Shanti Parva: Chapter 228

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೨೮

ಧ್ಯಾನಯೋಗದ ವರ್ಣನೆ; ಯೋಗದಿಂದ ಮೋಕ್ಷಪ್ರಾಪ್ತಿ (1-38).

12228001 ವ್ಯಾಸ ಉವಾಚ|

12228001a ಅಥ ಚೇದ್ರೋಚಯೇದೇತದ್ದ್ರುಹ್ಯೇತ ಮನಸಾ ತಥಾ|

12228001c ಉನ್ಮಜ್ಜಂಶ್ಚ ನಿಮಜ್ಜಂಶ್ಚ ಜ್ಞಾನವಾನ್ ಪ್ಲವವಾನ್ಭವೇತ್||

ವ್ಯಾಸನು ಹೇಳಿದನು: “ಮುಳುಗುತ್ತಾ ಏಳುತ್ತಾ ಪ್ರವಾಹದ ಜೊತೆ ಹೋಗುವುದು ಬೇಡವೆಂದಿದ್ದವನು ಜ್ಞಾನದ ದೋಣಿಯನ್ನೇ ಬಳಸಬೇಕಾಗುತ್ತದೆ.

12228002a ಪ್ರಜ್ಞಯಾ ನಿರ್ಮಿತೈರ್ಧೀರಾಸ್ತಾರಯಂತ್ಯಬುಧಾನ್ ಪ್ಲವೈಃ|

12228002c ನಾಬುಧಾಸ್ತಾರಯಂತ್ಯನ್ಯಾನಾತ್ಮಾನಂ ವಾ ಕಥಂ ಚನ||

ಪ್ರಜ್ಞೆಯಿಂದ ನಿರ್ಮಿತರಾದ ಧೀರರು ಅಜ್ಞಾನಿಗಳನ್ನೂ ಸಂಸಾರಸಾಗರದಿಂದ ನೌಕಾರೂಪದಲ್ಲಿ ಪಾರುಮಾಡುತ್ತಾರೆ. ಆದರೆ ಅಜ್ಞಾನಿಗಳು ತಮ್ಮನ್ನಾಗಲೀ ಬೇರೆಯವರನ್ನಾಗಲೀ ಎಂದೂ ಪಾರುಮಾಡಿಕೊಳ್ಳಲಾರರು.

12228003a ಚಿನ್ನದೋಷೋ ಮುನಿರ್ಯೋಗಾನ್ಯುಕ್ತೋ ಯುಂಜೀತ ದ್ವಾದಶ|

12228003c ದಶಕರ್ಮಸುಖಾನರ್ಥಾನುಪಾಯಾಪಾಯನಿರ್ಭಯಃ||

ಯೋಗಯುಕ್ತ ಮುನಿಗಳು ದೋಷಗಳನ್ನು ಕಡಿದುಕೊಳ್ಳುತ್ತಾರೆ. ಅವರು ಸುಖವನ್ನು ತರುವ ದಶಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಉಪಾಯ-ಅನುಪಾಯಗಳನ್ನು ಬಳಸುತ್ತಾರೆ[1].

12228004a ಚಕ್ಷುರಾಚಾರವಿತ್ ಪ್ರಾಜ್ಞೋ ಮನಸಾ ದರ್ಶನೇನ ಚ|

12228004c ಯಚ್ಚೇದ್ವಾಙ್ಮನಸೀ ಬುದ್ಧ್ಯಾ ಯ ಇಚ್ಚೇಜ್ಜ್ಞಾನಮುತ್ತಮಮ್|

12228004e ಜ್ಞಾನೇನ ಯಚ್ಚೇದಾತ್ಮಾನಂ ಯ ಇಚ್ಚೇಚ್ಚಾಂತಿಮಾತ್ಮನಃ||

ಪ್ರಾಜ್ಞರು ಮನಸ್ಸಿನ ದರ್ಶನವನ್ನು ತಮ್ಮ ಕಣ್ಣುಗಳು ಮತ್ತು ನಡತೆಯನ್ನು ನಿಯಂತ್ರಿಸಲು ಬಯಸುತ್ತಾರೆ. ಉತ್ತಮ ಜ್ಞಾನವನ್ನು ಬಯಸುವವನು ಬುದ್ಧಿಯ ಮೂಲಕ ಮನಸ್ಸನ್ನೂ ಮಾತನ್ನೂ ನಿಯಂತ್ರಿಸಿಕೊಳ್ಳಬೇಕು. ಆತ್ಮಶಾಂತಿಯನ್ನು ಬಯಸುವವನು ಹಾಗೆ ಪಡೆದುಕೊಂಡ ಜ್ಞಾನದಿಂದ ಬುದ್ಧಿಯನ್ನು ನಿಯಂತ್ರಿಸಿ ಆತ್ಮನಲ್ಲಿ ವಿಲೀನಗೊಳಿಸಬೇಕು.

12228005a ಏತೇಷಾಂ ಚೇದನುದ್ರಷ್ಟಾ ಪುರುಷೋಽಪಿ ಸುದಾರುಣಃ|

12228005c ಯದಿ ವಾ ಸರ್ವವೇದಜ್ಞೋ ಯದಿ ವಾಪ್ಯನೃಚೋಽಜಪಃ||

12228006a ಯದಿ ವಾ ಧಾರ್ಮಿಕೋ ಯಜ್ವಾ ಯದಿ ವಾ ಪಾಪಕೃತ್ತಮಃ|

12228006c ಯದಿ ವಾ ಪುರುಷವ್ಯಾಘ್ರೋ ಯದಿ ವಾ ಕ್ಲೈಬ್ಯಧಾರಿತಾ||

ಇದನ್ನು ಅನುಸರಿಸುವವನು ದಾರುಣ ಪುರುಷನೇ ಆಗಿರಬಹುದು, ಅಥವಾ ಸರ್ವವೇದಜ್ಞನಾಗಿರಬಹುದು, ಅಥವಾ ಸುಳ್ಳುಹೇಳುವವನಾಗಿರಬಹುದು, ಅಥವಾ ಧಾರ್ಮಿಕನಾಗಿ ಯಜ್ಞಗಳನ್ನು ಮಾಡುವವನಾಗಿರಬಹುದು, ಅಥವಾ ಪಾಪಕರ್ಮಿಯಾಗಿರಬಹುದು, ಅಥವಾ ಪುರುಷವ್ಯಾಘ್ರನಾಗಿರಬಹುದು, ಅಥವಾ ಷಂಡರಂತಿರಬಹುದು.

