Shanti Parva: Chapter 276

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೬

ನಾರದ-ಗಾಲವ ಸಂವಾದ

ಮನುಷ್ಯನಿಗೆ ಶ್ರೇಯಸ್ಕರವಾದುದು ಯಾವುದು ಎನ್ನುವುದರ ಕುರಿತು ಗಾಲವನ ಪ್ರಶ್ನೆಗೆ ನಾರದನು ಉತ್ತರಿಸಿದುದು (1-58).

12276001 ಯುಧಿಷ್ಠಿರ ಉವಾಚ|

12276001a ಅತತ್ತ್ವಜ್ಞಸ್ಯ ಶಾಸ್ತ್ರಾಣಾಂ ಸತತಂ ಸಂಶಯಾತ್ಮನಃ|

12276001c ಅಕೃತವ್ಯವಸಾಯಸ್ಯ ಶ್ರೇಯೋ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಶಾಸ್ತ್ರಗಳ ತತ್ತ್ವಗಳನ್ನು ತಿಳಿಯದ, ಸತತವೂ ಸಂಶಯಾತ್ಮಕ ಮನಸ್ಸಿನಿಂದ ಕೂಡಿದ ಮತ್ತು ಪರಮಾರ್ಥಸಾಧನೆಗೆ ಪ್ರಯತ್ನವನ್ನೇ ಮಾಡದ ಮನುಷ್ಯನಿಗೆ ಶ್ರೇಯಸ್ಸು ಹೇಗೆ ಉಂಟಾಗುತ್ತದೆ ಎನ್ನುವುದನ್ನು ಹೇಳು.”

12276002 ಭೀಷ್ಮ ಉವಾಚ|

12276002a ಗುರುಪೂಜಾ ಚ ಸತತಂ ವೃದ್ಧಾನಾಂ ಪರ್ಯುಪಾಸನಮ್|

12276002c ಶ್ರವಣಂ ಚೈವ ವಿದ್ಯಾನಾಂ[1] ಕೂಟಸ್ಥಂ ಶ್ರೇಯ ಉಚ್ಯತೇ||

ಭೀಷ್ಮನು ಹೇಳಿದನು: “ಸತತವೂ ಗುರುಪೂಜೆ, ವೃದ್ಧರ ಸೇವೆ, ವೇದಗಳ ಶ್ರವಣ ಮತ್ತು ಕೂಟಸ್ಥನಾಗಿರುವುದು – ಇವು ಶ್ರೇಯಸ್ಕರವೆಂದು ಹೇಳಿದ್ದಾರೆ.

12276003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12276003c ಗಾಲವಸ್ಯ ಚ ಸಂವಾದಂ ದೇವರ್ಷೇರ್ನಾರದಸ್ಯ ಚ||

ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಗಾಲವ ಮತ್ತು ದೇವರ್ಷಿ ನಾರದರ ಸಂವಾದವನ್ನು ಉದಾಹರಿಸುತ್ತಾರೆ.

[2]12276004a ವೀತಮೋಹಕ್ಲಮಂ ವಿಪ್ರಂ ಜ್ಞಾನತೃಪ್ತಂ ಜಿತೇಂದ್ರಿಯಮ್|

12276004c ಶ್ರೇಯಸ್ಕಾಮಂ ಜಿತಾತ್ಮಾನಂ ನಾರದಂ ಗಾಲವೋಽಬ್ರವೀತ್||

ಮೋಹ-ಆಯಾಸಗಳನ್ನು ಕಳೆದುಕೊಂಡಿದ್ದ, ಶ್ರೇಯಸ್ಸನ್ನೇ ಬಯಸುತ್ತಿದ್ದ, ಜ್ಞಾನತೃಪ್ತ, ಜಿತೇಂದ್ರಿಯ, ಜಿತಾತ್ಮ ನಾರದನಿಗೆ ಗಾಲವನು ಹೇಳಿದನು:

12276005a ಯೈಃ ಕೈಶ್ಚಿತ್ಸಂಮತೋ ಲೋಕೇ ಗುಣೈಸ್ತು ಪುರುಷೋ ನೃಷು|

12276005c ಭವತ್ಯನಪಗಾನ್ಸರ್ವಾಂಸ್ತಾನ್ ಗುಣಾಽಲ್ಲಕ್ಷಯಾಮ್ಯಹಮ್||

“ಮನುಷ್ಯರಲ್ಲಿ ಪುರುಷನು ಯಾವ ಗುಣಗಳಿಂದ ಸನ್ಮಾನಿತನಾಗುವನೋ ಅಂತಹ ಗುಣಗಳೆಲ್ಲವನ್ನೂ ನಿನ್ನಲ್ಲಿ ಸ್ಥಿರವಾಗಿರುವುದನ್ನು ನೋಡುತ್ತಿದ್ದೇವೆ.

12276006a ಭವಾನೇವಂವಿಧೋಽಸ್ಮಾಕಂ ಸಂಶಯಂ ಚೇತ್ತುಮರ್ಹತಿ|

12276006c ಅಮೂಢಶ್ಚಿರಮೂಢಾನಾಂ ಲೋಕತತ್ತ್ವಮಜಾನತಾಮ್||

ಈ ರೀತಿ ಜ್ಞಾನಸಂಪನ್ನನಾಗಿರುವ ನೀನು ಲೋಕತತ್ತ್ವವನ್ನು ತಿಳಿಯದ, ಬಹುಕಾಲದವರೆಗೆ ಅಜ್ಞಾನದಲ್ಲಿಯೇ ಇರುವ ನಮ್ಮಂಥವರ ಸಂಶಯಗಳನ್ನು ನಿವಾರಿಸಲು ಸಮರ್ಥನಾಗಿದ್ದೀಯೆ.

12276007a ಜ್ಞಾನೇ ಹ್ಯೇವಂ ಪ್ರವೃತ್ತಿಃ ಸ್ಯಾತ್ಕಾರ್ಯಾಕಾರ್ಯೇ ವಿಜಾನತಃ[3]|

12276007c ಯತ್ಕಾರ್ಯಂ ನ ವ್ಯವಸ್ಯಾಮಸ್ತದ್ಭವಾನ್ವಕ್ತುಮರ್ಹತಿ||

ಯಾವ ಕರ್ಮವನ್ನು ಮಾಡುವುದರಿಂದ ಅಥವಾ ಮಾಡದೇ ಇರುವುದರಿಂದ ಜ್ಞಾನ ಮಾರ್ಗದಲ್ಲಿ ಪ್ರವೃತ್ತನಾಗಬಹುದು ಎಂದು ತಿಳಿದಿಲ್ಲ. ಆದುದರಿಂದ ಯಾವ ಕಾರ್ಯವನ್ನು ಮಾಡಬೇಕೆಂದು ನಿಶ್ಚಯಿಸಲಾರದಾಗಿದ್ದೇವೆ. ನೀನು ಅದರ ಕುರಿತು ಹೇಳಬೇಕು.

