Shanti Parva: Chapter 240

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೪೦

ಬುದ್ಧಿಯ ಶ್ರೇಷ್ಠತೆ ಮತ್ತು ಪ್ರಕೃತಿ-ಪುರುಷ ವಿವೇಚನೆ (1-22).

12240001 ವ್ಯಾಸ ಉವಾಚ|

12240001a ಮನಃ ಪ್ರಸೃಜತೇ ಭಾವಂ ಬುದ್ಧಿರಧ್ಯವಸಾಯಿನೀ|

12240001c ಹೃದಯಂ ಪ್ರಿಯಾಪ್ರಿಯೇ ವೇದ ತ್ರಿವಿಧಾ ಕರ್ಮಚೋದನಾ||

ವ್ಯಾಸನು ಹೇಳಿದನು: “ಮೂರು ವಿಧದ ಕರ್ಮಚೋದನೆಗಳಾಗುತ್ತವೆ: ಮನಸ್ಸು ಕರ್ಮಮಾಡುವ ಸಂಕಲ್ಪ-ಭಾವವನ್ನು ಹುಟ್ಟಿಸುತ್ತದೆ, ಬುದ್ಧಿಯು ಆ ಸಂಕಲ್ಪವನ್ನು ಮಾಡಬೇಕು ಅಥವಾ ಮಾಡಬಾರದೆಂದು ನಿಶ್ಚಯಿಸುತ್ತದೆ, ಮತ್ತು ಅಂತಃಕರಣವು ಕರ್ಮದಿಂದಾಗುವ ಪ್ರಿಯ-ಅಪ್ರಿಯಗಳನ್ನು ಅನುಭವಿಸುತ್ತದೆ.

12240002a ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಃ ಪರಮಂ ಮನಃ|

12240002c ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಪರೋ ಮತಃ||

ಇಂದ್ರಿಯಗಳಿಗಿಂತಲೂ ಇಂದ್ರಿಯವಿಷಯಗಳು ಶ್ರೇಷ್ಠವಾದವು. ಇಂದ್ರಿಯಾರ್ಥಗಳಿಗಿಂತಲೂ ಮನಸ್ಸು ಶ್ರೇಷ್ಠವಾದುದು, ಮನಸ್ಸಿಗಿಂತಲೂ ಬುದ್ಧಿಯು ಶ್ರೇಷ್ಠವಾದುದು. ಬುದ್ಧಿಗಿಂತಲೂ ಆತ್ಮನು ಶ್ರೇಷ್ಠನು.

12240003a ಬುದ್ಧಿರಾತ್ಮಾ ಮನುಷ್ಯಸ್ಯ ಬುದ್ಧಿರೇವಾತ್ಮನೋಽಽತ್ಮಿಕಾ|

12240003c ಯದಾ ವಿಕುರುತೇ ಭಾವಂ ತದಾ ಭವತಿ ಸಾ ಮನಃ||

ಬುದ್ಧಿಯೇ ಮನುಷ್ಯನ ಆತ್ಮವು. ವಿಶುದ್ಧ ಬುದ್ಧಿಯು ಆತ್ಮನನ್ನು ಸೇರಿ ಆತ್ಮವೇ ಆಗುತ್ತದೆ. ಅದೇ ಬುದ್ಧಿಯು ಆತ್ಮನ ಸಂಬಂಧವನ್ನು ಬಿಟ್ಟು ತನ್ನಲ್ಲಿಯೇ ಇಂದ್ರಿಯಗಳ ವಿಷಯಗಳನ್ನು ಗ್ರಹಿಸಲು ಆಸಕ್ತವಾಗಿ ವಿಕೃತ ಭಾವವನ್ನು ಹೊಂದಿದಾಗ ಮನಸ್ಸೆಂದು ಕರೆಯಲ್ಪಡುತ್ತದೆ.

