Shanti Parva: Chapter 267

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೭

ನಾರದ-ದೇವಲ ಸಂವಾದ

ಜೀವಾತ್ಮನು ದೇಹಾಭಿಮಾನದಿಂದ ಮುಕ್ತನಾಗುವ ವಿಷಯದಲ್ಲಿ ನಾರದ ಮತ್ತು ಅಸಿತದೇವಲರ ಸಂವಾದ (1-38).

12267001 ಭೀಷ್ಮ ಉವಾಚ|

12267001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್|

12267001c ನಾರದಸ್ಯ ಚ ಸಂವಾದಂ ದೇವಲಸ್ಯಾಸಿತಸ್ಯ ಚ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ನಾರದ ಮತ್ತು ಅಸಿತದೇವಲರ ಸಂವಾದವನ್ನು ಉದಾಹರಿಸುತ್ತಾರೆ.

12267002a ಆಸೀನಂ ದೇವಲಂ ವೃದ್ಧಂ ಬುದ್ಧ್ವಾ ಬುದ್ಧಿಮತಾಂ ವರಃ|

12267002c ನಾರದಃ ಪರಿಪಪ್ರಚ್ಚ ಭೂತಾನಾಂ ಪ್ರಭವಾಪ್ಯಯಮ್||

ಕುಳಿತುಕೊಂಡಿದ್ದ ವೃದ್ಧ ದೇವಲನನ್ನು ನೋಡಿ ಬುದ್ಧಿವಂತರಲ್ಲಿ ಶ್ರೇಷ್ಠನಾದ ನಾರದನು ಭೂತಗಳ ಸೃಷ್ಟಿ-ಲಯಗಳ ಕುರಿತು ಪ್ರಶ್ನಿಸಿದನು.

12267003a ಕುತಃ ಸೃಷ್ಟಮಿದಂ ವಿಶ್ವಂ ಬ್ರಹ್ಮನ್ ಸ್ಥಾವರಜಂಗಮಮ್|

12267003c ಪ್ರಲಯೇ ಚ ಕಮಭ್ಯೇತಿ ತದ್ಭವಾನ್ ಪ್ರಬ್ರವೀತು ಮೇ||

“ಬ್ರಹ್ಮನ್! ಸ್ಥಾವರ-ಜಂಗಮ ಯುಕ್ತವಾದ ಈ ವಿಶ್ವವು ಎಲ್ಲಿಂದ ಸೃಷ್ಟಿಸಲ್ಪಟ್ಟಿತು? ಪ್ರಲಯದಲ್ಲಿ ಇದು ಯಾವುದರಲ್ಲಿ ಲಯವಾಗುತ್ತದೆ. ಇದನ್ನು ನೀನು ನನಗೆ ಹೇಳಬೇಕು.”

12267004 ಅಸಿತ ಉವಾಚ|

12267004a ಯೇಭ್ಯಃ ಸೃಜತಿ ಭೂತಾನಿ ಕಾಲೋ ಭಾವಪ್ರಚೋದಿತಃ|

12267004c ಮಹಾಭೂತಾನಿ ಪಂಚೇತಿ ತಾನ್ಯಾಹುರ್ಭೂತಚಿಂತಕಾಃ||

ಅಸಿತನು ಹೇಳಿದನು: “ಕಾಲವು ಬಂದಾಗ ಸೃಷ್ಟಿಕರ್ತನು ಭಾವಪ್ರಚೋದಿತನಾಗಿ ಭೂತಗಳನ್ನು ಸೃಷ್ಟಿಸುತ್ತಾನೆ. ಈ ಮಹಾಭೂತಗಳು ಐದು ಎಂದು ಭೂತಚಿಂತಕರು ಹೇಳುತ್ತಾರೆ.

12267005a ತೇಭ್ಯಃ ಸೃಜತಿ ಭೂತಾನಿ ಕಾಲ ಆತ್ಮಪ್ರಚೋದಿತಃ|

12267005c ಏತೇಭ್ಯೋ ಯಃ ಪರಂ ಬ್ರೂಯಾದಸದ್ಬ್ರೂಯಾದಸಂಶಯಮ್||

ಆತ್ಮಪ್ರಚೋದಿತ ಕಾಲವು ಇವುಗಳಿಂದ ಭೂತಗಳನ್ನು ಸೃಷ್ಟಿಸುತ್ತದೆ. ಈ ಐದಕ್ಕಿಂತಲೂ ಬೇರೆಯವುಗಳಿಂದ ಸೃಷ್ಟಿಯಾಗಿದೆಯೆಂದು ಹೇಳುವವರು ಸುಳ್ಳನ್ನೇ ಹೇಳುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