12276008a ಭಗವನ್ನಾಶ್ರಮಾಃ ಸರ್ವೇ ಪೃಥಗಾಚಾರದರ್ಶಿನಃ|

12276008c ಇದಂ ಶ್ರೇಯ ಇದಂ ಶ್ರೇಯ ಇತಿ ನಾನಾಪ್ರಧಾವಿತಾಃ||

ಭಗವನ್! ಸರ್ವ ಆಶ್ರಮಗಳೂ ಪ್ರತ್ಯೇಕ ಪ್ರತ್ಯೇಕ ಆಚಾರಗಳನ್ನು ತೋರಿಸುತ್ತವೆ. ಇದು ಶ್ರೇಯಸ್ಕರವಾದುದು ಇದು ಶ್ರೇಯಸ್ಕರವಾದುದು ಎಂದು ನಾನಾ ಪ್ರಕಾರವಾಗಿ ಬೋಧಿಸುತ್ತವೆ.

12276009a ತಾಂಸ್ತು ವಿಪ್ರಸ್ಥಿತಾನ್ ದೃಷ್ಟ್ವಾ ಶಾಸ್ತ್ರೈಃ ಶಾಸ್ತ್ರಾಭಿನಂದಿನಃ|

12276009c ಸ್ವಶಾಸ್ತ್ರೈಃ ಪರಿತುಷ್ಟಾಂಶ್ಚ ಶ್ರೇಯೋ ನೋಪಲಭಾಮಹೇ||

ಎಲ್ಲರೂ ತಾವಿರುವ ಆಶ್ರಮವೇ ಶ್ರೇಷ್ಠವೆಂದು ತಿಳಿದಿರುತ್ತಾರೆ. ಮತ್ತು ಶಾಸ್ತ್ರಗಳೂ ಕೂಡ ಎಲ್ಲ ಆಶ್ರಮಗಳೂ ಶ್ರೇಷ್ಠವೆಂದೇ ಹೇಳುತ್ತವೆ. ಆದರೆ ನಿಜವಾದ ಶ್ರೇಯಸ್ಕರ ಮಾರ್ಗವು ಯಾವುದು ಎನ್ನುವುದನ್ನು ತಿಳಿಯಲಾರದಾಗಿದ್ದೇವೆ.

12276010a ಶಾಸ್ತ್ರಂ ಯದಿ ಭವೇದೇಕಂ ವ್ಯಕ್ತಂ ಶ್ರೇಯೋ ಭವೇತ್ತದಾ|

12276010c ಶಾಸ್ತ್ರೈಶ್ಚ ಬಹುಭಿರ್ಭೂಯಃ ಶ್ರೇಯೋ ಗುಹ್ಯಂ ಪ್ರವೇಶಿತಮ್||

ಶಾಸ್ತ್ರವು ಒಂದೇ ಆಗಿದ್ದರೆ ಶ್ರೇಯಸ್ಸನ್ನು ಹೊಂದುವ ಉಪಾಯವೂ ಅದರಿಂದ ವ್ಯಕ್ತವಾಗುತ್ತಿತ್ತು. ಶಾಸ್ತ್ರಗಳು ಅನೇಕವಾಗಿರುವುದರಿಂದ ಶ್ರೇಯಸ್ಸಿನ ಮಾರ್ಗವು ರಹಸ್ಯವಾಗಿಯೇ ಉಳಿದುಬಿಟ್ಟಿದೆ.

12276011a ಏತಸ್ಮಾತ್ಕಾರಣಾಚ್ಚ್ರೇಯಃ ಕಲಿಲಂ ಪ್ರತಿಭಾತಿ ಮಾಮ್|

12276011c ಬ್ರವೀತು ಭಗವಾಂಸ್ತನ್ಮೇ ಉಪಸನ್ನೋಽಸ್ಮ್ಯಧೀಹಿ ಭೋಃ||

ಭೋ! ಆದುದರಿಂದ ಶ್ರೇಯಸ್ಸಿನ ಮಾರ್ಗವು ಎಲ್ಲಿಯೋ ಬೆರೆತುಹೋಗಿದೆಯೆಂದು ನನಗನ್ನಿಸುತ್ತದೆ. ನೀನು ನನಗೆ ದಯಮಾಡಿ ಶ್ರೇಯಸ್ಸಾಧನೆಯ ಉಪಾಯವನ್ನು ಹೇಳು. ನಾನು ನಿನ್ನ ಶಿಷ್ಯನಾಗಿದ್ದೇನೆ.”

12276012 ನಾರದ ಉವಾಚ|

12276012a ಆಶ್ರಮಾಸ್ತಾತ ಚತ್ವಾರೋ ಯಥಾಸಂಕಲ್ಪಿತಾಃ ಪೃಥಕ್|

12276012c ತಾನ್ಸರ್ವಾನನುಪಶ್ಯ ತ್ವಂ ಸಮಾಶ್ರಿತ್ಯೈವ ಗಾಲವ||

ನಾರದನು ಹೇಳಿದನು: “ಅಯ್ಯಾ ಗಾಲವ! ಆಶ್ರಮಗಳು ನಾಲ್ಕು ಮತ್ತು ಅವುಗಳು ಬೇರೆ ಬೇರೆಯೆಂದು ಸಂಕಲ್ಪಿಸಿದ್ದಾರೆ. ನೀನು ಜ್ಞಾನವನ್ನಾಶ್ರಯಿಸಿ ಆ ಎಲ್ಲ ಆಶ್ರಮಗಳನ್ನೂ ಯಥಾರ್ಥರೂಪದಲ್ಲಿ ಪರಿಶೀಲಿಸು.

12276013a ತೇಷಾಂ ತೇಷಾಂ ತಥಾ ಹಿ ತ್ವಮಾಶ್ರಮಾಣಾಂ ತತಸ್ತತಃ|

12276013c ನಾನಾರೂಪಗುಣೋದ್ದೇಶಂ ಪಶ್ಯ ವಿಪ್ರಸ್ಥಿತಂ ಪೃಥಕ್|

12276013e ನಯಂತಿ ಚೈವ ತೇ ಸಮ್ಯಗಭಿಪ್ರೇತಮಸಂಶಯಮ್||

ಆಯಾ ಆಶ್ರಮಗಳಿಗೆ ಗುಣಯುಕ್ತವಾದ ಯಾವ ಧರ್ಮಗಳನ್ನು ಹೇಳಿದ್ದಾರೋ ಅವೆಲ್ಲಕ್ಕೂ ಪ್ರತ್ಯೇಕ ಪ್ರತ್ಯೇಕ ಅಸ್ತಿತ್ವವಿದೆ. ಈ ವಿಷಯವನ್ನು ನೀನು ಮನಗಾಣು. ಸಾಧಾರಣವಾಗಿ ಆಶ್ರಮಧರ್ಮಗಳಲ್ಲಿರುವ ನಿಜತತ್ತ್ವವನ್ನು ತಿಳಿದುಕೊಂಡಿರುವುದಿಲ್ಲ.

12276014a ಋಜು ಪಶ್ಯಂಸ್ತಥಾ[4] ಸಮ್ಯಗಾಶ್ರಮಾಣಾಂ ಪರಾಂ ಗತಿಮ್|

12276014c ಯತ್ತು ನಿಃಶ್ರೇಯಸಂ ಸಮ್ಯಕ್ತಚ್ಚೈವಾಸಂಶಯಾತ್ಮಕಮ್||

ಆದರೆ ತತ್ತ್ವಜ್ಞರು ಆಶ್ರಮಧರ್ಮಗಳ ಪರಮತತ್ತ್ವವನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಶ್ರೇಯಸ್ಕರವಾದುದು ಯಾವುದೋ ಅದು ಯಾವಾಗಲೂ ಸಂಶಯರಹಿತವಾಗಿಯೇ ಇರುತ್ತದೆ.

