Shanti Parva: Chapter 273

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೩

ವೃತ್ರಾಸುರನ ವಧೆ ಮತ್ತು ಅವನಿಂದ ಪ್ರಕಟಗೊಂಡ ಬ್ರಹ್ಮಹತ್ಯೆಯನ್ನು ಬ್ರಹ್ಮನು ನಾಲ್ಕು ಸ್ಥಾನಗಳಲ್ಲಿ ವಿಭಜಿಸಿದುದು (1-63).

12273001 ಭೀಷ್ಮ ಉವಾಚ|

12273001a ವೃತ್ರಸ್ಯ ತು ಮಹಾರಾಜ ಜ್ವರಾವಿಷ್ಟಸ್ಯ ಸರ್ವಶಃ|

12273001c ಅಭವನ್ಯಾನಿ ಲಿಂಗಾನಿ ಶರೀರೇ ತಾನಿ ಮೇ ಶೃಣು||

ಭೀಷ್ಮನು ಹೇಳಿದನು: “ಮಹಾರಾಜ! ಜ್ವರದಿಂದ ಆವಿಷ್ಟವಾದ ವೃತ್ರನ ಶರೀರದಲ್ಲಿ ಯಾವ ಲಕ್ಷಣಗಳು ತೋರಿಕೊಂಡವು ಎನ್ನುವುದನ್ನು ಕೇಳು.

12273002a ಜ್ವಲಿತಾಸ್ಯೋಽಭವದ್ಘೋರೋ ವೈವರ್ಣ್ಯಂ ಚಾಗಮತ್ಪರಮ್|

12273002c ಗಾತ್ರಕಂಪಶ್ಚ ಸುಮಹಾನ್ ಶ್ವಾಸಶ್ಚಾಪ್ಯಭವನ್ಮಹಾನ್|

ಅವನ ಮುಖದಲ್ಲಿ ಘೋರ ಜಲನವುಂಟಾಯಿತು. ಅವನು ಪರಮ ವಿವರ್ಣನಾದನು. ಅವನ ದೇಹವು ಜೋರಾಗಿ ಕಂಪಿಸಿತು ಮತ್ತು ಅವನ ಉಸಿರಾಟವು ಜೋರಾಗತೊಡಗಿತು.

12273002e ರೋಮಹರ್ಷಶ್ಚ ತೀವ್ರೋಽಭೂನ್ನಿಃಶ್ವಾಸಶ್ಚ ಮಹಾನ್ನೃಪ||

12273003a ಶಿವಾ ಚಾಶಿವಸಂಕಾಶಾ ತಸ್ಯ ವಕ್ತ್ರಾತ್ಸುದಾರುಣಾ|

12273003c ನಿಷ್ಪಪಾತ ಮಹಾಘೋರಾ ಸ್ಮೃತಿಃ ಸಾ ತಸ್ಯ ಭಾರತ|

ನೃಪ! ಭಾರತ! ತೀವ್ರ ರೋಮಹರ್ಷಣವುಂಟಾಯಿತು. ಸುಧೀರ್ಘ ನಿಃಶ್ವಾಸವು ಹೊರಹೊಮ್ಮುತ್ತಿತ್ತು. ಅವನ ಮುಖದಿಂದ ದಾರುಣ ಮಹಾಘೋರ ಅಮಂಗಳ ನರಿಯ ರೂಪದಲ್ಲಿ ಅವನ ಸ್ಮೃತಿಯು ಹೊರಬಿದ್ದಿತು.

12273003e ಉಲ್ಕಾಶ್ಚ ಜ್ವಲಿತಾಸ್ತಸ್ಯ ದೀಪ್ತಾಃ ಪಾರ್ಶ್ವೇ ಪ್ರಪೇದಿರೇ||

12273004a ಗೃಧ್ರಕಂಕವಡಾಶ್ಚೈವ ವಾಚೋಽಮುಂಚನ್ಸುದಾರುಣಾಃ|

12273004c ವೃತ್ರಸ್ಯೋಪರಿ ಸಂಹೃಷ್ಟಾ[1]ಶ್ಚಕ್ರವತ್ಪರಿಬಭ್ರಮುಃ||

ಅವನ ಪಕ್ಕಗಳಲ್ಲಿ ಪ್ರಜ್ವಲಿತ ಪ್ರಕಾಶಮಾನ ಉಲ್ಕೆಗಳು ಬೀಳತೊಡಗಿದವು. ರಣಹದ್ದುಗಳು, ಕಾಗೆಗಳು ಮತ್ತು ಬಕಪಕ್ಷಿಗಳು ದಾರುಣವಾಗಿ ಕೂಗಿಕೊಳ್ಳುತ್ತಿದ್ದವು. ವೃತ್ರನ ಮೇಲೆ ಅವು ಹರ್ಷದಿಂದ ಚಕ್ರದಂತೆ ಸುತ್ತಾಡುತ್ತಿದ್ದವು.

12273005a ತತಸ್ತಂ ರಥಮಾಸ್ಥಾಯ ದೇವಾಪ್ಯಾಯಿತಮಾಹವೇ|

12273005c ವಜ್ರೋದ್ಯತಕರಃ ಶಕ್ರಸ್ತಂ ದೈತ್ಯಂ ಪ್ರತ್ಯವೈಕ್ಷತ||

ಬಳಿಕ ಯುದ್ಧದಲ್ಲಿ ದೇವತೆಗಳಿಂದ ಪ್ರೋತ್ಸಾಹಿತನಾದ ಶಕ್ರನು ರಥವನ್ನೇರಿ ವಜ್ರವನ್ನು ಎತ್ತಿ ಹಿಡಿದು ದೈತ್ಯನನ್ನು ವೀಕ್ಷಿಸಿದನು.

12273006a ಅಮಾನುಷಮಥೋ ನಾದಂ ಸ ಮುಮೋಚ ಮಹಾಸುರಃ|

12273006c ವ್ಯಜೃಂಭತ ಚ ರಾಜೇಂದ್ರ ತೀವ್ರಜ್ವರಸಮನ್ವಿತಃ|

12273006e ಅಥಾಸ್ಯ ಜೃಂಭತಃ ಶಕ್ರಸ್ತತೋ ವಜ್ರಮವಾಸೃಜತ್||

ರಾಜೇಂದ್ರ! ತೀವ್ರ ಜ್ವರದಿಂದ ಪೀಡಿತನಾದ ಆ ಮಹಾಸುರನು ಅಮಾನುಷವಾಗಿ ಗರ್ಜಿಸುತ್ತಾ ಆಕಳಿಸತೊಡಗಿದನು. ಹಾಗೆ ಆಕಳಿಸುತ್ತಿದ್ದ ಅವನ ಮೇಲೆ ಶಕ್ರನು ವಜ್ರವನ್ನು ಪ್ರಯೋಗಿಸಿದನು.

12273007a ಸ ವಜ್ರಃ ಸುಮಹಾತೇಜಾಃ ಕಾಲಾಗ್ನಿಸದೃಶೋಪಮಃ|

12273007c ಕ್ಷಿಪ್ರಮೇವ ಮಹಾಕಾಯಂ ವೃತ್ರಂ ದೈತ್ಯಮಪಾತಯತ್||

ಮಹಾತೇಜಸ್ವೀ ಕಾಲಾಗ್ನಿಯಂತಿದ್ದ ಆ ವಜ್ರವು ಕೂಡಲೇ ಆ ಮಹಾಕಾಯ ದೈತ್ಯ ವೃತ್ರನನ್ನು ಕೆಳಗುರುಳಿಸಿತು.

