Shanti Parva: Chapter 269

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೯[1]

ಹಾರೀತಗೀತ

ಹಾರೀತಮುನಿಯು ಪ್ರತಿಪಾದಿಸಿದ ಸಂನ್ಯಾಸಧರ್ಮ (1-20).

12269001 ಯುಧಿಷ್ಠಿರ ಉವಾಚ|

12269001a ಕಿಂಶೀಲಃ ಕಿಂಸಮಾಚಾರಃ ಕಿಂವಿದ್ಯಃ ಕಿಂಪರಾಯಣಃ|

12269001c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್||

ಯುಧಿಷ್ಠಿರನು ಹೇಳಿದನು: “ಯಾವ ಶೀಲವಿರುವ, ಯಾವ ಆಚಾರವಿರುವ, ಯಾವ ವಿದ್ಯೆಯಿರುವ ಮತ್ತು ಯಾವುದರಲ್ಲಿ ಪರಾಯಣನಾಗಿರುವವನು ಪ್ರಕೃತಿಗಿಂತಲೂ ಆಚೆಯಿರುವ ನಾಶರಹಿತ ಪರಬ್ರಹ್ಮಸ್ಥಾನವನ್ನು ಪಡೆದುಕೊಳ್ಳಬಹುದು?”

12269002 ಭೀಷ್ಮ ಉವಾಚ|

12269002a ಮೋಕ್ಷಧರ್ಮೇಷು ನಿರತೋ ಲಘ್ವಾಹಾರೋ ಜಿತೇಂದ್ರಿಯಃ|

12269002c ಪ್ರಾಪ್ನೋತಿ ಪರಮಂ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್||

ಭೀಷ್ಮನು ಹೇಳಿದನು: “ಮೋಕ್ಷಧರ್ಮದಲ್ಲಿ ನಿರತನಾದ ಲಘು ಆಹಾರೀ ಜಿತೇಂದ್ರಿಯನು ಪಕೃತಿಗಿಂತಲೂ ಅತೀತವಾಗಿರುವ ನಾಶರಹಿತ ಪರಮ ಸ್ಥಾನವನ್ನು ಪಡೆಯುತ್ತಾನೆ.

12269003a ಸ್ವಗೃಹಾದಭಿನಿಃಸೃತ್ಯ ಲಾಭಾಲಾಭೇ ಸಮೋ ಮುನಿಃ|

12269003c ಸಮುಪೋಢೇಷು ಕಾಮೇಷು ನಿರಪೇಕ್ಷಃ ಪರಿವ್ರಜೇತ್||

ಮುನಿಯಾದವನು ಲಾಭ-ನಷ್ಟಗಳನ್ನು ಸಮಾನವೆಂದು ಭಾವಿಸಿ ಕಾಮೋಪಭೋಗಗಳು ಸನ್ನಿಹಿತವಾಗಿದ್ದರೂ ಅವುಗಳಲ್ಲಿ ನಿರಪೇಕ್ಷನಾಗಿ ಮನೆಯಿಂದ ಹೊರಟುಹೋಗಬೇಕು.

12269004a ನ ಚಕ್ಷುಷಾ ನ ಮನಸಾ ನ ವಾಚಾ ದೂಷಯೇದಪಿ|

12269004c ನ ಪ್ರತ್ಯಕ್ಷಂ ಪರೋಕ್ಷಂ ವಾ ದೂಷಣಂ ವ್ಯಾಹರೇತ್ಕ್ವ ಚಿತ್||

ಕಣ್ಣಿನಿಂದಾಗಲೀ, ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ ಯಾವುದನ್ನೂ ದೂಷಿಸಬಾರದು. ಪ್ರತ್ಯಕ್ಷವಾಗಲೀ, ಪರೋಕ್ಷವಾಗಲೀ ಯಾವುದರೊಂದಿಗೂ ದೂಷಿತವಾಗಿ ವ್ಯವಹರಿಸಬಾರದು.

