Shanti Parva: Chapter 291

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೧

ವಸಿಷ್ಠ-ಕರಾಲಜನಕ ಸಂವಾದ

ಕ್ಷರ ಮತ್ತು ಅಕ್ಷರ ತತ್ತ್ವಗಳ ನಿರೂಪಣೆ (೧-೪೮).

12291001 ಯುಧಿಷ್ಠಿರ ಉವಾಚ|

12291001a ಕಿಂ ತದಕ್ಷರಮಿತ್ಯುಕ್ತಂ ಯಸ್ಮಾನ್ನಾವರ್ತತೇ ಪುನಃ|

12291001c ಕಿಂ ಚ ತತ್ ಕ್ಷರಮಿತ್ಯುಕ್ತಂ ಯಸ್ಮಾದಾವರ್ತತೇ ಪುನಃ||

ಯುಧಿಷ್ಠಿರನು ಹೇಳಿದನು: “ನೀನು ಹೇಳಿದ ಯಾವುದನ್ನು ಪಡೆದುಕೊಂಡು ಜೀವವು ಪುನಃ ಈ ಸಂಸಾರಕ್ಕೆ ಹಿಂದಿರುಗುವುದಿಲ್ಲವೋ ಆ ಅಕ್ಷರ ತತ್ತ್ವವು ಏನು? ಮತ್ತು ನೀನು ಹೇಳಿದ ಯಾವುದರಿಂದ ಜೀವವು ಪುನಃ ಜನ್ಮತಾಳುತ್ತದೆಯೋ ಆ ಕ್ಷರ ತತ್ತ್ವವು ಯಾವುದು?

12291002a ಅಕ್ಷರಕ್ಷರಯೋರ್ವ್ಯಕ್ತಿಮಿಚ್ಚಾಮ್ಯರಿನಿಷೂದನ|

12291002c ಉಪಲಬ್ಧುಂ ಮಹಾಬಾಹೋ ತತ್ತ್ವೇನ ಕುರುನಂದನ||

ಅರಿನಿಷೂದನ! ಕುರುನಂದನ! ಮಹಾಬಾಹೋ! ಕ್ಷರ ಮತ್ತು ಅಕ್ಷರಗಳ ಸ್ವರೂಪಗಳನ್ನು ಸ್ಪಷ್ಟರೂಪದಲ್ಲಿ ತಿಳಿದುಕೊಳ್ಳಲು ನಾನು ನಿನ್ನನ್ನು ಕೇಳುತ್ತಿದ್ದೇನೆ.

12291003a ತ್ವಂ ಹಿ ಜ್ಞಾನನಿಧಿರ್ವಿಪ್ರೈರುಚ್ಯಸೇ ವೇದಪಾರಗೈಃ|

12291003c ಋಷಿಭಿಶ್ಚ ಮಹಾಭಾಗೈರ್ಯತಿಭಿಶ್ಚ ಮಹಾತ್ಮಭಿಃ||

ವೇದಪಾರಂಗತ ವಿಪ್ರರು, ಮಹಾಭಾಗ ಋಷಿಗಳು ಮತ್ತು ಮಹಾತ್ಮ ಯತಿಗಳೂ ಕೂಡ ನಿನ್ನನ್ನೇ ಜ್ಞಾನನಿಧಿಯೆಂದು ಹೇಳುತ್ತಾರೆ.

12291004a ಶೇಷಮಲ್ಪಂ ದಿನಾನಾಂ ತೇ ದಕ್ಷಿಣಾಯನಭಾಸ್ಕರೇ|

12291004c ಆವೃತ್ತೇ ಭಗವತ್ಯರ್ಕೇ ಗಂತಾಸಿ ಪರಮಾಂ ಗತಿಮ್||

ಭಾಸ್ಕರನಿಗೆ ದಕ್ಷಿಣಾಯನದಲ್ಲಿ ಇನ್ನು ಸ್ವಲ್ಪವೇ ದಿನಗಳು ಉಳಿದುಕೊಂಡಿವೆ. ಭಗವಾನ್ ಸೂರ್ಯನು ಉತ್ತರಾಯಣಕ್ಕೆ ಕಾಲಿಡುತ್ತಲೇ ನೀನು ಪರಮ ಗತಿಯನ್ನು ಸೇರುತ್ತೀಯೆ.

12291005a ತ್ವಯಿ ಪ್ರತಿಗತೇ ಶ್ರೇಯಃ ಕುತಃ ಶ್ರೋಷ್ಯಾಮಹೇ ವಯಮ್|

12291005c ಕುರುವಂಶಪ್ರದೀಪಸ್ತ್ವಂ ಜ್ಞಾನದ್ರವ್ಯೇಣ ದೀಪ್ಯಸೇ||

ನೀನು ಹೊರಟು ಹೋಗಲು ನಾವು ಶ್ರೇಯಸ್ಕರವಾದವುಗಳನ್ನು ಯಾರಿಂದ ಕೇಳಬಲ್ಲೆವು? ನೀನು ಜ್ಞಾನದ್ರವ್ಯದಿಂದ ಉರಿಯುತ್ತಿರುವ ಮತ್ತು ಕುರುವಂಶವನ್ನು ಬೆಳಗಿಸುವ ದೀಪ.

12291006a ತದೇತಚ್ಚ್ರೋತುಮಿಚ್ಚಾಮಿ ತ್ವತ್ತಃ ಕುರುಕುಲೋದ್ವಹ|

12291006c ನ ತೃಪ್ಯಾಮೀಹ ರಾಜೇಂದ್ರ ಶೃಣ್ವನ್ನಮೃತಮೀದೃಶಮ್||

ಕುರುಕುಲೋದ್ವಹ! ರಾಜೇಂದ್ರ! ಆದುದರಿಂದ ನಿನ್ನಿಂದಲೇ ಇವೆಲ್ಲವನ್ನು ಕೇಳ ಬಯಸುತ್ತೇನೆ. ನಿನ್ನ ಈ ಅಮೃತಮಯ ವಚನಗಳನ್ನು ಕೇಳಿ ನನಗೆ ಇನ್ನೂ ತೃಪ್ತಿಯಾಗಿಲ್ಲ.”

