Shanti Parva: Chapter 270

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೭೦

ವೃತ್ರಗೀತ

ಬ್ರಹ್ಮಪ್ರಾಪ್ತಿಗೆ ಉಪಾಯ; ವೃತ್ರ-ಶುಕ್ರರ ಸಂವಾದ (1-34).

12270001 ಯುಧಿಷ್ಠಿರ ಉವಾಚ|

12270001a ಧನ್ಯಾ ಧನ್ಯಾ ಇತಿ ಜನಾಃ ಸರ್ವೇಽಸ್ಮಾನ್ ಪ್ರವದಂತ್ಯುತ|

12270001c ನ ದುಃಖಿತತರಃ ಕಶ್ಚಿತ್ಪುಮಾನಸ್ಮಾಭಿರಸ್ತಿ ಹ||

ಯುಧಿಷ್ಠಿರನು ಹೇಳಿದನು: “ಎಲ್ಲ ಜನರೂ ನಮ್ಮನ್ನು “ಧನ್ಯರು! ಧನ್ಯರು!” ಎಂದು ಹೇಳುತ್ತಾರೆ. ಆದರೆ ನಮಗಿಂತಲೂ ಹೆಚ್ಚು ದುಃಖಿತರಾದವರು ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ.

12270002a ಲೋಕಸಂಭಾವಿತೈರ್ದುಃಖಂ ಯತ್ಪ್ರಾಪ್ತಂ ಕುರುಸತ್ತಮ|

12270002c ಪ್ರಾಪ್ಯ ಜಾತಿಂ ಮನುಷ್ಯೇಷು ದೇವೈರಪಿ ಪಿತಾಮಹ||

ಕುರುಸತ್ತಮ! ಪಿತಾಮಹ! ದೇವತೆಗಳಿಂದ ಮನುಷ್ಯ ಜಾತಿಯನ್ನು ಪಡೆದುಕೊಂಡರೂ ಲೋಕ ಸನ್ಮಾನಿತರಾದ ನಾವು ದುಃಖಗಳನ್ನು ಅನುಭವಿಸುತ್ತಿದ್ದೇವೆ.

12270003a ಕದಾ ವಯಂ ಕರಿಷ್ಯಾಮಃ ಸಂನ್ಯಾಸಂ ದುಃಖಸಂಜ್ಞಕಮ್|

12270003c ದುಃಖಮೇತಚ್ಚರೀರಾಣಾಂ ಧಾರಣಂ ಕುರುಸತ್ತಮ||

ಕುರುಸತ್ತಮ! ದುಃಖಸಂಜ್ಞಕವಾಗಿರುವ ಸಂನ್ಯಾಸವನ್ನು ನಾವು ಎಂದು ಕೈಗೊಳ್ಳುತ್ತೇವೆ? ಈ ಶರೀರಧಾರಣೆಯೇ ದುಃಖಕರವಾಗಿದೆ.

12270004a ವಿಮುಕ್ತಾಃ ಸಪ್ತದಶಭಿರ್ಹೇತುಭೂತೈಶ್ಚ ಪಂಚಭಿಃ|

12270004c ಇಂದ್ರಿಯಾರ್ಥೈರ್ಗುಣೈಶ್ಚೈವ ಅಷ್ಟಾಭಿಃ ಪ್ರಪಿತಾಮಹ||

12270005a ನ ಗಚ್ಚಂತಿ ಪುನರ್ಭಾವಂ ಮುನಯಃ ಸಂಶಿತವ್ರತಾಃ|

12270005c ಕದಾ ವಯಂ ಭವಿಷ್ಯಾಮೋ ರಾಜ್ಯಂ ಹಿತ್ವಾ ಪರಂತಪ||

ಪ್ರಪಿತಾಮಹ! ಹದಿನೇಳು ತತ್ತ್ವಗಳಿಂದಲೂ[1], ಸಂಸಾರಕ್ಕೆ ಹೇತುಗಳಾದ ಐದರಿಂದಲೂ[2], ಇಂದ್ರಿಯಾರ್ಥಗಳಿಂದಲೂ[3] ಮತ್ತು ಎಂಟು ತತ್ತ್ವಗಳಿಂದಲೂ[4] ವಿಮುಕ್ತರಾದ ಸಂಶಿತವ್ರತ ಮುನಿಗಳು ಪುನಃ ಜನ್ಮವನ್ನು ಹೊಂದುವುದಿಲ್ಲ. ಪರಂತಪ! ಯಾವಾಗ ನಾವು ರಾಜ್ಯವನ್ನು ತೊರೆಯಬಲ್ಲೆವು?”