12267006a ವಿದ್ಧಿ ನಾರದ ಪಂಚೈತಾನ್ ಶಾಶ್ವತಾನಚಲಾನ್ ಧ್ರುವಾನ್|

12267006c ಮಹತಸ್ತೇಜಸೋ ರಾಶೀನ್ಕಾಲಷಷ್ಠಾನ್ ಸ್ವಭಾವತಃ||

ನಾರದ! ಈ ಐದು ಶಾಶ್ವತಗಳೆಂದೂ, ಅಚಲಗಳೆಂದೂ ಮತ್ತು ಸ್ಥಿರವಾದವುಗಳೆಂದೂ ತಿಳಿ. ಸ್ವಭಾವತಃ ಇವು ಮಹಾ ತೇಜಸ್ಸಿನ ರಾಶಿಗಳು. ಆರನೆಯದು ಕಾಲ.

12267007a ಆಪಶ್ಚೈವಾಂತರಿಕ್ಷಂ ಚ ಪೃಥಿವೀ ವಾಯುಪಾವಕೌ|

12267007c ಅಸಿದ್ಧಿಃ ಪರಮೇತೇಭ್ಯೋ ಭೂತೇಭ್ಯೋ ಮುಕ್ತಸಂಶಯಮ್||

ನೀರು, ಆಕಾಶ, ಪೃಥ್ವಿ, ವಾಯು ಮತ್ತು ಅಗ್ನಿ – ಈ ಭೂತಗಳಿಗೂ ಅನ್ಯವಾದ ಭೂತವು ಯಾವಾಗಲೂ ಇರುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ.

12267008a ನೋಪಪತ್ತ್ಯಾ ನ ವಾ ಯುಕ್ತ್ಯಾ ತ್ವಸದ್ಬ್ರೂಯಾದಸಂಶಯಮ್|

12267008c ವೇತ್ಥ ತಾನಭಿನಿರ್ವೃತ್ತಾನ್ ಷಡೇತೇ ಯಸ್ಯ ರಾಶಯಃ||

ಯಾವುದೇ ಯುಕ್ತಿಯಿಂದಾಗಲೀ ಪ್ರಮಾಣದಿಂದಾಗಲೀ ಈ ಆರಕ್ಕಿಂತಲೂ ಬೇರೆಯದಾದ ತತ್ತ್ವವನ್ನು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದರೂ ಅವರು ಸುಳ್ಳನ್ನೇ ಹೇಳುತ್ತಿದ್ದಾರೆನ್ನುವುದರಲ್ಲಿ ಸಂಶಯವಿಲ್ಲ.

12267009a ಪಂಚೈವ ತಾನಿ ಕಾಲಶ್ಚ ಭಾವಾಭಾವೌ ಚ ಕೇವಲೌ|

12267009c ಅಷ್ಟೌ ಭೂತಾನಿ ಭೂತಾನಾಂ ಶಾಶ್ವತಾನಿ ಭವಾಪ್ಯಯೌ||

ಪಂಚಮಹಾಭೂತಗಳು, ಕಾಲ, ನಿತ್ಯವಾದ ಆತ್ಮತತ್ತ್ವ ಮತ್ತು ಪರಿವರ್ತನಶೀಲವಾದ ಮಹತ್ತತ್ತ್ವ ಈ ಎಂಟು ತತ್ತ್ವಗಳೂ ನಿತ್ಯವಾದವುಗಳು. ಇವೇ ಪ್ರಾಣಿಗಳ ಉತ್ಪತ್ತಿ-ಲಯಗಳಿಗೆ ಕಾರಣಗಳು.

12267010a ಅಭಾವಾದ್ಭಾವಿತೇಷ್ವೇವ ತೇಭ್ಯಶ್ಚ ಪ್ರಭವಂತ್ಯಪಿ|

12267010c ವಿನಷ್ಟೋಽಪಿ ಚ ತಾನ್ಯೇವ ಜಂತುರ್ಭವತಿ ಪಂಚಧಾ||

ಎಲ್ಲವೂ ಇವುಗಳಲ್ಲಿಯೇ ಲೀನವಾಗುತ್ತವೆ ಮತ್ತು ಇವುಗಳಿಂದಲೇ ಪ್ರಕಟವಾಗುತ್ತವೆ. ಜಂತುವು ವಿನಷ್ಟವಾದರೂ ಕೂಡ ಅದು ಐದು ಪಂಚಭೂತಗಳಲ್ಲಿಯೇ ವಿಲೀನವಾಗುತ್ತದೆ.

