Shanti Parva: Chapter 239

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೯

ಮಹಾಭೂತಾದಿ ತತ್ತ್ವಗಳ ವಿವೇಚನೆ (1-25).

12239001 ಶುಕ ಉವಾಚ|

12239001a ಅಧ್ಯಾತ್ಮಂ ವಿಸ್ತರೇಣೇಹ ಪುನರೇವ ವದಸ್ವ ಮೇ|

12239001c ಯದಧ್ಯಾತ್ಮಂ ಯಥಾ ಚೇದಂ ಭಗವನ್ನೃಷಿಸತ್ತಮ||

ಶುಕನು ಹೇಳಿದನು: “ಭಗವನ್! ಋಷಿಸತ್ತಮ! ಪುನಃ ನನಗೆ ಅಧ್ಯಾತ್ಮವು ಏನು ಎನ್ನುವುದನ್ನು ವಿಸ್ತಾರವಾಗಿ ಹೇಳು.”

12239002 ವ್ಯಾಸ ಉವಾಚ|

12239002a ಅಧ್ಯಾತ್ಮಂ ಯದಿದಂ ತಾತ ಪುರುಷಸ್ಯೇಹ ವಿದ್ಯತೇ|

12239002c ತತ್ತೇಽಹಂ ಸಂಪ್ರವಕ್ಷ್ಯಾಮಿ ತಸ್ಯ ವ್ಯಾಖ್ಯಾಮಿಮಾಂ ಶೃಣು||

ವ್ಯಾಸನು ಹೇಳಿದನು: “ಮಗೂ! ಪುರುಷನಿಗಾಗಿಯೇ ಇರುವ ಅಧ್ಯಾತ್ಮವಿಷಯವನ್ನು ಹೇಳುತ್ತೇನೆ. ಅದರ ವ್ಯಾಖ್ಯಾನವನ್ನೂ ಮಾಡುತ್ತೇನೆ. ಇದನ್ನು ಕೇಳು.

12239003a ಭೂಮಿರಾಪಸ್ತಥಾ ಜ್ಯೋತಿರ್ವಾಯುರಾಕಾಶಮೇವ ಚ|

12239003c ಮಹಾಭೂತಾನಿ ಭೂತಾನಾಂ ಸಾಗರಸ್ಯೋರ್ಮಯೋ ಯಥಾ||

ಭೂಮಿ, ಜಲ, ತೇಜಸ್ಸು, ವಾಯು ಮತ್ತು ಆಕಾಶ – ಈ ಮಹಾಭೂತಗಳು, ಸಾಗರದಲ್ಲಿ ಅಲೆಗಳು ಹೇಗೋ ಹಾಗೆ, ಸರ್ವಭೂತಗಳಲ್ಲಿಯೂ ಇರುತ್ತವೆ[1].

12239004a ಪ್ರಸಾರ್ಯೇಹ ಯಥಾಂಗಾನಿ ಕೂರ್ಮಃ ಸಂಹರತೇ ಪುನಃ|

12239004c ತದ್ವನ್ಮಹಾಂತಿ ಭೂತಾನಿ ಯವೀಯಃಸು ವಿಕುರ್ವತೇ||

ಆಮೆಯು ಹೇಗೆ ತನ್ನ ಅಂಗಗಳನ್ನು ಹೊರಚಾಚಿ ಪುನಃ ಹಿಂತೆಗೆದುಕೊಳ್ಳುತ್ತದೆಯೋ ಹಾಗೆ ಮಹಾಭೂತಗಳು ಸಣ್ಣ ಸಣ್ಣ ಪ್ರಾಣಿಗಳಲ್ಲಿಯೂ ಸೇರಿಕೊಂಡು ಪ್ರಕಟವಾಗಿ ಪುನಃ ಲೀನವಾಗುತ್ತಿರುತ್ತವೆ.

12239005a ಇತಿ ತನ್ಮಯಮೇವೇದಂ ಸರ್ವಂ ಸ್ಥಾವರಜಂಗಮಮ್|

12239005c ಸರ್ಗೇ ಚ ಪ್ರಲಯೇ ಚೈವ ತಸ್ಮಾನ್ನಿರ್ದಿಶ್ಯತೇ ತಥಾ||

ಹೀಗೆ ಈ ಸರ್ವ ಸ್ಥಾವರಜಂಗಮಗಳೂ ಪಂಚಭೂತಾತ್ಮಕಗಳೇ ಆಗಿವೆ. ಸೃಷ್ಟಿಕಾಲದಲ್ಲಿ ಇವುಗಳಿಂದಲೇ ಉತ್ಪತ್ತಿಯಾಗುತ್ತವೆ ಮತ್ತು ಪ್ರಲಯದಲ್ಲಿ ಇವುಗಳಲ್ಲಿಯೇ ಸೇರಿಕೊಳ್ಳುತ್ತವೆ.