12270006 ಭೀಷ್ಮ ಉವಾಚ|

12270006a ನಾಸ್ತ್ಯನಂತಂ ಮಹಾರಾಜ ಸರ್ವಂ ಸಂಖ್ಯಾನಗೋಚರಮ್|

12270006c ಪುನರ್ಭಾವೋಽಪಿ ಸಂಖ್ಯಾತೋ ನಾಸ್ತಿ ಕಿಂ ಚಿದಿಹಾಚಲಮ್||

ಭೀಷ್ಮನು ಹೇಳಿದನು: “ಮಹಾರಾಜ! ದುಃಖವು ಅನಂತವಲ್ಲ. ಅಂತ್ಯವುಳ್ಳದ್ದು. ಪ್ರಪಂಚದಲ್ಲಿರುವ ಎಲ್ಲವೂ ಸಂಖ್ಯೆಯ ಮಿತಿಯಲ್ಲಿಯೇ ಇವೆ. ಅಸಂಖ್ಯಾತವೆನ್ನುವುದು ಯಾವುದೂ ಇಲ್ಲ. ಪುನರ್ಜನ್ಮವೂ ನಶ್ವರವೆಂದು ಪ್ರಸಿದ್ಧವಾಗಿದೆ. ಆದುದರಿಂದ ಪ್ರಪಂಚದಲ್ಲಿ ಯಾವುದೂ ಅಚಲವಾಗಿಲ್ಲ; ಸ್ಥಿರವಾಗಿಲ್ಲ.

12270007a ನ ಚಾಪಿ ಗಮ್ಯತೇ ರಾಜನ್ನೈಷ ದೋಷಃ ಪ್ರಸಂಗತಃ|

12270007c ಉದ್ಯೋಗಾದೇವ ಧರ್ಮಜ್ಞ ಕಾಲೇನೈವ ಗಮಿಷ್ಯಥ||

ರಾಜನ್! ನೀನು ಪಡೆದುಕೊಂಡಿರುವ ಈ ರಾಜ್ಯ-ಐಶ್ವರ್ಯಗಳು ದೋಷಯುಕ್ತವಾದುದು ಮತ್ತು ಮೋಕ್ಷಕ್ಕೆ ಪ್ರತಿಬಂಧಕವಾದುದು ಎಂದು ಭಾವಿಸುವುದು ಉಚಿತವಲ್ಲ. ಧರ್ಮಜ್ಞ! ನಿಮ್ಮ ಪ್ರಯತ್ನ ಮತ್ತು ಕಾಲಗತಿಯಿಂದಾಗಿ ನೀವು ಮೋಕ್ಷಪದವನ್ನು ಹೊಂದುತ್ತೀರಿ.

12270008a ಈಶೋಽಯಂ[5] ಸತತಂ ದೇಹೀ ನೃಪತೇ ಪುಣ್ಯಪಾಪಯೋಃ|

12270008c ತತ ಏವ ಸಮುತ್ಥೇನ ತಮಸಾ ರುಧ್ಯತೇಽಪಿ ಚ||

ನೃಪತೇ! ಈ ದೇಹದಲ್ಲಿ ಆತ್ಮನೇ ಸತತವೂ ಪುಣ್ಯಪಾಪಗಳ ಈಶನು. ಆದರೆ ಹೆಚ್ಚಾಗುವ ತಮಸ್ಸು ಅದರ ದೃಷ್ಟಿಯನ್ನು ಮಂಜುಮಾಡುತ್ತದೆ.

