃತಿಯ ಅನೇಕ ರೂಪಗಳ ಮೂರ್ತಿಗಳಲ್ಲಿ ಸ್ಥಿತನಾಗಿದ್ದೇನೆ ಮತ್ತು ದೇಹ ರಹಿತನಾಗಿದ್ದರೂ ಮಮತೆಯಿಂದ ಪರಾಸ್ತನಾಗಿರುವುದರ ಕಾರಣದಿಂದ ದೇಹಧಾರಿಯಾಗಿಬಿಟ್ಟಿದ್ದೇನೆ.

12295035a ಪ್ರಕೃತೇರನಯತ್ವೇನ[2] ತಾಸು ತಾಸ್ವಿಹ ಯೋನಿಷು|

12295035c ನಿರ್ಮಮಸ್ಯ ಮಮತ್ವೇನ ಕಿಂ ಕೃತಂ ತಾಸು ತಾಸು ಚ|

12295035e ಯೋನೀಷು ವರ್ತಮಾನೇನ ನಷ್ಟಸಂಜ್ಞೇನ ಚೇತಸಾ||

ಪ್ರಕೃತಿಯ ಸೆಳೆತದಿಂದ ನನಗೆ ಭಿನ್ನ ಭಿನ್ನ ಯೋನಿಗಳಲ್ಲಿ ಅಲೆದಾಡುವಂತಾಗಿದೆ. ನಾನು ಮಮತಾರಹಿತನಾಗಿದ್ದರೂ ಈ ಪ್ರಕೃತಿ ಜನಿತ ಮಮತೆಯು ನನ್ನನ್ನು ಭಿನ್ನ ಭಿನ್ನ ಯೋನಿಗಳಲ್ಲಿ ದೂಡಿ ದುರ್ದಶೆಯನ್ನುಂಟುಮಾಡಿದೆ. ನನ್ನ ಚೇತನವು ಸಂಜ್ಞೆಗಳನ್ನು ಕಳೆದುಕೊಂಡುಬಿಟ್ಟಿದೆ. ಈ ಕಾರಣದಿಂದಲೂ ನಾನು ಯೋನಿಗಳಲ್ಲಿ ಅಲೆದಾಡುತ್ತಿದ್ದೇನೆ.

12295036a ನ ಮಮಾತ್ರಾನಯಾ ಕಾರ್ಯಮಹಂಕಾರಕೃತಾತ್ಮಯಾ|

12295036c ಆತ್ಮಾನಂ ಬಹುಧಾ ಕೃತ್ವಾ ಯೇಯಂ ಭೂಯೋ ಯುನಕ್ತಿ ಮಾಮ್|

12295036e ಇದಾನೀಮೇಷ ಬುದ್ಧೋಽಸ್ಮಿ ನಿರ್ಮಮೋ ನಿರಹಂಕೃತಃ||

ಇನ್ನು ನನಗೆ ಈ ಅಹಂಕಾರಮಯೀ ಪ್ರಕೃತಿಯೊಡನೆ ಯಾವ ಕೆಲಸವೂ ಇಲ್ಲ. ಈಗಲೂ ಕೂಡ ಅವಳು ಅನೇಕ ರೂಪಗಳನ್ನು ಧರಿಸಿ ನನ್ನೊಡನೆ ಸಂಯೋಗಕ್ಕೆ ಪ್ರಯತ್ನಿಸುತ್ತಿದ್ದಾಳೆ. ಆದರೆ ಈಗ ನಾನು ಎಚ್ಚರಗೊಂಡಿದ್ದೇನೆ ಮತ್ತು ಮಮತೆ-ಅಹಂಕಾರ ರಹಿತನಾಗಿದ್ದೇನೆ.

12295037a ಮಮತ್ವಮನಯಾ ನಿತ್ಯಮಹಂಕಾರಕೃತಾತ್ಮಕಮ್|

12295037c ಅಪೇತ್ಯಾಹಮಿಮಾಂ ಹಿತ್ವಾ ಸಂಶ್ರಯಿಷ್ಯೇ ನಿರಾಮಯಮ್||

ಈಗಲಾದರೂ ಇವಳನ್ನು ಮತ್ತು ಇವಳ ಅಹಂಕಾರಸ್ವರೂಪಿಣೀ ಮಮತೆಯನ್ನು ತ್ಯಜಿಸಿ ಸರ್ವಥಾ ಇವಳಿಂದ ಮುಕ್ತನಾಗುತ್ತೇನೆ ಮತ್ತು ನಿರಾಮಯ ಪರಮಾತ್ಮನ ಶರಣುಹೊಂದುತ್ತೇನೆ.

