Shanti Parva: Chapter 272

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೨

ವೃತ್ರವಧೆ

ಇಂದ್ರ-ವೃತ್ರರ ಯುದ್ಧವರ್ಣನೆ (1-44).

12272001 ಯುಧಿಷ್ಠಿರ ಉವಾಚ|

12272001a ಅಹೋ ಧರ್ಮಿಷ್ಠತಾ ತಾತ ವೃತ್ರಸ್ಯಾಮಿತತೇಜಸಃ|

12272001c ಯಸ್ಯ ವಿಜ್ಞಾನಮತುಲಂ ವಿಷ್ಣೋರ್ಭಕ್ತಿಶ್ಚ ತಾದೃಶೀ||

ಯುಧಿಷ್ಠಿರನು ಹೇಳಿದನು: “ಅಯ್ಯಾ! ಅಮಿತತೇಜಸ್ವೀ ವೃತ್ರನ ಧರ್ಮಿಷ್ಠತೆಯು ಅದ್ಭುತವಾಗಿತ್ತು. ಅವನ ವಿಜ್ಞಾನವೂ ಅತುಲವಾಗಿತ್ತು ಮತ್ತು ವಿಷ್ಣುವಿನ ಕುರಿತಾದ ಅವನ ಭಕ್ತಿಯೂ ಹಾಗೆಯೇ ಇತ್ತು.

12272002a ದುರ್ವಿಜ್ಞೇಯಮಿದಂ ತಾತ ವಿಷ್ಣೋರಮಿತತೇಜಸಃ|

12272002c ಕಥಂ ವಾ ರಾಜಶಾರ್ದೂಲ ಪದಂ ತಜ್ಜ್ಞಾತವಾನಸೌ||

ಅಯ್ಯಾ! ಅಮಿತ ತೇಜಸ್ವೀ ವಿಷ್ಣುವಿನ ಕುರಿತು ತಿಳಿಯಲು ದುಃಸ್ಸಾಧ್ಯವು. ರಾಜಶಾರ್ದೂಲ! ಅವನು ಹೇಗೆ ಆ ಪದದ ಜ್ಞಾನವನ್ನು ಪಡೆದುಕೊಂಡನು?

12272003a ಭವತಾ ಕಥಿತಂ ಹ್ಯೇತಚ್ಚ್ರದ್ದಧೇ ಚಾಹಮಚ್ಯುತ|

12272003c ಭೂಯಸ್ತು ಮೇ ಸಮುತ್ಪನ್ನಾ ಬುದ್ಧಿರವ್ಯಕ್ತದರ್ಶನಾತ್||

ಅಚ್ಯುತ! ನೀನು ಹೇಳಿರುವೆಯಾದುದರಿಂದ ಇದರಲ್ಲಿ ಶ್ರದ್ಧೆಯನ್ನಿಟ್ಟಿದ್ದೇನೆ. ಆದರೂ ಬುದ್ಧಿಗೆ ಇದು ವ್ಯಕ್ತವಾಗಿ ಕಾಣದೇ ಇರುವುದರಿಂದ ನನ್ನಲ್ಲಿ ಈ ಪ್ರಶ್ನೆಯುಂಟಾಗಿದೆ.

12272004a ಕಥಂ ವಿನಿಹತೋ ವೃತ್ರಃ ಶಕ್ರೇಣ ಭರತರ್ಷಭ|

12272004c ಧರ್ಮಿಷ್ಠೋ ವಿಷ್ಣುಭಕ್ತಶ್ಚ ತತ್ತ್ವಜ್ಞಶ್ಚ ಪದಾನ್ವಯೇ||

ಭರತರ್ಷಭ! ಧರ್ಮಿಷ್ಠನೂ, ವಿಷ್ಣುಭಕ್ತನೂ, ತತ್ತ್ವಜ್ಞನೂ, ಪದಾನ್ವಯನೂ[1] ಆದ ವೃತ್ರನು ಶಕ್ರನಿಂದ ಹೇಗೆ ಹತನಾದನು?

12272005a ಏತನ್ಮೇ ಸಂಶಯಂ ಬ್ರೂಹಿ ಪೃಚ್ಚತೋ ಭರತರ್ಷಭ|

12272005c ವೃತ್ರಸ್ತು ರಾಜಶಾರ್ದೂಲ ಯಥಾ ಶಕ್ರೇಣ ನಿರ್ಜಿತಃ||

ಭರತರ್ಷಭ! ರಾಜಶಾರ್ದೂಲ! ಕೇಳುತ್ತಿರುವ ನನಗೆ ಈ ಸಂಶಯದ ಕುರಿತು ಹೇಳು. ವೃತ್ರನಾದರೋ ಶಕ್ರನಿಗೆ ಹೇಗೆ ಸೋತನು?