12270009a ಯಥಾಂಜನಮಯೋ ವಾಯುಃ ಪುನರ್ಮಾನಃಶಿಲಂ ರಜಃ|

12270009c ಅನುಪ್ರವಿಶ್ಯ ತದ್ವರ್ಣೋ ದೃಶ್ಯತೇ ರಂಜಯನ್ದಿಶಃ||

12270010a ತಥಾ ಕರ್ಮಫಲೈರ್ದೇಹೀ ರಂಜಿತಸ್ತಮಸಾವೃತಃ|

12270010c ವಿವರ್ಣೋ ವರ್ಣಮಾಶ್ರಿತ್ಯ ದೇಹೇಷು ಪರಿವರ್ತತೇ||

ಹೊಗೆಯಿಂದ ಆವೃತವಾಗಿ ಕಾಡಿಗೆಯ ಸಮೂಹದಂತೆ ಕಾಣುವ ಗಾಳಿಯು ಮಣಿಶಿಲೆಯ ಧೂಳಿನೊಡನೆ ಬೆರತು ಕೆಂಪಾಗಿ ಎಲ್ಲದಿಕ್ಕುಗಳನ್ನೂ ಕೆಂಪಾಗಿಸುವಂತೆ, ಸ್ವಭಾವತಃ ವರ್ಣವಿಹೀನನಾದ ಜೀವಾತ್ಮನು ಕರ್ಮಫಲಗಳಿಂದ ರಂಜಿತನಾಗಿ ಅಜ್ಞಾನದಿಂದ ಆವೃತನಾಗಿ ಬೇರೆ ಬೇರೆ ವರ್ಣಗಳನ್ನು ತಳೆದು ದೇಹಗಳಲ್ಲಿ ಸಂಚರಿಸುತ್ತಿರುತ್ತಾನೆ.

12270011a ಜ್ಞಾನೇನ ಹಿ ಯದಾ ಜಂತುರಜ್ಞಾನಪ್ರಭವಂ ತಮಃ|

12270011c ವ್ಯಪೋಹತಿ ತದಾ ಬ್ರಹ್ಮ ಪ್ರಕಾಶೇತ ಸನಾತನಮ್||

ಜಂತುವು ಜ್ಞಾನದ ಮೂಲಕ ಅಜ್ಞಾನಜನಿತವಾದ ತಮಸ್ಸನ್ನು ಯಾವಾಗ ಕಳೆದುಕೊಳ್ಳುತ್ತದೆಯೋ ಆಗ ಅದರಲ್ಲಿ ಸನಾತನ ಬ್ರಹ್ಮವು ಪ್ರಕಾಶಿಸುತ್ತದೆ.

12270012a ಅಯತ್ನಸಾಧ್ಯಂ ಮುನಯೋ ವದಂತಿ

ಯೇ ಚಾಪಿ ಮುಕ್ತಾಸ್ತ ಉಪಾಸಿತವ್ಯಾಃ|

12270012c ತ್ವಯಾ ಚ ಲೋಕೇನ ಚ ಸಾಮರೇಣ

ತಸ್ಮಾನ್ನ ಶಾಮ್ಯಂತಿ[6] ಮಹರ್ಷಿಸಂಘಾಃ||

ಕರ್ಮಗಳಿಂದ ಇದು ಸಾಧ್ಯವಿಲ್ಲವೆಂದು ಮುನಿಗಳು ಹೇಳುತ್ತಾರೆ. ಅದಕ್ಕಾಗಿ ದೇವತೆಗಳೂ ಮುಕ್ತರಾದವರನ್ನು ಉಪಾಸಿಸುತ್ತಾರೆ. ನೀನೂ ಹಾಗೆಯೇ ಮಾಡಬೇಕು. ಮಹರ್ಷಿಸಂಘಗಳೂ ಆ ಶಾಂತಿಯನ್ನು ಪಡೆದಿರುವುದಿಲ್ಲ.

12270013a ಅಸ್ಮಿನ್ನರ್ಥೇ ಪುರಾ ಗೀತಂ ಶೃಣುಷ್ವೈಕಮನಾ ನೃಪ|

12270013c ಯಥಾ ದೈತ್ಯೇನ ವೃತ್ರೇಣ ಭ್ರಷ್ಟೈಶ್ವರ್ಯೇಣ ಚೇಷ್ಟಿತಮ್||

ನೃಪ! ಈ ವಿಷಯದಲ್ಲಿ ದೈತ್ಯ ವೃತ್ರನು ಐಶ್ವರ್ಯಭ್ರಷ್ಟನಾಗಿ ಹೇಳಿದ ಪುರಾತನ ಗೀತೆಯನ್ನು ಏಕಮನಸ್ಕನಾಗಿ ಕೇಳು.

