Shanti Parva: Chapter 231

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೧

ಜ್ಞಾನದ ಸಾಧನೆ ಮತ್ತು ಮಹಿಮೆ (1-34).

12231001 ಭೀಷ್ಮ ಉವಾಚ|

12231001a ಇತ್ಯುಕ್ತೋಽಭಿಪ್ರಶಸ್ಯೈತತ್ಪರಮರ್ಷೇಸ್ತು ಶಾಸನಮ್|

12231001c ಮೋಕ್ಷಧರ್ಮಾರ್ಥಸಂಯುಕ್ತಮಿದಂ ಪ್ರಷ್ಟುಂ ಪ್ರಚಕ್ರಮೇ||

ಭೀಷ್ಮನು ಹೇಳಿದನು: “ಹೀಗೆ ಮಹರ್ಷಿಯು ಉಪದೇಶಿಸಲು ಅವನ ಶಾಸನವನ್ನು ಪ್ರಶಂಸಿಸಿ ಶುಕನು ಮೋಕ್ಷಧರ್ಮಾರ್ಥಸಂಯುಕ್ತವಾದ ಈ ಪ್ರಶ್ನೆಯನ್ನು ಕೇಳಲು ಉಪಕ್ರಮಿಸಿದನು.

12231002 ಶುಕ ಉವಾಚ|

12231002a ಪ್ರಜಾವಾನ್[1] ಶ್ರೋತ್ರಿಯೋ ಯಜ್ವಾ ವೃದ್ಧಃ ಪ್ರಜ್ಞೋಽನಸೂಯಕಃ|

12231002c ಅನಾಗತಮನೈತಿಹ್ಯಂ ಕಥಂ ಬ್ರಹ್ಮಾಧಿಗಚ್ಚತಿ||

ಶುಕನು ಹೇಳಿದನು: “ಸಂತಾನವನ್ನು ಪಡೆದ, ಶ್ರೋತ್ರೀಯನಾದ, ಯಾಜ್ಞಿಕನಾದ, ಅನಸೂಯಕನಾದ ಮತ್ತು ಶುದ್ಧ ಬುದ್ಧಿಯುಳ್ಳವನು ಇದು ಹೀಗೆ ಎಂದು ನಿಷ್ಕರ್ಷಿಸಲು ಅಸಾಧ್ಯವಾಗಿರುವ ಬ್ರಹ್ಮವನ್ನು ಹೇಗೆ ಪಡೆದುಕೊಳ್ಳುತ್ತಾನೆ?

12231003a ತಪಸಾ ಬ್ರಹ್ಮಚರ್ಯೇಣ ಸರ್ವತ್ಯಾಗೇನ ಮೇಧಯಾ|

12231003c ಸಾಂಖ್ಯೇ ವಾ ಯದಿ ವಾ ಯೋಗೇ ಏತತ್ಪೃಷ್ಟೋಽಭಿಧತ್ಸ್ವ ಮೇ||

ಅವನು ಅದನ್ನು ತಪಸ್ಸಿನಿಂದ ಅಥವಾ ಬ್ರಹ್ಮಚರ್ಯದಿಂದ ಅಥವಾ ಸರ್ವತ್ಯಾಗದಿಂದ ಅಥವಾ ಮೇಧಾಶಕ್ತಿಯಿಂದ ಅಥವಾ ಜ್ಞಾನದಿಂದ ಅಥವಾ ಯೋಗದಿಂದ – ಯಾವುದರಿಂದ ಪಡೆದುಕೊಳ್ಳುತ್ತಾನೆ?

12231004a ಮನಸಶ್ಚೇಂದ್ರಿಯಾಣಾಂ ಚಾಪ್ಯೈಕಾಗ್ರ್ಯಂ ಸಮವಾಪ್ಯತೇ|

12231004c ಯೇನೋಪಾಯೇನ ಪುರುಷೈಸ್ತಚ್ಚ ವ್ಯಾಖ್ಯಾತುಮರ್ಹಸಿ||

ಯಾವ ಉಪಾಯದಿಂದ ಮನುಷ್ಯನು ಮನಸ್ಸು ಮತ್ತು ಇಂದ್ರಿಯಗಳನ್ನು ಏಕಾಗ್ರಗೊಳಿಸಬಲ್ಲನು? ಇದರ ಕುರಿತು ಹೇಳಬೇಕು.”