12240004a ಇಂದ್ರಿಯಾಣಾಂ ಪೃಥಗ್ಭಾವಾದ್ಬುದ್ಧಿರ್ವಿಕ್ರಿಯತೇ ಹ್ಯಣು[1]|

12240004c ಶೃಣ್ವತೀ ಭವತಿ ಶ್ರೋತ್ರಂ ಸ್ಪೃಶತೀ ಸ್ಪರ್ಶ ಉಚ್ಯತೇ||

ಇಂದ್ರಿಯಗಳು ಪ್ರತ್ಯೇಕವಾಗಿರುವುದರಿಂದ ಬುದ್ಧಿಯೂ ಅವುಗಳಿಗೆ ತಕ್ಕಂತೆ ವಿಕಾರವನ್ನು ಹೊಂದುತ್ತದೆ. ಕೇಳುವಾಗ ಬುದ್ಧಿಯು ಶ್ರೋತ್ರರೂಪವಾಗಿರುತ್ತದೆ. ಮುಟ್ಟಿದಾಗ ಅದು ಸ್ಪರ್ಶರೂಪವಾಗುತ್ತದೆ.

12240005a ಪಶ್ಯಂತೀ ಭವತೇ ದೃಷ್ಟೀ ರಸತೀ ರಸನಂ ಭವೇತ್|

12240005c ಜಿಘ್ರತೀ ಭವತಿ ಘ್ರಾಣಂ ಬುದ್ಧಿರ್ವಿಕ್ರಿಯತೇ ಪೃಥಕ್||

ನೋಡುವಾಗ ಅದು ದೃಷ್ಟಿಯಾಗುತ್ತದೆ. ರುಚಿನೋಡುವಾಗ ಅದು ರುಚಿಯಾಗುತ್ತದೆ. ಮೂಸುವಾಗ ಅದು ಘ್ರಾಣವಾಗುತ್ತದೆ. ಹೀಗೆ ಬುದ್ಧಿಯು ಪ್ರತ್ಯೇಕ ಪ್ರತ್ಯೇಕವಾಗಿ ವಿಕಾರಗೊಳ್ಳುತ್ತದೆ.

12240006a ಇಂದ್ರಿಯಾಣೀತಿ ತಾನ್ಯಾಹುಸ್ತೇಷ್ವದೃಶ್ಯಾಧಿತಿಷ್ಠತಿ|

12240006c ತಿಷ್ಠತೀ ಪುರುಷೇ ಬುದ್ಧಿಸ್ತ್ರಿಷು ಭಾವೇಷು ವರ್ತತೇ||

ಬುದ್ಧಿಯ ಈ ವಿಕಾರಗಳನ್ನೇ ಇಂದ್ರಿಯಗಳೆಂದು ಹೇಳುತ್ತಾರೆ. ಪುರುಷನು ಆ ಎಲ್ಲ ಇಂದ್ರಿಯಗಳಲ್ಲಿಯೂ ಅಧಿಷ್ಠಿತನಾಗಿದ್ದಾನೆ. ಬುದ್ಧಿಯು ಪುರುಷನಲ್ಲಿ ಅಧಿಷ್ಠಿತಗೊಂಡಿದ್ದು ಸತ್ತ್ವ-ರಜ-ತಮಗಳೆಂಬ ಮೂರು ಭಾವಗಳಿಂದ ಕೂಡಿರುತ್ತದೆ.

12240007a ಕದಾ ಚಿಲ್ಲಭತೇ ಪ್ರೀತಿಂ ಕದಾ ಚಿದಪಿ ಶೋಚತೇ|

12240007c ನ ಸುಖೇನ ನ ದುಃಖೇನ ಕದಾ ಚಿದಿಹ ಯುಜ್ಯತೇ||

ಇದರಿಂದಾಗಿ ಬುದ್ಧಿಯು ಕೆಲವೊಮ್ಮೆ ಪ್ರೀತಿಯುಕ್ತವಾಗಿರುತ್ತದೆ. ಕೆಲವೊಮ್ಮೆ ಶೋಕದಲ್ಲಿರುತ್ತದೆ. ಕೆಲವೊಮ್ಮೆ ಸುಖ-ದುಃಖಗಳೆರಡೂ ಇಲ್ಲದೇ ಮೋಹವಶವಾಗಿರುತ್ತದೆ.

