Shanti Parva: Chapter 230

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೩೦

ಕರ್ಮತತ್ತ್ವದ ವಿವೇಚನೆ (1-6); ಯುಗಧರ್ಮವರ್ಣನೆ (7-18) ಮತ್ತು ಕಾಲದ ಮಹತ್ವ (19-21).

12230001 ವ್ಯಾಸ ಉವಾಚ|

12230001a ಏಷಾ ಪೂರ್ವತರಾ ವೃತ್ತಿರ್ಬ್ರಾಹ್ಮಣಸ್ಯ ವಿಧೀಯತೇ|

12230001c ಜ್ಞಾನವಾನೇವ ಕರ್ಮಾಣಿ ಕುರ್ವನ್ಸರ್ವತ್ರ ಸಿಧ್ಯತಿ||

ವ್ಯಾಸನು ಹೇಳಿದನು: “ಬ್ರಾಹ್ಮಣನಿಗೆ ಈ ವೃತ್ತಿಯು ಬಹಳ ಹಿಂದಿನಿಂದಲೂ ವಿಧಿಸಲ್ಪಟ್ಟಿದೆ. ಜ್ಞಾನದಿಂದ ಕರ್ಮಗಳನ್ನು ಮಾಡಿ ಅವನು ಸರ್ವತ್ರ ಸಿದ್ಧಿಯನ್ನು ಪಡೆಯುತ್ತಾನೆ.

12230002a ತತ್ರ ಚೇನ್ನ ಭವೇದೇವಂ ಸಂಶಯಃ ಕರ್ಮನಿಶ್ಚಯೇ|

12230002c ಕಿಂ ನು ಕರ್ಮ ಸ್ವಭಾವೋಽಯಂ ಜ್ಞಾನಂ ಕರ್ಮೇತಿ ವಾ ಪುನಃ||

ಕರ್ಮನಿಶ್ಚಯದಲ್ಲಿ ಅವನಿಗೆ ಸಂಶಯವಿರುವುದಿಲ್ಲ. ಯಾವ ಕರ್ಮಗಳು ಸ್ವಾಭಾವಿಕವಾಗಿ ಮಾಡುವಂಥವುಗಳು ಮತ್ತು ಯಾವ ಕರ್ಮಗಳು ಜ್ಞಾನಯುಕ್ತವಾಗಿ ಮಾಡಬೇಕಾದವು?[1]

12230003a ತತ್ರ ಚೇಹ ವಿವಿತ್ಸಾ ಸ್ಯಾಜ್ಜ್ಞಾನಂ ಚೇತ್ಪುರುಷಂ ಪ್ರತಿ|

12230003c ಉಪಪತ್ತ್ಯುಪಲಬ್ಧಿಭ್ಯಾಂ ವರ್ಣಯಿಷ್ಯಾಮಿ ತಚ್ಚೃಣು||

ಮನುಷ್ಯರಲ್ಲಿ ಜ್ಞಾನವನ್ನುಂಟುಮಾಡುವ ಕರ್ಮಗಳ ಕುರಿತು ನಾನು ಇದನ್ನು ತಿಳಿದುಕೊಂಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಅದನ್ನು ವರ್ಣಿಸುತ್ತೇನೆ. ಕೇಳು.

12230004a ಪೌರುಷಂ ಕಾರಣಂ ಕೇ ಚಿದಾಹುಃ ಕರ್ಮಸು ಮಾನವಾಃ|

12230004c ದೈವಮೇಕೇ ಪ್ರಶಂಸಂತಿ ಸ್ವಭಾವಂ ಚಾಪರೇ ಜನಾಃ||

ಮಾನವರ ಕರ್ಮಗಳಲ್ಲಿ ಪುರುಷಪ್ರಯತ್ನವೇ ಕಾರಣವೆಂದು ಕೆಲವರು ಹೇಳುತ್ತಾರೆ. ಕೆಲವರು ದೈವವೊಂದನ್ನೇ ಪ್ರಶಂಸಿಸುತ್ತಾರೆ. ಇತರ ಜನರು ಸ್ವಭಾವವನ್ನು ಪ್ರಶಂಸಿಸುತ್ತಾರೆ.

