Shanti Parva: Chapter 238

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೮

ಪರಮಾತ್ಮನ ಶ್ರೇಷ್ಠತೆ; ದರ್ಶನೋಪಾಯ; ಜ್ಞಾನೋಪದೇಶಕ್ಕೆ ಪಾತ್ರನಾದವನ ನಿರ್ಣಯ (1-20).

12238001 ವ್ಯಾಸ ಉವಾಚ|

12238001a ಪ್ರಕೃತೇಸ್ತು ವಿಕಾರಾ ಯೇ ಕ್ಷೇತ್ರಜ್ಞಸ್ತೈಃ ಪರಿಶ್ರಿತಃ[1]|

12238001c ತೇ ಚೈನಂ ನ ಪ್ರಜಾನಂತಿ ಸ ತು ಜಾನಾತಿ ತಾನಪಿ||

ವ್ಯಾಸನು ಹೇಳಿದನು: “ಪ್ರಕೃತಿಯ ವಿಕಾರಗಳಿಂದ ಕ್ಷೇತ್ರಜ್ಞನು ಪರಿಶ್ರಿತನಾಗಿದ್ದಾನೆ. ಅವುಗಳು ಅವನನ್ನು ತಿಳಿಯಲಾರವು. ಆದರೆ ಅವನು ಅವುಗಳನ್ನು ತಿಳಿದಿರುತ್ತಾನೆ.

12238002a ತೈಶ್ಚೈಷ ಕುರುತೇ ಕಾರ್ಯಂ ಮನಃಷಷ್ಠೈರಿಹೇಂದ್ರಿಯೈಃ|

12238002c ಸುದಾಂತೈರಿವ ಸಂಯಂತಾ ದೃಢೈಃ ಪರಮವಾಜಿಭಿಃ||

ಚತುರ ಸಾರಥಿಯು ಚೆನ್ನಾಗಿ ಪಳಗಿರುವ ಕುದುರೆಗಳಿಂದ ರಥವನ್ನು ನಿರ್ವಹಿಸುವಂತೆ ಕ್ಷೇತ್ರಜ್ಞನು ಮನಸ್ಸು ಮತ್ತು ಐದು ಇಂದ್ರಿಯಗಳ ಮೂಲಕ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ.

12238003a ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಃ ಪರಮಂ ಮನಃ|

12238003c ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಮಹಾನ್ಪರಃ||

ಇಂದ್ರಿಯಗಳಿಗಿಂತಲೂ ಇಂದ್ರಿಯಾರ್ಥಗಳು ಶ್ರೇಷ್ಠವಾದವುಗಳು. ಇಂದ್ರಿಯಾರ್ಥಗಳಿಗಿಂತಲೂ ಮನಸ್ಸು ಶ್ರೇಷ್ಠವಾದುದು. ಮನಸ್ಸಿಗಿಂತಲೂ ಬುದ್ಧಿಯು ಶ್ರೇಷ್ಠವಾದುದು. ಬುದ್ಧಿಗಿಂತಲೂ ಆತ್ಮ ಮತ್ತು ಆತ್ಮಕ್ಕಿಂತಲೂ ಮಹತ್ತತ್ತ್ವವು ಶ್ರೇಷ್ಠವಾದುದು.

12238004a ಮಹತಃ ಪರಮವ್ಯಕ್ತಮವ್ಯಕ್ತಾತ್ಪರತೋಽಮೃತಮ್|

12238004c ಅಮೃತಾನ್ನ ಪರಂ ಕಿಂ ಚಿತ್ಸಾ ಕಾಷ್ಠಾ ಸಾ ಪರಾ ಗತಿಃ||

ಮಹತ್ತತ್ತ್ವಕ್ಕಿಂತಲೂ ಅವ್ಯಕ್ತ ಮೂಲಪ್ರಕೃತಿಯು ಶ್ರೇಷ್ಠವಾದುದು. ಅವ್ಯಕ್ತಕ್ಕಿಂತಲೂ ಅಮೃತಸ್ವರೂಪೀ ಪರಮಾತ್ಮನು ಶ್ರೇಷ್ಠನು. ಆ ಅಮೃತರೂಪಿಗಿಂತಲೂ ಶ್ರೇಷ್ಠವಾದುದು ಬೇರೆ ಯಾವುದೂ ಇಲ್ಲ. ಅದೇ ಶ್ರೇಷ್ಠತೆಯ ಪಾರಾಕಾಷ್ಠೆ ಮತ್ತು ಪರಮ ಗತಿಯು.

