Shanti Parva: Chapter 235

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೫

ಗಾರ್ಹಸ್ಥ್ಯಧರ್ಮದ ವರ್ಣನೆ (1-27).

12235001 ವ್ಯಾಸ ಉವಾಚ|

12235001a ದ್ವಿತೀಯಮಾಯುಷೋ ಭಾಗಂ ಗೃಹಮೇಧೀ ಗೃಹೇ ವಸೇತ್|

12235001c ಧರ್ಮಲಬ್ಧೈರ್ಯುತೋ ದಾರೈರಗ್ನೀನುತ್ಪಾದ್ಯ ಸುವ್ರತಃ||

ವ್ಯಾಸನು ಹೇಳಿದನು: “ಗೃಹಸ್ಥನು ತನ್ನ ಆಯುಸ್ಸಿನ ಎರಡನೇ ಭಾಗದಲ್ಲಿ ಮನೆಯಲ್ಲಿಯೇ ವಾಸಿಸಬೇಕು. ಧರ್ಮಾನುಸಾರವಾಗಿ ದೊರೆತ ಕನ್ಯೆಯನ್ನು ಮದುವೆಯಾಗಿ ಅಗ್ನಿಯನ್ನು ಪ್ರಾರಂಭಿಸಿ ಸುವ್ರತನಾಗಿರಬೇಕು.

12235002a ಗೃಹಸ್ಥವೃತ್ತಯಶ್ಚೈವ ಚತಸ್ರಃ ಕವಿಭಿಃ ಸ್ಮೃತಾಃ|

12235002c ಕುಸೂಲಧಾನ್ಯಃ ಪ್ರಥಮಃ ಕುಂಭೀಧಾನ್ಯಸ್ತ್ವನಂತರಮ್||

12235003a ಅಶ್ವಸ್ತನೋಽಥ ಕಾಪೋತೀಮಾಶ್ರಿತೋ ವೃತ್ತಿಮಾಹರೇತ್|

12235003c ತೇಷಾಂ ಪರಃ ಪರೋ ಜ್ಯಾಯಾನ್ಧರ್ಮತೋ ಲೋಕಜಿತ್ತಮಃ||

ಗೃಹಸ್ಥನಿಗೆ ನಾಲ್ಕು ವಿಧದ ವೃತ್ತಿಗಳನ್ನು ವಿದ್ವಾಂಸರು ಹೇಳಿದ್ದಾರೆ. ಕಣಜದ ತುಂಬ[1] ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳುವುದು ಮೊದಲನೆಯದು. ಕೊಳಗದ ತುಂಬ[2] ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳುವುದು ನಂತರದ್ದು. ಅಂದಿನ ದಿನಕ್ಕೆ ಸಾಕಾಗುವಷ್ಟು ಧಾನ್ಯವನ್ನು ಸಂಗ್ರಹಿಸುವುದು. ಮತ್ತು ಕಪೋತವೃತ್ತಿಯಿಂದ ಜೀವನ ನಡೆಸುವುದು. ಇವುಗಳಲ್ಲಿ ಮುಂದು ಮುಂದಿನವು ಧರ್ಮತಃ ಶ್ರೇಷ್ಠವು ಮತ್ತು ಉತ್ತಮ ಲೋಕಗಳನ್ನು ಜಯಿಸಲು ಸಹಾಯಮಾಡುವವು.