12231005 ವ್ಯಾಸ ಉವಾಚ|

12231005a ನಾನ್ಯತ್ರ ವಿದ್ಯಾತಪಸೋರ್ನಾನ್ಯತ್ರೇಂದ್ರಿಯನಿಗ್ರಹಾತ್|

12231005c ನಾನ್ಯತ್ರ ಸರ್ವಸಂತ್ಯಾಗಾತ್ಸಿದ್ಧಿಂ ವಿಂದತಿ ಕಶ್ಚನ||

ವ್ಯಾಸನು ಹೇಳಿದನು: “ವಿದ್ಯೆ, ತಪಸ್ಸು, ಇಂದ್ರಿಯನಿಗ್ರಹ, ಮತ್ತು ಸರ್ವತ್ಯಾಗ – ಇವುಗಳ ಹೊರತಾಗಿ ಯಾರೂ ಸಿದ್ಧಿಯನ್ನು ಹೊಂದುವುದಿಲ್ಲ.

12231006a ಮಹಾಭೂತಾನಿ ಸರ್ವಾಣಿ ಪೂರ್ವಸೃಷ್ಟಿಃ ಸ್ವಯಂಭುವಃ|

12231006c ಭೂಯಿಷ್ಠಂ ಪ್ರಾಣಭೃದ್ಗ್ರಾಮೇ ನಿವಿಷ್ಟಾನಿ ಶರೀರಿಷು||

ಸರ್ವ ಪಂಚಮಹಾಭೂತಗಳೂ ಸ್ವಯಂಭುವಿನಿಂದ ಮೊದಲು ಸೃಷ್ಟಿಸಲ್ಪಟ್ಟವು. ಅವು ಸಮಸ್ತ ಪ್ರಾಣಿಸಮುದಾಯಗಳಲ್ಲಿಯೂ ಶರೀರಿಗಳಲ್ಲಿಯೂ ಅಧಿಕವಾಗಿ ಸೇರಿಕೊಂಡಿವೆ.

12231007a ಭೂಮೇರ್ದೇಹೋ ಜಲಾತ್ಸಾರೋ ಜ್ಯೋತಿಷಶ್ಚಕ್ಷುಷೀ ಸ್ಮೃತೇ|

12231007c ಪ್ರಾಣಾಪಾನಾಶ್ರಯೋ ವಾಯುಃ ಖೇಷ್ವಾಕಾಶಂ ಶರೀರಿಣಾಮ್||

ದೇಹವು ಭೂಮಿತತ್ತ್ವದಿಂದಲೂ, ಸಾರವು ಜಲತತ್ತ್ವದಿಂದಲೂ, ಕಣ್ಣುಗಳು ಜ್ಯೋತಿತತ್ತ್ವದಿಂದಲೂ ಆಗಿವೆಯೆಂದು ಹೇಳುತ್ತಾರೆ. ಪ್ರಾಣಾಪಾನಗಳು ವಾಯುವನ್ನಾಶ್ರಯಿಸಿವೆ ಮತ್ತು ರಂಧ್ರಗಳು ಆಕಾಶತತ್ತ್ವದಿಂದ ಉಂಟಾಗಿವೆ.

12231008a ಕ್ರಾಂತೇ ವಿಷ್ಣುರ್ಬಲೇ ಶಕ್ರಃ ಕೋಷ್ಠೇಽಗ್ನಿರ್ಭುಕ್ತಮರ್ಚತಿ|

12231008c ಕರ್ಣಯೋಃ ಪ್ರದಿಶಃ ಶ್ರೋತ್ರೇ ಜಿಹ್ವಾಯಾಂ ವಾಕ್ಸರಸ್ವತೀ||

ನಡುಗೆಯಲ್ಲಿ ವಿಷ್ಣುವಿದ್ದಾನೆ. ಭುಜಬಲದಲ್ಲಿ ಇಂದ್ರನಿದ್ದಾನೆ. ಜಠರದಲ್ಲಿ ಅಗ್ನಿಯು ಭೋಜನವನ್ನು ಬಯಸುತ್ತಾನೆ. ಕಿವಿಗಳಲ್ಲಿ ಶ್ರವಣಶಕ್ತಿ ಮತ್ತು ದಿಕ್ಕುಗಳಿವೆ. ನಾಲಿಗೆಯಲ್ಲಿ ಮಾತು ಮತ್ತು ಸರಸ್ವತಿಯರಿದ್ದಾರೆ.

