Shanti Parva: Chapter 251

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೧

ಧರ್ಮಾಧರ್ಮಗಳ ಸ್ವರೂಪ ನಿರ್ಣಯ (1-26).

12251001 ಯುಧಿಷ್ಠಿರ ಉವಾಚ|

12251001a ಇಮೇ ವೈ ಮಾನವಾಃ ಸರ್ವೇ ಧರ್ಮಂ ಪ್ರತಿ ವಿಶಂಕಿತಾಃ|

12251001c ಕೋಽಯಂ ಧರ್ಮಃ ಕುತೋ ಧರ್ಮಸ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಾನವರೆಲ್ಲರೂ ಸಾಧಾರಣವಾಗಿ ಧರ್ಮದ ಕುರಿತು ಶಂಕಿಸುತ್ತಿರುತ್ತಾರೆ. ಈ ಧರ್ಮವು ಯಾವುದು ಮತ್ತು ಧರ್ಮವು ಎಲ್ಲಿಂದ ಬಂದಿತು ಎನ್ನುವುದನ್ನು ಹೇಳು.

12251002a ಧರ್ಮೋ ನ್ವಯಮಿಹಾರ್ಥಃ ಕಿಮಮುತ್ರಾರ್ಥೋಽಪಿ ವಾ ಭವೇತ್|

12251002c ಉಭಯಾರ್ಥೋಽಪಿ ವಾ ಧರ್ಮಸ್ತನ್ಮೇ ಬ್ರೂಹಿ ಪಿತಾಮಹ||

ಪಿತಾಮಹ! ಐಹಿಕ ಪ್ರಯೋಜನವನ್ನು ನೀಡುವುದು ಧರ್ಮವೇ ಅಥವಾ ಪಾರಲೌಕಿಕ ಪ್ರಯೋಜನವನ್ನು ನೀಡುವುದು ಧರ್ಮವೇ ಅಥವಾ ಎರಡೂ ಕಡೆಗಳಲ್ಲಿ ಪ್ರಯೋಜನವನ್ನು ನೀಡುವುದು ಧರ್ಮವೇ? ಇದರ ಕುರಿತು ನನಗೆ ಹೇಳು.”

12251003 ಭೀಷ್ಮ ಉವಾಚ|

12251003a ಸದಾಚಾರಃ ಸ್ಮೃತಿರ್ವೇದಾಸ್ತ್ರಿವಿಧಂ ಧರ್ಮಲಕ್ಷಣಮ್|

12251003c ಚತುರ್ಥಮರ್ಥಮಿತ್ಯಾಹುಃ ಕವಯೋ ಧರ್ಮಲಕ್ಷಣಮ್||

ಭೀಷ್ಮನು ಹೇಳಿದನು”: “ಸದಾಚಾರ, ಸ್ಮೃತಿ ಮತ್ತು ವೇದಗಳು – ಇವು ಮೂರು ಧರ್ಮದ ಲಕ್ಷಣಗಳು. ವಿದ್ವಾಂಸರು ಅರ್ಥವೂ ಧರ್ಮದ ನಾಲ್ಕನೆಯ ಲಕ್ಷಣವೆಂದು ಹೇಳುತ್ತಾರೆ.

12251004a ಅಪಿ ಹ್ಯುಕ್ತಾನಿ ಕರ್ಮಾಣಿ ವ್ಯವಸ್ಯಂತ್ಯುತ್ತರಾವರೇ|

12251004c ಲೋಕಯಾತ್ರಾರ್ಥಮೇವೇಹ ಧರ್ಮಸ್ಯ ನಿಯಮಃ ಕೃತಃ|

12251004e ಉಭಯತ್ರ ಸುಖೋದರ್ಕ ಇಹ ಚೈವ ಪರತ್ರ ಚ||

ಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳಲ್ಲಿಯೂ ಪ್ರಧಾನವಾದವುಗಳು ಮತ್ತು ಅಷ್ಟು ಪ್ರಧಾನವಲ್ಲದವುಗಳು ಇವೆ. ಲೋಕಯಾತ್ರೆಗೆಂದೇ ಧರ್ಮದ ನಿಯಮಗಳನ್ನು ಮಾಡಲಾಗಿದೆ. ಧರ್ಮವನ್ನು ಪಾಲಿಸುವವನಿಗೆ ಇಹ ಮತ್ತು ಪರ ಎರಡರಲ್ಲಿಯೂ ಸುಖೋದಯವಾಗುತ್ತದೆ.