12235004a ಷಟ್ಕರ್ಮಾ ವರ್ತಯತ್ಯೇಕಸ್ತ್ರಿಭಿರನ್ಯಃ ಪ್ರವರ್ತತೇ|

12235004c ದ್ವಾಭ್ಯಾಮೇಕಶ್ಚತುರ್ಥಸ್ತು ಬ್ರಹ್ಮಸತ್ರೇ ವ್ಯವಸ್ಥಿತಃ|

12235004e ಗೃಹಮೇಧಿವ್ರತಾನ್ಯತ್ರ ಮಹಾಂತೀಹ ಪ್ರಚಕ್ಷತೇ||

ಇದರಲ್ಲಿ ಮೊದಲನೇ ವೃತ್ತಿಯವನು ಆರು ಕರ್ಮಗಳಲ್ಲಿ ತೊಡಗಿರುತ್ತಾನೆ. ಎರಡನೇ ವೃತ್ತಿಯವನು ಮೂರು ಕರ್ಮಗಳಲ್ಲಿಯೇ ತೊಡಗಿರುತ್ತಾನೆ. ಮೂರನೇ ವೃತ್ತಿಯವನು ಎರಡು ಕರ್ಮಗಳಲ್ಲಿಯೇ ತೊಡಗಿರುತ್ತಾನೆ. ಮತ್ತು ನಾಲ್ಕನೇ ವೃತ್ತಿಯವನು ಬ್ರಹ್ಮಸತ್ರದಲ್ಲಿ ಮಾತ್ರ ನಿರತನಾಗಿರುತ್ತಾನೆ. ಗೃಹಸ್ಥನಾದವನಿಗೆ ಶಾಸ್ತ್ರಗಳಲ್ಲಿ ಅನೇಕ ಮಹಾ ವ್ರತಗಳನ್ನು ಹೇಳಿದ್ದಾರೆ. 

12235005a ನಾತ್ಮಾರ್ಥಂ ಪಾಚಯೇದನ್ನಂ ನ ವೃಥಾ ಘಾತಯೇತ್ಪಶೂನ್|

12235005c ಪ್ರಾಣೀ ವಾ ಯದಿ ವಾಪ್ರಾಣೀ ಸಂಸ್ಕಾರಂ ಯಜುಷಾರ್ಹತಿ||

ಗೃಹಸ್ಥನು ಎಂದೂ ತನಗಾಗಿ ಮಾತ್ರ ಅಡುಗೆ ಮಾಡಬಾರದು. ವೃಥಾ ಪಶುಗಳನ್ನು ಕೊಲ್ಲಬಾರದು. ಪ್ರಾಣಿಯಾಗಲೀ ಅಥವಾ ಅಪ್ರಾಣಿಯಾಗಲೀ ಆಹಾರವನ್ನು ಯಜುಸ್ಸಿನಿಂದ ಸಂಸ್ಕರಿಸಬೇಕು.

12235006a ನ ದಿವಾ ಪ್ರಸ್ವಪೇಜ್ಜಾತು ನ ಪೂರ್ವಾಪರರಾತ್ರಯೋಃ|

12235006c ನ ಭುಂಜೀತಾಂತರಾಕಾಲೇ ನಾನೃತಾವಾಹ್ವಯೇತ್ ಸ್ತ್ರಿಯಮ್||

ಅವನು ಹಗಲು ಮಲಗಬಾರದು. ರಾತ್ರಿಯ ಮೊದಲನೇ ಮತ್ತು ಕಡೆಯ ಪ್ರಹರಗಳಲ್ಲಿ ಮಲಗಬಾರದು. ಬೆಳಿಗ್ಗೆಯ ಮತ್ತು ಸಾಯಂಕಾಲದ ಊಟಗಳ ಮಧ್ಯೆ ಏನನ್ನೂ ತಿನ್ನಬಾರದು. ಋತುಸಮಯವಲ್ಲದ ಸಮಯಗಳಲ್ಲಿ ಪತ್ನಿಯನ್ನು ಕೂಡಬಾರದು.

12235007a ನಾಸ್ಯಾನಶ್ನನ್ವಸೇದ್ವಿಪ್ರೋ ಗೃಹೇ ಕಶ್ಚಿದಪೂಜಿತಃ|

12235007c ತಥಾಸ್ಯಾತಿಥಯಃ ಪೂಜ್ಯಾ ಹವ್ಯಕವ್ಯವಹಾಃ ಸದಾ||

ಮನೆಗೆ ಬಂದ ಯಾವ ಬ್ರಾಹ್ಮಣನೂ ಸತ್ಕಾರವಿಲ್ಲದೇ ಮತ್ತು ಭೋಜನವಿಲ್ಲದೇ ಇರಬಾರದು. ಅತಿಥಿಗಳನ್ನು ಸದಾ ಹವ್ಯಕವ್ಯಗಳಿಂದ ಪೂಜಿಸಬೇಕು.