12267011a ತಸ್ಯ ಭೂಮಿಮಯೋ ದೇಹಃ ಶ್ರೋತ್ರಮಾಕಾಶಸಂಭವಮ್|

12267011c ಸೂರ್ಯಶ್ಚಕ್ಷುರಸುರ್ವಾಯುರದ್ಭ್ಯಸ್ತು ಖಲು ಶೋಣಿತಮ್||

ಅದರ ದೇಹವು ಭೂಮಿಮಯವು. ಕಿವಿಗಳು ಆಕಾಶತತ್ತ್ವದಿಂದ ಹುಟ್ಟಿದವು. ಕಣ್ಣುಗಳು ಸೂರ್ಯ, ಪ್ರಾಣವು ವಾಯು ಮತ್ತು ರಕ್ತವು ನೀರು – ಇವುಗಳಿಂದ ಹುಟ್ಟಿ ಇವುಗಳಲ್ಲಿಯೇ ಲೀನವಾಗುತ್ತವೆ.

12267012a ಚಕ್ಷುಷೀ ನಾಸಿಕಾಕರ್ಣೌ ತ್ವಗ್ಜಿಹ್ವೇತಿ ಚ ಪಂಚಮೀ|

12267012c ಇಂದ್ರಿಯಾಣೀಂದ್ರಿಯಾರ್ಥಾನಾಂ ಜ್ಞಾನಾನಿ ಕವಯೋ ವಿದುಃ||

ಕಣ್ಣು, ಮೂಗು, ಕಿವಿ, ಚರ್ಮ ಮತ್ತು ನಾಲಿಗೆ – ಈ ಐದು ಜ್ಞಾನೇಂದ್ರಿಯಗಳೆಂದೂ ವಿಷಯಗಳನ್ನು ಗ್ರಹಿಸತಕ್ಕವುಗಳೆಂದೂ ವಿದ್ವಾಂಸರು ತಿಳಿದಿದ್ದಾರೆ.

12267013a ದರ್ಶನಂ ಶ್ರವಣಂ ಘ್ರಾಣಂ ಸ್ಪರ್ಶನಂ ರಸನಂ ತಥಾ|

12267013c ಉಪಪತ್ತ್ಯಾ ಗುಣಾನ್ವಿದ್ಧಿ ಪಂಚ ಪಂಚಸು ಪಂಚಧಾ||

ನೋಡುವುದು, ಕೇಳುವುದು, ಮೂಸುವುದು, ಮುಟ್ಟುವುದು ಮತ್ತು ರುಚಿನೋಡುವುದು – ಇವು ಐದು ಇಂದ್ರಿಯಗಳ ಐದು ಗುಣಗಳ ಐದು ಕ್ರಿಯೆಗಳೆಂದು ತಿಳಿ.

12267014a ರೂಪಂ ಗಂಧೋ ರಸಃ ಸ್ಪರ್ಶಃ ಶಬ್ದಶ್ಚೈವಾಥ ತದ್ಗುಣಾಃ|

12267014c ಇಂದ್ರಿಯೈರುಪಲಭ್ಯಂತೇ ಪಂಚಧಾ ಪಂಚ ಪಂಚಭಿಃ||

ರೂಪ, ಗಂಧ, ರಸ, ಸ್ಪರ್ಶ, ಮತ್ತು ಶಬ್ದ ಇವು ಐದು ಇಂದ್ರಿಯಗಳ ಗುಣಗಳು. ಇವು ಐದು ಇಂದ್ರಿಯಗಳ ಐದು ಕ್ರಿಯೆಗಳಲ್ಲಿ ಐದು ಗುಣಗಳಾಗಿ ಕಾಣುತ್ತವೆ.

12267015a ರೂಪಂ ಗಂಧಂ ರಸಂ ಸ್ಪರ್ಶಂ ಶಬ್ದಂ ಚೈತಾಂಸ್ತು ತದ್ಗುಣಾನ್|

12267015c ಇಂದ್ರಿಯಾಣಿ ನ ಬುಧ್ಯಂತೇ ಕ್ಷೇತ್ರಜ್ಞಸ್ತೈಸ್ತು ಬುಧ್ಯತೇ||

ರೂಪ, ಗಂಧ, ರಸ, ಸ್ಪರ್ಶ ಮತ್ತು ಶಬ್ದ – ಈ ಗುಣಗಳನ್ನು ಇಂದ್ರಿಯಗಳು ತಾವೇ ತಿಳಿಯಲಾರವು. ಆದರೆ ಕ್ಷೇತ್ರಜ್ಞನು ಅವುಗಳನ್ನು ತಿಳಿಯುತ್ತಾನೆ.