12238005a ಏವಂ ಸರ್ವೇಷು ಭೂತೇಷು ಗೂಢೋಽಽತ್ಮಾ ನ ಪ್ರಕಾಶತೇ|

12238005c ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ತತ್ತ್ವದರ್ಶಿಭಿಃ||

ಹೀಗೆ ಸರ್ವಭೂತಗಳಲ್ಲಿಯೂ ಗೂಢನಾಗಿರುವ ಪರಮಾತ್ಮನು ಇಂದ್ರಿಯಗಳಿಗೆ ಕಾಣಿಸುವುದಿಲ್ಲ. ತತ್ತ್ವದರ್ಶಿಗಳು ತಮ್ಮ ಸೂಕ್ಷ್ಮ ಮತ್ತು ಶ್ರೇಷ್ಠ ಬುದ್ಧಿಯಿಂದ ಅವನನ್ನು ಕಾಣುತ್ತಾರೆ.

12238006a ಅಂತರಾತ್ಮನಿ ಸಂಲೀಯ ಮನಃಷಷ್ಠಾನಿ ಮೇಧಯಾ|

12238006c ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ಬಹು ಚಿಂತ್ಯಮಚಿಂತಯನ್||

12238007a ಧ್ಯಾನೋಪರಮಣಂ ಕೃತ್ವಾ ವಿದ್ಯಾಸಂಪಾದಿತಂ ಮನಃ|

12238007c ಅನೀಶ್ವರಃ ಪ್ರಶಾಂತಾತ್ಮ ತತೋಽರ್ಚತ್ಯಮೃತಂ ಪದಮ್||

ಬುದ್ಧಿಯ ಮೂಲಕ ಮನಸ್ಸು, ಇಂದ್ರಿಯಗಳು ಮತ್ತು ಇಂದ್ರಿಯಾರ್ಥಗಳನ್ನು ಅಂತರಾತ್ಮನಲ್ಲಿ ಲೀನಗೊಳಿಸಿ, ಅನೇಕವಿಧದ ಯೋಚನೆಗಳನ್ನು ಯೋಚಿಸದೇ, ವಿದ್ಯಾಸಂಪಾದಿತ ಮನಸ್ಸನ್ನು ಧ್ಯಾನಾಸಕ್ತಗೊಳಿಸಿ ನಾನು ಎಂಬ ಭಾವನೆಯನ್ನು ತೊರೆದು ಪ್ರಶಾಂತಾತ್ಮನಾಗಿ ಯೋಗಿಯು ಅಮೃತ ಪದವನ್ನು ಪಡೆದುಕೊಳ್ಳುತ್ತಾನೆ.

12238008a ಇಂದ್ರಿಯಾಣಾಂ ತು ಸರ್ವೇಷಾಂ ವಶ್ಯಾತ್ಮಾ ಚಲಿತಸ್ಮೃತಿಃ|

12238008c ಆತ್ಮನಃ ಸಂಪ್ರದಾನೇನ ಮರ್ತ್ಯೋ ಮೃತ್ಯುಮುಪಾಶ್ನುತೇ||

ಸರ್ವ ಇಂದ್ರಿಯಗಳಿಗೂ ವಶನಾಗಿರುವ, ಚಂಚಲ ಸ್ಮರಣೆಯುಳ್ಳ ಮತ್ತು ಕಾಮಕ್ರೋಧಾದಿಗಳಿಗೆ ತನ್ನನ್ನು ಅರ್ಪಿಸಿಕೊಂಡಿರುವ ಮನುಷ್ಯನು ಮೃತ್ಯುವನ್ನೇ ಉಪಭೋಗಿಸುತ್ತಾನೆ.

