Shanti Parva: Chapter 237

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೭

ಸಂನ್ಯಾಸಿಯ ಆಚರಣೆಗಳು ಮತ್ತ ಜ್ಞಾನವಂತ ಸಂನ್ಯಾಸಿಯ ಪ್ರಶಂಸೆ (1-36).

12237001 ಶುಕ ಉವಾಚ|

12237001a ವರ್ತಮಾನಸ್ತಥೈವಾತ್ರ ವಾನಪ್ರಸ್ಥಾಶ್ರಮೇ ಯಥಾ|

12237001c ಯೋಕ್ತವ್ಯೋಽತ್ಮಾ ಯಥಾ ಶಕ್ತ್ಯಾ ಪರಂ ವೈ ಕಾಂಕ್ಷತಾ ಪದಮ್||

ಶುಕನು ಹೇಳಿದನು: “ವಾನಪ್ರಸ್ಥಾಶ್ರಮದಲ್ಲಿರುವಂತೆಯೇ ನಡೆದುಕೊಂಡಿದ್ದು ಪರಮ ಪದವನ್ನು ಬಯಸುವವನು ಯಥಾಶಕ್ತಿ ತನ್ನ ಮನಸ್ಸನ್ನು ಆತ್ಮನಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು?”

12237002 ವ್ಯಾಸ ಉವಾಚ|

12237002a ಪ್ರಾಪ್ಯ ಸಂಸ್ಕಾರಮೇತಾಭ್ಯಾಮಾಶ್ರಮಾಭ್ಯಾಂ ತತಃ ಪರಮ್|

12237002c ಯತ್ಕಾರ್ಯಂ ಪರಮಾರ್ಥಾರ್ಥಂ ತದಿಹೈಕಮನಾಃ ಶೃಣು||

ವ್ಯಾಸನು ಹೇಳಿದನು: “ಈ ಎರಡು ಆಶ್ರಮಗಳಲ್ಲಿ[1] ಸಂಸ್ಕಾರಗಳನ್ನು ಪಡೆದುಕೊಂಡ ನಂತರ ಪರಮಾರ್ಥ ಸಿದ್ಧಿಗಾಗಿ ಏನು ಮಾಡಬೇಕು ಎನ್ನುವುದನ್ನು ಏಕಮನಸ್ಕನಾಗಿ ಕೇಳು.

12237003a ಕಷಾಯಂ ಪಾಚಯಿತ್ವಾ ತು ಶ್ರೇಣಿಸ್ಥಾನೇಷು ಚ ತ್ರಿಷು|

12237003c ಪ್ರವ್ರಜೇಚ್ಚ ಪರಂ ಸ್ಥಾನಂ ಪರಿವ್ರಜ್ಯಾಮನುತ್ತಮಾಮ್||

ಹಿಂದಿನ ಮೂರು ಮೆಟ್ಟಿಲುಗಳಲ್ಲಿ ದೋಷಗಳನ್ನು ಬೇಯಿಸಿ ಸಂನ್ಯಾಸವೆಂಬ ಅನುತ್ತಮ ಪರಮ ಸ್ಥಾನಕ್ಕೆ ಏರಬೇಕು.

12237004a ತದ್ಭವಾನೇವಮಭ್ಯಸ್ಯ ವರ್ತತಾಂ ಶ್ರೂಯತಾಂ ತಥಾ|

12237004c ಏಕ ಏವ ಚರೇನ್ನಿತ್ಯಂ ಸಿದ್ಧ್ಯರ್ಥಮಸಹಾಯವಾನ್||

ಅದರ ಕುರಿತು ಕೇಳು. ಅಧ್ಯಯನ ಮಾಡು ಮತ್ತು ಹಾಗೆಯೇ ನಡೆದುಕೋ. ಸಿದ್ಧಿಗೆ ಯಾರ ಸಹಾಯವನ್ನೂ ಪಡೆಯದೇ ನಿತ್ಯವೂ ಏಕಾಕಿಯಾಗಿರಬೇಕು.

12237005a ಏಕಶ್ಚರತಿ ಯಃ ಪಶ್ಯನ್ನ ಜಹಾತಿ ನ ಹೀಯತೇ|

12237005c ಅನಗ್ನಿರನಿಕೇತಃ ಸ್ಯಾದ್ ಗ್ರಾಮಮನ್ನಾರ್ಥಮಾಶ್ರಯೇತ್||

ಏಕಾಕಿಯಾಗಿರುವವನು ಯಾರನ್ನೂ ತ್ಯಜಿಸುವುದಿಲ್ಲ. ಯಾರಿಂದಲೂ ತ್ಯಜಿಸಲ್ಪಡುವುದಿಲ್ಲ. ಅಗ್ನಿಗಳಿಲ್ಲದ ಮತ್ತು ಮನೆಯಿಲ್ಲದ ಅವನು ಅನ್ನಕ್ಕಾಗಿ ಮಾತ್ರ ಗ್ರಾಮವನ್ನು ಆಶ್ರಯಿಸಬೇಕು.