12240008a ಸೇಯಂ ಭಾವಾತ್ಮಿಕಾ ಭಾವಾಂಸ್ತ್ರೀನೇತಾನತಿವರ್ತತೇ|

12240008c ಸರಿತಾಂ ಸಾಗರೋ ಭರ್ತಾ ಮಹಾವೇಲಾಮಿವೋರ್ಮಿಮಾನ್||

ಮಹಾ ಅಲೆಗಳನ್ನು ಹೊಂದಿರುವ ನದಿಗಳ ಗಂಡ ಸಾಗರನು ವಿಶಾಲ ತೀರಪ್ರದೇಶಗಳನ್ನೂ ಉಲ್ಲಂಘಿಸುವಂತೆ ಸತ್ತ್ವ-ರಜಸ್ತಮೋಭಾವಗಳನ್ನು ಹೊಂದಿರುವ ಬುದ್ಧಿಯು ಈ ಮೂರನ್ನೂ ಅತಿಕ್ರಮಿಸುತ್ತದೆ.

12240009a ಯದಾ ಪ್ರಾರ್ಥಯತೇ ಕಿಂ ಚಿತ್ತದಾ ಭವತಿ ಸಾ ಮನಃ|

12240009c ಅಧಿಷ್ಠಾನಾನಿ ವೈ ಬುದ್ಧ್ಯಾ ಪೃಥಗೇತಾನಿ ಸಂಸ್ಮರೇತ್|

12240009e ಇಂದ್ರಿಯಾಣ್ಯೇವ ಮೇಧ್ಯಾನಿ ವಿಜೇತವ್ಯಾನಿ ಕೃತ್ಸ್ನಶಃ||

ಇಂದ್ರಿಯಗಳನ್ನು ಬಯಸಿದಾಗ ಬುದ್ಧಿಯು ಮನಸ್ಸಾಗುತ್ತದೆ. ಇಂದ್ರಿಯಗಳ ಐದು ಪ್ರತ್ಯೇಕ ಭಾವಗಳೂ ಬುದ್ಧಿಯಲ್ಲಿಯೇ ಅಡಗಿವೆಯೆಂದು ತಿಳಿಯಬೇಕು. ಇಂದ್ರಿಯಗಳೇ ಮೇಧಗಳು. ಅವುಗಳನ್ನು ಸಂಪೂರ್ಣವಾಗಿ ಜಯಿಸಬೇಕು.

12240010a ಸರ್ವಾಣ್ಯೇವಾನುಪೂರ್ವ್ಯೇಣ ಯದ್ಯನ್ನಾನುವಿಧೀಯತೇ|

12240010c ಅವಿಭಾಗಗತಾ ಬುದ್ಧಿರ್ಭಾವೇ ಮನಸಿ ವರ್ತತೇ|

12240010e ಪ್ರವರ್ತಮಾನಂ ತು ರಜಃ ಸತ್ತ್ವಮಪ್ಯನುವರ್ತತೇ||

ಅವಿಭಾಜ್ಯವಾದ ಬುದ್ಧಿಯು ಐದು ಇಂದ್ರಿಯಗಳನ್ನೂ ಅನುಕ್ರಮವಾಗಿ ಅನುಸರಿಸುತ್ತಾ ಹೋಗುತ್ತಿರುತ್ತದೆ. ಆಗ ಅದು ಮನಸ್ಸಿನಂತೆ ವರ್ತಿಸುತ್ತದೆ.

12240011a ಯೇ ಚೈವ ಭಾವಾ ವರ್ತಂತೇ ಸರ್ವ ಏಷ್ವೇವ ತೇ ತ್ರಿಷು|

12240011c ಅನ್ವರ್ಥಾಃ ಸಂಪ್ರವರ್ತಂತೇ ರಥನೇಮಿಮರಾ ಇವ||

ಸಾತ್ತ್ವಿಕಾದಿ ಎಲ್ಲ ಭಾವಗಳೂ ಮನೋಬುದ್ಧ್ಯಹಂಕಾರಾದಿ ಮೂರರಲ್ಲಿ ರಥಚಕ್ರದಲ್ಲಿರುವ ಅರೆಕಾಲುಗಳಂತೆ ಅನ್ವರ್ಥನಾಮಗಳಿಂದ ಇರುತ್ತವೆ.