12295038a ಅನೇನ ಸಾಮ್ಯಂ ಯಾಸ್ಯಾಮಿ ನಾನಯಾಹಮಚೇತಸಾ|

12295038c ಕ್ಷಮಂ ಮಮ ಸಹಾನೇನ ನೈಕತ್ವಮನಯಾ ಸಹ|

ಆ ಪರಮಾತ್ಮನ ಸಾಮ್ಯತೆಯನ್ನು ಪಡೆದುಕೊಳ್ಳುತ್ತೇನೆ. ಈ ಜಡ ಪ್ರಕೃತಿಯ ಸಾಮ್ಯತೆಯನ್ನು ಒಪ್ಪಿಕೊಳ್ಳುವುದಿಲ್ಲ. ಪರಮಾತ್ಮನೊಡನೆಯ ಸಂಯೋಗವು ನನಗೆ ಕಲ್ಯಾಣಕರವು. ಈ ಪ್ರಕೃತಿಯೊಂದಿಗೆ ಇರುವುದು ಶ್ರೇಯಸ್ಕರವಲ್ಲ.”

12295038e ಏವಂ ಪರಮಸಂಬೋಧಾತ್ಪಂಚವಿಂಶೋಽನುಬುದ್ಧವಾನ್||

12295039a ಅಕ್ಷರತ್ವಂ ನಿಯಚ್ಚೇತ ತ್ಯಕ್ತ್ವಾ ಕ್ಷರಮನಾಮಯಮ್|

ಹೀಗೆ ಉತ್ತಮ ವಿವೇಕದಿಂದ ತನ್ನ ಶುದ್ಧ ಸ್ವರೂಪದ ಜ್ಞಾನವನ್ನು ಪಡೆದುಕೊಂಡು ಇಪ್ಪತ್ತೈದನೆಯದಾದ ಆತ್ಮವು ಕ್ಷರಭಾವವನ್ನು ತ್ಯಜಿಸಿ ನಿರಾಮಯ ಅಕ್ಷರಭಾವವನ್ನು ಹೊಂದುತ್ತದೆ.

12295039c ಅವ್ಯಕ್ತಂ ವ್ಯಕ್ತಧರ್ಮಾಣಂ ಸಗುಣಂ ನಿರ್ಗುಣಂ ತಥಾ|

12295039e ನಿರ್ಗುಣಂ ಪ್ರಥಮಂ ದೃಷ್ಟ್ವಾ ತಾದೃಗ್ಭವತಿ ಮೈಥಿಲ||

ಮೈಥಿಲ! ಅವ್ಯಕ್ತ ಪ್ರಕೃತಿ, ವ್ಯಕ್ತ ಮಹತ್ತತ್ತ್ವಾದಿ ಸಗುಣ, ನಿರ್ಗುಣ ಮತ್ತು ಸರ್ವ ಆದಿಭೂತಗಳು ನಿರ್ಗುಣ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದುಕೊಂಡು ಮನುಷ್ಯನೂ ಕೂಡ ಸ್ವಯಂ ಅದೇ ಆಗುತ್ತಾನೆ.

12295040a ಅಕ್ಷರಕ್ಷರಯೋರೇತದುಕ್ತಂ ತವ ನಿದರ್ಶನಮ್|

12295040c ಮಯೇಹ ಜ್ಞಾನಸಂಪನ್ನಂ ಯಥಾಶ್ರುತಿನಿದರ್ಶನಾತ್||

ಶೃತಿಗಳಲ್ಲಿ ಹೇಗೆ ನಿದರ್ಶಿಸಿದ್ದಾರೋ ಹಾಗೆ ನಾನು ನಿನಗೆ  ವಿವೇಕವನ್ನೀಯುವ ಕ್ಷರ-ಅಕ್ಷರಗಳ ಜ್ಞಾನವನ್ನು ಹೇಳಿದ್ದೇನೆ.

12295041a ನಿಃಸಂದಿಗ್ಧಂ ಚ ಸೂಕ್ಷ್ಮಂ ಚ ವಿಬುದ್ಧಂ ವಿಮಲಂ ತಥಾ|

12295041c ಪ್ರವಕ್ಷ್ಯಾಮಿ ತು ತೇ ಭೂಯಸ್ತನ್ನಿಬೋಧ ಯಥಾಶ್ರುತಮ್||

ಈಗ ಪುನಃ ಶ್ರುತಿಯಲ್ಲಿರುವಂತೆ ನಿಃಸಂದಿಗ್ಧವೂ, ಸೂಕ್ಷ್ಮವೂ, ನಿರ್ಮಲವೂ ಆಗಿರುವ ವಿಶಿಷ್ಠ ಜ್ಞಾನದ ಕುರಿತು ಹೇಳುತ್ತೇನೆ. ಕೇಳು.

12295042a ಸಾಂಖ್ಯಯೋಗೌ ಮಯಾ ಪ್ರೋಕ್ತೌ ಶಾಸ್ತ್ರದ್ವಯನಿದರ್ಶನಾತ್|

12295042c ಯದೇವ ಶಾಸ್ತ್ರಂ ಸಾಂಖ್ಯೋಕ್ತಂ ಯೋಗದರ್ಶನಮೇವ ತತ್||

ಸಾಂಖ್ಯ ಮತ್ತು ಯೋಗಗಳ ಕುರಿತು ನಾನು ಹೇಳಿದುದರಲ್ಲಿ ಎರಡು ಶಾಸ್ತ್ರಗಳಿವೆಯೆಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಸಾಂಖ್ಯ ಶಾಸ್ತ್ರವೇನಿದೆಯೋ ಅದೇ ಯೋಗಶಾಸ್ತ್ರವೂ ಹೌದು.

