Shanit Parva: Chapter 262

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೨

ವರ್ಣಾಶ್ರಮಧರ್ಮಗಳ ಮೂಲಕವೇ ಮೋಕ್ಷಪ್ರಾಪ್ತಿಯಾಗುವ ವಿಧಾನಕಥನ (1-45).

12262001 ಕಪಿಲ ಉವಾಚ|

12262001a ವೇದಾಃ ಪ್ರಮಾಣಂ ಲೋಕಾನಾಂ ನ ವೇದಾಃ ಪೃಷ್ಠತಃಕೃತಾಃ|

12262001c ದ್ವೇ ಬ್ರಹ್ಮಣೀ ವೇದಿತವ್ಯೇ ಶಬ್ದಬ್ರಹ್ಮ ಪರಂ ಚ ಯತ್|

12262001e ಶಬ್ದಬ್ರಹ್ಮಣಿ ನಿಷ್ಣಾತಃ ಪರಂ ಬ್ರಹ್ಮಾಧಿಗಚ್ಚತಿ||

ಕಪಿಲನು ಹೇಳಿದನು: “ಲೋಕಗಳಿಗೆ ವೇದವೇ ಪ್ರಮಾಣವು. ವೇದಗಳನ್ನು ಯಾರೂ ಅವಹೇಳನ ಮಾಡಿಲ್ಲ. ಬ್ರಹ್ಮನ ಎರಡು ರೂಪಗಳನ್ನು ತಿಳಿದುಕೊಳ್ಳಬೇಕು: ಶಬ್ದಬ್ರಹ್ಮ ಮತ್ತು ಪರಬ್ರಹ್ಮ. ಶಬ್ದಬ್ರಹ್ಮದಲ್ಲಿ ನಿಷ್ಣಾತನಾದವನು ಪರಬ್ರಹ್ಮನನ್ನು ಪಡೆದುಕೊಳ್ಳುತ್ತಾನೆ.

12262002a ಶರೀರಮೇತತ್ಕುರುತೇ ಯದ್ವೇದೇ ಕುರುತೇ ತನುಮ್|

12262002c ಕೃತಶುದ್ಧಶರೀರೋ ಹಿ ಪಾತ್ರಂ ಭವತಿ ಬ್ರಾಹ್ಮಣಃ||

ವೇದೋಕ್ತವಿಧಿಯಿಂದ ಈ ಶರೀರವನ್ನು ಹುಟ್ಟಿಸಿ ವೇದಸಂಸ್ಕಾರಗಳನ್ನು ಶರೀರಕ್ಕೆ ನೀಡುತ್ತಾರೆ. ಏಕೆಂದರೆ ಈ ರೀತಿ ಶರೀರಶುದ್ಧಿಯಾದವನೇ ಬ್ರಹ್ಮಜ್ಞಾನಕ್ಕೆ ಪಾತ್ರನಾಗುತ್ತಾನೆ.

12262003a ಆನಂತ್ಯಮನುಯುಂಕ್ತೇ ಯಃ[1] ಕರ್ಮಣಾ ತದ್ಬ್ರವೀಮಿ ತೇ|

12262003c ನಿರಾಗಮಮನೈತಿಹ್ಯಂ[2] ಪ್ರತ್ಯಕ್ಷಂ ಲೋಕಸಾಕ್ಷಿಕಮ್||

ಅನಂತರ ಇತರ ಕರ್ಮಗಳಲ್ಲಿ ತೊಡಗಬೇಕು. ಅವು ಯಾವುವೆಂದು ನಿನಗೆ ಹೇಳುತ್ತೇನೆ. ಚಿತ್ತಶುದ್ಧಿಯು ಪ್ರತ್ಯಕ್ಷ ಅನುಭವಸಾಧ್ಯವು. ಲೋಕದ ಸಾಕ್ಷಿಗೆ ಅದು ನಿಲುಕುವುದಿಲ್ಲ.

12262004a ಧರ್ಮ ಇತ್ಯೇವ ಯೇ ಯಜ್ಞಾನ್ವಿತನ್ವಂತಿ ನಿರಾಶಿಷಃ|

12262004c ಉತ್ಪನ್ನತ್ಯಾಗಿನೋಽಲುಬ್ಧಾಃ ಕೃಪಾಸೂಯಾವಿವರ್ಜಿತಾಃ|

12262004e ಧನಾನಾಮೇಷ ವೈ ಪಂಥಾಸ್ತೀರ್ಥೇಷು ಪ್ರತಿಪಾದನಮ್||

ಯಾವ ಆಸೆಗಳೂ ಇಲ್ಲದೇ ಯಜ್ಞವನ್ನು ಮಾಡುವುದೇ ಧರ್ಮ. ಅಂಥವರು ಉತ್ಪನ್ನತ್ಯಾಗಿಗಳು, ಅಲುಬ್ಧರು, ಮತ್ತು ಕೃಪೆ-ಅಸೂಯೆಗಳಿಲ್ಲದವರು. ತೀರ್ಥಯಾತ್ರೆಗೆ ಏನಾದರೂ ಧನವನ್ನು ಅವರು ಸಂಗ್ರಹಿಸಬಹುದು.

12262005a ಅನಾಶ್ರಿತಾಃ ಪಾಪಕೃತ್ಯಾಃ ಕದಾ ಚಿತ್ಕರ್ಮಯೋನಿತಃ[3]|

12262005c ಮನಃಸಂಕಲ್ಪಸಂಸಿದ್ಧಾ ವಿಶುದ್ಧಜ್ಞಾನನಿಶ್ಚಯಾಃ||

ಎಂದೂ ಪಾಪಕರ್ಮಗಳನ್ನು ಆಶ್ರಯಿಸಿರದ ಕರ್ಮಯೋಗಿಗಳು ಮನಸ್ಸಿನ ಸಂಕಲ್ಪಗಳಮೇಲೆ ವಿಜಯವನ್ನು ಸಾಧಿಸುತ್ತಾರೆ ಮತ್ತು ವಿಶುದ್ಧ ಜ್ಞಾನದಲ್ಲಿ ದೃಢನಿಶ್ಚಯಿಗಳಾಗಿರುತ್ತಾರೆ.