12267016a ಚಿತ್ತಮಿಂದ್ರಿಯಸಂಘಾತಾತ್ಪರಂ ತಸ್ಮಾತ್ಪರಂ ಮನಃ|

12267016c ಮನಸಸ್ತು ಪರಾ ಬುದ್ಧಿಃ ಕ್ಷೇತ್ರಜ್ಞೋ ಬುದ್ಧಿತಃ ಪರಃ||

ಇಂದ್ರಿಯಗಳು ಮತ್ತು ವಿಷಯಗಳ ಸಂಪರ್ಕಕ್ಕಿಂತಲೂ ಆಚೆ ಚಿತ್ತವಿದೆ. ಚಿತ್ತಕ್ಕಿಂತಲೂ ಆಚೆ ಮನವಿದೆ. ಮನಕ್ಕಿಂತಲೂ ಆಚೆ ಬುದ್ಧಿಯಿದೆ. ಮತ್ತು ಕ್ಷೇತ್ರಜ್ಞನು ಬುದ್ಧಿಗಿಂತಲೂ ಆಚೆಯಿರುವವನು.

12267017a ಪೂರ್ವಂ ಚೇತಯತೇ ಜಂತುರಿಂದ್ರಿಯೈರ್ವಿಷಯಾನ್ ಪೃಥಕ್|

12267017c ವಿಚಾರ್ಯ ಮನಸಾ ಪಶ್ಚಾದಥ ಬುದ್ಧ್ಯಾ ವ್ಯವಸ್ಯತಿ|

12267017e ಇಂದ್ರಿಯೈರುಪಲಬ್ಧಾರ್ಥಾನ್ಸರ್ವಾನ್ಯಸ್ತ್ವಧ್ಯವಸ್ಯತಿ||

ಪ್ರಾಣಿಯ ಚಿತ್ತವು ಮೊದಲು ಪ್ರತ್ಯೇಕ ಇಂದ್ರಿಯಗಳಿಂದ ಪ್ರತ್ಯೇಕ ವಿಷಯಗಳನ್ನು ಗ್ರಹಿಸುತ್ತದೆ. ಅವುಗಳ ಕುರಿತು ಮನಸ್ಸು ವಿಚಾರಿಸುತ್ತದೆ. ನಂತರ ಅದು ಬುದ್ಧಿಯನ್ನು ತಲುಪುತ್ತದೆ. ಇಂದ್ರಿಯಗಳಿಂದ ಉಪಲಬ್ಧವಾಗುವ ಸರ್ವ ಅರ್ಥಗಳೂ ಬುದ್ಧಿಯಲ್ಲಿ ನೆಲೆಸುತ್ತವೆ.

12267018a ಚಿತ್ತಮಿಂದ್ರಿಯಸಂಘಾತಂ ಮನೋ ಬುದ್ಧಿಂ ತಥಾಷ್ಟಮೀಮ್|

12267018c ಅಷ್ಟೌ ಜ್ಞಾನೇಂದ್ರಿಯಾಣ್ಯಾಹುರೇತಾನ್ಯಧ್ಯಾತ್ಮಚಿಂತಕಾಃ||

ಅಧ್ಯಾತ್ಮ ಚಿಂತಕರು ಐದು ಇಂದ್ರಿಗಳು, ಚಿತ್ತ, ಮನಸ್ಸು ಮತ್ತು ಬುದ್ಧಿ – ಈ ಎಂಟನ್ನು ಜ್ಞಾನೇಂದ್ರಿಯಗಳೆಂದು ಹೇಳುತ್ತಾರೆ.

12267019a ಪಾಣಿಪಾದಂ ಚ ಪಾಯುಶ್ಚ ಮೇಹನಂ ಪಂಚಮಂ ಮುಖಮ್|

12267019c ಇತಿ ಸಂಶಬ್ದ್ಯಮಾನಾನಿ ಶೃಣು ಕರ್ಮೇಂದ್ರಿಯಾಣ್ಯಪಿ||

ಕೈಗಳು, ಕಾಲುಗಳು, ಗುದ, ಉಪಸ್ಥ ಮತ್ತು ಮುಖ – ಈ ಐದನ್ನು ಕರ್ಮೇಂದ್ರಿಯಗಳೆಂದು ಕರೆಯುತ್ತಾರೆ. ಇವುಗಳ ಕುರಿತು ಕೇಳು.

12267020a ಜಲ್ಪನಾಭ್ಯವಹಾರಾರ್ಥಂ ಮುಖಮಿಂದ್ರಿಯಮುಚ್ಯತೇ|

12267020c ಗಮನೇಂದ್ರಿಯಂ ತಥಾ ಪಾದೌ ಕರ್ಮಣಃ ಕರಣೇ ಕರೌ||

ಮಾತನಾಡಲು ಮತ್ತು ಆಹಾರವನ್ನು ಸೇವಿಸಲು ಮುಖವು ಕರ್ಮೇಂದ್ರಿಯವು ಎಂದು ಹೇಳುತ್ತಾರೆ. ಕಾಲುಗಳು ಗಮನೇಂದ್ರಿಯಗಳು. ಮತ್ತು ಕೈಗಳು ಕರ್ಮಗಳನ್ನು ಮಾಡಲಿಕ್ಕಿರುವ ಕರ್ಮೇಂದ್ರಿಯವು.