12269005a ನ ಹಿಂಸ್ಯಾತ್ಸರ್ವಭೂತಾನಿ ಮೈತ್ರಾಯಣಗತಿಶ್ಚರೇತ್|

12269005c ನೇದಂ ಜೀವಿತಮಾಸಾದ್ಯ ವೈರಂ ಕುರ್ವೀತ ಕೇನ ಚಿತ್||

ಸರ್ವಭೂತಗಳನ್ನೂ ಹಿಂಸಿಸಬಾರದು. ಮೈತ್ರಿಭಾವದಿಂದಲೇ ವರ್ತಿಸಬೇಕು. ಈ ಜೀವಿತವನ್ನು ಪಡೆದು ಯಾರೊಡನೆಯೂ ವೈರವನ್ನು ಕಟ್ಟಿಕೊಳ್ಳಬಾರದು.

12269006a ಅತಿವಾದಾಂಸ್ತಿತಿಕ್ಷೇತ ನಾಭಿಮನ್ಯೇತ್ಕಥಂ ಚನ|

12269006c ಕ್ರೋಧ್ಯಮಾನಃ ಪ್ರಿಯಂ ಬ್ರೂಯಾದಾಕ್ರುಷ್ಟಃ ಕುಶಲಂ ವದೇತ್||

ಅತಿಯಾದ ಮಾತುಗಳನ್ನು ಸಹಿಸಿಕೊಳ್ಳಬೇಕು. ಯಾರೊಂದಿಗೂ ಅಹಂಕಾರ ಪಡಬಾರದು. ಕೋಪಗೊಂಡವರೊಂದಿಗೂ ಪ್ರಿಯವಾಗಿಯೇ ಮಾತನಾಡಬೇಕು. ನಿಂದಿಸುವವನೊಂದಿಗೂ ಕುಶಲವಾಗಿಯೇ ಮಾತನಾಡಬೇಕು.

12269007a ಪ್ರದಕ್ಷಿಣಂ ಪ್ರಸವ್ಯಂ ಚ ಗ್ರಾಮಮಧ್ಯೇ ನ ಚಾಚರೇತ್|

12269007c ಭೈಕ್ಷಚರ್ಯಾಮನಾಪನ್ನೋ ನ ಗಚ್ಚೇತ್ಪೂರ್ವಕೇತಿತಃ||

ಗ್ರಾಮದಲ್ಲಿ ಸಂಚರಿಸುತ್ತಿರುವಾಗ ಅವನು ಯಾರಿಗೂ ಅತಿಯಾದ ಸೌಹಾರ್ದತೆಯನ್ನಾಗಲೀ ದ್ವೇಷವನ್ನಾಗಲೀ ತೋರಿಸಬಾರದು. ಭಿಕ್ಷೆಗಾಗಿ ಅವನು ಹಿಂದೆ ಹೋಗಿದ್ದ ಮನೆಗಳಿಗೆ ಹೋಗಬಾರದು.

12269008a ಅವಕೀರ್ಣಃ ಸುಗುಪ್ತಶ್ಚ ನ ವಾಚಾ ಹ್ಯಪ್ರಿಯಂ ವದೇತ್|

12269008c ಮೃದುಃ ಸ್ಯಾದಪ್ರತಿಕ್ರೂರೋ ವಿಸ್ರಬ್ಧಃ ಸ್ಯಾದರೋಷಣಃ[2]||

ನಿಂದನೆಯಲ್ಲಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ತಿರುಗಿ ಅಪ್ರಿಯ ಮಾತುಗಳನ್ನಾಡಬಾರದು. ಮೃದುವಾಗಿರಬೇಕು. ತಿರುಗಿ ಕ್ರೌರ್ಯವನ್ನು ತೋರಿಸಬಾರದು. ಭಯ-ಕೋಪಗಳನ್ನು ನಿಯಂತ್ರಣದಲ್ಲಿರಿಸಿಕೊಂಡಿರಬೇಕು.