12291007 ಭೀಷ್ಮ ಉವಾಚ|

12291007a ಅತ್ರ ತೇ ವರ್ತಯಿಷ್ಯೇಽಹಮಿತಿಹಾಸಂ ಪುರಾತನಮ್|

12291007c ವಸಿಷ್ಠಸ್ಯ ಚ ಸಂವಾದಂ ಕರಾಲಜನಕಸ್ಯ ಚ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ವಸಿಷ್ಠ ಮತ್ತು ಕರಾಲಜನಕರ ಸಂವಾದವನ್ನು ನಿನಗೆ ಹೇಳುತ್ತೇನೆ.

12291008a ವಸಿಷ್ಠಂ ಶ್ರೇಷ್ಠಮಾಸೀನಮೃಷೀಣಾಂ ಭಾಸ್ಕರದ್ಯುತಿಮ್|

12291008c ಪಪ್ರಚ್ಚ ಜನಕೋ ರಾಜಾ ಜ್ಞಾನಂ ನೈಃಶ್ರೇಯಸಂ ಪರಮ್||

ಋಷಿಗಳಲ್ಲಿ ಸೂರ್ಯ ಸಮಾನ ತೇಜಸ್ವಿಯಾಗಿದ್ದ ಮುನಿಶ್ರೇಷ್ಠ ವಸಿಷ್ಠನು ಕುಳಿತಿರಲು ರಾಜಾ ಜನಕನು ಪರಮ ಶ್ರೇಯಸ್ಕರ ಜ್ಞಾನದ ಕುರಿತು ಕೇಳಿದನು.

12291009a ಪರಮಧ್ಯಾತ್ಮಕುಶಲಮಧ್ಯಾತ್ಮಗತಿನಿಶ್ಚಯಮ್|

12291009c ಮೈತ್ರಾವರುಣಿಮಾಸೀನಮಭಿವಾದ್ಯ ಕೃತಾಂಜಲಿಃ||

12291010a ಸ್ವಕ್ಷರಂ ಪ್ರಶ್ರಿತಂ ವಾಕ್ಯಂ ಮಧುರಂ ಚಾಪ್ಯನುಲ್ಬಣಮ್|

12291010c ಪಪ್ರಚ್ಚರ್ಷಿವರಂ ರಾಜಾ ಕರಾಲಜನಕಃ ಪುರಾ||

ಹಿಂದೊಮ್ಮೆ ಪರಮ ಅಧ್ಯಾತ್ಮ ಕುಶಲ, ಅಧ್ಯಾತ್ಮ ಗತಿನಿಶ್ಚಯಿ, ಮೈತ್ರಾವರುಣರ ಪುತ್ರ ವಸಿಷ್ಠನು ಕುಳಿತಿರಲು ಅವನನ್ನು ಅಂಜಲೀ ಬದ್ಧನಾಗಿ ಅಭಿವಂದಿಸಿ ರಾಜಾ ಕರಾಲಜನಕನು ಸುಂದರ ಅಕ್ಷರಗಳಿಂದ ಕೂಡಿದ ವಿನಯಪೂರ್ಣ ಮತ್ತು ಕೃತಕರಹಿತ ಮಧುರ ವಾಣಿಯಲ್ಲಿ ಋಷಿವರನನ್ನು ಪ್ರಶ್ನಿಸಿದನು:

12291011a ಭಗವನ್ ಶ್ರೋತುಮಿಚ್ಚಾಮಿ ಪರಂ ಬ್ರಹ್ಮ ಸನಾತನಮ್|

12291011c ಯಸ್ಮಾನ್ನ ಪುನರಾವೃತ್ತಿಮಾಪ್ನುವಂತಿ ಮನೀಷಿಣಃ||

“ಭಗವನ್! ಎಲ್ಲಿಂದ ಮನೀಷಿಣರು ಪುನಃ ಈ ಸಂಸಾರಕ್ಕೆ ಹಿಂದಿರುಗುವುದಿಲ್ಲವೋ ಆ ಸನಾತನ ಪರಬ್ರಹ್ಮನ ಸ್ವರೂಪದ ವರ್ಣನೆಯನ್ನು ನಾನು ಕೇಳ ಬಯಸುತ್ತೇನೆ.

12291012a ಯಚ್ಚ ತತ್ ಕ್ಷರಮಿತ್ಯುಕ್ತಂ ಯತ್ರೇದಂ ಕ್ಷರತೇ ಜಗತ್|

12291012c ಯಚ್ಚಾಕ್ಷರಮಿತಿ ಪ್ರೋಕ್ತಂ ಶಿವಂ ಕ್ಷೇಮ್ಯಮನಾಮಯಮ್||

ಕ್ಷರವೆಂದು ಕರೆಯಲ್ಪಡುವುದರ ಕುರಿತು ತಿಳಿಯ ಬಯಸುತ್ತೇನೆ. ಯಾವುದರಲ್ಲಿ ಈ ಜಗತ್ತು ಲಯವಾಗುವುದೋ ಮತ್ತು ಯಾವುದನ್ನು ಅಕ್ಷರವೆಂದು ಹೇಳಿದ್ದಾರೋ ಆ ಕಲ್ಯಾಣಮಯ ಶಿವಸ್ವರೂಪದ ಕುರಿತೂ ತಿಳಿಯ ಬಯಸುತ್ತೇನೆ.”

12291013 ವಸಿಷ್ಠ ಉವಾಚ|

12291013a ಶ್ರೂಯತಾಂ ಪೃಥಿವೀಪಾಲ ಕ್ಷರತೀದಂ ಯಥಾ ಜಗತ್|

12291013c ಯನ್ನ ಕ್ಷರತಿ ಪೂರ್ವೇಣ ಯಾವತ್ಕಾಲೇನ ಚಾಪ್ಯಥ||

ವಸಿಷ್ಠನು ಹೇಳಿದನು: “ಪೃಥಿವೀಪಾಲ! ಈ ಜಗತ್ತು ಹೇಗೆ ಕ್ಷಯವಾಗುತ್ತದೆ ಮತ್ತು ಯಾವುದೇ ಕಾಲದಲ್ಲಿಯೂ ಕ್ಷರವಾಗದ ಆ ಅಕ್ಷರದ ಕುರಿತು ಕೇಳು.