12230005a ಪೌರುಷಂ ಕರ್ಮ ದೈವಂ ಚ ಫಲವೃತ್ತಿಸ್ವಭಾವತಃ|

12230005c ತ್ರಯಮೇತತ್ ಪೃಥಗ್ಭೂತಮವಿವೇಕಂ ತು ಕೇ ಚನ||

ಇನ್ನು ಕೆಲವರು ಪುರುಷಪ್ರಯತ್ನ, ದೈವ ಮತ್ತು ಸ್ವಾಭಾವಿಕ ಫಲವೃತ್ತಿ – ಈ ಮೂರನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಅಥವಾ ಒಂದಕ್ಕೊಂದು ಸೇರಿ ಕಾರಣಗಳಾಗುತ್ತವೆ ಎಂದೂ ಹೇಳುತ್ತಾರೆ.

12230006a ಏವಮೇತನ್ನ ಚಾಪ್ಯೇವಮುಭೇ ಚಾಪಿ ನ ಚಾಪ್ಯುಭೇ|

12230006c ಕರ್ಮಸ್ಥಾ ವಿಷಮಂ ಬ್ರೂಯುಃ ಸತ್ತ್ವಸ್ಥಾಃ ಸಮದರ್ಶಿನಃ||

ಕರ್ಮಸ್ಥರಲ್ಲಿ ಕೆಲವರು ಇವುಗಳಲ್ಲಿ ಒಂದೇ ಒಂದು ಕಾರಣವು ಎಂದೂ ಇನ್ನು ಕೆಲವರು ಇವುಗಳಲ್ಲಿ ಎರಡು ಕಾರಣಗಳೆಂದೂ, ಮತ್ತು ಇನ್ನು ಕೆಲವರು ಒಂದು ಪ್ರಧಾನ ಕಾರಣ, ಇನ್ನೊಂದು ಗೌಣ ಕಾರಣ – ಹೀಗೆ ಇವುಗಳನ್ನು ಬೇರೆಬೇರೆಯಾಗಿ ಕಾಣುತ್ತಾರೆ. ಆದರೆ ಸತ್ವಸ್ಥರು ಇವು ಮೂರೂ ಸಮಾನ ಕಾರಣಗಳೆಂದು ಕಂಡು ಅದನ್ನೇ ಹೇಳುತ್ತಾರೆ.

12230007a ತ್ರೇತಾಯಾಂ ದ್ವಾಪರೇ ಚೈವ ಕಲಿಜಾಶ್ಚ ಸಸಂಶಯಾಃ|

12230007c ತಪಸ್ವಿನಃ ಪ್ರಶಾಂತಾಶ್ಚ ಸತ್ತ್ವಸ್ಥಾಶ್ಚ ಕೃತೇ ಯುಗೇ||

ತ್ರೇತ, ದ್ವಾಪರ ಮತ್ತು ಕಲಿಯುಗಗಳಲ್ಲಿ ಸಂಶಯಗಳಿರುತ್ತವೆ. ಕೃತಯುಗದಲ್ಲಿ ತಪಸ್ವಿಗಳು ಸತ್ತ್ವಗುಣದಲ್ಲಿ ನೆಲೆಸಿದ್ದು ಪ್ರಶಾಂತರಾಗಿರುತ್ತಾರೆ.

12230008a ಅಪೃಥಗ್ದರ್ಶಿನಃ ಸರ್ವೇ ಋಕ್ಸಾಮಸು ಯಜುಃಷು ಚ|

12230008c ಕಾಮದ್ವೇಷೌ ಪೃಥಗ್ ದೃಷ್ಟ್ವಾ[2] ತಪಃ ಕೃತ ಉಪಾಸತೇ||

ಕೃತಯುಗದಲ್ಲಿ ಎಲ್ಲರೂ ಋಕ್, ಯಜುಃ ಮತ್ತು ಸಾಮಗಳನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಕಾಮ-ದ್ವೇಷಗಳನ್ನು ನೋಡಿ ಅವರು ತಪಸ್ಸನ್ನೇ ಉಪಾಸಿಸುತ್ತಾರೆ.

12230009a ತಪೋಧರ್ಮೇಣ ಸಂಯುಕ್ತಸ್ತಪೋನಿತ್ಯಃ ಸುಸಂಶಿತಃ|

12230009c ತೇನ ಸರ್ವಾನವಾಪ್ನೋತಿ ಕಾಮಾನ್ಯಾನ್ಮನಸೇಚ್ಚತಿ||

ತಪೋಧರ್ಮಸಂಯುಕ್ತನಾಗಿ ನಿತ್ಯವೂ ತಪಸ್ಸಿನಲ್ಲಿರುವ ಕಠೋರ ವ್ರತನಿಷ್ಠನು ತನ್ನ ಮನೋವಾಂಛಿತ ಸಕಲ ಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ.