12267021a ಪಾಯೂಪಸ್ಥೌ ವಿಸರ್ಗಾರ್ಥಮಿಂದ್ರಿಯೇ ತುಲ್ಯಕರ್ಮಣೀ|

12267021c ವಿಸರ್ಗೇ ಚ ಪುರೀಷಸ್ಯ ವಿಸರ್ಗೇ ಚಾಭಿಕಾಮಿಕೇ||

ಪಾಯು ಮತ್ತು ಉಪಸ್ಥಗಳು ವಿಸರ್ಗಾರ್ಥಕ್ಕಾಗಿಯೇ ಇವೆ. ಸಮಾನ ಕೆಲಸವನ್ನು ಮಾಡುತ್ತವೆ. ಮಲವನ್ನು ವಿಸರ್ಜಿಸುತ್ತದೆ ಮತ್ತು ಕಾಮದ ಸಮಯದಲ್ಲಿ ವೀರ್ಯವನ್ನು ವಿಸರ್ಜಿಸುತ್ತದೆ.

12267022a ಬಲಂ ಷಷ್ಠಂ ಷಡೇತಾನಿ ವಾಚಾ ಸಮ್ಯಗ್ಯಥಾಗಮಮ್|

12267022c ಜ್ಞಾನಚೇಷ್ಟೇಂದ್ರಿಯಗುಣಾಃ ಸರ್ವೇ ಸಂಶಬ್ದಿತಾ ಮಯಾ||

ಬಲ ಅಥವಾ ಪ್ರಾಣವು ಆರನೆಯದು. ಈ ಆರರ ಕುರಿತು ನಾನು ಆಗಮಗಳಲ್ಲಿರುವಂತೆ ಸರಿಯಾಗಿ ಹೇಳಿದ್ದೇನೆ. ಇಂದ್ರಿಯಗಳ ಜ್ಞಾನ, ಕರ್ಮ ಮತ್ತು ಗುಣಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ.

12267023a ಇಂದ್ರಿಯಾಣಾಂ ಸ್ವಕರ್ಮಭ್ಯಃ ಶ್ರಮಾದುಪರಮೋ ಯದಾ|

12267023c ಭವತೀಂದ್ರಿಯಸಂನ್ಯಾಸಾದಥ ಸ್ವಪಿತಿ ವೈ ನರಃ||

ಇಂದ್ರಿಯಗಳು ತಮ್ಮ ಕರ್ಮಗಳನ್ನು ಮಾಡಿ ಶ್ರಮದಿಂದ ಶಾಂತವಾದಾಗ ನರನು ಇಂದ್ರಿಯಗಳನ್ನು ತೊರೆದು ನಿದ್ರಿಸುತ್ತಾನೆ.

12267024a ಇಂದ್ರಿಯಾಣಾಂ ವ್ಯುಪರಮೇ ಮನೋಽನುಪರತಂ ಯದಿ|

12267024c ಸೇವತೇ ವಿಷಯಾನೇವ ತದ್ವಿದ್ಯಾತ್ ಸ್ವಪ್ನದರ್ಶನಮ್||

ಇಂದ್ರಿಯಗಳು ಉಪಶಮನ ಹೊಂದಿದರೂ ಮನಸ್ಸು ಇನ್ನೂ ಉಪಶಮನ ಹೊಂದದೇ ಇದ್ದರೆ ಅದು ವಿಷಯಗಳನ್ನು ಸೇವಿಸುತ್ತಾ ಸ್ವಪ್ನವನ್ನು ಕಾಣುತ್ತದೆ ಎಂದು ತಿಳಿಯಬೇಕು.

12267025a ಸಾತ್ತ್ವಿಕಾಶ್ಚೈವ ಯೇ ಭಾವಾಸ್ತಥಾ ರಾಜಸತಾಮಸಾಃ|

12267025c ಕರ್ಮಯುಕ್ತಾನ್ ಪ್ರಶಂಸಂತಿ ಸಾತ್ತ್ವಿಕಾನಿತರಾಂಸ್ತಥಾ||

ಜಾಗೃತಾವಸ್ಥೆಯಲ್ಲಿ ಸಾತ್ತ್ವಿಕ, ರಾಜಸ, ತಾಮಸ – ಯಾವ ಭಾವಗಳಿರುತ್ತವೆಯೋ ಅವೇ ಕರ್ಮಯುಕ್ತ ಸಾತ್ವಿಕಾದಿ ಭಾವಗಳನ್ನು ಪ್ರಾಣಿಗಳು ಸ್ವಪ್ನಾವಸ್ಥೆಯಲ್ಲಿಯೂ ಅನುಭವಿಸುತ್ತವೆ.

