Shanti Parva: Chapter 229

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೨೯

ಸೃಷ್ಟಿಯ ಸಮಸ್ತ ಕಾರ್ಯಗಳಲ್ಲಿ ಬುದ್ಧಿಯ ಪ್ರಾಧಾನ್ಯತೆ (1-10); ಬುದ್ಧಿಗೆ ಅನುಗುಣವಾಗಿ ಪ್ರಾಣಿಗಳಲ್ಲಿರುವ ತಾರತಮ್ಯತೆ (11-25).

12229001 ವ್ಯಾಸ ಉವಾಚ|

12229001a ಅಥ ಜ್ಞಾನಪ್ಲವಂ ಧೀರೋ ಗೃಹೀತ್ವಾ ಶಾಂತಿಮಾಸ್ಥಿತಃ|

12229001c ಉನ್ಮಜ್ಜಂಶ್ಚ ನಿಮಜ್ಜಂಶ್ಚ ಜ್ಞಾನಮೇವಾಭಿಸಂಶ್ರಯೇತ್||

ವ್ಯಾಸನು ಹೇಳಿದನು: “ಹೀಗೆ ಧೀರನು ಜ್ಞಾನವೆಂಬ ನೌಕೆಯನ್ನು ಹಿಡಿದು ಶಾಂತಿಯಿಂದಿರುತ್ತಾನೆ. ಮುಳುಗಿ-ಏಳುವುದರಲ್ಲಿಯೂ ಜ್ಞಾನವನ್ನೇ ಆಶ್ರಯಿಸಿರುತ್ತಾನೆ.”

12229002 ಶುಕ ಉವಾಚ|

12229002a ಕಿಂ ತಜ್ಜ್ಞಾನಮಥೋ ವಿದ್ಯಾ ಯಯಾ ನಿಸ್ತರತಿ ದ್ವಯಮ್|

12229002c ಪ್ರವೃತ್ತಿಲಕ್ಷಣೋ ಧರ್ಮೋ ನಿವೃತ್ತಿರಿತಿ ಚೈವ ಹಿ||

ಶುಕನು ಹೇಳಿದನು: “ಈ ಜ್ಞಾನವು ಯಾವುದು? ಯಾವ ವಿದ್ಯೆಯು ದ್ವಂದ್ವಗಳಿಂದ ಪಾರುಮಾಡುತ್ತದೆ. ಧರ್ಮದ ಲಕ್ಷಣವು ಪ್ರವೃತ್ತಿ ಮತ್ತು ನಿವೃತ್ತಿ ಎರಡೂ ಆಗಿವೆ.”

12229003 ವ್ಯಾಸ ಉವಾಚ|

12229003a ಯಸ್ತು ಪಶ್ಯೇತ್ ಸ್ವಭಾವೇನ ವಿನಾ ಭಾವಮಚೇತನಃ|

12229003c ಪುಷ್ಯತೇ ಚ ಪುನಃ ಸರ್ವಾನ್ ಪ್ರಜ್ಞಯಾ ಮುಕ್ತಹೇತುಕಃ||

ವ್ಯಾಸನು ಹೇಳಿದನು: “ಎಲ್ಲವೂ ಸ್ವಭಾವಸಿದ್ಧವಾದುದೆಂದೂ ಅದಕ್ಕೆ ಬೇರೆ ಯಾವ ಮೂಲಕಾರಣ ಚೇತನವೂ ಇಲ್ಲವೆಂದು ತಿಳಿಯುವವನು ಪ್ರಜ್ಞಾಹೀನನಾದುದರಿಂದ ಅವನು ಮುಕ್ತನಾಗುವುದಿಲ್ಲ.

12229004a ಯೇಷಾಂ ಚೈಕಾಂತಭಾವೇನ ಸ್ವಭಾವಃ ಕಾರಣಂ ಮತಮ್|

12229004c ಪೂತ್ವಾ ತೃಣಬುಸೀಕಾಂ ವೈ ತೇ ಲಭಂತೇ ನ ಕಿಂ ಚನ||

ಸ್ವಭಾವವೇ ಏಕಕಾರಣವೆಂಬ ಮತವಿರುವವರು ಪ್ರೋಕ್ಷಣೆ ಮಾಡದೇ ಇರುವ ಮೌಂಜಿಹುಲ್ಲಿನಂತೆ. ಅವರಿಗೆ ಏನೂ ಸಿಗುವುದಿಲ್ಲ.