12251005a ಅಲಬ್ಧ್ವಾ ನಿಪುಣಂ ಧರ್ಮಂ ಪಾಪಃ ಪಾಪೇ ಪ್ರಸಜ್ಜತಿ|

12251005c ನ ಚ ಪಾಪಕೃತಃ ಪಾಪಾನ್ಮುಚ್ಯಂತೇ ಕೇ ಚಿದಾಪದಿ||

ಧರ್ಮದ ನೈಪುಣ್ಯತೆಯನ್ನು ಹೊಂದಿರದವನು ಪಾಪದಿಂದ ಪಾಪಗಳನ್ನು ಹುಟ್ಟಿಸುತ್ತಿರುತ್ತಾನೆ. ಪಾಪಿಯು ಆಪತ್ತಿನಲ್ಲಿಯೂ ಪಾಪಕರ್ಮವನ್ನು ಮಾಡುವುದನ್ನು ಬಿಡುವುದಿಲ್ಲ.

12251006a ಅಪಾಪವಾದೀ ಭವತಿ ಯದಾ ಭವತಿ ಧರ್ಮವಿತ್|

12251006c ಧರ್ಮಸ್ಯ ನಿಷ್ಠಾ ಸ್ವಾಚಾರಸ್ತಮೇವಾಶ್ರಿತ್ಯ ಭೋತ್ಸ್ಯಸೇ||

ಧರ್ಮವಿದುವಾದಾಗ ಅಪಾಪವಾದಿಯಾಗುತ್ತಾನೆ. ಧರ್ಮದ ನಿಷ್ಠೆಯು ಅವನ ಆಚಾರವನ್ನೇ ಆಶ್ರಯಿಸಿರುತ್ತದೆ; ಅವನ ಮಾತನ್ನಲ್ಲ.

12251007a ಯದಾಧರ್ಮಸಮಾವಿಷ್ಟೋ ಧನಂ ಗೃಹ್ಣಾತಿ ತಸ್ಕರಃ|

12251007c ರಮತೇ ನಿರ್ಹರನ್ ಸ್ತೇನಃ ಪರವಿತ್ತಮರಾಜಕೇ||

ಧರ್ಮಸಮಾವಿಷ್ಟನಾಗಿದ್ದರೂ ಕಳ್ಳನು ಇತರರ ಸ್ವತ್ತನ್ನು ಅಪಹರಿಸುತ್ತಾನೆ. ಅರಾಜಕತೆಯಿರುವಲ್ಲಿ ಪರರ ಸ್ವತ್ತನ್ನು ಅಪಹರಿಸಿಯೂ ಕಳ್ಳನು ಸುಖವಾಗಿಯೇ ಇರುತ್ತಾನೆ.

12251008a ಯದಾಸ್ಯ ತದ್ಧರಂತ್ಯನ್ಯೇ ತದಾ ರಾಜಾನಮಿಚ್ಚತಿ|

12251008c ತದಾ ತೇಷಾಂ ಸ್ಪೃಹಯತೇ ಯೇ ವೈ ತುಷ್ಟಾಃ ಸ್ವಕೈರ್ಧನೈಃ||

ಆದರೆ ಕಳ್ಳನ ಧನವನ್ನೇ ಬೇರೆ ಯಾರಾದರೂ ಅಪಹರಿಸಿದರೆ ಆ ಕಳ್ಳನೇ ರಕ್ಷಣೆಗಾಗಿ ರಾಜನನ್ನು ಅಪೇಕ್ಷಿಸುತ್ತಾನೆ. ಆಗ ಅವನು ತನ್ನ ಧನದಿಂದಲೇ ತುಷ್ಟರಾಗಿರುವವರನ್ನು ಬಯಸುತ್ತಾನೆ.