12269009a ವಿಧೂಮೇ ನ್ಯಸ್ತಮುಸಲೇ ವ್ಯಂಗಾರೇ ಭುಕ್ತವಜ್ಜನೇ|

12269009c ಅತೀತೇ ಪಾತ್ರಸಂಚಾರೇ ಭಿಕ್ಷಾಂ ಲಿಪ್ಸೇತ ವೈ ಮುನಿಃ||

ಅಡುಗೆಮನೆಯಿಂದ ಹೊಗೆಯಾಡುವುದು ನಿಂತಿರುವಾಗ, ಒನಕೆಯ ಶಬ್ದವು ನಿಂತಿರುವಾಗ, ಒಲೆಯಲ್ಲಿ ಬೆಂಕಿಯು ಆರಿಹೋದಾಗ, ಮನೆಯವರೆಲ್ಲರೂ ಊಟಮಾಡಿರುವಾಗ, ಪಾತ್ರೆಗಳನ್ನು ಸೇರಿಸಿ ಇಟ್ಟಿರುವಾಗ ಮಾತ್ರ ಮುನಿಯು ಭಿಕ್ಷೆ ಬೇಡಲು ಹೋಗಬೇಕು[3].

12269010a ಅನುಯಾತ್ರಿಕಮರ್ಥಸ್ಯ ಮಾತ್ರಾಲಾಭೇಷ್ವನಾದೃತಃ[4]|

12269010c ಅಲಾಭೇ ನ ವಿಹನ್ಯೇತ ಲಾಭಶ್ಚೈನಂ ನ ಹರ್ಷಯೇತ್||

ಪ್ರಾಣಧಾರಣೆಗೆ ಎಷ್ಟು ಬೇಕೋ ಅಷ್ಟು ಮಾತ್ರ ತೆಗೆದುಕೊಳ್ಳಬೇಕು. ಅದಕ್ಕಿಂತಲೂ ಹೆಚ್ಚು ತೆಗೆದುಕೊಳ್ಳಬಾರದು. ಏನೂ ದೊರೆಯದೇ ಇದ್ದರೂ ದುಃಖಿಯಾಗಬಾರದು. ಸಿಕ್ಕಿದರೂ ಸಂತೋಷಪಡಬಾರದು.

12269011a ಲಾಭಂ ಸಾಧಾರಣಂ ನೇಚ್ಚೇನ್ನ ಭುಂಜೀತಾಭಿಪೂಜಿತಃ|

12269011c ಅಭಿಪೂಜಿತಲಾಭಂ ಹಿ ಜುಗುಪ್ಸೇತೈವ ತಾದೃಶಃ||

ಸಾಧಾರಣ ಮನುಷ್ಯರು ಬಯಸುವುದನ್ನು ಬಯಸಬಾರದು. ಸತ್ಕಾರದಿಂದ ಕರೆದವರ ಮನೆಯಲ್ಲಿ ಊಟಮಾಡಬಾರದು. ಹಾಗೆಯೇ ಗೌರವಿಸಿ ಕೊಟ್ಟ ಯಾವುದನ್ನೂ ಸ್ವೀಕರಿಸಬಾರದು.

12269012a ನ ಚಾನ್ನದೋಷಾನ್ನಿಂದೇತ ನ ಗುಣಾನಭಿಪೂಜಯೇತ್|

12269012c ಶಯ್ಯಾಸನೇ ವಿವಿಕ್ತೇ ಚ ನಿತ್ಯಮೇವಾಭಿಪೂಜಯೇತ್||

ತನಗಿತ್ತ ಅನ್ನದಲ್ಲಿ ದೋಷವಿದ್ದರೆ ನಿಂದಿಸಬಾರದು. ಹಾಗೆಯೇ ಚೆನ್ನಾಗಿದ್ದರೆ ಹೊಗಳಲೂ ಬಾರದು. ನಿತ್ಯವೂ ಯಾರೊಡನೆಯೂ ಮಲಗಬಾರದು ಮತ್ತು ಕುಳಿತುಕೊಳ್ಳಬಾರದು[5].