12291014a ಯುಗಂ ದ್ವಾದಶಸಾಹಸ್ರಂ ಕಲ್ಪಂ ವಿದ್ಧಿ ಚತುರ್ಗುಣಮ್|

12291014c ದಶಕಲ್ಪಶತಾವೃತ್ತಂ ತದಹರ್ಬ್ರಾಹ್ಮಮುಚ್ಯತೇ|

ದೇವತೆಗಳ ಹನ್ನೆರಡು ಸಾವಿರ ವರ್ಷಗಳಿಗೆ ಒಂದು ಚತುರ್ಯುಗವಾಗುತ್ತದೆ ಎಂದು ತಿಳಿದುಕೋ. ಒಂದು ಸಾವಿರ ಮಹಾಯುಗವನ್ನೇ ಬ್ರಹ್ಮನ ಒಂದು ದಿನ ಅಥವಾ ಒಂದು ಕಲ್ಪ ಎಂದು ಹೇಳಿದ್ದಾರೆ.

12291014e ರಾತ್ರಿಶ್ಚೈತಾವತೀ ರಾಜನ್ಯಸ್ಯಾಂತೇ ಪ್ರತಿಬುಧ್ಯತೇ||

12291015a ಸೃಜತ್ಯನಂತಕರ್ಮಾಣಂ ಮಹಾಂತಂ ಭೂತಮಗ್ರಜಮ್|

12291015c ಮೂರ್ತಿಮಂತಮಮೂರ್ತಾತ್ಮಾ ವಿಶ್ವಂ ಶಂಭುಃ ಸ್ವಯಂಭುವಃ|

12291015e ಅಣಿಮಾ ಲಘಿಮಾ ಪ್ರಾಪ್ತಿರೀಶಾನಂ ಜ್ಯೋತಿರವ್ಯಯಮ್||

12291016a ಸರ್ವತಃಪಾಣಿಪಾದಾಂತಂ ಸರ್ವತೋಕ್ಷಿಶಿರೋಮುಖಮ್|

12291016c ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ||

ರಾಜನ್! ಅವನ ರಾತ್ರಿಯೂ ಅಷ್ಟೇ ಪ್ರಮಾಣದ್ದಾಗಿದ್ದು ರಾತ್ರಿಯ ಅಂತ್ಯದಲ್ಲಿ ಅವನು ಎಚ್ಚರಗೊಳ್ಳುತ್ತಾನೆ. ಈ ಸಂಪೂರ್ಣ ಜಗತ್ತೂ ಆ ಅನಂತಕರ್ಮಿ, ಮಹಾನ್ ಭೂತ, ಅಗ್ರಜ, ಬ್ರಹ್ಮನ ಸ್ವರೂಪವಾಗಿದೆ. ಅಣಿಮ, ಲಘಿಮ ಮತ್ತು ಪ್ರಾಪ್ತಿ ಮೊದಲಾದ ಸಿದ್ಧಿಗಳ ಒಡೆಯ, ಈಶಾನ, ಜ್ಯೋತಿ, ನಿರಾಕಾರ ಪರಮೇಶ್ವರನೇ ಆ ಮೂರ್ತಿಮಾನ್ ಬ್ರಹ್ಮನನ್ನು ಸೃಷ್ಟಿಸುತ್ತಾನೆ. ಪರಮಾತ್ಮನು ಜ್ಯೋತಿ ಸ್ವರೂಪನು, ಸ್ವಯಂ ಪ್ರಕಟಗೊಳ್ಳುವವನೂ ಮತ್ತು ಅವಿನಾಶಿಯೂ ಆಗಿದ್ದಾನೆ. ಅವನ ಕೈಗಳು, ಕಾಲುಗಳು, ಕಣ್ಣುಗಳು, ಮಸ್ತಕಗಳು ಮತ್ತು ಮುಖಗಳು ಎಲ್ಲೆಡೆ ಇವೆ. ಕಿವಿಗಳೂ ಎಲ್ಲ ಕಡೆ ಇವೆ. ಅವನು ಸಂಸಾರದ ಎಲ್ಲ ಕಡೆ ವ್ಯಾಪ್ತನಾಗಿದ್ದಾನೆ.

12291017a ಹಿರಣ್ಯಗರ್ಭೋ ಭಗವಾನೇಷ ಬುದ್ಧಿರಿತಿ ಸ್ಮೃತಃ|

12291017c ಮಹಾನಿತಿ ಚ ಯೋಗೇಷು ವಿರಿಂಚ ಇತಿ ಚಾಪ್ಯುತ[1]||

ಭಗವಾನ್ ಹಿರಣ್ಯಗರ್ಭನೇ ಪರಮೇಶ್ವರನಿಂದ ಉತ್ಪನ್ನನಾದ ಎಲ್ಲರಿಗಿಂತಲೂ ಅಗ್ರಜನು. ಇವನನ್ನೇ ಬುದ್ಧಿ ಎಂದೂ ಹೇಳಿದ್ದಾರೆ. ಯೋಗ ಶಾಸ್ತ್ರಗಳಲ್ಲಿ ಇದನ್ನೇ ಮಹಾನ್ ಎಂದೂ ಹೇಳಿದ್ದಾರೆ. ಇವನನ್ನೇ ವಿರಿಂಚಿ ಎಂದೂ ಹೇಳುತ್ತಾರೆ.

12291018a ಸಾಂಖ್ಯೇ ಚ ಪಠ್ಯತೇ ಶಾಸ್ತ್ರೇ ನಾಮಭಿರ್ಬಹುಧಾತ್ಮಕಃ|

12291018c ವಿಚಿತ್ರರೂಪೋ ವಿಶ್ವಾತ್ಮಾ ಏಕಾಕ್ಷರ ಇತಿ ಸ್ಮೃತಃ||

12291019a ವೃತಂ ನೈಕಾತ್ಮಕಂ ಯೇನ ಕೃತ್ಸ್ನಂ ತ್ರೈಲೋಕ್ಯಮಾತ್ಮನಾ|

12291019c ತಥೈವ ಬಹುರೂಪತ್ವಾದ್ವಿಶ್ವರೂಪ ಇತಿ ಸ್ಮೃತಃ||

ಅನೇಕ ನಾಮ-ರೂಪಗಳಿಂದ ಕೂಡಿದ ಈ ಹಿರಣ್ಯಗರ್ಭ ಬ್ರಹ್ಮನ ವರ್ಣನೆಯು ಸಾಂಖ್ಯಶಾಸ್ತ್ರಗಳಲ್ಲಿಯೂ ಇದೆ. ಇವನನ್ನೇ ವಿಚಿತ್ರರೂಪೀ, ವಿಶ್ವಾತ್ಮಾ ಮತ್ತು ಏಕಾಕ್ಷರ ಎಂದು ಹೇಳಿದ್ದಾರೆ. ಇವನೇ ಸ್ವಯಂ ತ್ರಿಲೋಕಗಳನ್ನು ರಚಿಸಿದನು ಮತ್ತು ವಿಸ್ತರಿಸಿದನು. ಹೀಗೆ ಬಹುರೂಪಗಳನ್ನು ಧರಿಸುವುದರ ಕಾರಣ ಇವನನ್ನು ವಿಶ್ವರೂಪ ಎಂದೂ ಕರೆಯುತ್ತಾರೆ.