12235008a ವೇದವಿದ್ಯಾವ್ರತಸ್ನಾತಾಃ ಶ್ರೋತ್ರಿಯಾ ವೇದಪಾರಗಾಃ|

12235008c ಸ್ವಧರ್ಮಜೀವಿನೋ ದಾಂತಾಃ ಕ್ರಿಯಾವಂತಸ್ತಪಸ್ವಿನಃ|

12235008e ತೇಷಾಂ ಹವ್ಯಂ ಚ ಕವ್ಯಂ ಚಾಪ್ಯರ್ಹಣಾರ್ಥಂ ವಿಧೀಯತೇ||

ವೇದವಿದ್ಯಾವ್ರತಸ್ನಾತಕರು, ವೇದಪಾರಂಗತ ಶ್ರೋತ್ರಿಯರು, ಸ್ವಧರ್ಮಜೀವಿಗಳು, ದಾಂತರು, ಕ್ರಿಯಾವಂತ ತಪಸ್ವಿಗಳು ಬಂದರೆ ಅವರಿಗೆ ಹವ್ಯ ಕವ್ಯಗಳನ್ನು ಅರ್ಪಿಸಬೇಕೆಂದು ಶಾಸ್ತ್ರವು ಹೇಳುತ್ತದೆ.

12235009a ನ ಖರೈಃ ಸಂಪ್ರಯಾತಸ್ಯ ಸ್ವಧರ್ಮಾಜ್ಞಾನಕಸ್ಯ ಚ|

12235009c ಅಪವಿದ್ಧಾಗ್ನಿಹೋತ್ರಸ್ಯ ಗುರೋರ್ವಾಲೀಕಕಾರಿಣಃ||

12235010a ಸಂವಿಭಾಗೋಽತ್ರ ಭೂತಾನಾಂ ಸರ್ವೇಷಾಮೇವ ಶಿಷ್ಯತೇ|

12235010c ತಥೈವಾಪಚಮಾನೇಭ್ಯಃ ಪ್ರದೇಯಂ ಗೃಹಮೇಧಿನಾ||

ಸರ್ವ ಭೂತಗಳಿಗೂ ಅನ್ನವನ್ನು ವಿಭಜಿಸಿ ನೀಡಬೇಕೆಂಬ ಉಪದೇಶವಿದೆ. ಉಗುರುಗಳನ್ನು ಉದ್ದ ಬಿಟ್ಟಿರುವವರೇ ಆಗಿರಲಿ, ತಿಳಿದೂ ಸ್ವಧರ್ಮದಿಂದ ಭ್ರಷ್ಟರಾದವರೇ ಆಗಿರಲಿ, ಅಗ್ನಿಹೋತ್ರವನ್ನು ಬಿಟ್ಟವರೇ ಆಗಿರಲಿ, ಅಥವಾ ಹಿರಿ-ಕಿರಿಯರನ್ನು ಹಿಂಸಿಸಿದವರೇ ಆಗಿರಲಿ – ಗೃಹಸ್ಥನಾದವನು ಎಲ್ಲರಿಗೂ ಆಹಾರವನ್ನು ನೀಡಬೇಕು[3].

12235011a ವಿಘಸಾಶೀ ಭವೇನ್ನಿತ್ಯಂ ನಿತ್ಯಂ ಚಾಮೃತಭೋಜನಃ|

12235011c ಅಮೃತಂ ಯಜ್ಞಶೇಷಂ ಸ್ಯಾದ್ಭೋಜನಂ ಹವಿಷಾ ಸಮಮ್|

12235011e ಭೃತ್ಯಶೇಷಂ ತು ಯೋಽಶ್ನಾತಿ ತಮಾಹುರ್ವಿಘಸಾಶಿನಮ್||

ಗೃಹಸ್ಥನು ನಿತ್ಯವೂ ವಿಘಸಾಶಿಯಾಗಿರಬೇಕು. ಅದು ಅಮೃತಭೋಜನವು. ಯಜ್ಞಶೇಷವು ಅಮೃತವು ಮತ್ತು ಅದರ ಭೋಜನವು ಹವಿಸ್ಸಿಗೆ ಸಮವು. ಪೋಷ್ಯವರ್ಗದವರೆಲ್ಲರಿಗೂ ಊಟವಾದ ನಂತರ ಊಟಮಾಡುವ ಗೃಹಸ್ಥನನ್ನು ವಿಘಸಾಶಿ ಎನ್ನುತ್ತಾರೆ.

