Shanti Parva: Chapter 249

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೯

ಮಹಾದೇವನ ಪ್ರಾರ್ಥನೆಯಂತೆ ಬ್ರಹ್ಮನ ರೋಷಾಗ್ನಿಯ ಉಪಸಂಹಾರ; ಮೃತ್ಯುವಿನ ಉತ್ಪತ್ತಿ (1-22).

12249001 ಸ್ಥಾಣುರುವಾಚ|

12249001a ಪ್ರಜಾಸರ್ಗನಿಮಿತ್ತಂ ಮೇ ಕಾರ್ಯವತ್ತಾಮಿಮಾಂ ಪ್ರಭೋ|

12249001c ವಿದ್ಧಿ ಸೃಷ್ಟಾಸ್ತ್ವಯಾ ಹೀಮಾ ಮಾ ಕುಪ್ಯಾಸಾಂ ಪಿತಾಮಹ||

ಸ್ಥಾಣುವು ಹೇಳಿದನು: “ಪ್ರಭೋ! ಪಿತಾಮಹ! ನನ್ನ ಈ ಕಾರ್ಯವು ಪ್ರಜೆಗಳ ಸೃಷ್ಟಿಯ ಕುರಿತಾಗಿಯೇ ಇದೆ. ನೀನೇ ಸೃಷ್ಟಿಸಿರುವ ಇವರ ಮೇಲೆ ಕುಪಿತನಾಗಬಾರದು.

12249002a ತವ ತೇಜೋಗ್ನಿನಾ ದೇವ ಪ್ರಜಾ ದಹ್ಯಂತಿ ಸರ್ವಶಃ|

12249002c ತಾ ದೃಷ್ಟ್ವಾ ಮಮ ಕಾರುಣ್ಯಂ ಮಾ ಕುಪ್ಯಾಸಾಂ ಜಗತ್ಪ್ರಭೋ||

ದೇವ! ಜಗತ್ಪ್ರಭೋ! ನಿನ್ನ ತೇಜೋಗ್ನಿಯಿಂದ ಪ್ರಜೆಗಳು ಎಲ್ಲೆಲ್ಲಿಯೂ ಸುಟ್ಟುಹೋಗುತ್ತಿದ್ದಾರೆ. ಅವರನ್ನು ನೋಡಿ ನನ್ನಲ್ಲಿ ಕಾರುಣ್ಯವುಂಟಾಗಿದೆ. ಅವರ ಮೇಲೆ ಕುಪಿತನಾಗಬೇಡ.”

12249003 ಪ್ರಜಾಪತಿರುವಾಚ|

12249003a ನ ಕುಪ್ಯೇ ನ ಚ ಮೇ ಕಾಮೋ ನ ಭವೇರನ್ ಪ್ರಜಾ ಇತಿ|

12249003c ಲಾಘವಾರ್ಥಂ ಧರಣ್ಯಾಸ್ತು ತತಃ ಸಂಹಾರ ಇಷ್ಯತೇ||

ಪ್ರಜಾಪತಿಯು ಹೇಳಿದನು: “ನಾನು ಅವರ ಮೇಲೆ ಕುಪಿತನಾಗಿಲ್ಲ. ಅವರೆಲ್ಲರೂ ಇರಬಾರದೆಂಬ ಬಯಕೆಯೂ ನನ್ನದಲ್ಲ. ಭೂಮಿಯ ಭಾರವನ್ನು ಹಗುರಗೊಳಿಸಲು ಅವರ ಸಂಹಾರವನ್ನು ಬಯಸುತ್ತೇನೆ.

12249004a ಇಯಂ ಹಿ ಮಾಂ ಸದಾ ದೇವೀ ಭಾರಾರ್ತಾ ಸಮಚೋದಯತ್|

12249004c ಸಂಹಾರಾರ್ಥಂ ಮಹಾದೇವ ಭಾರೇಣಾಪ್ಸು ನಿಮಜ್ಜತಿ||

ಭಾರದಿಂದ ಆರ್ತಳಾಗಿದ್ದ ಈ ದೇವಿಯೇ ಪ್ರಜೆಗಳ ಸಂಹಾರಕ್ಕಾಗಿ ನನ್ನನ್ನು ಪ್ರಚೋದಿಸಿದಳು. ಮಹಾದೇವ! ಭಾರದಿಂದ ಇವಳು ನೀರಿನಲ್ಲಿ ಮುಳುಗಿಹೋಗುವುದರಲ್ಲಿದ್ದಳು.