12230010a ತಪಸಾ ತದವಾಪ್ನೋತಿ ಯದ್ಭೂತ್ವಾ ಸೃಜತೇ ಜಗತ್|

12230010c ತದ್ಭೂತಶ್ಚ ತತಃ ಸರ್ವೋ ಭೂತಾನಾಂ ಭವತಿ ಪ್ರಭುಃ||

ತಪಸ್ಸಿನಿಂದ ಜಗತ್ತನ್ನು ಸೃಷ್ಟಿಸಬಲ್ಲವನಾಗುತ್ತಾನೆ. ಆಗ ಅವನು ಸರ್ವ ಭೂತಗಳ ಪ್ರಭುವಾಗುತ್ತಾನೆ.

12230011a ತದುಕ್ತಂ ವೇದವಾದೇಷು ಗಹನಂ ವೇದದರ್ಶಿಭಿಃ|

12230011c ವೇದಾಂತೇಷು ಪುನರ್ವ್ಯಕ್ತಂ ಕ್ರಮಯೋಗೇನ[3] ಲಕ್ಷ್ಯತೇ||

ಆ ಬ್ರಹ್ಮವಸ್ತುವಿನ ಕುರಿತು ವೇದಗಳಲ್ಲಿ ಹೇಳಿದ್ದಾರೆ. ವೇದದರ್ಶಿಗಳಿಗೂ ಅದು ಗಹನವಾದುದು. ವೇದಾಂತಗಳಲ್ಲಿ ಪುನಃ ಇದನ್ನು ವ್ಯಕ್ತಪಡಿಸಿದ್ದಾರೆ. ಕ್ರಮಯೋಗದಿಂದ ಇದನ್ನು ಕಾಣಬಹುದು.

12230012a ಆರಂಭಯಜ್ಞಾಃ[4] ಕ್ಷತ್ರಸ್ಯ ಹವಿರ್ಯಜ್ಞಾ ವಿಶಃ ಸ್ಮೃತಾಃ|

12230012c ಪರಿಚಾರಯಜ್ಞಾಃ ಶೂದ್ರಾಶ್ಚ ಜಪಯಜ್ಞಾ ದ್ವಿಜಾತಯಃ||

ಪಶುವಧೆಯ ಯಜ್ಞಗಳು ಕ್ಷತ್ರಿಯನಿಗೆ ಮತ್ತು ಹವಿರ್ಯಜ್ಞಗಳು ವೈಶ್ಯನಿಗೆ ಎಂದು ಹೇಳಿದ್ದಾರೆ. ಪರಿಚಾರ ಯಜ್ಞಗಳು ಶೂದ್ರರಿಗೆ ಮತ್ತು ಜಪಯಜ್ಞವು ಬ್ರಾಹ್ಮಣರಿಗೆ.

12230013a ಪರಿನಿಷ್ಠಿತಕಾರ್ಯೋ ಹಿ ಸ್ವಾಧ್ಯಾಯೇನ ದ್ವಿಜೋ ಭವೇತ್|

12230013c ಕುರ್ಯಾದನ್ಯನ್ನ ವಾ ಕುರ್ಯಾನ್ಮೈತ್ರೋ ಬ್ರಾಹ್ಮಣ ಉಚ್ಯತೇ||

ವೈದಿಕ ಕರ್ಮಗಳನ್ನು ಮಾಡುವುದರಿಂದ ಮತ್ತು ಸ್ವಾಧ್ಯಾಯದಿಂದ ಬ್ರಾಹ್ಮಣನಾಗುತ್ತಾನೆ. ಅವನು ಅನ್ಯ ಕಾರ್ಯಗಳನ್ನು ಮಾಡಲಿ ಅಥವಾ ಮಾಡದೇ ಇರಲಿ, ಸರ್ವಭೂತಗಳ ಮೇಲಿನ ಮೈತ್ರಭಾವದಿಂದ ಅವನು ಬ್ರಾಹ್ಮಣನೆನಿಸಿಕೊಳ್ಳುತ್ತಾನೆ.