12267026a ಆನಂದಃ ಕರ್ಮಣಾಂ ಸಿದ್ಧಿಃ ಪ್ರತಿಪತ್ತಿಃ ಪರಾ ಗತಿಃ|

12267026c ಸಾತ್ತ್ವಿಕಸ್ಯ ನಿಮಿತ್ತಾನಿ ಭಾವಾನ್ಸಂಶ್ರಯತೇ ಸ್ಮೃತಿಃ||

ಆನಂದ, ಕರ್ಮಸಿದ್ಧಿ, ಕರ್ತವ್ಯಜ್ಞಾನ ಮತ್ತು ಉತ್ತಮ ಗತಿ – ಈ ನಾಲ್ಕು ಸಾತ್ತ್ವಿಕನ ಲಕ್ಷಣಗಳು. ಅವನ ಸ್ಮೃತಿಯು ಈ ಭಾವಗಳನ್ನು ಆಶ್ರಯಿಸಿರುತ್ತದೆ.

12267027a ಜಂತುಷ್ವೇಕತಮೇಷ್ವೇವಂ ಭಾವಾ ಯೇ ವಿಧಿಮಾಸ್ಥಿತಾಃ|

12267027c ಭಾವಯೋರೀಪ್ಸಿತಂ ನಿತ್ಯಂ ಪ್ರತ್ಯಕ್ಷಗಮನಂ ದ್ವಯೋಃ||

ಅದರಂತೆ ರಾಜಸ-ತಾಮಸ ಮನುಷ್ಯರ ಸ್ಮೃತಿಗಳೂ ಆ ಗುಣಗಳಿಗೆ ಸಂಬಂಧಿಸಿದ ಭಾವಗಳಿಗನುಗುಣವಾಗಿಯೇ ಇರುತ್ತವೆ. ಆ ಭಾವಗಳಿಗೆ ತಕ್ಕುದಾಗಿ ಅವರಿಗೆ ರಾಜಸ-ತಾಮಸ ಪದಾರ್ಥಗಳ ಪ್ರತ್ಯಕ್ಷದರ್ಶನವು ಆಗುತ್ತಲೇ ಇರುತ್ತದೆ.

12267028a ಇಂದ್ರಿಯಾಣಿ ಚ ಭಾವಾಶ್ಚ ಗುಣಾಃ ಸಪ್ತದಶ ಸ್ಮೃತಾಃ|

12267028c ತೇಷಾಮಷ್ಟಾದಶೋ ದೇಹೀ ಯಃ ಶರೀರೇ ಸ ಶಾಶ್ವತಃ||

ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಚಿತ್ತ, ಮನಸ್ಸು, ಬುದ್ಧಿ, ಪ್ರಾಣ, ಮತ್ತು ಸಾತ್ತ್ವಿಕ-ರಾಜಸ-ತಾಮಸಗಳೆಂಬ ಮೂರು ಗುಣಗಳು – ಇವು ಹದಿನೇಳೆಂದು ಹೇಳುತ್ತಾರೆ. ಶರೀರದಲ್ಲಿರುವ ಜೀವಾತ್ಮನು ಹದಿನೆಂಟನೆಯವನು. ಅವನು ಶಾಶ್ವತನು.

12267029a ಅಥ ವಾ ಸಶರೀರಾಸ್ತೇ ಗುಣಾಃ ಸರ್ವೇ ಶರೀರಿಣಾಮ್|

12267029c ಸಂಶ್ರಿತಾಸ್ತದ್ವಿಯೋಗೇ ಹಿ ಸಶರೀರಾ ನ ಸಂತಿ ತೇ||

ಅಥವಾ ಶರೀರದಲ್ಲಿರುವ ಈ ಎಲ್ಲ ಗುಣಗಳೂ ಜೀವಾತ್ಮನನ್ನು ಆಶ್ರಯಿಸಿರುತ್ತವೆ. ಜೀವಾತ್ಮನ ವಿಯೋಗವಾದೊಡನೆಯೇ ಅವು ನಷ್ಟವಾಗುತ್ತವೆ.

12267030a ಅಥ ವಾ ಸಂನಿಪಾತೋಽಯಂ ಶರೀರಂ ಪಾಂಚಭೌತಿಕಮ್|

12267030c ಏಕಶ್ಚ ದಶ ಚಾಷ್ಟೌ ಚ ಗುಣಾಃ ಸಹ ಶರೀರಿಣಾಮ್|

12267030e ಊಷ್ಮಣಾ ಸಹ ವಿಂಶೋ ವಾ ಸಂಘಾತಃ ಪಾಂಚಭೌತಿಕಃ||

ಅಥವಾ ಈ ಶರೀರವು ಪಂಚಭೌತಿಕ ತತ್ತ್ವಗಳ ಸಮುದಾಯವಾಗಿದೆ. ಒಂದು ಮಹತ್ತತ್ತ್ವ ಮತ್ತು ಜೀವಸಹಿತವಾದ ಈ ಹದಿನೆಂಟು ಗುಣಗಳು – ಈ ಸಮುದಾಯದಲ್ಲಿಯೇ ಸೇರಿಕೊಂಡಿವೆ. ಜಠರಾಗ್ನಿಯನ್ನು ಸೇರಿಸಿದರೆ ಈ ಪಂಚಭೌತಿಕ ಸಮುದಾಯಗಳು ಇಪ್ಪತ್ತಾಗುತ್ತವೆ.

