Shanti Parva: Chapter 275

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೫

ನಾರದ-ಸಮಂಗ ಸಂವಾದ

ಸಮಂಗನು ನಾರದನಿಗೆ ತನ್ನ ಶೋಕರಹಿತ ಸ್ಥಿತಿಯನ್ನು ವರ್ಣಿಸಿದುದು (1-21).

12275001 ಯುಧಿಷ್ಠಿರ ಉವಾಚ|

12275001a ಶೋಕಾದ್ದುಃಖಾಚ್ಚ ಮೃತ್ಯೋಶ್ಚ ತ್ರಸ್ಯಂತಿ ಪ್ರಾಣಿನಃ ಸದಾ|

12275001c ಉಭಯಂ ಮೇ ಯಥಾ ನ ಸ್ಯಾತ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ್! ಪ್ರಾಣಿಗಳು ಸದಾ ಶೋಕದುಃಖ ಮತ್ತು ಮೃತ್ಯುಗಳಿಗೆ ಭಯಪಡುತ್ತವೆ. ಇವೆರಡರ ಭಯವೂ ಇಲ್ಲವಂತಾಗಲು ಏನು ಮಾಡಬೇಕು ಎನ್ನುವುದನ್ನು ಹೇಳು.”

12275002 ಭೀಷ್ಮ ಉವಾಚ|

12275002a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್|

12275002c ನಾರದಸ್ಯ ಚ ಸಂವಾದಂ ಸಮಂಗಸ್ಯ ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಸಮಂಗನೊಂದಿಗೆ ನಾರದನ ಸಂವಾದವನ್ನು ಉದಾಹರಿಸುತ್ತಾರೆ.

12275003 ನಾರದ ಉವಾಚ|

12275003a ಉರಸೇವ ಪ್ರಣಮಸೇ ಬಾಹುಭ್ಯಾಂ ತರಸೀವ ಚ|

12275003c ಸಂಪ್ರಹೃಷ್ಟಮನಾ ನಿತ್ಯಂ ವಿಶೋಕ ಇವ ಲಕ್ಷ್ಯಸೇ||

ನಾರದನು ಹೇಳಿದನು: “ಇತರರು ತಲೆಬಾಗಿ ನಮಸ್ಕರಿಸಿದರೆ ನೀನು ದೀರ್ಘದಂಡನಾಗಿ ನಮಸ್ಕರಿಸುತ್ತೀಯೆ. ಯಾರ ಸಹಾಯವೂ ಇಲ್ಲದೇ ನಿನ್ನ ಬಾಹುಗಳಿಂದಲೇ ಭವಸಾಗರವನ್ನು ಈಜುತ್ತಿರುವಂತೆ ಕಾಣುತ್ತೀಯೆ. ನಿತ್ಯವೂ ಸಂಪ್ರಹೃಷ್ಟ ಮನಸ್ಕನಾಗಿರುವ ನೀನು ಶೋಕವೇ ಇಲ್ಲದವನಂತೆ ಕಾಣುತ್ತೀಯೆ.

12275004a ಉದ್ವೇಗಂ ನೇಹ ತೇ ಕಿಂ ಚಿತ್ಸುಸೂಕ್ಷ್ಮಮಪಿ ಲಕ್ಷಯೇ|

12275004c ನಿತ್ಯತೃಪ್ತ ಇವ ಸ್ವಸ್ಥೋ ಬಾಲವಚ್ಚ ವಿಚೇಷ್ಟಸೇ||

ನಿನ್ನಲ್ಲಿ ಸೂಕ್ಷ್ಮವಾಗಿಯೂ ಯಾವ ಉದ್ವೇಗವೂ ಇಲ್ಲದಿರುವುದು ಕಾಣುತ್ತದೆ. ನಿತ್ಯತೃಪ್ತನಾಗಿ ಸ್ವಸ್ಥನಾಗಿರುವೆ. ಬಾಲಕನಂತೆ ವ್ಯವಹರಿಸುತ್ತಿದ್ದೀಯೆ.”

