Shanti Parva: Chapter 247

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೭

ಪಂಚಭೂತಗಳು, ಮನಸ್ಸು ಮತ್ತು ಬುದ್ಧಿಯ ಗುಣಗಳ ವರ್ಣನೆ (1-13).

12247001 ಭೀಷ್ಮ ಉವಾಚ|

12247001a ಭೂತಾನಾಂ ಗುಣಸಂಖ್ಯಾನಂ ಭೂಯಃ ಪುತ್ರ ನಿಶಾಮಯ|

12247001c ದ್ವೈಪಾಯನಮುಖಾದ್ ಭ್ರಷ್ಟಂ ಶ್ಲಾಘಯಾ ಪರಯಾನಘ||

ಭೀಷ್ಮನು ಹೇಳಿದನು: “ಅನಘ! ಪುತ್ರ! ಕೃಷ್ಣದ್ವೈಪಾಯನನ ಮುಖದಿಂದ ಹೊರಟ ಶ್ಲಾಘನೀಯವಾದ ಶ್ರೇಷ್ಠವಾದ ಭೂತಗಳ ಗುಣಸಂಖ್ಯೆಗಳ ಕುರಿತು ಕೇಳು.

12247002a ದೀಪ್ತಾನಲನಿಭಃ ಪ್ರಾಹ ಭಗವಾನ್ ಧೂಮ್ರವರ್ಚಸೇ|

12247002c ತತೋಽಹಮಪಿ ವಕ್ಷ್ಯಾಮಿ ಭೂಯಃ ಪುತ್ರ ನಿದರ್ಶನಮ್||

ಪುತ್ರ! ದೀಪ್ತಾನಲ ಪ್ರಭೆಯ ಭಗವಾನ್ ವ್ಯಾಸನು ಧೂಮ್ರವರ್ಚಸ್ವೀ ಪುತ್ರನಿಗೆ ನಿದರ್ಶನಪೂರ್ವಕವಾಗಿ ಹೇಳಿದುದನ್ನು ನಾನು ನಿನಗೆ ಹೇಳುತ್ತೇನೆ.

12247003a ಭೂಮೇಃ ಸ್ಥೈರ್ಯಂ ಪೃಥುತ್ವಂ ಚ ಕಾಠಿನ್ಯಂ ಪ್ರಸವಾತ್ಮತಾ|

12247003c ಗಂಧೋ ಗುರುತ್ವಂ ಶಕ್ತಿಶ್ಚ ಸಂಘಾತಃ ಸ್ಥಾಪನಾ ಧೃತಿಃ||

“ಪೃಥ್ವೀ ತತ್ತ್ವಕ್ಕೆ ಸ್ಥೈರ್ಯ, ಗುರುತ್ವ, ಕಾಠಿನ್ಯ, ಪ್ರಸವ ಶಕ್ತಿ, ಗಂಧ, ವೈಶಾಲ್ಯ, ಶಕ್ತಿ, ಸಂಘಾತ, ಸ್ಥಾಪನೆ ಮತ್ತು ಧಾರಣೆಗಳೆಂಬ ಹತ್ತು ಗುಣಗಳಿವೆ.

12247004a ಅಪಾಂ ಶೈತ್ಯಂ ರಸಃ ಕ್ಲೇದೋ ದ್ರವತ್ವಂ ಸ್ನೇಹಸೌಮ್ಯತಾ|

12247004c ಜಿಹ್ವಾ ವಿಷ್ಯಂದಿನೀ ಚೈವ ಭೌಮಾಪ್ಯಾಸ್ರವಣಂ ತಥಾ||

ಜಲತತ್ತ್ವಕ್ಕೆ ಶೈತ್ಯ, ರಸ, ಕ್ಲೇದ, ದ್ರವತ್ವ, ಸ್ನಿಗ್ಧತೆ, ಸೌಮ್ಯಭಾವ, ಜಿಹ್ವೆ, ಸ್ರವಿಸುವುದು, ಸಂಘಾತ, ಭೂಮಿಯಲ್ಲಿ ಹುಟ್ಟಿದ ಪದಾರ್ಥಗಳನ್ನು ಬೇಯಿಸುವುದು ಎಂಬ ಹತ್ತು ಗುಣಗಳಿವೆ.

12247005a ಅಗ್ನೇರ್ದುರ್ಧರ್ಷತಾ ತೇಜಸ್ತಾಪಃ ಪಾಕಃ ಪ್ರಕಾಶನಮ್|

12247005c ಶೌಚಂ ರಾಗೋ ಲಘುಸ್ತೈಕ್ಷ್ಣ್ಯಂ ದಶಮಂ ಚೋರ್ಧ್ವಭಾಗಿತಾ||

ಅಗ್ನಿತತ್ತ್ವಕ್ಕೆ ದುರ್ಧರ್ಷತೆ, ಉರಿಯುವುದು, ತಾಪವನ್ನುಂಟುಮಾಡುವುದು, ಬೇಯಿಸುವುದು, ಪ್ರಕಾಶಗೊಳಿಸುವುದು, ಶೋಕ, ರಾಗ, ಲಘುತ್ವ, ತೀಕ್ಷ್ಣತೆ, ಮೇಲ್ಮುಖವಾಗಿ ಪಸರಿಸುವುದು ಎಂಬ ಹತ್ತು ಗುಣಗಳಿವೆ.