12229005a ಯೇ ಚೈನಂ ಪಕ್ಷಮಾಶ್ರಿತ್ಯ ವರ್ತಯಂತ್ಯಲ್ಪಚೇತಸಃ|

12229005c ಸ್ವಭಾವಂ ಕಾರಣಂ ಜ್ಞಾತ್ವಾ ನ ಶ್ರೇಯಃ ಪ್ರಾಪ್ನುವಂತಿ ತೇ||

ಜಗತ್ತಿಗೆ ಸ್ವಭಾವವೇ ಕಾರಣವೆಂದು ತಿಳಿದು ಈ ಪಕ್ಷವನ್ನು ಆಶ್ರಯಿಸಿ ವರ್ತಿಸುವ ಅಲ್ಪಚೇತಸರು ಶ್ರೇಯಸ್ಸನ್ನು ಹೊಂದುವುದಿಲ್ಲ.

12229006a ಸ್ವಭಾವೋ ಹಿ ವಿನಾಶಾಯ ಮೋಹಕರ್ಮಮನೋಭವಃ|

12229006c ನಿರುಕ್ತಮೇತಯೋರೇತತ್ ಸ್ವಭಾವಪರಭಾವಯೋಃ||

ಮೋಹಕರ್ಮಮನೋಜನಿತ ಈ ಸ್ವಭಾವವಾದವು ವಿನಾಶಕ್ಕೆ ಎಡೆಮಾಡಿಕೊಡುತ್ತದೆ. ಸ್ವಭಾವವಾದ ಮತ್ತು ಪರಾಭವ ಈ ಎರಡೂ ಶಬ್ದಗಳು ಅವ್ಯಯಾರ್ಥವನ್ನು ಕೊಡುತ್ತವೆ.

12229007a ಕೃಷ್ಯಾದೀನಿ ಹಿ ಕರ್ಮಾಣಿ ಸಸ್ಯಸಂಹರಣಾನಿ ಚ|

12229007c ಪ್ರಜ್ಞಾವದ್ಭಿಃ ಪ್ರಕ್ಲೃಪ್ತಾನಿ ಯಾನಾಸನಗೃಹಾಣಿ ಚ||

ಪ್ರಜ್ಞಾವಂತರು ಸಸ್ಯಲಾಭಕ್ಕಾಗಿ ಕೃಷಿ ಮೊದಲಾದ ಕರ್ಮಗಳನ್ನೂ, ಬೀಜಸಂಗ್ರಹಣಕಾರ್ಯಗಳನ್ನೂ ಮಾಡುತ್ತಾರೆ. ಪ್ರಯಾಣಮಾಡಲು ಗಾಡಿಗಳನ್ನೂ, ಕುಳಿತುಕೊಳ್ಳಲು ಆಸನಗಳನ್ನೂ, ವಾಸಿಸಲು ಮನೆಗಳನ್ನೂ ಕಲ್ಪಿಸಿಕೊಳ್ಳುತ್ತಾರೆ.

12229008a ಆಕ್ರೀಡಾನಾಂ ಗೃಹಾಣಾಂ ಚ ಗದಾನಾಮಗದಸ್ಯ ಚ|

12229008c ಪ್ರಜ್ಞಾವಂತಃ ಪ್ರವಕ್ತಾರೋ ಜ್ಞಾನವದ್ಭಿರನುಷ್ಠಿತಾಃ||

ಆಟವಾಡಲು ಮೈದಾನ, ವಾಸಿಸಲು ಮನೆ ಇವುಗಳನ್ನು ಪ್ರಾಜ್ಞರಾದವರೇ ಮಾಡಿಕೊಳ್ಳುತ್ತಾರೆ. ಆಯುರ್ವೇದವನ್ನು ತಿಳಿದವರು ರೋಗಿಗಳ ರೋಗವನ್ನು ತಿಳಿದು ಪರಿಹಾರಕ್ಕೆ ಔಷಧಿಗಳನ್ನು ಕೊಡುತ್ತಾರೆ.