12239006a ಮಹಾಭೂತಾನಿ ಪಂಚೈವ ಸರ್ವಭೂತೇಷು ಭೂತಕೃತ್|

12239006c ಅಕರೋತ್ತಾತ ವೈಷಮ್ಯಂ ಯಸ್ಮಿನ್ಯದನುಪಶ್ಯತಿ||

ಬ್ರಹ್ಮನು ಈ ಐದು ಮಹಾಭೂತಗಳನ್ನು ಸರ್ವಭೂತಗಳಲ್ಲಿಯೂ ಹೆಚ್ಚು-ಕಡಿಮೆಯಾಗಿ ಸಮಾವೇಶಗೊಳಿಸಿ ಮಾಡಿದ್ದಾನೆ. ಅದರಿಂದ ಭೂತಗಳಲ್ಲಿ ವ್ಯತ್ಯಾಸವನ್ನು ಕಾಣುತ್ತೇವೆ[2].”

12239007 ಶುಕ ಉವಾಚ|

12239007a ಅಕರೋದ್ಯಚ್ಚರೀರೇಷು ಕಥಂ ತದುಪಲಕ್ಷಯೇತ್|

12239007c ಇಂದ್ರಿಯಾಣಿ ಗುಣಾಃ ಕೇ ಚಿತ್ಕಥಂ ತಾನುಪಲಕ್ಷಯೇತ್||

ಶುಕನು ಹೇಳಿದನು: “ಪಂಚಮಹಾಭೂತಗಳ ವ್ಯತ್ಯಾಸಪ್ರಮಾಣದಿಂದ ಶರೀರಗಳ ಸೃಷ್ಟಿಯಾಗಿದೆ ಎನ್ನುವುದನ್ನು ತಿಳಿಯುವುದಾದರೂ ಹೇಗೆ? ಶರೀರದಲ್ಲಿ ಇಂದ್ರಿಯಗಳು ಮತ್ತು ಅವುಗಳ ಕೆಲವು ಗುಣಗಳಿವೆ. ಅವುಗಳಲ್ಲಿ ಪಂಚಮಹಾಭೂತಗಳನ್ನು ಹೇಗೆ ಗುರುತಿಸಬೇಕು?”

12239008 ವ್ಯಾಸ ಉವಾಚ|

12239008a ಏತತ್ತೇ ವರ್ತಯಿಷ್ಯಾಮಿ ಯಥಾವದಿಹ ದರ್ಶನಮ್|

12239008c ಶೃಣು ತತ್ತ್ವಮಿಹೈಕಾಗ್ರೋ ಯಥಾತತ್ತ್ವಂ ಯಥಾ ಚ ತತ್||

ವ್ಯಾಸನು ಹೇಳಿದನು: “ಇದನ್ನು ನಾನು ಯಥಾವತ್ತಾಗಿ ದರ್ಶನಗಳಲ್ಲಿರುವಂತೆ ವರ್ಣಿಸುತ್ತೇನೆ. ಏಕಾಗ್ರಚಿತ್ತನಾಗಿ ತತ್ತ್ವತಃ ಕೇಳು.

12239009a ಶಬ್ದಃ ಶ್ರೋತ್ರಂ ತಥಾ ಖಾನಿ ತ್ರಯಮಾಕಾಶಸಂಭವಮ್|

12239009c ಪ್ರಾಣಶ್ಚೇಷ್ಟಾ ತಥಾ ಸ್ಪರ್ಶ ಏತೇ ವಾಯುಗುಣಾಸ್ತ್ರಯಃ||

ಶಬ್ದ, ಶ್ರೋತ್ರ ಮತ್ತು ಶರೀರ ದ್ವಾರಗಳು – ಇವು ಮೂರೂ ಆಕಾಶದಿಂದ ಹುಟ್ಟಿವೆ. ಪ್ರಾಣ, ಚಲನೆ ಮತ್ತು ಸ್ಪರ್ಶ ಇವು ಮೂರೂ ವಾಯುವಿನ ಗುಣಗಳು.