12237006a ಅಶ್ವಸ್ತನವಿಧಾನಃ ಸ್ಯಾನ್ಮುನಿರ್ಭಾವಸಮನ್ವಿತಃ|

12237006c ಲಘ್ವಾಶೀ ನಿಯತಾಹಾರಃ ಸಕೃದನ್ನನಿಷೇವಿತಾ||

ನಾಳೆಗೆಂದು ಏನನ್ನೂ ಇಟ್ಟುಕೊಳ್ಳಬಾರದು. ಮುನಿಯ ಭಾವವನ್ನು ಹೊಂದಿರಬೇಕು. ಸ್ವಲ್ಪವೇ ತಿನ್ನಬೇಕು. ನಿಯತಾಹಾರಿಯಾಗಿರಬೇಕು. ದಿನದಲ್ಲಿ ಒಂದೇ ಬಾರಿ ತಿನ್ನಬೇಕು.

12237007a ಕಪಾಲಂ ವೃಕ್ಷಮೂಲಾನಿ ಕುಚೇಲಮಸಹಾಯತಾ|

12237007c ಉಪೇಕ್ಷಾ ಸರ್ವಭೂತಾನಾಮೇತಾವದ್ಭಿಕ್ಷುಲಕ್ಷಣಮ್||

ಭಿಕ್ಷಾಪಾತ್ರೆ, ವೃಕ್ಷಗಳ ಬುಡದಲ್ಲಿ ವಾಸ, ಹಳೆಯ ಬಟ್ಟೆಯನ್ನು ಉಟ್ಟಿರುವುದು, ಯಾರ ಸಹಾಯವೂ ಇಲ್ಲದಿರುವುದು, ಸರ್ವಭೂತಗಳ ಕುರಿತೂ ಉಪೇಕ್ಷೆ – ಇವು ಭಿಕ್ಷುವಿನ ಲಕ್ಷಣಗಳು.

12237008a ಯಸ್ಮಿನ್ವಾಚಃ ಪ್ರವಿಶಂತಿ ಕೂಪೇ ಪ್ರಾಪ್ತಾಃ ಶಿಲಾ[2] ಇವ|

12237008c ನ ವಕ್ತಾರಂ ಪುನರ್ಯಾಂತಿ ಸ ಕೈವಲ್ಯಾಶ್ರಮೇ ವಸೇತ್||

ಬಾವಿಗೆ ಎಸೆದ ಕಲ್ಲು ಹೇಗೆ ಹಿಂದಿರುಗಿ ಬರುವುದಿಲ್ಲವೋ ಹಾಗೆ ಅವನಿಗಾಡಿದ ಮಾತುಗಳನ್ನು ಆಡಿದವನಿಗೆ ಪುನಃ ಹಿಂದಿರುಗಿಸದೇ ಇರುವಂಥವನು ಕೈವಲ್ಯಾಶ್ರಮದಲ್ಲಿ ವಾಸಿಸಬೇಕು.

12237009a ನೈವ ಪಶ್ಯೇನ್ನ ಶೃಣುಯಾದವಾಚ್ಯಂ ಜಾತು ಕಸ್ಯ ಚಿತ್|

12237009c ಬ್ರಾಹ್ಮಣಾನಾಂ ವಿಶೇಷೇಣ ನೈವ ಬ್ರೂಯಾತ್ಕಥಂ ಚನ||

ಅವನು ಇತರರನ್ನು ನೋಡುವುದಿಲ್ಲ. ಇತರರ ಮಾತನ್ನು ಕೇಳುವುದಿಲ್ಲ. ಅವಾಚ್ಯವಾದುದನ್ನು, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರಿಗೆ, ಎಂದೂ ನುಡಿಯುವುದಿಲ್ಲ.

12237010a ಯದ್ ಬ್ರಾಹ್ಮಣಸ್ಯ ಕುಶಲಂ ತದೇವ ಸತತಂ ವದೇತ್|

12237010c ತೂಷ್ಣೀಮಾಸೀತ ನಿಂದಾಯಾಂ ಕುರ್ವನ್ಭೇಷಜಮಾತ್ಮನಃ||

ಬ್ರಾಹ್ಮಣರಿಗೆ ಕುಶಲವಾದುದನ್ನೇ ಸತತವೂ ಮಾತನಾಡಬೇಕು. ನಿಂದೆಯ ಮಾತುಗಳನ್ನು ಕೇಳಿದಾಗ ಸುಮ್ಮನಿದ್ದು ಮನಸ್ಸಿಗೆ ಚಿಕೆತ್ಸೆಮಾಡಿಕೊಳ್ಳಬೇಕು.