12247006a ವಾಯೋರನಿಯಮಃ ಸ್ಪರ್ಶೋ ವಾದಸ್ಥಾನಂ ಸ್ವತಂತ್ರತಾ|

12247006c ಬಲಂ ಶೈಘ್ರ್ಯಂ ಚ ಮೋಹಶ್ಚ ಚೇಷ್ಟಾ ಕರ್ಮಕೃತಾ ಭವಃ||

ವಾಯುತತ್ತ್ವಕ್ಕೆ ಉಷ್ಣ-ಶೀತ ನಿಯಮಗಳಿಲ್ಲದ ಸ್ಪರ್ಶ, ವಾಗಿಂದ್ರಿಯ ಸ್ಥಾನ, ಸ್ವತಂತ್ರತೆ, ಬಲ, ಶೀಘ್ರತೆ, ಮೋಹ, ಚೇಷ್ಟೆ, ಕರ್ಮ, ಪ್ರಾಣ, ಹುಟ್ಟು-ಸಾವುಗಳಿಗೆ ಕಾರಣ ಎಂಬ ಹತ್ತು ಗುಣಗಳಿವೆ.

12247007a ಆಕಾಶಸ್ಯ ಗುಣಃ ಶಬ್ದೋ ವ್ಯಾಪಿತ್ವಂ ಚಿದ್ರತಾಪಿ ಚ|

12247007c ಅನಾಶ್ರಯಮನಾಲಂಬಮವ್ಯಕ್ತಮವಿಕಾರಿತಾ||

12247008a ಅಪ್ರತೀಘಾತತಾ ಚೈವ ಭೂತತ್ವಂ ವಿಕೃತಾನಿ ಚ|

12247008c ಗುಣಾಃ ಪಂಚಾಶತಂ ಪ್ರೋಕ್ತಾಃ ಪಂಚಭೂತಾತ್ಮಭಾವಿತಾಃ||

ಆಕಾಶತತ್ತ್ವಕ್ಕೆ ಶಬ್ದ, ವ್ಯಾಪಿತ್ವ, ಚಿದ್ರತೆ, ಅನಾಶ್ರಯ[1], ಅನಾಲಂಬ[2], ಅವ್ಯಕ್ತ, ಅವಿಕಾರಿತಾ, ಅಪ್ರತಿಘಾತಿತ್ವ[3], ಭೂತತ್ವ[4] ಮತ್ತು ವಿಕೃತತ್ವ ಎಂಬ ಹತ್ತು ಗುಣಗಳಿವೆ. ಹೀಗೆ ಪಂಚಭೂತಗಳಿಗೆ ಒಟ್ಟು ಐವತ್ತು ಗುಣಗಳನ್ನು ಹೇಳಿದ್ದಾರೆ.

12247009a ಚಲೋಪಪತ್ತಿರ್ವ್ಯಕ್ತಿಶ್ಚ ವಿಸರ್ಗಃ ಕಲ್ಪನಾ ಕ್ಷಮಾ|

12247009c ಸದಸಚ್ಚಾಶುತಾ ಚೈವ ಮನಸೋ ನವ ವೈ ಗುಣಾಃ||

ಛಲ, ತರ್ಕ-ವಿತರ್ಕಗಳಲ್ಲಿ ಕೌಶಲ್ಯ, ಸ್ಮರಣೆ, ಭ್ರಾಂತಿ, ಕಲ್ಪನೆ, ಕ್ಷಮೆ, ಶುಭಸಂಕಲ್ಪ, ಅಶುಭಸಂಕಲ್ಪ, ಮತ್ತು ಚಾಂಚಲ್ಯ ಇವು ಮನಸ್ಸಿನ ಒಂಬತ್ತು ಗುಣಗಳು.

12247010a ಇಷ್ಟಾನಿಷ್ಟವಿಕಲ್ಪಶ್ಚ ವ್ಯವಸಾಯಃ ಸಮಾಧಿತಾ|

12247010c ಸಂಶಯಃ ಪ್ರತಿಪತ್ತಿಶ್ಚ ಬುದ್ಧೌ ಪಂಚೇಹ ಯೇ ಗುಣಾಃ||

ಇಷ್ಟಾನಿಷ್ಟ ವೃತ್ತಿಗಳ ನಾಶ, ವಿಚಾರ, ಏಕಾಗ್ರಚಿಂತನೆ, ಸಂದೇಹ ಮತ್ತು ನಿಶ್ಚಯ ಈ ಐದು ಬುದ್ಧಿಯ ಗುಣಗಳು.””