12238009a ಹಿತ್ವಾ ತು ಸರ್ವಸಂಕಲ್ಪಾನ್ಸತ್ತ್ವೇ ಚಿತ್ತಂ ನಿವೇಶಯೇತ್|

12238009c ಸತ್ತ್ವೇ ಚಿತ್ತಂ ಸಮಾವೇಶ್ಯ ತತಃ ಕಾಲಂಜರೋ ಭವೇತ್||

ಸರ್ವಸಂಕಲ್ಪಗಳನ್ನೂ ಪರಿತ್ಯಜಿಸಿ ಚಿತ್ತವನ್ನು ಸೂಕ್ಷ್ಮಬುದ್ಧಿಯಲ್ಲಿ ಲೀನಗೊಳಿಸಬೇಕು. ಹೀಗೆ ಬುದ್ಧಿಯಲ್ಲಿ ಚಿತ್ತವನ್ನು ಲಯಗೊಳಿಸಿದವನು ಕಾಲವನ್ನೇ ವಿನಾಶಗೊಳಿಸುತ್ತಾನೆ.

12238010a ಚಿತ್ತಪ್ರಸಾದೇನ ಯತಿರ್ಜಹಾತಿ ಹಿ ಶುಭಾಶುಭಮ್|

12238010c ಪ್ರಸನ್ನಾತ್ಮಾತ್ಮನಿ ಸ್ಥಿತ್ವಾ ಸುಖಮಾನಂತ್ಯಮಶ್ನುತೇ||

ಚಿತ್ತದ ಪ್ರಸನ್ನತೆಯಿಂದ ಯತಿಯು ಶುಭಾಶುಭಗಳನ್ನು ತ್ಯಜಿಸುತ್ತಾನೆ. ಆ ಪ್ರಸನ್ನಾತ್ಮನು ಆತ್ಮನಲ್ಲಿಯೇ ಬುದ್ಧಿಯನ್ನಿರಿಸಿ ಅನಂತ ಸುಖವನ್ನು ಹೊಂದುತ್ತಾನೆ.

12238011a ಲಕ್ಷಣಂ ತು ಪ್ರಸಾದಸ್ಯ ಯಥಾ ತೃಪ್ತಃ[2] ಸುಖಂ ಸ್ವಪೇತ್|

12238011c ನಿವಾತೇ ವಾ ಯಥಾ ದೀಪೋ ದೀಪ್ಯಮಾನೋ ನ ಕಂಪತೇ||

ತೃಪ್ತನಾಗಿ ಸುಖವಾಗಿ ನಿದ್ರಿಸುವುದೇ ಪ್ರಶಾಂತ ಚಿತ್ತದ ಲಕ್ಷಣವು. ಗಾಳಿಯಿಲ್ಲದಿರುವ ಸ್ಥಳದಲ್ಲಿ ಉರಿಯುತ್ತಿರುವ ದೀಪವು ಹೇಗೆ ಕಂಪಿಸುವುದಿಲ್ಲವೋ ಹಾಗೆ ಚಂಚಲಿಸದೇ ಮನಸ್ಸು ಆತ್ಮನಲ್ಲಿ ಲೀನವಾಗಿರುವುದು ಚಿತ್ತಸ್ವಾಸ್ಥ್ಯದ ಲಕ್ಷಣವು.

12238012a ಏವಂ ಪೂರ್ವಾಪರೇ ರಾತ್ರೇ ಯುಂಜನ್ನಾತ್ಮಾನಮಾತ್ಮನಾ|

12238012c ಸತ್ತ್ವಾಹಾರವಿಶುದ್ಧಾತ್ಮಾ[3] ಪಶ್ಯತ್ಯಾತ್ಮಾನಮಾತ್ಮನಿ||

ಹೀಗೆ ಸತ್ತ್ವಾಹಾರಿಯಾಗಿ ವಿಶುದ್ಧ ಮನಸ್ಸುಳ್ಳವನಾಗಿ ರಾತ್ರಿಯ ಮೊದಲ ಮತ್ತು ಕಡೆಯ ಯಾಮಗಳಲ್ಲಿ ಬುದ್ಧಿಯನ್ನು ಆತ್ಮನಲ್ಲಿ ಏಕಾಗ್ರಗೊಳಿಸುತ್ತಿದ್ದರೆ ಯೋಗಿಯು ತನ್ನಲ್ಲಿಯೇ ಪರಮಾತ್ಮನನ್ನು ಕಾಣುತ್ತಾನೆ.