12295043a ಪ್ರಬೋಧನಕರಂ ಜ್ಞಾನಂ ಸಾಂಖ್ಯಾನಾಮವನೀಪತೇ|

12295043c ವಿಸ್ಪಷ್ಟಂ ಪ್ರೋಚ್ಯತೇ ತತ್ರ ಶಿಷ್ಯಾಣಾಂ ಹಿತಕಾಮ್ಯಯಾ||

ಅವನೀಪತೇ! ಶಿಷ್ಯರ ಹಿತಕಾಮನೆಯಿಂದ ನಾನು ವಿಸ್ಪಷ್ಟವಾಗಿ ಸಾಂಖ್ಯದರ್ಶನವನ್ನು ನಿನಗೆ ಬೋಧಿಸಿದ್ದೇನೆ.

12295044a ಬೃಹಚ್ಚೈವ ಹಿ ತಚ್ಚಾಸ್ತ್ರಮಿತ್ಯಾಹುಃ ಕುಶಲಾ ಜನಾಃ|

12295044c ಅಸ್ಮಿಂಶ್ಚ ಶಾಸ್ತ್ರೇ ಯೋಗಾನಾಂ ಪುನರ್ದಧಿ ಪುನಃ ಶರಃ[3]||

ಸಾಂಖ್ಯ ಶಾಸ್ತ್ರವು ಬಹು ದೊಡ್ಡದು ಎಂದು ಕುಶಲರು ಹೇಳುತ್ತಾರೆ. 

12295045a ಪಂಚವಿಂಶಾತ್ಪರಂ ತತ್ತ್ವಂ ನ ಪಶ್ಯತಿ ನರಾಧಿಪ[4]|

12295045c ಸಾಂಖ್ಯಾನಾಂ ತು ಪರಂ ತತ್ರ ಯಥಾವದನುವರ್ಣಿತಮ್||

ನರಾಧಿಪ! ಸಾಂಖ್ಯಶಾಸ್ತ್ರದ ಆಚಾರ್ಯರು ಇಪ್ಪತ್ತೈದನೆಯ ತತ್ತ್ವಕ್ಕಿಂತಲೂ ಮುಂದಿನ ಯಾವುದೇ ತತ್ತ್ವದ ವರ್ಣನೆಯನ್ನು ಮಾಡುವುದಿಲ್ಲ. ಇದೋ ನಾನು ಸಾಂಖ್ಯದ ಪರಮ ತತ್ತ್ವವನ್ನು ಯಥಾರ್ಥರೂಪದಲ್ಲಿ ವರ್ಣಿಸಿದ್ದೇನೆ.

12295046a ಬುದ್ಧಮಪ್ರತಿಬುದ್ಧಂ ಚ ಬುಧ್ಯಮಾನಂ ಚ ತತ್ತ್ವತಃ|

12295046c ಬುಧ್ಯಮಾನಂ ಚ ಬುದ್ಧಂ ಚ ಪ್ರಾಹುರ್ಯೋಗನಿದರ್ಶನಮ್||

ಈ ನಿತ್ಯ ಜ್ಞಾನಸಂಪನ್ನ ಪರಬ್ರಹ್ಮ ಪರಮಾತ್ಮನೇ “ಬುದ್ಧ”ನು. ಪರಮಾತ್ಮ ತತ್ತ್ವವನ್ನು ತಿಳಿಯದ ಕಾರಣದಿಂದ ಜಿಜ್ಞಾಸುವಾಗಿರುವ ಜೀವಾತ್ಮವೇ “ಬುದ್ಧ್ಯಮಾನ” ಎಂದು ಹೇಳಿದ್ದಾರೆ. ಹೀಗೆ ಯೋಗಸಿದ್ಧಾಂತದ ಪ್ರಕಾರ ಬುದ್ಧ ಮತ್ತು ಬುಧ್ಯಮಾನ ಇವೆರಡೂ ಚೇತನಗಳೇ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಸಿಷ್ಠಕರಾಲಜನಕಸಂವಾದೇ ಪಂಚನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಸಿಷ್ಠಕರಾಲಜನಕಸಂವಾದ ಎನ್ನುವ ಇನ್ನೂರಾತೊಂಭತ್ತೈದನೇ ಅಧ್ಯಾಯವು.

[1] ಪರಮೇಶ್ವರೀ| (ಗೀತಾ ಪ್ರೆಸ್).

[2] ಪ್ರಾಕ್ ಕೃತೇನ ಮಮತ್ವೇನ (ಗೀತಾ ಪ್ರೆಸ್).

[3] ಪುನರ್ವೇದೇ ಪುರಃಸರಃ| (ಗೀತಾ ಪ್ರೆಸ್).

[4] ಪಠ್ಯತೇ ನ ನರಾಧಿಪ| (ಗೀತಾ ಪ್ರೆಸ್).

Comments are closed.