12272006a ಯಥಾ ಚೈವಾಭವದ್ಯುದ್ಧಂ ತಚ್ಚಾಚಕ್ಷ್ವ ಪಿತಾಮಹ|

12272006c ವಿಸ್ತರೇಣ ಮಹಾಬಾಹೋ ಪರಂ ಕೌತೂಹಲಂ ಹಿ ಮೇ||

ಪಿತಾಮಹ! ಮಹಾಬಾಹೋ! ಅವರ ನಡುವೆ ಯುದ್ಧವು ಹೇಗೆ ನಡೆಯಿತೋ ಅದನ್ನು ವಿಸ್ತಾರವಾಗಿ ಹೇಳು. ನನ್ನಲ್ಲಿ ಪರಮ ಕುತೂಹಲವುಂಟಾಗಿದೆ.”

12272007 ಭೀಷ್ಮ ಉವಾಚ|

12272007a ರಥೇನೇಂದ್ರಃ ಪ್ರಯಾತೋ ವೈ ಸಾರ್ಧಂ ಸುರಗಣೈಃ ಪುರಾ|

12272007c ದದರ್ಶಾಥಾಗ್ರತೋ ವೃತ್ರಂ ವಿಷ್ಠಿತಂ ಪರ್ವತೋಪಮಮ್||

ಭೀಷ್ಮನು ಹೇಳಿದನು: “ಹಿಂದೆ ಸುರಗಣಗಳನ್ನು ಕೂಡಿಕೊಂಡು ಇಂದ್ರನು ರಥವನ್ನೇರಿ ತನ್ನ ಮುಂದೆ ಪರ್ವತದಂತೆ ಬೆಳೆದು ನಿಂತಿದ್ದ ವೃತ್ರನನ್ನು ನೋಡಿದನು.

12272008a ಯೋಜನಾನಾಂ ಶತಾನ್ಯೂರ್ಧ್ವಂ ಪಂಚೋಚ್ಚ್ರಿತಮರಿಂದಮ|

12272008c ಶತಾನಿ ವಿಸ್ತರೇಣಾಥ ತ್ರೀಣ್ಯೇವಾಭ್ಯಧಿಕಾನಿ ತು||

ಅರಿಂದಮ! ಅವನು ಐನೂರು ಯೋಜನೆಗಳಷ್ಟು ಉದ್ದವಾಗಿಯೂ ಮುನ್ನೂರು ಯೋಜನೆಗಳಿಗಿಂತಲೂ ಹೆಚ್ಚು ಅಗಲವಾಗಿಯೂ ಬೆಳೆದಿದ್ದನು.

12272009a ತತ್ಪ್ರೇಕ್ಷ್ಯ ತಾದೃಶಂ ರೂಪಂ ತ್ರೈಲೋಕ್ಯೇನಾಪಿ ದುರ್ಜಯಮ್|

12272009c ವೃತ್ರಸ್ಯ ದೇವಾಃ ಸಂತ್ರಸ್ತಾ ನ ಶಾಂತಿಮುಪಲೇಭಿರೇ||

ಮೂರುಲೋಕಗಳಿಗೂ ದುರ್ಜಯನಾದ ವೃತ್ರನ ಅಂಥಹ ರೂಪವನ್ನು ನೋಡಿ ದೇವತೆಗಳು ಭಯಗೊಂಡರು. ಅವರಿಗೆ ಶಾಂತಿಯೇ ಇಲ್ಲವಾಯಿತು.

12272010a ಶಕ್ರಸ್ಯ ತು ತದಾ ರಾಜನ್ನೂರುಸ್ತಂಭೋ ವ್ಯಜಾಯತ|

12272010c ಭಯಾದ್ವೃತ್ರಸ್ಯ ಸಹಸಾ ದೃಷ್ಟ್ವಾ ತದ್ರೂಪಮುತ್ತಮಮ್||

ರಾಜನ್! ವೃತ್ರನ ಆ ಉತ್ತಮ ರೋಪವನ್ನು ನೋಡಿ ಶಕ್ರನ ತೊಡೆಗಳು ಒಮ್ಮೆಲೇ ಸೆಟೆದು ನಿಂತವು.

12272011a ತತೋ ನಾದಃ ಸಮಭವದ್ವಾದಿತ್ರಾಣಾಂ ಚ ನಿಸ್ವನಃ|

12272011c ದೇವಾಸುರಾಣಾಂ ಸರ್ವೇಷಾಂ ತಸ್ಮಿನ್ಯುದ್ಧ ಉಪಸ್ಥಿತೇ||

ಯುದ್ಧವು ಸನ್ನಿಹಿತವಾಗಲು ಸಮಸ್ತ ದೇವತೆಗಳ ಮತ್ತು ಅಸುರರ ಸೈನ್ಯಗಳಲ್ಲಿ ರಣವಾದ್ಯಗಳು ಮೊಳಗಿದವು.