12291020a ಏಷ ವೈ ವಿಕ್ರಿಯಾಪನ್ನಃ ಸೃಜತ್ಯಾತ್ಮಾನಮಾತ್ಮನಾ|

12291020c ಅಹಂಕಾರಂ ಮಹಾತೇಜಾಃ ಪ್ರಜಾಪತಿಮಹಂಕೃತಮ್||

ಈ ಮಹಾತೇಜಸ್ವೀ ಭಗವಾನ್ ಹಿರಣ್ಯಗರ್ಭನು ವಿಕಾರಹೊಂದಿ ಸ್ವಯಂ ತಾನೇ ಅಹಂಕಾರ ಮತ್ತು ಅದರ ಅಭಿಮಾನೀ ಪ್ರಜಾಪತಿ ವಿರಾಟನನ್ನು ಸೃಷ್ಟಿಸಿದನು.

12291021a ಅವ್ಯಕ್ತಾದ್ವ್ಯಕ್ತಮುತ್ಪನ್ನಂ ವಿದ್ಯಾಸರ್ಗಂ ವದಂತಿ ತಮ್|

12291021c ಮಹಾಂತಂ ಚಾಪ್ಯಹಂಕಾರಮವಿದ್ಯಾಸರ್ಗಮೇವ ಚ||

ಅವ್ಯಕ್ತ (ನಿರಾಕಾರ) ದಿಂದ ವ್ಯಕ್ತ (ಸಾಕಾರ) ರೂಪದಲ್ಲಿ ಪ್ರಕಟವಾಗುವ ಮೂಲ ಪ್ರಕೃತಿಯನ್ನು ವಿದ್ಯಾಸರ್ಗ ಎಂದು ಕರೆಯುತ್ತಾರೆ. ಮಹತ್ತತ್ತ್ವ ಮತ್ತು ಅಹಂಕಾರಗಳನ್ನು ಅವಿದ್ಯಾಸರ್ಗ ಎಂದು ಹೇಳುತ್ತಾರೆ.

12291022a ಅವಿಧಿಶ್ಚ ವಿಧಿಶ್ಚೈವ ಸಮುತ್ಪನ್ನೌ ತಥೈಕತಃ|

12291022c ವಿದ್ಯಾವಿದ್ಯೇತಿ ವಿಖ್ಯಾತೇ ಶ್ರುತಿಶಾಸ್ತ್ರಾರ್ಥಚಿಂತಕೈಃ||

ಅವಿಧಿ (ಜ್ಞಾನ) ಮತ್ತು ವಿಧಿ (ಕರ್ಮ)ಗಳ ಉತ್ಪತ್ತಿಯೂ ಅದೇ ಪರಮಾತ್ಮನಿಂದ ಆಗಿದೆ. ಶ್ರುತಿಶಾಸ್ತ್ರಾರ್ಥಚಿಂತಕರು ಅವುಗಳನ್ನು ವಿದ್ಯಾ ಮತ್ತು ಅವಿದ್ಯಾ ಎಂದು ಹೇಳುತ್ತಾರೆ.

12291023a ಭೂತಸರ್ಗಮಹಂಕಾರಾತ್ತೃತೀಯಂ ವಿದ್ಧಿ ಪಾರ್ಥಿವ|

12291023c ಅಹಂಕಾರೇಷು ಭೂತೇಷು ಚತುರ್ಥಂ ವಿದ್ಧಿ ವೈಕೃತಮ್||

ಪಾರ್ಥಿವ! ಅಹಂಕಾರದಿಂದ ಸೂಕ್ಷ್ಮ ಭೂತಗಳ ಸೃಷ್ಟಿಯು ಮೂರನೇ ಸೃಷ್ಟಿಯೆಂದು ತಿಳಿ. ಅಹಂಕಾರದಿಂದ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳ ಹುಟ್ಟುವಿಕೆಯನ್ನು ನಾಲ್ಕನೆಯ ವೈಕೃತ ಸೃಷ್ಟಿ ಎಂದು ತಿಳಿ.

12291024a ವಾಯುರ್ಜ್ಯೋತಿರಥಾಕಾಶಮಾಪೋಽಥ ಪೃಥಿವೀ ತಥಾ|

12291024c ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಸ್ತಥೈವ ಚ||

ಆಕಾಶ, ವಾಯು, ತೇಜ, ಜಲ ಮತ್ತು ಪೃಥ್ವೀ – ಈ ಐದು ಮಹಾಭೂತಗಳು ಮತ್ತು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ – ಈ ಐದು ವಿಷಯಗಳು ವೈಕೃತ ಸೃಷ್ಟಿಯಲ್ಲಿ ಹುಟ್ಟುತ್ತವೆ.

12291025a ಏವಂ ಯುಗಪದುತ್ಪನ್ನಂ ದಶವರ್ಗಮಸಂಶಯಮ್|

12291025c ಪಂಚಮಂ ವಿದ್ಧಿ ರಾಜೇಂದ್ರ ಭೌತಿಕಂ ಸರ್ಗಮರ್ಥವತ್||

ರಾಜೇಂದ್ರ! ಈ ಹತ್ತರ ಉತ್ಪತ್ತಿಯು ಜೊತೆಯಲ್ಲಿಯೇ ಆಗುತ್ತದೆ. ಇದರಲ್ಲಿ ಸಂಶಯವಿಲ್ಲ. ಐದನೆಯದನ್ನು ಪ್ರಾಣಿಗಳಿಗೆ ವಿಶೇಷ ಪ್ರಯೋಜನಕರವಾದ ಭೌತಿಕ ಸರ್ಗ (ಸೃಷ್ಟಿ) ಎಂದು ತಿಳಿದುಕೋ.

