Shanti Parva: Chapter 250

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೦

ಮೃತ್ಯುವಿನ ಘೋರ ತಪಸ್ಸು; ಬ್ರಹ್ಮನ ಆಜ್ಞೆಯಂತೆ ಪ್ರಾಣಿಗಳ ಸಂಹಾರಕಾರ್ಯಕ್ಕೆ ಸಮ್ಮತಿ (1-41).

12250001 ನಾರದ ಉವಾಚ|

12250001a ವಿನೀಯ ದುಃಖಮಬಲಾ ಸಾ ತ್ವತೀವಾಯತೇಕ್ಷಣಾ|

12250001c ಉವಾಚ ಪ್ರಾಂಜಲಿರ್ಭೂತ್ವಾ ಲತೇವಾವರ್ಜಿತಾ ತದಾ||

ನಾರದನು ಹೇಳಿದನು: “ಆಗ ದುಃಖಿತಳಾದ ವಿಶಾಲನೇತ್ರೆ ಅಬಲೆ ಮೃತ್ಯುವು ಅಂಜಲೀಬದ್ಧಳಾಗಿ ಲತೆಯಂತೆ ಬಗ್ಗಿ ವಿನಮ್ರಳಾಗಿ ಹೇಳಿದಳು:

12250002a ತ್ವಯಾ ಸೃಷ್ಟಾ ಕಥಂ ನಾರೀ ಮಾದೃಶೀ ವದತಾಂ ವರ|

12250002c ರೌದ್ರಕರ್ಮಾಭಿಜಾಯೇತ ಸರ್ವಪ್ರಾಣಿಭಯಂಕರೀ||

“ಮಾತನಾಡುವವರಲ್ಲಿ ಶ್ರೇಷ್ಠ! ಒಂದು ವೇಳೆ ಸರ್ವಪ್ರಾಣಿಗಳಿಗೆ ಭಯಂಕರವಾದ ರೌದ್ರಕರ್ಮಗಳನ್ನೇ ನನ್ನಿಂದ ಮಾಡಿಸುವುದಿದ್ದಿದ್ದರೆ ನನ್ನಂತಹ ಕೋಮಲ ಹೃದಯಿ ನಾರಿಯನ್ನೇಕೆ ಸೃಷ್ಟಿಸಿದೆ?

12250003a ಬಿಭೇಮ್ಯಹಮಧರ್ಮಸ್ಯ ಧರ್ಮ್ಯಮಾದಿಶ ಕರ್ಮ ಮೇ|

12250003c ತ್ವಂ ಮಾಂ ಭೀತಾಮವೇಕ್ಷಸ್ವ ಶಿವೇನೇಶ್ವರ ಚಕ್ಷುಷಾ||

ಅಧರ್ಮಕ್ಕೆ ನಾನು ಹೆದರುತ್ತೇನೆ. ಧರ್ಮಕರ್ಮಗಳನ್ನು ಆದೇಶಿಸು. ಈಶ್ವರ! ಭೀತಳಾಗಿರುವ ನನ್ನನ್ನು ಕೃಪಾದೃಷ್ಟಿಯಿಂದ ನೋಡು.

12250004a ಬಾಲಾನ್ ವೃದ್ಧಾನ್ವಯಃಸ್ಥಾಂಶ್ಚ ನ ಹರೇಯಮನಾಗಸಃ|

12250004c ಪ್ರಾಣಿನಃ ಪ್ರಾಣಿನಾಮೀಶ ನಮಸ್ತೇಽಭಿಪ್ರಸೀದ ಮೇ||

ನಿರಪರಾಧಿ ಬಾಲ-ವೃದ್ಧ-ಯುವಕ ಪ್ರಾಣಿಗಳ ಪ್ರಾಣಗಳನ್ನು ನಾನು ಅಪಹರಿಸಲಾರೆನು. ಪ್ರಾಣಿಗಳ ಈಶ! ನಿನಗೆ ನಮಸ್ಕರಿಸುತ್ತೇನೆ. ಪ್ರಸೀದನಾಗು.

12250005a ಪ್ರಿಯಾನ್ಪುತ್ರಾನ್ವಯಸ್ಯಾಂಶ್ಚ ಭ್ರಾತೃನ್ಮಾತೃಃ ಪಿತೃನಪಿ|

12250005c ಅಪಧ್ಯಾಸ್ಯಂತಿ ಯದ್ದೇವ ಮೃತಾಂಸ್ತೇಷಾಂ ಬಿಭೇಮ್ಯಹಮ್||

ಪ್ರಿಯರಾದ ಪುತ್ರರನ್ನೂ, ಮಿತ್ರರನ್ನೂ, ಸಹೋದರರನ್ನೂ, ತಾಯಂದಿರನ್ನೂ, ಅಪ್ಪಂದಿರನ್ನೂ ಸಂಹರಿಸಿದಾಗ ಅವರ ಬಂಧುಗಳೆಲ್ಲರೂ ಅವರ ಮರಣಕ್ಕೆ ನಾನೇ ಕಾರಣಳೆಂದು ಭಾವಿಸಿ ನನ್ನನ್ನು ಶಪಿಸುತ್ತಾರೆ. ಅದಕ್ಕೆ ನಾನು ಭಯಪಡುತ್ತೇನೆ.

