Shanti Parva: Chapter 241

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೧

ಜ್ಞಾನದ ಸಾಧನೆ, ಲಕ್ಷಣ ಮತ್ತು ಮಹಿಮೆ (1-14).

12241001 ವ್ಯಾಸ ಉವಾಚ|

12241001a ಸೃಜತೇ ತು ಗುಣಾನ್ಸತ್ತ್ವಂ ಕ್ಷೇತ್ರಜ್ಞಸ್ತ್ವನುತಿಷ್ಠತಿ|

12241001c ಗುಣಾನ್ವಿಕ್ರಿಯತಃ ಸರ್ವಾನುದಾಸೀನವದೀಶ್ವರಃ||

ವ್ಯಾಸನು ಹೇಳಿದನು: “ಪ್ರಕೃತಿಯು ಗುಣಗಳನ್ನು ಸೃಷ್ಟಿಸುತ್ತದೆ. ಕ್ಷೇತ್ರಜ್ಞನಾದ ಆತ್ಮನು ಉದಾಸೀನನಂತೆ ವಿಕಾರಶೀಲವಾದ ಆ ಗುಣಗಳನ್ನು ನೋಡುತ್ತಿರುತ್ತಾನೆ. ಅವನೇ ಆ ಗುಣಗಳಿಗೆ ನಾಯಕನು.

12241002a ಸ್ವಭಾವಯುಕ್ತಂ ತತ್ಸರ್ವಂ ಯದಿಮಾನ್ ಸೃಜತೇ ಗುಣಾನ್|

12241002c ಊರ್ಣನಾಭಿರ್ಯಥಾ ಸೂತ್ರಂ ಸೃಜತೇ ತಂತುವದ್ಗುಣಾನ್||

ಜೇಡರ ಹುಳುವು ತನ್ನ ದೇಹದಿಂದ ದಾರಗಳನ್ನು ಸ್ವಾಭಾವಿಕವಾಗಿಯೇ ಸೃಷ್ಟಿಸುವಂತೆ ಪ್ರಕೃತಿಯೂ ತ್ರಿಗುಣಾತ್ಮಕವಾದ ಸಮಸ್ತ ಪದಾರ್ಥಗಳನ್ನೂ ಸೃಷ್ಟಿಸುತ್ತದೆ.

12241003a ಪ್ರಧ್ವಸ್ತಾ ನ ನಿವರ್ತಂತೇ ಪ್ರವೃತ್ತಿರ್ನೋಪಲಭ್ಯತೇ|

12241003c ಏವಮೇಕೇ ವ್ಯವಸ್ಯಂತಿ ನಿವೃತ್ತಿರಿತಿ ಚಾಪರೇ||

ತತ್ತ್ವಜ್ಞಾನದಿಂದ ಈ ಗುಣಗಳು ನಾಶಹೊಂದಿದರೂ ಅವು ಜ್ಞಾನಿಯನ್ನು ಬಿಟ್ಟುಹೋಗದೇ ಪ್ರವೃತ್ತವಾಗಿರುತ್ತವೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ತತ್ತ್ವಜ್ಞಾನವಾದೊಡನೆ ತ್ರಿಗುಣಗಳು ಸಂಪೂರ್ಣವಾಗಿ ಬಿಟ್ಟುಹೋಗುತ್ತವೆ ಎಂದು ಹೇಳುತ್ತಾರೆ.

12241004a ಉಭಯಂ ಸಂಪ್ರಧಾರ್ಯೈತದಧ್ಯವಸ್ಯೇದ್ಯಥಾಮತಿ|

12241004c ಅನೇನೈವ ವಿಧಾನೇನ ಭವೇದ್ಗರ್ಭಶಯೋ ಮಹಾನ್||

ಈ ಎರಡು ಅಭಿಪ್ರಾಯಗಳನ್ನೂ ಚೆನ್ನಾಗಿ ಗ್ರಹಿಸಿ ಯಥಾಮತಿಯಾಗಿ ಪರ್ಯಾಲೋಚಿಸಬೇಕು. ಈ ವಿಧಾನದಿಂದಲೇ ಹೃದಯಗರ್ಭದಲ್ಲಿ ಮಲಗಿರುವ ಜೀವನು ಮಹಾತ್ಮನಾಗುತ್ತಾನೆ.

12241005a ಅನಾದಿನಿಧನಂ ನಿತ್ಯಮಾಸಾದ್ಯ ವಿಚರೇನ್ನರಃ|

12241005c ಅಕ್ರುಧ್ಯನ್ನಪ್ರಹೃಷ್ಯಂಶ್ಚ ನಿತ್ಯಂ ವಿಗತಮತ್ಸರಃ||

ಅನಾದಿನಿಧನ ಆತ್ಮನನ್ನು ನಿತ್ಯವೂ ಬಳಿಸಾರುವ ನರನು ಹರ್ಷ-ಕ್ರೋಧ-ಈರ್ಷ್ಯಾ-ದ್ವೇಷ ರಹಿತನಾಗಿ ಸಂಚರಿಸುತ್ತಿರುತ್ತಾನೆ.