12275005 ಸಮಂಗ ಉವಾಚ|

12275005a ಭೂತಂ ಭವ್ಯಂ ಭವಿಷ್ಯಚ್ಚ ಸರ್ವಂ ಸತ್ತ್ವೇಷು ಮಾನದ|

12275005c ತೇಷಾಂ ತತ್ತ್ವಾನಿ ಜಾನಾಮಿ ತತೋ ನ ವಿಮನಾ ಹ್ಯಹಮ್||

ಸಮಂಗನು ಹೇಳಿದನು: “ಮಾನದ! ನಾನು ಸರ್ವಸತ್ತ್ವಗಳಲ್ಲಿರುವ ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳನ್ನು ಮತ್ತು ಅವುಗಳ ತತ್ತ್ವಗಳನ್ನೂ ತಿಳಿದಿದ್ದೇನೆ. ಆದುದರಿಂದ ನಾನು ವಿಮನಸ್ಕನಾಗಿಲ್ಲ.

12275006a ಉಪಕ್ರಮಾನಹಂ ವೇದ ಪುನರೇವ ಫಲೋದಯಾನ್|

12275006c ಲೋಕೇ ಫಲಾನಿ ಚಿತ್ರಾಣಿ ತತೋ ನ ವಿಮನಾ ಹ್ಯಹಮ್||

ಕರ್ಮಗಳ ಉಪಕ್ರಮಗಳನ್ನೂ ಪುನಃ ಅವುಗಳಿಂದಾಗುವ ಫಲಗಳನ್ನೂ, ಲೋಕದಲ್ಲಿ ಉಂಟಾಗುವ ವಿಚಿತ್ರ ಕರ್ಮಫಲಗಳನ್ನೂ ತಿಳಿದಿದ್ದೇನೆ. ಆದುದರಿಂದ ನಾನು ವಿಮನಸ್ಕನಾಗಿಲ್ಲ.

12275007a ಅಗಾಧಾಶ್ಚಾಪ್ರತಿಷ್ಠಾಶ್ಚ ಗತಿಮಂತಶ್ಚ ನಾರದ|

12275007c ಅಂಧಾ ಜಡಾಶ್ಚ ಜೀವಂತಿ ಪಶ್ಯಾಸ್ಮಾನಪಿ ಜೀವತಃ||

ನಾರದ! ಅಗಾಧ ಜ್ಞಾನವುಳ್ಳವರೂ, ಅಪ್ರತಿಷ್ಠರೂ, ಗತಿಮಂತರೂ, ಅಂಧರೂ, ಜಡರೂ ಜೀವಿಸುತ್ತಿರುವುದನ್ನು ನೋಡಿ ನಾನೂ ಕೂಡ ಜೀವಿಸುತ್ತಿದ್ದೇನೆ.

12275008a ವಿಹಿತೇನೈವ ಜೀವಂತಿ ಅರೋಗಾಂಗಾ ದಿವೌಕಸಃ|

12275008c ಬಲವಂತೋಽಬಲಾಶ್ಚೈವ ತದ್ವದಸ್ಮಾನ್ಸಭಾಜಯ||

ಅರೋಗಾಂಗರಾದ ದೇವತೆಗಳು, ಬಲವಂತರು ಮತ್ತು ಅಬಲರೂ ಕೂಡ ತಮ್ಮ ತಮ್ಮ ಪ್ರಾರಬ್ಧಕರ್ಮಗಳಿಗನುಸಾರವಾಗಿ ಜೀವಿಸುತ್ತಾರೆ. ನಾನೂ ಕೂಡ ನನ್ನ ಭಾಗದಲ್ಲಿಷ್ಟಿರುವುದೋ ಅಷ್ಟರಲ್ಲೇ ಜೀವಿಸುತ್ತಿದ್ದೇನೆ.

12275009a ಸಹಸ್ರಿಣಶ್ಚ ಜೀವಂತಿ ಜೀವಂತಿ ಶತಿನಸ್ತಥಾ|

12275009c ಶಾಕೇನ ಚಾನ್ಯೇ ಜೀವಂತಿ ಪಶ್ಯಾಸ್ಮಾನಪಿ ಜೀವತಃ||

ಸಾವಿರವಿರುವವರೂ ಜೀವಿಸುತ್ತಾರೆ. ನೂರಿರುವವರೂ ಜೀವಿಸುತ್ತಾರೆ. ಅನ್ಯರು ಕೇವಲ ಗೆಡ್ಡೆ-ಗೆಣಸುಗಳಿಂದ ಜೀವಿಸುತ್ತಾರೆ. ಅದೇ ರೀತಿ ನಾನೂ ಜೀವಿಸುತ್ತಿರುವುದನ್ನು ನೋಡು.