12250006a ಕೃಪಣಾಶ್ರುಪರಿಕ್ಲೇದೋ ದಹೇನ್ಮಾಂ ಶಾಶ್ವತೀಃ ಸಮಾಃ|

12250006c ತೇಭ್ಯೋಽಹಂ ಬಲವದ್ಭೀತಾ ಶರಣಂ ತ್ವಾಮುಪಾಗತಾ||

ದುಃಖಿತರ ಕಣ್ಣೀರಿನ ಬಿಸಿಯು ಅನಂತಕಾಲದವರೆಗೆ ನನ್ನನ್ನು ದಹಿಸುತ್ತಿರುತ್ತದೆ. ಅವರಿಗೆ ಅತ್ಯಂತ ಭೀತಳಾಗಿ ನಾನು ನಿನ್ನ ಶರಣು ಬಂದಿದ್ದೇನೆ.

12250007a ಯಮಸ್ಯ ಭವನೇ ದೇವ ಯಾತ್ಯಂತೇ ಪಾಪಕರ್ಮಿಣಃ|

12250007c ಪ್ರಸಾದಯೇ ತ್ವಾ ವರದ ಪ್ರಸಾದಂ ಕುರು ಮೇ ಪ್ರಭೋ||

ದೇವ! ವರದ! ಪ್ರಭೋ! ಪಾಪಕರ್ಮಿಗಳು ಯಮನ ಭವನಕ್ಕೆ ಹೋಗುತ್ತಾರೆ. ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ. ನನ್ನ ಮೇಲೆ ಕೃಪೆದೋರು.

12250008a ಏತಮಿಚ್ಚಾಮ್ಯಹಂ ಕಾಮಂ ತ್ವತ್ತೋ ಲೋಕಪಿತಾಮಹ|

12250008c ಇಚ್ಚೇಯಂ ತ್ವತ್ಪ್ರಸಾದಾಚ್ಚ ತಪಸ್ತಪ್ತುಂ ಸುರೇಶ್ವರ||

ಲೋಕಪಿತಾಮಹ! ಸುರೇಶ್ವರ! ನಿನ್ನಿಂದ ನನ್ನ ಈ ಆಸೆಯನ್ನು ಈಡೇರಿಸಿಕೊಳ್ಳಲು ಬಯಸುತ್ತಿದ್ದೇನೆ. ನಿನ್ನ ಪ್ರಸಾದಕ್ಕಾಗಿ ತಪಸ್ಸನ್ನು ತಪಿಸಲು ಬಯಸುತ್ತೇನೆ.”

12250009 ಪಿತಾಮಹ ಉವಾಚ|

12250009a ಮೃತ್ಯೋ ಸಂಕಲ್ಪಿತಾ ಮೇ ತ್ವಂ ಪ್ರಜಾಸಂಹಾರಹೇತುನಾ|

12250009c ಗಚ್ಚ ಸಂಹರ ಸರ್ವಾಸ್ತ್ವಂ ಪ್ರಜಾ ಮಾ ಚ ವಿಚಾರಯ||

ಪಿತಾಮಹನು ಹೇಳಿದನು: “ಮೃತ್ಯುವೇ! ಪ್ರಜೆಗಳ ಸಂಹಾರಕ್ಕಾಗಿಯೇ ನಾನು ನಿನ್ನನ್ನು ಸಂಕಲ್ಪಿಸಿದ್ದೇನೆ. ಹೋಗು. ಸರ್ವಪ್ರಜೆಗಳನ್ನೂ ಸಂಹರಿಸು. ವಿಚಾರಿಸಬೇಡ.

12250010a ಏತದೇವಮವಶ್ಯಂ ಹಿ ಭವಿತಾ ನೈತದನ್ಯಥಾ|

12250010c ಕ್ರಿಯತಾಮನವದ್ಯಾಂಗಿ ಯಥೋಕ್ತಂ ಮದ್ವಚೋಽನಘೇ||

ಅನಘೇ! ಇದು ಹೀಗೆಯೇ ಅವಶ್ಯವಾಗಿ ಆಗಬೇಕಾಗಿದೆ. ಇದು ಅನ್ಯಥಾ ಆಗುವುದಿಲ್ಲ. ಅನವದ್ಯಾಂಗಿ! ನಾನು ಹೇಳಿದಂತೆ ನನ್ನ ಮಾತನ್ನು ಪಾಲಿಸು.””

12250011 ನಾರದ ಉವಾಚ|

12250011a ಏವಮುಕ್ತಾ ಮಹಾಬಾಹೋ ಮೃತ್ಯುಃ ಪರಪುರಂಜಯ|

12250011c ನ ವ್ಯಾಜಹಾರ ತಸ್ಥೌ ಚ ಪ್ರಹ್ವಾ ಭಗವದುನ್ಮುಖೀ||

ನಾರದನು ಹೇಳಿದನು: “ಮಹಾಬಾಹೋ! ಪರಪುರಂಜಯ! ಅವನು ಹೀಗೆ ಹೇಳಲು ಮೃತ್ಯುವು ಬ್ರಹ್ಮನ ಕಡೆಗೇ ಮುಖವನ್ನು ತಿರುಗಿಸಿಕೊಂಡು ವಿನೀತಳಾಗಿಯೇ ನಿಂತಿದ್ದಳು.