12251009a ಅಭೀತಃ ಶುಚಿರಭ್ಯೇತಿ ರಾಜದ್ವಾರಮಶಂಕಿತಃ|

12251009c ನ ಹಿ ದುಶ್ಚರಿತಂ ಕಿಂ ಚಿದಂತರಾತ್ಮನಿ ಪಶ್ಯತಿ||

ಶುಚಿಯಾಗಿದ್ದವನು ಭಯವಿಲ್ಲದೇ ಶಂಕೆಗಳಿಲ್ಲದೇ ರಾಜದ್ವಾರಕ್ಕೆ ಹೋಗುತ್ತಾನೆ. ಏಕೆಂದರೆ ಅವನು ತನ್ನ ಅಂತರಾತ್ಮನಲ್ಲಿ ಕಿಂಚಿತ್ತಾದರೂ ದೋಷವನ್ನು ಕಾಣುವುದಿಲ್ಲ.

12251010a ಸತ್ಯಸ್ಯ ವಚನಂ ಸಾಧು ನ ಸತ್ಯಾದ್ವಿದ್ಯತೇ ಪರಮ್|

12251010c ಸತ್ಯೇನ ವಿಧೃತಂ ಸರ್ವಂ ಸರ್ವಂ ಸತ್ಯೇ ಪ್ರತಿಷ್ಠಿತಮ್||

ಸತ್ಯವಚನವೇ ಸಾಧುವು. ಸತ್ಯಕ್ಕಿಂತ ಶ್ರೇಷ್ಠವಾದುದಿಲ್ಲ. ಸತ್ಯವೇ ಸರ್ವವನ್ನೂ ಧರಿಸಿದೆ. ಸರ್ವವೂ ಸತ್ಯದಲ್ಲಿ ಪ್ರತಿಷ್ಠಿತವಾಗಿದೆ.

12251011a ಅಪಿ ಪಾಪಕೃತೋ ರೌದ್ರಾಃ ಸತ್ಯಂ ಕೃತ್ವಾ ಪೃಥಕ್ ಪೃಥಕ್|

12251011c ಅದ್ರೋಹಮವಿಸಂವಾದಂ ಪ್ರವರ್ತಂತೇ ತದಾಶ್ರಯಾಃ|

12251011e ತೇ ಚೇನ್ಮಿಥೋಽಧೃತಿಂ ಕುರ್ಯುರ್ವಿನಶ್ಯೇಯುರಸಂಶಯಮ್||

ರೌದ್ರ ಪಾಪಕೃತರೂ ಕೂಡ ಪ್ರತ್ಯೇಕವಾಗಿ ಸತ್ಯಶಪಥಮಾಡಿ ಸತ್ಯವನ್ನೇ ಆಶ್ರಯಿಸಿ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಸತ್ಯವನ್ನೇ ಆಶ್ರಯಿಸಿ ಅನಂತರ ಸತ್ಯಕ್ಕೆ ದ್ರೋಹವೆಸಗಿ ತಮ್ಮ ದುಷ್ಕಾರ್ಯಗಳಲ್ಲಿ ಪ್ರವೃತ್ತರಾಗುತ್ತಾರೆ. ಹೀಗೆ ಪರಸ್ಪರ ಮಾಡಿಕೊಂಡ ಸತ್ಯಪ್ರತಿಜ್ಞೆಗಳನ್ನು ಮುರಿದುಕೊಂಡು ಪರಸ್ಪರ ಕಾದಾಡಿ ವಿನಾಶಹೊಂದುತ್ತಾರೆ.