12239010a ರೂಪಂ ಚಕ್ಷುರ್ವಿಪಾಕಶ್ಚ ತ್ರಿಧಾ ಜ್ಯೋತಿರ್ವಿಧೀಯತೇ|

12239010c ರಸೋಽಥ ರಸನಂ ಸ್ನೇಹೋ ಗುಣಾಸ್ತ್ವೇತೇ ತ್ರಯೋಽಂಭಸಾಮ್||

ರೂಪ, ಕಣ್ಣು ಮತ್ತು ಜಠರಾನಲ ಇವು ಮೂರು ಅಗ್ನಿಯ ಪ್ರಕಾರಗಳು. ರಸ, ನಾಲಿಗೆ ಮತ್ತು ಜಿಡ್ಡುಗಳು  - ಈ ಮೂರು ಜಲದಿಂದ ಹುಟ್ಟಿದವು.

12239011a ಘ್ರೇಯಂ ಘ್ರಾಣಂ ಶರೀರಂ ಚ ಭೂಮೇರೇತೇ ಗುಣಾಸ್ತ್ರಯಃ|

12239011c ಏತಾವಾನಿಂದ್ರಿಯಗ್ರಾಮೋ ವ್ಯಾಖ್ಯಾತಃ ಪಾಂಚಭೌತಿಕಃ||

ಗಂಧ, ಮೂಗು ಮತ್ತು ಶರೀರ – ಈ ಮೂರು ಭೂಮಿಯ ಗುಣಗಳು. ಪಾಂಚಭೌತಿಕವಾದ ಇವುಗಳನ್ನು ಇಂದ್ರಿಯಗ್ರಾಮವೆಂದು ಹೇಳುತ್ತಾರೆ.

12239012a ವಾಯೋಃ ಸ್ಪರ್ಶೋ ರಸೋಽದ್ಭ್ಯಶ್ಚ ಜ್ಯೋತಿಷೋ ರೂಪಮುಚ್ಯತೇ|

12239012c ಆಕಾಶಪ್ರಭವಃ ಶಬ್ದೋ ಗಂಧೋ ಭೂಮಿಗುಣಃ ಸ್ಮೃತಃ||

ಸ್ಪರ್ಶವು ವಾಯುವಿನ, ರಸವು ಜಲದ, ರೂಪವು ತೇಜಸ್ಸಿನ ಗುಣಗಳೆಂದು ಹೇಳುತ್ತಾರೆ. ಶಬ್ದವು ಆಕಾಶದಿಂದ ಹುಟ್ಟಿದುದೆಂದೂ ಗಂಧವು ಭೂಮಿಯ ಗುಣವೆಂದೂ ಹೇಳಿದ್ದಾರೆ.

12239013a ಮನೋ ಬುದ್ಧಿಶ್ಚ ಭಾವಶ್ಚ ತ್ರಯ ಏತೇಽಽತ್ಮಯೋನಿಜಾಃ|

12239013c ನ ಗುಣಾನತಿವರ್ತಂತೇ ಗುಣೇಭ್ಯಃ ಪರಮಾ ಮತಾಃ||

ಮನಸ್ಸು, ಬುದ್ಧಿ ಮತ್ತು ಭಾವ – ಈ ಮೂರು ಆತ್ಮಯೋನಿಜಗಳು[3]. ಇವು ಗುಣಗಳನ್ನು ಅತಿಕ್ರಮಿಸದೇ ಇದ್ದರೂ ಇವು ಗುಣಗಳಿಗಿಂತಲೂ ಶ್ರೇಷ್ಠವಾದವುಗಳೆಂಬ ಮತವಿದೆ.

12239014a ಇಂದ್ರಿಯಾಣಿ ನರೇ ಪಂಚ ಷಷ್ಠಂ ತು ಮನ ಉಚ್ಯತೇ|

12239014c ಸಪ್ತಮೀಂ ಬುದ್ಧಿಮೇವಾಹುಃ ಕ್ಷೇತ್ರಜ್ಞಂ ಪುನರಷ್ಟಮಮ್||

ನರರಲ್ಲಿ ಐದು ಇಂದ್ರಿಯಗಳಿವೆ. ಆರನೆಯದು ಮನಸ್ಸೆಂದು ಹೇಳುತ್ತಾರೆ. ಏಳನೆಯದು ಬುದ್ಧಿ ಮತ್ತು ಕ್ಷೇತ್ರಜ್ಞನು ಎಂಟನೆಯವನು ಎಂದು ಹೇಳುತ್ತಾರೆ.