12270014a ನಿರ್ಜಿತೇನಾಸಹಾಯೇನ ಹೃತರಾಜ್ಯೇನ ಭಾರತ|

12270014c ಅಶೋಚತಾ ಶತ್ರುಮಧ್ಯೇ ಬುದ್ಧಿಮಾಸ್ಥಾಯ ಕೇವಲಾಮ್||

12270015a ಭ್ರಷ್ಟೈಶ್ವರ್ಯಂ ಪುರಾ ವೃತ್ರಮುಶನಾ ವಾಕ್ಯಮಬ್ರವೀತ್|

12270015c ಕಚ್ಚಿತ್ಪರಾಜಿತಸ್ಯಾದ್ಯ ನ ವ್ಯಥಾ ತೇಽಸ್ತಿ ದಾನವ||

ಭಾರತ! ಹಿಂದೆ ಯುದ್ಧದಲ್ಲಿ ಸೋತು ರಾಜ್ಯವನ್ನು ಕಳೆದುಕೊಂಡು ಅಸಹಾಯಕನಾಗಿ ಐಶ್ವರ್ಯಭ್ರಷ್ಟನಾಗಿದ್ದ ವೃತ್ರನು ಕೇವಲ ಬುದ್ಧಿಯನ್ನು ಉಪಯೋಗಿಸಿ ಶತ್ರುಮಧ್ಯದಲ್ಲಿ ಶೋಕಿಸಲಿಲ್ಲ. ಆಗ ಉಶನಸನು ಅವನನ್ನು ಪ್ರಶ್ನಿಸಿದನು: “ದಾನವ! ಇಂದು ಪರಾಜಿತನಾಗಿದ್ದರೂ ನಿನಗೆ ಏಕೆ ವ್ಯಥೆಯಾಗುತ್ತಿಲ್ಲ?”

12270016 ವೃತ್ರ ಉವಾಚ|

12270016a ಸತ್ಯೇನ ತಪಸಾ ಚೈವ ವಿದಿತ್ವಾ ಸಂಕ್ಷಯಂ ಹ್ಯಹಮ್|

12270016c ನ ಶೋಚಾಮಿ ನ ಹೃಷ್ಯಾಮಿ ಭೂತಾನಾಮಾಗತಿಂ ಗತಿಮ್||

ವೃತ್ರನು ಹೇಳಿದನು: “ಸತ್ಯ ಮತ್ತು ತಪಸ್ಸಿನಿಂದ ನಾನು ಸಂಕ್ಷಯದ ಕುರಿತು ತಿಳಿದಿದ್ದೇನೆ. ಭೂತಗಳ ಆಗು-ಹೋಗುಗಳ ಕುರಿತು ನಾನು ಹರ್ಷಿಸುವುದೂ ಇಲ್ಲ, ಶೋಕಿಸುವುದೂ ಇಲ್ಲ.

12270017a ಕಾಲಸಂಚೋದಿತಾ ಜೀವಾ ಮಜ್ಜಂತಿ ನರಕೇಽವಶಾಃ|

12270017c ಪರಿದೃಷ್ಟಾನಿ[7] ಸರ್ವಾಣಿ ದಿವ್ಯಾನ್ಯಾಹುರ್ಮನೀಷಿಣಃ||

ಕಾಲಸಂಚೋದಿತ ಜೀವಗಳು ನರಕದಲ್ಲಿ ಅಸ್ವತಂತ್ರರಾಗಿ ಮುಳುಗಿರುತ್ತವೆ. ಮನೀಷಿಣರು ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಕೆಲವರು ಹೇಳುತ್ತಾರೆ.

12270018a ಕ್ಷಪಯಿತ್ವಾ ತು ತಂ ಕಾಲಂ ಗಣಿತಂ ಕಾಲಚೋದಿತಾಃ|

12270018c ಸಾವಶೇಷೇಣ ಕಾಲೇನ ಸಂಭವಂತಿ ಪುನಃ ಪುನಃ||

ಆ ಕಾಲಚೋದಿತ ಜೀವಗಳು ಲೆಕ್ಕಮಾಡಿ ನಿರ್ದಿಷ್ಟಕಾಲಗಳ ವರೆಗೆ ಅಲ್ಲಿದ್ದು ಆ ಕಾಲಾವಧಿಯು ಮುಗಿದ ನಂತರ ಪುನಃ ಪುನಃ ಹುಟ್ಟುತ್ತಿರುತ್ತವೆ.