12262006a ಅಕ್ರುಧ್ಯಂತೋಽನಸೂಯಂತೋ ನಿರಹಂಕಾರಮತ್ಸರಾಃ|

12262006c ಜ್ಞಾನನಿಷ್ಠಾಸ್ತ್ರಿಶುಕ್ಲಾಶ್ಚ ಸರ್ವಭೂತಹಿತೇ ರತಾಃ||

ಕರ್ಮಯೋಗಿಗಳು ಯಾರಮೇಲೂ ಕೋಪಿಸಿಕೊಳ್ಳದೇ, ಯಾರ ವಿಷಯದಲ್ಲಿಯೂ ದೋಷವೆಣಿಸದೇ, ನಿರಹಂಕಾರಿಗಳಾಗಿ, ಮಾತ್ಸರ್ಯವಿಲ್ಲದವರಾಗಿ, ಜ್ಞಾನನಿಷ್ಠರಾಗಿ, ಶುಕ್ಲರಾಗಿ[4], ಸರ್ವಭೂತಗಳ ಹಿತದಲ್ಲಿ ನಿರತರಾಗಿರುತ್ತಾರೆ.

12262007a ಆಸನ್ ಗೃಹಸ್ಥಾ ಭೂಯಿಷ್ಠಮವ್ಯುತ್ಕ್ರಾಂತಾಃ ಸ್ವಕರ್ಮಸು|

12262007c ರಾಜಾನಶ್ಚ ತಥಾ ಯುಕ್ತಾ ಬ್ರಾಹ್ಮಣಾಶ್ಚ ಯಥಾವಿಧಿ||

ಹಿಂದೆ ಕ್ಷತ್ರಿಯರು ಮತ್ತು ಬ್ರಾಹ್ಮಣರು ಯಥಾವಿಧಿಯಾಗಿ ಗೃಹಸ್ಥರಾಗಿದ್ದುಕೊಂಡು ಸ್ವಕರ್ಮಗಳನ್ನು ತಪ್ಪದೇ ನಿಷ್ಕಾಮಭಾವದಿಂದ ಮಾಡುತ್ತಿದ್ದರು.

12262008a ಸಮಾ ಹ್ಯಾರ್ಜವಸಂಪನ್ನಾಃ ಸಂತುಷ್ಟಾ ಜ್ಞಾನನಿಶ್ಚಯಾಃ|

12262008c ಪ್ರತ್ಯಕ್ಷಧರ್ಮಾಃ ಶುಚಯಃ ಶ್ರದ್ದಧಾನಾಃ ಪರಾವರೇ||

ಅಂಥವರು ಸಮರಾಗಿದ್ದರು. ಆರ್ಜವಸಂಪನ್ನರಾಗಿದ್ದರು. ಸಂತುಷ್ಟರೂ ಜ್ಞಾನನಿಶ್ಚಯರೂ ಆಗಿದ್ದರು. ಪ್ರತ್ಯಕ್ಷಧರ್ಮಿಗಳಾಗಿದ್ದರು. ಪರಿಶುದ್ಧರೂ, ಪರಾಪರಗಳೆರಡಲ್ಲಿಯೂ ಶ್ರದ್ಧೆಯುಳ್ಳವರಾಗಿದ್ದರು.

12262009a ಪುರಸ್ತಾದ್ಭಾವಿತಾತ್ಮಾನೋ ಯಥಾವಚ್ಚರಿತವ್ರತಾಃ|

12262009c ಚರಂತಿ ಧರ್ಮಂ ಕೃಚ್ಚ್ರೇಽಪಿ ದುರ್ಗೇ ಚೈವಾಧಿಸಂಹತಾಃ||

ಮೊದಲು ಆ ಭಾವಿತಾತ್ಮರು ಯಥಾವತ್ತಾದ ಚಾರಿತ್ರವ್ರತರಾಗಿರುತ್ತಿದ್ದರು. ಅವರು ಕಷ್ಟಗಳಲ್ಲಿಯೂ, ದುರ್ಗಮ ಪ್ರದೇಶಗಳಲ್ಲಿಯೂ, ಮತ್ತು ದುಃಖದಿಂದ ಪೀಡಿತರಾದಾಗಲೂ ಧರ್ಮವನ್ನು ಆಚರಿಸುತ್ತಿದ್ದರು.

12262010a ಸಂಹತ್ಯ ಧರ್ಮಂ ಚರತಾಂ ಪುರಾಸೀತ್ಸುಖಮೇವ ತತ್|

12262010c ತೇಷಾಂ ನಾಸೀದ್ವಿಧಾತವ್ಯಂ ಪ್ರಾಯಶ್ಚಿತ್ತಂ ಕದಾ ಚನ||

ಹಾಗೆ ಎಲ್ಲಕಾಲ-ಪರಿಸ್ಥಿತಿಗಳಲ್ಲಿ ಧರ್ಮವನ್ನು ಆಚರಿಸುವುದೇ ಹಿಂದಿನವರಿಗೆ ಸುಖಕರವಾಗಿತ್ತು. ಅವರಿಗೆ ಎಂದೂ ಪ್ರಾಯಶ್ಚಿತ್ತ ಎನ್ನುವುದೇ ವಿಹಿತವಾಗಿರಲಿಲ್ಲ.

12262011a ಸತ್ಯಂ ಹಿ ಧರ್ಮಮಾಸ್ಥಾಯ ದುರಾಧರ್ಷತಮಾ ಮತಾಃ|

12262011c ನ ಮಾತ್ರಾಮನುರುಧ್ಯಂತೇ ನ ಧರ್ಮಚ್ಚಲಮಂತತಃ||

ಸತ್ಯಧರ್ಮವನ್ನೇ ಆಶ್ರಯಿಸಿದ ಅವರು ದುರಾಧರ್ಷರೆಂದೆನಿಸಿಕೊಂಡಿದ್ದರು. ಸ್ವಲ್ಪವೂ ಅವರು ಪ್ರಾಪಂಚಿಕ ಸುಖಗಳನ್ನನುಸರಿಸಿ ಹೋಗುತ್ತಿರಲಿಲ್ಲ. ಕೊನೆಯವರೆಗೂ ಕಪಟ ಧರ್ಮಾಚರಣೆಯನ್ನು ಮಾಡುತ್ತಿರಲಿಲ್ಲ.