12229009a ಪ್ರಜ್ಞಾ ಸಂಯೋಜಯತ್ಯರ್ಥೈಃ ಪ್ರಜ್ಞಾ ಶ್ರೇಯೋಽಧಿಗಚ್ಚತಿ|

12229009c ರಾಜಾನೋ ಭುಂಜತೇ ರಾಜ್ಯಂ ಪ್ರಜ್ಞಯಾ ತುಲ್ಯಲಕ್ಷಣಾಃ||

ಪ್ರಜ್ಞೆಯಿಂದಲೇ ಐಶ್ವರ್ಯಪ್ರಾಪ್ತಿಯಾಗುತ್ತದೆ. ಪ್ರಜ್ಞೆಯಿಂದಲೇ ಶ್ರೇಯಸ್ಸುಂಟಾಗುತ್ತದೆ. ಸಮಾನಲಕ್ಷಣಗಳುಳ್ಳ ರಾಜರಲ್ಲಿ ಯಾರು ಹೆಚ್ಚು ಪ್ರಾಜ್ಞರೋ ಅವರೇ ರಾಜ್ಯವನ್ನು ಉಪಭೋಗಿಸುತ್ತಾರೆ.

12229010a ಪಾರಾವರ್ಯಂ ತು ಭೂತಾನಾಂ ಜ್ಞಾನೇನೈವೋಪಲಭ್ಯತೇ|

12229010c ವಿದ್ಯಯಾ ತಾತ ಸೃಷ್ಟಾನಾಂ ವಿದ್ಯೈವ ಪರಮಾ ಗತಿಃ||

ಅಯ್ಯಾ! ಪ್ರಾಣಿಗಳ ಶ್ರೇಷ್ಠತೆಯು ಜ್ಞಾನದಿಂದಲೇ ದೊರೆಯುತ್ತದೆ. ವಿದ್ಯೆಯಿಂದ ಸೃಷ್ಟಿಸಲ್ಪಟ್ಟ ಎಲ್ಲಕ್ಕೂ ವಿದ್ಯೆಯೇ ಪರಮಗತಿಯು.

12229011a ಭೂತಾನಾಂ ಜನ್ಮ ಸರ್ವೇಷಾಂ ವಿವಿಧಾನಾಂ ಚತುರ್ವಿಧಮ್|

12229011c ಜರಾಯ್ವಂಡಮಥೋದ್ಭೇದಂ ಸ್ವೇದಂ ಚಾಪ್ಯುಪಲಕ್ಷಯೇತ್||

ಸರ್ವ ವಿವಿಧ ಪ್ರಾಣಿಗಳ ನಾಲ್ಕು ವಿಧದ ಜನ್ಮಗಳ – ಗರ್ಭಕೋಶದಿಂದ ಜನ್ಮ, ಮೊಟ್ಟೆಯಿಂದ ಜನ್ಮ, ನೆಲವನ್ನು ಭೇದಿಸಿ ಆಗುವ ಜನ್ಮ, ಮತ್ತು ಬೆವರು-ನೀರಿನಿಂದಾಗುವ ಜನ್ಮ – ಕುರಿತು ಲಕ್ಷ್ಯಕೊಡಬೇಕು.

12229012a ಸ್ಥಾವರೇಭ್ಯೋ ವಿಶಿಷ್ಟಾನಿ ಜಂಗಮಾನ್ಯುಪಲಕ್ಷಯೇತ್|

12229012c ಉಪಪನ್ನಂ ಹಿ ಯಚ್ಚೇಷ್ಟಾ ವಿಶಿಷ್ಯೇತ ವಿಶೇಷ್ಯಯೋಃ||

ಚಲಿಸದೇ ಇರುವ ಸ್ಥಾವರಗಳಿಗಿಂತಲೂ ಚಲಿಸುವ ಜಂಗಮ ಪ್ರಾಣಿಗಳು ಶ್ರೇಷ್ಠವೆಂದು ತಿಳಿಯಬೇಕು. ಇಷ್ಟದಂತೆ ಚಲಿಸುವುದು ಜಂಗಮಪ್ರಾಣಿಗಳಲ್ಲಿ ವಿಶೇಷವಾದ ಗುಣವು.