12231009a ಕರ್ಣೌ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮೀ|

12231009c ದರ್ಶನಾನೀಂದ್ರಿಯೋಕ್ತಾನಿ ದ್ವಾರಾಣ್ಯಾಹಾರಸಿದ್ಧಯೇ||

ಕಿವಿಗಳು, ಚರ್ಮ, ಕಣ್ಣುಗಳು, ನಾಲಿಗೆ, ಮತ್ತು ಐದನೆಯದಾಗಿ ಮೂಗು – ಇವು ಜ್ಞಾನೇಂದ್ರಿಯಗಳು. ಇವುಗಳನ್ನು ವಿಷಯಾನುಭವಗಳ ದ್ವಾರವೆಂದು ಹೇಳುತ್ತಾರೆ.

12231010a ಶಬ್ದಂ ಸ್ಪರ್ಶಂ ತಥಾ ರೂಪಂ ರಸಂ ಗಂಧಂ ಚ ಪಂಚಮಮ್|

12231010c ಇಂದ್ರಿಯಾಣಿ ಪೃಥಕ್ತ್ವರ್ಥಾನ್ಮನಸೋ ದರ್ಶಯಂತ್ಯುತ||

ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಐದನೆಯ ಗಂಧ ಇವು ಇಂದ್ರಿಯಗಳ ವಿಷಯಗಳು. ಇವು ಇಂದ್ರಿಯಗಳಿಗಿಂತ ಯಾವಾಗಲೂ ಪ್ರತ್ಯೇಕವಾಗಿರುವವು ಎಂದು ತಿಳಿಯಬೇಕು.

12231011a ಇಂದ್ರಿಯಾಣಿ ಮನೋ ಯುಂಕ್ತೇ ವಶ್ಯಾನ್ಯಂತೇವ ವಾಜಿನಃ|

12231011c ಮನಶ್ಚಾಪಿ ಸದಾ ಯುಂಕ್ತೇ ಭೂತಾತ್ಮಾ ಹೃದಯಾಶ್ರಿತಃ||

ಸಾರಥಿಯು ಕಡಿವಾಣಗಳಿಂದ ಕುದುರೆಗಳನ್ನು ನಿಯಂತ್ರಿಸಿ ನಡೆಸುವಂತೆ ಮನಸ್ಸು ಇಂದ್ರಿಯಗಳನ್ನು ತನ್ನ ವಶದಲ್ಲಿರಿಸಿಕೊಂಡು ಇಚ್ಛಾನುಸಾರವಾಗಿ ವಿಷಯಗಳ ಕಡೆ ಪ್ರಚೋದಿಸುತ್ತಿರುತ್ತದೆ. ಆದರೆ ಹೃದಯದಲ್ಲಿರುವ ಭೂತಾತ್ಮನು ಸದಾ ಮನಸ್ಸನ್ನು ನಿಯಂತ್ರಿಸುತ್ತಿರುತ್ತಾನೆ.

12231012a ಇಂದ್ರಿಯಾಣಾಂ ತಥೈವೇಷಾಂ ಸರ್ವೇಷಾಮೀಶ್ವರಂ ಮನಃ|

12231012c ನಿಯಮೇ ಚ ವಿಸರ್ಗೇ ಚ ಭೂತಾತ್ಮಾ ಮನಸಸ್ತಥಾ||

ಮನಸ್ಸು ಹೇಗೆ ಎಲ್ಲರೀತಿಯಲ್ಲಿಯೂ ಇಂದ್ರಿಯಗಳ ಈಶ್ವರನೋ ಹಾಗೆ ಭೂತಾತ್ಮನೂ ಕೂಡ ಮನಸ್ಸನ್ನು ಒಳಕ್ಕೆ ಎಳೆದುಕೊಳ್ಳುವುದರಲ್ಲಿ ಮತ್ತು ಹೊರಕ್ಕೆ ಬಿಡುವುದರಲ್ಲಿ ಈಶ್ವರನಾಗಿದ್ದಾನೆ.