12235012a ಸ್ವದಾರನಿರತೋ ದಾಂತೋ ಹ್ಯನಸೂಯುರ್ಜಿತೇಂದ್ರಿಯಃ||

12235012c ಋತ್ವಿಕ್ಪುರೋಹಿತಾಚಾರ್ಯೈರ್ಮಾತುಲಾತಿಥಿಸಂಶ್ರಿತೈಃ|

12235013a ವೃದ್ಧಬಾಲಾತುರೈರ್ವೈದ್ಯೈರ್ಜ್ಞಾತಿಸಂಬಂಧಿಬಾಂಧವೈಃ||

12235013c ಮಾತಾಪಿತೃಭ್ಯಾಂ ಜಾಮೀಭಿರ್ಭ್ರಾತ್ರಾ ಪುತ್ರೇಣ ಭಾರ್ಯಯಾ|

12235014a ದುಹಿತ್ರಾ ದಾಸವರ್ಗೇಣ ವಿವಾದಂ ನ ಸಮಾಚರೇತ್||

12235014c ಏತಾನ್ವಿಮುಚ್ಯ ಸಂವಾದಾನ್ಸರ್ವಪಾಪೈಃ ಪ್ರಮುಚ್ಯತೇ|

ಗೃಹಸ್ಥನು ಸ್ವದಾರನಿರತನಾಗಿರಬೇಕು. ದಾಂತನೂ ಜಿತೇಂದ್ರಿಯನೂ ಆಗಿರಬೇಕು. ಅಸೂಯಾರಹಿತನಾಗಿರಬೇಕು. ಋತ್ವಿಜರು, ಪುರೋಹಿತರು, ಆಚಾರ್ಯರು, ಸೋದರಮಾವಂದಿರು, ಅತಿಥಿಗಳು, ಆಶ್ರಿತರು, ವೃದ್ಧರು, ಬಾಲಕರು, ರೋಗಿಗಳು, ವೈದ್ಯರು, ಜ್ಞಾತಿ-ಬಾಂಧವರು, ಸಂಬಂಧಿಕರು, ತಂದೆ-ತಾಯಂದಿರು, ಸಹೋದರರು, ಪುತ್ರರು, ಪತ್ನಿಯರು, ಪುತ್ರಿಯರು, ಮತ್ತು ದಾಸವರ್ಗದವರೊಂದಿಗೆ ಎಂದೂ ವಿವಾದವನ್ನು ನಡೆಸಬಾರದು. ಇವರೊಂದಿಗೆ ವಿವಾದವನ್ನು ಮಾಡದಿರುವವನು ಸರ್ವ ಪಾಪಗಳಿಂದಲೂ ಮುಕ್ತನಾಗುತ್ತಾನೆ.

12235015a ಏತೈರ್ಜಿತೈಸ್ತು ಜಯತಿ ಸರ್ವಾಽಲ್ಲೋಕಾನ್ನ ಸಂಶಯಃ|

12235015c ಆಚಾರ್ಯೋ ಬ್ರಹ್ಮಲೋಕೇಶಃ ಪ್ರಾಜಾಪತ್ಯೇ ಪಿತಾ ಪ್ರಭುಃ||

ಇವರನ್ನು ಜಯಿಸಿದವನು ಸರ್ವಲೋಕಗಳನ್ನೂ ಗೆಲ್ಲುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಆಚಾರ್ಯನು ಬ್ರಹ್ಮಲೋಕದ ಈಶನು. ತಂದೆಯು ಪ್ರಜಾಪತಿ ಲೋಕದ ಪ್ರಭುವು.

