Shanti Parva: Chapter 242

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೨

ಪರಮಾತ್ಮಪ್ರಾಪ್ತಿಗೆ ಸಾಧನೆಗಳು, ಸಂಸಾರನದಿಯ ವರ್ಣನೆ ಮತ್ತು ಜ್ಞಾನದಿಂದ ಬ್ರಹ್ಮಪ್ರಾಪ್ತಿ (1-25).

12242001 ಶುಕ ಉವಾಚ|

12242001a ಯಸ್ಮಾದ್ಧರ್ಮಾತ್ಪರೋ ಧರ್ಮೋ ವಿದ್ಯತೇ ನೇಹ ಕಶ್ಚನ|

12242001c ಯೋ ವಿಶಿಷ್ಟಶ್ಚ ಧರ್ಮೇಭ್ಯಸ್ತಂ ಭವಾನ್ ಪ್ರಬ್ರವೀತು ಮೇ||

ಶುಕನು ಹೇಳಿದನು: “ಈ ಜಗತ್ತಿನಲ್ಲಿ ಯಾವುದಕ್ಕಿಂತ ಹಿರಿಯದಾದ ಬೇರೆ ಯಾವ ಧರ್ಮವೂ ಇಲ್ಲವೋ ಮತ್ತು ಯಾವುದು ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠವಾಗಿರುವುದೋ ಆ ಧರ್ಮದ ಕುರಿತು ನನಗೆ ಹೇಳು.”

12242002 ವ್ಯಾಸ ಉವಾಚ|

12242002a ಧರ್ಮಂ ತೇ ಸಂಪ್ರವಕ್ಷ್ಯಾಮಿ ಪುರಾಣಮೃಷಿಸಂಸ್ತುತಮ್|

12242002c ವಿಶಿಷ್ಟಂ ಸರ್ವಧರ್ಮೇಭ್ಯಸ್ತಮಿಹೈಕಮನಾಃ ಶೃಣು||

ವ್ಯಾಸನು ಹೇಳಿದನು: “ಪುರಾಣ ಋಷಿಸಂಸ್ತುತವಾದ ಧರ್ಮವನ್ನು ನಿನಗೆ ಹೇಳುತ್ತೇನೆ. ಇದು ಸರ್ವಧರ್ಮಗಳಿಗಿಂತಲೂ ವಿಶಿಷ್ಟವಾಗಿದೆ. ಏಕಮನಸ್ಕನಾಗಿ ಇದನ್ನು ಕೇಳು.

12242003a ಇಂದ್ರಿಯಾಣಿ ಪ್ರಮಾಥೀನಿ ಬುದ್ಧ್ಯಾ ಸಂಯಮ್ಯ ಯತ್ನತಃ|

12242003c ಸರ್ವತೋ ನಿಷ್ಪತಿಷ್ಣೂನಿ ಪಿತಾ ಬಾಲಾನಿವಾತ್ಮಜಾನ್||

ತಂದೆಯು ತನ್ನ ಚಿಕ್ಕ ಮಕ್ಕಳನ್ನು ಸಂಯಮದಲ್ಲಿರಿಸಿಕೊಳ್ಳುವಂತೆ ಎಲ್ಲಕಡೆಗಳಲ್ಲಿಯೂ ಹರಿಯುವ ಸ್ವಭಾವವುಳ್ಳ ಮತ್ತು ಮನಸ್ಸನ್ನು ಕದಡುವ ಇಂದ್ರಿಯಗಳನ್ನು ಪ್ರಯತ್ಮಪೂರ್ವಕವಾಗಿ ಬುದ್ಧಿಯ ಮೂಲಕ ನಿಯಂತ್ರಿಸಿಕೊಳ್ಳಬೇಕು.

12242004a ಮನಸಶ್ಚೇಂದ್ರಿಯಾಣಾಂ ಚ ಹ್ಯೈಕಾಗ್ರ್ಯಂ ಪರಮಂ ತಪಃ|

12242004c ತಜ್ಜ್ಯಾಯಃ ಸರ್ವಧರ್ಮೇಭ್ಯಃ ಸ ಧರ್ಮಃ ಪರ ಉಚ್ಯತೇ||

ಮನಸ್ಸು-ಇಂದ್ರಿಯಗಳನ್ನು ಏಕಾಗ್ರಗೊಳಿಸುವುದೇ ಪರಮ ತಪಸ್ಸು. ಈ ಚಿತ್ತೈಕಾಗ್ರತೆಯು ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠ ಧರ್ಮವೆಂದು ಹೇಳುತ್ತಾರೆ.