12231013a ಇಂದ್ರಿಯಾಣೀಂದ್ರಿಯಾರ್ಥಾಶ್ಚ ಸ್ವಭಾವಶ್ಚೇತನಾ ಮನಃ|

12231013c ಪ್ರಾಣಾಪಾನೌ ಚ ಜೀವಶ್ಚ ನಿತ್ಯಂ ದೇಹೇಷು ದೇಹಿನಾಮ್||

ಇಂದ್ರಿಯಗಳು, ಇಂದ್ರಿಯಾರ್ಥಗಳು, ಸ್ವಭಾವಗಳು, ಚೇತನ, ಮನಸ್ಸು, ಪ್ರಾಣಾಪಾನಗಳು ಮತ್ತು ನಿತ್ಯವೂ ದೇಹಿಗಳ ದೇಹಗಳಲ್ಲಿ ಇರುತ್ತವೆ.

12231014a ಆಶ್ರಯೋ ನಾಸ್ತಿ ಸತ್ತ್ವಸ್ಯ ಗುಣಶಬ್ದೋ ನ ಚೇತನಾ|

12231014c ಸತ್ತ್ವಂ ಹಿ ತೇಜಃ ಸೃಜತಿ ನ ಗುಣಾನ್ವೈ ಕದಾ ಚನ||

ಶುದ್ಧ ಬುದ್ಧಿಗೆ ಗುಣಗಳಾಗಲೀ, ಶಬ್ದಾದಿ ಇಂದ್ರಿಯವಿಷಯಗಳಾಗಲೀ, ಚೇತನವಾಗಲೀ ಆಶ್ರಯಸ್ಥಾನವಲ್ಲ. ಏಕೆಂದರೆ ಬುದ್ಧಿಯೇ ತೇಜಸ್ಸನ್ನು ಸೃಷ್ಟಿಸುತ್ತದೆ. ಬುದ್ಧಿಯು ತ್ರಿಗುಣಾತ್ಮಕ ಪ್ರಕೃತಿಯನ್ನು ಸೃಷ್ಟಿಸುವುದಿಲ್ಲ. ಆದರೆ ಬುದ್ಧಿಯು ಪ್ರಕೃತಿಯ ಕಾರ್ಯವೇ ಆಗಿದೆ.

12231015a ಏವಂ ಸಪ್ತದಶಂ ದೇಹೇ ವೃತಂ ಷೋಡಶಭಿರ್ಗುಣೈಃ|

12231015c ಮನೀಷೀ ಮನಸಾ ವಿಪ್ರಃ ಪಶ್ಯತ್ಯಾತ್ಮಾನಮಾತ್ಮನಿ||

ಹೀಗೆ ಬುದ್ಧಿವಂತ ವಿಪ್ರನು ದೇಹದಲ್ಲಿ ಹದಿನಾರು ಗುಣಗಳಿಂದ[2] ಆವೃತನಾಗಿರುವ ಹದಿನೇಳನೆಯ ಪರಮಾತ್ಮನನ್ನು ಅಂತಃಕರಣದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

12231016a ನ ಹ್ಯಯಂ ಚಕ್ಷುಷಾ ದೃಶ್ಯೋ ನ ಚ ಸರ್ವೈರಪೀಂದ್ರಿಯೈಃ|

12231016c ಮನಸಾ ಸಂಪ್ರದೀಪ್ತೇನ ಮಹಾನಾತ್ಮಾ ಪ್ರಕಾಶತೇ||

ಆ ಪರಮಾತ್ಮನನ್ನು ಕಣ್ಣುಗಳಿಂದ ನೋಡುವುದಕ್ಕಾಗುವುದಿಲ್ಲ. ಸರ್ವ ಇಂದ್ರಿಯಗಳಿಂದಲೂ ಅವನನ್ನು ತಿಳಿಯುವುದಕ್ಕಾಗುವುದಿಲ್ಲ. ವಿಶುದ್ಧ ಮನಸ್ಸಿನ ದೀಪದಿಂದಲೇ ಮಹಾನ್ ಆತ್ಮವು ಪ್ರಕಾಶಿಸುತ್ತದೆ.