12270019a ತಿರ್ಯಗ್ಯೋನಿಸಹಸ್ರಾಣಿ ಗತ್ವಾ ನರಕಮೇವ ಚ|

12270019c ನಿರ್ಗಚ್ಚಂತ್ಯವಶಾ ಜೀವಾಃ ಕಾಲಬಂಧನಬಂಧನಾಃ[8]||

ಕಾಲಬಂಧನದಿಂದ ಬಂಧಿತರಾದ ಅಸ್ವತಂತ್ರ ಜೀವಗಳು ಸಹಸ್ರಾರು ತಿರ್ಯಗ್ಯೋನಿಗಳಲ್ಲಿ ಹುಟ್ಟಿ ಮತ್ತು ನರಕಕ್ಕೂ ಹೋಗಿ ಅವಧಿಯು ಮುಗಿದ ನಂತರ ಅಲ್ಲಿಂದ ಹೊರಬರುತ್ತವೆ.

12270020a ಏವಂ ಸಂಸರಮಾಣಾನಿ ಜೀವಾನ್ಯಹಮದೃಷ್ಟವಾನ್|

12270020c ಯಥಾ ಕರ್ಮ ತಥಾ ಲಾಭ ಇತಿ ಶಾಸ್ತ್ರನಿದರ್ಶನಮ್||

ಹೀಗೆ ಜೀವಿಗಳು ಸಂಸಾರಚಕ್ರದಲ್ಲಿ ಬಿದ್ದಿರುವುದನ್ನು ನಾನು ನೋಡಿದ್ದೇನೆ. ಕರ್ಮವು ಹೇಗೋ ಹಾಗೆ ಲಾಭ ಎಂದು ಶಾಸ್ತ್ರನಿದರ್ಶನವಿದೆ.

12270021a ತಿರ್ಯಗ್ಗಚ್ಚಂತಿ ನರಕಂ ಮಾನುಷ್ಯಂ ದೈವಮೇವ ಚ|

12270021c ಸುಖದುಃಖೇ ಪ್ರಿಯದ್ವೇಷ್ಯೇ ಚರಿತ್ವಾ ಪೂರ್ವಮೇವ ಚ||

ಸುಖ-ದುಃಖ ಮತ್ತು ಪ್ರಿಯ-ದ್ವೇಶಗಳಲ್ಲಿ ಅವರ ಪೂರ್ವನಡತೆಗಳಿಗನುಗುಣವಾಗಿ ಜೀವಗಳು ತಿರ್ಯಗ್ಯೋನಿ, ನರಕ, ಮನುಷ್ಯತ್ವ ಮತ್ತು ದೇವತ್ವಗಳನ್ನು ಪಡೆದುಕೊಳ್ಳುತ್ತವೆ.

12270022a ಕೃತಾಂತವಿಧಿಸಂಯುಕ್ತಂ ಸರ್ವಲೋಕಃ ಪ್ರಪದ್ಯತೇ|

12270022c ಗತಂ ಗಚ್ಚಂತಿ ಚಾಧ್ವಾನಂ ಸರ್ವಭೂತಾನಿ ಸರ್ವದಾ||

ಕೃತಾಂತ ಯಮನ ಕಟ್ಟಳೆಯಂತೆ ಎಲ್ಲ ಲೋಕಗಳು ನಡೆಯುತ್ತವೆ. ಸರ್ವಭೂತಗಳೂ ಸರ್ವದಾ ಎಲ್ಲರೂ ಹೋದ ಮಾರ್ಗಗಳಲ್ಲಿಯೇ ಹೋಗುತ್ತವೆ.””