12269013a ಶೂನ್ಯಾಗಾರಂ ವೃಕ್ಷಮೂಲಮರಣ್ಯಮಥ ವಾ ಗುಹಾಮ್|

12269013c ಅಜ್ಞಾತಚರ್ಯಾಂ ಗತ್ವಾನ್ಯಾಂ ತತೋಽನ್ಯತ್ರೈವ ಸಂವಿಶೇತ್||

ಖಾಲಿ ಮನೆಯಲ್ಲಿ, ಮರದ ಬುಡದಲ್ಲಿ, ಅರಣ್ಯದಲ್ಲಿ ಅಥವಾ ಗುಹೆಯಲ್ಲಿ ಬೇರೆಯವರಿಗೆ ತಿಳಿಯದಂತೆ ವಾಸಿಸಬೇಕು. ಅಲ್ಲಿ ಯಾರಾದರೂ ಬಂದರೆ ಆ ಸ್ಥಳವನ್ನು ಬಿಟ್ಟು ಬೇರೆಲ್ಲಿಯಾದರೂ ಹೋಗಬೇಕು.

12269014a ಅನುರೋಧವಿರೋಧಾಭ್ಯಾಂ ಸಮಃ ಸ್ಯಾದಚಲೋ ಧ್ರುವಃ|

12269014c ಸುಕೃತಂ ದುಷ್ಕೃತಂ ಚೋಭೇ ನಾನುರುಧ್ಯೇತ ಕರ್ಮಣಿ||

ಅನುರೋಧ-ವಿರೋಧಗಳನ್ನು ಸಮನಾಗಿ ಕಾಣಬೇಕು. ಅಚಲನೂ ಸ್ಥಿರಚಿತ್ತನೂ ಆಗಿರಬೇಕು. ಸುಕೃತ-ದುಷ್ಕೃತಗಳೆರಡರಲ್ಲಿ ಯಾವುದನ್ನೂ ಮಾಡಬಾರದು.

[6]12269015a ವಾಚೋ ವೇಗಂ ಮನಸಃ ಕ್ರೋಧವೇಗಂ

        ವಿವಿತ್ಸಾವೇಗ[7]ಮುದರೋಪಸ್ಥವೇಗಮ್|

12269015c ಏತಾನ್ವೇಗಾನ್ವಿನಯೇದ್ವೈ ತಪಸ್ವೀ

        ನಿಂದಾ ಚಾಸ್ಯ ಹೃದಯಂ ನೋಪಹನ್ಯಾತ್||

ತಪಸ್ವಿಯಾದವನು ಮಾತಿನ ವೇಗ, ಮನಸ್ಸು ಮತ್ತು ಕ್ರೋಧದ ವೇಗವನ್ನು ನಿಯಂತ್ರಿಸಿಕೊಳ್ಳಬೇಕು. ತಿಳಿದುಕೊಳ್ಳಬೇಕೆಂಬ ಆಸೆ, ಹೊಟ್ಟೆ ಮತ್ತು ಉಪಸ್ಥಗಳ ವೇಗವನ್ನು ನಿಯಂತ್ರಿಸಿಕೊಳ್ಳಬೇಕು. ಯಾವ ನಿಂದನೆಗೂ ಹೃದಯದಲ್ಲಿ ನೋಯಬಾರದು.