12228007a ತರತ್ಯೇವ ಮಹಾದುರ್ಗಂ ಜರಾಮರಣಸಾಗರಮ್|

12228007c ಏವಂ ಹ್ಯೇತೇನ ಯೋಗೇನ ಯುಂಜಾನೋಽಪ್ಯೇಕಮಂತತಃ|

12228007e ಅಪಿ ಜಿಜ್ಞಾಸಮಾನೋ ಹಿ ಶಬ್ದಬ್ರಹ್ಮಾತಿವರ್ತತೇ||

ಇದನ್ನು ಅನುಸರಿಸುವವನು ಮಹಾ ದುರ್ಗಮವಾಗಿರುವ ಜರಾಮರಣಸಾಗರವನ್ನು ದಾಟುತ್ತಾನೆ. ಆದುದರಿಂದಲೇ ಏಕಮನಸ್ಕನಾಗಿ ಯೋಗದಲ್ಲಿ ತೊಡಗಬೇಕು. ಹೀಗೆ ಜಿಜ್ಞಾಸೆಮಾಡುವವನು ಶಬ್ದಬ್ರಹ್ಮನನ್ನು ಪಡೆದುಕೊಳ್ಳುತ್ತಾನೆ.

12228008a ಧರ್ಮೋಪಸ್ಥೋ ಹ್ರೀವರೂಥ ಉಪಾಯಾಪಾಯಕೂಬರಃ|

12228008c ಅಪಾನಾಕ್ಷಃ ಪ್ರಾಣಯುಗಃ ಪ್ರಜ್ಞಾಯುರ್ಜೀವಬಂಧನಃ||

12228009a ಚೇತನಾಬಂಧುರಶ್ಚಾರುರಾಚಾರಗ್ರಹನೇಮಿವಾನ್|

12228009c ದರ್ಶನಸ್ಪರ್ಶನವಹೋ ಘ್ರಾಣಶ್ರವಣವಾಹನಃ||

12228010a ಪ್ರಜ್ಞಾನಾಭಿಃ ಸರ್ವತಂತ್ರಪ್ರತೋದೋ ಜ್ಞಾನಸಾರಥಿಃ|

12228010c ಕ್ಷೇತ್ರಜ್ಞಾಧಿಷ್ಠಿತೋ ಧೀರಃ ಶ್ರದ್ಧಾದಮಪುರಃಸರಃ||

12228011a ತ್ಯಾಗವರ್ತ್ಮಾನುಗಃ ಕ್ಷೇಮ್ಯಃ ಶೌಚಗೋ ಧ್ಯಾನಗೋಚರಃ|

12228011c ಜೀವಯುಕ್ತೋ ರಥೋ ದಿವ್ಯೋ ಬ್ರಹ್ಮಲೋಕೇ ವಿರಾಜತೇ||

ಧ್ಯಾನಯೋಗವೆಂಬ ರಥದಲ್ಲಿ ಧರ್ಮವೇ ಕುಳಿತುಕೊಳ್ಳುವ ಸ್ಥಾನ. ಲಜ್ಜೆಯು ಅದರ ಆವರಣ. ಉಪಾಯ-ಅಪಾಯಗಳು ಅದರ ಮೂಕಿಗಳು. ಅಪಾನವಾಯುವು ಅದರ ಅಚ್ಚುಮರ. ಪ್ರಾಣವಾಯುವು ನೊಗ. ಪ್ರಜ್ಞೆಯು ಆಯುವು. ಜೀವವು ಬಂಧನ. ಚೈತನ್ಯವು ನೊಗದ ಕೆಳಗಿನ ಮೂಕಿಕಂಬ. ಸದಾಚಾರವು ನೇಮಿಚಕ್ರ. ದರ್ಶನ-ಸ್ಪರ್ಶನ-ಘ್ರಾಣ-ಶ್ರವಣಗಳನ್ನು ಇದು ಹೊತ್ತುಕೊಂಡಿದೆ. ಪ್ರಜ್ಞೆಯು ಅದರ ನಾಭಿಯು. ಸಂಪೂರ್ಣಶಾಸ್ತ್ರಗಳು ಅದರ ಚಾವಟಿ. ಜ್ಞಾನವೇ ಅದರ ಸಾರಥಿ. ಕ್ಷೇತ್ರಜ್ಞನು ರಥವನ್ನೇರಿರುವ ಧೀರನು. ಅವನು ಶ್ರದ್ಧೆ ಮತ್ತು ದಮಗಳಿಂದ ರಥವನ್ನು ಮುಂದೆ ಮುಂದೆ ಕೊಂಡೊಯ್ಯುತ್ತಾನೆ. ತ್ಯಾಗವು ಕ್ಷೇಮದಿಂದ ಅದನ್ನು ಹಿಂಬಾಲಿಸಿ ಹೋಗುತ್ತದೆ. ಶೌಚವು ಅದರ ಮಾರ್ಗ ಮತ್ತು ಧ್ಯಾನವು ಅದರ ಗೋಚರ. ಜೀವಯುಕ್ತವಾದ ಈ ದಿವ್ಯ ರಥವು ಬ್ರಹ್ಮಲೋಕದಲ್ಲಿ ವಿರಾಜಿಸುತ್ತದೆ.