12276015a ಅನುಗ್ರಹಂ ಚ ಮಿತ್ರಾಣಾಮಮಿತ್ರಾಣಾಂ ಚ ನಿಗ್ರಹಮ್|

12276015c ಸಂಗ್ರಹಂ ಚ ತ್ರಿವರ್ಗಸ್ಯ ಶ್ರೇಯ ಆಹುರ್ಮನೀಷಿಣಃ||

ಮಿತ್ರರಿಗೆ ಅನುಗ್ರಹವನ್ನು ತೋರುವುದು, ಶತ್ರುಗಳನ್ನು ನಿಗ್ರಹಿಸುವುದು, ಧರ್ಮ-ಅರ್ಥ-ಕಾಮಗಳನ್ನು ಸಂಗ್ರಹಿಸುವುದು – ಇವು ಶ್ರೇಯಸ್ಕರವೆಂದು ಮನೀಷಿಣರು ಹೇಳುತ್ತಾರೆ.

12276016a ನಿವೃತ್ತಿಃ ಕರ್ಮಣಃ ಪಾಪಾತ್ಸತತಂ ಪುಣ್ಯಶೀಲತಾ|

12276016c ಸದ್ಭಿಶ್ಚ ಸಮುದಾಚಾರಃ ಶ್ರೇಯ ಏತದಸಂಶಯಮ್||

ಪಾಪಕರ್ಮಗಳಿಂದ ನಿವೃತ್ತಿಹೊಂದುವುದು, ಸತತವೂ ಪುಣ್ಯಶೀಲನಾಗಿರುವುದು, ಸತ್ಪುರುಷರ ಸಹವಾಸದಲ್ಲಿರುವುದು ಮತ್ತು ಸದಾಚಾರಗಳನ್ನು ಪಾಲಿಸುವುದು – ಇವು ನಿಸ್ಸಂಶಯವಾಗಿಯೂ ಶ್ರೇಯವಾದವು.

12276017a ಮಾರ್ದವಂ ಸರ್ವಭೂತೇಷು ವ್ಯವಹಾರೇಷು ಚಾರ್ಜವಮ್|

12276017c ವಾಕ್ಚೈವ ಮಧುರಾ ಪ್ರೋಕ್ತಾ ಶ್ರೇಯ ಏತದಸಂಶಯಮ್||

ಸರ್ವಭೂತಗಳಲ್ಲಿ ಮೃದುತ್ವ, ವ್ಯವಹಾರಗಳಲ್ಲಿ ಸರಳತೆ, ಮಧುರ ಮಾತುಗಳನ್ನಾಡುವುದು – ಇವೆಲ್ಲವೂ ಶ್ರೇಯಸ್ಕರವೆನ್ನುವುದರಲ್ಲಿ ಸಂಶಯವೇ ಇಲ್ಲ.

12276018a ದೇವತಾಭ್ಯಃ ಪಿತೃಭ್ಯಶ್ಚ ಸಂವಿಭಾಗೋಽತಿಥಿಷ್ವಪಿ|

12276018c ಅಸಂತ್ಯಾಗಶ್ಚ ಭೃತ್ಯಾನಾಂ ಶ್ರೇಯ ಏತದಸಂಶಯಮ್||

ದೇವತೆಗಳಿಗೆ, ಪಿತೃಗಳಿಗೆ ಮತ್ತು ಅತಿಥಿಗಳಿಗೆ ಸಲ್ಲಬೇಕಾದುದನ್ನು ನೀಡುವುದು, ಭೃತ್ಯರನ್ನು ತ್ಯಜಿಸದೇ ಇರುವುದು – ಇವು ಶ್ರೇಯಸ್ಕರವಾದವುಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

12276019a ಸತ್ಯಸ್ಯ ವಚನಂ ಶ್ರೇಯಃ ಸತ್ಯಜ್ಞಾನಂ ತು ದುಷ್ಕರಮ್|

12276019c ಯದ್ಭೂತಹಿತಮತ್ಯಂತಮೇತತ್ಸತ್ಯಂ ಬ್ರವೀಮ್ಯಹಮ್||

ಸತ್ಯವಚನವು ಶ್ರೇಯಸ್ಕರವು. ಆದರೆ ಸತ್ಯವನ್ನು ತಿಳಿಯುವುದು ದುಷ್ಕರವು. ಪ್ರಾಣಿಗಳಿಗೆ ಅತ್ಯಂತ ಹಿತವಾದುದು ಯಾವುದೋ ಅದೇ ಸತ್ಯವೆಂದು ನಾನು ಹೇಳುತ್ತೇನೆ.

12276020a ಅಹಂಕಾರಸ್ಯ ಚ ತ್ಯಾಗಃ ಪ್ರಣಯಸ್ಯ[5] ಚ ನಿಗ್ರಹಃ|

12276020c ಸಂತೋಷಶ್ಚೈಕಚರ್ಯಾ ಚ ಕೂಟಸ್ಥಂ ಶ್ರೇಯ ಉಚ್ಯತೇ||

ಅಹಂಕಾರದ ತ್ಯಾಗ, ಇಚ್ಛೆ-ಅನುರಾಗಗಳ ನಿಗ್ರಹ, ಸಂತೋಷ ಮತ್ತು ಏಕಾಂತವಾಸ – ಇವು ನಿಶ್ಚಿತ ಶ್ರೇಯಕಾರಕಗಳೆಂದು ಹೇಳುತ್ತಾರೆ.

12276021a ಧರ್ಮೇಣ ವೇದಾಧ್ಯಯನಂ ವೇದಾಂಗಾನಾಂ ತಥೈವ ಚ|

12276021c ವಿದ್ಯಾರ್ಥಾನಾಂ[6] ಚ ಜಿಜ್ಞಾಸಾ ಶ್ರೇಯ ಏತದಸಂಶಯಮ್||

ಧರ್ಮಪೂರ್ವಕವಾಗಿ ವೇದ-ವೇದಾಂಗಗಳ ಅಧ್ಯಯನ, ವಿದ್ಯೆಗಾಗಿ ಜಿಜ್ಞಾಸೆ – ಇವು ನಿಃಸಂಶಯವಾಗಿಯೂ ಶ್ರೇಯಸ್ಕರವಾದವು.

12276022a ಶಬ್ದರೂಪರಸಸ್ಪರ್ಶಾನ್ಸಹ ಗಂಧೇನ ಕೇವಲಾನ್|

12276022c ನಾತ್ಯರ್ಥಮುಪಸೇವೇತ ಶ್ರೇಯಸೋಽರ್ಥೀ ಪರಂತಪ||

ಪರಂತಪ! ಶ್ರೇಯಸ್ಸನ್ನು ಬಯಸುವವನು ಕೇವಲ ಶಬ್ದ-ರೂಪ-ರಸ-ಸ್ಪರ್ಶ-ಗಂಧಗಳನ್ನು ಮಿತಿಮೀರಿ ಸೇವಿಸಬಾರದು.