12240012a ಪ್ರದೀಪಾರ್ಥಂ ನರ[2] ಕುರ್ಯಾದಿಂದ್ರಿಯೈರ್ಬುದ್ಧಿಸತ್ತಮೈಃ|

12240012c ನಿಶ್ಚರದ್ಭಿರ್ಯಥಾಯೋಗಮುದಾಸೀನೈರ್ಯದೃಚ್ಚಯಾ||

ಬುದ್ಧಿಯ ಅಧೀನದಲ್ಲಿರುವ ಉದಾಸೀನವಾದ ಮತ್ತು ವಿಷಯಗಳ ಕಡೆಗೆ ಸ್ವೇಚ್ಛೆಯಿಂದ ಸಂಚರಿಸುವ ಇಂದ್ರಿಯಗಳೊಡನೆ ಮನುಷ್ಯನ ಬುದ್ಧಿಯು ದೀಪದ ಕಾರ್ಯವನ್ನು ಮಾಡುತ್ತದೆ.

12240013a ಏವಂಸ್ವಭಾವಮೇವೇದಮಿತಿ ವಿದ್ವಾನ್ನ ಮುಹ್ಯತಿ|

12240013c ಅಶೋಚನ್ನಪ್ರಹೃಷ್ಯಂಶ್ಚ ನಿತ್ಯಂ ವಿಗತಮತ್ಸರಃ||

ಇದೇ ಸ್ವಭಾವವೆಂದು ತಿಳಿದಿರುವ ವಿದ್ವಾಂಸನು ಮೋಹಗೊಳ್ಳುವುದಿಲ್ಲ. ನಿತ್ಯವೂ ಮತ್ಸರಗಳನ್ನು ತೊರೆದು ಶೋಕಿಸುವುದೂ ಇಲ್ಲ. ಹರ್ಷ ಪಡುವುದೂ ಇಲ್ಲ.

12240014a ನ ಹ್ಯಾತ್ಮಾ ಶಕ್ಯತೇ ದ್ರಷ್ಟುಮಿಂದ್ರಿಯೈಃ ಕಾಮಗೋಚರೈಃ|

12240014c ಪ್ರವರ್ತಮಾನೈರನಯೇ ದುರ್ಧರೈರಕೃತಾತ್ಮಭಿಃ||

ಅನ್ಯಾಯ ಮತ್ತು ಪಾಪಕರ್ಮಗಳಲ್ಲಿ ತೊಡಗಿರುವ ಅಕೃತಾತ್ಮರು ಕಾಮಗೋಚರ ಇಂದ್ರಿಯಗಳ ಮೂಲಕ ಆತ್ಮನನ್ನು ನೋಡಲು ಶಕ್ಯರಾಗಿರುವುದಿಲ್ಲ.

12240015a ತೇಷಾಂ ತು ಮನಸಾ ರಶ್ಮೀನ್ಯದಾ ಸಮ್ಯಙ್ನಿಯಚ್ಚತಿ|

12240015c ತದಾ ಪ್ರಕಾಶತೇ ಹ್ಯಾತ್ಮಾ ಘಟೇ ದೀಪ ಇವ ಜ್ವಲನ್|

12240015e ಸರ್ವೇಷಾಮೇವ ಭೂತಾನಾಂ ತಮಸ್ಯಪಗತೇ ಯಥಾ||

ಮನಸ್ಸಿನ ಕಡಿವಾಣಗಳಿಂದ ಆ ಇಂದ್ರಿಯಗಳನ್ನು ಚೆನ್ನಾಗಿ ನಿಯಂತ್ರಿಸಿಕೊಂಡಾಗ, ಕತ್ತಲೆಯು ಕಳೆದಾಗ ಎಲ್ಲ ಭೂತಗಳೂ ಕಾಣಿಸಿಕೊಳ್ಳುವಂತೆ, ಆತ್ಮನು ಘಟದಲ್ಲಿ ಉರಿಯುತ್ತಿರುವ ದೀಪದಂತೆ ಪ್ರಕಾಶಿತಗೊಳ್ಳುತ್ತದೆ.