12228012a ಅಥ ಸಂತ್ವರಮಾಣಸ್ಯ ರಥಮೇತಂ ಯುಯುಕ್ಷತಃ|

12228012c ಅಕ್ಷರಂ ಗಂತುಮನಸೋ ವಿಧಿಂ ವಕ್ಷ್ಯಾಮಿ ಶೀಘ್ರಗಮ್||

ಈ ರಥವನ್ನು ತ್ವರೆಮಾಡಿ ಅಕ್ಷರ ಬ್ರಹ್ಮನಲ್ಲಿಗೆ ಹೋಗಲು ಬಯಸುವವನಿಗೆ ರಥದ ವೇಗವನ್ನು ಹೆಚ್ಚಿಸಲಿರುವ ವಿಧಿಯನ್ನು ಹೇಳುತ್ತೇನೆ.

12228013a ಸಪ್ತ ಯೋ ಧಾರಣಾಃ ಕೃತ್ಸ್ನಾ ವಾಗ್ಯತಃ ಪ್ರತಿಪದ್ಯತೇ|

12228013c ಪೃಷ್ಠತಃ ಪಾರ್ಶ್ವತಶ್ಚಾನ್ಯಾ ಯಾವತ್ಯಸ್ತಾಃ ಪ್ರಧಾರಣಾಃ||

ವಿದ್ವಾಂಸನು ಒಟ್ಟು ಏಳು ಧಾರಣೆಗಳನ್ನು[2] ಸಿದ್ಧಿಮಾಡಿಕೊಳ್ಳುತ್ತಾನೆ. ಹಿಂದೆ, ಮುಂದೆ, ಅಕ್ಕಪಕ್ಕಗಳಲ್ಲಿ ಮತ್ತು ಎಲ್ಲೆಲ್ಲಿಯೂ ಈ ಧಾರಣೆಗಳಿರುತ್ತವೆ.

12228014a ಕ್ರಮಶಃ ಪಾರ್ಥಿವಂ ಯಚ್ಚ ವಾಯವ್ಯಂ ಖಂ ತಥಾ ಪಯಃ|

12228014c ಜ್ಯೋತಿಷೋ ಯತ್ತದೈಶ್ವರ್ಯಮಹಂಕಾರಸ್ಯ ಬುದ್ಧಿತಃ||

ಸಾಧಕನು ಕ್ರಮೇಣವಾಗಿ ಭೂಮಿ, ನೀರು, ತೇಜಸ್ಸು, ವಾಯು, ಆಕಾಶ, ಅಹಂಕಾರ ಮತ್ತು ಬುದ್ಧಿಗಳ ಮೇಲೆ ಅಧಿಕಾರವನ್ನು ಪಡೆದು ಐಶ್ವರ್ಯವನ್ನು ಹೊಂದುತ್ತಾನೆ.

12228015a ಅವ್ಯಕ್ತಸ್ಯ ತಥೈಶ್ವರ್ಯಂ ಕ್ರಮಶಃ ಪ್ರತಿಪದ್ಯತೇ|

12228015c ವಿಕ್ರಮಾಶ್ಚಾಪಿ ಯಸ್ಯೈತೇ ತಥಾ ಯುಂಕ್ತೇ ಸ ಯೋಗತಃ||

ಅನಂತರ ಅವನು ಕ್ರಮೇಣವಾಗಿ ಅವ್ಯಕ್ತ ತತ್ತ್ವದ ಐಶ್ವರ್ಯವನ್ನು ಪಡೆದುಕೊಳ್ಳುತ್ತಾನೆ. ಯೋಗಯುಕ್ತನಾದಂತೆ ಅವನು ಇವುಗಳ ಮೇಲೆ ತನ್ನ ವಿಕ್ರಮವನ್ನೂ ಪಡೆದುಕೊಳ್ಳುತ್ತಾನೆ.

12228016a ಅಥಾಸ್ಯ ಯೋಗಯುಕ್ತಸ್ಯ ಸಿದ್ಧಿಮಾತ್ಮನಿ ಪಶ್ಯತಃ|

12228016c ನಿರ್ಮಥ್ಯಮಾನಃ ಸೂಕ್ಷ್ಮತ್ವಾದ್ರೂಪಾಣೀಮಾನಿ ದರ್ಶಯೇತ್||

ಇದನ್ನೇ ಮುಂದುವರೆದು ಹೋದ ಯೋಗಯುಕ್ತನು ಸಿದ್ಧಿಯನ್ನು ಪಡೆದು ಆತ್ಮನನ್ನೇ ಕಾಣುತ್ತಾನೆ. ಧ್ಯಾನಾಸಕ್ತನಾದ ಅವನಿಗೆ ಈ ಸೂಕ್ಷ್ಮ ರೂಪಗಳು ಕಾಣತೊಡಗುತ್ತವೆ.

12228017a ಶೈಶಿರಸ್ತು ಯಥಾ ಧೂಮಃ ಸೂಕ್ಷ್ಮಃ ಸಂಶ್ರಯತೇ ನಭಃ|

12228017c ತಥಾ ದೇಹಾದ್ವಿಮುಕ್ತಸ್ಯ ಪೂರ್ವರೂಪಂ ಭವತ್ಯುತ||

ಶಿಶಿರಕಾಲದ ಸೂಕ್ಷ್ಮ ಇಬ್ಬನಿಯು ಹೊಗೆಯಂತೆ ಆಕಾಶವನ್ನು ಆವರಿಸಿರುವಂತೆ ಕಾಣುತ್ತದೆ ಮತ್ತು ದೇಹದಿಂದ ಹೊರಬಂದು ಪುನಃ ಹಿಂದಿನ ರೂಪವನ್ನು ಪಡೆದುಕೊಂಡಂತೆ ಆಗುತ್ತದೆ.