12251012a ನ ಹರ್ತವ್ಯಂ ಪರಧನಮಿತಿ ಧರ್ಮಃ ಸನಾತನಃ|

12251012c ಮನ್ಯಂತೇ ಬಲವಂತಸ್ತಂ ದುರ್ಬಲೈಃ ಸಂಪ್ರವರ್ತಿತಮ್|

12251012e ಯದಾ ನಿಯತಿದೌರ್ಬಲ್ಯಮಥೈಷಾಮೇವ ರೋಚತೇ||

ಪರರ ಧನವನ್ನು ಅಪಹರಿಸಬಾರದು ಎನ್ನುವುದು ಸನಾತನ ಧರ್ಮವು. ಬಲವಂತರು ಕೆಲವರು ಧರ್ಮವು ಕೇವಲ ದುರ್ಬಲರು ಅನುಸರಿಸುವುದು ಎಂದು ತಿಳಿದಿರುತ್ತಾರೆ. ಆದರೆ ದೈವಬಲದಿಂದ ಅವರು ದುರ್ಬಲರಾದರೆ ಆಗ ಅವರಿಗೆ ಧರ್ಮವನ್ನು ಪಾಲಿಸುವುದೇ ರುಚಿಸುತ್ತದೆ.

12251013a ನ ಹ್ಯತ್ಯಂತಂ ಬಲಯುತಾ ಭವಂತಿ ಸುಖಿನೋಽಪಿ ವಾ|

12251013c ತಸ್ಮಾದನಾರ್ಜವೇ ಬುದ್ಧಿರ್ನ ಕಾರ್ಯಾ ತೇ ಕಥಂ ಚನ||

ಅತ್ಯಂತ ಬಲಯುತರಾದವರು ಸುಖಿಗಳಾಗಿರುತ್ತಾರೆ ಎನ್ನುವುದಕ್ಕಾಗುವುದಿಲ್ಲ. ಆದುದರಿಂದ ನಿನ್ನ ಬುದ್ಧಿಯು ಯಾವಾಗಲೂ ಕುಟಿಲತೆಯ ಕಡೆ ಹೋಗದಿರಲಿ.

12251014a ಅಸಾಧುಭ್ಯೋಽಸ್ಯ ನ ಭಯಂ ನ ಚೋರೇಭ್ಯೋ ನ ರಾಜತಃ|

12251014c ನ ಕಿಂ ಚಿತ್ಕಸ್ಯ ಚಿತ್ಕುರ್ವನ್ನಿರ್ಭಯಃ ಶುಚಿರಾವಸೇತ್||

ಯಾರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲವೋ ಮತ್ತು ಮಾಡುವುದಿಲ್ಲವೋ ಅವನಿಗೆ ದುಷ್ಟರಿಂದಾಗಲೀ, ಕಳ್ಳರಿಂದಾಗಲೀ, ರಾಜನಿಂದಾಗಲೀ ಭಯವಿರುವುದಿಲ್ಲ. ಶುದ್ಧ ಆಚಾರ-ವಿಚಾರಗಳುಳ್ಳವನು ಯಾವಾಗಲೂ ನಿರ್ಭಯನಾಗಿರುತ್ತಾನೆ.

12251015a ಸರ್ವತಃ ಶಂಕತೇ ಸ್ತೇನೋ ಮೃಗೋ ಗ್ರಾಮಮಿವೇಯಿವಾನ್|

12251015c ಬಹುಧಾಚರಿತಂ ಪಾಪಮನ್ಯತ್ರೈವಾನುಪಶ್ಯತಿ||

ಗ್ರಾಮಕ್ಕೆ ಬಂದ ಜಿಂಕೆಯಂತೆ ಕಳ್ಳನು ಯಾವಾಗಲೂ ಎಲ್ಲರ ವಿಷಯದಲ್ಲಿಯೂ ಸಂಶಯಪಡುತ್ತಾನೆ. ಇತರರ ವಿಷಯದಲ್ಲಿ ತಾನು ಹೇಗೆ ಪಾಪಬುದ್ಧಿಯನ್ನಿಟ್ಟುಕೊಂಡಿರುವನೋ ಅಂತೆಯೇ ಇತರರೂ ತನ್ನ ವಿಷಯದಲ್ಲಿ ಪಾಪಬುದ್ಧಿಯನ್ನಿಟ್ಟುಕೊಂಡಿರುವರೆಂದು ಅವನು ಭಾವಿಸುತ್ತಾನೆ.