12272012a ಅಥ ವೃತ್ರಸ್ಯ ಕೌರವ್ಯ ದೃಷ್ಟ್ವಾ ಶಕ್ರಮುಪಸ್ಥಿತಮ್|

12272012c ನ ಸಂಭ್ರಮೋ ನ ಭೀಃ ಕಾ ಚಿದಾಸ್ಥಾ ವಾ ಸಮಜಾಯತ||

ಕೌರವ್ಯ! ಶಕ್ರನು ತನ್ನೆದುರು ನಿಂತಿರುವುದನ್ನು ನೋಡಿ ವೃತ್ರನಿಗೆ ಗಾಬರಿಯೂ ಆಗಲಿಲ್ಲ. ಭಯವೂ ಆಗಲಿಲ್ಲ. ಮಿಗಿಲಾಗಿ ಅವನಿಗೆ ಯಾವ ಆಸೆಗಳೂ ಉಂಟಾಗಲಿಲ್ಲ.

12272013a ತತಃ ಸಮಭವದ್ಯುದ್ಧಂ ತ್ರೈಲೋಕ್ಯಸ್ಯ ಭಯಂಕರಮ್|

12272013c ಶಕ್ರಸ್ಯ ಚ ಸುರೇಂದ್ರಸ್ಯ ವೃತ್ರಸ್ಯ ಚ ಮಹಾತ್ಮನಃ||

ಅನಂತರ ಸುರೇಂದ್ರ ಶಕ್ರ ಮತ್ತು ಮಹಾತ್ಮ ವೃತ್ರರ ನಡುವೆ ಮೂರುಲೋಕಗಳಿಗೂ ಭಯಂಕರವಾದ ಯುದ್ಧವು ನಡೆಯಿತು.

12272014a ಅಸಿಭಿಃ ಪಟ್ಟಿಶೈಃ ಶೂಲೈಃ ಶಕ್ತಿತೋಮರಮುದ್ಗರೈಃ|

12272014c ಶಿಲಾಭಿರ್ವಿವಿಧಾಭಿಶ್ಚ ಕಾರ್ಮುಕೈಶ್ಚ ಮಹಾಸ್ವನೈಃ||

12272015a ಅಸ್ತ್ರೈಶ್ಚ ವಿವಿಧೈರ್ದಿವ್ಯೈಃ ಪಾವಕೋಲ್ಕಾಭಿರೇವ ಚ|

12272015c ದೇವಾಸುರೈಸ್ತತಃ ಸೈನ್ಯೈಃ ಸರ್ವಮಾಸೀತ್ಸಮಾಕುಲಮ್||

ಖಡ್ಗಗಳಿಂದಲೂ, ಪಟ್ಟಿಶಗಳಿಂದಲೂ, ಶೂಲಗಳಿಂದಲೂ, ಶಕ್ತ್ಯಾಯುಧಗಳಿಂದಲೂ, ತೋಮರಗಳಿಂದಲೂ, ಮುದ್ಗರಗಳಿಂದಲೂ, ನಾನಾ ಪ್ರಕಾರದ ಶಿಲೆಗಳಿಂದಲೂ, ಭಯಂಕರ ಶಬ್ದಮಾಡುತ್ತಿದ್ದ ಮಹಾ ಧನುಸ್ಸುಗಳಿಂದಲೂ, ಅನೇಕ ಪ್ರಕಾರದ ದಿವ್ಯಶಸ್ತ್ರಾಸ್ತ್ರಗಳಿಂದಲೂ, ಜ್ವಾಲೆಗಳೊಂದಿಗೆ ಉರಿಯುತ್ತಿದ್ದ ಪಂಜುಗಳಿಂದಲೂ ದೇವಾಸುರರ ಆ ಸೈನ್ಯಗಳೆಲ್ಲವೂ ಸಮಾಕುಲವಾಗಿದ್ದವು.

12272016a ಪಿತಾಮಹಪುರೋಗಾಶ್ಚ ಸರ್ವೇ ದೇವಗಣಾಸ್ತಥಾ|

12272016c ಋಷಯಶ್ಚ ಮಹಾಭಾಗಾಸ್ತದ್ಯುದ್ಧಂ ದ್ರಷ್ಟುಮಾಗಮನ್||

12272017a ವಿಮಾನಾಗ್ರ್ಯೈರ್ಮಹಾರಾಜ ಸಿದ್ಧಾಶ್ಚ ಭರತರ್ಷಭ|

12272017c ಗಂಧರ್ವಾಶ್ಚ ವಿಮಾನಾಗ್ರ್ಯೈರಪ್ಸರೋಭಿಃ ಸಮಾಗಮನ್||

ಮಹಾರಾಜ! ಪಿತಾಮಹನೇ ಮೊದಲ್ಗೊಂಡು ಸರ್ವ ದೇವಗಣಗಳೂ, ಮಹಾಭಾಗ ಋಷಿಗಳೂ ಆ ಯುದ್ಧವನ್ನು ನೋಡಲು ವಿಮಾನಗಳಲ್ಲಿ ಅಲ್ಲಿಗೆ ಬಂದರು. ಭರತರ್ಷಭ! ಸಿದ್ಧರೂ ಗಂಧರ್ವರೂ, ಅಪ್ಸರೆಯರೂ ವಿಮಾನಗಳಲ್ಲಿ ಬಂದು ಸೇರಿದರು.

