Shanti Parva: Chapter 236

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೬

ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳ ವರ್ಣನೆ (1-30).

12236001 ಭೀಷ್ಮ ಉವಾಚ|

12236001a ಪ್ರೋಕ್ತಾ ಗೃಹಸ್ಥವೃತ್ತಿಸ್ತೇ ವಿಹಿತಾ ಯಾ ಮನೀಷಿಣಾಮ್|

12236001c ತದನಂತರಮುಕ್ತಂ ಯತ್ತನ್ನಿಬೋಧ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಮನೀಷಿಣರು ವಿಹಿಸಿದ ಗೃಹಸ್ಥವೃತ್ತಿಯನ್ನು ನಿನಗೆ ಹೇಳಿಯಾಯಿತು. ಅದರ ನಂತರದ ಆಶ್ರಮದ ಕುರಿತು ಹೇಳಿರುವುದನ್ನು ಕೇಳು.

12236002a ಕ್ರಮಶಸ್ತ್ವವಧೂಯೈನಾಂ ತೃತೀಯಾಂ ವೃತ್ತಿಮುತ್ತಮಾಮ್|

12236002c ಸಂಯೋಗವ್ರತಖಿನ್ನಾನಾಂ ವಾನಪ್ರಸ್ಥಾಶ್ರಮೌಕಸಾಮ್||

ಕ್ರಮೇಣವಾಗಿ ಉತ್ತಮ ಆಚಾರವುಳ್ಳ ಮೂರನೆಯ ಆಶ್ರಮವನ್ನು ಪ್ರವೇಶಿಸಬೇಕು. ವ್ರತಗಳನ್ನು ಆಚರಿಸುವ ಕಷ್ಟಗಳಿಂದ ಖಿನ್ನರಾಗದವರಿಗೆ ಹೇಳಿಟ್ಟಿರುವ ಇದು ವಾನಪ್ರಸ್ಥಾಶ್ರಮವು.

12236003a ಶ್ರೂಯತಾಂ ಪಾರ್ಥ ಭದ್ರಂ ತೇ ಸರ್ವಲೋಕಾಶ್ರಯಾತ್ಮನಾಮ್|

12236003c ಪ್ರೇಕ್ಷಾಪೂರ್ವಂ ಪ್ರವೃತ್ತಾನಾಂ ಪುಣ್ಯದೇಶನಿವಾಸಿನಾಮ್||

ಪಾರ್ಥ! ನಿನಗೆ ಮಂಗಳವಾಗಲಿ! ಸರ್ವಲೋಕಗಳೂ ಆಶ್ರಯಿಸುವ ಹಿಂದೆ ನೋಡಿದ್ದ ಈ ಪುಣ್ಯ ಆಶ್ರಮ ವಾಸಿಗಳ ಪ್ರವೃತ್ತಿಯ ಕುರಿತು ಕೇಳು.”

12236004 ವ್ಯಾಸ ಉವಾಚ|

12236004a ಗೃಹಸ್ಥಸ್ತು ಯದಾ ಪಶ್ಯೇದ್ವಲೀಪಲಿತಮಾತ್ಮನಃ|

12236004c ಅಪತ್ಯಸ್ಯೈವ ಚಾಪತ್ಯಂ ವನಮೇವ ತದಾಶ್ರಯೇತ್||

ವ್ಯಾಸನು ಹೇಳಿದನು: “ಗೃಹಸ್ಥನು ಯಾವಾಗ ತನ್ನ ತಲೆಗೂದಲು ನೆರೆದಿರುವುದನ್ನು ಮತ್ತು ಚರ್ಮವು ಸುಕ್ಕುಕಟ್ಟಿರುವುದನ್ನು ಗಮನಿಸುವನೋ ಹಾಗೂ ಅವನ ಮಕ್ಕಳಿಗೂ ಮಕ್ಕಳಾಗುತ್ತವೆಯೋ ಆಗ ವನವನ್ನು ಆಶ್ರಯಿಸಬೇಕು.