12250012a ಪುನಃ ಪುನರಥೋಕ್ತಾ ಸಾ ಗತಸತ್ತ್ವೇವ ಭಾಮಿನೀ|

12250012c ತೂಷ್ಣೀಮಾಸೀತ್ತತೋ ದೇವೋ ದೇವಾನಾಮೀಶ್ವರೇಶ್ವರಃ||

12250013a ಪ್ರಸಸಾದ ಕಿಲ ಬ್ರಹ್ಮಾ ಸ್ವಯಮೇವಾತ್ಮನಾತ್ಮವಾನ್|

12250013c ಸ್ಮಯಮಾನಶ್ಚ ಲೋಕೇಶೋ ಲೋಕಾನ್ಸರ್ವಾನವೈಕ್ಷತ||

ಪುನಃ ಪುನಃ ಅವನು ಹೇಳುತ್ತಿದ್ದರೂ ಭಾಮಿನಿಯು ಸತ್ತ್ವವನ್ನು ಕಳೆದುಕೊಂಡವಳಂತೆ ಸುಮ್ಮನೇ ಇದ್ದಳು. ಆಗ ದೇವತೆಗಳ ಈಶ್ವರನಿಗೂ ಈಶ್ವರನಾದ ದೇವ ಬ್ರಹ್ಮನು ಸ್ವಯಮ್ ತನ್ನಲ್ಲಿ ತಾನೇ ಪ್ರಸನ್ನನಾದನು. ಲೋಕೇಶನು ಮುಗುಳ್ನಗುತ್ತಾ ಸರ್ವ ಲೋಕಗಳನ್ನೂ ವೀಕ್ಷಿಸಿದನು.

12250014a ನಿವೃತ್ತರೋಷೇ ತಸ್ಮಿಂಸ್ತು ಭಗವತ್ಯಪರಾಜಿತೇ|

12250014c ಸಾ ಕನ್ಯಾಪಜಗಾಮಾಸ್ಯ ಸಮೀಪಾದಿತಿ ನಃ ಶ್ರುತಮ್||

ಭಗವಂತನು ಹಾಗೆ ರೋಷವನ್ನು ಕಳೆದುಕೊಳ್ಳಲು ಆ ಕನ್ಯೆಯು ಅವನ ಸಮೀಪದಿಂದ ಹೊರಟುಹೋದಳೆಂದು ಕೇಳಿದ್ದೇವೆ.

12250015a ಅಪಸೃತ್ಯಾಪ್ರತಿಶ್ರುತ್ಯ ಪ್ರಜಾಸಂಹರಣಂ ತದಾ|

12250015c ತ್ವರಮಾಣೇವ ರಾಜೇಂದ್ರ ಮೃತ್ಯುರ್ಧೇನುಕಮಭ್ಯಯಾತ್||

ರಾಜೇಂದ್ರ! ಆಗ ಅವಳು ಪ್ರಜಾಸಂಹರಣೆಯನ್ನು ಮಾಡುತ್ತೇನೆ ಎಂಬ ಮಾತನ್ನು ಆಡಿರಲಿಲ್ಲ. ಬ್ರಹ್ಮನ ಸಮೀಪದಿಂದ ಹೊರಟ ಮೃತ್ಯುವು ತ್ವರೆಮಾಡಿ ಧೇನುಕಾಶ್ರಮಕ್ಕೆ ಹೋದಳು.

12250016a ಸಾ ತತ್ರ ಪರಮಂ ದೇವೀ ತಪೋಽಚರತ ದುಶ್ಚರಮ್|

12250016c ಸಮಾ ಹ್ಯೇಕಪದೇ ತಸ್ಥೌ ದಶ ಪದ್ಮಾನಿ ಪಂಚ ಚ||

ಅಲ್ಲಿ ಆ ದೇವಿಯು ಒಂದೇ ಕಾಲಿನ ಮೇಲೆ ನಿಂತು ಹದಿನೈದು ಪದ್ಮ ವರ್ಷಗಳ ಪರ್ಯಂತ ದುಶ್ಚರವಾದ ಪರಮ ತಪಸ್ಸನ್ನು ತಪಿಸಿದಳು.

12250017a ತಾಂ ತಥಾ ಕುರ್ವತೀಂ ತತ್ರ ತಪಃ ಪರಮದುಶ್ಚರಮ್|

12250017c ಪುನರೇವ ಮಹಾತೇಜಾ ಬ್ರಹ್ಮಾ ವಚನಮಬ್ರವೀತ್||

ಪರಮ ದುಶ್ಚರ ತಪಸ್ಸನ್ನು ಮಾಡುತ್ತಿದ್ದ ಅವಳ ಬಳಿ ಪುನಃ ಮಹಾತೇಜಸ್ವೀ ಬ್ರಹ್ಮನು ಬಂದು ಹೇಳಿದನು:

12250018a ಕುರುಷ್ವ ಮೇ ವಚೋ ಮೃತ್ಯೋ ತದನಾದೃತ್ಯ ಸತ್ವರಾ|

12250018c ತಥೈವೈಕಪದೇ ತಾತ ಪುನರನ್ಯಾನಿ ಸಪ್ತ ಸಾ||

12250019a ತಸ್ಥೌ ಪದ್ಮಾನಿ ಷಟ್ ಚೈವ ಪಂಚ ದ್ವೇ ಚೈವ ಮಾನದ|

12250019c ಭೂಯಃ ಪದ್ಮಾಯುತಂ ತಾತ ಮೃಗೈಃ ಸಹ ಚಚಾರ ಸಾ||

“ಮೃತ್ಯುವೇ! ನನ್ನ ಮಾತಿನಂತೆ ಮಾಡು.” ಅಯ್ಯಾ! ಅವನ ಆ ಮಾತನ್ನು ಅನಾದರಿಸಿ ಅವಳು ಪುನಃ ಒಂದೇ ಕಾಲಿನ ಮೇಲೆ ನಿಂತು ಇನ್ನೂ ಏಳು, ಆರು ಮತ್ತು ಹತ್ತು ಪದ್ಮವರ್ಷಗಳ ಪರ್ಯಂತ ತಪಸ್ಸನ್ನಾಚರಿಸಿದಳು. ಮಾನದ! ಅವಳು ಒಂದು ಸಾವಿರ ಪದ್ಮ ವರ್ಷಗಳ ಪರ್ಯಂತ ಮೃಗಗಳೊಂದಿಗೆ ಸಂಚರಿಸುತ್ತಿದ್ದಳು ಕೂಡ.

12250020a ಪುನರ್ಗತ್ವಾ ತತೋ ರಾಜನ್ಮೌನಮಾತಿಷ್ಠದುತ್ತಮಮ್|

12250020c ಅಪ್ಸು ವರ್ಷಸಹಸ್ರಾಣಿ ಸಪ್ತ ಚೈಕಂ ಚ ಪಾರ್ಥಿವ||

ರಾಜನ್! ಪಾರ್ಥಿವ! ಪುನಃ ಅವಳು ಉತ್ತಮ ಮೌನವ್ರತವನ್ನಾಚರಿಸಿದಳು. ನಂತರ ಎಂಟು ಸಹಸ್ರ ವರ್ಷಗಳು ನೀರಿನಲ್ಲಿ ವಾಸಿಸಿದಳು.

12250021a ತತೋ ಜಗಾಮ ಸಾ ಕನ್ಯಾ ಕೌಶಿಕೀಂ ಭರತರ್ಷಭ|

12250021c ತತ್ರ ವಾಯುಜಲಾಹಾರಾ ಚಚಾರ ನಿಯಮಂ ಪುನಃ||

ಭರತರ್ಷಭ! ನಂತರ ಆ ಕನ್ಯೆಯು ಕೌಶಿಕೀ ತೀರಕ್ಕೆ ಹೋದಳು. ಅಲ್ಲಿ ಪುನಃ ಅವಳು ವಾಯುಜಲಾಹಾರಗಳ ನಿಯಮವನ್ನು ಪಾಲಿಸಿದಳು.

12250022a ತತೋ ಯಯೌ ಮಹಾಭಾಗಾ ಗಂಗಾಂ ಮೇರುಂ ಚ ಕೇವಲಮ್|

12250022c ತಸ್ಥೌ ದಾರ್ವಿವ ನಿಶ್ಚೇಷ್ಟಾ ಭೂತಾನಾಂ ಹಿತಕಾಮ್ಯಯಾ||

ಅನಂತರ ಆ ಮಹಾಭಾಗೆಯು ಗಂಗಾತೀರಕ್ಕೂ ಅದ್ವಿತೀಯ ಮೇರು ಪರ್ವತಕ್ಕೂ ಹೋದಳು. ಅಲ್ಲಿ ಪ್ರಜೆಗಳ ಹಿತವನ್ನು ಬಯಸಿ ಮರದ ಕೊರಡಿನಂತೆ ನಿಶ್ಚೇಷ್ಟಳಾಗಿ ನಿಂತುಬಿಟ್ಟಳು.

12250023a ತತೋ ಹಿಮವತೋ ಮೂರ್ಧ್ನಿ ಯತ್ರ ದೇವಾಃ ಸಮೀಜಿರೇ|

12250023c ತತ್ರಾಂಗುಷ್ಠೇನ ರಾಜೇಂದ್ರ ನಿಖರ್ವಮಪರಂ ತತಃ|

12250023E ತಸ್ಥೌ ಪಿತಾಮಹಂ ಚೈವ ತೋಷಯಾಮಾಸ ಯತ್ನತಃ||

ರಾಜೇಂದ್ರ! ಅನಂತರ ಅವಳು ದೇವತೆಗಳು ಯಜ್ಞಗೈದಿದ್ದ ಹಿಮವತ್ಪರ್ವತದ ಶಿಖರಕ್ಕೆ ಹೋಗಿ ಅಲ್ಲಿ ಕಾಲಿನ ಹೆಬ್ಬೆರಳೊಂದನ್ನೇ ಆಸರೆಯನ್ನಾಗಿಟ್ಟುಕೊಂಡು ನಿಖರ್ವ[1]ವರ್ಷಗಳ ಪರ್ಯಂತವಾಗಿ ತಪಸ್ಸುಮಾಡಿ ಪ್ರಯತ್ನಪಟ್ಟು ಪಿತಾಮಹನನ್ನು ತೃಪ್ತಿಗೊಳಿಸಿದಳು.