12237011a ಯೇನ ಪೂರ್ಣಮಿವಾಕಾಶಂ ಭವತ್ಯೇಕೇನ ಸರ್ವದಾ|

12237011c ಶೂನ್ಯಂ ಯೇನ ಜನಾಕೀರ್ಣಂ ತಂ ದೇವಾ ಬ್ರಾಹ್ಮಣಂ ವಿದುಃ||

ಸರ್ವದಾ ಒಬ್ಬಂಟಿಗನಾಗಿದ್ದರೂ ಪೂರ್ಣ ಆಕಾಶದಂತಿರುವ ಮತ್ತು ಜನರಿಂದ ತುಂಬಿರುವ ಸ್ಥಳವನ್ನೂ ಶೂನ್ಯವೆಂದು ಭಾವಿಸುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

12237012a ಯೇನ ಕೇನ ಚಿದಾಚ್ಚನ್ನೋ ಯೇನ ಕೇನ ಚಿದಾಶಿತಃ|

12237012c ಯತ್ರಕ್ವಚನಶಾಯೀ ಚ ತಂ ದೇವಾ ಬ್ರಾಹ್ಮಣಂ ವಿದುಃ||

ಯಾವುದು ಸಿಗುತ್ತದೆಯೋ ಅದರಿಂದಲೇ ದೇಹವನ್ನು ಮುಚ್ಚಿಕೊಳ್ಳುವ, ಯಾವುದು ಸಿಗುತ್ತದೆಯೋ ಅದನ್ನೇ ತಿನ್ನುವ, ಎಲ್ಲೆಂದರಲ್ಲಿ ಮಲಗುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

12237013a ಅಹೇರಿವ ಗಣಾದ್ಭೀತಃ ಸೌಹಿತ್ಯಾನ್ನರಕಾದಿವ|

12237013c ಕುಣಪಾದಿವ ಚ ಸ್ತ್ರೀಭ್ಯಸ್ತಂ ದೇವಾ ಬ್ರಾಹ್ಮಣಂ ವಿದುಃ||

ಹಾವನ್ನು ಕಂಡು ಭಯಪಡುವವನಂತೆ ಜನಸಮುದಾಯಕ್ಕೆ ಹೆದರುವ, ನರಕಕ್ಕೆ ಭಯಪಡುವವನಂತೆ ಮೃಷ್ಟಾನ್ನ ಭೋಜನಕ್ಕೆ ಹೆದರುವ, ಮತ್ತು ಹೆಣವನ್ನು ಕಂಡು ದೂರಹೋಗುವಂತೆ ಸ್ತ್ರೀಯರನ್ನು ಕಂಡು ದೂರಹೋಗುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

12237014a ನ ಕ್ರುಧ್ಯೇನ್ನ ಪ್ರಹೃಷ್ಯೇಚ್ಚ ಮಾನಿತೋಽಮಾನಿತಶ್ಚ ಯಃ|

12237014c ಸರ್ವಭೂತೇಷ್ವಭಯದಸ್ತಂ ದೇವಾ ಬ್ರಾಹ್ಮಣಂ ವಿದುಃ||

ಸಮ್ಮಾನಿತನಾದರೆ ಹರ್ಷಿಸದಿರುವ ಮತ್ತು ಅಪಮಾನಿತನಾದರೆ ಕುಪಿತನಾಗದಿರುವ ಹಾಗೂ ಸರ್ವಭೂತಗಳಿಗೂ ಅಭಯವನ್ನು ನೀಡುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

12237015a ನಾಭಿನಂದೇತ ಮರಣಂ ನಾಭಿನಂದೇತ ಜೀವಿತಮ್|

12237015c ಕಾಲಮೇವ ಪ್ರತೀಕ್ಷೇತ ನಿದೇಶಂ ಭೃತಕೋ ಯಥಾ||

ಮರಣವನ್ನು ಅಭಿನಂದಿಸಬಾರದು. ಜೀವಿಕೆಯನ್ನು ಅಭಿನಂದಿಸಬಾರದು. ಒಡೆಯನ ನಿರ್ದೇಶನಕ್ಕೆ ಕಾಯುವ ಸೇವಕನಂತೆ ಕಾಲವನ್ನೇ ಪ್ರತೀಕ್ಷಿಸುತ್ತಿರಬೇಕು.

12237016a ಅನಭ್ಯಾಹತಚಿತ್ತಃ ಸ್ಯಾದನಭ್ಯಾಹತವಾಕ್ತಥಾ|

12237016c ನಿರ್ಮುಕ್ತಃ ಸರ್ವಪಾಪೇಭ್ಯೋ ನಿರಮಿತ್ರಸ್ಯ ಕಿಂ ಭಯಮ್||

ಅನಭ್ಯಾಹತ ಚಿತ್ತನೂ, ಅನಭ್ಯಾಹತ ಮಾತುಳ್ಳವನೂ ಆಗಿರಬೇಕು. ಸರ್ವಪಾಪಗಳಿಂದಲೂ ನಿರ್ಮುಕ್ತನಾದ ನಿರಮಿತ್ರನಿಗೆ ಯಾವ ಭಯವು?