12262012a ಯ ಏವ ಪ್ರಥಮಃ ಕಲ್ಪಸ್ತಮೇವಾಭ್ಯಾಚರನ್ಸಹ|

[5]12262012c ಅಸ್ಯಾಂ ಸ್ಥಿತೌ[6] ಸ್ಥಿತಾನಾಂ ಹಿ ಪ್ರಾಯಶ್ಚಿತ್ತಂ ನ ವಿದ್ಯತೇ||

ಶ್ರೇಷ್ಠವಾದ ಮತ್ತು ನಿಯತವಾದ ಧರ್ಮವನ್ನೇ ಅವರು ಆಚರಿಸುತ್ತಿದ್ದರು. ಆ ಸ್ಥಿತಿಯಲ್ಲಿ ನೆಲೆಸಿದ್ದ ಅವರಿಗೆ ಪ್ರಾಯಶ್ಚಿತ್ತ ಎನ್ನುವುದೇ ಇರಲಿಲ್ಲ.

12262012e ದುರ್ಬಲಾತ್ಮನ ಉತ್ಪನ್ನಂ ಪ್ರಾಯಶ್ಚಿತ್ತಮಿತಿ ಶ್ರುತಿಃ|

12262013a ಯತ ಏವಂವಿಧಾ[7] ವಿಪ್ರಾಃ ಪುರಾಣಾ ಯಜ್ಞವಾಹನಾಃ||

ದುರ್ಬಲರಿಗಾಗಿ ಪ್ರಾಯಶ್ಚಿತ್ತವು ಹುಟ್ಟಿಕೊಂಡಿದೆಯೆಂದು ಶ್ರುತಿಯಿದೆ. ಹೀಗೆ ಹಿಂದಿನ ವಿಪ್ರರು ಬಹುವಿಧದ ಯಜ್ಞಗಳನ್ನು ಮಾಡುತ್ತಿದ್ದರು.

12262013c ತ್ರೈವಿದ್ಯವೃದ್ಧಾಃ ಶುಚಯೋ ವೃತ್ತವಂತೋ ಯಶಸ್ವಿನಃ|

12262013e ಯಜಂತೋಽಹರಹರ್ಯಜ್ಞೈರ್ನಿರಾಶೀರ್ಬಂಧನಾ ಬುಧಾಃ||

ವೇದವಿದ್ಯೆಯಲ್ಲಿ ವೃದ್ಧರಾಗಿದ್ದರು. ಶುಚಿಗಳಾಗಿದ್ದರು. ಸದಾಚಾರಸಂಪನ್ನರೂ ಯಶಸ್ವಿಗಳೂ ಆಗಿದ್ದರು. ಕಾಮನೆಗಳ ಬಂಧನಗಳಿಂದ ವಿಮುಕ್ತರಾಗಿದ್ದ ಅವರು ನಿತ್ಯವೂ ಯಜ್ಞಗಳಿಂದ ದೇವತೆಗಳನ್ನು ಆರಾಧಿಸುತ್ತಿದ್ದರು.

12262014a ತೇಷಾಂ ಯಜ್ಞಾಶ್ಚ ವೇದಾಶ್ಚ ಕರ್ಮಾಣಿ ಚ ಯಥಾಗಮಮ್|

12262014c ಆಗಮಾಶ್ಚ ಯಥಾಕಾಲಂ ಸಂಕಲ್ಪಾಶ್ಚ ಯಥಾವ್ರತಮ್||

ಅವರ ಯಜ್ಞಗಳು, ವೇದಾಧ್ಯಯನ ಮತ್ತು ಕರ್ಮಗಳು ಶಾಸ್ತ್ರೋಕ್ತವಾಗಿಯೇ ಇದ್ದವು. ಅವರಿಗೆ ಆಗಮಗಳೂ ಯಥಾಕಾಲದಲ್ಲಿ ಮತ್ತು ಸಂಕಲ್ಪಗಳೂ ಯಥಾವ್ರತವಾಗಿ ಸ್ಫುರಿಸುತ್ತಿದ್ದವು.

12262015a ಅಪೇತಕಾಮಕ್ರೋಧಾನಾಂ ಪ್ರಕೃತ್ಯಾ ಸಂಶಿತಾತ್ಮನಾಮ್|

12262015c ಋಜೂನಾಂ ಶಮನಿತ್ಯಾನಾಂ ಸ್ಥಿತಾನಾಂ ಸ್ವೇಷು ಕರ್ಮಸು|

12262015e ಸರ್ವಮಾನಂತ್ಯಮೇವಾಸೀದಿತಿ ನಃ ಶಾಶ್ವತೀ ಶ್ರುತಿಃ||

ಕಾಮಕ್ರೋಧಗಳನ್ನು ಕಳೆದುಕೊಂಡಿದ್ದ, ಸ್ವಾಭಾವಿಕವಾಗಿಯೇ ಸಂಶಿತಾತ್ಮರಾಗಿದ್ದ, ಸರಳ ಸ್ವಭಾವದ, ಶಾಂತಿಪರಾಯಣರಾಗಿದ್ದ, ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದ ಅವರ ಎಲ್ಲ ಫಲಗಳೂ ಅನಂತವಾಗಿದ್ದವು ಎಂದು ಶಾಶ್ವತ ಶ್ರುತಿಗಳು ಹೇಳುತ್ತವೆ.

12262016a ತೇಷಾಮದೀನಸತ್ತ್ವಾನಾಂ ದುಶ್ಚರಾಚಾರಕರ್ಮಣಾಮ್|

12262016c ಸ್ವಕರ್ಮಭಿಃ ಸಂವೃತಾನಾಂ[8] ತಪೋ ಘೋರತ್ವಮಾಗತಮ್||

ಉದಾರಚಿತ್ತರಾಗಿದ್ದ ಮತ್ತು ಅನುಸರಿಸಲು ಕಷ್ಟವಾದ ಆಚಾರಕರ್ಮಗಳನ್ನು ಮಾಡುತ್ತಾ ತಮ್ಮ ಕರ್ಮಗಳಲ್ಲಿಯೇ ಮುಳುಗಿದ್ದ ಅವರ ತಪಸ್ಸು ಘೋರವಾಗತೊಡಗಿತು.