12273008a ತತೋ ನಾದಃ ಸಮಭವತ್ಪುನರೇವ ಸಮಂತತಃ|

12273008c ವೃತ್ರಂ ವಿನಿಹತಂ ದೃಷ್ಟ್ವಾ ದೇವಾನಾಂ ಭರತರ್ಷಭ||

ಭರತರ್ಷಭ! ವೃತ್ರನು ಹತನಾದುದನ್ನು ನೋಡಿ ಎಲ್ಲಕಡೆಗಳಲ್ಲಿ ದೇವತೆಗಳ ಪುನಃ ನಿನಾದಗಳುಂಟಾದವು.

12273009a ವೃತ್ರಂ ತು ಹತ್ವಾ ಭಗವಾನ್ದಾನವಾರಿರ್ಮಹಾಯಶಾಃ|

12273009c ವಜ್ರೇಣ ವಿಷ್ಣುಯುಕ್ತೇನ ದಿವಮೇವ ಸಮಾವಿಶತ್||

ಭಗವಾನ್ ದಾನವಾರಿ ಮಹಾಯಶಸ್ವೀ ಇಂದ್ರನು ವಿಷ್ಣುಯುಕ್ತವಾಗಿದ್ದ ವಜ್ರದಿಂದ ವೃತ್ರನನ್ನು ಸಂಹರಿಸಿ ಸ್ವರ್ಗವನ್ನು ಪ್ರವೇಶಿಸಿದನು.

12273010a ಅಥ ವೃತ್ರಸ್ಯ ಕೌರವ್ಯ ಶರೀರಾದಭಿನಿಃಸೃತಾ|

12273010c ಬ್ರಹ್ಮಹತ್ಯಾ[2] ಮಹಾಘೋರಾ ರೌದ್ರಾ ಲೋಕಭಯಾವಹಾ||

ಕೌರವ್ಯ! ಆಗ ವೃತ್ರನ ಶರೀರದಿಂದ ಲೋಕಕ್ಕೇ ಭಯವನ್ನುಂಟುಮಾಡುವ ಮಹಾಘೋರ, ರೌದ್ರ, ಬ್ರಹ್ಮಹತ್ಯೆಯು ಹೊರಹೊಮ್ಮಿದಳು.

12273011a ಕರಾಲದಶನಾ ಭೀಮಾ ವಿಕೃತಾ ಕೃಷ್ಣಪಿಂಗಲಾ|

12273011c ಪ್ರಕೀರ್ಣಮೂರ್ಧಜಾ ಚೈವ ಘೋರನೇತ್ರಾ ಚ ಭಾರತ||

ಭಾರತ! ಅವಳ ಕಣ್ಣುಗಳು ಕರಾಲವಾಗಿದ್ದವು. ಅವಳು ವಿಕೃತಳೂ, ಕೃಷ್ಣಪಿಂಗಲೆಯೂ, ಭಯಂಕರಳೂ ಆಗಿದ್ದಳು. ಅವಳ ಕೂದಲುಗಳು ಕೆದರಿದ್ದವು. ಅವಳ ಕಣ್ಣುಗಳು ಘೋರವಾಗಿದ್ದವು.

12273012a ಕಪಾಲಮಾಲಿನೀ ಚೈವ ಕೃಶಾ ಚ ಭರತರ್ಷಭ[3]|

12273012c ರುಧಿರಾರ್ದ್ರಾ ಚ ಧರ್ಮಜ್ಞ ಚೀರವಸ್ತ್ರನಿವಾಸಿನೀ||

ಭರತರ್ಷಭ! ಧರ್ಮಜ್ಞ! ಅವಳು ಕಪಾಲಗಳ ಮಾಲೆಯನ್ನು ಧರಿಸಿದ್ದಳು. ಕೃಶಳಾಗಿದ್ದಳು. ರಕ್ತದಿಂದ ತೋಯ್ದಿದ್ದಳು. ಹರಕು ನಾರುಬಟ್ಟೆಗಳನ್ನು ಉಟ್ಟಿದ್ದಳು.

12273013a ಸಾಭಿನಿಷ್ಕ್ರಮ್ಯ ರಾಜೇಂದ್ರ ತಾದೃಗ್ರೂಪಾ ಭಯಾವಹಾ|

12273013c ವಜ್ರಿಣಂ ಮೃಗಯಾಮಾಸ ತದಾ ಭರತಸತ್ತಮ||

ರಾಜೇಂದ್ರ! ಭರತಸತ್ತಮ! ಅಂತಹ ಭಯಂಕರ ರೂಪದ ಅವಳು ವೃತ್ರನ ಮೃತಶರೀರದಿಂದ ಹೊರಬಂದು ವಜ್ರಿ ಇಂದ್ರನನ್ನು ಹುಡುಕತೊಡಗಿದಳು.

12273014a ಕಸ್ಯ ಚಿತ್ತ್ವಥ ಕಾಲಸ್ಯ ವೃತ್ರಹಾ ಕುರುನಂದನ|

12273014c ಸ್ವರ್ಗಾಯಾಭಿಮುಖಃ ಪ್ರಾಯಾಲ್ಲೋಕಾನಾಂ ಹಿತಕಾಮ್ಯಯಾ||

ಕುರುನಂದನ! ಅದೇ ಸಮಯದಲ್ಲಿ ವೃತ್ರಹನು ಲೋಕಗಳ ಹಿತವನ್ನು ಬಯಸಿ ಸ್ವರ್ಗಾಭಿಮುಖವಾಗಿ ಹೋಗುತ್ತಿದ್ದನು.

12273015a ಬಿಸಾನ್ನಿಃಸರಮಾಣಂ[4] ತು ದೃಷ್ಟ್ವಾ ಶಕ್ರಂ ಮಹೌಜಸಮ್|

12273015c ಕಂಠೇ ಜಗ್ರಾಹ[5] ದೇವೇಂದ್ರಂ ಸುಲಗ್ನಾ ಚಾಭವತ್ತದಾ||

ಯುದ್ಧದಿಂದ ಹಿಂದಿರುಗುತ್ತಿದ್ದ ಮಹೌಜಸ ಶಕ್ರನನ್ನು ನೋಡಿ ಅವಳು ದೇವೇಂದ್ರನ ಕುತ್ತಿಗೆಯನ್ನು ಹಿಡಿದು ಅವನ ಶರೀರಕ್ಕೆ ಅಂಟಿಕೊಂಡಳು.

12273016a ಸ ಹಿ ತಸ್ಮಿನ್ಸಮುತ್ಪನ್ನೇ ಬ್ರಹ್ಮಹತ್ಯಾಕೃತೇ ಭಯೇ|

12273016c ನಲಿನ್ಯಾಂ ಬಿಸಮಧ್ಯಸ್ಥೋ ಬಭೂವಾಬ್ದಗಣಾನ್ಬಹೂನ್||

ಬ್ರಹ್ಮಹತ್ಯೆಯು ಮಾಡಿದ ಆ ಭಯವು ಅವನಲ್ಲಿ ಉತ್ಪನ್ನವಾಗಲು ಇಂದ್ರನು ಅನೇಕ ವರ್ಷಗಳು ಕಮಲದ ನಾಳದ ಮಧ್ಯದಲ್ಲಿಯೇ ಅಡಗಿದ್ದನು.