12237017a ಅಭಯಂ ಸರ್ವಭೂತೇಭ್ಯೋ ಭೂತಾನಾಮಭಯಂ ಯತಃ|

12237017c ತಸ್ಯ ದೇಹಾದ್ವಿಮುಕ್ತಸ್ಯ ಭಯಂ ನಾಸ್ತಿ ಕುತಶ್ಚನ||

ಸರ್ವಭೂತಗಳಿಗೂ ಅಭಯನಾದ ಮತ್ತು ಭೂತಗಳಿಂದ ಅಭಯನಾದ ಆ ದೇಹಮುಕ್ತನಿಗೆ ಯಾರಿಂದಲೂ ಭಯವಿರುವುದಿಲ್ಲ.

12237018a ಯಥಾ ನಾಗಪದೇಽನ್ಯಾನಿ ಪದಾನಿ ಪದಗಾಮಿನಾಮ್|

12237018c ಸರ್ವಾಣ್ಯೇವಾಪಿಧೀಯಂತೇ ಪದಜಾತಾನಿ ಕೌಂಜರೇ||

12237019a ಏವಂ ಸರ್ವಮಹಿಂಸಾಯಾಂ ಧರ್ಮಾರ್ಥಮಪಿಧೀಯತೇ|

12237019c ಅಮೃತಃ ಸ ನಿತ್ಯಂ ವಸತಿ ಯೋಽಹಿಂಸಾಂ ಪ್ರತಿಪದ್ಯತೇ||

ಅನ್ಯ ಪದಗಾಮಿಗಳ ಹೆಜ್ಜೆಯ ಗುರುತುಗಳೆಲ್ಲವೂ ಆನೆಯ ಹೆಜ್ಜೆಯ ಗುರುತುಗಳಲ್ಲಿ ಮುಚ್ಚಿಹೋಗುವಂತೆ ಎಲ್ಲ ಧರ್ಮಾರ್ಥಗಳೂ ಅಹಿಂಸೆಯಲ್ಲಿ ಅಡಗಿಹೋಗುತ್ತವೆ. ನಿತ್ಯವೂ ಅಹಿಂಸೆಯನ್ನು ಪ್ರತಿಪಾದಿಸುವವನು ಅಮೃತದಲ್ಲಿ ನೆಲೆಸಿರುತ್ತಾನೆ.

12237020a ಅಹಿಂಸಕಃ ಸಮಃ ಸತ್ಯೋ ಧೃತಿಮಾನ್ನಿಯತೇಂದ್ರಿಯಃ|

12237020c ಶರಣ್ಯಃ ಸರ್ವಭೂತಾನಾಂ ಗತಿಮಾಪ್ನೋತ್ಯನುತ್ತಮಾಮ್||

ಅಹಿಂಸಕ, ಸಮ, ಸತ್ಯ, ಧೃತಿಮಾನ್, ನಿಯತೇಂದ್ರಿಯ, ಮತ್ತು ಸರ್ವಭೂತಗಳ ಶರಣ್ಯನು ಅನುತ್ತಮ ಗತಿಯನ್ನು ಪಡೆಯುತ್ತಾನೆ.

12237021a ಏವಂ ಪ್ರಜ್ಞಾನತೃಪ್ತಸ್ಯ ನಿರ್ಭಯಸ್ಯ ಮನೀಷಿಣಃ|

12237021c ನ ಮೃತ್ಯುರತಿಗೋ ಭಾವಃ ಸ ಮೃತ್ಯುಮಧಿಗಚ್ಚತಿ||

ಹೀಗೆ ಪ್ರಜ್ಞಾನತೃಪ್ತ ನಿರ್ಭಯ ಮನೀಷಿಣಿಯನ್ನು ಮೃತ್ಯುವೂ ಅತಿಕ್ರಮಿಸಿ ಹೋಗುವುದಿಲ್ಲ. ಅವನೇ ಮೃತ್ಯುವನ್ನು ಅತಿಕ್ರಮಿಸುತ್ತಾನೆ.

12237022a ವಿಮುಕ್ತಂ ಸರ್ವಸಂಗೇಭ್ಯೋ ಮುನಿಮಾಕಾಶವತ್ ಸ್ಥಿತಮ್|

12237022c ಅಸ್ವಮೇಕಚರಂ ಶಾಂತಂ ತಂ ದೇವಾ ಬ್ರಾಹ್ಮಣಂ ವಿದುಃ||

ಸರ್ವಸಂಗಗಳಿಂದ ವಿಮುಕ್ತನಾದ, ಆಕಾಶದಂತೆ ನಿರ್ಲಿಪ್ತನಾದ,  ತನ್ನದೆನ್ನುವುದಿಲ್ಲದಿರುವ, ಏಕಾಕಿಯಾಗಿ ಸಂಚರಿಸುವ, ಶಾಂತ ಮುನಿಯನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