12235016a ಅತಿಥಿಸ್ತ್ವಿಂದ್ರಲೋಕೇಶೋ ದೇವಲೋಕಸ್ಯ ಚರ್ತ್ವಿಜಃ|

12235016c ಜಾಮಯೋಽಪ್ಸರಸಾಂ ಲೋಕೇ ವೈಶ್ವದೇವೇ ತು ಜ್ಞಾತಯಃ||

ಅತಿಥಿಯು ಇಂದ್ರಲೋಕಕ್ಕೂ, ಋತ್ವಿಜನು ದೇವಲೋಕಕ್ಕೂ ಸ್ವಾಮಿಗಳು. ಕುಟುಂಬದ ಸ್ತ್ರೀಯರು ಅಪ್ಸರಲೋಕಕ್ಕೆ ಸ್ವಾಮಿನಿಯರು. ಜ್ಞಾತಿಗಳು ವಿಶ್ವೇದೇವರ ಲೋಕಗಳಿಗೆ ಒಡೆಯರು.

12235017a ಸಂಬಂಧಿಬಾಂಧವಾ ದಿಕ್ಷು ಪೃಥಿವ್ಯಾಂ ಮಾತೃಮಾತುಲೌ|

12235017c ವೃದ್ಧಬಾಲಾತುರಕೃಶಾಸ್ತ್ವಾಕಾಶೇ ಪ್ರಭವಿಷ್ಣವಃ||

ಸಂಬಂಧಿ-ಬಾಂಧವರು ದಿಕ್ಕುಗಳಿಗೆ ಅಧಿಪತಿಗಳು. ತಾಯಿ ಮತ್ತು ಸೋದರಮಾವಂದಿರು ಭೂಮಿಯ ಅಧಿಪತಿಗಳು. ವೃದ್ಧರೂ, ಬಾಲಕರೂ, ರೋಗಿಗಳು ಮತ್ತು ದುರ್ಬಲರೂ ಆಕಾಶದ ಪ್ರಭುಗಳು.

12235018a ಭ್ರಾತಾ ಜ್ಯೇಷ್ಠಃ ಸಮಃ ಪಿತ್ರಾ ಭಾರ್ಯಾ ಪುತ್ರಃ ಸ್ವಕಾ ತನುಃ|

12235018c ಚಾಯಾ ಸ್ವಾ ದಾಶವರ್ಗಸ್ತು ದುಹಿತಾ ಕೃಪಣಂ ಪರಮ್||

ಹಿರಿಯಣ್ಣನು ತಂದೆಗೆ ಸಮಾನನು. ಪತ್ನೀ-ಪುತ್ರರು ತನ್ನ ಶರೀರ ಸಮಾನರು. ಸೇವಕವರ್ಗದವರು ಅವನ ನೆರಳಿನ ಸಮಾನರು. ಮಗಳು ಎಲ್ಲರಿಗಿಂತಲೂ ಹೆಚ್ಚು ದಯನೀಯಳು.

12235019a ತಸ್ಮಾದೇತೈರಧಿಕ್ಷಿಪ್ತಃ ಸಹೇನ್ನಿತ್ಯಮಸಂಜ್ವರಃ|

12235019c ಗೃಹಧರ್ಮರತೋ ವಿದ್ವಾನ್ ಧರ್ಮನಿತ್ಯೋ ಜಿತಕ್ಲಮಃ||

ಅದುದರಿಂದ ಇವರು ಅಕ್ಷೇಪಿಸಿದರೂ ಕ್ರೋಧರಹಿತನಾಗಿ ಅವರ ತಿರಸ್ಕಾರವನ್ನೂ ನಿತ್ಯವೂ ಸಹಿಸಿಕೊಳ್ಳಬೇಕು. ಗೃಹಸ್ಥಧರ್ಮನಿರತ ವಿದ್ವಾಂಸನು ಶ್ರಮಪಟ್ಟು ನಿತ್ಯವೂ ಧರ್ಮನಿರತನಾಗಿರಬೇಕು.

