Shanti Parva: Chapter 246

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೬

ಕಾಮರೂಪೀ ಅದ್ಭುತ ವೃಕ್ಷದ ವರ್ಣನೆ; ಅದನ್ನು ಕತ್ತರಿಸಿ ಮುಕ್ತಿಯನ್ನು ಪಡೆಯುವ ಉಪಾಯ; ಶರೀರರೂಪೀ ನಗರದ ವರ್ಣನೆ (1-15).

12246001 ವ್ಯಾಸ ಉವಾಚ|

12246001a ಹೃದಿ ಕಾಮದ್ರುಮಶ್ಚಿತ್ರೋ ಮೋಹಸಂಚಯಸಂಭವಃ|

12246001c ಕ್ರೋಧಮಾನಮಹಾಸ್ಕಂಧೋ ವಿವಿತ್ಸಾಪರಿಮೋಚನಃ||

12246002a ತಸ್ಯ ಚಾಜ್ಞಾನಮಾಧಾರಃ ಪ್ರಮಾದಃ ಪರಿಷೇಚನಮ್|

12246002c ಸೋಽಭ್ಯಸೂಯಾಪಲಾಶೋ ಹಿ ಪುರಾದುಷ್ಕೃತಸಾರವಾನ್||

ವ್ಯಾಸನು ಹೇಳಿದನು: “ಹೃದಯದಲ್ಲಿ ಮೋಹದ ಬೀಜದಿಂದ ಹುಟ್ಟಿದ ಕಾಮವೆಂಬ ಹೆಸರಿನ ವಿಚಿತ್ರ ವೃಕ್ಷವೊಂದಿದೆ. ಕ್ರೋಧ-ಅಭಿಮಾನಗಳೇ ಅದರ ಮಹಾ ಶಾಖೆಗಳು. ಸಂಕಲ್ಪವೇ ಅದಕ್ಕೆ ನೀರೆರೆಯುವ ಪಾತ್ರೆ. ಅಜ್ಞಾನವೇ ಅದರ ಬುಡ. ಪ್ರಮಾದವೇ ಅದಕ್ಕೆ ಹಾಕುವ ನೀರು. ಅಸೂಯೆಯೇ ಅದರ ಹಸುರೆಲೆಗಳು. ಹಿಂದೆ ಮಾಡಿದ ಪಾಪಕರ್ಮಗಳೇ ಅದರ ಮುಖ್ಯ ಸಾರವು.

12246003a ಸಂಮೋಹಚಿಂತಾವಿಟಪಃ ಶೋಕಶಾಖೋ ಭಯಂಕರಃ|

12246003c ಮೋಹನೀಭಿಃ ಪಿಪಾಸಾಭಿರ್ಲತಾಭಿಃ ಪರಿವೇಷ್ಟಿತಃ||

ಸಂಮೋಹ-ಚಿಂತೆಗಳೇ ಅದರ ದೊಡ್ಡ ರೆಂಬೆಗಳು. ಶೋಕವೇ ಅದರ ಚಿಕ್ಕ ರೆಂಬೆಯು. ಭಯವೆಂಬುದು ಅದರ ಮೊಳಕೆ. ಅದನ್ನು ಸಂಮೋಹಜನಕವಾದ ತೃಷ್ಣೆಗಳೇ ಲತೆಗಳಾಗಿ ಸುತ್ತಿಕೊಂಡಿವೆ.

12246004a ಉಪಾಸತೇ ಮಹಾವೃಕ್ಷಂ ಸುಲುಬ್ಧಾಸ್ತಂ ಫಲೇಪ್ಸವಃ|

12246004c ಆಯಾಸೈಃ ಸಂಯತಃ ಪಾಶೈಃ ಫಲಾನಿ ಪರಿವೇಷ್ಟಯನ್||

ಅದರ ಫಲವನ್ನು ಪಡೆದುಕೊಳ್ಳಲು ಇಚ್ಛಿಸುವ ಕಡುಲೋಭಿಗಳು ವಾಸನಾರೂಪದ ಕಬ್ಬಿಣದ ಸರಪಳಿಗಳಿಂದ ಬಂಧಿತರಾಗಿ ಫಲದಾಯಕ ಆ ಕಾಮವೃಕ್ಷವನ್ನು ಸುತ್ತುವರಿದು ಉಪಾಸಿಸುತ್ತಾರೆ.

12246005a ಯಸ್ತಾನ್ ಪಾಶಾನ್ವಶೇ ಕೃತ್ವಾ ತಂ ವೃಕ್ಷಮಪಕರ್ಷತಿ|

12246005c ಗತಃ ಸ ದುಃಖಯೋರಂತಂ ಯತಮಾನಸ್ತಯೋರ್ದ್ವಯೋಃ||

ಆ ಪಾಶಗಳನ್ನು ತುಂಡರಿಸಿಕೊಂಡು ವೈರಾಗ್ಯವೆಂಬ ಶಸ್ತ್ರದಿಂದ ಆ ಕಾಮವೃಕ್ಷವನ್ನು ಕೆಳಕ್ಕೆ ಕೆಡಗುವವನು ಜರಾಮರಣಗಳಿಂದ ಪ್ರಾಪ್ತವಾಗುವ ಎರಡೂ ಪ್ರಕಾರದ ದುಃಖಗಳ ಕೊನೆಯನ್ನು ಮುಟ್ಟುತ್ತಾನೆ.

