Shanti Parva: Chapter 274

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೪

ಜ್ವರೋತ್ಪತ್ತಿ

ಶಿವನು ದಕ್ಷಯಜ್ಞವನ್ನು ಧ್ವಂಸಗೊಳಿಸಿದುದು; ಶಿವನ ಕ್ರೋಧದಿಂದ ಜ್ವರದ ಉತ್ಪತ್ತಿ; ಜ್ವರದ ವಿವಿಧ ರೂಪಗಳು (1-60).

12274001 ಯುಧಿಷ್ಠಿರ ಉವಾಚ|

12274001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ|

12274001c ಅಸ್ತಿ ವೃತ್ರವಧಾದೇವ ವಿವಕ್ಷಾ ಮಮ ಜಾಯತೇ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಈ ವೃತ್ರವಧೆಯ ವಿಷಯದಲ್ಲಿ ಇನ್ನೂ ಕೇಳಲು ಬಯಸುತ್ತೇನೆ.

12274002a ಜ್ವರೇಣ ಮೋಹಿತೋ ವೃತ್ರಃ ಕಥಿತಸ್ತೇ ಜನಾಧಿಪ|

12274002c ನಿಹತೋ ವಾಸವೇನೇಹ ವಜ್ರೇಣೇತಿ ಮಮಾನಘ||

ಜನಾಧಿಪ! ಅನಘ! ವೃತ್ರನು ಜ್ವರದಿಂದ ಮೋಹಗೊಂಡಿದ್ದಾಗ ವಾಸವನು ಅವನನ್ನು ವಜ್ರದಿಂದ ಸಂಹರಿಸಿದನು ಎಂದು ಹೇಳಿದೆ.

12274003a ಕಥಮೇಷ ಮಹಾಪ್ರಾಜ್ಞ ಜ್ವರಃ ಪ್ರಾದುರಭೂತ್ಕುತಃ|

12274003c ಜ್ವರೋತ್ಪತ್ತಿಂ ನಿಪುಣತಃ ಶ್ರೋತುಮಿಚ್ಚಾಮ್ಯಹಂ ಪ್ರಭೋ||

ಮಹಾಪ್ರಾಜ್ಞ! ಪ್ರಭೋ! ಜ್ವರವು ಹೇಗೆ ಮತ್ತು ಎಲ್ಲಿಂದ ಹುಟ್ಟಿತು? ನಿಪುಣತೆಯಿಂದ ಜ್ವರದ ಉತ್ಪತ್ತಿಯ ಕುರಿತು ಕೇಳ ಬಯಸುತ್ತೇನೆ.”

12274004 ಭೀಷ್ಮ ಉವಾಚ|

12274004a ಶೃಣು ರಾಜನ್ ಜ್ವರಸ್ಯೇಹ ಸಂಭವಂ ಲೋಕವಿಶ್ರುತಮ್|

12274004c ವಿಸ್ತರಂ ಚಾಸ್ಯ ವಕ್ಷ್ಯಾಮಿ ಯಾದೃಶಂ ಚೈವ ಭಾರತ||

ಭೀಷ್ಮನು ಹೇಳಿದನು: “ರಾಜನ್! ಭಾರತ! ಲೋಕವಿಶ್ರುತವಾಗಿರುವ ಈ ಜ್ವರದ ಉತ್ಪತ್ತಿಯ ಕುರಿತು ಕೇಳು. ಅದು ಹೇಗಿತ್ತೋ ಹಾಗೆ ವಿಸ್ತಾರವಾಗಿ ವರ್ಣಿಸುತ್ತೇನೆ.

12274005a ಪುರಾ ಮೇರೋರ್ಮಹಾರಾಜ ಶೃಂಗಂ ತ್ರೈಲೋಕ್ಯವಿಶ್ರುತಮ್|

12274005c ಜ್ಯೋತಿಷ್ಕಂ ನಾಮ ಸಾವಿತ್ರಂ ಸರ್ವರತ್ನವಿಭೂಷಿತಮ್|

12274005e ಅಪ್ರಮೇಯಮನಾಧೃಷ್ಯಂ ಸರ್ವಲೋಕೇಷು ಭಾರತ||

ಮಹಾರಾಜ! ಭಾರತ! ಪೂರ್ವಕಾಲದಲ್ಲಿ ಸೂರ್ಯನಿಗೆ ಸಂಬಂಧಿಸಿದ ತ್ರೈಲೋಕ್ಯವಿಶ್ರುತ, ಸರ್ವರತ್ನವಿಭೂಷಿತ, ಸರ್ವಲೋಕಗಳಲ್ಲಿಯೂ ಅಪ್ರಮೇಯವೂ ಅನಾದೃಷ್ಯವೂ ಆದ ಜ್ಯೋತಿಷ್ಕ ಎಂಬ ಮೇರುವಿನ ಶಿಖರವಿತ್ತು.

12274006a ತತ್ರ ದೇವೋ ಗಿರಿತಟೇ ಹೇಮಧಾತುವಿಭೂಷಿತೇ|

12274006c ಪರ್ಯಂಕ ಇವ ವಿಭ್ರಾಜನ್ನುಪವಿಷ್ಟೋ ಬಭೂವ ಹ||

ಹೇಮಧಾತುವಿಭೂಷಿತವಾದ ಆ ಗಿರಿತಟದಲ್ಲಿ ಕುಳಿತಿದ್ದ ದೇವದೇವ ಶಂಕರನು ಪರ್ಯಂಕದ ಮೇಲೆ ಕುಳಿತಿರುವಂತೆಯೇ ವಿರಾಜಿಸುತ್ತಿದ್ದನು.