12270023 ಭೀಷ್ಮ ಉವಾಚ|

12270023a ಕಾಲಸಂಖ್ಯಾನಸಂಖ್ಯಾತಂ ಸೃಷ್ಟಿಸ್ಥಿತಿಪರಾಯಣಮ್|

12270023c ತಂ ಭಾಷಮಾಣಂ ಭಗವಾನುಶನಾ ಪ್ರತ್ಯಭಾಷತ|

12270023e ಭೀಮಾನ್ದುಷ್ಟಪ್ರಲಾಪಾಂಸ್ತ್ವಂ[9] ತಾತ ಕಸ್ಮಾತ್ ಪ್ರಭಾಷಸೇ||

ಭೀಷ್ಮನು ಹೇಳಿದನು: “ಕಾಲಸಂಖ್ಯೆಗಳನ್ನು ಎಣಿಸುತ್ತಿದ್ದ, ಸೃಷ್ಟಿಸ್ಥಿತಿಪರಾಯಣನಾಗಿ ಮಾತನಾಡುತ್ತಿದ್ದ ಅವನಿಗೆ ಭಗವಾನ್ ಉಶನಸನು ಹೇಳಿದನು: “ಅಯ್ಯಾ! ಏಕೆ ಈ ಭಯಂಕರ ದುಷ್ಟ ಪ್ರಲಾಪವನ್ನು ಮಾಡುತ್ತಿದ್ದೀಯೆ?”

12270024 ವೃತ್ರ ಉವಾಚ|

12270024a ಪ್ರತ್ಯಕ್ಷಮೇತದ್ಭವತಸ್ತಥಾನ್ಯೇಷಾಂ ಮನೀಷಿಣಾಮ್|

12270024c ಮಯಾ ಯಜ್ಜಯಲುಬ್ಧೇನ ಪುರಾ ತಪ್ತಂ ಮಹತ್ತಪಃ||

ವೃತ್ರನು ಹೇಳಿದನು: “ಹಿಂದೆ ನಾನು ಲುಬ್ಧನಾಗಿ ಯಜ್ಞಗಳನ್ನು ಮಾಡಿದ್ದುದನ್ನು ಮತ್ತು ಮಹಾ ತಪಸ್ಸನ್ನು ತಪಿಸಿದ್ದುದನ್ನು ನೀವು ಮತ್ತು ಅನ್ಯ ಮನೀಷಿಣರು ಪ್ರತ್ಯಕ್ಷವಾಗಿ ನೋಡಿದ್ದೀರಿ.

12270025a ಗಂಧಾನಾದಾಯ ಭೂತಾನಾಂ ರಸಾಂಶ್ಚ ವಿವಿಧಾನಪಿ|

12270025c ಅವರ್ಧಂ ತ್ರೀನ್ಸಮಾಕ್ರಮ್ಯ ಲೋಕಾನ್ವೈ ಸ್ವೇನ ತೇಜಸಾ||

ನನ್ನ ತೇಜಸ್ಸಿನಿಂದ ಮೂರು ಲೋಕಗಳನ್ನೂ ಆಕ್ರಮಿಸಿ ಭೂತಗಳಲ್ಲಿದ್ದ ಗಂಧಗಳನ್ನೂ ವಿವಿಧ ರಸಗಳನ್ನೂ ಹೀರಿ ವರ್ಧಿಸಿದೆನು.

12270026a ಜ್ವಾಲಾಮಾಲಾಪರಿಕ್ಷಿಪ್ತೋ ವೈಹಾಯಸಚರಸ್ತಥಾ|

12270026c ಅಜೇಯಃ ಸರ್ವಭೂತಾನಾಮಾಸಂ ನಿತ್ಯಮಪೇತಭೀಃ||

ಜ್ವಾಲಾಮಾಲೆಗಳನ್ನೆಸೆಯುತ್ತಾ ನನ್ನ ಸಹಚರರೊಂದಿಗೆ ತಿರುಗಾಡಿದೆನು. ಸರ್ವಭೂತಗಳಿಗೂ ಅಜೇಯನಾಗಿದ್ದ ನನಗೆ ನಿತ್ಯವೂ ಯಾರಿಂದಲೂ ಭಯವಿರಲಿಲ್ಲ.