12236005a ತೃತೀಯಮಾಯುಷೋ ಭಾಗಂ ವಾನಪ್ರಸ್ಥಾಶ್ರಮೇ ವಸೇತ್|

12236005c ತಾನೇವಾಗ್ನೀನ್ಪರಿಚರೇದ್ಯಜಮಾನೋ ದಿವೌಕಸಃ||

ತನ್ನ ಆಯುಸ್ಸಿನ ಮೂರನೇ ಭಾಗದಲ್ಲಿ ವಾನಪ್ರಸ್ಥಾಶ್ರಮದಲ್ಲಿ ವಾಸಿಸಬೇಕು. ಅಲ್ಲಿಯೂ ಕೂಡ ಅಗ್ನಿಯ ಉಪಾಸನೆ ಮತ್ತು ದೇವತೆಗಳಿಗೆ ಹವಿಸ್ಸನ್ನು ನೀಡುತ್ತಿರಬೇಕು.

12236006a ನಿಯತೋ ನಿಯತಾಹಾರಃ ಷಷ್ಠಭಕ್ತೋಽಪ್ರಮಾದವಾನ್|

12236006c ತದಗ್ನಿಹೋತ್ರಂ ತಾ ಗಾವೋ ಯಜ್ಞಾಂಗಾನಿ ಚ ಸರ್ವಶಃ||

ನಿಯತನಾಗಿರಬೇಕು. ನಿಯತಾಹಾರಿಯಾಗಿರಬೇಕು. ದಿನದ ಆರನೇ ಭಾಗದಲ್ಲಿ ಮಾತ್ರ ಆಹಾರವನ್ನು ಸೇವಿಸಬೇಕು. ಅಪ್ರಮತ್ತನಾಗಿರಬೇಕು. ಅಗ್ನಿಹೋತ್ರ, ಗೋಸೇವೆ ಮತ್ತು ಯಜ್ಞಾಂಗಗಳೆಲ್ಲವನ್ನೂ ಮಾಡುತ್ತಿರಬೇಕು.

12236007a ಅಕೃಷ್ಟಂ ವೈ ವ್ರೀಹಿಯವಂ ನೀವಾರಂ ವಿಘಸಾನಿ ಚ|

12236007c ಹವೀಂಷಿ ಸಂಪ್ರಯಚ್ಚೇತ ಮಖೇಷ್ವತ್ರಾಪಿ ಪಂಚಸು||

ಕೃಷಿಮಾಡದೇ ಬೆಳೆಯುವ ಧಾನ್ಯ-ಕಾಳುಗಳು ಮತ್ತು ವಿಘಸಗಳಿಂದ ಜೀವನ ನಿರ್ವಹಣೆಯನ್ನು ಮಾಡಬೇಕು. ಪಂಚಮಹಾಯಜ್ಞಗಳ ಮೂಲಕ ಹವಿಸ್ಸನ್ನು ನೀಡಬೇಕು.

12236008a ವಾನಪ್ರಸ್ಥಾಶ್ರಮೇಽಪ್ಯೇತಾಶ್ಚತಸ್ರೋ ವೃತ್ತಯಃ ಸ್ಮೃತಾಃ|

12236008c ಸದ್ಯಃಪ್ರಕ್ಷಾಲಕಾಃ ಕೇ ಚಿತ್ಕೇ ಚಿನ್ಮಾಸಿಕಸಂಚಯಾಃ||

ವಾನಪ್ರಸ್ಥಾಶ್ರಮದಲ್ಲಿಯೂ ನಾಲ್ಕು ವೃತ್ತಿಗಳನ್ನು ಹೇಳಿದ್ದಾರೆ. ಕೆಲವರು ದಿನಕ್ಕೆ ಬೇಕಾಗುವಷ್ಟೇ ಆಹಾರವನ್ನು ಸಂಗ್ರಹಿಸಿ ತೊಳೆದಿಡುತ್ತಾರೆ. ಕೆಲವರು ಒಂದು ತಿಂಗಳಿಗೆ ಬೇಕಾಗುವಷ್ಟನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ.

12236009a ವಾರ್ಷಿಕಂ ಸಂಚಯಂ ಕೇ ಚಿತ್ಕೇ ಚಿದ್ದ್ವಾದಶವಾರ್ಷಿಕಮ್|

12236009c ಕುರ್ವಂತ್ಯತಿಥಿಪೂಜಾರ್ಥಂ ಯಜ್ಞತಂತ್ರಾರ್ಥಸಿದ್ಧಯೇ||

ಕೆಲವರು ಒಂದು ವರ್ಷಕ್ಕೆ ಬೇಕಾಗುವಷ್ಟನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಅತಿಥಿಪೂಜೆಮಾಡಲು ಮತ್ತು ಯಜ್ಞತಂತ್ರಾರ್ಥ ಸಿದ್ಧಿಗಾಗಿ ಹನ್ನೆರಡು ವರ್ಷಗಳಿಗೆ ಬೇಕಾಗುವಷ್ಟನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ.