12242005a ತಾನಿ ಸರ್ವಾಣಿ ಸಂಧಾಯ ಮನಃಷಷ್ಠಾನಿ ಮೇಧಯಾ|

12242005c ಆತ್ಮತೃಪ್ತ ಇವಾಸೀತ ಬಹು ಚಿಂತ್ಯಮಚಿಂತಯನ್||

ಮನಸ್ಸೇ ಆರನೆಯದಾಗಿರುವ ಆ ಐದು ಇಂದ್ರಿಯಗಳನ್ನೂ ಬುದ್ಧಿಯ ಮೂಲಕ ಸ್ಥಿರಗೊಳಿಸಿ, ಅನೇಕ ಚಿಂತನೆಗಳನ್ನು ಚಿಂತಿಸದೇ, ಆತ್ಮಚಿಂತನೆಯಲ್ಲಿಯೇ ತೃಪ್ತನಾಗಿರುವಂತೆ ಇರಬೇಕು.

12242006a ಗೋಚರೇಭ್ಯೋ ನಿವೃತ್ತಾನಿ ಯದಾ ಸ್ಥಾಸ್ಯಂತಿ ವೇಶ್ಮನಿ|

12242006c ತದಾ ತ್ವಮಾತ್ಮನಾತ್ಮಾನಂ ಪರಂ ದ್ರಕ್ಷ್ಯಸಿ ಶಾಶ್ವತಮ್||

ವಿಷಯಗಳಿಂದ ನಿವೃತ್ತವಾದ ಇಂದ್ರಿಯಗಳು ಶರೀರವೆಂಬ ಮನೆಯಲ್ಲಿ ಸ್ಥಿರವಾಗಿದ್ದಾಗ ನೀನು ಶಾಶ್ವತನೂ ಶ್ರೇಷ್ಠನೂ ಆದ ಪರಮಾತ್ಮನನ್ನು ಕಾಣುತ್ತೀಯೆ.

12242007a ಸರ್ವಾತ್ಮಾನಂ ಮಹಾತ್ಮಾನಂ ವಿಧೂಮಮಿವ ಪಾವಕಮ್|

12242007c ತಂ ಪಶ್ಯಂತಿ ಮಹಾತ್ಮಾನೋ ಬ್ರಾಹ್ಮಣಾ ಯೇ ಮನೀಷಿಣಃ||

ಹೊಗೆಯಿಲ್ಲದ ಬೆಂಕಿಯಂತೆ ಬೆಳಗುತ್ತಿರುವ, ಸರ್ವಾತ್ಮನಾದ ಮತ್ತು ಮಹಾತ್ಮನಾದ ಪರಮಾತ್ಮನನ್ನು ವಿದ್ವಾಂಸರೂ ಮಹಾತ್ಮರೂ ಆದ ಬ್ರಾಹ್ಮಣರು ಕಾಣುತ್ತಾರೆ.