12270027a ಐಶ್ವರ್ಯಂ ತಪಸಾ ಪ್ರಾಪ್ತಂ ಭ್ರಷ್ಟಂ ತಚ್ಚ ಸ್ವಕರ್ಮಭಿಃ|

12270027c ಧೃತಿಮಾಸ್ಥಾಯ ಭಗವನ್ನ ಶೋಚಾಮಿ ತತಸ್ತ್ವಹಮ್||

ಭಗವನ್! ತಪಸ್ಸಿನಿಂದ ಐಶ್ವರ್ಯವನ್ನು ಪಡೆದು ನನ್ನದೇ ಕರ್ಮಗಳಿಂದ ಅದನ್ನು ಕಳೆದುಕೊಂಡ ನಾನು ಧೃತಿಯನ್ನು ಆಶ್ರಯಿಸಿ ಶೋಕಿಸುತ್ತಿಲ್ಲ.

12270028a ಯುಯುತ್ಸತಾ ಮಹೇಂದ್ರೇಣ ಪುರಾ ಸಾರ್ಧಂ ಮಹಾತ್ಮನಾ|

12270028c ತತೋ ಮೇ ಭಗವಾನ್ದೃಷ್ಟೋ ಹರಿರ್ನಾರಾಯಣಃ ಪ್ರಭುಃ||

ಹಿಂದೆ ಮಹಾತ್ಮ ಮಹೇಂದ್ರನೊಡನೆ ಯುದ್ಧಮಾಡುತ್ತಿದ್ದಾಗ ನಾನು ಪ್ರಭು ಭಗವಾನ್ ಹರಿ ನಾರಾಯಣನನ್ನು ನೋಡಿದೆನು.

12270029a ವೈಕುಂಠಃ ಪುರುಷೋ ವಿಷ್ಣುಃ ಶುಕ್ಲೋಽನಂತಃ ಸನಾತನಃ|

12270029c ಮುಂಜಕೇಶೋ ಹರಿಶ್ಮಶ್ರುಃ ಸರ್ವಭೂತಪಿತಾಮಹಃ||

ಅವನು ವೈಕುಂಠ. ಪುರುಷ. ವಿಷ್ಣು. ಶುಕ್ಲ. ಅನಂತ. ಸನಾತನ. ಮುಂಜಕೇಶ. ಕಂದುಬಣ್ಣದ ಗಡ್ಡ-ಮೀಸೆಗಳುಳ್ಳವನು. ಅವನು ಸರ್ವಭೂತಗಳ ಪಿತಾಮಹನು.

12270030a ನೂನಂ ತು ತಸ್ಯ ತಪಸಃ ಸಾವಶೇಷಂ ಮಮಾಸ್ತಿ ವೈ|

12270030c ಯದಹಂ ಪ್ರಷ್ಟುಮಿಚ್ಚಾಮಿ ಭವಂತಂ ಕರ್ಮಣಃ ಫಲಮ್||

ಆ ನನ್ನ ತಪಸ್ಸಿನ ಫಲದಲ್ಲಿ ಸ್ವಲ್ಪವೇ ಉಳಿದುಕೊಂಡಿದೆ. ಆದುದರಿಂದ ನಾನು ನಿಮ್ಮಿಂದ ಕರ್ಮಫಲಗಳ ಕುರಿತು ಕೇಳಬಯಸುತ್ತೇನೆ.

12270031a ಐಶ್ವರ್ಯಂ ವೈ ಮಹದ್ಬ್ರಹ್ಮನ್ಕಸ್ಮಿನ್ವರ್ಣೇ ಪ್ರತಿಷ್ಠಿತಮ್|

12270031c ನಿವರ್ತತೇ ಚಾಪಿ ಪುನಃ ಕಥಮೈಶ್ವರ್ಯಮುತ್ತಮಮ್||

ಬ್ರಹ್ಮನ್! ಯಾವ ವರ್ಣದಲ್ಲಿ ಮಹದೈಶ್ವರ್ಯವು ಪ್ರತಿಷ್ಠಿತವಾಗಿದೆ? ಪುನಃ ಆ ಮಹದೈಶ್ವರ್ಯವು ಹೇಗೆ ಕಳೆದುಹೋಗುತ್ತದೆ?