12250024a ತತಸ್ತಾಮಬ್ರವೀತ್ತತ್ರ ಲೋಕಾನಾಂ ಪ್ರಭವಾಪ್ಯಯಃ|

12250024c ಕಿಮಿದಂ ವರ್ತತೇ ಪುತ್ರಿ ಕ್ರಿಯತಾಂ ತದ್ವಚೋ ಮಮ||

ಲೋಕಗಳ ಉತ್ಪತ್ತಿ-ಲಯಗಳಿಗೆ ಕಾರಣನಾದ ಬ್ರಹ್ಮನು ಅವಳ ಬಳಿಸಾರಿ ಹೇಳಿದನು: “ಪುತ್ರಿ! ನೀನೇನು ಮಾಡುತ್ತಿರುವೆ? ನಾನು ಹೇಳಿದಂತೆ ಮಾಡು.”

12250025a ತತೋಽಬ್ರವೀತ್ಪುನರ್ಮೃತ್ಯುರ್ಭಗವಂತಂ ಪಿತಾಮಹಮ್|

12250025c ನ ಹರೇಯಂ ಪ್ರಜಾ ದೇವ ಪುನಸ್ತ್ವಾಹಂ ಪ್ರಸಾದಯೇ||

ಆಗ ಪುನಃ ಮೃತ್ಯುವು ಭಗವಂತ ಪಿತಾಮಹನಿಗೆ ಹೇಳಿದಳು: “ದೇವ! ನಾನು ಪ್ರಜೆಗಳನ್ನು ಸಂಹರಿಸಲಾರೆ. ಪುನಃ ನಿನ್ನನ್ನು ಪ್ರಸನ್ನಗೊಳಿಸುತ್ತೇನೆ.”

12250026a ತಾಮಧರ್ಮಭಯತ್ರಸ್ತಾಂ ಪುನರೇವ ಚ ಯಾಚತೀಮ್|

12250026c ತದಾಬ್ರವೀದ್ದೇವದೇವೋ ನಿಗೃಹ್ಯೇದಂ ವಚಸ್ತತಃ||

ಅಧರ್ಮದ ಭಯದಿಂದ ನಡುಗುತ್ತಾ ಪುನಃ ಪುನಃ ಬೇಡಿಕೊಳ್ಳುತ್ತಿದ್ದ ಅವಳನ್ನು ತಡೆಯುತ್ತಾ ದೇವದೇವನು ಈ ಮಾತನ್ನಾಡಿದನು.

12250027a ಅಧರ್ಮೋ ನಾಸ್ತಿ ತೇ ಮೃತ್ಯೋ ಸಂಯಚ್ಚೇಮಾಃ ಪ್ರಜಾಃ ಶುಭೇ|

12250027c ಮಯಾ ಹ್ಯುಕ್ತಂ ಮೃಷಾ ಭದ್ರೇ ಭವಿತಾ ನೇಹ ಕಿಂ ಚನ||

“ಮೃತ್ಯುವೇ! ಶುಭೇ! ಭದ್ರೇ! ಈ ಪ್ರಜೆಗಳನ್ನು ಸಂಹರಿಸು. ಇದರಿಂದ ನೀನು ಅಧರ್ಮಿಯಾಗುವುದಿಲ್ಲ. ನಾನು ಹೇಳಿದ ಯಾವ ಮಾತೂ ಸುಳ್ಳಾಗಲು ಸಾಧ್ಯವಿಲ್ಲ.

12250028a ಧರ್ಮಃ ಸನಾತನಶ್ಚ ತ್ವಾಮಿಹೈವಾನುಪ್ರವೇಕ್ಷ್ಯತೇ|

12250028c ಅಹಂ ಚ ವಿಬುಧಾಶ್ಚೈವ ತ್ವದ್ಧಿತೇ ನಿರತಾಃ ಸದಾ||

ಸನಾತನ ಧರ್ಮವು ಈಗಲೇ ನಿನ್ನನ್ನು ಪ್ರವೇಶಿಸುತ್ತದೆ. ನಾನು ಮತ್ತು ದೇವತೆಗಳು ಸದಾ ನಿನ್ನ ಹಿತದಲ್ಲಿಯೇ ನಿರತರಾಗಿರುತ್ತೇವೆ.

12250029a ಇಮಮನ್ಯಂ ಚ ತೇ ಕಾಮಂ ದದಾಮಿ ಮನಸೇಪ್ಸಿತಮ್|

12250029c ನ ತ್ವಾ ದೋಷೇಣ ಯಾಸ್ಯಂತಿ ವ್ಯಾಧಿಸಂಪೀಡಿತಾಃ ಪ್ರಜಾಃ||

ನಿನ್ನ ಮನಸ್ಸು ಬಯಸಿರುವ ಈ ಅನ್ಯ ವರವನ್ನು ನೀಡುತ್ತೇನೆ. ವ್ಯಾಧಿಸಂಪೀಡಿತ ಪ್ರಜೆಗಳು ನಿನ್ನನ್ನು ದೂಷಿಸುವುದಿಲ್ಲ.

12250030a ಪುರುಷೇಷು ಚ ರೂಪೇಣ ಪುರುಷಸ್ತ್ವಂ ಭವಿಷ್ಯಸಿ|

12250030c ಸ್ತ್ರೀಷು ಸ್ತ್ರೀರೂಪಿಣೀ ಚೈವ ತೃತೀಯೇಷು ನಪುಂಸಕಮ್||

ಪುರುಷರಿಗೆ ರೂಪದಲ್ಲಿ ನೀನು ಪುರುಷನಾಗುವೆ. ಸ್ತ್ರೀಯರಿಗೆ ನೀನು ಸ್ತ್ರೀರೂಪಿಣಿಯಾಗಿ ಕಾಣಿಸಿಕೊಳ್ಳುವೆ. ಮತ್ತು ನಪುಂಸಕರಿಗೆ ನೀನು ನಪುಂಸಕಳಾಗಿಯೇ ಕಾಣಿಸಿಕೊಳ್ಳುತ್ತೀಯೆ.”