12242008a ಯಥಾ ಪುಷ್ಪಫಲೋಪೇತೋ ಬಹುಶಾಖೋ ಮಹಾದ್ರುಮಃ|

12242008c ಆತ್ಮನೋ ನಾಭಿಜಾನೀತೇ ಕ್ವ ಮೇ ಪುಷ್ಪಂ ಕ್ವ ಮೇ ಫಲಮ್||

12242009a ಏವಮಾತ್ಮಾ ನ ಜಾನೀತೇ ಕ್ವ ಗಮಿಷ್ಯೇ ಕುತೋ ನ್ವಹಮ್|

12242009c ಅನ್ಯೋ ಹ್ಯತ್ರಾಂತರಾತ್ಮಾಸ್ತಿ ಯಃ ಸರ್ವಮನುಪಶ್ಯತಿ||

ಪುಷ್ಪ-ಫಲಭರಿತ ಬಹುಶಾಖೆಗಳುಳ್ಳ ಮಹಾ ವೃಕ್ಷವು ತನ್ನ ಫಲ-ಪುಷ್ಪಗಳು ಎಲ್ಲಿವೆ ಎಂದು ಹೇಗೆ ತಿಳಿದಿರುವುದಿಲ್ಲವೋ ಹಾಗೆ ಜೀವಾತ್ಮನು ತಾನು ಎಲ್ಲಿಗೆ ಹೋಗುತ್ತಿದ್ದೇನೆ ಮತ್ತು ಎಲ್ಲಿಂದ ಬಂದಿದ್ದೇನೆ ಎನ್ನುವುದನ್ನು ತಿಳಿದಿರುವುದಿಲ್ಲ. ಶರೀರದಲ್ಲಿ ಜೀವಾತ್ಮನಲ್ಲದೇ ಬೇರೊಬ್ಬ ಅಂತರಾತ್ಮನೂ ಇದ್ದನೆ. ಅವನು ಎಲ್ಲವನ್ನೂ ನೋಡುತ್ತಿರುತ್ತಾನೆ.

12242010a ಜ್ಞಾನದೀಪೇನ ದೀಪ್ತೇನ ಪಶ್ಯತ್ಯಾತ್ಮಾನಮಾತ್ಮನಾ|

12242010c ದೃಷ್ಟ್ವಾ ತ್ವಮಾತ್ಮನಾತ್ಮಾನಂ ನಿರಾತ್ಮಾ ಭವ ಸರ್ವವಿತ್||

ಜ್ಞಾನದೀಪದ ಬೆಳಕಿನಿಂದ ಜ್ಞಾನಿಯು ತನ್ನಲ್ಲಿಯೇ ಇರುವ ಪರಮಾತ್ಮನನ್ನು ಕಾಣುತ್ತಾನೆ. ನೀನೂ ಕೂಡ ಜೀವಾತ್ಮನ ಮೂಲಕ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡು ಸರ್ವಜ್ಞನೂ ನಿರಭಿಮಾನಿಯೂ ಆಗು.

12242011a ವಿಮುಕ್ತಃ ಸರ್ವಪಾಪೇಭ್ಯೋ ಮುಕ್ತತ್ವಚ ಇವೋರಗಃ|

12242011c ಪರಾಂ ಬುದ್ಧಿಮವಾಪ್ಯೇಹ ವಿಪಾಪ್ಮಾ ವಿಗತಜ್ವರಃ||

ಪೊರೆಯನ್ನು ಕಳಚಿಕೊಂಡ ಹಾವಿನಂತೆ ಸಕಲ ಪಾಪಗಳಿಂದಲೂ ವಿಮುಕ್ತನಾಗಿ ಉತ್ತಮೋತ್ತಮ ಬುದ್ಧಿಯನ್ನಾಶ್ರಯಿಸಿ ಪಾಪರಹಿತನೂ ಚಿಂತಾರಹಿತನೂ ಆಗು.

12242012a ಸರ್ವತಃಸ್ರೋತಸಂ ಘೋರಾಂ ನದೀಂ ಲೋಕಪ್ರವಾಹಿನೀಮ್|

12242012c ಪಂಚೇಂದ್ರಿಯಗ್ರಾಹವತೀಂ ಮನಃಸಂಕಲ್ಪರೋಧಸಮ್||

12242013a ಲೋಭಮೋಹತೃಣಚ್ಚನ್ನಾಂ ಕಾಮಕ್ರೋಧಸರೀಸೃಪಾಮ್|

12242013c ಸತ್ಯತೀರ್ಥಾನೃತಕ್ಷೋಭಾಂ ಕ್ರೋಧಪಂಕಾಂ ಸರಿದ್ವರಾಮ್||

ಎಲ್ಲಕಡೆಗಳಲ್ಲಿ ಹರಿಯುವ ಲೋಕಪ್ರವಾಹನೀ ಈ ಘೋರ ಸಂಸಾರನದಿಯಲ್ಲಿ ಪಂಚಜ್ಞಾನೇಂದ್ರಿಯಗಳು ಮೊಸಳೆಗಳು. ಮನಃಸಂಕಲ್ಪಗಳೇ ಇದರ ತೀರಗಳು. ಲೋಭ-ಮೋಹಗಳು ನದಿಯಲ್ಲಿರುವ ಹುಲ್ಲುಗಳು. ಕಾಮ-ಕ್ರೋಧಗಳು ಅದರಲ್ಲಿರುವ ಸರ್ಪಗಳು. ಸತ್ಯವೇ ಇದರ ಪುಣ್ಯತೀರ್ಥವು. ಅನೃತವು ಕುಲುಕಾಟವು. ಕ್ರೋಧವು ಕೆಸರು.