12241006a ಇತ್ಯೇವಂ ಹೃದಯಗ್ರಂಥಿಂ ಬುದ್ಧಿಚಿಂತಾಮಯಂ ದೃಢಮ್|

12241006c ಅತೀತ್ಯ ಸುಖಮಾಸೀತ ಅಶೋಚಂಶ್ಚಿನ್ನಸಂಶಯಃ||

ಹೀಗೆ ಚಿಂತಾಮಯವಾದ ದೃಢ ಬುದ್ಧಿಯಿಂದ ಹೃದಯಗ್ರಂಥಿಯನ್ನು ಭೇದಿಸಿ ಶೋಕ-ಸಂದೇಹರಹಿತನಾಗಿ ಸುಖವನ್ನು ಹೊಂದಬೇಕು.

12241007a ತಪ್ಯೇಯುಃ ಪ್ರಚ್ಯುತಾಃ ಪೃಥ್ವ್ಯಾ ಯಥಾ ಪೂರ್ಣಾಂ ನದೀಂ ನರಾಃ|

12241007c ಅವಗಾಢಾ ಹ್ಯವಿದ್ವಾಂಸೋ ವಿದ್ಧಿ ಲೋಕಮಿಮಂ ತಥಾ||

ಈಜಲು ತಿಳಿಯದ ನರರು ದಡದಿಂದ ಜಾರಿ ತುಂಬಿದ ನದಿಯಲ್ಲಿ ಬಿದ್ದು ಹೇಗೆ ಮುಳುಗಿಹೋಗುತ್ತಾರೋ ಹಾಗೆ ಅವಿದ್ವಾಂಸರು ಈ ಲೋಕದಲ್ಲಿ ಮುಳುಗಿ ಪರಿತಪಿಸುತ್ತಾರೆ ಎನ್ನುವುದನ್ನು ತಿಳಿ.

12241008a ನ ತು ತಾಮ್ಯತಿ ವೈ ವಿದ್ವಾನ್ ಸ್ಥಲೇ ಚರತಿ ತತ್ತ್ವವಿತ್|

12241008c ಏವಂ ಯೋ ವಿಂದತೇಽಽತ್ಮಾನಂ ಕೇವಲಂ ಜ್ಞಾನಮಾತ್ಮನಃ||

ಆದರೆ ಈಜಲು ತಿಳಿದವನು ನದಿಯಲ್ಲಿಯೂ ಭೂಮಿಯ ಮೇಲೆ ಹೇಗೋ ಹಾಗೆ ಚಲಿಸುತ್ತಾನೆ. ಹೀಗೆ ಜ್ಞಾನಸ್ವರೂಪನಾದ ಆತ್ಮವನ್ನು ಸಾಕ್ಷಾತ್ಕರಿಸಿಕೊಂಡ ತತ್ತ್ವವಿದುವು ಸಂಸಾರಸಾಗರವನ್ನು ಬಹಳ ಸುಲಭವಾಗಿ ದಾಟಿಬಿಡುತ್ತಾನೆ.

12241009a ಏವಂ ಬುದ್ಧ್ವಾ ನರಃ ಸರ್ವಾನ್ ಭೂತಾನಾಮಾಗತಿಂ ಗತಿಮ್|

12241009c ಸಮವೇಕ್ಷ್ಯ ಶನೈಃ ಸಮ್ಯಗ್ಲಭತೇ ಶಮಮುತ್ತಮಮ್[1]||

ಹೀಗೆ ಸರ್ವ ಭೂತಗಳ ಆವಿರ್ಭಾವ ಮತ್ತು ಲಯಗಳ ರಹಸ್ಯವನ್ನು ತಿಳಿದಿರುವ ಮತ್ತು ಅವುಗಳಲ್ಲಿನ ಏರು-ಪೇರುಗಳ ಕುರಿತು ವಿಚಾರಮಾಡುವ ನರನು ಪರಮಶಾಂತಿಯನ್ನು ಹೊಂದುತ್ತಾನೆ.

12241010a ಏತದ್ವೈ ಜನ್ಮಸಾಮರ್ಥ್ಯಂ ಬ್ರಾಹ್ಮಣಸ್ಯ ವಿಶೇಷತಃ|

12241010c ಆತ್ಮಜ್ಞಾನಂ ಶಮಶ್ಚೈವ ಪರ್ಯಾಪ್ತಂ ತತ್ಪರಾಯಣಮ್||

ಆತ್ಮಜ್ಞಾನ ಮತ್ತು ಶಮೆ (ಮನಸ್ಸು ಮತ್ತು ಇಂದ್ರಿಯಗಳ ಸಂಯಮ) ಇವುಗಳೇ ಮೋಕ್ಷಪ್ರಾಪ್ತಿಗೆ ಸಾಕಾಗುತ್ತವೆ. ಮನುಷ್ಯನಾಗಿರುವ, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣನಾಗಿರುವವನಿಗೆ, ಇದೇ ಜನ್ಮಸಾಮಾರ್ಥ್ಯವು. ಇದೇ ಅವರಿಗೆ ಪರಾಯಣವು.