12228018a ಅಥ ಧೂಮಸ್ಯ ವಿರಮೇ ದ್ವಿತೀಯಂ ರೂಪದರ್ಶನಮ್|

12228018c ಜಲರೂಪಮಿವಾಕಾಶೇ ತತ್ರೈವಾತ್ಮನಿ ಪಶ್ಯತಿ||

ಆಕಾಶವನ್ನು ಮುಚ್ಚಿರುವ ಧೂಮವು ಹೊರಟುಹೋಗಿ ನಂತರ ಎರಡನೆಯ ರೂಪವು ಕಾಣಿಸಿಕೊಳ್ಳುತ್ತದೆ. ಆಕಾಶವು ಜಲರೂಪವಾಗಿರುವಂತೆ ಮತ್ತು ತನ್ನ ಆತ್ಮವೂ ಜಲರೂಪವಾಗಿರುವಂತೆ ನೋಡುತ್ತಾನೆ.

12228019a ಅಪಾಂ ವ್ಯತಿಕ್ರಮೇ ಚಾಪಿ ವಹ್ನಿರೂಪಂ ಪ್ರಕಾಶತೇ|

12228019c ತಸ್ಮಿನ್ನುಪರತೇ ಚಾಸ್ಯ ಪೀತವಸ್ತ್ರವದಿಷ್ಯತೇ|

12228019e ಊರ್ಣಾರೂಪಸವರ್ಣಂ ಚ ತಸ್ಯ ರೂಪಂ ಪ್ರಕಾಶತೇ||

ನೀರು ಹೊರಟುಹೋಗಲು ಅಗ್ನಿರೂಪವು ಕಾಣಿಸಿಕೊಳ್ಳುತ್ತದೆ. ಅದೂ ಹೊರಟು ಹೋದಮೇಲೆ ಹಳದಿ ವಸ್ತ್ರವನ್ನು ಧರಿಸಿ ಉಣ್ಣೆಯಂತಿರುವ ಸುವರ್ಣವರ್ಣದ ವಾಯುರೂಪವು ಕಾಣಿಸಿಕೊಳ್ಳುತ್ತದೆ.

12228020a ಅಥ ಶ್ವೇತಾಂ ಗತಿಂ ಗತ್ವಾ ವಾಯವ್ಯಂ ಸೂಕ್ಷ್ಮಮಪ್ಯಜಃ|

12228020c ಅಶುಕ್ಲಂ ಚೇತಸಃ ಸೌಕ್ಷ್ಮ್ಯಮವ್ಯಕ್ತಂ ಬ್ರಹ್ಮಣೋಽಸ್ಯ ವೈ||

ಹಳದೀ ಬಣ್ಣವು ಬಿಳಿಯಾಗಿ ವಾಯುವಿನ ಸೂಕ್ಷ್ಮರೂಪವು ಕಾಣಿಸುತ್ತದೆ. ಆಗ ಚೇತನವು ಬಿಳಿಯೂ ಸೂಕ್ಷ್ಮವೂ ಆಗುತ್ತದೆ. ಅದೇ ಅವ್ಯಕ್ತ ಬ್ರಹ್ಮ.

12228021a ಏತೇಷ್ವಪಿ ಹಿ ಜಾತೇಷು ಫಲಜಾತಾನಿ ಮೇ ಶೃಣು|

12228021c ಜಾತಸ್ಯ ಪಾರ್ಥಿವೈಶ್ವರ್ಯೇ ಸೃಷ್ಟಿರಿಷ್ಟಾ ವಿಧೀಯತೇ||

ಈ ಲಕ್ಷಣಗಳು ಕಾಣಿಸಿಕೊಂಡ ನಂತರ ಯಾವ ಫಲಗಳು ಉಂಟಾಗುತ್ತವೆ ಎನ್ನುವುದನ್ನು ಕೇಳು. ಪೃಥ್ವೀತತ್ತ್ವವನ್ನು ವಶಪಡಿಸಿಕೊಂಡ ನಂತರ ಸೃಷ್ಟಿಸುವ ಶಕ್ತಿಯುಂಟಾಗುತ್ತದೆ.

12228022a ಪ್ರಜಾಪತಿರಿವಾಕ್ಷೋಭ್ಯಃ ಶರೀರಾತ್ ಸೃಜತಿ ಪ್ರಜಾಃ|

12228022c ಅಂಗುಲ್ಯಂಗುಷ್ಠಮಾತ್ರೇಣ ಹಸ್ತಪಾದೇನ ವಾ ತಥಾ||

12228023a ಪೃಥಿವೀಂ ಕಂಪಯತ್ಯೇಕೋ ಗುಣೋ ವಾಯೋರಿತಿ ಸ್ಮೃತಃ|

12228023c ಆಕಾಶಭೂತಶ್ಚಾಕಾಶೇ ಸವರ್ಣತ್ವಾತ್ ಪ್ರಣಶ್ಯತಿ||

ಪ್ರಜಾಪತಿಯಂತೆ ಕ್ಷೋಭರಹಿತನಾಗಿ ಅವನು ತನ್ನ ಶರೀರದಿಂದಲೇ ಪ್ರಜೆಗಳನ್ನು ಸೃಷ್ಟಿಸುತ್ತಾನೆ. ವಾಯುತತ್ತ್ವದ ಸಿದ್ಧಿಯನ್ನು ಪಡೆದವನು ಯಾರ ಸಹಾಯವೂ ಇಲ್ಲದೇ ಏಕಾಕಿಯಾಗಿ ಬೆರಳಿನಿಂದಾಗಲೀ, ಹೆಬ್ಬೆರಳಿನಿಂದಾಗಲೀ, ಕೈಯಿಂದಾಗಲೀ ಅಥವಾ ಕಾಲಿನಿಂದಾಗಲೀ ಭೂಮಿಯನ್ನೇ ಅಲ್ಲಾಡಿಸಲು ಸಮರ್ಥನಾಗುತ್ತಾನೆ ಎಂದು ಹೇಳಿದ್ದಾರೆ. ಆಕಾಶತತ್ತ್ವದ ಸಿದ್ಧಿಯನ್ನು ಪಡೆದವನು ಆಕಾಶದಂತೆಯೇ ಆಗಿ ಆಕಾಶ ಮತ್ತು ತನ್ನ ವರ್ಣವು ಒಂದೇ ಆಗಿ ಅಂತರ್ಧಾನನಾಗುತ್ತಾನೆ.