12273017a ಅನುಸೃತ್ಯ ತು ಯತ್ನಾತ್ಸ ತಯಾ ವೈ ಬ್ರಹ್ಮಹತ್ಯಯಾ|

12273017c ತದಾ ಗೃಹೀತಃ ಕೌರವ್ಯ ನಿಶ್ಚೇಷ್ಟಃ ಸಮಪದ್ಯತ||

ಕೌರವ್ಯ! ಪ್ರಯತ್ನಪಟ್ಟು ಅವನನ್ನೇ ಅನುಸರಿಸಿ ಬರುತ್ತಿದ್ದ ಬ್ರಹ್ಮಹತ್ಯೆಯು ಅವನನ್ನು ಹಿಡಿದುಬಿಟ್ಟಳು. ಕೂಡಲೇ ಇಂದ್ರನು ನಿಶ್ಚೇಷ್ಟನಾದನು.

12273018a ತಸ್ಯಾ ವ್ಯಪೋಹನೇ ಶಕ್ರಃ ಪರಂ ಯತ್ನಂ ಚಕಾರ ಹ|

12273018c ನ ಚಾಶಕತ್ತಾಂ ದೇವೇಂದ್ರೋ ಬ್ರಹ್ಮಹತ್ಯಾಂ ವ್ಯಪೋಹಿತುಮ್||

ಅವಳನ್ನು ಕಳೆದುಕೊಳ್ಳಲು ಶಕ್ರನು ಪರಮ ಯತ್ನವನ್ನು ಮಾಡಿದನು. ಆದರೂ ದೇವೇಂದ್ರನು ಬ್ರಹ್ಮಹತ್ಯೆಯನ್ನು ದೂರೀಕರಿಸಲು ಅಶಕ್ತನಾದನು.

12273019a ಗೃಹೀತ ಏವ ತು ತಯಾ ದೇವೇಂದ್ರೋ ಭರತರ್ಷಭ|

12273019c ಪಿತಾಮಹಮುಪಾಗಮ್ಯ ಶಿರಸಾ ಪ್ರತ್ಯಪೂಜಯತ್||

ಭರತರ್ಷಭ! ಬ್ರಹ್ಮಹತ್ಯೆಯು ಹಿಡಿದುಕೊಂಡಿರುವಾಗಲೇ ದೇವೇಂದ್ರನು ಪಿತಾಮಹನ ಬಳಿಸಾರಿ ಶಿರಸಾ ವಂದಿಸಿ ಪೂಜಿಸಿದನು.

12273020a ಜ್ಞಾತ್ವಾ ಗೃಹೀತಂ ಶಕ್ರಂ ತು ದ್ವಿಜಪ್ರವರಹತ್ಯಯಾ|

12273020c ಬ್ರಹ್ಮಾ ಸಂಚಿಂತಯಾಮಾಸ ತದಾ ಭರತಸತ್ತಮ||

ಭರತಸತ್ತಮ! ದ್ವಿಜಪ್ರವರನನ್ನು ಕೊಂದುದಕ್ಕಾಗಿ ಬ್ರಹ್ಮಹತ್ಯೆಯು ಇಂದ್ರನನ್ನು ಹಿಡಿದುಕೊಂಡಿದ್ದುದನ್ನು ತಿಳಿದ ಬ್ರಹ್ಮನು ಯೋಚಿಸತೊಡಗಿದನು.

12273021a ತಾಮುವಾಚ ಮಹಾಬಾಹೋ ಬ್ರಹ್ಮಹತ್ಯಾಂ ಪಿತಾಮಹಃ|

12273021c ಸ್ವರೇಣ ಮಧುರೇಣಾಥ ಸಾಂತ್ವಯನ್ನಿವ ಭಾರತ||

ಮಹಾಬಾಹೋ! ಭಾರತ! ಆಗ ಪಿತಾಮಹನು ಬ್ರಹ್ಮಹತ್ಯೆಗೆ ಮಧುರ ಸ್ವರದಿಂದ ಸಂತವಿಸುತ್ತಾ ಹೀಗೆಂದನು:

12273022a ಮುಚ್ಯತಾಂ ತ್ರಿದಶೇಂದ್ರೋಽಯಂ ಮತ್ಪ್ರಿಯಂ ಕುರು ಭಾಮಿನಿ|

12273022c ಬ್ರೂಹಿ ಕಿಂ ತೇ ಕರೋಮ್ಯದ್ಯ ಕಾಮಂ ಕಂ ತ್ವಮಿಹೇಚ್ಚಸಿ||

“ಭಾಮಿನೀ! ಈ ತ್ರಿದಶೇಂದ್ರನನ್ನು ಬಿಟ್ಟು ನನಗೆ ಪ್ರಿಯವಾದುದನ್ನು ಮಾಡು. ಇಂದು ನಾನು ನಿನಗೆ ಏನು ಮಾಡಬೇಕೆಂದು ಹೇಳು. ನೀನು ಬಯಸಿದುದನ್ನು ಮಾಡುತ್ತೇನೆ.”

12273023 ಬ್ರಹ್ಮಹತ್ಯೋವಾಚ|

12273023a ತ್ರಿಲೋಕಪೂಜಿತೇ ದೇವೇ ಪ್ರೀತೇ ತ್ರೈಲೋಕ್ಯಕರ್ತರಿ|

12273023c ಕೃತಮೇವೇಹ ಮನ್ಯೇಽಹಂ ನಿವಾಸಂ ತು ವಿಧತ್ಸ್ವ ಮೇ||

ಬ್ರಹ್ಮಹತ್ಯೆಯು ಹೇಳಿದಳು: “ತ್ರಿಲೋಕಪೂಜಿತನಾದ ತ್ರಿಲೋಕಗಳನ್ನೂ ಮಾಡಿದ ದೇವನೇ ಪ್ರೀತನಾದನೆಂದರೆ ನಾನು ಕೃತಕೃತ್ಯಳಾದೆನೆಂದೇ ಭಾವಿಸುತ್ತೇನೆ. ಈಗ ನನಗೆ ನಿವಾಸವನ್ನು ವಿಧಿಸು.

12273024a ತ್ವಯಾ ಕೃತೇಯಂ ಮರ್ಯಾದಾ ಲೋಕಸಂರಕ್ಷಣಾರ್ಥಿನಾ|

12273024c ಸ್ಥಾಪನಾ ವೈ ಸುಮಹತೀ ತ್ವಯಾ ದೇವ ಪ್ರವರ್ತಿತಾ||

ಲೋಕಸಂರಕ್ಷಣಾರ್ಥವಾಗಿಯೇ ನೀನು ಈ ಮರ್ಯಾದೆಗಳನ್ನು ನಿರ್ಮಿಸಿದ್ದೀಯೆ. ದೇವ! ಈ ಮಹಾ ಮರ್ಯಾದೆಯನ್ನು ಸ್ಥಾಪಿಸಿದುದಲ್ಲದೇ ನೀನೇ ಇದನ್ನು ನಡೆಸಿಕೊಂಡು ಬಂದಿದ್ದೀಯೆ.