12262017a ತಂ ಸದಾಚಾರಮಾಶ್ಚರ್ಯಂ ಪುರಾಣಂ ಶಾಶ್ವತಂ ಧ್ರುವಮ್|

12262017c ಅಶಕ್ನುವದ್ಭಿಶ್ಚರಿತುಂ ಕಿಂ ಚಿದ್ಧರ್ಮೇಷು ಸೂಚಿತಮ್[9]||

ಆ ಆಶ್ಚರ್ಯಕರ, ಸನಾತನ ಮತ್ತು ಶಾಶ್ವತ ಸದಾಚಾರವನ್ನು ಪಾಲಿಸಲು ಅಶಕ್ತರಾದವರಲ್ಲಿಯೂ ಧರ್ಮವು ಕಡಿಮೆಯಾಗಿರಲಿಲ್ಲ.

12262018a ನಿರಾಪದ್ಧರ್ಮ ಆಚಾರಸ್ತ್ವಪ್ರಮಾದೋಽಪರಾಭವಃ|

12262018c ಸರ್ವವರ್ಣೇಷು ಯತ್ತೇಷು ನಾಸೀತ್ಕಶ್ಚಿದ್ವ್ಯತಿಕ್ರಮಃ||

ಅವರ ಆಚಾರಗಳು ಆಪದ್ಧರ್ಮರಹಿತವಾಗಿದ್ದವು. ಕರ್ಮಗಳಲ್ಲಿ ಪ್ರಮಾದಗಳಾಗಲೀ ಆಲಸ್ಯವಾಗಲೀ ಇರಲಿಲ್ಲ. ಸರ್ವವರ್ಣದವರೂ ಸರ್ವಕರ್ಮಗಳಲ್ಲಿಯೂ ಯಾವುದೇ ವಿಧವಾಗಿ ಅತಿಕ್ರಮಿಸುತ್ತಿರಲಿಲ್ಲ.

12262019a ಧರ್ಮಮೇಕಂ ಚತುಷ್ಪಾದಮಾಶ್ರಿತಾಸ್ತೇ ನರರ್ಷಭಾಃ|

12262019c ತಂ ಸಂತೋ ವಿಧಿವತ್ ಪ್ರಾಪ್ಯ ಗಚ್ಚಂತಿ ಪರಮಾಂ ಗತಿಮ್||

ಆ ನರರ್ಷಭರು ನಾಲ್ಕು ಪಾದಗಳಿರುವ ಒಂದೇ ಧರ್ಮವನ್ನು ಆಶ್ರಯಿಸಿದ್ದರು. ವಿಧಿವತ್ತಾದ ಮಾರ್ಗಗಳಲ್ಲಿ ಹೋಗಿ ಆ ಸತ್ಪುರುಷರು ಪರಮಗತಿಯನ್ನು ಪಡೆದುಕೊಂಡರು.

12262020a ಗೃಹೇಭ್ಯ ಏವ ನಿಷ್ಕ್ರಮ್ಯ ವನಮನ್ಯೇ ಸಮಾಶ್ರಿತಾಃ|

12262020c ಗೃಹಮೇವಾಭಿಸಂಶ್ರಿತ್ಯ ತತೋಽನ್ಯೇ ಬ್ರಹ್ಮಚಾರಿಣಃ||

ಕೆಲವರು ಮನೆಗಳಿಂದ ಹೊರಟು ಹೋದರು. ಅನ್ಯರು ವನಗಳಲ್ಲಿ ವಾಸಿಸಿದರು. ಕೆಲವರು ಮನೆಗಳಲ್ಲಿಯೇ ಇದ್ದುಕೊಂಡು ಬ್ರಹ್ಮಚರ್ಯವನ್ನು ಪಾಲಿಸಿದರು.

12262021a ಧರ್ಮಮೇತಂ ಚತುಷ್ಪಾದಮಾಶ್ರಮಂ ಬ್ರಾಹ್ಮಣಾ ವಿದುಃ|

12262021c ಆನಂತ್ಯಂ ಬ್ರಹ್ಮಣಃ ಸ್ಥಾನಂ ಬ್ರಾಹ್ಮಣಾ ನಾಮ ನಿಶ್ಚಯಃ||

ಧರ್ಮವು ನಾಲ್ಕು ಆಶ್ರಮಗಳನ್ನು ಹೊಂದಿದೆ ಎಂದು ಬ್ರಾಹ್ಮಣರು ತಿಳಿದಿದ್ದಾರೆ. ಅನಂತ ಬ್ರಹ್ಮ ಸ್ಥಾನವನ್ನು ಪಡೆದವರು ಬ್ರಾಹ್ಮಣರೆಂಬ ಹೆಸರಿನಿಂದ ನಿಶ್ಚಯಿಸಲ್ಪಟ್ಟಿದ್ದಾರೆ.

12262022a ಅತ ಏವಂವಿಧಾ ವಿಪ್ರಾಃ ಪುರಾಣಾ ಧರ್ಮಚಾರಿಣಃ|

12262022c ತ ಏತೇ ದಿವಿ ದೃಶ್ಯಂತೇ ಜ್ಯೋತಿರ್ಭೂತಾ ದ್ವಿಜಾತಯಃ||

ಅಂಥಹ ಪುರಾತನ ಧರ್ಮಚಾರೀ ವಿಪ್ರರು ಅನೇಕರಾಗಿಹೋಗಿದ್ದಾರೆ. ಆ ದ್ವಿಜಾತಿಯರು ಆಕಾಶದಲ್ಲಿ ನಕ್ಷತ್ರಗಳಾಗಿ ಕಾಣುತ್ತಾರೆ.

12262023a ನಕ್ಷತ್ರಾಣೀವ ಧಿಷ್ಣ್ಯೇಷು ಬಹವಸ್ತಾರಕಾಗಣಾಃ|

12262023c ಆನಂತ್ಯಮುಪಸಂಪ್ರಾಪ್ತಾಃ ಸಂತೋಷಾದಿತಿ ವೈದಿಕಮ್||

ಪರಮಪದವನ್ನು ಹೊಂದಿದ ದ್ವಿಜರು ತಾರಾಗಣಗಳಲ್ಲಿ ಅನೇಕ ನಕ್ಷತ್ರಗಳಾಗಿ ಪ್ರಕಾಶಿಸುತ್ತಾರೆ ಎನ್ನುವುದು ವೈದಿಕ ಸಿದ್ಧಾಂತವು.