12267031a ಮಹಾನ್ಸಂಧಾರಯತ್ಯೇತಚ್ಚರೀರಂ ವಾಯುನಾ ಸಹ|

12267031c ತಸ್ಯಾಸ್ಯ ಭಾವಯುಕ್ತಸ್ಯ ನಿಮಿತ್ತಂ ದೇಹಭೇದನೇ||

ಮಹತ್ತತ್ತ್ವವು ಪ್ರಾಣವಾಯುವಿನೊಂದಿಗೆ ಈ ಶರೀರವನ್ನು ಧರಿಸಿದೆ. ದೇಹಭೇದನದಲ್ಲಿ ಭಾವಯುಕ್ತ ಪ್ರಾಣವಾಯುವು ನಿಮಿತ್ತಮಾತ್ರ.

12267032a ಯಥೈವೋತ್ಪದ್ಯತೇ ಕಿಂ ಚಿತ್ಪಂಚತ್ವಂ ಗಚ್ಚತೇ ತಥಾ|

12267032c ಪುಣ್ಯಪಾಪವಿನಾಶಾಂತೇ ಪುಣ್ಯಪಾಪಸಮೀರಿತಮ್|

12267032e ದೇಹಂ ವಿಶತಿ ಕಾಲೇನ ತತೋಽಯಂ ಕರ್ಮಸಂಭವಮ್||

ಪುಣ್ಯಪಾಪಗಳು ವಿನಾಶವಾದಾಗ ಹುಟ್ಟಿದವುಗಳೆಲ್ಲವೂ ಅವು ಹೇಗೆ ಹುಟ್ಟಿದ್ದವೋ ಹಾಗೆಯೇ ಪಂಚತ್ವವನ್ನು ಹೊಂದುತ್ತವೆ. ಸಂಚಿತ ಪುಣ್ಯಪಾಪಗಳಿಂದ ಪ್ರೇರಿತವಾದ ದೇಹವು ಸಮಯಾನುಸಾರವಾಗಿ ಕರ್ಮಜನಿತ ಇನ್ನೊಂದು ಶರೀರವನ್ನು ಪ್ರವೇಶಿಸುತ್ತದೆ.

12267033a ಹಿತ್ವಾ ಹಿತ್ವಾ ಹ್ಯಯಂ ಪ್ರೈತಿ ದೇಹಾದ್ದೇಹಂ ಕೃತಾಶ್ರಯಃ|

12267033c ಕಾಲಸಂಚೋದಿತಃ ಕ್ಷೇತ್ರೀ ವಿಶೀರ್ಣಾದ್ವಾ ಗೃಹಾದ್ಗೃಹಮ್||

ಮನೆಯು ಹಳೆಯದಾದಂತೆ ಇರಲು ಹೊಸಮನೆಗೆ ಹೋಗುವಂತೆ ಕಾಲಪ್ರೇರಿತ ಜೀವವು ಕ್ರಮವಾಗಿ ಒಂದೊಂದು ಶರೀರವನ್ನೂ ಬಿಡುತ್ತಾ ಪೂರ್ವಜನ್ಮದ ಕರ್ಮಾನುಸಾರವಾದ ಹೊಸ ಹೊಸ ಶರೀರಗಳಲ್ಲಿ ವಾಸಿಸುತ್ತಿರುತ್ತದೆ.

12267034a ತತ್ರ ನೈವಾನುತಪ್ಯಂತೇ ಪ್ರಾಜ್ಞಾ ನಿಶ್ಚಿತನಿಶ್ಚಯಾಃ|

12267034c ಕೃಪಣಾಸ್ತ್ವನುತಪ್ಯಂತೇ ಜನಾಃ ಸಂಬಂಧಿಮಾನಿನಃ||

ಈ ವಿಷಯವನ್ನು ನಿಶ್ಚಿತವಾಗಿ ನಿಶ್ಚಯಿಸಿರುವ ಪ್ರಾಜ್ಞರು ದೇಹಭೇದನಕ್ಕೆ ಪರಿತಪಿಸುವುದಿಲ್ಲ. ಆದರೆ ಶರೀರ ಮತ್ತು ಆತ್ಮದ ಏಕತ್ವ ಸಂಬಂಧವನ್ನು ಕಲ್ಪಿಸಿಕೊಂಡಿರುವ ದೀನ ಜನರು ದೇಹಭೇದನದಿಂದ ಪರಿತಪಿಸುತ್ತಾರೆ.

