Shanit Parva: Chapter 268

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೮

ಮಾಂಡವ್ಯ-ಜನಕ ಸಂವಾದ

ತೃಷ್ಣೆಯನ್ನು ತ್ಯಜಿಸುವ ವಿಷಯದಲ್ಲಿ ಮಾಂಡವ್ಯ ಮುನಿ-ಜನಕರ ನಡುವಿನ ಸಂವಾದ (1-20).

12268001 ಯುಧಿಷ್ಠಿರ ಉವಾಚ|

12268001a ಭ್ರಾತರಃ ಪಿತರಃ ಪುತ್ರಾ ಜ್ಞಾತಯಃ ಸುಹೃದಸ್ತಥಾ|

12268001c ಅರ್ಥಹೇತೋರ್ಹತಾಃ ಕ್ರೂರೈರಸ್ಮಾಭಿಃ ಪಾಪಬುದ್ಧಿಭಿಃ||

ಯುಧಿಷ್ಠಿರನು ಹೇಳಿದನು: “ಸಂಪತ್ತಿಗಾಗಿ ನಮ್ಮ ಕ್ರೂರತನದಿಂದ ಮತ್ತು ಪಾಪಬುದ್ಧಿಯಿಂದ ಸಹೋದರರು, ಪಿತರು, ಪುತ್ರರು, ಬಂಧುಗಳು ಮತ್ತು ಸುಹೃದಯರು ಹತರಾದರು.

12268002a ಯೇಯಮರ್ಥೋದ್ಭವಾ ತೃಷ್ಣಾ ಕಥಮೇತಾಂ ಪಿತಾಮಹ|

12268002c ನಿವರ್ತಯೇಮ ಪಾಪಂ ಹಿ ತೃಷ್ಣಯಾ ಕಾರಿತಾ ವಯಮ್||

ಪಿತಾಮಹ! ಈ ತೃಷ್ಣೆಯು ಸಂಪತ್ತಿಗಾಗಿಯೇ ಹುಟ್ಟಿಕೊಂಡಿತು. ತೃಷ್ಣೆಯಿಂದ ನಾವು ಮಾಡಿದ ಈ ಪಾಪವನ್ನು ಹೇಗೆ ಕಳೆದುಕೊಳ್ಳಬಹುದು?”

12268003 ಭೀಷ್ಮ ಉವಾಚ|

12268003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12268003c ಗೀತಂ ವಿದೇಹರಾಜೇನ ಮಾಂಡವ್ಯಾಯಾನುಪೃಚ್ಚತೇ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಮಾಂಡವ್ಯನ ಪ್ರಶ್ನೆಗೆ ಉತ್ತರವಾದ ವಿದೇಹರಾಜನ ಗೀತೆಯನ್ನು ಉದಾಹರಿಸುತ್ತಾರೆ.

12268004a ಸುಸುಖಂ ಬತ ಜೀವಾಮಿ ಯಸ್ಯ ಮೇ ನಾಸ್ತಿ ಕಿಂ ಚನ|

12268004c ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ದಹ್ಯತಿ ಕಿಂ ಚನ||

“ನನ್ನದೆನ್ನುವುದು ಯಾವುದೂ ಇಲ್ಲ. ಆದರೂ ನಾನು ಅತ್ಯಂತ ಸುಖದಿಂದ ಜೀವಿಸುತ್ತಿದ್ದೇನೆ. ಮಿಥೆಲೆಯು ಹತ್ತಿಕೊಂಡು ಉರಿಯುತ್ತಿದ್ದರೂ ನನ್ನದ್ಯಾವುದೂ ಸುಟ್ಟುಹೋಗುತ್ತಿಲ್ಲ.

12268005a ಅರ್ಥಾಃ ಖಲು ಸಮೃದ್ಧಾ ಹಿ ಬಾಢಂ ದುಃಖಂ ವಿಜಾನತಾಮ್|

12268005c ಅಸಮೃದ್ಧಾಸ್ತ್ವಪಿ ಸದಾ ಮೋಹಯಂತ್ಯವಿಚಕ್ಷಣಾನ್||

ಸಂಪತ್ತು ಸಮೃದ್ಧಿಯನ್ನು ತರುವುದೇನೋ ಸರಿ. ಆದರೆ ತಿಳಿದವರು ಇದು ದುಃಖಕ್ಕೆ ಕಾರಣವೆಂದು ತಿಳಿದಿದ್ದಾರೆ. ತಿಳಿಯದೇ ಇರುವವರನ್ನು ಸಂಪತ್ತು, ಸಮೃದ್ಧಿಯನ್ನು ತರದಿದ್ದರೂ, ಮೋಹಿಸುತ್ತದೆ.