12236010a ಅಭ್ರಾವಕಾಶಾ ವರ್ಷಾಸು ಹೇಮಂತೇ ಜಲಸಂಶ್ರಯಾಃ|

12236010c ಗ್ರೀಷ್ಮೇ ಚ ಪಂಚತಪಸಃ ಶಶ್ವಚ್ಚ ಮಿತಭೋಜನಾಃ||

ಮಳೆಗಾಲದಲ್ಲಿ ಆಕಾಶವನ್ನೇ ಹೊದಿಕೆಯನ್ನಾಗಿರಿಸಿಕೊಂಡಿರುತ್ತಾರೆ. ಛಳಿಗಾಲದಲ್ಲಿ ನೀರಿನಲ್ಲಿ ವಾಸಿಸುತ್ತಾರೆ. ಬೇಸಗೆಯಲ್ಲಿ ಪಂಚಾಗ್ನಿಗಳ ಮಧ್ಯೆ ತಪಸ್ಸನ್ನಾಚರಿಸುತ್ತಾರೆ. ಯಾವಾಗಲೂ ಮಿತಭೋಜನ ಮಾಡುತ್ತಿರಬೇಕು.

12236011a ಭೂಮೌ ವಿಪರಿವರ್ತಂತೇ ತಿಷ್ಠೇದ್ವಾ ಪ್ರಪದೈರಪಿ|

12236011c ಸ್ಥಾನಾಸನೈರ್ವರ್ತಯಂತಿ ಸವನೇಷ್ವಭಿಷಿಂಚತೇ||

ಭೂಮಿಯ ಮೇಲೆ ಹೊರಳಾಡುತ್ತಾರೆ. ತುದಿಗಾಲಿನಲ್ಲಿ ನಿಂತಿರುತ್ತಾರೆ. ಒಂದೇ ಸ್ಥಳದಲ್ಲಿ ಒಂದೇ ಆಸನದಲ್ಲಿ ಕುಳಿತಿರುತ್ತಾರೆ. ಮೂರು ಹೊತ್ತೂ ಸ್ನಾನಮಾಡುತ್ತಾರೆ.

12236012a ದಂತೋಲೂಖಲಿನಃ ಕೇ ಚಿದಶ್ಮಕುಟ್ಟಾಸ್ತಥಾಪರೇ|

12236012c ಶುಕ್ಲಪಕ್ಷೇ ಪಿಬಂತ್ಯೇಕೇ ಯವಾಗೂಂ ಕ್ವಥಿತಾಂ ಸಕೃತ್||

ಕೆಲವರು ಹಲ್ಲಿನಿಂದಲೇ ಧಾನ್ಯದ ಹೊಟ್ಟನ್ನು ತೆಗೆದು ತಿನ್ನುತ್ತಾರೆ. ಇನ್ನು ಕೆಲವರು ಕಲ್ಲಿನಿಂದ ಕುಟ್ಟಿ ತಿನ್ನುತ್ತಾರೆ. ಕೆಲವರು ಶುಕ್ಲಪಕ್ಷದಲ್ಲಿ ಮಾತ್ರ ಬೇಯಿಸಿದ ಗಂಜಿಯನ್ನು ಕುಡಿಯುತ್ತಾರೆ.

12236013a ಕೃಷ್ಣಪಕ್ಷೇ ಪಿಬಂತ್ಯೇಕೇ ಭುಂಜತೇ ಚ ಯಥಾಕ್ರಮಮ್|

12236013c ಮೂಲೈರೇಕೇ ಫಲೈರೇಕೇ ಪುಷ್ಪೈರೇಕೇ ದೃಢವ್ರತಾಃ||

ಕೆಲವರು ಕೃಷ್ಣಪಕ್ಷದಲ್ಲಿ ಮಾತ್ರ ಗಂಜಿಯನ್ನು ಕುಡಿಯುತ್ತಾರೆ. ಇನ್ನು ಕೆಲವರು ಸಿಕ್ಕಿದಾಗ ಊಟಮಾಡುತ್ತಾರೆ. ಕೆಲವರು ಗೆಡ್ಡೆಗೆಣಸುಗಳನ್ನು ಮಾತ್ರ ತಿನ್ನುತ್ತಾರೆ. ಕೆಲವರು ಫಲಗಳನ್ನು ಮಾತ್ರ ಮತ್ತು ಇತರ ದೃಢವ್ರತರು ಪುಷ್ಪಗಳನ್ನು ಮಾತ್ರ ತಿನ್ನುತ್ತಾರೆ.