12250031a ಸೈವಮುಕ್ತಾ ಮಹಾರಾಜ ಕೃತಾಂಜಲಿರುವಾಚ ಹ|

12250031c ಪುನರೇವ ಮಹಾತ್ಮಾನಂ ನೇತಿ ದೇವೇಶಮವ್ಯಯಮ್||

ಮಹಾರಾಜ! ಅವನು ಹೀಗೆ ಹೇಳಲು ಅವಳು ಅಂಜಲೀಬದ್ಧಳಾಗಿ ಪುನಃ ಮಹಾತ್ಮ ದೇವೇಶ ಅವ್ಯಯನಿಗೆ “ಇಲ್ಲ” ಎಂದೇ ಹೇಳಿದಳು.

12250032a ತಾಮಬ್ರವೀತ್ತದಾ ದೇವೋ ಮೃತ್ಯೋ ಸಂಹರ ಮಾನವಾನ್|

12250032c ಅಧರ್ಮಸ್ತೇ ನ ಭವಿತಾ ತಥಾ ಧ್ಯಾಸ್ಯಾಮ್ಯಹಂ ಶುಭೇ||

ಆಗ ದೇವನು ಅವಳಿಗೆ ಹೇಳಿದನು: “ಮೃತ್ಯುವೇ! ಮಾನವರನ್ನು ಸಂಹರಿಸು. ಶುಭೇ! ನಿನ್ನ ಕುರಿತು ನಾನು ಶುಭವನ್ನೇ ಚಿಂತಿಸುತ್ತಿರುವುದರಿಂದ ನಿನ್ನಿಂದ ಅಧರ್ಮವಾಗುವುದಿಲ್ಲ.

12250033a ಯಾನಶ್ರುಬಿಂದೂನ್ಪತಿತಾನಪಶ್ಯಂ

ಯೇ ಪಾಣಿಭ್ಯಾಂ ಧಾರಿತಾಸ್ತೇ ಪುರಸ್ತಾತ್|

12250033c ತೇ ವ್ಯಾಧಯೋ ಮಾನವಾನ್ ಘೋರರೂಪಾಃ

ಪ್ರಾಪ್ತೇ ಕಾಲೇ ಪೀಡಯಿಷ್ಯಂತಿ ಮೃತ್ಯೋ||

ಮೃತ್ಯುವೇ! ನಿನ್ನ ಯಾವ ಅಶ್ರುಬಿಂದುಗಳನ್ನು ನೋಡಿ ಅವು ಬೀಳುವ ಮೊದಲೇ ನಾನು ನನ್ನ ಕೈಗಳಿಂದ ಹಿಡಿದಿದ್ದೆನೋ ಅವೇ ಘೋರರೂಪೀ ವ್ಯಾಧಿಗಳಾಗಿ ಮಾನವರನ್ನು ಕಾಲಪ್ರಾಪ್ತವಾದಂತೆ ಪೀಡಿಸುತ್ತವೆ.

12250034a ಸರ್ವೇಷಾಂ ತ್ವಂ ಪ್ರಾಣಿನಾಮಂತಕಾಲೇ

ಕಾಮಕ್ರೋಧೌ ಸಹಿತೌ ಯೋಜಯೇಥಾಃ|

12250034c ಏವಂ ಧರ್ಮಸ್ತ್ವಾಮುಪೈಷ್ಯತ್ಯಮೇಯೋ

ನ ಚಾಧರ್ಮಂ ಲಪ್ಸ್ಯಸೇ ತುಲ್ಯವೃತ್ತಿಃ||

ಎಲ್ಲ ಪ್ರಾಣಿಗಳ ಅಂತ್ಯಕಾಲದಲ್ಲಿ ನೀನು ಕಾಮಕ್ರೋಧಗಳಿಂದ ಅವರನ್ನು ಸಂಯೋಜಿಸಬೇಕು. ಹೀಗೆ ಧರ್ಮವು ನಿನ್ನ ಸಹಾಯಕ್ಕೆ ಬರುತ್ತದೆ. ಸರ್ವತ್ರ ಸಮಭಾವದಿಂದ ವರ್ತಿಸುವ ನಿನಗೆ ಅಧರ್ಮವು ತಗಲುವುದೇ ಇಲ್ಲ.

12250035a ಏವಂ ಧರ್ಮಂ ಪಾಲಯಿಷ್ಯಸ್ಯಥೋಕ್ತಂ

ನ ಚಾತ್ಮಾನಂ ಮಜ್ಜಯಿಷ್ಯಸ್ಯಧರ್ಮೇ|

12250035c ತಸ್ಮಾತ್ಕಾಮಂ ರೋಚಯಾಭ್ಯಾಗತಂ ತ್ವಂ

ಸಂಯೋಜ್ಯಾಥೋ ಸಂಹರಸ್ವೇಹ ಜಂತೂನ್||

ಹೇಳಿದಂತೆ ಹೀಗೆ ಧರ್ಮವನ್ನು ಪಾಲಿಸಿದ್ದೇ ಆದರೆ ನೀನು ಅಧರ್ಮದಲ್ಲಿ ಮುಳುಗುವುದಿಲ್ಲ. ಆದುದರಿಂದ ನಿನ್ನ ಬಳಿಬಂದಿರುವ ಈ ಅಧಿಕಾರವನ್ನು ಸಂತೋಷದಿಂದ ಸ್ವೀಕರಿಸು. ಕಾಮವನ್ನು ಜಂತುಗಳಲ್ಲಿ ಸಂಯೋಜಿಸಿ ಸಂಹರಿಸು.”