12268006a ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್|

12268006c ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್||

ಈ ಲೋಕದ ಕಾಮಸುಖ ಮತ್ತು ಸ್ವರ್ಗಲೋಕದ ಮಹಾಸುಖ ಇವೆರಡೂ ತೃಷ್ಣಾಕ್ಷಯ ಸುಖದ ಹದಿನಾರನೇ ಒಂದು ಅಂಶಕ್ಕೂ ಸಮನಾಗಿಲ್ಲ.

12268007a ಯಥೈವ ಶೃಂಗಂ ಗೋಃ ಕಾಲೇ ವರ್ಧಮಾನಸ್ಯ ವರ್ಧತೇ|

12268007c ತಥೈವ ತೃಷ್ಣಾ ವಿತ್ತೇನ ವರ್ಧಮಾನೇನ ವರ್ಧತೇ||

ಕಾಲಕ್ಕೆ ತಕ್ಕಂತೆ ಗೋವು ಬೆಳೆಯುತ್ತಾ ಬಂದಂತೆ ಅದರ ಕೊಂಬೂ ಬೆಳೆಯುತ್ತದೆ. ಅದೇ ರೀತಿ ಸಂಪತ್ತು ಹೆಚ್ಚಾಗುತ್ತಾ ಬಂದಂತೆ ತೃಷ್ಣೆಯೂ ಹೆಚ್ಚಾಗುತ್ತದೆ.

12268008a ಕಿಂ ಚಿದೇವ ಮಮತ್ವೇನ ಯದಾ ಭವತಿ ಕಲ್ಪಿತಮ್|

12268008c ತದೇವ ಪರಿತಾಪಾಯ ನಾಶೇ ಸಂಪದ್ಯತೇ ಪುನಃ||

ಯಾವ ವಸ್ತುವಿನ ಮೇಲಾದರೂ ಮಮತ್ವವೆನ್ನುವನ್ನು ಕಲ್ಪಿಸಿಕೊಂಡರೆ ಅದು ನಾಶವಾದಾಗ ಪುನಃ ಪರಿತಾಪವುಂಟಾಗುತ್ತದೆ.

12268009a ನ ಕಾಮಾನನುರುಧ್ಯೇತ ದುಃಖಂ ಕಾಮೇಷು ವೈ ರತಿಃ|

12268009c ಪ್ರಾಪ್ಯಾರ್ಥಮುಪಯುಂಜೀತ ಧರ್ಮೇ ಕಾಮಂ ವಿವರ್ಜಯೇತ್||

ಕಾಮನೆಗಳನ್ನು ಅನುಸರಿಸಿಕೊಂಡು ಹೋಗಬಾರದು. ಕಾಮನೆಗಳಲ್ಲಿಯ ಆಸಕ್ತಿಯು ದುಃಖವನ್ನು ತರುತ್ತದೆ. ಧನಪ್ರಾಪ್ತಿಯಾದರೂ ಅದನ್ನು ಧರ್ಮಕ್ಕೆ ಬಳಸಬೇಕು. ಕಾಮವನ್ನು ವರ್ಜಿಸಬೇಕು.

12268010a ವಿದ್ವಾನ್ಸರ್ವೇಷು ಭೂತೇಷು ವ್ಯಾಘ್ರಮಾಂಸೋಪಮೋ[1] ಭವೇತ್|

12268010c ಕೃತಕೃತ್ಯೋ ವಿಶುದ್ಧಾತ್ಮಾ ಸರ್ವಂ ತ್ಯಜತಿ ವೈ ಸಹ||

ವಿದ್ವಾಂಸನು ಸರ್ವಭೂತಗಳಲ್ಲಿಯೂ – ಹುಲಿ ಮತ್ತು ಮಾಂಸದ ಮುದ್ದೆ – ಎನ್ನುವಂತೆ ಸಮನಾಗಿರಬೇಕು. ವಿಶುದ್ಧಾತ್ಮನಾಗಿ ಕೃತಕೃತ್ಯನಾದವನು ಎಲ್ಲವನ್ನೂ ತ್ಯಜಿಸುತ್ತಾನೆ.