12236014a ವರ್ತಯಂತಿ ಯಥಾನ್ಯಾಯಂ ವೈಖಾನಸಮತಂ ಶ್ರಿತಾಃ|

12236014c ಏತಾಶ್ಚಾನ್ಯಾಶ್ಚ ವಿವಿಧಾ ದೀಕ್ಷಾಸ್ತೇಷಾಂ ಮನೀಷಿಣಾಮ್||

ವಾನಪ್ರಸ್ಥಾಶ್ರಮದಲ್ಲಿರುವ ವಿದ್ವಾಂಸರು ಇನ್ನೂ ಅನ್ಯ ವಿವಿಧ ದೀಕ್ಷೆಗಳನ್ನು ಮಾಡಿಕೊಂಡು ಯಥಾನ್ಯಾಯವಾಗಿ ವರ್ತಿಸುತ್ತಾರೆ.

12236015a ಚತುರ್ಥಶ್ಚೌಪನಿಷದೋ ಧರ್ಮಃ ಸಾಧಾರಣಃ ಸ್ಮೃತಃ|

12236015c ವಾನಪ್ರಸ್ಥೋ ಗೃಹಸ್ಥಶ್ಚ ತತೋಽನ್ಯಃ ಸಂಪ್ರವರ್ತತೇ||

ಉಪನಿಷತ್ತುಗಳು ಪ್ರತಿಪಾದಿಸುವ ನಾಲ್ಕನೆಯ ಆಶ್ರಮದಲ್ಲಿ ಎಲ್ಲರಿಗೂ ಇರುವ ಧರ್ಮವನ್ನೇ ಹೇಳಿದ್ದಾರೆ. ವಾನಪ್ರಸ್ಥ-ಗೃಹಸ್ಥಾಶ್ರಮಗಳಿಗಿಂತಲೂ ಅನ್ಯ ವಿಶೇಷಧರ್ಮಗಳೂ ಇದರಲ್ಲಿವೆ.

12236016a ಅಸ್ಮಿನ್ನೇವ ಯುಗೇ ತಾತ ವಿಪ್ರೈಃ ಸರ್ವಾರ್ಥದರ್ಶಿಭಿಃ|

12236016c ಅಗಸ್ತ್ಯಃ ಸಪ್ತ ಋಷಯೋ ಮಧುಚ್ಚಂದೋಽಘಮರ್ಷಣಃ||

12236017a ಸಾಂಕೃತಿಃ ಸುದಿವಾ ತಂಡಿರ್ಯವಾನ್ನೋಽಥ ಕೃತಶ್ರಮಃ|

12236017c ಅಹೋವೀರ್ಯಸ್ತಥಾ ಕಾವ್ಯಸ್ತಾಂಡ್ಯೋ ಮೇಧಾತಿಥಿರ್ಬುಧಃ||

12236018a ಶಲೋ ವಾಕಶ್ಚ ನಿರ್ವಾಕಃ ಶೂನ್ಯಪಾಲಃ ಕೃತಶ್ರಮಃ|

12236018c ಏವಂಧರ್ಮಸು ವಿದ್ವಾಂಸಸ್ತತಃ ಸ್ವರ್ಗಮುಪಾಗಮನ್||

ಮಗೂ! ಅಗಸ್ತ್ಯ, ಸಪ್ತರ್ಷಿಗಳು, ಮಧುಚ್ಛಂದ, ಅಘಮರ್ಷಣ, ಸಾಂಕೃತಿ, ಸುದಿವಾ, ಯವಧಾನ್ಯವನ್ನೇ ತಿನ್ನುತ್ತಿದ್ದ ಮತ್ತು ಶ್ರಮವನ್ನು ಜಯಿಸಿದ್ದ ತಂಡಿ, ಅಹೋವೀರ್ಯ, ಕಾವ್ಯ, ತಾಂಡ್ಯ, ಬುದ್ಧಿಮಾನ್ ಮೇಧಾತಿಥಿ, ಶಲ, ವಾಕ, ನಿರ್ವಾಕ, ಶ್ರಮವನ್ನು ಜಯಿಸಿದ್ದ ಶೂನ್ಯಪಾಲ – ಈ ಸರ್ವಾರ್ಥದರ್ಶಿ ವಿದ್ವಾಂಸ ವಿಪ್ರರು ಇದೇ ಯುಗದಲ್ಲಿ ಈ ಧರ್ಮವನ್ನು ಪಾಲಿಸಿ ಸ್ವರ್ಗವನ್ನು ಹೊಂದಿದರು.