12246006a ಸಂರೋಹತ್ಯಕೃತಪ್ರಜ್ಞಃ ಸಂತಾಪೇನ ಹಿ ಪಾದಪಮ್|

12246006c ಸ ತಮೇವ ತತೋ ಹಂತಿ ವಿಷಂ ಗ್ರಸ್ತಮಿವಾತುರಮ್||

ಅಕೃತಪ್ರಜ್ಞನು ಆ ವೃಕ್ಷವನ್ನೇರಿ ಸಂತಾಪವನ್ನೇ ಹೊಂದುತ್ತಾನೆ. ವಿಷದ ಗೆಡ್ಡೆಯು ರೋಗಿಯನ್ನು ಹೇಗೋ ಹಾಗೆ ಅದು ಅವನನ್ನು ನಾಶಗೊಳಿಸುತ್ತದೆ.

12246007a ತಸ್ಯಾನುಶಯಮೂಲಸ್ಯ ಮೂಲಮುದ್ಧ್ರಿಯತೇ ಬಲಾತ್|

12246007c ತ್ಯಾಗಾಪ್ರಮಾದಾಕೃತಿನಾ ಸಾಮ್ಯೇನ ಪರಮಾಸಿನಾ||

ಜ್ಞಾನಿಯು ಬಹಳ ಆಳದವರೆಗೂ ಬೇರುಬಿಟ್ಟಿರುವ ಆ ವೃಕ್ಷದ ಮೂಲವನ್ನು ತ್ಯಾಗ-ಅಪ್ರಮಾದಗಳಿಂದುಂಟಾದ ಸಾಮ್ಯವೆಂಬ ಪರಮ ಖಡ್ಗದಿಂದ ಬಲಪೂರ್ವಕವಾಗಿ ಕತ್ತರಿಸಿ ಹಾಕುತ್ತಾನೆ.

12246008a ಏವಂ ಯೋ ವೇದ ಕಾಮಸ್ಯ ಕೇವಲಂ ಪರಿಕರ್ಷಣಮ್|

12246008c ವಧಂ ವೈ ಕಾಮಶಾಸ್ತ್ರಸ್ಯ ಸ ದುಃಖಾನ್ಯತಿವರ್ತತೇ||

ಹೀಗೆ ಕಾಮದ ನಿವರ್ತನೋಪಾಯವನ್ನು ತಿಳಿದು ಕಾಮಶಾಸ್ತ್ರವನ್ನೇ ವಧಿಸಿರುವವನು ದುಃಖಗಳಿಂದ ಪಾರಾಗುತ್ತಾನೆ.

12246009a ಶರೀರಂ ಪುರಮಿತ್ಯಾಹುಃ ಸ್ವಾಮಿನೀ ಬುದ್ಧಿರಿಷ್ಯತೇ|

12246009c ತತ್ರ ಬುದ್ಧೇಃ ಶರೀರಸ್ಥಂ ಮನೋ ನಾಮಾರ್ಥಚಿಂತಕಮ್||

ಶರೀರವನ್ನು ಒಂದು ಪುರವೆಂದು ಹೇಳುತ್ತಾರೆ. ಬುದ್ಧಿಯು ಅದರ ರಾಣಿಯು. ಶರೀರಸ್ಥ ಮನಸ್ಸು ಬುದ್ಧಿಯ ಅರ್ಥಸಿದ್ಧಿಗಾಗಿ ಸಮಾಲೋಚಿಸುವ ಮಂತ್ರಿಯು.

12246010a ಇಂದ್ರಿಯಾಣಿ ಜನಾಃ ಪೌರಾಸ್ತದರ್ಥಂ ತು ಪರಾ ಕೃತಿಃ|

12246010c ತತ್ರ ದ್ವೌ ದಾರುಣೌ ದೋಷೌ ತಮೋ ನಾಮ ರಜಸ್ತಥಾ||

ಇಂದ್ರಿಯಗಳು ಪೌರ ಜನರು. ಅವರಿಗಾಗಿ ಮನಸ್ಸು ದೊಡ್ಡ ದೊಡ್ಡ ಕಾರ್ಯಗಳನ್ನೇ ಮಾಡುತ್ತಿರುತ್ತದೆ. ಅಲ್ಲಿ ತಮಸ್ಸು ಮತ್ತು ರಜಸ್ಸುಗಳೆಂಬ ಎರಡು ದೋಷಗಳಿವೆ.