12229013a ಆಹುರ್ದ್ವಿಬಹುಪಾದಾನಿ ಜಂಗಮಾನಿ ದ್ವಯಾನಿ ಚ|

12229013c ಬಹುಪಾದ್ಭ್ಯೋ ವಿಶಿಷ್ಟಾನಿ ದ್ವಿಪಾದಾನಿ ಬಹೂನ್ಯಪಿ||

ಜಂಗಮ ಪ್ರಾಣಿಗಳಲ್ಲಿ ಎರಡು ಕಾಲುಗಳಿರುವ ಮತ್ತು ಅನೇಕ ಪಾದಗಳಿರುವ ಪ್ರಾಣಿಗಳು ಎಂದು ಇರಡು ವಿಧಗಳನ್ನು ಹೇಳಿದ್ದಾರೆ. ಬಹುಪಾದಪ್ರಾಣಿಗಳಿಗಿಂತ ಎರಡು ಕಾಲುಗಳಿರುವ ಪ್ರಾಣಿಗಳು ಶ್ರೇಷ್ಠವು.

12229014a ದ್ವಿಪದಾನಿ ದ್ವಯಾನ್ಯಾಹುಃ ಪಾರ್ಥಿವಾನೀತರಾಣಿ ಚ|

12229014c ಪಾರ್ಥಿವಾನಿ ವಿಶಿಷ್ಟಾನಿ ತಾನಿ ಹ್ಯನ್ನಾನಿ ಭುಂಜತೇ||

ದ್ವಿಪಾದಗಳಲ್ಲಿ ಭೂಮಿಯ ಮೇಲೆ ಚರಿಸುವವು ಮತ್ತು ಅನ್ಯ ಎಂಬ ಎರಡು ವಿಧಗಳಿವೆಯೆಂದು ಹೇಳುತ್ತಾರೆ. ಅನ್ನವನ್ನು ತಿನ್ನುವುದರಿಂದ ಭೂಚರ ಪ್ರಾಣಿಗಳು ಶ್ರೇಷ್ಠವೆನಿಸಲ್ಪಟ್ಟಿವೆ.

12229015a ಪಾರ್ಥಿವಾನಿ ದ್ವಯಾನ್ಯಾಹುರ್ಮಧ್ಯಮಾನ್ಯುತ್ತಮಾನಿ ಚ[1]|

12229015c ಮಧ್ಯಮಾನಿ ವಿಶಿಷ್ಟಾನಿ ಜಾತಿಧರ್ಮೋಪಧಾರಣಾತ್||

ಭೂಚರ ಪ್ರಾಣಿಗಳಲ್ಲಿಯೂ ಎರಡು ವಿಧಗಳನ್ನು ಹೇಳಿದ್ದಾರೆ: ಮಧ್ಯಮ ಮತ್ತು ಉತ್ತಮ ಎಂದು. ಜಾತಿಧರ್ಮಗಳನ್ನು ಅನುಸರಿಸುವುದರಿಂದ ಮಧ್ಯಮವು ಶ್ರೇಷ್ಠವು.

12229016a ಮಧ್ಯಮಾನಿ ದ್ವಯಾನ್ಯಾಹುರ್ಧರ್ಮಜ್ಞಾನೀತರಾಣಿ ಚ|

12229016c ಧರ್ಮಜ್ಞಾನಿ ವಿಶಿಷ್ಟಾನಿ ಕಾರ್ಯಾಕಾರ್ಯೋಪಧಾರಣಾತ್||

ಮಧ್ಯಮರಲ್ಲಿ ಎರಡು ವಿಧಗಳನ್ನು ಹೇಳಿದ್ದಾರೆ: ಧರ್ಮಜ್ಞರು ಮತ್ತು ಇತರರು. ಕಾರ್ಯ-ಅಕಾರ್ಯಗಳನ್ನು ವಿವೇಚಿಸುವ ಧರ್ಮಜ್ಞರು ಶ್ರೇಷ್ಠರು.

12229017a ಧರ್ಮಜ್ಞಾನಿ ದ್ವಯಾನ್ಯಾಹುರ್ವೇದಜ್ಞಾನೀತರಾಣಿ ಚ|

12229017c ವೇದಜ್ಞಾನಿ ವಿಶಿಷ್ಟಾನಿ ವೇದೋ ಹ್ಯೇಷು ಪ್ರತಿಷ್ಠಿತಃ||

ಧರ್ಮಜ್ಞರಲ್ಲಿ ಎರಡು ವಿಧಗಳನ್ನು ಹೇಳಿದ್ದಾರೆ: ವೇದಜ್ಞರು ಮತ್ತು ಇತರರು. ವೇದವು ಪ್ರತಿಷ್ಠಿತವಾಗಿರುವ ವೇದಜ್ಞರು ಶ್ರೇಷ್ಠರು.