12240016a ಯಥಾ ವಾರಿಚರಃ ಪಕ್ಷೀ ನ ಲಿಪ್ಯತಿ ಜಲೇ ಚರನ್|

12240016c ಏವಮೇವ ಕೃತಪ್ರಜ್ಞೋ ನ ದೋಷೈರ್ವಿಷಯಾಂಶ್ಚರನ್|

12240016e ಅಸಜ್ಜಮಾನಃ ಸರ್ವೇಷು ನ ಕಥಂ ಚನ ಲಿಪ್ಯತೇ||

ನೀರಿನ ಮೇಲೆ ನಡೆಯುವ ಹಕ್ಕಿಯು ನೀರಿನ ಮೇಲೆ ನಡೆದರೂ ನೀರಿನಿಂದ ಹೇಗೆ ತೋಯಲ್ಪಡುವುದಿಲ್ಲವೋ ಹಾಗೆ ಕೃತಪ್ರಜ್ಞನು ಎಲ್ಲ ವಿಷಯ ದೋಷಗಳಲ್ಲಿ ಆಸಕ್ತನಾಗಿ ನಡೆದುಕೊಂಡರೂ ಅವುಗಳ ದೋಷಗಳಿಂದ ಯಾವ ರೀತಿಯಲ್ಲಿಯೂ ಲಿಪ್ತನಾಗುವುದಿಲ್ಲ.

12240017a ತ್ಯಕ್ತ್ವಾ ಪೂರ್ವಕೃತಂ ಕರ್ಮ ರತಿರ್ಯಸ್ಯ ಸದಾತ್ಮನಿ|

12240017c ಸರ್ವಭೂತಾತ್ಮಭೂತಸ್ಯ ಗುಣಮಾರ್ಗೇಷ್ವಸಜ್ಜತಃ||

ಪೂರ್ವಕೃತಕರ್ಮಗಳನ್ನು ತ್ಯಜಿಸಿ ಸದಾ ಆತ್ಮನಲ್ಲಿ ನಿರತನಾಗಿರುವ ಸರ್ವಭೂತಾತ್ಮಭೂತನು ಗುಣಗಳ ಮಾರ್ಗದಲ್ಲಿ ಹೋಗುವುದಿಲ್ಲ.

12240018a ಸತ್ತ್ವಮಾತ್ಮಾ ಪ್ರಸವತಿ ಗುಣಾನ್ವಾಪಿ ಕದಾ ಚ ನ|

12240018c ನ ಗುಣಾ ವಿದುರಾತ್ಮಾನಂ ಗುಣಾನ್ವೇದ ಸ ಸರ್ವದಾ||

ಆತ್ಮನು ಎಂದೂ ಸತ್ತ್ವವೇ ಮೊದಲಾದ ಗುಣಗಳನ್ನು ಹುಟ್ಟಿಸುವುದಿಲ್ಲ. ಗುಣಗಳು ಆತ್ಮವನ್ನು ತಿಳಿದುಕೊಂಡಿರುವುದಿಲ್ಲ. ಆದರೆ ಆತ್ಮನು ಗುಣಗಳನ್ನು ಸರ್ವದಾ ತಿಳಿದಿರುತ್ತಾನೆ.

12240019a ಪರಿದ್ರಷ್ಟಾ ಗುಣಾನಾಂ ಸ ಸ್ರಷ್ಟಾ ಚೈವ ಯಥಾತಥಮ್|

12240019c ಸತ್ತ್ವಕ್ಷೇತ್ರಜ್ಞಯೋರೇತದಂತರಂ ವಿದ್ಧಿ ಸೂಕ್ಷ್ಮಯೋಃ||

ಅವನು ಗುಣಗಳ ಮತ್ತು ಅವುಗಳ ಸೃಷ್ಟಾರ ಬುದ್ಧಿಯ ಪರಿದ್ರಷ್ಟನು. ಸೂಕ್ಷ್ಮವಾಗಿರುವ ಬುದ್ಧಿ ಮತ್ತು ಆತ್ಮಗಳ ನಡುವಿನ ಈ ಅಂತರವನ್ನು ನೀನು ತಿಳಿದುಕೋ.