12274007a ಶೈಲರಾಜಸುತಾ ಚಾಸ್ಯ ನಿತ್ಯಂ ಪಾರ್ಶ್ವೇ ಸ್ಥಿತಾ ಬಭೌ|

12274007c ತಥಾ ದೇವಾ ಮಹಾತ್ಮಾನೋ ವಸವಶ್ಚ ಮಹೌಜಸಃ||

12274008a ತಥೈವ ಚ ಮಹಾತ್ಮಾನಾವಶ್ವಿನೌ ಭಿಷಜಾಂ ವರೌ|

12274008c ತಥಾ ವೈಶ್ರವಣೋ ರಾಜಾ ಗುಹ್ಯಕೈರಭಿಸಂವೃತಃ||

12274009a ಯಕ್ಷಾಣಾಮಧಿಪಃ ಶ್ರೀಮಾನ್ಕೈಲಾಸನಿಲಯಃ ಪ್ರಭುಃ|

[1]12274009c ಅಂಗಿರಃಪ್ರಮುಖಾಶ್ಚೈವ ತಥಾ ದೇವರ್ಷಯೋಽಪರೇ||

12274010a ವಿಶ್ವಾವಸುಶ್ಚ ಗಂಧರ್ವಸ್ತಥಾ ನಾರದಪರ್ವತೌ|

12274010c ಅಪ್ಸರೋಗಣಸಂಘಾಶ್ಚ ಸಮಾಜಗ್ಮುರನೇಕಶಃ||

ಶೈಲರಾಜ ಸುತೆಯೂ ನಿತ್ಯವೂ ಅವನ ಪಾರ್ಶ್ವದಲ್ಲಿದ್ದಳು. ಹಾಗೆಯೇ ಅಲ್ಲಿ ಮಹಾತ್ಮದೇವತೆಗಳೂ, ಮಹೌಜಸ ವಸುಗಳೂ, ವೈದ್ಯರಲ್ಲಿ ಶ್ರೇಷ್ಠರಾದ ಮಹಾತ್ಮಾ ಅಶ್ವಿನಿಯರೂ, ಹಾಗೆಯೇ ಗುಹ್ಯಕರಿಂದ ಸಂವೃತನಾಗಿ ಯಕ್ಷರ ಅಧಿಪತಿ ಕೈಲಾಸನಿಲಯ ಪ್ರಭು ಶ್ರೀಮಾನ್ ರಾಜಾ ವೈಶ್ರವಣನೂ, ಅಂಗಿರನೇ ಮೊದಲಾದ ದೇವರ್ಷಿಗಳೂ, ವಿಶ್ವಾವಸು ಗಂಧರ್ವರೂ, ನಾರದ-ಪರ್ವತರೂ, ಅಪ್ಸರಗಣಸಂಘಗಳೂ ಮತ್ತು ಅನೇಕರು ಅಲ್ಲಿ ಸೇರಿದ್ದರು.

12274011a ವವೌ ಶಿವಃ ಸುಖೋ ವಾಯುರ್ನಾನಾಗಂಧವಹಃ ಶುಚಿಃ|

12274011c ಸರ್ವರ್ತುಕುಸುಮೋಪೇತಾಃ ಪುಷ್ಪವಂತೋ ಮಹಾದ್ರುಮಾಃ||

ಅಲ್ಲಿ ನಾನಾಗಂಧಗಳನ್ನು ಹೊತ್ತ ಶುಚಿಯಾದ ಮಂಗಳಕರ ಸುಖವಾಯುವು ಬೀಸುತ್ತಿತ್ತು. ಸರ್ವಋತುಗಳ ಕುಸುಮಗಳನ್ನು ಹೊತ್ತಿದ್ದ ಪುಷ್ಪಭರಿತ ಮಹಾವೃಕ್ಷಗಳಿದ್ದವು.

12274012a ತಥಾ ವಿದ್ಯಾಧರಾಶ್ಚೈವ ಸಿದ್ಧಾಶ್ಚೈವ ತಪೋಧನಾಃ|

12274012c ಮಹಾದೇವಂ ಪಶುಪತಿಂ ಪರ್ಯುಪಾಸಂತ ಭಾರತ||

ಭಾರತ! ಹಾಗೆಯೇ ವಿದ್ಯಾಧರರೂ ಮತ್ತು ತಪೋಧನ ಸಿದ್ಧರೂ ಮಹಾದೇವ ಪಶುಪತಿಯನ್ನು ಉಪಾಸಿಸುತ್ತಿದ್ದರು.

12274013a ಭೂತಾನಿ ಚ ಮಹಾರಾಜ ನಾನಾರೂಪಧರಾಣ್ಯಥ|

12274013c ರಾಕ್ಷಸಾಶ್ಚ ಮಹಾರೌದ್ರಾಃ ಪಿಶಾಚಾಶ್ಚ ಮಹಾಬಲಾಃ||

12274014a ಬಹುರೂಪಧರಾ ಹೃಷ್ಟಾ ನಾನಾಪ್ರಹರಣೋದ್ಯತಾಃ|

12274014c ದೇವಸ್ಯಾನುಚರಾಸ್ತತ್ರ ತಸ್ಥಿರೇ ಚಾನಲೋಪಮಾಃ||

ಮಹಾರಾಜ! ದೇವನ ಅಗ್ನಿಸ್ವರೂಪ ಅನುಚರರಾದ ನಾನಾರೂಪಗಳನ್ನು ಧರಿಸಿದ್ದ ಭೂತಗಳೂ, ಮಹಾರೌದ್ರ ರಾಕ್ಷಸರೂ, ಮಹಾಬಲಶಾಲೀ ಬಹುರೂಪಧರ ಪಿಶಾಚರೂ ಅಲ್ಲಿ ಸೇರಿದ್ದರು.

12274015a ನಂದೀ ಚ ಭಗವಾಂಸ್ತತ್ರ ದೇವಸ್ಯಾನುಮತೇ ಸ್ಥಿತಃ|

12274015c ಪ್ರಗೃಹ್ಯ ಜ್ವಲಿತಂ ಶೂಲಂ ದೀಪ್ಯಮಾನಂ ಸ್ವತೇಜಸಾ||

ಭಗವಾನ್ ನಂದಿಯೂ ಮಹಾದೇವನ ಆಜ್ಞೆಯಂತೆ ತನ್ನ ತೇಜಸ್ಸಿನಿಂದ ದೇದೀಪ್ಯಮಾನನಾಗಿ ಪ್ರಜ್ವಲಿತ ಶೂಲವನ್ನು ಹಿಡಿದು ಅಲ್ಲಿ ನಿಂತಿದ್ದನು.

12274016a ಗಂಗಾ ಚ ಸರಿತಾಂ ಶ್ರೇಷ್ಠಾ ಸರ್ವತೀರ್ಥಜಲೋದ್ಭವಾ|

12274016c ಪರ್ಯುಪಾಸತ ತಂ ದೇವಂ ರೂಪಿಣೀ ಕುರುನಂದನ||

ಕುರುನಂದನ! ಸರಿತೆಯರಲ್ಲಿ ಶ್ರೇಷ್ಠೆ ಸರ್ವತೀರ್ಥಜಲೋದ್ಭವೆ ರೂಪಿಣೀ ಗಂಗೆಯೂ ಕೂಡ ಆ ದೇವನನ್ನು ಪೂಜಿಸುತ್ತಿದ್ದಳು.