12236019a ತಾತ ಪ್ರತ್ಯಕ್ಷಧರ್ಮಾಣಸ್ತಥಾ ಯಾಯಾವರಾ ಗಣಾಃ|

12236019c ಋಷೀಣಾಮುಗ್ರತಪಸಾಂ ಧರ್ಮನೈಪುಣದರ್ಶಿನಾಮ್||

ಮಗೂ! ಧರ್ಮದ ನೈಪುಣ್ಯತೆಯನ್ನು ಕಂಡಿರುವ ಮತ್ತು ಧರ್ಮವನ್ನು ಪ್ರತ್ಯಕ್ಷ ಅನುಭವಿಸಿರುವ ಉಗ್ರತಪಸ್ವಿಗಳಾದ ಯಾಯಾವರ ಎನ್ನುವ ಋಷಿಗಣಗಳಿವೆ.

12236020a ಅವಾಚ್ಯಾಪರಿಮೇಯಾಶ್ಚ ಬ್ರಾಹ್ಮಣಾ ವನಮಾಶ್ರಿತಾಃ|

12236020c ವೈಖಾನಸಾ ವಾಲಖಿಲ್ಯಾಃ ಸಿಕತಾಶ್ಚ ತಥಾಪರೇ||

ಅವರು ಮತ್ತು ಅಸಂಖ್ಯಾತ ವೈಖಾನಸ, ವಾಲಖಿಲ್ಯ, ಸಿಕತ ಮತ್ತು ಇನ್ನೂ ಅನೇಕ ಬ್ರಾಹ್ಮಣರು ವಾನಪ್ರಸ್ಥಧರ್ಮವನ್ನು ಆಶ್ರಯಿಸಿರುತ್ತಾರೆ.

12236021a ಕರ್ಮಭಿಸ್ತೇ ನಿರಾನಂದಾ ಧರ್ಮನಿತ್ಯಾ ಜಿತೇಂದ್ರಿಯಾಃ|

12236021c ಗತಾಃ ಪ್ರತ್ಯಕ್ಷಧರ್ಮಾಣಸ್ತೇ ಸರ್ವೇ ವನಮಾಶ್ರಿತಾಃ|

12236021e ಅನಕ್ಷತ್ರಾ ಅನಾಧೃಷ್ಯಾ ದೃಶ್ಯಂತೇ ಜ್ಯೋತಿಷಾಂ ಗಣಾಃ||

ಕಾಮ್ಯಕರ್ಮಗಳಲ್ಲಿ ಆನಂದಪಡದಿದ್ದ ಆ ಧರ್ಮನಿತ್ಯ ಜಿತೇಂದ್ರಿಯರೆಲ್ಲರೂ ವಾನಪ್ರಸ್ಥಾಶ್ರಮವನ್ನಾಚರಿಸಿ ಪ್ರತ್ಯಕ್ಷಧರ್ಮಿಗಳಾಗಿದ್ದರು. ಆ ಅನಾಧೃಷ್ಯರು ನಕ್ಷತ್ರಗಳಾಗಿರದೇ ಇರಬಹುದು. ಆದರೆ ಅವರು ಜ್ಯೋತಿಗಣಗಳಲ್ಲಿ ಕಾಣುತ್ತಾರೆ.