12276023a ನಕ್ತಂಚರ್ಯಾ ದಿವಾಸ್ವಪ್ನಮಾಲಸ್ಯಂ ಪೈಶುನಂ ಮದಮ್|

12276023c ಅತಿಯೋಗಮಯೋಗಂ ಚ ಶ್ರೇಯಸೋಽರ್ಥೀ ಪರಿತ್ಯಜೇತ್||

ಶ್ರೇಯಸ್ಸನ್ನು ಬಯಸುವವನು ರಾತ್ರಿ ಸಂಚರಿಸುವುದನ್ನು, ಹಗಲಿನಲ್ಲಿ ನಿದ್ದೆಮಾಡುವುದನ್ನು, ಆಲಸ್ಯ, ಚಾಡಿಕೋರತನ, ಮದ, ಅತಿಯೋಗ ಮತ್ತು ಅಯೋಗ ಇವುಗಳನ್ನು ಪರಿತ್ಯಜಿಸಬೇಕು.

12276024a ಕರ್ಮೋತ್ಕರ್ಷಂ[7] ನ ಮಾರ್ಗೇತ ಪರೇಷಾಂ ಪರಿನಿಂದಯಾ|

12276024c ಸ್ವಗುಣೈರೇವ ಮಾರ್ಗೇತ ವಿಪ್ರಕರ್ಷಂ ಪೃಥಗ್ಜನಾತ್||

ಪರರನ್ನು ನಿಂದಿಸಿ ತನ್ನ ಶ್ರೇಷ್ಠತೆಯನ್ನು ಊರ್ಜಿತ ಗೊಳಿಸಿಕೊಳ್ಳಬಾರದು. ಇತರರಿಗಿಂತ ತನ್ನಲ್ಲಿರುವ ಉತ್ಕರ್ಷತೆಯನ್ನು ಸ್ವಗುಣಗಳಿಂದಲೇ ತೋರಿಸಿಕೊಡಬೇಕು.

12276025a ನಿರ್ಗುಣಾಸ್ತ್ವೇವ ಭೂಯಿಷ್ಠಮಾತ್ಮಸಂಭಾವಿನೋ ನರಾಃ|

12276025c ದೋಷೈರನ್ಯಾನ್ಗುಣವತಃ ಕ್ಷಿಪಂತ್ಯಾತ್ಮಗುಣಕ್ಷಯಾತ್||

ನಿರ್ಗುಣಿಗಳೇ ಹೆಚ್ಚಾಗಿ ತಮ್ಮನ್ನು  ಸಂಭಾವಿತರೆಂದು ಪ್ರಶಂಸೆಮಾಡಿಕೊಳ್ಳುತ್ತಾರೆ ಮತ್ತು ಅನ್ಯ ಗುಣವಂತರನ್ನು ದೋಷಾರೋಪಣೆಗಳಿಂದ ಕೆಳಕ್ಕೆ ತಳ್ಳುತ್ತಾರೆ.

12276026a ಅನೂಚ್ಯಮಾನಾಶ್ಚ ಪುನಸ್ತೇ ಮನ್ಯಂತೇ ಮಹಾಜನಾತ್|

12276026c ಗುಣವತ್ತರಮಾತ್ಮಾನಂ ಸ್ವೇನ ಮಾನೇನ ದರ್ಪಿತಾಃ||

ಮಹಾಜನರು ತಮ್ಮನ್ನು ನಿಂದಿಸದೇ ಇರುವುದರಿಂದ ಸ್ವಾಭಿಮಾನದಿಂದ ದರ್ಪಿತರಾದ ಗುಣಹೀನರು ಮಹಾಜನರಿಗಿಂತಲೂ ತಾವು ಅಧಿಕರೆಂದು ಭಾವಿಸುತ್ತಾರೆ.

12276027a ಅಬ್ರುವನ್ಕಸ್ಯ ಚಿನ್ನಿಂದಾಮಾತ್ಮಪೂಜಾಮವರ್ಣಯನ್|

12276027c ವಿಪಶ್ಚಿದ್ಗುಣಸಂಪನ್ನಃ ಪ್ರಾಪ್ನೋತ್ಯೇವ ಮಹದ್ಯಶಃ||

ಆದರೆ ಯಾರ ನಿಂದೆಯನ್ನೂ ಮಾಡದೇ ಆತ್ಮಪ್ರಶಂಸೆಯನ್ನೂ ಮಾಡಿಕೊಳ್ಳದೇ ಉತ್ತಮಗುಣಸಂಪನ್ನನಾಗಿರುವ ವಿದ್ವಾಂಸನು ಮಹಾ ಯಶಸ್ಸನ್ನು ಹೊಂದಿಯೇ ಹೊಂದುತ್ತಾನೆ.

12276028a ಅಬ್ರುವನ್ವಾತಿ ಸುರಭಿರ್ಗಂಧಃ ಸುಮನಸಾಂ ಶುಚಿಃ|

12276028c ತಥೈವಾವ್ಯಾಹರನ್ ಭಾತಿ ವಿಮಲೋ ಭಾನುರಂಬರೇ||

ಪವಿತ್ರವಾದ ಮತ್ತು ಸುಮನೋಹರ ಹೂವುಗಳು ಯಾವ ಮಾತನ್ನೂ ಆಡದೇ ಸುಂಗಧವನ್ನು ಬೀರುತ್ತವೆ. ನಿರ್ಮಲ ಭಾನುವೂ ಹಾಗೆಯೇ ಅಂಬರದಲ್ಲಿದ್ದುಕೊಂಡು ಪ್ರಕಾಶವನ್ನೀಯುತ್ತಾನೆ.

12276029a ಏವಮಾದೀನಿ ಚಾನ್ಯಾನಿ ಪರಿತ್ಯಕ್ತಾನಿ ಮೇಧಯಾ|

12276029c ಜ್ವಲಂತಿ ಯಶಸಾ ಲೋಕೇ ಯಾನಿ ನ ವ್ಯಾಹರಂತಿ ಚ||

ಇವೇ ಮೊದಲಾದ ಬುದ್ಧಿಯಿಲ್ಲದ ಅನೇಕ ವಸ್ತುಗಳೂ ಲೋಕದಲ್ಲಿ ಯಶಸ್ಸಿನಿಂದ ಪ್ರಜ್ವಲಿಸುತ್ತವೆ. ಆದರೆ ಅವುಗಳು ತಮ್ಮಲ್ಲಿರುವ ಗುಣಗಳ ವಿಷಯವಾಗಿ ಏನನ್ನೂ ಹೇಳಿಕೊಳ್ಳುವುದಿಲ್ಲ.

12276030a ನ ಲೋಕೇ ದೀಪ್ಯತೇ ಮೂರ್ಖಃ ಕೇವಲಾತ್ಮಪ್ರಶಂಸಯಾ|

12276030c ಅಪಿ ಚಾಪಿಹಿತಃ ಶ್ವಭ್ರೇ ಕೃತವಿದ್ಯಃ ಪ್ರಕಾಶತೇ||

ಕೇವಲ ಆತ್ಮಪ್ರಶಂಸೆಯಿಂದ ಮೂರ್ಖನು ಲೋಕದಲ್ಲಿ ಬೆಳಗುವುದಿಲ್ಲ. ಅದೇ ವಿದ್ವಾಂಸನು ಗುಹೆಯಲ್ಲಿ ಅಡಗಿಕೊಂಡಿದ್ದರೂ ಲೋಕವಿಖ್ಯಾತನಾಗುತ್ತಾನೆ.