12274017a ಏವಂ ಸ ಭಗವಾಂಸ್ತತ್ರ ಪೂಜ್ಯಮಾನಃ ಸುರರ್ಷಿಭಿಃ|

12274017c ದೇವೈಶ್ಚ ಸುಮಹಾಭಾಗೈರ್ಮಹಾದೇವೋ ವ್ಯತಿಷ್ಠತ||

ಹೀಗೆ ಮಹಾಭಾಗ ಸುರರ್ಷಿಗಳು ಮತ್ತು ದೇವತೆಗಳಿಂದ ಪೂಜಿತನಾಗಿ ಭಗವಾನ್ ಮಹಾದೇವನು ಅಲ್ಲಿ ನೆಲೆಸಿದ್ದನು.

12274018a ಕಸ್ಯ ಚಿತ್ತ್ವಥ ಕಾಲಸ್ಯ ದಕ್ಷೋ ನಾಮ ಪ್ರಜಾಪತಿಃ|

12274018c ಪೂರ್ವೋಕ್ತೇನ ವಿಧಾನೇನ ಯಕ್ಷ್ಯಮಾಣೋಽನ್ವಪದ್ಯತ||

ಸ್ವಲ್ಪ ಸಮಯದ ನಂತರ ದಕ್ಷ ಎಂಬ ಹೆಸರಿನ ಪ್ರಜಾಪತಿಯು ಪೂರ್ವೋಕ್ತ ವಿಧಾನಗಳಿಂದ ಯಜ್ಞಮಾಡಲು ಪ್ರಾರಂಭಿಸಿದನು.

12274019a ತತಸ್ತಸ್ಯ ಮಖಂ ದೇವಾಃ ಸರ್ವೇ ಶಕ್ರಪುರೋಗಮಾಃ|

12274019c ಗಮನಾಯ ಸಮಾಗಮ್ಯ ಬುದ್ಧಿಮಾಪೇದಿರೇ ತದಾ||

ಆಗ ಶಕ್ರನೇ ಮೊದಲಾದ ಸರ್ವ ದೇವತೆಗಳೂ ಸೇರಿ ಅವನ ಯಜ್ಞಕ್ಕೆ ಹೋಗಲು ನಿಶ್ಚಯಿಸಿದರು.

12274020a ತೇ ವಿಮಾನೈರ್ಮಹಾತ್ಮಾನೋ ಜ್ವಲಿತೈರ್ಜ್ವಲನಪ್ರಭಾಃ|

12274020c ದೇವಸ್ಯಾನುಮತೇಽಗಚ್ಚನ್ಗಂಗಾದ್ವಾರಮಿತಿ ಶ್ರುತಿಃ||

ಆ ಮಹಾತ್ಮರು ದೇವದೇವನ ಅನುಮತಿಯನ್ನು ಪಡೆದು ಅಗ್ನಿ-ಸೂರ್ಯರ ಪ್ರಭೆಯಿಂದ ಬೆಳಗುತ್ತಿದ್ದ ವಿಮಾನಗಳಲ್ಲಿ ಗಂಗಾದ್ವಾರಕ್ಕೆ ಹೋದರು ಎಂದು ಕೇಳಿದ್ದೇವೆ.

12274021a ಪ್ರಸ್ಥಿತಾ ದೇವತಾ ದೃಷ್ಟ್ವಾ ಶೈಲರಾಜಸುತಾ ತದಾ|

12274021c ಉವಾಚ ವಚನಂ ಸಾಧ್ವೀ ದೇವಂ ಪಶುಪತಿಂ ಪತಿಮ್||

ದೇವತೆಗಳು ಹೊರಟಿದ್ದುದನ್ನು ನೋಡಿ ಶೈಲರಾಜಸುತೆ ಸಾಧ್ವಿಯು ಪತಿ ದೇವ ಪಶುಪತಿಗೆ ಹೀಗೆ ಹೇಳಿದಳು:

12274022a ಭಗವನ್ಕ್ವ ನು ಯಾಂತ್ಯೇತೇ ದೇವಾಃ ಶಕ್ರಪುರೋಗಮಾಃ|

12274022c ಬ್ರೂಹಿ ತತ್ತ್ವೇನ ತತ್ತ್ವಜ್ಞ ಸಂಶಯೋ ಮೇ ಮಹಾನಯಮ್||

“ಭಗವನ್! ಶಕ್ರಾದಿ ದೇವತೆಗಳು ಎಲ್ಲಿಗೆ ಹೋಗುತ್ತಿದ್ದಾರೆ? ತತ್ತ್ವಜ್ಞ! ನಿಜವಾಗಿ ಹೇಳು. ನನ್ನಲ್ಲಿ ಈ ಮಹಾ ಸಂಶಯವುಂಟಾಗಿದೆ.”

12274023 ಮಹೇಶ್ವರ ಉವಾಚ|

12274023a ದಕ್ಷೋ ನಾಮ ಮಹಾಭಾಗೇ ಪ್ರಜಾನಾಂ ಪತಿರುತ್ತಮಃ|

12274023c ಹಯಮೇಧೇನ ಯಜತೇ ತತ್ರ ಯಾಂತಿ ದಿವೌಕಸಃ||

ಮಹೇಶ್ವರನು ಹೇಳಿದನು: “ಮಹಾಭಾಗೇ! ದಕ್ಷನೆಂಬ ಹೆಸರಿನ ಶ್ರೇಷ್ಠ ಪ್ರಜಾಪತಿಯು ಅಶ್ವಮೇಧವನ್ನು ನಡೆಸುತ್ತಿದ್ದಾನೆ. ದಿವೌಕಸರು ಅಲ್ಲಿಗೆ ಹೋಗುತ್ತಿದ್ದಾರೆ.”

12274024 ಉಮಾ ಉವಾಚ|

12274024a ಯಜ್ಞಮೇತಂ ಮಹಾಭಾಗ ಕಿಮರ್ಥಂ ನಾಭಿಗಚ್ಚಸಿ|

12274024c ಕೇನ ವಾ ಪ್ರತಿಷೇಧೇನ ಗಮನಂ ತೇ ನ ವಿದ್ಯತೇ||

ಉಮೆಯು ಹೇಳಿದಳು: “ಮಹಾಭಾಗ! ಈ ಯಜ್ಞಕ್ಕೆ ನೀನೇಕೆ ಹೋಗುತ್ತಿಲ್ಲ? ಅಥವಾ ಯಾವ ಪ್ರತಿಬಂಧದ ಕಾರಣದಿಂದ ನೀನು ಅಲ್ಲಿಗೆ ಗಮನಿಸುತ್ತಿಲ್ಲ?”