12291026a ಶ್ರೋತ್ರಂ ತ್ವಕ್ಚಕ್ಷುಷೀ ಜಿಹ್ವಾ ಘ್ರಾಣಮೇವ ಚ ಪಂಚಮಮ್|

12291026c ವಾಕ್ಚ ಹಸ್ತೌ ಚ ಪಾದೌ ಚ ಪಾಯುರ್ಮೇಢ್ರಂ ತಥೈವ ಚ||

12291027a ಬುದ್ಧೀಂದ್ರಿಯಾಣಿ ಚೈತಾನಿ ತಥಾ ಕರ್ಮೇಂದ್ರಿಯಾಣಿ ಚ|

12291027c ಸಂಭೂತಾನೀಹ ಯುಗಪನ್ಮನಸಾ ಸಹ ಪಾರ್ಥಿವ||

ಪಾರ್ಥಿವ! ಈ ಭೌತಿಕ ಸರ್ಗದಲ್ಲಿ ಕಣ್ಣು, ಕಿವಿ, ಮೂಗು, ಚರ್ಮ ಮತ್ತು ನಾಲಿಗೆ – ಈ ಐದು ಜ್ಞಾನೇಂದ್ರಿಯಗಳೂ, ವಾಣೀ, ಕೈ, ಕಾಲು, ಗುದ ಮತ್ತು ಲಿಂಗ – ಈ ಐದು ಕರ್ಮೇಂದ್ರಿಯಗಳೂ ಸೇರಿವೆ. ಬುದ್ಧಿ ಹಾಗೂ ಈ ಜ್ಞಾನ-ಕರ್ಮೇಂದ್ರಿಯಗಳು ಒಟ್ಟಿಗೇ ಹುಟ್ಟಿಕೊಳ್ಳುತ್ತವೆ.

12291028a ಏಷಾ ತತ್ತ್ವಚತುರ್ವಿಂಶಾ ಸರ್ವಾಕೃತಿಷು ವರ್ತತೇ|

12291028c ಯಾಂ ಜ್ಞಾತ್ವಾ ನಾಭಿಶೋಚಂತಿ ಬ್ರಾಹ್ಮಣಾಸ್ತತ್ತ್ವದರ್ಶಿನಃ||

ಈ ಇಪ್ಪತ್ನಾಲ್ಕು ತತ್ತ್ವಗಳು ಪ್ರಾಣಿಗಳ ಶರೀರಗಳಲ್ಲಿರುತ್ತವೆ. ತತ್ತ್ವದರ್ಶೀ ಬ್ರಾಹ್ಮಣರು ಇದನ್ನು ಅರಿತುಕೊಂಡು ಶೋಕಿಸುವುದಿಲ್ಲ.

12291029a ಏತದ್ದೇಹಂ ಸಮಾಖ್ಯಾತಂ ತ್ರೈಲೋಕ್ಯೇ ಸರ್ವದೇಹಿಷು|

12291029c ವೇದಿತವ್ಯಂ ನರಶ್ರೇಷ್ಠ ಸದೇವನರದಾನವೇ||

12291030a ಸಯಕ್ಷಭೂತಗಂಧರ್ವೇ ಸಕಿಂನರಮಹೋರಗೇ|

12291030c ಸಚಾರಣಪಿಶಾಚೇ ವೈ ಸದೇವರ್ಷಿನಿಶಾಚರೇ||

12291031a ಸದಂಶಕೀಟಮಶಕೇ ಸಪೂತಿಕೃಮಿಮೂಷಕೇ|

12291031c ಶುನಿ ಶ್ವಪಾಕೇ ವೈಣೇಯೇ ಸಚಂಡಾಲೇ ಸಪುಲ್ಕಸೇ||

12291032a ಹಸ್ತ್ಯಶ್ವಖರಶಾರ್ದೂಲೇ ಸವೃಕ್ಷೇ ಗವಿ ಚೈವ ಹ|

12291032c ಯಚ್ಚ ಮೂರ್ತಿಮಯಂ ಕಿಂ ಚಿತ್ಸರ್ವತ್ರೈತನ್ನಿದರ್ಶನಮ್||

ನರಶ್ರೇಷ್ಠ! ಈ ಮೂರೂ ಲೋಕಗಳಲ್ಲಿರುವ ಎಲ್ಲ ದೇಹಧಾರಿಗಳಲ್ಲಿಯೂ ಇದೇ ತತ್ತ್ವಗಳ ಸಮುದಾಯವನ್ನು ದೇಹವೆಂದು ತಿಳಿಯಬೇಕು. ದೇವತಾ, ಮನುಷ್ಯ, ದಾನವ, ಯಕ್ಷ, ಭೂತ, ಗಂಧರ್ವ, ಕಿನ್ನರ, ಮಹಾಸರ್ಪ, ಚಾರಣ, ಪಿಶಾಚ, ದೇವರ್ಷಿ, ನಿಶಾಚರ, ನೊಣಗಳು, ಕೀಟಗಳು, ಸೊಳ್ಳೆ, ದುರ್ಗಂಧಿತ ಕೀಟಗಳು, ಇಲಿ, ನಾಯಿ, ಚಂಡಾಲ, ಜಿಂಕೆ, ನಾಯಿಯ ಮಾಂಸವನ್ನು ತಿನ್ನುವವರು, ಮ್ಲೇಚ್ಛ, ಆನೆ, ಕುದುರೆ, ಕತ್ತೆ, ಸಿಂಹ, ವೃಕ್ಷ, ಹಸು ಮೊದಲಾದ ರೂಪವತ್ತಾಗಿ ಮೂರ್ತಿಮತ್ತಾಗಿರುವ ಪದಾರ್ಥಗಳೆಲ್ಲದರಲ್ಲಿಯೂ ಇವೇ ತತ್ತ್ವಗಳು ಕಾಣುತ್ತವೆ.