12236022a ಜರಯಾ ಚ ಪರಿದ್ಯೂನೋ ವ್ಯಾಧಿನಾ ಚ ಪ್ರಪೀಡಿತಃ|

12236022c ಚತುರ್ಥೇ ಚಾಯುಷಃ ಶೇಷೇ ವಾನಪ್ರಸ್ಥಾಶ್ರಮಂ ತ್ಯಜೇತ್|

12236022e ಸದ್ಯಸ್ಕಾರಾಂ ನಿರೂಪ್ಯೇಷ್ಟಿಂ ಸರ್ವವೇದಸದಕ್ಷಿಣಾಮ್||

ಮುಪ್ಪಿನಿಂದ ದುರ್ಬಲನಾದಾಗ ಮತ್ತು ವ್ಯಾಧಿಗಳಿಂದ ಪೀಡಿತನಾದಾಗ ತನ್ನ ಆಯುಸ್ಸಿನಲ್ಲಿ ಉಳಿದಿರುವ ನಾಲ್ಕನೇ ಭಾಗದಲ್ಲಿ ವಾನಪ್ರಸ್ಥಾಶ್ರಮವನ್ನು ತ್ಯಜಿಸಬೇಕು. ಒಂದೇ ದಿನದಲ್ಲಿ ಪೂರೈಸುವ ಇಷ್ಟಿಯನ್ನು ನಿರೂಪಿಸಿ ಸರ್ವವನ್ನೂ ದಕ್ಷಿಣೆಯನ್ನಾಗಿ ಕೊಡಬೇಕು.

12236023a ಆತ್ಮಯಾಜೀ ಸೋಽಽತ್ಮರತಿರಾತ್ಮಕ್ರೀಡಾತ್ಮಸಂಶ್ರಯಃ|

12236023c ಆತ್ಮನ್ಯಗ್ನೀನ್ಸಮಾರೋಪ್ಯ ತ್ಯಕ್ತ್ವಾ ಸರ್ವಪರಿಗ್ರಹಾನ್||

ಆತ್ಮಯಾಜಿಯಾಗಬೇಕು. ಆತ್ಮನಲ್ಲಿಯೇ ರತನಾಗಿರಬೇಕು. ಆತ್ಮದೊಡನೆಯೇ ಆಟವಾಡಬೇಕು. ಆತ್ಮನಲ್ಲಿಯೇ ಆಶ್ರಯ ಪಡೆದುಕೊಳ್ಳಬೇಕು. ಆತ್ಮನಲ್ಲಿ ಅಗ್ನಿಗಳನ್ನು ಸಮಾರೋಪಗೊಳಿಸಿ ಸರ್ವಪರಿಗ್ರಹಗಳನ್ನೂ ತ್ಯಜಿಸಬೇಕು.

12236024a ಸದ್ಯಸ್ಕ್ರಾಂಶ್ಚ ಯಜೇದ್ಯಜ್ಞಾನಿಷ್ಟೀಶ್ಚೈವೇಹ ಸರ್ವದಾ|

12236024c ಸದೈವ ಯಾಜಿನಾಂ ಯಜ್ಞಾದಾತ್ಮನೀಜ್ಯಾ ನಿವರ್ತತೇ||

ಸರ್ವದಾ ಆಗಿಂದಾಗಲೇ ಮಾಡಿ ಮುಗಿಸಬಹುದಾದ ಬ್ರಹ್ಮ ಯಜ್ಞ -ಇಷ್ಟಿಗಳನ್ನು ಮಾಡಬೇಕು. ಯಾಜ್ಞಿಕರ ಯಜ್ಞಕರ್ಮವನ್ನು ಬಿಟ್ಟು ಸದೈವ ಆತ್ಮಯಜ್ಞದಲ್ಲಿ ತೊಡಗಬೇಕು.

12236025a ತ್ರೀಂಶ್ಚೈವಾಗ್ನೀನ್ಯಜೇತ್ಸಮ್ಯಗಾತ್ಮನ್ಯೇವಾತ್ಮಮೋಕ್ಷಣಾತ್|

12236025c ಪ್ರಾಣೇಭ್ಯೋ ಯಜುಷಾ ಪಂಚ ಷಟ್ಪ್ರಾಶ್ನೀಯಾದಕುತ್ಸಯನ್||

ಮೂರು ಅಗ್ನಿಗಳನ್ನೂ ತನ್ನಲ್ಲಿಯೇ ಸಮಾರೋಪಿಸಿ ಸರಿಯಾಗಿ ಯಜ್ಞಮಾಡಬೇಕು. ಆತ್ಮಮೋಕ್ಷಕ್ಕಾಗಿ ಪಂಚ ಪ್ರಾಣಗಳಿಗೆ ಯಜುರ್ವೇದದ “ಪ್ರಾಣಾಯ ಸ್ವಾಹಾ” ಮುಂತಾದ ಮಂತ್ರಗಳನ್ನು ಉಚ್ಛರಿಸುತ್ತಾ, ಅನ್ನವನ್ನು ನಿಂದಿಸದೇ, ಐದು ಅಥವಾ ಆರು ಬಾರಿ, ತಿನ್ನಬೇಕು[1].