12228024a ವರ್ಣತೋ ಗೃಹ್ಯತೇ ಚಾಪಿ ಕಾಮಾತ್ಪಿಬತಿ ಚಾಶಯಾನ್|

12228024c ನ ಚಾಸ್ಯ ತೇಜಸಾ ರೂಪಂ ದೃಶ್ಯತೇ ಶಾಮ್ಯತೇ ತಥಾ||

ಜಲತತ್ತ್ವದ ಸಿದ್ಧಿಯನ್ನು ಪಡೆದವನು ಸ್ವ-ಇಚ್ಛೆಯಿಂದ ಜಲಾಶಯಗಳನ್ನೇ ಕುಡಿಯಬಲ್ಲನು. ಅಗ್ನಿತತ್ತ್ವದ ಸಿದ್ಧಿಯನ್ನು ಪಡೆದವನ ತೇಜೋ ರೂಪವನ್ನು ನೋಡಲಿಕ್ಕೂ ಆಗುವುದಿಲ್ಲ. ಅದನ್ನು ಉಪಶಮಗೊಳಿಸಲೂ ಸಾಧ್ಯವಾಗುವುದಿಲ್ಲ.

12228025a ಅಹಂಕಾರಸ್ಯ ವಿಜಿತೇಃ ಪಂಚೈತೇ ಸ್ಯುರ್ವಶಾನುಗಾಃ|

12228025c ಷಣ್ಣಾಮಾತ್ಮನಿ ಬುದ್ಧೌ ಚ ಜಿತಾಯಾಂ ಪ್ರಭವತ್ಯಥ||

ಅಹಂಕಾರವನ್ನು ಜಹಿಸಿದವನಿಗೆ ಈ ಐದು ಮಹಾಭೂತಗಳೂ ಸಾಧಕನ ಅಧೀನವಾಗಿ ಅವನು ಸಂಕಲ್ಪಿಸಿದಂತೆ ನಡೆದುಕೊಳ್ಳುತ್ತವೆ. ಆರನೆಯ ಬುದ್ಧಿಯನ್ನೂ ಗೆದ್ದರೆ ಅವನು ಆತ್ಮಸ್ವರೂಪನಾಗುತ್ತಾನೆ.

12228026a ನಿರ್ದೋಷಾ ಪ್ರತಿಭಾ ಹ್ಯೇನಂ ಕೃತ್ಸ್ನಾ ಸಮಭಿವರ್ತತೇ|

12228026c ತಥೈವ ವ್ಯಕ್ತಮಾತ್ಮಾನಮವ್ಯಕ್ತಂ ಪ್ರತಿಪದ್ಯತೇ||

ಆಗ ಅವನು ನಿರ್ದೋಷವಾದ ಸರ್ವ ಪ್ರತಿಭೆಗಳನ್ನು ಪಡೆದುಕೊಳ್ಳುತ್ತಾನೆ. ಆಗ ವ್ಯಕ್ತವು ಅವ್ಯಕ್ತದಲ್ಲಿ ಸೇರಿಕೊಳ್ಳುತ್ತದೆ ಮತ್ತು ಅವ್ಯಕ್ತದ ಅನುಭವವಾಗುತ್ತದೆ.

12228027a ಯತೋ ನಿಃಸರತೇ ಲೋಕೋ ಭವತಿ ವ್ಯಕ್ತಸಂಜ್ಞಕಃ|

12228027c ತತ್ರಾವ್ಯಕ್ತಮಯೀಂ ವ್ಯಾಖ್ಯಾಂ ಶೃಣು ತ್ವಂ ವಿಸ್ತರೇಣ ಮೇ|

12228027e ತಥಾ ವ್ಯಕ್ತಮಯೀಂ ಚೈವ ಸಂಖ್ಯಾಂ ಪೂರ್ವಂ ನಿಬೋಧ ಮೇ||

ಎಲ್ಲವೂ ಆ ಅವ್ಯಕ್ತದಿಂದ ಹೊರಸೂಸುತ್ತದೆ ಮತ್ತು ವ್ಯಕ್ತಸಂಜ್ಞಕವಾದ ಈ ಲೋಕವಾಗುತ್ತದೆ. ಈಗ ಅವ್ಯಕ್ತದಿಂದ ವ್ಯಕ್ತವು ಹೇಗೆ ಉಂಟಾಗುತ್ತದೆ ಎನ್ನುವುದನ್ನು ವಿಸ್ತಾರವಾಗಿ ಕೇಳು. ವ್ಯಕ್ತದ ಕುರಿತು ಸಾಂಖ್ಯದಲ್ಲಿ ಮೊದಲೇ ಹೇಳಲಾಗಿದೆ. ನನ್ನನ್ನು ಕೇಳು.

12228028a ಪಂಚವಿಂಶತಿತತ್ತ್ವಾನಿ ತುಲ್ಯಾನ್ಯುಭಯತಃ ಸಮಮ್|

12228028c ಯೋಗೇ ಸಾಂಖ್ಯೇಽಪಿ ಚ ತಥಾ ವಿಶೇಷಾಂಸ್ತತ್ರ ಮೇ ಶೃಣು||

ಯೋಗ ಮತ್ತು ಸಾಂಖ್ಯ ಎರಡರಲ್ಲಿಯೂ ಸಮನಾಗಿ ಇಪ್ಪತ್ತೈದು ತತ್ತ್ವಗಳ ಕುರಿತು ಹೇಳಿದ್ದಾರೆ. ಅವುಗಳ ವಿಶೇಷಗಳನ್ನು ಕೇಳು.