12250036a ಸಾ ವೈ ತದಾ ಮೃತ್ಯುಸಂಜ್ಞಾಪದೇಶಾಚ್

ಚಾಪಾದ್ಭೀತಾ ಬಾಢಮಿತ್ಯಬ್ರವೀತ್ತಮ್|

12250036c ಅಥೋ ಪ್ರಾಣಾನ್ ಪ್ರಾಣಿನಾಮಂತಕಾಲೇ

ಕಾಮಕ್ರೋಧೌ ಪ್ರಾಪ್ಯ ನಿರ್ಮೋಹ್ಯ ಹಂತಿ||

ಆಗ ಮೃತ್ಯುವೆನ್ನುವಳು ಶಾಪದ ಭಯದಿಂದ “ಹಾಗೆಯೇ ಆಗಲಿ” ಎಂದಳು. ಅಂದಿನಿಂದ ಅವಳು ಪ್ರಾಣಿಗಳ ಅಂತ್ಯಕಾಲದಲ್ಲಿ ಕಾಮಕ್ರೋಧಗಳನ್ನು ಒದಗಿಸಿ ಮೋಹಗೊಳಿಸಿ ಪ್ರಾಣಗಳನ್ನು ಅಪಹರಿಸುತ್ತಾಳೆ.

12250037a ಮೃತ್ಯೋರ್ಯೇ ತೇ ವ್ಯಾಧಯಶ್ಚಾಶ್ರುಪಾತಾ

ಮನುಷ್ಯಾಣಾಂ ರುಜ್ಯತೇ ಯೈಃ ಶರೀರಮ್|

12250037c ಸರ್ವೇಷಾಂ ವೈ ಪ್ರಾಣಿನಾಂ ಪ್ರಾಣನಾಂತೇ

ತಸ್ಮಾಚ್ಚೋಕಂ ಮಾ ಕೃಥಾ ಬುಧ್ಯ ಬುದ್ಧ್ಯಾ||

ಮೃತ್ಯುವು ಸುರಿಸಿದ ಕಣ್ಣೀರಿನ ಬಿಂದುಗಳೇ ವ್ಯಾಧಿಗಳಾಗಿ ಮನುಷ್ಯರ ಶರೀರಗಳನ್ನು ಪೀಡಿಸುತ್ತವೆ. ಪ್ರಾಣದ ಅಂತ್ಯದಲ್ಲಿ ಇದು ಸರ್ವ ಪ್ರಾಣಿಗಳ ಬಳಿಯೂ ಹೋಗುತ್ತದೆ. ಆದುದರಿಂದ ಇದನ್ನು ತಿಳಿದು ಬುದ್ಧಿಯಲ್ಲಿ ಶೋಕಪಡಬೇಡ.

12250038a ಸರ್ವೇ ದೇವಾಃ ಪ್ರಾಣಿನಾಂ ಪ್ರಾಣನಾಂತೇ

ಗತ್ವಾ ವೃತ್ತಾಃ ಸಂನಿವೃತ್ತಾಸ್ತಥೈವ|

12250038c ಏವಂ ಸರ್ವೇ ಮಾನವಾಃ ಪ್ರಾಣನಾಂತೇ

ಗತ್ವಾವೃತ್ತಾ ದೇವವದ್ರಾಜಸಿಂಹ||

ರಾಜಸಿಂಹ! ಪ್ರಾಣಿಗಳ ಇಂದ್ರಿಯಗಳೆಲ್ಲವೂ ಹೇಗೆ ಜಾಗ್ರದಾವಸ್ಥೆಯ ಅಂತ್ಯದಲ್ಲಿ ನಿಷ್ಕ್ರಿಯರಾಗಿ ಮನಸ್ಸಿನಲ್ಲಿ ಸೇರುವವೋ ಮತ್ತು ಜಾಗ್ರದಾವಸ್ಥೆಯು ಬಂದೊಡನೆಯೇ ಪುನಃ ಹಿಂದಿರುಗುವವೋ ಹಾಗೆ ಎಲ್ಲ ಮನುಷ್ಯರೂ ಜೀವನಾಂತ್ಯದಲ್ಲಿ ಪರಲೋಕಕ್ಕೆ ಹೋಗಿ ಕರ್ಮಗಳಿಗೆ ಅನುಸಾರವಾಗಿ ದೇವಲೋಕದಲ್ಲಿ ದೇವತೆಗಳಂತೆಯೋ ಅಥವಾ ನರಕದಲ್ಲಿ ಪಾಪಿಷ್ಠರಂತೆಯೋ ಕರ್ಮಫಲಗಳು ಕಳೆಯುವವರೆಗೆ ವಾಸಿಸುತ್ತಿದ್ದು ಶುಭಾಶುಭಕರ್ಮಗಳ ಫಲವು ಮುಗಿದ ನಂತರ ಮರಳಿ ಭೂಮಿಗೆ ಬಂದು ಮನುಷ್ಯನೇ ಮೊದಲಾದ ಯೋನಿಗಳಲ್ಲಿ ಜನ್ಮತಾಳುತ್ತಾರೆ.