12249005a ಯದಾಹಂ ನಾಧಿಗಚ್ಚಾಮಿ ಬುದ್ಧ್ಯಾ ಬಹು ವಿಚಾರಯನ್|

12249005c ಸಂಹಾರಮಾಸಾಂ ವೃದ್ಧಾನಾಂ ತತೋ ಮಾಂ ಕ್ರೋಧ ಆವಿಶತ್||

ಬಹುಪ್ರಕಾರವಾಗಿ ವಿಚಾರಿಸಿದರೂ ನನ್ನ ಬುದ್ಧಿಗೆ ವೃದ್ಧಿಯಾಗುತ್ತಿರುವ ಇವರನ್ನು ಸಂಹರಿಸುವ ಉಪಾಯವು ಹೊಳೆಯಲಿಲ್ಲ. ಆಗ ಕ್ರೋಧವು ನನ್ನನ್ನು ಆವರಿಸಿತು.”

12249006 ಸ್ಥಾಣುರುವಾಚ|

12249006a ಸಂಹಾರಾಂತಂ ಪ್ರಸೀದಸ್ವ ಮಾ ಕ್ರುಧಸ್ತ್ರಿದಶೇಶ್ವರ|

12249006c ಮಾ ಪ್ರಜಾಃ ಸ್ಥಾವರಂ ವೈಚ ಜಂಗಮಂ ಚ ವಿನೀನಶಃ||

ಸ್ಥಾಣುವು ಹೇಳಿದನು: “ತ್ರಿದಶೇಶ್ವರ! ಈ ಸಂಹಾರದಿಂದ ಪ್ರಸೀದನಾಗು. ಕ್ರೋಧಿತನಾಗಬೇಡ. ಈ ಸ್ಥಾವರ-ಜಂಗಮ ಪ್ರಜೆಗಳನ್ನು ವಿನಾಶಗೊಳಿಸಬೇಡ.

12249007a ಪಲ್ವಲಾನಿ ಚ ಸರ್ವಾಣಿ ಸರ್ವಂ ಚೈವ ತೃಣೋಲಪಮ್|

12249007c ಸ್ಥಾವರಂ ಜಂಗಮಂ ಚೈವ ಭೂತಗ್ರಾಮಂ ಚತುರ್ವಿಧಮ್||

ಜಲಾಶಯಗಳು, ಹುಲ್ಲಿನ ಮೆದೆಗಳು, ಸ್ಥಾವರಗಳು ಮತ್ತು ಜಂಗಮಗಳೆಂಬ ನಾಲ್ಕು ವಿಧದ ಭೂತಗ್ರಾಮಗಳಿವೆ.

12249008a ತದೇತದ್ಭಸ್ಮಸಾದ್ಭೂತಂ ಜಗತ್ಸರ್ವಮುಪಪ್ಲುತಮ್|

12249008c ಪ್ರಸೀದ ಭಗವನ್ಸಾಧೋ ವರ ಏಷ ವೃತೋ ಮಯಾ||

ಅವೆಲ್ಲವೂ ಭಸ್ಮೀಭೂತವಾಗುತ್ತಿವೆ. ಜಗತ್ತೆಲ್ಲವೂ ಮುಳುಗಿಹೋಗುತ್ತಿದೆ. ಭಗವನ್! ಪ್ರಸೀದನಾಗು. ಇದೇ ನಾನು ಕೇಳುವ ವರವು.