12267035a ನ ಹ್ಯಯಂ ಕಸ್ಯ ಚಿತ್ಕಶ್ಚಿನ್ನಾಸ್ಯ ಕಶ್ಚನ ವಿದ್ಯತೇ|

12267035c ಭವತ್ಯೇಕೋ ಹ್ಯಯಂ ನಿತ್ಯಂ ಶರೀರೇ ಸುಖದುಃಖಭಾಕ್||

ಜೀವನು ಯಾರಿಗೂ ಸಂಬಂಧಿಸಿದವನಲ್ಲ. ಅವನಿಗೆ ಯಾವ ಸಂಬಂಧಿಯೂ ಇಲ್ಲ. ಅವನು ನಿತ್ಯವೂ ಏಕಾಕಿಯು. ಆದರೆ ಶರೀರದಲ್ಲಿದ್ದುಕೊಂಡು ಅದು ತನ್ನದು ಎಂದು ಭಾವಿಸಿಕೊಂಡಿರುವುದರಿಂದ ಕರ್ಮಾನುಗುಣವಾಗಿ ಸುಖದುಃಖಗಳನ್ನು ಅನುಭವಿಸುತ್ತದೆ.

12267036a ನೈವ ಸಂಜಾಯತೇ ಜಂತುರ್ನ ಚ ಜಾತು ವಿಪದ್ಯತೇ|

12267036c ಯಾತಿ ದೇಹಮಯಂ ಭುಕ್ತ್ವಾ ಕದಾ ಚಿತ್ಪರಮಾಂ ಗತಿಮ್||

ಜೀವವು ಹುಟ್ಟುವುದೂ ಇಲ್ಲ; ಸಾಯುವುದೂ ಇಲ್ಲ. ಯಾವಾಗಲಾದರೂ ಅದಕ್ಕೆ ಈ ತತ್ತ್ವಜ್ಞಾನವುಂಟಾದಾಗ ಅದು ಶರೀರದ ಮೇಲಿನ ಅಭಿಮಾನವನ್ನು ತೊರೆದು ಪರಮಗತಿಯನ್ನು ಹೊಂದುತ್ತದೆ.

12267037a ಪುಣ್ಯಪಾಪಮಯಂ ದೇಹಂ ಕ್ಷಪಯನ್ಕರ್ಮಸಂಚಯಾತ್|

12267037c ಕ್ಷೀಣದೇಹಃ ಪುನರ್ದೇಹೀ ಬ್ರಹ್ಮತ್ವಮುಪಗಚ್ಚತಿ||

ಉತ್ತಮ ಕರ್ಮಸಂಚಯಗಳಿಂದ ಈ ಪುಣ್ಯಪಾಪಮಯ ದೇಹವನ್ನು ಕಳೆದುಕೊಳ್ಳುತ್ತಾ ಕ್ಷೀಣದೇಹಿಯಾದ ಜೀವವು ಪುನಃ ಬ್ರಹ್ಮತ್ವವನ್ನು ಪಡೆದುಕೊಳ್ಳುತ್ತದೆ.

12267038a ಪುಣ್ಯಪಾಪಕ್ಷಯಾರ್ಥಂ ಚ ಸಾಂಖ್ಯಂ ಜ್ಞಾನಂ ವಿಧೀಯತೇ|

12267038c ತತ್ಕ್ಷಯೇ ಹ್ಯಸ್ಯ ಪಶ್ಯಂತಿ ಬ್ರಹ್ಮಭಾವೇ ಪರಾಂ ಗತಿಮ್||

ಪುಣ್ಯಪಾಪಗಳನ್ನು ಕ್ಷಯಿಸುವುದಕ್ಕಾಗಿಯೇ ಸಾಂಖ್ಯ ಜ್ಞಾನವನ್ನು ಹೇಳಿದ್ದಾರೆ. ಪುಣ್ಯಪಾಪಗಳು ಕ್ಷಯವಾದೊಡನೆಯೇ ದೊರೆಯುವ ಬ್ರಹ್ಮಭಾವವೇ ಜೀವದ ಪರಮ ಗತಿಯೆಂದು ಕಂಡಿದ್ದಾರೆ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ನಾರದಾಸಿತಸಂವಾದೇ ಸಪ್ತಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ನಾರದಾಸಿತಸಂವಾದ ಎನ್ನುವ ಇನ್ನೂರಾಅರವತ್ತೇಳನೇ ಅಧ್ಯಾಯವು.

Comments are closed.