12272018a ತತೋಽಂತರಿಕ್ಷಮಾವೃತ್ಯ ವೃತ್ರೋ ಧರ್ಮಭೃತಾಂ ವರಃ|

12272018c ಅಶ್ಮವರ್ಷೇಣ ದೇವೇಂದ್ರಂ ಪರ್ವತಾತ್ಸಮವಾಕಿರತ್||

ಆಗ ಧರ್ಮಭೃತರಲ್ಲಿ ಶ್ರೇಷ್ಠ ವೃತ್ರನು ಅಂತರಿಕ್ಷವನ್ನು ಆವರಿಸಿ ಕಲ್ಲಿನ ಮಳೆಯಿಂದ ಮತ್ತು ಪರ್ವತಗಳಿಂದ ದೇವೇಂದ್ರನನ್ನು ಮುಚ್ಚಿಬಿಟ್ಟನು.

12272019a ತತೋ ದೇವಗಣಾಃ ಕ್ರುದ್ಧಾಃ ಸರ್ವತಃ ಶಸ್ತ್ರವೃಷ್ಟಿಭಿಃ|

12272019c ಅಶ್ಮವರ್ಷಮಪೋಹಂತ ವೃತ್ರಪ್ರೇರಿತಮಾಹವೇ||

ಆಗ ಯುದ್ಧದಲ್ಲಿ ದೇವಗಣಗಳು ಕ್ರುದ್ಧರಾಗಿ ಎಲ್ಲಕಡೆಗಳಿಂದಲೂ ಶಸ್ತ್ರಗಳ ಮಳೆಯನ್ನು ಸುರಿಸಿ ವೃತ್ರನಿಂದ ಪ್ರೇರಿತವಾದ ಕಲ್ಲಿನಮಳೆಯನ್ನು ಹೋಗಲಾಡಿಸಿದರು.

12272020a ವೃತ್ರಶ್ಚ ಕುರುಶಾರ್ದೂಲ ಮಹಾಮಾಯೋ ಮಹಾಬಲಃ|

12272020c ಮೋಹಯಾಮಾಸ ದೇವೇಂದ್ರಂ ಮಾಯಾಯುದ್ಧೇನ ಸರ್ವತಃ||

ಕುರುಶಾರ್ದೂಲ! ಮಹಾಬಲ ಮಹಾಮಾಯಾವೀ ವೃತ್ರನಾದರೋ ಮಾಯಾಯುದ್ಧದಿಂದ ಎಲ್ಲಕಡೆಗಳಿಂದಲೂ ದೇವೇಂದ್ರನನ್ನು ಮೋಹಗೊಳಿಸಿದನು.

12272021a ತಸ್ಯ ವೃತ್ರಾರ್ದಿತಸ್ಯಾಥ ಮೋಹ ಆಸೀಚ್ಚತಕ್ರತೋಃ|

12272021c ರಥಂತರೇಣ ತಂ ತತ್ರ ವಸಿಷ್ಠಃ ಸಮಬೋಧಯತ್||

ವೃತ್ರನಿಂದ ಪೀಡಿತನಾದ ಶತಕ್ರತುವು ಮೂರ್ಛೆಹೋದನು. ಆಗ ರಥಂತರಸಾಮಗಾಯನದಿಂದ ವಸಿಷ್ಠನು ಅವನನ್ನು ಎಬ್ಬಿಸಿದನು.

12272022 ವಸಿಷ್ಠ ಉವಾಚ|

12272022a ದೇವಶ್ರೇಷ್ಠೋಽಸಿ ದೇವೇಂದ್ರ ಸುರಾರಿವಿನಿಬರ್ಹಣ|

12272022c ತ್ರೈಲೋಕ್ಯಬಲಸಂಯುಕ್ತಃ ಕಸ್ಮಾಚ್ಚಕ್ರ ವಿಷೀದಸಿ||

ವಸಿಷ್ಠನು ಹೇಳಿದನು: “ದೇವೇಂದ್ರ! ಶಕ್ರ! ದೇವಶ್ರೇಷ್ಠನಾಗಿದ್ದೀಯೆ. ಸುರಾರಿಗಳನ್ನು ಸಂಹರಿಸುವವನೇ! ಮೂರೂ ಲೋಕಗಳ ಬಲದಿಂದ ಸಂಪನ್ನನಾಗಿದ್ದೀಯೆ. ನೀನು ಏಕೆ ವಿಷಾದಿಸುತ್ತಿದ್ದೀಯೆ?