12231017a ಅಶಬ್ದಸ್ಪರ್ಶರೂಪಂ ತದರಸಾಗಂಧಮವ್ಯಯಮ್|

12231017c ಅಶರೀರಂ ಶರೀರೇ ಸ್ವೇ ನಿರೀಕ್ಷೇತ ನಿರಿಂದ್ರಿಯಮ್||

ಆತ್ಮತತ್ತ್ವವು ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳಿಂದ ರಹಿತವಾಗಿದೆ. ಅವಿಕಾರಿಯಾಗಿದೆ. ಅದಕ್ಕೆ ಶರೀರವಿಲ್ಲ. ಇಂದ್ರಿಯಗಳಿಲ್ಲ. ಆದರೂ ಅದನ್ನು ಶರೀರದಲ್ಲಿಯೇ ಕಾಣಬಹುದಾಗಿದೆ[3].

12231018a ಅವ್ಯಕ್ತಂ ವ್ಯಕ್ತದೇಹೇಷು ಮರ್ತ್ಯೇಷ್ವಮರಮಾಶ್ರಿತಮ್|

12231018c ಯೋಽನುಪಶ್ಯತಿ ಸ ಪ್ರೇತ್ಯ ಕಲ್ಪತೇ ಬ್ರಹ್ಮಭೂಯಸೇ||

ವ್ಯಕ್ತದೇಹದಲ್ಲಿ ಅವ್ಯಕ್ತನಾಗಿರುವ ಮತ್ತು ಸಾಯುವ ದೇಹವನ್ನು ಆಶ್ರಯಿಸಿರುವ ಆ ಅಮರನನ್ನು ಕಾಣುವವನು ಮರಣಾನಂತರ ಬ್ರಹ್ಮಭೂಯನಾಗುತ್ತಾನೆ.

12231019a ವಿದ್ಯಾಭಿಜನಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ|

12231019c ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ||

ಪಂಡಿತರು ವಿದ್ಯಾ-ಕುಲ ಸಂಪನ್ನನಾಗಿರುವ ಬ್ರಾಹ್ಮಣನಲ್ಲಿಯೂ, ಗೋವಿನಲ್ಲಿಯೂ, ನಾಯಿಯಲ್ಲಿಯೂ, ನಾಯಿಯಮಾಂಸವನ್ನು ತಿನ್ನುವವನಲ್ಲಿಯೂ, ಸಾಮ್ಯವನ್ನು ಕಾಣುತ್ತಾರೆ.

12231020a ಸ ಹಿ ಸರ್ವೇಷು ಭೂತೇಷು ಜಂಗಮೇಷು ಧ್ರುವೇಷು ಚ|

12231020c ವಸತ್ಯೇಕೋ ಮಹಾನಾತ್ಮಾ ಯೇನ ಸರ್ವಮಿದಂ ತತಮ್||

ಯಾರಿಂದ ಈ ಸರ್ವವೂ ಆಗಿವೆಯೋ ಆ ಮಹಾನ್ ಆತ್ಮನೊಬ್ಬನೇ ಸರ್ವ ಚರಾಚರಪ್ರಾಣಿಗಳಲ್ಲಿ ವಾಸಮಾಡುತ್ತಿದ್ದಾನೆ.

12231021a ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ|

12231021c ಯದಾ ಪಶ್ಯತಿ ಭೂತಾತ್ಮಾ ಬ್ರಹ್ಮ ಸಂಪದ್ಯತೇ ತದಾ||

ಭೂತಾತ್ಮನು ಯಾವಾಗ ಸರ್ವಭೂತಗಳಲ್ಲಿ ತನ್ನನ್ನು ಮತ್ತು ಸರ್ವಭೂತಗಳನ್ನು ತನ್ನಲ್ಲಿ ಕಂಡುಕೊಳ್ಳುತ್ತಾನೋ ಆಗ ಅವನು ಬ್ರಹ್ಮಭಾವವನ್ನು ಹೊಂದುತ್ತಾನೆ.

12231022a ಯಾವಾನಾತ್ಮನಿ ವೇದಾತ್ಮಾ ತಾವಾನಾತ್ಮಾ ಪರಾತ್ಮನಿ|

12231022c ಯ ಏವಂ ಸತತಂ ವೇದ ಸೋಽಮೃತತ್ವಾಯ ಕಲ್ಪತೇ||

ತನ್ನಲ್ಲಿ ಯಾವ ಆತ್ಮನಿದ್ದಾನೋ ಅದೇ ಆತ್ಮನು ಪರರಲ್ಲಿಯೂ ಇದ್ದಾನೆ ಎಂದು ಸತತವೂ ತಿಳಿದುಕೊಂಡಿರುವವನು ಅಮೃತತ್ತ್ವವನ್ನು ಹೊಂದುತ್ತಾನೆ.