12250039a ವಾಯುರ್ಭೀಮೋ ಭೀಮನಾದೋ ಮಹೌಜಾಃ

ಸರ್ವೇಷಾಂ ಚ ಪ್ರಾಣಿನಾಂ ಪ್ರಾಣಭೂತಃ|

12250039c ನಾನಾವೃತ್ತಿರ್ದೇಹಿನಾಂ ದೇಹಭೇದೇ

ತಸ್ಮಾದ್ವಾಯುರ್ದೇವದೇವೋ ವಿಶಿಷ್ಟಃ||

ಭಯಂಕರನಾಗಿರುವ, ಭೀಮನಾದಯುಕ್ತನಾದ, ಮಹೌಜಸ ವಾಯುವು ಸರ್ವಪ್ರಾಣಿಗಳ ಪ್ರಾಣಭೂತನು. ದೇಹಿಗಳ ದೇಹಭೇದವಾದ ನಂತರ ಅವನು ನಾನಾ ವೃತ್ತಿಗಳನ್ನು ಪಡೆದುಕೊಳ್ಳುತ್ತಾನೆ. ಆದುದರಿಂದ ದೇವದೇವ ವಾಯುವೇ ವಿಶಿಷ್ಟನು.

12250040a ಸರ್ವೇ ದೇವಾ ಮರ್ತ್ಯಸಂಜ್ಞಾವಿಶಿಷ್ಟಾಃ

ಸರ್ವೇ ಮರ್ತ್ಯಾ ದೇವಸಂಜ್ಞಾವಿಶಿಷ್ಟಾಃ|

12250040c ತಸ್ಮಾತ್ಪುತ್ರಂ ಮಾ ಶುಚೋ ರಾಜಸಿಂಹ

ಪುತ್ರಃ ಸ್ವರ್ಗಂ ಪ್ರಾಪ್ಯ ತೇ ಮೋದತೇ ಹ||

ರಾಜಸಿಂಹ! ಎಲ್ಲ ದೇವತೆಗಳೂ ಪುಣ್ಯಕ್ಷಯದ ನಂತರ ಈ ಲೋಕದಲ್ಲಿ ಮರ್ತ್ಯರೆಂದೆನಿಸಿಕೊಂಡು ಜನಿಸುತ್ತಾರೆ. ಎಲ್ಲ ಮರ್ತ್ಯರೂ ಮರಣಾನಂತರ ತಮ್ಮ ಸತ್ಕಾರ್ಯಗಳ ಫಲವಾಗಿ ಸ್ವರ್ಗಲೋಕಕ್ಕೆ ಹೋಗಿ ದೇವತೆಗಳೆಂಬ ಸಂಜ್ಞೆಗಳಿಂದ ಕೂಡಿದವರಾಗುತ್ತಾರೆ. ಆದುದರಿಂದ ನಿನ್ನ ಮಗನ ಕುರಿತು ಶೋಕಿಸಬೇಡ. ನಿನ್ನ ಮಗನು ಸ್ವರ್ಗವನ್ನು ಪಡೆದು ಮುದದಿಂದಿದ್ದಾನೆ.”

12250041a ಏವಂ ಮೃತ್ಯುರ್ದೇವಸೃಷ್ಟಾ ಪ್ರಜಾನಾಂ

ಪ್ರಾಪ್ತೇ ಕಾಲೇ ಸಂಹರಂತೀ ಯಥಾವತ್|

12250041c ತಸ್ಯಾಶ್ಚೈವ ವ್ಯಾಧಯಸ್ತೇಽಶ್ರುಪಾತಾಃ

ಪ್ರಾಪ್ತೇ ಕಾಲೇ ಸಂಹರಂತೀಹ ಜಂತೂನ್||

ಹೀಗೆ ಬ್ರಹ್ಮದೇವನೇ ಕಾಲಪ್ರಾಪ್ತಿಯಾದಾಗ ಪ್ರಜೆಗಳ ಸಂಹಾರಕ್ಕಾಗಿ ಯಥಾವತ್ತಾಗಿ ಮೃತ್ಯುವನ್ನು ಸೃಷ್ಟಿಸಿದನು. ಮೃತ್ಯುವಿನ ಅಶ್ರುಬಿಂದುಗಳೇ ವ್ಯಾಧಿಗಳು. ಕಾಲಪ್ರಾಪ್ತಿಯಾದಂತೆ ಅವು ಪ್ರಾಣಿಗಳನ್ನು ಸಂಹರಿಸುತ್ತವೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮೃತ್ಯುಪ್ರಜಾಪತಿಸಂವಾದೇ ಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮೃತ್ಯುಪ್ರಜಾಪತಿಸಂವಾದ ಎನ್ನುವ ಇನ್ನೂರಾಐವತ್ತನೇ ಅಧ್ಯಾಯವು.

[1] ಹತ್ತುಸಾವಿರ ಕೋಟಿ (ಭಾರತ ದರ್ಶನ).

Comments are closed.