12276031a ಅಸನ್ನುಚ್ಚೈರಪಿ ಪ್ರೋಕ್ತಃ ಶಬ್ದಃ ಸಮುಪಶಾಮ್ಯತಿ|

12276031c ದೀಪ್ಯತೇ ತ್ವೇವ ಲೋಕೇಷು ಶನೈರಪಿ ಸುಭಾಷಿತಮ್||

ಕೆಟ್ಟ ಮಾತನ್ನು ಎಷ್ಟೇ ಗಟ್ಟಿಯಾಗಿ ಹೇಳಿದರೂ ಅದು ಕರಗಿಹೋಗುತ್ತದೆ. ಒಳ್ಳೆಯ ಮಾತನ್ನು ಮೆಲ್ಲಗೆ ಹೇಳಿದರೂ ಅದು ಲೋಕಗಳಲ್ಲಿ ಬೆಳಗುತ್ತದೆ.

12276032a ಮೂಢಾನಾಮವಲಿಪ್ತಾನಾಮಸಾರಂ ಭಾಷಿತಂ ಬಹು|

12276032c ದರ್ಶಯತ್ಯಂತರಾತ್ಮಾನಂ ದಿವಾ ರೂಪಮಿವಾಂಶುಮಾನ್[8]||

ಸೂರ್ಯನು ಸೂರ್ಯಕಾಂತ ಮಣಿಯ ಮೂಲಕ ತನ್ನ ದಿವ್ಯ ರೂಪವನ್ನು ಹೇಗೆ ಪ್ರಕಟಪಡಿಸುತ್ತಾನೋ ಹಾಗೆ ಗರ್ವಿಷ್ಠ ಮೂಢರಾಡುವ ಅನೇಕ ಮಾತುಗಳು ಅವರ ಅಂತಃಕರಣವನ್ನು ಹೊರಪಡಿಸುತ್ತವೆ.

12276033a ಏತಸ್ಮಾತ್ಕಾರಣಾತ್ಪ್ರಜ್ಞಾಂ ಮೃಗಯಂತೇ ಪೃಥಗ್ವಿಧಾಮ್|

12276033c ಪ್ರಜ್ಞಾಲಾಭೋ ಹಿ ಭೂತಾನಾಮುತ್ತಮಃ ಪ್ರತಿಭಾತಿ ಮಾಮ್||

ಈ ಎಲ್ಲ ಕಾರಣಗಳಿಂದಲೇ ಬೇರೆ ಬೇರೆ ವಿಧಗಳಲ್ಲಿ ಪ್ರಜ್ಞೆಯನ್ನು ಹುಡುಕುತ್ತಿರುತ್ತಾರೆ. ಪ್ರಜ್ಞಾಲಾಭವೇ ಭೂತಗಳಿಗೆ ಉತ್ತಮವೆಂದು ನನಗನ್ನಿಸುತ್ತದೆ.

12276034a ನಾಪೃಷ್ಟಃ ಕಸ್ಯ ಚಿದ್ಬ್ರೂಯಾನ್ನ ಚಾನ್ಯಾಯೇನ ಪೃಚ್ಚತಃ|

12276034c ಜ್ಞಾನವಾನಪಿ ಮೇಧಾವೀ ಜಡವಲ್ಲೋಕಮಾಚರೇತ್||

ಮೇಧಾವಿಯು ಜ್ಞಾನವಂತನಾಗಿದ್ದರೂ ಪ್ರಶ್ನೆಮಾಡದ ಯಾರಿಗೂ ಉಪದೇಶಿಸಬಾರದು. ನ್ಯಾಯ ಸಮ್ಮತವಲ್ಲದ ರೀತಿಯಲ್ಲಿ ಅಥವಾ ಅಪಹಾಸ್ಯಕ್ಕಾಗಿ ಪ್ರಶ್ನಿಸಿದರೂ ಜಡನಂತೆ ಸುಮ್ಮನೆ ಕುಳಿತುಕೊಳ್ಳಬೇಕು.

12276035a ತತೋ ವಾಸಂ ಪರೀಕ್ಷೇತ ಧರ್ಮನಿತ್ಯೇಷು ಸಾಧುಷು|

12276035c ಮನುಷ್ಯೇಷು ವದಾನ್ಯೇಷು ಸ್ವಧರ್ಮನಿರತೇಷು ಚ||

ಮನುಷ್ಯನು ಯಾವಾಗಲೂ ಧರ್ಮನಿತ್ಯ ಸಾಧುಗಳ ಮಧ್ಯೆ, ಸ್ವಧರ್ಮ ನಿರತರಾದ ಉದಾರಿಗಳ ಮಧ್ಯೆ ವಾಸಿಸಲು ಬಯಸಬೇಕು.

12276036a ಚತುರ್ಣಾಂ ಯತ್ರ ವರ್ಣಾನಾಂ ಧರ್ಮವ್ಯತಿಕರೋ ಭವೇತ್|

12276036c ನ ತತ್ರ ವಾಸಂ ಕುರ್ವೀತ ಶ್ರೇಯೋರ್ಥೀ ವೈ ಕಥಂ ಚನ||

ನಾಲ್ಕು ವರ್ಣಗಳ ಧರ್ಮಗಳು ಸಂಕರವಾಗುವಲ್ಲಿ ಶ್ರೇಯೋರ್ಥಿಯು ಎಂದೂ ವಾಸಿಸಬಾರದು.

12276037a ನಿರಾರಂಭೋಽಪ್ಯಯಮಿಹ ಯಥಾಲಬ್ಧೋಪಜೀವನಃ|

12276037c ಪುಣ್ಯಂ ಪುಣ್ಯೇಷು ವಿಮಲಂ ಪಾಪಂ ಪಾಪೇಷು ಚಾಪ್ನುಯಾತ್||

ಈ ಲೋಕದಲ್ಲಿ ಯಾವುದೇ ಕಾಮ್ಯಕರ್ಮವನ್ನು ಆರಂಭಿಸದ ಮತ್ತು ದೊರಕಿದ್ದುದರಲ್ಲಿಯೇ ಜೀವನವನ್ನು ನಿರ್ವಹಿಸುವವನೂ ಕೂಡ ಪುಣ್ಯಪುರುಷರ ಜೊತೆ ವಾಸಿಸುತ್ತಿದ್ದರೆ ಪುಣ್ಯವನ್ನೂ ಪಾಪಿಷ್ಠರ ಜೊತೆ ವಾಸಿಸುತ್ತಿದ್ದರೆ ಪಾಪವನ್ನೂ ಹೊಂದುತ್ತಾನೆ.

12276038a ಅಪಾಮಗ್ನೇಸ್ತಥೇಂದೋಶ್ಚ ಸ್ಪರ್ಶಂ ವೇದಯತೇ ಯಥಾ|

12276038c ತಥಾ ಪಶ್ಯಾಮಹೇ ಸ್ಪರ್ಶಮುಭಯೋಃ ಪಾಪಪುಣ್ಯಯೋಃ||

ನೀರು, ಅಗ್ನಿ ಮತ್ತು ಚಂದ್ರರ ಸಂಸರ್ಗದಿಂದ ಹೇಗೆ ಶೀತ, ಉಷ್ಣ ಮತ್ತು ಸುಖಸ್ಪರ್ಶಗಳ ಅನುಭವವಾಗುತ್ತವೆಯೋ ಹಾಗೆ ಪುಣ್ಯವಂತರ ಸಂಸರ್ಗದಿಂದ ಪುಣ್ಯವೂ ಪಾಪಿಷ್ಠರ ಸಂಸರ್ಗದಿಂದ ಪಾಪವೂ ಉಂಟಾಗುವುದನ್ನು ನೋಡುತ್ತೇವೆ.