12228029a ಪ್ರೋಕ್ತಂ ತದ್ವ್ಯಕ್ತಮಿತ್ಯೇವ ಜಾಯತೇ ವರ್ಧತೇ ಚ ಯತ್|

12228029c ಜೀರ್ಯತೇ ಮ್ರಿಯತೇ ಚೈವ ಚತುರ್ಭಿರ್ಲಕ್ಷಣೈರ್ಯುತಮ್||

ವ್ಯಕ್ತವಾಗಿರುವುದೆಲ್ಲವೂ ಹುಟ್ಟುತ್ತದೆ, ಬೆಳೆಯುತ್ತದೆ, ಜೀರ್ಣವಾಗುತ್ತದೆ ಮತ್ತು ನಾಶವಾಗುತ್ತದೆ ಎಂದು ಹೇಳಿದ್ದಾರೆ. ಇವು ವ್ಯಕ್ತದ ನಾಲ್ಕು ಲಕ್ಷಣಗಳು.

12228030a ವಿಪರೀತಮತೋ ಯತ್ತು ತದವ್ಯಕ್ತಮುದಾಹೃತಮ್|

12228030c ದ್ವಾವಾತ್ಮಾನೌ ಚ ವೇದೇಷು ಸಿದ್ಧಾಂತೇಷ್ವಪ್ಯುದಾಹೃತೌ||

ಇವುಗಳಿಗೆ ವಿಪರೀತವಾಗಿರುವ ಅಂದರೆ ಯಾವುದಕ್ಕೆ ಹುಟ್ಟು, ಬೆಳವಣಿಗೆ, ಕ್ಷೀಣತೆ ಮತ್ತು ನಾಶವು ಇಲ್ಲವೋ ಅದಕ್ಕೆ ಅವ್ಯಕ್ತ ಎಂದು ಹೇಳಿದ್ದಾರೆ. ವೇದಗಳಲ್ಲಿಯೂ ಸಿದ್ಧಾಂತಗಳಲ್ಲಿಯೂ ಎರಡು ಆತ್ಮಗಳ ಕುರಿತು ಹೇಳಿದ್ದಾರೆ.

12228031a ಚತುರ್ಲಕ್ಷಣಜಂ ತ್ವನ್ಯಂ ಚತುರ್ವರ್ಗಂ ಪ್ರಚಕ್ಷತೇ|

12228031c ವ್ಯಕ್ತಮವ್ಯಕ್ತಜಂ ಚೈವ ತಥಾ ಬುದ್ಧಮಥೇತರತ್|

12228031e ಸತ್ತ್ವಂ ಕ್ಷೇತ್ರಜ್ಞ ಇತ್ಯೇತದ್ದ್ವಯಮಪ್ಯನುದರ್ಶಿತಮ್||

ಒಂದು ಆ ನಾಲ್ಕು ಲಕ್ಷಣಗಳಿಂದ ಕೂಡಿದೆ ಮತ್ತು ಇನ್ನೊಂದಕ್ಕೆ ನಾಲ್ಕು ವರ್ಗಗಳನ್ನು[3] ಹೇಳಿದ್ದಾರೆ. ವ್ಯಕ್ತವು ಅವ್ಯಕ್ತದಿಂದ ಹುಟ್ಟಿಕೊಂಡಿರುತ್ತದೆ ಮತ್ತು ಅದಕ್ಕೆ ಬುದ್ಧಿಯಿರಬಹುದು ಅಥವಾ ಇಲ್ಲದೇ ಇರಬಹುದು. ನನಗೆ ಉಪದೇಶವಾದಂತೆ ನಾನು ಸತ್ತ್ವ (ವ್ಯಕ್ತ) ಮತ್ತು ಕ್ಷೇತ್ರಜ್ಞ (ಅವ್ಯಕ್ತ) ಗಳ ಕುರಿತು ಹೇಳಿದ್ದೇನೆ.

12228032a ದ್ವಾವಾತ್ಮಾನೌ ಚ ವೇದೇಷು ವಿಷಯೇಷು ಚ ರಜ್ಯತಃ|

12228032c ವಿಷಯಾತ್ ಪ್ರತಿಸಂಹಾರಃ ಸಾಂಖ್ಯಾನಾಂ ಸಿದ್ಧಿಲಕ್ಷಣಮ್||

ಈ ಎರಡೂ ಆತ್ಮಗಳೂ ವಿಷಯ ಬಂಧನಗಳಿಗೊಳಗಾಗುತ್ತವೆ ಎಂದು ವೇದಗಳು ಹೇಳುತ್ತವೆ. ಸಾಂಖ್ಯದ ಪ್ರಕಾರ ವಿಷಯಗಳಿಂದ ಹಿಂದೆಸರಿಯುವುದೇ ಸಿದ್ಧಿಯ ಲಕ್ಷಣವು.

12228033a ನಿರ್ಮಮಶ್ಚಾನಹಂಕಾರೋ ನಿರ್ದ್ವಂದ್ವಶ್ಚಿನ್ನಸಂಶಯಃ|

12228033c ನೈವ ಕ್ರುಧ್ಯತಿ ನ ದ್ವೇಷ್ಟಿ ನಾನೃತಾ ಭಾಷತೇ ಗಿರಃ||

12228034a ಆಕ್ರುಷ್ಟಸ್ತಾಡಿತಶ್ಚೈವ ಮೈತ್ರೇಣ ಧ್ಯಾತಿ ನಾಶುಭಮ್|

12228034c ವಾಗ್ದಂಡಕರ್ಮಮನಸಾಂ ತ್ರಯಾಣಾಂ ಚ ನಿವರ್ತಕಃ||

12228035a ಸಮಃ ಸರ್ವೇಷು ಭೂತೇಷು ಬ್ರಹ್ಮಾಣಮಭಿವರ್ತತೇ|

ನಾನು ಮತ್ತು ನನ್ನದು ಎಂಬ ಅಹಂಕಾರ-ಮಮಕಾರಗಳನ್ನು ತೊರೆದ, ನಿರ್ದ್ವಂದ್ವನೂ, ಸಂಶಯರಹಿತನೂ ಆಗಿರುವ, ಕೋಪಗೊಳ್ಳದಿರುವ, ದ್ವೇಷಿಸದ, ಸುಳ್ಳುಮಾತನ್ನು ಆಡದ, ಬೈಯಲ್ಪಟ್ಟರೂ ಹೊಡೆಯಲ್ಪಟ್ಟರೂ ಮಿತ್ರತ್ವದಿಂದ ಅಶುಭವನ್ನು ಯೋಚಿಸದಿರುವ, ಮಾತು-ಮನಸ್ಸು-ಕರ್ಮಗಳ ಮೂಲಕ ಯಾರಿಗೂ ಕಷ್ಟವನ್ನು ಕೊಡದ, ಮತ್ತು ಸರ್ವಭೂತಗಳಲ್ಲಿಯೂ ಸಮಭಾವದಿಂದಿರುವವನು ಬ್ರಹ್ಮಭಾವವನ್ನು ಹೊಂದುತ್ತಾನೆ.