12237023a ಜೀವಿತಂ ಯಸ್ಯ ಧರ್ಮಾರ್ಥಂ ಧರ್ಮೋಽರತ್ಯರ್ಥಮೇವ ಚ[3]|

12237023c ಅಹೋರಾತ್ರಾಶ್ಚ ಪುಣ್ಯಾರ್ಥಂ ತಂ ದೇವಾ ಬ್ರಾಹ್ಮಣಂ ವಿದುಃ||

ಯಾರ ಜೀವನವು ಧರ್ಮದ ಸಲುವಾಗಿಯೇ ಇರುವುದೋ, ಯಾರ ಧರ್ಮವು ಅರ್ಥಕ್ಕಾಗಿಲ್ಲವೋ, ಮತ್ತು ಹಗಲು-ರಾತ್ರಿಗಳನ್ನು ಪುಣ್ಯಕರ್ಮಗಳಲ್ಲಿ ತೊಡಗಿಸಿರುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

12237024a ನಿರಾಶಿಷಮನಾರಂಭಂ ನಿರ್ನಮಸ್ಕಾರಮಸ್ತುತಿಮ್|

12237024c ಅಕ್ಷೀಣಂ ಕ್ಷೀಣಕರ್ಮಾಣಂ ತಂ ದೇವಾ ಬ್ರಾಹ್ಮಣಂ ವಿದುಃ||

ಆಸೆಗಳಿಲ್ಲದ, ಕರ್ಮಗಳನ್ನು ಆರಂಭಿಸದ, ನಮಸ್ಕಾರಗಳಿಲ್ಲದ, ಸ್ತುತಿಗಳಿಲ್ಲದ, ಕ್ಷೀಣಿಸದ, ಕರ್ಮಗಳನ್ನು ಕ್ಷೀಣಿಸಿಕೊಂಡಿರುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

12237025a ಸರ್ವಾಣಿ ಭೂತಾನಿ ಸುಖೇ ರಮಂತೇ

ಸರ್ವಾಣಿ ದುಃಖಸ್ಯ ಭೃಶಂ ತ್ರಸಂತಿ|

12237025c ತೇಷಾಂ ಭಯೋತ್ಪಾದನಜಾತಖೇದಃ

ಕುರ್ಯಾನ್ನ ಕರ್ಮಾಣಿ ಹಿ ಶ್ರದ್ದಧಾನಃ||

ಸರ್ವಭೂತಗಳೂ ಸುಖದಲ್ಲಿ ರಮಿಸುತ್ತವೆ. ಎಲ್ಲವೂ ದುಃಖಗಳಿಗೆ ಅತಿಯಾಗಿ ಹೆದರುತ್ತವೆ. ಶ್ರದ್ದಧಾನನು ಭಯೋತ್ಪಾದನದಿಂದ ಖೇದಗೊಳ್ಳುವ ಕರ್ಮಗಳನ್ನು ಮಾಡಬಾರದು.

12237026a ದಾನಂ ಹಿ ಭೂತಾಭಯದಕ್ಷಿಣಾಯಾಃ

ಸರ್ವಾಣಿ ದಾನಾನ್ಯಧಿತಿಷ್ಠತೀಹ|

12237026c ತೀಕ್ಷ್ಣಾಂ ತನುಂ ಯಃ ಪ್ರಥಮಂ ಜಹಾತಿ

ಸೋಽನಂತಮಾಪ್ನೋತ್ಯಭಯಂ ಪ್ರಜಾಭ್ಯಃ||

ಭೂತಗಳಿಗೆ ಅಭಯರೂಪದ ದಕ್ಷಿಣೆಯನ್ನು ಕೊಡುವ ದಾನವೇ ಇಲ್ಲಿ ಎಲ್ಲ ದಾನಗಳಿಗಿಂತಲೂ ಮಿಗಿಲಾದುದು. ಮೊಟ್ಟಮೊದಲು ತನ್ನ ತೀಕ್ಷ್ಣತೆಯನ್ನು ತ್ಯಜಿಸುವವನು ಪ್ರಜೆಗಳಿಗೆ ಅನಂತ ಅಭಯವನ್ನು ನೀಡುತ್ತಾನೆ.

12237027a ಉತ್ತಾನ ಆಸ್ಯೇನ ಹವಿರ್ಜುಹೋತಿ

ಲೋಕಸ್ಯ ನಾಭಿರ್ಜಗತಃ ಪ್ರತಿಷ್ಠಾ|

12237027c ತಸ್ಯಾಂಗಮಂಗಾನಿ ಕೃತಾಕೃತಂ ಚ

ವೈಶ್ವಾನರಃ ಸರ್ವಮೇವ ಪ್ರಪೇದೇ||

ಮೇಲ್ಮುಖನಾಗಿ ಬಾಯಿಯಿಂದಲೇ ಹವಿಸ್ಸನ್ನು ಸ್ವೀಕರಿಸಿ ಹೋಮಮಾಡಿಕೊಳ್ಳುತ್ತಾನೆ. ಲೋಕದ ನಾಭಿಯಾಗಿರುವ, ಜಗತ್ತಿನ ನೆಲೆಯಾಗಿರುವ, ಜಗತ್ತಿನ ಅಂಗ-ಪ್ರತ್ಯಂಗಗಳೂ, ಕಾರ್ಯ-ಕಾರಣವೂ ಆಗಿರುವ ವೈಶ್ವಾನರನಾಗಿ ಎಲ್ಲವನ್ನೂ ಹೊಂದುತ್ತಾನೆ.