12246011a ಯದರ್ಥಮುಪಜೀವಂತಿ ಪೌರಾಃ ಸಹಪುರೇಶ್ವರಾಃ|

12246011c ಅದ್ವಾರೇಣ ತಮೇವಾರ್ಥಂ ದ್ವೌ ದೋಷಾವುಪಜೀವತಃ||

ಮನಸ್ಸು ಒದಗಿಸಿಕೊಟ್ಟ ದೋಷಯುಕ್ತವಾದ ವಿಷಯಸುಖಗಳನ್ನು ಇಂದ್ರಿಯರೂಪದ ಪ್ರಜೆಗಳು ಪುರಿಯ ಈಶ್ವರರೊಂದಿಗೆ ಉಪಭೋಗಿಸುತ್ತವೆ. ರಜಸ್ಸು-ತಮಸ್ಸುಗಳೆಂಬ ಎರಡು ದೋಷಗಳು ನಿಷಿದ್ಧ ಮಾರ್ಗದಿಂದಲೇ ವಿಷಯಸುಖಗಳನ್ನು ಮನಸ್ಸಿಗೆ ಒದಗಿಸಿಕೊಡುತ್ತವೆ.

12246012a ತತ್ರ ಬುದ್ಧಿರ್ಹಿ ದುರ್ಧರ್ಷಾ ಮನಃ ಸಾಧರ್ಮ್ಯಮುಚ್ಯತೇ|

12246012c ಪೌರಾಶ್ಚಾಪಿ ಮನಸ್ತ್ರಸ್ತಾಸ್ತೇಷಾಮಪಿ ಚಲಾ ಸ್ಥಿತಿಃ||

ಅಲ್ಲಿ ಬುದ್ಧಿಯು ದುರ್ಧರ್ಷವಾಗಿದ್ದರೂ ಮನಸ್ಸಿನೊಡನೆ ಇರುವುದರಿಂದ ಸಹಧರ್ಮಿಯಾಗಿಬಿಡುತ್ತದೆ. ಇಂದ್ರಿಯಾದಿ ಪೌರರೂ ಮನಸ್ಸೆಂಬ ಮಂತ್ರಿಗೆ ಭಯಪಡುತ್ತವೆ.

12246013a ಯದರ್ಥಂ ಬುದ್ಧಿರಧ್ಯಾಸ್ತೇ ನ ಸೋಽರ್ಥಃ ಪರಿಷೀದತಿ|

12246013c ಯದರ್ಥಂ ಪೃಥಗಧ್ಯಾಸ್ತೇ ಮನಸ್ತತ್ಪರಿಷೀದತಿ||

ಬುದ್ಧಿಯು ಏನನ್ನು ಯೋಚಿಸುತ್ತದೆಯೋ ಮನಸ್ಸು ಅದನ್ನು ಮಾಡುವುದಿಲ್ಲ. ಹೀಗೆ ಮನಸ್ಸು ಬುದ್ಧಿಯಿಂದ ಪ್ರತ್ಯೇಕವಾದಾಗ ಮನಸ್ಸೇ ಪುರವನ್ನಾಳುತ್ತದೆ.

12246014a ಪೃಥಗ್ಭೂತಂ ಯದಾ ಬುದ್ಧ್ಯಾ ಮನೋ ಭವತಿ ಕೇವಲಮ್|

12246014c ತತ್ರೈನಂ ವಿವೃತಂ ಶೂನ್ಯಂ ರಜಃ ಪರ್ಯವತಿಷ್ಠತೇ||

ಬುದ್ಧಿಯಿಂದ ಬೇರೆಯಾಗಿ ಮನಸ್ಸು ಒಂದೇ ಆಗಿರುವಾಗ, ಶೂನ್ಯ ಆತ್ಮನನ್ನು ರಜಸ್ಸು ಆವರಿಸುತ್ತದೆ.

12246015a ತನ್ಮನಃ ಕುರುತೇ ಸಖ್ಯಂ ರಜಸಾ ಸಹ ಸಂಗತಮ್|

12246015c ತಂ ಚಾದಾಯ ಜನಂ ಪೌರಂ ರಜಸೇ ಸಂಪ್ರಯಚ್ಚತಿ||

ಆಗ ಮನಸ್ಸು ರಜಸ್ಸಿನೊಂದಿಗೆ ಸ್ನೇಹಬೆಳೆಸಿ ಅದರೊಡನೆ ಸೇರಿಕೊಳ್ಳುತ್ತದೆ. ಮನಸ್ಸು ಇಂದ್ರಿಯ ರೂಪರಾದ ಪೌರರನ್ನು ಹಿಡಿದು ರಜಸ್ಸಿಗೆ ಒಪ್ಪಿಸಿಬಿಡುತ್ತದೆ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಷಟ್ಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತಾರನೇ ಅಧ್ಯಾಯವು.

Comments are closed.