12249009a ನಷ್ಟಾ ನ ಪುನರೇಷ್ಯಂತಿ ಪ್ರಜಾ ಹ್ಯೇತಾಃ ಕಥಂ ಚನ|

12249009c ತಸ್ಮಾನ್ನಿವರ್ತ್ಯತಾಮೇತತ್ತೇಜಃ ಸ್ವೇನೈವ ತೇಜಸಾ||

ನಷ್ಟವಾದ ಈ ಪ್ರಜೆಗಳು ಪುನಃ ಯಾವಕಾರಣಕ್ಕೂ ಹುಟ್ಟುವುದಿಲ್ಲ. ಆದುದರಿಂದ ಈ ತೇಜಸ್ಸನ್ನು ನಿನ್ನದೇ ತೇಜಸ್ಸಿನಿಂದ ಹಿಂತೆಗೆದುಕೋ.

12249010a ಉಪಾಯಮನ್ಯಂ ಸಂಪಶ್ಯ ಪ್ರಜಾನಾಂ ಹಿತಕಾಮ್ಯಯಾ|

12249010c ಯಥೇಮೇ ಜಂತವಃ ಸರ್ವೇ ನಿವರ್ತೇರನ್ಪರಂತಪ||

12249011a ಅಭಾವಮಭಿಗಚ್ಚೇಯುರುತ್ಸನ್ನಪ್ರಜನಾಃ ಪ್ರಜಾಃ|

12249011c ಅಧಿದೈವನಿಯುಕ್ತೋಽಸ್ಮಿ ತ್ವಯಾ ಲೋಕೇಷ್ವಿಹೇಶ್ವರ||

ಪರಂತಪ! ಪ್ರಜೆಗಳ ಹಿತವನ್ನು ಬಯಸಿ, ಪುನಃ ಇವರು ನಾಶವಾಗದಂತೆ ಮತ್ತು ಇವರ ಸಂಹಾರ ಕಾರ್ಯವು ವ್ಯವಸ್ಥಿತರೀತಿಯಲ್ಲಿ ನಡೆಯುವಂತೆ ಅನ್ಯ ಉಪಾಯವನ್ನು ನೀನೇ ಯೋಚಿಸು. ಲೋಕೇಶ್ವರೇಶ್ವರ! ಅಧಿದೈವನಾಗಿ ನಿನ್ನಿಂದ ನಿಯುಕ್ತಗೊಳಿಸಲ್ಪಟ್ಟಿದ್ದೇನೆ.

12249012a ತ್ವದ್ಭವಂ ಹಿ ಜಗನ್ನಾಥ ಜಗತ್ ಸ್ಥಾವರಜಂಗಮಮ್|

12249012c ಪ್ರಸಾದ್ಯ ತ್ವಾಂ ಮಹಾದೇವ ಯಾಚಾಮ್ಯಾವೃತ್ತಿಜಾಃ ಪ್ರಜಾಃ||

ಜಗನ್ನಾಥ! ಮಹಾದೇವ! ಸ್ಥಾವರ-ಜಂಗಮ ಜಗತ್ತೆಲ್ಲವೂ ನಿನ್ನಿಂದಲೇ ಹುಟ್ಟಿದೆ. ನಿನ್ನ ಪ್ರಸಾದದಿಂದ ಪ್ರಜೆಗಳು ಸತ್ತು ಪುನಃ ಹುಟ್ಟುವಂತಾಗಲಿ.””

12249013 ನಾರದ ಉವಾಚ|

12249013a ಶ್ರುತ್ವಾ ತು ವಚನಂ ದೇವಃ ಸ್ಥಾಣೋರ್ನಿಯತವಾಙ್ಮನಾಃ|

12249013c ತೇಜಸ್ತತ್ಸ್ವಂ ನಿಜಗ್ರಾಹ ಪುನರೇವಾಂತರಾತ್ಮನಾ||

ನಾರದನು ಹೇಳಿದನು: “ನಿಯತ ಮಾತು-ಮನಸ್ಸುಗಳುಳ್ಳ ಬ್ರಹ್ಮದೇವನು ಸ್ಥಾಣುವಿನ ಮಾತನ್ನು ಕೇಳಿ ತೇಜಸ್ಸನ್ನು ಹಿಂತೆಗೆದುಕೊಂಡು ಪುನಃ ಅದನ್ನು ತನ್ನಲ್ಲಿಯೇ ಲೀನಗೊಳಿಸಿದನು.