12242014a ಅವ್ಯಕ್ತಪ್ರಭವಾಂ ಶೀಘ್ರಾಂ ದುಸ್ತರಾಮಕೃತಾತ್ಮಭಿಃ|

12242014c ಪ್ರತರಸ್ವ ನದೀಂ ಬುದ್ಧ್ಯಾ ಕಾಮಗ್ರಾಹಸಮಾಕುಲಾಮ್||

ಅವ್ಯಕ್ತಪ್ರಕೃತಿಯೆಂಬ ಪರ್ವತದಿಂದ ಹುಟ್ಟಿದ, ಅತ್ಯಂತ ವೇಗಯುಕ್ತವಾದ ಈ ನದಿಯನ್ನು ಜಿತೇಂದ್ರಿಯರಲ್ಲದವರಿಗೆ ದಾಟಲು ಸಾಧ್ಯವಾದುದಲ್ಲ. ಕಾಮಗಳೆಂಬ ಮೊಸಳೆಗಳಿಂದ ಇದು ತುಂಬಿಕೊಂಡಿದೆ.

12242015a ಸಂಸಾರಸಾಗರಗಮಾಂ ಯೋನಿಪಾತಾಲದುಸ್ತರಾಮ್|

12242015c ಆತ್ಮಜನ್ಮೋದ್ಭವಾಂ ತಾತ ಜಿಹ್ವಾವರ್ತಾಂ ದುರಾಸದಾಮ್||

ಸಂಸಾರವೆಂಬ ಮಹಾಸಾಗರವನ್ನೇ ಸೇರುವ, ವಾಸನೆಯೆಂಬ ಆಳವನ್ನು ಹೊಂದಿರುವ ಇದನ್ನು ದಾಟುವುದು ದುಷ್ಕರವು. ಇದು ಅವರವರ ಕರ್ಮಗಳಿಂದಲೇ ಹುಟ್ಟಿಕೊಳ್ಳುತ್ತದೆ. ನಾಲಿಗೆಯೇ ಅದರ ಸುಳಿಯಾಗಿದ್ದು ದಾಟಲು ದುಷ್ಕರವಾಗಿದೆ.

12242016a ಯಾಂ ತರಂತಿ ಕೃತಪ್ರಜ್ಞಾ ಧೃತಿಮಂತೋ ಮನೀಷಿಣಃ|

12242016c ತಾಂ ತೀರ್ಣಃ ಸರ್ವತೋಮುಕ್ತೋ ವಿಪೂತಾತ್ಮಾತ್ಮವಿಚ್ಚುಚಿಃ||

12242017a ಉತ್ತಮಾಂ ಬುದ್ಧಿಮಾಸ್ಥಾಯ ಬ್ರಹ್ಮಭೂಯಂ ಗಮಿಷ್ಯಸಿ|

12242017c ಸಂತೀರ್ಣಃ ಸರ್ವಸಂಕ್ಲೇಶಾನ್ ಪ್ರಸನ್ನಾತ್ಮಾ ವಿಕಲ್ಮಷಃ||

ಧೃತಿಮಂತ ಕೃತಪ್ರಜ್ಞ ಮನೀಷಿಣರು ದಾಟಬಲ್ಲ ಆ ನದಿಯನ್ನು ನೀನೂ ಕೂಡ ಶ್ರೇಷ್ಠ ಬುದ್ಧಿಯನ್ನಾಶ್ರಯಿಸಿ ದಾಟು. ಅದರಿಂದ ನೀನು ಸರ್ವಪ್ರಕಾರಗಳಲ್ಲಿ ಮುಕ್ತನಾಗುತ್ತೀಯೆ. ಆತ್ಮವಿದುವಾಗುತ್ತೀಯೆ. ಶುಚಿಯಾಗುತ್ತೀಯೆ. ಬ್ರಹ್ಮಮಯನಾಗುತ್ತೀಯೆ. ಸಕಲವಿಧದ ಸಂಸಾರಬಂಧನಗಳಿಂದ ವಿಮುಕ್ತನಾಗಿ ಪಾಪರಹಿತನಾಗಿ ಪ್ರಸನ್ನಾತ್ಮನಾಗುತ್ತೀಯೆ.