12272023a ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಶ್ಚೈವ ಜಗತ್ಪ್ರಭುಃ|

12272023c ಸೋಮಶ್ಚ ಭಗವಾನ್ದೇವಃ ಸರ್ವೇ ಚ ಪರಮರ್ಷಯಃ||

ಇಗೋ ಇಲ್ಲಿ ಬ್ರಹ್ಮ, ವಿಷ್ಣು, ಜಗತ್ಪ್ರಭು ಶಿವ, ಭಗವಾನ್ ಸೋಮದೇವ, ಮತ್ತು ಎಲ್ಲ ಪರಮಋಷಿಗಳೂ ಸೇರಿದ್ದಾರೆ.

[2]12272024a ಮಾ ಕಾರ್ಷೀಃ ಕಶ್ಮಲಂ ಶಕ್ರ ಕಶ್ಚಿದೇವೇತರೋ ಯಥಾ|

12272024c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಜಹಿ ಶತ್ರುಂ ಸುರೇಶ್ವರ||

ಸುರೇಶ್ವರ! ಸಾಧಾರಣ ವ್ಯಕ್ತಿಯಂತೆ ವಿಮೋಹಗೊಳ್ಳಬೇಡ. ಶ್ರೇಷ್ಠ ಬುದ್ಧಿಯನ್ನಾಶ್ರಯಿಸಿ ಯುದ್ಧದಲ್ಲಿ ಶತ್ರುವನ್ನು ಸಂಹರಿಸು.

12272025a ಏಷ ಲೋಕಗುರುಸ್ತ್ರ್ಯಕ್ಷಃ ಸರ್ವಲೋಕನಮಸ್ಕೃತಃ|

12272025c ನಿರೀಕ್ಷತೇ ತ್ವಾಂ ಭಗವಾಂಸ್ತ್ಯಜ ಮೋಹಂ ಸುರೇಶ್ವರ||

ಸುರೇಶ್ವರ! ಈ ಲೋಕಗುರು ಸರ್ವಲೋಕನಮಸ್ಕೃತ ಭಗವಾನ್ ತ್ರಿನೇತ್ರನು ನಿನ್ನನ್ನು ನಿರೀಕ್ಷಿಸುತ್ತಿದ್ದಾನೆ. ಮೋಹವನ್ನು ತ್ಯಜಿಸು.

12272026a ಏತೇ ಬ್ರಹ್ಮರ್ಷಯಶ್ಚೈವ ಬೃಹಸ್ಪತಿಪುರೋಗಮಾಃ|

12272026c ಸ್ತವೇನ ಶಕ್ರ ದಿವ್ಯೇನ ಸ್ತುವಂತಿ ತ್ವಾಂ ಜಯಾಯ ವೈ||

ಶಕ್ರ! ಇದೋ ಬೃಹಸ್ಪತಿಯೇ ಮೊದಲಾದ ಬ್ರಹ್ಮರ್ಷಿಗಳು ದಿವ್ಯ ಸ್ತವದಿಂದ ನಿನ್ನ ಜಯಕ್ಕಾಗಿ ಸ್ತುತಿಸುತ್ತಿದ್ದಾರೆ.””

12272027 ಭೀಷ್ಮ ಉವಾಚ|

12272027a ಏವಂ ಸಂಬೋಧ್ಯಮಾನಸ್ಯ ವಸಿಷ್ಠೇನ ಮಹಾತ್ಮನಾ|

12272027c ಅತೀವ ವಾಸವಸ್ಯಾಸೀದ್ಬಲಮುತ್ತಮತೇಜಸಃ||

ಭೀಷ್ಮನು ಹೇಳಿದನು: “ಮಹಾತ್ಮ ವಸಿಷ್ಠನು ಈ ರೀತಿ ಸಂಬೋಧಿಸಲು ಉತ್ತಮ ತೇಜಸ್ವೀ ವಾಸವನ ಬಲವು ಅತಿಯಾಯಿತು.

12272028a ತತೋ ಬುದ್ಧಿಮುಪಾಗಮ್ಯ ಭಗವಾನ್ಪಾಕಶಾಸನಃ|

12272028c ಯೋಗೇನ ಮಹತಾ ಯುಕ್ತಸ್ತಾಂ ಮಾಯಾಂ ವ್ಯಪಕರ್ಷತ||

ಆಗ ಭಗವಾನ್ ಪಾಕಶಾಸನನು ಬುದ್ಧಿಯನ್ನು ಆಶ್ರಯಿಸಿ ಮಹಾ ಯೋಗಯುಕ್ತನಾಗಿ ಆ ಮಾಯೆಯನ್ನು ಹೋಗಲಾಡಿಸಿದನು.