12269016a ಮಧ್ಯಸ್ಥ ಏವ ತಿಷ್ಠೇತ ಪ್ರಶಂಸಾನಿಂದಯೋಃ ಸಮಃ|

12269016c ಏತತ್ಪವಿತ್ರಂ ಪರಮಂ ಪರಿವ್ರಾಜಕ ಆಶ್ರಮೇ||

ಪ್ರಶಂಸೆ-ನಿಂದನೆಗಳಿಗೆ ಸಮನಾಗಿ ಮಧ್ಯಸ್ಥಭಾವದಿಂದ ಇರಬೇಕು. ಸಂನ್ಯಾಸಾಶ್ರಮದಲ್ಲಿ ಇದು ಪರಮ ಪವಿತ್ರವು.

12269017a ಮಹಾತ್ಮಾ ಸುವ್ರತೋ[8] ದಾಂತಃ ಸರ್ವತ್ರೈವಾನಪಾಶ್ರಿತಃ|

12269017c ಅಪೂರ್ವಚಾರಕಃ ಸೌಮ್ಯೋ ಅನಿಕೇತಃ ಸಮಾಹಿತಃ||

ಇಂಥಹ ಸಂನ್ಯಾಸಿಯು ಮಹಾತ್ಮನು. ಸುವ್ರತನು. ಇಂದ್ರಿಯ ನಿಗ್ರಹಿಯು. ಯಾವುದನ್ನೂ ಹಚ್ಚಿಕೊಂಡಿರದವನು. ಹಿಂದೆ ಹೋದಲ್ಲಿ ಹೋಗದಿರುವವನು. ಸೌಮ್ಯನು. ವಾಸಿಸಲು ನಿರ್ದಿಷ್ಟ ಸ್ಥಳವಿಲ್ಲದವನು. ಮತ್ತು ಸಮಾಹಿತನು.

12269018a ವಾನಪ್ರಸ್ಥಗೃಹಸ್ಥಾಭ್ಯಾಂ ನ ಸಂಸೃಜ್ಯೇತ ಕರ್ಹಿ ಚಿತ್|

12269018c ಅಜ್ಞಾತಲಿಪ್ಸಾಂ ಲಿಪ್ಸೇತ ನ ಚೈನಂ ಹರ್ಷ ಆವಿಶೇತ್||

ಅವನು ಎಂದೂ ವಾನಪ್ರಸ್ಥ ಮತ್ತು ಗೃಹಸ್ಥಾಶ್ರಮಿಗಳೊಂದಿಗೆ ಬೆರೆಯುವುದಿಲ್ಲ. ತಿಳಿಯದೆಯೇ ಯಾವುದಕ್ಕೂ ಆಸೆಪಡಬಾರದು. ಹರ್ಷದಲ್ಲಿಯೂ ಆವೇಶಗೊಳ್ಳಬಾರದು.

12269019a ವಿಜಾನತಾಂ ಮೋಕ್ಷ ಏಷ ಶ್ರಮಃ ಸ್ಯಾದವಿಜಾನತಾಮ್|

12269019c ಮೋಕ್ಷಯಾನಮಿದಂ ಕೃತ್ಸ್ನಂ ವಿದುಷಾಂ ಹಾರಿತೋಽಬ್ರವೀತ್||

ತಿಳಿದವರಿಗೆ ತಿಳಿದಿರುವ ಇದು ಮೋಕ್ಷದ ಆಶ್ರಮವೆಂದು ತಿಳಿ. ಇದು ವಿದುಷ ಹಾರಿತನು ಹೇಳಿದ ಮೋಕ್ಷಯಾನದ ಕುರಿತಾದ ಸಂಪೂರ್ಣ ವಿಷಯವು.