12231023a ಸರ್ವಭೂತಾತ್ಮಭೂತಸ್ಯ ಸರ್ವಭೂತಹಿತಸ್ಯ ಚ|

12231023c ದೇವಾಪಿ ಮಾರ್ಗೇ ಮುಹ್ಯಂತಿ ಅಪದಸ್ಯ ಪದೈಷಿಣಃ||

ಸರ್ವಭೂತಾತ್ಮಭೂತ ಸರ್ವಭೂತಹಿತ ಮತ್ತು ಅಸ್ಪಷ್ಟಮಾರ್ಗನಾದ ಆ ಪರಮಾತ್ಮನ ಪದವನ್ನು ಬಯಸುವ ದೇವತೆಗಳೂ ಕೂಡ ಮಾರ್ಗದಲ್ಲಿ ಭ್ರಮೆಗೊಳ್ಳುತ್ತಾರೆ.

12231024a ಶಕುನೀನಾಮಿವಾಕಾಶೇ ಜಲೇ ವಾರಿಚರಸ್ಯ ವಾ|

12231024c ಯಥಾ ಗತಿರ್ನ ದೃಶ್ಯೇತ ತಥೈವ ಸುಮಹಾತ್ಮನಃ||

ಆಕಾಶದಲ್ಲಿ ಪಕ್ಷಿಗಳ ಪದಚಿಹ್ನೆಗಳು ಮತ್ತು ನೀರಿನಲ್ಲಿ ಮೀನುಗಳ ಪದಚಿಹ್ನೆಗಳು ಹೇಗೆ ಅಗೋಚರವಾಗಿರುವವೋ ಹಾಗೆ ಮಹಾತ್ಮರ ಮಾರ್ಗಗಳೂ ಕಾಣಸಿಗುವುದಿಲ್ಲ.

12231025a ಕಾಲಃ ಪಚತಿ ಭೂತಾನಿ ಸರ್ವಾಣ್ಯೇವಾತ್ಮನಾತ್ಮನಿ|

12231025c ಯಸ್ಮಿಂಸ್ತು ಪಚ್ಯತೇ ಕಾಲಸ್ತಂ ನ ವೇದೇಹ ಕಶ್ಚನ||

ಕಾಲನು ಸರ್ವಭೂತಗಳನ್ನೂ ತನ್ನಲ್ಲಿ ಸೇರಿಸಿಕೊಂಡು ಬೇಯಿಸುತ್ತಿರುತ್ತಾನೆ. ಆದರೆ ಕಾಲನನ್ನೇ ಬೇಯಿಸುವ ಪರಮಾತ್ಮನನ್ನು ಯಾರೂ ತಿಳಿಯರು.

12231026a ನ ತದೂರ್ಧ್ವಂ ನ ತಿರ್ಯಕ್ಚ ನಾಧೋ ನ ಚ ತಿರಃ ಪುನಃ|

12231026c ನ ಮಧ್ಯೇ ಪ್ರತಿಗೃಹ್ಣೀತೇ ನೈವ ಕಶ್ಚಿತ್ಕುತಶ್ಚನ||

ಅವನನ್ನು ಮೇಲಾಗಲೀ, ಕೆಳಗಾಗಲೀ, ಅಕ್ಕ-ಪಕ್ಕದಲ್ಲಾಗಲೀ, ಮಧ್ಯದಲ್ಲಾಗಲೀ – ಯಾವುದೂ ಯಾವಕಡೆಯಿಂದಲೂ, ಎಲ್ಲಿಯೂ ಹಿಡಿದುಕೊಳ್ಳಲು ಸಾಧ್ಯವಿಲ್ಲ.