12251016a ಮುದಿತಃ ಶುಚಿರಭ್ಯೇತಿ ಸರ್ವತೋ ನಿರ್ಭಯಃ ಸದಾ|

12251016c ನ ಹಿ ದುಶ್ಚರಿತಂ ಕಿಂ ಚಿದಾತ್ಮನೋಽನ್ಯೇಷು ಪಶ್ಯತಿ||

ಆಚಾರ-ವಿಚಾರಗಳಲ್ಲಿ ಶುಚಿಯಾಗಿರುವವನು ಎಲ್ಲರಿಂದಲೂ ಗೌರವನ್ನು ಪಡೆದುಕೊಳ್ಳುತ್ತಾನೆ. ಸದಾ ಪ್ರಸನ್ನಚಿತ್ತನಾಗಿಯೂ ನಿರ್ಭಯನಾಗಿಯೂ ಇರುತ್ತಾನೆ. ತನ್ನಲ್ಲಿರುವ ಕಿಂಚಿತ್ತು ದುಶ್ಚರಿತವೂ ಬೇರೆಯವರಲ್ಲಿದೆಯೆಂದು ಭಾವಿಸುವುದಿಲ್ಲ.

12251017a ದಾತವ್ಯಮಿತ್ಯಯಂ ಧರ್ಮ ಉಕ್ತೋ ಭೂತಹಿತೇ ರತೈಃ|

12251017c ತಂ ಮನ್ಯಂತೇ ಧನಯುತಾಃ ಕೃಪಣೈಃ ಸಂಪ್ರವರ್ತಿತಮ್||

ಭೂತಹಿತರತರು ದಾನಮಾಡಬೇಕು ಮತ್ತು ಅದೇ ಧರ್ಮ ಎಂದು ಹೇಳಿದ್ದಾರೆ. ಆದರೆ ಧನಯುತರು ಈ ಧರ್ಮವನ್ನು ದರಿದ್ರರು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ.

12251018a ಯದಾ ನಿಯತಿಕಾರ್ಪಣ್ಯಮಥೈಷಾಮೇವ ರೋಚತೇ|

12251018c ನ ಹ್ಯತ್ಯಂತಂ ಧನವಂತೋ ಭವಂತಿ ಸುಖಿನೋಽಪಿ ವಾ||

ಆದರೆ ದೈವವಶಾತ್ ಅವರೇ ದರಿದ್ರರಾಗಿಬಿಟ್ಟರೆ ಆಗ ಅವರಿಗೆ ದಾನಧರ್ಮವೇ ಚೆನ್ನಾಗಿ ಕಾಣುತ್ತದೆ. ಮೇಲಾಗಿ ಅತ್ಯಂತ ಧನವಂತರೂ ಸುಖಿಗಳೂ ಆಗಿರುವುದಿಲ್ಲ.

12251019a ಯದನ್ಯೈರ್ವಿಹಿತಂ ನೇಚ್ಚೇದಾತ್ಮನಃ ಕರ್ಮ ಪೂರುಷಃ|

12251019c ನ ತತ್ಪರೇಷು ಕುರ್ವೀತ ಜಾನನ್ನಪ್ರಿಯಮಾತ್ಮನಃ||

ತನಗೆ ಅಪ್ರಿಯವಾದುದೆಂದು ತಿಳಿದು ಯಾವುದನ್ನು ಇತರರು ತನ್ನ ವಿಷಯದಲ್ಲಿ ಮಾಡಬಾರದೆಂದು ಭಾವಿಸುತ್ತೀವೋ ಅದನ್ನು ನಾವೂ ಇನ್ನೊಬ್ಬರ ವಿಷಯದಲ್ಲಿ ಮಾಡಬಾರದು.