12249014a ತತೋಽಗ್ನಿಮುಪಸಂಗೃಹ್ಯ ಭಗವಾಽಲ್ಲೋಕಪೂಜಿತಃ|

12249014c ಪ್ರವೃತ್ತಿಂ ಚ ನಿವೃತ್ತಿಂ ಚ ಕಲ್ಪಯಾಮಾಸ ವೈ ಪ್ರಭುಃ||

ಆಗ ಲೋಕಪೂಜಿತ ಪ್ರಭು ಭಗವಾನನು ಅಗ್ನಿಯನ್ನು ಉಪಸಂಹರಿಸಿ ಪ್ರವೃತ್ತಿ-ನಿವೃತ್ತಿಗಳನ್ನು ಕಲ್ಪಿಸಿದನು.

12249015a ಉಪಸಂಹರತಸ್ತಸ್ಯ ತಮಗ್ನಿಂ ರೋಷಜಂ ತದಾ|

12249015c ಪ್ರಾದುರ್ಬಭೂವ ವಿಶ್ವೇಭ್ಯಃ ಖೇಭ್ಯೋ ನಾರೀ ಮಹಾತ್ಮನಃ||

ರೋಷದಿಂದ ಉಂಟಾದ ಆ ಅಗ್ನಿಯನ್ನು ಅವನು ಉಪಸಂಹರಿಸಲು ಆ ಮಹಾತ್ಮನ ಎಲ್ಲ ಅವಯವಗಳಿಂದ ಒಂದು ಶಕ್ತಿಯು ಹೊರಟು ನಾರಿಯಾಗಿ ಪ್ರಾದುರ್ಭವಿಸಿತು.

12249016a ಕೃಷ್ಣಾ ರಕ್ತಾಂಬರಧರಾ ರಕ್ತನೇತ್ರತಲಾಂತರಾ|

12249016c ದಿವ್ಯಕುಂಡಲಸಂಪನ್ನಾ ದಿವ್ಯಾಭರಣಭೂಷಿತಾ||

ಕಪ್ಪು ಮತ್ತು ಕೆಂಪು ವಸ್ತ್ರಗಳನ್ನುಟ್ಟಿದ್ದ, ಗುಳಿಬಿದ್ದ ರಕ್ತನೇತ್ರಳಾಗಿದ್ದ ಅವಳು ದಿವ್ಯಕುಂಡಲಸಂಪನ್ನಳಾಗಿ ದಿವ್ಯಾಭರಣಭೂಷಿತಳಾಗಿದ್ದಳು.

12249017a ಸಾ ವಿನಿಃಸೃತ್ಯ ವೈ ಖೇಭ್ಯೋ ದಕ್ಷಿಣಾಮಾಶ್ರಿತಾ ದಿಶಮ್|

12249017c ದದೃಶಾತೇಽಥ ತೌ ಕನ್ಯಾಂ ದೇವೌ ವಿಶ್ವೇಶ್ವರಾವುಭೌ||

ಅವನ ಅವಯವಗಳಿಂದ ಹೊರಟು ದಕ್ಷಿಣ ದಿಕ್ಕಿನಲ್ಲಿ ಹೋಗುತ್ತಿದ್ದ ಆ ಕನ್ಯೆಯನ್ನು ಇಬ್ಬರು ವಿಶ್ವೇಶ್ವರ ದೇವರೂ ನೋಡಿದರು.

12249018a ತಾಮಾಹೂಯ ತದಾ ದೇವೋ ಲೋಕಾನಾಮಾದಿರೀಶ್ವರಃ|

12249018c ಮೃತ್ಯೋ ಇತಿ ಮಹೀಪಾಲ ಜಹಿ ಚೇಮಾಃ ಪ್ರಜಾ ಇತಿ||

ಮಹೀಪಾಲ! ಆಗ ಲೋಕಗಳ ಆದಿ ಈಶ್ವರನು ಅವಳನ್ನು ಮೃತ್ಯುವೆಂದು ಕರೆದು ಈ ಪ್ರಜೆಗಳನ್ನು ಸಂಹರಿಸು ಎಂದನು.