12268011a ಉಭೇ ಸತ್ಯಾನೃತೇ ತ್ಯಕ್ತ್ವಾ ಶೋಕಾನಂದೌ ಪ್ರಿಯಾಪ್ರಿಯೇ|

12268011c ಭಯಾಭಯೇ ಚ ಸಂತ್ಯಜ್ಯ ಸಂಪ್ರಶಾಂತೋ ನಿರಾಮಯಃ||

ಸತ್ಯ-ಸುಳ್ಳು, ಶೋಕ-ಆನಂದ, ಪ್ರಿಯ-ಅಪ್ರಿಯ, ಭಯ-ಅಭಯ ಈ ದ್ವಂದ್ವಗಳನ್ನು ತ್ಯಜಿಸಿದವನು ಪ್ರಶಾಂತನೂ ನಿರಾಮಯನೂ ಆಗುತ್ತಾನೆ.

12268012a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ|

12268012c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್||

ದುರ್ಮತಿಗಳಿಗೆ ಇದನ್ನು ತ್ಯಜಿಸುವುದು ಕಷ್ಟವು. ದೇಹವು ಜೀರ್ಣವಾದರೂ ಅದು ಜೀರ್ಣವಾಗುವುದಿಲ್ಲ. ಇದು ಪ್ರಾಣಾಂತಿಕ ರೋಗದಂತಿರುತ್ತದೆ. ತೃಷ್ಣೆಯನ್ನು ತ್ಯಜಿಸಿದರೆ ಸುಖವುಂಟಾಗುತ್ತದೆ.

12268013a ಚಾರಿತ್ರಮಾತ್ಮನಃ ಪಶ್ಯಂಶ್ಚಂದ್ರಶುದ್ಧಮನಾಮಯಮ್|

12268013c ಧರ್ಮಾತ್ಮಾ ಲಭತೇ ಕೀರ್ತಿಂ ಪ್ರೇತ್ಯ ಚೇಹ ಯಥಾಸುಖಮ್||

ಆತ್ಮನಲ್ಲಿ ಧರ್ಮವಿರುವವನು ಶುದ್ಧ ಚಂದ್ರನಂತೆ ತನ್ನ ನಿರ್ಮಲ ಆತ್ಮನನ್ನು ಕಾಣುತ್ತಾನೆ. ಅವನು ಇಲ್ಲಿ ಕೀರ್ತಿಯನ್ನೂ ಮತ್ತು ಮರಣಾನಂತರ ಯಥಾಸುಖವನ್ನೂ ಪಡೆಯುತ್ತಾನೆ.”

12268014a ರಾಜ್ಞಸ್ತದ್ವಚನಂ ಶ್ರುತ್ವಾ ಪ್ರೀತಿಮಾನಭವದ್ದ್ವಿಜಃ|

12268014c ಪೂಜಯಿತ್ವಾ ಚ ತದ್ವಾಕ್ಯಂ ಮಾಂಡವ್ಯೋ ಮೋಕ್ಷಮಾಶ್ರಿತಃ||

ರಾಜನ ಮಾತನ್ನು ಕೇಳಿ ದ್ವಿಜನು ಪ್ರೀತನಾದನು. ಆ ಮಾತನ್ನು ಪೂಜಿಸಿ ಮಾಂಡವ್ಯನು ಮೋಕ್ಷಮಾರ್ಗವನ್ನಾಶ್ರಯಿಸಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮಾಂಡವ್ಯಜನಕಸಂವಾದೇ ಅಷ್ಟಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮಾಂಡವ್ಯಜನಕಸಂವಾದ ಎನ್ನುವ ಇನ್ನೂರಾಅರವತ್ತೆಂಟನೇ ಅಧ್ಯಾಯವು.

[1] ಆತ್ಮನಾ ಸೋಪಮೋ (ಭಾರತ ದರ್ಶನ).

Comments are closed.