12262024a ಯದ್ಯಾಗಚ್ಚಂತಿ ಸಂಸಾರಂ ಪುನರ್ಯೋನಿಷು ತಾದೃಶಾಃ|

12262024c ನ ಲಿಪ್ಯಂತೇ ಪಾಪಕೃತ್ಯೈಃ ಕದಾ ಚಿತ್ಕರ್ಮಯೋನಿತಃ||

ಅಂಥವರು ಹುಟ್ಟಿ ಪುನಃ ಈ ಸಂಸಾರವನ್ನು ಪ್ರವೇಶಿಸಿದರೂ ಅವರು ಪಾಪಕೃತ್ಯಗಳಿಂದ ಲಿಪ್ತರಾಗದೇ ಇರುವುದರಿಂದ, ಅವರು ಅಪರೂಪದಲ್ಲಿ ಮಾತ್ರ ಪುನಃ ಹುಟ್ಟುವ ಕರ್ಮಗಳನ್ನು ಮಾಡಬಹುದು.[10]

12262025a ಏವಂ ಯುಕ್ತೋ ಬ್ರಾಹ್ಮಣಃ ಸ್ಯಾದನ್ಯೋ ಬ್ರಾಹ್ಮಣಕೋ ಭವೇತ್|

12262025c ಕರ್ಮೈವ ಪುರುಷಸ್ಯಾಹ ಶುಭಂ ವಾ ಯದಿ ವಾಶುಭಮ್||

ಅಂಥವರು ಬ್ರಾಹ್ಮಣರು. ಅನ್ಯರು ಹೇಗೆ ಬ್ರಾಹ್ಮಣರಾಗಬಲ್ಲರು? ಕರ್ಮವೇ ಪುರುಷನನ್ನು ಶುಭ ಮತ್ತು ಅಶುಭನನ್ನಾಗಿ ಮಾಡುತ್ತದೆ.

12262026a ಏವಂ ಪಕ್ವಕಷಾಯಾಣಾಮಾನಂತ್ಯೇನ ಶ್ರುತೇನ ಚ|

12262026c ಸರ್ವಮಾನಂತ್ಯಮೇವಾಸೀದೇವಂ ನಃ ಶಾಶ್ವತೀ ಶ್ರುತಿಃ||

ಹೀಗೆ ವಿವೇಕವು ಪಕ್ವವಾಗಿರುವ ಅವರು ಅನಂತತ್ವವನ್ನು ಪಡೆದುಕೊಳ್ಳುತ್ತಾರೆ ಎಂದು ಕೇಳಿದ್ದೇವೆ. ಅವರೆಲ್ಲರೂ ಹೀಗೆಯೇ ಅನಂತತ್ವವನ್ನು ಪಡೆದುಕೊಂಡರು ಎಂದು ಶಾಶ್ವತ ಶ್ರುತಿಗಳು ಹೇಳುತ್ತವೆ.

12262027a ತೇಷಾಮಪೇತತೃಷ್ಣಾನಾಂ ನಿರ್ಣಿಕ್ತಾನಾಂ ಶುಭಾತ್ಮನಾಮ್|

12262027c ಚತುರ್ಥ ಔಪನಿಷದೋ ಧರ್ಮಃ ಸಾಧಾರಣಃ ಸ್ಮೃತಃ||

ಶುಭಾತ್ಮರಾದ ಅವರಿಗೆ ಮುಕ್ತಿಯನ್ನು ಹೊಂದುವುದೊಂದೇ ತೃಷ್ಣೆಯಾಗಿತ್ತು. ಉಪನಿಷತ್ತುಗಳಲ್ಲಿರುವ ನಾಲ್ಕನೆಯ ಧರ್ಮ – ಸಂನ್ಯಾಸವು – ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳುತ್ತಾರೆ[11].

12262028a ಸ ಸಿದ್ಧೈಃ ಸಾಧ್ಯತೇ ನಿತ್ಯಂ ಬ್ರಾಹ್ಮಣೈರ್ನಿಯತಾತ್ಮಭಿಃ|

12262028c ಸಂತೋಷಮೂಲಸ್ತ್ಯಾಗಾತ್ಮಾ ಜ್ಞಾನಾಧಿಷ್ಠಾನಮುಚ್ಯತೇ||

ಅದು ನಿತ್ಯವೂ ನಿಯತಾತ್ಮರಾಗಿರುವ ಸಿದ್ಧ ಬ್ರಾಹ್ಮಣರಿಂದ ಸಾಧ್ಯವಾಗುತ್ತದೆ. ಸಂತೋಷವೇ ಮೂಲವಾಗಿರುವ ಆ ತ್ಯಾಗಾತ್ಮರಲ್ಲಿ ಜ್ಞಾನವು ನೆಲೆಸಿರುತ್ತದೆಯೆಂದು ಹೇಳುತ್ತಾರೆ.

12262029a ಅಪವರ್ಗಗತಿರ್ನಿತ್ಯೋ ಯತಿಧರ್ಮಃ ಸನಾತನಃ|

12262029c ಸಾಧಾರಣಃ ಕೇವಲೋ ವಾ ಯಥಾಬಲಮುಪಾಸ್ಯತೇ||

ನಿತ್ಯವೂ ಮೋಕ್ಷಮಾರ್ಗದಲ್ಲಿರುವ ಇದು ಸನಾತನ ಯತಿಧರ್ಮವು. ಅವರ ಶಕ್ತಿಗನುಗುಣವಾಗಿ ಇತರ ಸಾಧಾರಣ ಜನರೂ ಇದನ್ನು ಅನುಸರಿಸುತ್ತಾರೆ.

12262030a ಗಚ್ಚತೋ ಗಚ್ಚತಃ ಕ್ಷೇಮಂ ದುರ್ಬಲೋಽತ್ರಾವಸೀದತಿ|

12262030c ಬ್ರಹ್ಮಣಃ ಪದಮನ್ವಿಚ್ಚನ್ಸಂಸಾರಾನ್ಮುಚ್ಯತೇ ಶುಚಿಃ||

ಕ್ಷೇಮವಾಗಿ ಗುರಿಯನ್ನು ತಲುಪಲಿ ಅಥವಾ ದುರ್ಬಲದ ಕಾರಣದಿಂದ ತಲುಪದೇ ಇರಲಿ, ಬ್ರಹ್ಮಪದವನ್ನು ಇಚ್ಛಿಸುವ ಶುಚಿಯು ಸಂಸಾರದಿಂದ ಮುಕ್ತನಾಗುತ್ತಾನೆ.”