12291033a ಜಲೇ ಭುವಿ ತಥಾಕಾಶೇ ನಾನ್ಯತ್ರೇತಿ ವಿನಿಶ್ಚಯಃ|

12291033c ಸ್ಥಾನಂ ದೇಹವತಾಮಸ್ತಿ ಇತ್ಯೇವಮನುಶುಶ್ರುಮ||

ಪೃಥ್ವೀ, ಜಲ ಮತ್ತು ಆಕಾಶಗಳಲ್ಲಿಯೇ ದೇಹಧಾರಿಗಳು ನಿವಾಸಿಸುತ್ತಾರೆ, ಬೇರೆ ಎಲ್ಲಿಯೂ ಅಲ್ಲ. ಇದು ವಿದ್ವಾನರ ನಿಶ್ಚಯ. ಹೀಗೆ ನಾನು ಕೇಳಿದ್ದೇನೆ.

12291034a ಕೃತ್ಸ್ನಮೇತಾವತಸ್ತಾತ ಕ್ಷರತೇ ವ್ಯಕ್ತಸಂಜ್ಞಕಮ್|

12291034c ಅಹನ್ಯಹನಿ ಭೂತಾತ್ಮಾ ತತಃ ಕ್ಷರ ಇತಿ ಸ್ಮೃತಃ||

ಅಯ್ಯಾ! ಈ ಪಂಚಭೌತಿಕ ಜಗತ್ತೆಲ್ಲವನ್ನೂ ವ್ಯಕ್ತ ಎಂದು ಹೇಳುತ್ತಾರೆ. ಪ್ರತಿದಿನ ಇದರ ಕ್ಷಯವಾಗುತ್ತಿರುತ್ತದೆ. ಆದುದರಿಂದ ಇದನ್ನು ಕ್ಷರ ಎನ್ನುತ್ತಾರೆ.

12291035a ಏತದಕ್ಷರಮಿತ್ಯುಕ್ತಂ ಕ್ಷರತೀದಂ ಯಥಾ ಜಗತ್|

12291035c ಜಗನ್ಮೋಹಾತ್ಮಕಂ ಪ್ರಾಹುರವ್ಯಕ್ತಂ ವ್ಯಕ್ತಸಂಜ್ಞಕಮ್||

ಇದಕ್ಕಿಂತ ಭಿನ್ನವಾದ ತತ್ತ್ವವೇನಿದೆಯೋ ಅದನ್ನು ಅಕ್ಷರ ಎಂದು ಹೇಳುತ್ತಾರೆ. ಹೀಗೆ ಆ ಅವ್ಯಕ್ತ ಅಕ್ಷರದಿಂದ ಉತ್ಪನ್ನವಾದ ಈ ವ್ಯಕ್ತಸಂಜ್ಞಕ ಮೋಹಾತ್ಮಕ ಜಗತ್ತು ಕ್ಷರವಾಗುವುದರ ಕಾರಣ ಇದಕ್ಕೆ ಕ್ಷರ ಎನ್ನುವ ಹೆಸರಿದೆ.

12291036a ಮಹಾಂಶ್ಚೈವಾಗ್ರಜೋ ನಿತ್ಯಮೇತತ್ ಕ್ಷರನಿದರ್ಶನಮ್|

12291036c ಕಥಿತಂ ತೇ ಮಹಾರಾಜ ಯಸ್ಮಾನ್ನಾವರ್ತತೇ ಪುನಃ[2]||

ಕ್ಷರ ತತ್ತ್ವಗಳಲ್ಲಿ ಮಹತ್ತತ್ತ್ವದ ಸೃಷ್ಟಿಯೇ ಮೊದಲಾಯಿತು. ಮಹಾರಾಜ! ಯಾವುದು ಪುನಃ ಸೃಷ್ಟಿಸಲ್ಪಡುತ್ತದೆಯೋ ಅದರ ಕುರಿತು ಹೇಳಿಯಾಯಿತು.

12291037a ಪಂಚವಿಂಶತಿಮೋ ವಿಷ್ಣುರ್ನಿಸ್ತತ್ತ್ವಸ್ತತ್ತ್ವಸಂಜ್ಞಕಃ|

12291037c ತತ್ತ್ವಸಂಶ್ರಯಣಾದೇತತ್ತತ್ತ್ವಮಾಹುರ್ಮನೀಷಿಣಃ||

ಈ ಇಪ್ಪತ್ನಾಲ್ಕು ತತ್ತ್ವಗಳಿಗೂ ಆಚೆಯಿರುವ ಭಗವಾನ್ ವಿಷ್ಣುವನ್ನು ಇಪ್ಪತ್ತೈದನೆಯ ತತ್ತ್ವ ಎಂದು ಹೇಳಿದ್ದಾರೆ. ತತ್ತ್ವಗಳಿಗೆ ಆಶ್ರಯನಾಗಿರುವುದರಿಂದ ಮನೀಷಿಣರು ಅವನನ್ನು ತತ್ತ್ವ ಎಂದು ಹೇಳುತ್ತಾರೆ.

12291038a ಯದಮೂರ್ತ್ಯಸೃಜದ್ವ್ಯಕ್ತಂ[3] ತತ್ತನ್ಮೂರ್ತ್ಯಧಿತಿಷ್ಠತಿ|

12291038c ಚತುರ್ವಿಂಶತಿಮೋ ವ್ಯಕ್ತೋ ಹ್ಯಮೂರ್ತಃ ಪಂಚವಿಂಶಕಃ||

ಮಹತ್ತತ್ತ್ವ ಮೊದಲಾದ ವ್ಯಕ್ತ ಪಾದಾರ್ಥಗಳು ಯಾವುದನ್ನು ಸೃಷ್ಟಿಸುವವೋ ಅವು ಯಾವುದಾದರೂ ಒಂದು ಆಕಾರ ಅಥವಾ ಮೂರ್ತಿಯ ಆಶ್ರಯ ಪಡೆದಿರುತ್ತವೆ. ಎಣಿಸಿದರೆ ಇಪ್ಪತ್ನಾಲ್ಕನೆಯ ತತ್ತ್ವವೇ ಅವ್ಯಕ್ತ ಪ್ರಕೃತಿ ಮತ್ತು ಇಪ್ಪತ್ತೈದನೆಯದು ನಿರಾಕಾರ ಪರಮಾತ್ಮ.