12242018a ಭೂಮಿಷ್ಠಾನೀವ ಭೂತಾನಿ ಪರ್ವತಸ್ಥೋ ನಿಶಾಮಯ|

12242018c ಅಕ್ರುಧ್ಯನ್ನಪ್ರಹೃಷ್ಯಂಶ್ಚ ನನೃಶಂಸಮತಿಸ್ತಥಾ|

12242018e ತತೋ ದ್ರಕ್ಷ್ಯಸಿ ಭೂತಾನಾಂ ಸರ್ವೇಷಾಂ ಪ್ರಭವಾಪ್ಯಯೌ||

ಪರ್ವತಶಿಖರದ ಮೇಲೆ ನಿಂತಿರುವವನು ಭೂಮಿಯ ಮೇಲಿರುವ ಸಮಸ್ತಪ್ರಾಣಿಗಳನ್ನೂ ನೋಡುವಂತೆ ಜ್ಞಾನರೂಪದ ಶಿಖರದ ಮೇಲೆ ನಿಂತು ಸಮಸ್ತಪ್ರಾಣಿಗಳೂ ಸಂಸಾರದಲ್ಲಿ ಸಿಲುಕಿ ಪಡುತ್ತಿರುವ ಅವಸ್ಥೆಯನ್ನು ಗಮನಿಸು. ಕ್ರೋಧ-ಹರ್ಷಗಳನ್ನು ಮತ್ತು ಕ್ರೂರಬುದ್ಧಿಯನ್ನು ತೊರೆ. ಆಗ ನೀನು ಸರ್ವಭೂತಗಳ ಉತ್ಪತ್ತಿ-ಲಯಗಳ ರಹಸ್ಯವನ್ನು ತಿಳಿಯುತ್ತೀಯೆ.

12242019a ಏವಂ ವೈ ಸರ್ವಧರ್ಮೇಭ್ಯೋ ವಿಶಿಷ್ಟಂ ಮೇನಿರೇ ಬುಧಾಃ|

12242019c ಧರ್ಮಂ ಧರ್ಮಭೃತಾಂ ಶ್ರೇಷ್ಠ ಮುನಯಸ್ತತ್ತ್ವದರ್ಶಿನಃ||

ತತ್ತ್ವದರ್ಶಿಗಳಾದ ಶ್ರೇಷ್ಠ ಮುನಿ-ವಿದ್ವಾಂಸರು ಇದನ್ನೇ ಸರ್ವಧರ್ಮಗಳಲ್ಲಿ ವಿಶಿಷ್ಟವೆಂದೂ, ಧರ್ಮಭೃತರ ಧರ್ಮವೆಂದೂ ತಿಳಿದಿದ್ದಾರೆ.

12242020a ಆತ್ಮನೋಽವ್ಯಯಿನೋ ಜ್ಞಾತ್ವಾ ಇದಂ ಪುತ್ರಾನುಶಾಸನಮ್|

12242020c ಪ್ರಯತಾಯ ಪ್ರವಕ್ತವ್ಯಂ ಹಿತಾಯಾನುಗತಾಯ ಚ||

ಪುತ್ರ! ಈ ಉಪದೇಶವು ಅವ್ಯಯನಾದ ಆತ್ಮನ ಜ್ಞಾನವು. ಇದನ್ನು ಹಿತೈಷಿಯಾದ, ವಿಧೇಯನಾದ ಮತ್ತು ಜಿತೇಂದ್ರಿಯನಿಗೆ ಮಾತ್ರ ಉಪದೇಶಿಸಬೇಕು.

12242021a ಆತ್ಮಜ್ಞಾನಮಿದಂ ಗುಹ್ಯಂ ಸರ್ವಗುಹ್ಯತಮಂ ಮಹತ್|

12242021c ಅಬ್ರುವಂ ಯದಹಂ ತಾತ ಆತ್ಮಸಾಕ್ಷಿಕಮಂಜಸಾ||

ಈ ಆತ್ಮಜ್ಞಾನವು ಗುಹ್ಯವಾಗಿದೆ. ಅತ್ಯಂತ ಗಹನವಾಗಿಯೂ ಮಹತ್ತಾಗಿಯೂ ಇದೆ. ಮಗೂ! ನಿನಗೆ ಹೇಳಿರುವ ಈ ಆತ್ಮಜ್ಞಾನವು ನಿಜವಾಗಿಯೂ ನನ್ನ ಪ್ರತ್ಯಕ್ಷಾನುಭವದಿಂದ ಪಡೆದ ಜ್ಞಾನವಾಗಿದೆ.