12239015a ಚಕ್ಷುರಾಲೋಚನಾಯೈವ ಸಂಶಯಂ ಕುರುತೇ ಮನಃ|

12239015c ಬುದ್ಧಿರಧ್ಯವಸಾನಾಯ ಸಾಕ್ಷೀ ಕ್ಷೇತ್ರಜ್ಞ ಉಚ್ಯತೇ||

ಕಣ್ಣು ನೋಡುವುದಕ್ಕಿದೆ. ಮನಸ್ಸು ಸಂಶಯಪಡುತ್ತದೆ. ಬುದ್ಧಿಯು ನಿಶ್ಚಯಿಸುತ್ತದೆ. ಕ್ಷೇತ್ರಜ್ಞನು ಸಾಕ್ಷಿ ಎಂದು ಹೇಳಿದ್ದಾರೆ.

12239016a ರಜಸ್ತಮಶ್ಚ ಸತ್ತ್ವಂ ಚ ತ್ರಯ ಏತೇ ಸ್ವಯೋನಿಜಾಃ|

12239016c ಸಮಾಃ ಸರ್ವೇಷು ಭೂತೇಷು ತದ್ಗುಣೇಷೂಪಲಕ್ಷಯೇತ್||

ರಜಸ್, ತಮಸ್ ಮತ್ತು ಸತ್ತ್ವ ಈ ಮೂರೂ ಸ್ವಯೋನಿಜಗಳು. ಸರ್ವಭೂತಗಳಲ್ಲಿಯೂ ಸಾಧಾರಣವಾಗಿ ಕಾಣುವ ಈ ಗುಣಗಳನ್ನು ಜೀವಿಯ ಕರ್ಮಗಳ ಮೂಲಕ ಗುರುತಿಸಬಹುದು.

12239017a ಯಥಾ ಕೂರ್ಮ ಇಹಾಂಗಾನಿ ಪ್ರಸಾರ್ಯ ವಿನಿಯಚ್ಚತಿ|

12239017c ಏವಮೇವೇಂದ್ರಿಯಗ್ರಾಮಂ ಬುದ್ಧಿಃ ಸೃಷ್ಟ್ವಾ ನಿಯಚ್ಚತಿ||

ಆಮೆಯು ಹೇಗೆ ತನ್ನ ಅಂಗಗಳನ್ನು ಹೊರ ಚಾಚಿ ಪುನಃ ಹಿಂತೆಗೆದುಕೊಳ್ಳುತ್ತದೆಯೋ ಹಾಗೆ ಬುದ್ಧಿಯು ಇಂದ್ರಿಯಗ್ರಾಮಗಳನ್ನು ವಿಷಯಗಳ ಕಡೆ ಕಳುಹಿಸುತ್ತದೆ ಮತ್ತು ವಿಷಯಗಳಿಂದ ಹಿಂತೆಗೆದುಕೊಳ್ಳುತ್ತದೆ.

12239018a ಯದೂರ್ಧ್ವಂ ಪಾದತಲಯೋರವಾಙ್ಮೂರ್ಧ್ನಶ್ಚ ಪಶ್ಯತಿ|

12239018c ಏತಸ್ಮಿನ್ನೇವ ಕೃತ್ಯೇ ವೈ ವರ್ತತೇ ಬುದ್ಧಿರುತ್ತಮಾ||

ಕಾಲುಕೆಳಗಿನಿಂದ ತಲೆಯ ನೆತ್ತಿಯವರೆಗೆ ತನ್ನನ್ನು ನೋಡಿಕೊಂಡು ಇದೇ ನಾನು ಮತ್ತು ಇದರಿಂದಲೇ ಕರ್ಮಗಳನ್ನು ಮಾಡುತ್ತೇನೆ ಎನ್ನುವುದಕ್ಕೆ ಅವನಲ್ಲಿರುವ ಉತ್ತಮ ಬುದ್ಧಿಯೇ ಕಾರಣವಾಗಿದೆ.