12235020a ನ ಚಾರ್ಥಬದ್ಧಃ ಕರ್ಮಾಣಿ ಧರ್ಮಂ ವಾ ಕಂ ಚಿದಾಚರೇತ್|

12235020c ಗೃಹಸ್ಥವೃತ್ತಯಸ್ತಿಸ್ರಸ್ತಾಸಾಂ ನಿಃಶ್ರೇಯಸಂ ಪರಮ್||

ಅವನು ಹಣದಾಸೆಗೆ ಕಟ್ಟುಬಿದ್ದು ಧರ್ಮಕರ್ಮಗಳನ್ನಾಗಲೀ ಅಥವಾ ಇನ್ಯಾವ ಕರ್ಮಗಳನ್ನಾಗಲೀ ಮಾಡಬಾರದು. ಗೃಹಸ್ಥನಿಗೆ, ಮೊದಲನೆಯದಕ್ಕಿಂತ ನಂತರದ್ದು ಶ್ರೇಷ್ಠವಾಗಿರುವ, ಮೂರು ವೃತ್ತಿಗಳಿವೆ[4].

12235021a ಪರಸ್ಪರಂ ತಥೈವಾಹುಶ್ಚಾತುರಾಶ್ರಮ್ಯಮೇವ ತತ್|

12235021c ಯೇ ಚೋಕ್ತಾ ನಿಯಮಾಸ್ತೇಷಾಂ ಸರ್ವಂ ಕಾರ್ಯಂ ಬುಭೂಷತಾ||

ನಾಲ್ಕು ಆಶ್ರಮಗಳಲ್ಲಿಯೂ ಮೊದಲನೆಯದಕ್ಕಿಂತ ನಂತರದ್ದು ಶ್ರೇಷ್ಠ ಎಂದು ಹೇಳುತ್ತಾರೆ. ಸರ್ವ ಕಾರ್ಯಗಳ ಅಭಿವೃದ್ಧಿಗಾಗಿ ಇವುಗಳೇ ನಿಯಮಗಳೆಂದು ಹೇಳಿದ್ದಾರೆ.

12235022a ಕುಂಭೀಧಾನ್ಯೈರುಂಚಶಿಲೈಃ ಕಾಪೋತೀಂ ಚಾಸ್ಥಿತೈಸ್ತಥಾ|

12235022c ಯಸ್ಮಿಂಶ್ಚೈತೇ ವಸಂತ್ಯರ್ಹಾಸ್ತದ್ರಾಷ್ಟ್ರಮಭಿವರ್ಧತೇ||

ಕುಂಭೀಧಾನ್ಯವೃತ್ತಿ[5], ಉಂಚಶಿಲಾವೃತ್ತಿ[6], ಮತ್ತು ಕಾಪೋತ[7] ವೃತ್ತಿಯವರು ವಾಸಿಸುವ ರಾಷ್ಟ್ರವು ಅಭಿವೃದ್ಧಿಹೊಂದುತ್ತದೆ.

12235023a ದಶ ಪೂರ್ವಾನ್ದಶ ಪರಾನ್ಪುನಾತಿ ಚ ಪಿತಾಮಹಾನ್|

12235023c ಗೃಹಸ್ಥವೃತ್ತಯಸ್ತ್ವೇತಾ ವರ್ತಯೇದ್ಯೋ ಗತವ್ಯಥಃ||

ಯಾವ ವ್ಯಥೆಯೂ ಇಲ್ಲದೇ ಈ ವೃತ್ತಿಗಳಲ್ಲಿರುವ ಗೃಹಸ್ಥನ ಹಿಂದಿನ ಹತ್ತು ಮತ್ತು ಮುಂದಿನ ಹತ್ತು ತಲೆಮಾರಿನ ಪಿತಾಮಹರು ಪವಿತ್ರರಾಗುತ್ತಾರೆ.