12272029a ತತೋಽಂಗಿರಃಸುತಃ ಶ್ರೀಮಾಂಸ್ತೇ ಚೈವ ಪರಮರ್ಷಯಃ|

12272029c ದೃಷ್ಟ್ವಾ ವೃತ್ರಸ್ಯ ವಿಕ್ರಾಂತಮುಪಗಮ್ಯ ಮಹೇಶ್ವರಮ್|

12272029e ಊಚುರ್ವೃತ್ರವಿನಾಶಾರ್ಥಂ ಲೋಕಾನಾಂ ಹಿತಕಾಮ್ಯಯಾ||

ಅನಂತರ ಅಂಗಿರಸ ಸುತ ಶ್ರೀಮಾನ್ ಬೃಹಸ್ಪತಿ ಮತ್ತು ಪರಮ ಋಷಿಗಳು ವೃತ್ರನ ವಿಕ್ರಾಂತವನ್ನು ನೋಡಿ ಮಹೇಶ್ವರನ ಬಳಿಸಾರಿ ಲೋಕಗಳ ಹಿತವನ್ನು ಬಯಸಿ ವೃತ್ರವಿನಾಶದ ಕುರಿತು ಹೇಳಿದರು.

12272030a ತತೋ ಭಗವತಸ್ತೇಜೋ ಜ್ವರೋ ಭೂತ್ವಾ ಜಗತ್ಪತೇಃ|

12272030c ಸಮಾವಿಶನ್ಮಹಾರೌದ್ರಂ ವೃತ್ರಂ ದೈತ್ಯವರಂ ತದಾ||

ಆಗ ಜಗತ್ಪತಿಯ ತೇಜಸ್ಸು ಜ್ವರವಾಗಿ ಮಹಾರೌದ್ರ ದೈತ್ಯವರ ವೃತ್ರನನ್ನು ಸಮಾವೇಶಗೊಂಡಿತು.

12272031a ವಿಷ್ಣುಶ್ಚ ಭಗವಾನ್ದೇವಃ ಸರ್ವಲೋಕಾಭಿಪೂಜಿತಃ|

12272031c ಐಂದ್ರಂ ಸಮಾವಿಶದ್ವಜ್ರಂ ಲೋಕಸಂರಕ್ಷಣೇ ರತಃ||

ಸರ್ವಲೋಕಪೂಜಿತ ಲೋಕಸಂರಕ್ಷಣಾನಿರತ ಭಗವಾನ್ ದೇವ ವಿಷ್ಣುವೂ ಕೂಡ ಇಂದ್ರನ ವಜ್ರವನ್ನು ಸಮಾವೇಶಗೊಂಡನು.

12272032a ತತೋ ಬೃಹಸ್ಪತಿರ್ಧೀಮಾನುಪಾಗಮ್ಯ ಶತಕ್ರತುಮ್|

12272032c ವಸಿಷ್ಠಶ್ಚ ಮಹಾತೇಜಾಃ ಸರ್ವೇ ಚ ಪರಮರ್ಷಯಃ||

12272033a ತೇ ಸಮಾಸಾದ್ಯ ವರದಂ ವಾಸವಂ ಲೋಕಪೂಜಿತಮ್|

12272033c ಊಚುರೇಕಾಗ್ರಮನಸೋ ಜಹಿ ವೃತ್ರಮಿತಿ ಪ್ರಭೋ||

ಪ್ರಭೋ! ಅನಂತರ ಧೀಮಾನ್ ಬೃಹಸ್ಪತಿ, ಮಹಾತೇಜಸ್ವೀ ವಸಿಷ್ಠ ಮತ್ತು ಸರ್ವ ಪರಮ ಋಷಿಗಳೂ ಶತಕ್ರತು ಲೋಕಪೂಜಿತ ವರದ ವಾಸವನ ಬಳಿಸಾರಿ ಏಕಾಗ್ರಮನಸ್ಕರಾಗಿ ವೃತ್ರನನ್ನು ಕೊಲ್ಲು ಎಂದು ಹೇಳಿದರು.

12272034 ಮಹೇಶ್ವರ ಉವಾಚ|

12272034a ಏಷ ವೃತ್ರೋ ಮಹಾನ್ ಶಕ್ರ ಬಲೇನ ಮಹತಾ ವೃತಃ|

12272034c ವಿಶ್ವಾತ್ಮಾ ಸರ್ವಗಶ್ಚೈವ ಬಹುಮಾಯಶ್ಚ ವಿಶ್ರುತಃ||

ಮಹೇಶ್ವರನು ಹೇಳಿದನು: “ಶಕ್ರ! ಈ ವೃತ್ರನು ಮಹಾ ಬಲದಿಂದ ಆವೃತನಾಗಿದ್ದಾನೆ. ವಿಶ್ವಾತ್ಮನಾದ ಇವನು ಎಲ್ಲಕಡೆ ಹೋಗಬಲ್ಲನು. ಬಹುಮಾಯನೆಂದೂ ವಿಶ್ರುತನಾಗಿದ್ದಾನೆ.