12239019a ಗುಣಾನ್ನೇನೀಯತೇ ಬುದ್ಧಿರ್ಬುದ್ಧಿರೇವೇಂದ್ರಿಯಾಣ್ಯಪಿ|

12239019c ಮನಃಷಷ್ಠಾನಿ ಸರ್ವಾಣಿ ಬುದ್ಧ್ಯಭಾವೇ ಕುತೋ ಗುಣಾಃ||

ಬುದ್ಧಿಯೇ ಗುಣಗಳನ್ನು ಎಳೆದುಕೊಳ್ಳುತ್ತದೆ. ಅದೇ ಇಂದ್ರಿಯಗಳನ್ನೂ ಮತ್ತು ಆರನೆಯದಾದ ಮನಸ್ಸನ್ನೂ ಇಂದ್ರಿಯ ವಿಷಯಗಳ ಕಡೆ ಒಯ್ಯುತ್ತಿರುತ್ತದೆ. ಮನಸ್ಸು ಮತ್ತು ಇಂದ್ರಿಯಗಳೊಡನೆ ಬುದ್ಧಿಯ ಸಮಾವೇಶವಿಲ್ಲದಿದ್ದರೆ ವಿಷಯಗಳ ಅನುಭವವು ಹೇಗೆ ತಾನೇ ಸಾಧ್ಯವಾಗುತ್ತದೆ?

12239020a ತತ್ರ ಯತ್ ಪ್ರೀತಿಸಂಯುಕ್ತಂ ಕಿಂ ಚಿದಾತ್ಮನಿ ಲಕ್ಷಯೇತ್|

12239020c ಪ್ರಶಾಂತಮಿವ ಸಂಶುದ್ಧಂ ಸತ್ತ್ವಂ ತದುಪಧಾರಯೇತ್||

ಪ್ರೀತಿಸಂಯುಕ್ತ, ಪ್ರಶಾಂತವಾಗಿರುವ ಸಂಶುದ್ಧ ಭಾವವು ಯಾರಲ್ಲಿ ಕಂಡುಬರುತ್ತದೆಯೋ ಅವರಲ್ಲಿ ಸತ್ತ್ವಗುಣವು ಆವಿರ್ಭಾವಗೊಂಡಿದೆ ಎಂದು ತಿಳಿಯಬೇಕು.

12239021a ಯತ್ತು ಸಂತಾಪಸಂಯುಕ್ತಂ ಕಾಯೇ ಮನಸಿ ವಾ ಭವೇತ್|

12239021c ರಜಃ ಪ್ರವರ್ತಕಂ ತತ್ ಸ್ಯಾತ್ಸತತಂ ಹಾರಿ ದೇಹಿನಾಮ್||

ದೇಹದಲ್ಲಿಯಾಗಲೀ ಮನಸ್ಸಿನಲ್ಲಿಯಾಗಲೀ ಸಂತಾಪಯುಕ್ತ ಭಾವವು ಕಂಡುಬಂದರೆ ರಜೋಗುಣದ ಆವಿರ್ಭಾವವಾಗಿದೆ ಎಂದು ತಿಳಿಯಬೇಕು.

12239022a ಯತ್ತು ಸಂಮೋಹಸಂಯುಕ್ತಮವ್ಯಕ್ತವಿಷಯಂ ಭವೇತ್|

12239022c ಅಪ್ರತರ್ಕ್ಯಮವಿಜ್ಞೇಯಂ ತಮಸ್ತದುಪಧಾರ್ಯತಾಮ್||

ಮನಸ್ಸು ಯಾವಾಗ ಭ್ರಾಂತಿಯುಕ್ತವಾಗಿರುವುದೋ, ವಿಷಯಗಳು ಅಸ್ಪಷ್ಟವಾಗಿವೆಯೋ, ಊಹಿಸಲೂ ಸಾಧ್ಯವಿಲ್ಲವೋ ಆಗ ತಮೋಗುಣದ ಆವಿರ್ಭಾವವಾಗಿದೆ ಎಂದು ತಿಳಿಯಬೇಕು.

12239023a ಪ್ರಹರ್ಷಃ ಪ್ರೀತಿರಾನಂದಃ ಸಾಮ್ಯಂ ಸ್ವಸ್ಥಾತ್ಮಚಿತ್ತತಾ|

12239023c ಅಕಸ್ಮಾದ್ಯದಿ ವಾ ಕಸ್ಮಾದ್ವರ್ತತೇ ಸಾತ್ತ್ವಿಕೋ ಗುಣಃ||

ಹರ್ಷ, ಪ್ರೀತಿ, ಆನಂದ, ಸಮತೆ, ಚಿತ್ತಸ್ವಾಸ್ಥ್ಯ – ಇವುಗಳು ಅಕಸ್ಮಾತ್ತಾಗಿ ಅಥವಾ ಯಾವುದಾದರೂ ಕಾರಣಗಳಿಂದ ಆಗುತ್ತಿದ್ದರೆ ಅದು ಸಾತ್ವಿಕಗುಣವೆಂದು ತಿಳಿಯಬೇಕು.