12273025a ಪ್ರೀತೇ ತು ತ್ವಯಿ ಧರ್ಮಜ್ಞ ಸರ್ವಲೋಕೇಶ್ವರೇ ಪ್ರಭೋ|

12273025c ಶಕ್ರಾದಪಗಮಿಷ್ಯಾಮಿ ನಿವಾಸಂ ತು ವಿಧತ್ಸ್ವ ಮೇ||

ಸರ್ವಲೋಕೇಶ್ವರ! ಪ್ರಭೋ! ಧರ್ಮಜ್ಞ! ನಿನಗೆ ಇಷ್ಟವಾದರೆ ಈಗಲೇ ನಾನು ಶಕ್ರನನ್ನು ಬಿಟ್ಟು ಹೋಗುತ್ತೇನೆ. ಆದರೆ ನನಗೆ ನಿವಾಸವನ್ನು ಕಲ್ಪಿಸಿಕೊಡು.”

12273026 ಭೀಷ್ಮ ಉವಾಚ|

12273026a ತಥೇತಿ ತಾಂ ಪ್ರಾಹ ತದಾ ಬ್ರಹ್ಮಹತ್ಯಾಂ ಪಿತಾಮಹಃ|

12273026c ಉಪಾಯತಃ ಸ ಶಕ್ರಸ್ಯ ಬ್ರಹ್ಮಹತ್ಯಾಂ ವ್ಯಪೋಹತ||

ಭೀಷ್ಮನು ಹೇಳಿದನು: “ಆಗ ಪಿತಾಮಹನು ಬ್ರಹ್ಮಹತ್ಯೆಗೆ ಹಾಗೆಯೇ ಆಗಲಿ ಎಂದು ಹೇಳಿ ಉಪಾಯದಿಂದ ಶಕ್ರನಲ್ಲಿದ್ದ ಬ್ರಹ್ಮಹತ್ಯೆಯು ಹೊರಬರುವಂತೆ ಮಾಡಿದನು.

12273027a ತತಃ ಸ್ವಯಂಭುವಾ ಧ್ಯಾತಸ್ತತ್ರ ವಹ್ನಿರ್ಮಹಾತ್ಮನಾ|

12273027c ಬ್ರಹ್ಮಾಣಮುಪಸಂಗಮ್ಯ ತತೋ ವಚನಮಬ್ರವೀತ್||

ಬಳಿಕ ಮಹಾತ್ಮಾ ಸ್ವಯಂಭುವನು ಅಲ್ಲಿಯೇ ಅಗ್ನಿಯನ್ನು ಧ್ಯಾನಿಸಿದನು. ಅಗ್ನಿಯು ಬ್ರಹ್ಮನ ಬಳಿಸಾರಿ ಹೀಗೆಂದನು:

12273028a ಪ್ರಾಪ್ತೋಽಸ್ಮಿ ಭಗವನ್ದೇವ ತ್ವತ್ಸಕಾಶಮರಿಂದಮ|

12273028c ಯತ್ಕರ್ತವ್ಯಂ ಮಯಾ ದೇವ ತದ್ಭವಾನ್ವಕ್ತುಮರ್ಹತಿ||

“ಭಗವನ್! ದೇವ! ಅರಿಂದಮ! ನಾನು ನಿನ್ನ ಬಳಿ ಬಂದಿದ್ದೇನೆ. ದೇವ! ನಾನು ಏನು ಮಾಡಬೇಕೆನ್ನುವುದನ್ನು ಹೇಳಬೇಕು.”

12273029 ಬ್ರಹ್ಮೋವಾಚ|

12273029a ಬಹುಧಾ ವಿಭಜಿಷ್ಯಾಮಿ ಬ್ರಹ್ಮಹತ್ಯಾಮಿಮಾಮಹಮ್|

12273029c ಶಕ್ರಸ್ಯಾದ್ಯ ವಿಮೋಕ್ಷಾರ್ಥಂ ಚತುರ್ಭಾಗಂ ಪ್ರತೀಚ್ಚ ಮೇ||

ಬ್ರಹ್ಮನು ಹೇಳಿದನು: “ಇಂದು ಇಂದ್ರನನ್ನು ಪಾಪವಿಮುಕ್ತನನ್ನಾಗಿಸಲು ಈ ಬ್ರಹ್ಮಹತ್ಯೆಯನ್ನು ಅನೇಕ ಭಾಗಗಳನ್ನಾಗಿ ವಿಭಜಿಸುತ್ತೇನೆ. ಇವಳ ನಾಲ್ಕನೆಯ ಒಂದು ಭಾಗವನ್ನು ನೀನು ಸ್ವೀಕರಿಸು.”

12273030 ಅಗ್ನಿರುವಾಚ|

12273030a ಮಮ ಮೋಕ್ಷಸ್ಯ ಕೋಽಂತೋ ವೈ ಬ್ರಹ್ಮನ್ಧ್ಯಾಯಸ್ವ ವೈ ಪ್ರಭೋ|

12273030c ಏತದಿಚ್ಚಾಮಿ ವಿಜ್ಞಾತುಂ ತತ್ತ್ವತೋ ಲೋಕಪೂಜಿತ||

ಅಗ್ನಿಯು ಹೇಳಿದನು: “ಬ್ರಹ್ಮನ್! ಪ್ರಭೋ! ಲೋಕಪೂಜಿತ! ಇದರ ಅಂತ್ಯವು ಯಾವಾಗ ಮತ್ತು ಯಾವಾಗ ನನಗೂ ಇದರಿಂದ ಬಿಡುಗಡೆಯಾಗುತ್ತದೆ ಎನ್ನುವುದರ ಕುರಿತು ಯೋಚಿಸು. ಇದನ್ನು ತತ್ತ್ವತಃ ತಿಳಿದುಕೊಳ್ಳಲು ಬಯಸುತ್ತೇನೆ.”

12273031 ಬ್ರಹ್ಮೋವಾಚ|

12273031a ಯಸ್ತ್ವಾಂ ಜ್ವಲಂತಮಾಸಾದ್ಯ ಸ್ವಯಂ ವೈ ಮಾನವಃ ಕ್ವ ಚಿತ್|

12273031c ಬೀಜೌಷಧಿರಸೈರ್ವಹ್ನೇ ನ ಯಕ್ಷ್ಯತಿ ತಮೋವೃತಃ||

12273032a ತಮೇಷಾ ಯಾಸ್ಯತಿ ಕ್ಷಿಪ್ರಂ ತತ್ರೈವ ಚ ನಿವತ್ಸ್ಯತಿ|

12273032c ಬ್ರಹ್ಮಹತ್ಯಾ ಹವ್ಯವಾಹ ವ್ಯೇತು ತೇ ಮಾನಸೋ ಜ್ವರಃ||

ಬ್ರಹ್ಮನು ಹೇಳಿದನು: “ವಹ್ನೇ! ಪ್ರಜ್ವಲಿಸುತ್ತಿರುವ ನಿನ್ನ ಬಳಿಬಂದು ತಮಸ್ಸಿನಿಂದ ಆವೃತನಾಗಿ ಬೀಜ-ಔಷಧಿಗಳಿಂದ ನಿನ್ನನ್ನು ಯಜಿಸದೇ ಇರುವ ಮನುಷ್ಯನನ್ನು ಕೂಡಲೇ ಈ ಬ್ರಹ್ಮಹತ್ಯೆಯು ಪ್ರವೇಶಿಸಿ ಅವನಲ್ಲಿಯೇ ವಾಸಿಸುತ್ತಾಳೆ. ಹವ್ಯವಾಹ! ನಿನ್ನ ಮಾನಸ ಜ್ವರವನ್ನು ಕಳೆದುಕೋ!””