12235024a ಸ ಚಕ್ರಚರಲೋಕಾನಾಂ ಸದೃಶೀಂ ಪ್ರಾಪ್ನುಯಾದ್ಗತಿಮ್|

12235024c ಯತೇಂದ್ರಿಯಾಣಾಮಥ ವಾ ಗತಿರೇಷಾ ವಿಧೀಯತೇ||

ಅವನು ಚಕ್ರವರ್ತಿಗಳು ಪಡೆಯುವ ಉತ್ತಮ ಲೋಕಗಳಿಗೆ ಸಮನಾದ ಲೋಕಗಳನ್ನು ಪಡೆಯುತ್ತಾನೆ. ಅಥವಾ ಜಿತೇಂದ್ರಿಯರಿಗೆ ದೊರೆಯುವ ಗತಿಯು ಅವನಿಗೆ ದೊರೆಯುತ್ತದೆ.

12235025a ಸ್ವರ್ಗಲೋಕೋ ಗೃಹಸ್ಥಾನಾಮುದಾರಮನಸಾಂ ಹಿತಃ|

12235025c ಸ್ವರ್ಗೋ ವಿಮಾನಸಂಯುಕ್ತೋ ವೇದದೃಷ್ಟಃ ಸುಪುಷ್ಪಿತಃ||

ಉದಾರಮನಸ್ಕರಾದ ಗೃಹಸ್ಥರಿಗೆ ವೇದಗಳಲ್ಲಿ ಹೇಳಿರುವ ಹಿತಕರ ವಿಮಾನಯುಕ್ತ ಪುಷ್ಪಗಳಿಂದ ಶೋಭಿತ ಸ್ವರ್ಗವು ದೊರೆಯುತ್ತದೆ.

12235026a ಸ್ವರ್ಗಲೋಕೇ ಗೃಹಸ್ಥಾನಾಂ ಪ್ರತಿಷ್ಠಾ ನಿಯತಾತ್ಮನಾಮ್|

12235026c ಬ್ರಹ್ಮಣಾ ವಿಹಿತಾ ಶ್ರೇಣಿರೇಷಾ ಯಸ್ಮಾತ್ ಪ್ರಮುಚ್ಯತೇ|

12235026e ದ್ವಿತೀಯಂ ಕ್ರಮಶಃ ಪ್ರಾಪ್ಯ ಸ್ವರ್ಗಲೋಕೇ ಮಹೀಯತೇ||

ನಿಯತಾತ್ಮ ಗೃಹಸ್ಥರಿಗೆ ಸ್ವರ್ಗಲೋಕವೇ ಪ್ರತಿಷ್ಠಾಸ್ಥಾನವು. ಸಂಸಾರದಿಂದ ಮೋಕ್ಷಹೊಂದಿ ಬ್ರಹ್ಮನನ್ನು ಪಡೆಯಲು ಇದೊಂದು ಏಣಿಯ ಮೆಟ್ಟಿಲು. ಎರಡನೆಯ ಆಶ್ರಮವಾದ ಗೃಹಸ್ಥಾಶ್ರಮಿಯು ಕ್ರಮೇಣವಾಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.

12235027a ಅತಃ ಪರಂ ಪರಮಮುದಾರಮಾಶ್ರಮಂ

ತೃತೀಯಮಾಹುಸ್ತ್ಯಜತಾಂ ಕಲೇವರಮ್|

12235027c ವನೌಕಸಾಂ ಗೃಹಪತಿನಾಮನುತ್ತಮಂ

ಶೃಣುಷ್ವೈತತ್ ಕ್ಲಿಷ್ಟಶರೀರಕಾರಿಣಾಮ್||

ಇದರ ನಂತರ ಶರೀರತ್ಯಾಗಮಾಡುವವರಿಗೆ ಉದಾರವಾದ ವಾನಪ್ರಸ್ಥಾಶ್ರಮವಿದೆ. ಅದನ್ನು ಮೂರನೆಯ ಆಶ್ರಮವೆನ್ನುತ್ತಾರೆ. ಗೃಹಸ್ಥಾಶ್ರಮಕ್ಕಿಂತಲೂ ಶ್ರೇಷ್ಠವಾದ ಮತ್ತು ಶರೀರವನ್ನು ಕೃಶಗೊಳಿಸುವ ವನವಾಸಿಗಳ ವಾನಪ್ರಸ್ಥಾಶ್ರಮದ ಕುರಿತು ಕೇಳು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಪಂಚತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೈದನೇ ಅಧ್ಯಾಯವು.