12276039a ಅಪಶ್ಯಂತೋಽನ್ನವಿಷಯಂ ಭುಂಜತೇ ವಿಘಸಾಶಿನಃ|

12276039c ಭುಂಜಾನಂ ಚಾನ್ನವಿಷಯಾನ್ವಿಷಯಂ ವಿದ್ಧಿ ಕರ್ಮಣಾಮ್||

ಯಜ್ಞಶೇಷವನ್ನು ಭುಂಜಿಸುವವರು ಅನ್ನವನ್ನು ಇಂದ್ರಿಯವಿಷಯವನ್ನಾಗಿ ಕಾಣದೇ ಪ್ರಸಾದಬುದ್ಧಿಯಿಂದ ನಿರ್ಲಿಪ್ತರಾಗಿ ಸೇವಿಸುತ್ತಾರೆ. ಆದರೆ ಅನ್ನವನ್ನು ಇಂದ್ರಿಯವಿಷಯವನ್ನಾಗಿ ಸೇವಿಸುವವರು ಕರ್ಮಗಳಿಗೆ ಗುರಿಯಾಗುತ್ತಾರೆಂದು ತಿಳಿ.

12276040a ಯತ್ರಾಗಮಯಮಾನಾನಾಮಸತ್ಕಾರೇಣ ಪೃಚ್ಚತಾಮ್|

12276040c ಪ್ರಬ್ರೂಯಾದ್ಬ್ರಹ್ಮಣೋ ಧರ್ಮಂ ತ್ಯಜೇತ್ತಂ ದೇಶಮಾತ್ಮವಾನ್||

ಅನಾದರ ಮತ್ತು ಅನ್ಯಾಯಪೂರ್ವಕವಾಗಿ ಪ್ರಶ್ನಿಸುತ್ತಿರುವವರಿಗೆ ಬ್ರಾಹ್ಮಣನು ಧರ್ಮವನ್ನು ಉಪದೇಶಿಸುತ್ತಿದ್ದರೆ ಬುದ್ಧಿವಂತನಾದವನು ಒಡನೆಯೇ ಆ ಸ್ಥಳವನ್ನು ತ್ಯಜಿಸಬೇಕು.

12276041a ಶಿಷ್ಯೋಪಾಧ್ಯಾಯಿಕಾ ವೃತ್ತಿರ್ಯತ್ರ ಸ್ಯಾತ್ಸುಸಮಾಹಿತಾ|

12276041c ಯಥಾವಚ್ಚಾಸ್ತ್ರಸಂಪನ್ನಾ ಕಸ್ತಂ ದೇಶಂ ಪರಿತ್ಯಜೇತ್||

ಗುರುಶಿಷ್ಯರ ವ್ಯವಹಾರವು ಸುವ್ಯವಸ್ಥಿತವಾಗಿರುವ ಮತ್ತು ಶಾಸ್ತ್ರಸಮ್ಮತವಾಗಿರುವ ಸ್ಥಳವನ್ನು ಯಾರು ತಾನೇ ಪರಿತ್ಯಜಿಸುತ್ತಾರೆ?

12276042a ಆಕಾಶಸ್ಥಾ ಧ್ರುವಂ ಯತ್ರ ದೋಷಂ ಬ್ರೂಯುರ್ವಿಪಶ್ಚಿತಾಮ್|

12276042c ಆತ್ಮಪೂಜಾಭಿಕಾಮಾ ವೈ ಕೋ ವಸೇತ್ತತ್ರ ಪಂಡಿತಃ||

ಯಾವ ಆಧಾರವೂ ಇಲ್ಲದೇ ವಿದ್ವಾಂಸರ ಮೇಲೆ ನಿಶ್ಚಿತ ರೂಪದಲ್ಲಿ ದೋಷಾರೋಪಗಳನ್ನು ಮಾಡುವ ದೇಶದಲ್ಲಿ ಆತ್ಮಗೌರವವನ್ನುಳಿಸಿಕೊಂಡಿರಲು ಇಚ್ಛಿಸುವ ಯಾವ ಪಂಡಿತನು ತಾನೇ ವಾಸಮಾಡಿಕೊಂಡಿರುತ್ತಾನೆ?

12276043a ಯತ್ರ ಸಂಲೋಡಿತಾ ಲುಬ್ಧೈಃ ಪ್ರಾಯಶೋ ಧರ್ಮಸೇತವಃ|

12276043c ಪ್ರದೀಪ್ತಮಿವ ಶೈಲಾಂತಂ ಕಸ್ತಂ ದೇಶಂ ನ ಸಂತ್ಯಜೇತ್||

ಧರ್ಮಮಾರ್ಗವನ್ನು ಬಯಸುವ ಯಾರುತಾನೇ - ಲುಬ್ಧರು ಪ್ರಾಯಶಃ ಧರ್ಮದ ಎಲ್ಲ ಕಟ್ಟುಪಾಡುಗಳನ್ನೂ ಮುರಿದಿರುವ ದೇಶವನ್ನು – ಸೆರಗಿಗೆ ಬೆಂಕಿ ತಾಗಿದೊಡನೇ ಉಟ್ಟಿರುವ ವಸ್ತ್ರವನ್ನೇ ಕಿತ್ತು ಬಿಸಾಡುವಂತೆ –ಪರಿತ್ಯಜಿಸದೇ ಇರುತ್ತಾರೆ?

12276044a ಯತ್ರ ಧರ್ಮಮನಾಶಂಕಾಶ್ಚರೇಯುರ್ವೀತಮತ್ಸರಾಃ|

12276044c ಚರೇತ್ತತ್ರ ವಸೇಚ್ಚೈವ ಪುಣ್ಯಶೀಲೇಷು ಸಾಧುಷು||

ಆದರೆ ಶಂಕೆಯಿಲ್ಲದೇ ಮತ್ಸರರಹಿತರಾಗಿ ಧರ್ಮವನ್ನು ಪಾಲಿಸುತ್ತಿರುವ ಪುಣ್ಯಶೀಲ ಸಾಧುಜನರ ಸಮೀಪ ವಾಸಿಸಬೇಕು.

12276045a ಧರ್ಮಮರ್ಥನಿಮಿತ್ತಂ ತು ಚರೇಯುರ್ಯತ್ರ ಮಾನವಾಃ|

12276045c ನ ತಾನನುವಸೇಜ್ಜಾತು ತೇ ಹಿ ಪಾಪಕೃತೋ ಜನಾಃ||

ಹಣದ ಸಲುವಾಗಿ ಧರ್ಮಾಚರಣೆಯನ್ನು ಮಾಡುವವರು ಇರುವಲ್ಲಿ ಯಾವಾಗಲೂ ಯಾವುದೇ ಕಾರಣಕ್ಕೂ ವಾಸಿಸಬಾರದು. ಏಕೆಂದರೆ ಅಂಥವರು ಪಾಪಕೃತಜನರಾಗಿರುತ್ತಾರೆ.