12237028a ಪ್ರಾದೇಶಮಾತ್ರೇ ಹೃದಿ ನಿಶ್ರಿತಂ ಯತ್

ತಸ್ಮಿನ್ ಪ್ರಾಣಾನಾತ್ಮಯಾಜೀ ಜುಹೋತಿ|

12237028c ತಸ್ಯಾಗ್ನಿಹೋತ್ರಂ ಹುತಮಾತ್ಮಸಂಸ್ಥಂ

ಸರ್ವೇಷು ಲೋಕೇಷು ಸದೈವತೇಷು||

ಆತ್ಮಯಾಜಿಯು ನಾಭಿಯಿಂದ ಹೃದಯದವರೆಗಿನ ಪ್ರದೇಶವನ್ನು ಆಶ್ರಯಿಸಿರುವ ವೈಶ್ವಾನರನೆಂಬ ಚೈತನ್ಯ ಜ್ಯೋತಿಯಲ್ಲಿ ಪ್ರಾಣಗಳನ್ನು ಹೋಮಮಾಡುತ್ತಾನೆ. ಆ ಪ್ರಾಣಾಗ್ನಿಹೋತ್ರವು ತನ್ನ ಶರೀರದಲ್ಲಿಯೇ ನಡೆದರೂ, ಅವನು ವಿಶ್ವಾತ್ಮಕ ವೈಶ್ವಾನರಾಗ್ನಿಯೇ ಆಗಿರುವುದರಿಂದ ಅದರ ಮೂಲಕ ಅವನು ದೇವತೆಗಳೊಂದಿಗಿನ ಸರ್ವ ಲೋಕಗಳ ಪ್ರಾಣಾಗ್ನಿಹೋತ್ರವನ್ನು ಮಾಡಿದಂತಾಗುತ್ತದೆ.

12237029a ದೈವಂ ತ್ರಿಧಾತುಂ ತ್ರಿವೃತಂ ಸುಪರ್ಣಂ

ಯೇ ವಿದ್ಯುರಗ್ರ್ಯಂ ಪರಮಾರ್ಥತಾಂ ಚ|

12237029c ತೇ ಸರ್ವಲೋಕೇಷು ಮಹೀಯಮಾನಾ

ದೇವಾಃ ಸಮರ್ಥಾಃ ಸುಕೃತಂ ವ್ರಜಂತಿ[4]||

ವಾತ-ಪಿತ್ತ-ಕಫಗಳೆಂಬ ಮೂರು ಧಾತುಗಳಿಂದ ಕೂಡಿದ ಮತ್ತು ಸತ್ತ್ವ-ರಜಸ್-ತಮೋಗುಣಗಳಿಂದ ಆವೃತನಾದ ಸುಪರ್ಣರೂಪೀ ಶ್ರೇಷ್ಠ ಪರಮಾರ್ಥಸ್ವರೂಪವನ್ನು ತಿಳಿದವನು ಸರ್ವಲೋಕಗಳ ಗೌರವಕ್ಕೆ ಪಾತ್ರನಾಗುತ್ತಾನೆ ಮತ್ತು ಸಮರ್ಥ ದೇವತೆಗಳೂ ಅವನ ಸುಕೃತವನ್ನು ಹೊಗಳುತ್ತಾರೆ.

12237030a ವೇದಾಂಶ್ಚ ವೇದ್ಯಂ ಚ ವಿಧಿಂ ಚ ಕೃತ್ಸ್ನಮ್

ಅಥೋ ನಿರುಕ್ತಂ ಪರಮಾರ್ಥತಾಂ ಚ|

12237030c ಸರ್ವಂ ಶರೀರಾತ್ಮನಿ ಯಃ ಪ್ರವೇದ

ತಸ್ಮೈ ಸ್ಮ ದೇವಾಃ ಸ್ಪೃಹಯಂತಿ ನಿತ್ಯಮ್||

ವೇದಗಳು, ವೇದ್ಯ, ವಿಧಿ, ವೇದಶಬ್ದಾರ್ಥಗಳು ಮತ್ತು ಪರಬ್ರಹ್ಮತತ್ತ್ವ – ಎಲ್ಲವೂ ತನ್ನ ಶರೀರದಲ್ಲಿರುವುದನ್ನು ತಿಳಿದುಕೊಂಡಿರುವವನನ್ನು ದೇವತೆಗಳೂ ನೋಡಬಯಸುತ್ತಾರೆ.