12231027a ಸರ್ವೇಽಂತಃಸ್ಥಾ ಇಮೇ ಲೋಕಾ ಬಾಹ್ಯಮೇಷಾಂ ನ ಕಿಂ ಚನ|

12231027c ಯಃ ಸಹಸ್ರಂ ಸಮಾಗಚ್ಚೇದ್ಯಥಾ ಬಾಣೋ ಗುಣಚ್ಯುತಃ||

12231028a ನೈವಾಂತಂ ಕಾರಣಸ್ಯೇಯಾದ್ಯದ್ಯಪಿ ಸ್ಯಾನ್ಮನೋಜವಃ|

ಈ ಎಲ್ಲ ಲೋಕಗಳೂ ಅವನಲ್ಲಿಯೇ ಅಡಗಿಕೊಂಡಿವೆ. ಅವನ ಹೊರಗೆ ಏನೂ ಇರುವುದಿಲ್ಲ. ಒಂದು ಸಾವಿರ ಬಾಣಗಳನ್ನು ಒಂದೇ ಸಮನೆ ಒಂದಾದ ಮೇಲೆ ಒಂದರಂತೆ ಮನೋವೇಗದಲ್ಲಿ ಪ್ರಯೋಗಿಸಿದರೂ ಸರ್ವಕ್ಕೂ ಕಾರಣವಾಗಿರುವ ಅದರ ಕೊನೆಯನ್ನೂ ಮುಟ್ಟುವುದಿಲ್ಲ.

12231028c ತಸ್ಮಾತ್ಸೂಕ್ಷ್ಮಾತ್ಸೂಕ್ಷ್ಮತರಂ ನಾಸ್ತಿ ಸ್ಥೂಲತರಂ ತತಃ||

12231029a ಸರ್ವತಃಪಾಣಿಪಾದಾಂತಂ ಸರ್ವತೋಕ್ಷಿಶಿರೋಮುಖಮ್|

12231029c ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ||

ಅದಕ್ಕಿಂತಲೂ ಸೂಕ್ಷ್ಮತರವಾದುದು ಇಲ್ಲ. ಅದಕ್ಕಿಂತಲೂ ಸ್ಥೂಲವಾದುದೂ ಇಲ್ಲ. ಸರ್ವತಃ ಪಾಣಿ-ಪಾದಗಳನ್ನುಳ್ಳ, ಸರ್ವತಃ ಶಿರ-ಮುಖಗಳನ್ನುಳ್ಳ, ಸರ್ವತಃ ಕಿವಿಗಳನ್ನುಳ್ಳ ಅದು ಸರ್ವಲೋಕಗಳನ್ನೂ ಆವರಿಸಿಕೊಂಡಿದೆ.

12231030a ತದೇವಾಣೋರಣುತರಂ ತನ್ಮಹದ್ಭ್ಯೋ ಮಹತ್ತರಮ್|

12231030c ತದಂತಃ ಸರ್ವಭೂತಾನಾಂ ಧ್ರುವಂ ತಿಷ್ಠನ್ನ ದೃಶ್ಯತೇ||

ಆ ಬ್ರಹ್ಮವಸ್ತುವು ಅಣುವಿಗಿಂತಲೂ ಚಿಕ್ಕದು. ಅತಿ ದೊಡ್ಡದಕ್ಕಿಂತಲೂ ದೊಡ್ಡದು. ಸರ್ವಭೂತಗಳಲ್ಲಿಯೂ ನಿಶ್ಚಯವಾಗಿ ಇರುವ ಅದು ಯಾರಿಗೂ ಕಾಣಿಸುವುದಿಲ್ಲ.

12231031a ಅಕ್ಷರಂ ಚ ಕ್ಷರಂ ಚೈವ ದ್ವೈಧೀಭಾವೋಽಯಮಾತ್ಮನಃ|

12231031c ಕ್ಷರಃ ಸರ್ವೇಷು ಭೂತೇಷು ದಿವ್ಯಂ ಹ್ಯಮೃತಮಕ್ಷರಮ್||

ಅದಕ್ಕೆ ಅಕ್ಷರ ಮತ್ತು ಕ್ಷರ ಎಂಬ ಎರಡೂ ಭಾವಗಳಿವೆ. ಸರ್ವಭೂತಗಳಲ್ಲಿಯೂ ಅದರ ಕ್ಷರಭಾವವಿದೆ. ಅವುಗಳಲ್ಲಿರುವ ಅಕ್ಷರಭಾವವು ದಿವ್ಯವಾದುದು ಮತ್ತು ಅಮೃತವು[4].