12275010a ಯದಾ ನ ಶೋಚೇಮಹಿ ಕಿಂ ನು ನ ಸ್ಯಾದ್

ಧರ್ಮೇಣ ವಾ ನಾರದ ಕರ್ಮಣಾ ವಾ|

12275010c ಕೃತಾಂತವಶ್ಯಾನಿ ಯದಾ ಸುಖಾನಿ

ದುಃಖಾನಿ ವಾ ಯನ್ನ ವಿಧರ್ಷಯಂತಿ||

ನಾರದ! ಶೋಕವೇ ಇಲ್ಲದಿರುವಾಗ ಧರ್ಮದಿಂದಾಗಲೀ, ಕರ್ಮದಿಂದಾಗಲೀ ನಮಗೇನು ಪ್ರಯೋಜನ? ಸುಖ-ದುಃಖಗಳು ಕೃತಾಂತ ಕಾಲನ ಅಧೀನವಾಗಿರುವಾಗ ಅವುಗಳಿಗೆ ಏಕೆ ಭಯಪಡಬೇಕು?

12275011a ಯಸ್ಮೈ ಪ್ರಜ್ಞಾಂ ಕಥಯಂತೇ ಮನುಷ್ಯಾಃ

ಪ್ರಜ್ಞಾಮೂಲೋ ಹೀಂದ್ರಿಯಾಣಾಂ ಪ್ರಸಾದಃ|

12275011c ಮುಹ್ಯಂತಿ ಶೋಚಂತಿ ಯದೇಂದ್ರಿಯಾಣಿ

ಪ್ರಜ್ಞಾಲಾಭೋ ನಾಸ್ತಿ ಮೂಢೇಂದ್ರಿಯಸ್ಯ||

ಯಾವುದನ್ನು ಮನುಷ್ಯರು ಪ್ರಜ್ಞೆಯೆಂದು ಕರೆಯುತ್ತಾರೋ ಅದೇ ಪ್ರಜ್ಞೆಯೇ ಇಂದ್ರಿಯಗಳ ಪ್ರಸನ್ನತೆಗೆ ಮೂಲವಾಗಿದೆ. ಅದಿಲ್ಲದಿದ್ದರೆ ಇಂದ್ರಿಯಗಳು ಮೋಹಗೊಳ್ಳುತ್ತವೆ ಮತ್ತು ಶೋಕಿಸುತ್ತವೆ. ಮೂಢ ಇಂದ್ರಿಯಗಳುಳ್ಳವನಿಗೆ ಪ್ರಜ್ಞಾಲಾಭವಾಗುವುದಿಲ್ಲ.

12275012a ಮೂಢಸ್ಯ ದರ್ಪಃ ಸ ಪುನರ್ಮೋಹ ಏವ

ಮೂಢಸ್ಯ ನಾಯಂ ನ ಪರೋಽಸ್ತಿ ಲೋಕಃ|

12275012c ನ ಹ್ಯೇವ ದುಃಖಾನಿ ಸದಾ ಭವಂತಿ

ಸುಖಸ್ಯ ವಾ ನಿತ್ಯಶೋ ಲಾಭ ಏವ||

ಮೂಢನಿಗೆ ದರ್ಪವುಂಟಾಗುತ್ತದೆ ಮತ್ತು ಪುನಃ ಅದೇ ಮೋಹವಾಗುತ್ತದೆ. ಮೂಢನಿಗೆ ಇಲ್ಲಿ ಮತ್ತು ಪರಲೋಕದಲ್ಲಿ ಸುಖವಿಲ್ಲ. ಯಾರಿಗೂ ಸದಾ ದುಃಖವುಂಟಾಗುವುದಿಲ್ಲ. ಯಾರಿಗೂ ನಿತ್ಯವೂ ಸುಖವೂ ದೊರಕುವುದಿಲ್ಲ.

12275013a ಭಾವಾತ್ಮಕಂ ಸಂಪರಿವರ್ತಮಾನಂ

ನ ಮಾದೃಶಃ ಸಂಜ್ವರಂ ಜಾತು ಕುರ್ಯಾತ್|

12275013c ಇಷ್ಟಾನ್ ಭೋಗಾನ್ನಾನುರುಧ್ಯೇತ್ಸುಖಂ ವಾ

ನ ಚಿಂತಯೇದ್ದುಃಖಮಭ್ಯಾಗತಂ ವಾ||

ಸಂಸಾರವು ಸತತವೂ ಪರಿವರ್ತಿತವಾಗುತ್ತಿರುವುದನ್ನು ನೋಡುತ್ತಿರುವ ನನ್ನಂತವನು ಸಂತಾಪಪಡಬಾರದು. ಇಷ್ಟ ಭೋಗಗಳ ಅಥವಾ ಸುಖದ ಹಿಂದೆ ಹೋಗುವುದಿಲ್ಲ. ಅಥವಾ ದುಃಖವೇ ಬಂದರೂ ಚಿಂತಿಸುವುದಿಲ್ಲ.