12228035c ನೈವೇಚ್ಚತಿ ನ ಚಾನಿಚ್ಚೋ ಯಾತ್ರಾಮಾತ್ರವ್ಯವಸ್ಥಿತಃ|

12228036a ಅಲೋಲುಪೋಽವ್ಯಥೋ ದಾಂತೋ ನ ಕೃತೀ ನ ನಿರಾಕೃತಿಃ||

12228036c ನಾಸ್ಯೇಂದ್ರಿಯಮನೇಕಾಗ್ರಂ ನಾತಿಕ್ಷಿಪ್ತಮನೋರಥಃ|

12228036e ಅಹಿಂಸ್ರಃ ಸರ್ವಭೂತಾನಾಮೀದೃಕ್ಸಾಂಖ್ಯೋ ವಿಮುಚ್ಯತೇ||

ಇಚ್ಛೆಯನ್ನಾಗಲೀ ಅನಿಚ್ಛೆಯನ್ನಾಗಲೀ ತೋರಿಸದಿರುವ, ಜೀವನ ಯಾತ್ರೆಗೆ ಬೇಕಾದಷ್ಟೇ ವ್ಯವಸ್ಥೆಯನ್ನು ಮಾಡಿಕೊಂಡಿರುವ, ಲೋಭರಹಿತನಾದ, ವ್ಯಥೆಯಿಲ್ಲದ, ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರುವ, ಮಾಡುವವನೂ ಮಾಡದೇ ಇರುವವನೂ ಆಗಿರುವ, ಇಂದ್ರಿಯಗಳು ಮತ್ತು ಮನಸ್ಸು ಏಕಾಗ್ರವಾಗಿರುವ, ಮನೋರಥಗಳನ್ನು ಪೂರ್ಣಗೊಳಿಸಿರುವ, ಸರ್ವಭೂತಗಳಿಗೂ ಅಹಿಂಸಕನಾಗಿರುವ ಸಾಂಖ್ಯಯೋಗಿಯು ಮುಕ್ತನಾಗುತ್ತಾನೆ.

12228037a ಅಥ ಯೋಗಾದ್ವಿಮುಚ್ಯಂತೇ ಕಾರಣೈರ್ಯೈರ್ನಿಬೋಧ ಮೇ|

12228037c ಯೋಗೈಶ್ವರ್ಯಮತಿಕ್ರಾಂತೋ ಯೋಽತಿಕ್ರಾಮತಿ ಮುಚ್ಯತೇ||

ಯಾವ ಕಾರಣಗಳಿಂದ ಯೋಗಿಯು ಮುಕ್ತನಾಗುತ್ತಾನೆ ಎನ್ನುವುದನ್ನು ಕೇಳು. ಯೋಗದಿಂದ ಪಡೆದುಕೊಂಡ ಐಶ್ವರ್ಯಗಳನ್ನೂ ಅತಿಕ್ರಮಿಸಿ ಮುಂದೆ ಹೋಗುವವನು ಮುಕ್ತನಾಗುತ್ತಾನೆ.

12228038a ಇತ್ಯೇಷಾ ಭಾವಜಾ ಬುದ್ಧಿಃ ಕಥಿತಾ ತೇ ನ ಸಂಶಯಃ|

12228038c ಏವಂ ಭವತಿ ನಿರ್ದ್ವಂದ್ವೋ ಬ್ರಹ್ಮಾಣಂ ಚಾಧಿಗಚ್ಚತಿ||

ಹೀಗೆ ಭಾವಶುದ್ಧಿಯಿಂದ ಹುಟ್ಟುವ ಬುದ್ಧಿಯ ಕುರಿತು ಹೇಳಿದ್ದೇನೆ. ಇದರಿಂದ ಸಾಧಕನು ನಿರ್ದ್ವಂದ್ವನಾಗಿ ಬ್ರಹ್ಮವಸ್ತುವನ್ನು ಹೊಂದುತ್ತಾನೆ. ಇದರಲ್ಲಿ ಸಂಶಯವಿಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಅಷ್ಟವಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತೆಂಟನೇ ಅಧ್ಯಾಯವು.