12240020a ಸೃಜತೇ ತು ಗುಣಾನೇಕ ಏಕೋ ನ ಸೃಜತೇ ಗುಣಾನ್|

12240020c ಪೃಥಗ್ಭೂತೌ ಪ್ರಕೃತ್ಯಾ ತೌ ಸಂಪ್ರಯುಕ್ತೌ ಚ ಸರ್ವದಾ||

ಇವುಗಳಲ್ಲಿ ಒಂದು ಅಂದರೆ ಬುದ್ಧಿಯು ಗುಣಗಳನ್ನು ಸೃಷ್ಟಿಸುತ್ತದೆ. ಇನ್ನೊಂದು ಅಂದರೆ ಆತ್ಮವು ಗುಣಗಳನ್ನು ಸೃಷ್ಟಿಸುವುದಿಲ್ಲ. ಸ್ವಾಭಾವಿಕವಾಗಿ ಅವೆರಡೂ ಬೇರೆ ಬೇರೆಯಾಗಿದ್ದರೂ ಸರ್ವದಾ ಅವು ಒಂದುಗೂಡಿಕೊಂಡೇ ಇರುತ್ತವೆ.

12240021a ಯಥಾ ಮತ್ಸ್ಯೋಽದ್ಭಿರನ್ಯಃ ಸನ್ಸಂಪ್ರಯುಕ್ತೌ ತಥೈವ ತೌ|

12240021c ಮಶಕೋದುಂಬರೌ ಚಾಪಿ ಸಂಪ್ರಯುಕ್ತೌ ಯಥಾ ಸಹ||

ನೀರಿನಲ್ಲಿರುವ ಮೀನು ನೀರಿಗಿಂತ ಭಿನ್ನವಾಗಿದ್ದರೂ ಯಾವಾಗಲೂ ಅದು ನೀರಿನೊಟ್ಟಿಗೇ ಇರುತ್ತದೆ. ಅತ್ತಿಹಣ್ಣು ಮತ್ತು ಹುಳುಗಳು ಬೇರೆಬೇರೆಯಾಗಿದ್ದರೂ ಅವು ಯಾವಾಗಲೂ ಒಟ್ಟಾಗಿಯೇ ಇರುತ್ತವೆ. ಹಾಗೆ ಬುದ್ಧಿ ಮತ್ತು ಆತ್ಮಗಳು ಬೇರೆಯಾಗಿದ್ದರೂ ಒಟ್ಟಾಗಿಯೇ ಇರುತ್ತವೆ.

12240022a ಇಷೀಕಾ ವಾ ಯಥಾ ಮುಂಜೇ ಪೃಥಕ್ಚ ಸಹ ಚೈವ ಚ|

12240022c ತಥೈವ ಸಹಿತಾವೇತಾವನ್ಯೋನ್ಯಸ್ಮಿನ್ ಪ್ರತಿಷ್ಠಿತೌ||

ಮೌಂಜಿಹುಲ್ಲಿನಲ್ಲಿ ಇಷೀಕವು ಪ್ರತ್ಯೇಕವಾಗಿ ಆದರೆ ಒಟ್ಟಿಗೇ ಇರುತ್ತದೆ. ಹಾಗೆಯೇ ಬುದ್ಧಿ ಮತ್ತು ಆತ್ಮಗಳು ಜೊತೆಯಲ್ಲಿಯೇ ಇದ್ದು ಅನ್ಯೋನ್ಯರನ್ನು ಆಶ್ರಯಿಸಿರುತ್ತವೆ. ಆದರೆ ಸ್ವಭಾವತಃ ಭಿನ್ನವಾಗಿರುತ್ತವೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತನೇ ಅಧ್ಯಾಯವು.

[1] ಹ್ಯತಃ (ಭಾರತ ದರ್ಶನ).

[2] ಮನಃ (ಭಾರತ ದರ್ಶನ).

Comments are closed.