12239024a ಅಭಿಮಾನೋ ಮೃಷಾವಾದೋ ಲೋಭೋ ಮೋಹಸ್ತಥಾಕ್ಷಮಾ|

12239024c ಲಿಂಗಾನಿ ರಜಸಸ್ತಾನಿ ವರ್ತಂತೇ ಹೇತ್ವಹೇತುತಃ||

ಅಭಿಮಾನ, ಸುಳ್ಳುಮಾತು, ಲೋಭ, ಮೋಹ, ಅಸಹನೆ – ಇವು ರಜೋಗುಣದ ಲಕ್ಷಣಗಳು.

12239025a ತಥಾ ಮೋಹಃ ಪ್ರಮಾದಶ್ಚ ತಂದ್ರೀ ನಿದ್ರಾಪ್ರಬೋಧಿತಾ|

12239025c ಕಥಂ ಚಿದಭಿವರ್ತಂತೇ ವಿಜ್ಞೇಯಾಸ್ತಾಮಸಾ ಗುಣಾಃ||

ಹಾಗೆಯೇ ಮೋಹ, ಪ್ರಮಾದ, ನಿದ್ರೆ, ಆಲಸ್ಯ ಮತ್ತು ಅಜ್ಞಾನ – ಇವುಗಳು ಕಂಡುಬಂದರೆ ಇವು ತಾಮಸಗುಣಗಳು  ಎಂದು ತಿಳಿಯಬೇಕು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಏಕೋನಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೊಂಭತ್ತನೇ ಅಧ್ಯಾಯವು.

[1] ಇವು ಸಮುದ್ರದ ಅಲೆಗಳಂತೆ ನೀರಿನಿಂದಲೇ ಹುಟ್ಟಿ ನೀರಿನಲ್ಲಿಯೇ ಲೀನವಾಗುವಂತೆ ಪ್ರಾಣಿಗಳ ಶರೀರರೂಪದಲ್ಲಿ ಹುಟ್ಟುತ್ತಿರುತ್ತವೆ ಮತ್ತು ವಿಲೀನವಾಗುತ್ತಿರುತ್ತವೆ. (ಭಾರತ ದರ್ಶನ)

[2] ಎಲ್ಲ ಪ್ರಾಣಿಗಳಲ್ಲಿಯೂ ಐದೇ ಮಹಾಭೂತಗಳ ಸಮಾವೇಶವಾಗಿರುವುದರಿಂದ ಒಂದು ಪ್ರಾಣಿಗೂ ಮತ್ತೊಂದು ಪ್ರಾಣಿಗೂ ಯಾವ ವ್ಯತ್ಯಾಸವೂ ಇರಬಾರದಾಗಿತ್ತು. ಆದರೆ ಪಂಚಮಹಾಭೂತಗಳ ಸೃಷ್ಟೃವಾದ ಬ್ರಹ್ಮನು ಪ್ರಾಣಿಗಳ ಕರ್ಮಾನುಸಾರವಾಗಿ ನ್ಯೂನಾಧಿಕರೂಪಗಳಲ್ಲಿ ಪಂಚಮಹಾಭೂತಗಳನ್ನು ಪ್ರಾಣಿಗಳಲ್ಲಿ ಸಮಾವೇಶಗೊಳಿಸಿದ್ದಾನೆ. ಪಂಚಮಹಾಭೂತಗಳ ಪ್ರಮಾಣದಲ್ಲಿ ಒಂದು ಪ್ರಾಣಿಗೂ ಮತ್ತೊಂದು ಪ್ರಾಣಿಗೂ ವ್ಯತ್ಯಾಸವಿರುತ್ತದೆ. ಆದುದರಿಂದಲೇ ಪ್ರಾಣಿಗಳಲ್ಲಿ ಒಂದಕ್ಕೊಂದಕ್ಕೆ ಈ ವ್ಯತ್ಯಾಸವನ್ನು ಬ್ರಹ್ಮನೇ ಕಲ್ಪಿಸಿದ್ದಾನೆ. (ಭಾರತ ದರ್ಶನ)

[3] ಇವು ಹುಟ್ಟಿಗೆ ಕಾರಣವಾದ ಸಂಸ್ಕಾರಗಳಿಂದ ಹುಟ್ಟಿರುತ್ತವೆ. ಇವುಗಳನ್ನು ಜೀವನು ಹುಟ್ಟಿನೊಡನೆಯೇ ತಂದಿರುತ್ತಾನೆ. (ಭಾರತ ದರ್ಶನ)

Comments are closed.