12262031 ಸ್ಯೂಮರಶ್ಮಿರುವಾಚ|

12262031a ಯೇ ಭುಂಜತೇ ಯೇ ದದತೇ ಯಜಂತೇಽಧೀಯತೇ ಚ ಯೇ|

12262031c ಮಾತ್ರಾಭಿರ್ಧರ್ಮಲಬ್ಧಾಭಿರ್ಯೇ ವಾ ತ್ಯಾಗಂ ಸಮಾಶ್ರಿತಾಃ||

ಸ್ಯೂಮರಶ್ಮಿಯು ಹೇಳಿದನು: “ಭೋಗಿಸುತ್ತಾರೆ. ದಾನಮಾಡುತ್ತಾರೆ. ಯಜ್ಞಮಾಡುತ್ತಾರೆ. ಅಧ್ಯಯನ ಮಾಡುತ್ತಾರೆ. ಇನ್ನು ಕೆಲವರು ವಿಷಯಭೋಗಗಳ ಧರ್ಮವನ್ನು ಅನುಸರಿಸಿ ನಂತರ ಎಲ್ಲವನ್ನೂ ತ್ಯಜಿಸುತ್ತಾರೆ.

12262032a ಏತೇಷಾಂ ಪ್ರೇತ್ಯಭಾವೇ ತು ಕತಮಃ ಸ್ವರ್ಗಜಿತ್ತಮಃ|

12262032c ಏತದಾಚಕ್ಷ್ವ ಮೇ ಬ್ರಹ್ಮನ್ ಯಥಾತಥ್ಯೇನ ಪೃಚ್ಚತಃ||

ಇಂಥವರಲ್ಲಿ ಯಾರು ಮರಣಾನಂತರ ಸ್ವರ್ಗವನ್ನು ಗೆಲ್ಲುತ್ತಾರೆ? ಬ್ರಹ್ಮನ್! ಕೇಳುತ್ತಿರುವ ನನಗೆ ಇದರ ಕುರಿತು ಯಥಾತಥ್ಯವಾಗಿ ಹೇಳು.”

12262033 ಕಪಿಲ ಉವಾಚ|

12262033a ಪರಿಗ್ರಹಾಃ ಶುಭಾಃ ಸರ್ವೇ ಗುಣತೋಽಭ್ಯುದಯಾಶ್ಚ ಯೇ|

12262033c ನ ತು ತ್ಯಾಗಸುಖಂ ಪ್ರಾಪ್ತಾ ಏತತ್ತ್ವಮಪಿ ಪಶ್ಯಸಿ||

ಕಪಿಲನು ಹೇಳಿದನು: “ಈ ಎಲ್ಲ ಸಾಧನಮಾರ್ಗಗಳೂ ಅಭ್ಯುದಯಕ್ಕೆ ಗುಣಯುಕ್ತವಾಗಿಯೇ ಇವೆ. ಆದರೆ ತ್ಯಾಗದಿಂದ ದೊರೆಯುವ ಸುಖವನ್ನು ಬೇರೆ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ. ಅದನ್ನು ನೀನೂ ಕೂಡ ಕಾಣುತ್ತಿರುವೆ.”

12262034 ಸ್ಯೂಮರಶ್ಮಿರುವಾಚ|

12262034a ಭವಂತೋ ಜ್ಞಾನನಿಷ್ಠಾ ವೈ ಗೃಹಸ್ಥಾಃ ಕರ್ಮನಿಶ್ಚಯಾಃ|

12262034c ಆಶ್ರಮಾಣಾಂ ಚ ಸರ್ವೇಷಾಂ ನಿಷ್ಠಾಯಾಮೈಕ್ಯಮುಚ್ಯತೇ||

ಸ್ಯೂಮರಶ್ಮಿಯು ಹೇಳಿದನು: “ನೀನಾದರೋ ಬ್ರಹ್ಮನಿಷ್ಠನಾಗಿದ್ದೀಯೆ. ಗೃಹಸ್ಥರು ಕರ್ಮನಿಶ್ಚಯಿಗಳಾಗಿರುತ್ತಾರೆ. ಸರ್ವ ಆಶ್ರಮಗಳ ನಿಷ್ಠೆಗಳೂ ಒಂದೇ ಎಂದು ಹೇಳುತ್ತಾರೆ.

12262035a ಏಕತ್ವೇ ಚ ಪೃಥಕ್ತ್ವೇ ಚ ವಿಶೇಷೋ ನಾನ್ಯ ಉಚ್ಯತೇ|

12262035c ತದ್ಯಥಾವದ್ಯಥಾನ್ಯಾಯಂ ಭಗವಾನ್ ಪ್ರಬ್ರವೀತು ಮೇ||

ಭಗವನ್! ಹೀಗೆ ನಿಷ್ಠೆಯು ಒಂದೇ ಆಗಿರುವ ಆದರೆ ಬೇರೆ ಬೇರೆಯಾಗಿರುವ ಈ ಎರಡಕ್ಕೂ ಯಾವ ವ್ಯತ್ಯಾಸವೂ ಇಲ್ಲವೆಂದು ಹೇಳುತ್ತಾರೆ. ಯಾವುದು ಹೆಚ್ಚಿನದು ಮತ್ತು ಯಾವುದು ಕಡಿಮೆ ಎನ್ನುವುದನ್ನು ನನಗೆ ಹೇಳಬೇಕು.”