12272035a ತದೇನಮಸುರಶ್ರೇಷ್ಠಂ ತ್ರೈಲೋಕ್ಯೇನಾಪಿ ದುರ್ಜಯಮ್|

12272035c ಜಹಿ ತ್ವಂ ಯೋಗಮಾಸ್ಥಾಯ ಮಾವಮಂಸ್ಥಾಃ ಸುರೇಶ್ವರ||

ಸುರೇಶ್ವರ! ತ್ರೈಲೋಕ್ಯಗಳಿಗೂ ದುರ್ಜಯನಾಗಿರುವ ಈ ಅಸುರಶ್ರೇಷ್ಠನನ್ನು ಯೋಗವನ್ನಾಶ್ರಯಸಿ ಸಂಹರಿಸು. ಆದರೆ ಇವನನ್ನು ಅಪಮಾನಿಸಬೇಡ.

12272036a ಅನೇನ ಹಿ ತಪಸ್ತಪ್ತಂ ಬಲಾರ್ಥಮಮರಾಧಿಪ|

12272036c ಷಷ್ಟಿಂ ವರ್ಷಸಹಸ್ರಾಣಿ ಬ್ರಹ್ಮಾ ಚಾಸ್ಮೈ ವರಂ ದದೌ||

12272037a ಮಹತ್ತ್ವಂ ಯೋಗಿನಾಂ ಚೈವ ಮಹಾಮಾಯತ್ವಮೇವ ಚ|

12272037c ಮಹಾಬಲತ್ವಂ ಚ ತಥಾ ತೇಜಶ್ಚಾಗ್ರ್ಯಂ ಸುರೇಶ್ವರ||

ಅಮರಾಧಿಪ! ಬಲಕ್ಕಾಗಿಯೇ ಇವನು ಅರವತ್ತು ಸಾವಿರ ವರ್ಷಗಳು ತಪಸ್ಸನ್ನು ತಪಿಸಿದನು. ಸುರೇಶ್ವರ! ಬ್ರಹ್ಮನು ಇವನಿಗೆ ಯೋಗಿಗಳ ಮಹತ್ತ್ವವನ್ನೂ, ಮಹಾಮಾಯತ್ವವನ್ನೂ, ಮಹಾಬಲತ್ವವನ್ನೂ, ಮತ್ತು ಉತ್ತಮ ತೇಜಸ್ಸನ್ನೂ ವರವಾಗಿ ನೀಡಿದ್ದಾನೆ.

12272038a ಏತದ್ವೈ ಮಾಮಕಂ ತೇಜಃ ಸಮಾವಿಶತಿ ವಾಸವ|

12272038c ವೃತ್ರಮೇನಂ ತ್ವಮಪ್ಯೇವಂ ಜಹಿ ವಜ್ರೇಣ ದಾನವಮ್||

ವಾಸವ! ಇದೋ ನೋಡು. ನನ್ನ ತೇಜಸ್ಸು ನಿನ್ನಲ್ಲಿ ಸಮಾವೇಶಗೊಳ್ಳುತ್ತದೆ. ಈ ದಾನವ ವೃತ್ರನನ್ನು ವಜ್ರದಿಂದ ನೀನೇ ಸಂಹರಿಸು!”

12272039 ಶಕ್ರ ಉವಾಚ|

12272039a ಭಗವಂಸ್ತ್ವತ್ಪ್ರಸಾದೇನ ದಿತಿಜಂ ಸುದುರಾಸದಮ್|

12272039c ವಜ್ರೇಣ ನಿಹನಿಷ್ಯಾಮಿ ಪಶ್ಯತಸ್ತೇ ಸುರರ್ಷಭ||

ಶಕ್ರನು ಹೇಳಿದನು: “ಭಗವನ್! ಸುರರ್ಷಭ! ನಿನ್ನ ಪ್ರಸಾದದಿಂದ ನೀನು ನೋಡುತ್ತಿರುವಾಗಲೇ ಈ ದಿತಿಯ ಮಗ ದುರಾಸದನನ್ನು ವಜ್ರದಿಂದ ಸಂಹರಿಸುತ್ತೇನೆ.””