12273033 ಭೀಷ್ಮ ಉವಾಚ|

12273033a ಇತ್ಯುಕ್ತಃ ಪ್ರತಿಜಗ್ರಾಹ ತದ್ವಚೋ ಹವ್ಯಕವ್ಯಭುಕ್|

12273033c ಪಿತಾಮಹಸ್ಯ ಭಗವಾಂಸ್ತಥಾ ಚ ತದಭೂತ್ ಪ್ರಭೋ||

ಭೀಷ್ಮನು ಹೇಳಿದನು: “ಪ್ರಭೋ! ಪಿತಾಮಹನು ಹೀಗೆ ಹೇಳಲು ಭಗವಾನ್ ಹವ್ಯಕವ್ಯಭುಕ್ ಅಗ್ನಿಯು ಅದನ್ನು ಸ್ವೀಕರಿಸಿದನು. ಆಗ ಅವನ ಮಾತಿನಂತೆಯೇ ಆಯಿತು.

12273034a ತತೋ ವೃಕ್ಷೌಷಧಿತೃಣಂ ಸಮಾಹೂಯ ಪಿತಾಮಹಃ|

12273034c ಇಮಮರ್ಥಂ ಮಹಾರಾಜ ವಕ್ತುಂ ಸಮುಪಚಕ್ರಮೇ||

ಮಹಾರಾಜ! ಅನಂತರ ಪಿತಾಮಹನು ವೃಕ್ಷ-ಔಷಧಿ-ತೃಣಗಳನ್ನು ಕರೆದು ಅದೇ ಅಭಿಪ್ರಾಯವನ್ನು ಅವರಿಗೂ ಹೇಳಿದನು.

[6]12273035a ತತೋ ವೃಕ್ಷೌಷಧಿತೃಣಂ ತಥೈವೋಕ್ತಂ ಯಥಾತಥಮ್|

12273035c ವ್ಯಥಿತಂ ವಹ್ನಿವದ್ರಾಜನ್ ಬ್ರಹ್ಮಾಣಮಿದಮಬ್ರವೀತ್||

ರಾಜನ್! ಯಥಾವತ್ತಾಗಿ ಅವನು ಹೀಗೆ ಹೇಳಲು ಅಗ್ನಿಯಂತೆ ವೃಕ್ಷ-ಔಷಧಿ-ತೃಣಗಳೂ ವ್ಯಥಿತಗೊಂಡು ಬ್ರಹ್ಮನಿಗೆ ಇದನ್ನು ಹೇಳಿದವು:

12273036a ಅಸ್ಮಾಕಂ ಬ್ರಹ್ಮಹತ್ಯಾತೋ ಕೋಽಂತೋ ಲೋಕಪಿತಾಮಹ|

12273036c ಸ್ವಭಾವನಿಹತಾನಸ್ಮಾನ್ನ ಪುನರ್ಹಂತುಮರ್ಹಸಿ||

“ಲೋಕಪಿತಾಮಹ! ನಮ್ಮ ಈ ಬ್ರಹ್ಮಹತ್ಯೆಯು ಯಾವಾಗ ಕೊನೆಗೊಳ್ಳುತ್ತದೆ? ಸ್ವಬಾವತಃ ನಾವು ಸ್ಥಾವರ ಯೋನಿಯಲ್ಲಿ ಬಿದ್ದಿದ್ದೇವೆ. ಪುನಃ ನಮ್ಮನ್ನು ಸಾಯಿಸಬಾರದು.

12273037a ವಯಮಗ್ನಿಂ ತಥಾ ಶೀತಂ ವರ್ಷಂ ಚ ಪವನೇರಿತಮ್|

12273037c ಸಹಾಮಃ ಸತತಂ ದೇವ ತಥಾ ಚೇದನಭೇದನಮ್||

ದೇವ! ನಾವು ಸತತವೂ ಬೇಗೆ, ಛಳಿ, ಮಳೆ, ಭಿರುಗಾಳಿ, ಮತ್ತು ಕತ್ತರಿಸುವುದನ್ನು ಮತ್ತು ತುಂಡರಿಸುವುದನ್ನು ಸಹಿಸಿಕೊಳ್ಳುತ್ತಿದ್ದೇವೆ.

12273038a ಬ್ರಹ್ಮಹತ್ಯಾಮಿಮಾಮದ್ಯ ಭವತಃ ಶಾಸನಾದ್ವಯಮ್|

12273038c ಗ್ರಹೀಷ್ಯಾಮಸ್ತ್ರಿಲೋಕೇಶ ಮೋಕ್ಷಂ ಚಿಂತಯತಾಂ ಭವಾನ್||

ನಿನ್ನ ಶಾಸನದಂತೆ ಇಂದು ನಾವು ಈ ಬ್ರಹ್ಮಹತ್ಯೆಯನ್ನೂ ಸ್ವೀಕರಿಸುತ್ತೇವೆ. ತ್ರಿಲೋಕೇಶ! ಆದರೆ ಇವುಗಳಿಂದ ನಮಗೆ ಮೋಕ್ಷವು ಹೇಗಾಗುವುದೆನ್ನುವುದರ ಕುರಿತು ನೀನು ಯೋಚಿಸಬೇಕು.”

12273039 ಬ್ರಹ್ಮೋವಾಚ|

12273039a ಪರ್ವಕಾಲೇ ತು ಸಂಪ್ರಾಪ್ತೇ ಯೋ ವೈ ಚೇದನಭೇದನಮ್|

12273039c ಕರಿಷ್ಯತಿ ನರೋ ಮೋಹಾತ್ತಮೇಷಾನುಗಮಿಷ್ಯತಿ||

ಬ್ರಹ್ಮನು ಹೇಳಿದನು: “ಪರ್ವಕಾಲವು ಬಂದೊದಗಿದಾಗ ಮೋಹದಿಂದ ನಿಮ್ಮನ್ನು ಕಡಿದು ತುಂಡರಿಸುವ ನರನ ಹಿಂದೆಯೇ ಇದು ನಿಮ್ಮನ್ನು ಬಿಟ್ಟು ಹೊರಟುಹೋಗುತ್ತದೆ[7].””

12273040 ಭೀಷ್ಮ ಉವಾಚ|

12273040a ತತೋ ವೃಕ್ಷೌಷಧಿತೃಣಮೇವಮುಕ್ತಂ ಮಹಾತ್ಮನಾ|

12273040c ಬ್ರಹ್ಮಾಣಮಭಿಸಂಪೂಜ್ಯ ಜಗಾಮಾಶು ಯಥಾಗತಮ್||

ಭೀಷ್ಮನು ಹೇಳಿದನು: “ಮಹಾತ್ಮ ಬ್ರಹ್ಮನು ಹೀಗೆ ಹೇಳಲು ವೃಕ್ಷ-ಔಷಧಿ-ತೃಣಗಳು ಅವನನ್ನು ನಮಸ್ಕರಿಸಿ ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಹೊರಟುಹೋದವು.

12273041a ಆಹೂಯಾಪ್ಸರಸೋ ದೇವಸ್ತತೋ ಲೋಕಪಿತಾಮಹಃ|

12273041c ವಾಚಾ ಮಧುರಯಾ ಪ್ರಾಹ ಸಾಂತ್ವಯನ್ನಿವ ಭಾರತ||

ಭಾರತ! ಅನಂತರ ಲೋಕಪಿತಾಮಹ ದೇವನು ಅಪ್ಸರೆಯರನ್ನು ಕರೆದು ಅವರನ್ನು ಮಧುರ ಮಾತಿನಿಂದ ಸಂತವಿಸುತ್ತಾ ಹೇಳಿದನು:

12273042a ಇಯಮಿಂದ್ರಾದನುಪ್ರಾಪ್ತಾ ಬ್ರಹ್ಮಹತ್ಯಾ ವರಾಂಗನಾಃ|

12273042c ಚತುರ್ಥಮಸ್ಯಾ ಭಾಗಂ ಹಿ ಮಯೋಕ್ತಾಃ ಸಂಪ್ರತೀಚ್ಚತ||

“ವರಾಂಗನೆಯರೇ! ಇಂದ್ರನು ಪಡೆದುಕೊಂಡಿರುವ ಈ ಬ್ರಹ್ಮಹತ್ಯೆಯ ನಾಲ್ಕನೇ ಒಂದು ಭಾಗವನ್ನು ನಾನು ಹೇಳಿದಂತೆ ನೀವು ಸ್ವೀಕರಿಸಿರಿ.”

12273043 ಅಪ್ಸರಸ ಊಚುಃ|

12273043a ಗ್ರಹಣೇ ಕೃತಬುದ್ಧೀನಾಂ ದೇವೇಶ ತವ ಶಾಸನಾತ್|

12273043c ಮೋಕ್ಷಂ ಸಮಯತೋಽಸ್ಮಾಕಂ ಚಿಂತಯಸ್ವ ಪಿತಾಮಹ||

ಅಪ್ಸರೆಯರು ಹೇಳಿದರು: “ದೇವೇಶ! ಪಿತಾಮಹ! ನಿನ್ನ ಶಾಸನದಂತೆ ಇದನ್ನು ಸ್ವೀಕರಿಸಲು ನಿಶ್ಚಯಿಸಿದ್ದೇವೆ. ಆದರೆ ನಮಗೆ ಇದರಿಂದ ಮೋಕ್ಷದೊರೆಯುವ ಸಮಯವನ್ನು ಯೋಚಿಸು!”

12273044 ಬ್ರಹ್ಮೋವಾಚ|

12273044a ರಜಸ್ವಲಾಸು ನಾರೀಷು ಯೋ ವೈ ಮೈಥುನಮಾಚರೇತ್|

12273044c ತಮೇಷಾ ಯಾಸ್ಯತಿ ಕ್ಷಿಪ್ರಂ ವ್ಯೇತು ವೋ ಮಾನಸೋ ಜ್ವರಃ||

ಬ್ರಹ್ಮನು ಹೇಳಿದನು: “ರಜಸ್ವಲೆ ನಾರಿಯರೊಂದಿಗೆ ಮೈಥುನವನ್ನಾಚರಿಸುವವರ ಹಿಂದೆಯೇ ಇದು ಕ್ಷಿಪ್ರವಾಗಿ ಹೊರಟುಹೋಗುತ್ತದೆ. ನಿಮ್ಮ ಮಾನಸಜ್ವರವನ್ನು ಕಳೆದುಕೊಳ್ಳಿ.””

12273045 ಭೀಷ್ಮ ಉವಾಚ|

12273045a ತಥೇತಿ ಹೃಷ್ಟಮನಸ ಉಕ್ತ್ವಾಥಾಪ್ಸರಸಾಂ ಗಣಾಃ|

12273045c ಸ್ವಾನಿ ಸ್ಥಾನಾನಿ ಸಂಪ್ರಾಪ್ಯ ರೇಮಿರೇ ಭರತರ್ಷಭ||

ಭೀಷ್ಮನು ಹೇಳಿದನು: “ಭರತರ್ಷಭ! ಹಾಗೆಯೇ ಆಗಲೆಂದು ಹೇಳಿ ಅಪ್ಸರಗಣಗಳು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ ರಮಿಸಿದವು.

12273046a ತತಸ್ತ್ರಿಲೋಕಕೃದ್ದೇವಃ ಪುನರೇವ ಮಹಾತಪಾಃ|

12273046c ಅಪಃ ಸಂಚಿಂತಯಾಮಾಸ ಧ್ಯಾತಾಸ್ತಾಶ್ಚಾಪ್ಯಥಾಗಮನ್||

ಅನಂತರ ತ್ರಿಲೋಕಕೃತ್ ದೇವ ಮಹಾತಪಸ್ವಿಯು ಜಲದ ಕುರಿತು ಯೋಚಿಸಿದನು. ಅವನು ಧ್ಯಾನಿಸಿದೊಡನೆಯೇ ಜಲದೇವತೆಗಳು ಅಲ್ಲಿಗೆ ಆಗಮಿಸಿದವು.

12273047a ತಾಸ್ತು ಸರ್ವಾಃ ಸಮಾಗಮ್ಯ ಬ್ರಹ್ಮಾಣಮಮಿತೌಜಸಮ್|

12273047c ಇದಮೂಚುರ್ವಚೋ ರಾಜನ್ಪ್ರಣಿಪತ್ಯ ಪಿತಾಮಹಮ್||

ರಾಜನ್! ಆಗ ಅವರೆಲ್ಲರೂ ಅಮಿತೌಜಸ ಬ್ರಹ್ಮನ ಬಳಿಬಂದು ಪಿತಾಮಹನಿಗೆ ನಮಸ್ಕರಿಸಿ ಈ ಮಾತನ್ನಾಡಿದರು:

12273048a ಇಮಾಃ ಸ್ಮ ದೇವ ಸಂಪ್ರಾಪ್ತಾಸ್ತ್ವತ್ಸಕಾಶಮರಿಂದಮ|

12273048c ಶಾಸನಾತ್ತವ ದೇವೇಶ ಸಮಾಜ್ಞಾಪಯ ನೋ ವಿಭೋ||

“ದೇವ! ಅರಿಂದಮ! ದೇವೇಶ! ವಿಭೋ! ಇದೋ ನಾವೆಲ್ಲರೂ ನಿನ್ನ ಶಾಸನದಂತೆ ನಿನ್ನ ಬಳಿ ಬಂದಿದ್ದೇವೆ. ನಮಗೆ ಆಜ್ಞಾಪಿಸು!”