12262036 ಕಪಿಲ ಉವಾಚ|

12262036a ಶರೀರಪಕ್ತಿಃ ಕರ್ಮಾಣಿ ಜ್ಞಾನಂ ತು ಪರಮಾ ಗತಿಃ|

12262036c ಪಕ್ವೇ ಕಷಾಯೇ ವಮನೈ ರಸಜ್ಞಾನೇ ನ ತಿಷ್ಠತಿ||

12262037a ಆನೃಶಂಸ್ಯಂ ಕ್ಷಮಾ ಶಾಂತಿರಹಿಂಸಾ ಸತ್ಯಮಾರ್ಜವಮ್|

12262037c ಅದ್ರೋಹೋ ನಾಭಿಮಾನಶ್ಚ ಹ್ರೀಸ್ತಿತಿಕ್ಷಾ ಶಮಸ್ತಥಾ||

ಕಪಿಲನು ಹೇಳಿದನು: “ಕರ್ಮಗಳು ಶರೀರವನ್ನು ಶುದ್ಧಗೊಳಿಸುತ್ತವೆ. ಆದರೆ ಜ್ಞಾನವು ಪರಮ ಗುರಿಯು. ಪಾಪಗಳನ್ನು ಕಳೆದುಕೊಂಡು ಜ್ಞಾನವೆಂಬ ರಸವನ್ನು ಕುಡಿದ ಪಕ್ವ ತ್ಯಾಗಿಯಲ್ಲಿ ಅಕ್ರೂರತೆ, ಕ್ಷಮೆ, ಅಹಿಂಸೆ, ಸತ್ಯ, ಸರಳತೆ, ಅದ್ರೋಹ, ವಿನಯತೆ, ಲಜ್ಜೆ, ಸಹನೆ ಮತ್ತು ಶಾಂತಿಗಳು ನೆಲೆಸುತ್ತವೆ.

12262038a ಪಂಥಾನೋ ಬ್ರಹ್ಮಣಸ್ತ್ವೇತೇ ಏತೈಃ ಪ್ರಾಪ್ನೋತಿ ಯತ್ಪರಮ್|

12262038c ತದ್ವಿದ್ವಾನನುಬುಧ್ಯೇತ ಮನಸಾ ಕರ್ಮನಿಶ್ಚಯಮ್||

ಈ ಮಾರ್ಗದಿಂದ ಹೋದರೆ ಪರಬ್ರಹ್ಮನನ್ನು ಪಡೆಯಬಹುದು. ಈ ವಿಧಾನವನ್ನು ತಿಳಿದುಕೊಂಡು ಮಾಡಬೇಕಾದುದನ್ನು ಮನಸಾರೆ ನಿಶ್ಚಯಿಸಬೇಕು.

12262039a ಯಾಂ ವಿಪ್ರಾಃ ಸರ್ವತಃ ಶಾಂತಾ ವಿಶುದ್ಧಾ ಜ್ಞಾನನಿಶ್ಚಯಾಃ|

12262039c ಗತಿಂ ಗಚ್ಚಂತಿ ಸಂತುಷ್ಟಾಸ್ತಾಮಾಹುಃ ಪರಮಾಂ ಗತಿಮ್||

ಸರ್ವತಃ ಶಾಂತರಾಗಿರುವ ವಿಶುದ್ಧ ಜ್ಞಾನನಿಶ್ಚಯೀ ವಿಪ್ರರು ಸಂತುಷ್ಟರಾಗಿ ಪರಮ ಗತಿಯಲ್ಲಿ ಹೋಗುತ್ತಾರೆ ಎಂದು ಹೇಳುತ್ತಾರೆ.

12262040a ವೇದಾಂಶ್ಚ ವೇದಿತವ್ಯಂ ಚ ವಿದಿತ್ವಾ ಚ ಯಥಾಸ್ಥಿತಿ|

12262040c ಏವಂ ವೇದವಿದಿತ್ಯಾಹುರತೋಽನ್ಯೋ ವಾತರೇಟಕಃ||

ವೇದಗಳಲ್ಲಿ ತಿಳಿಯಬೇಕಾದುದನ್ನು ಯಥಾಸ್ಥಿತಿಯಾಗಿ ತಿಳಿದಿರುವವನು ವೇದವಿದನೆಂದು ಹೇಳುತ್ತಾರೆ. ಅನ್ಯರು ಗಾಳಿಬಿಡುವ ಯಂತ್ರಗಳ ಸಮಾನರು.

12262041a ಸರ್ವಂ ವಿದುರ್ವೇದವಿದೋ ವೇದೇ ಸರ್ವಂ ಪ್ರತಿಷ್ಠಿತಮ್|

12262041c ವೇದೇ ಹಿ ನಿಷ್ಠಾ ಸರ್ವಸ್ಯ ಯದ್ಯದಸ್ತಿ ಚ ನಾಸ್ತಿ ಚ||

ವೇದವನ್ನು ತಿಳಿದವರು ಸರ್ವವನ್ನೂ ತಿಳಿದಿರುತ್ತಾರೆ. ವೇದದಲ್ಲಿ ಎಲ್ಲವೂ ಪ್ರತಿಷ್ಠಿತಗೊಂಡಿವೆ. ವೇದದಲ್ಲಿ ಇರುವ ಮತ್ತು ಇಲ್ಲದಿರುವ ಎಲ್ಲವೂ ಇದೆ.

12262042a ಏಷೈವ ನಿಷ್ಠಾ ಸರ್ವಸ್ಯ ಯದ್ಯದಸ್ತಿ ಚ ನಾಸ್ತಿ ಚ|

12262042c ಏತದಂತಂ ಚ ಮಧ್ಯಂ ಚ ಸಚ್ಚಾಸಚ್ಚ ವಿಜಾನತಃ||

ಇದೇ ಎಲ್ಲ ಇರುವ ಮತ್ತು ಇಲ್ಲದಿರುವವುಗಳ ನಿಷ್ಠೆ. ಇದೇ ಎಲ್ಲವುದರ ಅಂತ್ಯ ಮತ್ತು ಮಧ್ಯ. ತಿಳಿಯಬೇಕಾದ ಸತ್ಯ-ಅಸತ್ಯಗಳೆಲ್ಲವೂ ವೇದಗಳಲ್ಲಿವೆ.

12262043a ಸಮಸ್ತತ್ಯಾಗ ಇತ್ಯೇವ ಶಮ ಇತ್ಯೇವ ನಿಷ್ಠಿತಃ|

12262043c ಸಂತೋಷ ಇತ್ಯತ್ರ ಶುಭಮಪವರ್ಗೇ ಪ್ರತಿಷ್ಠಿತಮ್||

ಎಲ್ಲವನ್ನೂ ತ್ಯಜಿಸಿದಾಗ ಶಾಂತಿಯುಂಟಾಗುತ್ತದೆ. ಸಂತೋಷವುಂಟಾಗುತ್ತದೆ. ಶುಭವಾದ ಮೋಕ್ಷವು ಇದರಲ್ಲಿ ಪ್ರತಿಷ್ಠಿತವಾಗಿದೆ.