12230014a ತ್ರೇತಾದೌ ಸಕಲಾ ವೇದಾ ಯಜ್ಞಾ ವರ್ಣಾಶ್ರಮಾಸ್ತಥಾ|

12230014c ಸಂರೋಧಾದಾಯುಷಸ್ತ್ವೇತೇ ವ್ಯಸ್ಯಂತೇ ದ್ವಾಪರೇ ಯುಗೇ||

ತ್ರೇತಾಯುಗದ ಆದಿಯಲ್ಲಿ ವೇದಗಳು, ಯಜ್ಞಗಳು ಮತ್ತು ವರ್ಣಾಶ್ರಮಗಳು ಎಲ್ಲವೂ ಇರುತ್ತವೆ. ಆದರೆ ದ್ವಾಪರ ಯುಗದಲ್ಲಿ ಆಯುಸ್ಸು ಕಡಿಮೆಯಾಗುವುದರಿಂದ ಅವುಗಳೂ ಕ್ಷೀಣಿಸುತ್ತವೆ.

12230015a ದ್ವಾಪರೇ ವಿಪ್ಲವಂ ಯಾಂತಿ ವೇದಾಃ ಕಲಿಯುಗೇ ತಥಾ|

12230015c ದೃಶ್ಯಂತೇ ನಾಪಿ ದೃಶ್ಯಂತೇ ಕಲೇರಂತೇ ಪುನಃ ಪುನಃ||

ದ್ವಾಪರ ಮತ್ತು ಕಲಿಯುಗಗಳಲ್ಲಿ ವೇದಗಳು ಕ್ಷೋಭೆಗೊಳಗಾಗುತ್ತವೆ. ಕಲಿಯ ಅಂತ್ಯದಲ್ಲಿಯಂತೂ ವೇದಗಳು ಪುನಃ ಪುನಃ ಇರುವಂತೆ ಕಾಣುತ್ತವೆ ಮತ್ತು ಕಾಣುವುದಿಲ್ಲ.

12230016a ಉತ್ಸೀದಂತಿ ಸ್ವಧರ್ಮಾಶ್ಚ ತತ್ರಾಧರ್ಮೇಣ ಪೀಡಿತಾಃ|

12230016c ಗವಾಂ ಭೂಮೇಶ್ಚ ಯೇ ಚಾಪಾಮೋಷಧೀನಾಂ ಚ ಯೇ ರಸಾಃ||

ಸ್ವಧರ್ಮಗಳು ಹಾಳಾಗುತ್ತವೆ. ಅಧರ್ಮದಿಂದ ಪೀಡೆಗೊಳಗಾಗುತ್ತಾರೆ. ಗೋವು ಮತ್ತು ಭೂಮಿಗಳಲ್ಲಿ ಓಷಧಿ-ನೀರು-ರಸಗಳು ಕ್ಷೀಣಿಸುತ್ತವೆ.

12230017a ಅಧರ್ಮಾಂತರ್ಹಿತಾ ವೇದಾ ವೇದಧರ್ಮಾಸ್ತಥಾಶ್ರಮಾಃ|

12230017c ವಿಕ್ರಿಯಂತೇ ಸ್ವಧರ್ಮಸ್ಥಾಃ ಸ್ಥಾವರಾಣಿ ಚರಾಣಿ ಚ||

ವೇದಗಳೂ, ವೇದಧರ್ಮಗಳೂ, ಆಶ್ರಮಗಳೂ ಅಧರ್ಮಗಳಿಂದ ಮುಚ್ಚಿಹೋಗುತ್ತವೆ. ಸ್ಥಾವರ ಜಂಗಮಗಳೆಲ್ಲವೂ ಸ್ವಧರ್ಮಗಳಿಂದ ವಿಕಾರಗೊಳ್ಳುತ್ತವೆ.

12230018a ಯಥಾ ಸರ್ವಾಣಿ ಭೂತಾನಿ ವೃಷ್ಟಿರ್ಭೌಮಾನಿ ವರ್ಷತಿ|

12230018c ಸೃಜತೇ ಸರ್ವತೋಽಂಗಾನಿ ತಥಾ ವೇದಾ ಯುಗೇ ಯುಗೇ||

ಭೂಮಿಯ ಮೇಲೆ ಮಳೆಬಿದ್ದು ಹೇಗೆ ಸರ್ವ ಭೂತಗಳ ಪುಷ್ಟಿಯಾಗುತ್ತದೆಯೋ ಹಾಗೆ ಯುಗ ಯುಗಗಳಲ್ಲಿ ವೇದಗಳು ತಮ್ಮ ಅಂಗಗಳನ್ನು ಸೃಷ್ಟಿಸುತ್ತವೆ.