12274025 ಮಹೇಶ್ವರ ಉವಾಚ|

12274025a ಸುರೈರೇವ ಮಹಾಭಾಗೇ ಸರ್ವಮೇತದನುಷ್ಠಿತಮ್|

12274025c ಯಜ್ಞೇಷು ಸರ್ವೇಷು ಮಮ ನ ಭಾಗ ಉಪಕಲ್ಪಿತಃ||

ಮಹೇಶ್ವರನು ಹೇಳಿದನು: “ಮಹಾಭಾಗೇ! ಸರ್ವ ಯಜ್ಞಗಳಲ್ಲಿ ನನಗೆ ಭಾಗವನ್ನು ಕಲ್ಪಿಸದೇ ಇರುವುದನ್ನು ಸರ್ವ ಸುರರೇ ಅನುಷ್ಠಾನಮಾಡಿಕೊಂಡು ಬಂದಿದ್ದಾರೆ.

12274026a ಪೂರ್ವೋಪಾಯೋಪಪನ್ನೇನ ಮಾರ್ಗೇಣ ವರವರ್ಣಿನಿ|

12274026c ನ ಮೇ ಸುರಾಃ ಪ್ರಯಚ್ಚಂತಿ ಭಾಗಂ ಯಜ್ಞಸ್ಯ ಧರ್ಮತಃ||

ವರವರ್ಣಿನಿ! ಪೂರ್ವನಿಶ್ಚಿತ ಉಪಾಯಮಾರ್ಗದಂತೆ ಧರ್ಮತಃ ಸುರರು ಯಜ್ಞದಲ್ಲಿ ನನಗೆ ಭಾಗವನ್ನು ನೀಡುತ್ತಿಲ್ಲ.”

12274027 ಉಮಾ ಉವಾಚ|

12274027a ಭಗವನ್ಸರ್ವಭೂತೇಷು ಪ್ರಭವಾಭ್ಯಧಿಕೋ ಗುಣೈಃ|

12274027c ಅಜೇಯಶ್ಚಾಪ್ರಧೃಷ್ಯಶ್ಚ ತೇಜಸಾ ಯಶಸಾ ಶ್ರಿಯಾ||

ಉಮೆಯು ಹೇಳಿದಳು: “ಭಗವನ್! ಸರ್ವಭೂತಗಳಲ್ಲಿಯೂ ನೀನು ಎಲ್ಲರಿಗಿಂತ ಅಧಿಕ ಪ್ರಭಾವಶಾಲಿಯೂ, ಗುಣವಂತನೂ, ಅಜೇಯನೂ, ಅಧೃಷ್ಯನೂ, ತೇಜಸ್ವಿಯೂ, ಯಶಸ್ವಿಯೂ ಮತ್ತು ಶ್ರೀಸಂಪನ್ನನೂ ಆಗಿದ್ದೀಯೆ.

12274028a ಅನೇನ ತೇ ಮಹಾಭಾಗ ಪ್ರತಿಷೇಧೇನ ಭಾಗತಃ|

12274028c ಅತೀವ ದುಃಖಮುತ್ಪನ್ನಂ ವೇಪಥುಶ್ಚ ಮಮಾನಘ||

ಮಹಾಭಾಗ! ಅನಘ! ಹೀಗೆ ನಿನ್ನ ಯಜ್ಞಭಾಗವನ್ನು ನಿಷೇಧಿಸಿದ್ದಾರೆ ಎಂದು ನನಗೆ ಅತೀವ ದುಃಖವಾಗುತ್ತಿದೆ. ನನ್ನ ಶರೀರವೂ ಕಂಪಿಸುತ್ತಿದೆ.””

12274029 ಭೀಷ್ಮ ಉವಾಚ|

12274029a ಏವಮುಕ್ತ್ವಾ ತು ಸಾ ದೇವೀ ದೇವಂ ಪಶುಪತಿಂ ಪತಿಮ್|

12274029c ತೂಷ್ಣೀಂಭೂತಾಭವದ್ರಾಜನ್ ದಹ್ಯಮಾನೇನ ಚೇತಸಾ||

ಭೀಷ್ಮನು ಹೇಳಿದನು: “ರಾಜನ್! ಪತಿ ದೇವ ಪಶುಪತಿಗೆ ಹೀಗೆ ಹೇಳಿ ಚೇತನವೇ ಸುಡುತ್ತಿದ್ದ ದೇವಿಯು ಸುಮ್ಮನಾದಳು.

12274030a ಅಥ ದೇವ್ಯಾ ಮತಂ ಜ್ಞಾತ್ವಾ ಹೃದ್ಗತಂ ಯಚ್ಚಿಕೀರ್ಷಿತಮ್|

12274030c ಸ ಸಮಾಜ್ಞಾಪಯಾಮಾಸ ತಿಷ್ಠ ತ್ವಮಿತಿ ನಂದಿನಮ್||

ದೇವಿಯ ಮತವನ್ನು ತಿಳಿದು ಮತ್ತು ಅವಳು ಏನು ಮಾಡಲು ಬಯಸುತ್ತಿದ್ದಾಳೆ ಎನ್ನುವ ಅವಳ ಹೃದಯದ ಇಂಗಿತವನ್ನು ತಿಳಿದ ಶಂಕರನು ನಂದಿಗೆ “ನೀನು ಇಲ್ಲಿಯೇ ಇರು” ಎಂದು ಆಜ್ಞಾಪಿಸಿದನು.

12274031a ತತೋ ಯೋಗಬಲಂ ಕೃತ್ವಾ ಸರ್ವಯೋಗೇಶ್ವರೇಶ್ವರಃ|

12274031c ತಂ ಯಜ್ಞಂ ಸುಮಹಾತೇಜಾ ಭೀಮೈರನುಚರೈಸ್ತದಾ|

12274031e ಸಹಸಾ ಘಾತಯಾಮಾಸ ದೇವದೇವಃ ಪಿನಾಕಧೃಕ್||

ಅನಂತರ ಸರ್ವಯೋಗೇಶ್ವರೇಶ್ವರ ಪಿನಾಕಧೃಕ್ ಮಹಾತೇಜಸ್ವೀ ದೇವದೇವನು ಯೋಗಬಲವನ್ನಾಶ್ರಯಿಸಿ ತನ್ನ ಭಯಂಕರ ಅನುಚರರೊಂದಿಗೆ ಒಮ್ಮೆಲೇ ಆ ಯಜ್ಞವನ್ನು ಧ್ವಂಸಗೊಳಿಸಿದನು.

12274032a ಕೇ ಚಿನ್ನಾದಾನಮುಂಚಂತ ಕೇ ಚಿದ್ಧಾಸಾಂಶ್ಚ ಚಕ್ರಿರೇ|

12274032c ರುಧಿರೇಣಾಪರೇ ರಾಜಂಸ್ತತ್ರಾಗ್ನಿಂ ಸಮವಾಕಿರನ್||

ರಾಜನ್! ಕೆಲವರು ಸಿಂಹನಾದಗೈಯುತ್ತಿದ್ದರು. ಕೆಲವರು ಅಟ್ಟಹಾಸಗೈಯುತ್ತಿದ್ದರು. ಇನ್ನು ಇತರರು ರಕ್ತದಿಂದ ಅಗ್ನಿಯನ್ನು ಆರಿಸತೊಡಗಿದ್ದರು.