12238013a ರಹಸ್ಯಂ ಸರ್ವವೇದಾನಾಮನೈತಿಹ್ಯಮನಾಗಮಮ್|

12238013c ಆತ್ಮಪ್ರತ್ಯಯಿಕಂ ಶಾಸ್ತ್ರಮಿದಂ ಪುತ್ರಾನುಶಾಸನಮ್||

ಪುತ್ರ! ನಾನು ಉಪದೇಶಿಸುತ್ತಿರುವ ಇದು ಪರಮಾತ್ಮನ ಜ್ಞಾನವನ್ನುಂಟುಮಾಡುವ ಸರ್ವವೇದಗಳ ರಹಸ್ಯವಾಗಿದೆ. ಆದರೆ ಇದನ್ನು ಕೇವಲ ಅನುಮಾನದಿಂದಾಗಲೀ ಆಗಮಗಳಿಂದಾಗಲೀ ತಿಳಿಯಲಾಗುವುದಿಲ್ಲ.

12238014a ಧರ್ಮಾಖ್ಯಾನೇಷು ಸರ್ವೇಷು ಸತ್ಯಾಖ್ಯಾನೇಷು ಯದ್ವಸು|

12238014c ದಶೇದಮೃಕ್ಸಹಸ್ರಾಣಿ ನಿರ್ಮಥ್ಯಾಮೃತಮುದ್ಧೃತಮ್||

ಇದು ಸರ್ವ ಧರ್ಮಾಖ್ಯಾನಗಳು ಮತ್ತು ಸತ್ಯಾಖ್ಯಾನಗಳಲ್ಲಿರುವ ಸಂಪತ್ತಾಗಿದೆ. ಹತ್ತುಸಾವಿರ ಋಕ್ಕುಗಳನ್ನು ಮಥಿಸಿ ಈ ಅಮೃತವನ್ನು ತೆಗೆಯಲಾಗಿದೆ.

12238015a ನವನೀತಂ ಯಥಾ ದಧ್ನಃ ಕಾಷ್ಠಾದಗ್ನಿರ್ಯಥೈವ ಚ|

12238015c ತಥೈವ ವಿದುಷಾಂ ಜ್ಞಾನಂ ಪುತ್ರಹೇತೋಃ ಸಮುದ್ಧೃತಮ್|

12238015e ಸ್ನಾತಕಾನಾಮಿದಂ ಶಾಸ್ತ್ರಂ ವಾಚ್ಯಂ ಪುತ್ರಾನುಶಾಸನಮ್||

ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವಂತೆ ಮತ್ತು ಕಟ್ಟಿಗೆಯಿಂದ ಅಗ್ನಿಯನ್ನು ಹೊರಡಿಸುವಂತೆ ಮಗನಿಗಾಗಿ ನಾನು ವಿದ್ವಾಂಸರ ಈ ಜ್ಞಾನವನ್ನು ಸಂಗ್ರಹಿಸಿದ್ದೇನೆ. ಪುತ್ರ! ಈ ಶಾಸ್ತ್ರವನ್ನು ಸ್ನಾತಕರಿಗೆ ಹೇಳಿ ಉಪದೇಶಿಸಬೇಕು.

12238016a ತದಿದಂ ನಾಪ್ರಶಾಂತಾಯ ನಾದಾಂತಾಯಾತಪಸ್ವಿನೇ|

12238016c ನಾವೇದವಿದುಷೇ ವಾಚ್ಯಂ ತಥಾ ನಾನುಗತಾಯ ಚ||

12238017a ನಾಸೂಯಕಾಯಾನೃಜವೇ ನ ಚಾನಿರ್ದಿಷ್ಟಕಾರಿಣೇ|

12238017c ನ ತರ್ಕಶಾಸ್ತ್ರದಗ್ಧಾಯ ತಥೈವ ಪಿಶುನಾಯ ಚ||

ಪ್ರಶಾಂತನಾಗಿರದವನಿಗೆ, ದಾಂತನಾಗಿಲ್ಲದವನಿಗೆ, ತಪಸ್ವಿಯಾಗಿಲ್ಲದವನಿಗೆ, ವೇದವಿದುಷನಾಗಿರದವನಿಗೆ, ವಿಧೇಯನಾಗಿಲ್ಲದಿರುವವನಿಗೆ, ಅಸೂಯೆಯಿರುವವನಿಗೆ, ಸರಳತೆಯಿಲ್ಲದಿರುವವನಿಗೆ, ಹೇಳಿದುದನ್ನು ಮಾಡದಿರುವವನಿಗೆ, ತರ್ಕಶಾಸ್ತ್ರದಲ್ಲಿಯೇ ಮುಳುಗಿದವನಿಗೆ ಮತ್ತು ಚಾಡಿಕೋರನಿಗೆ ಇದನ್ನು ಉಪದೇಶಿಸಬಾರದು.