12275014a ಸಮಾಹಿತೋ ನ ಸ್ಪೃಹಯೇತ್ಪರೇಷಾಂ

ನಾನಾಗತಂ ನಾಭಿನಂದೇತ ಲಾಭಮ್|

12275014c ನ ಚಾಪಿ ಹೃಷ್ಯೇದ್ವಿಪುಲೇಽರ್ಥಲಾಭೇ

ತಥಾರ್ಥನಾಶೇ ಚ ನ ವೈ ವಿಷೀದೇತ್||

ಸಮಾಹಿತನಾಗಿರುವವನು ಇತರರ ಐಶ್ವರ್ಯಕ್ಕೆ ಆಸೆಪಡಬಾರದು. ಮುಂದಾಗುವ ಲಾಭದ ಕುರಿತು ಸಂತೋಷಪಡಬಾರದು. ವಿಪುಲ ಅರ್ಥಲಾಭವಾದರೂ ಹರ್ಷಪಡಬಾರದು. ಮತ್ತು ಅರ್ಥನಾಶವಾದರೂ ವಿಷಾದಿಸಬಾರದು.

12275015a ನ ಬಾಂಧವಾ ನ ಚ ವಿತ್ತಂ ನ ಕೌಲೀ

ನ ಚ ಶ್ರುತಂ ನ ಚ ಮಂತ್ರಾ ನ ವೀರ್ಯಮ್|

12275015c ದುಃಖಾತ್ತ್ರಾತುಂ ಸರ್ವ ಏವೋತ್ಸಹಂತೇ

ಪರತ್ರ ಶೀಲೇ ನ ತು ಯಾಂತಿ ಶಾಂತಿಮ್||

ಬಾಂಧವರಾಗಲೀ, ವಿತ್ತವಾಗಲೀ, ಉತ್ತಮ ಕುಲವಾಗಲೀ, ವಿದ್ಯೆಯಾಗಲೀ, ಮಂತ್ರಗಳಾಗಲೀ ಅಥವಾ ವೀರ್ಯವಾಗಲೀ – ಯಾವುದೂ ಅಥವಾ ಎಲ್ಲ ಸೇರಿಯೂ – ದುಃಖದಿಂದ ಪಾರುಮಾಡಲು ಶಕ್ಯವಿಲ್ಲ. ಆದರೆ ಶೀಲವೊಂದರಿಂದಲೇ ಪರಲೋಕದಲ್ಲಿ ಶಾಂತಿಯನ್ನು ಹೊಂದಬಹುದು.

12275016a ನಾಸ್ತಿ ಬುದ್ಧಿರಯುಕ್ತಸ್ಯ ನಾಯೋಗಾದ್ವಿದ್ಯತೇ ಸುಖಮ್|

12275016c ಧೃತಿಶ್ಚ ದುಃಖತ್ಯಾಗಶ್ಚಾಪ್ಯುಭಯಂ ನಃ ಸುಖೋದಯಮ್||

ಯೋಗವಿಲ್ಲದಿರುವವನಿಗೆ ಬುದ್ಧಿಯಿರುವುದಿಲ್ಲ. ಯೋಗವಿಲ್ಲದೇ ಸುಖವೂ ಇಲ್ಲ. ಧೃತಿ ಮತ್ತು ದುಃಖತ್ಯಾಗ ಈ ಎರಡೂ ಸುಖವನ್ನುಂಟುಮಾಡುತ್ತವೆ.

12275017a ಪ್ರಿಯಂ ಹಿ ಹರ್ಷಜನನಂ ಹರ್ಷ ಉತ್ಸೇಕವರ್ಧನಃ|

12275017c ಉತ್ಸೇಕೋ ನರಕಾಯೈವ ತಸ್ಮಾತ್ತಂ ಸಂತ್ಯಜಾಮ್ಯಹಮ್||

ಪ್ರಿಯವಾದುದು ದೊರೆತಾಗ ಹರ್ಷವುಂಟಾಗುತ್ತದೆ. ಹರ್ಷವು ಅಭಿಮಾನವನ್ನು ಹೆಚ್ಚಿಸುತ್ತದೆ. ಅಭಿಮಾನವೇ ನರಕಕ್ಕೆ ಒಯ್ಯುತ್ತದೆ. ಆದುದರಿಂದ ನಾನು ಅವೆಲ್ಲವನ್ನೂ ತ್ಯಜಿಸಿದ್ದೇನೆ.