12231032a ನವದ್ವಾರಂ ಪುರಂ ಗತ್ವಾ ಹಂಸೋ ಹಿ ನಿಯತೋ ವಶೀ|

12231032c ಈಶಃ ಸರ್ವಸ್ಯ ಭೂತಸ್ಯ ಸ್ಥಾವರಸ್ಯ ಚರಸ್ಯ ಚ||

ಸರ್ವಭೂತಗಳ – ಸ್ಥಾವರ ಜಂಗಮಗಳ – ಈಶನು ನವದ್ವಾರಗಳಿರುವ ಪುರಕ್ಕೆ ಹೋಗಿ ಅದರ ವಶನಾಗಿ ಹಂಸನೆಂಬ ಹೆಸರಿನಿಂದ ನಿವಾಸಿಸುತ್ತಾನೆ.

12231033a ಹಾನಿಭಂಗವಿಕಲ್ಪಾನಾಂ ನವಾನಾಂ ಸಂಶ್ರಯೇಣ ಚ|

12231033c ಶರೀರಾಣಾಮಜಸ್ಯಾಹುರ್ಹಂಸತ್ವಂ ಪಾರದರ್ಶಿನಃ||

ಜನ್ಮರಹಿತನಾಗಿದ್ದರೂ ಅದು ಹೊಸ ಹೊಸ ಶರೀರಗಳಲ್ಲಿ ಆಶ್ರಯಿಸಿ ಹಾನಿ, ಭಂಗ ಮತ್ತು ವಿಕಲ್ಪಗಳನ್ನು ಸ್ವೇಚ್ಛೆಯಿಂದ ಸಂಗ್ರಹಿಸುವುದರಿಂದ ಅದಕ್ಕೆ ತತ್ತ್ವಜ್ಞಾನಿಗಳು ಹಂಸ ಎಂದು ಹೇಳಿದ್ದಾರೆ.

12231034a ಹಂಸೋಕ್ತಂ ಚಾಕ್ಷರಂ ಚೈವ ಕೂಟಸ್ಥಂ ಯತ್ತದಕ್ಷರಮ್|

12231034c ತದ್ವಿದ್ವಾನಕ್ಷರಂ ಪ್ರಾಪ್ಯ ಜಹಾತಿ ಪ್ರಾಣಜನ್ಮನೀ||

ಹಂಸ ಎಂದು ಕರೆಯಲ್ಪಟ್ಟಿರುವವನೇ ಅಕ್ಷರನು. ಆ ಅಕ್ಷರನೇ ಕೂಟಸ್ಥನು. ಆ ಅಕ್ಷರನನ್ನು ಪಡೆದು ವಿದ್ವಾಂಸರು ಪ್ರಾಣಜನ್ಮಗಳ ಬಂಧನಗಳನ್ನು ಕಳಚಿಕೊಳ್ಳುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಏಕತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೊಂದನೇ ಅಧ್ಯಾಯವು.

[1] ಪ್ರಜ್ಞಾವಾನ್ (ಭಾರತ ದರ್ಶನ).

[2] ಹದಿನಾರು ಗುಣಗಳು: ಐದು ಇಂದ್ರಿಯಗಳು, ಐದು ಇಂದ್ರಿಯಾರ್ಥಗಳು, ಸ್ವಭಾವ, ಚೇತನ, ಮನಸ್ಸು, ಪ್ರಾಣ, ಅಪಾನ ಮತ್ತು ಜೀವ. (ಭಾರತ ದರ್ಶನ)

[3] ಶರೀರದಿಂದಲ್ಲದೇ ಆತ್ಮನನ್ನು ಬೇರೆ ಯಾವುದರಿಂದಲೂ ಕಾಣಲು/ಅನುಭವಿಸಲು ಸಾಧ್ಯವಿಲ್ಲ.

[4] ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ| ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಽಕ್ಷರ ಉಚ್ಯತೇ|| ಲೋಕದಲ್ಲಿ ಇಬ್ಬರು ಪುರುಷರಿದ್ದಾರೆ: ಕ್ಷರ ಮತ್ತು ಅಕ್ಷರ. ಸರ್ವಭೂತಗಳು ಕ್ಷರ. ಅವುಗಳಲ್ಲಿರುವ ಕೂಟಸ್ಥನು ಅಕ್ಷರ. (ಭೀಷ್ಮಪರ್ವ, ಭಗವದ್ಗೀತಾ ಪರ್ವ, ಅಧ್ಯಾಯ 37, ಶ್ಲೋಕ 16).

Comments are closed.