12238018a ಶ್ಲಾಘತೇ ಶ್ಲಾಘನೀಯಾಯ ಪ್ರಶಾಂತಾಯ ತಪಸ್ವಿನೇ|

12238018c ಇದಂ ಪ್ರಿಯಾಯ ಪುತ್ರಾಯ ಶಿಷ್ಯಾಯಾನುಗತಾಯ ಚ|

12238018e ರಹಸ್ಯಧರ್ಮಂ ವಕ್ತವ್ಯಂ ನಾನ್ಯಸ್ಮೈ ತು ಕಥಂ ಚನ||

ಜ್ಞಾನವನ್ನು ಶ್ಲಾಘಿಸುವ, ಶ್ಲಾಘನೀಯನಾದ, ಪ್ರಶಾಂತಾತ್ಮನಾದ ತಪಸ್ವೀ ಪ್ರಿಯ ಪುತ್ರನಿಗಾಗಲೀ ವಿಧೇಯ ಶಿಷ್ಯನಾಗಲೀ ಈ ರಹಸ್ಯ ಧರ್ಮವನ್ನು ಹೇಳಬೇಕು. ಅನ್ಯರಿಗೆ ಎಂದೂ ಇದನ್ನು ಹೇಳಿಕೊಡಬಾರದು.

12238019a ಯದ್ಯಪ್ಯಸ್ಯ ಮಹೀಂ ದದ್ಯಾದ್ರತ್ನಪೂರ್ಣಾಮಿಮಾಂ ನರಃ|

12238019c ಇದಮೇವ ತತಃ ಶ್ರೇಯ ಇತಿ ಮನ್ಯೇತ ತತ್ತ್ವವಿತ್||

ಒಂದು ವೇಳೆ ರತ್ನಪೂರ್ಣ ಈ ಮಹಿಯನ್ನೇ ಕೊಟ್ಟುಬಿಡುವ ನರನಿಗೂ ಇದೇ ಶ್ರೇಯಸ್ಕರವೆಂದು ತತ್ತ್ವವಿದುವು ತಿಳಿದುಕೊಳ್ಳಬೇಕು.

12238020a ಅತೋ ಗುಹ್ಯತರಾರ್ಥಂ ತದಧ್ಯಾತ್ಮಮತಿಮಾನುಷಮ್|

12238020c ಯತ್ತನ್ಮಹರ್ಷಿಭಿರ್ದೃಷ್ಟಂ ವೇದಾಂತೇಷು ಚ ಗೀಯತೇ|

12238020e ತತ್ತೇಽಹಂ ಸಂಪ್ರವಕ್ಷ್ಯಾಮಿ ಯನ್ಮಾಂ ತ್ವಂ ಪರಿಪೃಚ್ಚಸಿ||

ನೀನು ನನ್ನನ್ನು ಕೇಳಿರುವ, ಇದಕ್ಕಿಂತಲೂ ಗುಹ್ಯತರವಾದ, ಮಹರ್ಷಿಗಳು ಕಂಡುಕೊಂಡಿರುವ, ವೇದಾಂತಗಳಲ್ಲಿ ಹಾಡಿರುವ ಆ ಅತಿಮಾನುಷ ಅಧ್ಯಾತ್ಮವನ್ನು ನಿನಗೆ ಹೇಳುತ್ತೇನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಅಷ್ಟತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೆಂಟನೇ ಅಧ್ಯಾಯವು.

[1] ಪ್ರಕೃತ್ಯಾಸ್ತು ವಿಕಾರಾ ಯೇ ಕ್ಷೇತ್ರಜ್ಞಸ್ತೈರಧಿಷ್ಠಿತಃ| (ಭಾರತ ದರ್ಶನ).

[2] ಸ್ವಪ್ನೇ (ಭಾರತ ದರ್ಶನ).

[3] ಲಘ್ವಾಹಾರೋ ವಿಶುದ್ಧಾತ್ಮಾ (ಭಾರತ ದರ್ಶನ).

Comments are closed.