12229018a ವೇದಜ್ಞಾನಿ ದ್ವಯಾನ್ಯಾಹುಃ ಪ್ರವಕ್ತೃಣೀತರಾಣಿ ಚ|

12229018c ಪ್ರವಕ್ತೃಣಿ ವಿಶಿಷ್ಟಾನಿ ಸರ್ವಧರ್ಮೋಪಧಾರಣಾತ್||

ವೇದಜ್ಞರಲ್ಲಿಯೂ ಎರಡು ವಿಧಗಳನ್ನು ಹೇಳಿದ್ದಾರೆ: ಪ್ರವಚನಕಾರರು ಮತ್ತು ಇತರರು. ಅವರಲ್ಲಿ ಪ್ರವಚನಕಾರರೇ ಶ್ರೇಷ್ಠರು. ಏಕೆಂದರೆ ಅವರು ಎಲ್ಲ ಧರ್ಮಗಳನ್ನೂ ತಿಳಿದವರು.

12229019a ವಿಜ್ಞಾಯಂತೇ ಹಿ ಯೈರ್ವೇದಾಃ ಸರ್ವಧರ್ಮಕ್ರಿಯಾಫಲಾಃ|

12229019c ಸಯಜ್ಞಾಃ ಸಖಿಲಾ ವೇದಾಃ ಪ್ರವಕ್ತೃಭ್ಯೋ ವಿನಿಃಸೃತಾಃ||

ಪ್ರವಕ್ತೃಗಳ ಮುಖದಿಂದ ಪ್ರವಚನಗಳ ಮೂಲಕ ಹೊರಬರುವ ಧರ್ಮ, ಕರ್ಮ, ಫಲಸಹಿತ ಸರ್ವವೇದಗಳ ಜ್ಞಾನ – ಇವೆಲ್ಲವೂ ಇತರರಿಗೆ ತಿಳಿಯುತ್ತದೆ.

12229020a ಪ್ರವಕ್ತೃಣಿ ದ್ವಯಾನ್ಯಾಹುರಾತ್ಮಜ್ಞಾನೀತರಾಣಿ ಚ|

12229020c ಆತ್ಮಜ್ಞಾನಿ ವಿಶಿಷ್ಟಾನಿ ಜನ್ಮಾಜನ್ಮೋಪಧಾರಣಾತ್||

ಪ್ರವಕ್ತೃಗಳಲ್ಲಿಯೂ ಎರಡು ವಿಧವನ್ನು ಹೇಳಿದ್ದಾರೆ: ಆತ್ಮಜ್ಞಾನಿಗಳು ಮತ್ತು ಇತರರು. ಹುಟ್ಟು-ಸಾವುಗಳ ರಹಸ್ಯಗಳನ್ನು ತಿಳಿದಿರುವುದರಿಂದ ಆತ್ಮಜ್ಞಾನಿಗಳೇ ಶ್ರೇಷ್ಠರು.

12229021a ಧರ್ಮದ್ವಯಂ ಹಿ ಯೋ ವೇದ ಸ ಸರ್ವಃ ಸರ್ವಧರ್ಮವಿದ್|

12229021c ಸ ತ್ಯಾಗೀ ಸತ್ಯಸಂಕಲ್ಪಃ ಸ ತು ಕ್ಷಾಂತಃ ಸ ಈಶ್ವರಃ||

ಪ್ರವೃತ್ತಿ ಮತ್ತು ನಿವೃತ್ತಿ – ಈ ಎರಡೂ ಧರ್ಮಗಳನ್ನು ತಿಳಿದವನು ಸರ್ವಜ್ಞನು. ಸರ್ವಧರ್ಮವಿದುವು. ಅವನು ತ್ಯಾಗಿಯು, ಸತ್ಯಸಂಕಲ್ಪನು, ಪವಿತ್ರನು ಮತ್ತು ಈಶ್ವರನು.