12230019a ವಿಸೃತಂ ಕಾಲನಾನಾತ್ವಮನಾದಿನಿಧನಂ ಚ ಯತ್|

12230019c ಕೀರ್ತಿತಂ ತತ್ಪುರಸ್ತಾನ್ಮೇ ಯತಃ ಸಂಯಾಂತಿ ಯಾಂತಿ ಚ||

ಹೀಗೆ ಕಾಲವು ನಾನಾರೂಪಗಳಲ್ಲಿ ವಿಸೃತಗೊಳ್ಳುತ್ತದೆ. ಅದಕ್ಕೆ ಆದಿ-ಅಂತ್ಯಗಳಿಲ್ಲ. ಕಾಲವೇ ಎಲ್ಲವನ್ನೂ ಹುಟ್ಟಿಸುತ್ತದೆ ಮತ್ತು ಸಂಕ್ಷಿಪ್ತಗೊಳಿಸುತ್ತದೆ ಎನ್ನುವುದನ್ನು ನಾನು ಈ ಮೊದಲೇ ನಿನಗೆ ಹೇಳಿದ್ದೇನೆ.

12230020a ಧಾತೇದಂ ಪ್ರಭವಸ್ಥಾನಂ ಭೂತಾನಾಂ ಸಂಯಮೋ ಯಮಃ|

12230020c ಸ್ವಭಾವೇನ ಪ್ರವರ್ತಂತೇ ದ್ವಂದ್ವಸೃಷ್ಟಾನಿ ಭೂರಿಶಃ||

ಸೃಷ್ಟಿಸ್ಥಾನದಲ್ಲಿ ಧಾತನಿದ್ದಾನೆ. ಭೂತಗಳನ್ನು ಯಮನು ನಿಯಂತ್ರಿಸುತ್ತಾನೆ. ಸ್ವಭಾವದಿಂದಾಗಿ ಇವು ಅನೇಕ ದ್ವಂದ್ವರೂಪಗಳನ್ನು ಸೃಷ್ಟಿಸುತ್ತವೆ.

12230021a ಸರ್ಗಃ ಕಾಲೋ ಧೃತಿರ್ವೇದಾಃ ಕರ್ತಾ ಕಾರ್ಯಂ ಕ್ರಿಯಾ ಫಲಮ್|

12230021c ಏತತ್ತೇ ಕಥಿತಂ ತಾತ ಯನ್ಮಾಂ ತ್ವಂ ಪರಿಪೃಚ್ಚಸಿ||

ಮಗೂ! ನೀನು ಕೇಳಿದ ಸೃಷ್ಟಿ, ಕಾಲ, ಧೃತಿ, ವೇದಗಳು, ಕರ್ತ, ಕಾರ್ಯ ಮತ್ತು ಕ್ರಿಯಾಫಲಗಳ ಕುರಿತು ನಿನಗೆ ಹೇಳಿದ್ದೇನೆ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತನೇ ಅಧ್ಯಾಯವು.

[1] ಈ ಶ್ಲೋಕಕ್ಕೆ ಇನ್ನೊಂದು ಅರ್ಥಬರುವ ಅನುವಾದವಿದೆ: ಆದರೆ ಕರ್ಮವು ಹಾಗೆಯೇ ಮಾಡಿದರೆ ಸಿದ್ಧಿಸುತ್ತದೆಯೋ ಅಥವಾ ಜ್ಞಾನಯುಕ್ತವಾಗಿದ್ದರೆ ಸಿದ್ಧಿಸುತ್ತದೆಯೋ ಎನ್ನುವುದರಲ್ಲಿ ಸಂಶಯವಿರಬಾರದು. ಹಾಗೆ ಸಂಶಯವಿಲ್ಲದೇ ಕರ್ಮವನ್ನು ಆಚರಿಸಿದರೆ ಅದು ಸಿದ್ಧಿಸುತ್ತದೆ. (ಭಾರತ ದರ್ಶನ).

[2] ಕೃತ್ವಾ (ಭಾರತ ದರ್ಶನ)

[3] ಕರ್ಮಯೋಗೇನ (ಭಾರತ ದರ್ಶನ)

[4] ಅಲಾಂಭಯಜ್ಞಾಃ (ಭಾರತ ದರ್ಶನ)

Comments are closed.