12251020a ಯೋಽನ್ಯಸ್ಯ ಸ್ಯಾದುಪಪತಿಃ ಸ ಕಂ ಕಿಂ ವಕ್ತುಮರ್ಹತಿ|

12251020c ಯದನ್ಯಸ್ತಸ್ಯ ತತ್ಕುರ್ಯಾನ್ನ ಮೃಷ್ಯೇದಿತಿ ಮೇ ಮತಿಃ||

ಒಬ್ಬ ವಿವಾಹಿತ ಸ್ತ್ರೀಗೆ ಉಪಪತಿಯಾಗಿ ವ್ಯಭಿಚಾರದಲ್ಲಿ ತೊಡಗಿರುವವನು ಮತ್ತೊಬ್ಬನ ವಿಷಯದಲ್ಲಿ ಏನು ಹೇಳುತ್ತಾನೆ? ತಾನೇ ವ್ಯಭಿಚಾರಿಯಾಗಿದ್ದುಕೊಂಡು ಮತ್ತೊಬ್ಬನನ್ನು ವ್ಯಭಿಚಾರಿ ಎಂದು ನಿಂದಿಸಿದರೆ ಆ ನಿಂದೆಯನ್ನು ಅವನು ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲ ಎಂದು ನನ್ನ ಅಭಿಪ್ರಾಯ.

12251021a ಜೀವಿತುಂ ಯಃ ಸ್ವಯಂ ಚೇಚ್ಚೇತ್ಕಥಂ ಸೋಽನ್ಯಂ ಪ್ರಘಾತಯೇತ್|

12251021c ಯದ್ಯದಾತ್ಮನ ಇಚ್ಚೇತ ತತ್ಪರಸ್ಯಾಪಿ ಚಿಂತಯೇತ್||

ಸ್ವಯಂ ಜೀವಿಸಲು ಇಚ್ಛಿಸುವವನು ಅನ್ಯರನ್ನು ಹೇಗೆತಾನೇ ಕೊಂದಾನು? ತನಗೆ ಯಾವ ಸುಖಸಂತೋಷಗಳನ್ನು ಬಯಸುತ್ತಾನೋ ಅದೇ ಸುಖಸಂತೋಷಗಳು ಇತರರಿಗೂ ಆಗಬೇಕೆಂದು ಯೋಚಿಸಬೇಕು.

12251022a ಅತಿರಿಕ್ತೈಃ ಸಂವಿಭಜೇದ್ಭೋಗೈರನ್ಯಾನಕಿಂಚನಾನ್|

12251022c ಏತಸ್ಮಾತ್ಕಾರಣಾದ್ಧಾತ್ರಾ ಕುಸೀದಂ ಸಂಪ್ರವರ್ತಿತಮ್||

ತನ್ನ ಅವಶ್ಯಕತೆಗಿಂತಲೂ ಹೆಚ್ಚಾಗಿರುವ ಧನ-ಭೋಗಾದಿಗಳನ್ನು ದರಿದ್ರರಿಗೆ ಹಂಚಿಕೊಡಬೇಕು. ದರಿದ್ರರಿಗೆ ಧನವನ್ನು ಹಂಚಿಕೊಡಬೇಕೆಂಬ ಕಾರಣದಿಂದಲೇ ಬ್ರಹ್ಮನು ಬಡ್ಡಿಗಾಗಿ ಹಣಕೊಡುವ ವೃತ್ತಿಯನ್ನು ಸೃಷ್ಟಿಸಿದ್ದಾನೆ.