12241011a ಏತದ್ಬುದ್ಧ್ವಾ ಭವೇದ್ಬುದ್ಧಃ ಕಿಮನ್ಯದ್ಬುದ್ಧಲಕ್ಷಣಮ್|

12241011c ವಿಜ್ಞಾಯೈತದ್ವಿಮುಚ್ಯಂತೇ ಕೃತಕೃತ್ಯಾ ಮನೀಷಿಣಃ||

ಆತ್ಮಜ್ಞಾನವನ್ನು ತಿಳಿದವನು ಬುದ್ಧನಾಗುತ್ತಾನೆ. ಆತ್ಮಜ್ಞಾನ ಮತ್ತು ಶಮೆಗಳಲ್ಲದೇ ಬುದ್ಧನ ಲಕ್ಷಣಗಳ್ಯಾವುದಾದರೂ ಏನಿದೆ? ಈ ರಹಸ್ಯವನ್ನು ತಿಳಿದ ಮನೀಷಿಣರು ಕೃತಕೃತ್ಯರಾಗಿ ಮೋಕ್ಷವನ್ನು ಹೊಂದುತ್ತಾರೆ.

12241012a ನ ಭವತಿ ವಿದುಷಾಂ ಮಹದ್ಭಯಂ

ಯದವಿದುಷಾಂ ಸುಮಹದ್ಭಯಂ ಭವೇತ್|

12241012c ನ ಹಿ ಗತಿರಧಿಕಾಸ್ತಿ ಕಸ್ಯ ಚಿದ್

ಭವತಿ ಹಿ ಯಾ ವಿದುಷಃ ಸನಾತನೀ||

ಅಜ್ಞಾನಿಗಳಿಗೆ ಇರುವ ಮಹಾಭಯವು ಜ್ಞಾನಿಗಳಿಗೆ ಇರುವುದಿಲ್ಲ. ಜ್ಞಾನಿಗಳಿಗೆ ದೊರೆಯುವ ಸನಾತನ ಗತಿಗಿಂತ ಅಧಿಕವಾದ ಗತಿಯು ಬೇರೆ ಯಾವುದೂ ಇಲ್ಲ.

12241013a ಲೋಕಮಾತುರಮಸೂಯತೇ ಜನಸ್

ತತ್ತದೇವ ಚ ನಿರೀಕ್ಷ್ಯ ಶೋಚತೇ|

12241013c ತತ್ರ ಪಶ್ಯ ಕುಶಲಾನಶೋಚತೋ

ಯೇ ವಿದುಸ್ತದುಭಯಂ ಕೃತಾಕೃತಮ್||

ಕೆಲವರು ದುಃಖಿಗಳನ್ನೂ ರೋಗಿಗಳನ್ನೂ ನೋಡಿ ಅವರಲ್ಲಿ ದೋಷಗಳನ್ನು ಭಾವಿಸುತ್ತಾರೆ. ಮತ್ತೆ ಕೆಲವರು ಅವರನ್ನು ನೋಡಿ ಶೋಕಪಡುತ್ತಾರೆ. ಆದರೆ ಕಾರ್ಯ-ಕಾರಣಗಳ ತತ್ತ್ವವನ್ನು ತಿಳಿದಿರುವವರು ಅಂಥವರನ್ನು ನೋಡಿ ಶೋಕಪಡುವುದಿಲ್ಲ ಅಥವಾ ದೋಷವೆಣಿಸುವುದಿಲ್ಲ. ಅಂಥವರನ್ನೇ ನೀನು ಕುಶಲರೆಂದು ತಿಳಿ.

12241014a ಯತ್ಕರೋತ್ಯನಭಿಸಂಧಿಪೂರ್ವಕಂ

ತಚ್ಚ ನಿರ್ಣುದತಿ ಯತ್ಪುರಾ ಕೃತಮ್|

12241014c ನ ಪ್ರಿಯಂ ತದುಭಯಂ ನ ಚಾಪ್ರಿಯಂ

ತಸ್ಯ ತಜ್ಜನಯತೀಹ ಕುರ್ವತಃ||

ನಿಷ್ಕಾಮಭಾವದಿಂದ ವಿವೇಕಿಯು ಮಾಡಿದ ಕರ್ಮಗಳು ಅವನು ಹಿಂದೆ ಮಾಡಿದ ಅಶುಭಕರ್ಮದ ದುಷ್ಫಲಗಳನ್ನೂ ತೊಡೆದುಹಾಕುತ್ತದೆ. ನಿಷ್ಕಾಮ ಕರ್ಮವು ಅವನಿಗೆ ಇಹದಲ್ಲಿಯಾಗಲೀ ಪರದಲ್ಲಿಯಾಗಲೀ ಪ್ರಿಯವನ್ನಾಗಲೀ ಅಪ್ರಿಯವನ್ನಾಗಲೀ ಉಂಟುಮಾಡುವುದಿಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಏಕಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತೊಂದನೇ ಅಧ್ಯಾಯವು.

[1] ಸಮವೇಕ್ಷ್ಯ ಚ ವೈಷಮ್ಯಂ ಲಭತೇ ಶುಭಮುತ್ತಮಮ್| (ಭಾರತ ದರ್ಶನ).

Comments are closed.