12242022a ನೈವ ಸ್ತ್ರೀ ನ ಪುಮಾನೇತನ್ನೈವ ಚೇದಂ ನಪುಂಸಕಮ್|

12242022c ಅದುಃಖಮಸುಖಂ ಬ್ರಹ್ಮ ಭೂತಭವ್ಯಭವಾತ್ಮಕಮ್||

ಅದುಃಖವೂ, ಅಸುಖವೂ, ಭೂತ-ಭವಿಷ್ಯ-ವರ್ತಮಾನ ಸ್ವರೂಪವೂ ಆದ ಈ ಬ್ರಹ್ಮವು ಗಂಡಸೂ ಅಲ್ಲ, ಹೆಂಗಸೂ ಅಲ್ಲ ಮತ್ತು ನಪುಂಸಕನೂ ಅಲ್ಲ.

12242023a ನೈತಜ್ಜ್ಞಾತ್ವಾ ಪುಮಾನ್ಸ್ತ್ರೀ ವಾ ಪುನರ್ಭವಮವಾಪ್ನುಯಾತ್|

12242023c ಅಭವಪ್ರತಿಪತ್ತ್ಯರ್ಥಮೇತದ್ವರ್ತ್ಮ ವಿಧೀಯತೇ||

ಪುರುಷನಾಗಲೀ ಸ್ತ್ರೀಯಾಗಲೀ ಈ ಬ್ರಹ್ಮಜ್ಞಾನವನ್ನು ಪಡೆದುಕೊಂಡರೆ ಪುನರ್ಜನ್ಮವನ್ನು ಹೊಂದುವುದಿಲ್ಲ. ಪುನರ್ಜನ್ಮವನ್ನು ಪಡೆಯದಿರುವ ಸಲುವಾಗಿಯೇ ಈ ಧರ್ಮವನ್ನು ಹೇಳಿದ್ದಾರೆ.

12242024a ಯಥಾ ಮತಾನಿ ಸರ್ವಾಣಿ ನ ಚೈತಾನಿ ಯಥಾ ತಥಾ|

12242024c ಕಥಿತಾನಿ ಮಯಾ ಪುತ್ರ ಭವಂತಿ ನ ಭವಂತಿ ಚ||

ಪುತ್ರ! ಇರುವ ಎಲ್ಲ ಮತಗಳನ್ನೂ ಯಥಾವತ್ತಾಗಿ ಹೇಳಿದ್ದೇನೆ. ಈ ಮತಗಳ ಅರಿವು ಮತ್ತು ಅನುಷ್ಠಾನಗಳು ಇರುವುದೂ ಉಂಟು ಮತ್ತು ಇಲ್ಲದಿರುವುದೂ ಉಂಟು.

12242025a ತತ್ ಪ್ರೀತಿಯುಕ್ತೇನ ಗುಣಾನ್ವಿತೇನ

ಪುತ್ರೇಣ ಸತ್ಪುತ್ರಗುಣಾನ್ವಿತೇನ|

12242025c ಪೃಷ್ಟೋ ಹೀದಂ ಪ್ರೀತಿಮತಾ ಹಿತಾರ್ಥಂ

ಬ್ರೂಯಾತ್ಸುತಸ್ಯೇಹ ಯದುಕ್ತಮೇತತ್||

ಸತ್ಪುತ್ರ! ಪ್ರೀತಿಯುಕ್ತನಾದ, ಗುಣವಂತನಾದ ಮತ್ತು ಜಿತೇಂದ್ರಿಯನಾದ ಮಗನು ತಂದೆಯಲ್ಲಿ ಈ ಪ್ರಶ್ನೆಗಳನ್ನು ಕೇಳಿದರೆ ತಂದೆಯು ಸಂತುಷ್ಟಚಿತ್ತದಿಂದ ಆ ಜಿಜ್ಞಾಸು ಮಗನಿಗೆ ನಾನು ಹೇಳಿದಂತೆ ಯಥಾರ್ಥವಾದ ಈ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ದ್ವಿಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತೆರಡನೇ ಅಧ್ಯಾಯವು.

Comments are closed.