12247011 ಯುಧಿಷ್ಠಿರ ಉವಾಚ|

12247011a ಕಥಂ ಪಂಚಗುಣಾ ಬುದ್ಧಿಃ ಕಥಂ ಪಂಚೇಂದ್ರಿಯಾ ಗುಣಾಃ|

12247011c ಏತನ್ಮೇ ಸರ್ವಮಾಚಕ್ಷ್ವ ಸೂಕ್ಷ್ಮಜ್ಞಾನಂ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಬುದ್ಧಿಯು ಹೇಗೆ ಪಂಚಗುಣಾತ್ಮಕವಾಗಿದೆ? ಪಂಚೇಂದ್ರಿಯಗಳಿಗೂ ಪಂಚಭೂತಗಳಿಗೂ ಹೇಗೆ ಗುಣಗಳಾಗುತ್ತವೆ? ಪಿತಾಮಹ! ಈ ಸೂಕ್ಷ್ಮಜ್ಞಾನದ ವಿಷಯವಾಗಿ ಎಲ್ಲವನ್ನೂ ನನಗೆ ಹೇಳು.”

12247012 ಭೀಷ್ಮ ಉವಾಚ|

12247012a ಆಹುಃ ಷಷ್ಟಿಂ ಭೂತಗುಣಾನ್ವೈ

         ಭೂತವಿಶಿಷ್ಟಾ ನಿತ್ಯವಿಷಕ್ತಾಃ|

12247012c ಭೂತವಿಷಕ್ತಾಶ್ಚಾಕ್ಷರಸೃಷ್ಟಾಃ

         ಪುತ್ರ ನ ನಿತ್ಯಂ ತದಿಹ ವದಂತಿ||

ಭೀಷ್ಮನು ಹೇಳಿದನು: “ಬುದ್ಧಿಗೆ ಅರವತ್ತು ಗುಣಗಳಿವೆಯೆಂದು ಹೇಳಿದ್ದಾರೆ. ಪಂಚಭೂತಗಳ ಐವತ್ತು ಗುಣಗಳು, ಬುದ್ಧಿಯ ಐದು ಗುಣಗಳು ಮತ್ತು ಪಂಚಭೂತಗಳು ಸೇರಿ ಅರವತ್ತಾಗುತ್ತವೆ. ಇವೆಲ್ಲವೂ ನಿತ್ಯವಾದ ಚೈತನ್ಯದಲ್ಲಿ ಸೇರಿಕೊಂಡಿವೆ. ಪಂಚಮಹಾಭೂತಗಳೂ, ಅವುಗಳ ವಿಭೂತಿಗಳೂ ಅವಿನಾಶಿಯಾದ ಪರಮಾತ್ಮನಿಂದಲೇ ಹುಟ್ಟಿವೆ. ಆದರೆ ಪರಿವರ್ತನಶೀಲವಾಗಿರುವುದರಿಂದ ವಿದ್ವಾಂಸರು ಭೂತವಿಭೂತಿಗಳನ್ನು ಅನಿತ್ಯವೆಂದು ಹೇಳುತ್ತಾರೆ.

12247013a ತತ್ಪುತ್ರ ಚಿಂತಾಕಲಿತಂ ಯದುಕ್ತಮ್

ಅನಾಗತಂ ವೈ ತವ ಸಂಪ್ರತೀಹ|

12247013c ಭೂತಾರ್ಥತತ್ತ್ವಂ ತದವಾಪ್ಯ ಸರ್ವಂ

ಭೂತಪ್ರಭಾವಾದ್ಭವ ಶಾಂತಬುದ್ಧಿಃ||

ಪುತ್ರ! ಧ್ಯಾನಕ್ಕೆ ಸಂಬಂಧಿಸಿ ಹೇಳಿರುವ ವಿಷಯಗಳನ್ನು ನೀನು ಮುಂದೆ ಸಾಧಿಸಬೇಕಾಗಿದೆ. ಆದುದರಿಂದ ಈಗ ನಿತ್ಯಸಿದ್ಧನಾದ ಪರಮಾತ್ಮನ ಯಥಾರ್ಥತತ್ತ್ವವನ್ನು ತಿಳಿದು ಪರಮೇಶ್ವರನ ಪ್ರಭಾವ-ಅನುಗ್ರಹಗಳಿಂದ ಶಾಂತಬುದ್ಧಿಯುಳ್ಳವನಾಗು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಸಪ್ತಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತೇಳನೇ ಅಧ್ಯಾಯವು.

[1] ಬೇರೆ ಯಾವುದನ್ನೂ ಆಶ್ರಯಿಸದೇ ಇರುವುದು.

[2] ಯಾವುದಕ್ಕೂ ಆಶ್ರಯವಾಗದೇ ಇರುವುದು.

[3] ಪ್ರತಿಘಾತವಿಲ್ಲದೇ ಇರುವುದು.

[4] ಶ್ರವಣೇಂದ್ರಿಯಕ್ಕೆ ಕಾರಣವಾಗಿರುವುದು.

Comments are closed.