12249019a ತ್ವಂ ಹಿ ಸಂಹಾರಬುದ್ಧ್ಯಾ ಮೇ ಚಿಂತಿತಾ ರುಷಿತೇನ ಚ|

12249019c ತಸ್ಮಾತ್ಸಂಹರ ಸರ್ವಾಸ್ತ್ವಂ ಪ್ರಜಾಃ ಸಜಡಪಂಡಿತಾಃ||

“ಸಂಹಾರಬುದ್ಧಿಯಿಂದ ರೋಷಗೊಂಡು ನಿನ್ನನ್ನು ಚಿಂತಿಸಿದೆನು. ಆದುದರಿಂದ ನೀನು ಪಂಡಿತರು-ಮೂರ್ಖರು ಎನ್ನುವ ಭೇದಭಾವವಿಲ್ಲದೇ ಎಲ್ಲರನ್ನೂ ಸಂಹರಿಸು.

12249020a ಅವಿಶೇಷೇಣ ಚೈವ ತ್ವಂ ಪ್ರಜಾಃ ಸಂಹರ ಭಾಮಿನಿ|

12249020c ಮಮ ತ್ವಂ ಹಿ ನಿಯೋಗೇನ ಶ್ರೇಯಃ ಪರಮವಾಪ್ಸ್ಯಸಿ||

ಭಾಮಿನಿ! ನೀನು ಯಾರನ್ನೂ ಬಿಡದೇ ಪ್ರಜೆಗಳನ್ನು ಸಂಹರಿಸು. ನನ್ನ ನಿಯೋಗದಿಂದ ನೀನು ಪರಮ ಶ್ರೇಯಸ್ಸನ್ನು ಪಡೆಯುತ್ತೀಯೆ.”

12249021a ಏವಮುಕ್ತಾ ತು ಸಾ ದೇವೀ ಮೃತ್ಯುಃ ಕಮಲಮಾಲಿನೀ|

12249021c ಪ್ರದಧ್ಯೌ ದುಃಖಿತಾ ಬಾಲಾ ಸಾಶ್ರುಪಾತಮತೀವ ಹಿ||

ಅವನು ಹೀಗೆ ಹೇಳಲು ಕಮಲಮಾಲಿನೀ ಬಾಲಕಿ ದೇವೀ ಮೃತ್ಯುವು ಕಣ್ಣೀರು ಸುರಿಸುತ್ತಾ ದುಃಖಿತಳಾಗಿ ಚಿಂತಾಮಗ್ನಳಾದಳು.

12249022a ಪಾಣಿಭ್ಯಾಂ ಚೈವ ಜಗ್ರಾಹ ತಾನ್ಯಶ್ರೂಣಿ ಜನೇಶ್ವರಃ|

12249022c ಮಾನವಾನಾಂ ಹಿತಾರ್ಥಾಯ ಯಯಾಚೇ ಪುನರೇವ ಚ||

ಮಾನವರ ಹಿತಾರ್ಥಕ್ಕಾಗಿ ಜನೇಶ್ವರ ಬ್ರಹ್ಮನು ಅವಳ ಕಣ್ಣುಗಳಿಂದ ಉದುರುತ್ತಿದ್ದ ಅಶ್ರುಬಿಂದುಗಳನ್ನು ಕೆಳಕ್ಕೆ ಬೀಳಲು ಬಿಡದೇ ತನ್ನ ಅಂಜಲಿಯಲ್ಲಿಯೇ ಹಿಡಿದುಕೊಂಡನು. ಆಗ ಅವಳು ಪುನಃ ಪ್ರಾರ್ಥಿಸಿದಳು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮೃತ್ಯುಪ್ರಜಾಪತಿಸಂವಾದೇ ಎಕೋನಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮೃತ್ಯುಪ್ರಜಾಪತಿಸಂವಾದ ಎನ್ನುವ ಇನ್ನೂರಾನಲ್ವತ್ತೊಂಭತ್ತನೇ ಅಧ್ಯಾಯವು.

Comments are closed.