12273049 ಬ್ರಹ್ಮೋವಾಚ|

12273049a ಇಯಂ ವೃತ್ರಾದನುಪ್ರಾಪ್ತಾ ಪುರುಹೂತಂ ಮಹಾಭಯಾ|

12273049c ಬ್ರಹ್ಮಹತ್ಯಾ ಚತುರ್ಥಾಂಶಮಸ್ಯಾ ಯೂಯಂ ಪ್ರತೀಚ್ಚತ||

ಬ್ರಹ್ಮನು ಹೇಳಿದನು: “ಇಂದ್ರನು ವೃತ್ರನಿಂದ ಈ ಮಹಾಭಯಂಕರ ಬ್ರಹ್ಮಹತ್ಯೆಯನ್ನು ಪಡೆದುಕೊಂಡಿದ್ದಾನೆ. ಇವಳ ಚತುರ್ಥಾಂಶವನ್ನು ನೀವು ಸ್ವೀಕರಿಸಿರಿ.”

12273050 ಆಪ ಊಚುಃ|

12273050a ಏವಂ ಭವತು ಲೋಕೇಶ ಯಥಾ ವದಸಿ ನಃ ಪ್ರಭೋ|

12273050c ಮೋಕ್ಷಂ ಸಮಯತೋಽಸ್ಮಾಕಂ ಸಂಚಿಂತಯಿತುಮರ್ಹಸಿ||

ಜಲದೇವತೆಗಳು ಹೇಳಿದರು: “ಲೋಕೇಶ! ಪ್ರಭೋ! ನೀನು ಹೇಳಿದಂತೆಯೇ ನಮಗಾಗಲಿ. ಆದರೆ ಇವಳಿಂದ ನಮ್ಮ ಮೋಕ್ಷವಾಗುವುದರ ಕುರಿತು ಯೋಚಿಸಬೇಕು.

12273051a ತ್ವಂ ಹಿ ದೇವೇಶ ಸರ್ವಸ್ಯ ಜಗತಃ ಪರಮೋ ಗುರುಃ|

12273051c ಕೋಽನ್ಯಃ ಪ್ರಸಾದೋ ಹಿ ಭವೇದ್ಯಃ ಕೃಚ್ಚ್ರಾನ್ನಃ ಸಮುದ್ಧರೇತ್||

ದೇವೇಶ! ನೀನೇ ಸರ್ವ ಜಗತ್ತಿನ ಪರಮ ಗುರುವು. ಈ ಕಷ್ಟದಿಂದ ನಮ್ಮನ್ನು ಉದ್ಧರಿಸದೇ ಬೇರೆ ಯಾವುದು ನಮಗೆ ನಿನ್ನ ಪ್ರಸಾದವಾಗಬಲ್ಲದು?”

12273052 ಬ್ರಹ್ಮೋವಾಚ|

12273052a ಅಲ್ಪಾ ಇತಿ ಮತಿಂ ಕೃತ್ವಾ ಯೋ ನರೋ ಬುದ್ಧಿಮೋಹಿತಃ|

12273052c ಶ್ಲೇಷ್ಮಮೂತ್ರಪುರೀಷಾಣಿ ಯುಷ್ಮಾಸು ಪ್ರತಿಮೋಕ್ಷ್ಯತಿ||

12273053a ತಮೇಷಾ ಯಾಸ್ಯತಿ ಕ್ಷಿಪ್ರಂ ತತ್ರೈವ ಚ ನಿವತ್ಸ್ಯತಿ|

12273053c ತಥಾ ವೋ ಭವಿತಾ ಮೋಕ್ಷ ಇತಿ ಸತ್ಯಂ ಬ್ರವೀಮಿ ವಃ||

ಬ್ರಹ್ಮನು ಹೇಳಿದನು: “ಬುದ್ಧಿಮೋಹಿತನಾಗಿ ನೀವು ಅಲ್ಪರೆಂದು ತಿಳಿದು ನಿಮ್ಮಲ್ಲಿ ಕಫ-ಮಲ-ಮೂತ್ರಗಳನ್ನು ವಿಸರ್ಜಿಸುವ ನರನನ್ನೇ ಇದು ಕ್ಷಿಪ್ರವಾಗಿ ಹಿಂಬಾಲಿಸಿ ಹೋಗಿ ಅವನಲ್ಲಿಯೇ ವಾಸಿಸುತ್ತದೆ. ಆಗ ಇವಳಿಂದ ನಿಮಗೆ ಬಿಡುಗಡೆಯಾಗುತ್ತದೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.””

12273054 ಭೀಷ್ಮ ಉವಾಚ|

12273054a ತತೋ ವಿಮುಚ್ಯ ದೇವೇಂದ್ರಂ ಬ್ರಹ್ಮಹತ್ಯಾ ಯುಧಿಷ್ಠಿರ|

12273054c ಯಥಾನಿಸೃಷ್ಟಂ ತಂ ದೇಶಮಗಚ್ಚದ್ದೇವಶಾಸನಾತ್||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಅನಂತರ ಬ್ರಹ್ಮಹತ್ಯೆಯು ದೇವೇಂದ್ರನನ್ನು ಬಿಟ್ಟು ದೇವಶಾಸನದಂತೆ ಅವನು ನಿರ್ದೇಶಿಸಿದ ಜಾಗಗಳಿಗೆ ಹೊರಟುಹೋದಳು.

12273055a ಏವಂ ಶಕ್ರೇಣ ಸಂಪ್ರಾಪ್ತಾ ಬ್ರಹ್ಮಹತ್ಯಾ ಜನಾಧಿಪ|

12273055c ಪಿತಾಮಹಮನುಜ್ಞಾಪ್ಯ ಸೋಽಶ್ವಮೇಧಮಕಲ್ಪಯತ್||

ಜನಾಧಿಪ! ಹೀಗೆ ಇಂದ್ರನು ಬ್ರಹ್ಮಹತ್ಯೆಯನ್ನು ಪಡೆದುಕೊಂಡು, ಪಿತಾಮಹನ ಆಜ್ಞೆಯಂತೆ ಅಶ್ವಮೇಧವನ್ನು ನೆರವೇರಿಸಿದನು.

12273056a ಶ್ರೂಯತೇ ಹಿ ಮಹಾರಾಜ ಸಂಪ್ರಾಪ್ತಾ ವಾಸವೇನ ವೈ|

12273056c ಬ್ರಹ್ಮಹತ್ಯಾ ತತಃ ಶುದ್ಧಿಂ ಹಯಮೇಧೇನ ಲಬ್ಧವಾನ್||

ಮಹಾರಾಜ! ಹಯಮೇಧದಿಂದ ವಾಸವನು ಬ್ರಹ್ಮಹತ್ಯೆಯಿಂದ ಶುದ್ಧಿಯನ್ನು ಪಡೆದುಕೊಂಡನು ಎಂದು ಕೇಳಿದ್ದೇವೆ.

12273057a ಸಮವಾಪ್ಯ ಶ್ರಿಯಂ ದೇವೋ ಹತ್ವಾರೀಂಶ್ಚ ಸಹಸ್ರಶಃ|

12273057c ಪ್ರಹರ್ಷಮತುಲಂ ಲೇಭೇ ವಾಸವಃ ಪೃಥಿವೀಪತೇ||

ಪೃಥಿವೀಪತೇ! ಶ್ರೀಯನ್ನು ಪುನಃ ಪಡೆದು ದೇವ ವಾಸವನು ಸಹಸ್ರಾರು ಶತ್ರುಗಳನ್ನು ಸಂಹರಿಸಿ ಅತುಲ ಹರ್ಷವನ್ನು ಪಡೆದುಕೊಂಡನು.