12274033a ಕೇ ಚಿದ್ಯೂಪಾನ್ಸಮುತ್ಪಾಟ್ಯ ಬಭ್ರಮುರ್ವಿಕೃತಾನನಾಃ|

12274033c ಆಸ್ಯೈರನ್ಯೇ ಚಾಗ್ರಸಂತ ತಥೈವ ಪರಿಚಾರಕಾನ್||

ಕೆಲವು ವಿಕೃತಾನನರು ಯೂಪಗಳನ್ನು ಕಿತ್ತು ತಿರುಗುತ್ತಿದ್ದರು. ಅನ್ಯರು ಪರಿಚಾರಕರನ್ನು ನುಂಗಿಹಾಕುತ್ತಿದ್ದರು.

12274034a ತತಃ ಸ ಯಜ್ಞೋ ನೃಪತೇ ವಧ್ಯಮಾನಃ ಸಮಂತತಃ|

12274034c ಆಸ್ಥಾಯ ಮೃಗರೂಪಂ ವೈ ಖಮೇವಾಭ್ಯಪತತ್ತದಾ||

ನೃಪತೇ! ಎಲ್ಲಕಡೆಗಳಿಂದಲೂ ಆಘಾತಗೊಳ್ಳುತ್ತಿದ್ದಾಗ ಆ ಯಜ್ಞವು ಮೃಗರೂಪವನ್ನು ಧರಿಸಿ ಆಕಾಶವನ್ನೇರಿ ಓಡತೊಡಗಿತು.

12274035a ತಂ ತು ಯಜ್ಞಂ ತಥಾರೂಪಂ ಗಚ್ಚಂತಮುಪಲಭ್ಯ ಸಃ|

12274035c ಧನುರಾದಾಯ ಬಾಣಂ ಚ ತದಾನ್ವಸರತ ಪ್ರಭುಃ||

ಅಂಥಹ ರೂಪತಾಳಿ ಹೋಗುತ್ತಿದ್ದ ಯಜ್ಞವನ್ನು ಪ್ರಭುವು ಧನುರ್ಬಾಣಗಳನ್ನು ಹಿಡಿದು ಹಿಂಬಾಲಿಸಿ ಹೋದನು.

12274036a ತತಸ್ತಸ್ಯ ಸುರೇಶಸ್ಯ ಕ್ರೋಧಾದಮಿತತೇಜಸಃ|

12274036c ಲಲಾಟಾತ್ಪ್ರಸೃತೋ ಘೋರಃ ಸ್ವೇದಬಿಂದುರ್ಬಭೂವ ಹ||

ಆಗ ಕ್ರೋಧಿತನಾಗಿದ್ದ ಅಮಿತ ತೇಜಸ್ವೀ ಸುರೇಶನ ಹಣೆಯಿಂದ ಘೋರವಾದ ಬೆವರಿನ ಬಿಂದುವು ಹೊರಚಿಮ್ಮಿತು.

12274037a ತಸ್ಮಿನ್ ಪತಿತಮಾತ್ರೇ ತು ಸ್ವೇದಬಿಂದೌ ತಥಾ ಭುವಿ|

12274037c ಪ್ರಾದುರ್ಬಭೂವ ಸುಮಹಾನಗ್ನಿಃ ಕಾಲಾನಲೋಪಮಃ||

ಆ ಬೆವರಿನ ಬಿಂದುವು ಭೂಮಿಯ ಮೇಲೆ ಬೀಳುತ್ತಲೇ ಅದರಿಂದ ಕಾಲಾಗ್ನಿಯಂಥಹ ಮಹಾ ಅಗ್ನಿಯು ಪ್ರಾದುರ್ಭವಿಸಿತು.

12274038a ತತ್ರ ಚಾಜಾಯತ ತದಾ ಪುರುಷಃ ಪುರುಷರ್ಷಭ|

12274038c ಹ್ರಸ್ವೋಽತಿಮಾತ್ರರಕ್ತಾಕ್ಷೋ ಹರಿಶ್ಮಶ್ರುರ್ವಿಭೀಷಣಃ||

ಪುರುಷರ್ಷಭ! ಆಗ ಅಲ್ಲಿ ಅತಿ ಕುಳ್ಳನಾಗಿದ್ದ ರಕ್ತಾಕ್ಷನಾಗಿದ್ದ ಕಂದುಬಣ್ಣದ ಮೀಸೆ-ಗಡ್ಡಗಳನ್ನು ಹೊಂದಿದ್ದ ಪುರುಷನು ಹುಟ್ಟಿಕೊಂಡನು.

12274039a ಊರ್ಧ್ವಕೇಶೋಽತಿಲೋಮಾಂಗಃ ಶ್ಯೇನೋಲೂಕಸ್ತಥೈವ ಚ|

12274039c ಕರಾಲಃ ಕೃಷ್ಣವರ್ಣಶ್ಚ ರಕ್ತವಾಸಾಸ್ತಥೈವ ಚ||

ಅವನ ಕೂದಲುಗಳು ಮೇಲ್ಮುಖವಾಗಿದ್ದವು. ಅವನ ಅಂಗಾಂಗಗಳು ಗಿಡುಗನೋ ಅಥವಾ ಗೂಬೆಯೋ ಎನ್ನುವಂತೆ ರೋಮಗಳಿಂದ ಮುಚ್ಚಿಕೊಂಡಿದ್ದವು. ಮುಖವು ಕರಾಲವಾಗಿತ್ತು. ಬಣ್ಣವು ಕಪ್ಪಗಿತ್ತು. ಕೆಂಪು ವಸ್ತ್ರವನ್ನು ಧರಿಸಿದ್ದನು.

12274040a ತಂ ಯಜ್ಞಂ ಸ ಮಹಾಸತ್ತ್ವೋಽದಹತ್ಕಕ್ಷಮಿವಾನಲಃ|

[2]12274040c ದೇವಾಶ್ಚಾಪ್ಯದ್ರವನ್ಸರ್ವೇ ತತೋ ಭೀತಾ ದಿಶೋ ದಶ||

ಆ ಮಹಾಸತ್ತ್ವವು ಯಜ್ಞವನ್ನು ಬೆಂಕಿಯು ಹುಲ್ಲುಮೆದೆಯನ್ನು ಸುಟ್ಟುಹಾಕುವಂತೆ ಸುಟ್ಟು ಭಸ್ಮಮಾಡಿದನು. ಸರ್ವ ದೇವತೆಗಳೂ ಭೀತರಾಗಿ ಹತ್ತೂ ದಿಕ್ಕುಗಳಲ್ಲಿ ಓಡಿಹೋದರು.