12275018a ಏತಾನ್ ಶೋಕಭಯೋತ್ಸೇಕಾನ್ಮೋಹನಾನ್ಸುಖದುಃಖಯೋಃ|

12275018c ಪಶ್ಯಾಮಿ ಸಾಕ್ಷಿವಲ್ಲೋಕೇ ದೇಹಸ್ಯಾಸ್ಯ ವಿಚೇಷ್ಟನಾತ್||

ಈ ಶೋಕ-ಭಯ-ಅಭಿಮಾನಗಳು ಸುಖ-ದುಃಖಗಳಲ್ಲಿ ಸಿಲುಕಿಸಿ ವಿಮೋಹಗೊಳಿಸುತ್ತವೆ. ಆದುದರಿಂದ, ಎಲ್ಲಿಯವರೆಗೆ ಈ ದೇಹದಲ್ಲಿ ಚಲನೆಯಿದೆಯೋ ಅಲ್ಲಿಯವರೆಗೆ ನಾನು ಲೋಕವನ್ನು ಸಾಕ್ಷಿಯಾಗಿ ನೋಡುತ್ತಿರುತ್ತೇನೆ.

12275019a ಅರ್ಥಕಾಮೌ ಪರಿತ್ಯಜ್ಯ ವಿಶೋಕೋ ವಿಗತಜ್ವರಃ|

12275019c ತೃಷ್ಣಾಮೋಹೌ ತು ಸಂತ್ಯಜ್ಯ ಚರಾಮಿ ಪೃಥಿವೀಮಿಮಾಮ್||

ಅರ್ಥ-ಕಾಮಗಳನ್ನು ಪರಿತ್ಯಜಿಸಿ ತೃಷ್ಣೆ-ಮೋಹಗಳನ್ನು ಸಂಪೂರ್ಣವಾಗಿ ತ್ಯಜಿಸಿ ವಿಶೋಕನೂ ವಿಗತಜ್ವರನೂ ಆಗಿ ಈ ಪೃಥ್ವಿಯಲ್ಲಿ ಸಂಚರಿಸುತ್ತೇನೆ.

12275020a ನ ಮೃತ್ಯುತೋ ನ ಚಾಧರ್ಮಾನ್ನ ಲೋಭಾನ್ನ ಕುತಶ್ಚನ|

12275020c ಪೀತಾಮೃತಸ್ಯೇವಾತ್ಯಂತಮಿಹ ಚಾಮುತ್ರ ವಾ ಭಯಮ್||

ಅಮೃತವನ್ನೇ ಕುಡಿದಿದ್ದೇನೋ ಎನ್ನುವಂತೆ ನಾನು ಇಲ್ಲಾಗಲೀ ಅಲ್ಲಾಗಲೀ ಮೃತ್ಯು, ಅಧರ್ಮ ಮತ್ತು ಲೋಭಗಳಿಗೆ ಎಂದೂ ಭಯಪಡುವುದಿಲ್ಲ.

12275021a ಏತದ್ಬ್ರಹ್ಮನ್ವಿಜಾನಾಮಿ ಮಹತ್ಕೃತ್ವಾ ತಪೋಽವ್ಯಯಮ್|

12275021c ತೇನ ನಾರದ ಸಂಪ್ರಾಪ್ತೋ ನ ಮಾಂ ಶೋಕಃ ಪ್ರಬಾಧತೇ||

ನಾರದ! ಬ್ರಹ್ಮನ್! ಮಹಾ ಅವ್ಯಯ ತಪಸ್ಸನ್ನಾಚರಿಸಿ ನಾನು ಇದನ್ನು ತಿಳಿದುಕೊಂಡಿದ್ದೇನೆ. ಆದುದರಿಂದ ಶೋಕವನ್ನು ಹೊಂದಿದರೂ ಅದು ನನ್ನನ್ನು ಬಾಧಿಸುವುದಿಲ್ಲ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಸಮಂಗನಾರದಸಂವಾದೇ ಪಂಚಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಸಮಂಗನಾರದಸಂವಾದ ಎನ್ನುವ ಇನ್ನೂರಾಎಪ್ಪತ್ತೈದನೇ ಅಧ್ಯಾಯವು.

Comments are closed.