12273058a ವೃತ್ರಸ್ಯ ರುಧಿರಾಚ್ಚೈವ ಖುಖುಂಡಾಃ ಪಾರ್ಥ ಜಜ್ಞಿರೇ|

12273058c ದ್ವಿಜಾತಿಭಿರಭಕ್ಷ್ಯಾಸ್ತೇ ದೀಕ್ಷಿತೈಶ್ಚ ತಪೋಧನೈಃ||

ಪಾರ್ಥ! ವೃತ್ರನ ರಕ್ತದಿಂದ ತಲೆಯಲ್ಲಿ ಕುಚ್ಚುಗಳಿರುವ ನವಿಲೇ ಮೊದಲಾದ ಪಕ್ಷಿಗಳು ಹುಟ್ಟಿಕೊಂಡವು. ದ್ವಿಜಾತಿಯವರಿಗೂ, ದೀಕ್ಷಿತರಿಗೂ ಮತ್ತು ತಪೋಧನರಿಗೂ ಅವು ಅಭಕ್ಷ್ಯಗಳಾದವು.

12273059a ಸರ್ವಾವಸ್ಥಂ ತ್ವಮಪ್ಯೇಷಾಂ ದ್ವಿಜಾತೀನಾಂ ಪ್ರಿಯಂ ಕುರು|

12273059c ಇಮೇ ಹಿ ಭೂತಲೇ ದೇವಾಃ ಪ್ರಥಿತಾಃ ಕುರುನಂದನ||

ಕುರುನಂದನ! ನೀನೂ ಕೂಡ ಸರ್ವಾವಸ್ಥೆಗಳಲ್ಲಿಯೂ ಬ್ರಾಹ್ಮಣರಿಗೆ ಪ್ರಿಯವಾದುದನ್ನೇ ಮಾಡು. ಭೂತಲದಲ್ಲಿ ಇವರೇ ದೇವರೆಂದು ಪ್ರಥಿತರಾಗಿದ್ದಾರೆ.

12273060a ಏವಂ ಶಕ್ರೇಣ ಕೌರವ್ಯ ಬುದ್ಧಿಸೌಕ್ಷ್ಮ್ಯಾನ್ಮಹಾಸುರಃ|

12273060c ಉಪಾಯಪೂರ್ವಂ ನಿಹತೋ ವೃತ್ರೋಽಥಾಮಿತತೇಜಸಾ||

ಕೌರವ್ಯ! ಹೀಗೆ ಶಕ್ರನು ಬುದ್ಧಿಸೂಕ್ಷ್ಮತೆಯ ಉಪಾಯದಿಂದ ಅಮಿತ ತೇಜಸ್ವೀ ಮಹಾಸುರ ವೃತ್ರನನ್ನು ಸಂಹರಿಸಿದನು.

12273061a ಏವಂ ತ್ವಮಪಿ ಕೌರವ್ಯ ಪೃಥಿವ್ಯಾಮಪರಾಜಿತಃ|

12273061c ಭವಿಷ್ಯಸಿ ಯಥಾ ದೇವಃ ಶತಕ್ರತುರಮಿತ್ರಹಾ||

ಕೌರವ್ಯ! ಅಮಿತ್ರಹ ಶತಕ್ರತು ದೇವನು ಹೇಗೋ ಹಾಗೆ ನೀನೂ ಕೂಡ ಪೃಥ್ವಿಯಲ್ಲಿ ಅಪರಾಜಿತನಾಗುತ್ತೀಯೆ.

12273062a ಯೇ ತು ಶಕ್ರಕಥಾಂ ದಿವ್ಯಾಮಿಮಾಂ ಪರ್ವಸು ಪರ್ವಸು|

12273062c ವಿಪ್ರಮಧ್ಯೇ ಪಠಿಷ್ಯಂತಿ ನ ತೇ ಪ್ರಾಪ್ಸ್ಯಂತಿ ಕಿಲ್ಬಿಷಮ್||

ಪರ್ವ-ಪರ್ವಗಳಲ್ಲಿ ವಿಪ್ರರ ಮಧ್ಯದಲ್ಲಿ ಈ ದಿವ್ಯ ಶಕ್ರಕಥೆಯನ್ನು ಪಠಿಸುವವರು ಪಾಪವನ್ನು ಹೊಂದುವುದಿಲ್ಲ.

12273063a ಇತ್ಯೇತದ್ವೃತ್ರಮಾಶ್ರಿತ್ಯ ಶಕ್ರಸ್ಯಾತ್ಯದ್ಭುತಂ ಮಹತ್|

12273063c ಕಥಿತಂ ಕರ್ಮ ತೇ ತಾತ ಕಿಂ ಭೂಯಃ ಶ್ರೋತುಮಿಚ್ಚಸಿ||

ಅಯ್ಯಾ! ಹೀಗೆ ವೃತ್ರನ ವಿಷಯದಲ್ಲಿ ಶಕ್ರನ ಮಹಾ ಅದ್ಭುತ ಕರ್ಮದ ಕುರಿತು ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬ್ರಹ್ಮಹತ್ಯಾವಿಭಾಗೇ ತ್ರಿಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬ್ರಹ್ಮಹತ್ಯಾವಿಭಾಗ ಎನ್ನುವ ಇನ್ನೂರಾಎಪ್ಪತ್ಮೂರನೇ ಅಧ್ಯಾಯವು.

[1] ಸಂಸೃಷ್ಟಾ (ಗೀತಾ ಪ್ರೆಸ್).

[2] ಬ್ರಹ್ಮವಧ್ಯಾ (ಗೀತಾ ಪ್ರೆಸ್).

[3] ಕೃತ್ಯೇವ ಭರತರ್ಷಭ| (ಗೀತಾ ಪ್ರೆಸ್).

[4] ಸಾ ವಿನಿಃಸರಮಾಣಂ (ಗೀತಾ ಪ್ರೆಸ್).

[5] ಜಗ್ರಾಹ ವಧ್ಯಾ (ಗೀತಾ ಪ್ರೆಸ್).

[6] ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠದಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಬ್ರಹ್ಮೋವಾಚ| ಇಯಂ ವೃತ್ರಾದನುಪ್ರಾಪ್ತಾ ಬ್ರಹ್ಮಹತ್ಯಾ ಮಹಾಭಯಾ| ಪುರುಹೂತಂ ಚತುರ್ಥಾಂಶಮಸ್ಯಾ ಯೂಯಂ ಪ್ರತೀಚ್ಛಥ|| (ಗೀತಾ ಪ್ರೆಸ್).

[7] ನನ್ನ ತಂದೆಯವರು ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಕಟ್ಟಿಗೆ ಕಡಿಯಲು ಕಾಡಿಗೆ ಹೋಗುತ್ತಿರಲಿಲ್ಲ; ಆ ದಿನಗಳಲ್ಲಿ ಕೆಲಸಗಾರರನ್ನೂ ಆ ಕೆಲಸಕ್ಕೆ ಹಚ್ಚುತ್ತಿರಲಿಲ್ಲ.

Comments are closed.