12236026a ಕೇಶಲೋಮನಖಾನ್ವಾಪ್ಯ ವಾನಪ್ರಸ್ಥೋ ಮುನಿಸ್ತತಃ|

12236026c ಆಶ್ರಮಾದಾಶ್ರಮಂ ಸದ್ಯಃ ಪೂತೋ ಗಚ್ಚತಿ ಕರ್ಮಭಿಃ||

ವಾನಪ್ರಸ್ಥದ ಕೊನೆಯಲ್ಲಿ ತನ್ನ ತಲೆಗೂದಲು, ಗಡ್ಡ ಮತ್ತು ಉಗುರುಗಳನ್ನು ತೆಗೆಯಿಸಿಕೊಂಡು ಮುನಿಯಾಗಬೇಕು. ಸಂನ್ಯಾಸದೀಕ್ಷೆಗೆ ಸಂಬಂಧಿಸಿದ ಕರ್ಮಗಳಿಂದ ಪವಿತ್ರನಾಗಿ ಒಂದು ಆಶ್ರಮದಿಂದ ಇನ್ನೊಂದು ಆಶ್ರಮಕ್ಕೆ ಹೋಗಬೇಕು.

12236027a ಅಭಯಂ ಸರ್ವಭೂತೇಭ್ಯೋ ಯೋ ದತ್ತ್ವಾ ಪ್ರವ್ರಜೇದ್ದ್ವಿಜಃ|

12236027c ಲೋಕಾಸ್ತೇಜೋಮಯಾಸ್ತಸ್ಯ ಪ್ರೇತ್ಯ ಚಾನಂತ್ಯಮಶ್ನುತೇ||

ಸರ್ವ ಭೂತಗಳಿಗೂ ಅಭಯವನ್ನಿತ್ತು ದ್ವಿಜನು ಸಂನ್ಯಾಸಿಯಾಗಿ ಹೊರಟು ಹೋಗಬೇಕು. ಮರಣಾನಂತರ ಅವನು ಅನಂತ ತೇಜೋಮಯ ಲೋಕಗಳನ್ನು ಪಡೆಯುತ್ತಾನೆ.

12236028a ಸುಶೀಲವೃತ್ತೋ ವ್ಯಪನೀತಕಲ್ಮಷೋ

ನ ಚೇಹ ನಾಮುತ್ರ ಚ ಕರ್ತುಮೀಹತೇ|

12236028c ಅರೋಷಮೋಹೋ ಗತಸಂಧಿವಿಗ್ರಹೋ

ಭವೇದುದಾಸೀನವದಾತ್ಮವಿನ್ನರಃ||

ಆತ್ಮಜ್ಞಾನಿ ನರನು ಸುಶೀಲಸಂಪನ್ನನೂ, ಕಲ್ಮಷಗಳನ್ನು ಕಳೆದುಕೊಂಡವನೂ, ಇಹ-ಪರಗಳಲ್ಲಿ ಯಾವ ಕರ್ಮಗಳನ್ನು ಮಾಡಲೂ ಬಯಸದಿರುವವನೂ, ರೋಷ-ಮೋಹಗಳಿಲ್ಲದವನೂ, ಸ್ನೇಹ-ಕಲಹಗಳಿಲ್ಲದವನೂ, ಉದಾಸೀನನೂ ಆಗಿರುತ್ತಾನೆ.

12236029a ಯಮೇಷು ಚೈವಾತ್ಮಗತೇಷು ನ ವ್ಯಥೇತ್

ಸ್ವಶಾಸ್ತ್ರಸೂತ್ರಾಹುತಿಮಂತ್ರವಿಕ್ರಮಃ|

12236029c ಭವೇದ್ಯಥೇಷ್ಟಾ ಗತಿರಾತ್ಮಯಾಜಿನೋ

ನ ಸಂಶಯೋ ಧರ್ಮಪರೇ ಜೀತೇಂದ್ರಿಯೇ||

ಅವನು ಯಮಗಳನ್ನು[2] ಪಾಲಿಸುವುದರಲ್ಲಿ ವ್ಯಥೆಪಡುವುದಿಲ್ಲ. ಸಂನ್ಯಾಸವಿಧಿಯ ಕುರಿತಾದ ಶಾಸ್ತ್ರವಿಧಿಗಳಂತೆ ತ್ಯಾಗಮಯ ಅಗ್ನಿಯಲ್ಲಿ ತನ್ನ ಸರ್ವಸ್ವವನ್ನೂ ಆಹುತಿಯನ್ನಾಗಿ ಹಾಕುವುದರಲ್ಲಿ ವಿಕ್ರಮಿಯಾಗಿರುತ್ತಾನೆ. ಅಂಥಹ ಜಿತೇಂದ್ರಿಯ ಧರ್ಮಪರ ಆತ್ಮಯಾಜಿಗೆ ಅವನು ಬಯಸಿದ ಗತಿಯು ಉಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