12237031a ಭೂಮಾವಸಕ್ತಂ ದಿವಿ ಚಾಪ್ರಮೇಯಂ

ಹಿರಣ್ಮಯಂ ಯೋಽಂಡಜಮಂಡಮಧ್ಯೇ|

12237031c ಪತತ್ರಿಣಂ ಪಕ್ಷಿಣಮಂತರಿಕ್ಷೇ

ಯೋ ವೇದ ಭೋಗ್ಯಾತ್ಮನಿ ದೀಪ್ತರಶ್ಮಿಃ||

ಭೂಮಿಯಲ್ಲಿ ಆಸಕ್ತನಲ್ಲದ, ದಿವಿಯಲ್ಲಿ ಅಪ್ರಮೇಯನಾಗಿರುವ, ಬ್ರಹ್ಮಾಂಡದ ಮಧ್ಯದಲ್ಲಿ ಅಂಡಜ ಹಿರಣ್ಮಯ ಪಕ್ಷಿರೂಪದ ಪರಮಾತ್ಮನನ್ನು ಭೋಗಾತ್ಮಕ ಶರೀರದ ಹೃದಯಾಕಾಶದಲ್ಲಿ ಕಾಣುವವನು ತೇಜೋಮಯ ರಶ್ಮಿಗಳಿಂದ ಪ್ರಕಾಶಿಸುತ್ತಾನೆ.

12237032a ಆವರ್ತಮಾನಮಜರಂ ವಿವರ್ತನಂ

ಷಣ್ಣೇಮಿಕಂ ದ್ವಾದಶಾರಂ ಸುಪರ್ವ|

12237032c ಯಸ್ಯೇದಮಾಸ್ಯೇ ಪರಿಯಾತಿ ವಿಶ್ವಂ

ತತ್ಕಾಲಚಕ್ರಂ ನಿಹಿತಂ ಗುಹಾಯಾಮ್||

ನಿರಂತರ ತಿರುಗುತ್ತಿರುವ, ಅಜರವಾದ, ಆಯುಸ್ಸನ್ನು ಕ್ಷೀಣಿಸುತ್ತಿರುವ, ಋತುರೂಪದ ಆರು ಗುಂಭವುಳ್ಳ, ಮಾಸರೂಪದ ಹನ್ನೆರಡು ಅರೆಕಾಲುಗಳುಳ್ಳ, ದರ್ಶ-ಪೂರ್ಣಮಾಸಾದಿ ಪರ್ವಗಳುಳ್ಳ ಕಾಲಚಕ್ರವು ಬುದ್ಧಿರೂಪದ ಗುಹೆಯಲ್ಲಿ ಅಡಗಿಕೊಂಡಿದೆ. ಆ ಕಾಲಚಕ್ರಕ್ಕೆ ವಿಶ್ವವೇ ಆಹಾರರೂಪದಲ್ಲಿ ಹೋಗಿ ಬೀಳುತ್ತಿರುತ್ತದೆ.

12237033a ಯಃ ಸಂಪ್ರಸಾದಂ ಜಗತಃ ಶರೀರಂ

ಸರ್ವಾನ್ಸ ಲೋಕಾನಧಿಗಚ್ಚತೀಹ|

12237033c ತಸ್ಮಿನ್ ಹುತಂ ತರ್ಪಯತೀಹ ದೇವಾಂಸ್

ತೇ ವೈ ತೃಪ್ತಾಸ್ತರ್ಪಯಂತ್ಯಾಸ್ಯಮಸ್ಯ||

ಜಗತ್ತಿನ ಶರೀರರೂಪನಾಗಿರುವ, ಪ್ರಸನ್ನತೆಯನ್ನುಂಟುಮಾದುವ ಪರಬ್ರಹ್ಮಪರಮಾತ್ಮನು ಸರ್ವಲೋಕಗಳನ್ನು ಅತಿಕ್ರಮಿಸಿ ನಿಂತಿದ್ದಾನೆ. ಅವನಲ್ಲಿ ಮಾಡುವ ಇಂದ್ರಿಯಾದಿಗಳ ಹೋಮವು ದೇವತೆಗಳನ್ನು ತೃಪ್ತಿಗೊಳಿಸುತ್ತದೆ ಮತ್ತು ಹಾಗೆ ತೃಪ್ತರಾದ ದೇವತೆಗಳು ಅವನ ಮುಖವನ್ನು ಜ್ಞಾನಾಮೃತದಿಂದ ಸಿಂಪಡಿಸಿ ತೃಪ್ತಿಗೊಳಿಸುತ್ತಾರೆ.