12269020a ಅಭಯಂ ಸರ್ವಭೂತೇಭ್ಯೋ ದತ್ತ್ವಾ ಯಃ ಪ್ರವ್ರಜೇದ್ಗೃಹಾತ್|

12269020c ಲೋಕಾಸ್ತೇಜೋಮಯಾಸ್ತಸ್ಯ ತಥಾನಂತ್ಯಾಯ ಕಲ್ಪತೇ||

ಸರ್ವಭೂತಗಳಿಗೂ ಅಭಯವನ್ನಿತ್ತು ಮನೆಯನ್ನು ಬಿಟ್ಟು ಹೋಗುವವನು ಕಲ್ಪವು ಮುಗಿಯುವವರೆಗೆ ತೇಜೋಮಯ ಲೋಕಗಳನ್ನು ಪಡೆಯುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಹಾರೀತಗೀತಾಯಾಂ ಏಕೋನಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಹಾರೀತಗೀತಾ ಎನ್ನುವ ಇನ್ನೂರಾಅರವತ್ತೊಂಭತ್ತನೇ ಅಧ್ಯಾಯವು.

[1] ಭಾರತ ದರ್ಶನ ಮತ್ತು ಗೀತಾ ಪ್ರೆಸ್ ಸಂಪುಟಗಳಲ್ಲಿ ಈ ಅಧ್ಯಾಯಕ್ಕೆ ಮೊದಲು ಇನ್ನೊಂದು ಅಧ್ಯಾಯವು ಬರುತ್ತದೆ. ಆದರೆ ಅದು ಶಾಂತಿಪರ್ವದ 169ನೇ ಅಧ್ಯಾಯವೇ ಮರುಕಳಿಸಿದೆ. ಇದು ಪುಣೆಯ ಪರಿಷ್ಕೃತ ಸಂಪುಟದಲ್ಲಿ ಇಲ್ಲ.

[2] ಸ್ಯಾದಕತ್ಥನಃ (ಭಾರತ ದರ್ಶನ).

[3] ಯಾರ ಮನೆಯಲ್ಲಿಯಾದರೂ ಮನೆಯವರೆಲ್ಲರೂ ಉಂಡು ಉಳಿದ ಆಹಾರವಿದ್ದರೆ ಮಾತ್ರ ಮುನಿಯು ಅದನ್ನು ಬೇಡಿ ಪಡೆಯಬೇಕು. ಮುನಿಯ ಈ ನಿಯಮಗಳು ಮಹಾಭಾರತದ ಹಲವು ಕಡೆ ಬರುತ್ತದೆ.

[4] ಪ್ರಾಣಯಾತ್ರಿಕಮಾತ್ರಃ ಸ್ಯಾನ್ಮಾತ್ರಾಲಾಭೇಷ್ವನಾದೃತಃ| (ಭಾರತ ದರ್ಶನ).

[5] ಒಂಟಿಯಾಗಿ ಮಲಗಬೇಕು. ಒಂಟಿಯಾಗಿ ಕುಳಿತುಕೊಳ್ಳಬೇಕು.

[6] ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ನಿತ್ಯತೃಪ್ತಃ ಸುಸಂತುಷ್ಟಃ ಪ್ರಸನ್ನವದನೇಂದ್ರಿಯಃ| ವಿಭೀರ್ಜಪ್ಯಪರೋ ಮೌನೀ ವೈರಾಗ್ಯಂ ಸಮುಪಾಶ್ರಿತಃ|| ಅಭ್ಯಸ್ತಂ ಭೌತಿಕಂ ಪಶ್ಯನ್ಭೂತಾನಾಮಾಗತಿಂ ಗತಿಮ್| ನಿಃಸ್ಪೃಹಃ ಸಮದರ್ಶೀ ಚ ಪಕ್ವಾಪಕ್ವೇನ ವರ್ತಯನ್| ಆತ್ಮನಾ ಯಃ ಪ್ರಶಾಂತಾತ್ಮಾ ಲಘ್ವಾಹಾರೋ ಜಿತೇಂದ್ರಿಯಃ|| (ಭಾರತ ದರ್ಶನ).

[7] ಹಿಂಸಾವೇಗ (ಭಾರತ ದರ್ಶನ).

[8] ಸರ್ವತೋ (ಭಾರತ ದರ್ಶನ).

Comments are closed.