[1] ಅಂದರೆ ಮೂರು ವರ್ಷಕ್ಕೆ ಬೇಕಾಗುವಷ್ಟು ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳುವುದು (ಭಾರತ ದರ್ಶನ).

[2] ಅಂದರೆ ಒಂದು ವರ್ಷಕ್ಕೆ ಬೇಕಾಗುವಷ್ಟು ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳುವುದು (ಭಾರತ ದರ್ಶನ).

[3] ಸ್ವಲ್ಪ ಬೇರೆ ಅರ್ಥಕೊಡುವಂಥಹ ಅನುವಾದವೂ ಇದೆ: ಅಡಿಗೆ ಮಾಡಿಕೊಳ್ಳದಿರುವ ಬ್ರಹ್ಮಚಾರಿಗಳಿಗೂ ಯತಿಗಳಿಗೂ ಗೃಹಸ್ಥನಾದವನು ಅನ್ನವನ್ನು ನೀಡಬೇಕು. ಹಾಗೆಯೇ ಯಾರು ತಾವು ಧಾರ್ಮಿಕರೆಂದು ತೋರಿಸಿಕೊಳ್ಳಲು ಉಗುರುಗಳನ್ನೂ ಗಡ್ಡವನ್ನೂ ದಟ್ಟವಾಗಿ ಬೆಳೆಸಿಕೊಂಡಿರುವರೋ ಅಂಥವರಿಗೂ ಗೃಹಸ್ಥನ ಮನೆಯಲ್ಲಿ ಭೋಜನ ಮಾಡಲು ಅಧಿಕಾರವಿದೆ. ಅಕಾರಣವಾಗಿ ಅಗ್ನಿಹೋತ್ರವನ್ನು ಬಿಟ್ಟಿರುವವನಿಗೂ, ಗುರುದ್ರೋಹಿಗೂ ಗೃಹಸ್ಥನ ಮನೆಯಲ್ಲಿ ಭೋಜನ ಮಾಡಲು ಅವಕಾಶವಿದೆ. ಗೃಹಸ್ಥನ ಮನೆಯಲ್ಲಿ ಎಲ್ಲ ಪ್ರಾಣಿಗಳಿಗೂ ಅನವನ್ನು ವಿಭಾಗಮಾಡಿಕೊಡಬೇಕೆಂಬ ನಿಯಮವಿದೆ. (ಭಾರತ ದರ್ಶನ).

[4] ಇದೇ ಅಧ್ಯಾಯದ 24ನೇ ಶ್ಲೋಕದಲ್ಲಿ ಹೇಳಿರುವ ಕುಂಭೀಧಾನ್ಯವೃತ್ತಿ, ಉಂಚಶಿಲಾ ವೃತ್ತಿ ಮತ್ತು ಕಾಪೋತಿ ವೃತ್ತಿ (ಭಾರತ ದರ್ಶನ). ಕಾಮ, ಅರ್ಥ, ಧರ್ಮ ಎಂದೂ ಆಗಬಹುದು. (ಬಿಬೇಕ್ ದೆಬ್ರೋಯ್).

[5] ಒಂದು ವರ್ಷಕ್ಕೆ ಬೇಕಾಗುವಷ್ಟು ಧಾನ್ಯವನ್ನು ಮಾತ್ರ ಕೊಳಗದಲ್ಲಿ ಸಂಗ್ರಹಿಸಿಟ್ಟುಕೊಂಡಿರುವುದು.

[6] ಒಂದು ದಿನಕ್ಕೆ ಬೇಕಾಗುವಷ್ಟು ಧಾನ್ಯವನ್ನು ಕುಟ್ಟಿ ಪಡೆದುಕೊಳ್ಳುವವರು.

[7] ಪಾರಿವಾಳಗಳಂತೆ ಹೊಲದಿಂದ ನೆಲದ ಮೇಲೆ ಬಿದ್ದಿರುವ ಧಾನ್ಯಗಳನ್ನು ಆರಿಸಿ ತಿನ್ನುವುದು.

Comments are closed.