12229022a ಧರ್ಮಜ್ಞಾನಪ್ರತಿಷ್ಠಂ ಹಿ ತಂ ದೇವಾ ಬ್ರಾಹ್ಮಣಂ ವಿದುಃ|

12229022c ಶಬ್ದಬ್ರಹ್ಮಣಿ ನಿಷ್ಣಾತಂ ಪರೇ ಚ ಕೃತನಿಶ್ಚಯಮ್||

ಧರ್ಮಜ್ಞಾನದಲ್ಲಿ ಪ್ರತಿಷ್ಠನಾದವನನ್ನೇ ದೇವತೆಗಳು ಬ್ರಾಹ್ಮಣ ಎಂದು ತಿಳಿಯುತ್ತಾರೆ. ಅಂಥವನು ಶಬ್ದಬ್ರಹ್ಮದಲ್ಲಿ ನಿಷ್ಣಾತನಾಗಿರುತ್ತಾನೆ ಮತ್ತು ಅದಕ್ಕಿತಲೂ ಶ್ರೇಷ್ಠವಾದುದರ ಕುರಿತು ನಿಶ್ಚಯಪಟ್ಟಿರುತ್ತಾನೆ.

12229023a ಅಂತಃಸ್ಥಂ ಚ ಬಹಿಷ್ಠಂ ಚ ಯೇಽಽಧಿಯಜ್ಞಾಧಿದೈವತಮ್|

12229023c ಜಾನಂತಿ ತಾನ್ನಮಸ್ಯಾಮಸ್ತೇ ದೇವಾಸ್ತಾತ ತೇ ದ್ವಿಜಾಃ||

ಮಗೂ! ಅಂಥವರು ಒಳಗೂ ಮತ್ತು ಹೊರಗೂ ಇರುವ ಆತ್ಮನನ್ನು ತಿಳಿದಿರುತ್ತಾರೆ. ಅಂಥವರು ದೇವತೆಗಳು. ಅಂಥವರು ಬ್ರಾಹ್ಮಣರು.

12229024a ತೇಷು ವಿಶ್ವಮಿದಂ ಭೂತಂ ಸಾಗ್ರಂ ಚ ಜಗದಾಹಿತಮ್|

12229024c ತೇಷಾಂ ಮಾಹಾತ್ಮ್ಯಭಾವಸ್ಯ ಸದೃಶಂ ನಾಸ್ತಿ ಕಿಂ ಚನ||

ಅಂಥವರಲ್ಲಿಯೇ ಈ ವಿಶ್ವ, ಜಗತ್ತು ಮತ್ತು ಸಕಲ ಪ್ರಾಣಿಗಳು ಪ್ರತಿಷ್ಠಿತವಾಗಿವೆ. ಅವರ ಮಾಹಾತ್ಮೆಗೆ ಸರಿಸಾಟಿಯಾದುದು ಬೇರೆ ಯಾವುದೂ ಇಲ್ಲ.

12229025a ಆದಿಂ ತೇ ನಿಧನಂ ಚೈವ ಕರ್ಮ ಚಾತೀತ್ಯ ಸರ್ವಶಃ|

12229025c ಚತುರ್ವಿಧಸ್ಯ ಭೂತಸ್ಯ ಸರ್ವಸ್ಯೇಶಾಃ ಸ್ವಯಂಭುವಃ||

ಬ್ರಹ್ಮಜ್ಞಾನದಲ್ಲಿ ಪ್ರತಿಷ್ಠಿತರಾಗಿರುವವರು ಹುಟ್ಟು-ಸಾವು ಮತ್ತು ಕರ್ಮಗಳ ಎಲ್ಲೆಯನ್ನು ಸಂಪೂರ್ಣವಾಗಿ ದಾಟಿ ಎಲ್ಲ ನಾಲ್ಕು ವಿಧದ ಪ್ರಾಣಿಗಳಿಗೂ ಈಶ್ವರರೂ ಸ್ವಯಂಭೂ ಸದೃಶರೂ ಆಗುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಏಕೋನತ್ರಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತೊಂಭತ್ತನೇ ಅಧ್ಯಾಯವು.

[1] ದ್ವಯಾನ್ಯಾಹುರ್ಮಧ್ಯಮಾನ್ಯಧಮಾನಿ ತು| (ಭಾರತ ದರ್ಶನ).

Comments are closed.