12262044a ಋತಂ ಸತ್ಯಂ ವಿದಿತಂ ವೇದಿತವ್ಯಂ

ಸರ್ವಸ್ಯಾತ್ಮಾ ಜಂಗಮಂ ಸ್ಥಾವರಂ ಚ|

12262044c ಸರ್ವಂ ಸುಖಂ ಯಚ್ಚಿವಮುತ್ತಮಂ ಚ

ಬ್ರಹ್ಮಾವ್ಯಕ್ತಂ ಪ್ರಭವಶ್ಚಾವ್ಯಯಶ್ಚ||

ಪರಬ್ರಹ್ಮವು ಋತವೂ, ಸತ್ಯವೂ, ತಿಳಿಯಲ್ಪಟ್ಟಿರುವುದೂ, ತಿಳಿಯಬೇಕಾಗಿರುವುದೂ ಆಗಿದ್ದು ಸರ್ವ ಜಂಗಮ-ಸ್ಥಾವರಗಳ ಆತ್ಮಸ್ವರೂಪವಾಗಿದೆ. ಸಂಪೂರ್ಣಸುಖಸ್ವರೂಪವಾಗಿದೆ. ಎಲ್ಲದರ ಉತ್ಪತ್ತಿಗೆ ಕಾರಣವಾಗಿದೆ ಮತ್ತು ಅವ್ಯಯವಾಗಿದೆ.

12262045a ತೇಜಃ ಕ್ಷಮಾ ಶಾಂತಿರನಾಮಯಂ ಶುಭಂ

ತಥಾವಿಧಂ ವ್ಯೋಮ ಸನಾತನಂ ಧ್ರುವಮ್|

12262045c ಏತೈಃ ಶಬ್ದೈರ್ಗಮ್ಯತೇ ಬುದ್ಧಿನೇತ್ರೈಸ್

ತಸ್ಮೈ ನಮೋ ಬ್ರಹ್ಮಣೇ ಬ್ರಾಹ್ಮಣಾಯ||

ಆಕಾಶದಂತೆ ನಿಸ್ಸಂಗನಾಗಿರುವ, ಸನಾತನ, ಶಾಶ್ವತ ಪರಬ್ರಹ್ಮನನ್ನು ತೇಜಸ್ಸು, ಕ್ಷಮೆ, ಶಾಂತಿ, ಆರೋಗ್ಯ ಮತ್ತು ಶುಭಕಾಮನೆಗಳಿಂದ ಜ್ಞಾನನೇತ್ರ ಪುರುಷರು ಹೊಂದುತ್ತಾರೆ. ಅಂತಹ ಪರಬ್ರಹ್ಮ ವಸ್ತುವಿಗೂ ಅದನ್ನು ಕಂಡಿರುವ ಬ್ರಾಹ್ಮಣನಿಗೂ ನಮಸ್ಕಾರವು.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಗೋಕಪಿಲೀಯೇ ದ್ವಿಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಗೋಕಪಿಲೀಯ ಎನ್ನುವ ಇನ್ನೂರಾಅರವತ್ತೆರಡನೇ ಅಧ್ಯಾಯವು.

[1] ಅನಂತಮತ್ರ ಬುದ್ಧ್ಯೇದಂ (ಭಾರತ ದರ್ಶನ).

[2] ಅನಾಗಮಮನೈತಿಹ್ಯಂ (ಭಾರತ ದರ್ಶನ).

[3] ಕರ್ಮಯೋಗಿನಃ| (ಭಾರತ ದರ್ಶನ).

[4] ಜನ್ಮ-ಕರ್ಮ-ವಿದ್ಯೆಗಳಲ್ಲಿ ಶುದ್ಧರಾಗಿರುವುದು (ಭಾರತ ದರ್ಶನ).

[5] ಇದಕ್ಕೆ ಮೊದಲು ಈ ಒಂದು ಅಧಿಕ ಅರ್ಧ ಶ್ಲೋಕವಿದೆ: ತೇಷಾಂ ನಾಸೀದ್ವಿಧಾತವ್ಯಂ ಪ್ರಾಯಶ್ಚಿತ್ತಂ ಕದಾಚನ| (ಭಾರತ ದರ್ಶನ).

[6] ತಸ್ಮಿನ್ವಿಧೌ (ಭಾರತ ದರ್ಶನ)

[7] ಏವಂ ಬಹುವಿಧಾ (ಭಾರತ ದರ್ಶನ).

[8] ಸಂಭೃತಾನಾಂ (ಭಾರತ ದರ್ಶನ).

[9] ಸೂಕ್ಷ್ಮತಾಮ್ (ಭಾರತ ದರ್ಶನ).

[10] ಈ ಶ್ಲೋಕಕ್ಕೆ ಇನ್ನೊಂದು ಅರ್ಥಬರುವ ಅನುವಾದವೂ ಇದೆ: ಒಂದು ವೇಳೆ ಅಂಥವರು ಕರ್ಮಾಧಿಕಾರಯುಕ್ತವಾದ ಯೋನಿಗಳಲ್ಲಿ ಹುಟ್ಟಿ ಸಂಸಾರವನ್ನು ಪ್ರವೇಶಿಸಿದರೂ ತತ್ಸಂಬಂಧವಾದ ಯಾವುದೇ ಪಾಪಕೃತ್ಯಗಳಿಂದಲೂ ಲಿಪ್ತರಾಗುವುದಿಲ್ಲ. (ಭಾರತ ದರ್ಶನ)

[11] ಉಪನಿಷತ್ತುಗಳಲ್ಲಿರುವ ನಾಲ್ಕು ಆಶ್ರಮ ಧರ್ಮಗಳು ಎಲ್ಲರಿಗೂ ಅನ್ವಯಿಸುತ್ತವೆ ಎಂಬ ಅನುವಾದವೂ ಇದೆ (ಬಿಬೇಕ್ ದೆಬ್ರೋಯ್).

Comments are closed.