12251023a ಯಸ್ಮಿಂಸ್ತು ದೇವಾಃ ಸಮಯೇ ಸಂತಿಷ್ಠೇರಂಸ್ತಥಾ ಭವೇತ್|

12251023c ಅಥ ಚೇಲ್ಲಾಭಸಮಯೇ ಸ್ಥಿತಿರ್ಧರ್ಮೇಽಪಿ ಶೋಭನಾ||

ಬಡ್ಡಿಗಾಗಿ ಹಣವನ್ನು ಕೊಟ್ಟು ತೆಗೆದುಕೊಳ್ಳುವ ಸಮಯದಲ್ಲಿ ದೇವತೆಗಳೇ ಸಾಕ್ಷಿಗಳಾಗಿರುತ್ತಾರೆ. ಅದು ಹಾಗೆಯೇ ನಿಬಂಧನೆಗಳಿಗನುಗುಣವಾಗಿ ನಡೆಯಬೇಕು. ಬಡ್ಡಿಯ ಲಾಭವನ್ನು ಯಜ್ಞ-ಯಾಗಾದಿ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಶುಭದಾಯಕವು.

12251024a ಸರ್ವಂ ಪ್ರಿಯಾಭ್ಯುಪಗತಂ ಧರ್ಮಮಾಹುರ್ಮನೀಷಿಣಃ|

12251024c ಪಶ್ಯೈತಂ ಲಕ್ಷಣೋದ್ದೇಶಂ ಧರ್ಮಾಧರ್ಮೇ ಯುಧಿಷ್ಠಿರ||

ಯುಧಿಷ್ಠಿರ! ಎಲ್ಲರೊಡನೆಯೂ ಪ್ರೀತಿಯಿಂದ ವ್ಯವಹರಿಸುವುದು ಧರ್ಮವೆಂದು ಮನೀಷಿಣರು ಹೇಳುತ್ತಾರೆ. ಇದಕ್ಕೆ ವಿಪರೀತವಾದುದು ಅಧರ್ಮ. ಧರ್ಮಾಧರ್ಮಗಳಿಗೆ ಸಂಕ್ಷೇಪರೂಪದಲ್ಲಿರುವ ಈ ಲಕ್ಷಣವನ್ನು ನೀನು ಗಮನಿಸು.

12251025a ಲೋಕಸಂಗ್ರಹಸಂಯುಕ್ತಂ ವಿಧಾತ್ರಾ ವಿಹಿತಂ ಪುರಾ|

12251025c ಸೂಕ್ಷ್ಮಧರ್ಮಾರ್ಥನಿಯತಂ ಸತಾಂ ಚರಿತಮುತ್ತಮಮ್||

ಹಿಂದೆ ವಿಧಾತೃವು ಲೋಕಸಂಗ್ರಹಸಂಯುಕ್ತವಾದ ಸೂಕ್ಷ್ಮಧರ್ಮಾರ್ಥನಿಯತ ಉತ್ತಮ ಸದಾಚಾರಗಳನ್ನು ವಿಹಿಸಿದ್ದನು.

12251026a ಧರ್ಮಲಕ್ಷಣಮಾಖ್ಯಾತಮೇತತ್ತೇ ಕುರುಸತ್ತಮ|

12251026c ತಸ್ಮಾದನಾರ್ಜವೇ ಬುದ್ಧಿರ್ನ ಕಾರ್ಯಾ ತೇ ಕಥಂ ಚನ||

ಕುರುಸತ್ತಮ! ಧರ್ಮಲಕ್ಷಣಗಳನ್ನು ನಿನಗೆ ಹೇಳಿದ್ದೇನೆ. ಆದುದರಿಂದ ನಿನ್ನ ಬುದ್ಧಿಯು ಯಾವುದೇ ಕಾರಣದಿಂದಲೂ ಕುಟಿಲತೆಯ ಕಡೆಗೆ ಹೋಗದಿರಲಿ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಧರ್ಮಲಕ್ಷಣೇ ಏಕಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಧರ್ಮಲಕ್ಷಣ ಎನ್ನುವ ಇನ್ನೂರಾಐವತ್ತೊಂದನೇ ಅಧ್ಯಾಯವು.

Comments are closed.