12274041a ತೇನ ತಸ್ಮಿನ್ವಿಚರತಾ ಪುರುಷೇಣ ವಿಶಾಂ ಪತೇ|

12274041c ಪೃಥಿವೀ ವ್ಯಚಲದ್ರಾಜನ್ನತೀವ ಭರತರ್ಷಭ||

ವಿಶಾಂಪತೇ! ಭರತರ್ಷಭ! ಆ ಪುರುಷನು ಸಂಚರಿಸುತ್ತಿದ್ದಾಗ ಪೃಥ್ವಿಯು ಅತೀವವಾಗಿ ಕಂಪಿಸತೊಡಗಿತು.

12274042a ಹಾಹಾಭೂತೇ ಪ್ರವೃತ್ತೇ ತು ನಾದೇ ಲೋಕಭಯಂಕರೇ[3]|

12274042c ಪಿತಾಮಹೋ ಮಹಾದೇವಂ ದರ್ಶಯನ್ ಪ್ರತ್ಯಭಾಷತ||

ಲೋಕಭಯಂಕರವಾಗಿ ಅವನು ಸಿಂಹನಾದಗೈಯುತ್ತಿರಲಿ ಹಾಹಾಕಾರವುಂಟಾಯಿತು. ಆಗ ಪಿತಾಮಹನು ಅದನ್ನು ತೋರಿಸುತ್ತಾ ಮಹಾದೇವನಿಗೆ ಇಂತೆಂದನು:

12274043a ಭವತೋಽಪಿ ಸುರಾಃ ಸರ್ವೇ ಭಾಗಂ ದಾಸ್ಯಂತಿ ವೈ ಪ್ರಭೋ|

12274043c ಕ್ರಿಯತಾಂ ಪ್ರತಿಸಂಹಾರಃ ಸರ್ವದೇವೇಶ್ವರ ತ್ವಯಾ||

“ಪ್ರಭೋ! ಸರ್ವದೇವೇಶ್ವರ! ನಿನ್ನ ಕ್ರೋಧವನ್ನು ಹಿಂತೆಗೆದುಕೊಳ್ಳಬೇಕು. ಸುರರೆಲ್ಲರೂ ನಿನಗೂ ಕೂಡ ಯಜ್ಞಭಾಗವನ್ನು ಕೊಡುತ್ತಾರೆ.

12274044a ಇಮಾ ಹಿ ದೇವತಾಃ ಸರ್ವಾ ಋಷಯಶ್ಚ ಪರಂತಪ|

12274044c ತವ ಕ್ರೋಧಾನ್ಮಹಾದೇವ ನ ಶಾಂತಿಮುಪಲೇಭಿರೇ||

ಪರಂತಪ! ಮಹಾದೇವ! ಈ ಎಲ್ಲ ದೇವತೆಗಳೂ ಋಷಿಗಳೂ ನಿನ್ನ ಕ್ರೋಧದಿಂದ ತಪ್ತರಾಗಿ ಶಾಂತಿಯನ್ನು ಪಡೆಯದವರಾಗಿದ್ದಾರೆ.

12274045a ಯಶ್ಚೈಷ ಪುರುಷೋ ಜಾತಃ ಸ್ವೇದಾತ್ತೇ ವಿಬುಧೋತ್ತಮ|

12274045c ಜ್ವರೋ ನಾಮೈಷ ಧರ್ಮಜ್ಞ ಲೋಕೇಷು ಪ್ರಚರಿಷ್ಯತಿ||

ವಿಬುಧೋತ್ತಮ! ಧರ್ಮಜ್ಞ! ನಿನ್ನ ಬೆವರಿನಿಂದ ಹುಟ್ಟಿದ ಈ ಪುರುಷನು ಜ್ವರ ಎಂಬ ಹೆಸರಿನಿಂದ ಲೋಕಗಳಲ್ಲಿ ಸಂಚರಿಸುತ್ತಾನೆ.

12274046a ಏಕೀಭೂತಸ್ಯ ನ ಹ್ಯಸ್ಯ ಧಾರಣೇ ತೇಜಸಃ ಪ್ರಭೋ|

12274046c ಸಮರ್ಥಾ ಸಕಲಾ ಪೃಥ್ವೀ ಬಹುಧಾ ಸೃಜ್ಯತಾಮಯಮ್||

ಪ್ರಭೋ! ಒಂದೇ ಆಗಿರುವ ಇವನ ತೇಜಸ್ಸೆಲ್ಲವನ್ನೂ ಪೃಥ್ವಿಯು ಧರಿಸಿಕೊಳ್ಳಲು ಸಮರ್ಥಳಾಗಿಲ್ಲ. ಆದುದರಿಂದ ಇವನನ್ನು ಅನೇಕ ರೂಪಗಳಲ್ಲಿ ವಿಭಜಿಸಬೇಕು.”

12274047a ಇತ್ಯುಕ್ತೋ ಬ್ರಹ್ಮಣಾ ದೇವೋ ಭಾಗೇ ಚಾಪಿ ಪ್ರಕಲ್ಪಿತೇ|

12274047c ಭಗವಂತಂ ತಥೇತ್ಯಾಹ ಬ್ರಹ್ಮಾಣಮಮಿತೌಜಸಮ್||

ಯಜ್ಞಭಾಗವನ್ನು ಪ್ರಕಲ್ಪಿಸಿ ಬ್ರಹ್ಮನು ಹೀಗೆ ಹೇಳಲು ದೇವನು ಭಗವಂತ ಅಮಿತೌಜಸ ಬ್ರಹ್ಮನಿಗೆ  “ಹಾಗೆಯೇ ಆಗಲಿ!” ಎಂದನು.

12274048a ಪರಾಂ ಚ ಪ್ರೀತಿಮಗಮದುತ್ಸ್ಮಯಂಶ್ಚ ಪಿನಾಕಧೃಕ್|

12274048c ಅವಾಪ ಚ ತದಾ ಭಾಗಂ ಯಥೋಕ್ತಂ ಬ್ರಹ್ಮಣಾ ಭವಃ||

ಪಿನಾಕಧೃಕನು ಆಗ ಪರಮ ಪ್ರೀತನಾದನು ಮತ್ತು ಮುಗುಳ್ನಕ್ಕನು. ಬ್ರಹ್ಮನು ಹೇಳಿದಂತೆ ಭವನು ಯಜ್ಞಭಾಗವನ್ನು ಪಡೆದುಕೊಂಡನು.