12236030a ತತಃ ಪರಂ ಶ್ರೇಷ್ಠಮತೀವ ಸದ್ಗುಣೈರ್

ಅಧಿಷ್ಠಿತಂ ತ್ರೀನಧಿವೃತ್ತಮುತ್ತಮಮ್|

12236030c ಚತುರ್ಥಮುಕ್ತಂ ಪರಮಾಶ್ರಮಂ ಶೃಣು

ಪ್ರಕೀರ್ತ್ಯಮಾನಂ ಪರಮಂ ಪರಾಯಣಮ್||

ಮೊದಲು ಹೇಳಿದ ಮೂರು ಆಶ್ರಮಗಳಿಗಿಂತಲೂ ಉತ್ತಮವಾಗಿರುವ, ಎಲ್ಲ ಆಶ್ರಮಗಳಲ್ಲಿಯೂ ಹೆಚ್ಚು ಶ್ರೇಷ್ಠವಾಗಿರುವ, ಅತೀವ ಸದ್ಗುಣಗಳಿಂದ ಕೂಡಿರುವ,  ನಾಲ್ಕನೆಯ ಆಶ್ರಮದ ಕುರಿತು ಹೇಳಿದ್ದೇನೆ. ಈ ಪರಮಾಶ್ರಮದ ಮಹತ್ತ್ವವನ್ನೇ ವಿಶೇಷರೂಪದಲ್ಲಿ ಪ್ರತಿಪಾದನೆ ಮಾಡುತ್ತೇನೆ. ಕೇಳು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಷಟ್ತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತಾರನೇ ಅಧ್ಯಾಯವು.

[1] ಇದು ಪ್ರಾಣಾಗ್ನಿಹೋತ್ರ. ತುಪ್ಪದಿಂದ ಕೂಡಿದ ಅನ್ನವೇ ಹವಿಸ್ಸು. ಮೊದಲು ಗಾಯತ್ರೀ ಮಹಾಮಂತ್ರದಿಂದ ಸಂಪ್ರೋಕ್ಷಣೆ. ಅನಂತರ ಅನ್ನವನ್ನು ಋತ ಮತ್ತು ಸತ್ಯಗಳಿಂದ ಪರಿಷಿಂಚನ ಮಾಡಿ ಸುತ್ತುಗಟ್ಟುವುದು ಅಥವಾ ಬಂಧಿಸುವುದು. ಅನಂತರ ಮುರು ಅಥವಾ ಐದು ಪ್ರಕಾರವಾದ ಬಲಿಹರಣ. ಪ್ರಾಣಾಗ್ನಿಹೋತ್ರಕ್ಕೆ ಮೊದಲು ಅಮೃತದ ಪ್ರಾಶನ. ಅನಂತರ ಪ್ರಾಣಾಗ್ನಿಹೋತ್ರದ ಆರಂಭ. ಓಂ ಪ್ರಾಣಾಯ ಸ್ವಾಹಾ, ಓಂ ಅಪಾನಯ ಸ್ವಾಹಾ, ಓಂ ವ್ಯಾನಾಯ ಸ್ವಾಹಾ, ಓಂ ಉದಾನಾಯ ಸ್ವಾಹಾ, ಓಂ ಸಮಾನಾಯ ಸ್ವಾಹಾ. ಆರನೆಯದು ಬ್ರಹ್ಮಣೇ ಸ್ವಾಹಾ. ಈ ಅಗ್ನಿ ಹೋತ್ರವು ಮುಗಿದನಂತರ ಊಟಮಾಡಬೇಕು. ಕಡೆಯಲ್ಲಿ ಅಮೃತದಿಂದಲೇ ಊಟಮಾಡಿದುದನ್ನು ಮುಚ್ಚಬೇಕು. ಹೀಗೆ ಊಟಮಾಡಿದ ಅನ್ನವೆಲ್ಲವೂ ಅಮೃತಮಯವಾಗುತ್ತದೆ. (ಭಾರತ ದರ್ಶನ)

[2] ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹಗಳು (ಭಾರತ ದರ್ಶನ).

Comments are closed.