12276046a ಕರ್ಮಣಾ ಯತ್ರ ಪಾಪೇನ ವರ್ತಂತೇ ಜೀವಿತೇಸ್ಪವಃ|

12276046c ವ್ಯವಧಾವೇತ್ತತಸ್ತೂರ್ಣಂ ಸಸರ್ಪಾಚ್ಚರಣಾದಿವ||

ಪಾಪಕರ್ಮದಿಂದಲೇ ಜನರು ಜೀವನ ನಡೆಸುತ್ತಿರುವ ಸ್ಥಳವನ್ನು – ಹಾವು ಹೊಕ್ಕಿರುವ ಮನೆಯನ್ನು ಬಿಟ್ಟೋಡುವಂತೆ – ಬೇಗ ದೂರ ಹೋಗಿಬಿಡಬೇಕು.

12276047a ಯೇನ ಖಟ್ವಾಂ ಸಮಾರೂಢಃ ಕರ್ಮಣಾನುಶಯೀ ಭವೇತ್|

12276047c ಆದಿತಸ್ತನ್ನ ಕರ್ತವ್ಯಮಿಚ್ಚತಾ ಭವಮಾತ್ಮನಃ||

ತನ್ನ ಕಲ್ಯಾಣವನ್ನು ಬಯಸುವವನು - ಯಾವ ಪಾಪಕರ್ಮದ ಫಲದಿಂದ ಮಂಚದ ಮೇಲೆ ಮಲಗಿ ದುಃಖ ಪಡಬೇಕಾಗುವುದೋ ಅಂಥಹ ಪಾಪಕರ್ಮವನ್ನು - ಮೊದಲಿನಿಂದಲೂ ಮಾಡಬಾರದು.

12276048a ಯತ್ರ ರಾಜಾ ಚ ರಾಜ್ಞಶ್ಚ ಪುರುಷಾಃ ಪ್ರತ್ಯನಂತರಾಃ|

12276048c ಕುಟುಂಬಿನಾಮಗ್ರಭುಜಸ್ತ್ಯಜೇತ್ತದ್ರಾಷ್ಟ್ರಮಾತ್ಮವಾನ್||

ಎಲ್ಲಿ ರಾಜ ಮತ್ತು ರಾಜಪುರುಷರು - ಕುಟುಂಬದವರು ಮತ್ತು ಬ್ರಾಹ್ಮಣರು ಊಟ ಮಾಡುವ ಮೊದಲೇ - ಊಟಮಾಡುತ್ತಾರೋ ಆ ರಾಜ್ಯವನ್ನು ಬುದ್ಧಿವಂತನಾದವನು ಅವಶ್ಯವಾಗಿ ತ್ಯಜಿಸಬೇಕು.

12276049a ಶ್ರೋತ್ರಿಯಾಸ್ತ್ವಗ್ರಭೋಕ್ತಾರೋ ಧರ್ಮನಿತ್ಯಾಃ ಸನಾತನಾಃ|

12276049c ಯಾಜನಾಧ್ಯಾಪನೇ ಯುಕ್ತಾ ಯತ್ರ ತದ್ರಾಷ್ಟ್ರಮಾವಸೇತ್||

ಎಲ್ಲಿ ಯಾಜನ-ಅಧ್ಯಾಪನಗಳಲ್ಲಿ ತೊಡಗಿರುವ ಧರ್ಮನಿತ್ಯ ಸನಾತನ ಶ್ರೋತ್ರೀಯರು ಮೊದಲು ಊಟಮಾಡುತ್ತಾರೋ ಆ ರಾಷ್ಟ್ರದಲ್ಲಿ ಅವಶ್ಯವಾಗಿ ವಾಸಿಸಬೇಕು.

12276050a ಸ್ವಾಹಾಸ್ವಧಾವಷಟ್ಕಾರಾ ಯತ್ರ ಸಮ್ಯಗನುಷ್ಠಿತಾಃ|

12276050c ಅಜಸ್ರಂ ಚೈವ ವರ್ತಂತೇ ವಸೇತ್ತತ್ರಾವಿಚಾರಯನ್||

ಎಲ್ಲಿ ಸ್ವಾಹಾಕಾರ (ಅಗ್ನಿಹೋತ್ರ), ಸ್ವಧಾಕಾರ (ಶ್ರಾದ್ಧಕರ್ಮ), ಮತ್ತು ವಷಟ್ಕಾರ (ಯಜ್ಞಕರ್ಮ)ಗಳು ಚೆನ್ನಾಗಿ ಅನುಷ್ಠಾನಗೊಳ್ಳುತ್ತವೆಯೋ ಮತ್ತು ನಿರಂತರವಾಗಿ ನಡೆಯುತ್ತವೆಯೋ ಆ ದೇಶದಲ್ಲಿ ಏನೂ ವಿಚಾರ ಮಾಡದೇ ವಾಸಿಸಬೇಕು.

12276051a ಅಶುಚೀನ್ಯತ್ರ ಪಶ್ಯೇತ ಬ್ರಾಹ್ಮಣಾನ್ವೃತ್ತಿಕರ್ಶಿತಾನ್|

12276051c ತ್ಯಜೇತ್ತದ್ರಾಷ್ಟ್ರಮಾಸನ್ನಮುಪಸೃಷ್ಟಮಿವಾಮಿಷಮ್||

ಎಲ್ಲಿ ಬ್ರಾಹ್ಮಣರು ವೃತ್ತಿಯನ್ನು ಕಳೆದುಕೊಂಡು ಅಶುಚಿಯಾಗಿ ಕಂಡುಬರುತ್ತಾರೋ ಆ ರಾಷ್ಟ್ರವನ್ನು – ಅದು ಹತ್ತಿರದಲ್ಲೇ ಇದ್ದರೂ - ವಿಷವನ್ನು ತ್ಯಜಿಸುವಂತೆ ತ್ಯಜಿಸಬೇಕು.

12276052a ಪ್ರೀಯಮಾಣಾ ನರಾ ಯತ್ರ ಪ್ರಯಚ್ಚೇಯುರಯಾಚಿತಾಃ|

12276052c ಸ್ವಸ್ಥಚಿತ್ತೋ ವಸೇತ್ತತ್ರ ಕೃತಕೃತ್ಯ ಇವಾತ್ಮವಾನ್||

ಎಲ್ಲಿ ಸ್ವಸ್ಥಚಿತ್ತ ಜನರು ಸತ್ಪುರುಷರನ್ನು ಪ್ರೀತಿಯಿಂದ ಕರೆದು ಅವರು ಯಾಚಿಸದೇ ಇದ್ದರೂ ಪುರಸ್ಕರಿಸಿ ನೀಡುತ್ತಾರೋ ಆ ದೇಶದಲ್ಲಿ ಜಿತೇಂದ್ರಿಯ ಸಾಧಕನು ಕೃತಕೃತ್ಯನಾಗಿ ವಾಸಿಸಬಹುದು.