12274049a ಜ್ವರಂ ಚ ಸರ್ವಧರ್ಮಜ್ಞೋ ಬಹುಧಾ ವ್ಯಸೃಜತ್ತದಾ|

12274049c ಶಾಂತ್ಯರ್ಥಂ ಸರ್ವಭೂತಾನಾಂ ಶೃಣು ತಚ್ಚಾಪಿ ಪುತ್ರಕ||

ಪುತ್ರಕ! ಸರ್ವಧರ್ಮಜ್ಞನು ಸರ್ವಭೂತಗಳ ಶಾಂತಿಗಾಗಿ ಜ್ವರವನ್ನು ಅನೇಕ ಭಾಗಗಳನ್ನಾಗಿ ವಿಭಜಿಸಿದನು. ಅದರ ಕುರಿತು ಕೇಳು.

12274050a ಶೀರ್ಷಾಭಿತಾಪೋ ನಾಗಾನಾಂ ಪರ್ವತಾನಾಂ ಶಿಲಾಜತುಃ|

12274050c ಅಪಾಂ ತು ನೀಲಿಕಾಂ ವಿದ್ಯಾನ್ನಿರ್ಮೋಕಂ ಭುಜಗೇಷು ಚ||

12274051a ಖೋರಕಃ ಸೌರಭೇಯಾಣಾಮೂಷರಂ ಪೃಥಿವೀತಲೇ|

12274051c ಪಶೂನಾಮಪಿ ಧರ್ಮಜ್ಞ ದೃಷ್ಟಿಪ್ರತ್ಯವರೋಧನಮ್||

ಆನೆಗಳ ಮಸ್ತಕದಲ್ಲಿರುವ ತಾಪ, ಪರ್ವತಗಳಲ್ಲಿರುವ ಕಪ್ಪು ಖನಿಜ, ನೀರಿನಲ್ಲಿ ಬೆಳೆಯುವ ನೀಲಿಗಿಡ, ಸರ್ಪಗಳ ಪೊರೆ, ಎತ್ತು-ಹಸುಗಳಲ್ಲುಂಟಾಗುವ ಖೋರಕವೆಂಬ ಗೊರಸಿನ ರೋಗ, ಚೌಳುಮಣ್ಣಿನ ಪ್ರದೇಶ, ಮತ್ತು ದೃಷ್ಟಿಶಕ್ತಿಗೆ ಪ್ರತಿರೋಧಕವಾಗಿರುವವು – ಇವೆಲ್ಲವೂ ಜ್ವರದ ನಾನಾ ರೂಪಗಳು.

12274052a ರಂಧ್ರಾಗತಮಥಾಶ್ವಾನಾಂ ಶಿಖೋದ್ಭೇದಶ್ಚ ಬರ್ಹಿಣಾಮ್|

12274052c ನೇತ್ರರೋಗಃ ಕೋಕಿಲಾನಾಂ ಜ್ವರಃ ಪ್ರೋಕ್ತೋ ಮಹಾತ್ಮನಾ||

ಕುದುರೆಗಳ ಕುತ್ತಿಗೆಯ ರಂಧ್ರದಿಂದ ಹೊರಬರುವ ಮಾಂಸಖಂಡ, ನವಿಲುಗಳ ಶಿಖೆ, ಕೋಗಿಲೆಗಳ ನೇತ್ರರೋಗ ಇವುಗಳೂ ಜ್ವರವೆಂದೇ ಮಹಾತ್ಮರು ಹೇಳುತ್ತಾರೆ.

12274053a ಅಬ್ಜಾನಾಂ ಪಿತ್ತಭೇದಶ್ಚ ಸರ್ವೇಷಾಮಿತಿ ನಃ ಶ್ರುತಮ್|

12274053c ಶುಕಾನಾಮಪಿ ಸರ್ವೇಷಾಂ ಹಿಕ್ಕಿಕಾ ಪ್ರೋಚ್ಯತೇ ಜ್ವರಃ||

ಎಲ್ಲ ಕುರಿಗಳಿಗೂ ಪಿತ್ತಭೇದವೇ ಜ್ವರವೆಂದು ನಾವು ಕೇಳಿದ್ದೇವೆ. ಸಮಸ್ತ ಗಿಳಿಗಳಿಗೂ ಬಿಕ್ಕಳಿಕೆಯೇ ಜ್ವರವೆಂದು ಹೇಳಿದ್ದಾರೆ.

12274054a ಶಾರ್ದೂಲೇಷ್ವಥ ಧರ್ಮಜ್ಞ ಶ್ರಮೋ ಜ್ವರ ಇಹೋಚ್ಯತೇ|

12274054c ಮಾನುಷೇಷು ತು ಧರ್ಮಜ್ಞ ಜ್ವರೋ ನಾಮೈಷ ವಿಶ್ರುತಃ|

12274054e ಮರಣೇ ಜನ್ಮನಿ ತಥಾ ಮಧ್ಯೇ ಚಾವಿಶತೇ ನರಮ್||

ಧರ್ಮಜ್ಞ! ಶ್ರಮವೇ ಹುಲಿಗಳಿಗೆ ಜ್ವರವೆಂದು ಹೇಳುತ್ತಾರೆ. ಧರ್ಮಜ್ಞ! ಮನುಷ್ಯರಲ್ಲಿ ಇದು ಜ್ವರವೆಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಇದು ಮರಣಕಾಲದಲ್ಲಿ, ಜನ್ಮಕಾಲದಲ್ಲಿ ಮತ್ತು ಮಧ್ಯವಯಸ್ಸಿನಲ್ಲಿ ಮನುಷ್ಯನನ್ನು ಪ್ರವೇಶಿಸುತ್ತದೆ.

12274055a ಏತನ್ಮಾಹೇಶ್ವರಂ ತೇಜೋ ಜ್ವರೋ ನಾಮ ಸುದಾರುಣಃ|

12274055c ನಮಸ್ಯಶ್ಚೈವ ಮಾನ್ಯಶ್ಚ ಸರ್ವಪ್ರಾಣಿಭಿರೀಶ್ವರಃ||

ಮಹೇಶ್ವರನ ತೇಜಸ್ಸಾದ ಈ ಜ್ವರವೆನ್ನುವುದು ಅತ್ಯಂತ ದಾರುಣವಾದುದು. ಸರ್ವಪ್ರಾಣಿಗಳಿಗೂ ಈ ಈಶ್ವರ ಜ್ವರವು ವಂದನೀಯವು ಮತ್ತು ಮಾನನೀಯವು.