12272040 ಭೀಷ್ಮ ಉವಾಚ|

12272040a ಆವಿಶ್ಯಮಾನೇ ದೈತ್ಯೇ ತು ಜ್ವರೇಣಾಥ ಮಹಾಸುರೇ|

12272040c ದೇವತಾನಾಮೃಷೀಣಾಂ ಚ ಹರ್ಷಾನ್ನಾದೋ ಮಹಾನಭೂತ್||

ಭೀಷ್ಮನು ಹೇಳಿದನು: “ಮಹಾಸುರ ದೈತ್ಯನಲ್ಲಿ ಜ್ವರವು ಆವೇಶಗೊಳ್ಳಲು ದೇವತೆಗಳು ಮತ್ತು ಋಷಿಗಳಲ್ಲಿ ಮಹಾ ಹರ್ಷನಾದವುಂಟಾಯಿತು.

12272041a ತತೋ ದುಂದುಭಯಶ್ಚೈವ ಶಂಖಾಶ್ಚ ಸುಮಹಾಸ್ವನಾಃ|

12272041c ಮುರಜಾ ಡಿಂಡಿಮಾಶ್ಚೈವ ಪ್ರಾವಾದ್ಯಂತ ಸಹಸ್ರಶಃ||

ಅನಂತರ ಸಹಸ್ರಾರು ದುಂದುಭಿಗಳೂ, ಮಹಾಸ್ವನದ ಶಂಖಗಳೂ, ಮುರಜ-ಡಿಂಡಿಮಗಳೂ ಮೊಳಗಿದವು.

12272042a ಅಸುರಾಣಾಂ ತು ಸರ್ವೇಷಾಂ ಸ್ಮೃತಿಲೋಪೋಽಭವನ್ಮಹಾನ್|

12272042c ಪ್ರಜ್ಞಾನಾಶಶ್ಚ[3] ಬಲವಾನ್ ಕ್ಷಣೇನ ಸಮಪದ್ಯತ||

ಕ್ಷಣದಲ್ಲಿಯೇ ಸರ್ವ ಅಸುರರ ಮಹಾ ಸ್ಮೃತಿಲೋಪವುಂಟಾಯಿತು. ಆ ಬಲಶಾಲಿಗಳ ಪ್ರಜ್ಞೆಯೂ ನಾಶವಾಗತೊಡಗಿತು.

12272043a ತಮಾವಿಷ್ಟಮಥೋ ಜ್ಞಾತ್ವಾ ಋಷಯೋ ದೇವತಾಸ್ತಥಾ|

12272043c ಸ್ತುವಂತಃ ಶಕ್ರಮೀಶಾನಂ ತಥಾ ಪ್ರಾಚೋದಯನ್ನಪಿ||

ಜ್ವರವು ಆವಿಷ್ಟವಾದುದನ್ನು ತಿಳಿದು ಋಷಿಗಳು ಮತ್ತು ದೇವತೆಗಳು ಈಶಾನ ಶಕ್ರನನ್ನು ಸ್ತುತಿಸುತ್ತಾ ಪ್ರಚೋದಿಸಿದರೂ ಕೂಡ.

12272044a ರಥಸ್ಥಸ್ಯ ಹಿ ಶಕ್ರಸ್ಯ ಯುದ್ಧಕಾಲೇ ಮಹಾತ್ಮನಃ|

12272044c ಋಷಿಭಿಃ ಸ್ತೂಯಮಾನಸ್ಯ ರೂಪಮಾಸೀತ್ಸುದುರ್ದೃಶಮ್||

ಆ ಯುದ್ಧಕಾಲದಲ್ಲಿ ಋಷಿಗಳಿಂದ ಸ್ತುತಿಸಲ್ಪಡುತ್ತಿದ್ದ ರಥಸ್ಥನಾಗಿದ್ದ ಶಕ್ರನ ರೂಪವು ನೋಡಲೂ ಕಷ್ಟವಾಗುವಂತಿತ್ತು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವೃತ್ರವಧೇ ದ್ವಿಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವೃತ್ರವಧ ಎನ್ನುವ ಇನ್ನೂರಾಎಪ್ಪತ್ತೆರಡನೇ ಅಧ್ಯಾಯವು.

[1] ವೇದವಾಕ್ಯಗಳನ್ನು ಸಮನ್ವಯಿಸಿ ಹೇಳುವುದರಲ್ಲಿ ಕುಶಲನಾಗಿದ್ದವನು (ಗೀತಾ ಪ್ರೆಸ್/ಭಾರತ ದರ್ಶನ) ಅಥವಾ ವಿಷ್ಣುಪದವನ್ನು ಅರಸುತ್ತಿದ್ದವನು.

[2] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದ ಅಧಿಕ ಶ್ಲೋಕಾರ್ಧವಿದೆ: ಸಮುದ್ವಿಗ್ನಂ ಸಮೀಕ್ಷ್ಯ ತ್ವಾಂ ಸ್ವಸ್ತೀತ್ಯೂಚುರ್ಜಯಾಯ ತೇ| (ಗೀತಾ ಪ್ರೆಸ್).

[3] ಮಾಯಾನಾಶಾಶ್ಚ (ಗೀತಾ ಪ್ರೆಸ್).

Comments are closed.