12291039a ಸ ಏವ ಹೃದಿ ಸರ್ವಾಸು ಮೂರ್ತಿಷ್ವಾತಿಷ್ಠತೇಽಽತ್ಮವಾನ್|

12291039c ಚೇತಯಂಶ್ಚೇತನೋ ನಿತ್ಯಃ ಸರ್ವಮೂರ್ತಿರಮೂರ್ತಿಮಾನ್||

ಆ ಅದ್ವಿತೀಯ, ಚೇತನ, ನಿತ್ಯ, ಸರ್ವಸ್ವರೂಪೀ, ನಿರಾಕಾರೀ ಮತ್ತು ಸರ್ವಾತ್ಮ, ಆ ಪರಮ ಪುರುಷ ಪರಮಾತ್ಮನೇ ಸಮಸ್ತ ಶರೀರಗಳ ಹೃದಯಗಳಲ್ಲಿ ನಿವಾಸಿಸುತ್ತಾನೆ.

12291040a ಸರ್ಗಪ್ರಲಯಧರ್ಮಿಣ್ಯಾ ಅಸರ್ಗಪ್ರಲಯಾತ್ಮಕಃ|

12291040c ಗೋಚರೇ ವರ್ತತೇ ನಿತ್ಯಂ ನಿರ್ಗುಣೋ ಗುಣಸಂಜ್ಞಕಃ||

ಸೃಷ್ಟಿ ಮತ್ತು ಪಲಯಗಳು ಪ್ರಕೃತಿಯ ಧರ್ಮವಾಗಿದೆ. ಪುರುಷನಾದರೋ ಸರ್ವಥಾ ಅವುಗಳ ಸಂಬಂಧರಹಿತನು. ಆದರೂ ಆ ಪ್ರಕೃತಿಯ ಸಂಸರ್ಗವಶ ಪುರುಷನೂ ಕೂಡ ಆ ಸೃಷ್ಟಿ ಮತ್ತು ಪ್ರಲಯರೂಪ ಧರ್ಮದೊಂದಿಗೆ ಜೋಡಿಸಿಕೊಂಡಿರುವವನಂತೆ ತೋರುತ್ತಾನೆ. ಇಂದ್ರಿಯಗಳ ವಿಷಯವಿಲ್ಲದಿದ್ದರೂ ಇಂದ್ರಿಯಗಳು ಗೋಚರವಾಗಿರುವಂತೆ, ನಿರ್ಗುಣನಾಗಿದ್ದರೂ ಅವನು ಗುಣವಂತನೆಂದು ತೋರುತ್ತಾನೆ.

12291041a ಏವಮೇಷ ಮಹಾನಾತ್ಮಾ ಸರ್ಗಪ್ರಲಯಕೋವಿದಃ|

12291041c ವಿಕುರ್ವಾಣಃ ಪ್ರಕೃತಿಮಾನಭಿಮನ್ಯತ್ಯಬುದ್ಧಿಮಾನ್||

ಹೀಗೆ ಸೃಷ್ಟಿ ಮತ್ತು ಪ್ರಲಯಗಳನ್ನು ಚೆನ್ನಾಗಿ ತಿಳಿದುಕೊಂಡಿರುವ ಈ ಮಹಾನ್ ಆತ್ಮವು ಅವಿಕಾರಿಯಾಗಿದ್ದರೂ ಪ್ರಕೃತಿಸಂಸರ್ಗದಿಂದ ವಿಕಾರಗೊಂಡವನಂತೆ ಕಾಣುತ್ತಾನೆ. ಹೀಗೆ ಪ್ರಾಕೃತ ಬುದ್ಧಿ ರಹಿತನಾಗಿದ್ದರೂ ಶರೀರದಲ್ಲಿ ಆತ್ಮಾಭಿಮಾನವನ್ನುಂಟುಮಾಡುತ್ತಾನೆ.

12291042a ತಮಃಸತ್ತ್ವರಜೋಯುಕ್ತಸ್ತಾಸು ತಾಸ್ವಿಹ ಯೋನಿಷು|

12291042c ಲೀಯತೇಽಪ್ರತಿಬುದ್ಧತ್ವಾದಬುದ್ಧಜನಸೇವನಾತ್||

ಪ್ರಕೃತಿಯ ಸಂಸರ್ಗವಶನಾಗಿಯೇ ಅವನು ಸತ್ತ್ವ, ರಜ ಮತ್ತು ತಮೋಗುಣಯುಕ್ತನಾಗುತ್ತಾನೆ ಮತ್ತು ಅಜ್ಞಾನೀ ಮನುಷ್ಯರ ಸಂಗಮಾಡಿ ಅವರಂತೆಯೇ ತನ್ನನ್ನು ಶರೀರಸ್ಥನೆಂದು ತಿಳಿಯುವ ಕಾರಣದಿಂದ ಅವನು ಸಾತ್ತ್ವಿಕ, ರಾಜಸ ಮತ್ತು ತಾಮಸ ಯೋನಿಗಳಲ್ಲಿ ಜನ್ಮತಾಳುತ್ತಾನೆ.

12291043a ಸಹವಾಸೋ ನಿವಾಸಾತ್ಮಾ ನಾನ್ಯೋಽಹಮಿತಿ ಮನ್ಯತೇ|

12291043c ಯೋಽಹಂ ಸೋಽಹಮಿತಿ ಹ್ಯುಕ್ತ್ವಾ ಗುಣಾನನು ನಿವರ್ತತೇ||

ಪ್ರಕೃತಿಯ ಸಹವಾಸದಿಂದ ತನ್ನ ಸ್ವರೂಪಜ್ಞಾನವನ್ನು ಕಳೆದುಕೊಂಡು ನಾನು ಶರೀರಕ್ಕಿಂತ ಭಿನ್ನನಲ್ಲ ಎಂದು ತಿಳಿದುಕೊಳ್ಳುತ್ತಾನೆ. “ನಾನು ಇವನು, ಅವನು, ಇಂಥವನ ಪುತ್ರ, ಇಂಥಹ ಜಾತಿಯವನು” ಇವೇ ಮೊದಲಾಗಿ ಹೇಳಿಕೊಂಡು ಅವನು ಸಾತ್ತ್ವಿಕವೇ ಮೊದಲಾದ ಗುಣಗಳ ಅನುಸರಣೆಯನ್ನೇ ಮಾಡುತ್ತಿರುತ್ತಾನೆ.