[1] ದ್ವಾದಶ ಯೋಗಗಳ ವಿವರಣೆ: (1) ದೇಶಯೋಗ: ಧ್ಯಾನಯೋಗಕ್ಕೆ ಎಂತಹ ಸ್ಥಳದಲ್ಲಿ ಕುಳಿತುಕೊಳ್ಳಬೇಕು ಎಂಬುದಕ್ಕೆ ಶ್ವೇತಾಶ್ವತರೋಪನಿಷತ್ತಿನಲ್ಲಿ ಹೀಗಿದೆ: ಸಮೇ ಶುಚೌ ಶರ್ಕರವಹ್ನಿ ವಾಲುಕಾವಿವರ್ಜಿತೇ ಶದಜಲಾಶ್ರಯಾದಿಭಿಃ| ಮನೋಽನುಕೂಲೇ ನ ತು ಚಕ್ಷು ಪೀಡನೇ ಗುಹಾನಿವಾತಾಶ್ರಯಣೇ ಪ್ರಯೋಜಯೇತ್|| ಅರ್ಥಾತ್ ನೆಲವು ಸಮನಾಗಿರಬೇಕು. ಪವಿತ್ರವಾಗಿರಬೇಕು. ಕಲ್ಲು, ಬೆಂಕಿ, ಮಳಲು – ಇವುಗಳಿರಬಾರದು. ಗಲಾಟೆಯೂ ಇರಬಾರದು. ಮನಸ್ಸಿಗೆ ಅನುಕೂಲವಾಗಿರಬೇಕು. ಕಣ್ಣಿಗೆ ತೊಂದರೆಯಾಗದಂತಿರಬೇಕು. ಹೆಚ್ಚು ಗಾಳಿಯಿರಬಾರದು. ಅಂತಹ ಏಕಾಂತವಾಗಿರುವ ಗುಹೆಯು ಧ್ಯಾನಕ್ಕೆ ಪ್ರಶಸ್ತವಾದುದು. ಭಗವದ್ಗೀತೆಯಲ್ಲಿಯೂ ಹೀಗಿದೆ: ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ| ನಾತ್ಯುಚ್ಛ್ರಿತಂ ನಾತಿನೀಚಂ ಚೈಲಾಜಿನ ಕುಶೋತ್ತರಮ್| (2) ಕರ್ಮಯೋಗ: ಯುಕ್ತಾಹಾರ ವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು| ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ|| ಎಂದು ಗೀತೆಯಲ್ಲಿ ಹೇಳಿರುವಂತೆ ಆಹಾರ, ವಿಹಾರ, ಚೇಷ್ಟೆ, ನಿದ್ರೆ, ಮತ್ತು ಜಾಗರಣೆ ಇವುಗಳು ಪರಿಮಿತವಾಗಿರಬೇಕು ಮತ್ತು ನಿಯಮಾನುಕೂಲವಾಗಿರಬೇಕು. (3) ಅನುರಾಗಯೋಗ: ಪರಮಾತ್ಮನಲ್ಲಿ ಅನುರಾಗವೂ ಮತ್ತು ಅವನನ್ನು ಹೊಂದುವುದರಲ್ಲಿ ಕಾತರತೆಯೂ ಇರಬೇಕು. (4) ಅರ್ಥಯೋಗ: ಅವಶ್ಯಕ ವಸ್ತುಗಳನ್ನು ಮಾತ್ರವೇ ಇಟ್ಟುಕೊಂಡಿರಬೇಕು. (5) ಉಪಾಯಯೋಗ: ಧ್ಯಾನಕ್ಕೆ ಯೋಗ್ಯವಾದ ಆಸನದಲ್ಲಿ ಕುಳಿತುಕೊಳ್ಳಬೇಕು. (6) ಅಪಾಯಯೋಗ: ಸಂಸಾರದ ವಿಷಯದಲ್ಲಿಯೂ ಬಂಧುಜನರ ವಿಷಯದಲ್ಲಿಯೂ ಆಸಕ್ತಿಯನ್ನು ಬಿಡುವುದು. (7) ನಿಶ್ಚಯಯೋಗ: ಗುರುಗಳಲ್ಲಿಯೂ ವೇದ-ಶಾಸ್ತ್ರಗಳ ವಾಕ್ಯಗಳಲ್ಲಿಯೂ ವಿಶ್ವಾಸವನ್ನಿಡುವುದು. (8) ಚಕ್ಷುರ್ಯೋಗ: ಕಣ್ಣುಗಳನ್ನು ಮೂಗಿನ ತುದಿಯಲ್ಲಿ ಸ್ಥಿರೀಕರಿಸುವುದು: ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್| (9) ಆಹಾರಯೋಗ: ಶುದ್ಧವಾದ ಮತ್ತು ಸಾತ್ತ್ವಿಕ ಆಹಾರವನ್ನು ಸೇವಿಸುವುದು. (10) ಸಂಹಾರಯೋಗ: ವಿಷಯಗಳ ಕಡೆ ಸ್ವಾಭಾವಿಕವಾಗಿಯೇ ಹೋಗುವ ಸ್ವಭಾವವುಳ್ಳ ಮನಸ್ಸನ್ನೂ ಇಂದ್ರಿಯಗಳನ್ನೂ ತಡೆಯುವುದು (11) ಮನೋಯೋಗ: ಮನಸ್ಸನ್ನು ಸಂಕಲ್ಪ-ವಿಕಲ್ಪ ರಹಿತವನ್ನಾಗಿ ಮಾಡಿ ಪರಮಾತ್ಮನಲ್ಲಿಯೇ ಏಕಾಗ್ರಗೊಳಿಸುವುದು. (12) ದರ್ಶನಯೋಗ: ಜರಾ-ಮರಣ-ರೋಗಾದಿಗಳು ಸಂಭವಿಸಿದಾಗ ಉಂಟಾಗುವ ದುಃಖವನ್ನು ವೈರಾಗ್ಯದ ದೃಷ್ಟಿಯಿಂದ ನೋಡುವುದು. (ಭಾರತ ದರ್ಶನ)

There are thus twelve requirements and there is interpretation involved. These twelve are: (1) a clean place where yoga must be performed (2) pure acts (3) attachment towards other who are devoted to yoga (4) sacred objects (5) the methods used (6) destruction of desire and attachment (7) certainty of belief about yoga (8) restraint of the senses (9) purity in food (10) suppression of attachment towards material objects (11) regulation of the mind, or not resorting to bad practices (anupaya) and (12) contemplation or strategy (upaya). (Bibek Debroy)

[2] ಭೂಮಿ, ನೀರು, ತೇಜಸ್ಸು, ವಾಯು, ಆಕಾಶ, ಬುದ್ಧಿ ಮತ್ತು ಅಹಂಕಾರ (ಭಾರತ ದರ್ಶನ).

[3] ಧರ್ಮ, ಅರ್ಥ, ಕಾಮ, ಮೋಕ್ಷ.

Comments are closed.