12276053a ದಂಡೋ ಯತ್ರಾವಿನೀತೇಷು ಸತ್ಕಾರಶ್ಚ ಕೃತಾತ್ಮಸು|

12276053c ಚರೇತ್ತತ್ರ ವಸೇಚ್ಚೈವ ಪುಣ್ಯಶೀಲೇಷು ಸಾಧುಷು||

ಎಲ್ಲಿ ಉದ್ಧತರಿಗೆ ಶಿಕ್ಷೆಯಾಗುತ್ತದೆಯೋ ಮತ್ತು ಕೃತಾತ್ಮರಿಗೆ ಸತ್ಕಾರವಾಗುತ್ತದೆಯೋ ಅಲ್ಲಿ ಪುಣ್ಯಶೀಲ ಸಾಧುಗಳ ಮಧ್ಯೆ ವಾಸಿಸಿ ಸಂಚರಿಸಬೇಕು.

12276054a ಉಪಸೃಷ್ಟೇಷ್ವದಾಂತೇಷು ದುರಾಚಾರೇಷ್ವಸಾಧುಷು|

12276054c ಅವಿನೀತೇಷು ಲುಬ್ಧೇಷು ಸುಮಹದ್ದಂಡಧಾರಣಮ್||

ಜಿತೇಂದ್ರಿಯರ ಮೇಲೆ ಕೋಪಗೊಳ್ಳುವ, ಸಾಧುಜನರ ಮೇಲೆ ದುರಾಚಾರವನ್ನೆಸಗುವ, ಉದ್ಧತ ಲುಬ್ಧಜನರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು.

12276055a ಯತ್ರ ರಾಜಾ ಧರ್ಮನಿತ್ಯೋ ರಾಜ್ಯಂ ವೈ ಪರ್ಯುಪಾಸಿತಾ[9]|

12276055c ಅಪಾಸ್ಯ ಕಾಮಾನ್ಕಾಮೇಶೋ ವಸೇತ್ತತ್ರಾವಿಚಾರಯನ್||

ಎಲ್ಲಿ ರಾಜನು ಧರ್ಮನಿತ್ಯನಾಗಿದ್ದು ರಾಜ್ಯದ ಪರ್ಯುಪಾಸನೆಯನ್ನು ಮಾಡುತ್ತಾನೋ ಮತ್ತು ಸಮಸ್ತಕಾಮನೆಗಳಿಗೆ ಅಧಿಪತಿಯಾಗಿದ್ದೂ ವಿಷಯಭೋಗಗಳಿಂದ ವಿಮುಕ್ತನಾಗಿದ್ದಾನೋ ಅಲ್ಲಿ ಏನನ್ನೂ ವಿಚಾರಮಾಡದೇ ವಾಸಿಸಬೇಕು.

12276056a ತಥಾಶೀಲಾ[10] ಹಿ ರಾಜಾನಃ ಸರ್ವಾನ್ವಿಷಯವಾಸಿನಃ|

12276056c ಶ್ರೇಯಸಾ ಯೋಜಯಂತ್ಯಾಶು ಶ್ರೇಯಸಿ ಪ್ರತ್ಯುಪಸ್ಥಿತೇ||

ಏಕೆಂದರೆ ರಾಜನ ಶೀಲವು ಹೇಗಿರುತ್ತದೆಯೋ ರಾಷ್ಟ್ರದ ಸರ್ವನಿವಾಸಿಗಳ ಶೀಲವೂ ಹಾಗೆಯೇ ಇರುತ್ತದೆ. ಅಂತಹ ರಾಜನು ತಾನು ಮಾತ್ರ ಶ್ರೇಯಸ್ಸನ್ನು ಪಡೆಯದೇ ಪ್ರಜೆಗಳನ್ನೂ ಶ್ರೇಯಸ್ಸಿಗೆ ಭಾಗಿಗಳನ್ನಾಗಿ ಮಾಡುತ್ತಾನೆ.

12276057a ಪೃಚ್ಚತಸ್ತೇ ಮಯಾ ತಾತ ಶ್ರೇಯ ಏತದುದಾಹೃತಮ್|

12276057c ನ ಹಿ ಶಕ್ಯಂ ಪ್ರಧಾನೇನ ಶ್ರೇಯಃ ಸಂಖ್ಯಾತುಮಾತ್ಮನಃ||

ಅಯ್ಯಾ! ನೀನು ಕೇಳಿದಂತೆ ಶ್ರೇಯವಾದುದನ್ನು ಉದಾಹರಿಸಿದ್ದೇನೆ. ಆತ್ಮದ ಶ್ರೇಯಸ್ಸಿಗೆ ಪ್ರಧಾನವಾದ ಎಲ್ಲವನ್ನೂ ವರ್ಣಿಸಲು ಶಕ್ಯವಿಲ್ಲ.

12276058a ಏವಂ ಪ್ರವರ್ತಮಾನಸ್ಯ ವೃತ್ತಿಂ ಪ್ರಣಿಹಿತಾತ್ಮನಃ|

12276058c ತಪಸೈವೇಹ ಬಹುಲಂ ಶ್ರೇಯೋ ವ್ಯಕ್ತಂ ಭವಿಷ್ಯತಿ||

ಹೀಗೆ ನಡೆದುಕೊಂಡು ಪ್ರಾಣಿಗಳ ಹಿತದಲ್ಲಿಯೇ ಆಸಕ್ತನಾಗಿರುವವನಿಗೆ ಅದರಿಂದಲೇ ವಿಪುಲ ಶ್ರೇಯಸ್ಸು ಪ್ರತ್ಯಕ್ಷವಾಗಿ ಉಂಟಾಗುತ್ತದೆ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶ್ರೇಯೋವಾಚಿಕೋ ನಾಮ ಷಟ್ಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶ್ರೇಯೋವಾಚಿಕ ಎನ್ನುವ ಇನ್ನೂರಾಎಪ್ಪತ್ತಾರನೇ ಅಧ್ಯಾಯವು.

[1] ಶಾಸ್ತ್ರಾಣಾಂ (ಭಾರತ ದರ್ಶನ).

[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸ್ವಾಶ್ರಮಂ ಸಮನುಪ್ರಾಪ್ತಂ ನಾರದಂ ದೇವವರ್ಚಸಮ್| (ಗೀತಾ ಪ್ರೆಸ್).

[3] ಸ್ಯಾತ್ಕಾರ್ಯಾಣಾಮವಿಶೇಷತಃ (ಭಾರತ ದರ್ಶನ).

[4] ಅನ್ಯೇಽಪಶ್ಯಂಸ್ತಥಾ (ಭಾರತ ದರ್ಶನ).

[5] ಪ್ರಮಾದಸ್ಯ (ಭಾರತ ದರ್ಶನ).

[6] ಜ್ಞಾನಾರ್ಥಾನಾಂ (ಭಾರತ ದರ್ಶನ).

[7] ಆತ್ಮೋತ್ಕರ್ಷಂ (ಭಾರತ ದರ್ಶನ).

[8] ದರ್ಶಯತ್ಯಂತರಾತ್ಮಾನಮಗ್ನಿರೂಪಮಿವಾಂಶುಮಾನ್| (ಭಾರತ ದರ್ಶನ).

[9] ರಾಜ್ಯಂ ಧರ್ಮೇಣ ಪಾಲಯೇತ್| (ಭಾರತ ದರ್ಶನ).

[10] ಯಥಾಶೀಲಾ (ಭಾರತ ದರ್ಶನ).

Comments are closed.