12270032a ಕಸ್ಮಾದ್ ಭೂತಾನಿ ಜೀವಂತಿ ಪ್ರವರ್ತಂತೇಽಥ ವಾ ಪುನಃ|

12270032c ಕಿಂ ವಾ ಫಲಂ ಪರಂ ಪ್ರಾಪ್ಯ ಜೀವಸ್ತಿಷ್ಠತಿ ಶಾಶ್ವತಃ||

ಯಾವುದರಿಂದ ಭೂತಗಳು ಜೀವಿಸುತ್ತವೆ ಮತ್ತು ಪುನಃ ಪುನಃ ಕರ್ಮಗಳನ್ನು ಮಾಡುತ್ತಿರುತ್ತವೆ? ಯಾವ ಪರಮ ಫಲವನ್ನು ಪಡೆದು ಜೀವವು ಶಾಶ್ವತದಲ್ಲಿ ನೆಲೆಸುತ್ತದೆ?

12270033a ಕೇನ ವಾ ಕರ್ಮಣಾ ಶಕ್ಯಮಥ ಜ್ಞಾನೇನ ಕೇನ ವಾ|

12270033c ಬ್ರಹ್ಮರ್ಷೇ ತತ್ಫಲಂ ಪ್ರಾಪ್ತುಂ ತನ್ಮೇ ವ್ಯಾಖ್ಯಾತುಮರ್ಹಸಿ||

ಬ್ರಹ್ಮರ್ಷೇ! ಅಥವಾ ಯಾವ ಕರ್ಮದಿಂದ ಅಥವಾ ಯಾವ ಜ್ಞಾನದಿಂದ ಆ ಫಲವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನನಗೆ ಹೇಳಬೇಕು.”

12270034a ಇತೀದಮುಕ್ತಃ ಸ ಮುನಿಸ್ತದಾನೀಂ

ಪ್ರತ್ಯಾಹ ಯತ್ತಚ್ಚೃಣು ರಾಜಸಿಂಹ|

12270034c ಮಯೋಚ್ಯಮಾನಂ ಪುರುಷರ್ಷಭ ತ್ವಮ್

ಅನನ್ಯಚಿತ್ತಃ ಸಹ ಸೋದರೀಯೈಃ||

ರಾಜಸಿಂಹ! ಪುರುಷರ್ಷಭ! ಅವನು ಹೀಗೆ ಹೇಳಲು ಮುನಿಯು ಇದನ್ನು ಹೇಳಿದನು. ನಾನು ಹೇಳುವುದನ್ನು ಸಹೋದರರೊಂದಿಗೆ ನೀನು ಅನನ್ಯಚಿತ್ತನಾಗಿ ಕೇಳು.

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವೃತ್ರಗೀತಾಸು ಸಪ್ತತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವೃತ್ರಗೀತಾ ಎನ್ನುವ ಇನ್ನೂರಾಎಪ್ಪತ್ತನೇ ಅಧ್ಯಾಯವು.

[1] ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣಗಳು, ಮನಸ್ಸು ಮತ್ತು ಬುದ್ಧಿ ಇವು ಹದಿನೇಳು ಹೇತುಗಳು (ಭಾರತ ದರ್ಶನ).

[2] ಕಾಮ, ಕ್ರೋಧ, ಲೋಭ, ಭಯ ಮತ್ತು ಸ್ವಪ್ನ (ಭಾರತ ದರ್ಶನ).

[3] ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ (ಭಾರತ ದರ್ಶನ).

[4] ಪಂಚಮಹಾಭೂತಗಳು, ಅವಿದ್ಯೆ, ಅಹಂಭಾವ ಮತ್ತು ಕರ್ಮಗಳೆಂಬ ಎಂಟು ತತ್ತ್ವಗಳು (ಭಾರತ ದರ್ಶನ).

[5] ನೇಶೇಽಯಂ (ಭಾರತ ದರ್ಶನ).

[6] ತಸ್ಮಾನ್ನಮಸ್ಯಾಮಿ (ಭಾರತ ದರ್ಶನ).

[7] ಪರಿತುಷ್ಟಾನಿ (ಭಾರತ ದರ್ಶನ).

[8] ಕಾಮಬಂಧನಬಂಧನಾಃ (ಭಾರತ ದರ್ಶನ).

[9] ಧೀಮಾನ್ದುಷ್ಟಪ್ರಲಾಪಾಂಸ್ತ್ವಂ (ಭಾರತ ದರ್ಶನ).

Comments are closed.