12274056a ಅನೇನ ಹಿ ಸಮಾವಿಷ್ಟೋ ವೃತ್ರೋ ಧರ್ಮಭೃತಾಂ ವರಃ|

12274056c ವ್ಯಜೃಂಭತ ತತಃ ಶಕ್ರಸ್ತಸ್ಮೈ ವಜ್ರಮವಾಸೃಜತ್||

ಇವನೇ ಧರ್ಮಭೃತರಲ್ಲಿ ಶ್ರೇಷ್ಠ ವೃತ್ರನನ್ನು ಪ್ರವೇಶಿಸಿದ್ದನು. ಆಗ ಅವನು ಆಕಳಿಸುತ್ತಿದ್ದಾಗ ಶಕ್ರನು ಅವನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದ್ದನು.

12274057a ಪ್ರವಿಶ್ಯ ವಜ್ರೋ ವೃತ್ರಂ ತು ದಾರಯಾಮಾಸ ಭಾರತ|

12274057c ದಾರಿತಶ್ಚ ಸ ವಜ್ರೇಣ ಮಹಾಯೋಗೀ ಮಹಾಸುರಃ|

12274057e ಜಗಾಮ ಪರಮಂ ಸ್ಥಾನಂ ವಿಷ್ಣೋರಮಿತತೇಜಸಃ||

ಭಾರತ! ವಜ್ರವು ಅವನನ್ನು ಪ್ರವೇಶಿಸಿ ಸೀಳಿಬಿಟ್ಟಿತು. ವಜ್ರದಿಂದ ಸೀಳಲ್ಪಟ್ಟ ಆ ಮಹಾಯೋಗೀ ಅಮಿತ ತೇಜಸ್ವೀ ಮಹಾಸುರನು ವಿಷ್ಣುವಿನ ಪರಮ ಸ್ಥಾನವನ್ನು ಸೇರಿದನು.

12274058a ವಿಷ್ಣುಭಕ್ತ್ಯಾ ಹಿ ತೇನೇದಂ ಜಗದ್ವ್ಯಾಪ್ತಮಭೂತ್ಪುರಾ|

12274058c ತಸ್ಮಾಚ್ಚ ನಿಹತೋ ಯುದ್ಧೇ ವಿಷ್ಣೋಃ ಸ್ಥಾನಮವಾಪ್ತವಾನ್||

ವಿಷ್ಣುಭಕ್ತಿಯಿಂದಲೆ ಅವನು ಹಿಂದೆ ಈ ಜಗತ್ತನ್ನು ವ್ಯಾಪಿಸಿಕೊಂಡಿದ್ದನು. ಆದುದರಿಂದ ಯುದ್ಧದಲ್ಲಿ ಹತನಾದ ಅವನು ವಿಷ್ಣುಸ್ಥಾನವನ್ನೇ ಪಡೆದುಕೊಂಡನು.

12274059a ಇತ್ಯೇಷ ವೃತ್ರಮಾಶ್ರಿತ್ಯ ಜ್ವರಸ್ಯ ಮಹತೋ ಮಯಾ|

12274059c ವಿಸ್ತರಃ ಕಥಿತಃ ಪುತ್ರ ಕಿಮನ್ಯತ್ ಪ್ರಬ್ರವೀಮಿ ತೇ||

ಪುತ್ರ! ಹೀಗೆ ವೃತ್ರನನ್ನು ಆವೇಶಿಸಿದ್ದ ಮಹಾ ಜ್ವರದ ಕುರಿತು ವಿಸ್ತಾರವಾಗಿ ಹೇಳಿದ್ದೇನೆ. ಬೇರೆ ಎನನ್ನು ಹೇಳಬೇಕು?

12274060a ಇಮಾಂ ಜ್ವರೋತ್ಪತ್ತಿಮದೀನಮಾನಸಃ

ಪಠೇತ್ಸದಾ ಯಃ ಸುಸಮಾಹಿತೋ ನರ|

12274060c ವಿಮುಕ್ತರೋಗಃ ಸ ಸುಖೀ ಮುದಾ ಯುತೋ

ಲಭೇತ ಕಾಮಾನ್ಸ ಯಥಾಮನೀಷಿತಾನ್||

ಈ ಜ್ವರೋತ್ಪತ್ತಿಯ ಕಥನವನ್ನು ಸುಸಮಾಹಿತನಾಗಿ ಅದೀನಮನಸ್ಕನಾಗಿ ಸದಾ ಪಠಿಸುವ ನರನು ರೋಗಮುಕ್ತನಾಗಿ ಸುಖ ಮತ್ತು ಸಂತೋಷದಿಂದ ಕಾಮನೆಗಳನ್ನು ಪಡೆದುಕೊಳ್ಳುತ್ತಾನೆ.”[4]

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜ್ವರೋತ್ಪತ್ತಿರ್ನಾಮ ಚತುಃಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜ್ವರೋತ್ಪತ್ತಿ ಎನ್ನುವ ಇನ್ನೂರಾಎಪ್ಪತ್ನಾಲ್ಕನೇ ಅಧ್ಯಾಯವು.

[1] ಇದರ ಮೊದಲು ಈ ಅಧಿಕ ಶ್ಲೋಕಗಳಿವೆ: ಶಂಖಪದ್ಮನಿಧಿಭ್ಯಾಂ ಚ ರೃದ್ಧಯಾ ಪರಮಯಾ ಸಹ| ಉಪಾಸಂತ ಮಹಾತ್ಮಾನಮುಶನಾ ಚ ಮಹಾಮುನಿಃ|| ಸನತ್ಕುಮಾರಪ್ರಮುಖಾಸ್ತಥೈವ ಚ ಮಹರ್ಷಯಃ| (ಗೀತಾ ಪ್ರೆಸ್).

[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ವ್ಯಚರತ್ಸರ್ವತೋ ದೇವಾನ್ ಪ್ರಾದ್ರವತ್ಸ ಋಷೀಂಸ್ತಥಾ| (ಗೀತಾ ಪ್ರೆಸ್).

[3] ಹಾಹಾಭೂತಂ ಜಗತ್ಸರ್ವಮುಪಲಕ್ಷ್ಯ ತದಾ ಪ್ರಭುಃ| (ಗೀತಾ ಪ್ರೆಸ್).

[4] ಈ ಅಧ್ಯಾಯದ ನಂತರ ಗೀತಾ ಪ್ರೆಸ್ ನಲ್ಲಿ 203 ಶ್ಲೋಕಗಳ ದಕ್ಷಪ್ರೋಕ್ತಶಿವಸಹಸ್ರನಾಮಸ್ತವವೆಂಬ ಅಧ್ಯಾಯವೂ ಮತ್ತು 46 ಶ್ಲೋಕಗಳ ಪಾಂಚಭೌತಿಕವೆಂಬ ಅಧ್ಯಾಯವೂ ಅಧಿಕವಾಗಿವೆ. ಈ ಅಧ್ಯಾಯಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

Comments are closed.