12237034a ತೇಜೋಮಯೋ ನಿತ್ಯತನುಃ ಪುರಾಣೋ

ಲೋಕಾನನಂತಾನಭಯಾನುಪೈತಿ|

12237034c ಭೂತಾನಿ ಯಸ್ಮಾನ್ನ ತ್ರಸಂತೇ ಕದಾ ಚಿತ್

ಸ ಭೂತೇಭ್ಯೋ ನ ತ್ರಸತೇ ಕದಾ ಚಿತ್||

ಅಂತಹ ತೇಜೋಮಯ ನಿತ್ಯತನು ಪುರಾಣನು ಅಭಯವಾದ ಅನಂತ ಲೋಕಗಳನ್ನು ಪಡೆಯುತ್ತಾನೆ. ಯಾರಿಂದ ಯಾವ ಪ್ರಾಣಿಗಳೂ ಭಯಪಡುವುದಿಲ್ಲವೋ ಅಂಥವನು ಯಾವ ಪ್ರಾಣಿಗಳಿಗೂ ಭಯಪಡುವುದಿಲ್ಲ.

12237035a ಅಗರ್ಹಣೀಯೋ ನ ಚ ಗರ್ಹತೇಽನ್ಯಾನ್

ಸ ವೈ ವಿಪ್ರಃ ಪರಮಾತ್ಮಾನಮೀಕ್ಷೇತ್|

12237035c ವಿನೀತಮೋಹೋ ವ್ಯಪನೀತಕಲ್ಮಷೋ

ನ ಚೇಹ ನಾಮುತ್ರ ಚ ಯೋಽರ್ಥಮೃಚ್ಚತಿ||

ತಾನೂ ನಿಂದ್ಯನಾಗದೇ ಇತರರನ್ನೂ ನಿಂದಿಸಿದವನೇ ವಿಪ್ರನು. ಅವನೇ ಪರಮಾತ್ಮನನ್ನು ಕಂಡುಕೊಳ್ಳುತ್ತಾನೆ. ಮೋಹವನ್ನು ಕಳೆದುಕೊಂಡು ಕಲ್ಮಷರಹಿತನಾಗಿರುವವನು ಇಹ ಮತ್ತು ಪರಲೋಕಗಳ ಭೋಗಗಳನ್ನು ಬಯಸುವುದಿಲ್ಲ.

12237036a ಅರೋಷಮೋಹಃ ಸಮಲೋಷ್ಟಕಾಂಚನಃ

ಪ್ರಹೀಣಶೋಕೋ[5] ಗತಸಂಧಿವಿಗ್ರಹಃ|

12237036c ಅಪೇತನಿಂದಾಸ್ತುತಿರಪ್ರಿಯಾಪ್ರಿಯಶ್

ಚರನ್ನುದಾಸೀನವದೇಷ ಭಿಕ್ಷುಕಃ||

ಅವನು ರೋಷ-ಮೋಹಗಳಿಲ್ಲದವನು. ಮಣ್ಣಿನ ಹೆಂಟೆ ಮತ್ತು ಚಿನ್ನವನ್ನು ಸಮಾನವಾಗಿ ಕಾಣುವವನು. ಶೋಕವನ್ನು ಕಳೆದುಕೊಂಡಿರುವವನು. ಸ್ನೇಗ-ಹಗೆಗಳಿಲ್ಲದವನು. ನಿಂದಾ-ಸ್ತುತಿಗಳನ್ನು ಲೆಕ್ಕಿಸದಿರುವವನು. ಪ್ರಿಯ-ಅಪ್ರಿಯಗಳಿಲ್ಲದವನು. ಯಾವಾಗಲೂ ಉದಾಸೀನನಾಗಿ ಸಂಚರಿಸುತ್ತಿರುವನು. ಇವನೇ ಸಂನ್ಯಾಸಿಯು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಸಪ್ತತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೇಳನೇ ಅಧ್ಯಾಯವು.

[1] ಕೆಲವರು ಬ್ರಹ್ಮಚರ್ಯ-ಗೃಹಸ್ಥಾಶ್ರಮಗಳೆಂದು ಅನುವಾದಿಸಿದ್ದಾರೆ (ಭಾರತ ದರ್ಶನ). ಕೆಲವರು ಗಹಸ್ಥಾಶ್ರಮ-ವಾನಪ್ರಸ್ಥಾಶ್ರಮಗಳೆಂದು ಸೂಚಿಸಿದ್ದಾರೆ (ಬಿಬೇಕ್ ದೆಬ್ರೋಯ್).

[2] ದ್ವಿಪಾ (ಭಾರತ ದರ್ಶನ).

[3] ಧರ್ಮೋ ಹರ್ಯರ್ಥವೇವ ಚ| (ಭಾರತ ದರ್ಶನ).

[4] ದೇವಾಃ ಸಮರ್ಯಾಃ ಸುಕೃತಂ ವದಂತಿ| (ಭಾರತ ದರ್ಶನ).

[5] ಪ್ರಹೀಣಕೋಶೋ (ಬಾರತ ದರ್ಶನ).

Comments are closed.