12291044a ತಮಸಾ ತಾಮಸಾನ್ ಭಾವಾನ್ವಿವಿಧಾನ್ ಪ್ರತಿಪದ್ಯತೇ|

12291044c ರಜಸಾ ರಾಜಸಾಂಶ್ಚೈವ ಸಾತ್ತ್ವಿಕಾನ್ ಸತ್ತ್ವಸಂಶ್ರಯಾತ್||

ಅವನು ತಮೋಗುಣದಿಂದ ಮೋಹ ಮೊದಲಾದ ನಾನಾ ಪ್ರಕಾರದ ತಾಮಸ ಭಾವಗಳನ್ನು, ರಜೋಗುಣದಿಂದ ಪ್ರವೃತ್ತಿ ಮೊದಲಾದ ರಾಜಸ ಭಾವಗಳನ್ನು ಮತ್ತು ಸತ್ತ್ವಗುಣವನ್ನಾಶ್ರಯಿಸಿ ಪ್ರಕಾಶ ಮೊದಲಾದ ಸಾತ್ತ್ವಿಕ ಭಾವಗಳನ್ನು ಪಡೆದುಕೊಳ್ಳುತ್ತಾನೆ.

12291045a ಶುಕ್ಲಲೋಹಿತಕೃಷ್ಣಾನಿ ರೂಪಾಣ್ಯೇತಾನಿ ತ್ರೀಣಿ ತು|

12291045c ಸರ್ವಾಣ್ಯೇತಾನಿ ರೂಪಾಣಿ ಜಾನೀಹಿ ಪ್ರಾಕೃತಾನಿ ವೈ||

ಸತ್ತ್ವಗುಣ, ರಜೋಗುಣ ಮತ್ತು ತಮೋಗುಣಗಳಿಂದ ಕ್ರಮಶಃ ಶುಕ್ಲ, ರಕ್ತ ಮತ್ತು ಕೃಷ್ಣ – ಈ ಮೂರು ವರ್ಣಗಳು ಪ್ರಕಟವಾಗುತ್ತವೆ. ಪ್ರಕೃತಿಯಲ್ಲಿ ಪ್ರಕಟವಾಗುವ ಎಲ್ಲ ರೂಪಗಳೂ ಅವೇ ಮೂರು ವರ್ಣಗಳಲ್ಲಿ ಸೇರಿಕೊಂಡಿವೆ.

12291046a ತಾಮಸಾ ನಿರಯಂ ಯಾಂತಿ ರಾಜಸಾ ಮಾನುಷಾಂಸ್ತಥಾ|

12291046c ಸಾತ್ತ್ವಿಕಾ ದೇವಲೋಕಾಯ ಗಚ್ಚಂತಿ ಸುಖಭಾಗಿನಃ||

ತಮೋಗುಣೀ ಪ್ರಾಣಿಗಳು ನರಕಕ್ಕೆ ಹೋಗುತ್ತವೆ. ರಾಜಸ ಪ್ರಾಣಿಗಳು ಮನುಷ್ಯಲೋಕಕ್ಕೆ ಹೋಗುತ್ತವೆ ಮತ್ತು ಸುಖಭಾಗೀ ಸಾತ್ತ್ವಿಕ ಪುರುಷರು ದೇವಲೋಕಕ್ಕೆ ಹೋಗುತ್ತಾರೆ.

12291047a ನಿಷ್ಕೈವಲ್ಯೇನ ಪಾಪೇನ ತಿರ್ಯಗ್ಯೋನಿಮವಾಪ್ನುಯಾತ್|

12291047c ಪುಣ್ಯಪಾಪೇನ ಮಾನುಷ್ಯಂ ಪುಣ್ಯೇನೈಕೇನ ದೇವತಾಃ||

ಕೇವಲ ಅತ್ಯಂತ ಪಾಪಕರ್ಮಗಳ ಫಲಸ್ವರೂಪವಾಗಿ ಜೀವವು ಪಶು-ಪಕ್ಷೀ ಮೊದಲಾದ ತಿರ್ಯಗ್ಯೋನಿಗಳನ್ನು ಪಡೆಯುತ್ತದೆ. ಪುಣ್ಯ ಮತ್ತು ಪಾಪ ಇವೆರಡರ ಸಮ್ಮಿಶ್ರಣದಿಂದ ಮನುಷ್ಯಲೋಕವು ದೊರೆಯುತ್ತದೆ. ಮತ್ತು ಕೇವಲ ಪುಣ್ಯಕರ್ಮಗಳಿಂದ ಜೀವಿಯು ದೇವಯೋನಿಯನ್ನು ಪಡೆದುಕೊಳ್ಳುತ್ತದೆ.

12291048a ಏವಮವ್ಯಕ್ತವಿಷಯಂ ಕ್ಷರಮಾಹುರ್ಮನೀಷಿಣಃ|

12291048c ಪಂಚವಿಂಶತಿಮೋ ಯೋಽಯಂ ಜ್ಞಾನಾದೇವ ಪ್ರವರ್ತತೇ||

ಹೀಗೆ ಪ್ರಕೃತಿಯಿಂದ ಉತ್ಪನ್ನವಾದ ಪದಾರ್ಥಗಳನ್ನು ಮನೀಷಿಣರು ಕ್ಷರ ಎಂದು ಕರೆಯುತ್ತಾರೆ. ಇಪ್ಪತ್ತೈದನೆಯ ತತ್ತ್ವವೇನಿದೆಯೋ ಅದು ಜ್ಞಾನದಿಂದಲೇ ಪ್ರಾಪ್ತವಾಗುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಸಿಷ್ಠಕರಾಲಜನಕಸಂವಾದೇ ಏಕನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಸಿಷ್ಠಕರಾಲಜನಕಸಂವಾದ ಎನ್ನುವ ಇನ್ನೂರಾತೊಂಭತ್ತೊಂದನೇ ಅಧ್ಯಾಯವು.

[1] ವಿರಿಂಚಿರಿತಿ ಚಾಪ್ಯಜಃ| (ಗೀತಾ ಪ್ರೆಸ್).

[2] ಯನ್ಮಾಂ ತ್ವಂ ಪರಿಪೃಚ್ಛಸಿ| (ಗೀತಾ ಪ್ರೆಸ್).

[3] ಯನ್ಮರ್ತ್ಯಮಸೃಜದ್ವ್ಯಕ್ತಂ (ಗೀತಾ ಪ್ರೆಸ್).

Comments are closed.